ಮಾತಿನಲ್ಲಿ ಹೇಳಲಾರೆನು !
- ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ೧.೫೦ಲಕ್ಷ ರೂಗಳ ಖರ್ಚುವೆಚ್ಚದ ತಾಳಮದ್ದಳೆ ಸಪ್ತಾಹ
- ಏಳು ದಿನಗಳಲ್ಲಿ ಸುಮಾರು ೨ ಸಾವಿರ ಜನರ ಪಾಲ್ಗೊಳ್ಳುವಿಕೆ (ತಾಳಮದ್ದಳೆಗೆ ಇದೊಂದು ದೊಡ್ಡ ಸಂಖ್ಯಾಬಲ !)
- ಮಹಾನಗರದ ಆಫೀಸು ಕೆಲಸ, ಟ್ರಾಫಿಕ್ ಜಾಮ್, ಮಳೆ ಮುಂತಾದ ಪ್ರತಿಕೂಲಗಳ ಮಧ್ಯೆಯೂ ನಾನಾ ಕ್ಷೇತ್ರ, ಭಾಗಗಳ ಜನರ ಪಾಲ್ಗೊಳ್ಳುವಿಕೆ
- ತೆಂಕು-ಬಡಗು ಎರಡೂ ತಿಟ್ಟುಗಳ ಸಮ್ಮಿಲನ, ಬೆಂಗಳೂರಿನ ಬಹುತೇಕ ಯಕ್ಷ ಸಂಘಟನೆಗಳ ಸಹಕಾರ
- ಎಲ್ಲ ತಾಳಮದ್ದಳೆಗಳ ವ್ಯವಸ್ಥಿತ ಧ್ವನಿ ಮುದ್ರಣ, ಪ್ರತಿದಿನ ೩ ಗಂಟೆ ೩೦ ನಿಮಿಷಗಳ ನಿಗದಿತ ಅವಧಿ.

ಆವತ್ತು ಸಂಜೆಯಾಗುತ್ತಿದ್ದಂತೆ ಬಸವನಗುಡಿಯ ಪುತ್ತಿಗೆ ಮಠದ ಸಭಾಂಗಣದಲ್ಲಿ ಒಟ್ಟಾಗುತ್ತಿದ್ದ ಜನರೆಲ್ಲ , ಪುರಾಣಗಳಿಂದ ಹೊರಬಂದ ಯಾವ್ಯಾವುದೋ ಪಾತ್ರಗಳಂತೆ ಮಾತಾಡಿಕೊಳ್ಳುತ್ತಿದ್ದರು. ಅವರವರ ಪಾಡಿಗೆ ಪ್ರಸಂಗ ಪದ್ಯಗಳನ್ನು ಗುನುಗುತ್ತಿದ್ದರು. ಮಹಾನಗರದ ಗದ್ದಲದಲ್ಲೂ ಎಲ್ಲಿಂದಲೋ ಹಾರ್ಮೋನಿಯಂ ಬಾರಿಸುವ, ಚೆಂಡೆ-ಮದ್ದಳೆಯ ಶ್ರುತಿ ಮಾಡುವ ಸದ್ದು ಕೇಳುತ್ತಿತ್ತು. ಆ ಪರಿಸರವೇ ಯಾವುದೋ ಅಜ್ಞಾತ ಸೆಳೆತಕ್ಕೆ ಸಿಕ್ಕಂತೆ ಒಂದು ಲಯದಲ್ಲಿ ತೂಗುತ್ತಿತ್ತು.
ಮೊದಲನೇ ದಿನದ ಪ್ರಸಂಗ 'ಕರ್ಣಪರ್ವ'. ಪ್ರಭಾಕರ ಜೋಶಿಯವರ ಎಂದಿನ ಅರ್ಜುನ, ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿಯವರ ಕರ್ಣ, ಶಂಭು ಶರ್ಮರ ಶಲ್ಯ, ಸುಧನ್ವಾ ದೇರಾಜೆ ಕೃಷ್ಣ, ಶಶಾಂಕ ಅರ್ನಾಡಿ ಅಶ್ವಸೇನನಾಗಿ ಕಾಣಿಸಿಕೊಂಡರು. ಕಿಂಚಿತ್ತೂ ವಾದದ ಕಿಚ್ಚು ಹತ್ತಿಕೊಳ್ಳದೆ ಅತ್ಯಂತ ಸುಗಮ ಮಾರ್ಗದಲ್ಲಿ ಈ ಪ್ರಸಂಗ ನಡೆದದ್ದು ಒಂದು ಅಚ್ಚರಿ ಮತ್ತು ನಿರಾಸೆಯ ಸಂಗತಿ ! ಹವ್ಯಾಸಿ ಭಾಗವತ ಸುಬ್ರಾಯ ಸಂಪಾಜೆ ಹಿಮ್ಮೇಳವನ್ನು ಮುನ್ನಡೆಸಿದರು. ಸಪ್ತಾಹದಲ್ಲಿ ಚೊಕ್ಕವಾಗಿ ನಡೆದ ಪ್ರಸಂಗ, ಎರಡನೇ ದಿನದ 'ವಾಲಿ ವಧೆ '. ಶಂಭುಶರ್ಮರ ಸುಗ್ರೀವ, ಜೋಶಿಯವರ ವಾಲಿ, ಸಿದ್ದಕಟ್ಟೆಯವರ ರಾಮ ಹಾಗೂ ಶಶಾಂಕ ಅರ್ನಾಡಿ ತಾರೆಯಾಗಿ ಭಾಗವಹಿಸಿದ ಪ್ರಸಂಗ ಲವಲವಿಕೆಯಿಂದ ನಡೆಯಿತು. ಆದರೆ ಮುಖ್ಯಮೂರೂ ಪಾತ್ರಗಳು ಒಂದೇ ತೆರನಾಗಿ ಮಾತಾಡಿ, ಪಾತ್ರದ ವೈಶಿಷ್ಟ್ಯಅನನ್ಯತೆ ಬಿಂಬಿತವಾಗುವುದು ತಪ್ಪಿಹೋಯಿತು. ಹೇರಂಜಾಲು ಗೋಪಾಲ ಗಾಣಿಗರ ಭಾಗವತಿಕೆಯ ಬಡಗುತಿಟ್ಟಿನ ಹಿಮ್ಮೇಳದ, 'ಭೀಷ್ಮ ವಿಜಯ' ಪ್ರಸಂಗದಲ್ಲಿ ಸಿದ್ಧಕಟ್ಟೆಯವರ ಭೀಷ್ಮ , ಶಂಭು ಶರ್ಮರ ಪರಶುರಾಮ ಹಾಗೂ ಹವ್ಯಾಸಿ ಅರ್ಥಧಾರಿಗಳಾದ ಮೂಜೂರು ನಾರಾಯಣ ಭಟ್ ಅಂಬೆ ಹಾಗೂ ಶಶಾಂಕ ಅರ್ನಾಡಿ ಸಾಲ್ವನಾಗಿ ಕಾಣಿಸಿಕೊಂಡರು. ಪ್ರಸಿದ್ಧ ಹಾಸ್ಯಗಾರ ಹಳ್ಳಾಡಿ ಜಯರಾಮ ಶೆಟ್ಟರು ಬ್ರಾಹ್ಮಣನ ಪಾತ್ರ ನಿರ್ವಹಿಸಿದ್ದು ಅಂದಿನ ವಿಶೇಷ ಆಕರ್ಷಣೆ. ಅಂಬೆ-ಭೀಷ್ಮನ ಮೊದಲ ಸಂವಾದ ತುಸು ಚರ್ಚೆಯ ವಾತಾವರಣ ಸೃಷ್ಟಿಸಿದರೂ, ಬಳಿಕ ಅಂತಹದ್ದೇನೂ ಆಗಲಿಲ್ಲ. ಸಾಲ್ವ-ಅಂಬೆ ಸಂವಾದ ತುಸು ಲಂಬಿಸಿದರೆ, ಪರಶುರಾಮ-ಭೀಷ್ಮ ಸಂವಾದ ಪದ್ಯಗಳ ವ್ಯಾಪ್ತಿಯಲ್ಲೇ ಚುಟುಕಾಗಿ ಮುಗಿಯಿತು.

ಘೋರ-ಮಾಯಾ ಶೂರ್ಪನಖಿಯಾಗಿ ಸಪ್ತಾಹದ ನಾಲ್ಕನೇ ದಿನ ಕಾಣಿಸಿಕೊಂಡರು ಪ್ರಭಾಕರ ಜೋಶಿ. ಸಿದ್ದಕಟ್ಟೆಯವರದ್ದು ಎಂದಿನ ರಾಮ. ಶಂಭು ಶರ್ಮರು ಬಹಳ ಚುಟುಕಾಗಿ ಲಕ್ಷ್ಮಣನ ಪಾತ್ರ ನಿರ್ವಹಿಸಿದರು. ಹೇರಂಜಾಲು ಗೋಪಾಲ ಗಾಣಿಗ ಹಾ ತೆಂಕಬೈಲು ಮುರಳಿಕೃಷ್ಣ ಶಾಸ್ತ್ರಿಗಳ ದ್ವಂದ್ವ ಹಾಡುಗಾರಿಕೆ, ಬಡಗು-ತೆಂಕಿನ ಎರಡೆರಡು ಚೆಂಡೆ ಮದ್ದಳೆಗಳ ಬಳಕೆ ಈ ಪ್ರಸಂಗವನ್ನು ರಂಜನೀಯವಾಗಿಸಿತು.
ಕಡಿಮೆ ಪಾತ್ರಗಳ, ಗಂಭೀರ ಗತಿಯ ಪ್ರಸಂಗ 'ರಾವಣ ವಧೆ 'ಯಲ್ಲಿ ಜೋಶಿಯವರ ರಾವಣ-ಶಂಭು ಶರ್ಮರ ಮಂಡೋದರಿ. ತೀರಾ ಭಾವಪರವಶತೆಯ ಮಂಡೋದರಿಗೂ, ಜೋಶಿಯವರ ಉಢಾಪೆಯ ಶೈಲಿಗೂ ಅಷ್ಟೊಂದು ಹೊಂದಾಣಿಕೆ ಬರಲಿಲ್ಲ. ಪ್ರಸಂಗದ ನಡೆಗೆ ಅನುಕೂಲವಾಗಿ ಸಿದ್ದಕಟ್ಟೆಯವರ ರಾಮ.
ಸಪ್ತಾಹಕ್ಕೊಂದು ಹೊಸ ಸ್ವಾದ-ರುಚಿ ಸಿಕ್ಕಿದ್ದು ಆರನೇ ದಿನದ 'ಶ್ರೀಕೃಷ್ಣ ಸಂಧಾನ 'ದಿಂದ. ಅಂದು ಜಬ್ಬಾರ್ ಸಮೊರವರ ಅಪರೂಪದ ಕೃಷ್ಣ. ಯಾವಾಗಲೂ ಕೌರವನ ಅರ್ಥವನ್ನೇ ಹೇಳುವ ಅವರ ಇದಿರು ಕೌರವನಾಗಿ ಉಮಾಕಾಂತ ಭಟ್ಟರಿದ್ದರು. ಜೋಶಿಯವರು ವಿದುರನ ಪಾತ್ರದಲ್ಲಿ ಬಂದರು.ಕೊಂಚ ಹೊಸ ತರಹದ ಪಾತ್ರ ಹಂಚಿಕೆಯಾಗಿ, ಪುರುಷೋತ್ತಮ ಭಟ್ ಬಿ.ಸಿ. ರೋಡು ಅವರ ಭಾಗವತಿಕೆಯಲ್ಲಿ, ಸಪ್ತಾಹದ ಯಶಸ್ವಿ ತಾಳಮದ್ದಳೆಗಳಲ್ಲಿ ಈ ಪ್ರಸಂಗದ ಹೆಸರು ಸೇರಿಕೊಂಡಿತು.

ಸಮಾರೋಪದ ದಿನ ಅ.೧೯ರಂದು, ತುಂಬಿ ತುಳುಕಿದ ಸಭೆ ನೀಡುತ್ತಿದ್ದ ಚಪ್ಪಾಳೆಯ ಅಲೆಯಲ್ಲಿ ನಡೆದದ್ದು 'ಸುದರ್ಶನ ಗ್ರಹಣ' ಪ್ರಸಂಗ.' ಮೊದಲನೇ ಭೀಷ್ಮನಾಗಿ ಕುಂಬ್ಳೆ ಸುಂದರ ರಾವ್ ಹಾಗೂ ಜಬ್ಬಾರ್ ಅವರ ಕೌರವನ ಮಾತುಕತೆ, ಕುಶಲ ಮಾತುಕತೆಯಲ್ಲಿ ರಸಮಯವಾಯಿತು. ಎರಡನೇ ಭೀಷ್ಮನಾಗಿ ಜೋಶಿ ಮತ್ತು ಕೃಷ್ಣನಾಗಿ ಉಮಾಕಾಂತ ಭಟ್ಟರ ಸಂವಾದ ಸಪ್ತಾಹದ ಉತ್ತಮ ಮಾತುಕತೆಗಳಲ್ಲೊಂದು ಎನಿಸಿತು.
ಒಂದು ವರ್ಷದಲ್ಲಿ ಹಿರಿಯ ಅರ್ಥಧಾರಿಗಳ ಭಾಗವಹಿಸುವಿಕೆಯ ಮೂರ್ನಾಲ್ಕು ಕೂಟಗಳೂ ಬೆಂಗಳೂರಿನಲ್ಲಿ ನಡೆಯದಿರುವ ಸನ್ನಿವೇಶದಲ್ಲಿ, ಸತತ ಏಳು ತಾಳಮದ್ದಳೆಗಳನ್ನು ಆಯೋಜಿಸಿದ 'ದುರ್ಗಾಂಬಾ ಕಲಾ ಸಂಗಮ'ಕ್ಕೆ ಸಿಕ್ಕಿದ್ದು ವ್ಯಾಪಕ ಮೆಚ್ಚುಗೆ , ಫೋನ್ ಕಾಲ್ಗಳ ಸುರಿಮಳೆ, ತಾಳಮದ್ದಳೆಯ ಬಗ್ಗೆ ಗೊತ್ತಿಲ್ಲದ ಜನರಿಂದಲೂ ಕಾರ್ಯಕ್ರಮದ ಬಗ್ಗೆ ವಿಚಾರಣೆ ! ಕೊನೆಯ ದಿನ 'ಶ್ರೀ ಮನೋಹರ ಸ್ವಾಮಿ ಪರಾಕು' ಪದ್ಯ ಬಂದು, ಕಾರ್ಯಕ್ರಮ ಕೊನೆಯ ಘಟ್ಟಕ್ಕೆ ತಲುಪಿದಾಗ ಎಲ್ಲರಿಗೂ ಗಂಟಲು ಕಟ್ಟಿತ್ತು, ಹೃದಯ ತುಂಬಿತ್ತು.
ಕುರುಕ್ಷೇತ್ರ ಯುದ್ಧದಲ್ಲಿ ಕೃಷ್ಣನಿದಿರು ಬಂದ ಭೀಷ್ಮ ಹೇಳಿದರು : 'ದುಷ್ಟ ಶಿಕ್ಷಣ-ಶಿಷ್ಟ ರಕ್ಷಣ ಅಂತ ಹೇಳುವ ನೀನು, ಸಣ್ಣ ಪ್ರಾಯದಲ್ಲೇ ಅಷ್ಟೆಲ್ಲಾ ದುಷ್ಟರನ್ನು ಕೊಂದರೂ ಇನ್ನೂ ಅದೆಷ್ಟು ಜನ ಉಳಿದುಕೊಂಡಿದ್ದಾರೆ ದೇವರೇ?!'
ಕೃಷ್ಣನ ನಾಲಗೆ ತಡವರಿಸಿತು.
(ಫೋಟೊ: ದುಷ್ಯಂತ ದೇರಾಜೆ, ಕ್ಯಾಮೆರಾ: ಶಶಾಂಕ ಅರ್ನಾಡಿ!)
3 comments:
hmmmmm! :)
sudhanva,
nanu ondu dinada mattige a sapthahada bhagavagidde.
nananthu thumba ista patte. jabbar samo avara artha kelirale illa. keli vismithanade.
tnx for 'saptaha'. tnx for report.
-vikas negiloni
ಶೇಣಿ, ಸಾಮಗ,ತೆಕ್ಕಟ್ಟೆ ಮಹಾಬಲ ಹೆಗಡೆ ಮತ್ತು ಇನ್ನೂ ಕೆಲ ಹಿರಿಯರು ನೇಪಥ್ಯಕ್ಕೆ ಸರಿದ ಮೇಲೆ ತಾಳಮದ್ದಲೆಯಲ್ಲಿ ಒಂದು ಬಗೆಯ ನಿರ್ವಾತ ಸೃಷ್ಟಿಯಾಯಿತು ಎಂದು ಕೊಳ್ಳುತ್ತಿರುವಾಗಲೇ ಉಮಾಕಾಂತ ಭಟ್ಟರು, ಜಬ್ಬಾರರು ಈ ಅಪರೂಪದ ಪ್ರಾಕಾರವನ್ನು ಉಳಿಸಿ ಬೆಳೆಸುವ ಸಾಮರ್ಥ್ಯವನ್ನು ತೋರುತ್ತಿರುವುದು ಬಹಳ ಸಂತೋಷದ ಸಂಗತಿ. ನಿಮ್ಮ ವರದಿ ಚೆನ್ನಾಗಿದೆ.
-ಚಿನ್ಮಯ.
Post a Comment