ನೇರಳೆ ನಾಲಗೆ-ಟಿಪ್ಪಣಿ
(ಈ ಟಿಪ್ಪಣಿಯ ಕೆಳಗಿನ ಬರೆಹ ಓದಿ ಮೇಲೆ ಬನ್ನಿ !)
ಸುಂದರ ಎಲ್ಲಿದ್ದಾನೋ ಗೊತ್ತಿಲ್ಲ. ಆತನ ಸಹಚರರು ಕೆಲವರು ಕೂಲಿ ಕೆಲಸಕ್ಕೆ ಹೋಗುತ್ತಾರೆ. ನಾಗೇಶನ ಕುಟುಂಬ ಊರು ಬಿಟ್ಟಿದೆ. ಜಗಳವಾಡಿದ ಹನೀಫ್ ಆಟೊರಿಕ್ಷಾದಲ್ಲಿ ಮೀನು ವ್ಯಾಪಾರ ಮಾಡುತ್ತಾನೆ . ಊರಿಗೆ ಹೋದಾಗಲೆಲ್ಲ ಎಲ್ಲೇ ಸಿಕ್ಕಿದರೂ ಕರೆದು, ನಿಂತು ಮಾತಾಡುತ್ತಾನೆ. ನಾವು ಸಿಹಿ ನೀರು ಸೇದಿ ಸೇದಿ ಗಿಡಗಳಿಗೆ ಸುರಿಯುತ್ತಿದ್ದ ಶಾಲೆಯ ಎದುರಿದ್ದ ಬಾವಿ ಈಗ ಪಾಳುಬಿದ್ದಿದೆ. ಊರಿನ ಜನರೆಲ್ಲರ ಶ್ರಮದಾನದಿಂದ ದೊಡ್ಡದಾಗಿದ್ದ ಆಟದ ಬಯಲು ಎಲ್ಲೆಡೆ ಒತ್ತುವರಿಯಾಗಿ ಸಣ್ಣದಾಗಿದೆ. ಹೂವಿನ ತೋಟ ಎಂಬುದು ಕಣ್ಣಿಗೇ ಕಾಣುತ್ತಿಲ್ಲ. ಸ್ವಾತಂತ್ರ್ಯೋತ್ಸವದಂದು ಹತ್ತು ಜನ ಊರವರೂ ಬರುವುದಿಲ್ಲ. ಆ ಹೆಡ್‌ಮಾಷ್ಟ್ರು ಉದ್ದನೆಯ ಏಣಿ ಹತ್ತಿ ಗೋಡೆಯ ಮೇಲ್ಭಾಗದಲ್ಲಿ ದುಂಡು ಅಕ್ಷರಗಳಲ್ಲಿ ದೊಡ್ಡದಾಗಿ 'ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ದೇರಾಜೆ ' ಅಂತ ಬರೆದರು. ಏನೇನೋ ಮಾಡಿ ಶಾಲೆಗೆ ಕಾಂಪೌಂಡ್, ಕರೆಂಟು, ಟ್ಯಾಂಕಿ, ಗೇಟು ಮಾಡಿಸಿದರು. `ಈಗ ಮಕ್ಕಳೂ ಇಲ್ಲ, ಈಗಿನ ಹೆಡ್‌ಮಾಷ್ಟ್ರೂ ಟೈಮಿಗೆ ಸರಿಯಾಗಿ ಬರುವುದಿಲ್ಲ ' ಅಂತಾರೆ ಹತ್ತಿರದ ಮನೆಯವರು.
ಮೊನ್ನೆ ಮೊನ್ನೆ ಆ ಶಾಲೆಗೆ ಹೋದಾಗ , ಬಣ್ಣಬಣ್ಣದ ಚಿತ್ರಗಳಿದ್ದ ಆ ದೊಡ್ಡ ಮರದ ಮಂಟಪ ಕಾಣಲಿಲ್ಲ. ಅದು ಅಜ್ಜ ಶಾಲೆಗೆ ಮಾಡಿಸಿ ಕೊಟ್ಟದ್ದು ಅನ್ನುವ ಹೆಮ್ಮೆಯೂ ಒಳಗಿತ್ತು , ಪ್ರಶ್ನಿಸಿದೆ. 'ಅದು ಗೆದ್ದಲು ತಿಂದು ಹೋಗಿ ಕೆಲವು ವರ್ಷಗಳೇ ಆಯ್ತು ' ಎಂದರು ಮುಖ್ಯೋಪಾಧ್ಯಾಯರು. 'ಈಗ ಶನಿವಾರದ ಭಜನೆಯೂ ಇಲ್ಲ .ಕೋಮು ಸಾಮರಸ್ಯ-ಸಮಾನ ಅವಕಾಶ-ಜಾತ್ಯತೀತತೆ-ಪ್ರಜಾಪ್ರಭುತ್ವ ಅಲ್ವಾ?! ಇನ್ನು ಬಿಜೆಪಿ ಗವರ್‍ನ್‌ಮೆಂಟಿನವರು ಭಜನೆ ಶುರು ಮಾಡ್ಬೇಕು ಅಂತ ಹೇಳ್ತಾರೋ ಗೊತ್ತಿಲ್ಲ' ಅಂದು ನಕ್ಕರು . 'ಬರೀ ಹೊಲೆಯರ ಮಕ್ಕಳೇ ಈಗ ಇಲ್ಲಿಗೆ ಬರೋದು. ಮಧ್ಯಾಹ್ನ ಊಟ ಫ್ರೀ ಅಲ್ವಾ? ಎಷ್ಟು ಹೇಳ್ಕೊಟ್ರೂ ಅವ್ರಿಗೆ ಬರೋದಿಲ್ಲ. ಬೇರೆಯವರೆಲ್ಲಾ ಮಕ್ಕಳನ್ನು ಸುಳ್ಯ, ಪುತ್ತೂರು ಇಂಗ್ಲಿಷ್ ಮೀಡಿಯಮ್ ಶಾಲೆಗಳಿಗೆ ಕಳಿಸ್ತಾರೆ. ಬೆಂಗ್ಳೂರಲ್ಲೆಲ್ಲ ಈಗ ಬರೀ ಇಂಗ್ಲಿಷ್ ಅಲ್ವಾ? ಆದರೆ ಬೆಂಗಳೂರಿನ ಮಕ್ಕಳ ಥರಾ ನಮ್ಮವ್ರಿಲ್ಲ ಬಿಡಿ. ಇವರು ಬಹಳ ಪಾಪ. ಅಲ್ಲಿಯವ್ರು ನಾಲ್ಕನೇ ಕ್ಲಾಸಿಗೇ ಭಯಂಕರ ತಿಳ್ಕೊಂಡಿರ್‍ತಾರೆ ' ಎಂದರು ! 'ನಾವಿನ್ನು ಬೆಂಗಳೂರಿಗೆ ಬಂದ್ರೂ ಏನೂ ಮಾಡ್ಲಿಕ್ಕೆ ಸಾಧ್ಯ ಇಲ್ಲ 'ಅಂತಂದು ತಮ್ಮ ಆಸೆ- ಪಾಡನ್ನೂ ಸೂಚಿಸಿದವರಂತೆ ವರ್ತಿಸಿದರು.
ಇದು ಯಾಕೆ, ಹೇಗೆ , ಏನು ಅಂತೆಲ್ಲ ಕೇಳೋಣ ಎಂದರೆ ನನ್ನನ್ನು ಶಾಲೆಗೆ ಸೇರಿಸಿದ ಅಪ್ಪನೂ ಈಗ ಇಲ್ಲ. ನನ್ನ ಮಗರಾಯನೂ ಆ ಶಾಲೆಗೆ ಹೋಗುವುದಿಲ್ಲ. ಆದರೆ ಆತ ನೇರಳೆ ಹಣ್ಣು ತಿಂದು ಕಡು ನೀಲಿ ನಾಲಗೆ ಮಾಡಿಕೊಂಡರೆ ಮಾತ್ರ ಒಂದೊಂದು ದೃಶ್ಯವೂ ಕಣ್ಣೆದುರು ಬರುತ್ತದೆ.
1 comments:
hosathana kanistide... i liked...
Post a Comment