ನಗುವ ಕಡಲೊಳು ತೇಲಿ ಬರುತಲಿದೆ ಒಡೆದ ಹಾಯಿ ದೋಣಿ
ಇದು ಕಾಸರವಳ್ಳಿ ಟಾಕೀಸ್. ಈ ಬಾರಿ ಇಲ್ಲಿ ಅರಳಿರುವ ಗುಲಾಬಿಗೆ ಅತ್ತರಿನ ವಾಸನೆಯೂ ಇದೆ, ನೆತ್ತರಿನ ವಾಸನೆಯೂ ಇದೆ. ಅವುಗಳ ಮಧ್ಯೆ ಅಂಬಿಗರು 'ಹುಟ್ಟು ಹಾಕುವ' ಪ್ರಶ್ನೆಗಳಲ್ಲಿ ಮತ್ಸ್ಯಗಂಧಿಯರೂ ಇದ್ದಾರೆ. ಹಳೆಯ ಚಿತ್ರಗಳಿಗಿಂತ ವೇಗವಾದ ಗತಿಯಿದೆ. ಪಾತ್ರಧಾರಿಗಳು-ಜನರ ನಡುವಿನ ಭೇದವೇ ಪ್ರೇಕ್ಷಕರಿಗೆ ತಿಳಿಯದಷ್ಟು ಹೊರಾಂಗಣದಲ್ಲಿ ದೃಶ್ಯಗಳು ತನ್ಮಯವಾಗಿವೆ.
***
ಒಂದೊಂದೂ ಬಣ್ಣದ ನೀರಿನಲ್ಲಿ ಅದ್ದಿ ತೆಗೆದು ಹೀಗೆ ತೋರಿಸುವುದು ಸುಲಭವಾಗಿದ್ದರೆ ಕನ್ನಡದ ಮತ್ತೊಬ್ಬ ನಿರ್ದೇಶಕನಾದರೂ ಅದನ್ನು ಮಾಡಬಹುದಾಗಿತ್ತು. ದರ್ಶನ್, ಗಣೇಶ್, ಉಪೇಂದ್ರ ಮತ್ತಿತರರ ಇಮೇಜ್‌ಗೆ ಸರಿಯಾಗಿ ಸಿನಿಮಾ ಮಾಡುವುದು ಹಲವು ನಿರ್ದೇಶಕರಿಗೆ ಗೊತ್ತು. ಆದರೆ ಕತೆಯ ಇಮೇಜ್‌ಗೆ ಸರಿಯಾಗಿ ಸಿನಿಮಾ ಮಾಡುವುದು ಗಿರೀಶ್ ಕಾಸರವಳ್ಳಿಯವರಿಗೆ ಗೊತ್ತು . 'ನೀವು ನೋಡಲಿ ಎಂದು ಸಿನಿಮಾ ಮಾಡುವುದಿಲ್ಲ, ಮಾಡುವುದು ಅನಿವಾರ್ಯ ಕರ್ಮ ಎನಗೆ '-ಎಂಬಂತಿರುತ್ತದೆ ಕಾಸರವಳ್ಳಿ ಧಾಟಿ ! ಆದರೆ ಅವರು ಹೋಗುತ್ತಾರೆ ಅದನ್ನು ದಾಟಿ.
*****
ವೈದೇಹಿಯವರ ಕತೆ ಆಧಾರಿತ 'ಗುಲಾಬಿ ಟಾಕೀಸ್' ಚಿತ್ರದಲ್ಲಿ ,ಅವರು ಸಿನಿಮಾ ಕಟ್ಟುವ ಒಳ ರಚನೆಯಲ್ಲೇನೂ ಹೆಚ್ಚು ಬದಲಾವಣೆಯಿಲ್ಲ. ಆದರೆ ಹೊರರೂಪ ಬಹಳ ಬದಲಾಗಿದೆ. ಮೊದಲನೆಯದ್ದು - ಲಗುಬಗೆಯ ನಡೆ. `ತಾಯಿಸಾಹೇಬ', `ನಾಯಿನೆರಳು' ಗಳಂತೆ ಇಲ್ಲಿ ನಿಧಾನ ಲಯ ಅಲ್ಲ. ಎರಡನೆಯದ್ದು -ಈ ಸಿನಿಮಾದ ಹೆಚ್ಚು ಭಾಗ ಹೊರಾಂಗಣದಲ್ಲಿ, ಜನಸಾಮಾನ್ಯರ ನಡುವೆ ನಡೆಯುತ್ತದೆ. ಯಾರು ಪಾತ್ರಧಾರಿಗಳು, ಯಾರು ಜನರು ಅಂತ ಪ್ರೇಕ್ಷಕರಿಗೇ ತಿಳಿಯದಷ್ಟು ಹೊರ ಜಗತ್ತಿನಲ್ಲಿ ಸಿನಿಮಾ ತನ್ಮಯವಾಗಿದೆ. ಹೇಳಬೇಕೆಂಬ ಹಟ ಇಲ್ಲಿಲ್ಲ. ಸುಮ್ಮನೆ ಆಗುವುದನ್ನು ತೋರಿಸುವುದೇ ಮುಖ್ಯ. ಅವರ ಯಾವ ಸಿನಿಮಾಗಳೂ ಅತಿರಮ್ಯವಾದುವಲ್ಲ. ಮಹಿಳಾ ಪ್ರಧಾನ ಚಿತ್ರಗಳೆಂದುಕೊಂಡರೂ ನಾನಾ ಕಾಲ- ಪ್ರದೇಶಗಳು ತೆರೆಗೆ ಬಂದಿವೆ. ನಾವು ನೋಡದ್ದೇನೂ ಅಲ್ಲಿಲ್ಲ. ಅವೆಲ್ಲ ಜನಸಾಮಾನ್ಯರ ಬಿಂಬ-ಪ್ರತಿಬಿಂಬಗಳು. ಆದರೆ ನಾವು ನೋಡಿದ್ದರೂ ಕಾಣದ್ದನ್ನು ರುಚಿಕಟ್ಟಾಗಿ ತೆರೆಗೆ ತರುವ ಸವಾಲನ್ನೇ ನಿರ್ದೇಶಕರು ಸ್ವೀಕರಿಸಿದ್ದಾರೆ . `ಟಿವಿಯು ಮನುಷ್ಯರನ್ನು ಚಿಕ್ಕದಾಗಿ, ಸಿನಿಮಾ ದೊಡ್ಡದಾಗಿ ತೋರಿಸುತ್ತದೆ. ಮನುಷ್ಯರನ್ನು ಮನುಷ್ಯರಾಗಿ ತೋರಿಸುವುದು ರಂಗಭೂಮಿ ಮಾತ್ರ' ಎಂಬ ಬಿ.ವಿ.ಕಾರಂತರ ಪ್ರಸಿದ್ಧ ಮಾತಿಗೆ ಸಡ್ಡು ಹೊಡೆಯಬಲ್ಲವು ಕಾಸರವಳ್ಳಿ ಸಿನಿಮಾಗಳು.
ಕಡಲ ಮೀನುಗಳಂತೆ ದ್ವೀಪದಲ್ಲೂ ಎಲ್ಲರೊಂದಾಗಿ ಬದುಕುತ್ತಿದ್ದ ಮೀನುಗಾರರಲ್ಲಿ ಕ್ರಮೇಣ ಕೋಮು ವೈಷಮ್ಯ ಮೂಡುವ ಕತೆಯಿದು. ಯಾವ ಜಾತಿಯೊ, ಯಾವ ಬಣ್ಣವೊ, ಹೆರಿಗೆ ಮಾಡಿಸುವುದಷ್ಟೇ ಸೂಲಗಿತ್ತಿ ಮುಸ್ಲಿಂ ಮಹಿಳೆ ಗುಲಾಬಿಯ ಕಾಯಕ. (ಆಕೆ ಮುಸ್ಲಿಂ ಗುಲ್ನಾಬಿಯೂ ಹಿಂದು ಗುಲಾಬಿಯೂ !) ಆಕೆಯ ಗಂಡ ಇನ್ನೊಬ್ಬಳು ಪತ್ನಿಯೊಂದಿಗಿರುವುದರಿಂದ ಈಕೆ ಒಂಟಿ. ಸಿನಿಮಾ ಹುಚ್ಚಿನ ಈಕೆ ಸಾಯಂಕಾಲವಾದರೆ ಥಿಯೇಟರ್ ಸೇರಲೇಬೇಕು. ಒಮ್ಮೆ ಹೆರಿಗೆ ಮಾಡಿಸಿದ್ದಕ್ಕೆ ಪ್ರತಿಫಲವಾಗಿ ಆಕೆಗೊಂದು ಬಣ್ಣದ ಟಿವಿ ಮತ್ತು ದೊಡ್ಡ ಡಿಶ್ ಉಡುಗೊರೆಯಾಗಿ ಸಿಗುತ್ತದೆ. ಆ ಕಡಲ ದ್ವೀಪಕ್ಕೆ ಮೊತ್ತಮೊದಲ ಬಾರಿ ಬಂದ ಬಣ್ಣದ ಟಿವಿಗೆ ನೆರೆಯವರು ಸ್ಪಂದಿಸುವುದು ಸಿನಿಮಾದ ಒಂದು ಮುಖ್ಯ ಭಾಗ . ಅದೆಷ್ಟು ದೃಶ್ಯಗಳಲ್ಲಿ ಕಾಣಿಸುತ್ತದೆಯೆಂದರೆ, ಧಾರಾವಾಹಿ ವ್ಯಸನದಿಂದ ಶುರುವಾಗಿ, ಅದರಿಂದ ಮನೆಯಲ್ಲಿ ಅತ್ತ-ಸೊಸೆ ಜಗಳ, ಮುಸ್ಲಿಂಳ ಮನೆಯಲ್ಲಿ ಹಿಂದು-ಮುಸ್ಲಿಂ ಮಹಿಳೆಯರು ಬೆರೆಯುವುದು, ಕೊನೆಗೆ ಅದೇ ಟಿವಿ ಕಾರ್ಗಿಲ್ ವಾರ್ತೆಯನ್ನು ದಿನಾ ಬಿತ್ತರಿಸಿ ಕೋಮು ವೈಷಮ್ಯಕ್ಕೂ ಪುಷ್ಟಿ ನೀಡಿತೋ ಎಂಬವರೆಗೆ !
*****
ಗಲ್ಫ್ ದುಡ್ಡಿನಿಂದ ದೂರದ ಮುಸ್ಲಿಂ ಕುಬೇರರು ಆರಂಭಿಸುವ ಸುಧಾರಿತ ಮೀನುಗಾರಿಕೆಯು ಸ್ಥಳೀಯರನ್ನು ಪೇಚಿಗೆ ಸಿಲುಕಿಸುವುದು ಎರಡನೇ ಮುಖ್ಯಧಾರೆ. ಸಣ್ಣದಾಗಿ, ತಕರಾರಿನ ರೂಪದಲ್ಲಿ ಆರಂಭವಾಗುವ ಈ ತಿಕ್ಕಾಟ, ನಿಧಾನವಾಗಿ ಕಿಚ್ಚು ಹತ್ತಿಸಿಕೊಳ್ಳುತ್ತದೆ. ಆದರೆ ಇವೆಲ್ಲ ಬಾಹ್ಯ ಸಂಗತಿಗಳಷ್ಟೆ, ನಿಜವಾಗಿ ಸಂಘರ್ಷ ಶುರುವಾಗುವುದು, ಅನಿವಾರ್ಯವಾಗುವುದು, ಸಮಸ್ಯೆ ಮನೆಯೊಳಗೆ ಬಂದಾಗ. ಹಾಗಾಗುವುದು ನೇತ್ರು ಹಾಗೂ ಗುಲಾಬಿಯ ಗಂಡನ ಸಂಪರ್ಕದಿಂದ. ಅದು ಆಯಿತೇ, ಆಗಿದ್ದರೆ ಹೇಗಾಯಿತು, ಗೊತ್ತಿಲ್ಲ. ಆದರೆ ಅಂತಹುದೊಂದು ಮಿಲನದ ಬಗ್ಗೆ ಮೊದಲು ಕನಸು ಕಂಡವಳು ಗುಲಾಬಿ ! ನಂತರ ಅದನ್ನು ನೇತ್ರುವಿಗೂ ಕಾಣಿಸಿದವಳು. ಆದರೆ ನೇತ್ರು ಮುಸ್ಲಿಂ ವ್ಯಕ್ತಿಯೊಂದಿಗೆ ಹೋದಳು ಎಂಬುದರಿಂದ ಆ ಕಡಲ ಬದುಕಿನ ಸಮರಸವೇ ವಿರಸಕ್ಕೆ ತಿರುಗಿ, ಪರಾರಿಯಾಗುತ್ತಿರುವ ನೇತ್ರುವನ್ನು ಹಿಡಿದು, ಹಿಂದು ಜನ ಮನೆಗೆ ಕರೆತರುತ್ತಾರೆ, ಗುಲಾಬಿಯನ್ನು ಊರಿನಿಂದ ಅಟ್ಟುತ್ತಾರೆ ! ಅದನ್ನು ಅತ್ಯಂತ ಸಂಯಮದಿಂದ ತೋರಿಸಿದ್ದಾರೆ ನಿರ್ದೇಶಕರು.ಗರ್ಭಿಣಿಯೊಬ್ಬಳಿಗೆ ಹೊಟ್ಟೆನೋವು ಆರಂಭವಾದಾಗ ಪ್ರಸವ ಮಾಡಿಸಲು ಗುಲಾಬಿಯೇ ಬೇಕೆಂದಾಗುತ್ತದೆ. ಅವಳೋ, ಥಿಯೇಟರ್‌ನಲ್ಲಿ ಪ್ರಿಯವಾದ ಸಿನಿಮಾ ನೋಡುತ್ತಿದ್ದಾಳೆ, ಬರಲೊಲ್ಲಳು. ಆಗ ಬಂದವರು ಅವಳನ್ನೆತ್ತಿಕೊಂಡೇ ಹೊರಹೋಗಿ ದೋಣಿಯಲ್ಲಿ ಕುಳ್ಳಿರಿಸಿ ಕರೆದೊಯ್ಯುತ್ತಾರೆ. ಆ ಹಿಂದು ಮಹಿಳೆಯ ಪ್ರಸವ ಸುಸೂತ್ರವಾಗುತ್ತದೆ. ಸಿನಿಮಾದ ಕೊನೆಗೆ ಕೋಮು ವೈಷಮ್ಯಕ್ಕೆ ಗುಲಾಬಿಯೂ ಕಾರಣಳೆಂದು, 'ಹಿಂದು ಧರ್ಮ ಸಂರಕ್ಷಕರು' ಆಕೆಯ ಮನೆಯ ವಸ್ತುಗಳನ್ನೆಲ್ಲ ಹೊರಗೆಸೆಯುತ್ತಿದ್ದಾರೆ, ಊರು ಬಿಟ್ಟು ತೊಲಗು ಎನ್ನುತ್ತಿದ್ದಾರೆ, ಆದರೆ ಆಕೆ ಒಲ್ಲೆ ಅನ್ನುತ್ತಿದ್ದಾಳೆ. ಆಗ ಗಣಪತಿಯನ್ನೆತ್ತಿದಂತೆ ಆಕೆಯನ್ನು ಎತ್ತಿ ದೋಣಿಯಲ್ಲಿ ಕುಳ್ಳಿರಿಸುತ್ತಾರೆ. ಮತ್ತದೇ ಹಳೆಯ ರೀತಿ. ಉದ್ದೇಶ ಮಾತ್ರ ಬೇರೆ ! ಗುಲಾಬಿ ಹೋಗುತ್ತದೆ, ಮುಳ್ಳು ಉಳಿಯುತ್ತದೆ.
*****
ಬಹುತೇಕ ಜನಪ್ರಿಯ ಸಿನಿಮಾಗಳಲ್ಲಿ ಮನುಷ್ಯರು ಮಾತ್ರ ಪಾತ್ರಗಳು. ಆದರೆ `ಗುಲಾಬಿ ಟಾಕೀಸ್'ನಂತಹ ಚಿತ್ರಗಳಲ್ಲಿ ಟಿವಿಯ ದೊಡ್ಡ ಡಿಶ್, ಕಡಲ ಅಲೆಗಳು, ಚಕ್ಲಿ ಮೀನುಗಳೂ ಪಾತ್ರಗಳಂತೆ ಕೆಲಸ ಮಾಡುತ್ತವೆ. ಪರಕೀಯ ಬಂಡವಾಳಶಾಹಿಗಳೂ ಮೀನುಗಾರಿಕೆ ಆರಂಭಿಸಿದ್ದು ಸ್ಥಳೀಯ ಸಾಮರಸ್ಯ ಕೆಡುವುದಕ್ಕೆ ಒಂದು ಕಾರಣ ಅಂತ ಕೊನೆಯಲ್ಲಿ ಹೇಳುವ ನಿರ್ದೇಶಕರು, ಎಲ್ಲ ಕೆಟ್ಟುಹೋಯಿತು ಅಂದಿಲ್ಲ. ಮೀನುಗಾರ ವಾಸಣ್ಣನ ಹರೆಯದ ಮಗನೊಬ್ಬ , ಗುಲಾಬಿಯ ಸ್ಥಳಾಂತರಕ್ಕೆ ತನ್ನ ಮಿತಿಯಲ್ಲಾದರೂ ಪ್ರತಿಭಟಿಸುವ ಮೂಲಕ ಆಶಾದೀಪ ನಂದದೆ ಉಳಿದಿದೆ. ಈ ಕತಾ ಹಂದರದ ಪ್ರತಿಯೊಂದು ಘಟನೆಗೂ ಕಾರಣವಾಗುವವಳು ಗುಲಾಬಿ. ಅಂತಹ ಗುಲಾಬಿಗೆ ಕಾರಣರಾದವರು ಉಮಾಶ್ರೀ. ಹೊಸದಾಗಿ ಬಂದ ಟಿವಿಯ ರಿಮೋಟ್‌ನ್ನು ಮೊದಲ ಬಾರಿಗೆ ಒತ್ತುವಾಗ, ನೇತ್ರು ಬಳಿ ತನ್ನ ಕನಸಿನ ಗಂಡಿನ ಬಗ್ಗೆ ಹೇಳುವಾಗ, ಹೀಗೆ ಹಲವೆಡೆ ಗುಲಾಬಿ ಅರಳುವ ಬಗೆ ಅನ್ಯಾದೃಶ. ಪೂರ್ತಿ ಸಿನಿಮಾವನ್ನೇ ಅವರು ತನ್ನ ಪಾತ್ರದಲ್ಲಿ ಹೊತ್ತುಕೊಂಡು ನಟಿಸಿದ್ದಾರೆ. ನೇತ್ರಳ ಪಾತ್ರದಲ್ಲಿ ಗಾಯಕಿ ಎಂ.ಡಿ.ಪಲ್ಲವಿ ಒಂದು ಅಚ್ಚರಿಯ ಎಂಟ್ರಿ. ಮೀನಿನ ಬುಟ್ಟಿ ಹೊತ್ತು, ನೈಟಿ ತೊಟ್ಟು ,ಕರಾವಳಿಯ ರಸ್ತೆಗಳಲ್ಲಿ ಅವರು ಓಡಾಡುವುದು ಹಾಡುವುದಕ್ಕಿಂತಲೂ ಕಷ್ಟ , ಆದರೂ ಆಗಿದೆ ಚೆಂದ. ನಿರ್ದೇಶಕರ ಯಶಸ್ಸಿರುವುದು ಅವರು ಮಾಡುವ ಆಯ್ಕೆಗಳಲ್ಲಿ. ನೀನಾಸಂ ಪದವೀಧರನಾಗಿ, ನಾಟಕ ಮಾಡುತ್ತ, ಬಳಿಕ ಎಲ್ಲೋ ಕಾಣೆಯಾಗಿದ್ದ ಬಾಸುಮ ಕೊಡಗುರನ್ನು ಕಲಾ ನಿರ್ದೇಶನಕ್ಕೆ ಎಳೆದು ಪಾತ್ರವನ್ನೂ ಮಾಡಿಸುವುದು, ಅದ್ದುವಿನ ಪಾತ್ರದಲ್ಲಿ ಮುದ್ದಾಗಿ ನಟಿಸಿದ ಹುಡುಗ, ಗುಲಾಬಿಯ ಗಂಡನಾದ ಕೆ.ಜಿ.ಕೃಷ್ಣಮೂರ್ತಿ ಇವರೆಲ್ಲ ಆ ಪಾತ್ರಕ್ಕೇ ಲಾಯಕ್ಕು ಅನ್ನುವಷ್ಟು ಚೆನ್ನಾಗಿ ಕಾಣಿಸಿಕೊಳ್ಳುತ್ತಾರೆ. ಹಿರಿಯರಾದ ರಾಮಚಂದ್ರ ಐತಾಳರ ಛಾಯಾಗ್ರಹಣ ಹೇಳಿ ಮಾಡಿಸಿದಂತಿದೆ . ಸಂಭಾಷಣೆ, ವಸ್ತ್ರವಿನ್ಯಾಸ, ಪರಿಕರಗಳ ವಿಷಯದಲ್ಲಂತೂ ಹುಳುಕು ಹುಡುಕುವುದು ಬಹಳ ಕಷ್ಟ. ವಿಶೇಷ ಎಡಿಟಿಂಗ್-ಬೆಳಕಿನ ವ್ಯವಸ್ಥೆ ಮಾಡದೆ, ಇದ್ದದ್ದನ್ನು ಇದ್ದ ಹಾಗೆ ಬಳಸಿಕೊಂಡ 'ಇಂಪರ್ಫೆಕ್ಟ್ ಸಿನಿಮಾ' ಇದು ಅಂದಿರುವ ನಿರ್ದೇಶಕರು, ಚಲಿಸುವ ಬಿಂಬಗಳನ್ನೆಲ್ಲ ದಿಕ್ಕೆಡದೆ ಹಿಡಿದುಕೊಂಡಿದ್ದಾರೆ.
*****
ಗಿರೀಶ್ ಕಾಸರವಳ್ಳಿಯವರು ಮಾಡಿದ ಯಾವುದೇ ಚಿತ್ರವನ್ನೂ ಇನ್ನೊಂದು ರೀತಿ ಮಾಡಬಹುದು ಅಂತನ್ನಬಹುದೇ ಹೊರತು, ಅವರು ಮಾಡಿದ್ದು ತಪ್ಪಾಗಿದೆ, ಕೆಟ್ಟದಾಗಿದೆ ಅನ್ನುವುದು ಸಾಧ್ಯವಿಲ್ಲ. ಇಷ್ಟೆಲ್ಲ ಆಗಿಯೂ 'ಛೆ, ಕಾಸರವಳ್ಳಿಯವರು ಒಂದು ಜನಪ್ರಿಯ ಸಿನಿಮಾ ಮಾಡಿದ್ದರೆ...' ಅಂತ ಸಿನಿಮಾಸಕ್ತರಿಗೆ ಯೋಚನೆಯಾದರೆ, ಅದು ಜನಪ್ರಿಯ ಸಿನಿಮಾದ ದಾರಿದ್ರ್ಯವನ್ನಷ್ಟೇ ಸ್ಪಷ್ಟವಾಗಿ ತೋರಿಸುತ್ತದೆ !
11 comments:
ವಿಮರ್ಶೆ ಚೆನ್ನಾಗಿದೆ. DVD ಯಾವಾಗ ಬಿಡುಗಡೆಯಾಗುತ್ತೆ ಅಂತ ಎನಾದ್ರು ಗೊತ್ತ?
Santhu
ಸುದನ್ವ ಸರ್
ಬರಹದ ಆರಂಭ ಮತ್ತು ಅಂತ್ಯ ಎರಡು ಅದ್ಬುತ. ನಾವು ಚಿತ್ರದ ಗುಣಮಟ್ಟದಿಂದ ಚಿತ್ರವನ್ನು ಅಳೆಯಬೇಕು ಅಥವಾ ವೀಕ್ಷಕರಿಂದ ಅಳೆಯಬೇಕು! ಎರಡನ್ನು ಮಿಕ್ಸ್ ಮಾಡಲು ಹೋದರೆ ದ್ವಂದ ಹುಟ್ಟಿಕೊಳ್ಳುತ್ತದೆ, ನಮ್ಮ ಅಕಾಡೆಮಿಕ್ ಬರಹಗಾರರು ಸೋತಂತೆ ಕಾಸರವಳ್ಳಿಯವರೂ ಸೋತುಬಿಡುತ್ತಾರೆ ಎಂಬುದು ನನ್ನ ಭಾವ.
ಕಾಸರವಳ್ಳಿ ತಮ್ಮ ಇತ್ತೀಚಿನ ಸಿನೆಮಾಗಳ ಸಂರಚನೆಯಲ್ಲಿ ತುಂಬಾ ವ್ಯತ್ಯಾಸ ಮಾಡಿಕೊಂಡಿದ್ದಾರೆ. ಘಟಶ್ರಾದ್ಧದಂತಹ ಸಾಂಸಾರಿಕ ಕಥಾವಸ್ತುವುಳ್ಳ ಸಿನೆಮಾಗಳಿಗಿಂತ ತುಂಬ ದೂರ ಸಾಗಿ ಬಂದಿದ್ದಾರೆ. ಅದು ಇತ್ತೀಚಿನ ಹಸೀನಾ ಮತ್ತು ಗುಲಾಬಿ ಟಾಕೀಸಿನ ಮೂಲಕ ಗೊತ್ತಾಗುವಂತಿದೆ. ಇದು ಅತ್ಯುತ್ತಮ ನಿರ್ದೇಶಕನೊಬ್ಬನ ಮನೋಭೂಮಿಕೆಯಲ್ಲಿ ಆಗುವ ಬದಲಾವಣೆ. ಅಷ್ಟೇ ಅಲ್ಲ, ಅದರ ಹಿಂದೆ ದೊಡ್ಡದೊಂದು ಸಾಮಾಜಿಕ ಕಥನವೇ ಇರುತ್ತದೆ. ಕಾಸರವಳ್ಳಿ ಸಿನೆಮಾಗಳನ್ನು ಮಾಧ್ಯಮವಾಗಿಟ್ಟುಕೊಂಡು ಯಾರಾದರೂ ಗಂಭೀರವಾಗಿ ಈ ಅಧ್ಯಯನ ನಡೆಸಿದರೆ ಚೆನ್ನಾಗಿರುತ್ತದೆ.
- ಹರೀಶ್ ಕೇರ
ಗುಲಾಬಿಯನ್ನು ಪರಿಚಯಿಸಿದ್ದಕ್ಕೆ ತುಂಬ ಥ್ಯಾಂಕ್ಸ್!
ಗುಲಾಬಿಯ ಡಿವಿಡಿ ಸಿಗುತ್ತೋ ಹೇಗೆ?
ಕಾಸರವಳ್ಳಿಯವರ ಅಧ್ಯಯನ ನಡೆಯಬೇಕಿದೆ. ರೇ, ಅಡೂರ್ ರಷ್ಟೇ ಚೆನ್ನಾಗಿ ಸಿನೆಮಾ ಮಾಡಿದವರು ಕಾಸರವಳ್ಳಿ. ಕನ್ನಡಿಗರ ಹೆಮ್ಮೆ ಅವರು. ಕಾಸರವಳ್ಳಿಯ ತರಹ ಈ ಪೀಳಿಗೆಯಲ್ಲಿ ಯಾವ ಸಿರ್ದೇಶಕರೂ ಕಾಣುತ್ತಿಲ್ಲ ಎನ್ನುವುದು ನಮ್ಮ ಸಂಸ್ಕೃತಿಯ ಅಧಃಪತನ.
-ಕೇಶವ
ಐ ಅಗ್ರೀ ವಿಥ್ ಈಚ್ ಅಂಡ್ ಎವೆರಿ ಸೆಂಟೆನ್ಸು!
ಸಿನೆಮಾ ಚೆನ್ನಾಗಿದೆ ಅಂದಿರಿ ನೀವು...
ನಿಮ್ಮ ಬರವಣಿಗೆಯೂ ಸೂಪರ್ ಅಂತೀವಿ ನಾವು..:)
ಅದ್ಬುತ ವಿಮರ್ಶೆ.
ಆದರೆ,
ಸಿನಿಮಾದ ಕೊನೆಗೆ ಕೋಮು ವೈಷಮ್ಯಕ್ಕೆ ಗುಲಾಬಿಯೂ ಕಾರಣಳೆಂದು, 'ಹಿಂದು ಧರ್ಮ ಸಂರಕ್ಷಕರು' ಆಕೆಯ ಮನೆಯ ವಸ್ತುಗಳನ್ನೆಲ್ಲ ಹೊರಗೆಸೆಯುತ್ತಿದ್ದಾರೆ,
ಸಿನೆಮಾದಲ್ಲಿ ಆತರಹ ಹಿಂದೂ ಧರ್ಮ ಸಂರಕ್ಷಣೆ ಎಂದು ಕಾಣುವಂತೆ ಅಥವಾ ಆ ಜನರನ್ನು ಆ ರೀತಿ ತೋರಿಸುವಂತೆ ಸ್ವಲ್ಪವೂ ಇಲ್ಲ. ಸುಮ್ಮನೇ ಹೀಗೆ ಎಲೆಕ್ಷನ್ನಿಗೆ ನಿಂತ ರಾಜಕಾರಣಿಗಳಂತೆ ವ್ಯಂಗ್ಯವಾಡುವುದು ತರವಲ್ಲ. ನಾಲ್ಕು ಜನ ಕಾರ್ಗಿಲ್ ಯುದ್ಧವನ್ನು ಆಸಕ್ತಿಯಿಂದ ನೋಡಿದಾಕ್ಷಣ ಅವರನ್ನು ಹಿಂದೂ ಧರ್ಮ ಸಂರಕ್ಷಕರು ಎಂಬ ಹಣೆಪಟ್ಟಿ ಕಟ್ಟುವುದು ಪೂರ್ವಗ್ರಹವೋ ಅಥವಾ ಕೆಟ್ಟ ಚಾಳಿಯೋ!
ಪ್ರಿಯ ಶ್ರೀಕಾಂತ,
'ಹಿಂದು ಧರ್ಮ ಸಂರಕ್ಷಣೆ ಎಂದು ಕಾಣುವಂತೆ ಆ ಸಿನಿಮಾದಲ್ಲಿ ಒಂಚೂರೂ ಇಲ್ಲ' ಎಂಬುದಕ್ಕೆ ಒಪ್ಪಿಗೆ. ಅಲ್ಲದೆ ಗುಲಾಬಿಯನ್ನು ಎತ್ತಂಗಡಿ ಮಾಡುವ ಜನರಿಗೆ ಯಾವ ಬಣ್ಣ, ವೇಷವನ್ನಾಗಲೀ ಕಾಸರವಳ್ಳಿ ತೊಡಿಸಿಲ್ಲ. ಹಾಗಾಗಿಯೇ 'ಅತ್ಯಂತ ಸಂಯಮವನ್ನು ತೋರಿದ್ದಾರೆ ನಿರ್ದೇಶಕರು' ಎಂದೂ ನಾನು ಬರೆದಿರುವುದು.
ನಾನು ಬಳಸಿರುವ ಒಂದು ಪದದಲ್ಲಿ ವ್ಯಂಗ್ಯವಿರುವುದು ಹೌದು. ಅದು ಆ ಪರಿಸ್ಥಿತಿಯ ವಿರೋಧಾಭಾಸವನ್ನು ತೋರಿಸಲು ಬಳಸಿರುವ ಪದ ಅಷ್ಟೆ. ಏನೂ ವಿಚಾರ ಮಾಡದೆ, ಯಾರ ಅಭಿಪ್ರಾಯವೂ ಕೇಳದೆ, ಗುಲಾಬಿಗೂ ಒಂದು ಮಾತು ಹೇಳದೆ, ಗುಲಾಬಿಯನ್ನು ಕಳುಹಿಸಿದರೆ ಕೋಮು ಸಮಸ್ಯೆ ಬಗೆಹರಿಯಾಗುತ್ತದೆ ಅಂತ ನಂಬಿರುವ, ಆ ಸರ್ವಾಧಿಕಾರಿ ಮನಸ್ಸುಗಳಿಗೆ ಬಳಸಿರುವ ಪದ ಅದು. ನಿಜವಾದ ಹಿಂದು ಧರ್ಮ ಸಂರಕ್ಷಕರಿಗಿಂತ ಇಂತಹ ಹುಸಿ ಧರ್ಮ ಸಂರಕ್ಷಕರೇ ಜಾಸ್ತಿಯಾಗುತ್ತಿರುವ ಸಂದರ್ಭದಲ್ಲಿ ಆ ಪದ ಥಟ್ಟಂತ ಬರವಣಿಗೆಯಲ್ಲಿ ಸೇರಿಕೊಂಡಿತು. ವಿಡಂಬಿಸುವಾಗ 'ಧರ್ಮ ಸಂರಕ್ಷಕರು' ಎಂಬಂತಹ ದೊಡ್ಡ ಪದಗಳನ್ನು ಬರವಣಿಗೆಯಲ್ಲಿ ಬಳಸುವುದು ಮಾಮೂಲು ಅಲ್ವೆ? ಅದನ್ನು ಸದ್ಧರ್ಮ ನಿರತರು ತಪ್ಪಾಗಿ ತಿಳಿಯಬಾರದೆಂದು ನನ್ನ ಕೇಳಿಕೆ.
ಕಾರ್ಗಿಲ್ ಯುದ್ಧವನ್ನು ನೋಡಿದಾಕ್ಷಣ ಹಿಂದೂ ಸಂರಕ್ಷಕರಾದರು ಎಂದು ಮಾತ್ರ ನಾನು ತಪ್ಪಿಯೂ ಹೇಳಿಲ್ಲ. ಆದರೆ ಆ ಯುದ್ಧದ ಪರಿಣಾಮ,ಕೋಮು ವೈಷಮ್ಯಕ್ಕೂ ಕಾರಣವಾಯಿತೇನೋ ಅಂತ ಯೋಚಿಸುವಂತೆ ನಿರ್ದೇಶಕರು ತೋರಿಸಿದ್ದಾರೆ ಎನ್ನುವುದು ನನ್ನ ಅಭಿಪ್ರಾಯ. -ಚಂ
nice writeup
hoonage
ಮನುಷ್ಯ್ರರು ಪಾತ್ರದಾರಿಗಳಾಗಿರೋದು ಬಿಟ್ಟು ಇತರೆ ವಸ್ತುಗಳು ಪಾತ್ರಧಾರಿಗಳಾಗಿರೋದು, children of Heaven ನಲ್ಲಿ ಒಂದು ಜೊತೆ ಶೂಗಳು ಪಾತ್ರಧಾರಿಯಾಗಿರುವುದು, cast away ನಲ್ಲಿ ನಾಯಕನ ಜೊತೆ ಇರುವ ವಸ್ತುಗಳೆಲ್ಲಾ ಪಾತ್ರಧಾರಿಯಾಗಿರುವುದು ನೋಡಿದ್ದೆ. ಗುಲಾಬಿ ಟಾಕೀಸನ್ನು ಬೇಗ ನೋಡಬೇಕು.
Post a Comment