ನೇರಳೆ ನಾಲಗೆಯ ರುಚಿ
ಆ ಬೈಗುಳ ಬರುವವರೆಗೆ ಅವರಿಬ್ಬರ ಜಗಳ ಬಹಳ ಜೋರಾಗೇನೂ ಇರಲಿಲ್ಲ. ಆಗ ಬಂತು ಆ ಮಾತು- `ನಿನ್ನ ಅಪ್ಪ ಮೂರ್ತಿ, ಕಲ್ಲಿನ ಮೂರ್ತಿ. ಜೀವ ಇಲ್ಲದವ '. ಆ ಕ್ಷಣ ನರನರಗಳೆಲ್ಲ ಸೆಟೆಸೆಟೆದು, ಕಣ್ಣುಗಳು ಅಷ್ಟಗಲ ತೆರೆಯಲ್ಪಟ್ಟು, ಮುಖ ಕೆಂಪಾಗಿ, ಕೈಗಳು ಬಿಗಿದು, ರೋಷಾವೇಶ ಮೇರೆ ಮೀರಿ, ಮಾರಾಮಾರಿ. ಅವನ ಕುರುಚಲು ಕೂದಲು ಇವನ ಕೈಗೆ ಸಿಗುತ್ತಿರಲಿಲ್ಲ. ಆದರೂ ತಲೆ ಒತ್ತಿ ಹಿಡಿದು ಬೆನ್ನು ಬಗ್ಗಿಸಿ ತರಿಕಿಟ ತರಿಕಿಟ ಥಳಾಂಗು ಥೈ ಥೈ ! ಒಬ್ಬ ಮುಸ್ಲಿಂ, ಇನ್ನೊಬ್ಬ ಬ್ರಾಹ್ಮಣ ಎಂಬ ವಿವರಕ್ಕೆ ಆಗ ಏನೇನೂ ಮಹತ್ವ ಇದ್ದದ್ದಿಲ್ಲ. ನಾಲ್ಕನೇ ಕ್ಲಾಸಿನ ಮರದ ಬೆಂಚಿನಲ್ಲಿ ಅಕ್ಕಪಕ್ಕ ಕುಳಿತ ಇಬ್ಬರ ಕಾಳಗಕ್ಕೆ ತರಗತಿ ಪೂರ್ತಿ ಬಿಡುಗಣ್ಣಾಗಿತ್ತು. ಹಿಂದುಮುಂದಿನ ಬೆಂಚಿನ ಹುಡುಗರು ಸುತ್ತ ನೆರೆದು, ಏನೋ ಸ್ಪರ್ಧೆಯನ್ನು ಹುರಿದುಂಬಿಸುವವರಂತೆ ಶಬ್ದಗಳ ಅಲೆ ಹೆಚ್ಚಿಸುತ್ತಿದ್ದರು. ಅವನ ಹೆಸರು ಸರಿಯಾಗಿ ನೆನಪಿದೆ-ಸುಂದರ. ಕಪ್ಪಗೆ ಸೊಟ್ಟಗೆ ಇದ್ದ ಹುಡುಗ. ನಾಲ್ಕನೇ ಕ್ಲಾಸಿಗೆ ಬರುವಾಗ ಪ್ರತಿದಿನ ಮೂವತ್ತು ಐವತ್ತು ರೂಪಾಯಿ ತರುತ್ತಿದ್ದ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ- ಕೂಲಿಕಾರನ ಮಗ, ಒಂದು ಫರ್ಲಾಂಗು ದೂರದ ಮನೆಯಿಂದ ತೋಟಗದ್ದೆಯಲ್ಲಿ ನಡೆದು ಬರುವವನು, ಅಷ್ಟೊಂದು ದುಡ್ಡು ತರುತ್ತಾನೆಂದರೆ ಅದು ಖಳನಾಯಕನ ಲಕ್ಷಣ ಅಲ್ವಾ? ನಾಲ್ಕನೇ ಕ್ಲಾಸಲ್ಲಿ ಅವನದ್ದು ಎರಡನೇ ವರ್ಷ. ಅವನ ಜತೆಗಾರ ಇನ್ನೊಬ್ಬ ರಾಘವ , ಉಬ್ಬು ಹಲ್ಲಿನವ. ಆಹಾ, ಎಷ್ಟು ಚೆಂದದ ದೇವರ ಹೆಸರು. ಏಳುವಾಗ ಮಾತ್ರ ನಾಗೇಶ ಹರಿಸಿದ ದೃಷ್ಟಿಗೆ ದೇವಾನುದೇವತೆಗಳೂ ಬೂದಿಯಾದರು. (ಈ ಬರಹದ ಟಿಪ್ಪಣಿ ಮುಂದಿನ ಪೋಸ್ಟ್‌ನಲ್ಲಿ.)
ಮೂಸೆ ಬ್ಯಾರಿಯ ಅಂಗಡಿಯಲ್ಲಿ ಚಾ ಕುಡಿಯಲು ಹೋಗಿದ್ದ ಏಕಮೇವ ಮೇಷ್ಟ್ರು ಅದೆಲ್ಲಿದ್ದರೋ ಏನೋ...ಬಿರುಗಾಳಿಯಂತೆ ಒಳನುಗ್ಗಿ , ಕಾಳಗವನ್ನು ಆಸ್ವಾದಿಸುತ್ತಿದ್ದ ಒಬ್ಬನ ಬೆನ್ನ ಮೇಲೆ ಮನಸೋಇಚ್ಚೆ ತಮ್ಮ ಕೈ ಹರಿಯಬಿಟ್ಟರು. ಡಬ್ ಡಬ್ ಡಬ್ ಡಬ್. ಅದು ಎದೆಬಡಿತವೋ ಮೇಷ್ಟ್ರ ಪೆಟ್ಟಿನ ಸದ್ದೋ ಅಂತ ತಿಳಿದುಕೊಳ್ಳಲು ಪೂರ್ತಿ ತರಗತಿಗೆ, ಸುದೀರ್ಘ ಹತ್ತು ನಿಮಿಷಗಳು ಬೇಕಾದವು !
ಜಗಳವಾಡಿದ ಇಬ್ಬರಿಗೆ ಹೊಡೆಯದೆ, ಜಗಳ ನೋಡುತ್ತಿದ್ದ ತನಗೆ ಬಾರಿಸಿದ ಮೇಷ್ಟ್ರ ಬಗ್ಗೆ ನಾಗೇಶನಿಗೆ ಸಹಿಸಲಾರದ ಧಗೆ. ಒಟ್ಟಾರೆ ಶಾಲೆಗೆ ಏನಾದರೂ ಕಂಟಕ ತಂದಿಡಬೇಕು ಎಂಬ ಯೋಚನೆ. ಗೆಳೆಯರಾದ ಸುಂದರ, ರಾಘವ, ಮತ್ತಿಬ್ಬರು ನಾಗೇಶನ ಜತೆ ಸೇರಿ ಭಾರೀ ಸ್ಕೆಚ್ ಸಿದ್ಧವಾಗತೊಡಗಿತು. ಇವರಲ್ಲಿ ಒಬ್ಬೊಬ್ಬರೂ ಅತಿರಥ ಮಹಾರಥರೇ. ತನ್ನ ಕ್ಲಾಸ್‌ನಲ್ಲಿರುವ, ಮಾಷ್ಟ್ರ ಮಗಳ ಮೇಲೆ ನಾಗೇಶನಿಗೆ ಕಣ್ಣು . ತರಗತಿಯ ಹುಡುಗರಲ್ಲಿ ಅವನು ದ್ವಿತೀಯ ಸ್ಥಾನ ಪಡೆದರೆ, ಹುಡುಗಿಯರಲ್ಲಿ ಆಕೆಗೆ ದ್ವಿತೀಯ ಸ್ಥಾನ . ಮಧ್ಯಾಹ್ನ ಮಾಷ್ಟ್ರು ಮತ್ತು ಮಗಳು ಬೈಕ್‌ನಲ್ಲಿ ಊಟಕ್ಕೆ ಹೋದಾಗ, ಆಫೀಸ್ ರೂಂಗೆ ನುಗ್ಗಿ ,ಆಕೆಯ ಸ್ಕೂಲ್ ಬ್ಯಾಗ್‌ನ ಮೇಲೆ ಮಲಗಿ ತೀಟೆ ತೀರಿಸಿಕೊಂಡು ಬರುತ್ತಿದ್ದ ಈ ನಾಲ್ಕನೇ ಕ್ಲಾಸಿನ ಹುಡುಗ . ಮಂತ್ರಾಲೋಚನೆ ಆರಂಭವಾಯಿತು. ಮಾಷ್ಟ್ರು ಊಟಕ್ಕೆ ಹೋಗಿದ್ದಾಗ ಬೀರು ಮುರಿದು ದರೋಡ ಮಾಡೋಣವೇ? ರಾತ್ರಿ ಕಿಟಕಿ ಮುರಿದು (ಕಬ್ಬಿಣ ಕೊಯ್ಯುವ ಗರಗಸ ಒಬ್ಬನ ಮನೆಯಲ್ಲಿದೆ ಅಂತಾಯಿತು) ಒಳ ನುಗ್ಗಿ ಧ್ವಂಸ ಮಾಡೋಣವೇ? ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಓಡೋಣವೇ? ಕೊನೆಗೆ ಎಲ್ಲದರ ಸಾಧಕಬಾಧಕ, ಪರಿಣಾಮದ ತೀವ್ರತೆ ಅಳೆದು ನೋಡಿದಾಗ ಶಾಲೆ ಬಿಡುವ ಹೊತ್ತಾಯಿತು.
ಸುಮಾರು ಹನ್ನೆರಡು ವರ್ಷದ ಆ ಮಕ್ಕಳ ಮನೆಯಲ್ಲಿ ಟಿವಿ ಇರಲಿಲ್ಲ. ದಿನಪತ್ರಿಕೆ ಓದುತ್ತಿರಲಿಲ್ಲ. ದೊಡ್ಡ ಪಟ್ಟಣಗಳ ಗಂಧಗಾಳಿಗೆ ಸಿಕ್ಕಿರಲಿಲ್ಲ. ಸಿನಿಮಾ ನೋಡುವವರೂ ಅಲ್ಲ. ಆದರೆ ದ್ವೇಷಾಗ್ನಿಯ ಇಂಧನ ಎಲ್ಲೆಡೆ ಯಾವಾಗಲೂ ಲಭ್ಯವಿದೆಯೇನೋ. ಷಡ್ಯಂತ್ರದಲ್ಲಿ ಯಶಸ್ಸು ಸಾಧಿಸುವುದು ಬೇರೆ, ಆದರೆ ಸಂಚು ರೂಪಿಸುವುದಕ್ಕೆ ಮನಸ್ಸಿಗೆ ಅಭ್ಯಾಸ ಬೇಕೇನು ? ಗುಡ್ಡದಲ್ಲಿ ನೇರಳೆ ಹಣ್ಣುಗಳನ್ನು ತಿಂದು, ಹಲ್ಲು ನಾಲಗೆಯೆಲ್ಲ ಕಡು ನೀಲಿ ಮಾಡಿಕೊಂಡ ಹುಡುಗರ ಗುಂಪು, ನಸುಬೆಳಕಿರುವ ಅದೇ ಸಾಯಂಕಾಲ ನಿರ್ಜನ ಶಾಲೆಗೆ ಲಗ್ಗೆ ಇಟ್ಟಿತು. ಛಾವಣಿಯ ಮೂವತ್ತು ನಲವತ್ತು ಹೆಂಚುಗಳು ಪುಡಿಯಾದವು. ಆವರಣದ ಹೂವಿನ ಗಿಡಗಳನ್ನೆಲ್ಲ ಕಿತ್ತೆಸೆಯಲಾಯಿತು. ಗೇಟಿನಲ್ಲಿ ಕಮಾನು ಮಾಡುವುದಕ್ಕೆಂದು ಇಟ್ಟಿದ್ದ ಕಬ್ಬಿಣದ ಉದ್ದನೆಯ ಸರಳೊಂದನ್ನು ಎಳಕೊಂಡು ಹೋಗಿ ಶಾಲೆಯ ಬಾವಿಗೆ ಒಗೆಯಲಾಯಿತು. ಸದ್ಯಕ್ಕೆ ಇಷ್ಟು ಸಾಕು. ಫಿನಿಷ್.
ಮರುದಿನ ಬೆಳಗ್ಗೆ ....ಮಾಷ್ಟ್ರು ಗರಂ ಆಗಿದ್ದರು. ಅವರ ಕಣ್ಣುಗಳ ಬಿಸಿ ಎಂಥವನನ್ನಾದರೂ ತಾಕುವಂತಿತ್ತು. ಆದರೆ ಯಾರು, ಯಾವಾಗ, ಯಾಕಾಯಿತು ಎನ್ನುವುದಕ್ಕೆ ಅವರಲ್ಲಿ ಉತ್ತರವಿರಲಿಲ್ಲ. ಉದ್ದನೆಯ ಜಗಲಿಯಲ್ಲಿ ಶತಪಥ ಹಾಕುತ್ತಿದ್ದರು. ಆಗಾಗ ತರಗತಿಗಳ ಕಡೆಗೆ ಚೂಪು ನೋಟ ಬೀರುತ್ತಿದ್ದರು. ತಮ್ಮ ಕನ್ನಡಕವನ್ನು ನಿಮಿಷಕ್ಕೆ ನಾಲ್ಕು ಬಾರಿ ಕರ್ಚೀಫಿನಲ್ಲಿ ಒರೆಸಿಕೊಳ್ಳುತ್ತಿದ್ದರು. ಚಹಾ ಕುಡಿಯಲೂ ಹೋಗಲಿಲ್ಲ.ಯಾವ ತರಗತಿಗೂ ಪಾಠ ಮಾಡಲಿಲ್ಲ !
ಮಧ್ಯಾಹ್ನ ೧೨ರ ಸುಮಾರಿಗೆ ಮೂಸೆ ಬ್ಯಾರಿಯ ಅಂಗಡಿಯಿಂದ ಬರುತ್ತಿರುವ ಮೇಷ್ಟ್ರು ,ಬೆತ್ತವೊಂದರ ಸಿಪ್ಪೆ ತೆಗೆದು ಹದ ಮಾಡಿಕೊಳ್ಳುತ್ತಿರುವುದನ್ನು ನೋಡಿದ ಸುಂದರನ ಗುಂಪಿಗೆ ಒಳಗೊಳಗೆ ಅಳುಕು. ಹೆಡ್‌ಮಾಸ್ಟ್ರ ಕೋಣೆಯ ಬೆಲ್ ಟಿರಿಂಗುಟ್ಟಿತು. `ಸುಂದರ, ರಾಘವ ಹೆಡ್‌ಮಾಸ್ಟ್ರ ಕೋಣೆಗೆ ಹೋಗಬೇಕಂತೆ 'ಎಂಬ ಆದೇಶವನ್ನು ಕ್ಲಾಸ್ ಲೀಡರ್ ತಂದಿತ್ತ. ಸಿಂಹದ ಗವಿಯ ಬಾಗಿಲಿಗೆ ಮಿಕಗಳು ಬಂದದ್ದೇ ತಡ, ಅವರ ಕಾಲು ಕೈ ಸೊಂಟ ಬೆನ್ನುಗಳ ಮೇಲೆಲ್ಲ ಮೇಷ್ಟ್ರ ಬೆತ್ತದ ಡಿಸ್ಕೊ ಶುರುವಾಯಿತು. ಛಟ್ ಛಟ್ ಛಟೀರ್ ಎಂಬ ಸದ್ದಿಗೆ, ಬೆತ್ತ ಬೀಸುವಾಗ ಕೇಳುವ ಸುಂಯ್ ಸುಂಯ್ ಸದ್ದಿಗೆ, ಸುಂದರ-ರಾಘವರ ಆರ್ತನಾದಕ್ಕೆ, ಬಡಬಡಿಸುವ ಮಾಷ್ಟ್ರ ಸ್ವರಕ್ಕೆ , ಶಾಲೆಯ ನಾಲ್ಕೂ ತರಗತಿಗಳು ಭಯಾನಕ ಮೌನದಲ್ಲಿ ಕರಗಿಹೋದವು. `ಇನ್ನೂ ಯಾರೆಲ್ಲಾ ನಿಮ್ ಜತೆ ಇದ್ರು? ಹೇಳಿ ಹೇಳಿ. ಗ್ಯಾಂಗನ್ನೆಲ್ಲಾ ಕರ್‍ಕೊಳ್ಳಿ. ಹೋಗಿ ಆ ಕಬ್ಬಿಣದ ಸರಳನ್ನು ಹುಡುಕಿ ತನ್ನಿ . ಅದು ತರುವವರೆಗೆ ಶಾಲೆಗೆ ಬರಬಾರದು. ಹೋಗಿ ನಡೀರಿ'.
ಅಂಗಳಕ್ಕೆ ಬಂದ `ಛೋಟಾ ರಾಜನ್ ' ಗುಂಪು ಮತ್ತೆ ಆರ್ದ್ರ ದೃಷ್ಟಿಯಿಂದ ಗುರುಗಳತ್ತ ನೋಡಿತು. ಹುಡುಗರ ಕಣ್ರೆಪ್ಪೆಗಳು ಬಾಡಿ ಹೋಗಿದ್ದವು. ಕೊರಳು-ಕಂಠ ಬಲ ಕಳಕೊಂಡಿದ್ದವು. ಶಾಲೆಯ ಎದುರಿನ ಬಯಲಿನಲ್ಲೇ ಇರುವ ಆಳದ ಬಾವಿಯಿಂದ ಸರಳನ್ನು ಮೇಲಕ್ಕೆತ್ತುವುದಾದರೂ ಹೇಗೆ ? ಹುಡುಗರ ಗುಂಪು ಮಣ್ಣು ರಸ್ತೆಯಲ್ಲಿ ಒಂದೆರಡು ಕಿಮೀ ಹೋಗಿ ಗುಡ್ಡೆ ಹತ್ತಿ ನೇರಳೆ ಹಣ್ಣುಗಳನ್ನು ತಿಂದಾಯಿತು. ಇನ್ನೇನು ಮಾಡುವುದು? ನಾಳೆಯೂ ಮೇಷ್ಟ್ರು ಶಾಲೆಯೊಳಗೆ ಬಿಡದಿದ್ದರೆ ಮನೆಯಲ್ಲಿ ಏನೆಂದು ಹೇಳುವುದು? ಗಂಟೆ ಎರಡಾಯಿತು, ಮೂರಾಯಿತು, ಶಾಲೆ ಬಿಡುವ ಹೊತ್ತು ಹತ್ತಿರವಾಗತೊಡಗಿತು. ಅರ್ಧ ಗಂಟೆಯಲ್ಲಿ ಮಕ್ಕಳು ಬಂದು `ತಪ್ಪಾಯಿತು ಸಾರ್' ಅಂತ ಕಾಲಿಗೆ ಬೀಳುತ್ತಾರೆ ಎಂದೇನೋ ಅಂದುಕೊಂಡಿದ್ದ ಮೇಷ್ಟ್ರಿಗೆ ಈಗ ಮಾತ್ರ ಉದ್ವೇಗ ಹೆಚ್ಚಾಯಿತು. ಹೋದ ಮಕ್ಕಳ ಪತ್ತೆಯೇ ಇಲ್ಲ. ನಾಳೆ ಏನಾದರೂ ಹೆಚ್ಚುಕಡಿಮೆಯಾಗಿ ಅಪ್ಪಅಮ್ಮಂದಿರು ಬಂದು ಕೇಳಿದರೆ ಏನು ಹೇಳುವುದು? ಮತ್ತಿಬ್ಬರು ಹುಡುಗರನ್ನು ಕರೆದು - ಸುಂದರ, ರಾಘವ, ನಾಗೇಶ, ರಮೇಶರ ಮನೆಗೆ ಹೋಗಿ, ಅವರನ್ನು ಕರಕೊಂಡು ಬನ್ನಿ ಎಂದರು. ಯಾವುದೋ ಕಾಡುಮೇಡಿನಲ್ಲಿದ್ದ ಅವರ ಮನೆಗಳಿಗೆ ಹೋದರೆ, `ಸುಂದರ ಇವತ್ತು ಮಧ್ಯಾಹ್ನ ಊಟಕ್ಕೆ ಬರಲೇ ಇಲ್ಲ, ರಮೇಶ ಈಗ ಬಂದು ಊಟ ಮಾಡಿಕೊಂಡು ಹೋದ ' ಹೀಗೆಲ್ಲ ದಿಕ್ಕು ತಪ್ಪಿಸುವ ಉತ್ತರಗಳೇ. ಹೀಗೆ ಎಲ್ಲೂ ಕಾಣಸಿಗದ ಆ ಹುಡುಗರ ಗುಂಪನ್ನು ಹುಡುಕಿ ಹುಡುಕಿ ಸುಸ್ತಾದ ಸಹಪಾಠಿಗಳಿಬ್ಬರು ಪರಮೇಶ್ವರ ಭಟ್ಟರ ತೋಟದೊಳಗಿನ ಕಾಲು ಹಾದಿಯಲ್ಲಿ ಶಾಲೆಗೆ ವಾಪಸಾಗುತ್ತಿದ್ದಾಗ ...
'ಅಕೋ, ಅಲ್ಲಿ ಓಡ್ತಿದಾರೆ . ಬಾ ಬಾ ಹಿಡಿಯುವ ,ಹಿಡಿಯುವ '. ಒಂದೇ ಒಟ. ಭಟ್ಟರ ದೊಡ್ಡ ಕೆರೆ ದಾಟಿ, ನೀರಿನ ಕಣಿಗಳನ್ನು ಹಾರಿ, ಬೇಲಿಯ ಬಳಿ ಹೋದರೆ, ನಿಂತಿದ್ದಾರೆ ಸೈಂಧವರು. ಗಿಡ್ಡ ನೀಲಿ ಚಡ್ಡಿ , ಮಣ್ಣಿನಲ್ಲಿ ಮುಳುಗಿ ಕೆಂಪಾದ ಬಿಳಿ ಅಂಗಿಯ ಆ ಪುಟಾಣಿಗಳು ಸಿನಿಮಾದ ಖಳನಾಯಕರ ಪಡೆಯಂತೆ. ಊದಿದ ಕಪೋಲಗಳಲ್ಲಿ ಬಿಸಿ ಬೆವರು, ತುಯ್ಯುತ್ತಿರುವ ಎದೆ ಹೊಟ್ಟೆ , ಕಂಪಿಸುತ್ತಿರುವ ಕಾಲುಗಳು, ಕೆದರಿದ ಕೂದಲು, ನೇ ...ರಳೆ ನಾಲಗೆ . `ಮೇಷ್ಟ್ರು ಕರೀತಿದ್ದಾರೆ, ಶಾಲೆಗೆ ಬರಬೇಕಂತೆ '. `ನಾವು ಬರುದಿಲ್ಲ'. `ಇಲ್ಲ ಬರಲೇಬೇಕಂತೆ '. `ಮೇಷ್ಟ್ರು ಹೊಡಿಯೋದಿಲ್ಲ ಅಂತ ಹೇಳಿದರೆ ಮಾತ್ರ ಬರ್‍ತೇವೆ '. `ಇಲ್ಲದಿದ್ದರೆ?'`ಇಲ್ಲದಿದ್ದರೆ... ಇದೇ ಕೆರೆಗೆ ಹಾರಿ ಸಾಯ್ತೇವೆ '. ಅಬ್ಬಾ ಎಂಥಾ ಘೋಷಣೆ !
ಅಂಗಡಿ ಬಳಿ ಮೂಸಾನನ್ನೇ ಕೆಕ್ಕರಿಸಿ ನೋಡುತ್ತಾ ನಿಂತಿರುವ ಹುಡುಗರನ್ನು , ಕ್ಲಾಸ್ ಲೀಡರ್ ಮತ್ತು ಇಬ್ಬರು ಹುಡುಗರು ಬಂದು ಕರೆದರು. ` ಮಾಷ್ಟ್ರು ಹೊಡಿಯುದಿಲ್ವಂತೆ. ಒಳಗೆ ಬರಬೇಕಂತೆ '. ಶಾಲೆಯ ದೊಡ್ಡ ಕೋಣೆಯ ಬದಿಯಲ್ಲಿರುವ ಭಜನಾ ಮಂಟಪದ ಬಾಗಿಲು ತೆಗೆದಿತ್ತು. ಎದುರು ಮುಖ್ಯೋಪಾಧ್ಯಾಯರು. ಅದರೊಳಗೆ ದೇವಾನುದೇವತೆಗಳ ಫೋಟೊಗಳು. ಪ್ರತಿ ಶನಿವಾರದ ಭಜನೆಯಂದು ಮಾತ್ರ ಅದರ ಬಾಗಿಲು ತೆಗೆಯಲಾಗುತ್ತಿತ್ತು. ಆದರೆ ಈಗ ವಿಶೇಷವಾಗಿ ಮಂಗಳವಾರವೂ ಬಾಗಿಲು ತೆರೆಯಲಾಗಿದೆ. `ಹೂಂ ಇಲ್ಲಿ ಬನ್ನಿ. ಅಡ್ಡ ಬೀಳಿ. ಮಾಡಿದ್ದು ತಪ್ಪಾಯಿತು, ಇನ್ನು ಯಾವತ್ತೂ ಇಂಥ ಕೆಲಸ ಮಾಡೋದಿಲ್ಲ ಅಂತ ಹೇಳಿ.' ಎಲ್ಲರೂ ಒಂಚೂರು ತುಟಿ ಕದಲಿಸಿ ನೀಟಂಪ ಅಡ್ಡಬಿದ್ದರು.
2 comments:
ಸದ್ದು ಗದ್ದಲವಿಲ್ಲದೆ ಬ್ಲಾಗಿಗೆ ಮತ್ತೆ ಬಂದು ಕುಳಿತವರಿಗೆ ಸ್ವಾಗತ! ಇನ್ಮೇಲೆ ನಿಮಗೆ ರಜೆ ನೀಡುವುದನ್ನು ನಿಷೇಧಿಸಲಾಗಿದೆ!
ಬರಹ ಚೆಂದ ಉಂಟು. ಟಿಪ್ಪಣಿಗೆ ಕಾದು ನೋಡುವೆ.
ಹಾಕಿರುವ ಫೋಟೋ ಹೊಂದಿಕೆಯಾಗದು. :-)
Post a Comment