February 26, 2008

ಪವಿತ್ರ ಬೆರಳಲ್ಲೆತ್ತಿ ನೋಡಿದೆವು ಆ ಅಗ್ರಹಾರವ !

ಯಾವ ಮನೆಯವರು ಸ್ವಾಗತಿಸಿದರೋ ತಿಳಿಯದು !
ಎರಡೆರಡು ಅಡಿ ಎತ್ತರದ ಮೆಟ್ಟಿಲುಗಳನ್ನು ಹತ್ತಿ, ಮುಖ್ಯ ಬಾಗಿಲಲ್ಲೇ ತಲೆ ಬಗ್ಗಿಸಿ, ಮುಂದಿನ ಬಾಗಿಲಿಗೆ ಕಾಲು ಕುಂಟಾಗಿಸಿ, ಸೊಂಟ, ಬೆನ್ನನ್ನೂ ಬಾಗಿಸಿ, ಕಾಲು ಎತ್ತಿಟ್ಟು ಒಂದೊಂದೇ ಹೊಸ್ತಿಲು ದಾಟುತ್ತಾ, ಹಿತ್ತಲಲ್ಲಿ ಹೊರಬಂದು, ಎರಡನೇ ಮನೆಯ ಬಚ್ಚಲು ಹೊಕ್ಕು ಕೈಕಾಲು ತೊಳೆದು, ಎದುರಿನ ಹಟ್ಟಿಯಲ್ಲಿ ಹೊರಬಂದು, ಮೂರನೇ ಮನೆಯ ಪಾಯಿಖಾನೆಯಲ್ಲಿ ಅವಸರದಲ್ಲೇ ಒಂಚೂರು ಕಾಲ ಕಳೆದು, ನಾಲ್ಕನೇ ಮನೆಯಲ್ಲಿರುವ ಮೂಲ ದೇವರಿಗೆ ಕೈಮುಗಿದು, ಐದನೇ ಮನೆಯಲ್ಲಿ ಕೆಲ ದಿನಗಳ ಹಿಂದೆ ಉಪನಯನಕ್ಕೆ ಮಾಡಿದ್ದ ಸ್ವೀಟು ತಿಂದು, ಆರನೇ ಮನೆಯ ಪಡಸಾಲೆಗೆ ಬಂದು, ಅಲ್ಲಿ ಶಿವರಾಮ ಕಾರಂತ-ಗಂಗೂಬಾಯಿ ಹಾನಗಲ್‌ರಂಥ ಮಹಾರಥರೇ ಉಳಿದುಕೊಂಡಿದ್ದರು ಎಂಬುದು ತಿಳಿದು, ಸುಸ್ತಾಗಿ, ಇನ್ನುಳಿದ ಆರು ಮನೆಗಳಿಗೆ ಸಾಯಂಕಾಲ ಬರುವುದಾಗಿ ಹೇಳಿದೆವು !

ಒಂದು ಮನೆಯ ಮಾಡು ಇನ್ನೊಂದಕ್ಕೆ ತಾಗಿಕೊಂಡು ಉದ್ದಕ್ಕೂ ಹನ್ನೆರಡು ಮನೆಗಳು. ಐದಡಿ ಅಗಲದ ಮಣ್ಣಿನ ಗೋಡೆಗಳು, ಒಂದಡಿ ದಪ್ಪದ ಮರದ ಬಾಗಿಲುಗಳು, ಗೋಡೆಗಳಲ್ಲಿ ತೂಗುತ್ತಿರುವ ಶಂಕರಾಚಾರ್ಯ, ಶ್ರೀಧರಸ್ವಾಮಿ, ರಾಮಕೃಷ್ಣ ಪರಮಹಂಸ ಮತ್ತು ದೇವಾನುದೇವತೆಗಳು. ಮಧ್ಯೆ ಅಚ್ಚರಿ ಹುಟ್ಟಿಸುವ ಕುವೆಂಪು, ಶಿವರಾಮ ಕಾರಂತರ ಫೋಟೊಗಳು. ಮನೆಯೆದುರಿನ ಚಿಟ್ಟೆಗಳಲ್ಲಿ ಕಾಟನ್ ಸೀರೆಯುಟ್ಟು ಕುಳಿತಿರುವ ಮುದುಕಿಯರು, ಗಡಿಬಿಡಿಯಲ್ಲಿ ಓಡಾಡುತ್ತಿರುವ ತಲೆಯಂಚು ಬಿಳಿಯಾದ ಗಂಡಸರು. ಆದರೆ ಬಿಳಿ ಪಂಚೆಯಿಟ್ಟುಕೊಂಡು, ಕೂದಲು ಸರಿಮಾಡಿಕೊಳ್ಳುತ್ತಾ ಎಲ್ಲ ಮನೆಗಳಿಂದ ಹೊರಬರುತ್ತಿರುವವರನ್ನು ಆಚೀಚೆಯ ಮನೆಯವರು, ‘ಎಂಥ ಡಾಕ್ಟ್ರೆ, ನೋಡದ್ದೆ ಸುಮಾರು ಸಮಯ ಆತು’, ‘ಹೋ ಎಂಜಿನಿಯರು ಬೆಂಗ್ಳೂರಿಲಿ ಚಳಿ ಹೇಂಗಿದ್ದು?’, ‘ಎಂತ ಕೂಸೆ, ಟಿವಿ ಕೆಲ್ಸ ಹೇಂಗಿದ್ದು?’ ಅನ್ನತೊಡಗಿದಾಗ ನಮಗೂ ಒಂಚೂರು ಗಲಿಬಿಲಿಯಾದದ್ದು ಹೌದು ! ಅಲ್ಲಿ ಉಳಿದುಕೊಂಡ ಇಪ್ಪತ್ತನಾಲ್ಕು ಗಂಟೆಗಳಲ್ಲಿ, ನಾಲ್ಕೈದು ಮನೆಯ ಬಚ್ಚಲುಗಳಲ್ಲಿ ಕೀಜಿ, ಹಿತ್ತಾಳೆ, ಪ್ಲಾಸ್ಟಿಕ್, ಸ್ಟೀಲು ತಂಬಿಗೆಗಳಿಂದ ತೆಳ್ಳಗಿನ ತಣ್ಣನೆಯ ನೀರು ಎತ್ತೆತ್ತಿ ಸುರಿದುಕೊಂಡು ಮನಸೋಇಚ್ಚೆ ಮಿಂದೆವು.


ಇಂತಹುದೊಂದು ಮಾಯಕದಂಥ ಘಟನಾವಳಿ ಜರಗಿದ್ದ್ದು , ಶಿವಮೊಗ್ಗ ಜಿಲ್ಲೆಯ ಸಾಗರದ ಬಳಿ ಸೊರಬ ತಾಲೂಕಿಗೆ ಸೇರಿದ ಊರೊಂದರ ಬ್ರಾಹ್ಮಣರ ಅಗ್ರಹಾರದಲ್ಲ. ಜಗಳವಿಲ್ಲದೆಯೂ ಜೀವಂತವಾಗಿರುವ, ಪೇಟೆಯ ಸೋಂಕಿಗೆ ತುತ್ತಾಗದೆ-ಹಳ್ಳಿಯ ಜಾಡ್ಯಕ್ಕೂ ಸಿಲುಕದೆ ಕಂಗೊಳಿಸುತ್ತಿರುವ ಆ ಲೋಕ, ಹಳ್ಳಿ ಭಾರತದ ಒಂದು ರಸಘಟ್ಟಿ. ಮನೆಯ ಒಬ್ಬರನ್ನೋ ಇಬ್ಬರನ್ನೋ ನಗರಕ್ಕೆ ಕಳುಹಿಸಿ, ಹಳ್ಳಿ ಕಲುಷಿತವಾಗದಂತೆ ನೋಡಿಕೊಳ್ಳುತ್ತ, ಊರಿನ ಬಗ್ಗೆ ಯಾವ ಕೀಳರಿಮೆಯೂ ಇಲ್ಲದೆ ಹೆಮ್ಮೆಯಿಂದ ಸುಖವಾಗಿ ಬದುಕುವುದನ್ನು ರೂಢಿಸಿಕೊಂಡಿರುವ ಈ ಜನ ಹಳ್ಳಿಯ ಮಿಕಗಳಾಗಿಲ್ಲ ,ಪೇಟೆಯ ಬಕಾಸುರರೂ ಅಲ್ಲ.


ಕಪ್ಪಗಿನ ಮರದ ಮಂಟಪದ ಮೇಲೆ ಕೆಂಪು ದಾಸವಾಳ ಹೂವುಗಳು. ಎದುರು ಕುಳಿತುಕೊಳ್ಳಲು ಕೂರ್ಮಾಕೃತಿಯ ಮರದ ಮಣೆ. ಉರಿಯುತ್ತಿರುವ ದೀಪ, ತೂಗುತ್ತಿರುವ ಕೆಂಪು ಮಡಿ ಬಟ್ಟೆ -ಇವೆಲ್ಲ ಆ ದೇವರ ಕೋಣೆಗಳ ಪಾವಿತ್ರ್ಯವನ್ನು ಸಾರಿ ಹೇಳುತ್ತಿದ್ದವು. ಬಹಳ ದಿನಗಳಿಂದ ಮೂಲೆ ಪಾಲಾದಂತೆ ಬಟ್ಟೆ ಮುಚ್ಚಿಕೊಂಡಿದ್ದ ಟಿವಿ, ನಮ್ಮಲ್ಲಿ ಹೆಚ್ಚಿನವರ ಕಣ್ಣಿಗೂ ಬೀಳಲಿಲ್ಲ. ಪ್ರತಿ ಮನೆಯಲ್ಲೂ ಮರದ ಪತ್ತಾಯಗಳು, ಒತ್ತು ಸೇಮಿಗೆ ಮಣೆಗಳು, ದಪ್ಪದ ಬಾಜಾರ ಕಂಬಗಳು, ಮರದ ಪೆಟ್ಟಿಗೆಗಳು, ಕಿರಿದಾದ ಬಾಯಿಯ ತಳ ಕಾಣದ ಆಳ ಬಾವಿಗಳು, ಹೊರಗೆ ಬಗೆಬಗೆಯ ಬಣ್ಣಗಳ ದಾಸವಾಳ ಹೂವಿನ ಗಿಡಗಳು...


ಜೋಲು ಮಂಚದ ಮೇಲೆ ಕುಳಿತ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೀತಾರಾಮ ರಾಯರು, ರ್‍ಯಾಡಲ್ ಶ್ರುತಿಪೆಟ್ಟಿಗೆ ಆನ್ ಮಾಡಿ, ಕಣ್ಣುಮುಚ್ಚಿ ಶ್ರುತಿ ಪರೀಕ್ಷಿಸಿಕೊಳ್ಳತೊಡಗಿದರು. ಆಗ ಕೆಲವರಿಗೆ ನಗು ತಡೆಯಲಿಕ್ಕಾಗದಿದ್ದರೂ ‘ಶ್ರೀ ವನಿತೆಯರಸನೆ ವಿಮಲ ರಾಜೀವ ಪೀಠನ ಪಿತನೆ....’ ಎಂದು ಆರಂಭಿಸಿದಾಗ ನೆಲದಲ್ಲಿ ಚಕ್ರಮುಟ್ಟ ಹಾಕಿ ಕುಳಿತಿದ್ದ ಮೂವತ್ತು ಜನರೂ ರೋಮಾಂಚನಗೊಂಡರು . ರಾಯರೂ ಉತ್ಸಾಹಭರಿತರಾಗಿ ‘ಅಕ್ಕಿಯೊಳಗನ್ನವ ಮೊದಲಾರು ಕಂಡವನು...’ಅಂತ ನಾಲ್ಕು ಮಂಕುತಿಮ್ಮನ ಕಗ್ಗವನ್ನೂ ಹಾಡದೇ ನಿಲ್ಲಿಸಲಿಲ್ಲ. ಹಾಸಿಗೆಯಿಂದ ಏಳಲಿಕ್ಕಾಗದ ಅವರ ಹೆಂಡತಿ, ಒಳಕೋಣೆಯ ಮಂಚದಲ್ಲಿ ಒಂಚೂರೂ ಬೆನ್ನು ಬಗ್ಗಿಸದೆ ತದೇಕಚಿತ್ತೆಯಾಗಿ ಬಟ್ಟೆ ಹೊದ್ದು ಕುಳಿತಿರುವುದನ್ನು ಕಂಡ ನಮ್ಮ ಹೆಂಗಸರು ಪಾದಕ್ಕೆರಗಿ ಆಶೀರ್ವಾದ ಬೇಡಿದರು. ಅಜ್ಜಿಯ ಕೆನ್ನೆಯ ಒಂದು ಮಡಿಕೆಯೂ ಮಿಸುಕಲಿಲ್ಲ.


ಅಡಿಕೆ ಚಪ್ಪರದ ಕೆಳಗೆ ಕುಳಿತಿದ್ದ ನಮ್ಮ ಬಾವನೂ ಭಾವೀ ಅಕ್ಕನೂ ಉಂಗುರ ಬದಲಾಯಿಸಿಕೊಂಡರು. ಉಳಿದ ಹುಡುಗರು ನಾವೆಲ್ಲ ಒಬ್ಬೊಬ್ಬಳ ಬಲಗೈಯನ್ನು ಎಡಗೈಯಲ್ಲಿ ಹಗುರವಾಗಿ ಹಿಡಿದು ಮೈಮರೆತು, ಉಂಗುರವನ್ನು ಬೆರಳುಗಳಿಗೆ ತೊಡಿಸುತ್ತಿದ್ದಾಗ ...
ಆಗುಂಬೆಯ ಘಾಟಿಯಲ್ಲಿ ಇಳಿಯುತ್ತಿದ್ದ ನಮ್ಮ ಬಸ್ಸು ಒಮ್ಮೆಲೆ ಬ್ರೇಕ್ ಹಾಕಿತು !

Read more...

ನಗರ ಸ್ವರ


10

ಇದು ದ್ವಿಚಕ್ರ ನಗರ
ವೇಷ ಮರೆಸಿದವರಿಗೆ ಬಂಡಿ ಅನ್ನ

ಬಕಾಸುರರ ಸಾಕಿದವರಿಗಷ್ಟೇ ಅಭಯ.

ಕುಂಬಾರನ ಮನೆಯಲ್ಲಿ

ದೊಣ್ಣೆ ನಾಯಕರಿಗೇನು ಕೆಲಸ? ಗೊತ್ತಿಲ್ಲ

ಸದಾ ಹೊರಟು-ನಿಂತವರೇ ಎಲ್ಲ .

ಎಣ್ಣೆ ನೋಡುತ್ತ ಮೀನು ಕಚ್ಚಿ ಎಳೆವವರು

ಗುರುವಿಗಿದಿರು ಶಿಷ್ಯನನ್ನೇ ಹೆದೆಯೇರಿಸುವರು;

ಒಬ್ಬಳಿಗೆ ಐವರು ಹೆಚ್ಚಾಯಿತೆ ? ಇಲ್ಲ

ನೂರ ಐದಾದರೂ ಅಡ್ಡಿಯಿಲ್ಲ
ಕೃಷ್ಣನಂತೂ ಇತ್ತ ಬರುವುದಿಲ್ಲ .

Read more...

February 21, 2008

ಪೇಟೆ ಪದ್ಯ

8
ಬೆಳಗ್ಗೆ ಪೇಟೆಗೆ ಬಂದ,
ಸಿಗಲಿಲ್ಲ ಅಂತ ಪಟ್ಟಣ ಸೇರಿದ.
ಬೇಜಾರಾಗಿ ಮಧ್ಯಾಹ್ನದೂಟಕ್ಕೆ
ನಗರ ಪ್ರವೇಶಿಸಿ,
ಸಂಜೆ ಸುತ್ತಾಟದಲಿ ಸಿಗುವುದೆಂದು
ಮಹಾ ನಗರಿಗೆ ಬಂದ.
ರಾತ್ರಿ ದಿಕ್ಕು ತಪ್ಪಿ ಅಲೆಯುತ್ತಿದ್ದಾಗ
ಹಾ ಸಿಕ್ಕಿತು...ಬೇಕಾದ್ದೆಲ್ಲ ಸಿಕ್ಕಿತು...
ಊರ ಹಾದಿ ಮರೆತ.

ಅವನ ಮುದಿ ಅಮ್ಮ
ಪ್ಯಾಂಟು ತೊಳೆದಾಗ ಸಿಕ್ಕ ಎರಡು ರೂಪಾಯಿ ನೋಟನ್ನು
ಬೆಳಗಿನ ಬಿಸಿಲಲಿ ಜೋಪಾನ ಒಣಗಿಸುತ್ತಿದ್ದಳು.
ಎದ್ದು ಬಂದ, ನೋಡಿ ನಕ್ಕ !
9
ಇಲ್ಲಿ ಆಕಾಶ ಕಾಣಲ್ಲ ಗೊತ್ತು
ಅವಕಾಶಕ್ಕೆ ಕೊರತೆಯಿಲ್ಲ
ಇದ್ದರೆ ರಿಬೋಕ್, ಇಲ್ಲದಿದ್ದರೆ ಹವಾಯಿ
ತಲೆಯೆತ್ತಿ ನಡೆಯಬಹುದು ತಲೆ ಮರೆಸಿಕೊಳ್ಳಲೂಬಹುದು !
ಹಾದರಕ್ಕೆ ಆದರಕ್ಕೆ
ಕೃತಜ್ಞತೆಗೆ ಕೃತಘ್ನತೆಗೆ
ಇಲ್ಲಿ ಅಂಥ ವ್ಯತ್ಯಾಸವಿಲ್ಲ
ನುಡಿದಂತೆ ನಡೆವ, ಹುಸಿ ಗೌರವದ ಭಾರವಿಲ್ಲ !

ಬಡವರು ಬೆಳೆದು ದೊಡ್ಡವರಾಗಬಹುದು
ಪ್ರೀತಿಸಿದವರು ದ್ವೇಷವಿಲ್ಲದೆ ಬದುಕಬಹುದು
ಇಲ್ಲಿ ಎಲ್ಲವೂ ವಾಚ್ಯ , ಪರವಾಗಿಲ್ಲ ,
ಊರಲ್ಲಿ ಅವಾಚ್ಯ.

Read more...

ದಿವಾಕರರ ಕೆನ್ನೆಯೂ ಕೆಂಪಾಗಲಿ !

ವಿ-ಕತೆಗಾರ ಶ್ರೀಕೃಷ್ಣ ಆಲನಹಳ್ಳಿ ಸಂಪಾದಕತ್ವದಲ್ಲಿ 'ಸಾಹಿತ್ಯ ಸಂಸ್ಕೃತಿಗೆ ಮೀಸಲಾದ ವಿಚಾರವೇದಿಕೆ’ ಎಂಬ ಅಡಿಶೀರ್ಷಿಕೆಯೊಂದಿಗೆ ಪ್ರಕಟವಾಗುತ್ತಿದ್ದ ಸಾಹಿತ್ಯ ಪತ್ರಿಕೆ 'ಸಮೀಕ್ಷಕ. ೧೯೬೬ರ ಫೆಬ್ರವರಿ ಸಂಚಿಕೆಯ ಮುಖಪುಟ ಮೊದಲನೆಯದು, ಹಿಂಬದಿಯ ಪುಟ ಎರಡನೆಯ ಚಿತ್ರ. ಅದರಲ್ಲಿ ಈ ಸಂಚಿಕೆಗೆ ಬರೆದಿರುವ ಲೇಖಕರ ಹೆಸರುಗಳಿವೆ. ಮೈಸೂರಿನಿಂದ ಪ್ರಕಟವಾಗುತ್ತಿದ್ದ ಇದರ ಮುಖ್ಯೋದ್ದೇಶ ಸಂಪಾದಕರು ಹೇಳಿಕೊಂಡಂತೆ ಹೀಗಿದೆ- 'ವಿಚಾರವಂತ ಲೇಖಕರಿಂದ ಉತ್ತಮ ಲೇಖನಗಳನ್ನು ಬರೆಸಿ ಪ್ರಕಟಿಸುವುದು; ಆ ಮೂಲಕ ಕನ್ನಡದಲ್ಲಿ ವಿಮರ್ಶಾ ಪ್ರಜ್ಞೆ ಬೆಳೆಯಲು ಕೈಲಾದ ಪ್ರಯತ್ನ ಮಾಡುವುದು. ಪತ್ರಿಕೆಯ ಸಲಹಾಗಾರರಾಗಿ -ಜಿ.ಎಚ್. ನಾಯಕ್ ಮತ್ತು ಎಚ್.ಎಂ.ಚನ್ನಯ್ಯರ ಹೆಸರಿವೆ. ಆದರೆ ಈ ಪತ್ರಿಕೆ ಬಹಳ ಕಾಲ ಬಾಳಲಿಲ್ಲ.


ಮದರಾಸಿನ ವಿಜಯ ರಾಘವಾಚಾರಿ ರಸ್ತೆಯಿಂದ ಈಗಷ್ಟೆ ಎದ್ದು ಬಂದಂತಿರುವ ಎಸ್.ದಿವಾಕರ್ ಛೋಟಾ ಕತೆಗಳ ಉದ್ದನೆ ಮನುಷ್ಯ. ತುಟಿಗಳೆಡೆ ಸಿಗರೇಟು ಸಿಕ್ಕಿಸಿಕೊಂಡು 'ಏನು ಮತ್ತೆ ಸಮಾಚಾರ?’ ಅನ್ನುತ್ತಲೇ ಫಕ್ಕನೆ ಅಡಿಗರದೋ ಬೇಂದ್ರೆಯದೋ ನಾಲ್ಕು ಸಾಲು ಹೇಳಿ ನಮ್ಮನ್ನು ಗಲಿಬಿಲಿ ಮಾಡುವ, ನೂರೆಂಟು ಪದ್ಯಗಳನ್ನು ಹೃದಯ ಪಾಠ ಮಾಡಿಕೊಂಡಿರುವ ಈ ತೆಳ್ಳಗಿನ ದೇಹಿ, ಏನೆಲ್ಲ ಬಲ್ಲರು ಎಂಬುದನ್ನು ಎಲ್ಲ ಬಲ್ಲವರಿಲ್ಲ ! ಈ ಅಪ್ಪಟ ಕರಿಯ ಹೇಳುವುದನ್ನು ಕೇಳಿದಾಗೆಲ್ಲ ನಾವು ಹೇಳುತ್ತೇವೆ ಯೆಸ್ ದಿವಾಕರ್ ಸಾರ್. ಈಗ ಬೆಂಗಳೂರಿನಲ್ಲಿ ಟೈಮ್ಸ್ ಆಫ್ ಇಂಡಿಯಾ ಗ್ರೂಪ್‌ನಲ್ಲಿ ಉದ್ಯೋಗಿಯಾಗಿರುವ ಈ ಅಕ್ಷರ ಜೀವಿ, ೬೦ರ ದಶಕದ 'ಸಮೀಕ್ಷಕ’ದಲ್ಲಿ ಪ್ರಕಟಿಸಿರುವ 'ಪ್ರಾಯ’ ಎಂಬ ಅಮೋಘ ಪದ್ಯವನ್ನು ಅವರ ಕ್ಷಮೆ ಕೋರಿ ಇಲ್ಲಿ ಕೊಡಲಾಗಿದೆ !
ಪ್ರಾಯ
ಬುಳಬುಳನೆ ಸುಳಿವಂಥ ಸವಿನೋವಿನವತಾರ
ನರಗಳಲಿ ಜುಮ್ಮೆನುವ ನೀರವ ರವ ;
ಅಡಿಯಿಂದ ಮುಡಿವರೆಗೆ ಯಾರೊ ಕಾಣದೆ ಬಂದು
ಕಚಕುಳಿಯನಿಟ್ಟಂಥ ಹೊಸ ಅನುಭವ !

ಕಣ್ಣೆದುರು ಯಾವುದೋ ಹೊಸ ಲೋಕ. ಕೆನ್ನೆಯಲಿ
ಕೆಂಪು ತೆರೆ ಮೇಲೆದ್ದು ಇಳಿಯುತಿರಲು;
ಸೆರಗ ಸುತ್ತಿತ್ತು ಬೆರಳು, ವೀಣೆಯಾಯಿತು ಕೊರಳು
ಅರಿವಿಲ್ಲದೆಯೆ ಬೆಳೆದು ಬಂತು ನೆರಳು-
ಚಿಟ್ಟೆಯಾಯಿತು ಹಾರಿ ಕಂಬಳಿಹುಳು!

ಬೆಳೆಸಿದೊಲುಮೆಯ ಫಲಕೆ ಚಿಕ್ಕದಾಯಿತು ರವಿಕೆ
ಅಣೆಕಟ್ಟಿನೊಳನೀರ ನುಗ್ಗು ನೂಕು
ಇರುವೆ ಕಚ್ಚಿದ ತೊಡೆಯ ತುರಿಸಿಕೊಳ್ಳುವ ಬಯಕೆ
ರಾತ್ರಿಯಾಗುವವರೆಗೆ ಕಾಯಬೇಕು !

ಗಾಳಿ ಮೈದಡವಿದರೆ, ಬೆವೆತ ಮೈ ಬೆದರಿದರೆ
ಬಂಡೆ ಬಿರುಕಿನ ಕಪ್ಪೆ ನೆಗೆದ ಸದ್ದು-
ಬರುವ ಚಳಿಗಾಲದಲಿ ಬೆಚ್ಚಗಿರುವುದು ಹೇಗೆ?
ಕಿಟಕಿಯಾಚೆಗೆ ನೋಟ ಕದ್ದು ಕದ್ದು;
ಹೊರಳಾಟ ಹಾಸಿಗೆಯ ಮೇಲೆ ಬಿದ್ದು !
-ಎಸ್.ದಿವಾಕರ್

Read more...

February 18, 2008

ಸಿಟಿ ಗೀತ

6
ಈಗ ಜನಿವಾರ ಧಾರಣೆ
ಈಗ ಕಿರೀಟ ಧಾರಣೆ
ಈಗ ಲಿಂಗ ಧಾರಣೆ
ಈಗ ಮುದ್ರೆ ಧಾರಣೆ
ಶ್...ಮಾತಾಡಬೇಡಿ. ಅವೆಲ್ಲ ಯಾರಿಗೆ ಬೇಕು?
ಈಗ ಪೇಟೆ ಧಾರಣೆ.

7

ಗಣಪ ಗಣಪ ಏಕದಂತ

ಪಚ್ಚೆಕಲ್ಲು ಪಾಣಿಪೀಠ

ಮುತ್ತಿನುಂಡೆ ಹೊನ್ನಗಂಟೆ

ಗಂಟಲು ಕಟ್ಟಿತು.

'ಅಮ್ಮಾ ಪ್ಲೀ...ಸ್ ಎಎಕ್ಸೆನ್ ಚಾನೆಲ್ ನೋಡ್ಲಾ?’
ದೇವರಿಗೆ ಉದಾಸೀನವಾಯಿತು !

Read more...

February 13, 2008

ಅಂತಃ'ಪುರ’ ಗೀತೆ

5
ಸಿಟಿ ಯಾಕೊ ಸಿಡುಕ್ಯಾಕೊ ನನ ಗಂಡ
ನೋಡಯ್ಯನಿನ್ ಮಗಳ ಮುಖದಂದ.
ಅಲ್ಲಿ ದುಡಿದದ್ದೆಲ್ಲ ಬಾಡಿಗೆ ಬದುಕಿಗೆ ದಂಡ
ಈ ತೋಟ, ತಿಥಿ ಊಟ, ಬಿಡೋದೇನೋ ಭಂಡ?
ಇಲ್ಲಿದ್ರೂ ಕುಡೀತೀಯ ಶನಿವಾರ ಹೆಂಡ !

ಗಂಗೆಯಾ ನೊರೆ ಹಾಲು, ಒಂದೆಲಗ ಸಿಹಿ ತಂಬ್ಳಿ
ಮೂಲೆ ತೋಟದ ಮಾವಿನ ಮಿಡಿ
ನೀ ನೆಟ್ಟಿರೋ ಇನ್ನೊಂದು ಕುಡಿ?!
ಮರೆವೆಯಾ ಹೃದಯದ ದೇವಾನಂದ.

ಈ ಸಾಲ ಸಾಲದೂಂತ
ಆ ನಕ್ಷತ್ರಿಕನಲ್ಲಿ ಕೇಳಬೇಡ,
ದುಡಿದರೆ ಅಲ್ಲಿ ಊಟ ಸಿಗತ್ತೆ ಹಸಿವಿರಲ್ಲ,
ಬಸ್ಸು ನೂರಿದ್ದರೂ ಸೀಟು ಸಿಗಲ್ಲ,
ಏದುಸಿರು ನಿಟ್ಟುಸಿರೂ ಸಹಜವಲ್ಲ
ಗುರುತು ನೆನಪು ಉಳಿಯದಲ್ಲಿ ಬದುಕಬೇಡ.
***
ಹೋಗೋದಿದ್ರೆ ಹೋಗು
ಹಚ್ಕೊಂಡು ಸಿಗರೇಟು
ಕೊಟ್ಟೋಗು ಪಾಪುಗೂ ಒಂದೇಟು
ಅದಾದ್ರೂ ಕೈಗೂಸು ಅಳತಿರ್ಲಿ ಅಳುವಷ್ಟು
ಕರು ಬಿಟ್ಕೊಂಡು ಬರ್‍ತೀನಿ ನಿಲ್ಲೊಂದು ತಾಸು.

ಸಿಟಿ ಯಾಕೊ ಸಿಡುಕ್ಯಾಕೊ ನನ ಗಂಡ
ನೀ ಹೋಗ್ತೀನಿ ಅಂದ್ರ...
ನನ್ ಎದೆ ಕೆಂಡ.
--------------------------
(ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಕಾಡೊಳಗಿನ ಊರೊಂದರಲ್ಲಿ ಅಡಿಕೆ ಕೃಷಿಯಲ್ಲಿ ಬದುಕುತ್ತಿದ್ದ ನಾಲ್ವರ ಮಧ್ಯಮ ವರ್ಗದ ಕುಟುಂಬ. ಮಗಳು ದೂರದ ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಹೈಸ್ಕೂಲು ಓದುತ್ತಿದ್ದಳು. ಮಗನಿಗೆ ಐದಾರು ವರ್ಷ. ನಲವತ್ತರ ವಯಸ್ಸಿನ ಆ ಮನೆಯ ಯಜಮಾನ ಆರೇಳು ಕೋಣೆಗಳ ಹೊಸ ತಾರಸಿ ಮನೆ ಕಟ್ಟಿಸಿದರು. ಗೃಹಪ್ರವೇಶವಾದ ತಿಂಗಳಲ್ಲೇ ಬೆಂಗಳೂರಿಗೆ ಬಂದು ಸಣ್ಣ ಕೋಣೆ ಹಿಡಿದರು. ಯಾಕೆ ಅಂತೀರಾ? ಬೆಂಗಳೂರಲ್ಲಿ ದುಡಿದು ಸಂಪಾದಿಸಿ, ಮನೆ ಕಟ್ಟಲು ಮಾಡಿದ ಸಾಲ ತೀರಿಸಲು !
ಹಳ್ಳಿಗಳಲ್ಲಿರುವ 'ಸ್ಥಿತಿವಂತ-ಗುಣವಂತ’ ಹುಡುಗರನ್ನೂ ಧಿಕ್ಕರಿಸಿ ನಗರದಲ್ಲಿರುವ ಹುಡುಗನೇ ಆಗಬೇಕೆಂದು ಬಹುತೇಕ ಯುವತಿಯರು ಪಟ್ಟು ಹಿಡಿಯುತ್ತಿರುವ ಕಾಲದಲ್ಲಿ, ಈ ಮನೆಯ ಸ್ಥಿತಿ ಕೊಂಚ ವ್ಯತ್ಯಸ್ಥವಾಗಿದೆ ಅವರ ಪತ್ನಿ ಏನಂದರೋ ಗೊತ್ತಿಲ್ಲ. ಅಂತೂ ಈ ಪದ್ಯ ಅರ್ಧ ಹೊಸೆದಿರುವಾಗ, ಆ ಘಟನೆ ನೆನಪಾಗಿ ಬರೆದುಕೊಂಡಿದ್ದೇನೆ.)

Read more...

February 09, 2008

ಸಿಟಿ ಗೀತ

3

ಗಲಗಲ ಅಲುಗುತ್ತಿದೆ ಈ ನಗರ
ಬೆಳೆದು ಅಗಲಗಲ ಜಗದಗಲ.
ಇವತ್ತು ಬರ್ಲಾ, ನಾಳೆ ಆಗಲ್ಲ
ಪೈನ್‌ಕಿಲ್ಲರ್ ಮಾತ್ರೆ ತರ್ಲಾ, ಸಂಬಳ ಸಾಕಾಗಲ್ಲ
ಆ ಓನರ್ ಸರಿಯಿಲ್ಲ, ನೆಟ್ ಕನೆಕ್ಟ್ ಆ..ಗ್ತಿ..ಲ್ಲಾ..

ಅಮ್ಮ ಫೋನ್ ಮಾಡಿ ಅಂದಳು,
ಚೆನ್ನಾಗಿ ಬೆಳೆದಿದೆ ಹಾಗಲ, ಕಳಿಸಲಾ?

4
ಮೊನ್ನೆ ಬಂದವಳು ಅಂದಳು-
ಹೌದು, ಗದಗುಡುತ್ತಿದೆ ಶಹರ
ನಗ ತುಂಬಿದ ನಗರ
ತುಯ್ಯುತಿರುವ ಸಾಗರ.

ಈ ನಗರಿಗೆ ಹತ್ತಾರು ಕಂಪನಾಂಕ
ಅಂಕ, ಬಿಂಕ, ಎಲ್ಲದಕ್ಕೂ ಸುಂಕ
ಇಲ್ಯಾಕೆ ಊದ್ತೀಯೋ ಶಂಖ?

ನಾನಂದೆ-
ಇದೋ ಮೂಗು ಹಿಡಿದೆ ಅಮ್ಮಾ, ಕಣ್ಮುಚ್ಚು
ಈ ನಗರವ ಕೊಂಚ ಕಲಕಿಸಿದೆ
ಕುಡಿದುಬಿಡು.
----------------------
('ಪೇಟೆಯ ಪಾಡ್ದನ’ವನ್ನು ಪ್ರಕಟಿಸಿದ ಅವಧಿ ಮತ್ತು ದಟ್ಸ್‌ಕನ್ನಡ ಜಾಲತಾಣಗಳಿಗೆ ಕೃತಜ್ಞತೆಗಳು. ಲೋಗೊ ಕೃಪೆ-ಅಪಾರ)

Read more...

