April 04, 2012

ಸೀತೆ ಕಂಡ ರಾಮನವನಮಿ !


ಜಿಂಕೆಗೆ ಆಸೆಪಟ್ಟು ಮೋಸಹೋದ ಸೀತೆ, ರಾಮನ ನಿಜಭಕ್ತ ಹನುಮಂತನೇ ಕಣ್ಣೆದುರು ಬಂದರೂ ನಂಬುವುದು ಹೇಗೆ? ಮಾಯಾಜಿಂಕೆಯನ್ನು ಬಯಸಿದ ಸೀತೆಯನ್ನು ಅಗ್ನಿಪರೀಕ್ಷೆಗೊಡ್ಡದೆ ರಾಮನಾದರೂ ಸ್ವೀಕರಿಸುವುದು ಹೇಗೆ? ಚಿನ್ನವಾದರೂ ಪುಟಕ್ಕಿಡಬೇಕು ಅಂತ ರಾಮನಿಗೆ ಅನ್ನಿಸಿತಾ? ಸೀತೆಯ ಬದುಕಿನಲ್ಲಿ ಮೂರು ಮಹತ್ವದ ಘಟ್ಟಗಳು- ಮಾಯಾಜಿಂಕೆಯನ್ನು ಬಯಸಿದ್ದು, ಹನುಮಂತನಿಂದ ರಾಮನ ಉಂಗುರ ಸ್ವೀಕರಿಸಿ ತನ್ನ ಚೂಡಾಮಣಿಯನ್ನು ಕೊಟ್ಟದ್ದು ಮತ್ತು ಅಯೋಧ್ಯೆಯಲ್ಲಿ ಅಗ್ನಿಪರೀಕ್ಷೆಗೆ ಒಳಗಾದದ್ದು.
ಇವುಗಳಲ್ಲಿ ಈ ಉಂಗುರ ಪ್ರಕರಣ, ಯಕ್ಷಗಾನ ತಾಳಮದ್ದಳೆಯಲ್ಲಿ ’ಚೂಡಾಮಣಿ’ ಪ್ರಸಂಗವೆಂದೇ ಪ್ರಸಿದ್ಧ. ನಾಲ್ಕು ಜನ ಚಕ್ಕಮಕ್ಕಳ ಹಾಕಿ ಕುಳಿತರೆ, ಭಾಗವತರು- ಚೆಂಡೆ, ಮದ್ದಳೆ ವಾದಕರು ಇದ್ದರೆ ಸಾಕು, ತಾಳಮದ್ದಳೆ ಶುರು. ಈ ರಾಮನವಮಿಗೆ ಅಂತಹುದೊಂದು ತಾಳಮದ್ದಳೆ. ರಾತ್ರಿಯ ಕಾಲ. ಸೀತೆ ಅಶೋಕವನದಲ್ಲಿ ಕಣ್ಣೀರುಗರೆಯುತ್ತಾ ಕುಳಿತಿದ್ದಾಳೆ. ಸುತ್ತ ರಾಕ್ಷಸ ಸ್ತ್ರೀಯರಿದ್ದಾರೆ. ರಾವಣ ತನ್ನ ಸಕಲ ಸಂಪತ್ತನ್ನೂ ಮೆರೆಸುತ್ತಾ, ಅಲ್ಲಿಗೆ ಪರಿವಾರ ಸಹಿತ ಬಂದಿದ್ದಾನೆ. ಶೃಂಗಾರ ರಾವಣನಾಗಿದ್ದಾನೆ. ತನ್ನ ಮದುವೆಯಾಗೆಂದು ಪರಿಪರಿಯಾಗಿ ಸೀತೆಯನ್ನು ಬೇಡಿಕೊಂಡಿದ್ದಾನೆ. ಆದರೆ ಅವಳು ಹುಲ್ಲುಕಡ್ಡಿಯೊಂದನ್ನು ಎದುರಿಗಿಟ್ಟು ಅದನ್ನೇ ದಿಟ್ಟಿಸಿ ಮಾತನಾಡುತ್ತಾ ರಾವಣನನ್ನು ಜರಿದಿದ್ದಾಳೆ. ಕೋಪಗೊಂಡ ರಾವಣ ಚಂದ್ರಹಾಸ ಖಡ್ಗವನ್ನೆತ್ತಿ ಕಡಿಯಲು ಮುಂದಾದರೆ, ಪಟ್ಟದರಸಿ ಮಂಡೋದರಿ ತಡೆದಿದ್ದಾಳೆ. ಸೀತೆಗೆ ಯೋಚಿಸಲು ಎರಡು ತಿಂಗಳ ಗಡುವು ನೀಡಿ ಹೋಗಿದ್ದಾನೆ ದಶಕಂಠ. ಮರದ ಮೇಲೆ ಕುಳಿತು ಇದನ್ನೆಲ್ಲ ನೋಡುತ್ತಿದ್ದ ಹನುಮಂತ, ರಾಮಕತೆಯನ್ನು ಹೇಳುತ್ತ ಸೀತೆಯ ಎದುರು ಬರುತ್ತಾನೆ. ’ಹಾ ಸೀತಾ ಹಾ ಲಕ್ಷ್ಮಣಾ’ ಅಂತ ಕೇಳಿದ ಬಳಿಕ, ಸೀತೆ ರಾಮನ ದನಿಯನ್ನೇ ಕೇಳಿಲ್ಲ! ಅವನ ಯಾವ ವಾರ್ತೆಯೂ ಅವಳಿಗೆ ತಲುಪಿಲ್ಲ. ಪಾಯಸದಿಂದ ಜನಿಸಿದ ರಾಮನ ನಾಮವೇ ಈಗ ಸೀತೆಗೆ ಪಾಯಸ- ರಾಮ ನಾಮ ಪಾಯಸ. ಅಂತಹ ಸೀತೆಯ ಕಣ್ಣೆದುರು ಬಂದ ಹನುಮಂತ, ರಾಮ ನೀಡಿದ ಉಂಗುರವನ್ನು ಅವಳಿಗೆ ನೀಡುತ್ತಾನೆ. ಆ ನೆನಪಿನುಂಗುರ ಸೀತೆಯಲ್ಲಿ ಲಹರಿ ಎಬ್ಬಿಸಿದೆ.

’ನನ್ನ ಕೂಗು ಯೋಜನ ಯೋಜನ ದಾಟಿ ಕೊನೆಗೂ ನಿನಗೆ ಕೇಳಿಸಿತಾ? ಇದು ನನ್ನದೇ ದನಿ ಅಂತ ನಿನಗೆ ಅನಿಸಿತಾ?! ನನ್ನ ಬೊಗಸೆಯಲ್ಲೇ ಮೂಡಿ ಬಂದೆಯಾ ಪ್ರಭು ರಾಮಾ.. ನಿನ್ನನ್ನು ನನ್ನ ಕಣ್ಣುಗಳಿಗೆ ಒತ್ತಿಕೊಂಡಿದ್ದೇನೆ. ನನ್ನ ದೇವರು ಅಂದುಕೊಂಡಿರುವ ಈ ಉಂಗುರಕ್ಕೆ ನನ್ನ ಕಣ್ಣೀರಿನಿಂದಲೇ ಅಭಿಷೇಕ ಮಾಡುತ್ತೇನೆ. ಆ ದುಷ್ಟ ಹಿಡಿದೆಳೆದ ಈ ಕೈಗಳಿಂದ ಏನನ್ನಾದರೂ ತಿನ್ನಲು, ನನ್ನ ಮುಖವನ್ನೇ ಮುಟ್ಟಿಕೊಳ್ಳಲೂ ನಾನು ಹೇಸುತ್ತಿದ್ದಾಗ, ನೀನೇ ಬಂದು ನನ್ನ ಕೈಯೊಳಗೆ ಕುಳಿತೆಯಲ್ಲ! ಈ ಸುವರ್ಣ ಲಂಕೆ ನಿನ್ನೊಂದು ಚಿನ್ನದ ಉಂಗುರಕ್ಕೂ ಸಮವಲ್ಲ ರಾಮಾ.

ಮಿಥಿಲೆಯಲ್ಲಿ ನಡೆದ ಸ್ವಯಂಯವರದಲ್ಲಿ ಸೇರಿದ ರಾಜಮಹಾರಾಜರ ನಡುವೆ, ಶ್ರೀರಾಮಚಂದ್ರ ಶಿವಧನುಸ್ಸನ್ನು ಬಲಗೈಯಲ್ಲಿ ಎತ್ತಿ ಹಿಡಿದು ಎಡಗೈಯಲ್ಲಿ ಹೆದೆಯೇರಿಸುವಾಗ ನನಗೆ ಕಂಡ ಉಂಗುರ ಇದು. ಪಂಚವಟಿಯಲ್ಲಿ ರಕ್ಕಸರ ಅಟ್ಟಹಾಸಕ್ಕೆ ಬೆದರಿದ ನಾನು, ಇವರ ಕೈಯನ್ನು ಹಿಡಿದುಕೊಳ್ಳುತ್ತಿದ್ದಾಗ ಸಿಗುತ್ತಿದ್ದ ಉಂಗುರ ಇದು. ಆ ಶ್ರೀಕರದ ಉಂಗುರ. ನನ್ನ ಪ್ರಿಯಕರನ ಕರದ ಉಂಗುರ. ನೀನು ನಿಜವಾದ ಕರಸೇವಕ ಹನುಮಾ.


ತಾಯಿಗೆ ಮಗುವಿನ ಕೂಗು ಕರ್ಕಶ ಅಲ್ಲ, ಸಿಂಹದ ಮರಿಗೆ ಅಮ್ಮನ ಘರ್ಜನೆಯೂ ಕರ್ಕಶ ಅಲ್ಲ. ಆದರೆ ಸಂಬಂಧಗಳು ಹಳಸಿಹೋದಾಗ ಉಪದೇಶವೂ ಕರ್ಕಶವಾಗಿ ಕೇಳುತ್ತದೆ. ರಾಮನ ಮಂಜುಳ ಮಾತುಗಳನ್ನೇ ಕೇಳಿದ ನಾನು, ಹತ್ತು ಬಾಯಿಗಳಲ್ಲೂ ಹೊಲಸು ಮಾತಾಡುವ ಈ ಧೂರ್ತನ ಕರ್ಣ ಕರ್ಕಶ ಮಾತುಗಳನ್ನು ಹೇಗೆ ಸಹಿಸಿಕೊಳ್ಳಲಿ? ಸಾಮವೇದವನ್ನೇ ಹಾಡಿ ಶಿವನನ್ನು ಮೆಚ್ಚಿಸಿದವನು ಆ ರಾಕ್ಷಸ ಅಂತ ಹೇಗೆ ನಂಬಲಿ? ಆದರೆ ಆವತ್ತು ನಾನಾಡಿದ ಮಾತುಗಳು, ಆ ಲಕ್ಷ್ಮಣನಿಗೆ ಹೇಗೆ ಕರ್ಕಶವಾಗಿ ಕೇಳಿರಬಹುದು ಅಂತ ಈಗ ನನಗೆ ಅರ್ಥವಾಯಿತು. ಪ್ರಿಯ ಮೈದುನ ಲಕ್ಷ್ಮಣ ಎಳೆದ ರೇಖೆಗಳನ್ನೇ ದಾಟಿದ ನಾನು, ಇಂದು ಈ ಧೂರ್ತ ಎಲ್ಲಿ ಗೆರೆ ದಾಟಿ ಬಿಡುತ್ತಾನೋ ಅನ್ನುವ ಭಯದಲ್ಲೇ ಇಬ್ಬರ ಮಧ್ಯೆ ಹುಲ್ಲುಕಡ್ಡಿ ಇಟ್ಟದ್ದು. ಆಗ ನಾನು ಲಕ್ಷ್ಮಣನನ್ನು ನೆನಪಿಸಿಕೊಂಡಿದ್ದೆ ಹನುಮಾ. ರಾಕ್ಷಸನಾದ ರಾವಣ ನನಗೆ ತೃಣಸಮಾನ ಅಂದುಕೊಂಡೆ. ಜತೆಗೆ ಈ ಲಂಕೆಯಲ್ಲಿ ಒಂದು ಹುಲ್ಲುಕಡ್ಡಿಯಾದರೂ ನನಗೆ ಆಸರೆಯಾಗಬಾರದೇ ಅಂದುಕೊಂಡೆ. ಆ ರಕ್ಕಸನಿಗೂ ನಾನು ತೃಣಸಮಾನಳೇ. ಆದರೆ ಮನಸ್ಸಿನಲ್ಲೇ ವೃಣವಾಗಿರುವಾಗ, ತೃಣವಾದರೂ ಬೇಕು ಅನಿಸಿದರೆ ಬೇಕು. ಕೊಂದೇಬಿಡುತ್ತೇನೆಂದು ಖಡ್ಗವೆತ್ತಿದ. ಆಗ ಅವನನ್ನು ತಡೆದದ್ದು ಪಟ್ಟದ ರಾಣಿ ಮಂಡೋದರಿ. ನಾನೇನೂ ಭಯಪಟ್ಟಿರಲಿಲ್ಲ. ನಾನು ಮಂಡೋದರಿಯ ಹೊಟ್ಟೆಯನ್ನು ನೋಡುತ್ತಿದ್ದೆ. ಹೆತ್ತ ಕರುಳಲ್ಲವೆ ಅವಳದ್ದು? ಅವನು ಲಂಕಾರಾಜ್ಯದ ಅಧಿಪತಿಯಾದರೂ ತಿರುಕನಂತೆ ಬಂದ. ಹೆಂಡತಿ ಜತೆಗೇ ಇದ್ದರೂ ಪರನಾರಿಯ ಮೇಲೆ ಆಸೆಪಟ್ಟ. ಆವತ್ತು ನನ್ನಲ್ಲಿ ಬೇಡುವುದಕ್ಕೆ ಬಂದ, ಇವತ್ತು ಕಾಡುವುದಕ್ಕೆ ಬಂದ. ಆ ಪರಮ ಧೂರ್ತ ಮೂರು ಜನ್ಮ ಅಲ್ಲ, ಏಳು ಜನ್ಮವೆತ್ತಿ ಬಂದರೂ ನರಕವನ್ನೇ ಸೇರುವನಲ್ಲದೆ ವೈಕುಂಠವನ್ನಲ್ಲ!

ತನ್ನ ಗಂಡನ ಕ್ಷೇಮಸಮಾಚಾರವನ್ನೇ ಮತ್ತೊಬ್ಬರ ಬಳಿ ಕೇಳಿ ತಿಳಿಯಬೇಕಾದ ಪರಿಸ್ಥಿತಿ ಯಾವ ಹೆಣ್ಣಿಗೂ ಬರಬಾರದು ಹನುಮಾ. ನಾನು ಜತೆಗಿಲ್ಲದ ನನ್ನವರು ಹೇಗಿದ್ದಾರೆ? ಅವರು ಅಯೋಧ್ಯೆಯಿಂದ ಹೊರಟಾಗ, ಕಾನನವನ್ನು ಹೊಕ್ಕ ಸೂರ್ಯನ ಹಾಗಿದ್ದರು. ನನ್ನೊಂದಿಗೆ ಹುಣ್ಣಿಮೆಯ ಚಂದ್ರನಂತೆ ಶಾಂತವಾಗಿದ್ದರು. ಈಗ ಸೊರಗಿದ್ದಾರಾ? ಕೊರಗುತ್ತಾರಾ? ಒಬ್ಬರೇ ಇದ್ದಾಗ ಏನು ಮಾಡುತ್ತಾರೆ? ಅಯೋಧ್ಯೆಯನ್ನು ತೊರೆದದ್ದಕ್ಕೆ ಅವರಿಗೆ ಎಳ್ಳಷ್ಟೂ ಬೇಸರವಿರಲಿಲ್ಲ. ಆದರೆ ಅಪ್ಪ ದಶರಥ ಮಹಾರಾಜರ ಮರಣ ವಾರ್ತೆ ಕೇಳಿದಾಗ ಮಾತ್ರ ಅವರ ಮುಖ ನೋಡುವ ಹಾಗಿರಲಿಲ್ಲ. ಅವರಿಂದ ನಾನೂ ದೂರವಾದ ಬಳಿಕ ಹೇಗಿದ್ದರು? ಛೆ ನಿನಗೇನು ಗೊತ್ತು? ಆ ಲಕ್ಷ್ಮಣನಲ್ಲಿ ಕೇಳಬೇಕಿತ್ತು. ಹೇಗಿದ್ದಾನೆ ಅವನು? ತನ್ನ ಲಕ್ಷ್ಯವನ್ನೆಲ್ಲ ಅಣ್ಣನಲ್ಲೇ ಇಟ್ಟ ಲಕ್ಷ್ಮಣ, ನನ್ನ ಬಗ್ಗೆ ಏನಾದರೂ ಹೇಳಿದನಾ? ನನ್ನ ಬಗ್ಗೆ ನನ್ನವರು ಆಡಿದ ಮಾತುಗಳನ್ನು ಹೇಳಿದೆ, ಅವರ ಉಂಗುರವನ್ನು ಕೊಟ್ಟೆ, ಲಕ್ಷ್ಮಣ ಏನೂ ಹೇಳಲೇ ಇಲ್ವಾ? ಅಯೋಧ್ಯೆಯ ವಾರ್ತೆ ಏನಾದರೂ ಇದೆಯಾ? ಊರ್ಮಿಳೆ ಹೇಗಿದ್ದಾಳಂತೆ? ಲಕ್ಷ್ಮಣ ಹೇಗಿದ್ದಾನೆ ಹೇಳು. ಹನುಮಾ, ಲಕ್ಷ್ಮಣ ಹೇಗಿದ್ದಾನೆ ಹೇಳು.
ರಾಮ ಸೀತೆಯರ ಕತೆಯನ್ನು ನೀನು ಎಷ್ಟೊಂದು ಚೆಂದದಿಂದ, ಆನಂದದಿಂದ ಹೇಳಿದೆ. ರಾಮಕಥಾ ಶ್ರವಣದ ಪುಣ್ಯವನ್ನೂ ನನಗೆ ಕೊಟ್ಟೆ. ಋಷಿಮುನಿಗಳು ಅವರ ಬಗ್ಗೆ ಹೇಳಿದ್ದರು. ಶಬರಿ ಕೊಂಡಾಡಿದ್ದಳು. ಆದರೆ ರಾಮ-ಸೀತೆಯರ ಏಕಾಂತದ ಕ್ಷಣಗಳ ವಿವರವನ್ನೂ ರಾಮನ ಬಾಯಿಯಿಂದ ಆಲಿಸಿ, ಅದನ್ನು ನನಗೆ ಹೇಳಿದ್ದು ನೀನೊಬ್ಬನೇ. ಬಾಯಿ ಮುಚ್ಚು. ನಿನ್ನನ್ನು ರಾಮನೇ ಕಳುಹಿಸಿದ್ದೆಂದು ನನಗೆ ದೃಢವಾಯಿತು. ನಮ್ಮಿಬ್ಬರ ಏಕಾಂತದ ಕತೆಯನ್ನೇ ಇನ್ನೂ ಹೇಳಬೇಡವೋ!


ಆ ರಾಮನಿಗಾಗಿ ಎಷ್ಟೋ ಸಮಯದಿಂದ ಗುಹ ಕಾದಿದ್ದ, ಪ್ರತಿದಿನ ಹಣ್ಣುಗಳನ್ನು ಕೊಯ್ದಿಟ್ಟು ಮುದುಕಿ ಶಬರಿ ಕಾದಿದ್ದಳು, ನಾನು ಕಾಯುವುದರಲ್ಲಿ ಹೆಚ್ಚೇನು? ಎಲ್ಲೋ ಮಣ್ಣಿನಲ್ಲಿ ನನ್ನಪ್ಪನಿಗೆ ಸಿಕ್ಕಿದ ನಾನು ರಾಮನಿಗೆ ಸಿಕ್ಕೆ. ಆದರೆ ಅಯೋಧ್ಯೆಯ ಮಣ್ಣು ಅವರಿಗೆ ತಪ್ಪಿಹೋಯಿತು! ಈಗ ಅಯೋಧ್ಯೆಯೂ ಇಲ್ಲ, ನಾನೂ ಇಲ್ಲ. ಪುತ್ರಕಾಮೇಷ್ಠಿಯ ಮೂಲಕ ಅಯೋಧ್ಯೆ ಅವರನ್ನ ಪಡೆದುಕೊಂಡಿತು. ಸ್ವಯಂವರದ ಮೂಲಕ ಅವರು ನನ್ನನ್ನ ಪಡೆದುಕೊಂಡರು. ಆದರೀಗ ಅವರು ಅಯೋಧ್ಯೆಯಲ್ಲೂ ಇಲ್ಲ, ಅವರ ಜತೆಗೆ ನಾನೂ ಇಲ್ಲ! ಒಂದು ಮಳೆಗಾಲವೇ ಕಳೆಯಿತು. ಆ ಸಮುದ್ರಕ್ಕಿಂತ ಹೆಚ್ಚು ನನ್ನ ಮನಸ್ಸು ಉಕ್ಕೇರಿ ಇಳಿದದ್ದಾಯ್ತು. ಅವರಿಲ್ಲಿಗೆ ಬರುವುದಕ್ಕೆ ಇನ್ನೆಷ್ಟು ದಿನ ಬೇಕಾದೀತು? ತನ್ನ ಬಾಣದಿಂದ ಅವರು ಸಮುದ್ರವನ್ನು ಬತ್ತಿಸಿಯಾರು, ಗೊತ್ತು. ಆದರೆ ನನ್ನ ಕಣ್ಣೀರು?

’ಅಯ್ಯೋ ಶಿವನೇ..’ ಅಂತ ತಲೆ ಮುಟ್ಟಿಕೊಂಡರೆ ನನ್ನ ಕೈಗೆ ಸಿಗುವುದು ಈ ಚೂಡಾಮಣಿ. ತಗೋ ಈ ಚೂಡಾಮಣಿಯನ್ನು, ಆ ದುಷ್ಟನ ಕೈಗೆ ನನ್ನ ಕೇಶರಾಶಿ ಸಿಕ್ಕಾಗಲೂ ಉಳಿದುಕೊಂಡ ಈ ಮಣಿಯನ್ನು, ನನ್ನ ಕಣ್ಣೀರಿನಲ್ಲಿ ತೊಳೆದ ಚೂಡಾಮಣಿಯನ್ನು. ಅವರ ಪಾದಕ್ಕೆ ನನ್ನ ತಲೆಯನ್ನು ಚಾಚಿದ್ದೇನೆಂದು ತಿಳಿಯಲಿ. ಚೂಡಾಮಣಿಯೂ ಇಲ್ಲದ ನನ್ನ ಕೇಶರಾಶಿಯನ್ನು ಅವರು ಬಂದಾಗಲೇ ಮತ್ತೆ ಕಟ್ಟುತ್ತೇನೆ. ಇದನ್ನು ಅವರ ಪದತಲದಲ್ಲಿಡು. ಆಗ ಅವರ ಮಾತು-ಮುಖ ಹೇಗಿದ್ದೀತು?! ಮತ್ತೆ ಸಿಕ್ಕಾಗ ಹೇಳಬೇಕು ನೀನು’ -ಸೀತೆ ಕತ್ತಲಲ್ಲಿ ಕಣ್ಣು ನೆಟ್ಟಳು. ಆ ಕತ್ತಲಿನಲ್ಲೂ ಶ್ಯಾಮವರ್ಣದ ರಾಮ ಆಕೆಗೆ ಕಾಣುತ್ತಿದ್ದ.
kendasampige.com

Read more...

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP