ಅದೂ ಇದೂ
ಏನೋ ನೆನಪಾದಂತೆ
ಆ ಮುಖದ ಮೇಲೆ ಬೆರಳಾಡಿಸಿದೆ
ಯಕ್ಷಗಾನದಲಿ ರಂಪವಾಡಿ ಗಂಡಾಂತರವಾದ್ದಕ್ಕೆ ಕ್ಷಮಿಸು
ಪಿಯುಸಿ ಫೇಲ್ ಆದ್ದಕ್ಕೆ, ಯಾವುದೋ ಸ್ಕೀಮಿಗೆ ಹಣ ಮುಗಿಸಿದ್ದಕ್ಕೆ
ಫೋರ್ಜರಿ ಸಹಿ ಹಾಕಿದ್ದಕ್ಕೆ, ಅವಾಗವಾಗ ರೌದ್ರಾವತಾರ ತೋರಿದ್ದಕ್ಕೆ
ಸಿಗರೇಟು ನಿಲ್ಲಿಸೆಂದು ನಿನಗೆ ಒತ್ತಾಯ ಮಾಡದ್ದಕ್ಕೆ
ಕ್ಷಮಿಸಿಬಿಡು ಎನ್ನ ಎಂದು ಫೋಟೊ ತಬ್ಬಿಕೊಂಡರೆ
ಅಂಗಿ ಮುಖಕ್ಕೆಲ್ಲ ದೂಳು, ಅಮ್ಮನಿಗೆ ಬೈಗಳು!
ಕೊನೆಗಾಲ ಅಂತ ಗೊತ್ತಿಲ್ಲದಿದ್ದರೂ ಜನಸೇವೆ ಹೆಚ್ಚಾಗಿ
ಮಧ್ಯಾಹ್ನ ಪೂಜೆ, ರಾತ್ರಿ ಜಪ, ಗಾಂಧಿ ಆತ್ಮಕತೆ, ಗೀತೆ ಓದಿ
ಮನೆಗೆ ಅಗತ್ಯವಾದ್ದು, ಮಕ್ಕಳಿಗೆ ಆಗಬೇಕಾದ್ದೂ ಆಯ್ತು
ಹೆಚ್ಚಾಗದ್ದು ನಿನಗೆ ವಯಸ್ಸೊಂದೆ, ಚೆಲುವ ದೇವನಿಗದೇ ಇಷ್ಟವಾಯ್ತು!
ಮೇಲೆ ಅಜ್ಜನ ಫೋಟೊ
ಅದರ ಮೇಲೆ ಮುತ್ತಜ್ಜನ ಫೋಟೊ
‘ಅಜ್ಜ ಸತ್ತು ಅಪ್ಪ ಸತ್ತು ಮಗ ಸತ್ತು, ಸಾಗಲಿ ಕುಟುಂಬ ಸ್ವಸ್ತಿ’
ಎಂಬ ಝೆನ್ ಗುರುಗಳ ಆಶೀರ್ವಾದ.
ಸಣ್ಣಗೆ ಬೆವರಿ, ಕಣ್ಣ ಒರತೆ ಹೆಚ್ಚಾಗಿ
ಕನ್ನಡಿಯಲಿ ಕೆಂಡದಂಥ ಕಣ್ಣು
ನಿನ್ನೆ ಕುಡಿದದ್ದು ನೆನಪಾಯಿತು !
ಬಣ್ಣಗೆಡುತ್ತಿತ್ತು ಆ ಫೋಟೊ
ತೆಗೆದವರ ಮುಖ ನೆನಪಾಗದೆ ಚಡಪಡಿಸಿದೆ
ನನ್ನದೂ ಹೊಸ ಫೋಟೊ ತೆಗೆಸಿ
ಡಾಕ್ಟ್ರ ಜತೆಗೂ ಮಾತಾಡಲು ಹೊರಟೆ.
ಹಳೇ ಚೇತನ ಸ್ಟುಡಿಯೋದ ಮುದಿ ಫೋಟೊಗ್ರಾಫರ್
ಸುಣ್ಣ ಮೆತ್ತಿದ ಮೇಜಿನ ಹಿಂದಿರುವ ಅನುಗಾಲದ ಡಾಕ್ಟರು
‘ನಿಮ್ಮ ತಂದೆಯವರದ್ದೇ ಇನ್ನೂ ಇಲ್ಲಿದೆ’ ಅಂದರು
ಎಕ್ಸ್‌ರೇ ಶೀಟೊ, ಫೋಟೊ ನೆಗೆಟಿವೊ, ಸಾಲದ ಚೀಟಿಯೊ?
‘ಹತ್ತು ಪ್ರಿಂಟು ಹಾಕಿ’ ಅಂತ ಗಹಗಹಿಸಿ
ಖುಶಿಯಾಗಿ ಮನೆಗೆ ಬಂದೆ !
(ಈ ಪದ್ಯ ಪ್ರಕಟಿಸಿದ ಕೆಂಡಸಂಪಿಗೆ ಬಳಗಕ್ಕೆ ಕೃತಜ್ಞತೆಗಳು. ಫೋಟೋ:ಸುಧನ್ವಾ)
5 comments:
'ಇದೆ' 'ಇಲ್ಲ' ಗಳ ನಡುವೆ ಯಾರಿಗೂ ಕಾಯದೆ ಕಾಲನ ಜತೆ ಸಾಗುವ ನಿರಂತರ ಚಲನಶೀಲ ಬದುಕಿನ ಕಟು ವಾಸ್ತವ ಎಳೆಗಳ ಚಿತ್ರಿಸಿದ ರೀತಿ ಸೊಗಸು..
- ಶಮ, ನಂದಿಬೆಟ್ಟ.
ಸುಧನ್ವ,
ಒಳ್ಳೆಯ ಕವಿತೆ, ಅಫ್ಟರ್ ಎ ಲಾಂಗ್ ಟೈಮ್!! ಗುಡ್ ಗೋಯಿಂಗ್.
ಟೀನಾ
naguvina hindina novu.
superb poem.
-Hani
ಚೆನ್ನಾಗಿದೆಯೆಂದು ಮಾತ್ರ ಹೇಳಲು ನನಗೆ ಶಬ್ದ ಸಿಗುತ್ತಿದೆ ಈ ಸಮಯದಲ್ಲಿ
shama, teena, hani, prasad -thanks a lot -champakavati
Post a Comment