February 06, 2008

ಪೇಟೆಯ ಪಾಡ್ದನ

1
ಲಕಲಕಿಸುವ ಈ ನಗರಕ್ಕೊಂದು
ಬೆದರಿದ ಬೆದರುಗೊಂಬೆ ಬೇಕು.
ಇಲ್ಲಾ ದೃಷ್ಟಿಯಾದೀತು ಅಥವಾ ನಿಮ್ಮ ದೃಷ್ಟಿ ಹೋದೀತು .

ಕಣ್ಣುಜ್ಜಿ ನೋಡಿಕೊಳ್ಳಿ ,ಅಗೋ ...
ಆ ಗೊಂಬೆಯೂ ಮಾರಾಟವಾಯಿತು !

2
ಇದು ಉದ್ಯೋಗ ಪರ್ವದ ಭಾಗ .
ದ್ಯೂತ ಪ್ರಸಂಗ .
ತನ್ನನ್ನೇ ಒತ್ತೆಯಿಟ್ಟು ಸೋತ ರಾಯನಿಗೆ
ಇನ್ನೊಬ್ಬಳ ಒತ್ತೆಯಿಡಲು ಅಧಿಕಾರವಿದೆಯೆ?
ಓಲೇಲಯ್ಯಾ ಐಸಾ, ಎಳೀರಿ ಸೀರೆ, ಎಸೆಯಿರಿ ಪೈಸಾ
'ಗಿನ್ನಿಸ್ ದಾಖಲೆಗೆ ಇನ್ನೊಂಚೂರು' ಅಂದ
ಕೃಷ್ಣಾ ಮಾಲ್ ಸೀರೆ ಸೆರಗು ಎಷ್ಟು ಚೆಂದ !

ಹೋ ಅದೋ ಮತ್ತೆ ದಾಳ, ಗಾಳ, ಗೆದ್ದೆವು , ಮನೆಹಾಳ.
ಸೋತವರಿಗೆ ಹನ್ನೆರಡು ವರ್ಷ ಹಳ್ಳಿವಾಸ
ಗೆದ್ದವರಿಗೊಂದು ವರ್ಷ ನಗರದಜ್ಞಾತವಾಸ !

Read more...

February 01, 2008

ನಡೆದು ನಡೆದು ಬರ್ರಿ...ಪುರಾಣದ ಕಾಲುಭಾಗ

ತಲೆ ಇದ್ದರೂ ಬುದ್ಧಿ ಹೇಳುವುದು ಕಾಲಿಗೇ ಅಲ್ವೆ ?

ಕಲ ಪ್ರಾಣಿಗಳಲ್ಲಿ ಮನುಷ್ಯರ ಹೆಚ್ಚುಗಾರಿಕೆ ಕಂಡುಬಂದದ್ದು ಮಾತಾಡುವುದರಿಂದ ಹಾಗೂ ಎರಡೇ ಕಾಲುಗಳಲ್ಲಿ ನಡೆಯುವುದರಿಂದ. (ಬುದ್ಧಿಶಕ್ತಿಯಿಂದ ಅಂತಲೂ ಹೇಳಿಯಾರು, ನಿಮಗೆಂದಾದರೂ ಹಾಗೆ ಸತ್ಯವಾಗಿ ಅನ್ನಿಸಿದೆಯೆ?!) ಆದರೆ ಇವೆಲ್ಲಕ್ಕಿಂತಲೂ ವಿಶೇಷ ಅನಿಸಿದ್ದು ...ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವ ತಾಕತ್ತು ಇರುವುದರಿಂದ ! ಯಾವುದಕ್ಕುಂಟು ಈ ಭಾಗ್ಯ? ಈ ಭಂಗಿಗಿರುವ ಘನತೆ-ಗತ್ತು , ಯೋಗಾಸನದವರು ತಲೆ ಮೇಲೆ ಕಾಲು ಹಾಕಿದರೂ ಉಂಟೆ? ಹಾಗಾಗಿ ನಾವೆಲ್ಲ ಹೇಳಬೇಕು 'ಕಾಲಾಯ’ ತಸ್ಮೈ ನಮಃ

ಕಾಲುಭಾಗ, ಕಾಲುದಾರಿ, ಕಾಲುಂಗುರ (ಕಾಲ್ಬೆರಳುಂಗುರ ಅಲ್ಲ !) ಪದಗಳಲ್ಲದೆ ಕಾಲುವೆ, ಕಾಲಂ ಪದಗಳೂ ಕಾಲಿನಿಂದಲೇ ಬಂದದ್ದು ಅಂತ ಸಾಧಿಸಿದರೆ ತೋರಿಸಬಹುದು. ಯಾಕೆಂದರೆ ಹುಡುಕುತ್ತಿದ್ದ ಬಳ್ಳಿಯಾದರೂ ತೊಡರುವುದು ಕಾಲಿಗೆ ತಾನೆ ! ಬಲಗಾಲಿಟ್ಟು ಒಳಗೆ ಬಂದರೆ ಎಲ್ಲವೂ ಶುಭಪ್ರದ. ಕಾಲಿನಲ್ಲೇ ಇರುವ ಪಾದಕ್ಕಿಂತ ಪವಿತ್ರವಾದದ್ದು ನಮ್ಮಲ್ಲಿ ಬೇರ್‍ಯಾವುದೂ ಇಲ್ಲ. ಪಾಂಡವರು ರಾಜಸೂಯ ಯಾಗ ಮಾಡುವಾಗ, ಅತಿಥಿಗಳ ಪಾದ ತೊಳೆಯುವ ಪುಣ್ಯದ ಕೆಲಸ ನನಗಿರಲಿ ಅಂದನಂತೆ ದೇವ ಶ್ರೀಕೃಷ್ಣ . ಯಾರಾದರೂ ಹೊಸ ರಂಗಕ್ಕೆ ಪ್ರವೇಶಿಸಿದಾಗ ಪದಾರ್ಪಣೆ ಅನ್ನದೆ ಶಿರಾರ್ಪಣೆ ಅಂತೆಲ್ಲ ಅನ್ನುವುದುಂಟೆ? ಕಾಲಿಗೆ ಬಿದ್ದರೆ ಆತ ಪೂರ್ತಿ ಶರಣಾಗತ ಎಂಬುದರಲ್ಲೆ ಸುಳ್ಳುಂಟೆ? ಯಾವ ನೃತ್ಯವಾದರೂ ಪ್ರಧಾನವಾದ ಗೆಜ್ಜೆಯನ್ನು ಕಾಲಿಗಲ್ಲದೆ ಕುತ್ತಿಗೆಗೆ ಕಟ್ಟುತ್ತಾರೆಯೆ? ತಲೆ ಇದ್ದರೂ ನಾವು ಕೆಲವು ಸಲ ಬುದ್ಧಿ ಹೇಳುವುದು ಕಾಲಿಗೇ ಅಲ್ವೆ? ಹೀಗೆ ಮಹಿಮಾನ್ವಿತವಾದ ಕಾಲುಳ್ಳ ಕಾಲಾಳುಗಳಾದ ನಮಗೆ ಯಾವ ವಿಷಯವೂ ಕಾಲಕಸಕ್ಕೆ ಸಮ ಎನಿಸದಿರಲಿ.

ಈಗ ಕಾಲ್ಬುಡಕ್ಕೆ ಬರೋಣ. ಅಂದರೆ ಕಾಲಿನ ಮುಖ್ಯ ಕಾರ್‍ಯವಾದ ನಡಿಗೆಯ ಬಗ್ಗೆ ಗಮನಿಸೋಣ. ಈ ನಡಿಗೆಗೂ ನಡತೆಗೂ ಹತ್ತಿರದ ಸಂಬಂಧ ಇರುವುದು ತಮಗೆ ಗೊತ್ತಿದೆ. ದೇವರ ಗರ್ಭಗುಡಿಯ ಮುಂದಿನ ದಾರಿಗೆ 'ನಡೆ’ ಅನ್ನುತ್ತಾರೆ. ಸಭೆಯ ನಡಾವಳಿಯಂತೆ ದೈವದ ನಡಾವಳಿ ಅಂತ ದಕ್ಷಿಣಕನ್ನಡದ ಭೂತಕೋಲ ನಡೆಸುವುದಕ್ಕೆ ಹೇಳುತ್ತಾರೆ ! ನಮ್ಮ ಕೆಲವು ರಾಜಕೀಯ ಪುಢಾರಿಗಳು ಹೀಗೆ ಹಾಡುವುದೂ ಉಂಟು-'ನಡೆ ಮುಂದೆ ನಡೆ ಮುಂದೆ ನಡೆ ಮುಂದೆ ಮುಂದೆ, ನನ್ನ ಹಿಂದೆಯೆ ನೀನು ನುಗ್ಗಿ ನಡೆ ಮುಂದೆ !’ ಆದರೆ ನಡಿಗೆಯಿಂದಲೇ ಮನುಷ್ಯನೊಬ್ಬನ ಗುಣ ಸ್ವಭಾವವೂ ಕೊಂಚಮಟ್ಟಿಗೆ ಅರಿವಾದೀತು. ಹೆಜ್ಜೆ ಮೇಲೆ ಹೆಜ್ಜೆಯಿಟ್ಟು ಎಚ್ಚರಿಕೆಯಿಂದ ನಡೆವವರದ್ದು ನಿಧಾನ ಪ್ರವೃತ್ತಿಯೆಂದೂ, ದಾಪುಗಾಲು ಹಾಕುತ್ತ ಹೋಗುವವರು ಗಡಿಬಿಡಿ ಸುಬ್ರಾಯರೆಂದೂ ಕೆಲವರು ವಿಶ್ಲೇಷಿಸಬಹುದು. ಅಂತೂ ಕಾಲ್ನ-ಡಿಗೆ ಎಲ್ಲರೂ ಬರಲೇಬೇಕು ಬಿಡಿ.

ಕೊಂಚ ಹಿಂದಕ್ಕೆ ಕಾಲಿಟ್ಟರೆ...ನಮ್ಮ ಕವಿಗಳ ಗಮನವೆಲ್ಲ ಹಂಸಗಮನೆ, ಮದಗಜಗಮನೆಯರ ಮೇಲೆಯೇ. ನೀ ನಡೆವ ದಾರಿಯಲಿ ಅದೂ ಇದೂ ಹಾಸಿರಲಿ ಅಂತ ಹಾಡಿದ ಜನರೆಷ್ಟಿಲ್ಲ? ಇತ್ತೀಚೆಗೆ ಕ್ಯಾಟ್‌ವಾಕ್, ಡಾಗ್‌ವಾಕ್‌ಗಳೆಲ್ಲ ಹೆಚ್ಚಾದ ನಂತರವಷ್ಟೇ, ನಡಿಗೆಯಲ್ಲಿ ಮುಖ್ಯವಾದ ಕಾಲುಗಳಿಗೂ ಮುಖಸೌಂದರ್‍ಯದಷ್ಟೇ ಪ್ರಾಮುಖ್ಯ ಸಿಕ್ಕಿದ್ದು. 'ಕಾಲುಗಳ ಕಾಳಜಿ’ ಈಗ ಸೌಂದರ್‍ಯಶಾಸ್ತ್ರದ ಮುಖ್ಯಪಾಠಗಳಲ್ಲೊಂದು. 'ನುಡಿದರೆ ಮುತ್ತಿನ ಹಾರದಂತಿರಬೇಕು’...ನಡೆದರೆ ಏನು ಅಂತ ನೀವಿನ್ನು ಸೇರಿಸಬೇಕು ! ಕಣ್ಣಿನ ಬಗೆಗಷ್ಟೇ ಹೊಗಳುತ್ತಿದ್ದವರೀಗ 'ನೀಳ ಕಾಲುಗಳ ಸುಂದರಿ’ ಅಂತ ವರ್ಣಿಸತೊಡಗಿರುವುದು ಕಾಲುಪ್ರಿಯರಿಗೆ ಸಂತಸದ ಸುದ್ದಿಯೇ. (ಇನ್ನು , ಕಚ್ಚಿ ಎಳೆಯೋ ಕಾಲಿನ ಬಗ್ಗೆ ಯೋಚಿಸಬೇಡಿ ಮಾರಾಯ್ರೆ) ಫ್ಯಾಷನ್ ಷೋ ಎಂಬ ಶೋಕಿ ಶುರುವಾದ ಮೇಲಂತೂ ಚೆಂದದ ಕಾಲುಗಳ ಒಂದೊಂದು ಹೆಜ್ಜೆಗೂ ಲಕ್ಷ ರೂಪಾಯಿ. 'ಮೆಲ್ಲಮೆಲ್ಲನೇ ಬಂದಳೇ/ ಬಂದನೇ’ ಎರಡಕ್ಕೂ ಡಿಮ್ಯಾಂಡ್. 'ನಡೆದರೆ ನಡು ಬಗ್ಗದಂತಿರಬೇಕು’ ಅನ್ನುತ್ತಾ ರ್‍ಯಾಂಪ್ ಏರುವ ಪ್ರದರ್ಶನ ಗೊಂಬೆಗಳ ಕೈಹಿಡಿಯುವುದೇ ಕಾಲಲ್ಲವೇ? ಆಹಾ 'ಕಾಲೇಷು’ ರಮ್ಯಂ !

ದಕ್ಷಿಣಕನ್ನಡ-ಉಡುಪಿಯ ದೇವಸ್ಥಾನಗಳ ಉತ್ಸವ ಸಂದರ್ಭದಲ್ಲಿ , ದೇವರ ಮೂರ್ತಿಯನ್ನು ಸುಮಾರು ೧೫ ಕೆಜಿ ತೂಕದ ಅರ್ಧಚಂದ್ರಾಕೃತಿಯ ಬೆಳ್ಳಿಯ ಪ್ರಬಾಳೆಯಲ್ಲಿಟ್ಟು ಒಬ್ಬನೇ ಹೊತ್ತುಕೊಂಡು ದೇವಾಲಯಕ್ಕೆ ಪ್ರದಕ್ಷಿಣೆ ಬರುವ ಸಂಪ್ರದಾಯವಿದೆ. ಆತನ ಜತೆಗೆ ವಾದ್ಯ-ಚೆಂಡೆಯವರೂ ಇರುತ್ತಾರೆ. ಹದಿನೈದಿಪ್ಪತ್ತು ಕೆಜಿ ಭಾರ ಹೊತ್ತ ಆ ವ್ಯಕ್ತಿ ಎರಡೂ ಕೈಗಳನ್ನು ಬೀಸುತ್ತಾ ತಲೆಯ ಮೇಲೆ ನಿಂತಿರುವ ದೇವರೆಡೆಗೆ ಸಂಪೂರ್ಣ ಧ್ಯಾನವಿಟ್ಟು ಹೆಜ್ಜೆ ಹಾಕುವ ನಡಿಗೆ ಬಹಳ ವಿಶಿಷ್ಟ. ಇನ್ನು ಮಲೆನಾಡಿನ ಹೊಲದ ಹಾದಿಗಳಲ್ಲಿ, ಅಡಿಕೆಮರ ಹಾಕಿದ ಸಂಕಗಳಲ್ಲಿ , ಸೊಂಟದಲ್ಲಿ ಕೊಡ ಇಟ್ಟುಕೊಂಡು ಬರುವಲ್ಲಿ ಜನರ ನಡಿಗೆಗಳನ್ನು ಗಮನಿಸಿದರೆ ಕಾಲ್ನಡಿಗೆಯ ಕಾಲಂಶ ಮಹಾತ್ಮೆಯಾದರೂ ಅರಿವಾದೀತು.

ನಿಂದು ಕಾಗೆಕಾಲು ಅಕ್ಷರ
ಪ್ರೈಮರಿಯಲ್ಲಿ ಸೊಟ್ಟಮೊಟ್ಟ ಅಕ್ಷರ ಬರೆವವರಿಗೆ 'ನಿಂದು ಕಾಗೆಕಾಲು ಅಕ್ಷರ’ ಅಂತ ಮಾಷ್ಟ್ರು ಹೇಳುವುದುಂಟು. ಉದ್ದಕ್ಕಿದ್ದವರಿಗೆ ಕೊಕ್ಕರೆಗಾಲು ಅಂತ ಸಹಪಾಠಿಗಳು ಹೀಯಾಳಿಸುವುದುಂಟು. ಕಾಲು ಕೆರೆದು ಜಗಳಕ್ಕೆ ಬರುವ ಅವರ ಮುಕ್ಕಾಲು ಬುದ್ಧಿಗೂ ಉತ್ತರಿಸದೆ ಬಿಡಬೇಡಿ. ಕಾಗೆ ಕಾಲು ತಲೆಗೆ ತಗುಲಿದರೆ ಆತನ ಅಂತ್ಯಕಾಲ ಸಮೀಪಿಸಿತೆಂದೇ ಅರ್ಥ, ಹುಷಾರ್. ಇನ್ನು ಕತ್ತೆ ಕಾಲಿನ ಒದೆಯ ಬಗ್ಗೆ ನಿಮಗೆ ಹೇಳಬೇಕಾದೀತೇ?! ಹಾಲು ಕರೆವಾಗ ಎಷ್ಟು ಜನರ ಕಾಲಿಗೆ ಎಷ್ಟೆಷ್ಟು ಸಲ ಹಸು ತುಳಿದಿದೆ ಅಂತ ಮನೆಯ (ಹಳೆ)ಹೆಂಗಸರನ್ನು ಕೇಳಿ. ಮನುಷ್ಯನಿಗೆ- ಓಡಾಡಲು, ವಾಹನ ಚಲಾಯಿಸಲು, ತುದಿಗಾಲಿನಲ್ಲಿ ನಿಂತು ಇಣುಕಲು (ಇದು ಮಾನವರ ವಿಶೇಷ ಸಾಮರ್ಥ್ಯ) ಕಾಲ್ಗಳೇ ಬೇಕಲ್ಲ. ಮಹಾಭಾರತ ನಡೆದದ್ದೇ ಕೌರವನ ತೊಡೆಯ ಮೇಲೆ, ತಿಳಕೊಳ್ಳಿ.....ಅಂತ ಸಮಾಧಾನವಾಗಿ ಹೇಳಿ !

ಆದರೂ ಸತ್ಯ ಹೇಳುತ್ತೇನೆ. ಕಾಲುಗಳಿಂದ ಇರುವ ಒಂದೇಒಂದು ತೊಂದರೆ ಎಂದರೆ ಒಡೆವ ಅಂಗಾಲು. ಅದೆಷ್ಟು ಮುಲಾಮು, ಆಯುರ್ವೇದ ಉಪಚಾರಗಳು ಬಂದರೂ ಒಡೆಯುವ ಕಾಲುಗಳು ಒಡೆಯುತ್ತಲೇ ಇವೆ. ಒಡೆದುಒಡೆದು ಚಂಬಲ್ ಕಣಿವೆಗಳಂತಾಗಿ, ಕಪ್ಪು ಮಣ್ಣು ತುಂಬಿಕೊಂಡು, ರಕ್ತ ಒಸರುತ್ತಾ , ಊರಲಾಗದಷ್ಟು ನೋಯುತ್ತಾ, ಕೊಂಚ ವಾಸನೆ ಹೊರಡಿಸುತ್ತಾ ಛೆ ಛೆ ಸಾಕಪ್ಪಾಸಾಕು. ಹಾಗಾಗಿಯೇ ನಮ್ಮ ಕೆಲವು 'ನಗರದೇವತೆ’ಗಳ ಪಾದಾಂಬುಜ ನೆಲವನ್ನೇ ಸ್ಪರ್ಶಿಸುವುದಿಲ್ಲ. ಅವುಗಳಿಗೆ ಯಾವತ್ತೂ ಮೆತ್ತನೆ ಚೀಲ. ಕೆಲವರ ಕೆನ್ನೆಗಿಂತ ಅವರ ಅಂಗಾಲು ನುಣು[. ಎಷ್ಟೆಂದರೆ ಅವರ ಕಾಲನ್ನೇ ನಮ್ಮ ಕೆನ್ನೆಗೆ ಒತ್ತಿಕೊಳ್ಳೋಣ ಅನಿಸುವಷ್ಟು !
ಕಾಲಿನ ಬಗ್ಗೆಯೇ ಆದರೂ ಕೈಯಲ್ಲೇ ಬರೆಯಬೇಕಾಗಿಬಂದ ಈ ಬರೆಹವನ್ನು ನಿಮ್ಮ ಕಾಲಿಗೆ ಹಾಕುತ್ತಿದ್ದೇನೆ. ಇದು ಪುರಾಣದ 'ಕಾಲು’ಭಾಗ ಅಷ್ಟೆ. ಕೈಹಿಡಿದು...ಅಲ್ಲಲ್ಲ...ಕಾಲು ಹಿಡಿದು ಒಪ್ಪಿಸಿಕೊಳ್ಳಿ !

Read more...

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP