December 26, 2008

ಹೆಂಗಿದ್ದ ಹೆಂಗಾದ ಗೊತ್ತಾ....?

ಕೋಟಿತೀರ್ಥಗಳಲ್ಲಿ ಮಿಂದೆದ್ದು ಬಂದಿರುವ ಈ ಕತೆಗಾರ ಕವಿ, ನೀಲಿಮಳೆಯಲ್ಲೂ ನೆನೆಯಬಲ್ಲ. ಶ್ರಾವಣದ ಮಧ್ಯಾಹ್ನದಲ್ಲೂ ಗೆಳೆಯರೊಡನೆ ಪೋಲಿ ಜೋಕುಗಳನ್ನು ಸಿಡಿಸಬಲ್ಲ. ರಂಗದೊಂದಿಷ್ಟು ದೂರವಿದ್ದರೂ ಎಲ್ಲರ ನೆನಪಿನಲ್ಲಿ ಉಳಿಯಬಲ್ಲ. ಅಂತಹ ಇಂದ್ರ ಸುಕುಮಾರನಿಗೆ ಈ ಭಾನುವಾರದ ಬೆಳಗ್ಗೆ (ಡಿ.೨೮) ಬೆಂಗಳೂರಿನಲ್ಲೊಂದು ಪುಸ್ತಕ ಮಜ್ಜನ. ಕಾರ್ಯಕ್ರಮದ ಸ್ವೀಟು 'ಒಂದು ಜಿಲೇಬಿ' ! ನಮ್ಮೆಲ್ಲರ ಕೈಯಳತೆಯ ದೂರದಲ್ಲಿಯೇ ಸಿಗುವ ಆತನಿಗೆ ಈ ಫೋಟೊ; 'ಚಂಪಕಾವತಿ' ಪ್ರೀತಿಯಿಂದ ಕಾದಿಟ್ಟ ಕಾಣಿಕೆ.  ಕೃಪೆ: ಪ್ರಜಾವಾಣಿ ದೀಪಾವಳಿ ವಿಶೇಷಾಂಕ -೧೯೮೨

Read more...

December 12, 2008

ಮಿಲಿಯಾಧೀಶನ ಸಂತೋಷ ಯಾವುದರಲ್ಲಿದೆ ಗೊತ್ತಾ?

ಸಿಂಗಾಪುರದ ಆಡಮ್ ಖೂ ೨೬ ವರ್ಷಕ್ಕೇ ಮಿಲಿಯಾಧೀಶನಾದವ . ಬೆಸ್ಟ್ ಸೆಲ್ಲರ್ ಎನಿಸಿದ ಏಳು ಪುಸ್ತಕಗಳ ಲೇಖಕ. ಶಿಕ್ಷಣ-ತರಬೇತಿ-ಕಾರ್ಯಕ್ರಮ ಆಯೋಜನೆ-ಜಾಹೀರಾತು ಕ್ಷೇತ್ರಗಳಲ್ಲಿ ಕೆಲಸ ಮಾಡುವ ಈತ, ವರ್ಷಕ್ಕೆ ೩೦ ಮಿಲಿಯನ್ ಡಾಲರ್ ವಹಿವಾಟಿನ 'ಆಡಮ್ ಖೂ ಲರ್ನಿಂಗ್ ಟೆಕ್ನಾಲಜೀಸ್ ಗ್ರೂಪ್ ಪ್ರೈವೇಟ್ ಲಿಮಿಟೆಡ್'ನ ಅಧ್ಯಕ್ಷ . ಹಣದ ಮೌಲ್ಯದ ಬಗೆಗಿನ ಆತನ ಬರೆಹವನ್ನು, ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ತಮ್ಮ ಬ್ಲಾಗ್‌ನಲ್ಲಿ ಖುಶಿಯಿಂದ ಅಂಟಿಸಿಕೊಂಡಿದ್ದರು. ಅದು ಈಗ ಕನ್ನಡದಲ್ಲಿ ಇಲ್ಲಿದೆ.

ಇತ್ತೀಚೆಗೆ ನಾನು, ಕೌಲಾಲಂಪುರಕ್ಕೆ ಹೋಗುವ ವಿಮಾನದಲ್ಲಿದ್ದಾಗ ಹತ್ತಿರ ಬಂದ ಒಬ್ಬ ಕಣ್‌ಕಣ್ ಬಿಟ್ಟು ಕೇಳಿದ - 'ನಿನ್ನಂಥ ಮಿಲಿಯಾಧೀಶ ಎಕಾನಮಿ ಕ್ಲಾಸ್*ನಲ್ಲಿ ಹೋಗೋದಾ?'(*ವಿಮಾನದಲ್ಲಿ ಕಡಿಮೆ ದರದ ವಿಭಾಗ) ತಕ್ಷಣ ಉತ್ತರಿಸಿದೆ- 'ಹಾಗಾಗಿಯೇ ನಾನೊಬ್ಬ ಮಿಲಿಯಾಧೀಶ !' ತುಂಬಾ ಜನ ಹೇಗೆ ಬ್ರೈನ್‌ವಾಶ್ ಮಾಡಿಸಿಕೊಂಡಿದ್ದಾರೆಂದರೆ, ಮಿಲಿಯಾಧೀಶರು ಬ್ರಾಂಡೆಡ್ ವಸ್ತುಗಳನ್ನೇ ಉಪಯೋಗಿಸಬೇಕು, ವಿಮಾನದಲ್ಲಿ ಪ್ರಥಮ ದರ್ಜೆಯಲ್ಲೇ ಪ್ರಯಾಣಿಸಬೇಕು ಅಂತೆಲ್ಲ. ಆದರೆ ಬಹಳಷ್ಟು ಜನ ಮಿಲಿಯಾಧೀಶರಾಗುವುದಿಲ್ಲ ಯಾಕೆಂದರೆ, ಹೆಚ್ಚು ಸಂಪಾದನೆಯಿದ್ದಾಗ ಹೆಚ್ಚು ಖರ್ಚು ಮಾಡುವುದೂ ಸಹಜ ಅಂತ ಅವರು ಭಾವಿಸುತ್ತಾರೆ ! ಅದು ಅವರನ್ನು ಮತ್ತೆ ಮೂಲೆಗೆ ತಳ್ಳುತ್ತದೆ.

ನಾನು ವೈಇಒ ಸಂಘಟನೆಗೆ ಸೇರಿಕೊಂಡಾಗ ( ೪೦ ವರ್ಷದ ಒಳಗಿದ್ದು , ಸ್ವಂತ ಉದ್ಯಮದಲ್ಲಿ ವರ್ಷಕ್ಕೆ ೧ ಮಿಲಿಯನ್ ಡಾಲರ್ ಸಂಪಾದಿಸುವವರ ಸಂಘಟನೆ), ಸ್ವಂತ ಬಲದಿಂದ ಬೆಳೆದವರೆಲ್ಲ ನನ್ನಂತೆಯೇ ಯೋಚಿಸುತ್ತಾರೆಂದು ಗೊತ್ತಾಯಿತು. ಅವರಲ್ಲಿ ವರ್ಷಕ್ಕೆ ನಿವ್ವಳ ೫ ಮಿಲಿಯನ್ ಡಾಲರ್ ಸಂಪಾದಿಸುವ ಹಲವರೂ, ಎಕಾನಮಿ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದರು, ಮರ್ಸಿಡಸ್, ಬಿಎಂಡಬ್ಲ್ಯು ಕಾರುಗಲ ಬದಲು ಟೊಯೊಟಾದಂತಹ ಸಾಮಾನ್ಯ ಕಾರುಗಳನ್ನು ಬಳಸುತ್ತಿದ್ದರು. ನಾನು ಗಮನಿಸಿದ್ದೇನೆಂದರೆ, ತಮ್ಮ ಸಂಪತ್ತಿಗಾಗಿ ತಾವೇ ಕೆಲಸ ಮಾಡದ ಜನ ಮಾತ್ರ ನಾಳೆಯೇ ಇಲ್ಲವೆಂಬಂತೆ ವೆಚ್ಚ ಮಾಡುತ್ತಿದ್ದರು. ಸ್ವಲ್ಪಮಟ್ಟಿಗೆ, ಸೊನ್ನೆಯಿಂದಲೇ ನೀವು ಎಲ್ಲವನ್ನೂ ಕಟ್ಟುವ ಅಗತ್ಯವಿಲ್ಲದಿದ್ದಾಗ, ಹಣದ ಮೌಲ್ಯ ನಿಮಗೆ ಅರ್ಥವಾಗುವುದಿಲ್ಲ. ಕುಟುಂಬದ ಸಂಪತ್ತು ಮೂರನೇ ತಲೆಮಾರಿಜವರೆಗೆ ಯಾಕೆ ಉಳಿಯುತ್ತಿಲ್ಲವೆಂಬುದಕ್ಕೆ ಇದೂ ಒಂದು ಕಾರಣ. ಥ್ಯಾಂಕ್ಯು ದೇವರೇ...ನನ್ನ ಶ್ರೀಮಂತ ಅಪ್ಪ, ಈ ಅಪಾಯಕಾರಿ ಸಾಧ್ಯತೆಯನ್ನು ಮುಂದಾಲೋಚಿಸಿಯೇ, ನನ್ನ ವ್ಯಾಪಾರಕ್ಕೆ ಒಂದು ಸೆಂಟ್ ಕೊಡುವುದಕ್ಕೂ ನಿರಾಕರಿಸಿದ.

ಸತ್ಯವಾದ್ದೆಂದರೆ, ಸ್ವಶಕ್ತಿಯಿಂದ ಬೆಳೆದ ಬಹುಪಾಲು ಮಿಲಿಯಾಧೀಶರು ಮಿತವ್ಯಯಿಗಳು. ಹಾಗಾಗಿ ಸಂಪತ್ತು ಸಂಗ್ರಹಿಸುವುದಕ್ಕೆ , ವೇಗವಾಗಿ ಅದನ್ನು ದ್ವಿಗುಣಗೊಳಿಸುವುದಕ್ಕೆ ಅವರಿಗೆ ಸಾಧ್ಯವಾಗುತ್ತದೆ. ಕಳೆದ ೭ ವರ್ಷಗಳಲ್ಲಿ, ಸಂಪಾದನೆಯ ಶೇ.೮೦ನ್ನು ನಾನು ಉಳಿಸಿದ್ದೇನೆ ! ಈಗ ಶೇ.೬೦ರಷ್ಟು. ಅಂದರೆ ಈಗ ಮನೆಯಲ್ಲಿ ಹೆಂಡತಿ, ಮಕ್ಕಳು, ನೆಂಟರು ಇದ್ದಾರೆ. ಆದರೆ ತಮ್ಮ ಸಂಪಾದನೆಯ ಶೇ.೧೦ಕ್ಕಿಂತ ಹೆಚ್ಚನ್ನು ಉಳಿಸುವವರೇ ಬಹಳ ಕಡಿಮೆ ಜನ. ನಾನು ಫಸ್ಟ್‌ಕ್ಲಾಸ್ ಟಿಕೆಟ್‌ನ್ನು , ೩೦೦ ಡಾಲರ್‌ಗಳ ಅಂಗಿಯನ್ನು ತಿರಸ್ಕರಿಸುವುದು ಯಾಕೆಂದರೆ , ಅದು ಹಣ ವ್ಯರ್ಥಗೊಳಿಸುವ ದಾರಿಯೆಂದು ತಿಳಿದಿರುವುದರಿಂದ. ಆದರೆ ಜೂಲಿಯಾ ಗೇಬ್ರಿಯಲ್‌ನಲ್ಲಿನ (ಶಿಕ್ಷಣ ಮತ್ತು ಸಂವಹನದ ಅಂಶಗಳನ್ನು ಕಲಿಸುವ ಪ್ರಸಿದ್ಧ ಸಂಸ್ಥೆ) ಭಾಷಣಕ್ಕಾಗಿ ಮತ್ತು ನಾಟಕಕ್ಕಾಗಿ ಎರಡು ವರ್ಷದ ಮಗಳನ್ನು ಕಳಿಸಲು ೧,೩೦೦ ಡಾಲರ್ ವ್ಯಯಿಸಲು ನಾನು ಎರಡು ಬಾರಿ ಯೋಚಿಸುವುದೇ ಇಲ್ಲ. ಕೆಲವರು ಕೇಳುತ್ತಾರೆ - 'ನೀನು ಎಂಜಾಯ್ ಮಾಡುವುದಿಲ್ಲ ಅಂತಾದರೆ ಅಷ್ಟೊಂದು ಹಣ ಮಾಡಿ ಏನು ಪ್ರಯೋಜನ?' ನಿಜ ಸಂಗತಿಯೆಂದರೆ, ಆಭರಣ-ಬ್ರಾಂಡೆಡ್ ಬಟ್ಟೆಗಳನ್ನು ಕೊಳ್ಳೋದರಲ್ಲಿ ಅಥವಾ ಪ್ರಥಮ ದರ್ಜೆಯಲ್ಲಿ ಪ್ರಯಾಣಿಸುವುದರಲ್ಲಿ ನನಗೆ ಸಂತೋಷ ಸಿಗುವುದಿಲ್ಲ. ಏನನ್ನಾದರೂ ಖರೀದಿಸಿದರೆ ಆ ಸಂತೋಷ ಸ್ವಲ್ಪ ಹೊತ್ತು ಮಾತ್ರ ಇರುತ್ತದೆ. ಮರುಕ್ಷಣ ಬೇಜಾರಾಗುತ್ತದೆ ಮತ್ತು ಸಂತೋಷಗೊಳಿಸುವ ಇನ್ನೊಂದನ್ನು ಖರೀದಿಸೋಣ ಅನ್ನಿಸುತ್ತದೆ !

ಇದರ ಹೊರತಾಗಿ, ನನ್ನನ್ನು ನಿಜವಾಗಿ ಸಂತೋಷಗೊಳಿಸುವುದೆಂದರೆ, ಮಕ್ಕಳು ನಗುವುದು ಮತ್ತು ಬೇಗನೆ ಕಲಿಯುವುದು ; ನನ್ನ ತರಬೇತಿದಾರರು ಪ್ರತಿವರ್ಷ ಹೆಚ್ಚೆಚ್ಚು ದೇಶಗಳಲ್ಲಿ ಹೆಚ್ಚೆಚ್ಚು ಜನರನ್ನು ತಲುಪುವುದು ; ನನ್ನ ಪುಸ್ತಕಗಳು ಹೇಗಿವೆ, ನನ್ನ ಸೆಮಿನಾರ್‌ಗಳು ಹೇಗೆ ಪರಿಣಾಮಕಾರಿಯಾಗಿ ಜನರ ಬದುಕಿಗೆ ಹೇಗೆ ಸ್ಫೂರ್ತಿ ಕೊಟ್ಟಿವೆ ಎಂದು ಬರುವ ಎಲ್ಲ ಇ-ಮೇಲ್‌ಗಳನ್ನು ಓದುವುದು -ನನಗೆ ಪರಮಾನಂದ. ಇಂಥಹವು, ಯಾವುದೋ ರೋಲೆಕ್ಸ್ ವಾಚ್ ನೀಡುವ ಸಂತೋಷಕ್ಕಿಂತ ಎಷ್ಟೋ ಹೆಚ್ಚು ಸಮಯ ಇವು ನನ್ನನ್ನು ಸಂತೋಷವಾಗಿಡುತ್ತವೆ . ಒಟ್ಟಾರೆ ನಾನು ಹೇಳುವುದು, ನಮಗೆ ಸಂತೋಷವಾಗಬೇಕಾದ್ದು ನಮ್ಮ ಬದುಕಿನ ಕೆಲಸಗಳನ್ನೇ ಮಾಡುವುದರಿಂದ. (ಪಾಠ ಮಾಡುವುದು, ಮನೆ ಕಟ್ಟುವುದು, ವ್ಯಾಪಾರ, ವಿನ್ಯಾಸ, ಸ್ಪರ್ಧೆಗಳಲ್ಲಿ ಗೆಲ್ಲುವುದು...) ಹಣ ಕೇವಲ ಉಪ ಉತ್ಪನ್ನ ಅಷ್ಟೆ. ನೀವು ಮಾಡುತ್ತಿರುವ ಕೆಲಸವನ್ನೇ ಇಷ್ಟಪಡದೆ, ಅದರಿಂದ ಬರುವ ಹಣದಿಂದ ಕೊಳ್ಳುವ ವಸ್ತುಗಳು ನೀಡುವ ಸಂತೋಷಕ್ಕೆ ಆಸೆಪಟ್ಟಿದ್ದರೆ .... ನೀವು ಅರ್ಥವಿಲ್ಲದ ಜೀವನ ಸಾಗಿಸುತ್ತಿದ್ದೀರೆಂದೇ ನಾನು ಭಾವಿಸುತ್ತೇನೆ.'

Read more...

December 07, 2008

ಬಟವಾಡೆಯಾಗದ ಪದ್ಯಗಳು

ಡೆಂಗೋಡ್ಲು ಶಂಕರ ಭಟ್ಟ ಪ್ರಶಸ್ತಿ, ತಿಪ್ಪೇರುದ್ರಸ್ವಾಮಿ ಕಾವ್ಯ ಪ್ರಶಸ್ತಿಗಳನ್ನು ಪಡೆದಿರುವ ಲಕ್ಕೂರು ಆನಂದರ ಮೂರನೇ ಕವನ ಸಂಕಲನ 'ಬಟವಾಡೆಯಾಗದ ರಸೀತಿ' ಮೊನ್ನೆ ಮೊನ್ನೆ ಬಿಡುಗಡೆಯಾಯಿತು. ಓದಬೇಕೆಂದು ಕೈಗೆತ್ತಿಕೊಂಡರೆ ಗಂಟಿಕ್ಕಿಕೊಂಡಿದೆ. ಒಂದೊಂದೆ ಎಳೆ ಹಿಡಿದು ಎಳೆಯುತ್ತಿದ್ದೇನೆ. ನಿಮಗೂ ಬೇಜಾರಾದರೆ ಕ್ಷಮೆಯಿರಲಿ.


'ದಲಿತ-ಬಂಡಾಯ ಕಾವ್ಯ ಮಾರ್ಗದ ಮೂರನೆಯ ತಲೆಮಾರಿಗೆ ಲಕ್ಕೂರು ಆನಂದ ಸೇರಿದವರು. ತಾಂತ್ರಿಕವಾಗಿ ಇವತ್ತಿನ ಕಾವ್ಯ ಮಾರ್ಗವನ್ನು ದಲಿತ-ಬಂಡಾಯವೆಂದು ಕರೆಯುತ್ತಿದ್ದಾರಾದರೂ ಸೂಕ್ಷ್ಮವಾಗಿ ಗಮನಿಸಿದರೆ ಮೂರೂ ತಲೆಮಾರುಗಳು ಬೇರೆ ಬೇರೆಯಾದ ಸ್ತರದಲ್ಲಿ ಅಭಿವ್ಯಕ್ತಿಯನ್ನು ರೂಪಿಸಿಕೊಂಡಿವೆ. ಮೊದಲನೆಯದಾಗಿ `ಶೂದ್ರ' ಎನ್ನಿಸಿಕೊಳ್ಳುವ ಸಕಲೆಂಟು ಜಾತಿಗಳ ಅನುಭವ, ಆಡುಮಾತು ಕಾವ್ಯದಲ್ಲಿ ಬಳಕೆಯಾಗಿರುವುದು ಮಾರ್ಗದ ಹೆಗ್ಗಳಿಕೆ. ಎರಡನೆಯದು ಬರುಬರುತ್ತಾ ಕೆಳವರ್ಗದ ಜಾತಿಭಾಷೆಗಳಿಗೆ ಸಾಣೆ ಹಿಡಿದು ಅಭಿವ್ಯಕ್ತಿ ಯೋಗ್ಯವಾಗಿ ಮಾಡಿದ ಅಗ್ಗಳಿಕೆ. `ಸತ್ಯ ಮತ್ತು ಸಂತೋಷಗಳ ಸಂಯೋಗವನ್ನುಂಟುಮಾಡುವ ಕಲೆಯೆ ಕಾವ್ಯ' ಎಂದು ಸ್ಯಾಮುಯಲ್ ಜಾನ್ಸನ್ ಹೇಳುತ್ತಾನೆ. ಭಾರತದ ಕಾವ್ಯ ಸಂದರ್ಭಕ್ಕೆ ಹೋಲಿಸಿಕೊಂಡರೆ ಅನತಿ ದೂರದಲ್ಲಿ ಅಭಯಾಂಗನೆಯಾಗಿ ಗೋಚರಿಸುತ್ತಿದ್ದ ಸತ್ಯ ಈಗ ಸನಿಹವೇ ಮೋಹಿನಿಯಾಗಿ ನರ್ತಿಸುತ್ತಿದ್ದಾಳೆ. ಕೆಲವರಿಗಷ್ಟೇ ದೊರಕುತ್ತಿದ್ದ ಸಂತೋಷ ಈಗ ಎಲ್ಲರ ಪಾಲಾಗಿದೆ.' ಮೂಡ್ನಾಕೂಡು ಚಿನ್ನಸ್ವಾಮಿಯವರ ಮುನ್ನುಡಿಯಲ್ಲಿರುವ ಇಂತಹ ಮಾತುಗಳನ್ನು ಓದಿಕೊಂಡು ಪದ್ಯಗಳ ಕಡೆ ಹೋದರೆ, ಓದುಗನಿಗೆ ಉಸಿರಾಡುವುದಕ್ಕೂ ಅವಕಾಶ ಕೊಡದಂತೆ ಶಬ್ದಾಡಂಬರದಲ್ಲಿ ಪದ್ಯಗಳು ಮೈಮರೆತಿರುವ ಪರಿ ನೋಡಿದರೆ ದಿಗಿಲಾಗುತ್ತದೆ.

ಉದಾಹರಣೆಗೆ 'ಉರಿವ ಸೆಳಕಿನ ದೀಪದುರಿತದ ಬೆಳಕ ಕಾವೆ 'ಎಂಬ ಸಾಲನ್ನು ಎತ್ತಿಕೊಂಡು ನೋಡಿ. ಉರಿ, ಸೆಳಕು, ದೀಪದ ಉರಿ, ಬೆಳಕು ಇಷ್ಟೂ ಒಟ್ಟಾಗಿ ಏನನ್ನು ಹೇಳುತ್ತಿವೆ? ದುರಿತ ಅನ್ನುವುದಕ್ಕೆ ಕಷ್ಟಕೋಟಲೆ ಅನ್ನುವ ಅರ್ಥ ಮಾಡಿಕೊಂಡರೂ, ಊಹೂಂ. ಇನ್ನು -ಮೌನ, ಏಕಾಂತ, ಬಯಲು, ಜೀವ, ಬೆರಗು, ಉಸಿರು- ಈ ಪದಗಳನ್ನು ಯಾವ ಪರಿ ಬಳಸಲಾಗಿದೆ ಅನ್ನುವುದಕ್ಕೆ 'ಏಕಾಂತ-ಮೌನ'ಗಳ ಹಲವು ಸಾಲುಗಳನ್ನು ಕತ್ತರಿಸಿ ಕೊಡುತ್ತಿದ್ದೇನೆ. ಇನ್ನೂ ಕೆಲವು ಉಳಿದುಕೊಂಡಿವೆ, ಪತ್ತೆಮಾಡಿ !

ಏಕಾಂತ - ತಾವ ತಡಿಕೆಯ ಏಕಾಂತದ ದಾರಿ ಕೊನೆಯಲ್ಲೊಂದಷ್ಟು / ತೆವಳಲೆತ್ನಿಸಿ ಉರುಳಿದ ಏಕಾಂತ ಶಬ್ದವೆ / ಏಕಾಂತ ಲೋಕಾಂತದ ಬಂಡೆ ಸಿಡಿದಂತೆ / ಕ್ಷಣಿಕವೆಂದರಿತರು ಏಕಾಂತದ ಸೆಳೆಮಿಂಚು / ನನ್ನ ನಿನ್ನ ನಡುವಿನ ಏಕಾಂತದ ಒಳಗುರಿಯುವ ದೀಪದ / ತಾವ ತಡಿಕೆಯ ಏಕಾಂತದ ಉಸಿರೆ /ಏಕಾಂತದ ಮೊಲೆ ಕೊನೆಯ ಹಸಿ ಹಾಲ ಕುಡಿದು /ದೀಪ ಸಾಲಿನ ನಡುವೆ ಏಕಾಂತ ಮರೆತವನು/ ಏಕಾಂಗಿತನ ಬೋರಲಾಗಿ ಬಿದ್ದಿದ್ದರೆ.

ಮೌನ - ಉರುಳಿದ ಏಕಾಂತ ಶಬ್ದಗಳಡಿಯಲ್ಲಿ ತೆವಳುವ ಮೌನವೆ / ಅವಳ ತಣ್ಣನೆಯ ಕೋರಿಕೆಯ ಮೌನ ಹಲುಬುತ್ತದೆ / ಕೊಲ್ಲುವ ಮೌನಗಳ ಹಿಂದೆ ಕಾಡುವ ಶಬ್ದಗಳು / ಕಿಡಕಿಯಂಚಲ್ಲಿ ಕಾದು ಕುಳಿತ ಮೌನ / ಮೌನ ಕುಟೀರದಲ್ಲಿ / ಇರುಳಾದಂತೆ ಮೌನಗಳದೆ ತೆವಲು / ಸದ್ದು -ಸದ್ದಿನ ಆಚೆ ಬರೀ ಮೌನ ಸಾಲು / ನೀರವತೆ ಮೌನದ ಕಣ್ಣುಗಳಿಂದ ಹುಡುಗಿಯೊಬ್ಬಳು / ಬಿಚ್ಚಿದ ಮಾತಿಗೆ ಬಚ್ಚಿಟ್ಟುಕೊಂಡಿವೆ ಮೌನಗಳು / ಸುಡುವ ಮೌನದ ಸದ್ದು ಎದೆಯ ಒಳಗೆ / ಕೊಲ್ಲುವ ಮೌನಗಳ ಹಿಂದೆ ಕಾಡುವ ಕ್ಷಣಗಳು / ನಮ್ಮಿಬ್ಬರ ನಡುವೆ ಮೌನದ ಬೀಜವನ್ನಿಟ್ಟು / ಜೀವಗರುವಿನ ಹಾಡು ಮೌನಗಂಧಿಯ ಹೊತ್ತಲ್ಲಿ / ನೋಡುತ್ತೇನೆ ನಿನ್ನೆಲ್ಲ ಮೌನವನ್ನು ಮೆತ್ತಿಕೊಂಡು / ಸೋತ ಮಾತಿನಡಿಯ ಮೌನದಂತೆ / ದಿನದ ಚಣಗಳಿಗೆಲ್ಲ ಏಕಾಂತದ ಮೌನ ಸುತ್ತು / ಮೌನ ಬಟ್ಟಲಿನ ಎದೆಯಲ್ಲಿ ಹಾಗೆ ಉಳಿದುಹೋಗಿದೆ / ಮೌನಗಳ ಜಾಗರಣೆ / ಗಾಢ ಮೌನವೊಂದು ಸುಮ್ಮನೆ ನರಳುತ್ತಿದೆ . ಇನ್ನೂ ಕೆಲವು ಉಸಿರಿನ ಸ್ಯಾಂಪಲ್ಗಳು!- ಉಸಿರು ಕುಡಿಯೊಡೆದಿಲ್ಲ /ಭವದುಸಿರು ಅರಳಿದಂತೆ/ಉಸಿರ ಹೊಕ್ಕುಳ ನಾಳದಲಿ/ಏಕಾಂತದ ಉಸಿರೆ.

ಇಲ್ಲಿರುವ ೩೯ ಕವನಗಳಲ್ಲಿ ಮೌನ-ಏಕಾಂತಗಳು ಇಷ್ಟು ಬಾರಿ ಕಾಡುತ್ತವೆಂದರೆ ಇದು 'ಚಿಂತಿಸಬೇಕಾದ ವಿಷಯ'. ಆದರೆ ಮುನ್ನುಡಿಕಾರರು ನಂತರ ಸ್ವಲ್ಪ ಎಚ್ಚರಗೊಂಡಿದ್ದನ್ನೂ ಹೇಳಬೇಕು- 'ಕಾವ್ಯದ ಭಾಷೆ ಮೇಲ್ನೋಟಕ್ಕೆ ಸರಳವಾಗಿ ಕಂಡರೂ ರೂಪಕಗಳ ನಿರ್ಮಾಣದಲ್ಲಿ ಅವು ಸಂಕೀರ್ಣಗೊಳ್ಳುತ್ತ ಹೋಗುತ್ತವೆ. ಆದರೆ ಅವುಗಳು ಸ್ಪಷ್ಟತೆಯನ್ನು ಪಡೆದುಕೊಳ್ಳದಿದ್ದರೆ ಭಾಷೆಯೂ ಸೋಲುತ್ತದೆ, ಕವಿಯೂ ಸೋಲುತ್ತಾನೆ. ಇಲ್ಲಿನ ಬಹುತೇಕ ಕವಿತೆಗಳಲ್ಲಿ ಕವಿ ಯಶಸ್ಸನ್ನು ಸಾಧಿಸಿದ್ದಾರೆ ಎಂಬುದು ನನ್ನ ಅಭಿಪ್ರಾಯ' ಎನ್ನುತ್ತಾರೆ. ಕವಿ ಗೆದ್ದು ಓದುಗ ಸೋಲುವುದು ಅಂದರೆ ಹೀಗೆಯೇ ಇರಬಹುದೆ?! ಅವರು ಮುಂದುವರಿಸಿ- 'ಭಾವಗಂಧದ ತೇರ ಮುಡಿಗೆ ಭಗದ ಸಾಲಿನ ಬೆರಗು/ಹೊಳೆಸಾಲ ಮೇಲಿನ ಚಿತ್ತಾರ ಸಾಲಿನ ನೆರಳಿನೆದೆ ಬಗೆದು/ಉಸಿರ ಮಾಲೆಯ ಬಿಗಿದು ಕಟ್ಟುತ್ತ ' ಎಂಬಂಥ ಸಾಲುಗಳು ಇನ್ನಷ್ಟು ಸ್ಪಷ್ಟತೆ ಬಯಸುತ್ತವೆ ' ಅಂದಿದ್ದಾರೆ. ಥ್ಯಾಂಕ್ಯು . ಹಾಗಂತ ಎಲ್ಲಾ ಪದ್ಯಗಳೂ ಕೆಟ್ಟು ಹೋಗಿವೆ ಅಂತಲ್ಲ. ಆದರೆ ಇರುವ ಕೆಲವು ಒಳ್ಳೆಯ ಪದ್ಯಗಳ ಪ್ರವೇಶಕ್ಕೂ ಅವಕಾಶವೇ ಆಗದಂತೆ ಪದಪುಂಜಗಳು ಕೋಟೆ ಕಟ್ಟಿ ಕುಳಿತಿವೆ. ತಿರುತಿರುಗಿಸಿದರೂ ತೆಗೆಯಲಾಗದ ತುಕ್ಕು ಹಿಡಿದ ಬೀಗದಂತೆ, ಕಗ್ಗಂಟಾಗಿರುವ ನೂಲಿನಂತಿರುವ ಕವಿತೆಗಳಿವು. ಓದುಗರಿಗೆ ಅರ್ಥವಾಗುವಂತೆಯೋ, ಅರ್ಥವಾಗದಿದ್ದರೂ ಅನುಭವಿಸಿ ಸುಖಿಸುವಂತೆಯೋ ಪದ್ಯಗಳಿದ್ದರೆ, ನನ್ನಂಥವರಿಗೆ ತುಂಬ ಉಪಕಾರವಾಗುತ್ತದೆ.

ಬೆನ್ನುಡಿಯಲ್ಲಿ ಜೋಗಿಯವರು ಛಲೋ ಬರೆದಿದ್ದನ್ನೂ ನೀವು ಪೂರ್ತಿಯಾಗಿ ಓದಬೇಕು -'ಕಾವ್ಯವೆಂದರೆ ಓರೆಯಾಗಿ ತೆರೆದಿಟ್ಟ ಬಾಗಿಲು' ಎಂದು ನಂಬಿರುವ ಲಕ್ಕೂರು ಆನಂದ ಬಯಲ ಕವಿ. ತನ್ನಿರವಿನ ಕಟ್ಟೆಚ್ಚರ ಮತ್ತು ಭವಿಷ್ಯದ ಕುರಿತು ತುಂಬು ಭರವಸೆ ಇಟ್ಟುಕೊಂಡು ಕಾವ್ಯ ಕಟ್ಟುವ ಆನಂದ ನಿರಾಶಾವಾದಿಯಲ್ಲ. ಪ್ರತಿ ಕವಿತೆಯನ್ನು ಅದೇ ಮೊದಲ ಕವಿತೆ ಎಂಬ ಹುರುಪು ಹಾಗೂ ಅದೇ ಕೊನೆಯ ಕವಿತೆ ಎಂಬ ಶ್ರದ್ಧೆಯಿಂದ ನೇಯಬಲ್ಲವರು. ಎಲ್ಲೂ ವಾಚ್ಯಕ್ಕೆ ಜಾರಿಕೊಳ್ಳದೇ ನಿಬಿಡ ಅನುಭವಗಳನ್ನು ಸರಾಗವಾಗಿ ರೂಪಕವಾಗಿಸುವ ಕಾವ್ಯ ಮನೋಧರ್ಮ ಅವರಿಗೆ ದಕ್ಕಿದೆ. ನಿಗೂಢವನ್ನು ಬಗೆಯುವ, ಬೆರಗನ್ನು ಉಳಿಸಿಕೊಂಡೇ ವಾಸ್ತವಕ್ಕೆ ಎದುರಾಗುವ, ಕಂಡ ಕನಸಿಗೆಲ್ಲ ಬಣ್ಣ ಇರುವುದಿಲ್ಲ ಎನ್ನುವ ಪ್ರಜ್ಞಾಪೂರ್ವಕ ನಿಲುವಿನಿಂದ ಹುಟ್ಟಿದ ಲಕ್ಕೂರು ಆನಂದರ ಕವಿತೆಗಳಿಗೆ ತೋರುಗಾಣಿಕೆಯಿಲ್ಲ. ಅವು ಆಗಷ್ಟೇ ಅರಳಿದ ಕಣಗಿಲೆ ಹೂವಿನ ಹಾಗೆ ನಳನಳಿಸುತ್ತಾ, ಬದುಕಿನ ನಿರರ್ಥಕತೆಯನ್ನೂ ಒಂದೇ ಏಟಿಗೆ ಕಟ್ಟಿಕೊಡುತ್ತವೆ. 'ಕಣ್ಣ ಹರಿಸಿದಂತೆಲ್ಲ ಬೆರಗ ಬಯಲು, ಮೇಲೆ ನಭದಲ್ಲಿ ನಗುವ ನವಿಲು' ಎಂಬ ಅವರದೇ ಸಾಲು ಅವರ ಕಾವ್ಯದ ಸ್ವರೂಪಕ್ಕೆ ಹಿಡಿದ ಹೊಳೆಯುವ ಶ್ರೀಶೂಲವೂ ಹೌದು. -ಜೋಗಿ

ಇದು ಅಸಾಮಾನ್ಯ ಸಂಕಲನ ಅನ್ನುವುದರಲ್ಲಿ ಸಂದೇಹವೇನೂ ಇಲ್ಲ. ಯಾಕೆಂದರೆ ಇಲ್ಲಿ ಸಾಮಾನ್ಯವಾದದ್ದು ಯಾವುದೂ ಇಲ್ಲ. 'ಸಾವ ಹೇರುವ ದಿವ್ಯಮಾನವ ಬ್ರಹ್ಮಕಮಲಗಳು', 'ಯಾನ ಮರೆತು ನೊಗವರಿದ ಬಂಡಿಯ ಚಕ್ರಪಾಡು', ಋಣದ ಪಲ್ಲಂಗ, ಕುಂಡಲಿಯ ಕೊನರು, ನೆಲದ ಬಯಲು, ಮುಖದ ಮೈಮೇಲೆ ಕುಣಿಯುತ್ತಿರುವ ಕಡು ಕತ್ತಲು, ಜೀವಗರುವಿನ ಹಾಡು, ಕಳವಳದ ಬೊಗಸೆ, ಕಾಲದೊಗಲಿನ ತುಂಬ ಬರೀ ಬಿಕ್ಕಳಿಕೆಗಳ ಗುರುತು, ತುಂಬಿದಲೆಗಳು, ಉಸಿರ ಕಣ್ಣು, ಕಾವಿನ ಸೆಳಕು, ಮುಳ್ಳಿನುಂಗುರದ ಕಣ್ಣು, ...ಹೀಗೆ ಅರ್ಥವಿಲ್ಲದ ವಿಚಿತ್ರಪದ ಜೋಡಣೆಯೇ ಕವಿತೆಯೆ? ಇಂತಹ ಪದಪುಂಜಗಳ ಸಾಲುಗಳೇ ಅರ್ಥವಾಗದೆ, ಮನಸ್ಸು ಮುಟ್ಟದೆ ಪದ್ಯ ಏನು ಮಾಡೀತು? ಸಾಕು, ನಮಸ್ಕಾರ .

Read more...

December 03, 2008

ಕೃಷ್ಣನ ಸೈಕಲ್ ಸವಾರಿ

'ಬೆಳ್ಳೇಕೆರೆಯ ಹಳ್ಳಿ ಥೇಟರ್' ಅಂಕ ೮ - ಸಕಲೇಶಪುರದಿಂದ ಪ್ರಸಾದ್ ರಕ್ಷಿದಿ ಬರೆಯುತ್ತಾರೆ

ದೇ ಸಮಯದಲ್ಲಿ ಹಾರ್ಲೆ ಗುಂಪಿನ ಇನ್ನೊಂದು ತೋಟಕ್ಕೆ ಕೇರಳದಿಂದ ಬಂದ ಹುಡುಗರ ಗುಂಪೊಂದು ಕೆಲಸಕ್ಕೆ ಬಂತು. ಅವರಲ್ಲಿ ಕೆಲವರು ವಿದ್ಯಾವಂತರೂ ಇದ್ದರು. ನಾವು ನಾಟಕಗಳನ್ನು ಮಾಡುವುದನ್ನು ನೋಡಿ, 'ನಾವೂ ನಮ್ಮ ಊರಿನಲ್ಲಿ ನಾಟಕ ಆಡುತ್ತಿದ್ದೆವು. ಈಗ ನಿಮ್ಮ ಜೊತೆಯಲ್ಲಿ ನಾವೂ ಆಡುತ್ತೇವೆ." ಎಂದು ನಮ್ಮೊಂದಿಗೆ ಬಂದರು. ಅವರು ಇಲ್ಲಿ ಒಂದೆರಡು ಮಲೆಯಾಳಿ ನಾಟಕಗಳನ್ನು ಆಡಿದರು. ನಾವು ಒಂದೆರಡು ಕಡೆ ಜೊತೆಯಾಗಿ ಎರಡೂ ತಂಡಗಳ ನಾಟಕಗಳನ್ನು ಮಾಡಿದೆವು. ಅವರಲ್ಲಿ ಕೆಲವರು ಒಳ್ಳೆಯ ನಟರಿದ್ದರಲ್ಲದೆ ಪರಿಕರ- ರಂಗಸಜ್ಜಿಕೆ, ವೇಷಭೂಷಣಗಳನ್ನು ಅವರೇ ಅತ್ಯಂತ ಕಡಿಮೆ ಖರ್ಚಿನಲ್ಲಿ ಮಾಡಿಕೊಳ್ಳುತ್ತಿದ್ದರು. ಅರಶಿನ, ಕುಂಕುಮ, ಸುಣ್ಣ, ಬ್ಯಾಗಡೆ, ಮೈದಾಹಿಟ್ಟು, ಹಳೆಯ ತಗಡಿನ ಚೂರುಗಳು, ಹಳೆಯ ಬಟ್ಟೆ, ಸೀರೆಗಳು, ಬಾಳೆಪಟ್ಟೆ, ಅಡಿಕೆ ಹಾಳೆ, ಬಿದಿರು, ವಾಟೆ, ಹಳೆಟೈರು, ಟ್ಯೂಬು, ಕೊನೆಗೆ ಏನು ಸಿಕ್ಕಿತೋ ಅದು. ಹೀಗೆ ಎಲ್ಲವನ್ನೂ ಉಪಯೋಗಿಸಿ ಅದರಲ್ಲೇ ಎಲ್ಲವನ್ನೂ ತಯಾರು ಮಾಡಿಕೊಳ್ಳುತ್ತಿದ್ದರು. ಅವರಿಂದ ನಾವು ಅನೇಕ ವಿಷಯಗಳನ್ನು ಕಲಿತೆವು. ಅವರು ನಮ್ಮಿಂದ ಲೈಟಿಂಗ್-ಉಪ್ಪುನೀರಿನ ಡಿಮ್ಮರ್‌ಗಳು, ಪರದೆಗಳ ಉಪಯೋಗ ಇತ್ಯಾದಿಗಳನ್ನು ಕಲಿತುಕೊಂಡರು. ನಾವೆರಡೂ ತಂಡಗಳು ಸೇರಿ ಸಕಲೇಶಪುರದ ಟೌನ್ ಹಾಲ್‌ನಲ್ಲಿ ನಾಟಕ ಮಾಡಿದೆವು. ನಾವು ಆಡಿದ " ನಮ್ಮ ಎಲುಬುಗಳ ಮೇಲೆ' ನಾಟಕ, - ತೋಟ ಕಾರ್ಮಿಕರ ತಂಡವೊಂದು ತಾಲ್ಲೂಕು ಮಟ್ಟದಲ್ಲಿ ಮಾಡಿದ ಪ್ರಥಮ ಪ್ರಯೋಗವಾಗಿತ್ತು.

ನಾವು ಆಡುತ್ತಿದ್ದ 'ನಮ್ಮ ಎಲುಬುಗಳ ಮೇಲೆ ' ನಾಟಕಕ್ಕೆ ಸ್ವಲ್ಪ ಮಟ್ಟಿನ ಪ್ರಚಾರ ಸಿಕ್ಕಿತು. ಜೊತೆಯಲ್ಲಿ ರೈತ ಚಳುವಳಿಯೂ ಹಳ್ಳಿಹಳ್ಳಿಗಳಿಗೆ ಹಬ್ಬುತ್ತಿದ್ದ ಸಮಯ. ಹಾಗಾಗಿ ಚಳುವಳಿಗೆ ಪೂರಕವಾಗಿ ಅಲ್ಲಲ್ಲಿ ಕೆಲವು ಕಡೆ ಈ ನಾಟಕವನ್ನು ಆಡುತ್ತಿದ್ದೆವು. ಗಾಣದ ಹೊಳೆ, ಹಾನುಬಾಳು- ಹೀಗೇ ಕೆಲವು ಕಡೆ ಇದರ ಪ್ರದರ್ಶನವಾಯಿತು. ಇದರಿಂದ ಅನಿವಾರ್ಯವಾಗಿ ಆಗಾಗ ಪಾತ್ರಧಾರಿಗಳು ಬದಲಾಗುತ್ತಿದ್ದರು.ಒಮ್ಮೆ ನಾಟಕದ ರಿಹರ್ಸಲ್ ನಡೆಯುತ್ತಿದ್ದಾಗ ನನ್ನ ಹತ್ತಿರದ ಸಂಬಂಧಿ ಹುಡುಗನೊಬ್ಬ ರಜೆಯಲ್ಲಿ ನಮ್ಮಲ್ಲಿಗೆ ಬಂದಿದ್ದ. ಅವನಾಗ ೬-೭ನೇ ಕ್ಲಾಸಿನಲ್ಲಿ ಓದುತ್ತಿದ್ದಿರಬೇಕು. ಬೇಗ ನಮ್ಮ ಹುಡುಗರ ಜೊತೆ ಬೆರೆತು ಬಿಟ್ಟ. ಅವನು ಓದುತ್ತಿದ್ದುದು ಸುಳ್ಯ ತಾಲ್ಲೂಕಿನ ಹಳ್ಳಿ ಶಾಲೆಯೊಂದರಲ್ಲಿ. ನಮ್ಮ ಡೈರಿ ಫಾರಂನಲ್ಲಿದ್ದ ಸೈಕಲ್ ನೋಡಿ ಅವನಿಗೆ ಕಲಿಯುವ ಆಸೆಯಾಯ್ತು. ಆದರೆ ನಾವು ಫಾರಂನ ಸೈಕಲ್ಲನ್ನು ಯಾರಿಗೂ ಮುಟ್ಟಲು ಬಿಡುತ್ತಿರಲಿಲ್ಲ. ಏಕೆಂದರೆ ನಮ್ಮಲ್ಲಿಂದ ಹತ್ತು ಕಿ.ಮೀ ದೂರದಲ್ಲಿರುವ ಸಕಲೇಶಪುರಕ್ಕೆ ಹಾಲು ಸಾಗಿಸಲು ನಮಗಿದ್ದಂತಹ ಏಕೈಕ ವಾಹನ ಅದು. ಅದೇನಾದರೂ ಕೆಟ್ಟು ಹೋದರೆ ಆ ಹೊತ್ತಿನ ೪೦-೫೦ ಲೀಟರ್ ಹಾಲು ಸಾಗಿಸಲಾಗದೆ ತೊಂದರೆಯಾಗುತ್ತಿತ್ತು. ಆದ್ದರಿಂದ ಆ ವಿಚಾರದಲ್ಲಿ ನಾನು ಕಟ್ಟುನಿಟ್ಟಾಗಿದ್ದೆ. ಡೈರಿ ಕೆಲಸಗಾರರಲ್ಲದೆ ಬೇರೆ ಯಾರಿಗೂ ಸೈಕಲ್ ಮುಟ್ಟಲು ಬಿಡುತ್ತಿರಲಿಲ್ಲ.ಒಂದು ಮಧ್ಯಾಹ್ನ ನಾವೆಲ್ಲ ಮನೆಯಲ್ಲಿ ಊಟಕ್ಕೆ ತಯಾರಾಗುತ್ತಿದ್ದೆವು. ಊಟದ ಸಮಯದಲ್ಲಿ ಈ ಹುಡುಗನ ಪತ್ತೆಯೇ ಇಲ್ಲ. ಸುತ್ತೆಲ್ಲ ವಿಚಾರಿಸಿದೆ. ಕೊನೆಗೆ ತೋಟದ ಕೆಲಸಗಾರನೊಬ್ಬ ಹೇಳಿದ " ನಿಮ್ಮ ನೆಂಟರ ಹುಡುಗ ಸೈಕಲ್ ತೆಗೆದುಕೊಂಡು ಡೈರಿ ಫಾರಂ ಅಂಗಳದಲ್ಲಿ ಸುತ್ತುತ್ತಿದ್ದ." ನನಗೆ ಅಸಾಧ್ಯ ಸಿಟ್ಟು ಬಂತು. ನಾನು ಅವನಿಗೆ " ಸೈಕಲ್ ಹತ್ತುವ ಪ್ರಯತ್ನ ಮಾಡಬೇಡ " ಎಂದು ಎರಡೆರಡು ಸಾರಿ ಹೇಳಿದ್ದೆ. ಆದ್ದರಿಂದ 'ಬರಲಿ ಇವನು ಮನೆಗೆ 'ಎಂದು ಕಾದು ಕುಳಿತೆ. ಒಂದು ಗಂಟೆ ಸಮಯ ಕಳೆದಿರಬಹುದು - ಹುಡುಗ ಮೆಲ್ಲನೆ ಮನೆಗೆ ಬಂದ"ಸೈಕಲ್ ಮುಟ್ಟಿದ್ದೀಯ?' ಜೋರಾಗಿ ಕೇಳಿದೆ. 'ಅದು ....ಅದು' ಎಂದ ಚೆನ್ನಾಗಿ ಬೈದುಬಿಟ್ಟೆ. ಅಮ್ಮ, 'ಹೋಗಲಿ ಬಿಡು- ಏನೋ ಅವನಿಗೆ ಗೊತ್ತಾಗಲಿಲ್ಲ.' ಎಂದಳು. 'ಹೌದು, ಸೈಕಲ್ ಹಾಳಾದರೆ ಇವತ್ತಿನ ಹಾಲಿನ ಗತಿಯೇನು?" ಅಂದೆ. ಹುಡುಗ ಪೆಚ್ಚು ಮೋರೆ ಹಾಕಿಕೊಂಡಿದ್ದ.ಈ ಹುಡುಗ ಪ್ರತಿ ದಿನ ನಮ್ಮ ರಿಹರ್ಸಲ್ ಸಮಯದಲ್ಲಿ ಅಲ್ಲೇ ಬಂದಿರುತ್ತಿದ್ದ. ನಾಟಕ ಪ್ರದರ್ಶನಕ್ಕೆ ಎರಡು ದಿನ ಇರುವಾಗ- ನಾಟಕದಲ್ಲಿ ಪಾತ್ರ ಮಾಡುತ್ತಿದ್ದ ಒಬ್ಬ ಹುಡುಗಿಗೆ ಆರೋಗ್ಯ ಕೆಟ್ಟಿತು. ಅವಳು ಪಾತ್ರ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ.

ಪ್ರತಿ ದಿನ ರಿಹರ್ಸಲ್ ನೋಡುತ್ತಿದ್ದ ಈ ಹುಡುಗನ ಮೇಲೆ ಉಗ್ಗಪ್ಪನ ದೃಷ್ಠಿ ಬಿತ್ತು. ' ಇವನಿಗೆ ಹೇಗೂ ಆ ಪಾತ್ರದ ಮಾತುಗಳು ಬರ್‍ತವೆ. ಆ ಪಾತ್ರ ಇವನೇ ಮಾಡಿದ್ರೇನು" ಎಂದ.ಹುಡುಗ ನಾಟಕದಲ್ಲಿ 'ಹುಡುಗಿ' ಪಾತ್ರ ಮಾಡುವುದೆಂದಾಯಿತು. ಇವನಿಗೆ ಮೂರೋ ನಾಲ್ಕೋ ಡೈಲಾಗುಗಳಿದ್ದವು. ನಂತರ ಚೂರಿಯಿಂದ ತನ್ನನ್ನೇ ಇರಿದುಕೊಂಡು ಸಾಯುವುದು. ಇಷ್ಟೇ. ಇವನು ರಿಹರ್ಸಲ್‌ನಲ್ಲಿ ಆ ಹುಡುಗಿಗಿಂತಲೂ ಚೆನ್ನಾಗಿ ಮಾಡಿದ. ಪ್ರದರ್ಶನದ ದಿನ ಮೇಕಪ್ ಮಾಡುವಾಗ ನಮ್ಮಲ್ಲಿ ಟೋಫನ್ ಇಲ್ಲವೆಂದು ನನ್ನ ತಲೆಗೆ ಹೊಳೆಯಿತು. ಇವನು ತಲೆ ಕೂದಲನ್ನು ನುಣ್ಣಗೆ ಅರ್ಧ ಇಂಚು ಬಿಟ್ಟು ಕತ್ತರಿಸಿಕೊಂಡಿದ್ದ!.ಇವನಿಗೆ ತಲೆಗೆ ಎರಡೆರಡು ಚೌರಿಯನ್ನಿಟ್ಟು ಟೇಪ್ ಅಂಟಿಸಿದೆವು. ಅದು ಜಾರದಂತೆ ಮೇಲೊಂದು ಸ್ಕಾರ್ಪನ್ನು ಸುತ್ತಿದೆವು. ಹಾಗೂ ಹೀಗೂ ಸ್ತ್ರಿವೇಷ ಸಿದ್ಧವಾಯ್ತು. ಅವನ ಪಾತ್ರ ಬಂದಾಗ ಉತ್ಸಾಹದಿಂದಲೇ ಸ್ಟೇಜಿಗೆ ಬಂದ. ಮೊದಲನೇ ಡೈಲಾಗೇ ಒಂದು ಸಿಟ್ಟಿನ ಉದ್ರೇಕಕಾರಿ ವಾಕ್ಯ-ಅದನ್ನು ರಭಸದಿಂದ ಹೇಳಿ ಜೋರಾಗಿ ಕೈಗಳನ್ನು ಬೀಸಿ ತಲೆಯನ್ನು ತಿರುಗಿಸಿದ. ತಲೆಗೆ ಸಿಕ್ಕಿಸಿದ ಚೌರಿ ಟೋಫನ್ ಸರ್ಪಾಸ್ತ್ರದಂತೆ ಸ್ಟೇಜಿನಿಂದ ಹಾರಿ ಹೋಯಿತು. ನಮ್ಮ ದಿಢೀರ್ ನಟ ಬೋಳು ತಲೆಯಲ್ಲಿ ನಿಂತಿದ್ದ! ಜನರೆಲ್ಲ " ಹೋ " ಎಂದು ಕೂಗಿದರು. ಅದೇನು ಹೊಳೆಯಿತೋ ಕೊನೆಯ ಡೈಲಾಗ್ ಹೇಳಿ ಚೂರಿಯಿಂದ ತಿವಿದುಕೊಂಡು ಕೆಳಗೆ ಬಿದ್ದು ತನ್ನ ಪಾತ್ರವನ್ನು ಪರಿಸಮಾಪ್ತಿಗೊಳಿಸಿದ. ಜನ ತುಂಬ ಹೊತ್ತಿನವರೆಗೆ ನಗುತ್ತಲೇ ಇದ್ದರು. ಹೀಗೆ ನಮ್ಮಲ್ಲಿ ಪ್ರಥಮ ಬಾರಿಗೆ ರಂಗಪ್ರವೇಶ ಮಾಡಿದ ಹುಡುಗ ಕೃಷ್ಣಕುಮಾರ್ ನಾರ್ಣಕಜೆ, ಈಗ ರಂಗಾಯಣದಲ್ಲಿ ನಟರಾಗಿದ್ದಾರೆ!.

ರಂಗಾಯಣ ಪ್ರಾರಂಭವಾದ ಶುರುವಿನಲ್ಲಿ ಬಿ.ವಿ. ಕಾರಂತರು ರಂಗಾಯಣದ ನಟರಿಗೆಲ್ಲ ಒಂದೊಂದು ಸೈಕಲ್ ಹೊಂದುವುದನ್ನು ಕಡ್ಡಾಯ ಮಾಡಿದ್ದರು. ನಾನು ಒಮ್ಮೆ ರಂಗಾಯಣಕ್ಕೆ ಹೋದಾಗ ಸೈಕಲ್ ಹಿಡಿದು ಹೊರಟ ಕೃಷ್ಣಕುಮಾರ್‌ನನ್ನು ನೋಡಿ ಇವನು ಹಿಂದೆ ನಮ್ಮ ಡೈರಿಫಾರಂನಲ್ಲಿ ಸೈಕಲ್ ಸವಾರಿಗೆ ಹೊರಟದ್ದು ನೆನಪಾಯಿತು."ಸೈಕಲ್ ಸವಾರಿ ಮಾಡಲು ಹೊರಟು ನೀನು ನನ್ನಿಂದ ಬೈಸಿಕೊಂಡಿದ್ದೆ ಅಲ್ಲವೇ?" ಎಂದು ಕೇಳಿದೆ."ನಾನು ಸೈಕಲ್ ಸವಾರಿ ಮಾಡದೆ ಬೈಸಿಕೊಂಡದ್ದು. ನಾನು ಆವಾಗ ಸೈಕಲ್ ಹತ್ತಲೇ ಇಲ್ಲ. ಆಸೆ ತಡೆಯದ್ರಿಂದ ಸೈಕಲ್ಲನ್ನು ಹಾಗೇ ಅಂಗಳದಲ್ಲಿ ನೂಕಿಕೊಂಡು ಸುತ್ತು ಬರುತ್ತಿದ್ದೆ. ಕೆಳಗೆ ಬಿದ್ದು ಹಾಳಾದೀತೆಂದು ಸೈಕಲ್ ಹತ್ತಲೇ ಇಲ್ಲ." ಬಂತು ವಿವರಣೆ!ಒಂದು ಕ್ಷಣ ಮಾತಿಲ್ಲದವನಾದೆ.ಕೃಷ್ಣ ನಮ್ಮಲ್ಲಿ ಆಟವಾಡುತ್ತಾ, ಬೈಸಿಕೊಳ್ಳುತ್ತಾ ರಂಗಕ್ಕೆ ಬಂದದ್ದು. ಮುಂದೆ ತನ್ನ ಶಾಲೆಯಲ್ಲೂ ತಾನೇ ನಾಟಕ ಬರೆದು ಆಡಿದ್ದು. ಸುಳ್ಯದ ನಾರ್ಣಕಜೆಯಲ್ಲಿ ರಂಗಶಿಬಿರದಲ್ಲಿ ಭಾಗವಹಿಸಿದ್ದು, ನಾಟಕ ಮಾಡಿದ್ದು. ಅದೇ ಶಾಲೆಯಲ್ಲಿ ಉಪಾಧ್ಯಾಯನಾಗಿ ಕೆಲಸಮಾಡಿದ್ದು. ನಂತರ ನೀನಾಸಂನಲ್ಲಿ ಕಲಿತು ನಟ ತಂತ್ರಜ್ಞನಾದದ್ದು, ತಿರುಗಾಟ ಮಾಡಿದ್ದು. ಹೀಗೇ ರಂಗಾಯಣ ತಲುಪಿದ್ದು, ಎಲ್ಲ ಕಣ್ಣ ಮುಂದೆ ಹಾದು ಹೋದವು.

ನಮ್ಮ ನಾಟಕದ ರಿಹರ್ಸಲ್ ಪ್ರಾರಂಭವಾಗುವಾಗ ಸಾಮಾನ್ಯವಾಗಿ ಸಂಜೆ ಏಳು ಗಂಟೆಯಾಗುತ್ತಿತ್ತು. ಆ ಕಾಲದಲ್ಲಿ ಕೆಲಸಗಾರರು ಬೆಳಗ್ಗೆ ಊಟಮಾಡಿ ಕೆಲಸಕ್ಕೆ ಹೋದರೆ ಮಧ್ಯಾಹ್ನ ಊಟ ಮಾಡುತ್ತಿದ್ದುದೇ ಕಡಿಮೆ. ಹಲಸಿನಕಾಯಿ ಬಿಡುವ ಸಮಯವಾದರೆ ತೋಟದಲ್ಲೇ ಹಲಸಿನಕಾಯಿ ತಿಂದಿರುತ್ತಿದ್ದರು. ವರ್ಷದ ಉಳಿದ ಕಾಲವೆಲ್ಲ ಮಧ್ಯಾಹ್ನದ ಊಟ ಇದ್ದರೆ ಇತ್ತು- ಇಲ್ಲದಿದ್ದರೆ ಇಲ್ಲ. ಸಂಜೆ ಕೆಲಸ ಮುಗಿಸಿ ಬಂದು ಬೇಗ ಊಟ ಮಾಡುತ್ತಿದ್ದರು. ರಾತ್ರಿ ಬೇಗ ಮಲಗುತ್ತಿದ್ದರು. ಕೆಲಸಗಾರರ ಮನೆಗಳಲ್ಲಿ ರಾತ್ರಿ ಹತ್ತು ಗಂಟೆಯೆಂದರೆ ನಡುರಾತ್ರಿ ಎನ್ನುತ್ತಿದ್ದರು. ಈಗ ಕಾಲ ಬದಲಾಗಿದೆ.ಹಾಗಾಗಿ ನಮ್ಮ ಹುಡುಗರೆಲ್ಲ ಸಂಜೆ ಆರೂವರೆಗೆಲ್ಲ ಊಟ ಮಾಡಿ ಏಳುಗಂಟೆಗೇ ಶಾಲೆಯಲ್ಲಿ ಸೇರುತ್ತಿದ್ದರು. ನಾನು ಡೈರಿ ಫಾರಂ ಉಸ್ತುವಾರಿ ಮಾಡುತ್ತಿದ್ದುರಿಂದ ಮತ್ತು ಅಲ್ಲಿನ ಕೆಲಸಗಾರರಲ್ಲಿ ಹೆಚ್ಚಿನವರು ನಮ್ಮ ತಂಡದಲ್ಲಿದ್ದುದರಿಂದ ಡೈರಿಯಲ್ಲಿ ಹಸುಗಳಿಗೇನಾದರೂ ತೊಂದರೆಯಾದರೆ ನಾವು ಅಲ್ಲಿಗೆ ಹೋಗುತ್ತಿದ್ದೆವು. ನಮ್ಮ ಶಾಲೆಯಿಂದ ಡೈರಿ ಫಾರಂಗೆ ಎರಡು ಫರ್ಲಾಂಗ್ ದೂರವಿತ್ತು. ಅಲ್ಲಿಗೆ ಹೋಗಬೇಕಾದಾಗ ಅಥವಾ ಇನ್ನಾವುದೇ ಅನಿವಾರ್ಯ ಕೆಲಸಗಳಿದ್ದಾಗಲೆಲ್ಲ ನಮ್ಮ ರಿಹರ್ಸಲ್ ರದ್ದಾಗುತ್ತಿತ್ತು. ಅದಲ್ಲದೆ ಸಕಲೇಶಪುರಕ್ಕೆ ಹತ್ತು ಕಿಲೊಮೀಟರ್ ದೂರ ಸೈಕಲ್‌ನಲ್ಲಿ ಹಾಲು ಸಾಗಿಸುತ್ತಿದ್ದ ಚೆನ್ನವೀರ, ಸುಂದರ ಇವರುಗಳು ಕೆಲವು ಬಾರಿ ಹೋಗಿಬರಲು ಮಲೆನಾಡಿನ ಕಡಿದಾದ ಏರುತಗ್ಗಿನ ದಾರಿಯಲ್ಲಿ ಇಪ್ಪತ್ತು ಕಿ.ಮೀ.ಸೈಕಲ್ ತುಳಿದು ಹಾಲು ಕೊಟ್ಟು ಬಂದು ನಾಟಕದಲ್ಲಿ ಪಾತ್ರ ಮಾಡಿದ್ದೂ ಇತ್ತು!ಇವೆಲ್ಲ ಕಾರಣಗಳಿಂದ ನಮ್ಮ ನಾಟಕ ಸಿದ್ಧಗೊಳ್ಳಲು ಕೆಲವೊಮ್ಮೆ ಎರಡು ಮೂರು ತಿಂಗಳುಗಳಿಗೂ ಹೆಚ್ಚು ಕಾಲ ಬೇಕಾಗುತ್ತಿತ್ತು. ಆದ್ದರಿಂದ ನಾವು ಮಳೆಗಾಲ ಮುಗಿಯುತ್ತಾ ಬಂದಂತೆ ಸೆಪ್ಟೆಂಬರ್ ತಿಂಗಳಿನಲ್ಲಿ ನಾಟಕದ ಸಿದ್ಧತೆಯಲ್ಲಿ ತೊಡಗಿದರೆ ಡಿಸೆಂಬರ್- ಜನವರಿಯಲ್ಲಿ ಪ್ರದರ್ಶನ ಸಾಧ್ಯವಾಗುತ್ತಿತ್ತು. ನಂತರ ಎಪ್ರಿಲ್ ವರೆಗೆ ಅಲ್ಲಿ ಇಲ್ಲಿ ಸಾಧ್ಯವಾದಷ್ಟು ಪ್ರದರ್ಶನಗಳನ್ನು ಮಾಡಿಕೊಳ್ಳಬೇಕು. ಮತ್ತೆ ಅಡ್ಡ ಮಳೆಗಳು ಪ್ರಾರಂಭವಾಗುವುದರಿಂದ ಬಯಲಿನಲ್ಲಿ ನಾಟಕ ಮಾಡುವ ಜವಾಬ್ದಾರಿ ತೆಗೆದುಕೊಳ್ಳುವುದು ಕಷ್ಟ. ಇವೆಲ್ಲದರಿಂದ ಆ ವರ್ಷದ ಮಟ್ಟಿಗೆ ಬೇರೆ ನಾಟಕವನ್ನು ತೆಗೆದುಕೊಳ್ಳುವುದಂತೂ ಅಸಾಧ್ಯದ ಮಾತು. ವರ್ಷದಲ್ಲಿ ಆರೇಳು ತಿಂಗಳುಗಳ ಕಾಲ ಮಳೆ ದಿನಗಳಿರುವ ವರ್ಷಕ್ಕೆ ನೂರಿಪ್ಪತ್ತು ಇಂಚುಗಳಷ್ಟು ಮಳೆ ಬೀಳುವ, ಮಲೆನಾಡಿನ ಯಾವುದೇ ಊರಿನಲ್ಲಿ ಕೃಷಿಕೂಲಿಗಾರರನ್ನು, ರೈತರನ್ನು ಕಟ್ಟಿಕೊಂಡು ನಾಟಕ ಮಾಡಬೇಕಾದರೆ ವರ್ಷವಿಡೀ ನಿರಂತರ ರಂಗಚಟುವಟಿಕೆ ಬೇಕು.

ಒಮ್ಮೆ ಹಾನುಬಾಳಿನಲ್ಲಿ ನಾಟಕ ಪ್ರದರ್ಶನ ಇತ್ತು. ರಾತ್ರಿ ಎಂಟು ಗಂಟೆಗೆ ನಾಟಕ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ನಾಟಕ ಪ್ರಾರಂಭಕ್ಕೆ ರಾತ್ರಿ ಎಂಟು ಗಂಟೆಯ ನಂತರವೇ ಸರಿಯಾದ ಸಮಯ. ಕೆಲಸಕ್ಕೆ ಹೋದವರು ಮನೆಗೆ ಬಂದು ಅಡಿಗೆ ಮಾಡಿ ಊಟ ತೀರಿಸಿ ಕಾರ್ಯಕ್ರಮಗಳಿಗೆ ಬರಬೇಕಾಗಿರುವುದರಿಂದ ನಗರಗಳಲ್ಲಿ ಮಾಡಿದಂತೆ ಸಂಜೆ ಆರೂವರೆ ಅಥವಾ ಏಳು ಗಂಟೆಗೆ ನಾಟಕ ಪ್ರಾರಂಭಿಸುವುದು ಅನುಕೂಲಕರವಲ್ಲ. ಅಂದು ನಮ್ಮ ಡೈರಿ ಸುಂದರನೂ ಪಾತ್ರಧಾರಿ. ಅವನು ಸಂಜೆ ಸೈಕಲ್ಲಿನಲ್ಲಿ ಸಕಲೇಶಪುರಕ್ಕೆ ಹಾಲು ಸಾಗಿಸಿ ನಂತರ ಅಲ್ಲಿಂದ ಹದಿನೇಳು ಕಿ.ಮೀ. ದೂರದ ಹಾನುಬಾಳಿಗೆ ಬಸ್ಸಿನಲ್ಲಿ ಬರಬೇಕಿತ್ತು. ನಾಟಕದ ಹೊತ್ತಿಗೆ ನಾವೆಲ್ಲ ಗಡಿಬಿಡಿಯಲ್ಲಿ ಸುಂದರನನ್ನು ಮರೆತೇಬಿಟ್ಟಿದ್ದೆವು. ನಾಟಕ ಪ್ರಾರಂಭವಾಯಿತು. ನಾನೂ ಪಾತ್ರಧಾರಿಯಾಗಿ ಸ್ಟೇಜಿನಲ್ಲಿದ್ದೆ. ಸುಂದರನ ಪಾತ್ರ ರಂಗಕ್ಕೆ ಬರಲು ಇನ್ನೊಂದೈದು ನಿಮಿಷ ಇದ್ದಿರಬಹುದು. ಅಷ್ಟರಲ್ಲಿ ನಾಟಕ ನೋಡುತ್ತಾ ಕುಳಿತ ಜನಗಳ ಮಧ್ಯದಲ್ಲಿ ದಾರಿಮಾಡಿಕೊಂಡು ಅವಸರದಲ್ಲಿ ಸುಂದರ ಬರುವುದು ಕಾಣಿಸಿತು. ನನಗೆ ಗಾಬರಿಯಾಯಿತು. ಅವನದ್ದು ಮಂತ್ರಿಯ ಪಿ.ಎ.ಒಬ್ಬನ ಪಾತ್ರ. ಈಗ ಮೇಕಪ್ ಇತ್ಯಾದಿಗಳಿಗೆ ಸಮಯವೇ ಇಲ್ಲ. ನೋಡಿದರೆ ಇವನು ಚಡ್ಡಿ ಶರ್ಟ್‌ನಲ್ಲಿದ್ದ. ಗ್ರೀನ್ ರೂಂನಲ್ಲಿದ್ದವರು ಇವನನ್ನು ಹಾಗೆಯೇ ಸ್ಟೇಜಿಗೆ ತಳ್ಳಿದ್ದರು. ಅದೇ ವೇಶದಲ್ಲಿ ಸುಂದರ ಸ್ಟೇಜಿಗೆ ಬಂದು ಪಾತ್ರ ಮಾಡಿದ! ಜನ ಇವನ ವಿಚಿತ್ರ ವೇಷ ನೋಡಿ ಸ್ವಲ್ಪ ಕೂಗಾಡಿದರು. ನಾಟಕ ಮುಗಿದ ಮೇಲೆ ಜನರಿಗೆ ಪ್ರಸಂಗ ವಿವರಿಸಿದೆ. ಎಷ್ಟೇ ಕಷ್ಟವಾದರೂ ಸರಿ ತನ್ನ ಪಾತ್ರ ನಿರ್ವಹಣೆಯ ಬಗ್ಗೆ ಇರುವ ಇಂತಹ ರಂಗನಿಷ್ಠೆಯಿಂದಾಗಿ ಮಾತ್ರ ರಂಗ ತಂಡಗಳು ಮತ್ತು ರಂಗ ಚಟುವಟಿಕೆಗಳು ಉಳಿದುಕೊಳ್ಳುತ್ತವೆ ಎಂದೆನಿಸುತ್ತದೆ.

Read more...

November 28, 2008

ಎದೆ ಗುಂಡಿಗೆ ಕೊಟ್ಟು ಕೇಳಿಸಿಕೊಳ್ಳುವಿರಾ ಬಡಿತ....

ದಗಳು ಮುಗಿದಿವೆ. ಗಂಟಲಲ್ಲಿ ಬೆಂಕಿಯಿದೆ. ತುಟಿಯಲ್ಲಿ ನೆತ್ತರಿದೆ. ರಾಕ್ ಸಾಂಗ್ ಹೊಮ್ಮುತ್ತಿರುವಂತೆ, ವಾಲ್ಯೂಮ್ ಏರಿಸಿದ ಕೂಡಲೇ ಟಿವಿ ಹೊಡೆದುಕೊಂಡಿದೆ. ತಾಜ್ ಹೋಟೆಲ್‌ನ ಆರನೇ ಮಹಡಿಯಲ್ಲಿದ್ದವರಿಗೆ ಆಗಲೂ ಗೊತ್ತಿಲ್ಲ, ಅದು ಮೆಷಿನ್‌ಗನ್‌ನ ಎದೆಬಡಿತವೆಂದು. ಅವರೂ ಗುಂಡಿನ ಸದ್ದನ್ನು ಕೇಳಿದ್ದು ಟಿವಿ, ಥಿಯೇಟರ್‌ಗಳಲ್ಲಿ ಮಾತ್ರ. ಇಂಗ್ಲೆಂಡ್‌ನ ವಿರುದ್ಧ ಐದನೇ ಪಂದ್ಯವನ್ನು ಗೆದ್ದು ಕೊಟ್ಟ ವೀರೂನ ವೀರಾವೇಶದ ಸಂಭ್ರಮದಲ್ಲಿ ನಾವೆಲ್ಲ ಸುಖ ನಿದ್ದೆಗೆ ಜಾರುವಷ್ಟರಲ್ಲಿ ಸುದ್ದಿ ವಾಹಿನಿಗಳು ಬಾಯಿಬಾಯಿ ಹೊಡೆದುಕೊಳ್ಳಲಾರಂಭಿಸಿದವು. ಬೆಂಗಳೂರಿನ ತುಂತುರು ಮಳೆಯಲ್ಲಿ ಕುಟುಕುಟು ಚಳಿಯಲ್ಲಿ ಮುದ್ದೆಯಾಗಿರುವ ನಮಗೆ, ಮುಂಬಯಿಯಲ್ಲಿ ಹೊತ್ತಿರುವ ಬೆಂಕಿ ಚುರುಕು ಮುಟ್ಟಿಸಿದೆಯೆ? ಅಥವಾ ಐದನೇ ಪಂದ್ಯವನ್ನೂ ಇಂಗ್ಲೆಂಡ್ ಸೋತಾಗ ‘ಮತ್ತದೇ ಹಳೇ ಕತೆ -ಇಂಗ್ಲೆಂಡ್‌ಗೆ ಸೋಲು !’ ಎನ್ನುವಂತೆ ಇದು ಮಾಮೂಲು ಅನ್ನುತ್ತೇವೆಯೆ?!

ಬ್ರಿಟನ್‌ನ ಮಿಲಿಯಾಧೀಶ, ೭೩ರ ಪ್ರಾಯದ ಆಂಡ್ರಿಯಾಸ್ ಲಿವ್ರಾಸ್ ನಾನಾ ತರಹದ ವಾಹನಗಳನ್ನು ಬಾಡಿಗೆ ಕೊಡುವ ದೊಡ್ಡ ಕಂಪನಿಯ ದೊರೆ. ಮುಂಬಯಿಯಲ್ಲಿ ಅತ್ಯುತ್ತಮ ಊಟ-ತಿಂಡಿ ತಾಜ್‌ನಲ್ಲಿ ಸಿಗುತ್ತದೆ ಅಂತ ಬುಧವಾರ ಸಂಜೆ ಹೋಗಿದ್ದರು. ‘ಟೇಬಲ್ ಎದುರು ಕುಳಿತಿದ್ದೆನಷ್ಟೆ. ಕಾರಿಡಾರ್‌ನಿಂದ ಮೆಷಿನ್‌ಗನ್ ಸದ್ದು. ತಕ್ಷಣ ಟೇಬಲ್ ಕೆಳಗೆ ತೂರಿಕೊಂಡೆವು. ಬಂದವರು ಲೈಟ್ ಆರಿಸಿದರೂ, ಮೆಷಿನ್‌ಗನ್‌ಗಳು ಮೊಳಗುತ್ತಲೇ ಇದ್ದವು. ಅಲ್ಲಿಂದ ನಮ್ಮನ್ನು ಅಡುಗೆಕೋಣೆಗೆ, ನೆಲಮಹಡಿಗೆ, ಅಲ್ಲಿಂದ ಅತಿಥಿಗಳನ್ನು ಸ್ವಾಗತಿಸುವ ಈ ಕೋಣೆಗೆ. ಸುಮಾರು ೧೦೦೦ ಜನ ಇಲ್ಲಿರಬಹುದು. ಯಾರೂ ಏನನ್ನೂ ಹೇಳುವುದಿಲ್ಲ, ಬಾಗಿಲುಗಳಿಗೆ ಹೊರಗಿನಿಂದ ಬೀಗ ಜಡಿಯಲಾಗಿದೆ. ಹೋಟೆಲ್ ಉದ್ಯೋಗಿಗಳು ನೀರು-ಸ್ಯಾಂಡ್‌ವಿಚ್‌ಗಳನ್ನು ಕೊಡುತ್ತಾ ಸಹಾಯ ಮಾಡುತ್ತಿದ್ದಾರೆ. ಆದರೆ ನಿಜವಾಗಿ ಯಾರೂ ಏನನ್ನೂ ತಿನ್ನುತ್ತಿಲ್ಲ. ಈಗ ಎಲ್ಲ ತಣ್ಣಗಿದೆ, ೪೫ ನಿಮಿಷಗಳ ಹಿಂದೆ ಬಾಂಬ್ ಸ್ಫೋಟಿಸಿತ್ತು’ ಹೀಗೆಂದು ಬುಧವಾರ ರಾತ್ರಿ, ಗುರುವಾರ ಬೆಳಗ್ಗೆ ಬಿಬಿಸಿಗೆ ಫೋನ್ ಮಾಡಿದ್ದ ; ಸುರಕ್ಷಿತವಾಗಿದ್ದೇನೆಂದು ಮಗನಿಗೆ ಫೋನ್ ಮೂಲಕ ತಿಳಿಸಿದ್ದ ಆಂಡ್ರಿಯಾಸ್. ಶುಕ್ರವಾರ ಬೆಳಗ್ಗೆ ಆತ ಸತ್ತ ಸುದ್ದಿ ಖಾತ್ರಿಯಾಗಿತ್ತು.

ಮಾಧ್ಯಮ ಪ್ರತಿನಿಧಿ ಬ್ರಿಟಿಷ್ ಪ್ರಜೆ ಅಲಾನ್ ಜೋನ್ಸ್ ಟ್ರೈಡೆಂಟ್ ಒಬೆರಾಯ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ. ಸಹೋದ್ಯೋಗಿಯೊಂದಿಗೆ ಲಿಫ್ಟ್‌ನಲ್ಲಿ ಸ್ವಾಗತ ಕೋಣೆಗೆ ಇಳಿದು, ಬಾಗಿಲು ತೆರೆದುಕೊಳ್ಳುತ್ತಿದ್ದಂತೆ ಭಾರೀ ಶಬ್ದ. ಲಿಫ್ಟ್‌ನಲ್ಲಿದ್ದ ನಾಲ್ವರಲ್ಲಿ ಜಪಾನೀಯನೊಬ್ಬನಿಗೆ ಗುಂಡು ಬಿದ್ದಿತ್ತು. ‘ನಾನು ತಕ್ಷಣ ಲಿಫ್ಟ್‌ನ ಬಾಗಿಲು ಮುಚ್ಚಿಕೊಳ್ಳುವ ಗುಂಡಿ ಅದುಮಿದೆ. ಗುಂಡು ತಿಂದವನ ಕಾಲು ಬಾಗಿಲಿಗೆ ಅಡ್ಡವಾಗಿತ್ತು. ಅಯ್ಯೋ ಏನು ಮಾಡಲಿ? ತಳ್ಳಿದೆ. ಮೇಲಿನ ಮಹಡಿಯಲ್ಲಿರುವ ರೂಮಿಗೆ ನಾವು ಹಿಂದಿರುಗಿದಾಗ, ನೆಲ ಮಹಡಿಯಲ್ಲಿರುವ ಸುರಕ್ಷಿತ ಜಾಗಕ್ಕೆ ಹೋಗುವ ಸೂಚನೆ ನಮಗೆ ಬಂತು. ಅಲ್ಲಿ ನಾವು ತುಂಬ ಜನ ಸೇರಿದ್ದೆವು. ಸುಮಾರು ಒಂದು ಗಂಟೆಯ ಬಳಿಕ ಪೊಲೀಸರು ಹೊರಗೆ ಕರೆದೊಯ್ದರು’ ಎಂದು ವಿವರಿಸುತ್ತಾನೆ ಆತ.

ಆಸ್ಟ್ರೇಲಿಯಾದ ‘ಮೊಬಿ ಎಕ್ಸ್‌ಪ್ರೆಸ್ ’ಕಂಪನಿಯ ಮಾಲೀಕನ ೨೨ ವರ್ಷದ ಮಗ ಯುನ್ ಚೈನ್ ಲಾಯ್‌ಗೆ ಎಚ್ಚರಾದದ್ದು ಗುಂಡಿನ ಮಳೆಯ ಸದ್ದು ಕೇಳತೊಡಗಿದಾಗ. ಸಿಡ್ನಿಯಲ್ಲಿರುವ ಅಮ್ಮನ ಜತೆ ಮಾತಾಡಿ ತಾನು ಒಬೆರಾಯ್ ಹೋಟೆಲ್‌ನಿಂದ ಹೊರಗೆ ಬಂದಿರುವುದಾಗಿ ಹೇಳಿದ್ದಾನೆ. ನಂತರ ಸಂಪರ್ಕಕ್ಕೆ ಸಿಗುತ್ತಿಲ್ಲ. ‘ಅಯ್ಯೊ ಅವನದ್ದು ಮೊದಲ ವಿದೇಶ ಪ್ರಯಾಣ. ಭಾವೋದ್ವೇಗಕ್ಕೆ ಒಳಗಾಗಬೇಡ ಅಂದಿದ್ದೀವಿ. ಅವನು ಬಹಳ ಸೆನ್ಸಿಬಲ್. ಸಂದರ್ಭಗಳನ್ನು ನಿಭಾಯಿಸುತ್ತಾನೆ ’ಅಂತ ಹೇಳುತ್ತಲೇ ಉಮ್ಮಳಿಸುತ್ತಿದ್ದಾಳೆ ಅಮ್ಮ.

ಸ್ವಾಗತ ಕೋಣೆಯಲ್ಲಿ ಬುಲೆಟ್‌ಗಳು ಹಾರಾಡುತ್ತಿದ್ದರೆ, ಆಸ್ಟ್ರೇಲಿಯಾದ ನಟಿ ಬ್ರೂಕ್ ಸ್ಯಾಚೆಲ್ ಬಾತ್‌ರೂಂನಲ್ಲಿ ಸಿಲುಕಿಕೊಂಡಿದ್ದಳು. ಸಿಗರೇಟ್‌ಗೆಂದು ಹೋಟೆಲ್‌ನ ಮುಖ್ಯ ದ್ವಾರದ ಬಳಿ ಹೋದ ಆಕೆ, ಹಿಂತಿರುಗುವಾಗ ಸ್ವಾಗತ ಕೋಣೆ ಬಿಟ್ಟು, ನೆಲ ಮಹಡಿಯಲ್ಲಿರುವ ಬಾತ್‌ರೂಂ ಬಳಿಯಾಗಿ ಬರುತ್ತಿದ್ದಳು. ಆಗಲೇ ಶುರುವಾಯಿತು ಸ್ವಾಗತ ಕೋಣೆಯಲ್ಲಿ ದಾಳಿ. ಆಕೆ ಇತರ ಆರು ಜನರೊಂದಿಗೆ ಬಾತ್‌ರೂಂನಲ್ಲಿ ೪೫ ನಿಮಿಷಗಳ ಕಾಲ ಬಚ್ಚಿಟ್ಟುಕೊಂಡಳು. ಆ ಮಧ್ಯೆಯೂ ಹೊರಹೋಗಲು ಯತ್ನಿಸಿದ ಕೆಲವರು, ಕಾರಿಡಾರ್‌ಗಳಲ್ಲಿ ಹೆಣಗಳು ಬೀಳುತ್ತಿವೆ ಅಂದರಂತೆ. ಬಳಿಕ ಹೋಟೆಲ್ ಉದ್ಯೋಗಿಗಳು ಬಂದು ಅವರನ್ನು ರಕ್ಷಿಸಿದರು. ಬಚಾವಾಗುವಾಗ ಕಾರಿಡಾರ್‌ಗಳಲ್ಲಿ , ಮೆಟ್ಟಿಲುಗಳಲ್ಲಿ ಶವಗಳು ಬಿದ್ದಿದ್ದವು ಅಂದಿದ್ದಾಳೆ ಆಕೆ. ತಾಜ್ ಹೋಟೇಲಿನಲ್ಲಿ ರೂಮ್ ಕಾದಿರಿಸಿಕೊಂಡು ಮುಂಬಯಿ ವಿಮಾನ ಏರಬೇಕಾಗಿದ್ದ್ ಕ್ರಿಕೆಟಿಗ ಶೇನ್ ವಾರ್ನ್ ಸಿಂಗಾಪುರದಲ್ಲೇ ತತ್ತರಿಸಿದರು. ಐನೂರು ರೂಪಾಯಿಗಳಿದ್ದ್ದ ಪರ್ಸ್‌ನ್ನೋ ಮೊಬೈಲ್‌ನ್ನೋ ಕಳೆದುಕೊಂಡರೆ ಚಡಪಡಿಸುವ ನಮಗೆ, ಪರದೇಶದಲ್ಲಿ ಸಾವಿನ ಬಾಯಿಯೊಳಗೆ ತಲೆಯಿಟ್ಟು ಬರುವ ಅನುಭವ ಎಂಥದ್ದೆಂದು ಚೆನ್ನಾಗಿ ಅರ್ಥವಾಗಬೇಕೇ? ಆಸ್ಟ್ರೇಲಿಯಾದಲ್ಲಿ ಭಯೋತ್ಪಾದಕರಿಗೆ ನೆರವಾದ ಆರೋಪದಲ್ಲಿ ಬಂಧಿನಾಗಿದ್ದ ಹನೀಫ್ ಬಳಿಕ ಬಚಾವಾಗಿ ಬೆಂಗಳೂರಿಗೆ ಬಂದ ದಿನದ ಸಂಭ್ರಮ ನೆನಪಿಸಿಕೊಳ್ಳಿ. ಆಗ, ಇಲ್ಲಿನ ಅನಾಹುತಕಾರಿ ದೃಶ್ಯಗಳನ್ನು ನೋಡಿ,ಯಾವುದೋ ದೇಶದಲ್ಲಿ ಚಡಪಡಿಸುತ್ತಿರುವ ಒಡನಾಡಿ ಜೀವಗಳ ಚಹರೆ ನಮ್ಮ ಕಣ್ಣೆದುರು ಬಂದೀತು.

‘ಮಾಧ್ಯಮಗಳಿಂದ ಉಗ್ರವಾದಕ್ಕೆ ವಿಶೇಷ ಪ್ರಚಾರ ಸಿಗುತ್ತಿದೆ ’ ಎಂಬ ಮಾತಿಗೆ ಪ್ರತಿಯಾಗಿ ‘ಉಗ್ರರ ಫೋಟೊಗಳನ್ನು ತೆಗೆದದ್ದು ಮಾಧ್ಯಮಗಳೇ’ ಎಂಬ ಹೆಗ್ಗಳಿಕೆಯೊಂದಿಗೆ ಚರ್ಚೆ ನಡೆದಿದೆ. ಆದರೆ ಎರಡು ದಿನಗಳು ಕಳೆಯುವಷ್ಟರಲ್ಲಿ, ಎಲ್ಲಿ ಚುನಾವಣೆಗಳಿವೆಯೋ ಅಲ್ಲಿ ಭಯೋತ್ಪಾದನೆಯ ಲಾಭ ಪಡೆಯುವ ಕಾರ್‍ಯಾಚರಣೆ ಆರಂಭವಾಗುತ್ತದೆ . ನೆತ್ತರಲ್ಲಿ ಅದ್ದಿರುವ ಸ್ಥಳಗಳಿಗೆ ಚೆಂದ ಇಸ್ತ್ರಿ ಮಾಡಿದ ಅಚ್ಚ ಬಿಳಿ ಅಂಗಿಯಲ್ಲಿ ನಿಧಾನವಾಗಿ ನಡೆದು ಬರುವ ರಾಜಕಾರಣಿಗಳನ್ನು ನೋಡಿದರೆ, ಎಂಥವನಿಗಾದರೂ ವಾಕರಿಕೆ ಬರಬೇಕು. ಆದರೆ ಮಹಾನ್ ಮುಂಬಯಿ ಪ್ರೇಮಿ, ಅನ್ಯ ರಾಜ್ಯದವರ ವಿರುದ್ಧವೇ ಕತ್ತಿ ಮಸೆಯುತ್ತಿದ್ದ ರಾಜ್ ಠಾಕ್ರೆ ಯಾವ ಟಿವಿಯಲ್ಲೂ ಕಣ್ಣಿಗೆ ಬೀಳಲಿಲ್ಲ !

ಮೊನ್ನೆಮೊನ್ನೆ ಬಿಡುಗಡೆಯಾದ ‘ಮುಂಬೈ ಮೇರಿ ಜಾನ್’-‘ವೆಡ್‌ನೆಸ್‌ಡೇ’ ಸಿನಿಮಾಗಳು ನೆನಪಿನಿಂದ ಮಾಸುವ ಮೊದಲೇ ಉಗ್ರರ ಸಿನಿಮಾ ಬಿಡುಗಡೆಯಾಗಿದೆ. ಆದರೆ ನಮ್ಮ ದುರದೃಷ್ಟ, ಅದರ ನಕಲಿ ಸಿಡಿಗಳು ಎಲ್ಲೂ ಸಿಗುವುದಿಲ್ಲ! ಹಾಗಂತ ಅವರ ಸಿನಿಮಾ ಯಾವುದರ ನಕಲಿಯೂ ಆಲ್ಲ. ಅದು ಒರಿಜಿನಲ್, ಅವರಷ್ಟೇ ಮಾಡಬಹುದಾದ್ದು ಅನ್ನುವಂಥದ್ದು. ‘ವೆಡ್‌ನೆಸ್‌ಡೇ’ ಚಿತ್ರದಲ್ಲಿ ಆಮ್ ಆದ್ಮೀ ನಾಸಿರುದ್ದೀನ್‌ಶಾ, ಸೆರೆಯಲ್ಲಿದ್ದ ನಾಲ್ವರು ಉಗ್ರರನ್ನು ಶಿಕ್ಷಿಸಲು ಎಷ್ಟು ಕಷ್ಟ ಪಟ್ಟ?! ತಾನು ಉಗ್ರಗಾಮಿಯೆಂದು ಬಿಂಬಿಸಿಕೊಂಡು, ಸೆರೆಯಲ್ಲಿದ್ದವರನ್ನು ಪೊಲೀಸರ ಮೂಲಕವೇ ಕರೆಸಿಕೊಂಡು ಬಾಂಬ್ ಸ್ಫೋಟಿಸಿ ಉಗ್ರರನ್ನು ಮುಗಿಸಲು ಯತ್ನಿಸುತ್ತಾನೆ. ಕಣ್ಣೆದುರೇ ಮನೆ ಹೊಕ್ಕ ಉಗ್ರರನ್ನು ಸದೆಬಡಿಯಲು ನಾವು ಪಡುತ್ತಿರುವ ಪರದಾಟ ನೋಡಿದರೆ, ಸಾಮಾನ್ಯ ಪ್ರಜೆಯೊಬ್ಬ ಹೀಗೂ ಮಾಡಬಹುದು ಅಂತ ತೋರಿಸಿದ ವೆಡ್‌ನೆಸ್‌ಡೇ ಸಿನಿಮಾ ಬಾಲಿಶವಾಗಿ ಕಾಣುತ್ತಿದೆ. ನಾವು ಹಿಂದಿದ್ದೇವೆ. ಎಷ್ಟೆಂದರೆ ನಮ್ಮ ಹಿಂದಿನಿಂದ ಯಾವ ಉಗ್ರರು ಬರಲಾರರು ! ತೆರೆದ ಎದೆಯಲ್ಲಿ ಹೋಗಿ ಪ್ರಾಣ ಕಳೆದುಕೊಂಡ ಭಯೋತ್ಪಾದನಾ ನಿಗ್ರಹ ದಳದ ಹಿರಿಯ ಅಧಿಕಾರಿಗಳ ಹೆಂಡತಿಮಕ್ಕಳು ಎದೆಎದೆ ಬಡಿದುಕೊಂಡು ಕಣ್ಣೀರುಗರೆಯುತ್ತಿದ್ದಾರೆ. ನಮ್ಮ ನೇತಾರರು ನಿಜಕ್ಕೂ ಮುಖ ಮುಚ್ಚಿಕೊಂಡು ಓಡಾಡಬೇಕು.

ದಾವೂದ್ ಇಬ್ರಾಹಿಂ ಕೈವಾಡದಲ್ಲಿ ೧೯೯೭ರಲ್ಲಿ ೨೫೦ಕ್ಕೂ ಹೆಚ್ಚು ಜನರ ಜೀವ ಹಿಸುಕುವಲ್ಲಿಂದ ಶುರು; ಮುಂಬಯಿಯಲ್ಲಿ ಸರಾಸರಿ ವರ್ಷಕ್ಕೊಂದು ಸಾವಿನ ಹಬ್ಬ. ಯಾವ ಸರಕಾರಗಳೂ ತಡೆಯಲಾರದ್ದನ್ನು ಉಗ್ರರು ಮಾಡುತ್ತಿದ್ದಾರೆ. ಅವರಿಗೆ ತಡೆಯೂ ಇಲ್ಲ, ಯಾವ ಭಿಡೆಯೂ ಇಲ್ಲ. ರಾತ್ರಿ ಒಂದು ಗಂಟೆ ಕರೆಂಟು ಕೈಕೊಟ್ಟರೆ ನಡೆಯುವ ಸರಗಳ್ಳತನಗಳನ್ನು, ಮನೆಯಲ್ಲಿದ್ದ ಒಂಟಿ ಮಹಿಳೆ ಮಟಮಟ ಮಧ್ಯಾಹ್ನವೇ ಕೊಲೆಗೀಡಾಗುವುದನ್ನು ತಡೆಯಲಾಗದ ನಮ್ಮ ಸರಕಾರಗಳು, ರಕ್ಕಸ ಉಗ್ರರನ್ನು ಮಟ್ಟ ಹಾಕುತ್ತೇವೆ ಎಂದರೆ ನೀವು ನಂಬುತ್ತೀರಾ?

Read more...

November 19, 2008

ಬೊಂಬೆ ಹುಡುಗಿ

ನ್ನಡದ ಟಿವಿ ಚಾನೆಲ್‌ಗಳಲ್ಲಿ ಇತ್ತೀಚೆಗೆ 'ಕಾಮಿಡಿ ಟೈಂ' ಜಾಸ್ತಿಯಾಗಿದೆ ! ಕಿರು-ಹಿರಿತೆರೆಯ ನಟರು, ಹಾಸ್ಯ ಬರಹಗಾರರು ಭಾಗವಹಿಸುವ, ಸಿಹಿಕಹಿ ಚಂದ್ರು ಹಾಗೂ ಮಿಮಿಕ್ರಿ ದಯಾನಂದ್ ತೀರ್ಪುಗಾರರಾಗಿರುವ, ಕಸ್ತೂರಿ ಚಾನೆಲ್‌ನಲ್ಲಿ ಪ್ರಸಾರವಾಗುವ, 'ಹಾಸ್ಯದರಸ ' ಎಂಬ ಕಾರ್ಯಕ್ರಮ, ಅಂತಹ ಅತ್ಯಂತ ಬೋರಿಂಗ್ ಟೈಂ ಸ್ಲಾಟ್ ! ಇನ್ನು `ಜೀ ಕನ್ನಡ 'ದ 'ಕಾಮಿಡಿ ಕಿಲಾಡಿ'ಗಳಲ್ಲಿ ನಿರೂಪಕಿ ಅನುಶ್ರೀಯ ಥಕಥೈಯೇ ಹೆಚ್ಚಾಗಿರುತ್ತದಷ್ಟೇ ಹೊರತು, ಬಹುಪಾಲು ಹಾಸ್ಯ ಕಲಾವಿದರು ಫ್ಲಾಪ್‌ಫ್ಲಾಪ್. ಆದರೂ ಅಪರೂಪಕ್ಕೆ ಒಬ್ಬಿಬ್ಬರು, ನೋಡುವವರ ಹಲ್ಲು ಸೆಟ್‌ಗಳೂ ಜಾರುವಂತೆ ನಗಿಸುತ್ತಾರೆ. ಸ್ವಾದಿಷ್ಟ ಹಾಸ್ಯ ಬಡಿಸುತ್ತಾರೆ. ಅಂಥವರಲ್ಲಿ ಒಬ್ಬರು ಇಂದುಶ್ರೀ. 'ಸ್ಟಾರ್ ಒನ್' ಚಾನೆಲ್‌ನಲ್ಲಿ ಪ್ರಸಾರವಾಗುತ್ತ ಅತ್ಯುತ್ತಮ ಎನಿಸಿದ್ದ 'ಲಾಫ್ಟರ್ ಛಾಲೆಂಜ್'ನ ಕಲಾವಿದರನ್ನೂ ಸರಿಗಟ್ಟುವಂತೆ ಬೊಂಬೆಯನ್ನು ಮಾತಾಡಿಸಬಲ್ಲ ಹುಡುಗಿ ಈಕೆ. ಅವಳ ಕತೆ ಇಲ್ಲಿದೆ. ಸೀರಿಯಸ್ಸಾಗಿ ಓದಿ.


ಇದು ಡಿಂಕು ಪ್ರಪಂಚ. ಬಂದವರನ್ನು ಹೋದವರನ್ನು ಅದು ಕಣ್ಣು ಕೆಕ್ಕರಿಸಿ ನೋಡುತ್ತಿದೆ. ಸರಕ್ಕನೆ ಕುತ್ತಿಗೆ ಹೊರಳಿಸುತ್ತದೆ. ಅದೊಂಥರಾ ಛದ್ಮವೇಷಧಾರಿಯೂ. ಡಾಕ್ಟರು, ಕುಡುಕ, ರೌಡಿ, ಸ್ವಾಮೀಜಿ ಹೀಗೆ ನಾನಾ ವೇಷಗಳಲ್ಲಿ ಕಂಗೊಳಿಸಿ, ನಾನಾ ಸ್ವರ ಹೊರಡಿಸಿದರೂ ಡಿಂಕು ಡಿಂಕೂನೇ. ಡಿಂಕು ಹುಡುಗಿಯೋ, ಹುಡುಗನೋ? ನೆನೆದವರ ಮನದಲ್ಲಿ ಡಿಂಕು ಎಲ್ಲವೂ. ಯಾರೇ ಆಗಲಿ, ಮಾತಾಡಿಸಿದಾಗಲೇ ಅದಕ್ಕೆ ತೃಪ್ತಿ. ಅಂತಹ ಡಿಂಕು ಎಂದರೆ ಒಂದು ಮರದ ಗೊಂಬೆ. ಅದು ಮಾತಾಡುವಂತೆ ಮಾಡಿದವರು ಇಂದುಶ್ರೀ. ಇವರ ಕೈಗೆ ಸಿಕ್ಕರೆ - 'ಮೂಕಂ ಕರೋತಿ ವಾಚಾಲಂ' !

ಇಂಗ್ಲಿಷ್‌ನಲ್ಲಿ ಇಂಥವರಿಗೆ ventriloquist ಅನ್ನುತ್ತಾರೆ. ಅಂದರೆ ಮರದ ವಸ್ತುವಿನಿಂದ ಸ್ವರ ಬರುವಂತೆ ಪ್ರದರ್ಶನ ನೀಡುವವರು ಎಂದರ್ಥ. ಜಾದೂಗಾರರೇ ಹೆಚ್ಚಾಗಿ ಮಾಡುವ, `ಮಾತನಾಡುವ ಗೊಂಬೆ' ಅಂತ ಕರೆಸಿಕೊಳ್ಳುವ ಈ ಪ್ರದರ್ಶನ ನೀಡುವವರು ಬಹಳ ಕಡಿಮೆ ಜನ. ಕರ್ನಾಟಕದಲ್ಲಿ ಉದಯ್ ಜಾದೂಗಾರ್, ಪ್ರಹ್ಲಾದ್ ಆಚಾರ್ಯ (ಕೋತಿ)ರಮೇಶ್, ರಂಗಶಾಹಿ ಹೀಗೆ ಕೆಲವರಷ್ಟೇ ನಡೆಸಿಕೊಡುತ್ತಾರೆ. ಮಾತು-ಕೃತಿ ಎರಡರಲ್ಲೂ ಇದಕ್ಕೆ ವಿಶೇಷ ಅಭ್ಯಾಸ ಬೇಕು. ಆದರೆ ಹೆಣ್ಣೊಬ್ಬಳು ಈ ಪ್ರದರ್ಶನವನ್ನು ಆರಿಸಿಕೊಂಡದ್ದು, ಅದರಲ್ಲಿ ಪಳಗಿದ್ದು , ಲಿಮ್ಕಾ ದಾಖಲೆ ಮಾಡಿದ್ದು ಒಂದು ವಿಶೇಷ ಕತೆ .ತನ್ನ ಗೊಂಬೆ ಡಿಂಕುವನ್ನು ಮಾತಾಡಿಸುತ್ತಾ ಟಿವಿ ವಾಹಿನಿಗಳ ಮೂಲಕ ರಾಜ್ಯಾದ್ಯಂತ ಈಗ ಕಾಣಿಸಿಕೊಳ್ಳುತ್ತಿರುವವರು ಇಂದುಶ್ರೀ.

ಎಸ್‌ಎಸ್‌ಎಲ್‌ಸಿ ಮುಗಿಸಿ, ಪಿಯುಸಿ ಸೈನ್ಸ್ ಬೇಜಾರಾಗಿ, ಚಿತ್ರಕಲಾ ಪರಿಷತ್‌ನಲ್ಲಿ ಐದು ವರ್ಷಗಳ `ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್' ಮುಗಿಸಿ ಫಲಿತಾಂಶಕ್ಕಾಗಿ ಕಾಯುತ್ತಿರುವ ಈಕೆಯ, ಬೆಂಗಳೂರಿನ ಪುಟ್ಟ ಮನೆ ಹೊಕ್ಕರೆ ಗೋಡೆ ತುಂಬೆಲ್ಲ ಪ್ರಶಸ್ತಿ ಫಲಕಗಳು. ಆಕೆ ರಚಿಸಿದ ಪೇಂಟಿಂಗ್ಸ್‌ಗಳು, ದೊಡ್ಡ ದೊಡ್ಡ ಆಲ್ಬಮ್‌ಗಳಲ್ಲಿ ಪ್ರಶಸ್ತಿ ಪತ್ರಗಳು, ಪತ್ರಿಕಾ ವರದಿಗಳ ಕಟ್ಟಿಂಗ್ಸ್‌ಗಳು. ಹಾಸಿಗೆ ಮೇಲೆ ಡಿಂಕು, ಅದರ ತಮ್ಮ , ಮತ್ತೊಂದು ಕೋತಿ ! `ಫೆಬ್ರವರಿನಲ್ಲಿ `ಜೀ ಕನ್ನಡ' ಚಾನೆಲ್‌ನಲ್ಲಿ `ನೆನೆದವರ ಮನದಲ್ಲಿ ಡಿಂಕು ದುನಿಯಾ' ಅಂತ ಆರಂಭವಾದಾಗ ಒಂದೂವರೆ ಗಂಟೆ ಶೋ ಕೊಡ್ತಿದ್ದೆ. ಅಷ್ಟು ದೀರ್ಘ ಅವಧಿಯ ಕಾರ್ಯಕ್ರಮ, ಟೆಲಿವಿಷನ್ ಹಿಸ್ಟರೀನಲ್ಲೇ ಫಸ್ಟ್ ಟೈಮ್ ಆಗಿತ್ತು. ಈಗ ಪ್ರತಿ ಶನಿವಾರ ೯ರಿಂದ ೧೦ ರವರೆಗೆ ಬರತ್ತೆ. ಇದಕ್ಕಿಂತ ಮೊದಲು ಸಿಟಿ ಕೇಬಲ್‌ನಲ್ಲಿ ಎರಡೂವರೆ ವರ್ಷ ಪ್ರತಿ ಶುಕ್ರವಾರ ಒಂದು ಗಂಟೆ ಕಾರ್ಯಕ್ರಮ ಕೊಡ್ತಾ ಇದ್ದೆ. ಅದು ಸುಮಾರು ೧೬೦ ಶೋಗಳಾಗಿತ್ತು. ಹಾಗೇ ಹೆಚ್ಚಿನ ಎಲ್ಲ ಸಿಟಿ ಚಾನಲ್‌ಗಳಲ್ಲಿ ಮತ್ತು ಉದಯ, ಯು-೨, ಈ-ಟಿವಿ, ಟಿವಿ ೯ಗಳಲ್ಲಿ ಕಾರ್ಯಕ್ರಮ ಕೊಟ್ಟಿದೀನಿ' ಅಂತ ವಿವರ ಕೊಟ್ಟರು ಇಂದುಶ್ರೀ. ತನ್ನ ಪ್ರತಿಭೆಯನ್ನು ಆಕೆ ಮೊದಲು ತೋರಿದ್ದು ಮೆಜಿಷಿಯನ್ ಆಗಿಯಂತೆ. ಆಕೆಯ ತಂದೆ ಆರ್.ಎಂ.ರವೀಂದ್ರ ನಾಟಕ ಕಲಾವಿದರು, ತಾಯಿ ಮಂಜುಳಾ ರವೀಂದ್ರ ಹಾಡುಗಾರ್ತಿ. ಹೀಗಾಗಿ ಸಣ್ಣವಳಾಗಿದ್ದಾಗಲೇ ಎಲ್ಲದರಲ್ಲೂ ಆಸಕ್ತಿ ಇತ್ತು. ಆದರೆ ಮ್ಯಾಜಿಕ್ ಬಗ್ಗೆ ಏನೂ ಗೊತ್ತಿರಲಿಲ್ಲ. ಯಾರಪ್ಪಾ ಓದೋದು, ಮ್ಯಾಜಿಕ್ ಕಲಿತ್ರೆ ಏನಾದ್ರೂ ಆಗಬಹುದು ಅನ್ನೋ ಮೆಂಟಾಲಿಟಿನಲ್ಲಿ ಎಲ್ಲ ಶುರು ಆಗಿದ್ದು. ಹೀಗೆ ಎರಡನೇ ಕ್ಲಾಸ್‌ನಲ್ಲಿದ್ದಾಗಲೇ ಮ್ಯಾಜಿಕ್ ಅಭ್ಯಾಸ ಶುರು. ಬಳಿಕ ಕೆ.ಎಸ್.ರಮೇಶ್ ಬೆಂಗಳೂರಲ್ಲಿ `ಇಂಟರ್‌ನ್ಯಾಷನಲ್ ಮ್ಯಾಜಿಕ್ ಫೆಸ್ಟಿವಲ್ ಮಾಡಿದ್ದಾಗ ಅಲ್ಲದೆ, ಹೈದರಾಬಾದ್, ದಿಲ್ಲಿ, ಗೋವಾ, ಕೇರಳ ಮೊದಲಾದೆಡೆ ಕಾರ್ಯಕ್ರಮ ನೀಡಿದೆ ಅನ್ನುತ್ತಾರೆ.ಇಂದುಶ್ರೀ ಮ್ಯಾಜಿಕ್‌ನ್ನು ಗುರು-ಶಿಷ್ಯ ಪರಂಪರೆಯಲ್ಲಿ ಯಾರಿಂದಲೂ ಕಲಿತವರಲ್ಲ. ಅವರ ಫ್ಯಾಮಿಲಿ ಫ್ರೆಂಡ್ ಕೇಶವ್ ಜಾದೂಗಾರ್ ಮೊದಲು ಸಣ್ಣ ಸಣ್ಣ ಟ್ರಿಕ್ಸ್ ಕಲಿಸಿದರಂತೆ. ಅದರಿಂದ ಆಸಕ್ತಿ ಹೆಚ್ಚಾಗಿ ಸಿ.ಡಿ, ಪುಸ್ತಕಗಳನ್ನು ನೋಡಿ ಅಭ್ಯಾಸ ಮಾಡಿದರು. ಜಾದೂಗಾರರಾದ ಎ.ಕೆ.ದತ್, ಉದಯ್ ಜಾದೂಗಾರ್, ಕುದ್ರೋಳಿ ಗಣೇಶ್‌ರೆಲ್ಲಾ ಪ್ರೋ ನೀಡಿದರು. ಈ ವೆಂಟಿಲಾಟಿಸ್‌ಮ್ ಕೂಡಾ ಹಾಗೆಯೇ. ಯಾರೋ ಮಾಡಿದ್ದನ್ನು ನೋಡಿ ಆಸಕ್ತಿ ಬಂದು ತನ್ನ ಪಾಡಿಗೆ ತಾನು ಕಲಿತದ್ದು. ಗಂಟೆಗಟ್ಟಲೆ ಅಭ್ಯಾಸ ಮಾಡಿದ್ದು. ಪಾಲ್‌ವಿಂಚಿನ್ ಅಂಥವರ ಸಿ.ಡಿ ನೋಡಿ ಕರಗತ ಮಾಡಿಕೊಂಡದ್ದು. ಹಾಗೆ ಒಮ್ಮೆ ಮ್ಯಾಜಿಕ್ ಷೋನಲ್ಲಿ ಕೋತಿ ತಗೊಂಡು ಹೋಗಿ ಮಾತಾಡಿಸಿದ್ದು. ಬಳಿಕ ದತ್ತಾ ಅಂಕಲ್ ಅವರು, ರಾಮಸ್ವಾಮಿ ಅವರಿಂದ ಈ ಡಿಂಕು ಗೊಂಬೆ ಕೊಡಿಸಿದರಂತೆ.

'ಈ ಮಾತಾಡೋ ಗೊಂಬೆ ಡಿಂಕು ಜನಪ್ರಿಯನಾದ ನಂತ್ರ, ಮ್ಯಾಜಿಕ್ ಷೋ ಹೊರಗಡೆ ಮಾಡ್ತಾ, ಟಿವಿನಲ್ಲಿ ಡಿಂಕು ಮಾತ್ರ ಬರ್‍ತಾನೆ. ಅದನ್ನೊಂದು ಗೊಂಬೆ ಅನ್ನೋದಕ್ಕಿಂತ ಕ್ಯಾರೆಕ್ಟರ್ ಆಗಿ ಜನ ಸ್ವೀಕರಿಸಿದ್ದಾರೆ. ಅವನು ಹಿಂದು-ಮುಸ್ಲಿಂ-ಕ್ರಿಶ್ಚನ್ ಆಗಿದ್ದಾನೆ. ಸಮಾಜಕ್ಕೆ ಒಳ್ಳೇ ಸಂದೇಶ ಕೊಡೋ ಕೆಲಸ ಮಾಡ್ತಿದ್ದಾನೆ. ಬಾಂಬ್ ಬ್ಲಾಸ್ಟ್ ಬಗ್ಗೆ , ಚಿಕುನ್‌ಗುನ್ಯಾ ಬಗ್ಗೆ ಹೀಗೆ ಸಮಕಾಲೀನ ವಿಷಯಗಳನ್ನೇ ನಾವು ಚರ್ಚಿಸ್ತೀವಿ. ಈ ಕಾನ್ಸೆಪ್ಟ್‌ಗಳಿಗೆ ರಾಮನಾಥ್ ಅಂತ ಒಬ್ಬರು ನನಗೆ ಹೆಲ್ಪ್ ಮಾಡ್ತಾರೆ. ತತ್‌ಕ್ಷಣದ ಪ್ರತಿಕ್ರಿಯೆ-ಸ್ಪಂದನೆ ಇದಕ್ಕೆ ಮುಖ್ಯ. ಲೈವ್ ಶೋನಲ್ಲಿ ಅಂತೂ ಯಾರ್‍ಯಾರೋ ಏನೇನೋ ಪ್ರಶ್ನೆ ಕೇಳ್ತಾರೆ. ಅವುಗಳನ್ನು ನಿಭಾಯಿಸುವ ಸ್ಕಿಲ್ ಬೇಕು' ಅಂತಾಳೆ ಈಕೆ. ಮೂರು ಗೊಂಬೆಗಳ ಜತೆ ಏಕಕಾಲದಲ್ಲಿ ನೀಡಿದ ಪ್ರದರ್ಶನದಿಂದ ಲಿಮ್ಕಾ ರೆಕಾರ್ಡ್ ದಾಖಲಿಸಿದ್ದು ಇಂದುಶ್ರೀ ಹೆಗ್ಗಳಿಕೆ. ಪ್ರತಿ ಶನಿವಾರ `ಸ್ಟಾರ್ ನ್ಯೂಸ್' ಚಾನೆಲ್‌ನಲ್ಲಿ ಲಿಮ್ಕಾ ರೆಕಾರ್ಡ್‌ಗಳ ಬಗ್ಗೆಯೇ `ವಾಹ್ ಇಂಡಿಯಾ' ಎಂಬ ಕಾರ್ಯಕ್ರಮ ಪ್ರಸಾರವಾಗುತ್ತದೆ. ಅದರಲ್ಲಿ ಕಳೆದ ಆಗಸ್ಟ್‌ನಲ್ಲಿ ಇವರ ಕಾರ್ಯಕ್ರಮ ಪ್ರಸಾರವಾಯಿತು. ಅದರಲ್ಲಿ ಎರಡು ಗೊಂಬೆಗಳನ್ನು ಎರಡು ಕೈಗಳಲ್ಲಿ, ಇನ್ನೊಂದನ್ನು ಕಾಲಲ್ಲಿ ಕುಣಿಸಿದರು, ಮಾತಾಡಿಸಿದರು. ಪ್ರತಿಯೊಂದು ಗೊಂಬೆಗೂ ತನ್ನದೇ ದನಿ, ಹಾವಭಾವಗಳು ! ಹೀಗೆ ಮೂರು ಗೊಂಬೆಗಳೂ ಏಕಕಾಲದಲ್ಲಿ ಅಭಿನಯಿಸುತ್ತಾ, ಇಂದುಶ್ರೀಯೂ ಅವುಗಳೊಂದಿಗೆ ಬೆರೆತು ಮಾತಾಡುವುದಕ್ಕೆ ಅಸಾಧಾರಣ ಅಭ್ಯಾಸವೇ ಬೇಕಲ್ಲ. `ಕೆಲವರು ಗೊಂಬೆಗಳನ್ನ ತುಂಬಾ ವಲ್ಗರ್ ಆಗಿ ಯೂಸ್ ಮಾಡ್ತಾರೆ. ನಾನು ಯಾವತ್ತೂ ಹಾಗೆ ಮಾಡಿಲ್ಲ, ಮಾಡೋಲ್ಲ. ಆದರೆ ಎಲ್ಲ ವರ್ಗದ ಜನರಿಗೂ ಇಷ್ಟ ಆಗಬೇಕು ಅನೋದು ನನ್ನಾಸೆ. ಕಾಮಿಡಿ ಇದ್ದಾಗ ಚಿಕ್ಕವರಿಂದ ದೊಡ್ಡವರವರೆಗೆ ಅಟ್ರ್ಯಾಕ್ಟ್ ಆಗ್ತಾರೆ. ಒಮ್ಮೆ ಲೈವ್ ಪ್ರೊಗ್ರಾಮ್‌ನಲ್ಲಿ ಕಾಲ್ ಮಾಡಿದೋರು- ಡಿಂಕು ರಾಜ್‌ಕುಮಾರ್ ಥರಾ. ಯಾವ ಪಾತ್ರ ಹಾಕಿದ್ರೂ ಸೂಟ್ ಆಗತ್ತೆ ಅಂದಿದ್ರು' ಅಂತಾರೆ ಇಂದುಶ್ರೀ. ಕೆಂಪೇಗೌಡ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ, ಕರ್ನಾಟಕ ಮಹಿಳಾ ರತ್ನ ಪ್ರಶಸ್ತಿ, ಸೌಂದರ್ಯ ಪ್ರಶಸ್ತಿ ಹೀಗೆ ಹತ್ತಾರು ಸನ್ಮಾನಗಳು ಇವರಿಗೆ ಸಂದಿವೆ. ಕಳೆದ ವರ್ಷ ಮೈಸೂರು ದಸರಾದ ಹಾಸ್ಯೋತ್ಸವದಲ್ಲಿ `ಮಾತಾಡುವ ಗೊಂಬೆ' ಕಾರ್ಯಕ್ರಮಕ್ಕೆ ದೊರೆತ ಅಮೋಘ ಪ್ರತಿಕ್ರಿಯೆ ಇವರಿಗೆ ಸದಾ ನೆನಪು.

ಶಾಲೆಗೆ ಹೋಗ್ತಿದ್ದಾಗ ಸೈಂಟಿಸ್ಟ್ ಆಗಬೇಕು ಅಂತ ಕನಸು ಕಾಣುತ್ತಿದ್ದ ಇಂದುಶ್ರೀ, ಈಗ ಅಪ್ಪ ,ಅಮ್ಮ ಹಾಗೂ ತಮ್ಮನೊಡಗೂಡಿ ಮೂರ್‍ನಾಲ್ಕು ಗಂಟೆಗಳ ಮ್ಯಾಜಿಕ್ ಕಾರ್ಯಕ್ರಮ ಕೊಡುತ್ತಾರೆ. ಹೀಗೆ ಕಳೆದ ಹದಿನಾಲ್ಕು ವರ್ಷಗಳಲ್ಲಿ ಸುಮಾರು ೨,೮೦೦ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಕಮಲಹಾಸನ್ ಸ್ಫೂರ್ತಿಯಿಂದ `ಡಿಂಕೂಸ್ ದಶಾವತಾರಂ' ನಡೆಸಿರುವ ಈಕೆ, ಸ್ವಲ್ಪ ಮಟ್ಟಿಗೆ ಹಾಡುತ್ತಾ, ಸಂಗೀತ ಸಾಧನಗಳನ್ನು ನುಡಿಸುತ್ತಾ, ಪೇಂಟಿಂಗ್ ಚೆನ್ನಾಗಿ ಮಾಡುವ ದಶಾವತಾರಿಯೇ. ಡಿಂಕು ಗೊಂಬೆಯು ಕೃಷ್ಣನಾಗಿ, ಡಿಂಕಾನಂದ ತೀರ್ಥಾನಂದ ಸ್ವಾಮೀಜಿಯಾಗಿ ಬಂದಾಗಲೆಲ್ಲ ಬಹಳ ಜಾಗ್ರತೆ ಬೇಕು. ತಮಾಷೆ ನೆಪದಲ್ಲಿ ಸ್ವಲ್ಪ ತುಟಿ ಮೀರಿದರೂ ಅದು ಸಮಸ್ಯೆ ಸೃಷ್ಟಿಸಬಹುದೆಂಬ ಎಚ್ಚರ ಇವರಿಗಿದೆ. ಇವರ ಪ್ರದರ್ಶನದ ಯಶಸ್ಸಿರುವುದು ಧ್ವನಿಯ ಮಾಂತ್ರಿಕತೆಯಲ್ಲಿ ಮತ್ತು ಸಂದರ್ಭಗಳನ್ನು ನಿರೂಪಿಸುವ ಜಾಣ್ಮೆಯಲ್ಲಿ. ಯಾವುದೋ ಸಿನಿಮಾ, ನಾಟಕದ ದೃಶ್ಯಗಳನ್ನು ಅನುಕರಿಸದೆ, ಹೊಸ ಹೊಸ ಹಾಸ್ಯ ದೃಶ್ಯಗಳನ್ನು ಹೆಣೆಯುವುದು ಇವರ ವೈಶಿಷ್ಟ್ಯ. ಅವುಗಳನ್ನು ಧ್ವನಿ ಚಮತ್ಕಾರದೊಂದಿಗೆ ಬೆಳೆಸುತ್ತಾ ಹಾಸ್ಯದ ಪಂಚಿಂಗ್ ಮತ್ತು ತೀವ್ರ ಪ್ರತ್ಯುತ್ಪನ್ನ ಮತಿತ್ವ ಕಾರ್‍ಯಕ್ರಮದ ಯಶಸ್ಸಿಗೆ ಮುಖ್ಯ ಕಾರಣ. ಯಾವುದೇ ಕಾರ್ಯಕ್ರಮವಾಗಿರಲಿ, ಯಾವುದೇ ವಿಷಯವಾಗಿರಲಿ, ಡಿಂಕು ಜತೆ ಇಂದುಶ್ರೀ ಬಂದರೆಂದರೆ ನಗೆ ಹೊನಲು ಗ್ಯಾರಂಟಿ. ಐದು ಗೊಂಬೆಗಳನ್ನು ಏಕಕಾಲದಲ್ಲಿ ಮಾತನಾಡಿಸಿ ಗಿನ್ನಿಸ್ ದಾಖಲೆ ಮಾಡಬೇಕೆಂಬ ಆಸೆ ಇಂದುಶ್ರೀಗೆ, ಗುಡ್‌ಲಕ್ ಅನ್ನಿ.

Read more...

November 12, 2008

ಮಹಾಬಲ ಹೆಗಡೆ ಮಹೋತ್ಸವ

ಹೊನ್ನಾವರ ತಾಲೂಕಿನ ಅಣಿಲಗೋಡ ಎಂಬ ಊರಿನಲ್ಲಿ ಅಂದು ಆಟ. ಸಂಜೆ ಜೋರಾಗಿ ಮಳೆ ಬಿದ್ದುದರಿಂದ ಜನ ಸೇರಿರಲಿಲ್ಲ. ಮೇಳದ ಯಜಮಾನರಾದ ಕೆರೆಮನೆ ಶಿವರಾಮ ಹೆಗಡೆಯವರು ಏನೋ ತೊಂದರೆಯಿಂದ ಬಂದಿರಲಿಲ್ಲ. ಆಗ ಭಾಗವತರೂ, ಮಹಾಬಲ ಹೆಗಡೆಯವರೂ ಸೇರಿ ಮಾತನಾಡಿ ಆ ದಿನ ಆಟವನ್ನು ನಿಲ್ಲಿಸುವ ನಿರ್ಧಾರಕ್ಕೆ ಬಂದರು. ಆದರೆ ಕೆಲ ಮುಖಂಡರು ‘ನೀವು ಆಟ ಆಡಲೇಬೇಕು. ಇಲ್ಲದಿದ್ದರೆ ನಿಮ್ಮ ಸಾಮಾನುಗಳನ್ನು ಇಲ್ಲಿಂದ ಒಯ್ಯಲು ಬಿಡುವುದಿಲ್ಲ’ ಎಂದು ಪಟ್ಟು ಹಿಡಿದರು. ಕಲಾವಿದರ ಮೇಲೆ ಸತ್ತೆ ನಡೆಸುವ ಇವರ ರೀತಿಯಿಂದ ರೋಸಿಹೋದ ಮಹಾಬಲ ಹೆಗಡೆಯವರು ಮುಖಕ್ಕಿಷ್ಟು ಬಣ್ಣ ಮೆತ್ತಿಕೊಂಡು ಇದ್ದ ಕ್ರಾಪನ್ನೇ ಬಾಚಿ, ಒಂದು ಹ್ಯಾಂಡ್‌ಬ್ಯಾಗ್, ಕೊಡೆ ಹಿಡಿದು ‘ನಾನು ವಿಶ್ವಾಮಿತ್ರ, ತಪಸ್ಸಿಗೆ ಹೊರಟಿದ್ದೇನೆ’ ಎಂದು ‘ಹುಚ್ಚುಹೋಳಿ’ ಎಬ್ಬಿಸಿಬಿಟ್ಟರು. ಹಟ ಹಿಡಿದವರು ಎಂದೂ ಮರೆಯದಂತೆ ಮಾಡಿದರು.ಆಗಲೇ ಅವರಿಗೆ ಅಂದಿನ ಹಿರಿಯ-ಶ್ರೇಷ್ಠ ಕಲಾವಿದ ಮೂಡ್ಕಣಿ ನಾರಾಯಣ ಹೆಗಡೆಯವರ ಪರಿಚಯವಾಗಿತ್ತು. ಯಕ್ಷಗಾನ ಕುಟುಂಬದವನೇ ಆದ ಮಹಾಬಲರನ್ನು ಅವರೂ ಬಲ್ಲರು. ಅವರ ಬಗ್ಗೆ ಪ್ರೀತಿಯೂ ಇತ್ತು. ಯಾವಾಗಾದರೊಮ್ಮೆ ಮೂಡ್ಕಣಿ ಹೆಗಡೆಯವರ ಮನೆಗೆ ಹೋಗುತ್ತಿದ್ದ ಮಹಾಬಲರು ಒಮ್ಮೆ ಮೂಡ್ಕಣಿಗೆ ಹೋದಾಗ ಅವರಿಂದ ಮೂರು ಪ್ರಸಂಗ ಪಟ್ಟಿಗಳನ್ನು ತಂದುಕೊಂಡಿದ್ದರು. ಅವುಗಳನ್ನು ಓದಿದ್ದೂ ಆಯಿತು. ತಿರುಗಿ ಕೊಡುವಾಗ ಈ ಕಿಡಿಗೇಡಿ ಹುಡುಗ ಆ ಪ್ರಸಂಗಗಳಲ್ಲಿ ತಾನು ಮಾಡಬಹುದಾದ (ಮಾಡಬೇಕೆನಿಸಿದ) ಮೂರು ಪಾತ್ರಗಳಿಗೆ ಸಂಬಂಧಿಸಿದ ಪುಟಗಳನ್ನಷ್ಟೇ ಹರಿದು ವಾಪಸ್ಸು ತೆಗೆದುಕೊಂಡು ಹೋಗಿ ಕೊಟ್ಟ. (ಎಲ್.ಎಸ್.ಶಾಸ್ತ್ರಿ ಅವರು ಬರೆದಿರುವ ಕೆರೆಮನೆ ಮಹಾಬಲ ಹೆಗಡೆಯವರ ಜೀವನ ಚರಿತ್ರೆಯಿಂದ ಆಯ್ದ ಭಾಗಗಳು)

***
ನವಂಬರ್ ೧೬ರ ಭಾನುವಾರದ ಬೆಳಗ್ಗೆ ೧೦ ಕ್ಕೆ ಬೆಂಗಳೂರಿನ ಎಡಿಎ ರಂಗಮಂದಿರದಲ್ಲಿ ಮಹಾಬಲ ಹೆಗಡೆ ಮಹೋತ್ಸವ. ಅವರ ಜೀವನಕಥನದ ಪುಸ್ತಕ-ವೆಬ್‌ಸೈಟ್ ಬಿಡುಗಡೆ, ಸಾಕ್ಷ್ಯಚಿತ್ರ-ಛಾಯಾಚಿತ್ರ ಪ್ರದರ್ಶನ. ಮಾಯಾರಾವ್, ಶಂಭು ಹೆಗಡೆ, ಪ್ರಭಾಕರ ಜೋಶಿ ಮೊದಲಾದವರು ಭಾಗವಹಿಸುತ್ತಾರೆ.

Read more...

November 09, 2008

ಅಶ್ವತ್ಥಾಮನ ಅಪ್ಪ ದ್ರೋಣ ಭಟ್ರು ಹೇಗಿದ್ದಾರೆ?

೨೧-೪-೧೯೮೩
ಪ್ರೀತಿಯ ಪ್ರೇಮ,
ಮೇಜಿನ ಮೇಲೆ ೪-೫ ಕಾಗದಗಳು. ಎಲ್ಲವೂ ನನಗೇ! ಬಾಚಿ ಬಾಚಿ ತಕೊಂಡೆ. ಖುಶಿ ಆಯ್ತು. ಉಮಾ, ಸಾವಿತ್ರಿ, ಸತ್ಯ, ಕುಮಾರ-ಅರೇ ಪುಟ್ಟಕ್ಕಯ್ಯ,  ಆಕೆಯೂ ಉತ್ತರ ಕೊಟ್ಟುಬಿಟ್ಟಳು ! ವರ್ಷಗಳ ನಂತರ ಬಂದ ಅವಳ ಕಾಗದ. ಹನುಮಂತ, ರಾಮ, ಶಬರಿ ಅಬ್ಬಬ್ಬಾ ಒಳ್ಳೊಳ್ಳೆಯ ಹೆಸರೇ ಸಿಕ್ಕಿದೆ ನಿಮಗೆ. ನಮ್ಮಮ್ಮ ಬಂದ ಕಾಗದ ಎಲ್ಲ ಓದಿಕೊಂಡು, ರಾಮ, ಕೃಷ್ಣ ಅಂತ ಇಡ್ಳಿ ತಿಂತಿತ್ತು. ಅಂತೂ ಅವನ ಅಮ್ಮನ ಹೊಟ್ಟೆಯಲ್ಲಿ ಆರಾಮವಾಗಿ ಬೆಚ್ಚಗೆ ಕೂತು, ಎಲ್ಲರನ್ನೂ ಬಹಳ ಕಾಯುವಂತೆ ಮಾಡಿದ. ಮಹಾತುಂಟನಾಗ್ತಾನೋ ಏನೋ ಪೋರ. ಎಲ್ಲ ಕಾಗದಗಳೂ ಇವತ್ತು ಬೆಳಗ್ಗೆ ತಲುಪಿದ್ದು ಇಲ್ಲಿಗೆ. ರಾಧೆ-ಉಮಾ ಶುಕ್ರವಾರ ಬಂದ ಮೇಲೆ ಮುಂದಿನ-ಹಿಂದಿನ ಸುದ್ದಿಗಳು ನನಗೆ ಸಿಕ್ಕಬೇಕು.

ರಾತ್ರಿ ಹತ್ತು ಗಂಟೆ ಕಳೆದಿರಬೇಕೀಗ. ನಿನ್ನೆ ನಾಲ್ಕು ಹನಿ ಮಳೆ (೮ ಸೆಂಟ್ಸ್ ನಮ್ಮ ಭಾಷೆಯಲ್ಲಿ ಹೇಳುವುದಾದರೆ) ಬಿತ್ತು. ನಾಳೆ ಹಲಸಿನ ಹಣ್ಣು ಪಾಯಸ ಮಾಡ್ತೇವೆ, ಬರ್‍ತೀರಾ? ನಮ್ಮಲ್ಲಿ ಮಳೆ ಬೀಳದೆ ತೋಟದಲ್ಲಿ ಕೆಲಸವಿಲ್ಲ. sprinkler ಹಾಕಿಸ್ತಾ ಇದ್ದಾರೆ. ನನಗೆ ಮನೆಯಲ್ಲೀಗ ನಿಮಿಷ ಪುರುಸೊತ್ತು ಇಲ್ಲ. ಉಮ ಇಲ್ಲದೇ ದಿನ ಆ ಗದ್ದೆ ಹತ್ತಿರ ಹೋಗಬೇಕಾಗುತ್ತದೆ. ನಿತ್ಯ ಬೆಳಗ್ಗೆ ಕಾಫಿ-ತಿಂಡಿ ಕಾರ್ಯಕ್ರಮ ಮುಗಿಸಿ, ಒಲೆಯಲ್ಲಿ ಏನಾದರೂ ಬೇಯುವುದಕ್ಕಿಟ್ಟು ಸರೀ ೮ ಗಂಟೆಗೆ ಹೊರಟೆನಾದರೆ, ಮನೆಗೆ ಬರುವಾಗ ೯ ಗಂಟೆ. ಬಟ್ಟೆ ಹೊಲಿಯುವುದೂ ತುಂಬ ಉಂಟು, ಮದುವೆ ಸೀಸನ್ ನೋಡು.

ನಿನಗೇನು, ದೊಡ್ಡ ಕುಂಬಳಕಾಯಿ ಸೋದರತ್ತೇಂತ ಬಡಾಯಿ ಕೊಚ್ಚು . ನಾನೂ ಸಾ ಅತ್ತೆ ಆಗ್ತೇನೆ ಒಂದಲ್ಲ ಒಂದು ದಿನ ನೋಡ್ತಾ ಇರು !ನೀನಲ್ಲೇ ಬಿದ್ದಿರು. ಇಲ್ಲಿಗೆ ಬರ್‍ಬೇಡ. ಇಲ್ಲಿ ರಾಶಿ ರಾಶಿ ಮಲ್ಲಿಗೆ ರಾಶಿ. ಅದರ ಜತೆಗೆ ರಂಜದ ಹೂವಿನ ಮಾಲೆಯೂ ಮುಡಿಪ್ಪೆತ್ತುವುದೀಗ. ಕೆಲಸದವರ ಮಕ್ಕಳು ನನ್ನ ಜತೆಗೆ ಗದ್ದೆಗೆ ಬರ್‍ತಾರೆ. ತೋಟದಲ್ಲಿ ಮರದ ಹತ್ತಿರ ಹೂವು ಹೆರ್‍ಕಲು ಅವರನ್ನು ಬಿಟ್ಟು ನಾನು ಓಟ. ಮನೆಗೆ ಹೂವು ತಂದರೆ ಅಮ್ಮ ಸುರಿದು ಕೊಡ್ತಾಳೆ. ನಿನ್ನ ಅತ್ತಿಗಮ್ಮ ನಿನಗೆ ಕೈಕೊಟ್ಟದ್ದಕ್ಕೆ-ನೀನೇ ಅವಳ ಅತ್ತಿಗಮ್ಮ ಆದರೆ ಆದೀತಂತೆ. ಟಾರ್ಚ್ ಇಲ್ಲದೇ ಹುಡುಕಿ ಹುಡುಕಿ ಅವಳಣ್ಣನಿಗೀಗ- ಈ ವರ್ಷ ಜೀವನ್ ಸಾಥೀ ಸಿಕ್ಕಲೇ ಇಲ್ಲ.

೧.೫.೮೩. ಪ್ರೇಮ, ತಿಂಗಳು ನಾಲ್ಕು ಕಳೆದು ಐದೂ ಆಯ್ತು, ನನಗಲ್ಲಿ ೮೩ನೇ ಇಸವಿಗೆ. ನಿನ್ನ ಅಕ್ಕ, ಭಾವ ನಿನ್ನೆ ಬಂದು ವಕ್ಕರಿಸಿದ್ದಾವೆ. ನಾನು ಮನೆ ಎಲ್ಲ ಚಂದ ಮಾಡಿ ನೀಟ್ ಆಗಿ ಇಟ್ಟುಕೊಂಡಿದ್ದೆ. ಈ ದಿನಗಳಲ್ಲಿ ಇವು ಬಂದು, ಆಟದವರ ಡೇರೆ ಮಾಡಿ ಹಾಕಿದ್ದಾವೆ. ಇಡೀ ಮನೆ ತಂತಿ-ಹಗ್ಗ. ಅಲ್ಲಿಇಲ್ಲಿ ಬಟ್ಟೆ ರಾಶಿ-ನೇತ್ಹಾಕಿದ್ದಾವೆ. ನೀನ್ಯಾಕೆ ಕತ್ತೆ ನನಿಗೆ ಬಯ್ತಾ ಕೂತದ್ದು? ಇಕೊ ಇನ್ನೂ ಇನ್ನೂ ಬಯ್ದರೆ, ನಿನಗೆ ಡಾರ್ಜಿಲಿಂಗ್ ಇರಲಿ, ಡೆಹ್ರಾಡೂನ್‌ಗೂ ಕೈಕೊಡ್ತೇನೆ. ನನ್ನ influence ನಿಂದ ಆಗುವಂತದ್ದು-ಬೇಕಿದ್ದರೆ ನನಗೆ ಸಲಾಂ ಹಾಕ್ತಾ ಇರು ! (ನಿನ್ನ ಪುಟ್ಟಕ್ಕನನ್ನು ವಿಚಾರಿಸಿಕೋ ಡೆಹ್ರಾಡಬ್ ಸೆಟ್ಟು ಯಾವುದೂಂತ. ಅದು ನೋಡಿ ಮಾತಾಡಿ ಬಂದದೆ.) ನಾನು ಅಲ್ಲಿಂದ ಬಂದ್ಮೇಲೆ ಬರ್‍ದ ಕಾಗದಕ್ಕೆ ನೀನೇ ಉತ್ತರ ಕೊಡ್ಲಿಲ್ವಾಂತ? ಅತ್ತೆಮ್ಮನಿಗೆ ೮೦ ಪೈಸೆ ಚಿಲ್ರೆ ಲೆಖ್ಖ ಕೊನೆಗೂ ಸಿಕ್ಕಿತಾ?

ನಮ್ಮ ಪೂ...ಪೂರ್ಣಿಮಾ ಎಂತ ಮಾಡ್ತೆ? ಅದರ ಅಮ್ಮನಿಗೆ ರವಿಕೆಗಳನ್ನು ಹೊಲಿದ ಬಗ್ಗೆ ಕೊಚ್ತಾ ಇತ್ತು ರಾಧೆ ಇಲ್ಲಿ. ನಿನ್ನಕ್ಕನೀಗೀಗ ಭಾರೀ ಬಡಾಯಿ. ಯಾಕೆಂದರೆ...ತಾನೊಂದು ದೊಡ್ಡ ಜನ...ಎಲ್ಲವೂ ತನ್ನತ್ರವೇ ವಿಷಯ ಕೇಳ್ತಾವೇಂತ. ಸರಸ್ವತಿ ಮನೆ ಬಿಸಿನೀರು ಕಡುಬು, ದೂರ್ ಸೆಂಟರ್ ಪಾಯಸ ಎಲ್ಲಾ ಸಿಕ್ಕೀತಾ ನನಗೆ ಮತ್ತೆ ಬಂದರೆ? ಏ ಪ್ರೇಮ, ನೀನು ಆವತ್ತು ಕಳಿಸಿದ್ದ ನೆಕ್ಕರೆ ಮಾವಿನಕಾಯಿ ನಿನ್ನ ಅತ್ತಿಗಮ್ಮನಿಗೂ ತಿನ್ನಲು ಕೊಟ್ಟಿದ್ದೇನೆ. ರಾಧೆ ಕಂತ್ರಿ ತರ್‍ಲೇ ಇಲ್ಲ. ಬಂದದ್ದು ನೋಡಿದ್ರೆ ಬೆಂಗ್ಳೂರಿಂದ. ತಂದದ್ದು ಬದ್ನೆಕಾಯಿ ಎಂತದ್ದೂ ಇಲ್ಲ. ಉಮ ೩ ಬುಕ್ಸ್ ತಂದಿದ್ದಾನೆ.  ತಾಯಿ, ಮೃತ್ಯುಂಜಯ, ಇನ್ನೊಂದು. ಹೆಸ್ರೂ ಮರ್‍ತೋಯ್ತ.

ದೇರಜ್ಜಮ್ಮ ಹೇಗುಂಟು? ಮರಿ ಮಗನನ್ನೂ ನೋಡಿ ಆಯ್ತಾ? ನನಗೀಗ ತುಂಬ ಹೊಟ್ಟೆಕಿಚ್ಚು ನಿಮ್ಮ ಮೂವರಲ್ಲಿ. ನೀವೆಲ್ಲ ಸೋದರತ್ತೆ ಆಗಿಬಿಟ್ಟಿರಿ. ನಾನು ಇನ್ನೂ ಆಗಲಿಲ್ಲ ಅಂತ. ಗಾಯತ್ರಿ ಅಕ್ಕನ ಮದುವೆಲಿ ಉಷಾ ಹೇಳಿದಳು, ಹೋದ ವರ್ಷ ಈ ತಿಂಗ್ಳಲ್ಲಿ ಗೌರಿಪೂಜೆ ಮಾಡ್ದವ್ರೆಲ್ಲ ಈ ವರ್ಷ ಗಣಪತಿ ಕೂರ್‍ಸಿದ್ದೇವೆ. ರಾಧ ಒಬ್ರೆ ಬಾಕಿ. ಗಾಣದಹಳ್ಳಿ ಪಟಾಲಾಂ ಬಂದಿತ್ತು ಮದುವೆಗೆ. ನಮ್ಮದೇ ಗಲಾಟೆ. ಇನ್ನೀಗ ೬ಕ್ಕೆ ಸುನಂದನ ಮದುವೆಯಲ್ಲಿ ಒಂದು ಸಂಭ್ರಮ. ಬರ್‍ತೀಯಾ ಅಕ್ಕನ ಜೊತೆ? ಪ್ರೇಮ, ನಾಳೆ ವಾಟೆಗಂಡಿಗೆ ( ಮಧ್ಯಾಹ್ನದ ಮನರಂಜನೆ ಮನೆ ಅಲ್ಲ) ಪೂಜೆಗೆ ಹೋಗ್ತಾರೆ ಉಮ, ರಾಧೆ. (ನಾನು ಚಕ್ಕರ್). ಗಂಟೆ ೧೦ ಕಳೆದಿದೆ. ಈ ರಾಧೆ ಇದ್ರೆ ನಮ್ಮ ಮನೆಗೆಲಸ ಮುಗಿಯುವುದೆಂದಿಲ್ಲ. ಅಶ್ವತ್ಥಾಮನ ಅಪ್ಪ ದ್ರೋಣ ಭಟ್ರು ಹೇಗಿದ್ದಾರೆ? ಹುಡುಗಿಯರನ್ನು ಕಂಡರೆ ಕರುಬುವವ? (ಅಲ್ಲ ಕರಗುವವ).
ಇಂತು ನಿನ್ನ
ಪ್ರಮೋದತ್ತಿಗೆ.
(ಜಯನಿಗೆ ತಿಳಿಸು. ಮೊನ್ನೆ ಅದರ ಹಾರ್ಲೆ ಗಣೇಶನಿಗೆ ಕಾರಾಟ ತೂರಾಟ ಸಖತ್!)

***
ನಮ್ಮೆಲ್ಲರ ಎದೆಯ ತಂಬೂರಿ ಶೃತಿಗೊಳಿಸುವ ಸಾಮರ್ಥ್ಯ ಈ ಪತ್ರಗಳಿಗಿದೆ. ಮದುವೆಯಾಗದ, ವಯಸ್ಸಿಗೆ ಬಂದ ಹೆಣ್ಣೊಬ್ಬಳು ತನ್ನ ಬಂಧು-ಸಮಾನಮನಸ್ಕೆಗೆ ಬರೆದ ಈ ಕಲರ್‌ಫುಲ್ ಪತ್ರ ನನಗಂತೂ ತುಂಬಾ ತುಂಬಾ ಖುಶಿ ಕೊಟ್ಟಿತು. ನಿಮಗೇನನಿಸಿತು? ಕಾಗ್ದ ಬರೀತೀರಾ?! (ಫೋಟೊ : ವಿನ್ಯಾಸ ಉಬರಡ್ಕ)  

Read more...

October 30, 2008

ಬೆಳ್ಳೇಕೆರೆಯ ಹಳ್ಳಿ ಥೇಟರ್ - ಅಂಕ ೭

ಸಕಲೇಶಪುರದಿಂದ ಪ್ರಸಾದ್ ರಕ್ಷಿದಿ ಬರೆಯುತ್ತಾರೆ

ದೇವರನ್ನು ನಂಬದವರು
ಮ್ಮಲ್ಲೇ ಇದ್ದ ಬಾಬು ಎಂಬ ತೋಟದ ಕೆಲಸಗಾರನಿಗೆ ನಾವು ಕಿತ್ತಲೆ ಫಸಲಿನಲ್ಲಿ ಬಂದ ಹಣದಲ್ಲಿ ಚೌಡಿಪೂಜೆಯನ್ನು 'ಜೋರಾಗಿ' ಮಾಡದೆ ನಾಟಕದ ಸಾಮಾನು ತಂದದ್ದು ಹಿಡಿಸಿರಲಿಲ್ಲ. ಒಂದು ಸಾರಿ ರಿಹರ್ಸಲ್ ನಡೆಯುತ್ತಿದ್ದಾಗ ನನಗೆ ಕೇಳುವಂತೆ ದೊಡ್ಡ ದನಿಯಲ್ಲಿ-

'ಇವರು ನಾಟಕ ಕುಣಿದರೆ ಯಾವ ದೇವರು ಮೆಚ್ಚುತ್ತಾನೆ?' ಎಂದ.
'ದೇವರು ಮೆಚ್ಚುವುದು ಬೇಡ, ನೋಡಿದವರು ಮೆಚ್ಚಿದರೆ ಸಾಕು' ಎಂದೆ. ಸ್ವಲ್ಪ ಹೊತ್ತು ಸುಮ್ಮನಿದ್ದ. ಆ ವರ್ಷ ಸ್ವಲ್ಪ ಮಳೆ ಕಡಿಮೆಯಾಗಿತ್ತು. ಯಾರೋ ಮಳೆಯ ಸುದ್ದಿ ತೆಗೆದರು. ಕೂಡಲೇ ಬಾಬು ಅದಕ್ಕಾಗಿಯೇ ಕಾದು ಕುಳಿತವನಂತೆ,
'ಚೌಡಿಪೂಜೆ ಸರಿಯಾಗಿಲ್ಲ, ಅದಕ್ಕೆ ಮಳೆ ಬಂದಿಲ್ಲ' ಎಂದು ಮತ್ತೆ ಕಾಲು ಕೆರೆದ.
'ಪೂಜೆ ಮಾಡಿದ್ದೇವೆ, ಯಾರಿಲ್ಲ ಅಂದವರು?' ಇನ್ನಾರೋ ಹೇಳಿದರು.
'ಅದು ಸರಿಯಾಗಿಲ್ಲ, ಕುರಿ ಕಡಿಬೇಕಿತ್ತು- ನಾನು ಹೇಳಿಕೊಂಡಿದ್ದೆ.
'ನೀನು ಹೇಳಿಕೊಂಡಿದ್ದರೆ, ನೀನು ಕುರಿ ಕಡ್ದು ಪೂಜೆಮಾಡು. ಒಟ್ಟು ನಮ್ಮೆಲ್ಲರ ಸಂಘಕ್ಕೂ ಅದಕ್ಕೂ ಏನು ಸಂಬಂಧ?' ನಾನು ತಿರುಗಿ ಅವನನ್ನೇ ಪ್ರಶ್ನಿಸಿದೆ.
'ದೇವರ ಕಾರ್ಯಕ್ಕೆ ನೀವು ಹೀಗಂತೀರಲ್ಲ!?'
ಈಗ ನನಗೂ ರೇಗತೊಡಗಿತ್ತು.
'ಯಾವ ದೇವರು ನಿನ್ನತ್ರ ಬಂದು ಕುರಿ ಕೊಡು ಅಂತ ಕೇಳಿತ್ತು? ನಾವು ಕುರಿ ಕಡೀದೆ ಇದ್ರೆ ಇಡೀ ಊರಿಗೇ ಮಳೆ ಹೋಗುತ್ತಾ? ಅದ್ಯಾವುದು ಅಂಥ ದೇವ್ರೂ?' ದಬಾಯಿಸಿದೆ.
'ನೀವು ದೇವರನ್ನು ನಂಬೋದಿಲ್ವೋ?'
'ಇ......ಲ್ಲ.'
ಸರಿ ನಿಮ್ಮಿಷ್ಟ' ಏನೋ ಗೊಣಗುತ್ತಾ ಅಲ್ಲಿಂದೆದ್ದು ಹೋದ.
ಇದಾಗಿ ಒಂದೆರಡು ತಿಂಗಳು ಕಳೆದಿರಬೇಕು. ಯಾವುದೋ ಸಮಯದಲ್ಲಿ ಬಾಬು ತೋಟದ ಹೊರಗಿನ ಬೇರೊಬ್ಬ ಕೆಲಸಗಾರನಿಗೆ ಕೊಟ್ಟ ಸಾಲಕ್ಕೆ ನಾನು ಜಾಮೀನಾಗಿದ್ದೆ. ಸಾಲ ಪಡೆದವನು ಅವನಿಗೆ ಹಣ ವಾಪಸ್ ಕೊಟ್ಟಿರಲಿಲ್ಲ. ಇದ್ದಕ್ಕಿದ್ದಂತೆ ಬಾಬು ಒಂದು ದಿನ ನನ್ನ ಮುಂದೆ ಪ್ರತ್ಯಕ್ಷನಾದ. ಈತ ಎಂತಹ ತರಲೆ ಗಿರಾಕಿಯೆಂದರೆ ಯಾವುದೇ ಸಂದರ್ಭದಲ್ಲೂ ಎಲ್ಲವೂ ತನ್ನ ಮೂಗಿನ ನೇರಕ್ಕೆ ನಡೆಯಬೇಕೆಂದು ಹಠ ಹಿಡಿಯುತ್ತಿದ್ದ. ಆದ್ದರಿಂದ ಇವನನ್ನು ಕಂಡರೆ ನಮ್ಮ ಗುಂಪಿನಲ್ಲಿ ಯಾರಿಗೂ ಆಗುತ್ತಿರಲಿಲ್ಲ. ನನಗೂ ಅನೇಕ ಸಾರಿ ಕಿರಿಕಿರಿ ಮಾಡಿದ್ದ. ಬಾಬು ಬಂದವನೇ ನನ್ನನ್ನು ಆಪಾದಿಸುವ ಧ್ವನಿಯಲ್ಲಿ
'ನಿಮ್ಮ ಜನ ದುಡ್ಡು ಕೊಟ್ಟಿಲ್ಲ' ಎಂದ.
'ಕೊಡ್ತಾನೆ ಮಾರಾಯಾ, ಅವನೀಗ ಕಷ್ಟದಲ್ಲಿರಬೇಕು.'
'ಅವನ ಪರವಾಗಿ ನೀವು ಜಾಮೀನು.'
'ಅವನು ಕೊಡೋದಿಲ್ಲ ಅಂದ್ರೆ ನಾನು ಕೊಡ್ತೀನಿ ಆಯ್ತಲ್ಲ' ಅವನನ್ನು ಸಾಗಹಾಕಲು ಪ್ರಯತ್ನಿಸಿದೆ.
'........................' ಬಾಬು ಅಲ್ಲೇ ನಿಂತಿದ್ದ.
'ಯಾಕೆ ನಿನಗೆ ನಂಬಿಕೆ ಇಲ್ವೆ?'
'...........................'
'ನಂಬಿಕೆ ಇಲ್ಲದಿದ್ರೆ ಇಲ್ಲ ಅಂತ ಹೇಳು- ಏನೀಗ?' ಗದರಿಸುವ ಧ್ವನಿಯಲ್ಲಿ ಹೇಳಿದೆ.
'ಅಲ್ಲ, ನೀವು ದೇವರನ್ನೇ ನಂಬಲ್ಲ ಅಂತೀರಿ: ನಾನು ನಿಮ್ಮನ್ನು ನಂಬಬೇಕು ಅಂತೀರಿ...!!' ಬಾಬು ನನ್ನ ಬುಡವನ್ನೇ ಅಲ್ಲಾಡಿಸಿಬಿಟ್ಟಿದ್ದ. ಕೂಡಲೇ ಆ ಜಾಮೀನಿನ ಹಣವನ್ನು ನಾನೇ ಬಾಬುವಿಗೆ ಕೊಟ್ಟು, ನಂತರ ಸಾಲಗಾರನಿಂದ ವಸೂಲು ಮಾಡಿಕೊಂಡೆ.

ನಮ್ಮ ನಂಬಿಕೆ, ವಿಚಾರಗಳೇನೇ ಇರಲಿ ಅದರ ಬೆಂಬಲಕ್ಕೆ ಅನುಭವದ ಗಟ್ಟಿತನವಿಲ್ಲದಿದ್ದರೆ ನಮ್ಮ ನಿಲುವುಗಳೆಲ್ಲ ಪೊಳ್ಳಾಗಿಬಿಡಬಹುದೆಂಬ ಭಯವಾಯಿತು. ಆಮೇಲೆ ಯಾರಾದರೂ ದೇವರಿದ್ದಾನೋ ಇಲ್ಲವೋ ಎಂದರೆ 'ಗೊತ್ತಿಲ್ಲ'ಎನ್ನತೊಡಗಿದೆ!

Read more...

October 23, 2008

ದಿಸ್ ಈಸ್ ನಾಟ್ ಎ ಹಿಡನ್ ಕ್ಯಾಮೆರಾ !

ಯಾವುದು ಪಟಾಕಿ ಸದ್ದು, ಯಾವುದು ಬಾಂಬಿನ ಸದ್ದು  ಅಂತ ಗುರುತಿಸಲು ಈ ಬಾರಿ ನಮಗೆ ಸಾಧ್ಯವಾದೀತೆ?! ಪಟಾಕಿ ಸದ್ದನ್ನು ನಾವೆಲ್ಲ ಕೇಳಿದ್ದೇವೆ. ಆದರೆ ಬಾಂಬಿನ ನಿಜವಾದ ಸದ್ದನ್ನು ನಾವು ಬಹುತೇಕರು ಕೇಳಿಯೇ ಇಲ್ಲ. ನಮಗೆ ಗೊತ್ತಿರುವುದು, ಸಿನಿಮಾದಲ್ಲಿ ಕೇಳುವ ಅದರ ಸದ್ದು ಅಥವಾ ಅದು ಸಿಡಿದ ಮೇಲೆ ಛಿದ್ರ ಛಿದ್ರವಾದ ದೇಹಗಳ ದೃಶ್ಯ. ಕ್ಷಣ ಮಾತ್ರದಲ್ಲಿ ಗುಜರಿ ಅಂಗಡಿಯಂತಾಗುವ ಅತ್ಯಾಧುನಿಕ ಶಾಪ್‌ಗಳು. ಟಿವಿ ವಾಹಿನಿಗಳು ಪದೇಪದೆ ಬಿತ್ತರಿಸುವ ಆರ್ತನಾದ- ಕೆದರಿದ ಕೂದಲು- ಅಂದಗೆಟ್ಟ ಮುಖಗಳ ದೃಶ್ಯ...ಇಷ್ಟೇ. ಪಟಾಕಿಯ ಬತ್ತಿಗೆ ಊದಿನ ಕಡ್ಡಿಯಿಂದ ಬೆಂಕಿ ತಗುಲಿಸಿ, ಅಷ್ಟು ದೂರ ಓಡಿ, ಎರಡೂ ಕಿವಿಗಳನ್ನು ಎರಡೂ ತೋರುಬೆರಳುಗಳಿಂದ ಮುಚ್ಚಿಕೊಂಡು ನಿಂತಿದ್ದಾರೆ ಹುಡುಗರು ; ಅದು ಸಿಡಿಯಿತೋ..ಹುರ್ರೇ....ಎಂಥಾ ನಗೆ ಬಾಂಬು. ಹ್ಹಹ್ಹಹ್ಹ...ಹ್ಹೊಹ್ಹೊಹ್ಹೊ...ಹೇಹೇಹೇ...ಅಂತಹುದೊಂದು ದೃಶ್ಯವನ್ನು ಬಾಂಬ್ ಸ್ಫೋಟದ ಮೊದಲೋ, ನಂತರವೋ ಕಲ್ಪಿಸುವುದಕ್ಕಾದರೂ ಸಾಧ್ಯವೆ? 'ಸದ್ದು ಮಾಡದ ದೀಪಾವಳಿ' ಎನ್ನುವ ಶೀರ್ಷಿಕೆಯೊಂದು ಪತ್ರಿಕೆಗಳಲ್ಲಿ ಎಂದಾದರೂ ಬರುವುದುಂಟೆ?! ಈ ಬಾರಿಯ ದೀಪಾವಳಿಯಲ್ಲಿ ಪಟಾಕಿಗಳಷ್ಟೇ ಸಿಡಿಯಲಿ. ಆ ಸದ್ದು-ಬೆಳಕಿನಲ್ಲಿ ಕೆಟ್ಟದ್ದು ಕೇಳದಿರಲಿ, ಕಾಣದಿರಲಿ ಅಂತ ಆಸೆ ಪಡುತ್ತಿದ್ದೇನೆ.
***
'ವಿಜಯ ಕರ್ನಾಟಕ'ದ ಈ ಬಾರಿಯ ದೀಪಾವಳಿ ಸಂಚಿಕೆಯಲ್ಲಿ ಹಲವಾರು ಎಲೆಮರೆಯ ಪ್ರತಿಭೆಗಳು ಹೊರಬಂದಿವೆ ! ಮೇಕಿಂಗ್ ಆಫ್ ಸಂಚಿಕೆಯ ಸಂದರ್ಭದ ಕೆಲ ದೃಶ್ಯಗಳನ್ನು 'ಚಂಪಕಾವತಿ' ರಹಸ್ಯವಾಗಿ ಸೆರೆಹಿಡಿದಿದೆ. ಕೆಳಗಿನ ಫೋಟೊಗಳನ್ನು ನೋಡಿ. ಕುತೂಹಲವಾಯಿತೆ? ದೀಪಾವಳಿ ವಿಶೇಷ ಸಂಚಿಕೆ ಕೊಂಡು ಓದಿ, ನೋಡಿ, ಆನಂದಿಸಿ. ಥ್ಯಾಂಕ್ಸ್ ಟು ವಿಕ.

Read more...

October 21, 2008

ಮಾತಿನಲ್ಲಿ ಹೇಳಲಾರೆನು !

  • ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ೧.೫೦ಲಕ್ಷ ರೂಗಳ ಖರ್ಚುವೆಚ್ಚದ ತಾಳಮದ್ದಳೆ ಸಪ್ತಾಹ
  • ಏಳು ದಿನಗಳಲ್ಲಿ ಸುಮಾರು ೨ ಸಾವಿರ ಜನರ ಪಾಲ್ಗೊಳ್ಳುವಿಕೆ (ತಾಳಮದ್ದಳೆಗೆ ಇದೊಂದು ದೊಡ್ಡ ಸಂಖ್ಯಾಬಲ !)
  • ಮಹಾನಗರದ ಆಫೀಸು ಕೆಲಸ, ಟ್ರಾಫಿಕ್ ಜಾಮ್, ಮಳೆ ಮುಂತಾದ ಪ್ರತಿಕೂಲಗಳ ಮಧ್ಯೆಯೂ ನಾನಾ ಕ್ಷೇತ್ರ, ಭಾಗಗಳ ಜನರ ಪಾಲ್ಗೊಳ್ಳುವಿಕೆ
  • ತೆಂಕು-ಬಡಗು ಎರಡೂ ತಿಟ್ಟುಗಳ ಸಮ್ಮಿಲನ, ಬೆಂಗಳೂರಿನ ಬಹುತೇಕ ಯಕ್ಷ ಸಂಘಟನೆಗಳ ಸಹಕಾರ
  • ಎಲ್ಲ ತಾಳಮದ್ದಳೆಗಳ ವ್ಯವಸ್ಥಿತ ಧ್ವನಿ ಮುದ್ರಣ, ಪ್ರತಿದಿನ ೩ ಗಂಟೆ ೩೦ ನಿಮಿಷಗಳ ನಿಗದಿತ ಅವಧಿ. 

ವತ್ತು ಸಂಜೆಯಾಗುತ್ತಿದ್ದಂತೆ ಬಸವನಗುಡಿಯ ಪುತ್ತಿಗೆ ಮಠದ ಸಭಾಂಗಣದಲ್ಲಿ ಒಟ್ಟಾಗುತ್ತಿದ್ದ ಜನರೆಲ್ಲ , ಪುರಾಣಗಳಿಂದ ಹೊರಬಂದ ಯಾವ್ಯಾವುದೋ ಪಾತ್ರಗಳಂತೆ ಮಾತಾಡಿಕೊಳ್ಳುತ್ತಿದ್ದರು. ಅವರವರ ಪಾಡಿಗೆ ಪ್ರಸಂಗ ಪದ್ಯಗಳನ್ನು ಗುನುಗುತ್ತಿದ್ದರು. ಮಹಾನಗರದ ಗದ್ದಲದಲ್ಲೂ ಎಲ್ಲಿಂದಲೋ ಹಾರ್ಮೋನಿಯಂ ಬಾರಿಸುವ, ಚೆಂಡೆ-ಮದ್ದಳೆಯ ಶ್ರುತಿ ಮಾಡುವ ಸದ್ದು ಕೇಳುತ್ತಿತ್ತು. ಆ ಪರಿಸರವೇ ಯಾವುದೋ ಅಜ್ಞಾತ ಸೆಳೆತಕ್ಕೆ ಸಿಕ್ಕಂತೆ ಒಂದು ಲಯದಲ್ಲಿ ತೂಗುತ್ತಿತ್ತು.    

ಮೊದಲನೇ ದಿನದ ಪ್ರಸಂಗ 'ಕರ್ಣಪರ್ವ'. ಪ್ರಭಾಕರ ಜೋಶಿಯವರ ಎಂದಿನ ಅರ್ಜುನ, ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿಯವರ ಕರ್ಣ, ಶಂಭು ಶರ್ಮರ ಶಲ್ಯ, ಸುಧನ್ವಾ ದೇರಾಜೆ ಕೃಷ್ಣ, ಶಶಾಂಕ ಅರ್ನಾಡಿ ಅಶ್ವಸೇನನಾಗಿ ಕಾಣಿಸಿಕೊಂಡರು. ಕಿಂಚಿತ್ತೂ ವಾದದ ಕಿಚ್ಚು ಹತ್ತಿಕೊಳ್ಳದೆ ಅತ್ಯಂತ ಸುಗಮ ಮಾರ್ಗದಲ್ಲಿ ಈ ಪ್ರಸಂಗ ನಡೆದದ್ದು ಒಂದು ಅಚ್ಚರಿ ಮತ್ತು ನಿರಾಸೆಯ ಸಂಗತಿ ! ಹವ್ಯಾಸಿ ಭಾಗವತ ಸುಬ್ರಾಯ ಸಂಪಾಜೆ ಹಿಮ್ಮೇಳವನ್ನು ಮುನ್ನಡೆಸಿದರು. ಸಪ್ತಾಹದಲ್ಲಿ ಚೊಕ್ಕವಾಗಿ ನಡೆದ ಪ್ರಸಂಗ, ಎರಡನೇ ದಿನದ 'ವಾಲಿ ವಧೆ '. ಶಂಭುಶರ್ಮರ ಸುಗ್ರೀವ, ಜೋಶಿಯವರ ವಾಲಿ, ಸಿದ್ದಕಟ್ಟೆಯವರ ರಾಮ ಹಾಗೂ ಶಶಾಂಕ ಅರ್ನಾಡಿ ತಾರೆಯಾಗಿ ಭಾಗವಹಿಸಿದ ಪ್ರಸಂಗ ಲವಲವಿಕೆಯಿಂದ ನಡೆಯಿತು. ಆದರೆ ಮುಖ್ಯಮೂರೂ ಪಾತ್ರಗಳು ಒಂದೇ ತೆರನಾಗಿ ಮಾತಾಡಿ, ಪಾತ್ರದ ವೈಶಿಷ್ಟ್ಯಅನನ್ಯತೆ ಬಿಂಬಿತವಾಗುವುದು ತಪ್ಪಿಹೋಯಿತು. ಹೇರಂಜಾಲು ಗೋಪಾಲ ಗಾಣಿಗರ ಭಾಗವತಿಕೆಯ ಬಡಗುತಿಟ್ಟಿನ ಹಿಮ್ಮೇಳದ, 'ಭೀಷ್ಮ ವಿಜಯ' ಪ್ರಸಂಗದಲ್ಲಿ ಸಿದ್ಧಕಟ್ಟೆಯವರ ಭೀಷ್ಮ , ಶಂಭು ಶರ್ಮರ ಪರಶುರಾಮ ಹಾಗೂ ಹವ್ಯಾಸಿ ಅರ್ಥಧಾರಿಗಳಾದ ಮೂಜೂರು ನಾರಾಯಣ ಭಟ್ ಅಂಬೆ ಹಾಗೂ ಶಶಾಂಕ ಅರ್ನಾಡಿ ಸಾಲ್ವನಾಗಿ ಕಾಣಿಸಿಕೊಂಡರು. ಪ್ರಸಿದ್ಧ ಹಾಸ್ಯಗಾರ ಹಳ್ಳಾಡಿ ಜಯರಾಮ ಶೆಟ್ಟರು ಬ್ರಾಹ್ಮಣನ ಪಾತ್ರ ನಿರ್ವಹಿಸಿದ್ದು ಅಂದಿನ ವಿಶೇಷ ಆಕರ್ಷಣೆ. ಅಂಬೆ-ಭೀಷ್ಮನ ಮೊದಲ ಸಂವಾದ ತುಸು ಚರ್ಚೆಯ ವಾತಾವರಣ ಸೃಷ್ಟಿಸಿದರೂ, ಬಳಿಕ ಅಂತಹದ್ದೇನೂ ಆಗಲಿಲ್ಲ. ಸಾಲ್ವ-ಅಂಬೆ ಸಂವಾದ ತುಸು ಲಂಬಿಸಿದರೆ, ಪರಶುರಾಮ-ಭೀಷ್ಮ ಸಂವಾದ ಪದ್ಯಗಳ ವ್ಯಾಪ್ತಿಯಲ್ಲೇ ಚುಟುಕಾಗಿ ಮುಗಿಯಿತು.

ಘೋರ-ಮಾಯಾ ಶೂರ್ಪನಖಿಯಾಗಿ ಸಪ್ತಾಹದ ನಾಲ್ಕನೇ ದಿನ ಕಾಣಿಸಿಕೊಂಡರು ಪ್ರಭಾಕರ ಜೋಶಿ. ಸಿದ್ದಕಟ್ಟೆಯವರದ್ದು ಎಂದಿನ ರಾಮ. ಶಂಭು ಶರ್ಮರು ಬಹಳ ಚುಟುಕಾಗಿ ಲಕ್ಷ್ಮಣನ ಪಾತ್ರ ನಿರ್ವಹಿಸಿದರು. ಹೇರಂಜಾಲು ಗೋಪಾಲ ಗಾಣಿಗ ಹಾ ತೆಂಕಬೈಲು ಮುರಳಿಕೃಷ್ಣ ಶಾಸ್ತ್ರಿಗಳ  ದ್ವಂದ್ವ ಹಾಡುಗಾರಿಕೆ, ಬಡಗು-ತೆಂಕಿನ ಎರಡೆರಡು ಚೆಂಡೆ ಮದ್ದಳೆಗಳ ಬಳಕೆ ಈ ಪ್ರಸಂಗವನ್ನು ರಂಜನೀಯವಾಗಿಸಿತು. 
ಕಡಿಮೆ ಪಾತ್ರಗಳ, ಗಂಭೀರ ಗತಿಯ ಪ್ರಸಂಗ 'ರಾವಣ ವಧೆ 'ಯಲ್ಲಿ ಜೋಶಿಯವರ ರಾವಣ-ಶಂಭು ಶರ್ಮರ ಮಂಡೋದರಿ. ತೀರಾ ಭಾವಪರವಶತೆಯ ಮಂಡೋದರಿಗೂ, ಜೋಶಿಯವರ ಉಢಾಪೆಯ ಶೈಲಿಗೂ ಅಷ್ಟೊಂದು ಹೊಂದಾಣಿಕೆ ಬರಲಿಲ್ಲ. ಪ್ರಸಂಗದ ನಡೆಗೆ ಅನುಕೂಲವಾಗಿ ಸಿದ್ದಕಟ್ಟೆಯವರ ರಾಮ. 

ಸಪ್ತಾಹಕ್ಕೊಂದು ಹೊಸ ಸ್ವಾದ-ರುಚಿ ಸಿಕ್ಕಿದ್ದು ಆರನೇ ದಿನದ 'ಶ್ರೀಕೃಷ್ಣ ಸಂಧಾನ 'ದಿಂದ.  ಅಂದು ಜಬ್ಬಾರ್ ಸಮೊರವರ ಅಪರೂಪದ ಕೃಷ್ಣ. ಯಾವಾಗಲೂ ಕೌರವನ ಅರ್ಥವನ್ನೇ ಹೇಳುವ ಅವರ ಇದಿರು ಕೌರವನಾಗಿ ಉಮಾಕಾಂತ ಭಟ್ಟರಿದ್ದರು. ಜೋಶಿಯವರು ವಿದುರನ ಪಾತ್ರದಲ್ಲಿ ಬಂದರು.ಕೊಂಚ ಹೊಸ ತರಹದ ಪಾತ್ರ ಹಂಚಿಕೆಯಾಗಿ, ಪುರುಷೋತ್ತಮ ಭಟ್ ಬಿ.ಸಿ. ರೋಡು ಅವರ ಭಾಗವತಿಕೆಯಲ್ಲಿ, ಸಪ್ತಾಹದ ಯಶಸ್ವಿ ತಾಳಮದ್ದಳೆಗಳಲ್ಲಿ ಈ ಪ್ರಸಂಗದ ಹೆಸರು ಸೇರಿಕೊಂಡಿತು.
ಸಮಾರೋಪದ ದಿನ  ಅ.೧೯ರಂದು, ತುಂಬಿ ತುಳುಕಿದ ಸಭೆ ನೀಡುತ್ತಿದ್ದ ಚಪ್ಪಾಳೆಯ ಅಲೆಯಲ್ಲಿ ನಡೆದದ್ದು 'ಸುದರ್ಶನ ಗ್ರಹಣ' ಪ್ರಸಂಗ.' ಮೊದಲನೇ ಭೀಷ್ಮನಾಗಿ ಕುಂಬ್ಳೆ ಸುಂದರ ರಾವ್ ಹಾಗೂ ಜಬ್ಬಾರ್ ಅವರ ಕೌರವನ ಮಾತುಕತೆ, ಕುಶಲ ಮಾತುಕತೆಯಲ್ಲಿ ರಸಮಯವಾಯಿತು. ಎರಡನೇ ಭೀಷ್ಮನಾಗಿ ಜೋಶಿ ಮತ್ತು ಕೃಷ್ಣನಾಗಿ ಉಮಾಕಾಂತ ಭಟ್ಟರ ಸಂವಾದ ಸಪ್ತಾಹದ ಉತ್ತಮ ಮಾತುಕತೆಗಳಲ್ಲೊಂದು ಎನಿಸಿತು.

ಒಂದು ವರ್ಷದಲ್ಲಿ ಹಿರಿಯ ಅರ್ಥಧಾರಿಗಳ ಭಾಗವಹಿಸುವಿಕೆಯ ಮೂರ್‍ನಾಲ್ಕು ಕೂಟಗಳೂ  ಬೆಂಗಳೂರಿನಲ್ಲಿ ನಡೆಯದಿರುವ ಸನ್ನಿವೇಶದಲ್ಲಿ, ಸತತ ಏಳು ತಾಳಮದ್ದಳೆಗಳನ್ನು ಆಯೋಜಿಸಿದ 'ದುರ್ಗಾಂಬಾ ಕಲಾ ಸಂಗಮ'ಕ್ಕೆ ಸಿಕ್ಕಿದ್ದು  ವ್ಯಾಪಕ ಮೆಚ್ಚುಗೆ , ಫೋನ್ ಕಾಲ್‌ಗಳ ಸುರಿಮಳೆ, ತಾಳಮದ್ದಳೆಯ ಬಗ್ಗೆ  ಗೊತ್ತಿಲ್ಲದ ಜನರಿಂದಲೂ ಕಾರ್ಯಕ್ರಮದ ಬಗ್ಗೆ ವಿಚಾರಣೆ ! ಕೊನೆಯ ದಿನ 'ಶ್ರೀ ಮನೋಹರ ಸ್ವಾಮಿ ಪರಾಕು' ಪದ್ಯ ಬಂದು, ಕಾರ್ಯಕ್ರಮ ಕೊನೆಯ ಘಟ್ಟಕ್ಕೆ ತಲುಪಿದಾಗ ಎಲ್ಲರಿಗೂ ಗಂಟಲು ಕಟ್ಟಿತ್ತು, ಹೃದಯ ತುಂಬಿತ್ತು. 
  
ಕುರುಕ್ಷೇತ್ರ ಯುದ್ಧದಲ್ಲಿ ಕೃಷ್ಣನಿದಿರು ಬಂದ ಭೀಷ್ಮ ಹೇಳಿದರು : 'ದುಷ್ಟ ಶಿಕ್ಷಣ-ಶಿಷ್ಟ ರಕ್ಷಣ ಅಂತ ಹೇಳುವ ನೀನು, ಸಣ್ಣ ಪ್ರಾಯದಲ್ಲೇ ಅಷ್ಟೆಲ್ಲಾ ದುಷ್ಟರನ್ನು ಕೊಂದರೂ ಇನ್ನೂ ಅದೆಷ್ಟು ಜನ ಉಳಿದುಕೊಂಡಿದ್ದಾರೆ ದೇವರೇ?!' 
ಕೃಷ್ಣನ ನಾಲಗೆ ತಡವರಿಸಿತು. 

(ಫೋಟೊ: ದುಷ್ಯಂತ ದೇರಾಜೆ, ಕ್ಯಾಮೆರಾ: ಶಶಾಂಕ ಅರ್ನಾಡಿ!)

Read more...

October 11, 2008

ಮಾತಿನರಮನೆಯಲ್ಲಿ ಏಳು ದಿನಗಳು


ಲ್ಲರನ್ನೂ ಸಶರೀರಿಗಳಾಗಿಯೇ ಹದಿನಾಲ್ಕು ಲೋಕ ಸುತ್ತಿಸುವ ಸಾಮರ್ಥ್ಯವುಳ್ಳ ಯಕ್ಷಗಾನದ ಒಂದು ಪ್ರಮುಖ ಅಂಗ 'ಯಕ್ಷಗಾನ ತಾಳಮದ್ದಳೆ '. ಕರಾವಳಿ ಕರ್ನಾಟಕದುದ್ದಗಲಕ್ಕೂ ಮಳೆಗಾಲದಲ್ಲಿ ನೂರಾರು ತಾಳಮದ್ದಳೆ ಕೂಟಗಳು ನಡೆಯುತ್ತವೆ. ಯಾವುದೇ ವೇಷಭೂಷಣ, ವಿಶೇಷ ರಂಗಸಜ್ಜಿಕೆಯಿಲ್ಲದೆ, ಆಶು ಮಾತುಗಾರಿಕೆಯನ್ನೇ ಮಾಧ್ಯಮವಾಗಿಟ್ಟುಕೊಂಡಿರುವ ಪ್ರಕಾರ ಇದು. ಕೋಪ , ಹಾಸ್ಯ, ದುಃಖ ಎಲ್ಲವೂ ಇಲ್ಲಿ ಮಾತಿನಲ್ಲೇ ವ್ಯಕ್ತವಾಗಬೇಕು !

ಉತ್ತರ ಕನ್ನಡ ಭಾಗದಲ್ಲಿ ಪ್ರಸಂಗ ಅಥವಾ ಬೈಠಕ್ ಎಂದು, ಶಿವಮೊಗ್ಗ ಭಾಗದಲ್ಲಿ ಜಾಗರ ಎಂದು, ದಕ್ಷಿಣಕನ್ನಡ ಭಾಗದಲ್ಲಿ ಕೂಟ ಎಂದೂ ಕರೆಯಲ್ಪಡುವ `ಯಕ್ಷಗಾನ ತಾಳಮದ್ದಳೆ ' ಯಕ್ಷಲೋಕದ ಅವಿಭಾಜ್ಯ ಅಂಗ. ಪುರಾಣಗಳ ಒಂದು ಚಿಕ್ಕ ಪ್ರಸಂಗ ಆಯ್ದುಕೊಂಡು, ಅರ್ಥಧಾರಿಗಳು ಒಂದೊಂದು ಪಾತ್ರ ವಹಿಸಿಕೊಂಡು ಮಾತಿನಲ್ಲೇ ಎಲ್ಲವನ್ನೂ ನಿರ್ವಹಿಸುತ್ತಾರೆ. ಅದೂ ಕಂಠಪಾಠವಲ್ಲದ ಆಶುಶೈಲಿ. ಇದಿರು ಅರ್ಥಧಾರಿಯ ಮನೋಧರ್ಮ, ಆಯಾ ಸಂದರ್ಭಗಳಿಗೆ ಅನುಗುಣವಾಗಿ, ಇಂದು ಕರ್ಣನ ಪಾತ್ರ ವಹಿಸಿದವನು ನಾಳೆ ಅದೇ ಪಾತ್ರವನ್ನು ಸಂಪೂರ್ಣ ಬೇರೆ ಥರ ನಿರ್ವಹಿಸಬಹುದು. ಕೌರವನೊಡನೆ ವಾದದಲ್ಲಿ ಕೃಷ್ಣ ಸೋಲಬಹುದು ! ಹೀಗೆ ಇದು ಅನಿರೀಕ್ಷಿತಗಳ ಸಂಗಮ. ವಿದ್ವತ್ತು, ಮಾತಿನ ಜಾಣ್ಮೆ, ತರ್ಕ, ಉದಾಹರಿಸುವ ಕೌಶಲ, ಹಾಸ್ಯ ಪ್ರಜ್ಞೆ, ಲೌಕಿಕ-ಸಮಕಾಲೀನ ವಿಷಯಗಳನ್ನು ಪ್ರಸಂಗಕ್ಕೆ ಹೊಂದಿಸುವ ಶಕ್ತಿ ಎಲ್ಲವೂ ಇಲ್ಲಿರಬೇಕು.

'ತಾಳಮದ್ದಳೆ ಪ್ರಸಂಗ ' ಎಂಬ ಲೇಖನದಲ್ಲಿ ಹಿರಿಯ ವಿಮರ್ಶಕ ಕೀರ್ತಿನಾಥ ಕುರ್ತಕೋಟಿಯವರು ಹೀಗೆ ಹೇಳಿದ್ದಾರೆ : 'ತಾಳಮದ್ದಳೆಯಲ್ಲಿ ಕತೆಯನ್ನು ತನಗೆ ಬೇಕಾದಂತೆ ಬೆಳೆಸಲು ಅರ್ಥಧಾರಿಗೆ ಸ್ವಾತಂತ್ರ್ಯವಿದೆ. ಅರ್ಥಧಾರಿ ಪಾತ್ರವೂ ಆಗುವುದರಿಂದ ತಿಳಿವಳಿಕೆ ಮತ್ತು ಅನುಭವ ಒಂದರೊಳಗೊಂದು ಹುಟ್ಟಿ ಬರುತ್ತವೆ. ಒಂದು ದೃಷ್ಟಿಯಿಂದ ಹೇಳಬೇಕೆಂದರೆ ಮೂಲ ಕತೆಯಲ್ಲಿಯ ಪಾತ್ರಗಳಿಗೆ ಮತ್ತೊಮ್ಮೆ ಬದುಕುವ ಅವಕಾಶ ದೊರೆತಂತಾಗುತ್ತದೆ. ಕರ್ಣನ ಬದುಕು ಹೀಗೆಯೇ ಕೊನೆಗೊಳ್ಳಬೇಕೇ ಎಂದು ಕೇಳಿದರೆ, ಕರ್ಣನಿಗೆ ಮತ್ತೊಮ್ಮೆ ಬದುಕಿ ತೋರಿಸುವ ಅವಕಾಶ ಇಲ್ಲಿ ದೊರೆತಂತಾಗುತ್ತದೆ ...ಮಹಾಭಾರತ ಕತೆಯಲ್ಲಿ ವಾದಗ್ರಸ್ತ ಅಂಶಗಳು ಎಷ್ಟಿವೆಯೆಂದರೆ, ನಮ್ಮ ಮನಸ್ಸು ಇವುಗಳ ಬಗ್ಗೆ ಎಷ್ಟು ಗೊಂದಲಕ್ಕೀಡಾಗಿದೆಯೆಂದರೆ, ಪಾಂಡವರೇ ಕೆಟ್ಟವರು, ಕೌರವರು ಒಳ್ಳೆಯವರು ಎಂಬ ನಿರ್ಣಯಕ್ಕೆ ಕೆಲವರಾದರೂ ಬಂದರೆ ಆಶ್ಚರ್ಯವೇನಿಲ್ಲ. ಒಳಿತು ಮತ್ತು ಕೆಡುಕುಗಳನ್ನು ಗುರುತಿಸಿ ಒಬ್ಬರಿಂದ ಇನ್ನೊಬ್ಬರಿಗೆ ವರ್ಗಾಯಿಸುವುದನ್ನು ಬಿಟ್ಟರೆ ಬೇರೇನೂ ಮಾಡುವಂತಿಲ್ಲ.

ತಾಳಮದ್ದಳೆಯಲ್ಲಿ ಇಂಥ ಚರ್ಚೆಗೆ ಅವಕಾಶವಿದೆ. ಕೌರವನ ಪಾತ್ರಧಾರಿ ಮಾತಾಡುತ್ತ ಚರ್ಚೆಯಲ್ಲಿ ಕೃಷ್ಣನನ್ನು ಸೋಲಿಸಿಬಿಡಬಹುದು. ಅಂತಹ ಒಂದು ಪ್ರಸಂಗವನ್ನೇ ನಾನು ತಾಳಗುಪ್ಪೆಯಲ್ಲಿ ಕಂಡದ್ದು. ಅರ್ಥಧಾರಿ ಗೆದ್ದು ಪಾತ್ರ ಸೋಲುವಂತಾಯಿತು ! ಆದರೆ ಕೌರವನ ಅರ್ಥಧಾರಿ, ಅಂದು ಕತೆಯಲ್ಲಿ ಹುಟ್ಟಿಕೊಂಡ ಬಿಕ್ಕಟ್ಟನ್ನು ತಿಳಿದುಕೊಂಡು `ಕೃಷ್ಣಾ, ನನ್ನ ಅಹಂಕಾರದ ತೃಪ್ತಿಗಾಗಿ ನನ್ನನ್ನು ಗೆಲ್ಲಿಸಿದವನೂ ನೀನೇ, ಕೊನೆಗೆ ಸೋಲಿಸುವವನೂ ನೀನೇ. ನೀನು ಕರುಣಾಶಾಲಿಯಾಗಿದ್ದರೆ ನನ್ನನ್ನು ಸೋಲಿಸಿ ಕಾಯಬೇಕು, ಪಾಂಡವರನ್ನು ನೀನು ಕಾಯುವಂತೆ '. ಪ್ರತಿಭಾಶಾಲಿಯಾದ ಅರ್ಥಧಾರಿ ಮಹಾಭಾರತಕ್ಕೆ ತನ್ನೆರಡು ಮಾತುಗಳನ್ನು ಸೇರಿಸಿ ಅದನ್ನು ಅರ್ಥಪೂರ್ಣವನ್ನಾಗಿ ಹೇಗೆ ಮಾಡಬಹುದೆಂಬುದನ್ನು ಅಂದು ತೋರಿಸಿದರು .'

ಬೆಂಗಳೂರಿನಲ್ಲೀಗ ಯಕ್ಷಗಾನ ಬಯಲಾಟಗಳಿಗೆ ಕೊರತೆಯಿಲ್ಲ. ಮಾತಿನ ರುಚಿ ತೋರಬಲ್ಲ ತಾಳಮದ್ದಳೆಗಳು ಮಾತ್ರ ತೀರಾ ಕಡಿಮೆ. ಕಳೆದೊಂದು ವರ್ಷದಿಂದ ಸದಭಿರುಚಿಯ ಕಾರ್ಯಕ್ರಮಗಳನ್ನು ಸಂಘಟಿಸುತ್ತಿರುವ `ಶ್ರೀ ದುರ್ಗಾಂಬಾ ಕಲಾ ಸಂಗಮ' ಎಂಬ ಗಿರಿನಗರದ ಸಂಸ್ಥೆ ಏಳು ದಿನಗಳ ತಾಳಮದ್ದಳೆ ಹಮ್ಮಿಕೊಂಡಿದೆ. ಕರ್ನಾಟಕ-ಕೇರಳ ರಾಜ್ಯಗಳ ರಾಜ್ಯೋತ್ಸವ ಪ್ರಶಸ್ತಿ, ಮಂಗಳೂರು ವಿ.ವಿ.ಯ ಗೌರವ ಡಾಕ್ಟರೇಟ್, ಪಡೆದ ಮಾತಿನ ಮಹಾಕವಿ ಡಾ.ಶೇಣಿ ಗೋಪಾಲಕೃಷ್ಣ ಭಟ್ (೧೯೧೮-೨೦೦೬), ತಾಳಮದ್ದಳೆಯಲ್ಲಂತೂ ಉತ್ತುಂಗ ಶಿಖರ.ಹೀಗಾಗಿ ಡಾ. ಶೇಣಿ ಸಂಸ್ಮರಣೆ ಮತ್ತು ಯಕ್ಷಗಾನ ಅಕಾಡೆಮಿಯ ಪ್ರಥಮ ಅಧ್ಯಕ್ಷ ಕುಂಬ್ಳೆ ಸುಂದರರಾವ್ ಅಭಿನಂದನೆಯೊಂದಿಗೆ ಏಳು ದಿನಗಳ ತೆಂಕು-ಬಡಗು ತಿಟ್ಟುಗಳ ಸಮ್ಮಿಲನದ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಅ.೧೩ರಿಂದ ೧೯ರವರೆಗೆ ನಡೆಯಲಿದೆ.

ತಾಳಮದ್ದಳೆ ಕ್ಷೇತ್ರದ ಹಿರಿಯ ಅರ್ಥಧಾರಿಗಳಾಗಿರುವ ಡಾ.ಎಂ. ಪ್ರಭಾಕರ ಜೋಶಿ, ಶಂಭು ಶರ್ಮ ವಿಟ್ಲ, ಉಮಾಕಾಂತ ಭಟ್ ಮೇಲುಕೋಟೆ, ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ, ಜಬ್ಬಾರ್ ಸಮೊ ಸಂಪಾಜೆ ಮೊದಲಾದವರು ಆಗಮಿಸುತ್ತಾರೆ. ೧೩ರಂದು ಕರ್ಣಪರ್ವ ೧೪-ವಾಲಿ ಮೋಕ್ಷ, ೧೫-ಭೀಷ್ಮ ವಿಜಯ, ೧೬-ಶೂರ್ಪನಖಾ ಮಾನಭಂಗ,೧೭-ರಾವಣ ವಧೆ, ೧೮-ಶ್ರೀಕೃಷ್ಣ ಸಂಧಾನ, ೧೯-ಸುದರ್ಶನ ಗ್ರಹಣ- ಪ್ರಸಂಗಗಳು 'ಕನ್ನಡ ಮತ್ತು ಸಂಸ್ಕೃತಿ ಇಲಾಖೆ 'ಯ ಸಹಯೋಗದಲ್ಲಿ ನಡೆಯಲಿವೆ.

೧೩ರಂದು ಸಂಜೆ ೪.೩೦ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು , ಯಕ್ಷಗಾನ ಯೋಗಕ್ಷೇಮ ಅಭಿಯಾನದ ವಿ.ಆರ್.ಹೆಗಡೆ, ಯಕ್ಷಗಾನ ವಿಮರ್ಶಕ ಡಾ.ಎಂ.ಪ್ರಭಾಕರ ಜೋಶಿ, ಹಿರಿಯ ಸಮಾಜಸೇವಕ ಬಿ.ಕೃಷ್ಣ ಭಟ್, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಕುಂಬ್ಳೆ ಸುಂದರರಾವ್, ಕರ್ನಾಟಕ ಬ್ಯಾಂಕ್ ಮುಖ್ಯ ಪ್ರಬಂಧಕ ಆನಂದರಾಮ ಉಪಾಧ್ಯಾಯ, ಸಂಗೀತ ನಿರ್ದೇಶಕ ವಿ.ಮನೋಹರ್, ಎ.ಶಿವರಾವ್ ಅತಿಥಿಗಳಾಗಿ ಭಾಗವಹಿಸುತ್ತಾರೆ. ೧೯ರಂದು ಸಂಜೆ ೪ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ, ಕೆ.ಐ.ಎ.ಡಿ.ಬಿ. ಆಯುಕ್ತ ಟಿ.ಶ್ಯಾಮ ಭಟ್, ಬಸವನಗುಡಿ ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ, ಗಾಯಕ ವಿದ್ಯಾಭೂಷಣ, ಕೆ.ಇ.ರಾಧಾಕೃಷ್ಣ ಮೊದಲಾದವರು ಭಾಗವಹಿಸುತ್ತಾರೆ. ಪ್ರತಿದಿನ ಸಂಜೆ ೫.30 ರಿಂದ ೯ರವರೆಗೆ ತಾಳಮದ್ದಳೆ.

ಸ್ಥಳ : ಶ್ರೀ ಪುತ್ತಿಗೆ ಮಠದ ಸಭಾಂಗಣ, ಬಸವನಗುಡಿ. ( ಬ್ಯೂಗಲ್ ರಾಕ್ ಬಳಿ) ಪ್ರವೇಶ ಉಚಿತ.

Read more...

October 05, 2008

ಕಲಾಕ್ಷೇತ್ರದಲ್ಲಿ ಬೆಳಗೆರೆ ವಿಶ್ವರೂಪ

ಸಂಜೆ ೫ರ ಸುಮಾರಿಗೆ ರವಿ ಬೆಳಗೆರೆ ಎಂಬ ಅಯಸ್ಕಾಂತ ಎಲ್ಲೇ ಕಾಣಿಸಿಕೊಳ್ಳಲಿ, ಜನ ಸೇರಿ ಅಪ್ಪಚ್ಚಿ ಮಾಡುತ್ತಿದ್ದರು. ಅವರು ಹತ್ತು ತಲೆ, ಇಪ್ಪತ್ತು ಕೈಗಳ ರಾವಣನಾದರೂ, ಮಾತಾಡುವುದಕ್ಕೆ, ಕೈ ಕುಲುಕುವುದಕ್ಕೆ ಸಾಧ್ಯವೇ ಆಗುತ್ತಿರಲಿಲ್ಲ!  ಬಾಗಿಲುಗಳಲ್ಲಿ ನಿಂತಿದ್ದ ದ್ವಾರಪಾಲಕರ ಜತೆ ಅಭಿಮಾನಿಗಳು ರೇಗಿದರು, ಬಾಗಿಲೊಂದರ ಗಾಜು ಒಡೆದರು, ಕ್ಷಣದಿಂದ ಕ್ಷಣಕ್ಕೆ ಜನಸಾಗರದ ಮಟ್ಟ ಏರುತ್ತಿತ್ತು.

ಎಂತಹ ಸಾಮಾನ್ಯ ಮನುಷ್ಯನಿಗೂ ಆಸೆ ಹುಟ್ಟಿಸುವಂತಿತ್ತು ಆ ಸಂಜೆ. ನಡೆದಾಡುವ ದೇವರು, ಅಭಿಮಾನಿಗಳ ಆರಾಧ್ಯ ದೇವತೆ, ಬಡವರ ಬಂಧು, ಅಸಾಮಾನ್ಯ ವಾಕ್ಪಟು, ಪ್ರಸಿದ್ಧ ಬರಹಗಾರ, ಸಮಾಜಸೇವಕ....ಹೀಗೆ ಏನೆಲ್ಲ ವಿಶೇಷಣಗಳಿವೆಯೋ ಅವೆಲ್ಲ ರವಿ ಬೆಳಗೆರೆಗೆ ಸಂದಾಯವಾಗುವಂತಿತ್ತು. ಅವರು ಕಾಲಿಟ್ಟಲ್ಲಿ ಜನ ಅರಳುತ್ತಿದ್ದರು, ಮರುಳಾಗುತ್ತಿದ್ದರು. ಆ ಕಾಲವೇ ಯಾವುದೋ ಮಾಯೆಯಲ್ಲಿ ಸಿಲುಕಿಕೊಂಡಿತ್ತು.   

ರವಿ ಬೆಳಗೆರೆಯವರಿಗೆ ಐವತ್ತಾಗಿದ್ದಕ್ಕೆ, 'ಹಾಯ್ ಬೆಂಗಳೂರ್' ಪತ್ರಿಕೆಗೆ ೧೩ ವರ್ಷಗಳು ತುಂಬಿದ್ದಕ್ಕೆ, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಕ್ಟೋಬರ್ ೫ರ ಭಾನುವಾರದ ಸಂಜೆ ೫ಕ್ಕೆ ಕಾರ್ಯಕ್ರಮವೇನೋ ನಿಗದಿಯಾಗಿತ್ತು. ಅದು ಸರಿಯಾಗಿ ಶುರುವಾದದ್ದು ೬ಕ್ಕೆ. ಆದರೆ ಸುಮಾರು ೧೨೦೦ ಸೀಟುಗಳ ಕಲಾಕ್ಷೇತ್ರದಲ್ಲಿ ಮೂರೂವರೆ ಗಂಟೆಗೇ ಜನ ಒಬ್ಬರಿಗೊಬ್ಬರು ಅಂಟಿಕೊಂಡು ಕುಳಿತಿದ್ದರು, ನಿಂತಿದ್ದರು, ತಳ್ಳಾಡುತ್ತಿದ್ದರು. ೫ರ ಸುಮಾರಿಗೆ ರವಿ ಬೆಳಗೆರೆ ಎಂಬ ಅಯಸ್ಕಾಂತ ಎಲ್ಲೇ ಕಾಣಿಸಿಕೊಳ್ಳಲಿ, ಜನ ಸೇರಿ ಅಪ್ಪಚ್ಚಿ ಮಾಡುತ್ತಿದ್ದರು. ಅವರು ಹತ್ತು ತಲೆ, ಇಪ್ಪತ್ತು ಕೈಗಳ ರಾವಣನಾದರೂ, ಮಾತಾಡುವುದಕ್ಕೆ, ಕೈ ಕುಲುಕುವುದಕ್ಕೆ ಸಾಧ್ಯವೇ ಆಗುತ್ತಿರಲಿಲ್ಲ! ಒಳಗೆ ಬಿ.ಆರ್.ಛಾಯಾ ಹಾಡುತ್ತಿದ್ದರು. ಹೊರಗೆ ಭಾವನಾ ಪ್ರಕಾಶನದ ನಾಲ್ಕೈದು ಪುಸ್ತಕ ಮಳಿಗೆಗಳಲ್ಲಿ ಜನಜಂಗುಳಿ. ಮೂರ್‍ನಾಲ್ಕು ಪರದೆಗಳಲ್ಲಿ ಒಳಗೆ ನಡೆಯುತ್ತಿರುವ ಕಾರ್ಯಕ್ರಮದ ಪ್ರಸಾರ. ಕ್ಷಣದಿಂದ ಕ್ಷಣಕ್ಕೆ ಜನಸಾಗರದ ಮಟ್ಟ ಏರುತ್ತಿತ್ತು. ಬಾಗಿಲುಗಳಲ್ಲಿ ನಿಂತಿದ್ದ ದ್ವಾರಪಾಲಕರ ಜತೆ ಅಭಿಮಾನಿಗಳು ರೇಗಿದರು, ಬಾಗಿಲೊಂದರ ಗಾಜು ಒಡೆದರು, ಪೊಲೀಸರು ಬಂದರು.

(ಕಲಾಕ್ಷೇತ್ರದ ಬಾಗಿಲೆದುರು ಕುಳಿತವರ 'ರವಿ ಭಜನೆ' !)
(ಟಿವಿ೯ ಚಾನೆಲ್‌ನ ಮುಖ್ಯ ನಿರೂಪಕ ಹಮೀದ್ ಕೂಡಾ, ಒಳಹೋಗಲು ದಾರಿ ಸಿಗದೆ ಕಲಾಕ್ಷೇತ್ರದ ಮೆಟ್ಟಿಲಲ್ಲಿ ಎಲ್ಲರೊಡನೆ ನಿಂತು ಕಣ್ಣರಳಿಸಿ, ಪರದೆಯಲ್ಲಿ ಬೆಳಗೆರೆ ಗೌಜಿ ನೋಡ್ತಾ ಇದ್ದಾಗ ಸಿಕ್ಕಿದ್ದು ಹೀಗೆ.)
ಸುಮಾರು ೬.೩೦ಕ್ಕೆ ಪ್ರಾರ್ಥನಾ ಶಾಲೆಯ 'ಗಂಡು ಹುಡುಗಿ'ಯರಿಂದ (ಬೆಳಗೆರೆ ಹೇಳಿದಂತೆ) ಡೊಳ್ಳು ಕುಣಿತದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ. ಅಷ್ಟೊತ್ತಿಗೆ ಪರದೆ ಮೇಲೆ ಕಾರ್ಯಕ್ರಮ ನೋಡಲು ಸಂಸ ಬಯಲು ರಂಗ ಮಂದಿರದಲ್ಲೂ ಜಾಗ ಇರಲಿಲ್ಲ ! ಪ್ರಾರ್ಥನಾ ಶಾಲೆಯ ಹೆಡ್‌ಮಿಸ್ಸು ಶೀಲಕ್ಕರವರ ಕಾರ್ಯಕ್ರಮ ನಿರ್ವಹಣೆಯಾದರೆ, ಈಗಷ್ಟೆ ಒಗೆದು ನೇತು ಹಾಕಿರುವ ಬಟ್ಟೆಯಂತೆ ಬೆವರು ಸುರಿಸುತ್ತಿದ್ದ ಬೆಳಗೆರೆ ಸ್ವಾಗತ ಭಾಷಣಕ್ಕೆ ಮೈಕು ಕೈಗೆತ್ತಿಕೊಂಡರೆ ಮಾತು, ಚಪ್ಪಾಳೆ ಧಾರಾಕಾರ.

( ಪಾರ್ಕಿಂಗ್ ಸ್ಥಳದ ಬಳಿ ಜನರ ಹಿಂಡು)
 (ಸಂಸ ಬಯಲು ರಂಗಮಂದಿರದಲ್ಲಿ ಜನಸ್ತೋಮ)
*ನನಗೀಗ ಕೇಳುಗರಿದ್ದಾರೆ, ನೋಡುವ ಪ್ರೇಕ್ಷಕರಿದ್ದಾರೆ. ಆದರೆ ನನಗೆ ಮೊದಲು ಸಿಕ್ಕಿದ್ದು ಓದುಗರು. ಆ ಓದುಗ ದೊರೆಗಳಿಗೆ ಮೊದಲ ನಮಸ್ಕಾರ. 
*ಎಲ್ಲೇ ಬೆಳೆದರೂ ಎಷ್ಟೇ ಬೆಳೆದರೂ ಅದನ್ನ ನಮ್ಮವರು ನೋಡಬೇಕು ಅನ್ನೋ ಆಸೆ ಇರತ್ತೆ.ನಮ್ಮವರು ಅದನ್ನ ಗುರುತಿಸಬೇಕು ಅಂತ. ವೇದಿಕೆ ಮೇಲಿರೊವಂಥ ಗಾಲಿ ಜನಾರ್ದನ ರೆಡ್ಡಿ, ಶ್ರೀರಾಮುಲು ಮಂತ್ರಿಗಳಾಗಿ ಇಲ್ಲಿ ಬಂದಿಲ್ಲ, ಮಿತ್ರರಾಗಿ ಬಂದಿದ್ದಾರೆ, ಬಳ್ಳಾರಿಯವರಾಗಿ ಬಂದಿದ್ದಾರೆ. ನಮ್ಮೂರಿನವರಿಗೆ ನಾನು ಏನು ಅಂತ ತೋರಿಸಬೇಕು ಅಂತ ಅವರನ್ನಿಲ್ಲಿಗೆ ಕರಕೊಂಡು ಬಂದಿದ್ದೇನೆ. (ಸಿಳ್ಳು...ಚಪ್ಪಾಳೆ!) 
*ಗಾಲಿ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅತ್ಯಂತ ಆತ್ಮೀಯ ಸ್ನೇಹಿತರು. ಒಂದು ಗಾಳಿ, ಇನ್ನೊಂದು ಬೆಂಕಿ. ಇವರ ಏಟಿಗೆ ದೇವೇಗೌಡರು ಪಾಪ ಪಟಪಟ ಅಂತಿದ್ದಾರೆ. 
*ಮೊನ್ನೆ ಒಂದು ಜೋಕ್ ಚೆನ್ನಾಗಿತ್ತು. ಕುಮಾರಸ್ವಾಮಿ ಯಡಿಯೂರಪ್ಪನೋರ ಕೇಳಿದರಂತೆ, ಟ್ವೆಂಟಿ ಟ್ವೆಂಟಿ ಆಡಕ್ಕೆ ಬರ್‍ತೀಯಾ ಅಂತ. ಅದಕ್ಕೆ ಕುಮಾರಸ್ವಾಮಿ ಹೇಳಿದರಂತೆ, ಬರ್‍ತೀನಿ, ಆದರೆ ಒಂದೇ ಒಂದು ಷರತ್ತು ಅಂದ್ರೆ, ನಮ್ಮಪ್ಪ ಅಂಪೈರ್ ಆಗಬೇಕು !
*ನನ್ನ ಚಿಕ್ಕ ವಯಸ್ಸಿನ ಮಿತ್ರ ಶ್ರೀರಾಮುಲು, ಒಳ್ಳೇ ತೆಲುಗು ಆಕ್ಟರ್ ಚಿರಂಜೀವಿ ಇದ್ದಂಗೆ ಇದ್ದಾನೆ. ಅವನ ಅಕ್ಕನ ಗಂಡನನ್ನ ಬಳ್ಳಾರಿಯ ನಟ್ಟನಡು ರಸ್ತೆಯಲ್ಲಿ ಭಯಂಕರವಾಗಿ ಕೊಲೆ ಮಾಡಲಾಯಿತು. ಈಗ ಪರಿಸ್ಥಿತಿ ಹೇಗಾಗಿದೆ ಅಂದರೆ, ಕೊಲೆಯಾದ ಆ ಬಾಬುವಿನ ಹೆಂಡತಿಯ ತಮ್ಮ ಶ್ರೀರಾಮುಲು ಮಂತ್ರಿಯಾದ. ಬಾಬುವಿನ ಮಗ ಎಂಎಲ್‌ಎ ಆದ. ಶ್ರೀರಾಮುಲು ಬಡವರಿಗಿರುವ ಎಲ್ಲ ನೋವು ನಲಿವುಗಳನ್ನು ಅನುಭವಿಸಿದವನು. 
*ಗಣಿ ಧಣಿಗಳು, ಗಣಿ ದೊರೆಗಳು ಅಂತ ನಿತ್ಯ ಪತ್ರಿಕೆಗಳಲ್ಲಿ ಓದ್ತೀವಿ. ಆದರೆ ಜನಾರ್ದನ ರೆಡ್ಡಿಯವರ ತಂದೆ ಬಳ್ಳಾರಿಯಲ್ಲಿ ಪೊಲೀಸ್ ಪೇದೆಯಾಗಿ ಕೆಲಸ ಮಾಡ್ತಾ ಇದ್ದವರು. ಅವರು ಸೈಕಲ್ಲಿಗೆ ಲಾಠಿ ಕಟ್ಟಿಕೊಂಡು ಡ್ಯೂಟಿಗೆ ಹೋಗ್ತಾ ಇದ್ದವರು. ಅವರು ನಾನು ಓದಿದ ಶಾಲೆಯಲ್ಲೇ ಓದಿದವರು. ಯಾವ್ಯಾವ ಮೇಷ್ಟ್ರುಗಳ ಕೈಯಿಂದ ನಾನು ಒದೆ ತಿಂದಿದೇನೋ, ಅದೇ ಮೇಷ್ಟ್ರುಗಳ ಬಾಯಿಯಿಂದ ಹೊಗಳಿಸಿಕೊಂಡವರು! ಇವರು ರಾಜಕೀಯಕ್ಕೆ ಯಾಕೆ ಬಂದ್ರು ಅಂದ್ರೆ- ಒಂದು ಮೀಟಿಂಗ್‌ನಲ್ಲಿ ಆಗಿನ ಕುರಗೋಡು ಶಾಸಕ ಸೂರ್ಯನಾರಾಯಣ ರೆಡ್ಡಿ ಯಾವುದೋ ವಿಷಯಕ್ಕೆ, "ನೀನೇನು ಅಂತ ಮಾತಾಡ್ತೀಯ, ನಿನಗೆ ಮಾತಾಡುವ ಅಧಿಕಾರ ಏನಿದೆ?', ಹೂ ಆರ್ ಯು ಅನ್ನೋ ಶೈಲಿಯಲ್ಲಿ ಮಾತಾಡಿದರು. ಅಲ್ಲಿಂದ ಸೀದಾ ಬೆಂಗಳೂರಿಗೆ ಬಂದು ರಾಜಕೀಯಕ್ಕೆ ಇಳಿದವರು ಜನಾರ್ದನ ರೆಡ್ಡಿ.
*'ವಿಶ್ವ ಬೆಂಗಳೂರಿಗೆ ಬಾ. ನಿನಗೆ ನೌಕರಿ ಕೊಡಿಸ್ತೇನೆ' ಅಂತ ವಿಶ್ವೇಶ್ವರ ಭಟ್ರಿಗೆ ನಾನೊಂದು ಪತ್ರ ಬರೆದಿದ್ದೆ. ಇವರು ಹೌದೇನೊ ಅಂತ ನಂಬ್ಕೊಂಡು, ಸಾಲಗೀಲ ಮಾಡ್ಕಂಡು, ಧಾರವಾಡದಿಂದ ಬೆಂಗಳೂರಿಗೆ ಬಂದ್ರೆ ನಾನೇ ಇಲ್ಲಿ ನೌಕರಿ ಕಳಕೊಂಡಿದ್ದೆ! ಅವನ ಬಗ್ಗೆ ನನಗೆ ಒಂದೇಒಂದು ಸಣ್ಣ ಹೊಟ್ಟೆಕಿಚ್ಚು ಅಂದ್ರೆ, ಆತ ಬಹಳ ಚೆಲುವ ಅಂತ. 
*ನಾನು, ವಿಶ್ವೇಶ್ವರ ಭಟ್ಟ, ಸೀತಾರಾಂ, ಜೋಗಿ ಎಲ್ಲ ಒಂದೇ ಗ್ಯಾಂಗ್ ಅಂತ ಕೆಲವರ ಆರೋಪ ಇದೆ. ಬಟ್ ಐ ಪ್ರೌಡ್‌ಲಿ ಎಕ್ಸೆಪ್ಟ್ ಇಟಿ'. ಹೌದು, ನಾವೆಲ್ಲ ಒಂದು ಗ್ಯಾಂಗೇ.
*ನಾನು ಸ್ವಲ್ಪ ಭಾವುಕನಾದ್ರೆ ಕ್ಷಮಿಸಿ. ಇವತ್ತು ವೇದಿಕೆ ಮೇಲೆ ನನ್ನ ಅಮ್ಮ ಇರಬೇಕಾದ ಜಾಗದಲ್ಲಿ ಮಾಲತಿ ಪಟ್ಟಣಶೆಟ್ಟಿ ಇದ್ದಾರೆ.... ಇವು ಬೆಳಗೆರೆ ಸ್ವಾಗತ ಭಾಷಣದ ಕೆಲವು ಮಿಂಚುಗಳಷ್ಟೆ. 

*ಬೆಳಗೆರೆಯವರ ೬೦ ವರ್ಷದ ಸಂಭ್ರಮಾಚರಣೆ ಬಳ್ಳಾರಿಯಲ್ಲಾಗಲಿ. ನಾನೇ ನಿಂತು ಮಾಡಿಸುತ್ತೇನೆ -ಜನಾರ್ದನ ರೆಡ್ಡಿ
*ನಾನೂ ಸಾವಿರಾರು ಸಭೆ ಸಮಾರಂಭಗಳಲ್ಲಿಭಾಗವಹಿಸದ್ದೇನೆ. ಆದರೆ ಈ ತರಹದ ಜನ-ಪ್ರತಿಕ್ರಿಯೆಯನ್ನು ನಾನೆಲ್ಲೂ ನೋಡಿಲ್ಲ. ಐ ಲವ್ ಹಿಮ್. ಐ ಲವ್ ಯು ರವಿ. - ಸುನಿಲ್ ಶಾಸ್ತ್ರಿ
*ರವಿ ದ್ರವಾಹಾರ ತಗೊಳೋದು ಕಡಿಮೆ ಮಾಡಬೇಕು! -ವಿಶ್ವೇಶ್ವರ ಭಟ್
ಬೆಳಗೆರೆ ಕೃಷ್ಣಶಾಸ್ತ್ರಿಗಳು ವೇದಿಕೆಯಲ್ಲಿದ್ದರು. ರವಿ ಬಗ್ಗೆ ಬರಹಗಾರ್ತಿ ಹೇಮಾ ಪಟ್ಟಣಶೆಟ್ಟಿ ಒಂದು ಕವನವನ್ನೂ ಓದಿದರು. ಆಸಿಡ್ ದಾಳಿಗೆ ಒಳಗಾಗಿ ವಿಕಾರ ಸ್ವರೂಪಿಯಾಗಿ, ಬೆಳಗೆರೆಯವರ ಆರೈಕೆ ಪಡೆದುಕೊಂಡಿರುವ ಹಸೀನಾ ಪ್ರೇಕ್ಷಕರ ಜತೆ ಇದ್ದರು. ರವಿ-ಲಲಿತಾ ಬೆಳಗೆರೆಯವರಿಗೆ ಭಾರೀ ಗಾತ್ರದ ಹಾರಾರ್ಪಣೆಯಾಗಿ ಸನ್ಮಾನವಾಯಿತು. 
ಆದರೆ, ಕುಖ್ಯಾತ ದಾವೂದ್ ಇಬ್ರಾಹಿಂನ ಫೋಟೊವನ್ನೇ ಮುಖಪುಟದಲ್ಲಿ ದೊಡ್ಡದಾಗಿ ಹಾಕಿರುವ 'ಡಿ ಕಂಪನಿ' ಎಂಬ ಪುಸ್ತಕ ಬಿಡುಗಡೆ ಮಾಡಿ, ಎಲ್ಲರೂ ದಾವೂದ್‌ನ ಮುಖವನ್ನು ಕ್ಯಾಮರಾಗಳಿಗೊಡ್ಡಿ ನಗುತ್ತಾ ನಿಂತರಲ್ಲ, ಆಗ ಮಾತ್ರ ನನಗಂತೂ ವಿಪರೀತ ಚಡಪಡಿಕೆಯಾಯ್ತು, ಕಸಿವಿಸಿಯಾಯ್ತು, ಕೈಹಿಸುಕಿಕೊಳ್ಳುವಂತಾಯ್ತು. 

ಹಾಗಂತ ಅಲ್ಲಿ ಎಲ್ಲ ನಮೂನೆಯವರೂ ಇದ್ದರು. ಅತಿರೇಕದ ಅಭಿಮಾನಿಗಳು, ಏನೆಲ್ಲ ನಡೆಯುತ್ತೆ ನೋಡೋಣ ಅಂತ ಸುಮ್ಮನೆ ಬಂದವರು, ಹೊಟ್ಟೆಕಿಚ್ಚಿನಿಂದ ಬಂದವರು, ಹೆಂಡತಿ ಒತ್ತಾಯಕ್ಕೆ ಬಂದ ಗಂಡಂದಿರು, ಅಭಿನಂದನಾ ಗ್ರಂಥಕ್ಕೆ ೫೦೦ರೂಪಾಯಿ ಅಂತ ಕೇಳಿದಾಕ್ಷಣ, 'ಹಾ..ಚೆನ್ನಾಗಿ ದುಡ್ಡು ಮಾಡ್ಕೊತಾನೆ ಬಿಡು' ಅನ್ನುವವರು-ಹೀಗೆಲ್ಲ. ಎಷ್ಟೋ ಜನ "ದೊಡ್ಡವರು' ಒಳ ಸೇರಲಾಗದೆ ಹೊರಗೆ ಅಡ್ಡಾಡುತ್ತಿದ್ದರು. ಹೊಗಳಿಕೆ, ಗೇಲಿ, ತಮಾಷೆ ನಡೆಯುತ್ತಲೇ ಇತ್ತು. 

ರವಿ ಬೆಳಗೆರೆಯೆಂಬ ತೂಫಾನು ಬೀಸುತ್ತಲೇ ಇತ್ತು. 

Read more...

October 04, 2008

ಇದರಲ್ಲಿ ಇದು, ಅದರಲ್ಲಿ ಅದು

'ಬದುಕುವುದಕ್ಕಾಗಿ ಒಂದು ಕೆಲಸ ಮಾಡುತ್ತಾ ಖುಶಿಗಾಗಿ ಇನ್ನೊಂದನ್ನು ಮಾಡುವುದರಲ್ಲೇ ಮಜಾ ಇದೆ' ಅಂತ ಜಯಂತ ಕಾಯ್ಕಿಣಿ ಆಗಾಗ ಹೇಳುತ್ತಿದ್ದರು. ಆಗ ಆಗ ಅವರು ಭಾವನಾ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದರಾದರೂ, ಮೊದಲು ಮುಂಬಯಿಯ ಯಾವುದೋ ಕಂಪನಿಯ ಕೆಲಸ ಮಾಡುತ್ತಾ ಕನ್ನಡ ಕತೆ-ಕವನಗಳ ಸಂಗದಲ್ಲಿದ್ದರು. ಬದುಕಿಗಾಗಿ ಏನೋ ವೃತ್ತಿ ನಡೆಸುತ್ತಾ ಖುಶಿಗಾಗಿ ಸಾಹಿತ್ಯ-ಸಾಂಸ್ಕೃತಿಕ ಲೋಕದಲ್ಲಿದ್ದವರು ಬಹಳ ಹಿಂದೆಯೂ ಇದ್ದರು. ಆದರೆ ಸ್ವರ್ಗದ ಕೆಲಸವೆಂದೇ ಪರಿಗಣಿಸಲ್ಪಟ್ಟ ಐಟಿ ಮಂದಿ ಕನ್ನಡದ ತೆಕ್ಕೆಗೆ ಬಿದ್ದಾಗ ಅವರೆಡೆಗೆ ವಿಶೇಷ ದೃಷ್ಟಿ ಹರಿಯಿತು. ಅದೃಷ್ಟವಶಾತ್ ಅವರೆಲ್ಲ ವೃತ್ತಿ- ಪ್ರವೃತ್ತಿಗಳ ಬದುಕನ್ನು ಚೆನ್ನಾಗಿ ಸಂಭಾಳಿಸುವವರೇ.   

ದೊಡ್ಡ ಕಂಪನಿಯ, ದೊಡ್ಡ ಹುದ್ದೆಯಲ್ಲಿ ಆದಿತ್ಯನಿರುವುದು ಹೌದು, ಮನೆಗೆ ಬಂದರೆ ಮಾತ್ರ ಸಿಡುಕ, ಗಂಟು ಮೋರೆಯವ. ಆತ ಗೆಳೆಯರ ಜತೆ ಸೇರಿ ರಾಕ್ ಬ್ಯಾಂಡ್ ಕಟ್ಟಿಕೊಂಡಿರುವುದು ಪತ್ನಿಗೂ ಗೊತ್ತಿಲ್ಲ, ಹೇಳುವ ಸಂದರ್ಭ ಅವನಿಗೆ ಬಂದಿಲ್ಲ. ಚೆನ್ನಾಗಿ ಗಿಟಾರ್ ಮೀಟುವ ಜೋ, ಗೆಳೆಯರ ರಾಕ್‌ಬ್ಯಾಂಡ್ ಬಿಟ್ಟು  ವಿದೇಶವೆಲ್ಲಾ ಸುತ್ತಿ ಕೈತುಂಬಾ ಸಂಪಾದಿಸಬೇಕೆಂದು ಆತನ ಹೆಂಡತಿಯ ಇಚ್ಚೆ. ಪಾಪ, ಅವಳು ಮೀನು ವ್ಯಾಪಾರ ಎಷ್ಟು ದಿನಾ ಅಂತ ಮಾಡಿಯಾಳು? ಅಂತೂಇಂತೂ ಈ ಹವ್ಯಾಸಿ ಕಲಾವಿದರ 'ಮ್ಯಾಜಿಕ್' ಎಂಬ ರಾಕ್‌ಬ್ಯಾಂಡ್ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತದೆ. ಆಗ ತಂಡದ ಒಬ್ಬ ಸಾವಿಗೀಡಾಗಿ ಒಂದಿಷ್ಟು ಸೆಂಟಿಮೆಂಟ್. ಕೊನೆಗೆ  ಎಲ್ಲರೂ ತಮ್ಮ  ವೃತ್ತಿ-ಪ್ರವೃತ್ತಿ-ಮನೆ ಬದುಕು ಎಲ್ಲದರಲ್ಲೂ ಯಶಸ್ಸು ಕಂಡು ನೂರ್ಕಾಲ ಬದುಕುತ್ತಾರೆ ಎಂಬ ಶೈಲಿಯಲ್ಲಿ ಸಿನಿಮಾ ಮುಗಿಸಿದ್ದಾರೆ ನಿರ್ದೇಶಕ ಅಭಿಷೇಕ್ ಕಪೂರ್. ಇದು ಇತ್ತೀಚೆಗೆ ಬಿಡುಗಡೆಯಾಗಿ ಗಮನ ಸೆಳೆದಿರುವ  'ರಾಕ್ ಆನ್' ಚಿತ್ರದ ಒಂದು ಧಾರೆ.
ಅರ್ಜುನ್ ರಾಂಪಾಲ್‌ನಂತಹ ನಟ, ಫರಾನ್ ಅಕ್ತರ್, ಪೂರಬ್ ಕೊಹ್ಲಿ, ಪ್ರಾಚಿ ದೇಸಾಯಿಯಂತಹ ಹೊಸ ನಟನಟಿಯರು ಚೆನ್ನಾಗಿಯೇ ನಟಿಸಿದ್ದಾರಾದರೂ ಒಟ್ಟು ಪರಿಣಾಮದಲ್ಲಿ ಅದು ಮೋಡಿ ಮಾಡುವಂತಿಲ್ಲ. ಕೆಲವು ವರ್ಷಗಳ ಹಿಂದೆ ತಮಿಳಿನಲ್ಲಿ ಸೂಪರ್‌ಹಿಟ್ ಆದ `ಬಾಯ್ಸ್' ಎಂಬ ಅಸಲಿ ಮಸಾಲೆ ಸಿನಿಮಾ ನೋಡಿದವರಿಗಂತೂ, ಈ ಸಿನಿಮಾದಲ್ಲಿ ಮ್ಯೂಸಿಕ್ ತಂಡ ಯಶಸ್ಸಿನ ದಾರಿ ಹಿಡಿಯುವ ಚಿತ್ರಣ ಬೋರು ಹೊಡೆಸೀತು. ಎಲ್ಲಿ ,ಹೇಗೆ,ಯಾಕೆ ಹಾಳಾಯಿತು ಅಂತ ಹೇಳಲು ಬಹಳ ಕಷ್ಟವಾಗುವ ಹಾಗೆ ಸಿನಿಮಾ ಒಡೆದುಹೋಗಿದೆ . ಮಾಸ್ ಮತ್ತು ಕ್ಲಾಸ್ ಸಿನಿಮಾಗಳ ಮಧ್ಯೆ ದಾರಿ ಮಾಡಿಕೊಳ್ಳಲು ಹೋಗಿ ಅದೆಲ್ಲ ದಾರಿ ತಪ್ಪಿತೋ... ಸುಲಭದಲ್ಲಿ ಹೇಳಲೂ ಸಾಧ್ಯವಾಗದು ! ಹಾಗೆ ಒಟ್ಟಂದದಲ್ಲಿ ಖುಶಿ ಕೊಡದಿದ್ದರೂ, ಕೆಲವು ದೃಶ್ಯಗಳನ್ನು ನಿರ್ವಹಿಸಿರುವ ಬಗೆ ಚೆನ್ನಾಗಿಯೇ ಇದೆ. (ಪಿವಿಆರ್ ಎಲ್ಲಾ ಬೇಡ, ಡಿವಿಡಿ ಸಿಕ್ಕಿದರೆ ನೋಡಿ ಎಂಬುದು ತಾತ್ಪರ್ಯ!)   

ಇನ್‌ಫೋಸಿಸ್‌ನ ನಾರಾಯಣಮೂರ್ತಿಯವರು ತಮ್ಮ ಉದ್ಯೋಗಿಗಳಿಗೆ ಬರೆದದ್ದೆನ್ನಲಾದ ಇ-ಮೇಲ್ ಒಂದು ಕೆಲಕಾಲದ ಹಿಂದೆ ಅಂತರ್ಜಾಲದಲ್ಲಿ ಸುತ್ತಾಡುತ್ತಿತ್ತು. ಆಫೀಸಿನಲ್ಲಿ ಪುಕ್ಕಟೆಯಾಗಿ ಇಂಟರ್‌ನೆಟ್, ಕಾಫಿ, ಎ.ಸಿ., ಇರುತ್ತದೆಂದು, ಐಟಿ ಲೋಕದ ಬಹುಪಾಲು ಬ್ಯಾಚುಲರ್‍ಸ್ , ತಮ್ಮ ಕೆಲಸದ ಅವಧಿ ಮೀರಿಯೂ ಕಚೇರಿಯಲ್ಲೇ ಕಾಲ ಕಳೆಯುತ್ತಾರೆ. ಆದರೆ ಸರಿಯಾದ ಸಮಯಕ್ಕೆ ಬಂದು, ಸರಿಯಾದ ಸಮಯಕ್ಕೆ ಕೆಲಸ ಮುಗಿಸಿ ಹೋಗುವ ಅಭ್ಯಾಸ ಮಾಡಿಕೊಳ್ಳದಿದ್ದರೆ, ವಿವಾಹದ ಬಳಿಕ ಕಷ್ಟಪಡಬೇಕಾಗುತ್ತದೆ ಅಂತ ಅದರಲ್ಲಿ ಎಚ್ಚರಿಸಲಾಗಿತ್ತು ! ಮನೆಯಲ್ಲಿ  ನೆಮ್ಮದಿ ಇಲ್ಲ ಅಂತ ಇತರ ಚಟ-ಹವ್ಯಾಸವನ್ನೋ ಬೆಳೆಸಿಕೊಳ್ಳುವುದು ಅಥವಾ ಹೊರಗಿನ ಅಭ್ಯಾಸಗಳಿಂದಲೇ ಮನೆಯ ಬದುಕು ಕೆಡಿಸಿಕೊಳ್ಳುವುದು ನಡೆಯುತ್ತಿರುವಾಗಲೂ, ವೃತ್ತಿ-ಪ್ರವೃತ್ತಿ-ಮನೆ ಬದುಕನ್ನು ಸುಲಲಿತವಾಗಿ ತೂಗಿಸಿಕೊಂಡು ಹೋಗುತ್ತಿದ್ದ ಜನ ನಮ್ಮಲ್ಲಿ ಇದ್ದರು, ಇದ್ದಾರೆ. 

'ಊರಲ್ಲೇ ಉಳಿಯಬೇಕಾದ ಅನಿವಾರ್ಯತೆಯನ್ನು , ತನ್ನದೇ ಆಯ್ಕೆ ಎಂಬಂತೆ ಮುಂದೆ ಬದುಕಿದವರು ಅವರು. ತಾನು ಇದ್ದಲ್ಲೇ ಬೆಳೆಯುವುದು, ತನ್ನ ಸುತ್ತಲಿನ ಜನರ ನಡುವೆ ಅರ್ಥಪೂರ್ಣವಾಗುವುದು ಅವರಿಗೆ ಮುಖ್ಯವಾಯಿತು' ಅಂತ ಅಪ್ಪನ ಸಂಸ್ಮರಣಾ ಪುಸ್ತಕದಲ್ಲಿ ಒಬ್ಬರು ಬರೆದಿದ್ದರು. ಹೌದು, ಕೊನೆಯವರೆಗೂ ನಗರ ಜೀವನಕ್ಕಾಗಿ, ದೊಡ್ಡ ಕೆಲಸಕ್ಕಾಗಿ ಅವರು ಹಪಹಪಿಸಿರಲಿಲ್ಲ. ಹಾಗಂತ ಆ ನಿರುದ್ವಿಗ್ನತೆ, ಮನಸ್ಥಿತಿ ಎಲ್ಲರಿಗೆ ಸಾಧ್ಯವೂ ಇಲ್ಲ. ವೃತ್ತಿ-ಪ್ರವೃತ್ತಿ-ಮನೆ ಬದುಕು ನೂಲಿನ ಉಂಡೆಯಂತೆ. ಸರಿಯಾಗಿ ಸುತ್ತಿಕೊಂಡಿದ್ದರೆ ಬಿಡಿಸಿಕೊಳ್ಳುವುದು ಬಹಳ ಸುಲಭ, ಸಿಕ್ಕು ಶುರುವಾಯಿತೋ...ಅದು ವೈರಿಗಳಿಗೂ ಬೇಡ. 

ಆಫೀಸಿನಲ್ಲೇ ಇಷ್ಟು ಬರೆದುಕೊಂಡು ಖುಶಿಯಾಗಿದ್ದೇನೆ. ಹಬ್ಬದ ರಜೆ ಎಲ್ಲರಿಗೂ ಸನ್ಮಂಗಲ ಉಂಟುಮಾಡಲಿ.          

Read more...

September 26, 2008

ನಮ್ ಆಫೀಸಲ್ಲಿ ಹಂಗೇನಿಲ್ಲ ..!

ತಾವು ಕೆಲಸ ಮಾಡುವ ಕಚೇರಿಗಳ ಬಗ್ಗೆ ಮುಕ್ತ ಕಂಠದಿಂದ ಪ್ರಶಂಸೆ ಮಾಡುವವರು ಬಹಳ ಕಡಿಮೆ. ಪ್ರತಿಯೊಬ್ಬರಿಗೂ ಏನಾದರೊಂದು ತಕರಾರು ಇದ್ದೇ ಇರುತ್ತದೆ. ಕ್ಯಾಂಟೀನ್, ಬಾಸ್‌ಗಳು, ಕೆಲಸದ ರೀತಿ, ಸಮಯ...ಹೀಗೆ ಯಾವುದಾದರೊಂದು ವಿಷಯದ ಬಗ್ಗೆ ದೂರುಗಳು ಇಲ್ಲದಿಲ್ಲ. ಹೀಗಾಗಿ ಪತ್ರಿಕಾಲಯದಲ್ಲೂ ಅವು ಇರಲೇಬೇಕಲ್ಲ!

ಕೆಲವರಿಗೆ ಕ್ಯಾಂಟೀನ್ನಲ್ಲಿ ತಿನ್ನೋದೆಂದರೆ ಬೋರು. ಹಾಗಂತ ತಿನ್ನುವಾಗಲೂ ತಮ್ಮದೇ ಸೀಟಿನಲ್ಲಿ ಕುಳಿತುಕೊಳ್ಳುವುದೆಂದರೆ ಅಲರ್ಜಿ. ತಿನ್ನುವುದಕ್ಕಾದರೂ ಒಂದು ಹೊಸ ಜಾಗ ಬೇಕಲ್ಲ ಅಂತ, ಯಾರು ಕೆಲಸ ಮುಗಿಸಿ ಹೋಗಿರುತ್ತಾರೋ ಅವರ ಆಸನದಲ್ಲಿ ವಿರಾಜಮಾನರಾಗುತ್ತಾರೆ. ಅಲ್ಲಿಗೆ ಎಲ್ಲರನ್ನೂ ಕಾ ಕಾ ಕಾ ಅಂತ ಕರೆದು ಹಂಚಿ ತಿಂದರೆ ಅವರಿಗೆ ಸ್ವರ್ಗ ಸುಖ. ಮರುದಿನ ಆ ಸೀಟಿನ ವ್ಯಕ್ತಿ ಬಂದರೆ, ತಿಂದವರು ಕೈ ಒರೆಸಿಕೊಂಡ ಗುರುತಂತೂ ಅಲ್ಲಿ ಇದ್ದೇ ಇರುತ್ತದೆ !
 
ಇದರಿಂದ ಬೇಸತ್ತ ಮಿಸ್ಟರ್ ಕ್ಲೀನ್ ಒಬ್ಬರು, ತಾವೆದ್ದು ಹೋಗುವ ಮೊದಲು, ತಮ್ಮ ಕಂಪ್ಯೂಟರ್ ಮಾನಿಟರ್‌ನ್ನೇ ನೋಟೀಸು ಫಲಕವನ್ನಾಗಿ ಮಾಡಿ ಹೋದ ಚೆಂದ ಇದು. 'ತಿಂಡಿಪೋತರಿಗೆ ಮನವಿ' ಎಂಬ ಶೀರ್ಷಿಕೆಯಲ್ಲಿ ನಾಲ್ಕು ಎಚ್ಚರಿಕೆಯ ಮಾತುಗಳನ್ನೂ ಬರೆದು ಹೋಗಿದ್ದಾರೆ. ತಿಂದು ಚಿತ್ರಾನ್ನ ಮಾಡುವವರನ್ನು ಅಲ್ಲಿ ಕಟು ಶಬ್ದಗಳಿಂದ ಎಚ್ಚರಿಸಲಾಗಿದೆ. 

ಎಲ್ಲರೂ ಟಿಫಿನ್ ಬಾಕ್ಸ್, ಪ್ಲೇಟ್ ಸಮೇತ ಅದರೆದುರು ಬಂದು ಓದುತ್ತಿದ್ದ ಚೆಂದವನ್ನು, ಛೆ ನೀವೆಲ್ಲರೂ ನೋಡಬೇಕಿತ್ತು !

Read more...

September 22, 2008

ಹಳ್ಳಿ ಥೇಟರ್‌ನಲ್ಲಿ ಸಿಹಿ ಸುದ್ದಿ

ಸಕಲೇಶಪುರದಿಂದ ಪ್ರಸಾದ್ ರಕ್ಷಿದಿಯವರು ಬರೆಯುತ್ತಿರುವ 'ಬೆಳ್ಳೇಕೆರೆಯ ಹಳ್ಳಿ ಥೇಟರ್' ಸರಣಿಯ ೬ನೇ ಭಾಗವಿದು. ಸದ್ಯದಲ್ಲೇ ಇದು ಮುಂದಿನ ಭಾಗಗಳೊಂದಿಗೆ ಪುಸ್ತಕ ರೂಪದಲ್ಲಿ 'ಅಭಿನವ ಪ್ರಕಾಶನ'ದಿಂದ ಹೊರಬರಲಿದೆ. ಅಲ್ಲಿಯವರೆಗೆ ಚಂಪಕಾವತಿಯಲ್ಲಿ ಇದು ಮುಂದುವರಿಯುತ್ತದೆ.

ಕಿತ್ತಲೆ ಕಂಟ್ರ್ಯಾಕ್ಟ್ ಮತ್ತು ರಂಗಸಜ್ಜಿಕೆ
ರಾತ್ರಿ ಶಾಲೆಯಲ್ಲಿ ಓದಿನ ಜೊತೆಗೆ ಸರಳ ಲೆಕ್ಕಗಳನ್ನು ಹೇಳಿ ಕೊಡುತ್ತಿದ್ದೆ. ಅವರ ಸಂಬಳದ ಲೆಕ್ಕ - ಬೋನಸ್ ಲೆಕ್ಕ, ಒಂದು ಕಿಲೋಗ್ರಾಂ ಕಾಫಿ ಹಣ್ಣು ಕೊಯ್ದದ್ದಕ್ಕೆ ೧೫ ಪೈಸೆಯಾದರೆ ೧೨೦ ಕೆ.ಜಿ.ಗೆ ಎಷ್ಟು? ಹೀಗೆ ವಿಷಯಗಳು ನೇರವಾಗಿ ಅವರ ಸಮಸ್ಯೆಗಳಿಗೇ ಸಂಬಂಧಿಸಿದ್ದು ಬೇಗ ಬೇಗ ಕಲಿಯುತ್ತಿದ್ದರು. ಪಠ್ಯಪುಸ್ತಕಗಳಿಗೆ ಬದಲಾಗಿ ಹಳೇ ದಿನ ಪತ್ರಿಕೆಗಳು (ನಮ್ಮೂರಿಗೆ ಆಗ ದಿನ ಪತ್ರಿಕೆಗಳು ಬರುತ್ತಿರಲಿಲ್ಲ) ಚಿತ್ರಗೀತೆ ಪುಸ್ತಕಗಳು, ಸಿನಿಮಾ ಮ್ಯಾಗಜೀನ್‌ಗಳು ಹೀಗೆ ಅವರ ಆಸಕ್ತಿಯ ಪುಸ್ತಕಗಳನ್ನು ಕೊಡುತ್ತಿದ್ದೆ. ಸಂತೆಯಿಂದ ತರಬೇಕಾದ ಸಾಮಾನುಗಳ ಪಟ್ಟಿ ಮಾಡಲು ಹೇಳುತ್ತಿದ್ದೆ. ರೇಡಿಯೋದಲ್ಲಿ ಕೇಳಿದ ಸಿನಿಮಾ ಹಾಡುಗಳನ್ನಂತೂ ಅವರು ಉತ್ಸಾಹದಿಂದ ಬರೆದುಕೊಳ್ಳುತ್ತಿದ್ದರು. ಹೀಗೆ ಮಳೆಗಾಲವಿಡೀ ಬೇರೆ ಯಾವುದೇ ಚಟುವಟಿಕೆಗಳಿಲ್ಲದೆ ಶಾಲೆ ನಿರಾತಂಕವಾಗಿ ನಡೆಯುತ್ತಿತ್ತು. ದೇಶದ ರಾಜಕೀಯದಲ್ಲಿ ಮತ್ತೆ ಬದಲಾವಣೆಯಾಗಿತ್ತು. ನಮ್ಮಂತಹವರ ಕನಸಿನ ಜನತಾಪಕ್ಷ ಭ್ರಮೆಯಾಗಿ ಕುಸಿದು ಹೋಗಿ ಮತ್ತೆ ಇಂದಿರಾ ಆಡಳಿತ ಬಂದಿತ್ತು.

ಈ ಸಂದರ್ಭದಲ್ಲಿ ಇನ್ನೊಂದು ಘಟನೆ ನಡೆಯಿತು. ನಾನು ಡೈರಿ ಕೆಲಸದಲ್ಲಿದ್ದರೂ, ಈ ಊರಲ್ಲೇ ಬೆಳೆದವನಾದ್ದರಿಂದ ನನಗೆ ಎಸ್ಟೇಟಿನ ಹೊರಗೂ ಸಾಕಷ್ಟು ಗೆಳೆಯರಿದ್ದರು. ಅಪ್ಪ ಇನ್ನೂ ತೋಟದ ಕೆಲಸದಲ್ಲಿದ್ದರು. ತೋಟದ ಹೊರಗೂ ನಮಗೆ ಸೌಹಾರ್ದ ಸಂಬಂಧಗಳಿದ್ದುದರಿಂದ ತೋಟದ ಒಳಗಾಗಲೀ ಹೊರಗಿನಿಂದಾಗಲೀ ಕಳ್ಳತನದಂತಹ ಸಮಸ್ಯೆಗಳು ಅಷ್ಟಾಗಿ ಇರಲಿಲ್ಲ.
ಪ್ರತಿವರ್ಷವೂ ತೋಟದ ಕಿತ್ತಲೆ ಫಸಲನ್ನು ಯಾರಿಗಾದರೂ ಹೊರಗಿನವರಿಗೆ ಗುತ್ತಿಗೆಗೆ ಕೊಡುವುದು ವಾಡಿಕೆ. ಗುತ್ತಿಗೆ ವಹಿಸಿಕೊಂಡವರು ಎಷ್ಟೇ ಪಾರ ಮಾಡಿದರೂ ಕೂಡಾ ಜನರು ತಿನ್ನುವ ಆಸೆಯಿಂದ ಕಿತ್ತಲೆ ಹಣ್ಣನ್ನು ಕದಿಯುವುದು ಬಿಡುತ್ತಿರಲಿಲ್ಲ. ಇಂದೂ ಬಿಟ್ಟಿಲ್ಲ. ಆ ವರ್ಷ ಗುತ್ತಿಗೆ ಮಾಡಿಕೊಂಡವನಿಗೂ - ನಮ್ಮ ಕೆಲವು ಹುಡುಗರಿಗೂ ಯಾವುದೋ ಸಣ್ಣ ವಿಷಯಕ್ಕೆ ಜಗಳ ಬಂತು. ಅದರಿಂದಾಗಿ ಹುಡುಗರು ಸ್ವಲ್ಪ ಹೆಚ್ಚೇ ಕಿತ್ತಲೆ ಹಣ್ಣು ಕದ್ದರು. ಗುತ್ತಿಗೆದಾರ ಇದಕ್ಕೆಲ್ಲ ನಾನೇ ಕಾರಣವೆಂದು 'ನಿಮ್ಮ ಮಗನೇ ಹುಡುಗರನ್ನೆಲ್ಲಾ ಅಟ್ಟಕ್ಕೇರಿಸಿ ಹಾಳು ಮಾಡಿಟ್ಟಿದ್ದಾರೆ!' ಎಂದು ಅಪ್ಪನಲ್ಲಿ ದೂರಿದ. ಅಪ್ಪನಿಗೆ ಇಕ್ಕಟ್ಟಾಯಿತು. ನನ್ನನ್ನು ಕರೆದು 'ನಿನ್ನ ಪಡೆಯಿಂದಾಗಿ ನನ್ನ ಮರ್ಯಾದೆ ಹೋಗುತ್ತಿದೆ.'ಎಂದು ಬಯ್ದರು. ನಾವೆಲ್ಲ ಸೇರಿ ಕಿತ್ತಲೆ ಹಣ್ಣು ಕದಿಯುವುದನ್ನು ನಿಲ್ಲಿಸುವ ಬದಲಿಗೆ ಗುತ್ತಿಗೆದಾರನಿಗೆ ಬುದ್ಧಿ ಕಲಿಸಬೇಕೆಂದು ತೀರ್ಮಾನಿಸಿದೆವು!
ನಮ್ಮ ಡೈರಿ ಫಾರಂನಲ್ಲಿ ಒಂದು ಬೀಜದ ಹೋರಿಯಿತ್ತು. ಅದು ದೈತ್ಯ ಗಾತ್ರದ ಹೆಚ್.ಎಫ್. ತಳಿಯ ಹೋರಿ. ಅದಕ್ಕೆ ಡೈರಿ ಕೆಲಸಗಾರರಲ್ಲದೆ ಬೇರೆಯವರನ್ನು ಕಂಡರೆ ಹಾಯುವ ಅಭ್ಯಾಸವೂ ಇತ್ತು. ಅದು ಬಂತೆಂದರೆ ಡೈರಿ ಕೆಲಸಗಾರರು ಬಿಟ್ಟು ಬೇರೆ ಯಾರೂ ಹತ್ತಿರ ಬರುತ್ತಿರಲಿಲ್ಲ. ಅದನ್ನು ಪ್ರತಿದಿನ ಸ್ವಲ್ಪ ಹೊತ್ತು ಹೊರಗೆ ತಿರುಗಾಡಲು ಬಿಡುತ್ತಿದ್ದೆವು. ಪ್ರತಿದಿನ ಅದು ತಪ್ಪಿಸಿಕೊಂಡಿತೆಂದು ಹೇಳಿ ಅದನ್ನು ಬೇಕೆಂದೇ ತೋಟಕ್ಕೆ ಬಿಡುವುದು; ಅದು ಹೋದಂತೆ ಅದರ ಹಿಂದೆಯೇ ಡೈರಿ ಹುಡುಗರೆಲ್ಲ ಹೋಗಿ ಕಿತ್ತಲೆ ಮರಗಳನ್ನು ಬೋಳಿಸುವುದು ಪ್ರಾರಂಭವಾಯ್ತು. ಒಟ್ಟಿನಲ್ಲಿ ಕಿತ್ತಳೆ ಮರಗಳೆಲ್ಲ ಖಾಲಿಯಾಗತೊಡಗಿದವು.
ಗುತ್ತಿಗೆದಾರ ಬ್ಯಾರಿ ಸೋತು ಹೋದ. ಊರೆಲ್ಲ ನಮ್ಮನ್ನು ದೂರಿಕೊಂಡು ಬಂದ. ಅವನು ಬೇರೆ ಊರವನಾದ್ದರಿಂದ ಅವನಿಗೆ ಯಾರೂ ಬೆಂಬಲ ಕೊಡಲಿಲ್ಲ. ಅವನೀಗ ನಮ್ಮ ಬಗ್ಗೆ ಹೆದರಿಕೊಂಡಿದ್ದನೋ ಏನೋ, ತೋಟದ ಮಾಲೀಕರಲ್ಲೂ ಸಹ ಈ ಬಗ್ಗೆ ದೂರು ಕೊಡಲು ಹೋಗಲಿಲ್ಲ. ಕೊನೆಗೆ ನಮ್ಮ ಸುದ್ದಿಯೇ ಬೇಡವೆಂದು ಮುಂದಿನ ವರ್ಷ ತೋಟ ಗುತ್ತಿಗೆ ಕೇಳಲು ಬರಲೇ ಇಲ್ಲ.
ನಮ್ಮಯತ್ನವೇನೋ ಫಲಿಸಿತ್ತು. ಆದರೆ ನನಗೆ ಇನ್ನೊಂದು ಭಯ ಪ್ರಾರಂಭವಾಯಿತು. ಹುಡುಗರೀಗ ಕಳ್ಳತನದ ರುಚಿ ಕಲಿತಿದ್ದಾರೆ. ನಾಟಕದಂತೆ ಇದೂ ಖಾಯಂ ಆಗಿ ಬಿಟ್ಟರೇನು ಗತಿ? ಶಾಲೆಯಲ್ಲಿ ಎಲ್ಲರೂ ಸೇರಿದ್ದಾಗ ಹೇಳಿದೆ- "ಈಗ ನಾವೇ ಕಳ್ಳರೆಂದು ಲೋಕಕ್ಕೇ ಗೊತ್ತಾಗಿದೆ. ನಾವು ಯಾಕೆ ಕಳ್ಳರೆಂದು ಕರೆಸಿಕೊಳ್ಳಬೇಕು. ಹೇಗೂ ನಾವೇ ಕಷ್ಟಪಟ್ಟು ಬೆಳೆಸಿದ ತೋಟ, ಈ ಬಾರಿ ನಾವೇ ಯಾಕೆ ಫಸಲನ್ನು ಗುತ್ತಿಗೆ ಮಾಡಬಾರದು?'
'ನಮಗೆ ಬಂಡವಾಳ ಎಲ್ಲಿದೆ" ಎಂದ ಒಬ್ಬ.
'ಪಾರ ಮಾಡುವವರಿಗೆ ಸಂಬಳ ಯಾರು ಕೊಡ್ತಾರೆ' - ಇನ್ನೊಬ್ಬ.

ಹೀಗೆ ಚರ್ಚೆ ಪ್ರಾರಂಭವಾಯಿತು. ನಾವೇ ವಹಿಸಿಕೊಂಡರೆ ತೋಟ ಪಾರದ ಅಗತ್ಯವೇ ಇಲ್ಲವೆಂದೂ, ಹಣ್ಣು ಕೊಯ್ದಾಗ ಎಲ್ಲ ಮನೆಗಳಿಗೂ ನಾವೇ ಸಾಕಷ್ಟು ಹಣ್ಣನ್ನು ಹಂಚುವುದರಿಂದ ಯಾರೂ ಕದಿಯುವ ಅಗತ್ಯವೇ ಬೀಳುವುದಿಲ್ಲವೆಂದೂ ಹೇಳಿದೆ. ಮುಂಗಡ ಹಣ ಸ್ವಲ್ಪ ಮಾತ್ರ ನೀಡಿ ಉಳಿದ ಹಣವನ್ನು ಕಿತ್ತಲೆ ಕೊಯಿಲು ಮಾಡಿದ ನಂತರ ಕೊಡುತ್ತೇವೆಂದು ಮಾಲೀಕರನ್ನು ಒಪ್ಪಿಸೋಣ, ನಾವೆಲ್ಲ ಸೇರಿ ಕೇಳಿದರೆ ಖಂಡಿತಾ ಒಪ್ಪುತ್ತಾರೆ, ಲಾಭ ಬಂದರೆ ಏನು ಮಾಡುವುದೆಂದು ನಾವೆಲ್ಲ ಸೇರಿ ತೀರ್ಮಾನಿಸೋಣ ಎಂದೆ. ಕಿತ್ತಲೆ, ಏಲಕ್ಕಿ, ಮೆಣಸು, ಇತ್ಯಾದಿಗಳ ಗುತ್ತಿಗೆ ವ್ಯವಹಾರವೂ ಒಂದು ಜೂಜೇ. ಮಳೆ-ಬೆಳೆ-ಮಾರುಕಟ್ಟೆ ಎಲ್ಲವೂ ನೆಟ್ಟಗಿದ್ದರೆ ಗುತ್ತಿಗೆ ಮಾಡಿಕೊಂಡವನಿಗೆ ಒಳ್ಳೆಯ ಲಾಭವಾಗುತ್ತದೆ. ಇಲ್ಲದಿದ್ದರೆ ಅಸಲು ಸಿಕ್ಕುವುದೇ ಕಷ್ಟವಾಗಿಬಿಡುತ್ತದೆ. ಎಷ್ಟೋ ಸಾರಿ ಗುತ್ತಿಗೆದಾರರು ತೋಟದ ಮಾಲೀಕರಿಗೆ ಅರ್ಧಂಬರ್ದ ಹಣಕೊಟ್ಟು , ಫಸಲನ್ನೂ ಕೊಯ್ಯದೆ ಕದ್ದು ಓಡುವುದೂ ಇದೆ. ನನಗಂತೂ ಕಿತ್ತಲೆ ಫಸಲಿನ ಲಾಭ-ನಷ್ಟಕ್ಕಿಂತಲೂ ಹೇಗಾದರೂ ಮಾಡಿ ಕಿತ್ತಲೆ ಕಳ್ಳತನವನ್ನು ನಿಲ್ಲಿಸುವುದು ಮುಖ್ಯವಾಗಿತ್ತು. ಇಲ್ಲದಿದ್ದರೆ ನಾವೆಲ್ಲ ತೋಟದಲ್ಲಿ  ಮಾತ್ರವಲ್ಲ ,ಊರಲ್ಲಿ ಕೂಡಾ ಕೆಟ್ಟ ಹೆಸರು ಗಳಿಸುವುದು ಖಂಡಿತವಾಗಿತ್ತು. ನಮ್ಮ ಯೋಜನೆಗೆ ಮಾಲೀಕರು ಕೂಡಾ ಒಪ್ಪಿದರು.

ನಾಟಕ ಮುಗಿದ ನಂತರವೂ ನಮ್ಮ ನಾಲ್ಕಾಣೆ ಫಂಡನ್ನು ಮುಂದುವರಿಸಿಕೊಂಡು ಬಂದಿದ್ದೆವಾದ್ದರಿಂದ ಆ ಫಂಡಿನಲ್ಲಿ ಸ್ವಲ್ಪ ಹಣವಿತ್ತು. ಒಟ್ಟು ಏಳುನೂರಾ ಐವತ್ತು ರೂಪಾಯಿಗಳಿಗೆ ಮಾತಾಗಿ ನೂರೈವತ್ತು ರೂಪಾಯಿ ಮುಂಗಡ ಕೊಟ್ಟೆವು. ಆ ವರ್ಷದ ತೋಟದ ಕಿತ್ತಲೆ ಫಸಲು ನಮ್ಮದಾಯಿತು. ಅಗತ್ಯ ಇಲ್ಲದಿದ್ದರೂ ಕಾಯಿ ಬಲಿಯುವ ಮೊದಲೇ ತೋಟದಲ್ಲಿ ಸುತ್ತಾಡತೊಡಗಿದೆವು. ತೋಟ ಪಾರ ಮಾಡುವ ಅಗತ್ಯವಿಲ್ಲವೆಂದು ತೀರ್ಮಾನಿಸಿದ್ದೆವಲ್ಲ. ಆದರೆ ಕಾಯಿ ಬಲಿಯುತ್ತ ಬಂದಂತೆ ನಮ್ಮ ತೀರ್ಮಾನವನ್ನು ಬದಲಿಸಬೇಕಾಯ್ತು. ನಮ್ಮ ತೀರ್ಮಾನಕ್ಕೆ ಮಂಗಗಳು ಒಪ್ಪಿಗೆ ನೀಡಿರಲಿಲ್ಲ! ಹಾಗಾಗಿ ತೋಟ ಪಾರ ಅನಿವಾರ್ಯವಾಯ್ತು. ನಾವು ಎಷ್ಟೇ ಹೇಳಿದರೂ ತೋಟದಲ್ಲಿ ಕೆಲವರು ಹಳೆಯ ಚಾಳಿ ಬಿಡುತ್ತಿರಲಿಲ್ಲ. ಆಗಾಗ ಒಮ್ಮೊಮ್ಮೆ ಕಿತ್ತಲೆ ಹಣ್ಣು ಕದಿಯುತ್ತಿದ್ದರು.
ಕೊಯ್ಲಿನ ಸಮಯ ಬಂದಾಗ ಹುಡುಗರ ದಂಡೇ ತಯಾರಾಯಿತು. ನಾವೇ ಎಲ್ಲರೂ ಸೇರಿ ಕಿತ್ತಲೆ ಹಣ್ಣನ್ನು ಕೊಯ್ದು ಮಾರಾಟ ಮಾಡಿದೆವು. ಎಲ್ಲಾ ಮನೆಗಳಿಗೂ ಸಾಕಷ್ಟು ಕಿತ್ತಲೆ ಹಣ್ಣು ಹಂಚಿದೆವು. ಕೊಯ್ದವರಿಗೆ ಸಂಬಳವನ್ನೂ ಕೊಟ್ಟೆವು. ತೋಟದ ಹಣವನ್ನೂ ಸಂದಾಯ ಮಾಡಿದೆವು.  ನಮ್ಮ ಅದೃಷ್ಟ ಚೆನ್ನಾಗಿತ್ತು. ಎಲ್ಲಾ ಖರ್ಚು ಕಳೆದು ಎರಡು ಸಾವಿರ ರೂಪಾಯಿ ಲಾಭ ಉಳಿದಿತ್ತು! ನಮಗೆಲ್ಲಾ ಲಾಟರಿ ಹೊಡೆದಂತಾಗಿತ್ತು. ಅದು ಸಾಕಷ್ಟು ದೊಡ್ಡ ಮೊತ್ತವೇ ಎರಡು ಸಾವಿರ ರೂಪಾಯಿ ಆ ಕಾಲದಲ್ಲಿ ಸುಮಾರಾಗಿ ಇಬ್ಬರು ಕೆಲಸಗಾರರ ಒಂದು ವರ್ಷದ ಕೂಲಿಯಷ್ಟಾಗುತ್ತಿತ್ತು.

'ಇದನ್ನೇನು ಮಾಡುವುದು?' ಶಾಲೆಯಲ್ಲಿ ತೋಟದ ಜನರೆಲ್ಲಾ ಕಿಕ್ಕಿರಿದು ಸಭೆ ಸೇರಿದರು. ಇಷ್ಟೊಂದು ಹಣ ಬಂದಿದ್ದರಿಂದ ಅವರಲ್ಲೂ ಹಲವಾರು ಆಲೋಚನೆಗಳಿದ್ದವು.
'ಚೌಡಿ ಪೂಜೆ ಮಾಡೋಣ, ಕುರಿ ಕಡ್ದು ಊಟ ಹಾಕೋಣ' - ಬಂತು ಸಲಹೆ.
'ಎಲ್ಲರಿಗೂ ಹಂಚೋಣ' ಎಂದ ಮೈಯೆಲ್ಲ ಸಾಲ ಮಾಡಿಕೊಂಡಿದ್ದವನೊಬ್ಬ.
'ಫಂಡು ಮಾಡಿ ಬಡ್ಡಿಗೆ ಕೊಡೋಣ" ಇವನು ಬಡ್ಡಿ ಸಾಲದ ಗಿರಾಕಿ.
'ಮಕ್ಕಳಿಗೆಲ್ಲಾ ಬಟ್ಟೆ ತನ್ನಿ'.
'ಚೌಡಿ ಕಲ್ಲಿಗೆ ಗುಡಿ ಕಟ್ಟಿಸಿ' ಹೀಗೇ ಹತ್ತಾರು ಸಲಹೆಗಳು ಬಂದವು. ತುಂಬ ಹೊತ್ತು ಚರ್ಚೆ ನಡೆಸಿದರೂ ಯಾವುದೂ ತೀರ್ಮಾನವಾಗದೆ ಕೊನೆಗೆ,
'ನೀವೇ ಹೇಳಿ' ಎಂದರು ನನಗೆ.
'ನಾವು, ನಮ್ಮ ಶಾಲೆ ಮತ್ತು ನಾಟಕವನ್ನು ಮುಂದುವರಿಸಬೇಕೇ ಬೇಡವೇ?" ಎಂದೆ.
'ಶಾಲೆ ಬೇಕೇ ಬೇಕು' ಎಲ್ಲರೂ ಎಂದರು.
'ಮತ್ತೆ ನಾಟಕ?"
'ಅದೂ ಬೇಕು'
'ಹಾಗಾದರೆ ನಾವು ಕಳೆದ ವರ್ಷದಂತೆ ಯಾವಾಗಲೂ ಕಂಬಳಿ ಬೆಡ್‌ಶೀಟ್ ಕಟ್ಟಿ ನಾಟಕ ಮಾಡಲಾಗುವುದಿಲ್ಲ. ಕಳೆದ ಸಾರಿ ಜನ ಇವರೇನು ಮಾಡುತ್ತಾರೆ ನೋಡೋಣ" ಎಂಬ ಕುತೂಹಲದಿಂದ ಬಂದಿದ್ದಾರೆ. ಇನ್ನು ಮುಂದೆ ನಾವು ಇನ್ನೂ ಚೆನ್ನಾಗಿ ಮಾಡಬೇಕಾದರೆ ನಮಗೆ ಒಂದಷ್ಟು ಸಾಮಗ್ರಿ ಬೇಕು. ಅದನ್ನು ಕೊಳ್ಳೋಣ, ಉಳಿದ ಹಣವನ್ನು ಶಾಲೆಯ ಲೆಕ್ಕದಲ್ಲಿಡೋಣ" ಎಂದೆ.
ಆದರೆ ಚೌಡಿಪೂಜೆ ಮಾಡಲೇಬೇಕೆಂದೂ, ಚೌಡಿಯಿಂದಾಗಿ ಕಳ್ಳತನವಾಗದೆ ಉಳಿದಿದೆಯೆಂದೂ, ಕಳೆದ ಸಾರಿ ಬ್ಯಾರಿ ಚೌಡಿಪೂಜೆ ಮಾಡದಿದ್ದುರಿಂದ ಅವನಿಗೆ ಈ ರೀತಿ ತೊಂದರೆ ಕಾಣಿಸಿಕೊಂಡಿತೆಂದೂ ನಮ್ಮಲ್ಲೇ ಕೆಲವರು ಹೇಳತೊಡಗಿದರು! ಅವರ ಒತ್ತಾಯದಿಂದ ಪೂಜೆಗಾಗಿ ಸ್ವಲ್ಪ ಹಣ ಮೀಸಲಿಟ್ಟೆವು. ಆದರೆ ಈ ಹಣದಿಂದ ಕುರಿಕೋಳಿ ಇತ್ಯಾದಿ ಏನನ್ನೂ ತರಲು ಸಾಧ್ಯವಿಲ್ಲವೆಂದೂ, ಅದನ್ನು ಅವರವರೇ ತಂದುಕೊಳ್ಳಬೇಕೆಂದೂ ತೀರ್ಮಾನವಾಯ್ತು. ಸುಮಾರು ಒಂದೂವರೆ ಸಾವಿರ ರೂಪಾಯಿಗಳಿಗೆ ಮೂರು ಪರದೆಗಳು - ಒಂದೆರಡು ವಿಂಗ್‌ಗಳು - ಒಂದೆರಡು ಫ್ಲಡ್‌ಲೈಟ್‌ಗಳು, ಒಂದಷ್ಟು ಮೇಕಪ್ ಸಾಮಗ್ರಿ- ಇತ್ಯಾದಿಗಳನ್ನೆಲ್ಲ ತಂದೆವು. ಮರದ ಪೆಟ್ಟಿಗೆಗೆ ಲೆನ್ಸ್ ಕೂರಿಸಿ ಬೇಬಿಸ್ಪಾಟ್‌ಲೈಟಿನಂತೆ ಮಾಡಿಕೊಂಡೆವು. ಈ ಕೆಲಸಗಳನ್ನೆಲ್ಲ ಉಗ್ಗಪ್ಪ - ಗುಡ್ಡಪ್ಪ ಮಾಡಿದರು. ಪರದೆಗಳನ್ನು ತೋಟದಲ್ಲಿ ಮೇಸ್ತ್ರಿಯಾಗಿದ್ದ ಟೈಲರ್ ನಟರಾಜ ಮತ್ತು ಅವನಲ್ಲಿ ಹೊಲಿಗೆ ಕಲಿಯುತ್ತಿದ್ದ ನಮ್ಮ ತಂಡದ ವಿಶ್ವನಾಥ ಹೊಲಿದರು. ನಮ್ಮ ನಾಟಕಕ್ಕೆ ಒಂದಷ್ಟು ರಂಗಸಜ್ಜಿಕೆ ಸಿದ್ಧವಾದವು.

ಮಳೆಗಾಲ ಕಳೆದು ಚಳಿಗಾಲ ಬಂದಿತ್ತು. ಈ ಬಾರಿ ಹುಡುಗರು ತಾವಾಗಿಯೇ ಮತ್ತೆ ನಾಟಕವಾಡುವ ಉಮೇದಿನಲ್ಲಿದ್ದರು. ಈ ಬಾರಿ ನಾನೇ ನಾಟಕ ಬರೆಯುತ್ತೇನೆಂದು ಹುಡುಗರಿಗೆ ಹೇಳಿದೆ. ಬರಿಯ ಮನರಂಜನೆಯ ನಾಟಕ ಮಾಡಿಸಲು ನನಗೆ ಮನಸ್ಸಿರಲಿಲ್ಲ. ಹಾಗೆಂದು ಬೇರೆ ನಾಟಕಗಳನ್ನು  - ಅಂದರೆ ಸ್ವಲ್ಪ ಪ್ರಬುದ್ಧವಾದ ನಾಟಕಗಳನ್ನು ಆಡಿಸಲು ನಮ್ಮ ತಂಡ ಸಮರ್ಥವಿರಲಿಲ್ಲ. ಅಂದಿನ ರಾಜಕೀಯ ಘಟನೆಗಳನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಂಡು ನಮ್ಮ ತಂಡದವರಿಗೂ ಆ ವಿಚಾರಗಳು ಅರ್ಥವಾಗುವಂತೆ ನಾಟಕ ಮಾಡುವುದು ನನ್ನ ಉದ್ದೇಶವಾಗಿತ್ತು. ಆದ್ದರಿಂದ ನಮ್ಮ ತಂಡಕ್ಕಾಗಿಯೇ ಅಂದರೆ ಪ್ರತಿಯೊಬ್ಬನಿಗೂ ಹೊಂದುವಂತಹ ಪಾತ್ರವನ್ನು ಸೃಷ್ಟಿಮಾಡಿಕೊಳ್ಳುತ್ತಾ ನಾಟಕದ ಕಲ್ಪನೆ ಮಾಡಿಕೊಂಡೆ. ಅಂದಿನ ರಾಜಕೀಯ ಘಟನೆಗಳಿಂದ ನೇರವಾಗಿ ಎತ್ತಿಕೊಂಡ ವಿಷಯಗಳನ್ನಿಟ್ಟುಕೊಂಡು ಹಾಡು ಕುಣಿತಗಳೆಲ್ಲ ಇದ್ದ ನಾಟಕವೊಂದು ಸಿದ್ಧವಾಯಿತು. ಹುಡುಗರಿಗೆ ಕಥೆ ಹೇಳಿ ಅವರಿಂದಲೇ  ನಾಟಕ ಮಾಡಿಸಲು ಪ್ರಾರಂಭಿಸಿದೆ. ಒಂದು ತಿಂಗಳಲ್ಲಿ ನಾಟಕ ಒಂದು ರೂಪಕ್ಕೆ ಬಂತು. ನಂತರ ಸಂಭಾಷಣೆ ಬರೆದುಕೊಂಡು ಸ್ವಲ್ಪ ತಿದ್ದಿಕೊಂಡೆ.

ಹೀಗೆ ಹುಟ್ಟಿದ ನಾಟಕ 'ನಮ್ಮ ಎಲುಬುಗಳ ಮೇಲೆ' ಅಂದಿನ ರಾಜಕೀಯ ಘಟನೆಗಳೇ ಇದರ ವಸ್ತು. ಆ ವೇಳೆಗೆ ದಲಿತ ಸಂಘರ್ಷ ಸಮಿತಿ - ರಾಜ್ಯದಾದ್ಯಂತ ಸಂಘಟನೆಯಲ್ಲಿ ತೊಡಗಿತ್ತು. ಸಮುದಾಯದಂತಹ ಸಂಘಟನೆಗಳು ಚುರುಕಾಗಿದ್ದವು. ನಾವೂ ಈ ನಾಟಕದಲ್ಲಿ ಕವಿ ಸಿದ್ಧಲಿಂಗಯ್ಯನವರ ಒಂದೆರಡು ಹಾಡುಗಳನ್ನು ಬಳಸಿದೆವು.  ಈ ಸಂದರ್ಭದಲ್ಲಿ ಅಪ್ಪನ ಗೆಳೆಯರಾದ ಮಡಿಕೇರಿಯ  ಹೊಸೂರು ಗೋಪಾಲರಾಯರು ನಮ್ಮಲ್ಲಿಗೆ ಬಂದರು. ಅವರಾಗ ಬೆಳಗಾವಿಯಲ್ಲಿ ನೆಲೆಸಿದ್ದರು. ಅನೇಕ ವರ್ಷಗಳ ಬಳಿಕ ಗೆಳೆಯರಿಬ್ಬರೂ ಜೊತೆ ಸೇರಿದ್ದರು. ಗೋಪಾಲರಾಯರಿಗೆ ಸಂಗೀತದಲ್ಲಿ ಸಾಕಷ್ಟು ಪರಿಶ್ರಮವಿತ್ತು. ಅಪ್ಪನಿಗೂ ಕೊಳಲು ನುಡಿಸಲು ಬರುತ್ತಿತ್ತು. ಹೀಗಾಗಿ ಹಳೆಯ ನೆನಪುಗಳ ಜೊತೆ ಇವರ 'ಜುಗಲ್ ಬಂದಿ' ನಡೆಯಿತು. ನಮ್ಮಲ್ಲಿದ್ದ ಒಂದೆರಡು ದಿನಗಳಲ್ಲಿ ಗೋಪಾಲರಾಯರು ನಮ್ಮ ನಾಟಕದ ಹಾಡುಗಳಿಗೆ ಸಂಗೀತ ರಚನೆ ಮಾಡಿಕೊಟ್ಟರು. ಈ ಗೋಪಾಲರಾಯರು, ಇಂದು ಬೆಂಗಳೂರಿನಲ್ಲಿ ಸುಗಮ ಸಂಗೀತ ಕ್ಯಾಸೆಟ್ ವಲಯದಲ್ಲಿ ಹೆಸರಾಗುತ್ತಿರುವ ಗಿರಿಧರ ದಿವಾನ್ ಅವರ ಅಜ್ಜ. ಆ ವೇಳೆಗೆ ಸುಳ್ಯದ ಎನ್. ನಾರಾಯಣ ಭಟ್ ಕೂಡಾ ನಮ್ಮಲ್ಲಿಗೆ ಬರತೊಡಗಿದರು. ಅವರು ಕಾರ್ಮಿಕ ಸಂಘಟನೆಯಲ್ಲಿ ತುಂಬ ಅನುಭವವಿದ್ದವರು. ಸಿದ್ದಲಿಂಗಯ್ಯನವರ ಕವನಗಳನ್ನು ತುಳು ಭಾಷೆಗೆ ಅನುವಾದಿಸಿದ್ದರು. ಅವರು ಸಿ.ಪಿ.ಎಂ ಪಕ್ಷದ ಕಾರ್ಯಕರ್ತರಾಗಿಯೂ ಕೆಲಸ ಮಾಡಿದ್ದರು. ನಾನು ಅವರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮುದಾಯ ಜಾಥಾವೊಂದರಲ್ಲಿ ಭಾಗವಹಿಸಿದ್ದೆನಲ್ಲದೆ ಅವರಲ್ಲಿ ಆಗಾಗ ಹೋಗಿ ಬರುತ್ತಿದ್ದೆ. ಅವರು ನಮಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದರಲ್ಲದೆ ನಮ್ಮ ಗುಂಪಿನೊಡನೆ ಆತ್ಮೀಯ ಸಂಬಂಧವನ್ನೂ ಬೆಳೆಸಿಕೊಂಡರು. ಆಗಾಗ್ಗೆ ನಮ್ಮ ಕಾರ್ಯಕ್ರಮಗಳಿಗೆ ಬರತೊಡಗಿದರು. ಅವರಿಂದ ಅನೇಕ ರಾಜಕೀಯ ವಿಚಾರಗಳು ನಮ್ಮವರಿಗೆ ಮನದಟ್ಟಾಗತೊಡಗಿದವು. ಅವರು ನಮ್ಮ ಈ "ನಮ್ಮ ಎಲುಬುಗಳ ಮೇಲೆ " ನಾಟಕವನ್ನು ಸುಳ್ಯದ ತಂಡವೊಂದಕ್ಕೆ ಮಾಡಿಸಿದರು. ಅಲ್ಲಿಯೂ ಈ ನಾಟಕದ ಒಂದೆರಡು ಪ್ರದರ್ಶನಗಳಾದವು.    ಮುಂದೆ ನಮ್ಮಲ್ಲಿ ರೈತಸಂಘಟನೆ ಹುಟ್ಟಿ, ಸಾಕಷ್ಟು ಪ್ರಬಲವಾಗಿ ಬೆಳೆದು ನಿಧಾನವಾಗಿ ದುರ್ಬಲವಾಗುತ್ತ, ನಾಮಾವಶೇಷ ಎನ್ನುವ ಸ್ಥಿತಿ ತಲುಪುವವರೆಗೂ ನಾಲ್ಕೈದು ವರ್ಷಗಳ ಕಾಲ, ನಾಟಕವನ್ನು ಅಲ್ಲಲ್ಲಿ ಆಡುತ್ತಿದ್ದೆವು.

ನಮ್ಮ ಹುಡುಗರೆಲ್ಲ ತುಳು ಭಾಷೆಯನ್ನೂ ಬಲ್ಲವರಾಗಿದ್ದರು. ಕಾಫಿ ಎಸ್ಟೇಟಿನಲ್ಲಿ ಕನ್ನಡ , ತುಳು, ತಮಿಳು, ಮಲಯಾಳಿ ಹೀಗೇ ಸಾಮಾನ್ಯ ಎಲ್ಲಾ ಭಾಷೆ ಮಾತಾಡುವ ಕೆಲಸಗಾರರಿರುವುದರಿಂದ ಮತ್ತು  ಎಲ್ಲರೂ 'ಲೈನು' ಗಳೆಂದು ಕರೆಯುವ ಸಾಲು ಮನೆಗಳಲ್ಲಿ ಅಕ್ಕ ಪಕ್ಕದಲ್ಲೇ ವಾಸ ಮಾಡುವುದರಿಂದ ಕಾಫಿ ತೋಟಗಳಲ್ಲಿ, ಕೆಲಸಗಾರರಿಂದ ಹಿಡಿದು ಮೇಸ್ತ್ರಿ-ರೈಟರ್-ಮೇನೇಜರ್-ಮಾಲೀಕರವರೆಗೆ ಎಲ್ಲರೂ ಎರಡು -ಮೂರು ಭಾಷೆ ಮಾತಾಡಬಲ್ಲವರಾಗಿರುತ್ತಾರೆ. ಈ ಅನುಕೂಲವಿದ್ದುದರಿಂದ ನಾವು ನಮ್ಮ ಈ ನಾಟಕವನ್ನು ಸಂದರ್ಭಕ್ಕೆ ತಕ್ಕಂತೆ - ಕನ್ನಡ - ತುಳು ಎರಡೂ ಭಾಷೆಗಳಲ್ಲಿ ಆಡುತ್ತಿದ್ದೆವು. ಈ ನಾಟಕಕ್ಕೆ ಹಾರ್ಲೆ ರಾಜಣ್ಣ ಎನ್ನುವವರೊಬ್ಬರು ಸಂಗೀತ ನೀಡಿದರು. ಇವರು ತಬಲಾ-ಹಾರ್ಮೋನಿಯಂ ಎರಡನ್ನೂ ನುಡಿಸುತ್ತಿದ್ದುದಲ್ಲದೆ ಕೆಲವೊಮ್ಮೆ ಬೇರೆ ಕಡೆ ಹರಿಕಥೆಗಳಿಗೂ ಪಕ್ಕ ವಾದ್ಯಕ್ಕೆ ಹೋಗುತ್ತಿದ್ದರು. ಇವರು ನಂತರವೂ ನಮ್ಮ ಕೆಲವು ನಾಟಕಗಳಿಗೆ ಸಂಗೀತ ನೀಡಿದರು. ಇವೆಲ್ಲ ಆದದ್ದು ೧೯೭೯-೮೦ ರಲ್ಲಿ. ಆ ನಂತರವೂ ನಾವು ಒಂದೆರಡು ಸಾರಿ ಕಿತ್ತಲೆ ಫಸಲನ್ನು ಗುತ್ತಿಗೆಗೆ ಮಾಡಿಕೊಂಡಿದ್ದೆವಾದರೂ ಹವಾಮಾನ ವೈಪರೀತ್ಯ, ಬೆಲೆ ಏರಿಳಿತ ಮುಂತಾದ ಕಾರಣಗಳಿಂದ ನಮಗೆ ಹೆಚ್ಚಿನ ಲಾಭವಾಗಲಿಲ್ಲ. ಮುಂದೆ ಕಿತ್ತಲೆಗೆ ಬಂದ ರೋಗಗಳಿಂದಾಗಿ ಕಾಫೀ ತೋಟಗಳಲ್ಲಿ ಕಿತ್ತಲೆ ಬೆಳೆ ನಾಶವಾಗುತ್ತಹೋಯಿತು. ಆದರೆ ಅಂದು ನಾವು ಸಿದ್ದಪಡಿಸಿಕೊಂಡ ರಂಗಪರಿಕರಗಳಲ್ಲಿ ಕೆಲವು ನಮ್ಮಲ್ಲಿ ಈಗಲೂ ಇವೆ.

Read more...

September 13, 2008

ನಗುವ ಕಡಲೊಳು ತೇಲಿ ಬರುತಲಿದೆ ಒಡೆದ ಹಾಯಿ ದೋಣಿ

ಇದು ಕಾಸರವಳ್ಳಿ ಟಾಕೀಸ್. ಈ ಬಾರಿ ಇಲ್ಲಿ ಅರಳಿರುವ ಗುಲಾಬಿಗೆ ಅತ್ತರಿನ ವಾಸನೆಯೂ ಇದೆ, ನೆತ್ತರಿನ ವಾಸನೆಯೂ ಇದೆ. ಅವುಗಳ ಮಧ್ಯೆ ಅಂಬಿಗರು 'ಹುಟ್ಟು ಹಾಕುವ' ಪ್ರಶ್ನೆಗಳಲ್ಲಿ ಮತ್ಸ್ಯಗಂಧಿಯರೂ ಇದ್ದಾರೆ. ಹಳೆಯ ಚಿತ್ರಗಳಿಗಿಂತ ವೇಗವಾದ ಗತಿಯಿದೆ. ಪಾತ್ರಧಾರಿಗಳು-ಜನರ ನಡುವಿನ ಭೇದವೇ ಪ್ರೇಕ್ಷಕರಿಗೆ ತಿಳಿಯದಷ್ಟು ಹೊರಾಂಗಣದಲ್ಲಿ ದೃಶ್ಯಗಳು ತನ್ಮಯವಾಗಿವೆ.
***
ಒಂದೊಂದೂ ಬಣ್ಣದ ನೀರಿನಲ್ಲಿ ಅದ್ದಿ ತೆಗೆದು ಹೀಗೆ ತೋರಿಸುವುದು ಸುಲಭವಾಗಿದ್ದರೆ ಕನ್ನಡದ ಮತ್ತೊಬ್ಬ ನಿರ್ದೇಶಕನಾದರೂ ಅದನ್ನು ಮಾಡಬಹುದಾಗಿತ್ತು. ದರ್ಶನ್, ಗಣೇಶ್, ಉಪೇಂದ್ರ ಮತ್ತಿತರರ ಇಮೇಜ್‌ಗೆ ಸರಿಯಾಗಿ ಸಿನಿಮಾ ಮಾಡುವುದು ಹಲವು ನಿರ್ದೇಶಕರಿಗೆ ಗೊತ್ತು. ಆದರೆ ಕತೆಯ ಇಮೇಜ್‌ಗೆ ಸರಿಯಾಗಿ ಸಿನಿಮಾ ಮಾಡುವುದು ಗಿರೀಶ್ ಕಾಸರವಳ್ಳಿಯವರಿಗೆ ಗೊತ್ತು . 'ನೀವು ನೋಡಲಿ ಎಂದು ಸಿನಿಮಾ ಮಾಡುವುದಿಲ್ಲ, ಮಾಡುವುದು ಅನಿವಾರ್ಯ ಕರ್ಮ ಎನಗೆ '-ಎಂಬಂತಿರುತ್ತದೆ ಕಾಸರವಳ್ಳಿ ಧಾಟಿ ! ಆದರೆ ಅವರು ಹೋಗುತ್ತಾರೆ ಅದನ್ನು ದಾಟಿ.
*****
ವೈದೇಹಿಯವರ ಕತೆ ಆಧಾರಿತ 'ಗುಲಾಬಿ ಟಾಕೀಸ್' ಚಿತ್ರದಲ್ಲಿ ,ಅವರು ಸಿನಿಮಾ ಕಟ್ಟುವ ಒಳ ರಚನೆಯಲ್ಲೇನೂ ಹೆಚ್ಚು ಬದಲಾವಣೆಯಿಲ್ಲ. ಆದರೆ ಹೊರರೂಪ ಬಹಳ ಬದಲಾಗಿದೆ. ಮೊದಲನೆಯದ್ದು - ಲಗುಬಗೆಯ ನಡೆ. `ತಾಯಿಸಾಹೇಬ', `ನಾಯಿನೆರಳು' ಗಳಂತೆ ಇಲ್ಲಿ ನಿಧಾನ ಲಯ ಅಲ್ಲ. ಎರಡನೆಯದ್ದು -ಈ ಸಿನಿಮಾದ ಹೆಚ್ಚು ಭಾಗ ಹೊರಾಂಗಣದಲ್ಲಿ, ಜನಸಾಮಾನ್ಯರ ನಡುವೆ ನಡೆಯುತ್ತದೆ. ಯಾರು ಪಾತ್ರಧಾರಿಗಳು, ಯಾರು ಜನರು ಅಂತ ಪ್ರೇಕ್ಷಕರಿಗೇ ತಿಳಿಯದಷ್ಟು ಹೊರ ಜಗತ್ತಿನಲ್ಲಿ ಸಿನಿಮಾ ತನ್ಮಯವಾಗಿದೆ. ಹೇಳಬೇಕೆಂಬ ಹಟ ಇಲ್ಲಿಲ್ಲ. ಸುಮ್ಮನೆ ಆಗುವುದನ್ನು ತೋರಿಸುವುದೇ ಮುಖ್ಯ. ಅವರ ಯಾವ ಸಿನಿಮಾಗಳೂ ಅತಿರಮ್ಯವಾದುವಲ್ಲ. ಮಹಿಳಾ ಪ್ರಧಾನ ಚಿತ್ರಗಳೆಂದುಕೊಂಡರೂ ನಾನಾ ಕಾಲ- ಪ್ರದೇಶಗಳು ತೆರೆಗೆ ಬಂದಿವೆ. ನಾವು ನೋಡದ್ದೇನೂ ಅಲ್ಲಿಲ್ಲ. ಅವೆಲ್ಲ ಜನಸಾಮಾನ್ಯರ ಬಿಂಬ-ಪ್ರತಿಬಿಂಬಗಳು. ಆದರೆ ನಾವು ನೋಡಿದ್ದರೂ ಕಾಣದ್ದನ್ನು ರುಚಿಕಟ್ಟಾಗಿ ತೆರೆಗೆ ತರುವ ಸವಾಲನ್ನೇ ನಿರ್ದೇಶಕರು ಸ್ವೀಕರಿಸಿದ್ದಾರೆ . `ಟಿವಿಯು ಮನುಷ್ಯರನ್ನು ಚಿಕ್ಕದಾಗಿ, ಸಿನಿಮಾ ದೊಡ್ಡದಾಗಿ ತೋರಿಸುತ್ತದೆ. ಮನುಷ್ಯರನ್ನು ಮನುಷ್ಯರಾಗಿ ತೋರಿಸುವುದು ರಂಗಭೂಮಿ ಮಾತ್ರ' ಎಂಬ ಬಿ.ವಿ.ಕಾರಂತರ ಪ್ರಸಿದ್ಧ ಮಾತಿಗೆ ಸಡ್ಡು ಹೊಡೆಯಬಲ್ಲವು ಕಾಸರವಳ್ಳಿ ಸಿನಿಮಾಗಳು.
ಕಡಲ ಮೀನುಗಳಂತೆ ದ್ವೀಪದಲ್ಲೂ ಎಲ್ಲರೊಂದಾಗಿ ಬದುಕುತ್ತಿದ್ದ ಮೀನುಗಾರರಲ್ಲಿ ಕ್ರಮೇಣ ಕೋಮು ವೈಷಮ್ಯ ಮೂಡುವ ಕತೆಯಿದು. ಯಾವ ಜಾತಿಯೊ, ಯಾವ ಬಣ್ಣವೊ, ಹೆರಿಗೆ ಮಾಡಿಸುವುದಷ್ಟೇ ಸೂಲಗಿತ್ತಿ ಮುಸ್ಲಿಂ ಮಹಿಳೆ ಗುಲಾಬಿಯ ಕಾಯಕ. (ಆಕೆ ಮುಸ್ಲಿಂ ಗುಲ್ನಾಬಿಯೂ ಹಿಂದು ಗುಲಾಬಿಯೂ !) ಆಕೆಯ ಗಂಡ ಇನ್ನೊಬ್ಬಳು ಪತ್ನಿಯೊಂದಿಗಿರುವುದರಿಂದ ಈಕೆ ಒಂಟಿ. ಸಿನಿಮಾ ಹುಚ್ಚಿನ ಈಕೆ ಸಾಯಂಕಾಲವಾದರೆ ಥಿಯೇಟರ್ ಸೇರಲೇಬೇಕು. ಒಮ್ಮೆ ಹೆರಿಗೆ ಮಾಡಿಸಿದ್ದಕ್ಕೆ ಪ್ರತಿಫಲವಾಗಿ ಆಕೆಗೊಂದು ಬಣ್ಣದ ಟಿವಿ ಮತ್ತು ದೊಡ್ಡ ಡಿಶ್ ಉಡುಗೊರೆಯಾಗಿ ಸಿಗುತ್ತದೆ. ಆ ಕಡಲ ದ್ವೀಪಕ್ಕೆ ಮೊತ್ತಮೊದಲ ಬಾರಿ ಬಂದ ಬಣ್ಣದ ಟಿವಿಗೆ ನೆರೆಯವರು ಸ್ಪಂದಿಸುವುದು ಸಿನಿಮಾದ ಒಂದು ಮುಖ್ಯ ಭಾಗ . ಅದೆಷ್ಟು ದೃಶ್ಯಗಳಲ್ಲಿ ಕಾಣಿಸುತ್ತದೆಯೆಂದರೆ, ಧಾರಾವಾಹಿ ವ್ಯಸನದಿಂದ ಶುರುವಾಗಿ, ಅದರಿಂದ ಮನೆಯಲ್ಲಿ ಅತ್ತ-ಸೊಸೆ ಜಗಳ, ಮುಸ್ಲಿಂಳ ಮನೆಯಲ್ಲಿ ಹಿಂದು-ಮುಸ್ಲಿಂ ಮಹಿಳೆಯರು ಬೆರೆಯುವುದು, ಕೊನೆಗೆ ಅದೇ ಟಿವಿ ಕಾರ್ಗಿಲ್ ವಾರ್ತೆಯನ್ನು ದಿನಾ ಬಿತ್ತರಿಸಿ ಕೋಮು ವೈಷಮ್ಯಕ್ಕೂ ಪುಷ್ಟಿ ನೀಡಿತೋ ಎಂಬವರೆಗೆ !
*****
ಗಲ್ಫ್ ದುಡ್ಡಿನಿಂದ ದೂರದ ಮುಸ್ಲಿಂ ಕುಬೇರರು ಆರಂಭಿಸುವ ಸುಧಾರಿತ ಮೀನುಗಾರಿಕೆಯು ಸ್ಥಳೀಯರನ್ನು ಪೇಚಿಗೆ ಸಿಲುಕಿಸುವುದು ಎರಡನೇ ಮುಖ್ಯಧಾರೆ. ಸಣ್ಣದಾಗಿ, ತಕರಾರಿನ ರೂಪದಲ್ಲಿ ಆರಂಭವಾಗುವ ಈ ತಿಕ್ಕಾಟ, ನಿಧಾನವಾಗಿ ಕಿಚ್ಚು ಹತ್ತಿಸಿಕೊಳ್ಳುತ್ತದೆ. ಆದರೆ ಇವೆಲ್ಲ ಬಾಹ್ಯ ಸಂಗತಿಗಳಷ್ಟೆ, ನಿಜವಾಗಿ ಸಂಘರ್ಷ ಶುರುವಾಗುವುದು, ಅನಿವಾರ್ಯವಾಗುವುದು, ಸಮಸ್ಯೆ ಮನೆಯೊಳಗೆ ಬಂದಾಗ. ಹಾಗಾಗುವುದು ನೇತ್ರು ಹಾಗೂ ಗುಲಾಬಿಯ ಗಂಡನ ಸಂಪರ್ಕದಿಂದ. ಅದು ಆಯಿತೇ, ಆಗಿದ್ದರೆ ಹೇಗಾಯಿತು, ಗೊತ್ತಿಲ್ಲ. ಆದರೆ ಅಂತಹುದೊಂದು ಮಿಲನದ ಬಗ್ಗೆ ಮೊದಲು ಕನಸು ಕಂಡವಳು ಗುಲಾಬಿ ! ನಂತರ ಅದನ್ನು ನೇತ್ರುವಿಗೂ ಕಾಣಿಸಿದವಳು. ಆದರೆ ನೇತ್ರು ಮುಸ್ಲಿಂ ವ್ಯಕ್ತಿಯೊಂದಿಗೆ ಹೋದಳು ಎಂಬುದರಿಂದ ಆ ಕಡಲ ಬದುಕಿನ ಸಮರಸವೇ ವಿರಸಕ್ಕೆ ತಿರುಗಿ, ಪರಾರಿಯಾಗುತ್ತಿರುವ ನೇತ್ರುವನ್ನು ಹಿಡಿದು, ಹಿಂದು ಜನ ಮನೆಗೆ ಕರೆತರುತ್ತಾರೆ, ಗುಲಾಬಿಯನ್ನು ಊರಿನಿಂದ ಅಟ್ಟುತ್ತಾರೆ ! ಅದನ್ನು ಅತ್ಯಂತ ಸಂಯಮದಿಂದ ತೋರಿಸಿದ್ದಾರೆ ನಿರ್ದೇಶಕರು.ಗರ್ಭಿಣಿಯೊಬ್ಬಳಿಗೆ ಹೊಟ್ಟೆನೋವು ಆರಂಭವಾದಾಗ ಪ್ರಸವ ಮಾಡಿಸಲು ಗುಲಾಬಿಯೇ ಬೇಕೆಂದಾಗುತ್ತದೆ. ಅವಳೋ, ಥಿಯೇಟರ್‌ನಲ್ಲಿ ಪ್ರಿಯವಾದ ಸಿನಿಮಾ ನೋಡುತ್ತಿದ್ದಾಳೆ, ಬರಲೊಲ್ಲಳು. ಆಗ ಬಂದವರು ಅವಳನ್ನೆತ್ತಿಕೊಂಡೇ ಹೊರಹೋಗಿ ದೋಣಿಯಲ್ಲಿ ಕುಳ್ಳಿರಿಸಿ ಕರೆದೊಯ್ಯುತ್ತಾರೆ. ಆ ಹಿಂದು ಮಹಿಳೆಯ ಪ್ರಸವ ಸುಸೂತ್ರವಾಗುತ್ತದೆ. ಸಿನಿಮಾದ ಕೊನೆಗೆ ಕೋಮು ವೈಷಮ್ಯಕ್ಕೆ ಗುಲಾಬಿಯೂ ಕಾರಣಳೆಂದು, 'ಹಿಂದು ಧರ್ಮ ಸಂರಕ್ಷಕರು' ಆಕೆಯ ಮನೆಯ ವಸ್ತುಗಳನ್ನೆಲ್ಲ ಹೊರಗೆಸೆಯುತ್ತಿದ್ದಾರೆ, ಊರು ಬಿಟ್ಟು ತೊಲಗು ಎನ್ನುತ್ತಿದ್ದಾರೆ, ಆದರೆ ಆಕೆ ಒಲ್ಲೆ ಅನ್ನುತ್ತಿದ್ದಾಳೆ. ಆಗ ಗಣಪತಿಯನ್ನೆತ್ತಿದಂತೆ ಆಕೆಯನ್ನು ಎತ್ತಿ ದೋಣಿಯಲ್ಲಿ ಕುಳ್ಳಿರಿಸುತ್ತಾರೆ. ಮತ್ತದೇ ಹಳೆಯ ರೀತಿ. ಉದ್ದೇಶ ಮಾತ್ರ ಬೇರೆ ! ಗುಲಾಬಿ ಹೋಗುತ್ತದೆ, ಮುಳ್ಳು ಉಳಿಯುತ್ತದೆ.
*****
ಬಹುತೇಕ ಜನಪ್ರಿಯ ಸಿನಿಮಾಗಳಲ್ಲಿ ಮನುಷ್ಯರು ಮಾತ್ರ ಪಾತ್ರಗಳು. ಆದರೆ `ಗುಲಾಬಿ ಟಾಕೀಸ್'ನಂತಹ ಚಿತ್ರಗಳಲ್ಲಿ ಟಿವಿಯ ದೊಡ್ಡ ಡಿಶ್, ಕಡಲ ಅಲೆಗಳು, ಚಕ್ಲಿ ಮೀನುಗಳೂ ಪಾತ್ರಗಳಂತೆ ಕೆಲಸ ಮಾಡುತ್ತವೆ. ಪರಕೀಯ ಬಂಡವಾಳಶಾಹಿಗಳೂ ಮೀನುಗಾರಿಕೆ ಆರಂಭಿಸಿದ್ದು ಸ್ಥಳೀಯ ಸಾಮರಸ್ಯ ಕೆಡುವುದಕ್ಕೆ ಒಂದು ಕಾರಣ ಅಂತ ಕೊನೆಯಲ್ಲಿ ಹೇಳುವ ನಿರ್ದೇಶಕರು, ಎಲ್ಲ ಕೆಟ್ಟುಹೋಯಿತು ಅಂದಿಲ್ಲ. ಮೀನುಗಾರ ವಾಸಣ್ಣನ ಹರೆಯದ ಮಗನೊಬ್ಬ , ಗುಲಾಬಿಯ ಸ್ಥಳಾಂತರಕ್ಕೆ ತನ್ನ ಮಿತಿಯಲ್ಲಾದರೂ ಪ್ರತಿಭಟಿಸುವ ಮೂಲಕ ಆಶಾದೀಪ ನಂದದೆ ಉಳಿದಿದೆ. ಈ ಕತಾ ಹಂದರದ ಪ್ರತಿಯೊಂದು ಘಟನೆಗೂ ಕಾರಣವಾಗುವವಳು ಗುಲಾಬಿ. ಅಂತಹ ಗುಲಾಬಿಗೆ ಕಾರಣರಾದವರು ಉಮಾಶ್ರೀ. ಹೊಸದಾಗಿ ಬಂದ ಟಿವಿಯ ರಿಮೋಟ್‌ನ್ನು ಮೊದಲ ಬಾರಿಗೆ ಒತ್ತುವಾಗ, ನೇತ್ರು ಬಳಿ ತನ್ನ ಕನಸಿನ ಗಂಡಿನ ಬಗ್ಗೆ ಹೇಳುವಾಗ, ಹೀಗೆ ಹಲವೆಡೆ ಗುಲಾಬಿ ಅರಳುವ ಬಗೆ ಅನ್ಯಾದೃಶ. ಪೂರ್ತಿ ಸಿನಿಮಾವನ್ನೇ ಅವರು ತನ್ನ ಪಾತ್ರದಲ್ಲಿ ಹೊತ್ತುಕೊಂಡು ನಟಿಸಿದ್ದಾರೆ. ನೇತ್ರಳ ಪಾತ್ರದಲ್ಲಿ ಗಾಯಕಿ ಎಂ.ಡಿ.ಪಲ್ಲವಿ ಒಂದು ಅಚ್ಚರಿಯ ಎಂಟ್ರಿ. ಮೀನಿನ ಬುಟ್ಟಿ ಹೊತ್ತು, ನೈಟಿ ತೊಟ್ಟು ,ಕರಾವಳಿಯ ರಸ್ತೆಗಳಲ್ಲಿ ಅವರು ಓಡಾಡುವುದು ಹಾಡುವುದಕ್ಕಿಂತಲೂ ಕಷ್ಟ , ಆದರೂ ಆಗಿದೆ ಚೆಂದ. ನಿರ್ದೇಶಕರ ಯಶಸ್ಸಿರುವುದು ಅವರು ಮಾಡುವ ಆಯ್ಕೆಗಳಲ್ಲಿ. ನೀನಾಸಂ ಪದವೀಧರನಾಗಿ, ನಾಟಕ ಮಾಡುತ್ತ, ಬಳಿಕ ಎಲ್ಲೋ ಕಾಣೆಯಾಗಿದ್ದ ಬಾಸುಮ ಕೊಡಗುರನ್ನು ಕಲಾ ನಿರ್ದೇಶನಕ್ಕೆ ಎಳೆದು ಪಾತ್ರವನ್ನೂ ಮಾಡಿಸುವುದು, ಅದ್ದುವಿನ ಪಾತ್ರದಲ್ಲಿ ಮುದ್ದಾಗಿ ನಟಿಸಿದ ಹುಡುಗ, ಗುಲಾಬಿಯ ಗಂಡನಾದ ಕೆ.ಜಿ.ಕೃಷ್ಣಮೂರ್ತಿ ಇವರೆಲ್ಲ ಆ ಪಾತ್ರಕ್ಕೇ ಲಾಯಕ್ಕು ಅನ್ನುವಷ್ಟು ಚೆನ್ನಾಗಿ ಕಾಣಿಸಿಕೊಳ್ಳುತ್ತಾರೆ. ಹಿರಿಯರಾದ ರಾಮಚಂದ್ರ ಐತಾಳರ ಛಾಯಾಗ್ರಹಣ ಹೇಳಿ ಮಾಡಿಸಿದಂತಿದೆ . ಸಂಭಾಷಣೆ, ವಸ್ತ್ರವಿನ್ಯಾಸ, ಪರಿಕರಗಳ ವಿಷಯದಲ್ಲಂತೂ ಹುಳುಕು ಹುಡುಕುವುದು ಬಹಳ ಕಷ್ಟ. ವಿಶೇಷ ಎಡಿಟಿಂಗ್-ಬೆಳಕಿನ ವ್ಯವಸ್ಥೆ ಮಾಡದೆ, ಇದ್ದದ್ದನ್ನು ಇದ್ದ ಹಾಗೆ ಬಳಸಿಕೊಂಡ 'ಇಂಪರ್ಫೆಕ್ಟ್ ಸಿನಿಮಾ' ಇದು ಅಂದಿರುವ ನಿರ್ದೇಶಕರು, ಚಲಿಸುವ ಬಿಂಬಗಳನ್ನೆಲ್ಲ ದಿಕ್ಕೆಡದೆ ಹಿಡಿದುಕೊಂಡಿದ್ದಾರೆ.
*****
ಗಿರೀಶ್ ಕಾಸರವಳ್ಳಿಯವರು ಮಾಡಿದ ಯಾವುದೇ ಚಿತ್ರವನ್ನೂ ಇನ್ನೊಂದು ರೀತಿ ಮಾಡಬಹುದು ಅಂತನ್ನಬಹುದೇ ಹೊರತು, ಅವರು ಮಾಡಿದ್ದು ತಪ್ಪಾಗಿದೆ, ಕೆಟ್ಟದಾಗಿದೆ ಅನ್ನುವುದು ಸಾಧ್ಯವಿಲ್ಲ. ಇಷ್ಟೆಲ್ಲ ಆಗಿಯೂ 'ಛೆ, ಕಾಸರವಳ್ಳಿಯವರು ಒಂದು ಜನಪ್ರಿಯ ಸಿನಿಮಾ ಮಾಡಿದ್ದರೆ...' ಅಂತ ಸಿನಿಮಾಸಕ್ತರಿಗೆ ಯೋಚನೆಯಾದರೆ, ಅದು ಜನಪ್ರಿಯ ಸಿನಿಮಾದ ದಾರಿದ್ರ್ಯವನ್ನಷ್ಟೇ ಸ್ಪಷ್ಟವಾಗಿ ತೋರಿಸುತ್ತದೆ !

Read more...

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP