December 15, 2009

ಡಿಸೆಂಬರ್ ೧೬ರ ಈ ಬೆಳಗಿಗೆ...


ಆಲದ ಮರದ ಬುಡದಲ್ಲಿ ಮಣ್ಣುಂಟು,
ಒಳಗೆ ಹೊಕ್ಕಳಿನಿಂದ ನೆತ್ತಿವರೆಗೆ
ನೆಳಲಾಗಿ ಉಂಟು ಸಾವಿರ ಕಂಭದ ಬಸದಿ;
ಹೊರಗೆ ತರುವ ಪವಾಡ ಕಾದು ಕುಳಿತೆ.
ಗೋಪಾಲಕೃಷ್ಣ ಅಡಿಗರು ೧೯೭೧ರಲ್ಲಿ ಬರೆದ 'ಅಜ್ಜ ನೆಟ್ಟಾಲ' ಪದ್ಯದ ಈ ಕೊನೆಯ ಸಾಲುಗಳ ಹಾಗೆ, ಅಪ್ಪ ಕಾದು ಕುಳಿತಿದ್ದರೆ? ಕೊನೆಯವರೆಗೂ ಅದು ಕಾಯುವಿಕೆಯೇ ಆಯಿತೇ? ಬರೀ ಜಾಲಿ, ಕತ್ತಾಳೆ, ಈಚಲು, ಕುರುಚಲು ಬೆಳೆದವೇ? ಅಲ್ಲಾ, ಅಜ್ಜ ನೆಟ್ಟಾಲ ಮನೆ ಮುಂದೆ ತೇರಿನ ಹಾಗೆಯೇ ಉಳಿದು ಬಂತೆ?!

ನವ್ಯ ಸಾಹಿತ್ಯ ವಿಜೃಂಭಿಸುತ್ತಿದ್ದ ೧೯೭೦ರ ದಶಕ. ಕತೆ-ಕವನ ಬರೆಯುತ್ತಿದ್ದವರೆಲ್ಲ ಮೇಷ್ಟ್ರುಗಿರಿ ಮಾಡುತ್ತಿದ್ದ ಕಾಲ! ಪಿಯುಸಿಯಲ್ಲಿ ಒಳ್ಳೆಯ ಅಂಕಗಳನ್ನು ಪಡೆದ ಅಪ್ಪನಿಗೆ ಲೆಕ್ಚರರ್ ಆಗುವ ಹಂಬಲ. ಆದರೇನು, ಅದೇ ಸಮಯಕ್ಕೆ ಅವರ ತಂದೆ ಅನಾರೋಗ್ಯ ಪೀಡಿತರಾದರು, ತೀರಿಕೊಂಡರು. ಸ್ವತಂತ್ರ ಬದುಕಿಗೆ ಕಾಲಿಡಬೇಕಾದ ವ್ಯಕ್ತಿಯ ಹಿಂದಿನ ಮೆಟ್ಟಿಲುಗಳೆಲ್ಲ ತೊಪತೊಪನೆ ಉದುರಿಹೋದವು. ಮುಂದೆ ಕತ್ತೆತ್ತಿದ್ದರೆ ಸಾವಿರಾರು ಮೆಟ್ಟಿಲುಗಳ ಬದುಕ ಬೆಟ್ಟ. ತೋಟಗದ್ದೆ, ಕೆಲಸದಾಳುಗಳು, ತಮ್ಮಂದಿರು ತಂಗಿಯಂದಿರು, ಮನೆತನದ ಮರ್ಯಾದೆ ಹೊಂದಿದ, ಲಕ್ಷ್ಮೀ ಭಂಡಾರ ಖಾಲಿಯೇ ಇದ್ದ ಹಳ್ಳಿ ಮನೆಯ ಜವಾಬ್ದಾರಿ ಅವರ ತಾರುಣ್ಯದ ಮೇಲೆ ಆತುಕೊಂಡಿತು. ಮತ್ತಿನ್ನೇನು? ತಮ್ಮೆಲ್ಲ ಕನಸುಗಳನ್ನು ಕಟ್ಟಿಟ್ಟು, ತಾವು ಇದ್ದಲ್ಲೇ, ತಮ್ಮ ಬಳಿಯಿದ್ದ ಸಂಪನ್ಮೂಲದಲ್ಲೇ ಬದುಕು ಕಟ್ಟುವ ನಿರ್ಧಾರ ಮಾಡಿರಬೇಕು ಅವರು. ಆದರೆ ಕೇವಲ ತೋಟಗದ್ದೆ ನೋಡಿಕೊಂಡಿರುವುದರಲ್ಲಿ ಅವರಿಗೆ ತೃಪ್ತಿಯಿರಲಿಲ್ಲ. ಹಾಗಾಗಿ ಸಾಕ್ಷಿ, ಸಂಕ್ರಮಣದಂಥ ಸಾಹಿತ್ಯಕ ಪತ್ರಿಕೆಗಳಿಗೆ- ಉದಯವಾಣಿ, ಸುಧಾ, ಪ್ರಜಾವಾಣಿಗಳಿಗೆ ಬರೆಯುತ್ತಾ ಕವಿಯಾದರು. ಕಮ್ಯುನಿಸ್ಟ್, ಜನತಾ ಪಕ್ಷಗಳ ಮೂಲಕ ರಾಜಕಾರಣಿಯಾದರು. ಯಕ್ಷಗಾನದ ಅರ್ಥಧಾರಿ-ವೇಷಧಾರಿಯಾಗಿ, ಊರಿನ ದೇವಸ್ಥಾನಗಳ ಸಮಿತಿಯ ಪದಾಧಿಕಾರಿಯಾಗಿ, ನೆರೆಹೊರೆಯವರ ಜಗಳ ಪರಿಹರಿಸುವ ಪಂಚಾಯಿತಿಕೆದಾರನಾಗಿ ಕಾಣಿಸಿಕೊಳ್ಳತೊಡಗಿದರು. ಅಮ್ಮ ಮನೆಗೆ ಬಂದಳು.

ಅಪ್ಪ ಸತ್ಯಮೂರ್ತಿ ದೇರಾಜೆ ಮತ್ತು ಅಮ್ಮ ಜಯಂತಿ ದೇರಾಜೆ ಜತೆ ಹಿಂದೆ ಹಿಂದಕ್ಕೆ ಹೋದರೆ ನೆನಪಿರುವುದು ಹೀಗೆ -ರಾತ್ರಿಯಾಗುತ್ತಿದ್ದಂತೆ ದೇವರ ಕೋಣೆಗೆ ಕರೆದು 'ಗಣಪ ಗಣಪ ಏಕದಂತ ಪಚ್ಚೆಕಲ್ಲು ಪಾಣಿಪೀಠ...' ಹೇಳಿಸುವ, ಮನೆ ಹಿಂದಿನ ಗುಡ್ಡಕ್ಕೆ ಹೋಗುವಾಗ ಮಗ್ಗಿ- ಕೂಡು-ಕಳೆ ಲೆಕ್ಕ ಕಲಿಸುವ, ಹಳೆ ಗಡಿಯಾರ ತಂದು ಮುಳ್ಳು ತಿರುಗಿಸುತ್ತಾ ಟೈಮು ನೋಡಲು ಹೇಳಿಕೊಡುವ, ಸಂಗೀತ ಕ್ಲಾಸಿಗೆ ಕರೆದೊಯ್ಯುವ, ಶಾಲಾ ಡ್ಯಾನ್ಸ್‌ಗಳಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸುವ ಅಮ್ಮ. ಬರೀ ಮುದ್ದು ಮಾಡಿ ಲಲ್ಲೆಗರೆದು, ಮಗುವಿನೊಳಗೆ ಸ್ಪಂಜ್ ತುಂಬಿಸುವ ಕೆಲಸ ಆಕೆ ಮಾಡಿದಂತಿಲ್ಲ! ರಾತ್ರಿ ನಾನು ನಿದ್ದೆ ಹೋಗುವವರೆಗೆ ಪುರಾಣ ಕತೆಗಳನ್ನು ಹೇಳುವುದಕ್ಕೆ, ಆಗಸದಲ್ಲಿ ಲೀನವಾಗುವಂತೆ ಚೆಂಡೆಸೆದು ಅಚ್ಚರಿಗೊಳಿಸುವುದಕ್ಕೆ ಅಪ್ಪ. ಆದರೆ ನಾಲ್ಕನೇ ಕ್ಲಾಸ್ ಮುಗಿಸಿ, ಹಿಂದಿ-ಇಂಗ್ಲಿಷ್‌ಗಳು ಬಂದು ಗಣಿತ ಕಷ್ಟವಾಗತೊಡಗಿದಾಗ, ಶಾಲೆಯ ಎಲ್ಲ ಚಟುವಟಿಕೆಗಳಲ್ಲಿ ನನ್ನೊಂದಿಗೆ ತೊಡಗಿಸಿಕೊಂಡವರು ಅಪ್ಪ. ಭಾಷಣ-ಪ್ರಬಂಧ ಬರೆಯಲು ಸಹಾಯ ಮಾಡುವುದು, ಸ್ಪರ್ಧೆಗಳಿಗೆ ಕರೆದೊಯ್ಯುವುದು, ಚಪ್ಪಲಿ-ಅಂಗಿ ಕೊಡಿಸುವುದು, ಯಕ್ಷಗಾನ-ನಾಟಕಗಳಿಗೆ ಹೋಗುವುದು, ಹೀಗೆ ಎಲ್ಲದರಲ್ಲೂ ಅಪ್ಪನ ಜತೆ. ಸಮಾಜದಲ್ಲಿ ಆಗಲೇ ಒಂದಷ್ಟು ಹೆಸರು ಸಂಪಾದಿಸಿದ್ದ ಅಪ್ಪನ ಬಗ್ಗೆ ನನಗೆ ಹೆಮ್ಮೆಯಿತ್ತು, ಆತ ಮನೆಯ ಸರ್ವಸಂರಕ್ಷಕನೆಂಬ ಧೈರ್‍ಯವಿತ್ತು. ಸುಬ್ರಹ್ಮಣ್ಯ ಸ್ವಾಮಿಗಳ ಒಳಕೋಣೆಗೆ ನನ್ನ ಕರೆದೊಯ್ದ ಅಪ್ಪನಿಗೆ, ಅಲ್ಲಿಂದ ಹಿಂದಿರುಗಿ ಬರುವಾಗ ಸರ್ವೀಸ್ ಕಾರಿನ ಡ್ರೈವರ್ ಬಯ್ದಿದ್ದ. ಅದೂ ನಿಲ್ಲಿಸಲು ‘ಶೂ ಶೂ’ ಅಂದದ್ದಕ್ಕೆ ! ‘ನೀವೇನು ಕೋಳಿ ಓಡಿಸುವುದಾ? ನಿಲ್ಲಿಸಿ ಅಂತ ಹೇಳ್ಲಿಕ್ಕಾಗುವುದಿಲ್ವಾ’ ಅಂತ ಆತ ಬೈದಿದ್ದ. ಆಗ ಅಪ್ಪ ಕೈಲಾಗದವರಂತೆ ತೆಪ್ಪಗಿದ್ದದ್ದು ನನ್ನಲ್ಲಂತೂ ಆಶ್ಚರ್ಯ ಹುಟ್ಟಿಸಿತ್ತು. ಆದರೆ ಬಡವನ ಸಿಟ್ಟು ದವಡೆಗೆ ಮೂಲ ಎಂಬುದು ಅವರಿಗೆ ಸರಿಯಾಗಿ ಗೊತ್ತಿತ್ತಾ?!

೧೯೯೨ರಲ್ಲಿ ನಮ್ಮ ಗ್ರಾಮ ದೇವಸ್ಥಾನದ ಬ್ರಹ್ಮಕಲಶೋತ್ಸವ ನಡೆದಾಗ ಸಿದ್ಧಪಡಿಸಿದ ಸ್ಮರಣ ಸಂಚಿಕೆಗೆ, ಅಪ್ಪ ಬರೆದ ಸಂತುಲಿತ ಸಂಪಾದಕೀಯ ಅವರ ಧೋರಣೆಯನ್ನು ತೆರೆದಿಡುತ್ತದೆ. ಆಗ ದಕ್ಷಿಣಕನ್ನಡದ ಎಲ್ಲೆಂದರಲ್ಲಿ ಹಳೆ ದೇವಾಲಯಗಳ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿತ್ತು. "ಇಂಥ ಸಂದರ್ಭದಲ್ಲಿ ಭಾರತೀಯ ಸಂಸ್ಕೃತಿಯ ಹಾಗೂ ಅದು ಪ್ರತಿಪಾದಿಸುವ ಮೌಲ್ಯಗಳ ಪುನರ್ ಮೌಲ್ಯಮಾಪನ ಆಗಬೇಕು. ಈವರೆಗಿನ ನಮ್ಮ ಅನುಭವಗಳ ಬೆಳಕಿನಲ್ಲಿ ಚಿಂತನ ಮಂಥನ ನಡೆಯಬೇಕು...ದೇವರ ಕುರಿತಾದ ನಂಬಿಕೆ ಜೀವನದ ಒಂದು ವಿಭಾಗ ಅಲ್ಲ. ಅದು ಜೀವನವನ್ನು ಪೂರ್ತಿಯಾಗಿ ಒಳಗೊಳ್ಳಬೇಕು. ಹಾಗಾದಾಗ ಮಾತ್ರ ಆ ನಂಬಿಕೆಯು ಮಾನವನನ್ನು ಮತ್ತಷ್ಟು ಸುಸಂಸ್ಕೃತನನ್ನಾಗಿಸಿ ಉದಾತ್ತಗೊಳಿಸುತ್ತದೆ...ನಮ್ಮೆಲ್ಲ ತತ್ತ್ವಜ್ಞಾನಗಳ ಪರಮ ಲಕ್ಷ್ಯ ಮೋಕ್ಷ. ಅಂದರೆ ಬಿಡುಗಡೆ, ಯಾವುದರಿಂದ ಬಿಡುಗಡೆ? ಎಲ್ಲ ಬಗೆಯ ಬಂಧನದಿಂದ; ಎಲ್ಲ ಬಗೆಯ ಭಯದಿಂದ; ಎಲ್ಲ ಬಗೆಯ ನೀಚತನದಿಂದ; ಎಲ್ಲ ಬಗೆಯ ಪೂರ್ವಾಗ್ರಹಗಳಿಂದ. ಅದಕ್ಕೆ ಬೇಕು ಮುಕ್ತ ನಿರೀಕ್ಷಣೆ; ಮುಕ್ತ ಚಿಂತನೆ.' ಅಂತ ಅವರು ಸಂಪಾದಕೀಯದಲ್ಲಿ ಬರೆದರು. ದೇವರೂ ಬದುಕಿನಲ್ಲಿ(ಹೆಂಡತಿ-ಮಕ್ಕಳ ಹಾಗೆ)ಒಳಗೊಳ್ಳಬೇಕೆನ್ನುವುದು ಎಷ್ಟೊಳ್ಳೆಯ ಆಸೆ !

ಒಂದೇ ಹಾದಿಯಲ್ಲಿ ನಡೆದಿದ್ದರೆ ತಾನು ಇನ್ನಷ್ಟು ಎತ್ತರಕ್ಕೆ ಏರಿಬಿಡುತ್ತಿದ್ದೆ. ಆದರೆ ತನಗೆ ನಿಜವಾಗಿ ಯಾವುದು ಬೇಕು ಎಂದು ತಿಳಿಯುವಷ್ಟರಲ್ಲೇ ತಡವಾಯಿತು. ಮೊದಲಿನಿಂದಲೇ ತಾನು ಈ ಯಕ್ಷಗಾನ ತಾಳಮದ್ದಳೆಯಲ್ಲಷ್ಟೇ ಗಮನ ಇಟ್ಟಿದ್ದರೆ ಚೆನ್ನಾಗಿತ್ತು ಅಂತ ನಲ್ವತ್ತರ ಬಳಿಕ ಅವರು ಅಂದುಕೊಳ್ಳುತ್ತಿದ್ದರು. ಆದರೆ ಯಕ್ಷಗಾನದ ಬಗೆಗಿನ ಅಭಿಪ್ರಾಯ ಮಾತ್ರ ಅವರಿಗೆ ಮೊದಲೇ ಸ್ಪಷ್ಟವಾಗಿತ್ತು. "ಯಕ್ಷಗಾನದ ರೂಪ ಹಾಗೂ ಕಥಾವಸ್ತುಗಳ ನಡುವಿನ ಬಂಧ ಎಷ್ಟೊಂದು ಅನ್ಯೋನ್ಯ ಹಾಗೂ ಬಿಗಿಯಾಗಿದೆಯೆಂದರೆ, ಯಾವುದೇ ಒಂದನ್ನು ಬದಲಾಯಿಸಿದರೂ ಅದು ಯಕ್ಷಗಾನ ಅಲ್ಲ ಎನ್ನುವ ಹಾಗಿದೆ. ಅದರಲ್ಲಿ ಕಲೋಚಿತ ಸುಧಾರಣೆಗಳನ್ನು ಮಾಡಬಹುದೇ ಹೊರತು, ಕಾಲೋಚಿತವೆನ್ನುವ ಧೋರಣೆಯಿಂದ ಬದಲಾವಣೆಗಳನ್ನು ಮಾಡಲಾಗದು. ಇಂತಹ ಕಲೆ, ಬದಲಾಗುತ್ತಿರುವ ಕಾಲಮಾನದಲ್ಲಿ ಪ್ರಸ್ತುತವೆನಿಸುವುದು ಅಥವಾ ಅರ್ಥಪೂರ್ಣವೆನಿಸುವುದು ಹೇಗೆ? ಯಕ್ಷಗಾನ ಸಾಂಕೇತಿಕವಾದ ಅಥವಾ ಪ್ರತೀಕಾತ್ಮಕವಾದ ರಂಗಭೂಮಿ. ಅದು ಕಥಾವಸ್ತುವಿಗಾಗಿ ಪ್ರತೀಕಾತ್ಮಕವಾದ ಪುರಾಣಗಳನ್ನೇ ಆಶ್ರಯಿಸಿದೆ. ಪುರಾಣಗಳಲ್ಲಿ ನಮ್ಮ ಸಂಸ್ಕೃತಿಯ ಬೇರುಗಳಿವೆ. ಅವುಗಳಲ್ಲಿ ಸಾರ್ವಕಾಲಿಕವಾದ ಮತ್ತು ಸಾರ್ವತ್ರಿಕವಾದ ಮೌಲ್ಯಗಳಿವೆ’ ಎಂಬುದು ಅವರ ಅಭಿಪ್ರಾಯ. ಅವು ಯಾವುವು, ಯಕ್ಷಗಾನದಲ್ಲಿ ಅವು ಹೇಗೆ ಬರಬೇಕು ಅನ್ನುವುದಕ್ಕೆ ಅವರು ಹೇಳುವ ಹಲವು ಉದಾಹರಣೆಗಳಲ್ಲಿ ಒಂದನ್ನು ನೀವು ಓದಬೇಕು.

'ಊರ್ವಶಿ ಶಾಪ' ಪ್ರಸಂಗದಲ್ಲಿ ರತಿ ಸುಖದ ಬಿಸಿಯೂಟವನ್ನು ಉಣಿಸುವುದಕ್ಕೆ ಬಂದ ಊರ್ವಶಿಯಲ್ಲಿ ಧರ್ಮಾಧರ್ಮಗಳನ್ನು ವಿಮರ್ಶಿಸುತ್ತ ಅರ್ಜುನ ಹೇಳುತ್ತಾನೆ- ನಿನಗೆ ಧರ್ಮವೆನಿಸಿದ್ದು ನನಗೆ ಧರ್ಮವಾಗಬೇಕಿಲ್ಲ. ಹಾಗೆಂದು ನನಗೆ ಅಧರ್ಮವೆನಿಸಿದ್ದು ನಿನಗೆ ಅಧರ್ಮವಾಗಬೇಕಿಲ್ಲ. ತುಲನಾತ್ಮಕವಾಗಿ, ಭೋಗದಲ್ಲಿ ಧರ್ಮ ಸೂಕ್ಷ್ಮದ ವಿವೇಚನೆಯನ್ನು ಮಾಡಿದಷ್ಟು ತ್ಯಾಗದಲ್ಲಿ ಮಾಡಬೇಕಾಗಿಲ್ಲ. ಪಿತೃವಾಕ್ಯ ಪರಿಪಾಲನೆಗಾಗಿ ಸಿಂಹಾಸನ ತ್ಯಾಗ ಮಾಡುವುದಕ್ಕೆ ಶ್ರೀರಾಮಚಂದ್ರ ಹೆಚ್ಚು ಆಲೋಚಿಸಬೇಕಾದ್ದಿಲ್ಲ. ಆದರೆ ಮಾತೆಯ ಮಾತಿನಂತೆ ಸಿಂಹಾಸನವನ್ನು ಸ್ವೀಕರಿಸಿಬೇಕಾದರೆ ಭರತ ಬಹಳವಾಗಿ ಚಿಂತಿಸಬೇಕು’.
ಇದನ್ನು ಅಪ್ಪನೇ ಅರ್ಜುನನ ಪಾತ್ರದಲ್ಲಿ ಮೊದಲು ಹೇಳಿದರೋ, ಬೇರೆಯವರು ಹೇಳಿದ್ದರೋ ಗೊತ್ತಿಲ್ಲ. ಆದರೆ ಸಂಸ್ಕೃತಿಯ ಮುಖಗಳನ್ನು ಇಂತಹ ಸಂದರ್ಭದ ಮಾತುಗಳಲ್ಲಿ ಅವರು ಗುರುತಿಸಿದ ಬಗೆ ಮಾತ್ರ ತುಂಬಾ ಘನತೆಯುಳ್ಳದ್ದಾಗಿದೆ. "ಯಕ್ಷಗಾನಕ್ಕೆ ವಸ್ತು(theme)ಎಂಬುದಿಲ್ಲ. ಅದಕ್ಕಿರುವುದು ಕಥಾ ವಸ್ತು ಮಾತ್ರ. ಅಂದರೆ ಒಂದು ಪ್ರದರ್ಶನ ಒಟ್ಟಿನಲ್ಲಿ ಹೇಳುವುದು ಅರ್ಥಾತ್ "ಅದರ ಪ್ರಬಂಧ ಧ್ವನಿ ಇದು’ ಎನ್ನುವ ಸೂತ್ರವೇ ಯಕ್ಷಗಾನಕ್ಕಿಲ್ಲ. ಕಲಾವಿದ ಸೂಕ್ಷ್ಮ ಸಂವೇದನಾಶೀಲನೂ ಸೃಜನಶೀಲನೂ ಆಗಿದ್ದರೆ-ಯಕ್ಷಗಾನ ವೈದಿಕ ಸಂಸ್ಕೃತಿಯನ್ನೇ ಪೋಷಿಸುತ್ತದೆ, ವರ್ಣ ವ್ಯವಸ್ಥೆ ಸಮರ್ಥಿಸುತ್ತದೆ, ಅದು ಪ್ರತಿಗಾಮಿ ಕಲೆ ಎಂಬ ಆರೋಪಗಳನ್ನು ಸುಳ್ಳಾಗಿಸಬಹುದು. ಆಗ ಪಾತ್ರಗಳು ಹೆಚ್ಚು ಸಂಕೀರ್ಣವಾಗುತ್ತವೆ. ಕಪ್ಪು-ಬಿಳುಪು ವಿಂಗಡಣೆ ಮಾಯವಾಗುತ್ತದೆ. ಕಥಾವಸ್ತುವಿನ ಧ್ವನಿ ಹೊಸದಾಗುತ್ತದೆ’ ಅಂತ ಅವರು ನಂಬಿದ್ದರು. ಅಪ್ಪನ ಅರ್ಥಗಾರಿಕೆಯಲ್ಲೂ ಬದುಕಿನಲ್ಲೂ ಆರೋಗ್ಯಕರ ನವಿರು ಹಾಸ್ಯ ಸದಾ ಇತ್ತು. ಹಿಡಿಂಬೆಯು ಭೀಮನಿಗೆ _"ನಿನಗೆ ಹಾಡಲು ಬರುತ್ತದೆಯೆ ಭೀಮ?’ ಎಂದು ಪ್ರಶ್ನಿಸಿದರೆ ಇವರು ಭೀಮನಾಗಿ- 'ಇಲ್ಲ ಬಾರಿಸಲು ಬರುತ್ತದೆ’ ಅನ್ನುತ್ತಿದ್ದರು ! ಹೀಗೆ ಮಾತಿನಲ್ಲಿ ಹೃದ್ಯವಾಗುವ ಗುಣ ಅವರಿಗಿತ್ತು.

ನವ್ಯ ಸಾಹಿತ್ಯದ ಘಮಲಿನಿಂದಾಗಿ ದೇವರು, ಸಂಪ್ರದಾಯ ಎಲ್ಲವುಗಳ ಬಗ್ಗೆ ನಿರ್ಲಕ್ಷ್ಯದಿಂದಿದ್ದ ಅಪ್ಪ, ನಲುವತ್ತು ದಾಟಿದ ನಂತರ, ಅವುಗಳ ಬಗ್ಗೆಯೂ ಕುತೂಹಲಿಗರಾದರು. ಭಗವದ್ಗೀತೆ, ಉಪನಿಷತ್, ಯೋಗ ವಾಸಿಷ್ಠ, ವಿವೇಕ ಚೂಡಾಮಣಗಳನ್ನು ಓದತೊಡಗಿದರು. ಅದು ಯಕ್ಷಗಾನ ತಾಳಮದ್ದಳೆಗೆ ಪೂರಕ ಅನ್ನುವುದೂ ಕಾರಣವಾಗಿತ್ತು. ಮೊದಲೆಲ್ಲಾ ಹೊರಗೆ ಹೋಗುವಾಗ ಜನಿವಾರ ಮನೆಯಲ್ಲಿಟ್ಟು ಹೋಗುತ್ತಿದ್ದವರು, ಈಗ ಅದನ್ನು ಒಮ್ಮೆಯೂ ತೆಗೆಯುತ್ತಿರಲಿಲ್ಲ! ಮಧ್ಯಾಹ್ನ ಮನೆ ದೇವರ ಪೂಜೆಯನ್ನು ಅವರೇ ಮಾಡತೊಡಗಿದರು. ಆದರೆ ಇವ್ಯಾವುವೂ ಬದುಕಿನಲ್ಲಿ ಸೋತದ್ದರಿಂದ ಬಂದವಲ್ಲ, ಗೆಲುವಿನ ಮೆಟ್ಟಿಲುಗಳನ್ನು ಏರತೊಡಗಿದಾಗ ಬಂದಂತವು ! ಅಡಿಗರ ಪದ್ಯಗಳನ್ನು, ಲಂಕೇಶ್ ಪತ್ರಿಕೆಯನ್ನು, ಅನಂತಮೂರ್ತಿ ಕಾದಂಬರಿಗಳನ್ನು 'ಆರಂಭದ ಓದು’ ಎಂಬಂತೆ ಓದಿದ್ದ ನಾನು, ಅಪ್ಪನಿಂದಾಗಿ ಜಿಡ್ಡು ಕೃಷ್ಣಮೂರ್ತಿಯವರ ತತ್ತ್ವವನ್ನೂ ಭಗವದ್ಗೀತೆಯನ್ನೂ ಓದುವಂತಾಯಿತು. ದೇವರು-ಸಂಪ್ರದಾಯಗಳನ್ನು ಬೇರೆ ಕೋನಗಳಲ್ಲೂ ಕಾಣುವಂತಾಯಿತು.
ಎಲ್ಲವನ್ನೂ ಸಂಭಾಳಿಸಿಕೊಂಡು ಹೋಗುವ ಕೌಶಲ್ಯ ಸಿದ್ಧಿಸಿದ ಮೇಲೆ, ಯಾವುದೇ ಕೆಲಸಗಳಲ್ಲೂ ಎಲ್ಲರ ಮಾತು ಕೇಳಿಕೊಂಡು ತನ್ನದೇ ನಿರ್ಧಾರ ತೆಗೆದುಕೊಳ್ಳುವ ಛಾತಿ ಅವರಿಗಿತ್ತು. ಎಷ್ಟೇ ಕಷ್ಟವಾದರೂ ಭರವಸೆಯೊಂದು ಬತ್ತದಿರುತ್ತಿತ್ತು. ಬಹಳಷ್ಟು ಸಾಹಿತ್ಯಕ ಪರಿಚಾರಿಕೆ ಮಾಡಿದ ಚೊಕ್ಕಾಡಿಯ "ಸುಮನಸಾ ವಿಚಾರ ವೇದಿಕೆ’ ಸದಸ್ಯರಾಗಿ, "ಕಾರ್ತಿಕೇಯ ಯಕ್ಷಗಾನ ಕಲಾಸಂಘ ನಾರ್ಣಕಜೆ’ಯ ಸದಸ್ಯರಾಗಿ, ಐವರ್ನಾಡು ಪ್ರಾಥಮಿಕ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾಗಿ, ಐವರ್ನಾಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ, ಐವರ್ನಾಡು ಪಂಚಲಿಂಗೇಶ್ವರ ದೇವಸ್ಥಾನದ ಸಹ ಮೊಕ್ತೇಸರರಾಗಿ, ಚೊಕ್ಕಾಡಿಯ ಶ್ರೀರಾಮ ದೇವಸ್ಥಾನದ ಸಮಿತಿಯ ಉಪಾಧ್ಯಕ್ಷರಾಗಿ, ಜನತಾ ಪಕ್ಷದ ಪದಾಧಿಕಾರಿಯಾಗಿ, ಸುಳ್ಯ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸದಸ್ಯರಾಗಿ ದುಡಿದವರು ಅಪ್ಪ. ಆದರೆ ಸಾಹಿತ್ಯ-ಯಕ್ಷಗಾನ-ದೇವಸ್ಥಾನ-ರಾಜಕೀಯಗಳು ಎಲ್ಲೂ ಒಂದರೊಳಗೊಂದು ಸೇರಿ ಅವರಿಗಾಗಲಿ ಇತರರಿಗಾಗಲೀ ಸಮಸ್ಯೆ ಸೃಷ್ಟಿಸಲಿಲ್ಲ. ಯಕ್ಷಗಾನ ತಾಳಮದ್ದಳೆ ಚಟುವಟಿಕೆಗಾಗಿ, ೧೯೯೯ರಲ್ಲಿ 'ದೇರಾಜೆ ಸೀತಾರಾಮಯ್ಯ ಸಂಸ್ಕೃತಿ ರಂಗ’ ಎಂಬ ಸಂಘಟನೆ ಕಟ್ಟಿದ ಅವರು, ತನ್ನ ಸಾವಿನವೆರೆಗೂ (೧೬ ಡಿಸೆಂಬರ್ ೨೦೦೫) ಅದನ್ನು ಮುನ್ನಡೆಸಿಕೊಂಡಿದ್ದರು. (ಅವರ ಬರೆಹಗಳ ಸಂಕಲನ "ಮನವೆ ತನುವಾದವನು’ ಮತ್ತು ನೆನಪಿನ ಲೇಖನಗಳ ಸಂಕಲನ "ನೆನಪಿನುಂಗುರ’ವನ್ನು ದೇಸೀ ಸಂಸ್ಕೃತಿ ರಂಗ ೨೦೦೭ರಲ್ಲಿ ಪ್ರಕಟಿಸಿದೆ)

ಅಪ್ಪ ಅಮ್ಮನದ್ದು ದೊಡ್ಡ ಆಕಾಶ. ಹಾಗಾಗಿ ಇಬ್ಬರು ಮಕ್ಕಳಿಗೂ ಅಲ್ಲಿ ಧಾರಾಳ ಅವಕಾಶ ! ಬಹಳ ವಾಸ್ತವವಾದಿ, ಸೂಕ್ಷ್ಮಗ್ರಾಹಿ, ಹೊಂದಾಣಿಕೆಯ ಮನುಷ್ಯ ಈ ಅಪ್ಪ. ಹೊರಗೆ ಏನೇ ಮಾಡಲಿ, ನೋಡಲಿ ಅದನ್ನು ಅಮ್ಮನ ಜತೆ ಹೇಳಿಕೊಳ್ಳುವುದು ಅವರ ಅಭ್ಯಾಸ. ಆ ಮಾತುಕತೆಯಲ್ಲಿ, ಸುತ್ತಲಿನ ಸಮಾಜದ ಚಟುವಟಿಕೆಗಳು, ರಾಜಕೀಯ ಚಟುವಟಿಕೆಗಳು, ನೆರೆಕರೆಯವರ ಕಚ್ಚಾಟಗಳು, ದೇವಸ್ಥಾನದ ಚಟುವಟಿಕೆಗಳು ಹೀಗೆ ನೂರೆಂಟು ಅನುಭವಗಳ ಸಂಗತಿಗಳಿರುತ್ತಿದ್ದವು. ಅಪ್ಪನ ಹೊಂದಾಣಿಕೆಯ ಸ್ವಭಾವ ಹಾಗೂ ತಾಳ್ಮೆಯ ಬಗ್ಗೆ ಹಲವರು ಹೊಗಳುವುದುಂಟು. ಅವರನ್ನು ಕಂಡರೆ ಆಗದವರು ಅಂತ ಇರಲೇ ಇಲ್ಲವೇನೋ. ಅಪ್ಪ ಯಾವತ್ತೂ ಮಕ್ಕಳ ಸಹವಾಸವನ್ನು ದೂರ ಮಾಡಿದ್ದೇ ಇಲ್ಲ. ಮೂರು ಕಿಮೀ ದೂರದ ಪ್ರೈಮರಿ ಶಾಲೆಗೆ ನಾನು ಹೊರಟಾಗ, ಪೇಟೆ ಬಳಿ ಅವರಿಗೇನಾದರೂ ಕೆಲಸವಿದ್ದರೆ ಜತೆಗೆ ಹೊರಟುಬಿಡುತ್ತಿದ್ದರು. ದಾರಿಯುದ್ದಕ್ಕೂ ಅವರಿಗೆ ಹೇಳಲು ಏನಾದರೊಂದು ವಿಷಯ. ಅಷ್ಟೇಕೆ, ಬ್ಯಾಂಕಿನ ಮಹಾಸಭೆಗಳಿಗೆ, ಅಕ್ಕಿಸಾಮಾನು ತರಲು ಸುಳ್ಯ ಪೇಟೆಗೆ, ವಿಚಾರ ಗೋಷ್ಠಿಗಳಿಗೆ ಮಗ ಸಂಗಾತಿ. ಪಂಚವಟಿ ಪ್ರಸಂಗದ ರಾಮನಾಗಿ ಅವರು ಯಾವಾಗಲೂ ಹೇಳುತ್ತಿದ್ದ ಮಾತು, 'ಬದುಕು ಹೇಗೆ ಒದಗಿ ಬರುತ್ತದೆಯೋ ಹಾಗೆ ಸ್ವೀಕರಿಸುವವನಿಗೆ, ಬದುಕು ಭಾರವೂ ಅಲ್ಲ ಅಸಹನೀಯವೂ ಅಲ್ಲ.’ ಅಪ್ಪ ಹಾಗೆ ಎದುರುಗೊಂಡಿದ್ದರು. ಹಳ್ಳಿಯಲ್ಲೇ ಉಳಿಯಬೇಕಾದ ಅನಿವಾರ್ಯತೆಯನ್ನು ಆಯ್ಕೆ ಎಂಬಂತೆ ಪರಿವರ್ತಿಸಿಕೊಂಡರು. ಐವರ್ನಾಡು-ಚೊಕ್ಕಾಡಿಗಳಂತಹ ಊರುಗಳ ಆರೋಗ್ಯವನ್ನು ಕಾಪಾಡುವಲ್ಲಿ, ಮನಸ್ಸು ರೂಪಿಸುವಲ್ಲಿ ಅವರ ಕಾರ್ಯ ದೊಡ್ಡದು. ಮನಸ್ಸು ಬಿಗಿ ಹಿಡಿದು ಯೋಚಿಸಿದರೆ, ಎಲ್ಲ ಅವರಿಂದ ಬಂದಿದ್ದೇ ಹೆಚ್ಚು! ನನ್ನದೇನು ಅಂತ ಅರೆಕ್ಷಣ ಗಾಬರಿಯಾಗುವಷ್ಟು, ಕೊಟ್ಟೂ ಹೋದ ಬಿಟ್ಟೂ ಹೋದ ಅವರಿಗೆ...ಅರ್ಧಕ್ಕೆ ನಿಂತ ಈ ನಾಲ್ಕು ಮಾತು.
(ಅರವಿಂದ ಚೊಕ್ಕಾಡಿ ಸಂಪಾದಿಸಿದ "ಎರಡು ತಲೆಮಾರು’ ಕೃತಿಯಲ್ಲಿ ಪ್ರಕಟಿತ)

Read more...

December 04, 2009

ಅಮಿತಾಬ್ ಎಂಬ ದಶಾವತಾರಿ


ಬಾಲಿವುಡ್ ಶೆಹನ್‌ಶಾನಿಗೆ ವಯಸ್ಸಾಗಿದೆಯೆ? ಆಗಿದೆ ಅಂತ ನಮಗೆಲ್ಲ ಗೊತ್ತಾಗಿದ್ದು ಎರಡು ವರ್ಷಗಳ ಹಿಂದೆ. ಆ ಆಜಾನುಬಾಹು ಮುಂಬಯಿಯ ಲೀಲಾವತಿ ಆಸ್ಪತ್ರೆಗೆ ಗಾಲಿಮಂಚದಲ್ಲಿ ಅಂಗಾತ ಮಲಗಿಕೊಂಡು ಹೋದಾಗ. ಶೋಲೆಯ ಸೋಲೇ ಇಲ್ಲದ ಆ ಸರದಾರ, ಎಲ್ಲವನ್ನೂ ಎದುರಿಸುತ್ತಾ ಬಂದ. ರಾಜಾಠಾಕ್ರೆಯ ಎಂಎನ್‌ಎಸ್ ಪುಂಡರ ಮಾತಿನ ಬಾಣಗಳನ್ನು ಎದೆಯಲ್ಲಿ ಧರಿಸಿದ. ಮಗ ಅಭಿಷೇಕ, ಸೊಸೆ ಐಶ್ವರ್ಯಾರೊಂದಿಗೆ ದೇಶದೇಶಗಳನ್ನು ನೃತ್ಯ ಕಾರ್ಯಕ್ರಮಗಳಿಗಾಗಿ ಸುತ್ತಿದ. ತನ್ನ ಬ್ಲಾಗ್‌ನಲ್ಲಿ ಪತ್ರಕರ್ತರೊಂದಿಗೆ ತಿಕ್ಕಾಡಿದ. ವಯಸ್ಸು ಅರುವತ್ತಾದರೂ ಹಿರಿಯ ಕಲಾವಿದನೇ ಹೀರೋ ಎಂಬುದು ಇನ್ನು ಚಾಲ್ತಿಯ್ಲಿರುವಾಗ ಬಚ್ಚನ್ ಹಾಗೆ ಮಾಡಲಿಲ್ಲ. ಹಾಗಂತ ಪೋಷಕ ಕಲಾವಿದ ಅಂತಲೂ ಅನ್ನಿಸಲಿಲ್ಲ. ಕುರುಡಿ ರಾಣಿಮುಖರ್ಜಿಯ ಗುರುವಾಗಿ 'ಬ್ಲ್ಯಾಕ್' ಸಿನಿಮಾದಲ್ಲಿ ಅಮಿತಾಬ್ ಕಾಣಿಸಿಕೊಂಡಾಗ, ಜನ ಕಣ್ಣರಳಿಸಿ ನೋಡಿದರು. 'ಕೌನ್ ಬನೇಗಾ ಕರೋಡ್‌ಪತಿ' ಅಂತ ದಪ್ಪ ಸ್ವರದಲ್ಲಿ ನಮ್ಮ ಮನೆ ಟಿವಿಯೊಳಗೆ ಬಂದಾಗ ಜನ ಹುಚ್ಚಾದರು. ೨೦೦೬ರಲ್ಲಿ ಕರಣ್‌ಜೋಹರ್ ನಿರ್ದೇಶನದ 'ಕಭಿ ಅಲ್ವಿದಾ ನಾ ಕೆಹನಾ' ದಲ್ಲಿ 'ಸೆಕ್ಸಿ ಸ್ಯಾಮ್' ಆಗಿ ಕಂಗೊಳಿಸಿದ ಈ ಮಹಾಪುರುಷ, ೨೦೦೭ರಲ್ಲಿ 'ಭೂತನಾಥ್' ಸಿನಿಮಾದಲ್ಲಿ ರೋಗಿಷ್ಠ ಮುದುಕನಾಗಿ ಮಕ್ಕಳೊಂದಿಗೆ ಮಾತಾಡಿದ. ಟಿವಿ ಕಡೆ ಬಚ್ಚನ್ ಬಾರದೆ ತುಂಬ ದಿನವಾಯಿತು ಅಂತ ಜನ ಅಂದುಕೊಂಡರೆ, 'ಬಿಗ್‌ಬಾಸ್-೩'ರ ನಿರೂಪಕನಾಗಿ ಬಂದ. ಇಂತಹ ಭಾರತ ನಾಯಕ ಅಮಿತಾಬ್ ಬಚ್ಚನ್ ಈಗ ಅಭಿಷೇಕನ ಸೊಂಟದಲ್ಲಿ ತೂಗುತ್ತಿರುವ ಚಿತ್ರ ಎಲ್ಲೆಡೆ ಹರಿದಾಡಹತ್ತಿದೆ. ಅಮಿತಾಬ್‌ಗೆ ಏನಾಗಿದೆ?!

೬೭ ವರುಷದ ಅಮಿತಾಬ್ ೧೩ ವರುಷದ ಹುಡುಗನಾಗಿದ್ದಾನೆ. ಅಭಿಷೇಕ್ ಬಚ್ಚನ್ ಸದ್ಗುಣವಂತ ರಾಜಕಾರಣಿಯಾಗಿ ಅಮಿತಾಬ್ ಅಪ್ಪನಾಗಿದ್ದಾನೆ. ಆರ್. ಬಾಲಕೃಷ್ಣನ್ ನಿರ್ದೇಶನದಲ್ಲಿ ಇಳಯರಾಜಾ ಸಂಗೀತದಲ್ಲಿ ಡಿಸೆಂಬರ್ ಮೊದಲ ವಾರ ಬಿಡುಗಡೆಗೆ ಸಿದ್ಧವಾಗುತ್ತಿರುವ (ಡಿ.೪ರಂದು ಬಿಡುಗಡೆಯಾಯಿತು) 'ಪಾ' ಎಂಬ ಹೊಸ ಚಿತ್ರದ ತುಣುಕೊಂದು, ಮೊನ್ನೆ ನ.೪ರಂದು ಬಿಡುಗಡೆಯಾಯಿತು. ಅರೋ ಎಂಬ ಆ ಹುಡುಗನ ತಾಯಿ (ವಿದ್ಯಾ ಬಾಲನ್) ಸ್ತ್ರೀ ರೋಗ ತಜ್ಞೆ. ಕಣ್ತುಂಬ ಕನಸುಗಳ ಅಮೋಲ್ ಅರ್ತೆ (ಅಭಿಷೇಕ್ ಬಚ್ಚನ್), ರಾಜಕೀಯವೊಂದು ಕೊಳಕು ಗುಂಡಿ ಅಲ್ಲವೆಂದು ತೋರಿಸಲು ಹೊರಟವನು. ಆದರೆ ಹುಡುಗ ಆರೋ, ಹದಿಮೂರರ ವಯಸ್ಸಿಗೇ ಮುದುಕನಂತೆ ಕಾಣುವ ಆನುವಂಶಿಕ ಕಾಯಿಲೆಗೆ ತುತ್ತಾಗಿದ್ದಾನೆ. ೧೮೮೬ರಲ್ಲಿ ಜೊನಾಥನ್ ಹಚಿನ್‌ಸನ್ ಎಂಬಾತ ಮೊದಲ ಬಾರಿಗೆ ಈ 'ಪ್ರೊಜೇರಿಯಾ' ಕಾಯಿಲೆಯ ಬಗ್ಗೆ ಬೆಳಕು ಚೆಲ್ಲಿದ. ಆದರೆ ಇಂದಿನವರೆಗೂ ಅದಕ್ಕೆ ಸೂಕ್ತವಾದ ಚಿಕಿತ್ಸೆಯ ದಾರಿ ಸಿಕ್ಕಿಲ್ಲ. ೪೦ ಲಕ್ಷದಲ್ಲಿ ಒಬ್ಬರಿಗೆ ತಗಲುವ ಕಾಯಿಲೆ ಇದು.

ಮನಸ್ಸು ಹದಿಮೂರರಂತಿದ್ದು ಸ್ಕೂಲಿಗೆ ಹೋಗುತ್ತಾನಾದರೂ ದೊಡ್ಡದಾಗಿ ಬೆಳೆದಿರುವ ಅರೋನ ತಲೆ ಬೋಳು ! ಕನ್ನಡಕ ಬಂದಿದೆ. ಚರ್ಮವೆಲ್ಲ ಸುಕ್ಕುಗಟ್ಟಿದೆ. ಹೀಗೆ ಇಲ್ಲಿ ಎಲ್ಲರ ಹುಬ್ಬುಗಳನ್ನು ಮೇಲಕ್ಕೇರಿಸಿದ್ದು ಅಮಿತಾಭ್ ಪಾತ್ರದ ಮೇಕಪ್. ಸಿನಿಮಾ ಚಿತ್ರೀಕರಣಕ್ಕೆಂದು ಶಾಲೆಯೊಂದಕ್ಕೆ ಹೋದಾಗ ಜತೆಗೆ ನಟಿಸಬೇಕಾದ ಮಕ್ಕಳು, ಈತ ಅಮಿತಾಬ್ ಎಂದು ನಂಬಲೇ ಇಲ್ಲ ! ಆತನ ತಲೆ ಮುಟ್ಟಿ ಮುಟ್ಟಿ ನೋಡಿ ಏನಿದೇನಿದೆಂದು ಆಶ್ಚರ್ಯಚಕಿತರಾದರು. ದಿಲ್ಲಿಯ ಮೆಟ್ರೊದಲ್ಲಿ ಸಿನಿಮಾದ ಒಂದು ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಆಗ ಚಿತ್ರೀಕರಣ ತಂಡಕ್ಕೊಂದು ಸುದ್ದಿ ಬಂತು- ಏನಪ್ಪಾ ಅಂದರೆ ಮುಂದಿನ ನಿಲ್ದಾಣದಲ್ಲಿ ಸುಮಾರು ನೂರು ಜನ ಫೋಟೊಗ್ರಾಫರ್‌ಗಳು ಅಮಿತಾಬ್‌ನ ಹೊಸ ಪಾತ್ರದ ಸೆರೆ ಹಿಡಿಯಲು ಕಾಯುತ್ತಿದ್ದಾರೆ ! ಹಾಗಾಗಿ ರೈಲನ್ನೂ ಮೊದಲೇ ನಿಲ್ಲಿಸಿ ಅಮಿತಾಬ್‌ರನ್ನು ಬಚ್ಚಿಡಬೇಕಾಯಿತಂತೆ!

ರಂಗಶಂಕರದ ಒಡತಿ 'ಅರುಂಧತಿ ನಾಗ್' ಈ ಸಿನಿಮಾದಲ್ಲಿ ನಟಿಸುತ್ತಿರುವುದು ಮತ್ತೊಂದು ವಿಶೇಷ. ನಮ್ಮ ಕನ್ಯಾಮಣಿಗಳು ಬಾಲಿವುಡ್ ಪ್ರವೇಶವೆಂದರೆ ಅತಿ ದೊಡ್ಡ ಸೀಮೋಲ್ಲಂಘನವೆಂದು ಚಾತಕ ಪಕ್ಷಿಗಳಂತೆ ಕಾಯುತ್ತಿರುವಾಗ, 'ಜೋಗಿ' ಅಮ್ಮನಾಗಿ ಕನ್ನಡಿಗರಿಗೆ ನಟನಾ ಸಾಮರ್ಥ್ಯ ತೋರಿದ ಅರುಂಧತಿ, ಬಚ್ಚನ್ ಬಳಗ ಸೇರಿದ್ದಾರೆ. ಕಳೆದ ಬಾರಿ 'ಸ್ಲಂ ಡಾಗ್ ಮಿಲಿಯನೇರ್' ಸಿನಿಮಾಕ್ಕೆ ಆಸ್ಕರ್ ಪ್ರಶಸ್ತಿ ಸಿಕ್ಕಾಗ 'ದಿ ಕ್ಯೂರಿಯಸ್ ಕೇಸ್ ಆಫ್ ಬೆಂಜಮಿನ್ ಬಟನ್' ಎಂಬ ಚಿತ್ರ ಹಲವರ ಮೆಚ್ಚುಗೆಗೆ ಪಾತ್ರವಾಗಿತ್ತು. ಅಲ್ಲಿ ಮಗುವೊಂದು ಮುದುಕನಾಗಿ ಹುಟ್ಟಿ ಕಿರಿಯನಾಗುತ್ತಾ ಹೋಗುವ ಕತಾ ಹಂದರವಿತ್ತು.

ಕ್ರಿಸ್ಟಿಯನ್ ಟಿನ್‌ಸ್ಲೆ ಮತ್ತು ಡೊಮಿನಿ ಟಿಲ್ ಎಂಬ ಈ ಮೇಕಪ್‌ಮ್ಯಾನ್‌ಗಳು ಪ್ರಯೋಗಾಲಯದಲ್ಲಿ ಸಂಸ್ಕರಿಲ್ಪಟ್ಟ ಮಣ್ಣಿನ ಎಂಟು ತುಂಡುಗಳಿಂದ ಅಮಿತಾಬ್ ತಲೆಯನ್ನೇ ಬದಲಿಸಿದ್ದಾರೆ . 'ಮೇಕಪ್ ಆರಂಭವಾದ ನಂತರ ಸೆಂಟಿಮೀಟರ್‌ನಷ್ಟೂ ಅದನ್ನು ಅತ್ತಿತ್ತ ಮಾಡಲು ಸಾಧ್ಯವಿಲ್ಲ. ಏನೂ ತಿನ್ನಲು ಕುಡಿಯಲು ಅಸಾಧ್ಯ. ಕಿವಿ ಮತ್ತು ತಲೆಯು ಒಂದೇ ಆಗಿದ್ದು ಹೆಲ್ಮೆಟ್‌ನಂತಿರುತ್ತದೆ.ನನ್ನ ಕಿವಿ ಮುಚ್ಚಿಹೋಗಿದ್ದು, ಹೊರಗಿನ ಧ್ವನಿ ಕೇಳಲು ಎರಡು ಸಣ್ಣ ತೂತುಗಳನ್ನು ಮಾಡಲಾಗಿದೆ. ನಾನು ಏನನ್ನಾದರೂ ಕೊಂಚ ಮಾತಾಡಿದರೆ ಸುರಂಗದೊಳಗೆ ಮಾತಾಡಿದಂತೆ ಪ್ರತಿಧ್ವನಿಯಷ್ಟೇ ನನಗೆ ಕೇಳುತ್ತದೆ. ಹಣೆ, ಮೂಗು, ಎರಡು ಕೆನ್ನೆಗಳು, ಮೇಲಿನ ಕೆಳಗಿನ ತುಟಿಗಳು ಎಲ್ಲಾ ನಾನಾ ಭಾಗಗಳಾಗಿದ್ದು ಅವನ್ನೆಲ್ಲಾ ತಿಳಿಯದಂತೆ ಜೋಡಿಸಲಾಗಿದೆ. ಇದರಿಂದಾಗಿ ಉಂಟಾಗುವ ತುರಿಕೆ , ನೋವು ಸಹಿಸಲಸಾಧ್ಯ. ಜತೆಗೆ ಚರ್ಮದ ರೀತಿ ಬದಲಾಯಿಸಲು, ಎದೆ, ಕಾಲುಕೈಗಳಲ್ಲಿರುವ ಕೂದಲನ್ನೆಲ್ಲಾ ನಾನು ತೆಗೆಯಬೇಕಾಯಿತು. ಈ ಮೇಕಪ್ ಮಾಡಲು ೫ಗಂಟೆಗಳು ಬೇಕಾದರೆ, ತೆಗೆಯಲೇ ೨ ಗಂಟೆಗಳು ಬೇಕು. ಗರಿಷ್ಠ ೬ ಗಂಟೆಗಳ ಕಾಲ ಈ ವೇಷದಲ್ಲಿ ಅಭಿನಯ ಮಾಡಬಹುದು. ಹೀಗಾಗಿ ನಾವು ಚಿತ್ರೀಕರಣದ ನಿಗದಿತ ವೇಳಾಪಟ್ಟಿಗಿಂತ ಹಿಂದುಳಿಯಬೇಕಾಯಿತು. ರಾತ್ರಿ ೧೧ಗಂಟೆಗೆ ಸಿದ್ಧತೆಗೆ ತೊಡಗಿದರೆ ಬೆಳಗ್ಗೆ ೪-೫ ರ ಹೊತ್ತಿಗೆ ಚಿತ್ರೀಕರಣಕ್ಕೆ ಸಿದ್ಧನಾಗುವುದು. ಸಿನಿಮಾ ಎಂದರೆ ವೈಭೋಗ ಅಂದವರು ಯಾರು?' ಅಂತ ತನ್ನ ಬ್ಲಾಗ್‌ನಲ್ಲಿ ಬರೆದಿದ್ದಾರೆ ಅಮಿತಾಬ್. 'ನಾನು ಮಗುವಾಗಿದ್ದಾಗ ಎಲ್ಲರಂತೆ ಅಪ್ಪನ ಭುಜ, ತಲೆ ಹತ್ತಿ ಕುಣಿದಾಡುತ್ತಿದ್ದೆ. ಈಗ ಆ ಸುಖವನ್ನು ಅಪ್ಪನಿಗೆ ಮರಳಿ ಕೊಡಲು ಆನಂದವಾಗುತ್ತಿದೆ' ಅನ್ನುತ್ತಾನೆ ಮಗರಾಯ ಅಭಿಷೇಕ್.
(ನವಂಬರ್ ೬ ರಂದು ವಿಜಯಕರ್ನಾಟಕ ಲವಲವಿಕೆಯಲ್ಲಿ ಪ್ರಕಟಿತ)

Read more...

November 26, 2009

ಹಾ ಹಾ ರಿಂಗ್ ಆಗ್ತಿದೆ...!


ಹೇಳಿಕೊಳ್ಳಲಾಗದ ಸಂಕಟದ ಸಂಜೆ. ಸುತ್ತಮುತ್ತ ಒತ್ತಿಕೊಂಡ ಜನ. 'ಸಾರ್, ಸಾರ್ ಒಂದು ರಿಂಗ್ ಕೊಡಿ ಸಾರ್...ಹಾ...ರಿಂಗ್ ಆಗ್ತಿದೆ...ರಿಸೀವ್ ಮಾಡ್ತಿಲ್ಲ ...ಹೋಯ್ತು ಬಿಡಿ...ನೋಡಿ ಇಲ್ಲೇ ಹಿಂದೆ ಒಬ್ಬ ಇಳ್ಕೊಂಡ...' ಅಷ್ಟೇ, ಅರ್ಧ ಜೀವ ಕೈಕೊಟ್ಟಿತ್ತು. ಎಂತಹ ಸಂಕಷ್ಟದ ಸಂದರ್ಭದಲ್ಲೂ 'ಈಗೇನು ಮಾಡಬೇಕು' ಅಂತಾದಾಗ ಕೈಗೆ ಬರುವುದು ಮೊಬೈಲು. ಈಗ ಅದೇ ಇಲ್ಲ. ಯಾರಿಗೆ ಹೇಳುವುದು ? ಕಾಯಿನ್‌ಬೂತಿಗೆ ಹೋಗಿ ಪಸ್‌ರ್ನಿಂದ ಒಂದು ರೂಪಾಯಿ ತೆಗೆದರೆ, ಅರೆ, ಯಾರ ನಂಬರೂ ನೆನಪಿಲ್ಲ ! ಅಂತೂ ಏರ್‌ಟೆಲ್ ಮೊಬೈಲ್‌ನ ಸ್ನೇಹಿತನೊಬ್ಬನಿಗೆ ವಿಷಯ ತಿಳಿಸಿ, ಕಸ್ಟಮರ್ ಕೇರ್‌ಗೆ ಫೋನ್ ಮಾಡಿ ಸಿಮ್ ಬ್ಲಾಕ್ ಮಾಡಿಸು ಅಂದೆ. ಪೊಲೀಸ್ ಸ್ಟೇಷನ್ ಕಡೆ ಕಾಲು ಎಳೆದುಕೊಂಡೆ. ಅಷ್ಟಕ್ಕೇ ಬದುಕೆಂಬ ವೆಹಿಕಲ್ ಕೆಟ್ಟು ಕೂತಿತ್ತು.

'ಎಲ್ಲಿ ಕಳೆದದ್ದು?' 'ಉಮಾಟಾಕೀಸ್ ಹತ್ತಿರ.' 'ಉಮಾಟಾಕೀಸ್ ಅಂದರೆ ನಮ್ಮ ಲಿಮಿಟ್‌ಗೆ ಬರೊಲ್ಲಾರೀ'. 'ಅಲ್ಲಾ ಸಾರ್, ಇಲ್ಲೇ ಮಕ್ಕಳ ಕೂಟ ಬಸ್‌ಸ್ಟಾಪ್‌ನಲ್ಲಿ ಬಸ್ ಹತ್ಕೊಂಡೆ. ನೂರು ಮೀಟರ್ ದೂರದ ಶಂಕರ ಮಠ ರೋಡ್ ಹತ್ರ ಹೋದಾಗ ಮೊಬೈಲ್ ಕದ್ದುಹೋಗಿದ್ದು ಗೊತ್ತಾಯ್ತು.' 'ಅಲ್ರೀ ನಮ್ ಹತ್ರ ಸುಳ್ಳು ಹೇಳ್ತೀರಲ್ಲ. ಈಗ ಉಮಾಟಾಕೀಸ್ ಅಂದ್ರಿ'. 'ಅಲ್ಲ ಸಾರ್, ಶಂಕರ ಮಠ ರೋಡ್‌ನಿಂದ ೫೦ ಮೀಟರ್ ಮುಂದೆ ಇರೋದೆ ಉಮಾ ಟಾಕೀಸ್. ಅಲ್ಲಿ ಇಳ್ಕೊಂಡು ಬಂದೆ.' 'ಆಗಲ್ಲಾರೀ, ನಿಮ್ ನೆಗ್ಲಿಜೆನ್ಸ್‌ನಿಂದ ತಾನೇ ಮೊಬೈಲ್ ಹೋಗಿದ್ದು. ಚಾಮರಾಜಪೇಟೆ ಸ್ಟೇಷನ್‌ಗೆ ಹೋಗಿ. ಹತ್ರ ಅಂತ ಇಲ್ಲಿಗೆ ಬಂದ್ರೆ ಆಗತ್ತಾ?' 'ಅಲ್ಲಾ ಸಾರ್, ಕಾಸ್ಟ್ಲಿ ಸೆಟ್. ತುಂಬಾ ಬೇಜಾರಾಯ್ತು. ಡುಪ್ಲಿಕೇಟ್ ಸಿಮ್ ತಗೊಳ್ಳೊಕೆ ಒಂದು ಅಕ್ನಲಾಡ್ಜ್‌ಮೆಂಟ್ ಬೇಕು ಅಷ್ಟೇ. ಪ್ಲೀಸ್' 'ಆಗಲ್ಲಾ ಅಂದ್ನಲ್ಲಾ ...ನೆಗ್ಲಿಜೆನ್ಸ್ ನಿಮ್ದು'. ಅಷ್ಟೂ ಹೊತ್ತು ಕಳ್ಳರಿಗೆ ಹಾಕುತ್ತಿದ್ದ ಶಾಪಗಳನ್ನೆಲ್ಲ ಆ ಪೊಲೀಸ್ ಇನ್ಸ್‌ಪೆಕ್ಟರ್ ತಲೆಗೆ ಒಗೆದು ಹೊರಬಂದೆ. ದಿನಾ ಮೊಬೈಲ್ ಲೂಟಿ ಹೊಡೆಯುವವರ ಬಗ್ಗೆ ಚಕಾರ ಎತ್ತದ ಈ ಮಂದಿ, 'ನೆಗ್ಲಿಜೆನ್ಸ್ ನಿಮ್ದು' ಅನ್ನುತ್ತಿರುವುದು ಮನೆ ತಲುಪುವವರೆಗೂ ಕಿವಿಯೊಳಗೆ ಮೊರೆಯುತ್ತಿತ್ತು. ಹಾಗೆ ಯಾರಲ್ಲಾದರೂ ಕಷ್ಟ ಹೇಳಿಕೊಳ್ಳೋಣ ಅಂದರೆ... ಮೊಬೈಲೇ ಇಲ್ಲ. ಮನೆಗೆ ಬಂದು ಪೋನ್ ಹಚ್ಚಿದರೆ ಆ ಸ್ನೇಹಿತ ಇನ್ನೂ ಸಿಮ್ ಕಾರ್ಡ್ ಬ್ಲಾಕ್ ಮಾಡಿಸಿಲ್ಲ. ಅವನಿಗೆ ಯಾರದೋ ಅರ್ಜೆಂಟ್- ಇಂಪಾರ್ಟೆಂಟ್ ಕಾಲ್ ಬಂತಂತೆ. ಬಾಯ್ತುಂಬ ಬೈದುಕೊಂಡು, ಮನೆ ಓನರ್‌ನ ಏರ್‌ಟೆಲ್ ಮೊಬೈಲ್ ಕೇಳಿ, ಕಸ್ಟಮರ್ ಕೇರ್ ಸಂಪರ್ಕಿಸಿದರೆ...ಅದೇ ರಶ್ಮಿ , ಆಹಾ ಎಷ್ಟೊಂದು ನಯವಾಗಿ ಸಮಾಧಾನವಾಗಿ ಸುಲಲಿತವಾಗಿ ಉಲಿಯುತ್ತಿದ್ದಾಳೆ ! ಬಿಲ್ಲಿಂಗ್ ಅಡ್ರೆಸ್ ಸರಿಯಾಗಿ ಹೇಳಿದ್ದಕ್ಕೆ ಥ್ಯಾಂಕ್ಸ್ ಅಂತೆ ಥ್ಯಾಂಕ್ಸ್. ಅಯ್ಯೋ ಸಿಮ್ ಬ್ಲಾಕ್ ಮಾಡ್ಸಮ್ಮಾ, ಕಿಡಿಗೇಡಿಗಳು ಯಾವುದೊ ಕ್ರಿಮಿನಲ್ ಕೆಲಸಕ್ಕೆ ಕಾಲ್ ಮಾಡ್ತಾರೆ ಅಂತಾನೂ ಓನರ್ ಹೇಳ್ತಿದಾರೆ ಅಂತ ಮನಸಲ್ಲೇ ಅಂದುಕೊಂಡೆ. ಹಾಗೆ ಎಲ್ಲ 'ಉತ್ತರಕ್ರಿಯೆ' ನಡೆದ ಬಳಿಕವೂ 'ಸ್ವಿಚ್‌ಡ್ ಆಫ್' ಅಂತಲೇ ಬರ್‍ತಿದೆ. ಈ ಮೊಬೈಲ್ ಕಂಪನಿಯವರಿಗೆ ಬೇರೇನಾದರೂ ಸೌಜನ್ಯದ ಸಂದೇಶ ಹಾಕಕ್ಕೆ ಆಗಲ್ವಾ? ನನ್ನ ನಂಬರ್‌ಗೆ ನಾನೇ ರಿಂಗ್ ಕೊಡುವಾಗ ಸ್ವಿಚ್‌ಡ್ ಆಫ್ ಅಂತ ಬರುವುದಿದೆಯಲ್ಲ, ಅದು ನಾನು ಜೀವಂತವಿದ್ದಾಗಲೂ ಸತ್ತಿದ್ದಾನೆ ಎಂದು ಇನ್ನೊಬ್ಬರು ಅಂದಂತೆ !

ಈಗ ಅಸಹ್ಯ ಏಕಾಂಗಿತನ. ಹೇಳೋರಿಲ್ಲ ಕೇಳೋರಿಲ್ಲ. ತಬ್ಬಲಿಯು ನೀನಾದೆ ಮಗನೆ ಹಾಡು. ಅವೆಷ್ಟೋ ನಂಬರ್‌ಗಳು, ಕಾಯ್ದಿಟಿದ್ದ ಎಸ್‌ಎಂಎಸ್‌ಗಳು, ಬ್ಯಾಂಕ್ ಅಕೌಂಟ್ ನಂಬರ್-ಕೋಡ್‌ಗಳು, ಬೇಜಾರಾದಾಗ ನೋಡಿಕೊಳ್ಳಲು ಇಟ್ಟುಕೊಂಡಿದ್ದ ಸ್ಟೈಲ್‌ಕಿಂಗ್ ತಮ್ಮ ಹಾಗೂ ಅಮ್ಮನ ನಗುವಿನ ಫೋಟೊ ...ಹೋದದ್ದು ಹೋಯಿತು. ಕಳೆದೊಂದು ವರ್ಷದಿಂದ ಬ್ಯಾಕ್‌ಅಪ್ ಕೂಡಾ ಇಟ್ಟುಕೊಳ್ಳದ್ದರಿಂದ ಅಪ್‌ಡೇಟ್ ಆದ-ಸೇರ್ಪಡೆಯಾದ ನಂಬರ್‌ಗಳೂ ಮಾಯ. ಬೇಜಾರು ಅಂದರೆ, 'ಟೇಕ್ ಇಟ್ ಈಸಿ ಮೂರ್ತಿ','ಟೇಕ್ ಇಟ್ ಈಸಿ ಗುರು' ಅನ್ನೋ ಹೆಸರಿನಲ್ಲಿ ರಿಸೀವ್ ಮಾಡಬಾರದೆಂದೇ ಇಟ್ಟುಕೊಂಡಿದ್ದವು ಕೆಲವು. ವಾರಕ್ಕೊಮ್ಮೆ ಫೋನ್ ಮಾಡಿ, 'ಸಾರ್ ನಮ್ಮ ಪುಸ್ತಕದ ವಿಮರ್ಶೆ ಬಂದಿಲ್ವಲ್ಲಾ...ಮುಂದಿನ ವಾರ ನಮ್ಮ ಕಾಲೇಜಲ್ಲಿ ಪ್ರೊಗ್ರಾಮ್, ಎಲ್ಲ ಡಿಟೈಲ್ಸ್ ಕೊಡ್ತೀವಿ ಒಂದು ದೊಡ್ಡ ಆರ್ಟಿಕಲ್ ಮಾಡಿ ಸಾರ್' ಅಂತ ಜೀವ ಹೀರುವ ಪರಿಚಿತ ಅಪರಿಚಿತ ಜೀವಗಳ ನಂಬರುಗಳು. ಅವೂ ಕೈಕೊಟ್ಟವು. ಇನ್ನು ಕೆಲ ದಿನಗಳ ನಂತರ ಅವರು ಮತ್ತೆ ಕರೆಯುತ್ತಾರೆ. ನಾನು ಗೊತ್ತಿಲ್ಲದೆ ರಿಸೀವ್ ಮಾಡಿ ದಾಕ್ಷಿಣ್ಯದ ಮುಜುಗರದಲ್ಲಿ ಸಿಕ್ಕಿಕೊಳ್ಳುತ್ತೇನೆ.

ಮೊನ್ನೆ ಮೊನ್ನೆ ಭಾನುವಾರ. ಮೆಜೆಸ್ಟಿಕ್‌ನಿಂದ ಚಿತ್ರಕಲಾ ಪರಿಷತ್‌ಗೆ ಅಬ್ಬಬ್ಬಾ ಅಂದರೆ ೧೭ ರುಪಾಯಿ ಆಟೊ ಚಾರ್ಜು. ತಿರುಗಿಸಿದ್ದ ಮೀಟರ್ ಓಡಲಿಲ್ಲ ಅಂತ ಮೂವತ್ತು ರುಪಾಯಿ ಕೇಳಿದ್ದ ಆ ದುರುಳ ಆಟೊ ಡ್ರೈವರ್. ಸಣ್ಣಗೆ ಶರಾಬಿನ ಘಮ. ಯುನಿಫಾರ್ಮ್ ಇಲ್ಲ. ನಾಲ್ಕೈದು ವಾಹನಗಳ ಮಧ್ಯೆ ಸೆಂಟಿಮೀಟರ್ ಅಂತರದಲ್ಲಿ ತಪ್ಪಿಸಿಕೊಂಡು ಬಂದವನು. 'ಒಳಗಡೆ ಕಾಯಿಲೆ ಇರೋದು ಮೊದಲೇ ಗೊತ್ತಾಗತ್ತಾ? ಮೀಟರ್ ಓಡ್ತಿಲ್ಲ ಅಂತ ನನಗೆ ಗೊತ್ತಾಗಿದ್ದೇ ಈಗ. ಮೂವತ್ತು ರುಪಾಯಿ ಕೊಡಿ'- ಅಷ್ಟೆ. ಇಪ್ಪತ್ತು ರುಪಾಯಿ ಕೊಟ್ಟರೂ ಸ್ವೀಕರಿಸಲೊಲ್ಲ. ಮಾತಿಗೆ ಮಾತು. ಆ ಭಾನುವಾರದ ಮಧ್ಯಾಹ್ನ ಕುಮಾರಪಾರ್ಕ್‌ನ ನಿರ್ಜನ ರಸ್ತೆ. ಜುಮ್ಮೆಂದು ಓಡುವ ಕಾರುಗಳು ಮಾತ್ರ. 'ನೀನು ರಿಪೋರ್ಟರ್ ಆಗಿರು, ಎಲ್ಲೇ ಕೆಲಸ ಮಾಡು. ನೋಡಯ್ಯಾ, ಆಟೊ ನಂಬರ್ ನೋಟ್ ಮಾಡ್ಕೊ ; ನಿನ್ ಕೈಲಿ ಏನೂ ಮಾಡಕ್ಕಾಗಲ್ಲ' ಅನ್ನುತ್ತಾ ಆಟೊ ಇಳಿದು ಮೈಮೇಲೆ ಬಂದೇಬಿಟ್ಟ. 'ಏನು ಮಾಡ್ತೀಯಾ ನೀನು, (ಬೆರಳನ್ನು ಕತ್ತಿನ ಸುತ್ತ ಎಳೆದು ತೋರಿಸುತ್ತಾ) ಕತ್ತರಿಸಿ ಹಾಕ್‌ಬಿಡ್ತೀವಿ, ಮನೆಗೇ ಬಂದು ಉಡಾಯಿಸ್‌ಬಿಡ್ತೀವಿ ನೋಡು...ಅಂದ. ನಖಶಿಖಾಂತ ಉರಿಯುತ್ತ ಬಯ್ಯುತ್ತ ನಂಬರ್ ಬರೆದುಕೊಂಡೆ. ಮೊಬೈಲ್, ಕನ್ನಡಕಗಳೆಲ್ಲ ಕಳೆದುಹೋಗುವ ಹೊಡೆದಾಟಕ್ಕೆ ನಾನು ಸಿದ್ಧನಿರಲಿಲ್ಲ. ಇಪ್ಪತ್ತೈದು ರುಪಾಯಿ ಕೊಟ್ಟು ಅವನ ಕೈಬೀಸಿನಿಂದ ತಪ್ಪಿಸಿಕೊಂಡು ಪರಿಷತ್‌ನ ಹೆಬ್ಬಾಗಿಲ ಬಳಿ ಹೋದೆ. 'ಯಾರನ್ನಾದ್ರೂ ಕರ್‍ಕೊಂಡು ಬಾ. ಇಲ್ಲೇ ಕಾಯ್ತಾ ಇರ್‍ತೀನಿ' ಅಂತೆಲ್ಲ, ಬೊಬ್ಬಿಡುತ್ತಲೇ ಇದ್ದ. ಅಂತಹ ದುಷ್ಟ ಡ್ರೈವರನ ಆಟೊ ನಂಬರ್ ಕೂಡಾ ಮೊಬೈಲ್‌ನಲ್ಲಿತ್ತು. (ಆತನ ಹೆಸರು ಧನಂಜಯ ಅಂತಿತ್ತು) ಆ ದಿನ ತಕ್ಷಣಕ್ಕೆ ಸಿಕ್ಕ ನಂಬರೊಂದಕ್ಕೆ ಪೋನ್ ಮಾಡಿ ಆಟೊ ನಂಬರ್ ಹೇಳಿ ದೂರು ಕೊಟ್ಟಿದ್ದೆ. ಅವ್ಯಾವುವೂ ಈಗಿಲ್ಲ, ಇನ್ನಿಲ್ಲ. ಆತನ ಕೊಳಕು ಬಿಂಬದ ಹೊರತಾಗಿ.

ಮನೆ ತುಂಬ ಒಬ್ಬನೇ ಬೈದುಕೊಂಡು, ನಿಮಿಷಕ್ಕೊಮ್ಮೆ ಛೆ ಛೆ ಅನ್ನುತ್ತ, ರಾತ್ರಿ ಎಂಟಾದಾಗ ಒಮ್ಮೆ ನಿರಾಳ. ಹೊಸ ಜನ್ಮ ಬಂದಂತೆ. ಎಲ್ಲ ನೆನಪುಗಳನ್ನೂ ಕಳೆದುಕೊಂಡವನಂತೆ. ಈಗಷ್ಟೇ ಬಿಸಿಲಲ್ಲಿ ಒಣಗಿದ ಬಟ್ಟೆಯ ಹೊಸ ಘಮದಂತೆ. ಸರ್ವತಂತ್ರ ಸ್ವತಂತ್ರನಾದಂತೆ ! ರಾತ್ರಿ ಹತ್ತಾಯಿತೋ ಮತ್ತೆ ತಳಮಳ ಶುರು. ಕಿವಿಗೆ ಇಯರ್‌ಫೋನ್ ಸಿಕ್ಕಿಸಿಕೊಂಡು ಟೆರೇಸ್‌ನಲ್ಲಿ ಓಡಾಡುತ್ತ ಕೇಳುತ್ತಿದ್ದ ಪದ್ಯಾಣ ಭಾಗವತರ ಹೊಸ ಯಕ್ಷಗಾನ ಹಾಡನ್ನೂ ಕೇಳಲಾಗುವುದಿಲ್ಲ. ಪ್ರತಿದಿನ ಈ ಹೊತ್ತಿಗೆ ಫೋನ್ ಮಾಡಿ ಉಲ್ಲಾಸದಿಂದ ಮಾತಾಡುತ್ತಿದ್ದ ಗೆಳೆಯನ ಕರೆ ಬರುವುದೇ ಇಲ್ಲ. ಅವಳ ಮೆಸೇಜು ನನಗೆ ಡೆಲಿವರಿ ಆಗೋದಿಲ್ಲ. ರಾತ್ರಿ ಮಲಗಲು ಹೊರಟರೆ ಅಲಾರ್ಮ್ ಇಟ್ಟುಕೊಳ್ಳಲೂ ಮೊಬೈಲ್ ಇಲ್ಲವಲ್ಲ. ಹತ್ತು ನಿಮಿಷ ಹಾಡು ಕೇಳದಿದ್ದರೆ ನಿದ್ದೆಯೂ ಸುಳಿಯುವುದಿಲ್ಲ. ಮೊಬೈಲ್ ಕಳ್ಳರು ನರಕಕ್ಕೆ ಹೋದಾಗ ,ಯಮಧರ್ಮರಾಯ ಅವರನ್ನು ಕೊತಕೊತ ಕುದಿಯುವ ಎಣ್ಣೆಯಲ್ಲಿ ಜಿಲೇಬಿಯಂತೆ ಬೇಯಿಸುತ್ತಿರುವುದನ್ನು ಕಲ್ಪಿಸಿಕೊಳ್ಳುತ್ತೇನೆ. ಬೆಳಗೆದ್ದು ಪ್ಯಾಂಟ್ ಹಾಕಿಕೊಂಡರೆ ಕೈ ಮತ್ತೆ ಎಡಗಾಲಿನ ಪ್ಯಾಂಟ್ ಜೇಬಿಗೆ ಹೋಗುತ್ತದೆ. ಥತ್...ಮನಸ್ಸು ಕಲಕುತ್ತದೆ. ಬೆಂಗಳೂರಿನಲ್ಲೀಗ ನಾನು ಅಬ್ಬೇಪಾರಿ. ಒಂದು ದಿನ ಕಳೆದರೆ ಸಾಕು, ನನ್ನೊಬ್ಬನನ್ನು ಬಿಟ್ಟು ಎಲ್ಲರೂ ಮುಂದೆ ಹೋಗಿಬಿಟ್ಟರಾ? ಬಸ್ ಹತ್ತಿದರೆ ಎಲ್ಲಿ ಪರ್ಸ್‌ನ್ನೂ ಕಿತ್ತುಕೊಳ್ಳುತ್ತಾರೊ ಅಂತ ದಿಗಿಲು. ಬಸ್‌ನಲ್ಲಿ ನನ್ನನ್ನು ಒತ್ತಿ ಹಿಡಿದಿದ್ದ ಕಪ್ಪಗಿನ ವ್ಯಕ್ತಿಯೊಬ್ಬನ ಅಸ್ಪಷ್ಟ ಚಹರೆ ಆತನೇ ಕಳ್ಳನೆಂಬಂತೆ ಕಣ್ಣಮುಂದೆ ಬರುತ್ತದೆ. ಆಕೆ ಹೃದಯ ಕದ್ದಾಗಲೂ ಆಗದ ಚಡಪಡಿಕೆಯ ನೂರು ಪಾಲು ಈಗ!

ಮತ್ತೆ ಎಲ್ಲ ಸರಿಹೋದೀತು. ಬರ್ಬಾದಾಯಿತು ಅನಿಸಿದ ಬದುಕು ಮಾಮೂಲಿಗೆ ಬಂದೀತು. ಗಲಗಲ ಅಲುಗಿದ ತಲ್ಲಣದ ಆ ಸಂಜೆ, ನೋವ ತಂತಿಯನು ಮೀಟಿದ ಕ್ಷಣಗಳನು ಮಾತ್ರ ಮರೆಯಲಾಗದು.

Read more...

November 20, 2009

ಕಾಡಿನ ಕತ್ತಲೆ ಬೆಟ್ಟದ ಕತ್ತಲೆ


ಕತ್ತಲ ದಾರಿಗಳಲ್ಲಿ ಮೈಗೆಲ್ಲ ಕತ್ತಲು ಮೆತ್ತಿಕೊಂಡು ಓಡಾಡುವ ಸುಖ ನಿಮಗೆ ಗೊತ್ತೆ ? ಹಾಲು ಸುರಿವ ಬೆಳದಿಂಗಳಲ್ಲಿ ಯಾವತ್ತಾದರೂ ನೀವು ಕಾಡು ಬೆಟ್ಟಗಳೊಳಗೆ ಅಲೆದಾಡಿದ್ದೀರಾ? ಒಮ್ಮೆ ಅಲೆದಾಡಿದರೆ, ನೀವೆಂಥ ಅನುಭವವನ್ನು ಮಿಸ್ ಮಾಡಿಕೊಂಡಿದ್ದಿರಿ ಅಂತ ಅರ್ಥವಾದೀತು. 'ಕತ್ತಲಿಗೆ ಹತ್ತೆ ತಲೆ, ಅದು ಅಸಂಖ್ಯ' ಅಂತ ಅಡಿಗರು ಅಂದದ್ದು ಬೇರೆಯೇ ಅರ್ಥ- ಸಂದರ್ಭದಲ್ಲಿ ಬಿಟ್ಟುಬಿಡಿ ! ನಿಜವಾಗಿ ಕತ್ತಲಿಗೆ ಒಂದೇ ತಲೆ, ಒಂದೇ ಮನಸ್ಸು, ಒಂದೇ ಧಾಟಿ. ಅದು ಹಗಲಿನ ಗರಾಜು ಅಲ್ಲ. ರಾತ್ರಿಯೆಂದರೆ ಹಗಲನ್ನು ಹಿಡಿದು, ಗದರಿಸಿ ತೆಪ್ಪಗೆ ಕುಳ್ಳಿರಿಸಿರುವ ಶಕ್ತಿ. ಒಂದಿರುಳ ಕನಸಿಗಿಂತ ಎಷ್ಟೋ ಹೆಚ್ಚಿನ ಸುಖ ಒಂದಿರುಳ ನನಸಿಗಿದೆ. ‘ನ ಕದಾಪಿ ಅನೀದೃಶಂ ಜಗತ್’- ಈ ಜಗತ್ತು ಈಗ ಇರುವ ಹಾಗಲ್ಲದೆ ಬೇರೆಯದೇ ತೆರನಾಗಿ ಎಂದೂ ಇರಲಿಲ್ಲ- ಇದು ಉಪನಿಷತ್ ಮಾತು. ಅದು ನಿಜ ನಿಜ ಅನ್ನಿಸುವ ಹಾಗೆ ರಾತ್ರಿಯಿದೆ !

ಟಾರ್ಚ್ ಕೂಡಾ ಇಲ್ಲದೆ ಐದಾರು ಕಿಲೋಮೀಟರುಗಳ ದೂರ ಬೆಟ್ಟಗುಡ್ಡಗಳ ಕಾಲುಹಾದಿಗಳಲ್ಲಿ ರಾತ್ರಿ ಓಡಾಡುವ ಜನ ಹಳ್ಳಿಗಳಲ್ಲಿ ಈಗಲೂ ಇದ್ದಾರೆ. ಅವರು ಕಿವಿಗೆ ಇಯರ್‌ಫೋನ್ ಸಿಕ್ಕಿಸಿಕೊಂಡಿಲ್ಲ, ಶೂ ಹಾಕಿಲ್ಲ, ಎಮರ್ಜೆನ್ಸಿಗೆ ಅಂತೆಲ್ಲ ಏನೂ ಇಲ್ಲ. ಆದರೂ ನಿರಾಳ, ನಿರ್ಭಯ, ಯಾವ ಔದಾಸೀನ್ಯವೂ ಇಲ್ಲ. ಲೇಟ್‌ನೈಟ್ ಪಾರ್ಟಿಗಳನ್ನು ಮುಗಿಸಿ ಮನೆಗೆ ಬರುವ ಹಾಗಲ್ಲ ಇದು. ಹನ್ನೆರಡು ಗಂಟೆಗೆ ಥಿಯೇಟರ್‌ನಿಂದ ಹೊರಟಾಗಿನ ಧಾವಂತವಲ್ಲ ಇದು. ತಮಗೆ ಮಾತ್ರ ಗೊತ್ತಿರುವ, ಕಿಟಕಿಯಲ್ಲಿ ಕೈ ಹಾಕಿ ಉದ್ದ ಮಾಡಿದರೆ ಸಿಗುವ ಬೋಲ್ಟ್ ತೆಗೆದು ಮನೆಯೊಳಗೆ ಸೇರಿ, ಹೆಂಡತಿ ಮಕ್ಕಳಿಗೇ ತಿಳಿಯದಂತೆ ಹೊದ್ದು ಮಲಗುವ ಜನ ಇವರು. ಅವರ ರಾತ್ರಿ ನಡಿಗೆ, ಹಗಲಿನ ಭಾರವನ್ನೆಲ್ಲ ನಿರಾಯಾಸವಾಗಿ ಕಳೆಯುತ್ತದಂತೆ; ಬೇಕಿದ್ದರೆ ಕೇಳಿ ನೋಡಿ. ಹಾಗಂತ, ಆ ಕತ್ತಲು ಹಳ್ಳಿಗಳದ್ದೇ ಸೊತ್ತೇನೂ ಅಲ್ಲ. ಬೆಂಗಳೂರಿಗೆ ಬಂದು ಒಂದು ವಾರವಾಗಿದ್ದ ಗೆಳೆಯನೊಬ್ಬ ರಾತ್ರಿ ಟೆರೇಸ್‌ನಲ್ಲಿ ಕತ್ತೆತ್ತಿ ಕುಳಿತು ಹೇಳಿದ -'ಆಕಾಶ ನೋಡ್ತಾ ಇದ್ರೆ ಇಲ್ಲೂ ಊರಲ್ಲಿ ಇದ್ದ ಹಾಗೇ ಆಗ್ತದೆ !'

'ಈ ಸಂಜೆ. ಮೆಲ್ಲಮೆಲ್ಲನೆ ತೊಟ್ಟುತೊಟ್ಟಾಗಿ ರುಚಿ ನೋಡಿನೋಡಿ ಈ ದಿವಾಪ್ರಭೆಯನ್ನು ಹೇಗೆ ಪಾನ ಮಾಡುತ್ತಿದ್ದಾಳೆ ಈ ನಿಶಾಭಗವತಿ ! ಆ ಬಟ್ಟಲಲ್ಲಿ ಉಳಿಯುವ ಅವಶೇಷಗಳಂತೆ ತಾರೆಗಳು ಕಾಣುತ್ತಿವೆಯಲ್ಲವೆ? ಈಗ ಎಲ್ಲರಿಗೂ ಒಳಗೆ ಬೆಳಕು, ಹೊರಗೆ ಕತ್ತಲು. ಸಮಸ್ತ ಚೈತನ್ಯವನ್ನು ಮೂಲ ಪ್ರಜ್ಞೆಯಲ್ಲಿ ಅದ್ದಿ ತೆಗೆಯಬೇಕೆಂದೇ ಈ ಯಾಮಿನೀ ದೇವತೆಯಾಸೆಯೋ? ಮೊದಲು ಕಣ್ಣು, ಆಮೇಲೆ ಕಿವಿ, ಬಳಿಕ ರಸನೆ, ಅನಂತರ ಪ್ರಾಣ, ಕೊನೆಗೆ ಸ್ಪರ್ಶ-ಹೀಗೆ ಒಂದು ಕರಣ ಅಸ್ತವಾಗಿ, ಮತ್ತೊಂದು ಪ್ರಜ್ವಲಿಸಿ, ಕೊನೆಗೆ ಎಲ್ಲವೂ ಶಾಂತವಾಗುವಂತೆಯೂ ಇರವು ಆತ್ಮಾರಾಮವಾಗಿ ಶ್ಯಾಮಸುಂದರನಲ್ಲಿ ಲಯಿಸುವಂತೆಯೂ ಈಕೆ ಏರ್ಪಡಿಸುತ್ತಾಳಲ್ಲವೆ, ಈ ಕೃಷ್ಣ ಸಹೋದರಿ? ಕೋಟಿ ಕೋಟಿ ಹಗಲುಗಳನ್ನು ಬೆಳಗಬಲ್ಲ ಈ ತಾರೆಗಳನ್ನು, ತ್ರಿಮೂರ್ತಿಗಳನ್ನು ಶಿಶುಭಾವಕ್ಕಿಳಿಸಿ ತೊಟ್ಟಿಲಲ್ಲಿ ತೂಗಿದ ಅನಸೂಯೆಯಂತೆ, ಹೇಗೆ ತೂಗುತ್ತಿದ್ದಾಳೆ ಈ ‘ರಾತ್ರಿಯೆಂಬ ಧಾತ್ರಿ'? ಇವಳ ಮಾಯೆಯ ಮುಂದೆ ಹಗಲಿನದೆಂಥ ಮಾಯೆ?’ - ಹೀಗೆ ಬರೆದವರು ಶ್ರೇಷ್ಠ ಬರಹಗಾರ ಪು.ತಿ.ನರಸಿಂಹಾಚಾರ್. ಕತ್ತಲನ್ನು ನಿಶಾ ಭಗವತಿಯಾಗಿ, ಯಾಮಿನೀ ದೇವತೆಯಾಗಿ, ಕೃಷ್ಣ ಸಹೋದರಿಯಾಗಿ ಕಂಡವರು ! ಒಟ್ಟಿನಲ್ಲಿ ಎಲ್ಲವನ್ನೂ ಶಮನಗೊಳಿಸುವ ಶಕ್ತಿ ಕತ್ತಲಿಗಿದೆಯೆಂಬುದು ಭಾವ.

ರಾತ್ರಿ ನಡೆಯುವ ಸುಖ ಮೊತ್ತಮೊದಲು ನನಗೆ ಅರಿವಾದದ್ದು ಇರುಳು ಪೂರ್ತಿ ನಡೆಯುವ ಯಕ್ಷಗಾನ ಬಯಲಾಟಗಳಿಗೆ ಹೊರಟಾಗ. ರಾತ್ರಿ ಎಂಟು ಗಂಟೆಗೆ ಮನೆಯಿಂದ ಹೊರಡುವ ಮೊದಲ ಅವಕಾಶ ದೊರೆತದ್ದು ಅದರಿಂದಲೇ . ಆ ಎಂಟರ ಬಸ್ಸು ಬಂದರೆ ಬಂತು, ಇಲ್ಲದಿದ್ದರೆ ಇಲ್ಲ. ಎಂಟೂವರೆಯ ತನಕ ಕಾದು ನಿಂತು, ನಾಲ್ಕೈದು ಕಿಲೋಮಿಟರ್ ‘ನಟರಾಜ ಸರ್ವೀಸ್’. ಅಡಿಕೆ ಕೊಯ್ಲಿನ ಸಂದರ್ಭದಲ್ಲಿ ಕಳ್ಳರ ಕಾಟ ತಪ್ಪಿಸಲು ರಾತ್ರಿ ಹತ್ತಕ್ಕೆ ಅಪ್ಪನ ಜತೆ ತೋಟಕ್ಕೆ ಹೋದಾಗ, ಬಳಿಕ ಬಂದ ಕರೆಂಟ್ ಪಂಪ್ ರನ್ ಮಾಡಲು ಒಳಗೊಳಗೆ ಹೆದರುತ್ತ ತೋಟದ ಮಧ್ಯಕ್ಕೆ ಆ ಕತ್ತಲಲ್ಲಿ ಛಕ್ಕನೆ ಓಡಿ ಹಿಂದಿರುಗುವಾಗ...ಇರುಳಿನ ಸುಖ ತಿಳಿದದ್ದು ಹೀಗೆ. ಈಗ ಊರಿಗೆಂದೋ ಬೆಂಗಳೂರಿಗೆಂದೋ ನೈಟ್ ಬಸ್ಸಿಗೆ ಹೊರಡುವುದು ಎಷ್ಟೊಂದು ಮಾಮೂಲಿ ಕ್ರಿಯೆಯಾಗಿಬಿಟ್ಟಿದೆಯಲ್ಲಾ ! ಯಾವಾಗ ಐಟಿ ಎಂಬ ಕೆಲಸದ ವ್ಯೂಹ ಶುರುವಾಯಿತೋ, ಬಳಿಕವಂತೂ ರಾತ್ರಿಯ ಕೆಲಕ್ಕೆ ಬೇರೆಯದೇ ಮೆರುಗು ಬಂತು. ರಾಜ್ಯದ ಗಡಿಯ ಚೆಕ್‌ಪೋಸ್ಟ್‌ಗಳ ಕಾವಲುಗಾರರು, ಲಾರಿಗಳು ಓಡಾಡುವ ಹೆದ್ದಾರಿಯಲ್ಲಿನ ಗೂಡಂಗಡಿಗಳವರು, ನೈಟ್ ಬೀಟ್ ಪೊಲೀಸರು ಮುಂತಾದವರು ಯಾವುದೋ ಕಾಲದಿಂದ ನೈಟ್ ಡ್ಯೂಟಿ ಮಾಡುತ್ತಿದ್ದರಾದರೂ, ನಮ್ಮ ನಗರಗಳು ಮೆಟ್ರೊಗಳಾದಂತೆ ರಾತ್ರಿಯ ಬದುಕು ಬೇರೆಯದೇ ವೈಭವದಲ್ಲಿ ಅನಾವರಣಗೊಳ್ಳತೊಡಗಿತು. ಆದರೆ ಕಾಡಿನ ಕತ್ತಲೆ...ಬೆಟ್ಟದ ಕತ್ತಲೆ...? ಅದರ ಸುಖ ಗೊತ್ತಿರುವವರು ವಿರಳ. ಅದರ ಅನಂತತೆಯಲ್ಲಿ ಸುತ್ತಾಡುವುದು ದಿವ್ಯ ಸುಖ.

ಅದು ನಿಜಕ್ಕೂ ಕೊಂಚ ಘಾಟಿಯೇ ! ಕಡಿದಾದ ತಿರುವುಗಳಲ್ಲಿ ಹಬ್ಬಿಕೊಂಡಿದ್ದ ಕತ್ತಲು. ವಾಹನಗಳ ಬೆಳಕಿನ ಜತೆ, ಬೀಸುವ ಗಾಳಿಯ ಜತೆ, ಆ ಕತ್ತಲು ಕೂಡಾ ಅತ್ತಿತ್ತ ರಾಶಿಯಾಗುತ್ತಿತ್ತು. ಎಲ್ಲೋ ಒಂದೊಂದೆಡೆ ಇನ್ನೂ ಆರದ ಕೆಂಡದ ತುಂಡುಗಳಂತೆ ಲೈಟುಗಳು ಉರಿಯುತ್ತಿವೆ. ಹಿಂದೂ ಮುಂದೂ ವ್ಯಾಪಿಸಿಕೊಂಡಿರುವ ಕತ್ತಲನ್ನು ಬಗೆಯುತ್ತಾ, ಆ ಕಾಳರಾತ್ರಿಯನ್ನು ಪ್ರೇಮಿಸುತ್ತಾ ನಡೆದರೆ ಹೊತ್ತು ಸರಿದದ್ದೆ ತಿಳಿಯುವುದಿಲ್ಲ. ಬೈಕಿನಲ್ಲೋ ಕಾರಿನಲ್ಲೋ ಭರ್ರನೆ ಸಾಗುವುದಕ್ಕಿಂತ, ದೇಹ ತೊನೆದಾಡಿಸುತ್ತಾ ರಸ್ತೆಯಲ್ಲಿ ಸುಮ್ಮನೆ ನಡೆಯುತ್ತಿರಬೇಕು. ಬೆಟ್ಟದ ತುದಿಗೆ ಸುಮಾರು ಎಂಟು ಕಿಮೀಗಳಷ್ಟಾದರೂ ಇದೆ. ನಡೆದೇ ಹೋದರೆ ಮೂರು ಗಂಟೆ ಸಾಕು. ಆಹ್, ಪೌರ್ಣಮಿಯ ಬೆಟ್ಟ !

ಪ್ರಶಾಂತ ರಾತ್ರಿಯನ್ನು ಕಲಕಿ ರಾಡಿ ಮಾಡುವ ಎಂತದ್ದೂ ಇಲ್ಲ. ಪುಟ್ಟದೊಂದು ಮಿಣಿಮಿಣಿ ಟಾರ್ಚು ಕೈಯಲ್ಲಿ; ಸಣ್ಣ ಹಗುರ ಬ್ಯಾಗು-ಪುಟಾಣಿ ನೀರಿನ ಬಾಟಲಿ ಬೆನ್ನಲ್ಲಿ. ಅಲ್ಲಿ ಆಕಾಶಕ್ಕೂ ಭೂಮಿಗೂ- ಲೋಕಾಂತಕ್ಕೂ ಏಕಾಂತಕ್ಕೂ ವ್ಯತ್ಯಾಸವೇ ಇಲ್ಲ. ತಲೆಯ ಕೂದಲೆಳೆಗಳ ಮಧ್ಯೆ ಅಲೆಅಲೆಯಾಗಿ ಬೀಸುವ ಗಾಳಿಗೆ, ದೇಹ-ಮನಸುಗಳೆರಡನ್ನೂ ಹಸಿಯಾಗಿಡುವ ತಾಕತ್ತಿದೆ. ಕತ್ತೆತ್ತಿದರೆ ಚುಕ್ಕಿಗಳು ಬಾನಿನಲ್ಲಿ ಚುಚ್ಚಿಕೊಂಡಿವೆ. ಗಗನ ಸಾಗರದಲ್ಲಿ ಕಳ್ಳ ಚಂದ್ರ ತೇಲುತ್ತಿದ್ದಾನೆ. ಕತ್ತಲಲ್ಲಿ ಲೋಕ ಸುತ್ತಿ ನೋಡುವವನು ಅವನೊಬ್ಬನೇ. ಕಿವಿಯಲುಗಿಸುತ್ತಾ ಮಲಗಿರುವ ಪ್ರಾಣಿಯ ಹಾಗೆ ಗಿಡಮರಗಳೆಲ್ಲ ಎಲೆ ಅಲ್ಲಾಡಿಸುತ್ತಾ ನಿದ್ದೆ ಹೋಗಿವೆ. ಶ್...ಇಲ್ಲಿ ಕಿರುಚಾಡುವುದು ನಿಷಿದ್ಧ. ಅಷ್ಟಕ್ಕೂ, ಇಲ್ಲಿ ಬೊಬ್ಬಿಡುವ ಮನಸ್ಸೂ ಬಾರದು. ಪ್ರಾಣಿಗಳ ಸುಳಿವು ಸಿಕ್ಕವರಂತೆ ಭಯಪಡುವುದನ್ನೋ, ಕಳ್ಳಕಾಕರ ನೆನಪನ್ನೋ ಮನಸ್ಸಿನಿಂದ ಕಿತ್ತಿಟ್ಟುಕೊಳ್ಳಬೇಕು. ನಿಮಗೆ ವಿರುದ್ಧವಾದ ಯಾವುದೂ ಈ ಲೋಕದಲ್ಲಿಲ್ಲ ಅಂದುಕೊಳ್ಳಿ. ಆ ಕತ್ತಲಲ್ಲಿ ನಿಮ್ಮನ್ನು ಕಂಗೆಡಿಸುವ ಮನಸ್ಸು ಯಾರಿಗೂ ಇಲ್ಲ. ಮೇಲಕ್ಕೇರಿ ಏರಿ ಹೋದ ಹಾಗೆಲ್ಲ, ಮೈ ಮೇಲೆಲ್ಲ ಬೆವರ ಮಣಿಗಳು. ಅದು ಆಯಾಸದಿಂದಲೋ, ಭಯದಿಂದಲೋ, ಬಿಸಿಲಿನ ಝಳದಿಂದಾಗಿಯೋ ಅಲ್ಲ. ಅದು ಬೆಳದಿಂಗಳಲಿ ಮೂಡಿದ ಬೆವರು ! ಆ ನಸು ಬೆವರಿನ ಸುಖ ನಿಮಗೆ ಗೊತ್ತಾಗಬೇಕು. ತುದಿ ತಲುಪಿದರೋ ಅದೇ ಅದೇ...ನಮಗೆಲ್ಲ ಗೊತ್ತಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ನಂದಿಬೆಟ್ಟ. ಇದೊಂದು ಸ್ಯಾಂಪಲ್ ಅಷ್ಟೆ. ಪೂರ್ಣ ಚಂದಿರನಿರುವ ಹುಣ್ಣಿಮೆಯ ದಿನ, ಇಂತಹ ಬೆಟ್ಟಗಳೆಲ್ಲ ಎಷ್ಟೊಂದು ಕಾಂತಿಯುತವಾಗಿ ಬೆಣ್ಣೆ ಮುದ್ದೆಗಳಂತೆ ಕಾಣುತ್ತವೆಯೋ.ಆ ಕಾಡಿನ ಕತ್ತಲೆ, ಈ ಬೆಟ್ಟದ ಕತ್ತಲೆ ನಿಮ್ಮ ಒಳಗೂ ನುಗ್ಗಲಿ.
(ವಿಜಯ ಕರ್ನಾಟಕದಲ್ಲಿ ಪ್ರಕಟಿತ)

Read more...

November 15, 2009

ರಂಗಭೂಮಿಯ ತರುಣ ಮನಸು


ಕಾಲೇಜು ರಂಗಭೂಮಿ ಕೆಟ್ಟಿದೆ !
ಹತ್ತು ವರ್ಷಗಳಿಂದ ರಂಗಭೂಮಿ ಚಟುವಟಿಕೆಗಳಲ್ಲಿ ಮೀಯುತ್ತಿದ್ದಾರೆ ನಟ-ನಿರ್ದೇಶಕ ಮಂಜುನಾಥ್ ಬಡಿಗೇರ್. ಸದ್ಯ ಬೆಂಗಳೂರು ಕಾರ್ಯಕ್ಷೇತ್ರ. 'ಯುವ ರಂಗಕರ್ಮಿಯಾಗಿ, ಸರಕಾರದಿಂದ - ಜನರಿಂದ ನೀವೇನು ನಿರೀಕ್ಷಿಸುತ್ತೀರಿ?' ಅಂತ ಪ್ರಶ್ನಿಸಿದರೆ, 'ಏನನ್ನೂ ನಿರೀಕ್ಷಿಸುವುದಿಲ್ಲ. ನನ್ನ ಪ್ರಾಮಾಣಿಕ ಪ್ರಯತ್ನಕ್ಕೆ ಸಿಗಬೇಕಾದ್ದು ಸಿಗುತ್ತೆ' ಅನ್ನುವಷ್ಟು 'ನೇರ-ದಿಟ್ಟ-ನಿರಂತರ' ! 'ನಮಗೆ ತುಂಬಾ ಇಷ್ಟವಾದ್ದು, ತುಂಬಾ ಕಷ್ಟವಾದ್ದು ಅಂತ ಯಾವುದು ಇರೋಲ್ಲ. ಎಲ್ಲವನ್ನೂ ಇಷ್ಟ ಪಟ್ಟೇ ಕೇಳ್ತೇವೆ, ಮಾಡ್ತೇವೆ, ಆಸ್ವಾದಿಸ್ತೇವೆ' ಎನ್ನುವ ಮಂಜುನಾಥ್ ಮಾತುಗಳಿಗೆ, ಅವರ ಕೆಲಸಗಳೇ ಸಾಕ್ಷಿ. ನೀನಾಸಂ ಪದವೀಧರರಾಗಿ ಒಂದು ವರ್ಷ ತಿರುಗಾಟದಲ್ಲಿ ಭಾಗವಹಿಸಿದ್ದಾರೆ. 'ಜಾನಪದ ಲೋಕ'ದ ಜಾನಪದ ಡಿಪ್ಲೊಮಾ ಪಡೆದಿದ್ದಾರೆ. ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ, ಗುರು ಸಂಜೀವ ಸುವರ್ಣರಿಂದ ಯಕ್ಷಗಾನವನ್ನು ಒಂದು ವರ್ಷ ಶಾಸ್ತ್ರೀಯವಾಗಿ ಅಭ್ಯಸಿಸಿದ್ದಾರೆ. ಪ್ರಕಾಶ್ ಚಕ್ರವರ್ತಿ ಂಬವರಲ್ಲಿ ಹಿಂದುಸ್ತಾನಿ ಕೊಳಲು ವಾದನವನ್ನು ಎರಡು ವರ್ಷಗಳ ಕಾಲ ಕಲಿತಿದ್ದಾರೆ !
ಹಳೆಯ ವೃತ್ತಿ ರಂಗಭೂಮಿ ಹೋಗಿ, ಈಗ ಬಹುರಾಷ್ಟ್ರೀಯ ಕಂಪನಿಗಳ ಜತೆ ಸಹಭಾಗಿತ್ವ ಪಡೆಯುವವರೆಗೆ ಹೋಗಿದೆ. ನಾಟಕ ಕಮರ್ಷಿಯಲ್ ಮತ್ತು ಪ್ರೊಫೆಷನಲ್ ಆಗೋದರ ಬಗ್ಗೆ ಏನನ್ಸತ್ತೆ ಅಂತ ಕೇಳಿದರೆ- 'ನಾಟಕ ಕೇವಲ ಮನರಂಜನಾ ಮಾಧ್ಯಮ ಅಲ್ಲ. ಮನರಂಜನೆಯ ಜೊತೆಗೆ ಪ್ರೇಕ್ಷಕರಿಗೆ ರಸಾನುಭವವನ್ನು ಕೊಡುವಂಥದ್ದಾಗಿರಬೇಕು. ಹಾಗಾಗಬೇಕಾದರೆ ಅದರಲ್ಲಿ ವೃತ್ತಿಪರತೆ ಖಂಡಿತ ಇರಲೇಬೇಕು. ನಾಟಕ ಕಮರ್ಷಿಯಲ್ ಆಗಲಿ ಬೇಸರವಿಲ್ಲ. ಆದರೆ ಅದರಲ್ಲಿ ವೃತ್ತಿಪರತೆ ಇರಬೇಕು !'ಎನ್ನುತ್ತಾರೆ ಮಂಜುನಾಥ್. ನೀನಾಸಮ್ ಹಾಗೂ ಸಾಣೇಹಳ್ಳಿ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಗೆ ರಂಗಶಿಬಿರಗಳನ್ನು ನಡೆಸಿರುವುದರ ಜತೆಗೆ ಅಭಿನಯ ತರಬೇತುದಾರನಾಗಿ ಅವರು ಕೆಲಸ ಮಾಡಿದ್ದಾರೆ. ಹಂಸಲೇಖರವರ ದೇಸಿ ವಿದ್ಯಾಸಂಸ್ಥೆಯಲ್ಲಿ ನಾಟಕದ ಶಿಕ್ಷಕನಾಗಿ, 'ಆಶ್ರಯ' ಎಂಬ ಸ್ವಯಂಸೇವಾ ಸಂಸ್ಥೆಯಿಂದ ಸರಕಾರಿ ಬಾಲಕರ ಪರಿವೀಕ್ಷಣಾ ಮಂದಿರದಲ್ಲಿ ಬಾಲಾಪರಾಧಿಗಳ ಮನೋವಿಕಾಸಕ್ಕಾಗಿ ಎರಡು ವರ್ಷಗಳ ಕಾಲ ಸಂಪನ್ಮೂಲವ್ಯಕ್ತಿಯಾಗಿ ಕೆಲಸ ಮಾಡಿದ್ದಾರೆ.
ಈ ಯುವ ಪ್ರತಿಭೆಗೂ ಕಾಲೇಜು ರಂಗಭೂಮಿಗೂ ಹತ್ತಿರದ ನಂಟಿದೆ. ಆದರೆ ಅಲ್ಲಿನ ಸದ್ಯದ ಪರಿಸ್ಥಿತಿ ಬಗ್ಗೆ ಕೇಳಿದರೆ - 'ರಂಗಭೂಮಿ ವಲಯದಲ್ಲಿ ಕಾಲೇಜು ರಂಗಭೂಮಿಗೆ ವಿಶಿಷ್ಟ ಸ್ಥಾನವಿದೆ. ಇದರಿಂದ ಕಾಲೇಜಿಗೂ ವಿದ್ಯಾರ್ಥಿಗಳಿಗೂ ಸಾಂಸ್ಕೃತಿಕವಾಗಿಯಲ್ಲದೆ ಅನೇಕ ರೀತಿಯಲ್ಲಿ ಉಪಯೋಗವಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕಾಲೇಜುಗಳಿಗೆ ನಾಟಕ ಮಾಡಿಸುವುದು ಮತ್ತು ಮಾಡುವುದು ಪ್ರತಿಷ್ಠೆಯ ವಿಷಯವಾಗಿದೆ. ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಯ ಸಾಧನವಾಗದೆ ತಮ್ಮ ವೈಯಕ್ತಿಕ ತೆವಲುಗಳನ್ನು ತೀರಿಸಿಕೊಳ್ಳುವ ಒಂದು ವೇದಿಕೆಯಾಗಿದೆ. ಈವತ್ತಿನ ಕಾಲೇಜು ನಾಟಕಗಳು ಸ್ಪರ್ಧಾ ಕೇಂದ್ರಿತವಾಗಿರುತ್ತವೆ ಹಾಗೂ ಹೊರಗಿನ ಆಡಂಬರಗಳಿಂದ ವೈಭವೀಕರಿಸಲ್ಪಟ್ಟಿರುತ್ತವೆ. ಇದು ಮೊದಲು ಬದಲಾಗಬೇಕಿದೆ. 'ನಾಟಕ ಚಳವಳಿಯಲ್ಲ, ಅದೊಂದು ಸಡಗರ' ಎಂದಿದ್ದ ಬಿ.ವಿ.ಕಾರಂತರ ಮಾತು ನೆನಪಿಸುತ್ತ. 'ಬೀದಿ ನಾಟಕಗಳಲ್ಲೂ ಪಾಲ್ಗೊಂಡ ನಿಮ್ಮ ಅಭಿಪ್ರಾಯ ಏನು' ಅಂದರೆ- 'ಹೌದು, ಅದೊಂದು ಆಚರಣೆ. ಬೀದಿ ನಾಟಕ ಆರಂಭದ ಕಾಲದಲ್ಲಿ ಚಳವಳಿಯ ಉದ್ದೇಶದದಿಂದಲೇ ರೂಪ ತಳೆಯಿತು. ಈಗ ಅದು ಕೇವಲ ಮಾಹಿತಿ ತಲುಪಿಸುವ, ರಾಜಕೀಯ ಪಕ್ಷಗಳ, ಬಹುರಾಷ್ಟ್ರೀಯ ಕಂಪನಿಯ ಸರಕುಗಳ ಪ್ರಚಾರಕ್ಕಾಗಿ ಬಳಕೆಯಾಗುತ್ತಿದೆ' ಎಂಬ ಬೇಸರ ಅವರದ್ದು. 'ಮಾಧ್ಯಮ್' ಸ್ವಯಂ ಸೇವಾ ಸಂಸ್ಥೆಯಲ್ಲಿ ಬೀದಿ ನಾಟಕ ತಂಡದೊಂದಿಗೆ ಸುಮಾರು ಮುನ್ನೂರಕ್ಕೂ ಹೆಚ್ಚು (ಏಡ್ಸ್, ಮಕ್ಕಳ ಹಕ್ಕುಗಳು, ಮಹಿಳಾ ಸಬಲೀಕರಣ, ಕೋಮು ಸೌಹಾರ್ದ...)ನಾಟಕಗಳಲ್ಲಿ ಭಾಗವಹಿಸಿದ ಅನುಭವ ಮಂಜುನಾಥ್ ಬೆನ್ನಿಗಿದೆ. ಚಿದಂಬರ ರಾವ್ ಜಂಬೆ, ವೆಂಕಟರಮಣ ಐತಾಳ, ರಘುನಂದನ, ಪ್ರಕಾಶ್ ಬೆಳವಾಡಿ, ಸುರೇಶ್ ಆನಗಳ್ಳಿ,ಕೆ ವಿ ಅಕ್ಷರ, ಅಭಿಲಾಶ್ ಪಿಳ್ಳೈ, ರಮೇಶ್ ವರ್ಮ(ಕೇರಳ), ಭರತ್ ಶರ್ಮಾ, ವಿಶ್ವಜಿತ್ (ಪಶ್ಚಿಮ ಬಂಗಾಳ), ಬಹ್‌ರುಲ್ ಇಸ್ಲಾಂ(ಅಸ್ಸಾಂ) ಮುಂತಾದ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ. ಕರ್ನಾಟಕದ ಹಲವಾರು ತಂಡಗಳಿಗೆ, ಶಾಲಾಮಕ್ಕಳಿಗೆ, ಕಾಲೇಜುಗಳಿಗೆ, ಮತ್ತು ಸರಕಾರೇತರ ಸಂಸ್ಥೆಗಳಿಗೆ ರಂಗಭೂಮಿ ಕಾರ್‍ಯಾಗಾರಗಳನ್ನು ನಡೆಸಿಕೊಟ್ಟಿದ್ದಾರೆ. 'ಸಮಷಿ'ಯ ಭಾನುವಾರದ ರಂಗಶಾಲೆಯಲ್ಲಿ ಅಭಿನಯ ಶಿಕ್ಷಕನಾಗಿ, ಸಮಷ್ಟಿ ಮತ್ತು ಆದ್ಯಂತ ಎಂಬ ತಮ್ಮ ಹೆಚ್ಚಿನ ಪಾಲುಗಾರಿಕೆಯ ರಂಗತಂಡಗಳಲ್ಲಿ, ನಟ-ನಿರ್ದೇಶಕನಾಗಿದ್ದಾರೆ. 'ಬದುಕು ಅನ್ನೊ ಪ್ರಶ್ನೆಗೆ ಸದ್ಯ ಉತ್ತರ ಸಿಕ್ಕಿಲ್ಲ. ಟಿವಿ ಸಿನಿಮಾ ಕಡೆ ಗಮನವಂತೂಇದೆ. ಕಿರುಚಿತ್ರಗಳನ್ನು ನಿರ್ದೇಶಿಸುವ ಆಸೆಯಿದೆ' ಎನ್ನುವುದು ಈ ಕೆಚ್ಚೆದೆಯ ರಂಗಕರ್ಮಿಯ ಬಿಚ್ಚು ನುಡಿ.


ರಂಗಕರ್ಮಿ ಬೇರೆ ಮಾಧ್ಯಮದ ಮೂಲಕ ಗುರುತಿಸಿಕೊಳ್ಳೋದು ಅನಿವಾರ್ಯ!
ಇಪ್ಪತ್ತಾರರ ಹರೆಯದ ಮೌನೇಶ್ ಬಡಿಗೇರ್ ಕೂಡಾ ನೀನಾಸಂನಲ್ಲಿ ಕಡೆಯಲ್ಪಟ್ಟ ಪ್ರತಿಭೆ. ಕಳೆದ ಆರು ವರ್ಷಗಳಿಂದ ರಂಗಭೂಮಿಯನ್ನೆ ಕಣ್ರೆಪ್ಪೆಗಳಲ್ಲಿ ಕಾಪಾಡಿಕೊಂಡಿರುವ ಮೌನೇಶ್‌ರದ್ದು, ನೊಡಲು ಮುನಿ ವೇಶ ! ಉದ್ದ ಕೂದಲು-ಚೂಪು ಮೀಸೆ-ತೀಡಿದ ಗಡ್ಡ. ಹಂಸಲೇಖ ಅವರ 'ದೇಸಿ' ಸಂಗೀತ ಶಾಲೆಯಲ್ಲಿ ಮಕ್ಕಳಿಗೆ ನಾಟಕ ಮಾಡಿಸಿದ್ದು, 'ಮಧ್ಯಮ್' ಎಂಬ ಎನ್‌ಜಿಒನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ-ಬೀದಿ ನಾಟಕದ ನಟನಾಗಿ ಕೆಲಸ ಮಾಡಿದ್ದು, 'ಸಮಷ್ಟಿ' ತಂಡದ ಭಾನುವಾರದ ನಾಟಕ ಶಾಲೆಯಲ್ಲಿ ಬೋಧನೆ, ಅಭಿಲಾಶ್ ಪಿಳ್ಳೈ -ಕೆ.ವಿ.ಅಕ್ಷರ-ರಘುನಂದನ-ವೆಂಕಟರಮಣ ಐತಾಳ್-ಇಕ್ಬಾಲ್ ಅಹಮದ್‌ರಂತಹ ಹಿರಿಯ ನಿರ್ದೇಶಕರ ಜತೆ ಕೆಲಸ ಮಾಡಿದ್ದು, ಇವೆಲ್ಲ ಅಣ್ಣ ಮಂಜುನಾಥ ಬಡಿಗೇರರ ದಿನಚರಿಯಂತೆಯೇ. ಬೆಂಗಳೂರಿನ ಎನ್‌ಎಂಕೆಆರ್‌ವಿ ಕಾಲೇಜು-ಕ್ರೈಸ್ಟ್ ಕಾಲೇಜು, ಕುಕ್ಕೆ ಸುಬ್ರಹ್ಮಣ್ಯದ ಪದವಿ ಕಾಲೇಜು...ಹೀಗೆ ಕಾಲೇಜು ರಂಗಭೂಮಿಯೊಂದಿಗೆ ಬೆರೆತ ಮೌನೇಶ್ ಆ ಬಗ್ಗೆ ಹೀಗೆ ಹೇಳುತ್ತಾರೆ- 'ಕಾಲೇಜು ರಂಗಭೂಮಿಯ ಬಗೆಗಿನ ಇತ್ತೀಚಿನ ಬೆಳವಣಿಗೆಗಳು ಆಶಾದಾಯಕವಾಗಿವೆ. ಎಲ್ಲ ಕಾಲೇಜುಗಳಲ್ಲೂ ವಿದ್ಯಾರ್ಥಿಗಳಲ್ಲೂ ನಾಟಕದ ಬಗೆಗಿನ ಆಸಕ್ತಿ ಹೆಚ್ಚುತ್ತಿದೆ. ಕೆಲವೊಂದು ಕಾಲೇಜುಗಳಲ್ಲಿ 'ಥಿಯೇಟರ್ ಇನ್ ಎಜುಕೇಶನ್' ಅನ್ನು ಅಳವಡಿಸಿಕೊಂಡಿರುವುದು ರಂಗಭೂಮಿಯ ಮಹತ್ವವನ್ನು ಸೂಚಿಸುತ್ತದೆ. ಇದನ್ನ ಮನಗಂಡ ಕಾಲೇಜುಗಳು ಸಾಕಷ್ಟು ಬಜೆಟ್‌ಅನ್ನು ಮೀಸಲಿಡುತ್ತಿವೆ. ಇನ್ನು ಕೆಲವು ಕಾಲೇಜುಗಳು ರಂಗನಿರ್ದೇಶಕರ ಜತೆ ಚೌಕಾಸಿಗೆ ನಿಂತುಬಿಡುತ್ತವೆ ! ಸ್ಪರ್ಧೆ ಎಂಬ ಆಲೋಚನೆಯೇ ತುಂಬಾ ಕೆಡುಕನ್ನು ಒಳಗೊಂಡದ್ದಾಗಿದ್ದರೂ, ಕಾಲೇಜು ರಂಗದ ಮಟ್ಟಿಗೆ ಇದು ಫಲಪ್ರದವಾಗಿ ಕೆಲಸಮಾಡುತ್ತಿದೆ.
ಇಂತಹ ಯುವ ರಂಗಕರ್ಮಿ,'ರಂಗಭೂಮಿಯಲ್ಲೇ ಬದುಕು ಕಟ್ತೀವಿ ಅನ್ನೋ ಛಲ ಇದೆಯಾ? ಟಿವಿ-ಸಿನಿಮಾ ಕಡೆ ಗಮನ ಇದೆಯಾ?' ಎಂಬ ಪ್ರಶ್ನೆಗೂ ಅಣ್ಣನಿಗಿಂತ ಬೇರೆ ತರಹ ಉತ್ತರಿಸಿದರು. 'ಬದುಕು ಕಟ್ಟೋದು ಅಂದ್ರೆ ಯಾವ ಪರಿಭಾಷೆಯಲ್ಲಿ ಎಂದು ನನಗೆ ತಿಳೀತಿಲ್ಲ. ಭಾವನಾತ್ಮಕ ಬದುಕೆಂಬುದು ಈಗಾಗಲೇ ರಂಗಭೂಮಿಯಿಂದಲೇ ಕಟ್ಟಿಕೊಂಡಿದ್ದೇನೆಂದು ಭಾವಿಸಿದ್ದೇನೆ. ಇನ್ನು ಪ್ರಾಪಂಚಿಕ ಬದುಕಿನ ಬಗ್ಗೆ ಯಥಾವತ್ತಾಗಿ ನಿರ್ಧರಿಸಿಲ್ಲ. ನಮ್ಮಂಥ ಕಸುಬುದಾರರ ಸಮಸ್ಯೆಯೆಂದರೆ, ಒಬ್ಬ ಸಿನಿಮಾ ನಟ ಅಥವಾ ಟಿವಿ ನಟನನ್ನು ಗುರುತಿಸಲು ಆ ಕ್ಷೇತ್ರದವರಿದ್ದಾರೆ. ಒಬ್ಬ ಯಶಸ್ವಿ ಐಟಿ ಉದ್ದಿಮೆದಾರನನ್ನು ಗುರುತಿಸಲು ಆ ಕ್ಷೇತವ್ರೂ ಸೇರಿದಂತೆ ಹಲವಾರು ದಾರಿಗಳಿವೆ. ಒಬ್ಬ ಸಾಹಿತಿ ತನ್ನ ಸಾಹಿತ್ಯದೊಂದಿಗೇ ನೇರವಾಗಿ ತಲುಪಬಲ್ಲ. ಆದರೆ ರಂಗಭೂಮಿಯ ಒಬ್ಬ ಕಲಾವಿದ, ಟಿವಿ ಅಥವಾ ಸಿನಿಮಾ ಮಾಧ್ಯಮದ ಮೂಲಕವೇ ಗುರುತಿಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿಬಿಟ್ಟಿದೆ. ಆದ್ದರಿಂದ ಇವತ್ತು ರಂಗಭೂಮಿಯ ಎಲ್ಲ ಪ್ರತಿಭಾವಂತರಿಗೂ ಅಭದ್ರತೆಯ ಸನ್ನಿವೇಶ ಎದುರಾಗಿದೆ. ಹಿಂದೆಲ್ಲ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದವರೂ ಒಂದಲ್ಲಾ ಒಂದು ಸನ್ನಿವೇಶದಲ್ಲಿ ಕಿರು-ಹಿರಿತೆರೆ ಪ್ರವೇಶಿಸಿದವರೇ ಆಗಿದ್ದಾರೆ. ಆದ್ದರಿಂದ ರಂಗಭೂಮಿಯಲ್ಲೇ ಸ್ಥಿರವಾಗಿ ನಿಂತು ಸಾಧಿಸಿದವರು ಕಡಿಮೆಯೇ ಎನ್ನಬಹುದು. ಹಾಗಾಗಿ ನಮ್ಮಂಥ ಕಿರಿಯರಿಗೆ ಒಬ್ಬ ಆದರ್ಶವ್ಯಕ್ತಿತ್ವ ಎಂಬುದೊಂದು ಇಲ್ಲವಾಗಿದೆ. ಹಾಗೆ ಸ್ಥಿರವಾಗಿ ಉಳಿದ ಕೆಲವೇ ಕೆಲವು ಹಿರಿಯ ರಂಗ ಚೈತನ್ಯಗಳನ್ನು ನಾವು ಗಂಭೀರವಾಗಿ ಪರಿಗಣಿಸದೇ ಇರುವುದು ನಮ್ಮ ವ್ಯವಸ್ಥೆಯ ದುರಂತವೇ ಸರಿ.'
'ನಾಟಕ ಪ್ರೊಫೆಷನಲ್ ಆದಷ್ಟೂ ಅದು ಸಂತೋಷದ ವಿಷಯವೇ. ಪ್ರೊಫೆಷನಲ್ ಗುಣ ಕಡಿಮೆಯಾಗಿ ಬರೀ ಕಮರ್ಷಿಯಲ್ ಆದಷ್ಟೂ ಅದು ಅನಿವಾರ್ಯವಾಗಿ ಅತಿರಂಜನೆಯ ಗುಣಗಳನ್ನು ಅಳವಡಿಸಿಕೊಳ್ಳಲು ಹೊರಟುಬಿಡುತ್ತದೆ. ಅದು ಸ್ವಲ್ಪಅಪಾಯಕಾರಿಯೆನಿಸುತ್ತದೆ. ಬಹುರಾಷ್ಟ್ರೀಯ ಕಂಪನಿಗಳ ಆಮಿಷಗಳು, ತಾಯಿಯ ಹೊಟ್ಟೆಯಲ್ಲಿನ ಭ್ರೂಣಕ್ಕೂ ನಿರಾಯಾಸವಾಗಿ ತಲುಪುತ್ತಿರುವ ಈ ಸಂದರ್ಭದಲ್ಲಿ , ಅದು ರಂಗಭೂಮಿಗೂ ಆವರಿಸಿರುವುದು ಆಶ್ಚರ್ಯವೇನೂ ಅಲ್ಲ. ಆದರೆ ಅದನ್ನು ಹೇಗೆ ಎಷ್ಟು ಮತ್ತು ಸಕಾರಣವಾಗಿ ಬಳಸುವುದು ಮುಖ್ಯ. ನಾಟಕ ಸಡಗರವೂ ಹೌದು, ಚಳವಳಿಯೂ ಹೌದು. ಸಮಾಜದ ಸೂಕ್ಷ್ಮವಾದ ಸಂಬಂಧ ಸಮಸ್ಯೆಗಳನ್ನು ಚಿತ್ರಿಸುವುದರ ಮೂಲಕ ಚಿಕಿತ್ಸಾತ್ಮಕವಾಗಿ ಕೆಲಸ ಮಾಡಬಲ್ಲದು. ವ್ಯವಸ್ಥೆಯ ಡಂಬಾಚಾರ ಪ್ರಶ್ನಿಸಬಲ್ಲದು.'
'ಆದ್ಯಂತ' ಎಂಬ ರಂಗತಂಡ ಕಟ್ಟಿಕೊಂಡಿರುವ ಮೌನೇಶ್, ಈಗ 'ಸಮಷ್ಟಿ' ತಂಡಕ್ಕಾಗಿ 'ಶಾಂಡಿಲ್ಯ ಪ್ರಹಸನ' ನಾಟಕ ನಿರ್ದೇಶಿಸುವುದರಲ್ಲಿ ಬ್ಯುಸಿ.ಸರಕಾರ ಮತ್ತು ಜನರಿಂದ ತಾನು ಬಯಸುವುದು 'ಆರ್ಥಿಕ ಸ್ಥಿರತೆ ಹಾಗೂ ಉತ್ತೇಜನವನ್ನು' ಎನ್ನುವುದು ಈ ಬೆವರ ಹುಡುಗನ ಮಾತು. 'ಪರಿತ್ಯಕ್ತ' ನಾಟಕದ, ಅಂಬಾತನಯ ಮುದ್ರಾಡಿ ರಚನೆಯ ಈ ಹಾಡು, ಮೌನೇಶ್‌ಗೆ ಬಹಳ ಪ್ರಿಯವಂತೆ, ನೀವೂ ಓದಿಕೊಳ್ಳಿ.
'ಇದಕಿಹುದು ಆದಿ ಇದಕಿಹುದು ಅಂತ್ಯ ತನ್ಮಧ್ಯೆ ಏಳು ಬೀಳು
ಭುವಿನಾಟ್ಯರಂಗ ಲೀಲಾತರಂಗ ನಟ ಬಾಧ್ಯನೇನು ಹೇಳು
ಕಣ್‌ದೂರಮಾಗೆ ಕೈಮಾಳ್ಕೆಯಲ್ಲಿ ಈ ಪಾತ್ರಧಾರಿ ಬಾಳು
ಅಭಿವ್ಯಕ್ತನಾರು ಪರಿತ್ಯಕ್ತನಾರು ಯಾರಿಲ್ಲಿ ಮೇಲು ಕೀಳು?'
(ವಿಜಯ ಕರ್ನಾಟಕ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟಿತ )

Read more...

November 10, 2009

ಯಕ್ಷ ದಿಗ್ಗಜನಿಗೆ ನಮಸ್ಕಾರ

Read more...

September 02, 2009

ನಿಮ್ಮೊಂದಿಗೆ ಎರಡು ವಿಷಯಗಳು


ಬೆಂಗಳೂರು ಕ್ಲಿಕ್... ಕ್ಲಿಕ್
ಡಿಜಿಟಲ್ ಕ್ಯಾಮೆರಾಗಳು ಎಲ್ಲರ ಕೈಗೆ ಬಂದರೂ 'ಬಣ್ಣ-ಬೆಳಕು-ಕೋನ’ಗಳನ್ನು ಸರಿದೂಗಿಸಿಕೊಳ್ಳುವುದು ಬಹಳ ಸುಲಭವೇನೂ ಆಗಿಲ್ಲ. ಆದರೆ ಛಾಯಾಗ್ರಹಣ ರಂಗಕ್ಕೆ ಹೊಸ ಹರಿವು-ವ್ಯಾಪ್ತಿಯು ತಂತ್ರಜ್ಞಾನದ ಮೂಲಕ ಲಭ್ಯವಾಗಿದೆ. ಛಾಯಾಗ್ರಹಣ ಆಸಕ್ತರ ಸಂಖ್ಯೆ ವೇಗದಲ್ಲಿ ವೃದ್ಧಿಯಾಗುತ್ತಿದೆ. ಹೊಸ ಅಲೆಯ ಚಿತ್ರಗಳು ಕಾಣಿಸಿಕೊಳ್ಳುತ್ತಿವೆ. ಕಳೆದ ಆ.೨೮ರಿಂದ ೩೦ರವರೆಗೆ ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ 'ಬೆಂಗಳೂರು ಫೋಟೊಗ್ರಫಿ ಕ್ಲಬ್', ಹಮ್ಮಿಕೊಂಡಿದ್ದ ನಾಲ್ಕನೇ ವಾರ್ಷಿಕ ‘ಛಾಯಾಚಿತ್ರ ಪ್ರದರ್ಶನ’ ಅದಕ್ಕೊಂದು ಸಾಕ್ಷಿ. ಸುಮಾರು ಐವತ್ತು ಜನ ಹವ್ಯಾಸಿ-ವೃತ್ತಿಪರ ಛಾಯಾಚಿತ್ರಗಾರರ ಫೋಟೊಗಳು 'ಮನಸ್ಸಿನ ಚೌಕಟ್ಟುಗಳು-೨೦೦೯' ಶೀರ್ಷಿಕೆಯಲ್ಲಿ ಅಲ್ಲಿ ಪ್ರದರ್ಶಿತವಾದವು. 'ಹವಾಮಾನ ಬದಲಾವಣೆ’ ಎಂಬ ವಿಷಯ ಕೇಂದ್ರವಾಗಿಟ್ಟು ಛಾಯಾಚಿತ್ರಗಳ ಪ್ರದರ್ಶನ, ವನ್ಯಜೀವಿ ಛಾಯಾಚಿತ್ರಗ್ರಾಹಕ ಜಯಂತ್ ಶರ್ಮಾ ಹಾಗೂ ಪ್ರಸಿದ್ಧರಾದ ಮಹೇಶ್ ಶಾಂತಾರಾಮ್ ಜತೆ ಸಂವಾದ, ಮತ್ತಷ್ಟು ವಿಶೇಷ.
೨೦೦೪ರಲ್ಲಿ ಇಂಟರ್‌ನೆಟ್‌ನಲ್ಲಿ ಸಿಕ್ಕ ನಾಲ್ಕು ಜನರ ಮಧ್ಯೆ ಆರಂಭವಾದ ಒಡನಾಟ, ಮುಂದಿನ ವರ್ಷಗಳಲ್ಲಿ ವಿಶೇಷವಾಗಿ ಬೆಳೆಯಿತು. ೨೦೦೬ರ ಕ್ಯಾಲೆಂಡರ್ ರೂಪಿಸಿ ೧೦೦ ಪ್ರತಿಗಳನ್ನು ಮಾರಿದ್ದು ಅವರಲ್ಲಿ ಹೆಚ್ಚಿನ ಉತ್ಸಾಹ ತುಂಬಿತು. ಛಾಯಾಚಿತ್ರ ಬೇಟೆಗಾಗಿ ಒಟ್ಟಾಗಿ ಹೋಗತೊಡಗಿದ ಗೆಳೆಯರ ಗುಂಪು ೨೦೦೬ ಫೆಬ್ರವರಿಯಲ್ಲಿ www.bangalorephotographyclub.com ಹುಟ್ಟು ಹಾಕಿತು. ವಾರ್ಷಿಕ ಛಾಯಾಚಿತ್ರ ಪ್ರದರ್ಶನವೂ ಆರಂಭವಾಯಿತು. ಈಗ ‘ಬಿಪಿಸಿ’ ಸಂಸ್ಥೆ ರಿಜಿಸ್ಟರ್ಡ್ ಆಗಿದೆ. ೮೦೦ಕ್ಕೂ ಹೆಚ್ಚು ನಾನಾ ರಾಜ್ಯ- ದೇಶಗಳ ಜನರ ಸದಸ್ಯತ್ವ ಹೊಂದಿದೆ. ಛಾಯಾಗ್ರಹಣ ಸಂಬಂಧಿತ ವಿಷಯಗಳ ಬಗ್ಗೆ ಅಲ್ಲಿ ಚರ್ಚೆ ನಡೆಯುತ್ತದೆ. ಕ್ಯಾಮೆರಾ-ಲೆನ್ಸ್‌ಗಳ ದರ, ಮಾರಾಟದ ಮಾತುಕತೆಗೆ ಅವಕಾಶವಿದೆ. ಛಾಯಾಗ್ರಹಣ ಕ್ಷೇತ್ರಕ್ಕೆ ಬಂದ ಹೊಸಬರಿಗಾಗಿ ಆಗಾಗ ತರಬೇತಿ ಕಾರ್ಯಾಗಾರಗಳನ್ನು ನಡೆಸುತ್ತದೆ. ಕನ್ನಡದ ಹೊಕ್ಕುಬಳಕೆ ತುಂಬ ಕಡಿಮೆಯಿದ್ದರೂ, ಅನುಭವಿ ಪೋಟೊಗ್ರಾಫರ್‌ಗಳ ಒಂದು ದೊಡ್ಡ ಸಮೂಹ ಅಲ್ಲಿದೆ. ಕ್ಯಾಮೆರಾ ಭಾಷೆ ಕಲಿಯಲು ಈ ಗುಂಪಿನಲ್ಲಿ ಸಾಧ್ಯವಿದೆ.


ಗುಹಾ ಪ್ರವೇಶದ ಬಳಿಕ...

'ಗುಹಾಗೆ ಕ್ರಿಕೆಟ್ ಬಿಟ್ಟು ಬೇರೇನು ಗೊತ್ತು?’ ಅಂತ ಕೆಲ ಪ್ರಸಿದ್ಧ ಬರಹಗಾರರರೇ ಹಾಸ್ಯ ಮಾಡುತ್ತಿದ್ದರೂ, ಭಾರತೀಯ ಇಂಗ್ಲಿಷ್ ಬರವಣಿಗೆಯಲ್ಲಿ ರಾಮಚಂದ್ರ ಗುಹಾ ಮುಂಚೂಣಿಗೆ ಬಂದಾಗಿದೆ. ಖ್ಯಾತ ಇತಿಹಾಸತಜ್ಞರಾದ ಅವರ ಮುಂದಿನ ಏಳು ಪುಸ್ತಕಗಳನ್ನು ಪ್ರಕಟಿಸುವುದಾಗಿ ‘ಪೆಂಗ್ವಿನ್ ಇಂಡಿಯಾ’ ಒಪ್ಪಂದ ಮಾಡಿಕೊಂಡಿದೆ. ಅದಕ್ಕೆ ಸಂಸ್ಥೆ ನೀಡಿರುವ ಮುಂಗಡ ಹಣ ಸುಮಾರು ರೂ. ೯೭ ಲಕ್ಷ . ಇನ್ನೆರಡು ಪ್ರಸಿದ್ಧ ಪ್ರಕಾಶನ ಸಂಸ್ಥೆಗಳಾದ ‘ಹಾರ್ಪರ್ ಕಾಲಿನ್ಸ್’ ಮತ್ತು ‘ರ್‍ಯಾಂಡಮ್ ಹೌಸ್ ಇಂಡಿಯಾ’ಗಳೂ ಆ ಸ್ಪರ್ಧೆಯಲ್ಲಿದ್ದುವಂತೆ. ಅವೆರಡೂ ಸಂಸ್ಥೆಗಳು ಕೊಂಚ ಹೆಚ್ಚಿನ ಮೊತ್ತವನ್ನೊಡ್ಡಿದರೂ, ಗುಹಾ ಮಾತ್ರ ಪೆಂಗ್ವಿನ್‌ಗೆ ಒಲಿದಿದ್ದಾರೆ. ಬೂಕರ್ ಪ್ರಶಸ್ತಿ ಸನಿಹ ತಲುಪಿದ್ದ ಅಮಿತ್ವಘೋಷ್‌ಗೆ ಪೆಂಗ್ವಿನ್‌ನವರು ಕೊಟ್ಟಿದ್ದು ೫೫ ಲಕ್ಷರೂ.. ನಂದನ್ ನೀಲೇಕಣಿಯವರ 'ಇಮ್ಯಾಜಿನಿಂಗ್ ಇಂಡಿಯಾ’ಗೆ ರೂ.೨೫ ಲಕ್ಷ, ಅರವಿಂದ ಅಡಿಗರ ‘ವೈಟ್ ಟೈಗರ್’ಗೆ ೧೩ ಲಕ್ಷ . ಹಾಗಿರುವಾಗ ಸೃಜನೇತರ ವಿಭಾಗಕ್ಕೆ ಸೇರುವ ಗುಹಾ ಅವರಿಗೆ ಒಲಿದ ಈ ಲಕ್ಷ್ಮೀ ಕಟಾಕ್ಷ ಭಾರತೀಯ ಬರಹಗಾರರಿಗೆ ಹೊಸ ಭರವಸೆ. ಏಳು ಪುಸ್ತಕಗಳಲ್ಲಿ ಮೊದಲನೆಯದ್ದಾದ 'ದ ಮೇಕರ್‍ಸ್ ಆಫ್ ಮಾಡರ್ನ್ ಇಂಡಿಯಾ’ ೨೦೧೦ರಲ್ಲಿ ಹೊರಬರಲಿದೆ ಅಂತ ‘ಪೆಂಗ್ವಿನ್ ಇಂಡಿಯಾ’ ತಿಳಿಸಿದೆ. ೧೯ನೇ ಶತಮಾನದಿಂದ ಆಧುನಿಕ ಭಾರತ ಬೆಳೆದು ಬಂದ ಬಗೆಯನ್ನು ಪ್ರಭಾವಿ ರಾಜಕೀಯ ವ್ಯಕ್ತಿಗಳ ಮೂಲಕ ಅದರಲ್ಲಿ ಚಿತ್ರಿಸಲಾಗುವುದಂತೆ. ಅಲ್ಲದೆ ಅವರು ಮಹಾತ್ಮಾ ಗಾಂಧಿ ಜೀವನ ಚರಿತ್ರೆಯನ್ನು ಎರಡು ಸಂಪುಟಗಳಲ್ಲಿ ಬರೆಯಲಿರುವುದು ವಿಶೇಷ ಕುತೂಹಲ ಕಾರಣ.
ಡೆಹ್ರಾಡೂನ್‌ನಲ್ಲಿ ಹುಟ್ಟಿ ಈಗ ಬೆಂಗಳೂರಿನಲ್ಲಿ ವಾಸವಾಗಿರುವ ರಾಮಚಂದ್ರ ಗುಹಾ, ಈ ೪೧ರ ವಯಸ್ಸಿನಲ್ಲೇ ಎತ್ತರಕ್ಕೇರಿದವರು. ಅವರೀಗ ವೃತ್ತಿಪರ ಬರಹಗಾರ ಮತ್ತು ಮಾತುಗಾರ. ಮೊನ್ನೆ ಮೊನ್ನೆ ಬೆಂಗಳೂರಿನ ಕಲಾಕ್ಷೇತ್ರದಲ್ಲಿ ಕೆ.ವಿ. ಸುಬ್ಬಣ್ಣರ ಇಂಗ್ಲಿಷ್‌ಗೆ ಅನುವಾದಿತ ಲೇಖನಗಳ ಸಂಕಲನ ಬಿಡುಗಡೆಯಾದಾಗ, ಗುಹಾ ಮಾತನಾಡಿದ ಶೈಲಿಯಲ್ಲಿ ಆ ವೃತ್ತಿಪರತೆ ಪ್ರತಿಬಿಂಬಿಸುತ್ತಿತ್ತು. ಪರಿಸರ-ಸಮಾಜ-ರಾಜಕೀಯ-ಕ್ರಿಕೆಟ್-ಇತಿಹಾಸ ಹೀಗೆ ನಾನಾ ಕ್ಷೇತ್ರಗಳ ಪರಿಣತರಾದ ಇವರು ವೃತ್ತಿಪರ ಚಿಂತಕರೂ ಹೌದಾ?! ಎಂಟು ಜನ ಹೊಸ ಕಾದಂಬರಿಗಳನ್ನು ಬರೆಯುತ್ತಿರುವಾಗಲೇ ವರನ್ನು ಪರೀಕ್ಷಿಸಿದ ಸಂದರ್ಶನ ಇತ್ತೀಚೆಗೆ ಸಾಪ್ತಾಹಿಕ ವಿಜಯದಲ್ಲಿ ಪ್ರಕಟವಾಗಿತ್ತು. ಕನ್ನಡದಲ್ಲಿ ಇಂತಹ ಬೆಳವಣಿಗೆಯೇ ಅಪರೂಪ. ಇನ್ನೂ ಲೈಬ್ರರಿಗಳನ್ನೋ , ಪ್ರಶಸ್ತಿಯಲ್ಲಿ ಸಿಕ್ಕ ಮೊತ್ತವನ್ನೋ ನಂಬಿಕೊಂಡಿರುವ ಕನ್ನಡ ಪ್ರಕಾಶನ ಉದ್ಯಮ, ಓದುಗರನ್ನು ನಂಬಿಕೊಳ್ಳುವಂತಾಗುವುದು ಎಂದು? ಬರಹಗಾರ ಕುಂ.ವೀ. ತಮ್ಮದೇ ಪ್ರಕಾಶನ ಸಂಸ್ಥೆ ಆರಂಭಿಸುತ್ತಿರುವುದು ಎಂತಹ ಬೆಳವಣಿಗೆ? ಬರವಣಿಗೆ-ಪುಸ್ತಕ ಪ್ರಕಾಶನ ಉದ್ಯಮವಾಗದಿದ್ದರೇ ಒಳ್ಳೆಯದಾ? ಹುಬ್ಬೇರುತ್ತದೆ ಅನೇಕ ಸಲ.
ಪೋಟೊ ಕೃಪೆ:www.geocities.com/nrutyas/d1.htm

Read more...

August 15, 2009

'ಇಲ್ಲದ ತೀರದಲ್ಲಿ' - ಇನ್ನೊಂದು ಹೊಸ ಪುಸ್ತಕದ ಬಗ್ಗೆ


ಈ ಅಕ್ಷರಗಳಲ್ಲಿ ದುಃಖವನ್ನು ತುಂಬಿದ್ದೇನೆ
ತುಳುಕದಂತೆ ನೋಡಿಕೊಳ್ಳಿ ಕಣ್ಣೀರು.
ದುಃಖ ಹೀರಿಕೊಂಡೂ
ಒದ್ದೆಯಾಗವು ಅಕ್ಷರಗಳು .

ಯಾವತ್ತೋ ಬರೆದಿಟ್ಟಿದ್ದ ಈ ನಾಲ್ಕು ಸಾಲು ಈಗ ನೆನಪಾಯಿತು. ಅದಕ್ಕೆ ಕಾರಣ, ಅರವಿಂದ ಚೊಕ್ಕಾಡಿಯವರ 'ಇಲ್ಲದ ತೀರದಲ್ಲಿ-ಅಪ್ಪನ ಬದುಕಿನೊಂದಿಗೆ ಸಂವಾದ’ ಎಂಬ ಇತ್ತೀಚೆಗಿನ ಪುಸ್ತಕ. ನೂರಮೂವತ್ತು ಪುಟಗಳ, ರೂ.ಅರುವತ್ತು ಬೆಲೆಯ ಈ ಪುಸ್ತಕವನ್ನು ಬಳ್ಳಾರಿಯ 'ಲೋಹಿಯಾ ಪ್ರಕಾಶನ' ಪ್ರಕಟಿಸಿದೆ. ತುಂಬ ಪ್ರಖರವಾದ ಕಟು ಸತ್ಯಗಳ ಗುಚ್ಛ ಅದು. ಅದಕ್ಕೆ ಪ್ರಮೀಳಾ ಚೊಕ್ಕಾಡಿ ಬರೆದ ಮುನ್ನುಡಿಯ ಆಯ್ದ ಭಾಗ ಹಾಗೂ ಪುಸ್ತಕ ಓದಿ ಅರವಿಂದರಿಗೆ ನಾನು ಬರೆದ ಪತ್ರವನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ. ಒಂದ್ಹತ್ತು ನಿಮಿಷ ಇಲ್ಲಿ ಕಳೆದುಹೋಗಿ.

...ಮಾವ ನಮ್ಮನ್ನಗಲಿ ಮೂರು ತಿಂಗಳು ಕಳೆದ ಮೇಲೂ ಯಾವುದೋ ವಿಷಾದ ಭಾವ ನಮ್ಮನ್ನು ಕಾಡುತ್ತಿದೆ. ಅದು ಅವರ ಸಾವಿನದ್ದಾಗಿರದೆ ಅವರು ಕೊನೆಯ ದಿನಗಳಲ್ಲಿ ಬದುಕಿದ ರೀತಿಯಿಂದ ಬರುವ ವಿಷಾದವಾಗಿದೆ...ಮಾವ ತಮ್ಮ ಆಪ್ತ ವಿಚಾರಗಳನ್ನೆಲ್ಲ ನನ್ನಲ್ಲೇ ಹೇಳಿಕೊಳ್ಳುತ್ತಿದ್ದರು. ಅಪ್ಪ, ಅಮ್ಮ, ಅಣ್ಣ-ತಮ್ಮಂದಿರು, ಜೋಡುಪಾಲದ ಆಸ್ತಿ, ಕೆಲವೊಮ್ಮೆ ಪುರಾಣ, ಮಗದೊಮ್ಮೆ ರಾಜಕೀಯ, ಇನ್ನೊಮ್ಮೆ ಪ್ರಸ್ತುತ ಸಾಮಾಜಿಕ ಸ್ಥಿತಿಗತಿಗಳು, ವಣಾಶ್ರಮ ವ್ಯವಸ್ಥೆ ಹೀಗೆ ಉಮೇದು ಬಂದರೆ ಆ ದಿನವೆಲ್ಲ ತುಂಬಾ ಮಾತನಾಡುತ್ತಿದ್ದರು ಮಾವ. ನಾನು ಆಗಾಗ ಮಾವನನ್ನು ಕೆಣಕುವುದಿತ್ತು. ‘ಮಾವ, ಜೋಡುಪಾಲದ ಆಸ್ತಿಯಲ್ಲಿ ಪಾಲು ಸಿಕ್ಕಿದರೆ ನನಗೇನು ಕೊಡುತ್ತೀರಿ?’ ಎಂದು. ‘ನನಗೆ ನಾಲ್ಕು ಲಕ್ಷ ಸಿಕ್ಕಿದರೆ ನಿನಗೆ ಹತ್ತು ಸಾವಿರ ರೂಪಾಯಿ ಕೊಡುತ್ತೇನೆ’ ಅನ್ನುತ್ತಿದ್ದರು ಮಾವ. ಆಗ ನಾನು ಹೇಳುತ್ತಿದ್ದೆ- 'ಮಾವ ನೀವು ಕೊಡುವ ಹಣವನ್ನು ಸೇರಿಸಿ ನಾನೊಂದು ವಾಷಿಂಗ್ ಮೆಷಿನ್ ತೆಗೆಯುವವಳಿದ್ದೇನೆ.' ಆಗ ಮಾವ ಹೇಳುತ್ತಿದ್ದರು-‘ನೀನು ವಾಷಿಂಗ್ ಮೆಷಿನ್ ತೆಗೆಯುವುದಾದರೆ ನಾನು ಹಣವನ್ನೇ ಕೊಡಲಾರೆ. ಅದನ್ನು ಹಾಗೆಯೇ ತೆಗೆದುಕೊಂಡು ಹೋಗಿ ನಿನ್ನ ಅಕೌಂಟ್‌ಗೆ ಹಾಕುತ್ತೀಯಾದರೆ ಮಾತ್ರ ನಾನು ನಿನಗೆ ಹಣ ಕೊಡಬಹುದು.' 'ಅಂದ ಹಾಗೆ ಮಾವ, ನಿಮಗೆ ಆಸ್ತಿಯಲ್ಲಿ ಯಾವಾಗ ಪಾಲು ಸಿಗುತ್ತದೆ?’ 'ನೀನಿಲ್ಲಿಂದ ಹೋಗ್ತೀಯೋ ಇಲ್ವೋ? ನಿನಗೇನು ಕೆಲಸ ಇಲ್ವಾ?’ ಎಂದು ನಗುತ್ತಾ ತಾವೇ ಎದ್ದು ಚಾಪೆ ಸೇರುತ್ತಿದ್ದರು...

...ಬಿಸಾಡಬಹುದಾದ ಕೈಚೀಲಗಳನ್ನು ಬಿಚ್ಚಿ ಹೊಸ ರೀತಿಯಲ್ಲಿ ಹೊಲಿಯುವುದು ಅವರ ಬಹಳ ಇಷ್ಟದ ಕೆಲಸ. ದಿನಪತ್ರಿಕೆಗಳನ್ನು ಸ್ವಲ್ಪವೂ ಕರೆ ಮಡಚದ ಹಾಗೆ ಅಚ್ಚುಕಟ್ಟಾಗಿ ಜೋಡಿಸಿಡುವುದು, ಬೇಡದ ಹಾಲಿನ ಕವರ್, ಪ್ಲಾಸಿಕ್ ಕವರ್, ಖಾಲಿ ಮದ್ದಿನ ಬಾಟಲ್‌ಗಳು, ಬಾರ ಹೋದ ಚಪ್ಪಲಿಗಳು ಇವೆಲ್ಲವನ್ನೂ ಮಾವ ಪ್ರತ್ಯೇಕ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಟ್ಟು ಅನುಕೂಲವಾದಾಗ ಗುಜರಿ ಅಂಗಡಿಯಲ್ಲಿ ಮಾರಿ, ಸಿಕ್ಕಿದ ಹಣವನ್ನು ತಮ್ಮ ಅಕೌಂಟ್‌ನಲ್ಲಿಯೂ , ಮೊಮ್ಮಗಳ ಅಕೌಂಟ್‌ನಲ್ಲಿಯೂ ಜಮಾ ಮಾಡುತ್ತಿದ್ದರು. ಸಾಯುವ ಎರಡು ತಿಂಗಳ ಮೊದಲು ನನ್ನೆಲ್ಲಾ ನೋಟ್ಸ್ ಪುಸ್ತಕಗಳಿಗೆ ಮಾವ ನೀಟಾಗಿ ಬೈಂಡ್ ಹೊದೆಸಿಕೊಟ್ಟಿದ್ದರು....
...ಮೆಚ್ಚಿ ಮದುವೆಯಾದ ಅತ್ತೆ-ಮಾವ ಮೆಚ್ಚಿಕೊಂಡೇ ಬಾಳಬಹುದಾಗಿದ್ದ ಉನ್ನತ ಮಾನವೀಯ ಗುಣಗಳನ್ನು ಹೊಂದಿದ್ದೂ, ಒಂದೇ ಜೀವನ ದೋಣಿಯಲ್ಲಿ ಮುಖ ತಿರುಗಿಸಿಕೊಂಡು ಯಾನ ಮಾಡಿದರು. ಈಗ ಆ ಯಾನದಲ್ಲಿ ಮಾವನಿಲ್ಲ... -ಪ್ರಮೀಳಾ ಚೊಕ್ಕಾಡಿ

ಪ್ರಿಯ ಅರವಿಂದ ಚೊಕ್ಕಾಡಿಯವರಿಗೆ, ನಮಸ್ಕಾರ.
ಪುಸ್ತಕ ಕೈಗೆ ಬಂದಾಗ ಸಾಮಾನ್ಯವಾಗಿ ಎಲ್ಲರೂ ಮಾಡುವಂತೆ, ಮೊದಲು ಓದಿದ್ದು ಬೆನ್ನುಡಿ. ಅದನ್ನೋದಿದಾಗ ಮುನ್ನುಡಿಯನ್ನೂ ಪೂರ್ತಿ ಓದುವ ಮನಸ್ಸಾಯಿತು. ಮುನ್ನುಡಿ ಓದಿದ್ದೇ ಪುಸ್ತಕ ತೆರೆದು ಒಳಹೊಕ್ಕು ಕುಳಿತೆ. ಎರಡು ದಿನಗಳ ಎರಡೇ ಸಿಟ್ಟಿಂಗ್‌ಗಳಲ್ಲಿ ನೂರಮೂವತ್ತು ಪುಟಗಳ ಪುಸ್ತಕ ಓದಿ ಮುಗಿಸಿದಾಗ ತಲ್ಲಣಗೊಂಡಿದ್ದೆ. ನಾನು ಪುಸ್ತಕ ಓದುವುದು ನಿಧಾನ. ಅಲ್ಲದೆ ಎರಡುಮೂರು ಪುಸ್ತಕಗಳನ್ನಿಟ್ಟುಕೊಂಡು ಒಂದೊಂದನ್ನೇ ಚೂರುಚೂರು ಓದುತ್ತಿರುವುದು ಅಭ್ಯಾಸ. ಅಂತದ್ದರಲ್ಲಿ ನೀವು ಬರೆದ ಪುಸ್ತಕ, ಅದಕ್ಕೆ ಬೆನ್ನುಡಿ-ಮುನ್ನುಡಿಯಾಗಿ ನಿಮ್ಮ ಪತ್ನಿ ಪ್ರಮೀಳಾ ಚೊಕ್ಕಾಡಿ ಬರೆದ ಚೊಕ್ಕದಾದ ಬರಹ ನನ್ನ ಮನಸ್ಸಿನಲ್ಲಿ ಕೂತುಬಿಟ್ಟಿದೆ.

ನನ್ನಪ್ಪನ ಬಗೆಗಿನ ಲೇಖನಗಳ ಸಂಕಲನದಲ್ಲಿ ನಾನು ಹೀಗೆ ಬರೆದಿದ್ದೆ- 'ಈ ಪುಸ್ತಕವು ಅಪ್ಪ ಮತ್ತು ಮನೆಯ ಖಾಸಗಿ ವಿವರಗಳನ್ನು ಸಾರ್ವಜನಿಕಗೊಳಿಸುವ ಅಥವಾ ಸಾರ್ವಜನಿಕವಾಗಿ ಖಾಸಗೀಕರಣಗೊಳಿಸುವ (ಅಂದರೆ ಸಾರ್ವಜನಿಕವಾಗಿ ಇನ್ನಷ್ಟು ಆಪ್ತವಾಗಿಸುವ !) ಕೆಲಸ. ಇಲ್ಲಿ ಬಯಲಾಗುವ ಖಾಸಗಿ ವಿವರಗಳು ಅನಗತ್ಯ ಅನ್ನಿಸಬಹುದು. ಆದರೆ ಇನ್ನೊಂದು ಕಿಟಕಿಯಿಂದ ನೋಡಿದರೆ, ಸಾರ್ವಜನಿಕ ಜೀವನ ತುಂಬುವುದೇ ಇಂತಹ ಖಾಸಗಿ ವಿವರಗಳಿಂದಲೋ ಏನೋ? ಇವೆಲ್ಲವೂ ಕೊಂಚ ಝಗಮಗಿಸಿಯಾವು ಅಥವಾ ಸಪ್ಪೆಯಾಗಿ ಕಂಡಾವು. ಅದೇನಿದ್ದರೂ ಅಕ್ಷರಗಳ ಚಮತ್ಕೃತಿ ಅಷ್ಟೆ'. ಅತ್ತೆಯಂದಿರು, ಮಾವಂದಿರು, ದೊಡ್ಡಮ್ಮಂದಿರು ಎಲ್ಲರೂ ಬರೆದಿದ್ದರಿಂದ ಅದು ತೀರಾ ಖಾಸಗಿಯಾಗೇ ಇತ್ತು. ಆ ನೆನಪಿನಲ್ಲಿ ನಿಮ್ಮ ಪುಸ್ತಕ ತೆರೆದರೆ, ಇಲ್ಲೆಲ್ಲ ಹರಿದು ಹಂಚಿ ಹೋದ ಸಾಮ್ರಾಜ್ಯ. ಹಾಗಂತ ಅಪ್ಪನನ್ನು ಸಾರ್ವಜನಿಕವಾಗಿ ಮೆರೆಸುವ, ಆಪ್ತತೆಯ ನೆಪ ಹೇಳಿ ಭಾವನೆಗಳನ್ನು ಹೈಜಾಕ್ ಮಾಡುವ ಉದ್ದೇಶವೂ ಇಲ್ಲ. ಎಲ್ಲ ‘ನೇರ-ಸರಳ-ದಿಟ್ಟ-ನಿರಂತರ’. ಇದು ತಮಾಷೆ ಅಲ್ಲ. ಓದಿ ಕನಿಕರ-ಸಹಾನುಭೂತಿ ತೋರಿಸುವಂತಿಲ್ಲ. ಬೆಚ್ಚಿಬೀಳಿಸುವ ಭಯಾನಕತೆಯೊ, ಬರೀ ಶೋಕಗೀತೆಯೂ ಅಲ್ಲ. ನಮ್ಮಲ್ಲೆಲ್ಲ ಬಂಧುಗಳು ಸೇರಿದಾಗ 'ಸುಖದುಃಖ ಮಾತಾಡುವುದು' ಅಂತಿದೆಯಲ್ಲ, ಸುಮಾರಾಗಿ ಹಾಗೆಯೇ. ಹಾಗಾಗಿ ಕೆಲವೆಡೆ ಪದಗಳ ದುಂದುವೆಚ್ಚವೂ ಆಗಿದೆ. ಕವಿಯಲ್ಲದ ನೀವು, ಆ ಬಗ್ಗೆ ಚಿಂತಿಸಬೇಕಿಲ್ಲ ಬಿಡಿ. ಇಲ್ಲಿ ಅಪ್ಪ ಅಮ್ಮನ ವಿಮರ್ಶೆಯನ್ನೇ ಮಾಡಿದ್ದೀರಿ. ಹಾಗಾಗಿ ಈ ಪುಸ್ತಕದ ವಿಮರ್ಶೆ ಮಾಡುವುದು ಸುಲಭವೇನೂ ಅಲ್ಲ, ಆ ಉದ್ದೇಶವೂ ನನಗಿಲ್ಲ.

'ಸೃಜನಶೀಲ'ಅಂತ ಕರೆಯಲ್ಪಡುವ ಬರಹಗಳ ಯಾವುದೇ ತಂತ್ರಗಳನ್ನು ಬಳಸದೆ, ಏಕರೂಪವಾಗಿ, ನಿರುದ್ವಿಗ್ನವಾಗಿ, ಅಲಿಪ್ತರಾಗಿ ಬರೆದ ಶೈಲಿಯೇ ಇಷ್ಟವಾಯಿತು. ಇಲ್ಲಿ ಯಾರೂ ಹೀರೊ, ವಿಲನ್‌ಗಲ ವಿಜೃಂಭಣೆಯ ಕತೆ ಅಲ್ಲ. ಎಲ್ಲರೂ ಸಿಹಿ-ಉಪ್ಪು-ಹುಳಿ-ಖಾರದ ಮನುಷ್ಯರು. ಅನೇಕ ವ್ಯಕ್ತಿಗಳ ಯಶಸ್ಸಿನ ಕುರಿತ ಪುಸ್ತಕಗಳು ಇಂಗ್ಲಿಷ್‌ನಲ್ಲಿ ಬಹಳಷ್ಟಿವೆ. ನಿಮ್ಮದು ಯಶೋಗಾಥೆಯ ಪುಸ್ತಕ ಅಲ್ಲದಿದ್ದರೂ ಯಶಸ್ವಿ ಪುಸ್ತಕ. ತೀರಿಹೋದ ಅಪ್ಪನ ನೆನಪಿನಲ್ಲಿ ಬರೆದ ಇಂತಹ ಪುಸ್ತಕ, ಕನ್ನಡದಲ್ಲಿ ಇದೇ ಮೊದಲನೆಯದು ಅಂದುಕೊಂಡಿದ್ದೇನೆ. ನಾಲ್ಕು ಪುಟ ತಿರುವಿದಾಗಲೇ ರೇಜಿಗೆ ಹುಟ್ಟಿಸುವ ಅಭಿನಂದನ-ಸಂಸ್ಮರಣ ಗ್ರಂಥಗಳು ನೂರಾರು ಬರುತ್ತಿವೆ. ಆದರೆ ನಿಮ್ಮ ಪುಸ್ತಕ ನೆನಪಿನಲ್ಲುಳಿಯುತ್ತದೆ, ಬೆಳೆಯುತ್ತದೆ. ಯಾವ ಭಾಗ ಹೆಚ್ಚು ಇಷ್ಟವಾಯಿತು ಅಂತೇನಾದರೂ ನೀವು ಕೇಳುವುದಿದ್ದರೆ, ಬಹುಶಃ ‘ಅದೇಕೋ ಅಭಾಗ್ಯ ಈ ಭೀತಿ ಮೌನ’ ಅಧ್ಯಾಯ ನನಗೆ ಹೆಚ್ಚು ಇಷ್ಟವಾಯಿತು ಅಂದೇನು.

ಇದೊಂದು ಸಾತ್ವಿಕ ಬಂಡಾಯದ ಪುಸ್ತಕ. ಗಾಂಧಿಯ ಮಾದರಿ ಇದಕ್ಕಿದೆ. ತುಂಬಾ ವಿವರಗಳು (ಡಿಟೈಲ್ಸ್) ಇರುವುದರಿಂದ ಓದಿಸಿಕೊಂಡೂ ಹೋಗುತ್ತದೆ. ತುಂಬ ಪ್ರಖರವಾದ ಕಟು ಸತ್ಯಗಳನ್ನು ಜೋಡಿಸಿದ್ದೀರಿ. ನಿಮ್ಮ ಜೀವನ ದಾರಿಯ ಸ್ಪಷ್ಟತೆ ಬೆರಗು ಹುಟ್ಟಿಸುತ್ತದೆ. ಸುಮ್ಮನೆ ಹೊಗಳುತ್ತಿದ್ದೇನೆ ಅಂದುಕೊಳ್ಳಬೇಡಿ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬರೆಯಬಹುದಿತ್ತು, ಹೌದು. ಆದರೆ ಅನುಭವಕ್ಕೆ-ಸತ್ಯಕ್ಕೆ ನಿಷ್ಠನಾಗಿರುವುದೇ ಇಲ್ಲಿ ನಿಮಗೆ ಮುಖ್ಯ, ಪರಿಣಾಮದ ಬಗ್ಗೆ ಆಸಕ್ತಿಯಿಲ್ಲ ಅಂತ ನನಗೆ ಗೊತ್ತು. ಸಾವಿರಾರು ಪ್ರತಿ ಮಾರಾಟವೊ, ಪ್ರಶಸ್ತಿಗಳ ಆಕಾಂಕ್ಷೆಯೊ ಇದರ ಹಿಂದಿಲ್ಲ. ಒಬ್ಬ ಬರಹಗಾರ ಮಗನಾಗಿ ಇಷ್ಟು ಕರ್ತವ್ಯ ಅನ್ನುವ ದೃಷ್ಟಿ ನಿಮ್ಮಲ್ಲಿದ್ದಂತೆ ಅನಿಸುತ್ತದೆ. ಅಪ್ಪ ಹುಷಾರಿಲ್ಲದಿದ್ದಾಗ ಉಪಚರಿಸುವುದು ಹೇಗೆ ಮಗನ ಕರ್ತವ್ಯವೋ, ಅವರಿಲ್ಲದಾದಾಗ ಅವರ ಬಗ್ಗೆ ಒಂದಷ್ಟು ಬರೆಯುವುದು ಬರಹಗಾರ ಮಗನಾಗಿ, ನೀವು ಅಪ್ಪನಿಗೆ, ಈ ಅಕ್ಷರಗಳಿಗೆ ಮಾಡುವ ಋಣ ಸಂದಾಯದಂತೆ ಕಾಣುತ್ತಿದೆ, ಖುಶಿಯಾಗಿದೆ. ಪಾಕ ಸರಿಯಾಗಿದ್ದಾಗ ಆಹಾರವನ್ನು ಯಾವ ಆಕಾರದಲ್ಲಿಟ್ಟರೂ, ಯಾವ ಬಣ್ಣದಲ್ಲಿದ್ದರೂ ರುಚಿಯಾಗುವ ಹಾಗೆ, ಗಟ್ಟಿ ವಸ್ತುವಿನ ಈ ಪುಸ್ತಕ ಯಾವ ರೂಪದಲ್ಲಿದ್ದರೂ ರುಚಿಕರವೇ. ಈ ರೂಪದಲ್ಲೂ ಸ್ವಾದಿಷ್ಟವೇ.

ನೀವೇ ಬರೆದುಕೊಂಡ ಹಾಗೆ- ಅಪ್ಪ, ಅಮ್ಮನ ಸಾಮಾಜಿಕ ಋಣಗಳು ಹಾಗೆಯೇ ಇವೆ. ಈ ಕೃತಿಯಲ್ಲಿ ಉಪಕರಣಗಳಾಗಿ ಬರುವ ಮೂಲಕ ಓದುಗರಲ್ಲಿ ಒಂದು ಹೊಸ ಅರಿವನ್ನು ಹುಟ್ಟುಹಾಕಲು ಸಾಧ್ಯವಾದರೆ ಅವರು ಸಮಾಜಕ್ಕೆ ಸಲ್ಲಿಸಬೇಕಾದ ಋಣವನ್ನು ಸಲ್ಲಿಸಿದಂತಾಗುತ್ತದೆ ಎಂದು ನಾನು ಭಾವಿಸಿದ್ದೇನೆ.' ಎಂಬುದು ಅರ್ಥಪೂರ್ಣವಾಗಿದೆ. ‘ಅಪ್ಪ-ಅಮ್ಮನಿಗಿಂತ ಯಾವುದೂ ದೊಡ್ಡದಲ್ಲ. ಆದರೆ ಸತ್ಯ ಎಲ್ಲದಕ್ಕಿಂತ ದೊಡ್ಡದು' ಎಂದು ನೀವು ನಂಬುವ ಮಾತು ಈ ಕೃತಿಯುದ್ದಕ್ಕೂ ಉಳಿದುಕೊಂಡಿದೆ ಎಂದು ಅನ್ನಿಸಿದೆ.
- ಸ್ನೇಹದಿಂದ ಸುಧನ್ವಾ

Read more...

August 11, 2009

ಪ್ರಸನ್ನ ವದನಂ ಧ್ಯಾಯೇತ್...

'ಕಾಯಕ ಸಂಸ್ಕೃತಿಯ ಉಳಿವು ಈ ಪುಸ್ತಕದ ಪ್ರಧಾನ ಆಶಯವಾಗಿದೆ. ಆದರೆ ದುಡಿಯುವ ವರ್ಗಗಳಿಗೆ ಅನುಮಾನಗಳಿವೆ; ಜಾತಿ ಪದ್ಧತಿ, ಪಾಳೆಯಗಾರಿ ಪದ್ಧತಿ ಹಾಗೂ ಒಟ್ಟಾರೆಯಾಗಿ ಗ್ರಾಮ ಜೀವನದ ಬಗ್ಗೆಯೇ ಬಡವರಿಗೆ ಅನುಮಾನಗಳಿವೆ. ಯಂತ್ರ ನಾಗರಿಕತೆ ಹಾಗೂ ನಗರ ಸಂಸ್ಕೃತಿಯು ನಮ್ಮೆಲ್ಲ ಪರಂಪರೆಗಳಿಗಿಂತಲೂ ಹೆಚ್ಚು ಪ್ರಜಾಸತ್ತಾತ್ಮಕವಾದುದೆಂದು ಬಡವರು ನಂಬುತ್ತಾರೆ. ಈ ಪುಸ್ತಕವು ಬಡವರ ಆತಂಕವನ್ನು ಒಪ್ಪುತ್ತದೆ. ಯಂತ್ರ ನಾಗರಿಕತೆಯು ಒಳತಂದ ವೈಚಾರಿಕ ಕ್ರಾಂತಿಯನ್ನು ತಿರಸ್ಕರಿಸದೆ, ತಂತ್ರಜ್ಞಾನದ ಕಸ ಹಾಗೂ ಅನೈತಿಕತೆಗಳನ್ನು ತಿರಸ್ಕರಿಸಬಯಸುತ್ತದೆ...ಯಂತ್ರ ನಾಗರಿಕತೆಯನ್ನು ಸರಕು ಸಂಸ್ಕೃತಿ, ಕೊಳ್ಳುಬಾಕ ಸಂಸ್ಕೃತಿ, ಆಧುನಿಕ ಸಂಸ್ಕೃತಿ, ಪಾಶ್ಚಿಮಾತ್ಯ ಸಂಸ್ಕೃತಿ ಇತ್ಯಾದಿ ಹೆಸರುಗಳಿಂದಲೂ ಕರೆಯುತ್ತೇವೆ. ನಾನು ಈ ಪುಸ್ತಕದಲ್ಲಿ ಯಂತ್ರ ನಾಗರಿಕತೆ ಎಂಬ ಹೆಸರನ್ನೇ ಪ್ರಧಾನವಾಗಿ ಬಳಸಲು ಇಷ್ಟಪಡುತ್ತೇನೆ. ಕಾರಣವಿಷ್ಟೆ: ಮೇಲೆ ಪಟ್ಟಿ ಮಾಡಿದ ಇತರ ಹೆಸರುಗಳು, ಯಂತ್ರ ನಾಗರಿಕತೆಯ ಯಾವುದೋ ಒಂದು ಆಯಾಮದತ್ತ ಬೊಟ್ಟು ಮಾಡಿ ತೋರಿಸುತ್ತವೆ. ಉದಾಹರಣೆಗೆ ಪಾಶ್ಚಿಮಾತ್ಯ ಸಂಸ್ಕೃತಿ ಎಂಬುದು ಯಂತ್ರ ನಾಗರಿಕತೆ ಪಶ್ಚಿಮದ ದೇಶಗಳಲ್ಲಿ ಹುಟ್ಟಿತು ಎಂಬ ಸಂಗತಿಯತ್ತ ಮಾತ್ರ ಬೊಟ್ಟು ಮಾಡುತ್ತದೆ. ಆದರೆ ಯಂತ್ರ ನಾಗರಿಕತೆ ಎಂಬ ಹೆಸರು ಸಮಗ್ರವಾದ ಪರಿಕಲ್ಪನೆಯನ್ನು ನೀಡುತ್ತದೆ ಎಂದು ನನ್ನ ನಂಬಿಕೆ.'

'ದೇಸಿ ಜೀವನ ಪದ್ಧತಿ' ಪುಸ್ತಕದ ಮೂಲಕ ಬರವಣಿಗೆಯ ಜಾಡಿಗೆ ಬಂದ ರಂಗಕರ್ಮಿ ಪ್ರಸನ್ನ, 'ನಟನೆಯ ಪಾಠಗಳು' ಮೂಲಕವೂ ಗಮನ ಸೆಳೆದರು. ಆದರೆ ನಂತರದ ಕಾದಂಬರಿ 'ಬಾಲಗೋಪಾಲ' ಯಾಕೋ ಓದುಗರನ್ನು ಆಕರ್ಷಿಸಲೇ ಇಲ್ಲ. 'ಚರಕ-ದೇಸಿ'ಗಳ ರೂವಾರಿಯಾದ ಇವರ ಹೊಸ ಪುಸ್ತಕ 'ಯಂತ್ರಗಳನ್ನು ಕಳಚೋಣ ಬನ್ನಿ'. ಕಳೆದೆರಡು ದಶಕಗಳ ಯಂತ್ರ ನಾಗರಿಕತೆಯ ಸಾಂಸ್ಕೃತಿಕ ಆಯಾಮವನ್ನು ವಿಶ್ಲೇಷಿಸುವುದು ಇದರಲ್ಲಿನ ಮುಖ್ಯ ಉದ್ದೇಶವಂತೆ. ಯಂತ್ರ-ಗ್ರಾಮ ಸ್ವರಾಜ್ಯ-ಧರ್ಮ ಸಂಕಟ ಎಂಬ ಮೂರು ಭಾಗಗಳಲ್ಲಿರುವ ೨೩೫ ಪುಟಗಳ ಪುಸ್ತಕವಿದು. ಬೆಲೆ ರೂ.೧೪೦. ತಮ್ಮ ಪುಸ್ತಕಗಳ ಮುಖಪುಟವನ್ನು ತಾವೇ ವಿನ್ಯಾಸ ಮಾಡಬಲ್ಲ ಕೆ.ವಿ.ಅಕ್ಷರ, ನಾಗರಾಜ ವಸ್ತಾರೆಯವರಂತೆ, ಪ್ರಸನ್ನ ಕೂಡಾ ಆ ಕೆಲಸ ಮಾಡುತ್ತಿದ್ದಾರೆ. ಎಲ್ಲೆಲ್ಲೂ ಯಂತ್ರಗಳ ಬಳಕೆಯಿರುವ ಈ ದಿನಗಳಲ್ಲಿ ಅವುಗಳನ್ನು ಕಳಚುವುದೊ, ಅವುಗಳಿಂದ ಕಳಚಿಕೊಳ್ಳುವುದೋ ಸುಲಭವಲ್ಲ. ಆದರೆ 'ಹೊಡಿಬಡಿ'ಗಿಂತ ಭಿನ್ನವಾಗಿ, ಸರಳ-ಉದ್ವೇಗರಹಿತ ಶೈಲಿಯಲ್ಲಿ ವಿಚಾರಗಳನ್ನು ಮಂಡಿಸುವ ಇವರ ದಾರಿಗೆ, ಯಂತ್ರಗಳನ್ನು ಕಳಚುವ ಶಕ್ತಿ ಬಂದರೆ ಆಚ್ಚರಿಯಿಲ್ಲ. 'ಈಗ ವಿಜ್ಞಾನವನ್ನು ಯಂತ್ರಗಳ ಕಪಿಮುಷ್ಠಿಯಿಂದ ಬಿಡಿಸಬೇಕಾಗಿದೆ', 'ಊನವಿಲ್ಲದಿರುವುದೇ ಯಂತ್ರಗಳ ಊನ' ಎನ್ನುವ ಲೇಖಕರ ಈ ಪುಸ್ತಕ, ಕನ್ನಡದ ಎಲ್ಲ ಗದ್ಯ ರೂಪಕ್ಕಿಂತ ಅನನ್ಯವಾಗಿದೆ. `ಹಣ ಮಾಡುವುದು ಹೇಗೆ?, ಉದ್ಯಮ ಕಟ್ಟುವುದು ಹೇಗೆ?' ಇತ್ಯಾದಿ ಪುಸ್ತಕಗಳೇ ಬರುತ್ತಿರುವ ಕಾಲ ಇದು. ಮಾನವನನ್ನೇ ಯಂತ್ರ ಮುಖೇನ ಸೃಷ್ಟಿಸಲು ಹೊರಟಿರುವ ಆಧುನಿಕೋತ್ತರ ಸಮಯ ಇದು. ಇಂತಹ ಇಕ್ಕಟ್ಟಿನಲ್ಲಿ, ಕತೆ-ಕಾವ್ಯ-ಕಾದಂಬರಿ-ವಿಮರ್ಶೆ-ವೈಚಾರಿಕ ಲೇಖನ ಮೊದಲಾದ ಪ್ರಕಾರಗಳ ಶೈಲಿ ತೊರೆದು ರೂಪಿತವಾಗಿರುವ ಈ ಪುಸ್ತಕ, ಕನ್ನಡಿಗರೆಲ್ಲ ಓದಬಹುದಾದಂಥದ್ದು. ಸಂಪರ್ಕಕ್ಕೆ desiprasanna@gmail.com. ಪುಸ್ತಕ ಓದಿ, ಚಾರ್ಲಿ ಚಾಪ್ಲಿನ್‌ನ 'ಮಾಡರ್ನ್ ಟೈಮ್ಸ್' ಸಿನಿಮಾ ಇನ್ನೊಮ್ಮೆ ನೋಡಿ !

Read more...

August 07, 2009

ಚಂಪಕಾವತಿ ಎಕ್ಸ್‌ಕ್ಲೂಸಿವ್ !

ನೇಹಿಗರೆ,
೨೦೦೯ರ ಆಗಸ್ಟ್ ೮ಕ್ಕೆ 'ಚಂಪಕಾವತಿ’ ಎರಡು ವರ್ಷ ತುಂಬಿ ಮೂರನೇ ವರ್ಷಕ್ಕೆ ಕಾಲಿಟ್ಟಿದೆ. ಮೊದಲ ವರ್ಷದ ಹುಮ್ಮಸ್ಸು ಎರಡನೇ ವರ್ಷದಲ್ಲಿ ಕುಂದಿದ್ದು ಹೌದು. ಆದರೆ ಪೂರ್ತಿ ಉಡುಗದ ಉತ್ಸಾಹ ಈ ತಾಣವನ್ನು ಜೀವಂತವಾಗಿರಿಸಿದೆ. 'ಎಂಥ ದಿನಗಳು ಕಳೆದವೋ, ಇನ್ನಂಥ ದಿನಗಳು ಬಾರವೋ’ ಎಂಬ ಕವಿ ಸುಬ್ರಾಯ ಚೊಕ್ಕಾಡಿಯವರ ಹಾಡನ್ನು ಬದುಕಿನ ಕೊನೆಯವರೆಗೂ ನಾವು ಹಾಡಿಕೊಳ್ಳೋಣ ! ಹೀಗೆ ಸುಮ್ಮನೆ ನನ್ನದೇ ಬ್ಲಾಗ್ ಮಂಡಲದ ತಲೆ ಸವರುತ್ತಾ ಕುಳಿತಿದ್ದೆ . ಆಗ 'ಚಂಪಕಾವತಿ'ಯಲ್ಲಿ ಸಿಕ್ಕ ಟಾಪ್ 'ಹತ್ತು ಮತ್ತು ಒಂದು' - ಹನ್ನೊಂದು ಇಷ್ಟದ ಪೋಸ್ಟ್‌ಗಳನ್ನು ಇಲ್ಲಿ ನೀಡುತ್ತಿದ್ದೇನೆ. ಈ ಪಟ್ಟಿ ಮಾಡುವಾಗ, ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಬರಹಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಹಾಗಾಗಿ ಇವು ಚಂಪಕಾವತಿಯ ಎಕ್ಸ್‌ಕ್ಲೂಸಿವ್ ಪೋಸ್ಟ್‌ಗಳು ! ಪ್ರಕಟಿಸಿದ ದಿನಾಂಕಕ್ಕೆ ಅನುಗುಣವಾಗಿ ಜೋಡಿಸಿದ್ದೇನೆ. ಸಂಗ್ರಹಿತ ಬರೆಹಗಳೂ ಇದರಲ್ಲಿ ಸ್ಥಾನ ಪಡೆದಿವೆ. ಈ ಮರುಶೋಧದಲ್ಲಿ ಹಳೆಯ ರುಚಿ-ಪರಿಮಳ ನಿಮ್ಮನ್ನು ತಾಕಲಿ. ಮೂರನೇ ವರ್ಷದ ಸಂಭ್ರಮಕ್ಕೆ, ಮೂರನೇ ಸ್ಥಾನ ಪಡೆದವರನ್ನೇ ವಿನ್ನರ್‍ಸ್ ಪೋಡಿಯಂನಲ್ಲಿ ಮೇಲೆ ಕೂರಿಸಿದ್ದೇನೆ ! ನಮಗೆ ಒಳ್ಳೆಯದಾಗಲಿ, ನಮ್ಮಿಂದ ಒಳ್ಳೆಯದಾಗಲಿ. - ಚಂ

1.ರಾಮನೇ ತುಂಡರಿಸಿದ ಸೇತು ನಮಗೆ ಬೇಕೆ ?
ಧನುಷ್ಕೋಟಿಯಲ್ಲಿ ಕಪಿಯೊಂದು ರಾಮಧ್ಯಾನ ನಿರತವಾಗಿದೆ. ತೀರ್ಥಯಾತ್ರೆ ಮಾಡುತ್ತ ಬಂದ ಅರ್ಜುನ ಅದನ್ನು ಮಾತಾಡಿಸುತ್ತಾನೆ. ಬಡ ಜುಣುಗಿನಂತಿದ್ದ ಆ ಮಂಗ, ತಾನು ಹನುಮಂತನೆಂದು ಹೇಳಿಕೊಳ್ಳುತ್ತದೆ ! ಆದರೆ ಅರ್ಜುನ ನಂಬಿಯಾನೆ? ಅವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು, ಆ ಕಪಿಯು ಹನುಮಂತ ಹೌದೋ ಅಲ್ಲವೋ ಎಂಬುದಕ್ಕಿಂತ ಹೆಚ್ಚಾಗಿ, ಸಮುದ್ರಕ್ಕೆ ಸೇತುವೆ ಕಟ್ಟುವುದು ದೊಡ್ಡ ವಿಷಯವಲ್ಲವೆಂದೂ, ತಾನೀಗ ಬಾಣದಲ್ಲೇ ಸಮುದ್ರಕ್ಕೆ ಸೇತುವೆ ಕಟ್ಟಬಲ್ಲೆನೆಂದೂ ಅರ್ಜುನ ಹೇಳುತ್ತಾನೆ. ಇದು ಅವರಿಬ್ಬರ ಮಧ್ಯೆ ಪಂಥಕ್ಕೆ ಕಾರಣವಾಗುತ್ತದೆ...

2.'ಅದಾಗಿ’ ನೀವು ಕ್ಷೇಮವೇ?
ಒಂದೇ ಬೆರಳಿನಲ್ಲಿ ಆಸ್ಟ್ರೇಲಿಯಾವನ್ನೇ ಎತ್ತಿ ಹಿಡಿದ 'ಕಾಂಗರೋದ್ಧಾರಿ’ ನೀಲಮೇಘಶ್ಯಾಮ ಬಕ್ನರನಿಗೆ ಪ್ರಣಾಮಗಳು. ಅಣ್ಣ ಬಲರಾಮನಂತಿರುವ 'ಬೆಣ್ಣೆಮುದ್ದೆ’ ಬನ್ಸನನಿಗೆ ವಂದನೆಗಳು. ಹುಬ್ಬಳ್ಳಿಯವರ ಬಾಯಲ್ಲಿ 'ಪಾಂಟಿಂಗ’ , ದ.ಕ.ದವರ ಬಾಯಲ್ಲಿ ಪಟಿಂಗನಾಗಿರುವ ನಾಯಕನ ಕುಶಲ ವಿಚಾರಿಸಿರುವೆವು.ಅದಾಗಿ ನಾವು ಕ್ಷೇಮ. 'ಅದಾಗಿ’ ನೀವು ಕ್ಷೇಮವೇ?!....

3.ಪೇಟೆಯ ಪಾಡ್ದನ
ಲಕಲಕಿಸುವ ಈ ನಗರಕ್ಕೊಂದು
ಬೆದರಿದ ಬೆದರುಗೊಂಬೆ ಬೇಕು.
ಇಲ್ಲಾ ದೃಷ್ಟಿಯಾದೀತು ಅಥವಾ ನಿಮ್ಮ ದೃಷ್ಟಿ ಹೋದೀತು....

4.ಬೆಳ್ಳೇಕೆರೆಯ ಹಳ್ಳಿ ಥೇಟರ್
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಒಂದು ಹಳ್ಳಿ ಬೆಳ್ಳೇಕೆರೆ. ಸಕಲೇಶಪುರ-ಮೂಡಿಗೆರೆ ರಸ್ತೆಯಲ್ಲಿರುವ ಬೆಳ್ಳೇಕೆರೆಯಲ್ಲಿ ನಾಲ್ಕೈದು ಅಂಗಡಿ-ಹೋಟೆಲ್‌ಗಳಿವೆ. ಅದಕ್ಕಿಂತ ಒಂದು ಕಿಮೀ ಹಿಂದೆ ಸಿಗುವುದು ರಕ್ಷಿದಿ. ಅಲ್ಲಿ ಎರಡು ಅಂಗಡಿ, ಸಣ್ಣದೊಂದು ಹೋಟೆಲು, ಪ್ರೈಮರಿ ಸ್ಕೂಲು...

5.ಗೋ.....ವಾ!
ಅಲ್ಲಿ ಇಲ್ಲದ್ದು ಇರಲಿಲ್ಲ. ಕೊಂಚ ಅತ್ತಿತ್ತ ಸರಿದರೂ ಆ ದಪ್ಪನೆಯ ಹಾಸಿಗೆ ಏರಿಳಿಯುತ್ತಿತ್ತು. ಸಮುದ್ರದಲ್ಲೇ ಇದ್ದೇನೋ ಅಂತ ಮಂಚದ ಕೆಳಗೆ ಕೈಯಾಡಿಸಿ ನೋಡಿಕೊಂಡೆ ! ಎದ್ದು ಟಿವಿ ಹಾಕಿದೆ, ಸರಿ ಹೋಗಲಿಲ್ಲ. ಬಾತ್‌ಟಬ್‌ನಲ್ಲಿ ಬಿದ್ದುಕೊಂಡು ಸ್ನಾನ ಮಾಡಿದ್ದು ಸರಿ ಅನಿಸಿರಲಿಲ್ಲ. ನಿಧಾನವಾಗಿ ದೊಡ್ಡ ಗಾಜಿನ ಬಾಗಿಲು ತೆರೆದು, ತೆಳ್ಳಗೆ ಬೆಳಕು ಹರಡಿದ್ದ ಬಾಲ್ಕನಿಗೆ ಹೋಗಿ ಸುಖಾಸೀನನಾದೆ....

6.ನೇರಳೆ ನಾಲಗೆಯ ರುಚಿ
ಆ ಬೈಗುಳ ಬರುವವರೆಗೆ ಅವರಿಬ್ಬರ ಜಗಳ ಬಹಳ ಜೋರಾಗೇನೂ ಇರಲಿಲ್ಲ. ಆಗ ಬಂತು ಆ ಮಾತು- `ನಿನ್ನ ಅಪ್ಪ ಮೂರ್ತಿ, ಕಲ್ಲಿನ ಮೂರ್ತಿ. ಜೀವ ಇಲ್ಲದವ '. ಆ ಕ್ಷಣ ನರನರಗಳೆಲ್ಲ ಸೆಟೆಸೆಟೆದು, ಕಣ್ಣುಗಳು ಅಷ್ಟಗಲ ತೆರೆಯಲ್ಪಟ್ಟು, ಮುಖ ಕೆಂಪಾಗಿ, ಕೈಗಳು ಬಿಗಿದು, ರೋಷಾವೇಶ ಮೇರೆ ಮೀರಿ, ಮಾರಾಮಾರಿ...

7.ಕಲಾಕ್ಷೇತ್ರದಲ್ಲಿ ಬೆಳಗೆರೆ ವಿಶ್ವರೂಪ
ಸಂಜೆ ೫ರ ಸುಮಾರಿಗೆ ರವಿ ಬೆಳಗೆರೆ ಎಂಬ ಅಯಸ್ಕಾಂತ ಎಲ್ಲೇ ಕಾಣಿಸಿಕೊಳ್ಳಲಿ, ಜನ ಸೇರಿ ಅಪ್ಪಚ್ಚಿ ಮಾಡುತ್ತಿದ್ದರು. ಅವರು ಹತ್ತು ತಲೆ, ಇಪ್ಪತ್ತು ಕೈಗಳ ರಾವಣನಾದರೂ, ಮಾತಾಡುವುದಕ್ಕೆ, ಕೈ ಕುಲುಕುವುದಕ್ಕೆ ಸಾಧ್ಯವೇ ಆಗುತ್ತಿರಲಿಲ್ಲ! ಬಾಗಿಲುಗಳಲ್ಲಿ ನಿಂತಿದ್ದ ದ್ವಾರಪಾಲಕರ ಜತೆ ಅಭಿಮಾನಿಗಳು ರೇಗಿದರು, ಬಾಗಿಲೊಂದರ ಗಾಜು ಒಡೆದರು, ಕ್ಷಣದಿಂದ ಕ್ಷಣಕ್ಕೆ ಜನಸಾಗರದ ಮಟ್ಟ ಏರುತ್ತಿತ್ತು....

8.ದಿಸ್ ಈಸ್ ನಾಟ್ ಎ ಹಿಡನ್ ಕ್ಯಾಮೆರಾ !
ಯಾವುದು ಪಟಾಕಿ ಸದ್ದು, ಯಾವುದು ಬಾಂಬಿನ ಸದ್ದು ಅಂತ ಗುರುತಿಸಲು ಈ ಬಾರಿ ನಮಗೆ ಸಾಧ್ಯವಾದೀತೆ?! ಪಟಾಕಿ ಸದ್ದನ್ನು ನಾವೆಲ್ಲ ಕೇಳಿದ್ದೇವೆ. ಆದರೆ ಬಾಂಬಿನ ನಿಜವಾದ ಸದ್ದನ್ನು ನಾವು ಬಹುತೇಕರು ಕೇಳಿಯೇ ಇಲ್ಲ. ನಮಗೆ ಗೊತ್ತಿರುವುದು, ಸಿನಿಮಾದಲ್ಲಿ ಕೇಳುವ ಅದರ ಸದ್ದು ಅಥವಾ ಅದು ಸಿಡಿದ ಮೇಲೆ ಛಿದ್ರ ಛಿದ್ರವಾದ ದೇಹಗಳ ದೃಶ್ಯ. ಕ್ಷಣ ಮಾತ್ರದಲ್ಲಿ ಗುಜರಿ ಅಂಗಡಿಯಂತಾಗುವ ಅತ್ಯಾಧುನಿಕ ಶಾಪ್‌ಗಳು. ಟಿವಿ ವಾಹಿನಿಗಳು ಪದೇಪದೆ ಬಿತ್ತರಿಸುವ ಆರ್ತನಾದ- ಕೆದರಿದ ಕೂದಲು- ಅಂದಗೆಟ್ಟ ಮುಖಗಳ ದೃಶ್ಯ...ಇಷ್ಟೇ....

9.ಅಶ್ವತ್ಥಾಮನ ಅಪ್ಪ ದ್ರೋಣ ಭಟ್ರು ಹೇಗಿದ್ದಾರೆ?
ಪ್ರೀತಿಯ ಪ್ರೇಮ,
ಮೇಜಿನ ಮೇಲೆ ೪-೫ ಕಾಗದಗಳು. ಎಲ್ಲವೂ ನನಗೇ! ಬಾಚಿ ಬಾಚಿ ತಕೊಂಡೆ. ಖುಶಿ ಆಯ್ತು. ಉಮಾ, ಸಾವಿತ್ರಿ, ಸತ್ಯ, ಕುಮಾರ-ಅರೇ ಪುಟ್ಟಕ್ಕಯ್ಯ, ಆಕೆಯೂ ಉತ್ತರ ಕೊಟ್ಟುಬಿಟ್ಟಳು ! ವರ್ಷಗಳ ನಂತರ ಬಂದ ಅವಳ ಕಾಗದ. ಹನುಮಂತ, ರಾಮ, ಶಬರಿ ಅಬ್ಬಬ್ಬಾ ಒಳ್ಳೊಳ್ಳೆಯ ಹೆಸರೇ ಸಿಕ್ಕಿದೆ ನಿಮಗೆ. ನಮ್ಮಮ್ಮ ಬಂದ ಕಾಗದ ಎಲ್ಲ ಓದಿಕೊಂಡು, ರಾಮ, ಕೃಷ್ಣ ಅಂತ ಇಡ್ಳಿ ತಿಂತಿತ್ತು. ಅಂತೂ ಅವನ ಅಮ್ಮನ ಹೊಟ್ಟೆಯಲ್ಲಿ ಆರಾಮವಾಗಿ ಬೆಚ್ಚಗೆ ಕೂತು, ಎಲ್ಲರನ್ನೂ ಬಹಳ ಕಾಯುವಂತೆ ಮಾಡಿದ. ಮಹಾತುಂಟನಾಗ್ತಾನೋ ಏನೋ ಪೋರ. ಎಲ್ಲ ಕಾಗದಗಳೂ ಇವತ್ತು ಬೆಳಗ್ಗೆ ತಲುಪಿದ್ದು ಇಲ್ಲಿಗೆ. ರಾಧೆ-ಉಮಾ ಶುಕ್ರವಾರ ಬಂದ ಮೇಲೆ ಮುಂದಿನ-ಹಿಂದಿನ ಸುದ್ದಿಗಳು ನನಗೆ ಸಿಕ್ಕಬೇಕು....

10.ಹೆಂಗಿದ್ದ ಹೆಂಗಾದ ಗೊತ್ತಾ....?
ಕೋಟಿತೀರ್ಥಗಳಲ್ಲಿ ಮಿಂದೆದ್ದು ಬಂದಿರುವ ಈ ಕತೆಗಾರ ಕವಿ, ನೀಲಿಮಳೆಯಲ್ಲೂ ನೆನೆಯಬಲ್ಲ. ಶ್ರಾವಣದ ಮಧ್ಯಾಹ್ನದಲ್ಲೂ ಗೆಳೆಯರೊಡನೆ ಪೋಲಿ ಜೋಕುಗಳನ್ನು ಸಿಡಿಸಬಲ್ಲ......

11.ಕತ್ತಲಲ್ಲಿ ಸಿಕ್ಕಿದಂತೆ
ಮೊನ್ನೆಮೊನ್ನೆ ಒಂದು ರಾತ್ರಿ. ಬಹಳ ಅಪರೂಪಕ್ಕೆ ಕೈಗೊಂದು ಕ್ಯಾಮೆರಾ ಬಂತು. ಆಗ ಸಿಕ್ಕವು ಇಲ್ಲಿವೆ. ಹಾಗೆ ಸುಮ್ಮನೆ ಛಕ್‌ಛಕಾಛಕ್ ನೋಡಿ, ಹೋಗಿಬಿಡಿ !

Read more...

August 01, 2009

ಈ ಸರ್ತಿ ಕಡಲ್ ಮುರ್‌ಕುಂಡು

ಮಳೆಯ ರಾಗ ಇನ್ನೂ ಕಿವಿ ತಮಟೆಯಿಂದ ದೂರವಾಗಿಲ್ಲ. ‘ಈ ಸರ್ತಿ ಕಡಲ್ ಮುರ್‍ಕುಂಡು ತೋಜುಂಡು’ ( ಈ ಸಲ ಕಡಲು ಮುಳುಗುತ್ತದೆ ಅಂತ ಕಾಣ್ಸತ್ತೆ) ಅಂತ ಕೆಲಸದ ಮಲ್ಲ ಪ್ರತೀ ದಿನ ಹೇಳುತ್ತಿದ್ದಾನೆ. ಅಡಿಗರು ಅಂದಂತೆ -ಕಡಲ ಪಡಖಾನೆಯಲ್ಲಂತೂ ನೊರೆಗರೆವ ವಿಸ್ಕಿ ಸೋಡಾ ಕುಡಿದ ಗಾಳಿ ಮತ್ತಿನಲ್ಲಿ ಗಮ್ಮತ್ತಿನಲಿ ತೂರಾಡುತ್ತಿದೆ. ಪಂಜೆಯವರ ತೆಂಕಣ ಗಾಳಿಯಾಟ ಹೆಗಲ ಮೇಲಿನ ಶಾಲನ್ನು ರುಂಮ್ಮನೆ ಎತ್ತಿ ಹಾರಿಸುತ್ತಿದೆ. ಶವರ್ ಬಾತ್‌ನಲ್ಲಿ ಒಮ್ಮೆಗೆ ಪೂರ್ತಿ ನೀರು ಬಿಟ್ಟರೆ ಬರುತ್ತದಲ್ಲ, ಹಾಗೆ ಪಕ್ಕನೆ ದಿರಿದಿರಿ ಸುರಿವ ಮಳೆಗೆ ಪೂರ್ತಿ ರಭಸ. ಮಣ್ಣೆಲ್ಲ ತಚಪಚ ಹಾರಿ ನೀರು ಮಂದವಾಗಬೇಕು, ಹಾಗೆ. ಸಾಯಂಕಾಲವಂತೂ, ಕತ್ತಲನ್ನೂ ಮಳೆಯನ್ನೂ ದೂರದಿಂದ ಸೆಳೆದು ತರುವ ಗಾಳಿಯ ಸದ್ದನ್ನು ಆಲಿಸುವುದೇ ಒಂದು ದಿವ್ಯ ಅನುಭವ. ಗ್ರಾ.....ಎಂಬ ಸದ್ದು ಕೆಲವೊಮ್ಮೆ ಐದು ನಿಮಿಷಗಳವರೆಗೂ ಕೇಳಿ, ಬಳಿಕವಷ್ಟೇ ಮಳೆಯು ಮನೆ ಅಂಗಳ ತಲುಪುವುದುಂಟು. ಒಮ್ಮೆ ಬೆಂಗಳೂರಿನಿಂದ ಬಂದಿದ್ದ ದೊಡ್ಡಪ್ಪ, ತಮ್ಮ ಪುಟ್ಟದಾದ, ಆದರೆ ಬಹಳ ಬೆಲೆ ಬಾಳುವ ಪ್ಯಾನಸೊನಿಕ್ ರೆಕಾರ್ಡರ್‌ನಲ್ಲಿ ಆ ಧ್ವನಿಯನ್ನು ಹಿಡಿದಿಟ್ಟುಕೊಂಡಿದ್ದರು. ಮಳೆ ನಿಂತ ಮೇಲೆ ಅದನ್ನು ಕೇಳಿದಾಗ ಮಾತ್ರ, ಸರಿಯಾಗಿ ಸಿಗ್ನಲ್ ಸಿಗದ ಹಳೆ ರೇಡಿಯೊದ ಸದ್ದಿನಂತೆ, ಕರ್ಕಶವಾಗಿ ಕೇಳುತ್ತಿತ್ತು ! ಕರಾವಳಿಯ ಈ ಮಳೆಯ ಸದ್ದು, ರುಚಿ, ಪರಿಮಳಗಳನ್ನೆಲ್ಲ ಹಿಡಿದಿಡುವುದು ಸಾಧ್ಯವೆ ?

ಬಹಳ ಆಶ್ಚರ್ಯದ ಸಂಗತಿಯೆಂದರೆ, ಅಡಿಕೆಗೆ ಕೊಳೆ ರೋಗ ಬಾರದ ಹಾಗೆ ಔಷಧ ಸಿಂಪಡಿಸಿ ಆಯ್ತಾ, ಸೌದೆ ಬೇಕಾದಷ್ಟು ಕೊಟ್ಟಿಗೆಗೆ ಬಂತಾ, ಮರದಿಂದ ತೆಂಗಿನಕಾಯಿ ತೆಗೆದಾಯ್ತಾ, ಇತ್ಯಾದಿ ಪ್ರಶ್ನೆಗಳನ್ನು ಕೇಳುವವರೇ ಬಹಳ ಕಡಿಮೆ. ತುಂಬ ಜನ ಜಾಗ ಮಾರಿ ಪೇಟೆಗೆ ಹೊರಟಿರೋದ್ರಿಂದ, ಮಕ್ಕಳೆಲ್ಲ ಸಿಟಿ ಸೇರಿದ್ದರಿಂದ, ತೋಟದ ಬಗ್ಗೆ ಹೆಚ್ಚಿನ ನಿಗಾ ಇಲ್ಲವೇನೋ. ಸಾಮೂಹಿಕ ಪೂಜೆ-ಆಚರಣೆಗಳಂತೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆ, ಹೊಸ ರೂಪಗಳಲ್ಲಿ ಬರುತ್ತಿವೆ. ಆದರೆ ಸಾಂಸ್ಕೃತಿಕ, ರಾಜಕೀಯ, ಧಾರ್ಮಿಕ ವಿಚಾರಗಳಲ್ಲೆಲ್ಲ ಹಿಂದಿದ್ದ ಘನತೆ ಮಾಯವಾಗುತ್ತಿದೆಯಾ? ಪಡಪೋಸಿಗಳೆಲ್ಲ ಹೀರೊಗಳಂತೆ ಬಿಂಬಿಸಲ್ಪಡುತ್ತಿದ್ದಾರಾ? ಇದು ಸಂಪರ್ಕ ಕ್ರಾಂತಿಯ ಫಲಶ್ರುತಿಯಾ? ಅಂತೆಲ್ಲ ಪ್ರಶ್ನೆಗಳು. ಉತ್ತರವೇನೇ ಇರಲಿ, ಊರಿನ ಪ್ರಜ್ಞೆಯ ಮಟ್ಟ ಮಾತ್ರ ದಿನೇದಿನೆ ಕೆಳಗಿಳಿಯುತ್ತಿರುವಂತೆ ಭಾಸವಾಗುತ್ತಿದೆ.

ಟೆಲಿಫೋನ್, ಮೊಬೈಲು, ಇಂಟರ್‌ನೆಟ್, ಟಿವಿ, ಪತ್ರಿಕೆಗಳು ಮನೆಮನೆಗಳಿಗೆ ಹೊಕ್ಕಿರುವುದರಿಂದ ಪ್ರಚಾರವೀಗ ಸುಲಭದ ಬಾಬತ್ತು. ಮುನ್ನುಗ್ಗಿದವನಿಗೆ ಮಣೆ. ಅವನಿಗಿಲ್ಲ ಎಣೆ. ದೇವಸ್ಥಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿಬೇಕಾದರೆ, ‘ ಏನು ಮಾಡಬಹುದು ಅಂತ ಓ ಅವರಲ್ಲಿ ಕೇಳೋಣ. ಅವರಿಗೆ ನೋಡಿ- ಕೇಳಿ ಅನುಭವವಿದೆ.’ ಅಂತೇನೂ ಈಗ ಇಲ್ಲ. ಎಲ್ಲವೂ ಒಬ್ಬರಿಗೇ ಗೊತ್ತಿದೆ ! ಸಭಾ ಕಾರ್ಯಕ್ರಮಗಳಿಗೆ ಚೆನ್ನಾಗಿ ಮಾತನಾಡುವವರು ಬೇಕಾಗಿಲ್ಲ. ಅವರಿಂದ ತಮ್ಮ ಸಂಸ್ಥೆಗೆ ಏನು ಲಾಭವಾದೀತು ಅನ್ನೋದಷ್ಟೇ ಲೆಕ್ಕಾಚಾರ. ಮಂಗಳೂರು ಆಕಾಶವಾಣಿಯಲ್ಲಿ ಬುಧವಾರ ರಾತ್ರಿ ಒಂಬತ್ತೂವರೆಗೆ ಬರುವ ಯಕ್ಷಗಾನ ತಾಳಮದ್ದಳೆಯನ್ನು ಈಗಲೂ ಕೇಳುವನು ಕ್ಷೌರಿಕ ದಾಮೋದರ ಒಬ್ಬನೇ ಇರಬೇಕು. ಅದರ ಬಗ್ಗೆ ಮಾತಾಡುವುದಕ್ಕಂತೂ ಅವನಿಗೆ ಜನವೇ ಇಲ್ಲ. ಸಾಹಿತ್ಯ ಸಮ್ಮೇಳನ ನಡೆಯುತ್ತಲೇ ಇದೆಯಾದರೂ, ಒಂದು ಒಳ್ಳೆಯ ಹೊಸ ಪುಸ್ತಕ ಬಂದ ಉದಾಹರಣೆ ಇಲ್ಲ. ಧಾರ್ಮಿಕತೆ ಅನ್ನುವುದಂತೂ ಜನರ ರೊಚ್ಚಿಗೆಬ್ಬಿಸುವುದಕ್ಕಷ್ಟೇ ಸೀಮಿತ. ಸರಕಾರಿ ಶಾಲೆಗಳೆಲ್ಲ ಜೀವ ಕಳಕೊಂಡಿರುವುದರಿಂದ ಅಲ್ಲೂ ಊರಿನ ಜನ ಒಟ್ಟಾಗುವ ಪರಿಪಾಠವಿಲ್ಲ. ಊರಿನ ಮುಖ್ಯ ಆಚರಣೆಯಾಗಿದ್ದ , ‘ಶ್ರಮದಾನ’ವೆಂಬ ಪರಿಕಲ್ಪನೆ ಗೊತ್ತೇ ಇಲ್ಲವೇನೋ ಅನ್ನುವಷ್ಟು ಕಡಿಮೆ. ಎಲ್ಲೆಡೆ ರಾಜಕೀಯ-ದುಡ್ಡು ವಿಷ ಬಳ್ಳಿಯಾಗಿ ಹಬ್ಬಿಕೊಳ್ಳುತ್ತಿದೆ. ಊರಿಗೆ ಯಾವ ಶಾಪ ತಟ್ಟಿದೆ? ಬೆಳ್ಳಂಬೆಳಗ್ಗೆ ‘ಜಾಲಹಳ್ಳಿ ಜಾಲಹಳ್ಳಿ ಕ್ರಾಸ್’ ಅಂತ ಕಂಡಕ್ಟರ್ ಕೂಗಿದಾಗ ಅರೆ ಎಚ್ಚರವಾಗಿ, ನರಕದ ಬಾಗಿಲಲ್ಲಿ ಯಮದೂತ ಕೂಗಿದ ಹಾಗಾಗುತ್ತದೆ !’ ಅಂದಿದ್ದರು ಜಯಂತ ಕಾಯ್ಕಿಣಿ. ಆದರೆ ಊರಿನ ಮುಖ್ಯ ಭಾವವಾದ ಆಪ್ತತೆಯೇ ಅಲ್ಲಿ ಕಳೆದುಹೋಗುತ್ತಿದೆಯಾ? ಕೂಡಿ ಬಾಳುವ ಸುಖ ಮುಖ್ಯವಲ್ಲ ಅನ್ನಿಸಿದೆಯಾ? ಮೊನ್ನೆ ಮೊನ್ನೆ ಊರಿಗೆ ಹೋಗಿ ಬಂದ ಮೇಲೆ ಹೀಗೆಲ್ಲ ಅನ್ನಿಸತೊಡಗಿದೆ. ನಿಮಗೆ?

ಜಿರೀ......ಅಂತ ಮಳೆ ಒಂದೇ ಸಮನೆ ಸುರಿಯುತ್ತಿದೆ. ಹೊಸ ಕಾಲದ ಬದುಕಿಗೆ ಕಡಲನ್ನೇ ಮುಳುಗಿಸುವ ಸಾಮರ್ಥ್ಯವಿದೆ. ಹೌದು, ಇನ್ನೇನು ಕಡಲು ಮುಳುಗಿದರೂ ಮುಳುಗೀತು. ನಿಮ್ಮ ನಿಮ್ಮ ನೌಕೆ ಏರಿ ಭದ್ರಪಡಿಸಿಕೊಳ್ಳಿ ಆಯಿತಾ?!

Read more...

July 24, 2009

ಮಾತು ಮಾತು ಮಥಿಸಿ...

ಆಮಂತ್ರಣ ಪತ್ರಿಕೆ ವಿನ್ಯಾಸ : ಚಂಪಕಾವತಿ

Read more...

July 19, 2009

ಶ್ರೀ ಮತ್ತು ಸಾಮಾನ್ಯ ! - 'ದೇಶಕಾಲ'ದ ಪರೀಕ್ಷೆ

'ಈ ಹತ್ತಿಪ್ಪತ್ತು ವರ್ಷಗಳಿಂದ ದೊಡ್ಡ ಬದಲಾವಣೆಯ ಗಾಳಿಗೆ ತೆರೆದುಕೊಂಡಿರುವ ನಮ್ಮ ಬದುಕು, ಕಳೆದ ಒಂದೆರಡು ವರ್ಷಗಳೀಚೆಗಂತೂ ಬಿರುಗಾಳಿಯ ಅಲ್ಲೋಲಕಲ್ಲೋಲವನ್ನೇ ಕಾಣತೊಡಗಿದೆ. ಬೆಲೆಗಳು, ರಾಜಕೀಯ ವಿದ್ಯಮಾನಗಳು, ಸಾಮಾಜಿಕ-ಸಾಂಸ್ಕೃತಿಕ ತಲ್ಲಣಗಳೆಲ್ಲ ಕೂಡಿರುವ ಈ ವಿದ್ಯಮಾನಗಳು ಸಾಮಾನ್ಯರಲ್ಲಿ ಸಾಮಾನ್ಯರನ್ನೂ ತಾಗದೆ ಬಿಟ್ಟಿಲ್ಲ. ಹಾಗಿದ್ದರೂ, ನಿಜವಾಗಿ ಈ ಅಲ್ಲೋಲಕಲ್ಲೋಲವು ತಥಾಕಥಿತ ‘ಸಾಮಾನ್ಯ’ರನ್ನು ಹೇಗೆ ತಾಗಿದೆ, ಅವರು ಅದಕ್ಕೆ ಯಾವೆಲ್ಲ ಬಗೆಗಳಿಂದ ಪ್ರತಿಸ್ಪಂದಿಸುತ್ತಿದ್ದಾರೆ, ಕಡೆಗೂ ಇವೆಲ್ಲದರೊಡನೆ ಹೇಗೆ ಹೊಂದಿ ಬದುಕುತ್ತಿದ್ದಾರೆ - ಇತ್ಯಾದಿ ವಿಚಾರಗಳು ಕನ್ನಡ ನಾಡಿನ ‘ಬುದ್ಧಿವಂತ’ ವರ್ಗಕ್ಕೆ ಇನ್ನೂ ಅರ್ಥವಾಗದೇ ಉಳಿದಿರುವ ವಿಚಾರ. ಆದ್ದರಿಂದ ಇಂಥ ‘ಸಾಮಾನ್ಯರ ಅಸಾಮಾನ್ಯತೆ’ಯನ್ನು ಕಂಡುಕೊಳ್ಳುವ ದಿಶೆಯಲ್ಲಿ ಈ ಬಾರಿಯ ‘ಸಮಯ ಪರೀಕ್ಷೆ’ಯು ಪ್ರಸ್ತುತ ಪ್ರಯತ್ನಕ್ಕೆ ಕೈಹಚ್ಚಿದೆ.’ ಎನ್ನುತ್ತಾರೆ ಅನುಭವಿ ರಂಗಕರ್ಮಿ-ಬರಹಗಾರ ಕೆ.ವಿ. ಅಕ್ಷರ. ಹೀಗೆ ಈ ಬಾರಿಯ ‘ದೇಶಕಾಲ’ (ಜುಲೈ-ಸೆಪ್ಟೆಂಬರ್) ಸಂಚಿಕೆಯ ‘ಸಮಯ ಪರೀಕ್ಷೆ’ ಅಂಕಣ, ತೀರ ಹೊಸದಾಗಿ ವರ್ತಮಾನದೊಂದಿಗೆ ಮುಖಾಮುಖಿಯಾಗಿದೆ. ಅಲ್ಲಿರುವ ಐದು ಸಂದರ್ಶನಗಳಲ್ಲಿ, ಕರಾವಳಿಯ ದೇವಾಲಯವೊಂದರ ಅರ್ಚಕ ದಂಪತಿಯನ್ನು ಹಿರಿಯ ಲೇಖಕಿ ವೈದೇಹಿ ಮಾತಾಡಿಸಿರುವುದು ಎಲ್ಲವುಗಳಲ್ಲಿ ಅತ್ಯುತ್ತಮ. ವಿಷಯ ಮತ್ತು ನಿರೂಪಣೆಯಲ್ಲಿ, ಆಯೋಜಕ ಕೆ.ವಿ. ಅಕ್ಷರ ಅವರ ಆಶಯವನ್ನು ಪೂರೈಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಅಲ್ಲಿ ಭಟ್ಟರು ಆಡುವ ಕೆಲವು ಮಾತುಗಳಂತೂ, ಬಹಳ ವಿಶೇಷವಾಗಿವೆ. ಪ್ಲೀಸ್ ಓದಿ.

ಭಟ್ಟರು : ‘ಮುಂಚೇ...ಶಾಲೆ ಕಾಲೇಜು ವಿದ್ಯೆ ಏನು ಇಲ್ಲದಿದ್ದಾಗ ಇಷ್ಟೆಲ್ಲ ಪೇಟೆ ಇತ್ತ? ಮನೆಗಳಿತ್ತ? ಈ ತೋಟ ಗೀಟ ಗದ್ದೆ ಮಾಯವಾಗುವುದಕ್ಕೆ ಮೂಲದಲ್ಲಿರುವುದು ನಮ್ಮ ಶಾಲೆ ಕಾಲೇಜುಗಳೇ. ಯಾರಿಗೂ ಬೇಡ ಅವೀಗ. ಅದು ಮಾತ್ರ ಅಲ್ಲ, ದೇವರು ಬೇಡ, ಧರ್ಮ ಬೇಡ. ಅಮ್ಮ ಬೇಡ, ಅಪ್ಪ ಬೇಡ. ಅಂತೆಲ್ಲ ಬರುವುದು, ತೋಟ ಗದ್ದೆ ಮರ ಗಿಡ ಬೇಡ ಅಂತಾದಾಗಲೇ. ಬೇಕಾದರೆ ದೃಷ್ಟಾಂತ ನೋಡಿ. ಇದು, ಒಂದು. ಆಯಿತ? ಇನ್ನು ಎರಡು- ನಿಮಗೆ ಧರ್ಮ ನಿಜವಾಗಿ ಬೇಕಿದ್ದರೆ ನೀವು ಯಾವ ಧರ್ಮವನ್ನೂ ಮುಟ್ಟುವ ಅಧಿಕಕ್ಕೆ ಹೋಗುವುದಿಲ್ಲ. ನನ್ನ ಕೇಳಿದರೆ, ಬೇರೆಯವರ ಪೂಜಾ ಸ್ಥಳ ಒಡೆಯುವುದು ಬೇರೆಯಲ್ಲ, ತಮ್ಮ ತಮ್ಮ ಪೂಜಾಸ್ಥಳ ಒಡೆಯುವುದು ಬೇರೆ ಅಲ್ಲ- ಇದು ಧರ್ಮ ಪ್ರಕಾರದ ಮಾತು. ಪರಧರ್ಮ ಸಹಿಷ್ಣುತೆ ಅಂತಾರಲ್ಲ, ಅದರಿಂದ ಈ ಮಾತು ಹೇಳುತ್ತಿಲ್ಲ. ನಮ್ಮ ಧರ್ಮದ ಮೇಲಿನ ಪ್ರೀತಿಯಿಂದಲೇ ಹೇಳುವುದು. ಅವರವರ ಧರ್ಮ ಅವರವರದಪ್ಪ. ಅದರಲ್ಲಿ ಸಹಿಸುವ ದೊಡ್ಡಸ್ತಿಕೆಯ ಮಾತು ಎಲ್ಲಿಂದ ಬಂತು? ಹಾಗಾದರೆ ನೀವು ಇದು ಬಿಟ್ಟು ಇನ್ನೊಂದು ಧರ್ಮಕ್ಕೆ ಹೋಗಿ ಅಂತ ನೀವು ಹೇಳೀರಿ. ಅದು ನನ್ನಿಂದ ಸಾಧ್ಯ ಇಲ್ಲ. ಎಂದರೆ - ನನ್ನ ಮನೆ ಬಿಟ್ಟು ನಾನು ಬೇರೆಯವರ ಮನೆಗೆ ಹೋಗುವವನಲ್ಲ - ಅಂತ ಒಂದು ಸರಳ ವ್ಯಾಖ್ಯಾನ.’

ಇಪ್ಪತ್ತು ವರುಷಗಳಿಂದ ಬೆಂಗಳೂರಿನಲ್ಲಿ ಬಿ.ಪಿ.ಒ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಸುಮಂತ ಅವರನ್ನು ಮಾತಾಡಿಸಿದ್ದಾರೆ ಕತೆಗಾರ-ಕಾದಂಬರಿಕಾರ ಅಶೋಕ ಹೆಗಡೆ. ಸುಮಂತರ ಮಾತಿನ ಭಾಗವೊಂದು ಇಲ್ಲಿದೆ - ‘ಇನ್ನು ಈವತ್ತಿನ ಯುವಜನರ ಬಗೆಗೂ ನಾನು ಕೆಲವು ಮಾತುಗಳನ್ನು ಹೇಳಬೇಕು...ಈ ಜನಾಂಗಕ್ಕೆ ತನಗೆ ಏನು ಬೇಕು ಅನ್ನುವುದು ಸ್ಪಷ್ಟವಾಗಿ ಅರಿವಿದೆ. ತಾವು ಸಲ್ಲಿಸುವ ಸೇವೆಗೆ ತಕ್ಕ ಹಣದ ಪ್ರತಿಫಲವನ್ನು ಅವರು ಅಪೇಕ್ಷಿಸುತ್ತಾರೆ. ಒಂದು ಉದಾಹರಣೆ ತೆಗೆದುಕೊಳ್ಳಿ. ನಾವು ನಮ್ಮ ತಂಡದ ಹುಡುಗರನ್ನ ಸ್ವಲ್ಪ ಖುಶಿಯಾಗಿಡಲು ಒಂದು ಪ್ರವಾಸ ಆಯೋಜಿಸಿದ್ದೆವು. ಅದಕ್ಕೆ ಸಿಂಗಾಪುರವನ್ನು ಆಯ್ಕೆ ಮಾಡಿಕೊಂಡಿದ್ದೆವು. ತಲೆಗೆ ಸರಿಸುಮಾರು ನಲವತ್ತೈದು ಸಾವಿರ ರೂಪಾಯಿ ವೆಚ್ಚದ ಯೋಜನೆಯದು. ಆದರೆ ನಾವು ಅಂತಹ ಪ್ರಸ್ತಾಪವನ್ನು ಮುಂದಿಟ್ಟಾಗ, ಅವರೇನೂ ಅಷ್ಟು ಖುಶಿಯಾದ ಹಾಗೆ ಕಾಣಲಿಲ್ಲ. ಕೊನೆಗೆ ಒಂದಿಬ್ಬರನ್ನು ಕರೆಸಿ ಕೇಳಿದಾಗ, ಈ ಪ್ರವಾಸದ ಬದಲಾಗಿ ಅದಕ್ಕೆ ವೆಚ್ಚ ಮಾಡುತ್ತಿರುವ ಹಣವನ್ನು ಸಂಬಳದ ಜತೆ ಸೇರಿಸಿಕೊಡಲು ಕೇಳಿಕೊಂಡರು. ನಾವು ಒಪ್ಪಿಕೊಳ್ಳದೆ ಬೇರೆ ದಾರಿ ಇರಲಿಲ್ಲ. ತೀರಾ ವ್ಯಾವಹಾರಿಕವಾಗಿ ದುಡಿಯುವ ಕಂಪನಿಯ ಜತೆ ಸಂಬಂಧ ಇಟ್ಟುಕೊಳ್ಳುವ ನಮ್ಮ ಹುಡುಗರು, ಇತರ ಸಂಬಂಧಗಳನ್ನು ಅದೇ ದೃಷ್ಟಿಕೋನದಿಂದ ನೋಡುತ್ತಿರಬಹುದು ಎನ್ನುವ ಸಂಶಯ ನನಗಿದೆ.'

ಕರಾವಳಿಯ ಕಿರಿ ಮಂಜೇಶ್ವರದಿಂದ ಬಂದು ಬೆಂಗಳೂರಿನಲ್ಲಿ ಗೂಡಂಗಡಿ ಇಟ್ಟುಕೊಂಡಿರುವ ಆನಂದನನ್ನು ಜಯಂತ ಕಾಯ್ಕಿಣಿ ಮಾತಾಡಿಸಿದ್ದಾರೆ. ಮೂಲತಃ ತಮಿಳುನಾಡಿನವರಾದ, ಬಹಳ ವರ್ಷಗಳಿಂದ ಹೊಸಪೇಟೆಯಲ್ಲಿರುವ ಅರ್ಮುಗಂ ಅವರನ್ನು ಪರಶುರಾಮ ಕಲಾಲ್ ಮಾತಿಗೆಳೆದಿದ್ದಾರೆ. ಎರಡು ಓದಬೇಕಾದಂಥವು. ಸಂದರ್ಶನದ ಇರಾದೆಗೆ ಸೂಚಕವಾಗಿ, ನಾವು ಕೆಳಕಂಡ ಸೂಚಕಗಳನ್ನು ರೂಪಿಸಿದ್ದೇವೆ ಅಂತ ಆರಂಭದಲ್ಲೇ ಅಕ್ಷರ ಅವರು ಹೇಳಿರುವ ಸೂಚಕಗಳು ಹೀಗಿವೆ.
*ಕಳೆದ ಒಂದೆರಡು ವರ್ಷಗಳಲ್ಲಿ ಎದುರಿಸಿದ ಬಹುದೊಡ್ಡ ಸಮಸ್ಯೆ ಸವಾಲು *ಅದನ್ನು ನಿಭಾಯಿಸಿದ ಬಗೆ; ಕಲಿತ ಪಾಠಗಳು *ಈಚೆಗೆ ನಮ್ಮ ಸುತ್ತಮುತ್ತಲಿನ ಬದುಕಿನಲ್ಲಾಗುತ್ತಿರುವ ಮುಖ್ಯವಾದ ಮಾರ್ಪಾಟು *ಮುಂದೆ ಬರಲಿರುವ ಕಾಲದ ಬಗ್ಗೆ ಇರುವ ನಿರೀಕ್ಷೆಗಳು.

ಆದರೆ ಜಿ.ರಾಜಶೇಖರ ಮತ್ತು ಕೆ. ಫಣಿರಾಜ್ ಮಾಡಿರುವ ಸಂದರ್ಶನದಲ್ಲಿ ಮಾತ್ರ, ಸಂದರ್ಶಕರ ಅಭಿಪ್ರಾಯವೇ ಮೇರೆಮೀರಿದಂತಿದೆ. ಸುರತ್ಕಲ್‌ನಲ್ಲಿ ವಾಸವಾಗಿದ್ದು ಜಾನುವಾರು ಮಾರಾಟದ ವ್ಯವಹಾರ ನಡೆಸುವ, ಈಗ ಗೋಸಂರಕ್ಷಕರಿಂದ ಹಲ್ಲೆಗೊಳಗಾಗಿ ಹಾಸಿಗೆಯಲ್ಲಿರುವ ಸುಮಾರು ಮೂವತ್ತರ ವಯಸ್ಸಿನ ನಜೀರ್ ಅವರನ್ನು ಇವರಿಬ್ಬರು ಮಾತಾಡಿಸಿದ್ದಾರೆ. ಅವರು ಬರೆದಿರುವ ಕೆಲವು ಸಾಲುಗಳನ್ನು ಓದಿ-
* ಅವರ ‘ನಜೀರ್’ ಎಂಬ ಹೆಸರು ಬೇರೆ ಏನೂ ಅಲ್ಲದಿದ್ದರೂ ಅವರು ಮುಸ್ಲಿಮ ಎಂಬುದನ್ನು ಜಗತ್ತಿಗೇ ಸಾರಿ ಹೇಳುತ್ತದೆ.
* ಅವರ ಒಬ್ಬ ತಮ್ಮ ಈ ವರ್ಷ ಪಿಯುಸಿ ಮುಗಿಸಿದ್ದಾನೆ. ಮುಂದೆ ಅವನನ್ನು ‘ಯಾವ ಲೈನಿಗೆ’ ಹಾಕಿದರೆ ಒಳ್ಳೆಯದು ಎಂದು ಹಲೀಮಾ ನಮ್ಮ ಬಳಿ ವಿಚಾರಿಸಿದರು. ನಾವು ಕಂಪ್ಯೂಟರ್ ಕೋರ್ಸ್, ಬಿಸಿನೆಸ್ ಮ್ಯಾನೇಜ್‌ಮೆಂಟ್ ಇತ್ಯಾದಿಯಾಗಿ ನಮಗೆ ಆ ಕ್ಷಣ ತೋಚಿದ್ದನ್ನು ಹೇಳಿ, ಕೊನೆಗೆ ‘ವಕೀಲ ವೃತ್ತಿಯ ಕೋರ್ಸ್ ಕೂಡ ಒಳ್ಳೆಯದೆ; ನಿಮ್ಮವರಿಗೆ ಈಗ ಒಳ್ಳೆಯ ವಕೀಲರ ಅಗತ್ಯ ತುಂಬ ಇದೆ ’ಎಂದು ಹೇಳಿದೆವು.
* ನಜೀರ್ ಮತ್ತು ಅವರ ಸಹೋದ್ಯೋಗಿಗಳು ಕ್ರಯ ಕೊಟ್ಟು ಸಾಗಿಸುವ ಜಾನುವಾರು, ಮಾರಾಟವಾಗದೆ ಅವುಗಳ ಒಡೆಯರ ಹಟ್ಟಿ ಕೊಟ್ಟಿಗೆಗಳಲ್ಲೇ ಕೊನೆಯವರೆಗೂ ಉಳಿದೇ ಬಿಡುವ ಸನ್ನಿವೇಶವನ್ನು ಊಹಿಸಿಕೊಳ್ಳಿ....ರೋಗ ಬಾಧೆಗಳಾಗಿ ಹುಲ್ಲು ನೀರು ಮುಟ್ಟದ ಅಥವಾ ಹಾಲು ಇಳಿಸಲು ಒಲ್ಲದ ಜಾನುವಾರು ಕೊಟ್ಟಿಗೆಯಲ್ಲಿ ಇರುವುದು ಎಂದರೆ ಮನೆಯ ಒಳಗೆ ಹಾಸಿಗೆ ಹಿಡಿದ ಸಣ್ಣ ಮಕ್ಕಳು ಅಥವಾ ವೃದ್ಧರಿದ್ದ ಹಾಗೆ.

ಹೀಗೆ ಈ ಸಂದರ್ಶನ ಪೂರ್ತಿ ಅನಗತ್ಯ ರಂಪ ಇದೆ. ಅವರ ಅಭಿಪ್ರಾಯಗಳು ಸರಿಯೊ ತಪ್ಪೊ ಬೇರೆ ವಿಚಾರ. ಆದರೆ ಈ ಸಂಕಿರಣದ ಚೌಕಟ್ಟನ್ನು ಅದು ಮೀರಿಹೋಗಿದೆ. ನಜೀರ್‌ಗಿಂತ ಹೆಚ್ಚಾಗಿ ಸಂದರ್ಶಕರೇ ಮಾತಾಡುತ್ತಾರೆ. ಚೆನ್ನಾಗಿ ಹದವಾಗಿ ಬರೆಯಬಲ್ಲ ಜಿ. ರಾಜಶೇಖರ ಕೂಡಾ, ಹೀಗೆ ಹಾದಿ ತಪ್ಪಿದ್ದು ಆಶ್ಚರ್ಯ. ಧರ್ಮ ಸಮನ್ವಯಿಗಳ ಬಗ್ಗೆಯೇ ಕನಿಕರ ಬರುವಂತಾಗುವುದು ಈ ಸಂದರ್ಶನದ ವಿಶೇಷ. ಓದುವ ಕುತೂಹಲ ಹುಟ್ಟಲು ಇಷ್ಟು ಸಾಕು! ಗಾಂಧಿ ಬಜಾರ್‌ನ ‘ಅಂಕಿತ’ದಲ್ಲಿ ದೇಶಕಾಲದ ಬಿಡಿ ಪ್ರತಿ ಲಭ್ಯ. ನಾಲ್ಕು ಸಂಚಿಕೆಗಳಿಗೆ ವಾರ್ಷಿಕ ಚಂದಾ ೩೦೦ ರುಪಾಯಿಗಳು. ಸಂಪರ್ಕಕ್ಕೆ deshakaala@gmail.com.

ಸಂದರ್ಶಿಸಲ್ಪಟ್ಟ ಎಲ್ಲ ವ್ಯಕ್ತಿಗಳಲ್ಲಿ ಮೂಲವಸ್ತುವಾಗಿ ಶ್ರೀ ಎಂಬ ಸಿರಿ ಎಂಬ ದುಡ್ಡೇ ಕಾಣುತ್ತಿದೆಯೆ? 'ನೋಡಿ...ಮೊದಲು ಈ ಶಾಲೆ ಕಾಲೇಜುಗಳನ್ನು ಒಡೀಬೇಕು’ ಎನ್ನುವ ಭಟ್ಟರ ಮಾತಂತೂ ದೊಡ್ಡದೊಂದು ವಾಗ್ವಾದಕ್ಕೆ ನಮ್ಮನ್ನು ಎಳೆಯುವಂತಿದೆ. ಶ್ರೀಸಾಮಾನ್ಯನಲ್ಲದೆ ಸಾಮಾನ್ಯಶ್ರೀಗಳೂ ಇದ್ದಾರೆಯೆ?! ಓದುವ ಮನಸ್ಸು ಮಾಡಿ.

(ಫೋಟೊ: ಕೆ.ಭಾಗ್ಯಪ್ರಕಾಶ್, ಕೃಪೆ: business line)

Read more...

July 01, 2009

'ಕೇವಲ' ಪೋಟೊಗಳು !

ಬಸ್ಸಿನೊಳಗಿಂದ ಕಂಡ ಮಳೆ
ನೀನು ಮತ್ತು ನಾನು
ನಿಲ್ಲು ನಿಲ್ಲೆಲೆ ಒಮ್ಮೆ, ಕ್ಲಿಕ್ಕಿಸುವೆ ನಿನನೊಮ್ಮೆ !

ಗೋಕರ್ಣ ಬೀಚ್‌ನಲ್ಲಿ ಸಿಕ್ಕ ಇರ್ಫಾನ್ ಪಠಾಣ್ !
ಎಂಥಾ ಮರಳಯ್ಯ ಇದು ಎಂಥಾ ಮರುಳು - ಓಂ ಬೀಚ್‌ನಲ್ಲಿ

ಆನುದಾದಾರ ತಾಯಿ, ಗೌರೀಶರ ಮಡದಿ- ಶಾಂತಾ ಕಾಯ್ಕಿಣಿ

Read more...

June 27, 2009

ಹುಸಿ ಹೋಗದ ಕನ್ನಡ

ನ್ನಡದ ಮೇರು ಬರಹಗಾರರಾದ ಬೇಂದ್ರೆ, ಕುವೆಂಪು, ಅಡಿಗ, ಕಾರಂತ, ಅನಂತಮೂರ್ತಿ, ಶಿವರುದ್ರಪ್ಪ, ಕಣವಿ ...ಇಂತಹವರ ಮಕ್ಕಳೆಲ್ಲ ಏನು ಮಾಡುತ್ತಿದ್ದಾರೆ ಎಂಬ ಕುತೂಹಲ, ಕನ್ನಡದ ಅಳಿವು ಉಳಿವಿನ ಪ್ರಶ್ನೆ ಬಂದಾಗಲಂತೂ ನಮ್ಮಲ್ಲಿ ಮೂಡುತ್ತದೆ ! ವಾಮನ ಬೇಂದ್ರೆ, ಪೂರ್ಣಚಂದ್ರ ತೇಜಸ್ವಿ ಗೊತ್ತಿದೆ, ಇನ್ನು ಹಲವರ ಬಗ್ಗೆ ಗೊತ್ತಿಲ್ಲ. 'ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ' ಎಂದ ಚನ್ನವೀರ ಕಣವಿಯವರ ಮಗನ ಬಗ್ಗೆಯೂ ಹಲವರಿಗೆ ಗೊತ್ತಿಲ್ಲ. ದೇಶದ ಪ್ರತಿಷ್ಠಿತ ಐಐಟಿ ಕಾನ್ಪುರದಲ್ಲಿ ಹಾಗೂ ಅಮೆರಿಕದ ಬೋಸ್ಟನ್ ವಿವಿಯಲ್ಲಿ ಓದಿ ಭೌತಶಾಸ್ತ್ರಜ್ಞರಾಗಿ ಹೊರಬಂದ ಶಿವಾನಂದ ಕಣವಿ, ಮುಂಬೈಯ ಐಐಟಿಯಲ್ಲೂ ಸಂಶೋಧನೆ ನಡೆಸಿದವರು. ಸ್ವಲ್ಪ ಕಾಲ ಮೇಷ್ಟ್ರುಗಿರಿ ಮಾಡಿ, ಅರ್ಥಶಾಸ್ತ್ರ ತಜ್ಞನಾಗಿ, ಬಳಿಕ ಉದ್ಯಮ ಸಂಬಂ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡರು. ೨೦೦೪ರ ವರೆಗೆ 'ಬ್ಯುಸಿನೆಸ್ ಇಂಡಿಯಾ' ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿದ್ದರು.

೨೦೦೩ರಲ್ಲಿ ಪ್ರಕಟವಾದ Sand to Silicon: The amazing story of digital technology ಎಂಬುದು ಅವರ ಬಹು ಚರ್ಚಿತ ಪುಸ್ತಕ. ಜಾಗತಿಕ ತಂತ್ರಜ್ಞಾನದಲ್ಲಿ ಭಾರತೀಯರ 'ಪ್ರಥಮ' ಸಾಧನೆಗಳನ್ನು ಹೇಳುವ ಪುಸ್ತಕ ಅದು. ೧೮೯೭ರ ಜಗದೀಶ್ ಚಂದ್ರ ಬೋಸ್, ೧೯೮೨ರಲ್ಲೇ 'ಪರ್ಸನಲ್ ಕಂಪ್ಯೂಟರ್ ವರ್ಕ್ ಸ್ಟೇಷನ್' ಆರಂಭಿಸಿದ 'ಸನ್ ಮೈಕ್ರೊಸಿಸ್ಟಮ್ಸ್'ನ ಸಹ ಸ್ಥಾಪಕ ವಿನೋದ್ ಖೋಸಲಾ, ಯೋಜನಾ ವಿವರಣೆಗೆ ಕಂಪ್ಯೂಟರ್‌ನಲ್ಲಿ ಬಳಸುವ ಪವರ್ ಪಾಯಿಂಟ್‌ಗೆ ಮೈಕ್ರೋಸಾಫ್ಟ್‌ನಲ್ಲಿದ್ದು ಕಾರಣರಾದ ವಿಜಯ್ ವಾಶಿ, ವೆಬ್‌ಸೈಟ್ ಮೂಲಕ ಇಮೇಲ್ ಆರಂಭಿಸಿದ ಸಬೀರ್ ಭಾಟಿಯಾ, ಕಂಪ್ಯೂಟರ್‌ನಲ್ಲಿ ಧ್ವನಿ ಮುದ್ರಿಕೆಗೆ ಬಳಸುವ mpeg ರೀತಿಗೆ ಕೆಲಸ ಮಾಡಿದ ಎನ್. ಜಯಂತ್ , ಡಿಜಿಟಲ್ ಸ್ಯಾಟಲೈಟ್ ಟಿವಿ ಬಗ್ಗೆ ದುಡಿದ ಅರುಣ್ ನೇತ್ರಾವಳಿ, ಹೀಗೆ ಹಲವು ವ್ಯಕ್ತಿ-ಸಂಗತಿಗಳ ಬಗ್ಗೆ ಈ ಪುಸ್ತಕ ಗಮನ ಸೆಳೆಯುತ್ತದಂತೆ. ವಿಶ್ವವನ್ನು ಕಾಣಿಸಿದ ಭಾರತವನ್ನು ನಮ್ಮ ಕಣ್ಣಿಂದಲೇ ನೋಡುವ ಪ್ರಯತ್ನ ಇದು. ಐಟಿ ಮುಗ್ಗರಿಸಿರುವ ಈ ಕಾಲದಲ್ಲಂತೂ ಇದನ್ನು ನಾವೆಲ್ಲ ಆನಂದದಿಂದ ಓದಬಹುದು ! ಶಿವಾನಂದ ಕಣವಿ ಈಗ 'ಟಾಟಾ ಕನ್‌ಸಲ್ಟೆನ್ಸಿ ಸರ್ವಿಸಸ್’ ಕಂಪನಿಯ ವಿಶೇಷ ಯೋಜನಾ ವಿಭಾಗದ ಉಪಾಧ್ಯಕ್ಷರಾಗಿ ದುಡಿಯುತ್ತಿದ್ದಾರೆ. ಕತೆಗಾರ್ತಿ ಶಾಂತಾ ಕಣವಿಯನ್ನೂ ತಾಯಿಯಾಗಿ ಪಡೆದ ಶಿವಾನಂದರಿಗೆ, ಬರವಣಿಗೆ ವರ-ಬಲ.

ಅವರ ತಂದೆ, 'ಸರ್ವ ಹೃದಯ ಸಂಸ್ಕಾರಿ’ ಹಾಗೆ ಕಾಣುತ್ತಿರುವ ನವೋದಯದ ಕವಿ ಚನ್ನವೀರ ಕಣವಿಯವರಿಗೆ, ಧಾರವಾಡದ ಕವಿಭೂಮಿಯಲ್ಲಿ ಇಂದು (ಜೂನ್ ೨೮) ೮೨ನೇ ವರ್ಷದ ಬೆಳಗು. ‘ಒಂದು ಮುಂಜಾವಿನಲಿ’ ಎಂಬ ಅವರ ಭಾವಗೀತೆಗಳ ಸಿ.ಡಿಯನ್ನು ಲಹರಿ ಹೊರತಂದಿದೆ. ಅವಸರಕ್ಕೆ ಯು ಟ್ಯೂಬ್‌ಗೆ ಹೋದರೆ ಬಿ.ಆರ್. ಛಾಯಾ ಹಾಡಿರುವ ‘ಒಂದು ಮುಂಜಾವಿನಲಿ’ ಹಾಡನ್ನು ಕೇಳಬಹುದು, ನೋಡಬಹುದು. ನವೀಕರಣಗೊಳ್ಳುತ್ತಿರುವ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವೆಬ್‌ಸೈಟ್ (www.karnatakasahithyaacademy.org)ನ ‘ಸ್ವಂತ ಕವಿತೆಯ ಓದು’ ವಿಭಾಗದಲ್ಲೂ ಕಣವಿಯವರು ಸ್ವಪದ್ಯಗಳನ್ನು ಓದುವ ವಿಡಿಯೊವನ್ನು ಪ್ರಕಟಿಸಿದ್ದಾರೆ ಅಧ್ಯಕ್ಷ ಎಂ.ಎಚ್.ಕೃಷ್ಣಯ್ಯ. ‘ಹಸಿ ಗೋಡೆಯ ಹರಳಿನಂತೆ, ಹುಸಿ ಹೋಗದ ಕನ್ನಡ’ಎಂದ ಕವಿ, ಅಲ್ಲಿ ಐದು ಪದ್ಯಗಳನ್ನು ಓದುತ್ತಾ ಕುಳಿತಿದ್ದಾರೆ. ನೋಡಿ, ಕೇಳಿ, ಹ್ಯಾಪಿ ಬರ್ತ್‌ಡೇ ಹೇಳಿ
(ವಿ.ಕ.ದಲ್ಲಿ ಪ್ರಕಟ)

Read more...

June 24, 2009

ಥಿಯೇಟರ್ ಹಂಚಿಕೆ

ಮಾಲ್ ಸಂಸ್ಕೃತಿಯೊಂದಿಗೆ ಬಂದ ಮಲ್ಟಿಪ್ಲೆಕ್ಸ್ ಥಿಯೇಟರ್‌ಗಳು, ನಾಲ್ಕೈದು ವರ್ಷಗಳಲ್ಲೇ ಗಗನದೆತ್ತರ ಬೆಳೆದಿದೆ. ಬಾಲಿವುಡ್‌ನ ಸುಮಾರು ಶೇ.೭೦ರಷ್ಟು ಮಾರುಕಟ್ಟೆಯನ್ನು ಪಿವಿಆರ್, ಬಿಗ್ ಸಿನಿಮಾ, ಐನಾಕ್ಸ್, ಫೇಮ್, ಫನ್‌ನಂತಹ ಸಂಸ್ಥೆಗಳ ಮಲ್ಟಿಪ್ಲೆಕ್ಸ್ ಸರಪಳಿ ಆವಾಹಿಸಿಕೊಂಡಿವೆ. ವರ್ಷಕ್ಕೆ ೯೦೦ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾಗುವ ಇಂಡಿಯಾದಲ್ಲಿ, ಮಲ್ಟಿಪ್ಲೆಕ್ಸ್‌ಗೆ ಬರುವ ನೋಡುಗರನ್ನು ದೃಷ್ಟಿಯಲ್ಲಿಟ್ಟೇ ಸಿನಿಮಾ ನಿರ್ಮಾಣ ನಡೆಯುತ್ತಿದೆ. ಟೂರಿಂಗ್ ಟಾಕೀಸ್‌ಗಳ ಆಣೆ-ಪೈಸೆ ಲೆಕ್ಕಾಚಾರದ ದಿನಗಳನ್ನೀಗ ಕಲ್ಪಿಸಿಕೊಳ್ಳುವುದೂ ಕಷ್ಟ. ಐಟಿ ಬೂಮ್ ಜತೆಗೆ ಎದ್ದುಕೊಂಡ ಈ ಮಲ್ಟಿಪ್ಲೆಕ್ಸ್‌ಗಳಿಗೆ ಜನಸಾಮಾನ್ಯರ ಗೊಡವೆ ಇಲ್ಲ. ಚಿತ್ರಗಳಲ್ಲೂ ಅವರು ಕಾಣೆಯಾಗಿದ್ದಾರಲ್ಲ ! ಹಾಗಾಗಿ ಜೇಬು ಗಟ್ಟಿಯಿದ್ದವರಿಗಷ್ಟೇ ಹಿರಿತೆರೆಯ ಭಾಗ್ಯ. (ಉಳಿದವರಿಗೆ ಕಿರುತೆರೆ ಇದೆಯಲ್ಲ!) ಇತ್ತೀಚೆಗಿನ ವರ್ಷಗಳಲ್ಲಿ ಪೈರಸಿ ಹಾವಳಿ ಬಾಲಿವುಡ್‌ನಲ್ಲಿ ಹೆಚ್ಚಾಗಿದೆಯಾ? ಹೆಚ್ಚಾಗಿದ್ದರೆ ಸಿನಿಮಾ ಟಿಕೆಟ್ ಬೆಲೆ ಹೆಚ್ಚಾಗಿರುವುದೂ ಅದಕ್ಕೆ ಮುಖ್ಯ ಕಾರಣವಾ ಎನ್ನುವುದು ಹುಡುಕಬೇಕಾದ ಅಂಶ.

ಸಿನಿಮಾದ ಲಾಭ ಹಂಚಿಕೆಯ ವಿಚಾರದಲ್ಲಿ ನಿರ್ಮಾಪಕರಿಗೂ ಈ ಮಲ್ಟಿಪ್ಲೆಕ್ಸ್ ಮಾಲೀಕರಿಗೂ ಭಿನ್ನಮತ ಶುರುವಾಗಿ, ಕಳೆದ ಏಪ್ರಿಲ್ ೪ರಿಂದ, ಮಲ್ಟಿಪ್ಲೆಕ್ಸ್‌ಗಳಲ್ಲಿ ಬಾಲಿವುಡ್ ಚಿತ್ರಗಳ ಬಿಡುಗಡೆಯನ್ನೇ ನಿಲ್ಲಿಸಲಾಗಿತ್ತು. ಒಂಭತ್ತು ಶುಕ್ರವಾರಗಳು ಬರಿದೇ ಕಳೆದುಹೋದವು. ಎರಡು ತಿಂಗಳ ಮುಷ್ಕರದ ಬಳಿಕ, ಕೊನೆಗೂ ರಾಜಿ ಸೂತ್ರವಾಗಿದೆ. ಆದರೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಒಂದು ಹಿಂದಿ ಸಿನಿಮಾ ಟಿಕೆಟಿಗೆ ಕನಿಷ್ಠ ೧೦೦ ರಿಂದ ರೂ. ೫೦೦ವರೆಗೂ ಇರುವ ಶುಲ್ಕದ ಬಗ್ಗೆ ಏನೂ ಚರ್ಚೆ ಇಲ್ಲ ! ತಮ್ಮತಮ್ಮ ಲಾಭ ಹಂಚಿಕೆಯ ವಿಷಯದಲ್ಲಿ ಜೂನ್೪ರಂದು ಸತತ ಹದಿನಾಲ್ಕು ಗಂಟೆ ಮಾತುಕತೆ ನಡೆಸಿದ ಮುಖಂಡರು, ಮುಷ್ಕರ ನಿಲ್ಲಿಸಿ , ಜೂ.೧೨ರಿಂದ ಚಿತ್ರ ಪ್ರದರ್ಶನ ಆರಂಭಿಸಿದ್ದಾರೆ. ಚಿತ್ರ ಬಿಡುಗಡೆಯಾದ ಮೊದಲ ನಾಲ್ಕು ವಾರಗಳಲ್ಲಿ ಥಿಯೇಟರ್ ಮಾಲೀಕರಿಂದ ನಿರ್ಮಾಪಕರು ಯಾ ವಿತರಕರಿಗೆ, ಕ್ರಮವಾಗಿ ಶೇ. ೫೦-೪೨-೩೫-೩೦ರಂತೆ ಒಟ್ಟು ಆದಾಯದ ಭಾಗ ಸಲ್ಲಲಿದೆ ಎಂಬುದು ಪಂಚಾಯಿತಿಕೆಯಿಂದ ಬಂದ ಸುದ್ದಿ. ಬ್ಲಾಕ್‌ಬಸ್ಟರ್ ಸಿನಿಮಾಗಳಿಗೆ ಅಂದರೆ ೧೭.೫ಕೋಟಿ ರೂಗಿಂತ ಹೆಚ್ಚು ಸಂಗ್ರಹಿಸುವ ಸಿನಿಮಾಗಳಿಗೆ, ಇದು ಕ್ರಮವಾಗಿ ಶೇ. ೫೨-೪೫-೩೮-೩೦ ಆಗಲಿದೆ. ಆದರೆ ಎರಡು ತಿಂಗಳುಗಳಲ್ಲಿ, ಸಿನಿಮಾ ಬಿಡುಗಡೆ ಮಾಡಿ ಅಂತ ಪ್ರೇಕ್ಷಕರು ಪ್ರತಿಭಟಿಸಿದ ಸುದ್ದಿ ಬಂದಿಲ್ಲ. ಯಾವ ಸಿನಿಮಾ ಮಂದಿಯೂ ಅವರನ್ನು ವಿಚಾರಿಸಿಕೊಂಡದ್ದಿಲ್ಲ.

ಈ ಮಧ್ಯೆ ನಮ್ಮ ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ ಸಿನಿಮಾ ಪ್ರದರ್ಶನದ ವೇಳೆಯನ್ನು ಎರಡೆರಡು ಬಾರಿ ಬದಲಿಸಿತು. ಕನ್ನಡ ಸಿನಿಮಾಗಳ ಟಿಕೆಟ್ ದರ ಕಡಿಮೆ ಮಾಡಿತು. ಅಂತಹಾ ಉಪಯೋಗವೇನೂ ಆದಂತಿಲ್ಲ. ಅಂದರೆ ಟಿಕೆಟ್ ದರಕ್ಕೂ ಜನ ಸಿನಿಮಾ ನೋಡೊದಕ್ಕೂ ಸಂಬಂಧವೇ ಇಲ್ಲ ; ಸಿನಿಮಾ ಚೆನ್ನಾಗಿದ್ರೆ ಜಾಸ್ತಿ ದುಡ್ಡು ಕೊಟ್ಟಾದ್ರೂ ಜನ ನೋಡ್ತಾರೆ ಅನ್ನೋದಲ್ಲ. ಮಲ್ಟಿಪ್ಲೆಕ್ಸ್‌ಗಳು ದುಡ್ಡು ಕೊಳ್ಳೆ ಹೊಡೆಯುವುದು, ಕನ್ನಡದ ಥಿಯೇಟರ್‌ಗಳು ಬಡವಾಗುವುದು ಒಳ್ಳೆಯ ಬೆಳವಣಿಗೆ ಅಲ್ಲ.

(ವಿ.ಕ.ದಲ್ಲಿ ಪ್ರಕಟ)

Read more...

June 06, 2009

ಅದೂ ಇದೂ














ಏನೋ ನೆನಪಾದಂತೆ
ಆ ಮುಖದ ಮೇಲೆ ಬೆರಳಾಡಿಸಿದೆ

ಯಕ್ಷಗಾನದಲಿ ರಂಪವಾಡಿ ಗಂಡಾಂತರವಾದ್ದಕ್ಕೆ ಕ್ಷಮಿಸು
ಪಿಯುಸಿ ಫೇಲ್ ಆದ್ದಕ್ಕೆ, ಯಾವುದೋ ಸ್ಕೀಮಿಗೆ ಹಣ ಮುಗಿಸಿದ್ದಕ್ಕೆ
ಫೋರ್ಜರಿ ಸಹಿ ಹಾಕಿದ್ದಕ್ಕೆ, ಅವಾಗವಾಗ ರೌದ್ರಾವತಾರ ತೋರಿದ್ದಕ್ಕೆ
ಸಿಗರೇಟು ನಿಲ್ಲಿಸೆಂದು ನಿನಗೆ ಒತ್ತಾಯ ಮಾಡದ್ದಕ್ಕೆ
ಕ್ಷಮಿಸಿಬಿಡು ಎನ್ನ ಎಂದು ಫೋಟೊ ತಬ್ಬಿಕೊಂಡರೆ
ಅಂಗಿ ಮುಖಕ್ಕೆಲ್ಲ ದೂಳು, ಅಮ್ಮನಿಗೆ ಬೈಗಳು!

ಕೊನೆಗಾಲ ಅಂತ ಗೊತ್ತಿಲ್ಲದಿದ್ದರೂ ಜನಸೇವೆ ಹೆಚ್ಚಾಗಿ
ಮಧ್ಯಾಹ್ನ ಪೂಜೆ, ರಾತ್ರಿ ಜಪ, ಗಾಂಧಿ ಆತ್ಮಕತೆ, ಗೀತೆ ಓದಿ
ಮನೆಗೆ ಅಗತ್ಯವಾದ್ದು, ಮಕ್ಕಳಿಗೆ ಆಗಬೇಕಾದ್ದೂ ಆಯ್ತು
ಹೆಚ್ಚಾಗದ್ದು ನಿನಗೆ ವಯಸ್ಸೊಂದೆ, ಚೆಲುವ ದೇವನಿಗದೇ ಇಷ್ಟವಾಯ್ತು!

ಮೇಲೆ ಅಜ್ಜನ ಫೋಟೊ
ಅದರ ಮೇಲೆ ಮುತ್ತಜ್ಜನ ಫೋಟೊ
‘ಅಜ್ಜ ಸತ್ತು ಅಪ್ಪ ಸತ್ತು ಮಗ ಸತ್ತು, ಸಾಗಲಿ ಕುಟುಂಬ ಸ್ವಸ್ತಿ’
ಎಂಬ ಝೆನ್ ಗುರುಗಳ ಆಶೀರ್ವಾದ.
ಸಣ್ಣಗೆ ಬೆವರಿ, ಕಣ್ಣ ಒರತೆ ಹೆಚ್ಚಾಗಿ
ಕನ್ನಡಿಯಲಿ ಕೆಂಡದಂಥ ಕಣ್ಣು
ನಿನ್ನೆ ಕುಡಿದದ್ದು ನೆನಪಾಯಿತು !

ಬಣ್ಣಗೆಡುತ್ತಿತ್ತು ಆ ಫೋಟೊ
ತೆಗೆದವರ ಮುಖ ನೆನಪಾಗದೆ ಚಡಪಡಿಸಿದೆ
ನನ್ನದೂ ಹೊಸ ಫೋಟೊ ತೆಗೆಸಿ
ಡಾಕ್ಟ್ರ ಜತೆಗೂ ಮಾತಾಡಲು ಹೊರಟೆ.

ಹಳೇ ಚೇತನ ಸ್ಟುಡಿಯೋದ ಮುದಿ ಫೋಟೊಗ್ರಾಫರ್
ಸುಣ್ಣ ಮೆತ್ತಿದ ಮೇಜಿನ ಹಿಂದಿರುವ ಅನುಗಾಲದ ಡಾಕ್ಟರು
‘ನಿಮ್ಮ ತಂದೆಯವರದ್ದೇ ಇನ್ನೂ ಇಲ್ಲಿದೆ’ ಅಂದರು
ಎಕ್ಸ್‌ರೇ ಶೀಟೊ, ಫೋಟೊ ನೆಗೆಟಿವೊ, ಸಾಲದ ಚೀಟಿಯೊ?

‘ಹತ್ತು ಪ್ರಿಂಟು ಹಾಕಿ’ ಅಂತ ಗಹಗಹಿಸಿ
ಖುಶಿಯಾಗಿ ಮನೆಗೆ ಬಂದೆ !

(ಈ ಪದ್ಯ ಪ್ರಕಟಿಸಿದ ಕೆಂಡಸಂಪಿಗೆ ಬಳಗಕ್ಕೆ ಕೃತಜ್ಞತೆಗಳು. ಫೋಟೋ:ಸುಧನ್ವಾ)

Read more...

May 30, 2009

ನಾಗೇಶ ಹೆಗಡೆಯವರ ಕಾಲುದಾರಿ

ನಮ್ಮ ಮನೆಗೆ ದಿನಪತ್ರಿಕೆ ಬರುತ್ತಿದ್ದುದು ರಾತ್ರಿ ೮ಕ್ಕೆ. ಮರುದಿನ ಸಂಜೆಯ ಮೊದಲು ಅಪ್ಪ ಕೇಳಿಯೇ ಕೇಳುತ್ತಿದ್ದ ಪ್ರಶ್ನೆ- 'ನಾಗೇಶ ಹೆಗಡೆಯವರ ಕಾಲಂ ಓದಿದ್ಯಾ?' ಇಂಟರ್‌ನೆಟ್ ಗೊತ್ತಿಲ್ಲದ, ಟಿವಿ ಇಲ್ಲದ ನಮ್ಮಲ್ಲಿಗೆ ಹೆಗಡೆಯವರ ಅಂಕಣ, ವಿಜ್ಞಾನದ ಒಂದು ಪ್ರವಾಹವನ್ನೇ ಹರಿಸುತ್ತಿತ್ತು. (ಇಂಟರ್‌ನೆಟ್-ಟಿವಿ ಇಟ್ಟುಕೊಂಡವರಿಗೂ ಹೆಗಡೆಯವರು ಹೇಳುವುದು ಹೊಸ ವಿಷಯವೇ ಆಗಿರುತ್ತದೆಂಬುದು ನಂತರ ತಿಳಿಯಿತು!) ಅಂಕಣದಲ್ಲಿ ಅವರು ಹೊಸ ವಿಜ್ಞಾನ ವಿಷಯದ ಬಗೆಗಷ್ಟೇ ಹೇಳುತ್ತಿರಲಿಲ್ಲ, ಅದರ ಜತೆಗೆ ಒಂದು ವಿಚಾರ ಸರಣಿ ಹೊಸೆದುಕೊಂಡಿರುತ್ತಿತ್ತು. ಅತಿ ಗಂಭೀರವಾಗಿರದೆ ಕೊಂಚ ತಮಾಷೆಯೂ ಆಗುತ್ತಿತ್ತು. ಸ್ಪಷ್ಟವಾಗಿ ಸರಳವಾಗಿ ಇರುತ್ತಿತ್ತು. ಹೀಗಾಗಿ, ಏನನ್ನೂ ಓದದ ನನ್ನ ತಮ್ಮನೂ, ಸುಧಾ ವಾರಪತ್ರಿಕೆಯ ಕೊನೆಯ ಪುಟದ 'ಸುದ್ದಿಸ್ವಾರಸ್ಯ'ವನ್ನು ಓದಿದಷ್ಟೇ ಆಸಕ್ತಿಯಿಂದ ಹೆಗಡೆಯವರ ಕಾಲಂನ್ನೂ ಓದತೊಡಗಿದ.

ಇತ್ತೀಚೆಗೆ ಬಂದ ಒಂದು ಎಸ್ಸೆಮ್ಮೆಸ್ಸು ಇದು- 'ನೀನೀಗ ಬೈಕು ಕೊಳ್ಳಬೇಡ. ೨೦೨೫ರಲ್ಲಿ ನೀನು ೫ ಲೀಟರ್ ಪೆಟ್ರೋಲ್ ಕೊಂಡರೆ ಪಲ್ಸರ್ ಬೈಕ್ ಫ್ರೀಯಾಗಿ ಸಿಗತ್ತೆ !' ಶನಿವಾರ ಸಂಜೆ ಮೇ ಫ್ಲವರ್ ಮೀಡಿಯಾ ಹೌಸ್‌ನ 'ಫಿಶ್ ಮಾರ್ಕೆಟ್'ನಲ್ಲಿ ಕಾಣಿಸಿಕೊಂಡ ವಾಮನ ಮೂರ್ತಿ ನಾಗೇಶ ಹೆಗಡೆಯವರ ಮಾತಲ್ಲೂ ಅದೇ 'ಮೆಸೇಜು' ಬಂತು. ತುಟಿ ಕೆಂಪು ಮಾಡಿಕೊಂಡಿರುವ ಕುಳ್ಳಗಿನ ಬಡಕಲು ದೇಹ. ಫಕ್ಕನೆ ಹೆಗ್ಗೋಡು ಸುಬ್ಬಣ್ಣರ ನೆನಪು ತರುವಂಥ ಮುಖ. ವಿಜ್ಞಾನ ತಂತ್ರಜ್ಞಾನವು ಸಬಲರಿಂದ ಸಬಲರಿಗಾಗಿಯೇ ಬಳಕೆಯಾಗುತಿದೆ ಎಂಬುದು ಅವರ ಮಾತಿನ ಒಟ್ಟು ಆರೋಪ. ಸರಿಯಾಗಿ ಉರಿಯುವ ಒಲೆ ಕಂಡುಹಿಡಿಯದೆ ಚಂದ್ರಲೋಕಕ್ಕೆ ಹೊರಟಿದ್ದಾರೆ. ಮರ ಕತ್ತರಿಸುವ ಆಧುನಿಕ ಗರಗಸಗಳು ತಯಾರಾದಾಗ ಕಾಡುಗಳೇ ಇಲ್ಲವಾಗಿವೆ. ಕಡಿಮೆ ಬೆಲೆಯ-ವಾಯು ಮಾಲಿನ್ಯ ಇಲ್ಲದ ನ್ಯಾನೊದಂಥ ಕಾರಿನ ಬದಲು ಬಸ್ಸು ತಯಾರಿಸಿದ್ದರೆ ಅದು ಶ್ಲಾಘಿಸುವ ವಿಷಯ. ಇಂದು ಎಲ್ಲವೂ ಖಾಸಗೀಕರಣಕ್ಕೆ ಒಳಗಾಗಿ ಪ್ರಜಾಪ್ರಭುತ್ವ ನಲುಗಿದೆ. ಅಮೆರಿಕದಂಥ ಒಂದು ದೇಶ ತನ್ನ ಕಂಪನಿಗಳ ಮೂಲಕ ಇನ್ನೊಂದು ದೇಶದಲ್ಲಿ ಭಾರೀ ಪ್ರಮಾಣದ ಭೂಮಿಯನ್ನು ಕೊಂಡುಕೊಳ್ಳುವ ಕೆಲಸ ನಡೆಯುತ್ತಿದೆ. ಇದರಿಂದ ಅನನ್ಯತೆ-ಸ್ವಾವಲಂಬನೆಗಳ ನಾಶ ಆಗುತ್ತಿದೆ ಎಂಬುದು ಅವರ ನೋವು. ಬೆಂಗಳೂರಿನ ಸುತ್ತಲಿನ ಹಳ್ಳಿಗಳ ಸಂಪನ್ಮೂಲಗಳು ಮಹಾನಗರಕ್ಕೆ ಬರುತ್ತಿವೆ. ಬೆಂಗಳೂರಿನ ತ್ಯಾಜ್ಯಗಳು ಆ ಹಳ್ಳಿಗಳಿಗೆ ಹೋಗ್ತಿವೆ. ಬೆಂಗಳೂರಿನಿಂದ ಮೈಸೂರಿಗೆ ಚತುಷ್ಪಥ ರಸ್ತೆಯಲ್ಲಿ ಹೋಗಲು ಈಗ ಅರ್ಧ ಗಂಟೆ ಕಡಿಮೆ ಸಾಕು. ಆದರೆ ಆ ದಾರಿಯಲ್ಲಿರುವ ರೈತ ತನ್ನ ಉಳಿದ ಜಮೀನಿಗೆ ಹೋಗಲು, ಚತುಷ್ಪಥ ದಾಟಲು ಅರ್ಧ ಗಂಟೆ ಕಾಯಬೇಕಾಗಿದೆ ಎಂಬ ವೈರುಧ್ಯದ ಬಗ್ಗೆ ಅವರಿಗೆ ದುಃಖ.

ನಮ್ಮ ವಿದ್ಯುತ್ತಿನ ಶೇ.೪೦ ಭಾಗ ರೈತರ ಪಂಪ್‌ಸೆಟ್‌ಗಳಿಗೆ ವ್ಯಯವಾಗುತ್ತಿದೆ. ಆದರೆ ಅವರಿಗೆ ಸೋಲಾರ್ ಶಕ್ತಿಯನ್ನೋ ಗಾಳಿಯಂತ್ರವನ್ನೋ ಕೊಡದ ಸರಕಾರ ಟ್ರ್ಯಾಕ್ಟರ್‌ನ್ನು-ರಾಸಾಯನಿಕ ಗೊಬ್ಬರಗಳನ್ನು ಕೊಡುತ್ತಿದೆ. ಭಾರತದಲ್ಲಿ ದಿಢೀರನೆ ಬೆಳೆದ ತಂತ್ರಜ್ಞಾನ, ದುರ್ಬಳಕೆಯ ಎಲ್ಲ ಮಾರ್ಗಗಳಲ್ಲೂ ನಡೆದಿದೆ. ನಮಗೆ ಸರಿದಾರಿ ತೋರಬೇಕಾದ ಮಾಧ್ಯಮಗಳು ಹಾಗೂ ಸರಕಾರಗಳೇ ಕಾರ್ಪೊರೇಟ್ ಹಿಡಿತಕ್ಕೆ ಸಿಲುಕಿವೆ ಎಂಬ ಬೇಸರ. ಹೀಗೆಲ್ಲ ನಗುನಗುತ್ತಲೇ ಪನ್ ಮಾಡುತ್ತಲೇ ಮಾತಾಡಿದ ನಾಗೇಶ ಹೆಗಡೆ, ಎಲ್ಲರಿಂದ ಎತ್ತರದಲ್ಲಿ ನಿಂತು ಮುಂದಿನ ಪ್ರಪಾತವನ್ನು ವಿವರಿಸಿದವರಂತೆ ಕಂಡರು. ಪ್ರಪಾತದಲ್ಲಿ ನೇತಾಡುತ್ತಾ ಈ ಹಣ್ಣು ಅದೆಷ್ಟು ರುಚಿ ಎನ್ನುವ ಝೆನ್ ಒಡಪಿನ ಅರ್ಥವೂ ಅವರಿಗೆ ತಿಳಿದಂತಿತ್ತು. ಅಷ್ಟಕ್ಕೂ ಅವರು ತೀರ ಹೊಸದಾದ ಸಂಗತಿಯೇನೂ ಹೇಳಲಿಲ್ಲ. ಕ್ರಾಂತಿಗಿಂತ ಮುಖ್ಯವಾಗಿ ಸರ್ವಾಂಗೀಣ ಪ್ರಗತಿ ಆಗಬೇಕು ಎಂಬ ಹಲವರ ಆಸೆಯೇ ಅವರ ಆಸಕ್ತಿಯಾಗಿತ್ತು. ಬಹಳ ಕನ್ವಿನ್ಸಿಂಗ್ ಆಗಿ ಮಾತಾಡಲು ಅವರಿಗೆ ಸಾಧ್ಯವಾಗದಿದ್ದರೂ, ತನ್ನ ನಿಲುವಿನಲ್ಲಿ ಅವರಿಗಿರುವ ಬದ್ಧತೆ-ನಂಬಿಕೆ ಸ್ಪಷ್ಟವಾಗಿ ತಿಳಿಯುವಂತಿತ್ತು. ಬೆಂಗಳೂರಿನಿಂದ ೨೦ಕಿಮೀ ಆಚೆಗಿನ ಹಳ್ಳಿಯಲ್ಲಿ, ಫೋನು-ಕರೆಂಟು-ಟಿವಿ ಇತ್ಯಾದಿ ಸರಿಯಾದ ಸೌಲಭ್ಯಗಳಿಲ್ಲದಲ್ಲಿ ಅವರು ಬದುಕುತ್ತಿರುವುದು ಸಾಹಸದಂತೆ ಮಹಾ ಪಟ್ಟಣಿಗರಿಗೆ ಕಂಡರೆ, ಈ ಮಹಾನಗರಗಳಲ್ಲಿ ಬದುಕುವುದೇ ಸಾಹಸ ಅಂತ ಹೆಗಡೆ ಅಂದುಕೊಂಡಿದ್ದರು. ಯಾವುದು ಅತ್ಯಂತ ಸರಳವೋ ಅದನ್ನೇ ಭಾರೀ ಸಾಹಸವೆಂಬಂತೆ ಕಾಣಿಸಿರುವ ತಂತ್ರಜ್ಞಾನದ ಶಕ್ತಿಯ ಅನಾವರಣ ಅದರಿಂದಾಯಿತು.

ನಾಗೇಶ ಹೆಗಡೆಯವರು ಹೇಳಿದ ಥರಾ ಇನ್ನು ಐವತ್ತು ವರ್ಷಗಳಲ್ಲಿ ಏನೂ ಮುಳುಗಿ ಹೋಗೊಲ್ಲಾರೀ. ಒಂದು ಮೇರೆಮೀರಿದರೆ ಅದಕ್ಕೆ ಪ್ರತಿಯಾದ್ದನ್ನ ವಿಜ್ಞಾನ ಕಂಡುಹಿಡಿಯತ್ತೆ. ಪೆಟ್ರೋಲ್ ಮುಗಿದ್ರೆ, ನೀರಿನ ಕೊರತೆಯಾದ್ರೆ ಮತ್ತೊಂದು ದಾರಿ ತೆರೆದುಕೊಂಡಿರತ್ತೆ. ಈಗ ಹಳ್ಳಿಯೋರೆಲ್ಲ ಪೇಟೆಗೆ ಬಂದಿದ್ದಾರೆ. ಇಲ್ಲಿ ಅವಕಾಶಗಳೆಲ್ಲ ಕಡಿಮೆಯಾದಾಗ ಮತ್ತೆ ಜನ ಹಳ್ಳಿಗೆ ಹೋಗ್ತಾರೆ. ಪರಿಸರ ಮಾಲಿನ್ಯ ಸ್ವಲ್ಪ ಹೆಚ್ಚಾಗಿದೆ ಹೌದು. ಅದಕ್ಕೆಲ್ಲ ತಲೆ ಕೆಡಿಸ್ಕೋಬಾರ್ದು, ಎಡ್ಜೆಸ್ಟ್ ಮಾಡ್ಕೊಂಡು ಹೋಗ್‌ಬೇಕ್ರೀ. ಸ್ವಲ್ಪ ಕಡಿಮೆ ದಿನ ಬದುಕಿದ್ರೂ ಪರವಾಗಿಲ್ಲ, ಇಷ್ಟೆಲ್ಲಾ ಇರೋವಾಗ ಎಂಜಾಯ್ ಮಾಡಿ ಸಾಯ್ಬೇಕು !-ಎಂಬ ಮಾತುಗಳೂ ಹಲವರ ನಾಲಗೆಯ ಕೆಳಗೆ ಸುಳಿಯುತ್ತಿದ್ದವೇನೋ. ನಾಗೇಶ ಹೆಗಡೆ ಮಾತ್ರ ನಗುನಗುತ್ತಲೇ ಇದ್ದರು.

ನಾವು ಆನಂದವಾಗಿ ಬದುಕುವುದು ಎಂದರೆ ನಮ್ಮ ಸುತ್ತಲಿನ ಚೇತನ-ಅಚೇತನ ಪರಿಸರವನ್ನು ಆನಂದವಾಗಿ, ಸೌಖ್ಯವಾಗಿ ಇಡುವುದು ಎಂಬ ಸರಳ ಸತ್ಯವನ್ನು ನೆನಪಿಸಿಕೊಳ್ಳುವುದಕ್ಕೆ ಇಷ್ಟೆಲ್ಲ ಬರೆಯಬೇಕಾಯಿತು.

Read more...

May 06, 2009

ಒಂದು ಲೀವ್ ನೋಟ್

ಪ್ರಿಲ್ ೧೦ರಂದು ಶಾಲೆಯ ನೋಟಿಸ್ ಬೋರ್ಡಿನಲ್ಲಿ ‘ಪಾಸಾ ಫೇಲಾ’ ನೋಡಿದರೆ ಮುಗಿಯಿತು. ಮಾರ್ಕುಗಳನ್ನೂ ಹೇಳುವ ಕ್ರಮ ಇಲ್ಲ ! ಫೇಲಾಗುವ ಭಯ ಇರುವವರ್‍ಯಾರೂ ಬೆಳಗ್ಗೆ ಬರುತ್ತಿರಲಿಲ್ಲ. ಅವರು ಮಧ್ಯಾಹ್ನ ನಂತರ ಬಂದು ಇಣುಕಿ ನೋಡಿಕೊಂಡು ಹೋಗುವುದು. ಅಮ್ಮ ಇವತ್ತು ಮಾತ್ರ, ಮಗನ ಒತ್ತಾಯದಂತೆ ತಣ್ಣೀರಿನಲ್ಲೇ ಮಾವಿನ ಹಣ್ಣಿನ ಜ್ಯೂಸ್ ಮಾಡಿಟ್ಟು ಕಾಯುತ್ತಿದ್ದಾಳೆ ! ಮಗ ಎಲ್ಲೇ ಹೋದರೂ, ಏನೇ ಮಾಡಿದರೂ ಕಣ್ಣಿಟ್ಟಿರುತ್ತಿದ್ದ ಅಪ್ಪನಿಗೆ ಇವತ್ತು ಕ್ಯಾರೇ ಇಲ್ಲ ! ಆ ಬಿಸಿಲೇರಿರುವ ಮಧ್ಯಾಹ್ನ, ಮಕ್ಕಳು ಶಾಲೆಯಿಂದ ಹೊರಟರೆ ಲಂಗುಲಗಾಮೇ ಇಲ್ಲ. ಅವರು ಹೋದದ್ದೇ ದಾರಿ. ಒಂದುವಾರ ಬಿಟ್ಟು ಅಜ್ಜನಮನೆಗೆ ಹೋಗುವುದಿದೆ. ಮೈಸೂರಿನಲ್ಲಿರುವ ದೊಡ್ಡಮ್ಮನ ಮನೆಗೆ ಈ ಸಲ ಹೋಗುವುದೇ ಅಂತ ಅಮ್ಮ ಹೇಳಿದ್ದಾಳೆ. ಮಗಳಿಗೆ ಚೆಸ್ ಕಲಿಸಿಕೊಡುತ್ತೇನೆಂದು ಅಪ್ಪನೂ, ಈಜು ಕಲಿಸುತ್ತೇನೆಂದು ಮೇಲಿನ ಮನೆಯ ಚಿಕ್ಕಪ್ಪನೂ, ಸೈಕಲ್ ಕಲಿಸುತ್ತೇನೆಂದು ಕ್ಲಾಸ್‌ಮೇಟ್ ಹನೀಫನೂ ಮಾತುಕೊಟ್ಟಿದ್ದಾರೆ. ಬಿರು ಬೇಸಿಗೆಯ ಈ ರಜೆಯಲ್ಲಿ ಮಕ್ಕಳೂ ಹಣ್ಣಾಗುತ್ತಾರೆ .

ಆದರೀಗ ಬಿಸಿಲುಮಳೆಚಳಿಗಳೊಂದಿಗೆ ಕಾಲವೂ ಬದಲಾಗಿದೆ. ಬೇಸಿಗೆ ರಜೆ ಅಂದರೆ ಸಮ್ಮರ್ ಹಾಲಿಡೇಸ್. ಕಂಪ್ಯೂಟರ್ ಕ್ಲಾಸು, ಡ್ಯಾನ್ಸ್ ಕ್ಲಾಸು, ಎಕ್ಸ್‌ಪರ್ಟ್ ಕೋಚಿಂಗು ಕಡ್ಡಾಯ. ರಜೆಯನ್ನು ಮಕ್ಕಳು ಸದುಪಯೋಗಪಡಿಸುವುದು ಹೇಗೆ ಎಂಬ ಬಗ್ಗೆ ಹಲವು ಅಪ್ಪಅಮ್ಮಂದಿರ ಮಧ್ಯೆ ಗಂಭೀರ ಚರ್ಚೆಗಳು ನಡೆಯುತ್ತವೆ. ಶಾಲೆಯ ದಿನಗಳಲ್ಲಿ ಖರ್ಚಾದಷ್ಟೇ ದುಡ್ಡು ರಜೆಯಲ್ಲೂ ಖರ್ಚಾಗುತ್ತದೆ. ಅಪ್ಪ-ಅಮ್ಮ ಇಬ್ಬರೂ ದುಡಿಯಲು ಹೊರಟಿರುವಾಗ ಮಕ್ಕಳನ್ನು ಏನು ಮಾಡುವುದು, ತಮಗೊಂದು ತುಂಡು ಭೂಮಿಯೂ ಇಲ್ಲದಿರುವಾಗ ಮಗ ಚೆನ್ನಾಗಿ ಕಲಿತು ಸಂಪಾದಿಸಿ ಒಂದೆರಡು ಸೈಟು ಮಾಡುವಂತಾಗಲಿ, ರಜೆ ಅಂತ ಬೇಕಾಬಿಟ್ಟಿ ಉಂಡಾಡಿ ವ್ಯರ್ಥ ಮಾಡುವುದರಲ್ಲಿ ಏನರ್ಥ?...ಹೀಗೆ ನಾನಾ ಯೋಚನೆಗಳು. ಜತೆಗೆ ಹೈಸ್ಕೂಲಿಗೆಲ್ಲಿಗೆ ಕಳುಹಿಸುವುದು, ಯಾವ ಕಾಲೇಜಿಗೆ ಸೇರಿಸುವುದೆಂಬುದಂತೂ ದೊಡ್ಡ ಕಗ್ಗಂಟು. ಆಟದ ಸಮಯ ಈಗಲೂ ಇದೆಯಾದರೂ ಅಜ್ಜನಮನೆಯ ಕಲಿಕೆಯಲ್ಲಿರುವಷ್ಟು ವಿರಾಮ ಇಲ್ಲ. ದುಡ್ಡು ಕೊಟ್ಟ ಮೇಲೆ ಕಲಿಯದೆಯೂ ಇರುವಂತಿಲ್ಲ! ಹೊತ್ತುಹೊತ್ತಿಗೆ ಮಜ್ಜಿಗೆ- ಶರಬತ್ತು ಕುಡಿಯುವ, ಮಾವಿನಕಾಯಿಗೆ ಕಲ್ಲು ಬೀಸುವ, ಅಜ್ಜಿ ಕತೆ ಕೇಳುವ, ತೋಟದಲ್ಲಿ ಓಡಾಡುವ ಗಮ್ಮತ್ತು ಇಲ್ಲ.

ಛೆ ಅಷ್ಟರಲ್ಲಿ ರಜವೇ ಮುಗೀತಲ್ಲ ! ಈ ಮಕ್ಕಳು ಬೆಳಿಯೋದೂ ರಜೆ ಮುಗಿಯೋದೂ ಗೊತ್ತೇ ಆಗಲ್ಲ . ನಮ್ಮ ಆಫೀಸಲ್ಲಂತೂ ಈಗ ಒಂದು ರಜೆ ಹಾಕೋದೂ ಭಾರೀ ಕಷ್ಟ . ಹತ್ತು ದಿನ ರಜಾ ಹಾಕಿ ಉತ್ತರ ಭಾರತ ಪುಣ್ಯ ಕ್ಷೇತ್ರ ದರ್ಶನ ಮಾಡಬೇಕೂಂತ ವರ್ಷಗಳಿಂದ ಆಸೆ. ಈ ಜನ್ಮದಲ್ಲಿ ಆಗಲ್ವೇನೋ. ಇ ಮೇಲ್ ಮಾಡಿ, ನೋಡೋಣ ಅಂತಾರೆ. ಏನ್ ನೋಡೋದು, ನನ್ ಸೆಕ್ಷನ್ ದೀಪಾಗೆ ಕೇಳಿದಾಗೆಲ್ಲ ರಜಾ ಸಿಗತ್ತೆ. ನನಗೆ ಒಂದು ದಿನ ರಜಾ ಸಿಕ್ಕಿದ್ರೆ ಹೆಂಡ್ತಿ ಜತೆ ಸಿಟ್ಟು ಮಾಡ್ಕೊಂಡು ಕೂತಿರ್‍ತೀನಿ !...ಹೂಂ.

Read more...

April 03, 2009

ಕಲಾಕ್ಷೇತ್ರದಲ್ಲಿ ಪುಕ್ಕಟೆ ಹಿಂಸೆ

ಡಾಕ್ಟರೇಟ್‌ಗಳು-ಪ್ರಶಸ್ತಿಗಳು ನಾಚಿಕೆಗೇಡಿನ ವಸ್ತುಗಳಾಗಿರುವುದು ಈಗ ಮಾಮೂಲಿ ಸಂಗತಿ. ಅವುಗಳ ಜತೆಗೆ ಸಭಾ ಕಾರ್ಯಕ್ರಮಗಳೂ ಸೇರಿಕೊಳ್ಳುತ್ತಿರುವುದು ಮತ್ತೊಂದು ಬೇಸರದ ವಿಷಯ. ಕೇವಲ ಕಾಟಾಚಾರಕ್ಕಾಗಿ (ಕ್ಲೀಷೆಯಾದರೂ ಎಷ್ಟೊಳ್ಳೆಯ ಪದ-ಆಚಾರದ ಕಾಟ !) ನಡೆಯುವ ಈ ಸಭಾ ಕಾರ್ಯಕ್ರಮಗಳು ಪ್ರಚಾರದ ಮಾಧ್ಯಮ ವರದಿಗಾಗಿ, ಪ್ರಾಯೋಜಕರ ಸಂತೃಪ್ತಿಗಾಗಿ, ಅತಿಥಿಗಳ ಸಂತೋಷಕ್ಕಾಗಿ ಅತ್ಯಗತ್ಯ ಎನಿಸಿವೆ. ಆದರೆ ಅಂತಹ ಕಾರ್ಯದಲ್ಲೂ ಕನಿಷ್ಠ ಪ್ರಾಮಾಣಿಕತೆ ಕಾಣಿಸಬೇಕಲ್ಲ.

ಕಾರ್ಯಕ್ರಮವನ್ನು ಸಂಘಟಿಸಿದ ಸಂಸ್ಥೆಯ ಅಧ್ಯಕ್ಷರು, ವೇದಿಕೆಯಲ್ಲಿರುವ ಗಣ್ಯರ ಜತೆ ಕೊನೆಯ ಕುರ್ಚಿಯಲ್ಲಿ ಕೂರುವುದನ್ನಷ್ಟೇ ನಮ್ಮೂರಿನಲ್ಲಿ ನೋಡಿದ್ದವನು ನಾನು. ಕಳೆದ ಶುಕ್ರವಾರ (ಏ.೩) ಕಲಾಕ್ಷೇತ್ರದಲ್ಲಿ, ಸಂಸ್ಥೆಯ ಅಧ್ಯಕ್ಷರು ಅತಿಥಿಗಳ ಮಧ್ಯೆ ಕುಳಿತಿದ್ದರು. ಕಾರಣ ಇಷ್ಟೆ, ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ, ಎದುರಿರುವ ನೂರಾರು ಜನರ ಕಣ್ಣು ತಪ್ಪಿಸಿದವರಂತೆ ಕಾರ್ಯದರ್ಶಿಗಳೂ, ಮತ್ತೊಬ್ಬ ಪದಾಧಿಕಾರಿಯೂ ಬಂದು ಕೊನೆಯ ಆಸನಗಳಲ್ಲಿ ವಿರಾಜಮಾನರಾದರು ! ಪ್ರಾಸ್ತಾವಿಕ ಭಾಷಣ ಆರಂಭ. ಅದ್ಭುತ, ಮಹತ್ವದ, ಅತ್ಯುತ್ತಮ, ಅಪ್ರತಿಮ ಎಂಬ ಪದಗಳೆಲ್ಲ ಟೊಳ್ಳು ಎನ್ನುವುದನ್ನು ಸಾಬೀತುಪಡಿಸುವಂತೆ, ಅವನ್ನೆಲ್ಲ ಲೀಲಾಜಾಲವಾಗಿ ಎತ್ತಿ ಒಗೆಯುತ್ತಿದ್ದ ಪರಿ ನೋಡಿದರೆ ಕನ್ನಡಿಗರು ದಂಗಾಗಬೇಕು. ಆಗ ರಂಗಭೂಮಿಯ ಹಿರಿಯ ಕಲಾವಿದೆ ಪ್ರಮೀಳಾ ಗುಡೂರರಿಗೆ ಸನ್ಮಾನ. (ಅವರೀಗ 'ಮುತ್ತಿನ ತೋರಣ’ ಟಿವಿ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ) 'ಈ ಅಪ್ರತಿಮ ಕಲಾವಿದೆಗೆ ನಾವು ಕೇವಲ ಬೊಕ್ಕೆ , ಹಣ್ಣು ಕೊಟ್ಟು ಕಳುಹಿಸುತ್ತಿಲ್ಲ. ನಮ್ಮ ಉದ್ಯಮಿಗಳೂ ಸಮಾಜಸೇವಕರೂ ಆದ ರೆಡ್ಡಿಯವರು ಹತ್ತು ಸಹಸ್ರ (ಸಹಸ್ರ- ಸಾವಿರಗಳ ಮಧ್ಯೆ ಕನ್‌ಫ್ಯೂಸಾಗಿ, ತಡವರಿಸಿ!), ಹತ್ತು ಸಾವಿರ ರೂ ಹಾಗೂ ರೇಷ್ಮೆ ಸೀರೆಯನ್ನು ಕಾಣಿಕೆಯಾಗಿ ನೀಡುತ್ತಿದ್ದಾರೆ’ ಅಂತ ಘೋಷಣೆಯಾಯಿತು. ಆ ಕಲಾವಿದೆಯ ಮೊಮ್ಮಗನಂತಿರುವ ಸಮಾಜಸೇವಕರೂ ವೇದಿಕೆಯಲ್ಲೇ ಕುಳಿತಿದ್ದರಲ್ಲ, ಅವರೆದ್ದು ಬಂದು ಆಕೆಯನ್ನು ಸನ್ಮಾನಿಸಿದ್ದೂ ಆಯಿತು.

ನಂತರ ಭಾಷಣಗಳು ಶುರುವಾದವು. ಮಧ್ಯೆ ಕುಳಿತ ಕರಿಬಸವಯ್ಯನವರಂತೂ ತೆರೆಯ ಹಿಂದಿದ್ದವರಿಗೆ-ದೂರದಲ್ಲಿ ಲೈಟಿಂಗ್ ಮಾಡುತ್ತಿದ್ದವರಿಗೆ-ಸಭೆಯ ಮಧ್ಯದಲ್ಲಿದ್ದ ಯಾರೋ ಪರಿಚಿತರಿಗೆ-ವೇದಿಕೆಯಲ್ಲಿ ನಿರೂಪಣೆ ಮಾಡುತ್ತಿದ್ದವರಿಗೆ, ಹೀಗೆ ಎಲ್ಲೆಂದರಲ್ಲಿ ಕೈಸನ್ನೆ ಮಾಡುವುದೂ, ಪಿಸುಗುಟ್ಟುವುದೂ ಕ್ಷಣಕ್ಷಣಕ್ಕೂ ಹೆಚ್ಚುತ್ತಿತ್ತು. ಜತೆಗೆ ಭಾಷಣ ಮಾಡುತ್ತಿರುವವರ ಕಡೆ ನೋಡಿ ಸಮಯಪ್ರಜ್ಞೆಯಿಂದ ಅಹುದಹುದೆಂದು ತಲೆಯಾಡಿಸುತ್ತಲೂ ಇದ್ದರು! ಇನ್ನು, ಭಾಷಣಕಾರರ ಒಂದು ವಾಕ್ಯ ಬಿಟ್ಟು ಇನ್ನೊಂದು ವಾಕ್ಯಕ್ಕೆ ಎಲ್ಲಿ, ಹೇಗೆ ಸಭಿಕರು ಚಪ್ಪಾಳೆ ಹೊಡೆಯಬೇಕೆಂದು, ತಾವೇ ಮುಂದಾಗಿ ಹೊಡೆದು ತೋರಿಸುತ್ತಿದ್ದವರು ಕರಿಬಸವಯ್ಯ ಮತ್ತು ಅತಿಥಿಯಾಗಿದ್ದ ನಟ ನಾಗರಾಜಮೂರ್ತಿಗಳು. (ಅಶ್ವತ್ಥರ ಗಾಯನ ಕಾರ್ಯಕ್ರಮದಲ್ಲಿ ತಾಳ ಹೊಂದಿಸಲು ಇಬ್ಬರು ಸಭಿಕರಿಗೆ ಬೆನ್ನು ಹಾಕಿ ಕೈಯಾಡಿಸುತ್ತಾ ನಿಂತಿರುವುದನ್ನು ನೋಡಿರುತ್ತೀರಲ್ಲ ಹಾಗೆ !) ತಾನು ಬೆಂಗಳೂರನ್ನು ಮೊದಲು ನೋಡಿದ್ದೇ ಬಹಳ ಇತ್ತೀಚೆಗೆ ಎಂಬ ಗುಡೂರರ ಮುಗ್ಧ ಮಾತಿಗೂ ಇವರು ಮೊದಲಾಗಿ ಕೈ ತಟ್ಟಿ, ಎಲ್ಲರೂ ಚಪ್ಪಾಳೆ ಹೊಡೆಯಲು ಸೂಚಿಸಿದರು! ಇನ್ನು ಅತಿಥಿಗಳಿಗೆ ಹಾರ ಹಾಕಿ ಸ್ಮರಣಿಕೆ ಕೊಟ್ಟಾಗಲಂತೂ ಕರಿಬಸವಯ್ಯರು ಕಣ್ಣಗಲಿಸಿಕೊಂಡು ಫೋಸು ನೀಡುತ್ತಿದ್ದರಾದರೂ, ಅಲ್ಲಿ ಯಾವ ಫೋಟೊಗ್ರಾಫರೂ ಇಲ್ಲದ್ದು ಒಂದೆರಡು ಕ್ಷಣಗಳಲ್ಲಿ ಅರಿವಾಗಿ ಸಹಜ ಸ್ಥಿತಿಗೆ ಮರಳುತ್ತಿದ್ದರು ! ಸಭಾ ಕಾರ್ಯಕ್ರಮದ ಕೊನೆಗೆ, ಹೆಸರು ಘೋಷಿಸಲು ಇಚ್ಛಿಸದ ವ್ಯಕ್ತಿಯೊಬ್ಬರು, ಕಲಾವಿದೆ ಗುಡೂರರಿಗೆ ಹತ್ತು ಸಾವಿರ ರೂ. ಕೊಡಲಿದ್ದಾರೆಂದು ಪ್ರಕಟಿಸಲಾಯಿತು. ವೇದಿಕೆಯಲ್ಲಿದ್ದ ಸಮಾಜಸೇವಕರಿಗೆ ಇದಕ್ಕಿಂತ ದೊಡ್ಡ ಮಂಗಳಾರತಿ ಬೇರೆ ಬೇಕಾ?!

ಅಂತೂ ಏಳೂ ಮುಕ್ಕಾಲರ ಹೊತ್ತಿಗೆ, ಶಿವರಾಮ ಕಾರಂತರ 'ಮೈಮನಗಳ ಸುಳಿಯಲ್ಲಿ’ ಕಾದಂಬರಿ ನಾಟಕವಾಗಿ ರಂಗಕ್ಕೆ ಬಂತು. ೨೦ನೇ ವರ್ಷಕ್ಕೆ ಕಾಲಿಟ್ಟಿರುವ ಸಂಸ್ಥೆಯ ನಾಟಕಕ್ಕೆ, ನಿರ್ದೇಶಕರಾದ ಕೆ.ಎಸ್.ಡಿ.ಎಲ್.ಚಂದ್ರುರವರು ರೆಕಾರ್ಡೆಡ್ ಸಂಗೀತ ಬಳಸಿದ್ದರು ಅಂದರೆ ನೀವು ನಂಬಬೇಕು. ಅದೂ ದೃಶ್ಯದ ಕೊನೆಗೆ ಒಂಚೂರು. ಎರಡು ಪಾತ್ರಗಳ ಸಂಭಾಷಣೆ. ಅದು ನಿಂತಾಗಲಂತೂ ಅಸಹನೀಯ ಮೌನ. ನಾನಂತೂ ಆ ಕಾದಂಬರಿ ಓದದವನು. ಅದನ್ನು ಓದಿ ನಾಟಕ ನೋಡಹೋದವರನ್ನಂತೂ ಆ ಕಾರಂತರೇ ಕಾಪಾಡಬೇಕು. ಮಧ್ಯೆ ಎಲ್ಲೋ ಕ್ಯಾಸೆಟ್ ಜಂಗ್‌ಜಂಗ್ ಎಂದು ಸದ್ದು ಮಾಡಿ ನಿಲ್ಲುವುದು, ಕತ್ತಲಾಗಿ ಬೆಳಕು ಚೆಲ್ಲಿದ ಮೇಲೂ ನಟರಿಗೆ ಗ್ರೀನ್‌ರೂಂ ದಾರಿ ತಿಳಿಯದಿರುವುದು, ದಡಬಡ ಸದ್ದಾಗುವುದು...ಹೀಗೆ ನಿರಂತರ ಆಭಾಸ. ಈ ಎಲ್ಲದರ ಮಧ್ಯೆ ಕಲಾಕ್ಷೇತ್ರದಲ್ಲಿ ತುಂಬಿದ್ದ ಜನರನ್ನು ಕೊಂಚವಾದರೂ ಮುದಗೊಳಿಸಿದ್ದು, ಕಾರಂತರ ಕಾದಂಬರಿಯ ಸಾಲುಗಳು ಮಾತ್ರ.

ಪುಕ್ಕಟೆ ನಾಟಕಕ್ಕೆ ಹೋಗಿ, ಈ ಪರಿ ರೂಪಾಂತರದ ಅವಾಂತರಗಳನ್ನು ನೋಡಿದ್ದು ಇದೇ ಮೊದಲು. ಹಿಂದಿನ ದಿನ ನಡೆದ 'ಬಡೇಸಾಬು ಪುರಾಣ’ ನಾಟಕ ಪರವಾಗಿಲ್ಲ, ಚೆನ್ನಾಗಿತ್ತು- ಎಂಬ ಸ್ನೇಹಿತರ ಮಾತು ಕೇಳಿ ನನ್ನಂಥವರು ಹೋದರೆ ಹೀಗೂ ಆಗೋದಾ? ಅಂತೂ ಸಭಾ ಕಾರ್ಯಕ್ರಮ-ನಾಟಕದ ಎಲ್ಲ ಅಪಸವ್ಯಗಳ ನಡುವೆ, ಕರಿಬಸವಯ್ಯರ ಹೃದಯದಿಂದ ಬಂದ ಒಂದೇಒಂದು ಸತ್ಯವಾದ ಮಾತು- 'ನೀವು ಬೇಗ ಬೇಗ ಚಪ್ಪಾಳೆ ತಟ್ಟಿದ್ರೆ ಸಭಾ ಕಾರ್ಯಕ್ರಮ ಬೇಗ ಮುಗೀತದೆ!’

Read more...

March 27, 2009

ರಾಕ್ಷಸ ಟ್ರಕ್ ಹಸಿದಿದೆ

ದ್ದುದ್ದ ಚಾಚಿಕೊಂಡಿರುವ ನುಣ್ಣನೆ ರಸ್ತೆ. ಮನುಷ್ಯರ ವಸತಿ-ವಾಹನಗಳ ಸುಳಿವೇ ಅಪರೂಪ. ಫಿಯೆಟ್‌ನಂತಿರುವ ಕೆಂಪು ಕಾರಿನಲ್ಲಿ, ವ್ಯಾಪಾರದ ಕೆಲಸ ನಿಮಿತ್ತ ಹೊರಟಿದ್ದಾನೆ ಡೇವಿಡ್ ಮೇನ್. ರೇಡಿಯೊದಲ್ಲಿ ಯಾರದ್ದೋ ಸಂಭಾಷಣೆಗೆ ನಗುತ್ತಾ ಅವನದ್ದು ನಿರಾಯಾಸ ಚಾಲನೆ. ಅದ್ಯಾವುದೋ ಒಂದು ಲಡಕಾಸು ಲಾರಿ, ೪೦ ಟನ್ ಭಾರದ್ದು, ೧೮ ಚಕ್ರಗಳದ್ದು ! ಮಾರ್ಗ ಮಧ್ಯೆ ಸಿಕ್ಕಿದೆ. ತುಕ್ಕು ಹಿಡಿದ ದೊಡ್ಡ ಟ್ಯಾಂಕರ್ ಹೊಂದಿರುವ ಅದರಲ್ಲಿ Highly Inflammable ಎಂಬ ಬರೆಹವೂ, ಮೂರು ನಂಬರ್ ಪ್ಲೇಟ್‌ಗಳೂ ! ಫ್ರಂಟ್ ಎಂಜಿನ್ ಹೊಂದಿರುವ ಅದು, ಎದುರಿರುವ ಕೊಳವೆಯಲ್ಲಿ ರೈಲಿನಂತೆ ಬುಸುಬುಸು ಹೊಗೆ ಬಿಡುತ್ತಿದೆ. ಕಾರಿಗೆ ಸರಿಯಾಗಿ ದಾರಿಯೂ ಬಿಡಲೊಲ್ಲದು. ‘ಥೂ, ಇವನಿಗೆ ಗಾಡಿ ಓಡಿಸಲೂ ಬರುವುದಿಲ್ಲ’ ಎಂಬ ಗೊಣಗಾಟದಿಂದ ಆರಂಭವಾದ ಡೇವಿಡ್‌ನ ಅಸಹನೆ, ನಿಧಾನ ಸ್ಪರ್ಧೆಯಾಗಿ ಮಾರ್ಪಡುತ್ತಿದೆ. ಈತ ಕಾರು ನಿಲ್ಲಿಸಿದರೆ ನಿಲ್ಲುವ, ಹೊರಟರೆ ದಾರಿಗಡ್ಡ ಬರುವ ಲಾರಿ ಅದು. ಏನೋ ಆ ಡ್ರೈವರು ಆಟ ಆಡುತ್ತಿದ್ದಾನೆಂದು ತಿಳಿದು ಥ್ರಿಲ್ಲಾಗುತ್ತಿದ್ದರೆ ನಿಧಾನವಾಗಿ ಅದು ಆತಂಕಕ್ಕೆಡೆ ಮಾಡಿದೆ. ಸಮತಟ್ಟು ರಸ್ತೆಯಲ್ಲಂತೂ ಕಾರು ೮೦ಕಿಮೀ ವೇಗದಲ್ಲಿ ಸಾಗಿದರೂ, ಘ್ರಾ.....ಅನ್ನುತ್ತಾ ಬಿಡದೆ ಬೆಂಬತ್ತುತ್ತಿದೆ ಆ ದೈತ್ಯ ಟ್ರಕ್. ಪೊಲೀಸರಿಗೆ ಕರೆ ಮಾಡಲು, ರಸ್ತೆ ಪಕ್ಕದ ಟೆಲಿಫೋನ್ ಬೂತ್ ಹೊಕ್ಕರೆ, ಅದನ್ನೇ ಧ್ವಂಸ ಮಾಡುತ್ತಿದೆ. ಮುಂದೆ ಹೋಗೆಂದು ಆಗೀಗ ಲಾರಿ ಡ್ರೈವರ್ ಕೈ ಬೀಸುತ್ತಾನೆ. ಓವರ್‌ಟೇಕ್ ಮಾಡಹೊರಟರೆ...ಅಬ್ಬಾ ಜುಂಮ್....! ಆ ಟ್ರಕ್ ಚಾಲಕ, ಡೇವಿಡ್‌ನನ್ನು ಕೊಲ್ಲಲೆಂದೇ ಹುಟ್ಟಿದವನಂತಿದ್ದಾನೆ. ಈ ಪಯಣ ಎಲ್ಲಿವರೆಗೆ? ಸ್ಟೀವನ್ ಸ್ಪಿಲ್‌ಬರ್ಗ್ ಎಂದರೆ ಎಲ್ಲರಿಗೂ ನೆನಪಾಗದಿರಬಹುದು, ಆದರೆ ಆತನ ನಿರ್ದೇಶನದಲ್ಲಿ ೧೯೯೩ರಲ್ಲಿ ಬಿಡುಗಡೆಯಾದ ‘ಜುರಾಸಿಕ್ ಪಾರ್ಕ್’ ಗೊತ್ತಿರಲೇಬೇಕು. ಅಂತಹ ನಿರ್ದೇಶಕ ಸ್ಪಿಲ್‌ಬರ್ಗ್ ತನ್ನ ೨೪ನೇ ವಯಸ್ಸಿನಲ್ಲಿ ನಿರ್ದೇಶಿಸಿದ ಮೊದಲ ಸಿನಿಮಾ ‘ಡ್ಯುಯಲ್’(DUEL). ೧೯೭೧ರಲ್ಲಿ ಬಿಡುಗಡೆಯಾದ ಇದೊಂದು ಕಾರು-ಲಾರಿಯ ದ್ವಂದ್ವಯುದ್ಧ. ಆಗಲೇ ಕಿರು ಚಿತ್ರಗಳಿಗೆ ನಿರ್ದೇಶನ-ಸಹ ನಿರ್ದೇಶನ ಮಾಡಿದ್ದ. ಟಿವಿ ಸೀರಿಯಲ್‌ಗಳಿಗೆ ಕೆಲಸ ಮಾಡಿದ್ದ ಸ್ಪಿಲ್‌ಬರ್ಗ್, ಡ್ಯುಯೆಲ್ ಚಿತ್ರದ ಬಳಿಕ, ಹಾಲಿವುಡ್‌ನ ಮಹೋನ್ನತ ನಿರ್ದೇಶಕ-ನಿರ್ಮಾಪಕನಾಗಿ ರೂಪುಗೊಳ್ಳುತ್ತ ಹೋದ. ರಾಶಿ ಸಂಪತ್ತಿನ ಒಡೆಯನಾಗಿ ಮೆರೆಯತೊಡಗಿದ. ಮೂರು ಆಸ್ಕರ್ ಪ್ರಶಸ್ತಿಗಳನ್ನೂ ಗೆದ್ದುಕೊಂಡ. ಡ್ಯುಯೆಲ್ ಅನ್ನು ಟಿವಿಗಾಗಿ ನಿರ್ಮಿಸಿದ್ದರೂ ಅದು ಕೆಲವೆಡೆ ಥಿಯೇಟರ್‌ಗಳಲ್ಲೂ ಬಿಡುಗಡೆಯಾಗಿ ಸಿನಿಮಾಸಕ್ತರ ಗಮನ ಸೆಳೆಯಿತು.

Fear is the driving force ಎನ್ನುವ ಅಡಿ ಶೀರ್ಷಿಕೆಯ, ಈ ಸಿನಿಮಾ ರಿಚರ್ಡ್ ಮ್ಯಾತ್‌ಸನ್‌ನ ಸಣ್ಣ ಕತೆ ಆಧರಿಸಿದ್ದು. ಚಿತ್ರಕತೆಯನ್ನು ಬರೆದವನೂ ಅವನೇ. ಅಷ್ಟಕ್ಕೂ ಇದರಲ್ಲಿ ಅಂಥಾ ಕತೆಯೇನೂ ಇಲ್ಲ. ಮಾತೂ ತೀರ ಕಡಿಮೆ. ಅಷ್ಟಲ್ಲದೆ ಹಾಡು, ಹೀರೋಯಿನ್ ಇಲ್ಲದೆಯೂ ಒಂದೂವರೆ ಗಂಟೆ ಕಾಲ, ನೋಡುಗ ಅತ್ತಿತ್ತ ಮಿಸುಕದಂತೆ ಮಾಡಬಲ್ಲ ಶಕ್ತಿ ಈ ಸಿನಿಮಾಕ್ಕಿದೆ. ಇದರಲ್ಲಿ ಕಾರಿನ ಡ್ರೈವರ್‌ಗೆ ಪ್ರತಿ ಪಾತ್ರವಾಗಿ ಕಾಣಿಸಿಕೊಳ್ಳುವ ಟ್ರಕ್‌ನ್ನು ಈಗಲೂ ಸುರಕ್ಷಿತವಾಗಿ ಕಾಪಿಡಲಾಗಿದೆ. ಆ ಬಗ್ಗೆ ವಿವರ ತಿಳಿಯಬೇಕಾದರೆ, ಫೋಟೊ ನೋಡಬೇಕಾದರೆ www.stlouisdumptrucks.com/Duel/index.html ಇಲ್ಲಿಗೆ ಹೋಗಬಹುದು.

ಕಾರು-ಟ್ರಕ್‌ಗಳ ರೇಸ್‌ನ ಈ ಸಿನಿಮಾಕ್ಕೆ ಅತ್ಯಂತ ನಿಖರವಾಗಿ ಕ್ಯಾಮೆರಾ ಹಿಡಿದವನು ಜ್ಯಾಕ್ ಎ. ಮಾರ್ತಾ . ೨೪ ವರ್ಷದ ನಿರ್ದೇಶಕನಿಗೆ ೬೭ ವರ್ಷದ ಕ್ಯಾಮೆರಾಮ್ಯಾನ್. ಒಂದೇಒಂದು ಶಾಟ್ ಕೂಡಾ ವ್ಯರ್ಥ ಅನ್ನಿಸದಂತೆ, ಸಿನಿಮಾದ ಬಿಗಿಯನ್ನು ಕಾಪಾಡಿಕೊಂಡದ್ದರಲ್ಲಿ ಜ್ಯಾಕ್ ಪಾಲು ದೊಡ್ಡದಿರಬಹುದು. ತೆರೆಯಲ್ಲಿ ಕಾರಿನ ಓಟ ನೋಡುತ್ತಾ ಕೊಂಚ ತಲೆತಿರುಗಿದಂತಾದರೆ ಈತನನ್ನು ನೆನೆಯಬೇಕು ! ಚಿತ್ರದ ಬಹುಭಾಗ ವೇಗದ ಚಲನೆಯೇ ಇರುವುದರಿಂದ, ಚಲಿಸುವ ಬಿಂಬಗಳನ್ನು ನಿಖರವಾಗಿ ಹಿಡಿಯುವುದು ಸುಲಭವೇನಲ್ಲ. ದಾರಿ ಮಧ್ಯೆಯ ಹೋಟೆಲ್‌ನಲ್ಲಿ ಡೇವಿಡ್ ಕುಳಿತು, ಟ್ರಕ್ ಚಾಲಕನನ್ನು ಹುಡುಕುವ ದೃಶ್ಯಗಳಲ್ಲಿ, ಮಾರ್ತಾ ಕ್ಯಾಮೆರಾ ನಮ್ಮ ಎದೆ ಬಡಿತವನ್ನು ಹಿಡಿಯುತ್ತದೆ. ಎಷ್ಟು ಬೇಕೋ ಅಷ್ಟೇ, ಎಲ್ಲಿ ಬೇಕೋ ಅಲ್ಲೇ, ಕ್ಯಾಮೆರಾ ಒಡ್ಡಿದ್ದಾನೆ ಆತ. ಕೊನೆಯ ದೃಶ್ಯವನ್ನಂತೂ ಟೈಟಾನಿಕ್ ತೋರಿಸಿದ ಹಾಗೆ, ಒಂದು ದೈತ್ಯಾಕಾರವನ್ನು ಚಿತ್ರಿಸಿರುವ ರೀತಿ ಆತನ ಸಾಮರ್ಥ್ಯದ ಸಿದ್ಧಿಯಂತಿದೆ.

ಡೇವಿಡ್ ಪ್ರಯಾಣ ಹೊರಟಿರುವ ಕಾರಿನ ರೇಡಿಯೊದಲ್ಲಿ ಯಾವುದೋ ಕುಟುಂಬದ ಸಮಸ್ಯೆಯ ಬಗ್ಗೆ ಪ್ರಶ್ನೋತ್ತರ ನಡೆಯುತ್ತಿದೆ. ಗಂಡಸೊಬ್ಬ ಫೋನ್ ಮಾಡಿ, ತಾನು ಹೊರಗಿನ ಕೆಲಸವನ್ನೆಲ್ಲ ಹೆಂಡತಿಗೆ ಬಿಟ್ಟು ಮನೆವಾರ್ತೆಯನ್ನಷ್ಟೇ ನೋಡಿಕೊಳ್ಳುತ್ತಿದ್ದೇನೆ. ಈಗ ನೆರೆಹೊರೆಯವರೆಲ್ಲ ಆಡಿಕೊಳ್ಳುತ್ತಿದ್ದಾರೆ ಏನು ಮಾಡಲಿ ಅನ್ನುತ್ತಿದ್ದಾನೆ. ಆದರೆ ಡೇವಿಡ್ ದಾರಿ ಮಧ್ಯೆ ಪೆಟ್ರೋಲ್ ಬಂಕ್ ಬೂತ್‌ನಿಂದ ಮನೆಗೆ ಫೋನ್ ಮಾಡಿದರೆ, ಹೆಂಡತಿಗೆ ಈತನ ಮೇಲೆ ಸಿಟ್ಟು. ನೀನು ಪಾರ್ಟಿಯೊಂದರಲ್ಲಿ ಅವಮಾನವಾದಾಗ ಗಂಡುಗಲಿಯಾಗಿ ನಡೆದುಕೊಳ್ಳಲಿಲ್ಲ, ರೇಪ್ ಮಾಡೋದಕ್ಕೆ ಮಾತ್ರ ಮನೆಗೆ ಬರ್‍ತೀಯ- ಅಂತ ಸಿಡಿಮಿಡಿಗೊಳ್ಳುತ್ತಾಳೆ. ಇಲ್ಲ ಸಮಯಕ್ಕೆ ಸರಿಯಾಗಿ ಖಂಡಿತಾ ಬರ್‍ತೀನಿ ಅಂತ ಆಶ್ವಾಸನೆ ಕೊಟ್ಟು ಮತ್ತೆ ಡ್ರೈವಿಂಗ್ ಶುರು ಮಾಡಿದ್ದಾನೆ. ರಾಕ್ಷಸ ಟ್ರಕ್ ಹಸಿದಿದೆ.

Read more...

March 08, 2009

ಕತ್ತಲಲ್ಲಿ ಸಿಕ್ಕಿದಂತೆ

ಮೊನ್ನೆಮೊನ್ನೆ ಒಂದು ರಾತ್ರಿ. ಬಹಳ ಅಪರೂಪಕ್ಕೆ ಕೈಗೊಂದು ಕ್ಯಾಮೆರಾ ಬಂತು. ಆಗ ಸಿಕ್ಕವು ಇಲ್ಲಿವೆ. ಹಾಗೆ ಸುಮ್ಮನೆ ಛಕ್‌ಛಕಾಛಕ್ ನೋಡಿ, ಹೋಗಿಬಿಡಿ !

Read more...

February 20, 2009

ದೇವರೂ ದೇವದೂತರೂ

ಲಾಹೋರ್‌ನಲ್ಲಿ ಒಂದು ಮುಸ್ಲಿಂ ಸಂಸಾರವಿದೆ. ಅದರ ಇಬ್ಬರು ಹುಡುಗರೂ ಒಳ್ಳೆಯ ಹಾಡುಗಾರರು. ಅವರಲ್ಲಿ ಎರಡನೆಯವನು ಇಸ್ಲಾಂ ಧರ್ಮಾಂಧರ ತೆಕ್ಕೆಗೆ ಬೀಳುತ್ತಿದ್ದಾನೆ. ಮುಸ್ಲಿಂ ಪತ್ನಿಯಿಂದ ವಿಚ್ಛೇದಿತನಾಗಿ, ಬ್ರಿಟಿಷ್ ಹೆಣ್ಣಿನೊಂದಿಗಿರುವ ಪಾಕಿಸ್ತಾನಿಯ ಸಂಸಾರವೊಂದು ಲಂಡನ್‌ನಲ್ಲಿದೆ. ಆ ವ್ಯಕ್ತಿಯ ಮಗಳು ಬ್ರಿಟಿಷ್ ಹುಡುಗನೊಬ್ಬನೊಂದಿಗೆ ಪ್ರೇಮದಲ್ಲಿ ಸಿಲುಕಿದ್ದಾಳೆ. ಅಪ್ಪ ಹೇಳುತ್ತಾನೆ -‘ಮಗಳೇ, ಇಸ್ಲಾಂನಲ್ಲಿ ಹುಡುಗ ಅನ್ಯ ಮತೀಯ ಹುಡುಗಿಯನ್ನು ಮದುವೆಯಾಗಬಹುದು. ಆದರೆ ಮುಸ್ಲಿಂ ಹುಡುಗಿ ಅನ್ಯಮತೀಯನನ್ನು ವರಿಸುವಂತಿಲ್ಲ. ಆದರೂ ನಿನ್ನ ಹಠದಿಂದಾಗಿ ಮದುವೆಗೆ ನಾನು ಒಪ್ಪಿದ್ದೇನೆ. ನಾವಿಬ್ಬರು ಒಮ್ಮೆ ಪಾಕಿಸ್ತಾನಕ್ಕೆ ಹೋಗಿ ಬರೋಣ,ಆಮೇಲೆ ಮದುವೆ ಆಗುವೆಯಂತೆ ’. ಆದರೆ ಆಮೇಲೆ ? ಧರ್ಮಾಂಧತೆಯು ಎಲ್ಲೆಲ್ಲೋ ಯಾರಲ್ಲೋ ಹೇಗೇಗೋ ಜಾಗೃತವಾಗುತ್ತಿದೆ.

ಇತ್ತ ಲಾಹೋರ್‌ನಲ್ಲಿದ್ದ ಹಿರಿಯ ಮಗ ಸಂಗೀತ ಕಲಿಕೆಗಾಗಿ ಅಮೆರಿಕಕ್ಕೆ ಹೋಗಿದ್ದಾನೆ. ಆಗ ಅಮೆರಿಕದ ಮೇಲೆ ‘೯/೧೧’ರ ದಿನ ಭಯೋತ್ಪಾದಕರ ಧಾಳಿಯಾಗಿದೆ. ಈ ತರುಣನ ಕುತ್ತಿಗೆಯ ತಾಯಿತದೊಳಗಿರುವ ಸಣ್ಣ ಪ್ಲಾಸ್ಟಿಕ್ ಹಾಳೆಯಲ್ಲಿ ಯಾವುದೋ ಸಂಕೇತಾಕ್ಷರಗಳಂತೆ ಕಾಣುವ ಅಂಕೆ ಅಕ್ಷರಗಳ ಮಂಡಲವಿದೆಯಲ್ಲ....ಅದರಲ್ಲಿನ ೯ ಮತ್ತು ೧೧ ನಂಬರ್‌ಗಳಿಗೆ ಅಮೆರಿಕದ ಪೊಲೀಸರು ಕೆಂಪು ಶಾಯಿಯಲ್ಲಿ ರೌಂಡ್ ಮಾರ್ಕ್ ಮಾಡುತ್ತಿದ್ದಾರೆ ! ನೀವು ನೋಡಿದ್ದೀರೋ ಇಲ್ಲವೋ ತಿಳಿಯದು. ‘ಖುದಾ ಕೇಲಿಯೆ’ ಎಂಬ ಪಾಕಿಸ್ತಾನಿ ಉರ್ದು ಭಾಷೆಯ ಆ ಸಿನಿಮಾ ದೇವರಿಗಾಗಿ ಮಾಡಿದ್ದಂತೂ ಅಲ್ಲ. ೨೦೦೭ರಲ್ಲಿ ಪಾಕಿಸ್ತಾನದಲ್ಲಿ ಬಿಡುಗಡೆಯಾಗಿ, ೨೦೦೮ ಏಪ್ರಿಲ್‌ನಲ್ಲಿ ಭಾರತದಲ್ಲೂ ಆ ಸಿನಿಮಾ ಬಂತು. ಸುಮಾರು ಎರಡೂಮುಕ್ಕಾಲು ಗಂಟೆ, ಲಾಹೋರ್-ಲಂಡನ್-ಚಿಕಾಗೊ ಹಾಗೂ ಪಾಕ್ ಅಫ್ಘನ್ ಗಡಿಯಲ್ಲಿ ನಡೆಯುವ ಚಿತ್ರ ಅದು. ಸಿನಿಮಾದ ಸುಮಾರು ೯ ಪುಟ್ಟ ಪುಟ್ಟ ಹಾಡುಗಳನ್ನು ಹಾಡಿದವರು ಹಲವರು. ಆದರೆ ಪ್ರತಿಯೊಂದು ಹಾಡು ಕೂಡಾ ಝರಿಝರಿಯಾಗಿ ಬಂದಿದೆ. ಸಿನಿಮಾದ ಸಂಗೀತ ನಿರ್ದೇಶಕ ರೊಹೈಲ್ ಹೇತ್ ಸೃಷ್ಟಿಸಿದ ಸುಕೋಮಲ ಧ್ವನಿ ಝೇಂಕಾರ ನಿಮ್ಮ ಎದೆಬಡಿತದೊಂದಿಗೆ ಸೇರಿಕೊಂಡೀತು ಹುಷಾರು !
ನಿರ್ಮಾಪಕ- ಟಿವಿ ಕಾರ್‍ಯಕ್ರಮ ನಿರ್ದೇಶಕ -ಬರಹಗಾರ-ಸಂಗೀತ ನಿರ್ದೇಶಕ...ಹೀಗೆ ಎಲ್ಲ ಪದವಿಗಳನ್ನು ಹೊತ್ತಿರುವ ಶೋಯಿಬ್ ಮನ್ಸೂರ್‌ಗೆ ಸಿನಿಮಾ ನಿರ್ದೇಶಕನಾಗಿ ಇದು ಮೊದಲ ಚಿತ್ರ. ಟಿವಿಯಲ್ಲಿ ಗೆದ್ದವರು ಥಿಯೇಟರ್‌ನಲ್ಲಿಯೂ ಗೆಲ್ಲುವುದು ಸುಲಭ ಅಲ್ಲ ಅಂತ ನಮಗೆ ಗೊತ್ತಿದೆಯಲ್ಲ. ಆದರೆ ಈ ಚಿತ್ರ ವಿಮರ್ಶಕರ ಗಮನವನ್ನೂ ಸೆಳೆಯಿತು, ಪಾಕ್‌ನ ಬಾಕ್ಸಾಫೀಸಿನಲ್ಲೂ ಹಿಟ್ ಆಯಿತಂತೆ. ಅತಿಥಿ ಕಲಾವಿದರಾಗಿರುವ ನಾಸಿರುದ್ದೀನ್ ಶಾ ಹೊರತುಪಡಿಸಿದರೆ, ಇದರ ನಟರೆಲ್ಲ ನಮಗೆ ಅಪರಿಚಿತರೇ. ಈ ಸಿನಿಮಾದ ಜೀವ ಶಕ್ತಿ ಇರುವುದು ಚಿತ್ರಕತೆ ಮತ್ತು ಸಂಗೀತದಲ್ಲಿ. ಬರಿಯ ಒಣ ಚರ್ಚೆಯೂ ಆಗಬಲ್ಲ ಕತೆಯನ್ನು ಮಾತಿನಲ್ಲೂ ದೃಶ್ಯದಲ್ಲೂ ಕರಗಿಸಿ, ಒಂದು ಹದ ಪಾಕದಲ್ಲಿ ಕೊಟ್ಟಿದ್ದಾರೆ ಶೋಯಬ್. ಉತ್ತರಾರ್ಧದಲ್ಲಿ , ಅಮೆರಿಕ-ಪಾಕಿಸ್ತಾನದಲ್ಲಿ ನಡೆಯುವ ಘಟನೆಗಳನ್ನು ಬಹಳ ಮಜಬೂತಾಗಿ ಒಂದರನಂತರ ಒಂದು ತುಂಡುತುಂಡು ದೃಶ್ಯಗಳನ್ನಿಟ್ಟು ತೋರಿಸುತ್ತಾರೆ. ಅಲ್ಲಿನ ಹೊಡೆತದ ನೋವು ಇಲ್ಲಿ ಕಾಣಿಸುತ್ತದೆ. ಇಲ್ಲಿನ ಹೂವು ಅಫ್ಗನ್ ಗಡಿಯಲ್ಲಿ ಅರಳುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಪುಸ್ತಕ ಓದಿಸಿಕೊಂಡು ಹೋಗುವಂತೆ, ನೋಡಿಸಿಕೊಂಡು ಹೋಗುವ ಗುಣವೂ ಇದಕ್ಕಿದೆ.

ಪಾಕಿಸ್ತಾನದ ಕೋರ್ಟ್‌ನಲ್ಲಿ ನಾಸಿರುದ್ದೀನ್ ಶಾ ‘ನಿಜ ಧರ್ಮ’ದ ಬಗ್ಗೆ ಹೇಳುತ್ತಾ ಪ್ರಶ್ನಿಸುತ್ತಾರೆ- ‘ಜಗತ್ತಿನಲ್ಲಿ ಇಷ್ಟೆಲ್ಲಾ ವೈವಿಧ್ಯ ಸೃಷ್ಟಿಸಿದ ದೇವರು, ಮುಸ್ಲಿಂ ಮಹಿಳೆಯರಿಗೆ ಮಾತ್ರ ಯೂನಿಫಾರ್ಮ್ ಕಡ್ಡಾಯ ಮಾಡಿಯಾನೇ?’ ಇದು ನಾವೆಲ್ಲ ಮೈಮರೆತು ನೋಡಬೇಕಾದ ಸಿನಿಮಾ.

Read more...

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP