August 01, 2009

ಈ ಸರ್ತಿ ಕಡಲ್ ಮುರ್‌ಕುಂಡು

ಮಳೆಯ ರಾಗ ಇನ್ನೂ ಕಿವಿ ತಮಟೆಯಿಂದ ದೂರವಾಗಿಲ್ಲ. ‘ಈ ಸರ್ತಿ ಕಡಲ್ ಮುರ್‍ಕುಂಡು ತೋಜುಂಡು’ ( ಈ ಸಲ ಕಡಲು ಮುಳುಗುತ್ತದೆ ಅಂತ ಕಾಣ್ಸತ್ತೆ) ಅಂತ ಕೆಲಸದ ಮಲ್ಲ ಪ್ರತೀ ದಿನ ಹೇಳುತ್ತಿದ್ದಾನೆ. ಅಡಿಗರು ಅಂದಂತೆ -ಕಡಲ ಪಡಖಾನೆಯಲ್ಲಂತೂ ನೊರೆಗರೆವ ವಿಸ್ಕಿ ಸೋಡಾ ಕುಡಿದ ಗಾಳಿ ಮತ್ತಿನಲ್ಲಿ ಗಮ್ಮತ್ತಿನಲಿ ತೂರಾಡುತ್ತಿದೆ. ಪಂಜೆಯವರ ತೆಂಕಣ ಗಾಳಿಯಾಟ ಹೆಗಲ ಮೇಲಿನ ಶಾಲನ್ನು ರುಂಮ್ಮನೆ ಎತ್ತಿ ಹಾರಿಸುತ್ತಿದೆ. ಶವರ್ ಬಾತ್‌ನಲ್ಲಿ ಒಮ್ಮೆಗೆ ಪೂರ್ತಿ ನೀರು ಬಿಟ್ಟರೆ ಬರುತ್ತದಲ್ಲ, ಹಾಗೆ ಪಕ್ಕನೆ ದಿರಿದಿರಿ ಸುರಿವ ಮಳೆಗೆ ಪೂರ್ತಿ ರಭಸ. ಮಣ್ಣೆಲ್ಲ ತಚಪಚ ಹಾರಿ ನೀರು ಮಂದವಾಗಬೇಕು, ಹಾಗೆ. ಸಾಯಂಕಾಲವಂತೂ, ಕತ್ತಲನ್ನೂ ಮಳೆಯನ್ನೂ ದೂರದಿಂದ ಸೆಳೆದು ತರುವ ಗಾಳಿಯ ಸದ್ದನ್ನು ಆಲಿಸುವುದೇ ಒಂದು ದಿವ್ಯ ಅನುಭವ. ಗ್ರಾ.....ಎಂಬ ಸದ್ದು ಕೆಲವೊಮ್ಮೆ ಐದು ನಿಮಿಷಗಳವರೆಗೂ ಕೇಳಿ, ಬಳಿಕವಷ್ಟೇ ಮಳೆಯು ಮನೆ ಅಂಗಳ ತಲುಪುವುದುಂಟು. ಒಮ್ಮೆ ಬೆಂಗಳೂರಿನಿಂದ ಬಂದಿದ್ದ ದೊಡ್ಡಪ್ಪ, ತಮ್ಮ ಪುಟ್ಟದಾದ, ಆದರೆ ಬಹಳ ಬೆಲೆ ಬಾಳುವ ಪ್ಯಾನಸೊನಿಕ್ ರೆಕಾರ್ಡರ್‌ನಲ್ಲಿ ಆ ಧ್ವನಿಯನ್ನು ಹಿಡಿದಿಟ್ಟುಕೊಂಡಿದ್ದರು. ಮಳೆ ನಿಂತ ಮೇಲೆ ಅದನ್ನು ಕೇಳಿದಾಗ ಮಾತ್ರ, ಸರಿಯಾಗಿ ಸಿಗ್ನಲ್ ಸಿಗದ ಹಳೆ ರೇಡಿಯೊದ ಸದ್ದಿನಂತೆ, ಕರ್ಕಶವಾಗಿ ಕೇಳುತ್ತಿತ್ತು ! ಕರಾವಳಿಯ ಈ ಮಳೆಯ ಸದ್ದು, ರುಚಿ, ಪರಿಮಳಗಳನ್ನೆಲ್ಲ ಹಿಡಿದಿಡುವುದು ಸಾಧ್ಯವೆ ?

ಬಹಳ ಆಶ್ಚರ್ಯದ ಸಂಗತಿಯೆಂದರೆ, ಅಡಿಕೆಗೆ ಕೊಳೆ ರೋಗ ಬಾರದ ಹಾಗೆ ಔಷಧ ಸಿಂಪಡಿಸಿ ಆಯ್ತಾ, ಸೌದೆ ಬೇಕಾದಷ್ಟು ಕೊಟ್ಟಿಗೆಗೆ ಬಂತಾ, ಮರದಿಂದ ತೆಂಗಿನಕಾಯಿ ತೆಗೆದಾಯ್ತಾ, ಇತ್ಯಾದಿ ಪ್ರಶ್ನೆಗಳನ್ನು ಕೇಳುವವರೇ ಬಹಳ ಕಡಿಮೆ. ತುಂಬ ಜನ ಜಾಗ ಮಾರಿ ಪೇಟೆಗೆ ಹೊರಟಿರೋದ್ರಿಂದ, ಮಕ್ಕಳೆಲ್ಲ ಸಿಟಿ ಸೇರಿದ್ದರಿಂದ, ತೋಟದ ಬಗ್ಗೆ ಹೆಚ್ಚಿನ ನಿಗಾ ಇಲ್ಲವೇನೋ. ಸಾಮೂಹಿಕ ಪೂಜೆ-ಆಚರಣೆಗಳಂತೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆ, ಹೊಸ ರೂಪಗಳಲ್ಲಿ ಬರುತ್ತಿವೆ. ಆದರೆ ಸಾಂಸ್ಕೃತಿಕ, ರಾಜಕೀಯ, ಧಾರ್ಮಿಕ ವಿಚಾರಗಳಲ್ಲೆಲ್ಲ ಹಿಂದಿದ್ದ ಘನತೆ ಮಾಯವಾಗುತ್ತಿದೆಯಾ? ಪಡಪೋಸಿಗಳೆಲ್ಲ ಹೀರೊಗಳಂತೆ ಬಿಂಬಿಸಲ್ಪಡುತ್ತಿದ್ದಾರಾ? ಇದು ಸಂಪರ್ಕ ಕ್ರಾಂತಿಯ ಫಲಶ್ರುತಿಯಾ? ಅಂತೆಲ್ಲ ಪ್ರಶ್ನೆಗಳು. ಉತ್ತರವೇನೇ ಇರಲಿ, ಊರಿನ ಪ್ರಜ್ಞೆಯ ಮಟ್ಟ ಮಾತ್ರ ದಿನೇದಿನೆ ಕೆಳಗಿಳಿಯುತ್ತಿರುವಂತೆ ಭಾಸವಾಗುತ್ತಿದೆ.

ಟೆಲಿಫೋನ್, ಮೊಬೈಲು, ಇಂಟರ್‌ನೆಟ್, ಟಿವಿ, ಪತ್ರಿಕೆಗಳು ಮನೆಮನೆಗಳಿಗೆ ಹೊಕ್ಕಿರುವುದರಿಂದ ಪ್ರಚಾರವೀಗ ಸುಲಭದ ಬಾಬತ್ತು. ಮುನ್ನುಗ್ಗಿದವನಿಗೆ ಮಣೆ. ಅವನಿಗಿಲ್ಲ ಎಣೆ. ದೇವಸ್ಥಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿಬೇಕಾದರೆ, ‘ ಏನು ಮಾಡಬಹುದು ಅಂತ ಓ ಅವರಲ್ಲಿ ಕೇಳೋಣ. ಅವರಿಗೆ ನೋಡಿ- ಕೇಳಿ ಅನುಭವವಿದೆ.’ ಅಂತೇನೂ ಈಗ ಇಲ್ಲ. ಎಲ್ಲವೂ ಒಬ್ಬರಿಗೇ ಗೊತ್ತಿದೆ ! ಸಭಾ ಕಾರ್ಯಕ್ರಮಗಳಿಗೆ ಚೆನ್ನಾಗಿ ಮಾತನಾಡುವವರು ಬೇಕಾಗಿಲ್ಲ. ಅವರಿಂದ ತಮ್ಮ ಸಂಸ್ಥೆಗೆ ಏನು ಲಾಭವಾದೀತು ಅನ್ನೋದಷ್ಟೇ ಲೆಕ್ಕಾಚಾರ. ಮಂಗಳೂರು ಆಕಾಶವಾಣಿಯಲ್ಲಿ ಬುಧವಾರ ರಾತ್ರಿ ಒಂಬತ್ತೂವರೆಗೆ ಬರುವ ಯಕ್ಷಗಾನ ತಾಳಮದ್ದಳೆಯನ್ನು ಈಗಲೂ ಕೇಳುವನು ಕ್ಷೌರಿಕ ದಾಮೋದರ ಒಬ್ಬನೇ ಇರಬೇಕು. ಅದರ ಬಗ್ಗೆ ಮಾತಾಡುವುದಕ್ಕಂತೂ ಅವನಿಗೆ ಜನವೇ ಇಲ್ಲ. ಸಾಹಿತ್ಯ ಸಮ್ಮೇಳನ ನಡೆಯುತ್ತಲೇ ಇದೆಯಾದರೂ, ಒಂದು ಒಳ್ಳೆಯ ಹೊಸ ಪುಸ್ತಕ ಬಂದ ಉದಾಹರಣೆ ಇಲ್ಲ. ಧಾರ್ಮಿಕತೆ ಅನ್ನುವುದಂತೂ ಜನರ ರೊಚ್ಚಿಗೆಬ್ಬಿಸುವುದಕ್ಕಷ್ಟೇ ಸೀಮಿತ. ಸರಕಾರಿ ಶಾಲೆಗಳೆಲ್ಲ ಜೀವ ಕಳಕೊಂಡಿರುವುದರಿಂದ ಅಲ್ಲೂ ಊರಿನ ಜನ ಒಟ್ಟಾಗುವ ಪರಿಪಾಠವಿಲ್ಲ. ಊರಿನ ಮುಖ್ಯ ಆಚರಣೆಯಾಗಿದ್ದ , ‘ಶ್ರಮದಾನ’ವೆಂಬ ಪರಿಕಲ್ಪನೆ ಗೊತ್ತೇ ಇಲ್ಲವೇನೋ ಅನ್ನುವಷ್ಟು ಕಡಿಮೆ. ಎಲ್ಲೆಡೆ ರಾಜಕೀಯ-ದುಡ್ಡು ವಿಷ ಬಳ್ಳಿಯಾಗಿ ಹಬ್ಬಿಕೊಳ್ಳುತ್ತಿದೆ. ಊರಿಗೆ ಯಾವ ಶಾಪ ತಟ್ಟಿದೆ? ಬೆಳ್ಳಂಬೆಳಗ್ಗೆ ‘ಜಾಲಹಳ್ಳಿ ಜಾಲಹಳ್ಳಿ ಕ್ರಾಸ್’ ಅಂತ ಕಂಡಕ್ಟರ್ ಕೂಗಿದಾಗ ಅರೆ ಎಚ್ಚರವಾಗಿ, ನರಕದ ಬಾಗಿಲಲ್ಲಿ ಯಮದೂತ ಕೂಗಿದ ಹಾಗಾಗುತ್ತದೆ !’ ಅಂದಿದ್ದರು ಜಯಂತ ಕಾಯ್ಕಿಣಿ. ಆದರೆ ಊರಿನ ಮುಖ್ಯ ಭಾವವಾದ ಆಪ್ತತೆಯೇ ಅಲ್ಲಿ ಕಳೆದುಹೋಗುತ್ತಿದೆಯಾ? ಕೂಡಿ ಬಾಳುವ ಸುಖ ಮುಖ್ಯವಲ್ಲ ಅನ್ನಿಸಿದೆಯಾ? ಮೊನ್ನೆ ಮೊನ್ನೆ ಊರಿಗೆ ಹೋಗಿ ಬಂದ ಮೇಲೆ ಹೀಗೆಲ್ಲ ಅನ್ನಿಸತೊಡಗಿದೆ. ನಿಮಗೆ?

ಜಿರೀ......ಅಂತ ಮಳೆ ಒಂದೇ ಸಮನೆ ಸುರಿಯುತ್ತಿದೆ. ಹೊಸ ಕಾಲದ ಬದುಕಿಗೆ ಕಡಲನ್ನೇ ಮುಳುಗಿಸುವ ಸಾಮರ್ಥ್ಯವಿದೆ. ಹೌದು, ಇನ್ನೇನು ಕಡಲು ಮುಳುಗಿದರೂ ಮುಳುಗೀತು. ನಿಮ್ಮ ನಿಮ್ಮ ನೌಕೆ ಏರಿ ಭದ್ರಪಡಿಸಿಕೊಳ್ಳಿ ಆಯಿತಾ?!

11 comments:

Unknown August 1, 2009 at 3:55 AM  
This comment has been removed by the author.
Unknown August 1, 2009 at 3:56 AM  

ಸುಧನ್ವ ಸರ್,
ತು೦ಬಾ ಆಪ್ತ ಬರಹ ..

Anonymous,  August 1, 2009 at 5:58 AM  

ಕಡಲೂ ಮುಳುಗುತ್ತದೆ. ಊರೂ ಮುಳುಗುತ್ತದೆ. ನೆನಪು ಮಾತ್ರ ಮುಳುಗುವುದಿಲ್ಲ.
-ಹರೀಶ್ ಕೇರ

ಸಂದೀಪ್ ಕಾಮತ್ August 1, 2009 at 10:44 AM  

ಕಡಲು ಮುಳುಗಿದರೆ ಕಡಲತೀರವೂ ಮುಳುಗುತ್ತೆ:(

ಛೇ ಬೇಜಾರು....

Sushrutha Dodderi August 2, 2009 at 10:56 PM  

hmmm.. otnalli navu lifeiDee hingE barkotha irthiveno? :(

Anonymous,  August 3, 2009 at 10:34 PM  

ha ha, u r right sush...-sudhanva

ಸಾಗರದಾಚೆಯ ಇಂಚರ August 4, 2009 at 8:42 AM  

ಸುಧನ್ವ ಸರ್,
ಸಮಯೋಚಿತ ಬರಹ. ಶೈಲಿ ಚೆನ್ನಾಗಿ

curry soul August 4, 2009 at 9:49 AM  

I DONOT AGREE WITH U .MORE KANNADA BOOKS AND MAGZINES ARE READ THAN BEFORE.MANY KANNADA NOVELS ARE IN MARKET.U CANNOT EXPECT D SAME OF 20 YEARS NOW.GENERATION GAP AND NEW TECHNOLOGY TAKES OVER.

Anonymous,  August 4, 2009 at 10:32 PM  

ನಿನ್ನೆ ಅಂದರೆ ಆಗಸ್ಟ್ ೪ರ ಸಂಜೆ. ನಮ್ಮ ಮನೆಯಿಂದ ಕೇವಲ ಆರು ಕಿಮೀ ದೂರವಿರುವ ಬೆಳ್ಳಾರೆ ಪೇಟೆ ಮಧ್ಯೆ ಒಂದು ಕೊಲೆ ಯತ್ನ ನಡೆದಿದೆ! ಮಂಗಳೂರಿಗಷ್ಟೇ ಸೀಮಿತವಾಗಿದ್ದ ಇಂಥಹ ಘಟನೆ ತಾಲ್ಲೂಕು ಕೇಂದ್ರವೂ ಆಗಿರದ ಬೆಳ್ಳಾರೆಗೆ ಬಂದದ್ದು ನಮ್ಮನ್ನೆಲ್ಲ ವಿಹ್ವಲಗೊಳಿಸಿದೆ. ಪೇಟೆ ಮಧ್ಯೆ ಚಾಕುವಿನಿಂದ ಇರಿದ ವ್ಯಕ್ತಿ ಕೈ ಒರೆಸಿಕೊಂಡು ಹೋದದ್ದು , ನಾವಂತು ಕನಸಿನಲ್ಲೂ ನಿರೀಕ್ಷಿಸಿರದಿದ್ದ ಚಿತ್ರ. ರಾತ್ರಿ ಪೋನು ಮಾಡಿದ ತಮ್ಮ, ತಲೆದಿಂಬಿನಡಿಯೇ ಚಾಕು ಇಟ್ಟುಕೊಂಡು ಮಲಗ್ತೇನೆ ಅಂದ! -sudhanva

Anonymous,  August 5, 2009 at 1:19 AM  

ತು೦ಬಾ ಆಪ್ತ ಬರಹ. ಈ ಶುಕ್ರವಾರ ಮನೆಗೆ ಹೋಗುವ ಮೂಡಲ್ಲಿ ನಾನಿರುವಾಗ ಸ್ವಲ್ಪ ಜಾಸ್ತೀನೇ ಫೀಲ್ ಕೊಡ್ತಾ ಇದೆ.

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP