September 22, 2008

ಹಳ್ಳಿ ಥೇಟರ್‌ನಲ್ಲಿ ಸಿಹಿ ಸುದ್ದಿ

ಸಕಲೇಶಪುರದಿಂದ ಪ್ರಸಾದ್ ರಕ್ಷಿದಿಯವರು ಬರೆಯುತ್ತಿರುವ 'ಬೆಳ್ಳೇಕೆರೆಯ ಹಳ್ಳಿ ಥೇಟರ್' ಸರಣಿಯ ೬ನೇ ಭಾಗವಿದು. ಸದ್ಯದಲ್ಲೇ ಇದು ಮುಂದಿನ ಭಾಗಗಳೊಂದಿಗೆ ಪುಸ್ತಕ ರೂಪದಲ್ಲಿ 'ಅಭಿನವ ಪ್ರಕಾಶನ'ದಿಂದ ಹೊರಬರಲಿದೆ. ಅಲ್ಲಿಯವರೆಗೆ ಚಂಪಕಾವತಿಯಲ್ಲಿ ಇದು ಮುಂದುವರಿಯುತ್ತದೆ.

ಕಿತ್ತಲೆ ಕಂಟ್ರ್ಯಾಕ್ಟ್ ಮತ್ತು ರಂಗಸಜ್ಜಿಕೆ
ರಾತ್ರಿ ಶಾಲೆಯಲ್ಲಿ ಓದಿನ ಜೊತೆಗೆ ಸರಳ ಲೆಕ್ಕಗಳನ್ನು ಹೇಳಿ ಕೊಡುತ್ತಿದ್ದೆ. ಅವರ ಸಂಬಳದ ಲೆಕ್ಕ - ಬೋನಸ್ ಲೆಕ್ಕ, ಒಂದು ಕಿಲೋಗ್ರಾಂ ಕಾಫಿ ಹಣ್ಣು ಕೊಯ್ದದ್ದಕ್ಕೆ ೧೫ ಪೈಸೆಯಾದರೆ ೧೨೦ ಕೆ.ಜಿ.ಗೆ ಎಷ್ಟು? ಹೀಗೆ ವಿಷಯಗಳು ನೇರವಾಗಿ ಅವರ ಸಮಸ್ಯೆಗಳಿಗೇ ಸಂಬಂಧಿಸಿದ್ದು ಬೇಗ ಬೇಗ ಕಲಿಯುತ್ತಿದ್ದರು. ಪಠ್ಯಪುಸ್ತಕಗಳಿಗೆ ಬದಲಾಗಿ ಹಳೇ ದಿನ ಪತ್ರಿಕೆಗಳು (ನಮ್ಮೂರಿಗೆ ಆಗ ದಿನ ಪತ್ರಿಕೆಗಳು ಬರುತ್ತಿರಲಿಲ್ಲ) ಚಿತ್ರಗೀತೆ ಪುಸ್ತಕಗಳು, ಸಿನಿಮಾ ಮ್ಯಾಗಜೀನ್‌ಗಳು ಹೀಗೆ ಅವರ ಆಸಕ್ತಿಯ ಪುಸ್ತಕಗಳನ್ನು ಕೊಡುತ್ತಿದ್ದೆ. ಸಂತೆಯಿಂದ ತರಬೇಕಾದ ಸಾಮಾನುಗಳ ಪಟ್ಟಿ ಮಾಡಲು ಹೇಳುತ್ತಿದ್ದೆ. ರೇಡಿಯೋದಲ್ಲಿ ಕೇಳಿದ ಸಿನಿಮಾ ಹಾಡುಗಳನ್ನಂತೂ ಅವರು ಉತ್ಸಾಹದಿಂದ ಬರೆದುಕೊಳ್ಳುತ್ತಿದ್ದರು. ಹೀಗೆ ಮಳೆಗಾಲವಿಡೀ ಬೇರೆ ಯಾವುದೇ ಚಟುವಟಿಕೆಗಳಿಲ್ಲದೆ ಶಾಲೆ ನಿರಾತಂಕವಾಗಿ ನಡೆಯುತ್ತಿತ್ತು. ದೇಶದ ರಾಜಕೀಯದಲ್ಲಿ ಮತ್ತೆ ಬದಲಾವಣೆಯಾಗಿತ್ತು. ನಮ್ಮಂತಹವರ ಕನಸಿನ ಜನತಾಪಕ್ಷ ಭ್ರಮೆಯಾಗಿ ಕುಸಿದು ಹೋಗಿ ಮತ್ತೆ ಇಂದಿರಾ ಆಡಳಿತ ಬಂದಿತ್ತು.

ಈ ಸಂದರ್ಭದಲ್ಲಿ ಇನ್ನೊಂದು ಘಟನೆ ನಡೆಯಿತು. ನಾನು ಡೈರಿ ಕೆಲಸದಲ್ಲಿದ್ದರೂ, ಈ ಊರಲ್ಲೇ ಬೆಳೆದವನಾದ್ದರಿಂದ ನನಗೆ ಎಸ್ಟೇಟಿನ ಹೊರಗೂ ಸಾಕಷ್ಟು ಗೆಳೆಯರಿದ್ದರು. ಅಪ್ಪ ಇನ್ನೂ ತೋಟದ ಕೆಲಸದಲ್ಲಿದ್ದರು. ತೋಟದ ಹೊರಗೂ ನಮಗೆ ಸೌಹಾರ್ದ ಸಂಬಂಧಗಳಿದ್ದುದರಿಂದ ತೋಟದ ಒಳಗಾಗಲೀ ಹೊರಗಿನಿಂದಾಗಲೀ ಕಳ್ಳತನದಂತಹ ಸಮಸ್ಯೆಗಳು ಅಷ್ಟಾಗಿ ಇರಲಿಲ್ಲ.
ಪ್ರತಿವರ್ಷವೂ ತೋಟದ ಕಿತ್ತಲೆ ಫಸಲನ್ನು ಯಾರಿಗಾದರೂ ಹೊರಗಿನವರಿಗೆ ಗುತ್ತಿಗೆಗೆ ಕೊಡುವುದು ವಾಡಿಕೆ. ಗುತ್ತಿಗೆ ವಹಿಸಿಕೊಂಡವರು ಎಷ್ಟೇ ಪಾರ ಮಾಡಿದರೂ ಕೂಡಾ ಜನರು ತಿನ್ನುವ ಆಸೆಯಿಂದ ಕಿತ್ತಲೆ ಹಣ್ಣನ್ನು ಕದಿಯುವುದು ಬಿಡುತ್ತಿರಲಿಲ್ಲ. ಇಂದೂ ಬಿಟ್ಟಿಲ್ಲ. ಆ ವರ್ಷ ಗುತ್ತಿಗೆ ಮಾಡಿಕೊಂಡವನಿಗೂ - ನಮ್ಮ ಕೆಲವು ಹುಡುಗರಿಗೂ ಯಾವುದೋ ಸಣ್ಣ ವಿಷಯಕ್ಕೆ ಜಗಳ ಬಂತು. ಅದರಿಂದಾಗಿ ಹುಡುಗರು ಸ್ವಲ್ಪ ಹೆಚ್ಚೇ ಕಿತ್ತಲೆ ಹಣ್ಣು ಕದ್ದರು. ಗುತ್ತಿಗೆದಾರ ಇದಕ್ಕೆಲ್ಲ ನಾನೇ ಕಾರಣವೆಂದು 'ನಿಮ್ಮ ಮಗನೇ ಹುಡುಗರನ್ನೆಲ್ಲಾ ಅಟ್ಟಕ್ಕೇರಿಸಿ ಹಾಳು ಮಾಡಿಟ್ಟಿದ್ದಾರೆ!' ಎಂದು ಅಪ್ಪನಲ್ಲಿ ದೂರಿದ. ಅಪ್ಪನಿಗೆ ಇಕ್ಕಟ್ಟಾಯಿತು. ನನ್ನನ್ನು ಕರೆದು 'ನಿನ್ನ ಪಡೆಯಿಂದಾಗಿ ನನ್ನ ಮರ್ಯಾದೆ ಹೋಗುತ್ತಿದೆ.'ಎಂದು ಬಯ್ದರು. ನಾವೆಲ್ಲ ಸೇರಿ ಕಿತ್ತಲೆ ಹಣ್ಣು ಕದಿಯುವುದನ್ನು ನಿಲ್ಲಿಸುವ ಬದಲಿಗೆ ಗುತ್ತಿಗೆದಾರನಿಗೆ ಬುದ್ಧಿ ಕಲಿಸಬೇಕೆಂದು ತೀರ್ಮಾನಿಸಿದೆವು!
ನಮ್ಮ ಡೈರಿ ಫಾರಂನಲ್ಲಿ ಒಂದು ಬೀಜದ ಹೋರಿಯಿತ್ತು. ಅದು ದೈತ್ಯ ಗಾತ್ರದ ಹೆಚ್.ಎಫ್. ತಳಿಯ ಹೋರಿ. ಅದಕ್ಕೆ ಡೈರಿ ಕೆಲಸಗಾರರಲ್ಲದೆ ಬೇರೆಯವರನ್ನು ಕಂಡರೆ ಹಾಯುವ ಅಭ್ಯಾಸವೂ ಇತ್ತು. ಅದು ಬಂತೆಂದರೆ ಡೈರಿ ಕೆಲಸಗಾರರು ಬಿಟ್ಟು ಬೇರೆ ಯಾರೂ ಹತ್ತಿರ ಬರುತ್ತಿರಲಿಲ್ಲ. ಅದನ್ನು ಪ್ರತಿದಿನ ಸ್ವಲ್ಪ ಹೊತ್ತು ಹೊರಗೆ ತಿರುಗಾಡಲು ಬಿಡುತ್ತಿದ್ದೆವು. ಪ್ರತಿದಿನ ಅದು ತಪ್ಪಿಸಿಕೊಂಡಿತೆಂದು ಹೇಳಿ ಅದನ್ನು ಬೇಕೆಂದೇ ತೋಟಕ್ಕೆ ಬಿಡುವುದು; ಅದು ಹೋದಂತೆ ಅದರ ಹಿಂದೆಯೇ ಡೈರಿ ಹುಡುಗರೆಲ್ಲ ಹೋಗಿ ಕಿತ್ತಲೆ ಮರಗಳನ್ನು ಬೋಳಿಸುವುದು ಪ್ರಾರಂಭವಾಯ್ತು. ಒಟ್ಟಿನಲ್ಲಿ ಕಿತ್ತಳೆ ಮರಗಳೆಲ್ಲ ಖಾಲಿಯಾಗತೊಡಗಿದವು.
ಗುತ್ತಿಗೆದಾರ ಬ್ಯಾರಿ ಸೋತು ಹೋದ. ಊರೆಲ್ಲ ನಮ್ಮನ್ನು ದೂರಿಕೊಂಡು ಬಂದ. ಅವನು ಬೇರೆ ಊರವನಾದ್ದರಿಂದ ಅವನಿಗೆ ಯಾರೂ ಬೆಂಬಲ ಕೊಡಲಿಲ್ಲ. ಅವನೀಗ ನಮ್ಮ ಬಗ್ಗೆ ಹೆದರಿಕೊಂಡಿದ್ದನೋ ಏನೋ, ತೋಟದ ಮಾಲೀಕರಲ್ಲೂ ಸಹ ಈ ಬಗ್ಗೆ ದೂರು ಕೊಡಲು ಹೋಗಲಿಲ್ಲ. ಕೊನೆಗೆ ನಮ್ಮ ಸುದ್ದಿಯೇ ಬೇಡವೆಂದು ಮುಂದಿನ ವರ್ಷ ತೋಟ ಗುತ್ತಿಗೆ ಕೇಳಲು ಬರಲೇ ಇಲ್ಲ.
ನಮ್ಮಯತ್ನವೇನೋ ಫಲಿಸಿತ್ತು. ಆದರೆ ನನಗೆ ಇನ್ನೊಂದು ಭಯ ಪ್ರಾರಂಭವಾಯಿತು. ಹುಡುಗರೀಗ ಕಳ್ಳತನದ ರುಚಿ ಕಲಿತಿದ್ದಾರೆ. ನಾಟಕದಂತೆ ಇದೂ ಖಾಯಂ ಆಗಿ ಬಿಟ್ಟರೇನು ಗತಿ? ಶಾಲೆಯಲ್ಲಿ ಎಲ್ಲರೂ ಸೇರಿದ್ದಾಗ ಹೇಳಿದೆ- "ಈಗ ನಾವೇ ಕಳ್ಳರೆಂದು ಲೋಕಕ್ಕೇ ಗೊತ್ತಾಗಿದೆ. ನಾವು ಯಾಕೆ ಕಳ್ಳರೆಂದು ಕರೆಸಿಕೊಳ್ಳಬೇಕು. ಹೇಗೂ ನಾವೇ ಕಷ್ಟಪಟ್ಟು ಬೆಳೆಸಿದ ತೋಟ, ಈ ಬಾರಿ ನಾವೇ ಯಾಕೆ ಫಸಲನ್ನು ಗುತ್ತಿಗೆ ಮಾಡಬಾರದು?'
'ನಮಗೆ ಬಂಡವಾಳ ಎಲ್ಲಿದೆ" ಎಂದ ಒಬ್ಬ.
'ಪಾರ ಮಾಡುವವರಿಗೆ ಸಂಬಳ ಯಾರು ಕೊಡ್ತಾರೆ' - ಇನ್ನೊಬ್ಬ.

ಹೀಗೆ ಚರ್ಚೆ ಪ್ರಾರಂಭವಾಯಿತು. ನಾವೇ ವಹಿಸಿಕೊಂಡರೆ ತೋಟ ಪಾರದ ಅಗತ್ಯವೇ ಇಲ್ಲವೆಂದೂ, ಹಣ್ಣು ಕೊಯ್ದಾಗ ಎಲ್ಲ ಮನೆಗಳಿಗೂ ನಾವೇ ಸಾಕಷ್ಟು ಹಣ್ಣನ್ನು ಹಂಚುವುದರಿಂದ ಯಾರೂ ಕದಿಯುವ ಅಗತ್ಯವೇ ಬೀಳುವುದಿಲ್ಲವೆಂದೂ ಹೇಳಿದೆ. ಮುಂಗಡ ಹಣ ಸ್ವಲ್ಪ ಮಾತ್ರ ನೀಡಿ ಉಳಿದ ಹಣವನ್ನು ಕಿತ್ತಲೆ ಕೊಯಿಲು ಮಾಡಿದ ನಂತರ ಕೊಡುತ್ತೇವೆಂದು ಮಾಲೀಕರನ್ನು ಒಪ್ಪಿಸೋಣ, ನಾವೆಲ್ಲ ಸೇರಿ ಕೇಳಿದರೆ ಖಂಡಿತಾ ಒಪ್ಪುತ್ತಾರೆ, ಲಾಭ ಬಂದರೆ ಏನು ಮಾಡುವುದೆಂದು ನಾವೆಲ್ಲ ಸೇರಿ ತೀರ್ಮಾನಿಸೋಣ ಎಂದೆ. ಕಿತ್ತಲೆ, ಏಲಕ್ಕಿ, ಮೆಣಸು, ಇತ್ಯಾದಿಗಳ ಗುತ್ತಿಗೆ ವ್ಯವಹಾರವೂ ಒಂದು ಜೂಜೇ. ಮಳೆ-ಬೆಳೆ-ಮಾರುಕಟ್ಟೆ ಎಲ್ಲವೂ ನೆಟ್ಟಗಿದ್ದರೆ ಗುತ್ತಿಗೆ ಮಾಡಿಕೊಂಡವನಿಗೆ ಒಳ್ಳೆಯ ಲಾಭವಾಗುತ್ತದೆ. ಇಲ್ಲದಿದ್ದರೆ ಅಸಲು ಸಿಕ್ಕುವುದೇ ಕಷ್ಟವಾಗಿಬಿಡುತ್ತದೆ. ಎಷ್ಟೋ ಸಾರಿ ಗುತ್ತಿಗೆದಾರರು ತೋಟದ ಮಾಲೀಕರಿಗೆ ಅರ್ಧಂಬರ್ದ ಹಣಕೊಟ್ಟು , ಫಸಲನ್ನೂ ಕೊಯ್ಯದೆ ಕದ್ದು ಓಡುವುದೂ ಇದೆ. ನನಗಂತೂ ಕಿತ್ತಲೆ ಫಸಲಿನ ಲಾಭ-ನಷ್ಟಕ್ಕಿಂತಲೂ ಹೇಗಾದರೂ ಮಾಡಿ ಕಿತ್ತಲೆ ಕಳ್ಳತನವನ್ನು ನಿಲ್ಲಿಸುವುದು ಮುಖ್ಯವಾಗಿತ್ತು. ಇಲ್ಲದಿದ್ದರೆ ನಾವೆಲ್ಲ ತೋಟದಲ್ಲಿ  ಮಾತ್ರವಲ್ಲ ,ಊರಲ್ಲಿ ಕೂಡಾ ಕೆಟ್ಟ ಹೆಸರು ಗಳಿಸುವುದು ಖಂಡಿತವಾಗಿತ್ತು. ನಮ್ಮ ಯೋಜನೆಗೆ ಮಾಲೀಕರು ಕೂಡಾ ಒಪ್ಪಿದರು.

ನಾಟಕ ಮುಗಿದ ನಂತರವೂ ನಮ್ಮ ನಾಲ್ಕಾಣೆ ಫಂಡನ್ನು ಮುಂದುವರಿಸಿಕೊಂಡು ಬಂದಿದ್ದೆವಾದ್ದರಿಂದ ಆ ಫಂಡಿನಲ್ಲಿ ಸ್ವಲ್ಪ ಹಣವಿತ್ತು. ಒಟ್ಟು ಏಳುನೂರಾ ಐವತ್ತು ರೂಪಾಯಿಗಳಿಗೆ ಮಾತಾಗಿ ನೂರೈವತ್ತು ರೂಪಾಯಿ ಮುಂಗಡ ಕೊಟ್ಟೆವು. ಆ ವರ್ಷದ ತೋಟದ ಕಿತ್ತಲೆ ಫಸಲು ನಮ್ಮದಾಯಿತು. ಅಗತ್ಯ ಇಲ್ಲದಿದ್ದರೂ ಕಾಯಿ ಬಲಿಯುವ ಮೊದಲೇ ತೋಟದಲ್ಲಿ ಸುತ್ತಾಡತೊಡಗಿದೆವು. ತೋಟ ಪಾರ ಮಾಡುವ ಅಗತ್ಯವಿಲ್ಲವೆಂದು ತೀರ್ಮಾನಿಸಿದ್ದೆವಲ್ಲ. ಆದರೆ ಕಾಯಿ ಬಲಿಯುತ್ತ ಬಂದಂತೆ ನಮ್ಮ ತೀರ್ಮಾನವನ್ನು ಬದಲಿಸಬೇಕಾಯ್ತು. ನಮ್ಮ ತೀರ್ಮಾನಕ್ಕೆ ಮಂಗಗಳು ಒಪ್ಪಿಗೆ ನೀಡಿರಲಿಲ್ಲ! ಹಾಗಾಗಿ ತೋಟ ಪಾರ ಅನಿವಾರ್ಯವಾಯ್ತು. ನಾವು ಎಷ್ಟೇ ಹೇಳಿದರೂ ತೋಟದಲ್ಲಿ ಕೆಲವರು ಹಳೆಯ ಚಾಳಿ ಬಿಡುತ್ತಿರಲಿಲ್ಲ. ಆಗಾಗ ಒಮ್ಮೊಮ್ಮೆ ಕಿತ್ತಲೆ ಹಣ್ಣು ಕದಿಯುತ್ತಿದ್ದರು.
ಕೊಯ್ಲಿನ ಸಮಯ ಬಂದಾಗ ಹುಡುಗರ ದಂಡೇ ತಯಾರಾಯಿತು. ನಾವೇ ಎಲ್ಲರೂ ಸೇರಿ ಕಿತ್ತಲೆ ಹಣ್ಣನ್ನು ಕೊಯ್ದು ಮಾರಾಟ ಮಾಡಿದೆವು. ಎಲ್ಲಾ ಮನೆಗಳಿಗೂ ಸಾಕಷ್ಟು ಕಿತ್ತಲೆ ಹಣ್ಣು ಹಂಚಿದೆವು. ಕೊಯ್ದವರಿಗೆ ಸಂಬಳವನ್ನೂ ಕೊಟ್ಟೆವು. ತೋಟದ ಹಣವನ್ನೂ ಸಂದಾಯ ಮಾಡಿದೆವು.  ನಮ್ಮ ಅದೃಷ್ಟ ಚೆನ್ನಾಗಿತ್ತು. ಎಲ್ಲಾ ಖರ್ಚು ಕಳೆದು ಎರಡು ಸಾವಿರ ರೂಪಾಯಿ ಲಾಭ ಉಳಿದಿತ್ತು! ನಮಗೆಲ್ಲಾ ಲಾಟರಿ ಹೊಡೆದಂತಾಗಿತ್ತು. ಅದು ಸಾಕಷ್ಟು ದೊಡ್ಡ ಮೊತ್ತವೇ ಎರಡು ಸಾವಿರ ರೂಪಾಯಿ ಆ ಕಾಲದಲ್ಲಿ ಸುಮಾರಾಗಿ ಇಬ್ಬರು ಕೆಲಸಗಾರರ ಒಂದು ವರ್ಷದ ಕೂಲಿಯಷ್ಟಾಗುತ್ತಿತ್ತು.

'ಇದನ್ನೇನು ಮಾಡುವುದು?' ಶಾಲೆಯಲ್ಲಿ ತೋಟದ ಜನರೆಲ್ಲಾ ಕಿಕ್ಕಿರಿದು ಸಭೆ ಸೇರಿದರು. ಇಷ್ಟೊಂದು ಹಣ ಬಂದಿದ್ದರಿಂದ ಅವರಲ್ಲೂ ಹಲವಾರು ಆಲೋಚನೆಗಳಿದ್ದವು.
'ಚೌಡಿ ಪೂಜೆ ಮಾಡೋಣ, ಕುರಿ ಕಡ್ದು ಊಟ ಹಾಕೋಣ' - ಬಂತು ಸಲಹೆ.
'ಎಲ್ಲರಿಗೂ ಹಂಚೋಣ' ಎಂದ ಮೈಯೆಲ್ಲ ಸಾಲ ಮಾಡಿಕೊಂಡಿದ್ದವನೊಬ್ಬ.
'ಫಂಡು ಮಾಡಿ ಬಡ್ಡಿಗೆ ಕೊಡೋಣ" ಇವನು ಬಡ್ಡಿ ಸಾಲದ ಗಿರಾಕಿ.
'ಮಕ್ಕಳಿಗೆಲ್ಲಾ ಬಟ್ಟೆ ತನ್ನಿ'.
'ಚೌಡಿ ಕಲ್ಲಿಗೆ ಗುಡಿ ಕಟ್ಟಿಸಿ' ಹೀಗೇ ಹತ್ತಾರು ಸಲಹೆಗಳು ಬಂದವು. ತುಂಬ ಹೊತ್ತು ಚರ್ಚೆ ನಡೆಸಿದರೂ ಯಾವುದೂ ತೀರ್ಮಾನವಾಗದೆ ಕೊನೆಗೆ,
'ನೀವೇ ಹೇಳಿ' ಎಂದರು ನನಗೆ.
'ನಾವು, ನಮ್ಮ ಶಾಲೆ ಮತ್ತು ನಾಟಕವನ್ನು ಮುಂದುವರಿಸಬೇಕೇ ಬೇಡವೇ?" ಎಂದೆ.
'ಶಾಲೆ ಬೇಕೇ ಬೇಕು' ಎಲ್ಲರೂ ಎಂದರು.
'ಮತ್ತೆ ನಾಟಕ?"
'ಅದೂ ಬೇಕು'
'ಹಾಗಾದರೆ ನಾವು ಕಳೆದ ವರ್ಷದಂತೆ ಯಾವಾಗಲೂ ಕಂಬಳಿ ಬೆಡ್‌ಶೀಟ್ ಕಟ್ಟಿ ನಾಟಕ ಮಾಡಲಾಗುವುದಿಲ್ಲ. ಕಳೆದ ಸಾರಿ ಜನ ಇವರೇನು ಮಾಡುತ್ತಾರೆ ನೋಡೋಣ" ಎಂಬ ಕುತೂಹಲದಿಂದ ಬಂದಿದ್ದಾರೆ. ಇನ್ನು ಮುಂದೆ ನಾವು ಇನ್ನೂ ಚೆನ್ನಾಗಿ ಮಾಡಬೇಕಾದರೆ ನಮಗೆ ಒಂದಷ್ಟು ಸಾಮಗ್ರಿ ಬೇಕು. ಅದನ್ನು ಕೊಳ್ಳೋಣ, ಉಳಿದ ಹಣವನ್ನು ಶಾಲೆಯ ಲೆಕ್ಕದಲ್ಲಿಡೋಣ" ಎಂದೆ.
ಆದರೆ ಚೌಡಿಪೂಜೆ ಮಾಡಲೇಬೇಕೆಂದೂ, ಚೌಡಿಯಿಂದಾಗಿ ಕಳ್ಳತನವಾಗದೆ ಉಳಿದಿದೆಯೆಂದೂ, ಕಳೆದ ಸಾರಿ ಬ್ಯಾರಿ ಚೌಡಿಪೂಜೆ ಮಾಡದಿದ್ದುರಿಂದ ಅವನಿಗೆ ಈ ರೀತಿ ತೊಂದರೆ ಕಾಣಿಸಿಕೊಂಡಿತೆಂದೂ ನಮ್ಮಲ್ಲೇ ಕೆಲವರು ಹೇಳತೊಡಗಿದರು! ಅವರ ಒತ್ತಾಯದಿಂದ ಪೂಜೆಗಾಗಿ ಸ್ವಲ್ಪ ಹಣ ಮೀಸಲಿಟ್ಟೆವು. ಆದರೆ ಈ ಹಣದಿಂದ ಕುರಿಕೋಳಿ ಇತ್ಯಾದಿ ಏನನ್ನೂ ತರಲು ಸಾಧ್ಯವಿಲ್ಲವೆಂದೂ, ಅದನ್ನು ಅವರವರೇ ತಂದುಕೊಳ್ಳಬೇಕೆಂದೂ ತೀರ್ಮಾನವಾಯ್ತು. ಸುಮಾರು ಒಂದೂವರೆ ಸಾವಿರ ರೂಪಾಯಿಗಳಿಗೆ ಮೂರು ಪರದೆಗಳು - ಒಂದೆರಡು ವಿಂಗ್‌ಗಳು - ಒಂದೆರಡು ಫ್ಲಡ್‌ಲೈಟ್‌ಗಳು, ಒಂದಷ್ಟು ಮೇಕಪ್ ಸಾಮಗ್ರಿ- ಇತ್ಯಾದಿಗಳನ್ನೆಲ್ಲ ತಂದೆವು. ಮರದ ಪೆಟ್ಟಿಗೆಗೆ ಲೆನ್ಸ್ ಕೂರಿಸಿ ಬೇಬಿಸ್ಪಾಟ್‌ಲೈಟಿನಂತೆ ಮಾಡಿಕೊಂಡೆವು. ಈ ಕೆಲಸಗಳನ್ನೆಲ್ಲ ಉಗ್ಗಪ್ಪ - ಗುಡ್ಡಪ್ಪ ಮಾಡಿದರು. ಪರದೆಗಳನ್ನು ತೋಟದಲ್ಲಿ ಮೇಸ್ತ್ರಿಯಾಗಿದ್ದ ಟೈಲರ್ ನಟರಾಜ ಮತ್ತು ಅವನಲ್ಲಿ ಹೊಲಿಗೆ ಕಲಿಯುತ್ತಿದ್ದ ನಮ್ಮ ತಂಡದ ವಿಶ್ವನಾಥ ಹೊಲಿದರು. ನಮ್ಮ ನಾಟಕಕ್ಕೆ ಒಂದಷ್ಟು ರಂಗಸಜ್ಜಿಕೆ ಸಿದ್ಧವಾದವು.

ಮಳೆಗಾಲ ಕಳೆದು ಚಳಿಗಾಲ ಬಂದಿತ್ತು. ಈ ಬಾರಿ ಹುಡುಗರು ತಾವಾಗಿಯೇ ಮತ್ತೆ ನಾಟಕವಾಡುವ ಉಮೇದಿನಲ್ಲಿದ್ದರು. ಈ ಬಾರಿ ನಾನೇ ನಾಟಕ ಬರೆಯುತ್ತೇನೆಂದು ಹುಡುಗರಿಗೆ ಹೇಳಿದೆ. ಬರಿಯ ಮನರಂಜನೆಯ ನಾಟಕ ಮಾಡಿಸಲು ನನಗೆ ಮನಸ್ಸಿರಲಿಲ್ಲ. ಹಾಗೆಂದು ಬೇರೆ ನಾಟಕಗಳನ್ನು  - ಅಂದರೆ ಸ್ವಲ್ಪ ಪ್ರಬುದ್ಧವಾದ ನಾಟಕಗಳನ್ನು ಆಡಿಸಲು ನಮ್ಮ ತಂಡ ಸಮರ್ಥವಿರಲಿಲ್ಲ. ಅಂದಿನ ರಾಜಕೀಯ ಘಟನೆಗಳನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಂಡು ನಮ್ಮ ತಂಡದವರಿಗೂ ಆ ವಿಚಾರಗಳು ಅರ್ಥವಾಗುವಂತೆ ನಾಟಕ ಮಾಡುವುದು ನನ್ನ ಉದ್ದೇಶವಾಗಿತ್ತು. ಆದ್ದರಿಂದ ನಮ್ಮ ತಂಡಕ್ಕಾಗಿಯೇ ಅಂದರೆ ಪ್ರತಿಯೊಬ್ಬನಿಗೂ ಹೊಂದುವಂತಹ ಪಾತ್ರವನ್ನು ಸೃಷ್ಟಿಮಾಡಿಕೊಳ್ಳುತ್ತಾ ನಾಟಕದ ಕಲ್ಪನೆ ಮಾಡಿಕೊಂಡೆ. ಅಂದಿನ ರಾಜಕೀಯ ಘಟನೆಗಳಿಂದ ನೇರವಾಗಿ ಎತ್ತಿಕೊಂಡ ವಿಷಯಗಳನ್ನಿಟ್ಟುಕೊಂಡು ಹಾಡು ಕುಣಿತಗಳೆಲ್ಲ ಇದ್ದ ನಾಟಕವೊಂದು ಸಿದ್ಧವಾಯಿತು. ಹುಡುಗರಿಗೆ ಕಥೆ ಹೇಳಿ ಅವರಿಂದಲೇ  ನಾಟಕ ಮಾಡಿಸಲು ಪ್ರಾರಂಭಿಸಿದೆ. ಒಂದು ತಿಂಗಳಲ್ಲಿ ನಾಟಕ ಒಂದು ರೂಪಕ್ಕೆ ಬಂತು. ನಂತರ ಸಂಭಾಷಣೆ ಬರೆದುಕೊಂಡು ಸ್ವಲ್ಪ ತಿದ್ದಿಕೊಂಡೆ.

ಹೀಗೆ ಹುಟ್ಟಿದ ನಾಟಕ 'ನಮ್ಮ ಎಲುಬುಗಳ ಮೇಲೆ' ಅಂದಿನ ರಾಜಕೀಯ ಘಟನೆಗಳೇ ಇದರ ವಸ್ತು. ಆ ವೇಳೆಗೆ ದಲಿತ ಸಂಘರ್ಷ ಸಮಿತಿ - ರಾಜ್ಯದಾದ್ಯಂತ ಸಂಘಟನೆಯಲ್ಲಿ ತೊಡಗಿತ್ತು. ಸಮುದಾಯದಂತಹ ಸಂಘಟನೆಗಳು ಚುರುಕಾಗಿದ್ದವು. ನಾವೂ ಈ ನಾಟಕದಲ್ಲಿ ಕವಿ ಸಿದ್ಧಲಿಂಗಯ್ಯನವರ ಒಂದೆರಡು ಹಾಡುಗಳನ್ನು ಬಳಸಿದೆವು.  ಈ ಸಂದರ್ಭದಲ್ಲಿ ಅಪ್ಪನ ಗೆಳೆಯರಾದ ಮಡಿಕೇರಿಯ  ಹೊಸೂರು ಗೋಪಾಲರಾಯರು ನಮ್ಮಲ್ಲಿಗೆ ಬಂದರು. ಅವರಾಗ ಬೆಳಗಾವಿಯಲ್ಲಿ ನೆಲೆಸಿದ್ದರು. ಅನೇಕ ವರ್ಷಗಳ ಬಳಿಕ ಗೆಳೆಯರಿಬ್ಬರೂ ಜೊತೆ ಸೇರಿದ್ದರು. ಗೋಪಾಲರಾಯರಿಗೆ ಸಂಗೀತದಲ್ಲಿ ಸಾಕಷ್ಟು ಪರಿಶ್ರಮವಿತ್ತು. ಅಪ್ಪನಿಗೂ ಕೊಳಲು ನುಡಿಸಲು ಬರುತ್ತಿತ್ತು. ಹೀಗಾಗಿ ಹಳೆಯ ನೆನಪುಗಳ ಜೊತೆ ಇವರ 'ಜುಗಲ್ ಬಂದಿ' ನಡೆಯಿತು. ನಮ್ಮಲ್ಲಿದ್ದ ಒಂದೆರಡು ದಿನಗಳಲ್ಲಿ ಗೋಪಾಲರಾಯರು ನಮ್ಮ ನಾಟಕದ ಹಾಡುಗಳಿಗೆ ಸಂಗೀತ ರಚನೆ ಮಾಡಿಕೊಟ್ಟರು. ಈ ಗೋಪಾಲರಾಯರು, ಇಂದು ಬೆಂಗಳೂರಿನಲ್ಲಿ ಸುಗಮ ಸಂಗೀತ ಕ್ಯಾಸೆಟ್ ವಲಯದಲ್ಲಿ ಹೆಸರಾಗುತ್ತಿರುವ ಗಿರಿಧರ ದಿವಾನ್ ಅವರ ಅಜ್ಜ. ಆ ವೇಳೆಗೆ ಸುಳ್ಯದ ಎನ್. ನಾರಾಯಣ ಭಟ್ ಕೂಡಾ ನಮ್ಮಲ್ಲಿಗೆ ಬರತೊಡಗಿದರು. ಅವರು ಕಾರ್ಮಿಕ ಸಂಘಟನೆಯಲ್ಲಿ ತುಂಬ ಅನುಭವವಿದ್ದವರು. ಸಿದ್ದಲಿಂಗಯ್ಯನವರ ಕವನಗಳನ್ನು ತುಳು ಭಾಷೆಗೆ ಅನುವಾದಿಸಿದ್ದರು. ಅವರು ಸಿ.ಪಿ.ಎಂ ಪಕ್ಷದ ಕಾರ್ಯಕರ್ತರಾಗಿಯೂ ಕೆಲಸ ಮಾಡಿದ್ದರು. ನಾನು ಅವರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮುದಾಯ ಜಾಥಾವೊಂದರಲ್ಲಿ ಭಾಗವಹಿಸಿದ್ದೆನಲ್ಲದೆ ಅವರಲ್ಲಿ ಆಗಾಗ ಹೋಗಿ ಬರುತ್ತಿದ್ದೆ. ಅವರು ನಮಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದರಲ್ಲದೆ ನಮ್ಮ ಗುಂಪಿನೊಡನೆ ಆತ್ಮೀಯ ಸಂಬಂಧವನ್ನೂ ಬೆಳೆಸಿಕೊಂಡರು. ಆಗಾಗ್ಗೆ ನಮ್ಮ ಕಾರ್ಯಕ್ರಮಗಳಿಗೆ ಬರತೊಡಗಿದರು. ಅವರಿಂದ ಅನೇಕ ರಾಜಕೀಯ ವಿಚಾರಗಳು ನಮ್ಮವರಿಗೆ ಮನದಟ್ಟಾಗತೊಡಗಿದವು. ಅವರು ನಮ್ಮ ಈ "ನಮ್ಮ ಎಲುಬುಗಳ ಮೇಲೆ " ನಾಟಕವನ್ನು ಸುಳ್ಯದ ತಂಡವೊಂದಕ್ಕೆ ಮಾಡಿಸಿದರು. ಅಲ್ಲಿಯೂ ಈ ನಾಟಕದ ಒಂದೆರಡು ಪ್ರದರ್ಶನಗಳಾದವು.    ಮುಂದೆ ನಮ್ಮಲ್ಲಿ ರೈತಸಂಘಟನೆ ಹುಟ್ಟಿ, ಸಾಕಷ್ಟು ಪ್ರಬಲವಾಗಿ ಬೆಳೆದು ನಿಧಾನವಾಗಿ ದುರ್ಬಲವಾಗುತ್ತ, ನಾಮಾವಶೇಷ ಎನ್ನುವ ಸ್ಥಿತಿ ತಲುಪುವವರೆಗೂ ನಾಲ್ಕೈದು ವರ್ಷಗಳ ಕಾಲ, ನಾಟಕವನ್ನು ಅಲ್ಲಲ್ಲಿ ಆಡುತ್ತಿದ್ದೆವು.

ನಮ್ಮ ಹುಡುಗರೆಲ್ಲ ತುಳು ಭಾಷೆಯನ್ನೂ ಬಲ್ಲವರಾಗಿದ್ದರು. ಕಾಫಿ ಎಸ್ಟೇಟಿನಲ್ಲಿ ಕನ್ನಡ , ತುಳು, ತಮಿಳು, ಮಲಯಾಳಿ ಹೀಗೇ ಸಾಮಾನ್ಯ ಎಲ್ಲಾ ಭಾಷೆ ಮಾತಾಡುವ ಕೆಲಸಗಾರರಿರುವುದರಿಂದ ಮತ್ತು  ಎಲ್ಲರೂ 'ಲೈನು' ಗಳೆಂದು ಕರೆಯುವ ಸಾಲು ಮನೆಗಳಲ್ಲಿ ಅಕ್ಕ ಪಕ್ಕದಲ್ಲೇ ವಾಸ ಮಾಡುವುದರಿಂದ ಕಾಫಿ ತೋಟಗಳಲ್ಲಿ, ಕೆಲಸಗಾರರಿಂದ ಹಿಡಿದು ಮೇಸ್ತ್ರಿ-ರೈಟರ್-ಮೇನೇಜರ್-ಮಾಲೀಕರವರೆಗೆ ಎಲ್ಲರೂ ಎರಡು -ಮೂರು ಭಾಷೆ ಮಾತಾಡಬಲ್ಲವರಾಗಿರುತ್ತಾರೆ. ಈ ಅನುಕೂಲವಿದ್ದುದರಿಂದ ನಾವು ನಮ್ಮ ಈ ನಾಟಕವನ್ನು ಸಂದರ್ಭಕ್ಕೆ ತಕ್ಕಂತೆ - ಕನ್ನಡ - ತುಳು ಎರಡೂ ಭಾಷೆಗಳಲ್ಲಿ ಆಡುತ್ತಿದ್ದೆವು. ಈ ನಾಟಕಕ್ಕೆ ಹಾರ್ಲೆ ರಾಜಣ್ಣ ಎನ್ನುವವರೊಬ್ಬರು ಸಂಗೀತ ನೀಡಿದರು. ಇವರು ತಬಲಾ-ಹಾರ್ಮೋನಿಯಂ ಎರಡನ್ನೂ ನುಡಿಸುತ್ತಿದ್ದುದಲ್ಲದೆ ಕೆಲವೊಮ್ಮೆ ಬೇರೆ ಕಡೆ ಹರಿಕಥೆಗಳಿಗೂ ಪಕ್ಕ ವಾದ್ಯಕ್ಕೆ ಹೋಗುತ್ತಿದ್ದರು. ಇವರು ನಂತರವೂ ನಮ್ಮ ಕೆಲವು ನಾಟಕಗಳಿಗೆ ಸಂಗೀತ ನೀಡಿದರು. ಇವೆಲ್ಲ ಆದದ್ದು ೧೯೭೯-೮೦ ರಲ್ಲಿ. ಆ ನಂತರವೂ ನಾವು ಒಂದೆರಡು ಸಾರಿ ಕಿತ್ತಲೆ ಫಸಲನ್ನು ಗುತ್ತಿಗೆಗೆ ಮಾಡಿಕೊಂಡಿದ್ದೆವಾದರೂ ಹವಾಮಾನ ವೈಪರೀತ್ಯ, ಬೆಲೆ ಏರಿಳಿತ ಮುಂತಾದ ಕಾರಣಗಳಿಂದ ನಮಗೆ ಹೆಚ್ಚಿನ ಲಾಭವಾಗಲಿಲ್ಲ. ಮುಂದೆ ಕಿತ್ತಲೆಗೆ ಬಂದ ರೋಗಗಳಿಂದಾಗಿ ಕಾಫೀ ತೋಟಗಳಲ್ಲಿ ಕಿತ್ತಲೆ ಬೆಳೆ ನಾಶವಾಗುತ್ತಹೋಯಿತು. ಆದರೆ ಅಂದು ನಾವು ಸಿದ್ದಪಡಿಸಿಕೊಂಡ ರಂಗಪರಿಕರಗಳಲ್ಲಿ ಕೆಲವು ನಮ್ಮಲ್ಲಿ ಈಗಲೂ ಇವೆ.

0 comments:

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP