ಇದರಲ್ಲಿ ಇದು, ಅದರಲ್ಲಿ ಅದು
'ಬದುಕುವುದಕ್ಕಾಗಿ ಒಂದು ಕೆಲಸ ಮಾಡುತ್ತಾ ಖುಶಿಗಾಗಿ ಇನ್ನೊಂದನ್ನು ಮಾಡುವುದರಲ್ಲೇ ಮಜಾ ಇದೆ' ಅಂತ ಜಯಂತ ಕಾಯ್ಕಿಣಿ ಆಗಾಗ ಹೇಳುತ್ತಿದ್ದರು. ಆಗ ಆಗ ಅವರು ಭಾವನಾ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದರಾದರೂ, ಮೊದಲು ಮುಂಬಯಿಯ ಯಾವುದೋ ಕಂಪನಿಯ ಕೆಲಸ ಮಾಡುತ್ತಾ ಕನ್ನಡ ಕತೆ-ಕವನಗಳ ಸಂಗದಲ್ಲಿದ್ದರು. ಬದುಕಿಗಾಗಿ ಏನೋ ವೃತ್ತಿ ನಡೆಸುತ್ತಾ ಖುಶಿಗಾಗಿ ಸಾಹಿತ್ಯ-ಸಾಂಸ್ಕೃತಿಕ ಲೋಕದಲ್ಲಿದ್ದವರು ಬಹಳ ಹಿಂದೆಯೂ ಇದ್ದರು. ಆದರೆ ಸ್ವರ್ಗದ ಕೆಲಸವೆಂದೇ ಪರಿಗಣಿಸಲ್ಪಟ್ಟ ಐಟಿ ಮಂದಿ ಕನ್ನಡದ ತೆಕ್ಕೆಗೆ ಬಿದ್ದಾಗ ಅವರೆಡೆಗೆ ವಿಶೇಷ ದೃಷ್ಟಿ ಹರಿಯಿತು. ಅದೃಷ್ಟವಶಾತ್ ಅವರೆಲ್ಲ ವೃತ್ತಿ- ಪ್ರವೃತ್ತಿಗಳ ಬದುಕನ್ನು ಚೆನ್ನಾಗಿ ಸಂಭಾಳಿಸುವವರೇ.
ದೊಡ್ಡ ಕಂಪನಿಯ, ದೊಡ್ಡ ಹುದ್ದೆಯಲ್ಲಿ ಆದಿತ್ಯನಿರುವುದು ಹೌದು, ಮನೆಗೆ ಬಂದರೆ ಮಾತ್ರ ಸಿಡುಕ, ಗಂಟು ಮೋರೆಯವ. ಆತ ಗೆಳೆಯರ ಜತೆ ಸೇರಿ ರಾಕ್ ಬ್ಯಾಂಡ್ ಕಟ್ಟಿಕೊಂಡಿರುವುದು ಪತ್ನಿಗೂ ಗೊತ್ತಿಲ್ಲ, ಹೇಳುವ ಸಂದರ್ಭ ಅವನಿಗೆ ಬಂದಿಲ್ಲ. ಚೆನ್ನಾಗಿ ಗಿಟಾರ್ ಮೀಟುವ ಜೋ, ಗೆಳೆಯರ ರಾಕ್‌ಬ್ಯಾಂಡ್ ಬಿಟ್ಟು ವಿದೇಶವೆಲ್ಲಾ ಸುತ್ತಿ ಕೈತುಂಬಾ ಸಂಪಾದಿಸಬೇಕೆಂದು ಆತನ ಹೆಂಡತಿಯ ಇಚ್ಚೆ. ಪಾಪ, ಅವಳು ಮೀನು ವ್ಯಾಪಾರ ಎಷ್ಟು ದಿನಾ ಅಂತ ಮಾಡಿಯಾಳು? ಅಂತೂಇಂತೂ ಈ ಹವ್ಯಾಸಿ ಕಲಾವಿದರ 'ಮ್ಯಾಜಿಕ್' ಎಂಬ ರಾಕ್‌ಬ್ಯಾಂಡ್ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತದೆ. ಆಗ ತಂಡದ ಒಬ್ಬ ಸಾವಿಗೀಡಾಗಿ ಒಂದಿಷ್ಟು ಸೆಂಟಿಮೆಂಟ್. ಕೊನೆಗೆ ಎಲ್ಲರೂ ತಮ್ಮ ವೃತ್ತಿ-ಪ್ರವೃತ್ತಿ-ಮನೆ ಬದುಕು ಎಲ್ಲದರಲ್ಲೂ ಯಶಸ್ಸು ಕಂಡು ನೂರ್ಕಾಲ ಬದುಕುತ್ತಾರೆ ಎಂಬ ಶೈಲಿಯಲ್ಲಿ ಸಿನಿಮಾ ಮುಗಿಸಿದ್ದಾರೆ ನಿರ್ದೇಶಕ ಅಭಿಷೇಕ್ ಕಪೂರ್. ಇದು ಇತ್ತೀಚೆಗೆ ಬಿಡುಗಡೆಯಾಗಿ ಗಮನ ಸೆಳೆದಿರುವ 'ರಾಕ್ ಆನ್' ಚಿತ್ರದ ಒಂದು ಧಾರೆ.

ಅರ್ಜುನ್ ರಾಂಪಾಲ್‌ನಂತಹ ನಟ, ಫರಾನ್ ಅಕ್ತರ್, ಪೂರಬ್ ಕೊಹ್ಲಿ, ಪ್ರಾಚಿ ದೇಸಾಯಿಯಂತಹ ಹೊಸ ನಟನಟಿಯರು ಚೆನ್ನಾಗಿಯೇ ನಟಿಸಿದ್ದಾರಾದರೂ ಒಟ್ಟು ಪರಿಣಾಮದಲ್ಲಿ ಅದು ಮೋಡಿ ಮಾಡುವಂತಿಲ್ಲ. ಕೆಲವು ವರ್ಷಗಳ ಹಿಂದೆ ತಮಿಳಿನಲ್ಲಿ ಸೂಪರ್‌ಹಿಟ್ ಆದ `ಬಾಯ್ಸ್' ಎಂಬ ಅಸಲಿ ಮಸಾಲೆ ಸಿನಿಮಾ ನೋಡಿದವರಿಗಂತೂ, ಈ ಸಿನಿಮಾದಲ್ಲಿ ಮ್ಯೂಸಿಕ್ ತಂಡ ಯಶಸ್ಸಿನ ದಾರಿ ಹಿಡಿಯುವ ಚಿತ್ರಣ ಬೋರು ಹೊಡೆಸೀತು. ಎಲ್ಲಿ ,ಹೇಗೆ,ಯಾಕೆ ಹಾಳಾಯಿತು ಅಂತ ಹೇಳಲು ಬಹಳ ಕಷ್ಟವಾಗುವ ಹಾಗೆ ಸಿನಿಮಾ ಒಡೆದುಹೋಗಿದೆ . ಮಾಸ್ ಮತ್ತು ಕ್ಲಾಸ್ ಸಿನಿಮಾಗಳ ಮಧ್ಯೆ ದಾರಿ ಮಾಡಿಕೊಳ್ಳಲು ಹೋಗಿ ಅದೆಲ್ಲ ದಾರಿ ತಪ್ಪಿತೋ... ಸುಲಭದಲ್ಲಿ ಹೇಳಲೂ ಸಾಧ್ಯವಾಗದು ! ಹಾಗೆ ಒಟ್ಟಂದದಲ್ಲಿ ಖುಶಿ ಕೊಡದಿದ್ದರೂ, ಕೆಲವು ದೃಶ್ಯಗಳನ್ನು ನಿರ್ವಹಿಸಿರುವ ಬಗೆ ಚೆನ್ನಾಗಿಯೇ ಇದೆ. (ಪಿವಿಆರ್ ಎಲ್ಲಾ ಬೇಡ, ಡಿವಿಡಿ ಸಿಕ್ಕಿದರೆ ನೋಡಿ ಎಂಬುದು ತಾತ್ಪರ್ಯ!)
ಇನ್‌ಫೋಸಿಸ್‌ನ ನಾರಾಯಣಮೂರ್ತಿಯವರು ತಮ್ಮ ಉದ್ಯೋಗಿಗಳಿಗೆ ಬರೆದದ್ದೆನ್ನಲಾದ ಇ-ಮೇಲ್ ಒಂದು ಕೆಲಕಾಲದ ಹಿಂದೆ ಅಂತರ್ಜಾಲದಲ್ಲಿ ಸುತ್ತಾಡುತ್ತಿತ್ತು. ಆಫೀಸಿನಲ್ಲಿ ಪುಕ್ಕಟೆಯಾಗಿ ಇಂಟರ್‌ನೆಟ್, ಕಾಫಿ, ಎ.ಸಿ., ಇರುತ್ತದೆಂದು, ಐಟಿ ಲೋಕದ ಬಹುಪಾಲು ಬ್ಯಾಚುಲರ್‍ಸ್ , ತಮ್ಮ ಕೆಲಸದ ಅವಧಿ ಮೀರಿಯೂ ಕಚೇರಿಯಲ್ಲೇ ಕಾಲ ಕಳೆಯುತ್ತಾರೆ. ಆದರೆ ಸರಿಯಾದ ಸಮಯಕ್ಕೆ ಬಂದು, ಸರಿಯಾದ ಸಮಯಕ್ಕೆ ಕೆಲಸ ಮುಗಿಸಿ ಹೋಗುವ ಅಭ್ಯಾಸ ಮಾಡಿಕೊಳ್ಳದಿದ್ದರೆ, ವಿವಾಹದ ಬಳಿಕ ಕಷ್ಟಪಡಬೇಕಾಗುತ್ತದೆ ಅಂತ ಅದರಲ್ಲಿ ಎಚ್ಚರಿಸಲಾಗಿತ್ತು ! ಮನೆಯಲ್ಲಿ ನೆಮ್ಮದಿ ಇಲ್ಲ ಅಂತ ಇತರ ಚಟ-ಹವ್ಯಾಸವನ್ನೋ ಬೆಳೆಸಿಕೊಳ್ಳುವುದು ಅಥವಾ ಹೊರಗಿನ ಅಭ್ಯಾಸಗಳಿಂದಲೇ ಮನೆಯ ಬದುಕು ಕೆಡಿಸಿಕೊಳ್ಳುವುದು ನಡೆಯುತ್ತಿರುವಾಗಲೂ, ವೃತ್ತಿ-ಪ್ರವೃತ್ತಿ-ಮನೆ ಬದುಕನ್ನು ಸುಲಲಿತವಾಗಿ ತೂಗಿಸಿಕೊಂಡು ಹೋಗುತ್ತಿದ್ದ ಜನ ನಮ್ಮಲ್ಲಿ ಇದ್ದರು, ಇದ್ದಾರೆ.
'ಊರಲ್ಲೇ ಉಳಿಯಬೇಕಾದ ಅನಿವಾರ್ಯತೆಯನ್ನು , ತನ್ನದೇ ಆಯ್ಕೆ ಎಂಬಂತೆ ಮುಂದೆ ಬದುಕಿದವರು ಅವರು. ತಾನು ಇದ್ದಲ್ಲೇ ಬೆಳೆಯುವುದು, ತನ್ನ ಸುತ್ತಲಿನ ಜನರ ನಡುವೆ ಅರ್ಥಪೂರ್ಣವಾಗುವುದು ಅವರಿಗೆ ಮುಖ್ಯವಾಯಿತು' ಅಂತ ಅಪ್ಪನ ಸಂಸ್ಮರಣಾ ಪುಸ್ತಕದಲ್ಲಿ ಒಬ್ಬರು ಬರೆದಿದ್ದರು. ಹೌದು, ಕೊನೆಯವರೆಗೂ ನಗರ ಜೀವನಕ್ಕಾಗಿ, ದೊಡ್ಡ ಕೆಲಸಕ್ಕಾಗಿ ಅವರು ಹಪಹಪಿಸಿರಲಿಲ್ಲ. ಹಾಗಂತ ಆ ನಿರುದ್ವಿಗ್ನತೆ, ಮನಸ್ಥಿತಿ ಎಲ್ಲರಿಗೆ ಸಾಧ್ಯವೂ ಇಲ್ಲ. ವೃತ್ತಿ-ಪ್ರವೃತ್ತಿ-ಮನೆ ಬದುಕು ನೂಲಿನ ಉಂಡೆಯಂತೆ. ಸರಿಯಾಗಿ ಸುತ್ತಿಕೊಂಡಿದ್ದರೆ ಬಿಡಿಸಿಕೊಳ್ಳುವುದು ಬಹಳ ಸುಲಭ, ಸಿಕ್ಕು ಶುರುವಾಯಿತೋ...ಅದು ವೈರಿಗಳಿಗೂ ಬೇಡ.
ಆಫೀಸಿನಲ್ಲೇ ಇಷ್ಟು ಬರೆದುಕೊಂಡು ಖುಶಿಯಾಗಿದ್ದೇನೆ. ಹಬ್ಬದ ರಜೆ ಎಲ್ಲರಿಗೂ ಸನ್ಮಂಗಲ ಉಂಟುಮಾಡಲಿ.
1 comments:
ಹೌದು ಅನವಶ್ಯಕವಾಗಿ ಬದುಕಿನ ನೂಲನ್ನು ಉದ್ದುದ್ದ ಮಾಡಿಕೊಂಡು ಬದುಕುವ ಅನಿವಾರ್ಯತೆಯಲ್ಲಿರುವ ನಾವು ಅದನ್ನು ಸರಿಯಾಗಿ ಉಂಡೆ ಮಾಡಿರುವ ಶಿಸ್ತನ್ನೂ ವಿವೇಕವನ್ನೂ ಅಭ್ಯಾಸ ಮಾಡಬೇಕು. ಇಲ್ಲವಾದರೆ ಎಲ್ಲೆಲ್ಲೆಲ್ಲೂ ಗಂಟು ಗಂಟು. ಒಳ್ಳೆಯ ಲಹರಿ...
ಸುಪ್ರೀತ್
Post a Comment