May 19, 2013

ಶೇಷಶಾಯಿ


ಬೆಳಗ್ಗೆ ಆರೂ ಮುಕ್ಕಾಲಕ್ಕೆ ಎದ್ದೆ. ಏಳಕ್ಕೆ ಬೈಕು ಸ್ಟಾರ್‍ಟು ಮಾಡಿದೆ. ಚುನಾವಣಾ ಆಯೋಗ ವ್ಯವಸ್ಥೆ ಮಾಡಿದ್ದ ನಂಬರಿನಿಂದ ನಿನ್ನೆ ಮೊಬೈಲಿಗೆ ಬಂದ ಮೆಸೇಜಿನಲ್ಲಿ ಮತಗಟ್ಟೆಯ ವಿಳಾಸ ಸ್ಪಷ್ಟವಾಗಿತ್ತು. ಸರಕಾರಿ ಮಾಡೆಲ್ ಪ್ರೈಮರಿ ಸ್ಕೂಲ್, ದಾಸರಹಳ್ಳಿ, ಶ್ರೀನಗರ, ಗವಿಗಂಗಾಧರೇಶ್ವರ ದೇವಸ್ಥಾನದ ಎದುರು, ರೂಂ ನಂಬರ್ ೬. ಬೆಂಗಳೂರಿನಲ್ಲಿ ಸ್ವಂತ ಮನೆ ಮಾಡಿದ ಬಳಿಕ, ಮೊದಲ ಬಾರಿ ವೋಟು ಮಾಡುವ ಉತ್ಸಾಹ. ನಾನೂ ಇಲ್ಲಿಯವನೇ ಅಂತ ಸ್ವಲ್ಪ ಹೆಚ್ಚಾದ ಭಾವ.

ದಾರಿ ಉದ್ದಕ್ಕೂ ಸ್ಟೀಲ್ ಟೇಬಲ್‌ಗಳು, ಫೈಬರ್ ನೀಲಿ-ಕೆಂಪು ಚಯರ್‌ಗಳನ್ನು ಹಾಕಿ ನೂರಾರು ಜನ ಕೂತಿದ್ದರು. ಏಳರ ಹೊತ್ತಿಗಾಗಲೇ ಕಾವು ಏರತೊಡಗಿತ್ತು. ಕಾಳಿದಾಸ ಸರ್ಕಲ್‌ನಲ್ಲಿ ಬಿಳಿ ಅಂಗಿ ತೊಟ್ಟು, ಸೆಖೆಗೆ ಕಾಲರ್ ಮೇಲೆಳೆದುಕೊಳ್ಳುತ್ತಿದ್ದವನ ಕತ್ತಿನಲ್ಲಿ ನಾಲ್ಕಿಂಚು ದಪ್ಪದ ಚಿನ್ನದ ಸರ ಆಗಲೇ ಹೊಳೆಯುತ್ತಿತ್ತು. ಆತನ ಕೈ ಬೆರಳುಗಳ ಉಂಗುರಗಳು, ಚಿನ್ನದ ಬಣ್ಣದ ವಾಚು, ಬಿಳಿ ಚಪ್ಪಲಿ ನೋಡಿ, ಮನಸ್ಸಲ್ಲೇ ಕ್ಯಾಕರಿಸಿಕೊಂಡು ಹೋದೆ. ಇನ್ನೇನು ಗವಿಗಂಗಾಧರೇಶ್ವರ ದೇವಸ್ಥಾನ ತಲುಪಬೇಕು ಅನ್ನೋವಾಗ ಒಂದು ಮತಗಟ್ಟೆ ಕಾಣಿಸಿತು. ವಾಹ್, ದೇವಸ್ಥಾನದ ವಿರುದ್ಧ ದಿಕ್ಕಿನಲ್ಲೇ ಇದೆಯಲ್ಲ ಅಂತ ಬೈಕು ಸ್ಟಾಂಡು ಎಳೆದೆ. ಮತ್ತೆ ಊಟದ ಟೇಬಲುಗಳು. ಕಾಗದದ ಹಾಳೆಗಳನ್ನು ಮತ್ತೆ ಮತ್ತೆ ತಿರುಗಿಸುತ್ತಿರುವ ಪಾರ್ಟಿ ಕಾರ್ಯಕರ್ತರು. ನನ್ನ ವೋಟರ್ ಐಡಿಯನ್ನ ಅವರತ್ತ ಚಾಚಿದೆ.

’ಅಲ್ಲಾರೀ ರಾಘವೇಂದ್ರ ಬ್ಲಾಕ್‌ನೋರು ಇಲ್ಲಿ ತನಕಾ ಬರ್‍ತೀರಲ್ಲ, ಇಲ್ಲಿರೋದು ಸೆಕೆಂಡ್ ಕ್ರಾಸ್ ಮತ್ತು ಫೋರ್ತ್ ಕ್ರಾಸ್‌ದು ಮಾತ್ರ’ ಅಂದರು. ’ನಮ್ದು ಮಾಡೆಲ್ ಸ್ಕೂಲ್ ಅಂತ ಮೆಸೇಜು ಬಂದಿದೆ. ಎಲ್ಲಿ ಬರತ್ತೆ ಅದು?’ ಅಂತ ಕೇಳಿದೆ. ’ಮೇಲ್ಗಡೆ ಇರಬೇಕು ನೋಡಿ’ ಅಂತ ತೀರ ನಿರ್ಲಕ್ಷ್ಯದಿಂದ ಅಂದರು. ಈಗ ನನಗೆ ಕೊಂಚ ಅವಮಾನವೂ, ಅನುಮಾನವೂ ಒಟ್ಟಿಗೇ ಆಯಿತು !  ಬೈಕು ಸ್ಟಾಂಡೆಳೆದು ನೇರವಾಗಿ ದೇವಸ್ಥಾನದ ಎದುರು ನಿಲ್ಲಿಸಿದೆ. ನೂರು ಮೀಟರ್ ದೂರದಲ್ಲಿ ಇನ್ನೊಂದು ಮತಗಟ್ಟೆ. ಅಲ್ಲಿ ಶಿಶುವಿಹಾರ ಅಂತ ಬರೆದಿತ್ತು. ನಮ್ಮ ಏರಿಯಾದ ಹೆಸರೂ ಹೊರಗಿದ್ದ ಪಟ್ಟಿಯಲ್ಲಿ ಇರಲಿಲ್ಲ. ಪೊಲೀಸರನ್ನು ವಿಚಾರಿಸಿದರೆ, ಮುಂದೆ ಇರಬೇಕು ನೋಡಿ ಅಂದರು. ಮತ್ತೆ ಮುಂದಕ್ಕೆ ಹೋದದ್ದಾಯಿತು. ಅದೂ ದೇವಸ್ಥಾನದ ಎದುರಲ್ಲೇ ಇನ್ನೊಂದು ಮತಗಟ್ಟೆ . ಆದರೆ.. ಊಹೂಂ ಮಾಡೆಲ್ ಸ್ಕೂಲ್ ಅಲ್ಲ. ಆ ಮತಗಟ್ಟೆಯ ಎದುರು ಬೈಕು ಕೊಂಚ ಹೆಚ್ಚೇ ಡುರುಡುರು ಶಬ್ದ ಮಾಡಿದ್ದಕ್ಕೆ ಪೊಲೀಸೊಬ್ಬ ಲಾಠಿ ಎತ್ತಿ ಬೈದೇಬಿಟ್ಟ !

ವಾಚು ನೋಡಿದರೆ ಗಂಟೆ ಎಂಟೂವರೆ ! ಹೊಟ್ಟೆ ಚುರುಚುರು ಅನ್ನುತ್ತಿತ್ತು. ಎಲ್ಲಪ್ಪಾ ಇದೆ ಈ ಮಾಡೆಲ್ ಸ್ಕೂಲ್ ಅಂದುಕೊಂಡು, ದಾರಿಯುದ್ದಕ್ಕೂ ಇರುವ ಟೇಬಲ್‌ಗಳಲ್ಲಿ ವಿಚಾರಿಸಿಕೊಂಡು ಮನೆ ಬಳಿ ಬಂದಾಗ ಗಂಟೆ ಒಂಭತ್ತು. ಈ ಬಾರಿ ಓಟು ಹಾಕಕ್ಕಾಗಲ್ಲ ಅಂತ ಅನ್ನಿಸತೊಡಗಿದರೂ, ಛಲ ಬಿಡದೆ ಮತ್ತೆ ಮಾಡೆಲ್ ಸ್ಕೂಲನ್ನು ಗೂಗಲಿಸಿದ್ದಾಯಿತು. ಅರ್ಧ ಗಂಟೆ ಗೂಗಲ್‌ನಲ್ಲಿ ಸುತ್ತಾಡಿದರೂ ನನಗೆ ಯಾವ ದಾರಿಯೂ ಸಿಗಲಿಲ್ಲ. ವೋಟರ್ ಸ್ಲಿಪ್ ಮನೆಮನೆಗೆ ತಲುಪಿಸ್ತೀವಿ ಅಂದೋರು ತಲುಪಿಸಲಿಲ್ಲ. ಈಗ ಮೆಸೇಜು ಕಳ್ಸಿರೋ ಅಡ್ರೆಸ್‌ನಲ್ಲಿ ಮತಗಟ್ಟೆಯೂ ಇಲ್ಲ ಅಂತ ಎಲ್ಲರಿಗೂ ಮನಸೋಇಚ್ಚೆ ಬೈದುಕೊಂಡೆ.

ಗಂಟೆ ಹತ್ತಾಗಿತ್ತು. ನಮ್ಮ ಸೀರಿಯಲ್ ಆರ್ಟಿಸ್ಟ್‌ಗಳು, ಸಿನಿಮಾ ತಾರೆಯರು ಓಟ್ ಹಾಕಿ ಓಟ್ ಹಾಕಿ ಅಂದಿದ್ದು, ನಮ್ಮ ಅಪ್ಪ ಊರಿನಲ್ಲಿ ಮನೆಮನೆ ಸುತ್ತಿ ಪ್ರಚಾರ ಮಾಡುತ್ತಿದ್ದಿದ್ದು, ನಾವು ಹೈಸ್ಕೂಲಿನಲ್ಲಿ ಮಂತ್ರಿಮಂಡಲ ರಚನೆಗೆ ಓಟು ಮಾಡಿದ್ದು ಇತ್ಯಾದಿ ಎಲ್ಲ ನೆನಪಾಗಿ ಕೊನೇ ಪ್ರಯತ್ನ ಅಂತ ಮನೆಯಿಂದ ಹೊರಟೆ. ಕಾಳಿದಾಸ ಸರ್ಕಲ್‌ನಿಂದ ಬಲಕ್ಕೆ ತಿರುಗಿದೆ. ಈಗ ಅಲ್ಲಿ ಹೊಸ ಟೇಬಲ್‌ಗಳು ಬಂದಿದ್ದವು. ವೋಟರ್ ಐಡಿಯನ್ನು ಮತ್ತೆ ಅವರತ್ತ ಚಾಚಿದೆ. ಒಂದೆರಡು ಟೇಬಲ್ಗಳಲ್ಲಿ ವಿಚಾರಿಸಿದ ಬಳಿಕ, ಮತ್ತೊಂದರಲ್ಲಿ ನಮ್ಮ ೧೪ನೇ ಮುಖ್ಯರಸ್ತೆಯ ಪ್ರಿಂಟ್‌ಔಟ್‌ಗಳು ಸಿಕ್ಕಿದವು. ಪರವಾಗಿಲ್ವೇ..ಅಲ್ಲಿ ಕೂತಿದ್ದ ನಾಲ್ವರು ಹುಡುಗಹುಡುಗಿಯರು ಒಂದು ಟ್ಯಾಬ್‌ನ್ನೂ ಹಿಡಿದುಕೊಂಡು, ಅದರಲ್ಲಿ ಸೀರಿಯಲ್ ನಂಬರ್ ಹುಡುಕುತ್ತಿದ್ದರು. ಕಾರ್ಡ್ ಕೊಟ್ಟು, ಪಟ್ಟಿಯಲ್ಲಿ ಈ ಹೆಸರಿದೆಯಾ ನೋಡಿ ಅಂದೆ. ಕೂತಿದ್ದವಳು ’ಸಿಗ್ತಿಲ್ಲಾ ಅಂಕಲ್’ ಅಂದಳು. ಹಾಗಿದ್ದರೆ ಒಂಚೂರು ೧೫ನೇ ಮುಖ್ಯರಸ್ತೆಯ ಪ್ರಿಂಟ್‌ಔಟ್‌ಗಳಲ್ಲೂ ನೋಡಿ ಅಂದೆ. ’ಇಲ್ಲ ಅಂಕಲ್. ಎರಡರಲ್ಲೂ ಇಲ್ಲ ಅಂಕಲ್’ ಅಂದಳು. ಹೆಸರು ಸಿಗದೆ ಇದ್ದಿದ್ದು ಬೇರೆ, ನನ್ನ ವಯಸ್ಸಿನವಳೊಬ್ಬಳು ನನ್ನನ್ನೇ ಅಂಕಲ್, ಅಂಕಲ್ ಅನ್ನೋದು ಬೇರೆ- ಹೀಗೆ ಎರಡೂ ಸೇರಿ ಸಿಟ್ಟು ಮೂಗಿನ ತುದಿಗೆ ಬಂತು.

ಅದು ಯಾವ ದೇವರ ದಯೆಯೊ ಗೊತ್ತಿಲ್ಲ. ಅವಳು ದೂರದಿಂದ ಕರೆದಳು ’ಅಂಕಲ್ ಬನ್ನಿ ಬನ್ನಿ..ಸಿಗ್ತು.’ ವೋಟರ್ ಸ್ಲಿಪ್‌ನಲ್ಲಿ ವಯಸ್ಸು ನಮೂದಿಸಿದ ಆ ಹುಡುಗಿ, ವೋಟರ್ ಸ್ಲಿಪ್ ಕೊಡುತ್ತಾ ’ತಗೊಳ್ಳಿ ಸರ್’ ಅಂದ್ಳು. ಖುಶಿ ಇಮ್ಮಡಿ. ’ಎಲ್ಲಿದೆ ಮಾಡೆಲ್ ಸ್ಕೂಲ್?’ ಅಂದೆ. ’ಇಲ್ಲೇ ಮೇಲಕ್ಕಿದೆ ನೋಡಿ’ ಅಂದಳು. ಹತ್ತೆಜ್ಜೆ ಹಾಕಿದರೆ ಅಲ್ಲೇ ಇದೆ ಮಾಡೆಲ್ ಸ್ಕೂಲು. ನನಗೆ ಬಂದ ಮೆಸೇಜಿನಲ್ಲಿ ದೇವಸ್ಥಾನದ ಎದುರೇ ಇದೆ ಅಂದಿದ್ದ ಆ ಸ್ಕೂಲ್‌ಗೂ ದೇವಸ್ಥಾನಕ್ಕೂ ಇರೋದು ೧ ಕಿಮೀ ದೂರ ! ಆನ್‌ಲೈನ್ ಮೂಲಕ ಸರಾಗವಾಗಿ ವೋಟರ್ ಐಡಿ ಮಾಡಿಸಿಕೊಂಡಿದ್ದ ನಾನು, ಈ ವೋಟರ್ ಸ್ಲಿಪ್‌ಗಾಗಿ, ಮತಗಟ್ಟೆ ಹುಡುಕೋದಕ್ಕಾಗಿ ಪಟ್ಟ ಕಷ್ಟವನ್ನು ನೆನೆನೆನೆದು, ವೋಟ್ ಮಾಡಿದ ನಂತರವೂ ಮಾಡೆಲ್ ಸ್ಕೂಲಿನ ಮತಗಟ್ಟೆಯಲ್ಲಿ ಅರ್ಧ ಗಂಟೆ ಕುಳಿತಿದ್ದು ಬಂದೆ ! ಬೆಳಗ್ಗೆ ಏಳಕ್ಕೆ ಮನೆಯಿಂದ ಹೊರಟ ನಾನು, ವೋಟ್ ಮಾಡಿ ಹೊರ ಬಂದಾಗ ಗಂಟೆ ಹನ್ನೊಂದಾಗಿತ್ತು.

ಸಂಜೆ ಐದಕ್ಕೆ ಮುಗಿಯಬೇಕಿದ್ದ ಮತದಾನವನ್ನು ಆರು ಗಂಟೆಯವರೆಗೆ ವಿಸ್ತರಿಸಿದ್ದರು. ಆದರೆ ಆರು ಗಂಟೆಗೇ ಮೋರ್ ಮಾಲ್‌ನಲ್ಲಿ ಜನ ತುಂಬಿತುಳುಕುತ್ತಿದ್ದರು. ಅಲ್ಲಿ ಮಾವಿನ ಹಣ್ಣುಗಳನ್ನು ಆರಿಸುವಾಗ, ಕುರುಕುರೆಗೆ ಕೈ ಹಾಕುವಾಗ, ಶರ್ಟುಗಳನ್ನು ಕನ್ನಡಿಯೆದುರು ಹಿಡಿದು ನೋಡುವಾಗ, ಕ್ರೆಡಿಟ್ ಕಾರ್ಡುಗಳನ್ನು ಗೀಚಿ ಸಹಿ ಹಾಕುವಾಗ, ನಾನು ಅವರೆಲ್ಲರ ಬೆರಳುಗಳನ್ನೇ ನೋಡುತ್ತಿದ್ದೆ. ಊಹೂಂ..ಎಲ್ಲೂ ಶಾಯಿಯ ಗುರುತೇ ಇಲ್ಲ. ಯಾರೋ ಖರೀದಿಸಿದ್ದನ್ನು ಪ್ಲಾಸ್ಟಿಕ್‌ಗಳಿಗೆ ತುಂಬುವ ಕೆಲವು ಕೈಗಳಲ್ಲಿ ಶಾಯಿ ಗುರುತು ಕಾಣಿಸಿತು. ರಾತ್ರಿ ಮನೆಗೆ ಹಿಂದಿರುವಾಗ, ಹಲವು ಬೀದಿಗಳಲ್ಲಿ ಪೇಪರುಗಳು ಚೆಲ್ಲಾಡಿದ್ದವು. ಕೆಲವು ಬೀದಿಗಳಲ್ಲಿ ಇನ್ನೂ ಟೇಬಲುಗಳು ಮಾತ್ರ ಉಳಿದಿದ್ದವು. ಮನೆಗೆ ಬಂದರೆ,ನಮ್ಮ ಅಪಾರ್ಟ್‌ಮೆಂಟಿನ ಸೆಕ್ಯುರಿಟಿ ಗಾರ್ಡ್, ರೂಪಾಯಿ ೫೦೦ರ ಆಸೆಗೆ ವೋಟು ಮಾಡಲು ರಾಮನಗರಕ್ಕೆ ಹೋಗಿದ್ದ. ಉಳಿದ ಮನೆಗಳವರು, ನಮ್ಮದು ಮಹಾಲಕ್ಷ್ಮಿ ಲೇಔಟ್‌ನಲ್ಲಿದೆ, ನಂದಿನಿ ಲೇಔಟ್‌ನಲ್ಲಿದೆ..ಅಷ್ಟು ದೂರ ಹೋಗಲಿಕ್ಕಾಗಲಿಲ್ಲ ಅಂದರು ! ಟಿವಿ ಒಂಭತ್ತರಲ್ಲಿ ಹೂಗಾರ್, ಟೇಬಲ್ ಸುತ್ತ ನಾಲ್ವರನ್ನು ಕೂರಿಸಿಕೊಂಡು ಮಾತಾಡುತ್ತಿದ್ದ. ಪಾಲ್ಗಡಲಲ್ಲಿ ಮಲಗಿರುವ ಶೇಷಶಾಯಿಯಂತೆ ನಾನೂ, ಟಿವಿಯೆದುರು ಮಲಗಿಕೊಂಡು ನನ್ನ ಬೆರಳ ಶಾಯಿಯನ್ನು ನೋಡಿಕೊಂಡೆ. ಶೇಕಡಾ ಅರುವತ್ತೋ ಅರುವತ್ತೆರಡೋ ಮತದಾನ. ಯಾವುದಕ್ಕೂ ಬಹುಮತ ಬಾರದೆ ಮುಂದೆ ಚೌಕಾಸಿ ವ್ಯಾಪಾರ. ನಾವು ನಂಬಿ ನಮ್ಮಿಂದ ವೋಟು ಪಡೆದುಕೊಂಡವನೇ ನಾಳೆ ಯಾವ ಆಪರೇಷನ್‌ಗೆ ಬಲಿಯಾಗುತ್ತಾನೋ ಯಾರಿಗೆ ಗೊತ್ತು?

ಈ ಶೇಷಶಾಯಿಗೆ ಇನ್ನೆಷ್ಟು ಆಯುಸ್ಸು?!    
(On May 5th 2013)

Read more...

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP