January 26, 2008

ಪದ್ಯಗಳ ಆರಾಧನೆ !

‘ಮಾತು ಚಿಟ್ಟೆ -ಬೆಂಕಿ ಬೆರಳು-ಮುರಿದ ಮುಳ್ಳಿನಂತೆ ಜ್ಞಾನ’ ಎಂಬ ಮೊದಲ ಸಂಕಲನದಲ್ಲೇ ನೂರಕ್ಕೂ ಹೆಚ್ಚಿನ ಕವಿತೆಗಳೊಂದಿಗೆ ಮೆರವಣಿಗೆ ಹೊರಟ ಪುತ್ತೂರಿನ ಸಂಧ್ಯಾದೇವಿಯವರು, ಬರೆದದ್ದೆಲ್ಲ ಪದ್ಯವೇ ಆಗುತ್ತದೇನೋ. ಹಾಗಂತ ಮತ್ತೆ ಮತ್ತೆ ಓದಿ, ವಿಮರ್ಶಿಸಿ, ಕಾವ್ಯ ವಿಮರ್ಶೆಯ ಪರಿಕರಗಳೊಂದಿಗೆ ತಿಣುಕಾಡಲು ಈ ಕವಿತೆಗಳಲ್ಲಿ ಅವಕಾಶವಿಲ್ಲ. ಇದು ತಾಜಾ ತಾಜಾ. ಒಮ್ಮೆ ನಾಲಗೆಯ ಮೇಲಿಟ್ಟುಕೊಂಡರೆ ಕರಗುವ ತನಕ ಚಪ್ಪರಿಸುತ್ತಿರಬಹುದು. ಮುಗಿದ ಮೇಲೆ ಹೋಯಿತು. ಬೇರೆಯದೇ ಬೇಕು ! ಸಂಧ್ಯಾದೇವಿಯವರ ಪದ್ಯಗಳಲ್ಲಿ , ಸಾಲಿನಿಂದ ಸಾಲಿಗೆ ರಸೋತ್ಕರ್ಷವಾಗುವ ಬಗೆ ಅನನ್ಯ. ಇವರೆದುರು ನಮ್ಮ ಬಹುಪಾಲು ಕವಿಗಳನ್ನು ನಿವಾಳಿಸಿ ತೆಗೆಯಬೇಕು ಅಂತ ನನ್ನ ತಮ್ಮ ಹೇಳುತ್ತಿದ್ದ ! ಪದ-ರಸ-ವಿಚಾರ ಈ ಮೂರನ್ನೂ ಕರಡಿಸಿ ಕುಡಿಸುವ ಇವರ ಕಾವ್ಯ ಸುಧೆಯ ಒಂದು ಹೊಸ ಗುಟುಕು ಇಲ್ಲಿದೆ.
ನೆನಪು

ಕೈಯಲ್ಲಿ ಹಿಡಿದ
ಚಹಾ ಕಪ್ಪಿನಲ್ಲಿ
ನಿನ್ನ ನೆನಪಿದೆ.

ಸುರುಳಿ ಸುರುಳಿಯಾಗಿ
ಮೇಲೇಳುವ
ಹಬೆಯ ಬಳ್ಳಿಯಿದೆ.

ಚಹಾದಲ್ಲಿರುವ ಅವೆರಡು
ಅತಿ ಸೂಕ್ಷ್ಮ
ನಾಜೂಕು.

ತಣಿಯಬಾರದು
ಮುಗಿಯಲೂ ಬಾರದು
ಹಾಗೆ ಹೀರಿದೆ ಚಹಾವೆಂಬ ನೆನಪನ್ನು !

ಹಬ್ಬಿತು ರುಚಿ
ಹಬೆಯ ಬಳ್ಳಿ.

ದೊಡ್ಡವರು

ಓ... ನೀನು ಭೂಮ
ನಾನು ಭಾಮಾ !

ಮಹಲಿನ ಉಪ್ಪರಿಗೆಯ ಮೂಲೆಯಲ್ಲಿ
ಬೀದಿಯ ಸಂದಿಗೊಂದಿನಲ್ಲಿ
ಎಲ್ಲಿ ಸೇರಿದರಲ್ಲಿ
ಅದುವೆ ಸುಧಾಮ.

ಸುದಾಮ ನಿನಗೆ ಸ್ನೇಹಿತ
ನಾನೂ ನೋಡಿದ್ದೇನೆ.

ದೊಡ್ಡವರು ಮಾತ್ರ ಸಣ್ಣವರ
ಹತ್ತಿರ ಬರುತ್ತಾರೆ
ಬಂದು ಪಾದವನ್ನೂ ಮುಟ್ಟುತ್ತಾರೆ
ತೊಳೆಯುತ್ತಾರೆ ಕೂಡಾ.

ಏನು? ಸೇವಕನ ಸೇವೆಯನ್ನು
ಮಾಡುವುದುಂಟೇ ...ದೊರೆ?

ಅವನು ದೊರೆಯಲ್ಲ
ದೇವರೇ !
---------------
ಪಾಶ

ಓರೆ ಮೇಲೆ ಏರಿದ
ಒಂದು ಹುಬ್ಬು !

ಅಯ್ಯೋ...ಅದು ಹುಬ್ಬಲ್ಲ
ನನ್ನ ಪಾಲಿನ ಪಾಶ.
ನನ್ನ ಮೇಲಿನ ಪರೀಕ್ಷೆ.

ಓ ಪ್ರೇಮವೇ...
ನನ್ನ ಪರವಶವೇ...
ನನ್ನನ್ನು ಕಟ್ಟಿ ಹಾಕಿದ ನೋಟವೇ...

ಸೋತಿದ್ದೇನೆ ನೋಡು
ನಿನ್ನ ಕೈಯಲ್ಲಿ ಹಿಡಿದ
ವಿಷದ ಬಟ್ಟಲಿನಲ್ಲಿ

ನನ್ನ ನೀಲಿಯಾದ ತುಟಿಗಳಿವೆ .
ಕುಡೀ...ಇನ್ನು ನೀನು
ವಿಷ ಕುಡಿ .

- ಸಂಧ್ಯಾದೇವಿ

Read more...

January 24, 2008

ದೊಡ್ಡವರ 'ಸಣ್ಣ ಕೆಲಸ'

ದೊಡ್ಡವರು 'ಸಣ್ಣ ಕೆಲಸ ’ ಮಾಡಿದರೂ ಸಾಕು, ತಕ್ಷಣ ಪ್ರಚಾರ ಪಡೆದುಕೊಳ್ಳುತ್ತಾರೆ. ಮಿಲಿಟರಿ ಪ್ಯಾಂಟು, ಉದ್ದನೆಯ ಶೂ ಧರಿಸಿ, ವಿಹಾರ ತಾಣವೊಂದರಲ್ಲಿ ಸಿನಿಮಾದ ರ್‍ಯಾಂಬೊನಂತೆ ಬರಿ ಮೈಯಲ್ಲಿ ಫೋಸು ಕೊಟ್ಟ ರಷ್ಯಾದ ಅಧ್ಯಕ್ಷ ವ್ಲಾದಿಮರ್ ಪುಟಿನ್, ಜಗತ್ತಿನಾದ್ಯಂತ ಟಿವಿ-ಪತ್ರಿಕೆಗಳಲ್ಲಿ ಕಾಣಿಸಿಕೊಂಡಿದ್ದರು. ಕಳೆದ ಬಾರಿ ನಮ್ಮ ಗಣರಾಜ್ಯೋತ್ಸವ ಸಮಾರಂಭಕ್ಕೆ ದೇಶದ ಅತಿಥಿಯಾಗಿ ಬಂದವರೂ ಇವರೇ. ಈ ಬಾರಿಯ ಅತಿಥಿ, ಫ್ರಾನ್ಸ್ ದೇಶದ ಅಧ್ಯಕ್ಷನಾಗಿ ಗದ್ದುಗೆ ಏರಿರುವ ೫೩ರ ಹರೆಯದ ನಿಕೊಲಸ್ ಸರ್ಕೊಜಿ ಕೂಡಾ ಬಲು ರಸಿಕರಂತೆ !

ಬಲಪಂಥೀಯರೆಂದು ಗುರುತಿಸಿಕೊಂಡ ಇವರು, ಪ್ರಚಂಡ ಮಾತುಗಾರ, ಸರ್ಕೊ ಎಂಬ ಹೆಸರಿನಲ್ಲಿ ಪ್ರಖ್ಯಾತ. ಅಮೆರಿಕದ ಪ್ರಸಿದ್ಧ ಪತ್ರಿಕೆ 'ವ್ಯಾನಿಟಿ ಫೇರ್’ ನಿಂದ ಅತ್ಯುತ್ತಮವಾಗಿ ಡ್ರೆಸ್ ಮಾಡಿದ ವ್ಯಕ್ತಿಯಾಗಿ ಫುಟ್‌ಬಾಲ್ ತಾರೆ ಬೆಕಮ್ ಮತ್ತಿತರರೊಂದಿಗೆ ೬೮ನೇ ಸ್ಥಾನ ಪಡೆದವರು. ಫ್ರಾನ್ಸ್‌ನ ಸಾಂಪ್ರದಾಯಿಕ ಸಾಮಾಜಿಕ ಮತ್ತು ಆರ್ಥಿಕ ನೀತಿಗಳಿಂದ ಅಮೆರಿಕ ಶೈಲಿಯತ್ತ ತುಡಿಯುವವನೆಂದು ಅವರನ್ನು ಬಣ್ಣಿಸಲಾಗುತ್ತದೆ. ಹಣಕಾಸು ಸೇರಿದಂತೆ ಹಲವು ಖಾತೆಗಳಲ್ಲಿ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದವರು. ಆದರೆ ಫ್ರಾನ್ಸ್‌ನ ಸಮೃದ್ಧ ಸಾಂಸ್ಕೃತಿಕ ಪರಂಪರೆಯಂತೆ ಇವರ ಜೀವನ ಶೈಲಿಯೂ ಸಮೃದ್ಧ !

೧೯೮೪ರಲ್ಲಿ ಸಿಸಿಲಿಯಾ ಎಂಬಾಕೆ , ತಾನು ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದವನ ಜತೆಗಿನ ವಿವಾಹವನ್ನು ತಿರಸ್ಕರಿಸಿ, ಪ್ರಸಿದ್ಧ ಟಿವಿ ನಿರೂಪಕನಾಗಿದ್ದ ಜಾಕ್ವೆಸ್ ಮಾರ್ಟಿನ್ ಎಂಬವನಿಗೆ ಉಂಗುರ ತೊಡಿಸಿದಳು. ೨೬ ವರ್ಷದ ಆಕೆ ಆಗ ೯ ತಿಂಗಳ ಗರ್ಭಿಣಿ ಮತ್ತು ಮಾರ್ಟಿನ್‌ಗೆ ಕೇವಲ ೫೨ ವರ್ಷ ! ಆ ಮದುವೆಯನ್ನು ನೆರವೇರಿಸಿಕೊಟ್ಟವನು ಪ್ಯಾರಿಸ್ ಬಳಿಯ ಆ ಪಟ್ಟಣದ ಮೇಯರ್ ಆಗಿದ್ದ ನಿಕೊಲಸ್. ಆಗಲೇ ಮದುವಯಾಗಿದ್ದ ಸರ್ಕೊಜಿ, ನಂತರ ಬಯಸಿದ್ದು ಅದೇ ಸಿಸಿಲಾಳನ್ನು ! ಹಾಗೆ ೯೬ರಲ್ಲಿ ಅವಳನ್ನು ಮದುವೆಯಾಗಿ ಒಬ್ಬ ಮಗನೂ ಜನಿಸಿದ.

ಆದರೆ ೨೦೦೫ರಲ್ಲಿ ಸಿಸಿಲಾ ಬದುಕಿನ ಬಗ್ಗೆ ವದಂತಿಗಳು ಹರಡತೊಡಗಿದವು. ಇನ್ನೊಂದೆಡೆ ಫ್ರಾನ್ಸ್ ಅಧ್ಯಕ್ಷ ಸ್ಥಾನಕ್ಕಾಗಿ ಸರ್ಕೊ ಸ್ಪರ್ಧಿಸಿದರು. ಪ್ರಚಾರದ ಒಂದೆರಡು ಜಾಗಗಳಲ್ಲಷ್ಟೇ ಕಾಣಿಸಿಕೊಂಡ ಸಿಸಿಲಾ ಬಳಿಕ ಮಾಯವಾದಳು. ಆದರೆ ಸರ್ಕೊ ಪ್ರಚಾರ ನಡೆಸುತ್ತಿದ್ದ ಸ್ಥಳಗಳಲ್ಲಿ ಕಂಡ ಕೆಲವು ಬ್ಯಾನರ್‌ಗಳಲ್ಲಿ ಈ ಮಾತುಗಳಿದ್ದವಂತೆ- 'ಸಿಸಿಲಾ ಮತ್ತೆ ಅವನನ್ನು ಸೇರಿದ್ದಾಳೆ. ಯಾಕೆಂದರೆ ಅವನ ಸೋಲಿಗೆ ಆಕೆಯೇ ಕಾರಣ ಅಂತ ದೂಷಿಸಲ್ಪಡುವುದನ್ನು ಅವಳು ಬಯಸುವುದಿಲ್ಲ. ಅವಳು ಮೂಲೆಗೆ ಸರಿದಿದಾಳೆ. ಅವನನ್ನು ಪ್ರೀತಿಸುವುದಿಲ್ಲ. ಆದರೆ ಅವನಿಗಾಗಿ ಆಕೆ ತನ್ನದೆಲ್ಲವನ್ನೂ ನೀಡಿದ್ದಾಳೆಂದು ತೋರಿಸಲು ಬಯಸಿದ್ದಾಳೆ!’.೨೦೦೭ರ ಮೇ ತಿಂಗಳಲ್ಲಿ ಸರ್ಕೊ ಫ್ರಾನ್ಸ್ ಅಧ್ಯಕ್ಷರಾಗಿ ಗದ್ದುಗೆ ಏರಿದರು. 'ಸಿಸಿಲಾ: ಎ ಪೋಟ್ರೈಟ್’ ಎಂಬ ಶೀರ್ಷಿಕೆಯಲ್ಲಿ ಪತ್ರಕರ್ತನೊಬ್ಬ ಪುಸ್ತಕವನ್ನೂ ಬರೆದದ್ದಾಯಿತು. ಸರ್ಕೊ ಬಗ್ಗೆ ಸಿಸಿಲಾ ಬಹಳ ಕೆಟ್ಟ ಮಾತುಗಳನ್ನು ಆಡಿದ್ದಾಳೆ ಎಂದೂ ಅದರಲ್ಲಿ ದಾಖಲಿಸಲಾಗಿತ್ತು. ಆ ಪುಸ್ತಕ ನಿಷೇಧಿಸುವಂತೆ ಆಕೆ ಕೋರ್ಟ್ ಕಟ್ಟೆ ಏರಿದಳು. ಆದರೆ ಸಿಸಿಲಾ-ಸರ್ಕೊ ಸಂಬಂಧ ಹಳಸಿದ್ದು, ಅವರಿಬ್ಬರೂ ದೂರವಾದದ್ದು ಸ್ಪಷ್ಟವಾಗಿತ್ತು. ಅಕ್ಟೋಬರ್ ೧೮ ರಂದು ನಿಕೊಲಸ್ ತನ್ನ ಪತ್ನಿ ಸಿಸಿಲಾಗೆ ವಿಚ್ಛೇದನ ನೀಡಿರುವುದಾಗಿ ಅಧ್ಯಕ್ಷರ ಸಚಿವಾಲಯ ಪ್ರಕಟಿಸಿತು. ಆದರೆ 'ಅಬ್ಬಾ ಸರ್ಕೊನ ಸೊಕ್ಕೆ’ ಅಂತ ಎಲ್ಲರೂ ಮೂಗ ಮೇಲೆ ಬೆರಳಿಡುವಂತೆ, ಡಿಸೆಂಬರ್‌ನಲ್ಲಿ ಫ್ರಾನ್ಸ್‌ನ ವಾರಪತ್ರಿಕೆಯೊಂದು , ಮಾಜಿ ಮಾಡೆಲ್ ಕಾರ್‍ಲಾ ಬ್ರೂನಿ ಜತೆ ದೇಶದ ಅಧ್ಯಕ್ಷರು ಸುತ್ತಾಡುವ ಫೋಟೊಗಳನ್ನು ಪ್ರಕಟಿಸಿತು! ಸರ್ಕೊ ರಾಸಲೀಲೆ ಮತ್ತೆ ಆರಂಭವಾಯಿತು.

ತನ್ನೆಲ್ಲ ವಿಲಾಸಿ ಬದುಕಿನ ಮಧ್ಯೆಯೂ, ಭಾರತ ಸಂಜಾತ-ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯಸೇನ್ ಸೇರಿದಂತೆ ಇಬ್ಬರು ನೊಬೆಲ್ ವಿಜೇತರನ್ನು ತನ್ನ ಸಲಹೆಗಾರ ಮಂಡಳಿಯ ಸದಸ್ಯರನ್ನಾಗಿ ನೇಮಿಸಿಕೊಂಡಿದ್ದಾರೆ ಸರ್ಕೊಜಿ. ಫ್ರಾನ್ಸ್‌ನ ಪ್ರಗತಿ ಹಾಗೂ ಜೀವನ ಮಟ್ಟದ ಸುಧಾರಣೆಯ ಬಗ್ಗೆ ಸೇನ್ ವಿಶ್ಲೇಷಣೆ ಮಾಡುತ್ತಾರಂತೆ. ಪ್ರಗತಿಯ ಬಗ್ಗೆ ಹೇಳುತ್ತಿರುವ ಅಂಕಿಅಂಶಗಳು ಹಾಗೂ ನಿತ್ಯ ಜೀವನದಲ್ಲಿ ಹೆಚ್ಚುತ್ತಿರುವ ಸಂಕಷ್ಟಗಳ ಬಗ್ಗೆ ಸೇನ್‌ನಂಥವರು ತಮಗೆ ಉತ್ತರಿಸಬೇಕಾಗಿದೆ ಎಂದು ಸರ್ಕೊ ಹೇಳಿದ್ದಾರೆ.

ಆದರೆ ಸದ್ಯದಲ್ಲೇ ಸರ್ಕೊ ಮತ್ತು ಬ್ರೂನಿ ಉಂಗುರ ಹಾಕಿಕೊಳ್ಳುವುದು ನಿಶ್ಚಯ ಎಂಬಲ್ಲಿಗೆ ಈ ಪ್ರೇಮಪ್ರಸಂಗ ಬಂದು ನಿಂತಿದೆ. ಪ್ರತಿ ವಾರಾಂತ್ಯವನ್ನೂ ಒಂದೊಂದು ದೇಶದಲ್ಲಿ ಕಳೆಯುತ್ತಾ , ಸರಕಾರಿ ಕೆಲಸಗಳನ್ನು ಅಧ್ಯಕ್ಷರು ನಿರ್ಲಕ್ಷಿಸುತ್ತಿದ್ದಾರೆಂದು ವಿರೋಧಿ ಪಕ್ಷಗಳು , ಪತ್ರಿಕೆಗಳು ಆರೋಪ ಹೊರಿಸುತ್ತಿವೆ. ಮೊನ್ನೆ ಮೊನ್ನೆ ಸೌದಿ ಅರೇಬಿಯಾಕ್ಕೆ ಪ್ರವಾಸ ಹೊರಟಿದ್ದ ಈ ಘನತೆವೆತ್ತ ಅಧ್ಯಕ್ಷರಿಗೆ ಆ ದೇಶ 'ನಮ್ಮಲ್ಲಿ ವಿವಾಹವಾಗದ ಸಂಬಂಧಗಳನ್ನು ಮಾನ್ಯ ಮಾಡುವುದಿಲ್ಲ. ಅದು ನಮ್ಮ ಧಾರ್ಮಿಕ ಸಂಪ್ರದಾಯಗಳಿಗೆ ವಿರೋಧವಾದದ್ದು. ಪ್ರೇಯಸಿಯರನ್ನೆಲ್ಲ ಮನೆಯಲ್ಲೇ ಬಿಟ್ಟು ಬನ್ನಿ’ ಅಂತ ಬಿಚ್ಚುನುಡಿ ಆಡಿತು. ಆದರೆ ನಮ್ಮ ಗಣರಾಜ್ಯೋತ್ಸವ ಸಂದರ್ಭದಲ್ಲಿ ಆಕೆ ಫ್ರಾನ್ಸ್‌ನ ಪ್ರಥಮ ಮಹಿಳೆ ಆದಾಳೇ ಅಂತ ನಮ್ಮವರು ಬಹಳ ತಲೆ ಕೆಡಿಸಿಕೊಂಡರು. ಫ್ರಾನ್ಸ್ ಜತೆ ಆಡಬೇಕಾದ ಅಣುಬಂಧದ ವಿಷಯಕ್ಕಿಂತಲೂ ಹೆಚ್ಚಿನ ಪ್ರಚಾರ ಫ್ರಾನ್ಸ್ ದೇಶದ 'ಪ್ರಥಮ ಗೆಳತಿ’ಗೆ ಸಿಕ್ಕಿತು ! ದಿಲ್ಲಿಯ ಒಬೆರಾಯ್ ಹೋಟೆಲ್‌ನ ೩,೬೦೦ ಚದರಡಿಗಳ ಅದ್ಧೂರಿ ಕೊಹಿನೂರ್ ಕೋಣೆಯನ್ನೂ ಸರ್ಕೊ ಹೆಸರಿಗೆ ಯಾವತ್ತೋ ಬುಕ್ ಮಾಡಲಾಗಿತ್ತು. ಆದರೆ ಕೊನೆಗೂ ಬ್ರೂನಿ ಭಾರತಕ್ಕೆ ಬರುತ್ತಿಲ್ಲ ಎಂಬ ಪ್ರಕಟಣೆ ಹೊರಬಿದ್ದಿದೆ. ಆಕೆಯೀಗ ಮೂರು ತಿಂಗಳ ಪಾಪುವನ್ನು ಹೊತ್ತವಳಂತೆ, ಪಾಪ!

ಆದ್ರೂ ಬರ್ತಾನಲ್ಲಪ್ಪೋ...

Read more...

January 19, 2008

ಯಲ್ಲಾಪುರದ ಹಳ್ಳಿಯಲ್ಲಿ ಹುಟ್ಟಿ , ಕವಿಭೂಮಿ ಧಾರವಾಡದಲ್ಲಿ ಬದುಕುತ್ತಿದ್ದ ರವೀಂದ್ರ ಮಾವಖಂಡ ಎಂಬ ಜವ್ವನಿಗ ,ಮೊನ್ನೆ ಮೊನ್ನೆ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿಕೊಂಡ ನಂತರ ಬರೆದಿರುವ ಈ ಸಾಲುಗಳು, ನಾವು ಮುಟ್ಟಿಮುಟ್ಟಿ ನೋಡಿಕೊಳ್ಳುವಂತಿವೆ ! ಓದಿ ಹೇಳಿ.


ಅವ್ವ ರೊಟ್ಟಿಗೆ

ಗೋಧಿ ಹಿಟ್ಟನು

ಮಿದ್ದುತ್ತಿರುವಷ್ಟೇ

ಸಹಜ ಸರಾಗದಲ್ಲಿ

ನಾದುತ್ತಿದೆ ಎಲ್ಲರ

ಈ ಚರ ಶಹರ

ನೀಚರ ಶಹರ

ಬಳಲುತ್ತಿದ್ದ ಬಾಳು

ಆಕಾರ ವಿಕಾರವಾದ

ವಿಷಾದ ಮರೆತು

ಬೇಯುತಿದೆ

ಈ ನಗರದ ಅಗೋಚರ

ಅಡುಗೆ ಕೋಣೆಗಳ

ನೂರಾರು ಕಾವಲಿಗಳಲ್ಲಿ

ಪಾಳಿಯಲ್ಲಿ ಧೂಳಿಯಲ್ಲಿ

ಎದ್ದು ಬಿದ್ದು ಅಲ್ಲಿ ಇಲ್ಲಿ.

Read more...

ಸಿಗರೇಟು ಸೇದುವ ಹುಡುಗರು

ಗಿಜಿಗಿಜಿ ಜಾತ್ರೆಯಂಗಡಿ ಕೊನೆಗೆ
ಮನೆಯ ತೋಟದ ಮೂಲೆಗೆ
ಹೈಸ್ಕೂಲ್ ಟಾಯ್ಲೆಟ್ ಹಿಂದೆ

ಕಳ್ಳ ಕಿಸೆಯಲಿ ಮುರಿದ ಸಿಗರೇಟಿಗೆ
ಕಡ್ಡಿ ತೂರಿಸಿ ನೇರವಾಗಿಸಿ
ಕಣ್ಮುಚ್ಚಿ ಕೊಂಚ ಹೊಗೆ ಒಳಗೆಳೆದು
ಬೂದಿ ಹೊಡೆವಾಗ ಸಿಗರೇಟೇ ಕೈಜಾರಿ
ಮತ್ತೆರಡು ಕಡ್ಡಿ ಗೀರಿ ಕೆಮ್ಮುತ್ತ ...
ಆಹಾ ದಂ ಮಾರೋ ದಂ ದಂ .

ಛೆ, ಇನ್ನೆರಡು ಜಾಸ್ತಿ ತಗೋಬಹುದಿತ್ತು
ಇಲ್ಲ ಅಭ್ಯಾಸವಾದರೆ ಕಷ್ಟ !
ಮಾರ್‍ಲ್‌ಬರೋಗೆ ಅರುವತ್ತು ರೂಪಾಯಿ
ಚೈನ್ ಸ್ಮೋಕರ್ ಶಾರುಕ್ ಎಂಥ ಸಿಪಾಯಿ
ಅಂತೆಲ್ಲ ಗಿಲೀಟು ಮಾತಾಡುತ್ತ ಎಳೆಯುತ್ತ
ಸಿಗರೇಟು ಸೇದೋರೆಲ್ಲ ಕೆಟ್ಟೋರಾ ಅಂತ ವೇದಾಂತ
ಶಿವರಾಜ್ ಕುಮಾರ್ ಸಿನಿಮಾದಲ್ಲಿ ‘ಸಂತ ’ !

ರಜನಿ ಸ್ಟೈಲ್ ಗೊತ್ತಾ, ಫ್ರೆಂಚ್ ಇನ್‌ಹೇಲರ್ ಬರತ್ತಾ?
ಹೊಗೆಯಲ್ಲೇ ಲವ್ ಸಿಂಬಲ್ ಆ...ಆ...ವ್...ವ್...
ಉಫ್...ಹಿಂಗೆ ಮಾಡೋಕಾಗತ್ತ,
ಹನೀಫನ ಅಂಗಡೀಲಿ ಲೈಟ್ಸ್ ಸಿಗತ್ತಾ?

ಕಾಲೇಜಿಗೋದ್ರೆ ಇದು ಕಾಮನ್ನು , ಫ್ಯಾಷನ್ನು
ಬೇಕಾದ್ರೆ ತಗೋ ನಿನ್ನ ಡವ್ವಿನ ಪರ್ಮಿಷನ್ನು !
ಎನ್ನುತ್ತ ಹೊಗೆ ಕಾರುತ್ತ ಹೈ-ಸ್ಕೂಲು ಹುಡುಗರು ...

ಅಪ್ಪ ಆಷ್‌ಟ್ರೇನಲ್ಲಿ ಸಿಗರೇಟು ಮುರಿದರು
ಮೇಷ್ಟ್ರು ಹುಡುಗರ ಬೆನ್ನು ಮುರಿದರು .
ಮೊನ್ನೆ ಅಪ್ಪನ ತಿಥಿಗೆ ಊರಿಗೆ ಹೋಗಿದ್ದಾಗ ,
ಬೆನ್ನಿಗೆ ಎಣ್ಣೆ ಹಚ್ಚಿ ಅಮ್ಮ ತಿಕ್ಕುತ್ತಿದ್ದಾಗ ,
ಇವೆಲ್ಲ ಯಾಕೋ ನೆನಪಾಯಿತು .

-ಸುಧನ್ವಾ
(ಕವಿ-ಕತೆಗಾರ ಶ್ರೀಕೃಷ್ಣ ಆಲನಹಳ್ಳಿ, ಫೋಟೊ:ಯಜ್ಞ)


Read more...

January 13, 2008

ಪ್ರಶ್ನೆಗಳಿರುವುದು 'ಕೇಳುವುದಕ್ಕೆ’ !

ಸುಮಾರು ಎರಡು ತಿಂಗಳಿಗೊಂದರಂತೆ ಪ್ರಕಟವಾಗುತ್ತಿದ್ದ "ಕವನ ಮತ್ತು ಕಾವ್ಯ ವಿಮರ್ಶೆಗಳ ಋತುಪತ್ರಿಕೆ’-ಕವಿತಾ. ೧೯೬೪ರ 'ವರ್ಷ’ ಋತುವಿನ ಸಂಚಿಕೆಯ ಮುಖಪುಟ ಇಲ್ಲಿದೆ. ಬಾಕಿನ ಅವರು ಪ್ರಧಾನ ಸಂಪಾದಕರಾಗಿದ್ದ ಈ ಪತ್ರಿಕೆಯ ಸಂಪಾದಕ ಮಂಡಳಿಯಲ್ಲಿ ಘನಶ್ಯಾಮ, ಕಿರಣ ಮತ್ತು ನಾ. ರಾಮಾನುಜರಿದ್ದರು. ಬೆಂಗಳೂರಿನ ಬಸವನಗುಡಿಯ 'ಗೆಳೆಯರ ಪ್ರಕಾಶನ’ದ ಹೆಸರಲ್ಲಿ ಇದು ಹೊರಬರುತ್ತಿತ್ತು. ಸಂಪುಟಕ್ಕೆ 'ಹೂವು ಎಂದು, ಸಂಚಿಕೆಗೆ 'ಎಸಳು’ ಎಂದೂ ಹೆಸರಿಟ್ಟುಕೊಂಡಿದ್ದರು. ಈ ಮೂರನೆ ಸಂಚಿಕೆಯ ಕೊನೆಗಿರುವ ಸಂಪಾದಕೀಯ, ಈಗ ಯಾರೋ ಬರೆದಿಟ್ಟಂತೆ ಕಾಣುತ್ತಿರುವುದು ವಿಶೇಷ !

'ನಾವು ಹೊಸ ಬರಹಗಾರರಿಗೆ ಅವಕಾಶ ಕೊಡಬೇಕೆಂದು ಪ್ರಾರಂಭದಲ್ಲೇ ಸಂಕಲ್ಪಿಸಿದ್ದೆವು. ಆದರೆ ಹೊಸ ಲೇಖಕರಿಂದ ಪ್ರಕಟಣೆಗೆ ಯೋಗ್ಯವಾದ ಕೃತಿಗಳು ಬರುತ್ತಿಲ್ಲ. ಉತ್ಸಾಹೀ ತರುಣ ಬರಹಗಾರರು ನಮ್ಮ ಸಾಹಿತ್ಯದ ಬೆಳವಣಿಗೆಯನ್ನು ಗಮನಿಸದೆ ತಾವೂ ಸಾಕಷ್ಟು ಸಾಹಿತ್ಯದ ಬಗ್ಗೆ ಅಧ್ಯಯನ ನಡೆಸದೆ, ಬರೆದದ್ದೇ ಪ್ರಕಟಣೆಯಾಗಬೇಕೆಂಬ ಆಕಾಂಕ್ಷೆಯೊಂದನ್ನು ಮಾತ್ರ ಇಟ್ಟುಕೊಂಡು, "ಹೆಸರಿಗೋಸ್ಕರ’ ಬರೆಯುವ ಪ್ರಯತ್ನ ನಡೆಸಿದರೆ ಏನೇನೂ ಸಾರ್ಥಕವೆನಿಸದು. ಇದರಿಂದ ಉತ್ತಮ ಸಾಹಿತ್ಯವಾಗಲಿ, ಕಾವ್ಯವಾಗಲಿ ಸೃಷ್ಟಿಯಾಗದು. ಸಾಹಿತ್ಯ ನಡೆದು ಬಂದ ದಾರಿಯನ್ನು ಸತತವಾಗಿ ಅಭ್ಯಸಿಸಿ, ಮುಂದೆ ನಡೆಯಲು ಬೇಕಾದ ಶಕ್ತಿಯನ್ನು ಗಳಿಸಲು ತರುಣ ಲೇಖಕರು ಸಿದ್ಧರಾಗಬೇಕು. ಈ ದಿಸೆಯಲ್ಲಿ ಹೆಜ್ಜೆ ಹಾಕಲು ನಾಡಿನ ಹೊಸ ಬರಹಗಾರರು ವಿಚಾರ ಕ್ರಾಂತಿಯ ಆಂದೋಳನವನ್ನು ನಡೆಸುವರೆಂದು ನಂಬುತ್ತೇವೆ’.

ಕ.ವೆಂ. ರಾಜಗೋಪಾಲ, ಲಂಕೇಶ್, ಚಂಪಾ, ಗಿರಡ್ಡಿ, ಚೊಕ್ಕಾಡಿ, ನಾಡಿಗ, ದೇಶ ಕುಲಕರ್ಣಿ ಮೊದಲಾದವರು ಈ ಕವಿತಾದಲ್ಲಿ ಕಾಣಿಸಿಕೊಂಡಿದ್ದಾರೆ. ೧೯೬೪ರಲ್ಲಿ ಇವರೆಲ್ಲ ಹಿರಿಯರೂ, ಹಳೆಯ ಬರೆಹಗಾರರೂ ಆಗಿಹೋಗಿದ್ದರೆ? 'ಹೊಸಬರ ಕವನ ಸಂಕಲನ ಪ್ರಿಂಟ್ ಮಾಡೋದಕ್ಕೂ ಅವರು(ಒಬ್ಬರ ಹೆಸರು ಹೇಳಿ) ರೆಡಿ ಇದ್ದಾರೆ. ಆದರೆ ಒಳ್ಳೇ ಪುಸ್ತಕಗಳೇ ಅವರಿಗೆ ಸಿಗ್ತಾ ಇಲ್ಲ ಮಾರಾಯಾ’ ಅಂದಿದ್ದರು ಮೊನ್ನೆ ಮೊನ್ನೆ ಜಯಂತ ಕಾಯ್ಕಿಣಿ. ತರುಣ ಲೇಖಕರಿಂದ ಒಳ್ಳೆಯ ಸಾಹಿತ್ಯ ಸೃಷ್ಟಿಯಾಗುತ್ತಿಲ್ಲ ಎಂಬ ಮಾತನ್ನುಆದಿಕವಿ ಪಂಪನಿಂದ ಇಂದಿನ ತನಕವೂ ಪ್ರತಿದಿನ ಕೇಳುತ್ತಲೇ ಹೇಳುತ್ತಲೇ ಸಾಹಿತ್ಯ ತನ್ನ ಪಾಡಿಗೆ ತಾನು ಬೆಳೆಯುತ್ತ ಬಂದಿದೆಯೇ? ಅಷ್ಟಕ್ಕೂ ತರುಣರು ಮಾತ್ರ ಚೆನ್ನಾಗಿ ಬರೆಯಬೇಕು ಯಾಕೆ?! ಪ್ರಶ್ನೆಗಳಿರುವುದು 'ಕೇಳುವುದಕ್ಕೆ’ !

Read more...

January 08, 2008

'ಅದಾಗಿ’ ನೀವು ಕ್ಷೇಮವೇ?

ಒಂದೇ ಬೆರಳಿನಲ್ಲಿ ಆಸ್ಟ್ರೇಲಿಯಾವನ್ನೇ ಎತ್ತಿ ಹಿಡಿದ 'ಕಾಂಗರೋದ್ಧಾರಿ’ ನೀಲಮೇಘಶ್ಯಾಮ ಬಕ್ನರನಿಗೆ ಪ್ರಣಾಮಗಳು. ಅಣ್ಣ ಬಲರಾಮನಂತಿರುವ 'ಬೆಣ್ಣೆಮುದ್ದೆ’ ಬನ್ಸನನಿಗೆ ವಂದನೆಗಳು. ಹುಬ್ಬಳ್ಳಿಯವರ ಬಾಯಲ್ಲಿ 'ಪಾಂಟಿಂಗ’ , ದ.ಕ.ದವರ ಬಾಯಲ್ಲಿ ಪಟಿಂಗನಾಗಿರುವ ನಾಯಕನ ಕುಶಲ ವಿಚಾರಿಸಿರುವೆವು.
ಅದಾಗಿ ನಾವು ಕ್ಷೇಮ. 'ಅದಾಗಿ’ ನೀವು ಕ್ಷೇಮವೇ?!

ವಾಮನನು ತಿವಿಕ್ರಮನಾಗಿ ಬೆಳೆದು ಒಂದು ಹೆಜ್ಜೆಯಿಂದ ಭೂಮಿಯನ್ನೇ ಅಳೆಯುವಾಗ ಗಂಗಾನದಿಯು ಅವನ ಕಾಲ್ಬೆರಳ ಸಂದಿಯಿಂದ ಹುಟ್ಟಿಕೊಂಡಿತಂತೆ.! ಇಂತಹ ಪುಣ್ಯಭೂಮಿ ಭಾರತವೇ ಈಗ ನಿಮ್ಮ ಕೈಬೆರಳುಗಳಲ್ಲಿ ಸಿಕ್ಕಿಹಾಕಿಕೊಂಡಿರುವುದು ನೋಡಿ ಬಹಳ ಖೇದವಾಯಿತು. ನಾವೆಲ್ಲ ದೀಪಿಕಾಳ ಪಡುಕೋಣೆಯಲ್ಲಿದ್ದಾಗ ನೀವು ನಮ್ಮ mood ಹಾಳುಮಾಡಿಬಿಟ್ಟಿರಿ. ಕನ್ನಡಿಗನಾದ ನಾಯಕ ಕುಂಬ್ಳೆ ಅಂಗಳದಲ್ಲಿ, ಕನ್ನಡತಿ ದೀಪಿಕಾ ಪೆವಿಲಿಯನ್‌ನಲ್ಲಿ -ಗೆಲುವನ್ನೇ ಧ್ಯಾನಿಸುತ್ತಿರುವಾಗ ನೀವು ಎಲ್ಲರನ್ನೂ ಡ್ರೆಸ್ಸಿಂಗ್ ರೂಮಿಗೆ ಕಳುಹಿಸಿದ್ದು ನಮಗೆಲ್ಲ ಬಹಳ ಮುಜುಗರ ಉಂಟುಮಾಡಿತು.
ಅಂಪೈರುಗಳು ಹಿಂಗೂ ಕೈ ಎತ್ತೋದಾ?!

ಮೊದಲ ಇನ್ನಿಂಗ್ಸ್‌ನಲ್ಲಿ ೧ ರನ್ ಮಾಡುವುದಕ್ಕೆ ೪೧ ಬಾಲ್‌ಗಳನ್ನು ಪರೀಕ್ಷಿಸಿದ ಕನ್ನಡಿಗ ದ್ರಾವಿಡ್, ಎರಡನೇ ಇನ್ನಿಂಗ್ಸ್‌ನಲ್ಲಿ ೧೦೩ ಬಾಲ್‌ಗಳಲ್ಲಿ ಕೇವಲ ೩೮ ರನ್ ಹೊಡೆದಿದ್ದಾಗಲೂ, ಅವನು ಬ್ಯಾಟ್ ತಗುಲಿಸದಿರುವಾಗಲೇ ಔಟ್ ಅಂದುಬಿಟ್ಟಿರಲ್ಲ! ಭಾರತದ ಮಹಾಗೋಡೆ ನಿಮ್ಮ ತಾಳ್ಮೆಯನ್ನೂ ಪರೀಕ್ಷಿಸಿದರೆ? ದಾದಾ ಹೊಡೆದ ಚೆಂಡನ್ನು ಕ್ಲಾರ್ಕ್ ನೆಲಕ್ಕೊತ್ತಿ ಹಿಡಿದರೂ ನೀವದನ್ನು ಕೈಗೆತ್ತಿಕೊಂಡಿರಿ. ಎರಡನೇ ಇನ್ನಿಂಗ್ಸ್‌ನಲ್ಲಿ ಮೊದಲ ವಿಕೆಟ್ ತೆಗೆದುಕೊಂಡದ್ದಕ್ಕೇ ಮಂಗನಂತೆ ಮೈದಾನದಲ್ಲಿ ಉರುಳು ಸೇವೆ ಮಾಡಿದ ಭಜ್ಜಿ, ಸೈಮಂಡ್ಸನ್ನು "ಮಂಗ’ ಅಂತ ಬೈದಾನೇ?! ಕೊನೆಯ ಇನ್ನಿಂಗ್ಸ್‌ನಲ್ಲಿ ಕ್ರೀಸ್‌ಗಂಟಿಕೊಂಡೇ ಇದ್ದು ಅಜರಾಮರನಾಗಿರುವ ನಮ್ಮ ಕುಂಬ್ಳೆಗೆ ಬ್ರಾಡ್‌ಹಾಗ್ ಉಪಯೋಗಿಸಿದ ಪದ ನಿಮಗೆ ಕೇಳಿಸಲಿಲ್ಲ, ಇರಲಿ. ಮೊದಲ ಇನ್ನಿಂಗ್ಸ್‌ನಲ್ಲಿ ಸೈಮಂಡ್ಸ್ ೩೦ ರನ್ ಗಳಿಸಿದ್ದಾಗಲೇ ಔಟಾದರೂ, ಅವನಿಗೆ ನೀವು ತೋರಿದ ಕೃಪಾಕಟಾಕ್ಷ ದೊಡ್ಡದು. ಅವನೆದುರೂ ಮಂಗನಾಗುವ ಗತಿ ನಿಮಗ್ಯಾಕೆ ಬಂತು?
ನಮ್ಮ ವಾಸಿಂ ಜಾಫರ್ ಎರಡು ಟೆಸ್ಟ್‌ಗಳ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಆಡಿಯೂ ಕೇವಲ ೨೨ ರನ್ (೪-೧೫-೩-೦) ಮಾಡಿ ಸ್ಪಷ್ಟವಾಗಿ ವಿಕೆಟ್ ಒಪ್ಪಿಸುತ್ತಿದ್ದುದನ್ನು ಮರೆತಿರಾ ಸಾಹೇಬರೆ?!

ನೀವು ಉದ್ದೇಶಪೂರ್ವಕ ತಪ್ಪುಗಳನ್ನು ಮಾಡಿದ್ದೀರೋ ಇಲ್ಲವೋ ನಾವು ಹೇಳಲಾರೆವು. ಆದರೆ ಬ್ಯಾಟ್ಸ್‌ಮನ್‌ಗಳು ಉದ್ದೇಶಪೂರ್ವಕ ಔಟಾದಂತೆ, ನಿಧಾನವಾಗಿ ಆಡಿದಂತೆ ಕಂಡರೆ ಮ್ಯಾಚ್‌ಫಿಕ್ಸಿಂಗ್ ಆರೋಪ ಹೊರಿಸುವುದು, ಬೌಲರ್‌ಗಳು ನಿಧಾನವಾಗಿ ಬೌಲಿಂಗ್ ಮಾಡಿದರೂ ದಂಡ ವಿಧಿಸುವುದು ಇತ್ಯಾದಿ ಇರುವಾಗ, ಒಂದೇ ಪಂದ್ಯದಲ್ಲಿ ಐದಾರು ಘೋರ ತಪ್ಪುಗಳನ್ನು ಮಾಡಿದ ನಿಮಗೆ ದಂಡನೆಯೇ ಇಲ್ಲವೇ? ಸರಿಯಾದ ಸಾಕ್ಷಿಯಿಲ್ಲದೆ ಏಕಪಕ್ಷೀಯವಾಗಿ ಭಜ್ಜಿಗೆ ಮೂರು ಪಂದ್ಯಗಳ ನಿಷೇಧ (ಮ್ಯಾಚ್‌ರೆಫ್ರಿ) ಹೇರುತ್ತೀರಾದರೆ, ಮುಂದಿನ ಎರಡು ಪಂದ್ಯಗಳಿಗಾದರೂ ಬಕ್ನರ್ ಬೇಡ ಅಂತ ದೃಶ್ಯಮುದ್ರಿಕೆಗಳ ಸಾಕ್ಷಿ ಸಮೇತ ನಾವಂದದ್ದು ತಪ್ಪಾದೀತೇ?

****
ಪ್ರಿಯ ಪಾಂಟಿಂಗ್- ನಿನ್ನ ಮುದ್ದು ನಗೆಗೆ, ಬ್ಯಾಟಿಂಗ್ ವೈಭವಕ್ಕೆ, ಫೀಲ್ಡಿಂಗ್ ಚಾಕಚಕ್ಯತೆಗೆ ನಾವೆಲ್ಲ ಮರುಳಾಗಿದ್ದ ಕಾಲವೊಂದಿತ್ತು. ಆದರೀಗ ನಮ್ಮ ಕಣ್ಣಿಗೆ ಕಟ್ಟುತ್ತಿರುವುದು, ನೀನು ಅಂಪೈರ್ ಬನ್ಸನನಿಗೆ ತೋರಿಸುತ್ತಿರುವ ಬೆರಳೊಂದೇ ! ನಿನ್ನ ತಂಡ ಸತತತ ೧೬ ಟೆಸ್ಟ್ ಪಂದ್ಯಗಳನ್ನು ಗೆದ್ದು ದಾಖಲೆ ಬರೆದಿರಬಹುದು. ಆದರೆ ನಿಮಗಿನ್ನೂ ಟೆಸ್ಟಿಂಗ್ ಟೈಮ್ ಇದೆ ಅನ್ನುವುದನ್ನು ಮರೆಯಬೇಡಿ. ನಮ್ಮ ಕ್ಯಾನ್ಸರ್ ಆಸ್ಪತ್ರೆಗೆ ದೇಣಿಗೆ ನೀಡುತ್ತಿರುವ ಮೆಕ್‌ಗ್ರಾತ್ ಬಗ್ಗೆ, ಈ ಟಯರ್-ಇನ್ಶೂರೆನ್ಸ್ ತಗೊಳ್ಳಿ ಅಂತ ಮನೆ ಟಿವಿಯಲ್ಲಿ ಬಂದು ಒತ್ತಾಯಿಸುವ ಬ್ರೆಟ್‌ಲೀ ಮತ್ತು ನಿನ್ನ ಬಗ್ಗೆ ನಮಗೆಲ್ಲ ಒಂದು ತರಹದ ಪ್ರೇಮವಿತ್ತು. ನಮ್ಮ ಮಕ್ಕಳೂ ತಾನು ಪಾಂಟಿಂಗ್, ತಾನು ಸೈಮಂಡ್ಸ್ ಎಂದು ಆಡಿಕೊಳ್ಳುತ್ತಿದ್ದವು. ಈಗ ಅವರೂ ನಿಮ್ಮ ಬಗ್ಗೆ 'ಆಡಿಕೊಳ್ಳುವಂತಾಗಿದೆ’. ಬೇಕೆಂದಾಗ ಕ್ರೀಡಾಸ್ಫೂರ್ತಿಯ ಮಾತನ್ನೂ, ಬೇಡವೆಂದಾದಾಗ ಕ್ರೀಡೆಯಲ್ಲಿ ಇದು ಸಾಮಾನ್ಯ ಅಂತಲೂ ಹೇಳುತ್ತಿರುವ ನಿಮಗೆ, ನಿಮ್ಮದೇ ದೇಶದ ಮಾಧ್ಯಮಗಳು, ಜನ ಮಂಗಳಾರತಿ ಎತ್ತುತ್ತಿರುವುದು ಅರಿವಿಗೆ ಬರುತ್ತಿಲ್ಲವೆ?
ನೆನಪಿರಲಿ, ಕಾಂಗರೂಗಳ ಹೊಟ್ಟೆಯಲ್ಲಿ ಜೋತುಬಿದ್ದಿರುವ ಮರಿಗಳು ನಾವಲ್ಲ.

ಭಜ್ಜಿಗೆ ಹೇರಿರುವ ನಿಷೇಧ ತೆರವಾಗಬೇಕು, ಅಂಪೈರ್‌ಗಳ ಕಳಪೆ ನಿರ್ವಹಣೆಗೂ ದಂಡ ವಿಧಿಸುವ (ಹಣ-ಪಂದ್ಯ ನಿಷೇಧದ ರೂಪದಲ್ಲಿ) ಕ್ರಮ ಜಾರಿಗೆ ಬರಬೇಕು, ಈ ಕ್ರಿಕೆಟ್ ಸರಣಿ ಮುಂದುವರಿಯಬೇಕು-ಅಂತ ಬಯಸುತ್ತಿದ್ದ ನಮಗೆ ಹೊಸ ಸುದ್ದಿ ಸಮಾಧಾನ ತಂದಿದೆ.
****
೬೧ರ ಹರೆಯದ ಬಕ್ನರ್ ಸಾಹೇಬರೇ, ಸ್ವಲ್ಪ ದಿನ ಬೆರಳಿಗೆ ಬ್ಯಾಂಡೇಜ್ ಸುತ್ತಿಕೊಂಡು ಮನೆಯಲ್ಲಿರಿ ! ಆಗಲಾದರೂ ನಿಮ್ಮ ಬೆರಳು ನಿಮಗೆ ಕಾಣಿಸಿ ಹಳೆಯ ಮೈಮರೆವು ಹೋದೀತು. ನಮಗೆ ಹೊಸ 'ಬಿಲ್ಲಿ’ (ಬಿಲ್ಲಿ ಬೌಡೆನ್ ಅಂಪೈರ್) ಬಂದಿದೆ. ಹೇಗೋ ಆಟವಾಡಿಕೊಂಡಿರುತ್ತೇವೆ.

Read more...

January 07, 2008

ಒಮ್ಮೆ ಹೀಗಾಯಿತು...

ಗಾಢ ನಿದ್ದೆಯಲ್ಲಿ ಲೀನವಾಗಿದ್ದ ಅವನಿಗೆ ಎಚ್ಚರವಾದಾಗ ಮಧ್ಯರಾತ್ರಿ. ಬೆಳದಿಂಗಳ ಸೋನೆ ಮಳೆ ಸುರಿಯುತ್ತಿತ್ತು. ಈಗಷ್ಟೆ ಹಚ್ಚಿದ ಗಿಲೀಟಿನ ಚೂರುಗಳಂತೆ ತಾರೆಗಳು ಚಕಮಕ ಹೊಳೆಯುತ್ತಿದ್ದವು .ಹಿಂದಿನ ರಾತ್ರಿ ಯಕ್ಷಗಾನ ನೋಡಲು ಹೋಗಿದ್ದ ವೆಂಕಟೇಶ ಬೆಳಗ್ಗೆ ಮನೆ ತಲುಪಿದಾಗ - ತೋಟಕ್ಕೆ ದನಗಳು ನುಗ್ಗಿದ್ದವು, ನೀರು ಬರುವ ಪೈಪು ತುಂಡಾಗಿತ್ತು, ಮೂರ್‍ನಾಲ್ಕು ಬಾಳೆಗೊನೆಗಳು ಚೆನ್ನಾಗಿ ಬೆಳೆದು ಅಳಿಲು ತಿನ್ನಲು ಆರಂಭವಾಗಿತ್ತು ,ವಿದ್ಯುತ್ ತಂತಿಗೆ ಮರವೊಂದು ತಾಗಿ ಟ್ರಾನ್ಸ್‌ಫಾರ್ಮರ್ ಫ್ಯೂಸ್ ಹೋಗಿ ಕರೆಂಟು ಇಲ್ಲವಾಗಿತ್ತು ,ದನವೊಂದು ಏಳುವುದಕ್ಕಾಗದೆ ಮಲಗಿಕೊಂಡಿತ್ತು ,ಮನೆಯಲ್ಲೆಲ್ಲೋ ಒಂದು ಇಲಿ ಸತ್ತು ಅಸಾಧ್ಯ ವಾಸನೆ ಹೊಮ್ಮುತ್ತಿತ್ತು, ಮುರಿದ ಮರದ ಕವಾಟೊಂದನ್ನು ರಿಪೇರಿ ಮಾಡುವುದಕ್ಕೆ ಆಚಾರಿಯೊಬ್ಬ ಬರುವವನಿದ್ದ . ಈ ಎಲ್ಲಾ ಕೆಲಸಗಳು ಮುಗಿದು ವೆಂಕಟೇಶ ಚಾಪೆ ಬಿಡಿಸುವಾಗ ಸಂಜೆ ಐದು. ಮುಸ್ಸಂಜೆ ಹೊತ್ತು ಮಲಗಬಾರದು ಅಂತ ಮುದಿ ಅಮ್ಮ ಗೊಣಗಾಡುತ್ತಿದ್ದರೂ ,ಅವನು ಪರಲೋಕ ಸೇರುವವನಂತೆ ಅಡ್ಡಾಗಿದ್ದ !

ಆತ ಮಲಗಿದ್ದ ಮನೆ ಎದುರಿನ ಅರ್ಧ ಜಗಲಿಗೆ ಕತ್ತಲು, ಇನ್ನರ್ಧಕ್ಕೆ ಬೆಳ್ದಿಂಗಳು .ಆಕಾಶದಲ್ಲಿ ಯಾರೋ ಕತ್ತಲಿಂದ ಬೆಳದಿಂಗಳನ್ನು ಸೋಸುತ್ತಿರುವಂತಿತ್ತು. ಅಂಗಳದ ಅಂಚಿನ ಮುಳ್ಳಿನ ಬೇಲಿಯಿಂದಾಚೆ ಎಲ್ಲ ಕಪ್ಪಿನ ಬೆಟ್ಟ. ಕಪ್ಪು, ಬಿಳುಪು, ಬಿಸಿ, ತಣ್ಣಗೆ, ಗಾಳಿ, ಮಣ್ಣಿನ ಗಂಧ, ಬಣ್ಣ, ಆಕಾರ -ಸಕಲವೂ ಒಂದರೊಳಗೊಂದು ಸೇರಿ ಮಿಶ್ರಣಗೊಳ್ಳುತ್ತ , ನಾಟಕದ ಆರಂಭದ ಮೊದಲು ವೇದಿಕೆಯನ್ನು ಸಜ್ಜುಗೊಳಿಸುವಂತೆ ತಯಾರಾಗುತ್ತಿತ್ತು. ಆ ಇಳಿರಾತ್ರಿ, ಇದ್ದಕ್ಕಿದ್ದಂತೆ ಎಚ್ಚರಾದ ವೆಂಕಟೇಶನಿಗೆ ಅಮ್ಮನ ಗೊರಕೆ ಸ್ಪಷ್ಟವಾಗಿ ಕೇಳುತ್ತಿತ್ತು. ಬಚ್ಚಲ ಒಲೆ ಬದಿಯಲ್ಲಿ ಬಿದ್ದುಕೊಂಡಿದ್ದ ನಾಯಿ ಒಂಚೂರು ಗೋಣು ಎತ್ತಿ, ಬೌ ಎಂದು ಸಣ್ಣಗೆ ಧ್ವನಿ ಹೊರಡಿಸಿ ಸುಮ್ಮನಾಯಿತು. ಉಟ್ಟಿದ್ದ ಲುಂಗಿ ಕೈಗೆ ಸಿಗದೆ, ಬೆತ್ತಲೆ ತೊಡೆಗಳ ಮೇಲೆ ಬಟ್ಟೆ ಎಳೆದುಕೊಂಡು ಚಕ್ರಮುಟ್ಟ ಹಾಕಿ ಕುಳಿತುಕೊಂಡ. ಸಣ್ಣಗೆ ದೀಪ ಹತ್ತಿಸೋಣವಾ? ಅಮ್ಮನಿಗೆ ಎಚ್ಚರಾದರೆ ಒಂದರಮೇಲೊಂದು ಪ್ರಶ್ನೆ ಕೇಳಿಯಾಳು. ಎಲೆಅಡಿಕೆ ತಿನ್ನೋಣ ಅಂದರೆ ಯಾಕೋ ಮನಸ್ಸೇ ಬಾರದು. ಅಂಗಳದಲ್ಲಿ ನಾಲ್ಕು ಸುತ್ತು ನಡೆಯೋಣವೆಂದರೆ ಏಳಲೇ ಉದಾಸೀನ ಬಿಡಲಿಲ್ಲ . ಇನ್ನೇನು? ಸಂಜೆಯಿಂದ ಮಧ್ಯರಾತ್ರಿವರೆಗೆ ಬಂದ ಅಮೋಘ ನಿದ್ದೆಯ ಸುಖವನ್ನೇ ಮೆಲುಕು ಹಾಕುವವನಂತೆ ,ಕಣ್ಣುಗಳು ಹೂವಿನಂತೆ ಅರಳಿ ಹಗುರಾಗಿರುವುದನ್ನು ಅನುಭವಿಸತೊಡಗಿದ. ತಣ್ಣಗಿನ ಮುಖವನ್ನು ಎರಡೂ ಕೈಗಳಿಂದ ಮೆಲ್ಲನೆ ತಟ್ಟಿಕೊಂಡ. ದೇಹದಲ್ಲಿ ವಿಶೇಷ ಶಕ್ತಿ ಸಂಚಯವಾಗಿರುವುದನ್ನು ಕಂಡುಕೊಂಡ. ಆದರೆ ಇವೆಲ್ಲಾ ಕೆಲವು ನಿಮಿಷಗಳವರೆಗೆ ಅಷ್ಟೆ ! ಆಮೇಲೆ ನಿದ್ರೆ ಬಾರದ ಮಧ್ಯರಾತ್ರಿ, ಕರೆಂಟಿಲ್ಲದ ಮನೆಯಲ್ಲಿ ,ಇನ್ನೂ ಮದುವೆಯಾಗದ ನಲವತ್ತರ ಯುವಕ ಏನು ಮಾಡಬಹುದು ?!

ಅವನು ಮತ್ತೇನೂ ಮಾಡಲಿಲ್ಲ. ಅಮ್ಮನ ತೋಳು ಹಿಡಿದು ಎಬ್ಬಿಸಿದ. ಆಕೆ ಯಾವುದೋ ಸೆಳೆತಕ್ಕೆ ಸಿಕ್ಕ ಪ್ರಾಣಿಯಂತೆ ಕಂಡಳು. ಇಬ್ಬರೂ ಹೊರ ಜಗಲಿಯಲ್ಲಿ ಕುಳಿತುಕೊಂಡು ಕಣ್ಣಿನಲ್ಲಿ ಆಕಾಶವ ತುಂಬಿಸಿಕೊಳ್ಳತೊಡಗಿದರು. ಯೌವ್ವನದಲ್ಲೇ ಗಂಡನನ್ನು ಕಳೆದುಕೊಂಡ ಹೆಂಗಸು, ಇನ್ನೂ ಹೆಣ್ಣು ಸಿಗದ ಗಂಡಸು, ತಾರೆಗಳಿಗೆ ಕೊಕ್ಕೆ ಹಾಕಿದರು. ಚಂದ್ರನನ್ನು ಮೂಗಿನ ತುದಿಗೆ ಅಂಟಿಸಿಕೊಂಡವರಂತೆ ನೋಡಿದರು. ಮಂದವಾಗಿ ಬೀಸುತ್ತಿದ್ದ ಗಾಳಿಗೆ ತಮ್ಮ ನಿಟ್ಟುಸಿರು ಬೆರೆಸಿದರು. ದೇಹವನ್ನು ತೊರೆದು ಗಾಳಿಯಲ್ಲಿ ಅಡ್ಡಾಡುವ ಆತ್ಮಗಳಂತೆ ದೇಹವನ್ನು ತೊನೆದು ತೂಗಿಕೊಂಡರು. ಒಳಗಿನ ಎಲ್ಲ ಕಲ್ಮಶವನ್ನು ಹೊರಚೆಲ್ಲುವವರಂತೆ ಮೈಮರೆತರು. ಇಬ್ಬರಿದ್ದವರು ಒಬ್ಬರಾದರು. ಒಂಟಿಯಾಗಿ ತಮ್ಮನ್ನು ತಾವು ಕಳೆದುಕೊಂಡವರಂತೆ, ಕಾಲು ನೆಲಕ್ಕೂರದ ದೇವತೆಗಳಂತೆ -ಅಂಗಳ, ಆಕಾಶ, ಗಿಡಮರಗಳ ಮೇಲೆಲ್ಲ ಸುತ್ತಾಡಿ ಬಂದರು . ಮೋಡಗಳ ಹಾಸಿಗೆಯಲ್ಲಿ ಪವಡಿಸಿ ಸುಖಿಸಿದರು . ಇರುಳಿನ ಶಾಂತತೆಯನ್ನು ಎದೆಗೂಡಿನಲ್ಲಿ ತುಂಬಿಕೊಂಡರು.
ಮುಂಜಾವಿನ ಪಲ್ಲಟ ಆರಂಭವಾಯಿತು . ಬಚ್ಚಲೊಲೆಗೆ ಬೆಂಕಿ ಹಾಕಿ, ನೀರು ಕಾಯಿಸಲು ಹೊತ್ತಾಯಿತೆಂದು ಅಮ್ಮ ಒಳಗೆ ನಡೆದಳು . ‘ನೀರು ಕಾದ ಕೂಡ್ಲೇ ಎಬ್ಸು ’ಅಂತ ಇವನು ಮುಸುಕೆಳೆದುಕೊಂಡ. ಆ ದಿನ ಸೂರ್ಯನೂ ಏಳುವಾಗ ಕೊಂಚ ತಡಮಾಡಿದ.

Read more...

January 03, 2008

ಕುರುಕ್ಷೇತ್ರಕ್ಕೊಂದು ಆಯೋಗ

ಕ್ಷಗಾನ ತಾಳಮದ್ದಳೆಯಲ್ಲಿ ರಸಪೂರ್ಣ ಅರ್ಥಗಾರಿಕೆಗೆ ಹೆಸರಾದವರು ದೇರಾಜೆ ಸೀತಾರಾಮಯ್ಯ . ಅವರು ಬರೆದ ‘ಶ್ರೀರಾಮಾಯಣ ಚರಿತಾಮೃತಂ’ ಮತ್ತು ‘ಶ್ರೀಮನ್ಮಹಾಭಾರತ ಕಥಾಮೃತಂ’ ಪುಸ್ತಕಗಳು ಅಪೂರ್ವ ಒಳನೋಟಗಳ ರಾಮಾಯಣ -ಮಹಾಭಾರತದ ಮರುಸೃಷ್ಟಿಗಳು. ತಾಳಮದ್ದಳೆಯ ಕ್ಷೇತ್ರದ ಉತ್ತುಂಗದಲ್ಲಿದ್ದಾಗಲೇ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ ಇವರು, ನಂತರದ ೧೪ ವರ್ಷಗಳ ಬದುಕಿನಲ್ಲಿ ಬರೆದ ಪುಸ್ತಕಗಳಲ್ಲಿ ‘ಕುರುಕ್ಷೇತ್ರಕ್ಕೊಂದು ಆಯೋಗ’ವೂ ಒಂದು. ೧೯೮೧ರಲ್ಲಿ ಪ್ರಕಟವಾಗಿದ್ದ ಆ ಪುಸ್ತಕ ಕಳೆದ ವರ್ಷ ದ್ವಿತೀಯ ಮುದ್ರಣ ಕಂಡಿದೆ.

‘ಆಯೋಗವು ಕಲ್ಪಿತ ಮಾಧ್ಯಮವೇ ಆಗಿದ್ದರೂ ಅಲ್ಲಿ ವಿಚಾರಿಸಲ್ಪಡುವವರು ಮಹಾಭಾರತದ ಆ ಕಾವ್ಯಲೋಕದ ದೇಶಕಾಲಗಳಲ್ಲಿ ಅಸ್ತಿತ್ವವನ್ನುಳ್ಳವರು, ವಿವೇಚಿಸಲ್ಪಡುವ ಪುರಾವೆಗಳು, ಅದೇ ಅಲ್ಲಿನ ಪ್ರಾಸಂಗಿಕ ಘಟನೆಗಳು, ವಿಚಾರಮುಖದಿಂದ ವ್ಯಕ್ತಗೊಳ್ಳುವ ವ್ಯಕ್ತಿ ಸಹಜವಾದ ಅನಿಸಿಕೆಗಳು, ಪ್ರಸ್ತುತ ವೈಚಾರಿಕತೆಯ ಚಿಂತನೆಗಳು’ ಎನ್ನುತ್ತಾರೆ ಅವರು. ಧರ್ಮಪುರುಷನಾದ ಯಮನೇ ನ್ಯಾಯಮೂರ್ತಿಯಾಗಿರುವ ಈ ಆಯೋಗದ ಎದುರು, ಮಹಾಭಾರತದ ಮುಖ್ಯ ಪಾತ್ರಗಳು ಬಂದು ಮಾತಾಡುತ್ತವೆ. ಕೊನೆಯ ಮಾತು ಮಹಾಭಾರತವನ್ನು ಸೂತಪುರಾಣಿಕರ ಬಾಯಿಯಿಂದ ಕೇಳಿದ ಶೌನಕರದ್ದು ! ವಿಶೇಷವೆಂದರೆ ಎಲ್ಲ ಪಾತ್ರಗಳ ಹೇಳಿಕೆಗಳ ಕೊನೆಗೆ- ಪ್ರಾಸ್ತಾವಿಕ ಆರೋಪಗಳು, ಸಾಂದರ್ಭಿಕ ಆರೋಪಗಳೆಂದು ಪಟ್ಟಿ ಮಾಡಿ ಕಾರ್ಯಸಂಯೋಜಕ ಎಂಬ ಪಾತ್ರದ ಮೂಲಕ ಎಲ್ಲ ಹೇಳಿಕೆಗಳ ಪರಾಮರ್ಶೆಯನ್ನೂ ಮಾಡಲಾಗಿದೆ. ಒಟ್ಟಿನಲ್ಲಿ ಸೀತಾರಾಮಯ್ಯರು ಎಲ್ಲ ಪಾತ್ರಗಳಲ್ಲೂ ಬಂದು ಇಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವು ಪಾತ್ರಗಳ (ಯಕ್ಷಗಾನ ತಾಳಮದ್ದಳೆಯಲ್ಲಿ ಮಾಮೂಲಾಗಿ ಪ್ರಸ್ತಾಪವಾಗುವುದನ್ನು ಹೊರತುಪಡಿಸಿ)ಹೇಳಿಕೆಗಳ ಆಯ್ದ ಭಾಗಗಳ ಮೊದಲ ಕಂತು ಇಲ್ಲಿದೆ.
ದುರ್ಯೋಧನ
ಅಂಬಿಕೆಯ ಮಗ ಧೃತರಾಷ್ಟ್ರನು ಹುಟ್ಟು ಕುರುಡ, ಸಿಂಹಾಸನಕ್ಕೆ ಅನಧಿಕಾರಿ. ಅಂಬಾಲಿಕೆಯ ಪುತ್ರ ಪಾಂಡು ಮಹಾರೋಗಿ, ಪಟ್ಟಕ್ಕೆ ಆಗದು. ವಿದುರನು ದಾಸೀಪುತ್ರ, ಹೇಗೆ ಅರಸನಾಗುವುದು? ಆದುದರಿಂದ ‘ಮಧ್ಯಮಾರ್ಹತೆ’ ಎಂದೇನೋ ಕಾರಣ ಹುಡುಕಿ ಭೀಷ್ಮರೇ ಮುಂದೆ ನಿಂತು ಪಾಂಡುವಿಗೆ ಪಟ್ಟ ಕಟ್ಟಿದರು. ದಾಶರಾಜ ಪುತ್ರಿಯಾದ ಸತ್ಯವತಿಯು ಶಂತನು ಚಕ್ರವರ್ತಿಗೆ ವಿವಾಹಯೋಗ್ಯಳಾಗಿ ಮಹಾರಾಜ್ಞಿಯಾದಳು. ಅವಳ ಮಕ್ಕಳು ಮಹಾರಾಜರಾಗಿ ಸಿಂಹಾಸನವನ್ನೂ ಏರಿದರು. ಆದರೆ ಸಮರ್ಥನಿದ್ದರೂ ದಾಸೀಪುತ್ರನೆಂಬ ಕಾರಣಕ್ಕೆ ವಿದುರನು ಸಿಂಹಾಸನಕ್ಕೆ ಉಪೇಕ್ಷಿಸಲ್ಪಟ್ಟನು. ಧೃತರಾಷ್ಟ್ರ, ಪಾಂಡು ಈ ಇಬ್ಬರೂ ಸಿಂಹಾಸನಕ್ಕೆ ಆಗದವರು ಎಂದು ವೇದವ್ಯಾಸರೇ ಹೇಳಿದ್ದರಂತೆ. ಆದರೂ ಪಾಂಡುವಿಗೆ ಪಟ್ಟವಾಯಿತು. ಇಬ್ಬರೂ ಆಗದವರು, ಅವರಲ್ಲೇ ಒಬ್ಬನು ಬೇಕೆಂದಿದ್ದರೆ ಹಿರಿಯನೇ ಆಗಬಹುದಿತ್ತು, ಆಗಲಿಲ್ಲ !
ಸಿಂಹಾಸನಕ್ಕೆ ಅಯೋಗ್ಯರಾದವರು ವಿವಾಹಕ್ಕೂ ಅಯೋಗ್ಯರು, ಯಾಕೆ?ಅಯೋಗ್ಯತೆಯು ಮುಂದೆಯೂ ಅವರ ಸಂತತಿಯಲ್ಲಿ ಹರಿದು ಬರಬಾರದೆಂದು. ಅದಕ್ಕಾಗಿಯೇ ಅಲ್ಲವೇ ‘ಅಂಗವಿಕಲರಿಗೂ, ಮಹಾರೋಗಿಗಳಿಗೂ ಮದುವೆ ಮಾಡಿಸಬಾರದು’ ಎನ್ನುವುದು. ರಾಜಮನೆತನಗಳ ವಿಷಯದಲ್ಲಂತೂ ಅವುಗಳನ್ನು ಗಂಭೀರವಾಗಿ ಪರಿಗಣಿಸಬೇಕಿತ್ತು. ಆದರೂ ನನ್ನ ಅಪ್ಪನಿಗೂ ಚಿಕ್ಕಪ್ಪನಿಗೂ ಭೀಷ್ಮರು ಮದುವೆ ಮಾಡಿಸಿದರು.

*******
ಅಷ್ಟರಲ್ಲಿ ತಮ್ಮನಾದ ದುಶ್ಯಾಸನನು ಎದ್ದು ಅವಳ ಸೆರಗನ್ನು ಜಗ್ಗಿದ. ಅದು ಬೇಡವಿತ್ತು. ಆದರೂ ಅವನು ಒಂದಿಷ್ಟು ದುಡುಕಿಬಿಟ್ಟ. ‘ದ್ರೌಪದಿಯ ವಸ್ತ್ರಾಪಹಾರ’ ಎಂದು ವರ್ಣಿಸಿ ಹೇಳುವಷ್ಟು ಏನೂ ನಡೆಯಲಿಲ್ಲ. ಆದರೂ ಅಷ್ಟೇ ಆದರೂ ನಮ್ಮದು ಅಪರಾಧವೆಂದೇ ಹೇಳಬಹುದು. ಪ್ರಾಮಾಣಿಕವಾಗಿ ಅದನ್ನು ಒಪ್ಪಿಕೊಳ್ಳಲೇಬೇಕು. ಆ ಅಪರಾಧಕ್ಕೆ ಅವಳ ದಿಟ್ಟತನವೂ ಒಂದು ಕಾರಣವಾಗಿ ಪರಿಣಮಿಸಿದೆ ಎಂಬುದನ್ನು ಸ್ಮರಿಸಿಕೊಳ್ಳಬೇಕು.
*******
ಕುರುಕ್ಷೇತ್ರದ ಯುದ್ಧದಲ್ಲಿ ಸತ್ತವರ ಬಂಧುಗಳು ಅತ್ತಿರಬಹುದು. ಗೆದ್ದವರಿಗೆ ರಾಜಪಟ್ಟವು ಸಿಕ್ಕಿರಬಹುದು. ಆದರೆ ಹುಟ್ಟಿ ಸಾಯುವವರೆಗೆ ಚೆನ್ನಾಗಿ ಬಾಳಿ ಬದುಕಿದವನು ನಾನು. ಅವರೂ ಬದುಕಿದರು. ಹೇಗೆ ಬಾಳಿದರೊ? ಅದನ್ನು ಇತಿಹಾಸ ಹೇಳಬೇಕು.

ಭೀಷ್ಮ
ನಮ್ಮ ತಂದೆ ಬಯಸಿದ್ದ ಆ ಹೆಣ್ಣು (ಯೋಜನಗಂಧಿ)ಅಪೂರ್ವವಾದ ತನ್ನ ತನುಗಂಧದಿಂದಲೇ ದಿವ್ಯ ಸಂಸ್ಕಾರದ ಪ್ರಭಾವವನ್ನು ವ್ಯಕ್ತಪಡಿಸುತ್ತಿರುವುದರಿಂದ ಮಹಾರಾಜ್ಞಿಯಾಗಲು ತಕ್ಕವಳೆಂದೇ ಚಕ್ರವರ್ತಿಗಳು ಮನಗಂಡಿರಬಹುದಾದ್ದರಿಂದ ಅಕುಲೀನತೆಯ ಪ್ರಶ್ನೆಗೆ ಅವಕಾಶವೆಲ್ಲಿ? ಈ ಮದುವೆಯು ಅಸಾಧುವಾದುದೇ ಆಗಿದ್ದರೆ, ನಮ್ಮ ತೀರ್ಥರೂಪರ ವಿಶೇಷವಾದ ಅಂತಃಶಕ್ತಿಯು ಹ್ರಾಸವಾಗಬೇಕಿತ್ತು. ಹಾಗೇನೂ ಆದಂತೆ ನನಗನಿಸುವುದಿಲ್ಲ. ‘ಸ್ವೇಚ್ಚಾಮರಣಿಯಾಗು’ ಎಂದು ನನ್ನನ್ನು ಹರಸಿ ಅನುಗ್ರಹಿಸಿದ್ದಾರೆ.

ಕರ್ಣ
‘ಕ್ಷತ್ರಿಯನಲ್ಲದ ಯಾರಿಗೂ ಇಂತಹ ಸಹಿಷ್ಣುತೆ ಬರಲಾರದು’ ಎಂದು ಹೇಳಿದ ಪರಶುರಾಮರು ಸಿಟ್ಟಿನಿಂದ ಶಾಪ ಕೊಟ್ಟರೂ, ಕ್ಷತ್ರಿಯನಿರಬೇಕು ಎಂದುದರಿಂದ ಕೌತುಕಪ್ರದವಾದ ಸಮಾಧಾನವೇ ಆಯಿತು.
ಪರಶುರಾಮ-ದ್ರೋಣ ಹಾಗೂ ಅರಣ್ಯ ಮಧ್ಯದಲ್ಲಿ ಶಾಪವಿತ್ತ ಬ್ರಾಹ್ಮಣ, ಹೀಗೆ ಮೂರು ಮಂದಿ ಬ್ರಾಹ್ಮಣರೇ ನನ್ನ ಉತ್ಕರ್ಷಕ್ಕೆ ಮಾರಕರಾದರು...ಆ ಜಾತಿಯ ಮೇಲೆ ಮಮಗೆ ತಿರಸ್ಕಾರವಿದ್ದರೂ ಅವರನ್ನು ಕರೆಕರೆದು ದಾನ ಕೊಡುತ್ತಿದ್ದೆ. ದಾನ ಮಾಡಿದ ಪುಣ್ಯಕ್ಕಾಗಿಯೂ ಅಲ್ಲ, ಆ ಕೊಳ್ಳುವವರ ಮೇಲಿನ ಅನುಕಂಪದಿಂದಲೂ ಅಲ್ಲ. ಆ ಬ್ರಾಹ್ಮಣರೆಂಬವರು ಬಂದು ನಿತ್ಯ ನನ್ನ ಮುಂದೆ ಕೈಚಾಚಲಿ ಎಂದು !
******
ಪಾಂಡವ ಪಕ್ಷವನ್ನು ಸೇರಬೇಕೆಂಬ ಕುಂತಿ-ಕೃಷ್ಣರ ಒತ್ತಾಯದ ಬಗ್ಗೆ ಸೀತಾರಾಮಯ್ಯರ ಕರ್ಣ ಯೋಚಿಸುವ ಬಗೆ ಹೀಗೆ -
ಶ್ರೀಕೃಷ್ಣನೆಂದಂತೆ ನಾನು ಮನಸ್ಸು ಮಾಡಿದ್ದರೆ ಈ ಯುದ್ಧವನ್ನು ನಿಲ್ಲಿಸಬಹುದಿತ್ತೋ ಏನೋ. ಅದಕ್ಕಾಗಿ ನಾನು ನನ್ನ ಸ್ವಾಮಿಗೆ ದ್ರೋಹ ಮಾಡಬೇಕಾಗಿತ್ತು. ನಮ್ಮ ನಮ್ಮ ಪ್ರತಿಜ್ಞೆಗಳೆಲ್ಲ ಹಾರಿಹೋಗಿ ದುರ್ಯಶಕ್ಕೇ ತುತ್ತಾಗಬೇಕಾಗಿತ್ತು. ಹಾಗೆ ಅದೆಲ್ಲವನ್ನೂ ಸಹಿಸಿಕೊಂಡು ಮೃತಪ್ರಾಯವಾಗಿ ಬದುಕುವುದಕ್ಕಿಂತ ಯುದ್ಧ ಮಾಡಿಯೇ ಸತ್ತರೇನಂತೆ? ಲೋಕದ ಕ್ಷೇಮಕ್ಕಾಗಿ ಎಂದು ಪ್ರತಿಜ್ಞೆಯನ್ನೆಲ್ಲಾ ಮೂಲೆಗೆ ತಳ್ಳಿ ಅಕೀರ್ತಿಯನ್ನು ಹೊತ್ತು ತನ್ನತನವನ್ನು ಕಳೆದುಕೊಳ್ಳುವುದಾದರೆ ಹಿಂದೆಯೇ ನಮ್ಮ ಹಿರಿಯರು ಆ ಕೆಲಸವನ್ನು ಮಾಡಬಹುದಾಗಿತ್ತು ! ಮಹಾರಾಜ್ಞಿ ಸತ್ಯವತೀದೇವಿಯವರೇ ಅಂದು ಭೀಷ್ಮರಿಗೆ ಹೇಳಿದ್ದರಂತೆ....‘ಮದುವೆಯಾಗು , ಸಿಂಹಾಸನವನ್ನೇರು, ವಂಶವನ್ನು ಬೆಳೆಸು, ಸಾಮ್ರಾಜ್ಯವನ್ನಾಳು..’ ಎಂದು. ಭೀಷ್ಮರು ಒಪ್ಪಲಿಲ್ಲ. ಮತ್ತೆ ‘..ನಿನ್ನ ತಮ್ಮನ ಕ್ಷೇತ್ರಗಳಲ್ಲಿ ನಿಯೋಗದ ಮೂಲಕ ಸಂತತಿಯನ್ನಾದರೂ ಕರುಣಿಸು’ ಎಂದರಂತೆ. ಅದಕ್ಕೂ ಭೀಷ್ಮರು ಒಡಂಬಡಲಿಲ್ಲ. ಕೊನೆಯ ಘಳಿಗೆಯಲ್ಲಾದರೂ ಭೀಷ್ಮರು ಪಟ್ಟವೇರಿದ್ದರೆ ಯುದ್ಧವು ತಪ್ಪುತ್ತಿತ್ತೋ ಏನೋ? ಹಾಗೆಂದು ಅವರಿಗೆ ಯಾಕೆ ಹೇಳಲಿಲ್ಲ? ಹೇಳಿದರೂ ಅವರು ಕೇಳುತ್ತಿರಲಿಲ್ಲವೆಂದೇ ಹೇಳಲಿಲ್ಲವೋ ಏನೋ? ಮತ್ತೆ ನಾನು ಕೇಳಿಯೇನೆಂದು ನಿರೀಕ್ಷಿಸಿದ್ದು ಯಾಕೆ? ಅಂತಹ ನಿರೀಕ್ಷೆಯೇನೂ ಇದ್ದಿರಲಾರದು. ಆದರೂ ಪ್ರಲೋಭನವನ್ನು ಒಡ್ಡಿದ್ದು ಯಾಕೆ? ಕಾನೀನನಾಗಿ ಹುಟ್ಟಿದವನಿಗೆ ಅವನ ತಾಯಿಯ ಗಂಡನ ಸೊತ್ತಿನಲ್ಲಿ ಹಕ್ಕು ಬರುತ್ತದಾದರೆ ಹಸ್ತಿನಾವತಿಗೆ ವೇದವ್ಯಾಸರೇ ಹಕ್ಕುದಾರರಾಗುವುದಿಲ್ಲವೆ? ...ಇದನ್ನೆಲ್ಲ ತಿಳಿದೂ ತಿಳಿದು ಶ್ರೀಕೃಷ್ಣನು ನನಗೆ ಇಂತಹಾ ಉಪದೇಶವನ್ನು ಮಾಡಿದ ಯಾಕೆ? ಪಾಂಡವರು ನನ್ನ ತಮ್ಮಂದಿರೆಂದು ನನಗೆ ತಿಳಿದ ಮೇಲೆ ಅವರ ಕುರಿತಾಗಿ ಹೆಚ್ಚಿನ ವಾತ್ಸಲ್ಯ ಉಂಟಾಗದಿದ್ದರೂ ದ್ವೇಷವು ಸಾಕಷ್ಟು ಕಡಿಮೆಯಾದೀತೆಂದು ಅವನು ಭಾವಿಸಿರಬಹುದಾದುದು ಸಹಜವೇ ಆಗಿತ್ತು. ಪಾಂಡವರ ಪಕ್ಷಕ್ಕೆ ನಾನು ಹೋಗುವವನಲ್ಲವಾದರೂ ಇದ್ದ ಕೌರವ ಪಕ್ಷದ ಬಲವು ತಕ್ಕಷ್ಟು ದುರ್ಬಲಗೊಳ್ಳಬಹುದೆಂದು ಅವನೆಣಿಸಿರಬಹುದಾದುದು ನಿಜವೇ ಆಗಿತ್ತು.
*******
ಚಕ್ರವ್ಯೂಹದಲ್ಲಿ ಅಭಿಮನ್ಯುವಿನ ಕೈಯನ್ನು ಹಿಂದಿನಿಂದ ಹೋಗಿ ಕತ್ತರಿಸು ಎಂದು ಸೇನಾಪತಿ ದ್ರೋಣರು ಕರ್ಣನಿಗೆ ಆದೇಶಿಸಿದ ಬಗ್ಗೆ -
ಆ ಕೆಲಸ ಆಗಲೇಬೇಕಿದ್ದರೆ ಯಾರೂ ಮಾಡಬಹುದಾಗಿತ್ತು. ಆದರೂ ಆಜ್ಞೆಯಾದದ್ದು ನನಗೆ. ಯಾಕೆ? ಎಂಥಾ ನಿಕೃಷ್ಟವಾದ ಕೆಲಸವನ್ನಾದರೂ ಉತ್ತಮ ವರ್ಣೀಯರೆಂಬವರು ಮಾಡಿಸುತ್ತಾರೆ. ಆದರೆ ಮಾಡುವುದಕ್ಕೆ ಕೀಳು ವರ್ಣೀಯನೊಬ್ಬ ಬೇಕು, ಅಷ್ಟೆ. ಅಲ್ಲಿ ನಡೆದದ್ದೂ ಹಾಗೆಯೇ ಇರಬೇಕು.
ಅರ್ಜುನನ್ನು ಕೊಲ್ಲಲೆಂದೇ ಕರ್ಣನು ತೆಗೆದಿಟ್ಟಿದ್ದ ಇಂದ್ರದತ್ತವಾದ ಮಹಾಶಕ್ತಿಯನ್ನು ಘಟೋತ್ಕಚನನ್ನು ಕೊಲ್ಲಲು ಪ್ರಯೋಗಿಸಬೇಕೆಂದು ಕೌರವನ ಮೂಲಕ ಕರ್ಣನಿಗೆ ಹೇಳಿಸಿದರು ದ್ರೋಣಾಚಾರ್ಯರಿಗೆ ಕರ್ಣನ ಪ್ರತಿಕ್ರಿಯೆ - ಭೀಮಾರ್ಜುನರ ಮಕ್ಕಳಿಬ್ಬರು ಸತ್ತರು. ಅರ್ಜುನನ್ನು ಬದುಕಿಸಿದರು.
( ೧೬೬ ಪುಟಗಳ ಈ ಪುಸ್ತಕದ ಬೆಲೆ ರೂ.೧೨೦. ಪ್ರತಿಗಳು ಬೇಕಿದ್ದರೆ ಪ್ರಕಾಶಕರ ಸಂಪರ್ಕಕ್ಕೆ - ೯೪೪೮೨೩೯೫೧೯)

Read more...

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP