December 15, 2009

ಡಿಸೆಂಬರ್ ೧೬ರ ಈ ಬೆಳಗಿಗೆ...


ಆಲದ ಮರದ ಬುಡದಲ್ಲಿ ಮಣ್ಣುಂಟು,
ಒಳಗೆ ಹೊಕ್ಕಳಿನಿಂದ ನೆತ್ತಿವರೆಗೆ
ನೆಳಲಾಗಿ ಉಂಟು ಸಾವಿರ ಕಂಭದ ಬಸದಿ;
ಹೊರಗೆ ತರುವ ಪವಾಡ ಕಾದು ಕುಳಿತೆ.
ಗೋಪಾಲಕೃಷ್ಣ ಅಡಿಗರು ೧೯೭೧ರಲ್ಲಿ ಬರೆದ 'ಅಜ್ಜ ನೆಟ್ಟಾಲ' ಪದ್ಯದ ಈ ಕೊನೆಯ ಸಾಲುಗಳ ಹಾಗೆ, ಅಪ್ಪ ಕಾದು ಕುಳಿತಿದ್ದರೆ? ಕೊನೆಯವರೆಗೂ ಅದು ಕಾಯುವಿಕೆಯೇ ಆಯಿತೇ? ಬರೀ ಜಾಲಿ, ಕತ್ತಾಳೆ, ಈಚಲು, ಕುರುಚಲು ಬೆಳೆದವೇ? ಅಲ್ಲಾ, ಅಜ್ಜ ನೆಟ್ಟಾಲ ಮನೆ ಮುಂದೆ ತೇರಿನ ಹಾಗೆಯೇ ಉಳಿದು ಬಂತೆ?!

ನವ್ಯ ಸಾಹಿತ್ಯ ವಿಜೃಂಭಿಸುತ್ತಿದ್ದ ೧೯೭೦ರ ದಶಕ. ಕತೆ-ಕವನ ಬರೆಯುತ್ತಿದ್ದವರೆಲ್ಲ ಮೇಷ್ಟ್ರುಗಿರಿ ಮಾಡುತ್ತಿದ್ದ ಕಾಲ! ಪಿಯುಸಿಯಲ್ಲಿ ಒಳ್ಳೆಯ ಅಂಕಗಳನ್ನು ಪಡೆದ ಅಪ್ಪನಿಗೆ ಲೆಕ್ಚರರ್ ಆಗುವ ಹಂಬಲ. ಆದರೇನು, ಅದೇ ಸಮಯಕ್ಕೆ ಅವರ ತಂದೆ ಅನಾರೋಗ್ಯ ಪೀಡಿತರಾದರು, ತೀರಿಕೊಂಡರು. ಸ್ವತಂತ್ರ ಬದುಕಿಗೆ ಕಾಲಿಡಬೇಕಾದ ವ್ಯಕ್ತಿಯ ಹಿಂದಿನ ಮೆಟ್ಟಿಲುಗಳೆಲ್ಲ ತೊಪತೊಪನೆ ಉದುರಿಹೋದವು. ಮುಂದೆ ಕತ್ತೆತ್ತಿದ್ದರೆ ಸಾವಿರಾರು ಮೆಟ್ಟಿಲುಗಳ ಬದುಕ ಬೆಟ್ಟ. ತೋಟಗದ್ದೆ, ಕೆಲಸದಾಳುಗಳು, ತಮ್ಮಂದಿರು ತಂಗಿಯಂದಿರು, ಮನೆತನದ ಮರ್ಯಾದೆ ಹೊಂದಿದ, ಲಕ್ಷ್ಮೀ ಭಂಡಾರ ಖಾಲಿಯೇ ಇದ್ದ ಹಳ್ಳಿ ಮನೆಯ ಜವಾಬ್ದಾರಿ ಅವರ ತಾರುಣ್ಯದ ಮೇಲೆ ಆತುಕೊಂಡಿತು. ಮತ್ತಿನ್ನೇನು? ತಮ್ಮೆಲ್ಲ ಕನಸುಗಳನ್ನು ಕಟ್ಟಿಟ್ಟು, ತಾವು ಇದ್ದಲ್ಲೇ, ತಮ್ಮ ಬಳಿಯಿದ್ದ ಸಂಪನ್ಮೂಲದಲ್ಲೇ ಬದುಕು ಕಟ್ಟುವ ನಿರ್ಧಾರ ಮಾಡಿರಬೇಕು ಅವರು. ಆದರೆ ಕೇವಲ ತೋಟಗದ್ದೆ ನೋಡಿಕೊಂಡಿರುವುದರಲ್ಲಿ ಅವರಿಗೆ ತೃಪ್ತಿಯಿರಲಿಲ್ಲ. ಹಾಗಾಗಿ ಸಾಕ್ಷಿ, ಸಂಕ್ರಮಣದಂಥ ಸಾಹಿತ್ಯಕ ಪತ್ರಿಕೆಗಳಿಗೆ- ಉದಯವಾಣಿ, ಸುಧಾ, ಪ್ರಜಾವಾಣಿಗಳಿಗೆ ಬರೆಯುತ್ತಾ ಕವಿಯಾದರು. ಕಮ್ಯುನಿಸ್ಟ್, ಜನತಾ ಪಕ್ಷಗಳ ಮೂಲಕ ರಾಜಕಾರಣಿಯಾದರು. ಯಕ್ಷಗಾನದ ಅರ್ಥಧಾರಿ-ವೇಷಧಾರಿಯಾಗಿ, ಊರಿನ ದೇವಸ್ಥಾನಗಳ ಸಮಿತಿಯ ಪದಾಧಿಕಾರಿಯಾಗಿ, ನೆರೆಹೊರೆಯವರ ಜಗಳ ಪರಿಹರಿಸುವ ಪಂಚಾಯಿತಿಕೆದಾರನಾಗಿ ಕಾಣಿಸಿಕೊಳ್ಳತೊಡಗಿದರು. ಅಮ್ಮ ಮನೆಗೆ ಬಂದಳು.

ಅಪ್ಪ ಸತ್ಯಮೂರ್ತಿ ದೇರಾಜೆ ಮತ್ತು ಅಮ್ಮ ಜಯಂತಿ ದೇರಾಜೆ ಜತೆ ಹಿಂದೆ ಹಿಂದಕ್ಕೆ ಹೋದರೆ ನೆನಪಿರುವುದು ಹೀಗೆ -ರಾತ್ರಿಯಾಗುತ್ತಿದ್ದಂತೆ ದೇವರ ಕೋಣೆಗೆ ಕರೆದು 'ಗಣಪ ಗಣಪ ಏಕದಂತ ಪಚ್ಚೆಕಲ್ಲು ಪಾಣಿಪೀಠ...' ಹೇಳಿಸುವ, ಮನೆ ಹಿಂದಿನ ಗುಡ್ಡಕ್ಕೆ ಹೋಗುವಾಗ ಮಗ್ಗಿ- ಕೂಡು-ಕಳೆ ಲೆಕ್ಕ ಕಲಿಸುವ, ಹಳೆ ಗಡಿಯಾರ ತಂದು ಮುಳ್ಳು ತಿರುಗಿಸುತ್ತಾ ಟೈಮು ನೋಡಲು ಹೇಳಿಕೊಡುವ, ಸಂಗೀತ ಕ್ಲಾಸಿಗೆ ಕರೆದೊಯ್ಯುವ, ಶಾಲಾ ಡ್ಯಾನ್ಸ್‌ಗಳಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸುವ ಅಮ್ಮ. ಬರೀ ಮುದ್ದು ಮಾಡಿ ಲಲ್ಲೆಗರೆದು, ಮಗುವಿನೊಳಗೆ ಸ್ಪಂಜ್ ತುಂಬಿಸುವ ಕೆಲಸ ಆಕೆ ಮಾಡಿದಂತಿಲ್ಲ! ರಾತ್ರಿ ನಾನು ನಿದ್ದೆ ಹೋಗುವವರೆಗೆ ಪುರಾಣ ಕತೆಗಳನ್ನು ಹೇಳುವುದಕ್ಕೆ, ಆಗಸದಲ್ಲಿ ಲೀನವಾಗುವಂತೆ ಚೆಂಡೆಸೆದು ಅಚ್ಚರಿಗೊಳಿಸುವುದಕ್ಕೆ ಅಪ್ಪ. ಆದರೆ ನಾಲ್ಕನೇ ಕ್ಲಾಸ್ ಮುಗಿಸಿ, ಹಿಂದಿ-ಇಂಗ್ಲಿಷ್‌ಗಳು ಬಂದು ಗಣಿತ ಕಷ್ಟವಾಗತೊಡಗಿದಾಗ, ಶಾಲೆಯ ಎಲ್ಲ ಚಟುವಟಿಕೆಗಳಲ್ಲಿ ನನ್ನೊಂದಿಗೆ ತೊಡಗಿಸಿಕೊಂಡವರು ಅಪ್ಪ. ಭಾಷಣ-ಪ್ರಬಂಧ ಬರೆಯಲು ಸಹಾಯ ಮಾಡುವುದು, ಸ್ಪರ್ಧೆಗಳಿಗೆ ಕರೆದೊಯ್ಯುವುದು, ಚಪ್ಪಲಿ-ಅಂಗಿ ಕೊಡಿಸುವುದು, ಯಕ್ಷಗಾನ-ನಾಟಕಗಳಿಗೆ ಹೋಗುವುದು, ಹೀಗೆ ಎಲ್ಲದರಲ್ಲೂ ಅಪ್ಪನ ಜತೆ. ಸಮಾಜದಲ್ಲಿ ಆಗಲೇ ಒಂದಷ್ಟು ಹೆಸರು ಸಂಪಾದಿಸಿದ್ದ ಅಪ್ಪನ ಬಗ್ಗೆ ನನಗೆ ಹೆಮ್ಮೆಯಿತ್ತು, ಆತ ಮನೆಯ ಸರ್ವಸಂರಕ್ಷಕನೆಂಬ ಧೈರ್‍ಯವಿತ್ತು. ಸುಬ್ರಹ್ಮಣ್ಯ ಸ್ವಾಮಿಗಳ ಒಳಕೋಣೆಗೆ ನನ್ನ ಕರೆದೊಯ್ದ ಅಪ್ಪನಿಗೆ, ಅಲ್ಲಿಂದ ಹಿಂದಿರುಗಿ ಬರುವಾಗ ಸರ್ವೀಸ್ ಕಾರಿನ ಡ್ರೈವರ್ ಬಯ್ದಿದ್ದ. ಅದೂ ನಿಲ್ಲಿಸಲು ‘ಶೂ ಶೂ’ ಅಂದದ್ದಕ್ಕೆ ! ‘ನೀವೇನು ಕೋಳಿ ಓಡಿಸುವುದಾ? ನಿಲ್ಲಿಸಿ ಅಂತ ಹೇಳ್ಲಿಕ್ಕಾಗುವುದಿಲ್ವಾ’ ಅಂತ ಆತ ಬೈದಿದ್ದ. ಆಗ ಅಪ್ಪ ಕೈಲಾಗದವರಂತೆ ತೆಪ್ಪಗಿದ್ದದ್ದು ನನ್ನಲ್ಲಂತೂ ಆಶ್ಚರ್ಯ ಹುಟ್ಟಿಸಿತ್ತು. ಆದರೆ ಬಡವನ ಸಿಟ್ಟು ದವಡೆಗೆ ಮೂಲ ಎಂಬುದು ಅವರಿಗೆ ಸರಿಯಾಗಿ ಗೊತ್ತಿತ್ತಾ?!

೧೯೯೨ರಲ್ಲಿ ನಮ್ಮ ಗ್ರಾಮ ದೇವಸ್ಥಾನದ ಬ್ರಹ್ಮಕಲಶೋತ್ಸವ ನಡೆದಾಗ ಸಿದ್ಧಪಡಿಸಿದ ಸ್ಮರಣ ಸಂಚಿಕೆಗೆ, ಅಪ್ಪ ಬರೆದ ಸಂತುಲಿತ ಸಂಪಾದಕೀಯ ಅವರ ಧೋರಣೆಯನ್ನು ತೆರೆದಿಡುತ್ತದೆ. ಆಗ ದಕ್ಷಿಣಕನ್ನಡದ ಎಲ್ಲೆಂದರಲ್ಲಿ ಹಳೆ ದೇವಾಲಯಗಳ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿತ್ತು. "ಇಂಥ ಸಂದರ್ಭದಲ್ಲಿ ಭಾರತೀಯ ಸಂಸ್ಕೃತಿಯ ಹಾಗೂ ಅದು ಪ್ರತಿಪಾದಿಸುವ ಮೌಲ್ಯಗಳ ಪುನರ್ ಮೌಲ್ಯಮಾಪನ ಆಗಬೇಕು. ಈವರೆಗಿನ ನಮ್ಮ ಅನುಭವಗಳ ಬೆಳಕಿನಲ್ಲಿ ಚಿಂತನ ಮಂಥನ ನಡೆಯಬೇಕು...ದೇವರ ಕುರಿತಾದ ನಂಬಿಕೆ ಜೀವನದ ಒಂದು ವಿಭಾಗ ಅಲ್ಲ. ಅದು ಜೀವನವನ್ನು ಪೂರ್ತಿಯಾಗಿ ಒಳಗೊಳ್ಳಬೇಕು. ಹಾಗಾದಾಗ ಮಾತ್ರ ಆ ನಂಬಿಕೆಯು ಮಾನವನನ್ನು ಮತ್ತಷ್ಟು ಸುಸಂಸ್ಕೃತನನ್ನಾಗಿಸಿ ಉದಾತ್ತಗೊಳಿಸುತ್ತದೆ...ನಮ್ಮೆಲ್ಲ ತತ್ತ್ವಜ್ಞಾನಗಳ ಪರಮ ಲಕ್ಷ್ಯ ಮೋಕ್ಷ. ಅಂದರೆ ಬಿಡುಗಡೆ, ಯಾವುದರಿಂದ ಬಿಡುಗಡೆ? ಎಲ್ಲ ಬಗೆಯ ಬಂಧನದಿಂದ; ಎಲ್ಲ ಬಗೆಯ ಭಯದಿಂದ; ಎಲ್ಲ ಬಗೆಯ ನೀಚತನದಿಂದ; ಎಲ್ಲ ಬಗೆಯ ಪೂರ್ವಾಗ್ರಹಗಳಿಂದ. ಅದಕ್ಕೆ ಬೇಕು ಮುಕ್ತ ನಿರೀಕ್ಷಣೆ; ಮುಕ್ತ ಚಿಂತನೆ.' ಅಂತ ಅವರು ಸಂಪಾದಕೀಯದಲ್ಲಿ ಬರೆದರು. ದೇವರೂ ಬದುಕಿನಲ್ಲಿ(ಹೆಂಡತಿ-ಮಕ್ಕಳ ಹಾಗೆ)ಒಳಗೊಳ್ಳಬೇಕೆನ್ನುವುದು ಎಷ್ಟೊಳ್ಳೆಯ ಆಸೆ !

ಒಂದೇ ಹಾದಿಯಲ್ಲಿ ನಡೆದಿದ್ದರೆ ತಾನು ಇನ್ನಷ್ಟು ಎತ್ತರಕ್ಕೆ ಏರಿಬಿಡುತ್ತಿದ್ದೆ. ಆದರೆ ತನಗೆ ನಿಜವಾಗಿ ಯಾವುದು ಬೇಕು ಎಂದು ತಿಳಿಯುವಷ್ಟರಲ್ಲೇ ತಡವಾಯಿತು. ಮೊದಲಿನಿಂದಲೇ ತಾನು ಈ ಯಕ್ಷಗಾನ ತಾಳಮದ್ದಳೆಯಲ್ಲಷ್ಟೇ ಗಮನ ಇಟ್ಟಿದ್ದರೆ ಚೆನ್ನಾಗಿತ್ತು ಅಂತ ನಲ್ವತ್ತರ ಬಳಿಕ ಅವರು ಅಂದುಕೊಳ್ಳುತ್ತಿದ್ದರು. ಆದರೆ ಯಕ್ಷಗಾನದ ಬಗೆಗಿನ ಅಭಿಪ್ರಾಯ ಮಾತ್ರ ಅವರಿಗೆ ಮೊದಲೇ ಸ್ಪಷ್ಟವಾಗಿತ್ತು. "ಯಕ್ಷಗಾನದ ರೂಪ ಹಾಗೂ ಕಥಾವಸ್ತುಗಳ ನಡುವಿನ ಬಂಧ ಎಷ್ಟೊಂದು ಅನ್ಯೋನ್ಯ ಹಾಗೂ ಬಿಗಿಯಾಗಿದೆಯೆಂದರೆ, ಯಾವುದೇ ಒಂದನ್ನು ಬದಲಾಯಿಸಿದರೂ ಅದು ಯಕ್ಷಗಾನ ಅಲ್ಲ ಎನ್ನುವ ಹಾಗಿದೆ. ಅದರಲ್ಲಿ ಕಲೋಚಿತ ಸುಧಾರಣೆಗಳನ್ನು ಮಾಡಬಹುದೇ ಹೊರತು, ಕಾಲೋಚಿತವೆನ್ನುವ ಧೋರಣೆಯಿಂದ ಬದಲಾವಣೆಗಳನ್ನು ಮಾಡಲಾಗದು. ಇಂತಹ ಕಲೆ, ಬದಲಾಗುತ್ತಿರುವ ಕಾಲಮಾನದಲ್ಲಿ ಪ್ರಸ್ತುತವೆನಿಸುವುದು ಅಥವಾ ಅರ್ಥಪೂರ್ಣವೆನಿಸುವುದು ಹೇಗೆ? ಯಕ್ಷಗಾನ ಸಾಂಕೇತಿಕವಾದ ಅಥವಾ ಪ್ರತೀಕಾತ್ಮಕವಾದ ರಂಗಭೂಮಿ. ಅದು ಕಥಾವಸ್ತುವಿಗಾಗಿ ಪ್ರತೀಕಾತ್ಮಕವಾದ ಪುರಾಣಗಳನ್ನೇ ಆಶ್ರಯಿಸಿದೆ. ಪುರಾಣಗಳಲ್ಲಿ ನಮ್ಮ ಸಂಸ್ಕೃತಿಯ ಬೇರುಗಳಿವೆ. ಅವುಗಳಲ್ಲಿ ಸಾರ್ವಕಾಲಿಕವಾದ ಮತ್ತು ಸಾರ್ವತ್ರಿಕವಾದ ಮೌಲ್ಯಗಳಿವೆ’ ಎಂಬುದು ಅವರ ಅಭಿಪ್ರಾಯ. ಅವು ಯಾವುವು, ಯಕ್ಷಗಾನದಲ್ಲಿ ಅವು ಹೇಗೆ ಬರಬೇಕು ಅನ್ನುವುದಕ್ಕೆ ಅವರು ಹೇಳುವ ಹಲವು ಉದಾಹರಣೆಗಳಲ್ಲಿ ಒಂದನ್ನು ನೀವು ಓದಬೇಕು.

'ಊರ್ವಶಿ ಶಾಪ' ಪ್ರಸಂಗದಲ್ಲಿ ರತಿ ಸುಖದ ಬಿಸಿಯೂಟವನ್ನು ಉಣಿಸುವುದಕ್ಕೆ ಬಂದ ಊರ್ವಶಿಯಲ್ಲಿ ಧರ್ಮಾಧರ್ಮಗಳನ್ನು ವಿಮರ್ಶಿಸುತ್ತ ಅರ್ಜುನ ಹೇಳುತ್ತಾನೆ- ನಿನಗೆ ಧರ್ಮವೆನಿಸಿದ್ದು ನನಗೆ ಧರ್ಮವಾಗಬೇಕಿಲ್ಲ. ಹಾಗೆಂದು ನನಗೆ ಅಧರ್ಮವೆನಿಸಿದ್ದು ನಿನಗೆ ಅಧರ್ಮವಾಗಬೇಕಿಲ್ಲ. ತುಲನಾತ್ಮಕವಾಗಿ, ಭೋಗದಲ್ಲಿ ಧರ್ಮ ಸೂಕ್ಷ್ಮದ ವಿವೇಚನೆಯನ್ನು ಮಾಡಿದಷ್ಟು ತ್ಯಾಗದಲ್ಲಿ ಮಾಡಬೇಕಾಗಿಲ್ಲ. ಪಿತೃವಾಕ್ಯ ಪರಿಪಾಲನೆಗಾಗಿ ಸಿಂಹಾಸನ ತ್ಯಾಗ ಮಾಡುವುದಕ್ಕೆ ಶ್ರೀರಾಮಚಂದ್ರ ಹೆಚ್ಚು ಆಲೋಚಿಸಬೇಕಾದ್ದಿಲ್ಲ. ಆದರೆ ಮಾತೆಯ ಮಾತಿನಂತೆ ಸಿಂಹಾಸನವನ್ನು ಸ್ವೀಕರಿಸಿಬೇಕಾದರೆ ಭರತ ಬಹಳವಾಗಿ ಚಿಂತಿಸಬೇಕು’.
ಇದನ್ನು ಅಪ್ಪನೇ ಅರ್ಜುನನ ಪಾತ್ರದಲ್ಲಿ ಮೊದಲು ಹೇಳಿದರೋ, ಬೇರೆಯವರು ಹೇಳಿದ್ದರೋ ಗೊತ್ತಿಲ್ಲ. ಆದರೆ ಸಂಸ್ಕೃತಿಯ ಮುಖಗಳನ್ನು ಇಂತಹ ಸಂದರ್ಭದ ಮಾತುಗಳಲ್ಲಿ ಅವರು ಗುರುತಿಸಿದ ಬಗೆ ಮಾತ್ರ ತುಂಬಾ ಘನತೆಯುಳ್ಳದ್ದಾಗಿದೆ. "ಯಕ್ಷಗಾನಕ್ಕೆ ವಸ್ತು(theme)ಎಂಬುದಿಲ್ಲ. ಅದಕ್ಕಿರುವುದು ಕಥಾ ವಸ್ತು ಮಾತ್ರ. ಅಂದರೆ ಒಂದು ಪ್ರದರ್ಶನ ಒಟ್ಟಿನಲ್ಲಿ ಹೇಳುವುದು ಅರ್ಥಾತ್ "ಅದರ ಪ್ರಬಂಧ ಧ್ವನಿ ಇದು’ ಎನ್ನುವ ಸೂತ್ರವೇ ಯಕ್ಷಗಾನಕ್ಕಿಲ್ಲ. ಕಲಾವಿದ ಸೂಕ್ಷ್ಮ ಸಂವೇದನಾಶೀಲನೂ ಸೃಜನಶೀಲನೂ ಆಗಿದ್ದರೆ-ಯಕ್ಷಗಾನ ವೈದಿಕ ಸಂಸ್ಕೃತಿಯನ್ನೇ ಪೋಷಿಸುತ್ತದೆ, ವರ್ಣ ವ್ಯವಸ್ಥೆ ಸಮರ್ಥಿಸುತ್ತದೆ, ಅದು ಪ್ರತಿಗಾಮಿ ಕಲೆ ಎಂಬ ಆರೋಪಗಳನ್ನು ಸುಳ್ಳಾಗಿಸಬಹುದು. ಆಗ ಪಾತ್ರಗಳು ಹೆಚ್ಚು ಸಂಕೀರ್ಣವಾಗುತ್ತವೆ. ಕಪ್ಪು-ಬಿಳುಪು ವಿಂಗಡಣೆ ಮಾಯವಾಗುತ್ತದೆ. ಕಥಾವಸ್ತುವಿನ ಧ್ವನಿ ಹೊಸದಾಗುತ್ತದೆ’ ಅಂತ ಅವರು ನಂಬಿದ್ದರು. ಅಪ್ಪನ ಅರ್ಥಗಾರಿಕೆಯಲ್ಲೂ ಬದುಕಿನಲ್ಲೂ ಆರೋಗ್ಯಕರ ನವಿರು ಹಾಸ್ಯ ಸದಾ ಇತ್ತು. ಹಿಡಿಂಬೆಯು ಭೀಮನಿಗೆ _"ನಿನಗೆ ಹಾಡಲು ಬರುತ್ತದೆಯೆ ಭೀಮ?’ ಎಂದು ಪ್ರಶ್ನಿಸಿದರೆ ಇವರು ಭೀಮನಾಗಿ- 'ಇಲ್ಲ ಬಾರಿಸಲು ಬರುತ್ತದೆ’ ಅನ್ನುತ್ತಿದ್ದರು ! ಹೀಗೆ ಮಾತಿನಲ್ಲಿ ಹೃದ್ಯವಾಗುವ ಗುಣ ಅವರಿಗಿತ್ತು.

ನವ್ಯ ಸಾಹಿತ್ಯದ ಘಮಲಿನಿಂದಾಗಿ ದೇವರು, ಸಂಪ್ರದಾಯ ಎಲ್ಲವುಗಳ ಬಗ್ಗೆ ನಿರ್ಲಕ್ಷ್ಯದಿಂದಿದ್ದ ಅಪ್ಪ, ನಲುವತ್ತು ದಾಟಿದ ನಂತರ, ಅವುಗಳ ಬಗ್ಗೆಯೂ ಕುತೂಹಲಿಗರಾದರು. ಭಗವದ್ಗೀತೆ, ಉಪನಿಷತ್, ಯೋಗ ವಾಸಿಷ್ಠ, ವಿವೇಕ ಚೂಡಾಮಣಗಳನ್ನು ಓದತೊಡಗಿದರು. ಅದು ಯಕ್ಷಗಾನ ತಾಳಮದ್ದಳೆಗೆ ಪೂರಕ ಅನ್ನುವುದೂ ಕಾರಣವಾಗಿತ್ತು. ಮೊದಲೆಲ್ಲಾ ಹೊರಗೆ ಹೋಗುವಾಗ ಜನಿವಾರ ಮನೆಯಲ್ಲಿಟ್ಟು ಹೋಗುತ್ತಿದ್ದವರು, ಈಗ ಅದನ್ನು ಒಮ್ಮೆಯೂ ತೆಗೆಯುತ್ತಿರಲಿಲ್ಲ! ಮಧ್ಯಾಹ್ನ ಮನೆ ದೇವರ ಪೂಜೆಯನ್ನು ಅವರೇ ಮಾಡತೊಡಗಿದರು. ಆದರೆ ಇವ್ಯಾವುವೂ ಬದುಕಿನಲ್ಲಿ ಸೋತದ್ದರಿಂದ ಬಂದವಲ್ಲ, ಗೆಲುವಿನ ಮೆಟ್ಟಿಲುಗಳನ್ನು ಏರತೊಡಗಿದಾಗ ಬಂದಂತವು ! ಅಡಿಗರ ಪದ್ಯಗಳನ್ನು, ಲಂಕೇಶ್ ಪತ್ರಿಕೆಯನ್ನು, ಅನಂತಮೂರ್ತಿ ಕಾದಂಬರಿಗಳನ್ನು 'ಆರಂಭದ ಓದು’ ಎಂಬಂತೆ ಓದಿದ್ದ ನಾನು, ಅಪ್ಪನಿಂದಾಗಿ ಜಿಡ್ಡು ಕೃಷ್ಣಮೂರ್ತಿಯವರ ತತ್ತ್ವವನ್ನೂ ಭಗವದ್ಗೀತೆಯನ್ನೂ ಓದುವಂತಾಯಿತು. ದೇವರು-ಸಂಪ್ರದಾಯಗಳನ್ನು ಬೇರೆ ಕೋನಗಳಲ್ಲೂ ಕಾಣುವಂತಾಯಿತು.
ಎಲ್ಲವನ್ನೂ ಸಂಭಾಳಿಸಿಕೊಂಡು ಹೋಗುವ ಕೌಶಲ್ಯ ಸಿದ್ಧಿಸಿದ ಮೇಲೆ, ಯಾವುದೇ ಕೆಲಸಗಳಲ್ಲೂ ಎಲ್ಲರ ಮಾತು ಕೇಳಿಕೊಂಡು ತನ್ನದೇ ನಿರ್ಧಾರ ತೆಗೆದುಕೊಳ್ಳುವ ಛಾತಿ ಅವರಿಗಿತ್ತು. ಎಷ್ಟೇ ಕಷ್ಟವಾದರೂ ಭರವಸೆಯೊಂದು ಬತ್ತದಿರುತ್ತಿತ್ತು. ಬಹಳಷ್ಟು ಸಾಹಿತ್ಯಕ ಪರಿಚಾರಿಕೆ ಮಾಡಿದ ಚೊಕ್ಕಾಡಿಯ "ಸುಮನಸಾ ವಿಚಾರ ವೇದಿಕೆ’ ಸದಸ್ಯರಾಗಿ, "ಕಾರ್ತಿಕೇಯ ಯಕ್ಷಗಾನ ಕಲಾಸಂಘ ನಾರ್ಣಕಜೆ’ಯ ಸದಸ್ಯರಾಗಿ, ಐವರ್ನಾಡು ಪ್ರಾಥಮಿಕ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾಗಿ, ಐವರ್ನಾಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ, ಐವರ್ನಾಡು ಪಂಚಲಿಂಗೇಶ್ವರ ದೇವಸ್ಥಾನದ ಸಹ ಮೊಕ್ತೇಸರರಾಗಿ, ಚೊಕ್ಕಾಡಿಯ ಶ್ರೀರಾಮ ದೇವಸ್ಥಾನದ ಸಮಿತಿಯ ಉಪಾಧ್ಯಕ್ಷರಾಗಿ, ಜನತಾ ಪಕ್ಷದ ಪದಾಧಿಕಾರಿಯಾಗಿ, ಸುಳ್ಯ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸದಸ್ಯರಾಗಿ ದುಡಿದವರು ಅಪ್ಪ. ಆದರೆ ಸಾಹಿತ್ಯ-ಯಕ್ಷಗಾನ-ದೇವಸ್ಥಾನ-ರಾಜಕೀಯಗಳು ಎಲ್ಲೂ ಒಂದರೊಳಗೊಂದು ಸೇರಿ ಅವರಿಗಾಗಲಿ ಇತರರಿಗಾಗಲೀ ಸಮಸ್ಯೆ ಸೃಷ್ಟಿಸಲಿಲ್ಲ. ಯಕ್ಷಗಾನ ತಾಳಮದ್ದಳೆ ಚಟುವಟಿಕೆಗಾಗಿ, ೧೯೯೯ರಲ್ಲಿ 'ದೇರಾಜೆ ಸೀತಾರಾಮಯ್ಯ ಸಂಸ್ಕೃತಿ ರಂಗ’ ಎಂಬ ಸಂಘಟನೆ ಕಟ್ಟಿದ ಅವರು, ತನ್ನ ಸಾವಿನವೆರೆಗೂ (೧೬ ಡಿಸೆಂಬರ್ ೨೦೦೫) ಅದನ್ನು ಮುನ್ನಡೆಸಿಕೊಂಡಿದ್ದರು. (ಅವರ ಬರೆಹಗಳ ಸಂಕಲನ "ಮನವೆ ತನುವಾದವನು’ ಮತ್ತು ನೆನಪಿನ ಲೇಖನಗಳ ಸಂಕಲನ "ನೆನಪಿನುಂಗುರ’ವನ್ನು ದೇಸೀ ಸಂಸ್ಕೃತಿ ರಂಗ ೨೦೦೭ರಲ್ಲಿ ಪ್ರಕಟಿಸಿದೆ)

ಅಪ್ಪ ಅಮ್ಮನದ್ದು ದೊಡ್ಡ ಆಕಾಶ. ಹಾಗಾಗಿ ಇಬ್ಬರು ಮಕ್ಕಳಿಗೂ ಅಲ್ಲಿ ಧಾರಾಳ ಅವಕಾಶ ! ಬಹಳ ವಾಸ್ತವವಾದಿ, ಸೂಕ್ಷ್ಮಗ್ರಾಹಿ, ಹೊಂದಾಣಿಕೆಯ ಮನುಷ್ಯ ಈ ಅಪ್ಪ. ಹೊರಗೆ ಏನೇ ಮಾಡಲಿ, ನೋಡಲಿ ಅದನ್ನು ಅಮ್ಮನ ಜತೆ ಹೇಳಿಕೊಳ್ಳುವುದು ಅವರ ಅಭ್ಯಾಸ. ಆ ಮಾತುಕತೆಯಲ್ಲಿ, ಸುತ್ತಲಿನ ಸಮಾಜದ ಚಟುವಟಿಕೆಗಳು, ರಾಜಕೀಯ ಚಟುವಟಿಕೆಗಳು, ನೆರೆಕರೆಯವರ ಕಚ್ಚಾಟಗಳು, ದೇವಸ್ಥಾನದ ಚಟುವಟಿಕೆಗಳು ಹೀಗೆ ನೂರೆಂಟು ಅನುಭವಗಳ ಸಂಗತಿಗಳಿರುತ್ತಿದ್ದವು. ಅಪ್ಪನ ಹೊಂದಾಣಿಕೆಯ ಸ್ವಭಾವ ಹಾಗೂ ತಾಳ್ಮೆಯ ಬಗ್ಗೆ ಹಲವರು ಹೊಗಳುವುದುಂಟು. ಅವರನ್ನು ಕಂಡರೆ ಆಗದವರು ಅಂತ ಇರಲೇ ಇಲ್ಲವೇನೋ. ಅಪ್ಪ ಯಾವತ್ತೂ ಮಕ್ಕಳ ಸಹವಾಸವನ್ನು ದೂರ ಮಾಡಿದ್ದೇ ಇಲ್ಲ. ಮೂರು ಕಿಮೀ ದೂರದ ಪ್ರೈಮರಿ ಶಾಲೆಗೆ ನಾನು ಹೊರಟಾಗ, ಪೇಟೆ ಬಳಿ ಅವರಿಗೇನಾದರೂ ಕೆಲಸವಿದ್ದರೆ ಜತೆಗೆ ಹೊರಟುಬಿಡುತ್ತಿದ್ದರು. ದಾರಿಯುದ್ದಕ್ಕೂ ಅವರಿಗೆ ಹೇಳಲು ಏನಾದರೊಂದು ವಿಷಯ. ಅಷ್ಟೇಕೆ, ಬ್ಯಾಂಕಿನ ಮಹಾಸಭೆಗಳಿಗೆ, ಅಕ್ಕಿಸಾಮಾನು ತರಲು ಸುಳ್ಯ ಪೇಟೆಗೆ, ವಿಚಾರ ಗೋಷ್ಠಿಗಳಿಗೆ ಮಗ ಸಂಗಾತಿ. ಪಂಚವಟಿ ಪ್ರಸಂಗದ ರಾಮನಾಗಿ ಅವರು ಯಾವಾಗಲೂ ಹೇಳುತ್ತಿದ್ದ ಮಾತು, 'ಬದುಕು ಹೇಗೆ ಒದಗಿ ಬರುತ್ತದೆಯೋ ಹಾಗೆ ಸ್ವೀಕರಿಸುವವನಿಗೆ, ಬದುಕು ಭಾರವೂ ಅಲ್ಲ ಅಸಹನೀಯವೂ ಅಲ್ಲ.’ ಅಪ್ಪ ಹಾಗೆ ಎದುರುಗೊಂಡಿದ್ದರು. ಹಳ್ಳಿಯಲ್ಲೇ ಉಳಿಯಬೇಕಾದ ಅನಿವಾರ್ಯತೆಯನ್ನು ಆಯ್ಕೆ ಎಂಬಂತೆ ಪರಿವರ್ತಿಸಿಕೊಂಡರು. ಐವರ್ನಾಡು-ಚೊಕ್ಕಾಡಿಗಳಂತಹ ಊರುಗಳ ಆರೋಗ್ಯವನ್ನು ಕಾಪಾಡುವಲ್ಲಿ, ಮನಸ್ಸು ರೂಪಿಸುವಲ್ಲಿ ಅವರ ಕಾರ್ಯ ದೊಡ್ಡದು. ಮನಸ್ಸು ಬಿಗಿ ಹಿಡಿದು ಯೋಚಿಸಿದರೆ, ಎಲ್ಲ ಅವರಿಂದ ಬಂದಿದ್ದೇ ಹೆಚ್ಚು! ನನ್ನದೇನು ಅಂತ ಅರೆಕ್ಷಣ ಗಾಬರಿಯಾಗುವಷ್ಟು, ಕೊಟ್ಟೂ ಹೋದ ಬಿಟ್ಟೂ ಹೋದ ಅವರಿಗೆ...ಅರ್ಧಕ್ಕೆ ನಿಂತ ಈ ನಾಲ್ಕು ಮಾತು.
(ಅರವಿಂದ ಚೊಕ್ಕಾಡಿ ಸಂಪಾದಿಸಿದ "ಎರಡು ತಲೆಮಾರು’ ಕೃತಿಯಲ್ಲಿ ಪ್ರಕಟಿತ)

Read more...

December 04, 2009

ಅಮಿತಾಬ್ ಎಂಬ ದಶಾವತಾರಿ


ಬಾಲಿವುಡ್ ಶೆಹನ್‌ಶಾನಿಗೆ ವಯಸ್ಸಾಗಿದೆಯೆ? ಆಗಿದೆ ಅಂತ ನಮಗೆಲ್ಲ ಗೊತ್ತಾಗಿದ್ದು ಎರಡು ವರ್ಷಗಳ ಹಿಂದೆ. ಆ ಆಜಾನುಬಾಹು ಮುಂಬಯಿಯ ಲೀಲಾವತಿ ಆಸ್ಪತ್ರೆಗೆ ಗಾಲಿಮಂಚದಲ್ಲಿ ಅಂಗಾತ ಮಲಗಿಕೊಂಡು ಹೋದಾಗ. ಶೋಲೆಯ ಸೋಲೇ ಇಲ್ಲದ ಆ ಸರದಾರ, ಎಲ್ಲವನ್ನೂ ಎದುರಿಸುತ್ತಾ ಬಂದ. ರಾಜಾಠಾಕ್ರೆಯ ಎಂಎನ್‌ಎಸ್ ಪುಂಡರ ಮಾತಿನ ಬಾಣಗಳನ್ನು ಎದೆಯಲ್ಲಿ ಧರಿಸಿದ. ಮಗ ಅಭಿಷೇಕ, ಸೊಸೆ ಐಶ್ವರ್ಯಾರೊಂದಿಗೆ ದೇಶದೇಶಗಳನ್ನು ನೃತ್ಯ ಕಾರ್ಯಕ್ರಮಗಳಿಗಾಗಿ ಸುತ್ತಿದ. ತನ್ನ ಬ್ಲಾಗ್‌ನಲ್ಲಿ ಪತ್ರಕರ್ತರೊಂದಿಗೆ ತಿಕ್ಕಾಡಿದ. ವಯಸ್ಸು ಅರುವತ್ತಾದರೂ ಹಿರಿಯ ಕಲಾವಿದನೇ ಹೀರೋ ಎಂಬುದು ಇನ್ನು ಚಾಲ್ತಿಯ್ಲಿರುವಾಗ ಬಚ್ಚನ್ ಹಾಗೆ ಮಾಡಲಿಲ್ಲ. ಹಾಗಂತ ಪೋಷಕ ಕಲಾವಿದ ಅಂತಲೂ ಅನ್ನಿಸಲಿಲ್ಲ. ಕುರುಡಿ ರಾಣಿಮುಖರ್ಜಿಯ ಗುರುವಾಗಿ 'ಬ್ಲ್ಯಾಕ್' ಸಿನಿಮಾದಲ್ಲಿ ಅಮಿತಾಬ್ ಕಾಣಿಸಿಕೊಂಡಾಗ, ಜನ ಕಣ್ಣರಳಿಸಿ ನೋಡಿದರು. 'ಕೌನ್ ಬನೇಗಾ ಕರೋಡ್‌ಪತಿ' ಅಂತ ದಪ್ಪ ಸ್ವರದಲ್ಲಿ ನಮ್ಮ ಮನೆ ಟಿವಿಯೊಳಗೆ ಬಂದಾಗ ಜನ ಹುಚ್ಚಾದರು. ೨೦೦೬ರಲ್ಲಿ ಕರಣ್‌ಜೋಹರ್ ನಿರ್ದೇಶನದ 'ಕಭಿ ಅಲ್ವಿದಾ ನಾ ಕೆಹನಾ' ದಲ್ಲಿ 'ಸೆಕ್ಸಿ ಸ್ಯಾಮ್' ಆಗಿ ಕಂಗೊಳಿಸಿದ ಈ ಮಹಾಪುರುಷ, ೨೦೦೭ರಲ್ಲಿ 'ಭೂತನಾಥ್' ಸಿನಿಮಾದಲ್ಲಿ ರೋಗಿಷ್ಠ ಮುದುಕನಾಗಿ ಮಕ್ಕಳೊಂದಿಗೆ ಮಾತಾಡಿದ. ಟಿವಿ ಕಡೆ ಬಚ್ಚನ್ ಬಾರದೆ ತುಂಬ ದಿನವಾಯಿತು ಅಂತ ಜನ ಅಂದುಕೊಂಡರೆ, 'ಬಿಗ್‌ಬಾಸ್-೩'ರ ನಿರೂಪಕನಾಗಿ ಬಂದ. ಇಂತಹ ಭಾರತ ನಾಯಕ ಅಮಿತಾಬ್ ಬಚ್ಚನ್ ಈಗ ಅಭಿಷೇಕನ ಸೊಂಟದಲ್ಲಿ ತೂಗುತ್ತಿರುವ ಚಿತ್ರ ಎಲ್ಲೆಡೆ ಹರಿದಾಡಹತ್ತಿದೆ. ಅಮಿತಾಬ್‌ಗೆ ಏನಾಗಿದೆ?!

೬೭ ವರುಷದ ಅಮಿತಾಬ್ ೧೩ ವರುಷದ ಹುಡುಗನಾಗಿದ್ದಾನೆ. ಅಭಿಷೇಕ್ ಬಚ್ಚನ್ ಸದ್ಗುಣವಂತ ರಾಜಕಾರಣಿಯಾಗಿ ಅಮಿತಾಬ್ ಅಪ್ಪನಾಗಿದ್ದಾನೆ. ಆರ್. ಬಾಲಕೃಷ್ಣನ್ ನಿರ್ದೇಶನದಲ್ಲಿ ಇಳಯರಾಜಾ ಸಂಗೀತದಲ್ಲಿ ಡಿಸೆಂಬರ್ ಮೊದಲ ವಾರ ಬಿಡುಗಡೆಗೆ ಸಿದ್ಧವಾಗುತ್ತಿರುವ (ಡಿ.೪ರಂದು ಬಿಡುಗಡೆಯಾಯಿತು) 'ಪಾ' ಎಂಬ ಹೊಸ ಚಿತ್ರದ ತುಣುಕೊಂದು, ಮೊನ್ನೆ ನ.೪ರಂದು ಬಿಡುಗಡೆಯಾಯಿತು. ಅರೋ ಎಂಬ ಆ ಹುಡುಗನ ತಾಯಿ (ವಿದ್ಯಾ ಬಾಲನ್) ಸ್ತ್ರೀ ರೋಗ ತಜ್ಞೆ. ಕಣ್ತುಂಬ ಕನಸುಗಳ ಅಮೋಲ್ ಅರ್ತೆ (ಅಭಿಷೇಕ್ ಬಚ್ಚನ್), ರಾಜಕೀಯವೊಂದು ಕೊಳಕು ಗುಂಡಿ ಅಲ್ಲವೆಂದು ತೋರಿಸಲು ಹೊರಟವನು. ಆದರೆ ಹುಡುಗ ಆರೋ, ಹದಿಮೂರರ ವಯಸ್ಸಿಗೇ ಮುದುಕನಂತೆ ಕಾಣುವ ಆನುವಂಶಿಕ ಕಾಯಿಲೆಗೆ ತುತ್ತಾಗಿದ್ದಾನೆ. ೧೮೮೬ರಲ್ಲಿ ಜೊನಾಥನ್ ಹಚಿನ್‌ಸನ್ ಎಂಬಾತ ಮೊದಲ ಬಾರಿಗೆ ಈ 'ಪ್ರೊಜೇರಿಯಾ' ಕಾಯಿಲೆಯ ಬಗ್ಗೆ ಬೆಳಕು ಚೆಲ್ಲಿದ. ಆದರೆ ಇಂದಿನವರೆಗೂ ಅದಕ್ಕೆ ಸೂಕ್ತವಾದ ಚಿಕಿತ್ಸೆಯ ದಾರಿ ಸಿಕ್ಕಿಲ್ಲ. ೪೦ ಲಕ್ಷದಲ್ಲಿ ಒಬ್ಬರಿಗೆ ತಗಲುವ ಕಾಯಿಲೆ ಇದು.

ಮನಸ್ಸು ಹದಿಮೂರರಂತಿದ್ದು ಸ್ಕೂಲಿಗೆ ಹೋಗುತ್ತಾನಾದರೂ ದೊಡ್ಡದಾಗಿ ಬೆಳೆದಿರುವ ಅರೋನ ತಲೆ ಬೋಳು ! ಕನ್ನಡಕ ಬಂದಿದೆ. ಚರ್ಮವೆಲ್ಲ ಸುಕ್ಕುಗಟ್ಟಿದೆ. ಹೀಗೆ ಇಲ್ಲಿ ಎಲ್ಲರ ಹುಬ್ಬುಗಳನ್ನು ಮೇಲಕ್ಕೇರಿಸಿದ್ದು ಅಮಿತಾಭ್ ಪಾತ್ರದ ಮೇಕಪ್. ಸಿನಿಮಾ ಚಿತ್ರೀಕರಣಕ್ಕೆಂದು ಶಾಲೆಯೊಂದಕ್ಕೆ ಹೋದಾಗ ಜತೆಗೆ ನಟಿಸಬೇಕಾದ ಮಕ್ಕಳು, ಈತ ಅಮಿತಾಬ್ ಎಂದು ನಂಬಲೇ ಇಲ್ಲ ! ಆತನ ತಲೆ ಮುಟ್ಟಿ ಮುಟ್ಟಿ ನೋಡಿ ಏನಿದೇನಿದೆಂದು ಆಶ್ಚರ್ಯಚಕಿತರಾದರು. ದಿಲ್ಲಿಯ ಮೆಟ್ರೊದಲ್ಲಿ ಸಿನಿಮಾದ ಒಂದು ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಆಗ ಚಿತ್ರೀಕರಣ ತಂಡಕ್ಕೊಂದು ಸುದ್ದಿ ಬಂತು- ಏನಪ್ಪಾ ಅಂದರೆ ಮುಂದಿನ ನಿಲ್ದಾಣದಲ್ಲಿ ಸುಮಾರು ನೂರು ಜನ ಫೋಟೊಗ್ರಾಫರ್‌ಗಳು ಅಮಿತಾಬ್‌ನ ಹೊಸ ಪಾತ್ರದ ಸೆರೆ ಹಿಡಿಯಲು ಕಾಯುತ್ತಿದ್ದಾರೆ ! ಹಾಗಾಗಿ ರೈಲನ್ನೂ ಮೊದಲೇ ನಿಲ್ಲಿಸಿ ಅಮಿತಾಬ್‌ರನ್ನು ಬಚ್ಚಿಡಬೇಕಾಯಿತಂತೆ!

ರಂಗಶಂಕರದ ಒಡತಿ 'ಅರುಂಧತಿ ನಾಗ್' ಈ ಸಿನಿಮಾದಲ್ಲಿ ನಟಿಸುತ್ತಿರುವುದು ಮತ್ತೊಂದು ವಿಶೇಷ. ನಮ್ಮ ಕನ್ಯಾಮಣಿಗಳು ಬಾಲಿವುಡ್ ಪ್ರವೇಶವೆಂದರೆ ಅತಿ ದೊಡ್ಡ ಸೀಮೋಲ್ಲಂಘನವೆಂದು ಚಾತಕ ಪಕ್ಷಿಗಳಂತೆ ಕಾಯುತ್ತಿರುವಾಗ, 'ಜೋಗಿ' ಅಮ್ಮನಾಗಿ ಕನ್ನಡಿಗರಿಗೆ ನಟನಾ ಸಾಮರ್ಥ್ಯ ತೋರಿದ ಅರುಂಧತಿ, ಬಚ್ಚನ್ ಬಳಗ ಸೇರಿದ್ದಾರೆ. ಕಳೆದ ಬಾರಿ 'ಸ್ಲಂ ಡಾಗ್ ಮಿಲಿಯನೇರ್' ಸಿನಿಮಾಕ್ಕೆ ಆಸ್ಕರ್ ಪ್ರಶಸ್ತಿ ಸಿಕ್ಕಾಗ 'ದಿ ಕ್ಯೂರಿಯಸ್ ಕೇಸ್ ಆಫ್ ಬೆಂಜಮಿನ್ ಬಟನ್' ಎಂಬ ಚಿತ್ರ ಹಲವರ ಮೆಚ್ಚುಗೆಗೆ ಪಾತ್ರವಾಗಿತ್ತು. ಅಲ್ಲಿ ಮಗುವೊಂದು ಮುದುಕನಾಗಿ ಹುಟ್ಟಿ ಕಿರಿಯನಾಗುತ್ತಾ ಹೋಗುವ ಕತಾ ಹಂದರವಿತ್ತು.

ಕ್ರಿಸ್ಟಿಯನ್ ಟಿನ್‌ಸ್ಲೆ ಮತ್ತು ಡೊಮಿನಿ ಟಿಲ್ ಎಂಬ ಈ ಮೇಕಪ್‌ಮ್ಯಾನ್‌ಗಳು ಪ್ರಯೋಗಾಲಯದಲ್ಲಿ ಸಂಸ್ಕರಿಲ್ಪಟ್ಟ ಮಣ್ಣಿನ ಎಂಟು ತುಂಡುಗಳಿಂದ ಅಮಿತಾಬ್ ತಲೆಯನ್ನೇ ಬದಲಿಸಿದ್ದಾರೆ . 'ಮೇಕಪ್ ಆರಂಭವಾದ ನಂತರ ಸೆಂಟಿಮೀಟರ್‌ನಷ್ಟೂ ಅದನ್ನು ಅತ್ತಿತ್ತ ಮಾಡಲು ಸಾಧ್ಯವಿಲ್ಲ. ಏನೂ ತಿನ್ನಲು ಕುಡಿಯಲು ಅಸಾಧ್ಯ. ಕಿವಿ ಮತ್ತು ತಲೆಯು ಒಂದೇ ಆಗಿದ್ದು ಹೆಲ್ಮೆಟ್‌ನಂತಿರುತ್ತದೆ.ನನ್ನ ಕಿವಿ ಮುಚ್ಚಿಹೋಗಿದ್ದು, ಹೊರಗಿನ ಧ್ವನಿ ಕೇಳಲು ಎರಡು ಸಣ್ಣ ತೂತುಗಳನ್ನು ಮಾಡಲಾಗಿದೆ. ನಾನು ಏನನ್ನಾದರೂ ಕೊಂಚ ಮಾತಾಡಿದರೆ ಸುರಂಗದೊಳಗೆ ಮಾತಾಡಿದಂತೆ ಪ್ರತಿಧ್ವನಿಯಷ್ಟೇ ನನಗೆ ಕೇಳುತ್ತದೆ. ಹಣೆ, ಮೂಗು, ಎರಡು ಕೆನ್ನೆಗಳು, ಮೇಲಿನ ಕೆಳಗಿನ ತುಟಿಗಳು ಎಲ್ಲಾ ನಾನಾ ಭಾಗಗಳಾಗಿದ್ದು ಅವನ್ನೆಲ್ಲಾ ತಿಳಿಯದಂತೆ ಜೋಡಿಸಲಾಗಿದೆ. ಇದರಿಂದಾಗಿ ಉಂಟಾಗುವ ತುರಿಕೆ , ನೋವು ಸಹಿಸಲಸಾಧ್ಯ. ಜತೆಗೆ ಚರ್ಮದ ರೀತಿ ಬದಲಾಯಿಸಲು, ಎದೆ, ಕಾಲುಕೈಗಳಲ್ಲಿರುವ ಕೂದಲನ್ನೆಲ್ಲಾ ನಾನು ತೆಗೆಯಬೇಕಾಯಿತು. ಈ ಮೇಕಪ್ ಮಾಡಲು ೫ಗಂಟೆಗಳು ಬೇಕಾದರೆ, ತೆಗೆಯಲೇ ೨ ಗಂಟೆಗಳು ಬೇಕು. ಗರಿಷ್ಠ ೬ ಗಂಟೆಗಳ ಕಾಲ ಈ ವೇಷದಲ್ಲಿ ಅಭಿನಯ ಮಾಡಬಹುದು. ಹೀಗಾಗಿ ನಾವು ಚಿತ್ರೀಕರಣದ ನಿಗದಿತ ವೇಳಾಪಟ್ಟಿಗಿಂತ ಹಿಂದುಳಿಯಬೇಕಾಯಿತು. ರಾತ್ರಿ ೧೧ಗಂಟೆಗೆ ಸಿದ್ಧತೆಗೆ ತೊಡಗಿದರೆ ಬೆಳಗ್ಗೆ ೪-೫ ರ ಹೊತ್ತಿಗೆ ಚಿತ್ರೀಕರಣಕ್ಕೆ ಸಿದ್ಧನಾಗುವುದು. ಸಿನಿಮಾ ಎಂದರೆ ವೈಭೋಗ ಅಂದವರು ಯಾರು?' ಅಂತ ತನ್ನ ಬ್ಲಾಗ್‌ನಲ್ಲಿ ಬರೆದಿದ್ದಾರೆ ಅಮಿತಾಬ್. 'ನಾನು ಮಗುವಾಗಿದ್ದಾಗ ಎಲ್ಲರಂತೆ ಅಪ್ಪನ ಭುಜ, ತಲೆ ಹತ್ತಿ ಕುಣಿದಾಡುತ್ತಿದ್ದೆ. ಈಗ ಆ ಸುಖವನ್ನು ಅಪ್ಪನಿಗೆ ಮರಳಿ ಕೊಡಲು ಆನಂದವಾಗುತ್ತಿದೆ' ಅನ್ನುತ್ತಾನೆ ಮಗರಾಯ ಅಭಿಷೇಕ್.
(ನವಂಬರ್ ೬ ರಂದು ವಿಜಯಕರ್ನಾಟಕ ಲವಲವಿಕೆಯಲ್ಲಿ ಪ್ರಕಟಿತ)

Read more...

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP