'ಹಾ ಲಕ್ಷ್ಮಣಾ...ಹಾ ಇಂಡಿಯಾ... '
ರಾಮಾಯಣ ಯುದ್ಧ ಸಂದರ್ಭದ ಪ್ರಸಂಗವಾದ 'ಅತಿಕಾಯ ಮೋಕ್ಷ 'ಯಕ್ಷಗಾನ ತಾಳಮದ್ದಳೆ ಇತ್ತೀಚೆಗೆ ಬನಶಂಕರಿಯಲ್ಲಿ ನಡೆಯಿತು. ಆ ಪ್ರಸಂಗದಲ್ಲಿ ಅತಿಕಾಯನನ್ನು ಎದುರಿಸುವ ಲಕ್ಷ್ಮಣನಾಗಿ, ರಾಮನಿಗೆ- 'ನೀನು ನನ್ನನ್ನು ಅಪ್ಪಿ ಮುದ್ದಿಸುವಾಗ, ನಿನಗೆ ಅತ್ತಿಗೆಯ ನೆನಪು ಎಷ್ಟು ಕಾಡ್ತಾ ಇದೆ ಅಂತ ತಿಳೀತದೆ ಅಣ್ಣಾ...' ಅಂದುಬಿಟ್ಟೆ ! ಅದು ಕೆಲವರಿಗೆ ಬಹಳ ಇಷ್ಟವಾಯಿತು. ಹಲವರಿಗೆ ಒಪ್ಪಿಗೆಯಾಗಲಿಲ್ಲ. ಲಕ್ಷ್ಮಣನದ್ದು ಅತಿಯಾಯ್ತು ಅನ್ನಿಸಿತು. ಆ ಸಾಯಂಕಾಲ ಕಾರ್ಯಕ್ರಮ ನಡೆಯುತ್ತಿದ್ದ ದೇವಸ್ಥಾನವು ಬಹಳ ಎತ್ತರದಲ್ಲಿತ್ತು. ಚಳಿ ಗಾಳಿ ಬೀಸುತ್ತಿತ್ತು. ಆಗಷ್ಟೇ ಮಳೆ ಬಂದು ಮೋಡವಿನ್ನೂ ಮಡುಗಟ್ಟಿದ್ದರಿಂದ ಎಲ್ಲ ಪ್ರೇಕ್ಷಕರೂ ಚಳಿಗೆ (ನಮ್ಮ ಮಾತಿಗಲ್ಲ !) ನಡುಗುತ್ತಿದ್ದರು. ಆಗ, 'ಈ ಕಡಲ ತೀರದಲ್ಲಿ ಬೀಸುವ ತಂಪಾದ ಚಳಿಗಾಳಿಯ ವಾತಾವರಣ ನೋಡಿದರೆ ಹನುಮಂತ ಈಗ ಲಂಕೆ ಸುಟ್ಟಿದ್ದರೆ ಚೆನ್ನಾಗಿತ್ತು ಅಣ್ಣಾ !' ಅಂದೆ ಲಕ್ಷ್ಮಣನಾಗಿ. ಎಲ್ಲರೂ ಆ ಮಾತನ್ನು ಎಂಜಾಯ್ ಮಾಡಿದರು.
*****
ತ್ರೇತಾಯುಗದ ರಾಮ-ಲಕ್ಷ್ಮಣರು ನಮ್ಮವರಾಗುವಾಗ ಸಿಗುವ ಸಂತಸ ಬಣ್ಣಿಸಲಾಗದ್ದು. ಬಹುಶಃ ಅವರೇ ಬಂದರೂ ಅಷ್ಟೊಂದು ಖುಶಿ ಆಗಲಾರದೇನೋ. ರಾಮ, ಕೃಷ್ಣರಾಗಲಿ, ಅವರ ನಂತರದವರಾಗಲಿ, ಹೀಗೆಯೇ ಯೋಚಿಸಿದರು, ಇದನ್ನೇ ಮಾತಾಡಿದರು ಅಂತ ಯಾರಿಗಾದರೂ ಹೇಳಲು ಸಾಧ್ಯವೆ? ನಮ್ಮ ಪುರಾಣಗಳಲ್ಲಂತೂ ಇತಿಹಾಸವೂ ಕಾವ್ಯವೂ ಒಂದರೊಳಗೊಂದು ಸೇರಿಕೊಂಡು ಬಂದಿದೆ. ಆದರೆ ನಮ್ಮಲ್ಲಿ ಬಹುತೇಕರಿಗೆ ಒರಿಜಿನಲ್ಲೇ ಬೇಕು. ಸತ್ಯ ಅಂದುಕೊಂಡದ್ದರ ಬಗ್ಗೆ ವಿಪರೀತ ಮೋಹ, ಪಟ್ಟು. ದೇವರು ಕಣ್ಣು ಬಿಡಬೇಕು, ಹಾಲು ಕುಡಿಯಬೇಕು. ಸೇತುವೆ ರಾಮನದ್ದೇ ಎನ್ನಬೇಕು, ಅದೇ ಗುಹೆಯಲ್ಲಿ ಋಷಿಗಳು ಕುಳಿತಿದ್ದರು ಅಂತಾಗಬೇಕು. ಮಠ -ದೇವಸ್ಥಾನಕ್ಕೂ ದಾಖಲೆಗಳೇ ಆಧಾರವಾಗಬೇಕು ಇಲ್ಲವೇ ತಯಾರಿಸಬೇಕು. ಆಗ ನಮಗೆ ಪರಮಾನಂದ, ಅತೀವ ಭಕ್ತಿ ! ಆದರೆ ಕಾವ್ಯಗುಣವಿಲ್ಲದಿದ್ದರೆ, ಕವಿ ಮನಸ್ಸಿಲ್ಲದಿದ್ದರೆ ಇತಿಹಾಸವೂ ಸಂಕುಚಿತವಾಗುತ್ತದೆ, ಕಾದಾಟಕ್ಕೆ ಜಾಗ ಮಾಡುತ್ತದೆ.
*****
ಸೃಜನಶೀಲ ಕಾವ್ಯ (ಅಥವಾ ಸಾಹಿತ್ಯ) ಅಂದರೆ ಸತ್ಯದ ಸುತ್ತ ಹೆಣೆಯುವ ಸುಳ್ಳು. ಅದಕ್ಕಿಂತ ಸುಖವಾದದ್ದು, ಸುಂದರವಾದದ್ದು ಮತ್ತೊಂದಿದೆಯಾ?! ನಿಜ ಮತ್ತು ಕಾವ್ಯನಿಜ ಒಂದರೊಳಗೊಂದು ಸೇರಿಕೊಂಡಿರುವುದಕ್ಕೆ ಕೃಷ್ಣನ ಕತೆಯೇ ಉತ್ತಮ ಉದಾಹರಣೆ. ಹಾಗಂತ ವಾಸ್ತವಕ್ಕೂ ಕಾವ್ಯಕ್ಕೂ ನಡುವೆ ಸ್ಪಷ್ಟವಾದ ಗೆರೆಯೂ ಇಲ್ಲ. ನಮಗೆ ಲಕ್ಷ್ಮಣರೇಖೆ ಬೇಕಾದದ್ದು ಇತಿಹಾಸದ ಭಿನ್ನತೆಯನ್ನು ಸ್ವೀಕರಿಸುವಲ್ಲಿ. ಇತಿಹಾಸ ಹೀಗೆ ಇತ್ತು ಅನ್ನುವದರ ಬಗ್ಗೆ ಭಿನ್ನ ನಿಲುವುಗಳು ಪ್ರಕಟವಾದಾಗ ಅಲ್ಲಿರುವ ಸಾರವನ್ನು ಹೀರಿಕೊಳ್ಳುವ ಗುಣ ಬೇಕು. ಅದು ಭವಿಷ್ಯವನ್ನು ಕಟ್ಟುವವರ ಗುಣ .ಲಕ್ಷ್ಮಣನಿಗೆ ರಾಮ ಆದರ್ಶ. ಹಾಗಂತ ಅವನು ರಾಮನೇ ಅಲ್ಲ. ಆಗಬೇಕೆಂದು ಎಂದೂ ಯತ್ನಿಸಿದವನಲ್ಲ !ರಾಮಾಯಣ ಪೂರ್ತಿ ರಾಮನ ನೆರಳಾಗಿರುವ ಅಥವಾ ರಾಮನಿಗೆ ನೆರಳಾಗಿರುವ ಲಕ್ಷ್ಮಣನ ಮನಸ್ಸು ಎಂತದ್ದು? 'ಹಾ ಸೀತಾ ಹಾ ಲಕ್ಷ್ಮಣಾ' ಅಂತ ಕೂಗಿ ಬಂಗಾರದ ಜಿಂಕೆ ಮಾರೀಚ ಕೊನೆಯುಸಿರೆಳೆದರೆ, ರಾಮನಿಗೆ ಏನಾಯಿತೋ ಎಂದು ಸೀತೆಗೆ ಆತಂಕ. ಏನೂ ಆಗಿರುವುದಿಲ್ಲ , ಇದೆಲ್ಲ ರಕ್ಕಸರ ಮಾಯೆ ಅಂತ ಲಕ್ಷ್ಮಣ ಹೇಳಿದರೆ ಅವಳಿಗೆ ನಂಬಿಕೆಯಿಲ್ಲ. ರಾಮ ಸತ್ತರೆ ತನ್ನನ್ನು ಆಳಬಹುದೆಂದು ಹೀಗೆ ಹೇಳುತ್ತೀಯಾ ಅಂತ ಕೆಂಡವಾಗುತ್ತಾಳೆ ಆಕೆ. ಆಗ ಲಕ್ಷ್ಮಣ ರಾಮನನ್ನರಸಿ ಹೊರಡುತ್ತಾನೆ . ರಾಮಾಯಣದ ಕೊನೆಗೆ ಅಗಸನ ಮಾತಿಗೆ ತುತ್ತಾದ ರಾಮ, ಸೀತೆಯನ್ನು ಕಾಡಲ್ಲಿ ಬಿಟ್ಟು ಬಾ ಅಂತ ಆಜ್ಞಾಪಿಸುವುದೂ ಇದೇ ಲಕ್ಷ್ಮಣನಿಗೆ ! ಕಾಡಿನ ಮಧ್ಯೆ ರಾಮನ ಅಪ್ಪಣೆಯನ್ನು ಸೀತೆಗೆ ತಿಳಿಸುವವನೇ ಈತ. ಎಂಥ ಅಗ್ನಿಪರೀಕ್ಷೆ? ಕಿಷ್ಕಿಂಧೆಯಲ್ಲಿ ಆಭರಣದ ಗಂಟೊಂದನ್ನು ಸುಗ್ರೀವ ಕೊಟ್ಟಾಗ ಈ ಲಕ್ಷ್ಮಣ ಗುರುತಿಸುವುದು ಸೀತೆಯ ಕಾಲಂದುಗೆಯನ್ನಂತೆ ! (ಪ್ರತಿದಿನ ನಮಸ್ಕಾರ ಮಾಡುತ್ತಿದ್ದಾಗ ನೋಡುತ್ತಿದ್ದನಂತೆ) ಅವನದ್ದು ಅಂತಹ ಸರಳ ರೇಖೆ.
*****
ರಾಮರಾಜ್ಯ ಒಂದು ಆದರ್ಶ ಕಲ್ಪನೆ. ಅದು ಹಾಗೆಯೇ ಸಾಧ್ಯವಾಗುವಂಥದ್ದಲ್ಲ. ಆದರೆ ಆ ದಾರಿಯಲ್ಲಿ ಸಾಗುತ್ತ ಇನ್ನೊಂದು ಆದರ್ಶ ರಾಜ್ಯವನ್ನು ಸ್ಥಾಪಿಸುವುದು ಮಹತ್ ಸಾಧನೆ . ಗಾಂಧೀಜಿ ಮಾಡಿದ್ದು ಅದನ್ನೇ . ರಾವಣನಂಥ ದುಷ್ಟರಿಗೆ ಲಕ್ಷ್ಮಣ ರೇಖೆಯ ಒಳಗೆ ಬರುವುದು ಸಾಧ್ಯವಿಲ್ಲ. ಆದರೆ ಸಜ್ಜನರನ್ನು ಅದರಿಂದ ಹೊರಗೆಳೆಯುವುದು ಹೇಗೆ ಅಂತ ಅವರಿಗೆ ಚೆನ್ನಾಗಿ ಗೊತ್ತು. ಸದ್ಯ ದೇಶದೆಲ್ಲೆಡೆ ಆಗುತ್ತಿರುವುದೂ ಇದೇ . ಯಾರ ಕೂಗು ಯಾರ ಕಿವಿಗೋ !
4 comments:
sudhnva, welcome back.
neewu iddakkid haage eddu hogibittidralla, bahala besara aagittu. nimma barahagaLna OdOdu andre nanga bhALa ishta.
- Chetana Teerthahalli
ಎಲ್ಲಿಂದ ಹೊರಟು ಎಲ್ಲಿಗೋ ಹೋದಂತಿದೆ.
- ಹರೀಶ್ ಕೇರ
ಥ್ಯಾಂಕ್ಸ್ ಚೇತನಾ.
ಪ್ರಿಯ ಕೇರ, ನೀವು ಹೇಳಿದ್ದು ಸರಿ. ಅದು ಗೊತ್ತಿದ್ದೇ ಪಬ್ಲಿಷ್ ಮಾಡಿದೆ. ಅದಕ್ಕೆರಡು ಕಾರಣ. ಒಂದು ಸಿಕ್ಕಾಗ ಹೇಳುತ್ತೇನೆ! ಇನ್ನೊಂದು, ಆ ಲೇಖನ ಹಾಗೆ ಇದ್ದರೇ ಚೆಂದ ಅನ್ನಿಸಿತು. ಒಂದು ತರಹದ ಅಸ್ಪಷ್ಟತೆ, ಲಿಂಕ್ ಇಲ್ಲದಿರುವುದು (ಪ್ರಿಯಕರನೂ ಪ್ರಿಯಕರೆಯೂ ಕೈಕೈ ಹಿಡಿಯದೆ ಜತೆಯಾಗಿ ಹೋದ ಹಾಗೆ ಅಥವಾ ಬೇರೆ ಪದ ...ಸಿಕ್ಕುತ್ತಿಲ್ಲ)-ಅದು ಕೂಡಾ ಒಂದು ಚೆಂದವೇ ಅಂದುಕೊಂಡಿದ್ದೇನೆ. ಕೊಲಾಜ್ ಥರ. ಆದರೆ ಒಟ್ಟು ಪರಿಣಾಮ ಮನ ಮುಟ್ಟುವಂತಿರಬೇಕು. ಇಲ್ಲಿ ಏನಾಗಿದೆಯೋ ಅರಿಯೆ ! -ಚಂ
>> ರಾವಣನಂಥ ದುಷ್ಟರಿಗೆ ಲಕ್ಷ್ಮಣ ರೇಖೆಯ ಒಳಗೆ ಬರುವುದು ಸಾಧ್ಯವಿಲ್ಲ. ಆದರೆ ಸಜ್ಜನರನ್ನು ಅದರಿಂದ ಹೊರಗೆಳೆಯುವುದು ಹೇಗೆ ಅಂತ ಅವರಿಗೆ ಚೆನ್ನಾಗಿ ಗೊತ್ತು. ಸದ್ಯ ದೇಶದೆಲ್ಲೆಡೆ ಆಗುತ್ತಿರುವುದೂ ಇದೇ. <<
ಅಪ್ಪಟ ಸತ್ಯ!
Post a Comment