ಥಿಯೇಟರ್ ಹಂಚಿಕೆ
ಮಾಲ್ ಸಂಸ್ಕೃತಿಯೊಂದಿಗೆ ಬಂದ ಮಲ್ಟಿಪ್ಲೆಕ್ಸ್ ಥಿಯೇಟರ್‌ಗಳು, ನಾಲ್ಕೈದು ವರ್ಷಗಳಲ್ಲೇ ಗಗನದೆತ್ತರ ಬೆಳೆದಿದೆ. ಬಾಲಿವುಡ್‌ನ ಸುಮಾರು ಶೇ.೭೦ರಷ್ಟು ಮಾರುಕಟ್ಟೆಯನ್ನು ಪಿವಿಆರ್, ಬಿಗ್ ಸಿನಿಮಾ, ಐನಾಕ್ಸ್, ಫೇಮ್, ಫನ್‌ನಂತಹ ಸಂಸ್ಥೆಗಳ ಮಲ್ಟಿಪ್ಲೆಕ್ಸ್ ಸರಪಳಿ ಆವಾಹಿಸಿಕೊಂಡಿವೆ. ವರ್ಷಕ್ಕೆ ೯೦೦ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾಗುವ ಇಂಡಿಯಾದಲ್ಲಿ, ಮಲ್ಟಿಪ್ಲೆಕ್ಸ್‌ಗೆ ಬರುವ ನೋಡುಗರನ್ನು ದೃಷ್ಟಿಯಲ್ಲಿಟ್ಟೇ ಸಿನಿಮಾ ನಿರ್ಮಾಣ ನಡೆಯುತ್ತಿದೆ. ಟೂರಿಂಗ್ ಟಾಕೀಸ್‌ಗಳ ಆಣೆ-ಪೈಸೆ ಲೆಕ್ಕಾಚಾರದ ದಿನಗಳನ್ನೀಗ ಕಲ್ಪಿಸಿಕೊಳ್ಳುವುದೂ ಕಷ್ಟ. ಐಟಿ ಬೂಮ್ ಜತೆಗೆ ಎದ್ದುಕೊಂಡ ಈ ಮಲ್ಟಿಪ್ಲೆಕ್ಸ್‌ಗಳಿಗೆ ಜನಸಾಮಾನ್ಯರ ಗೊಡವೆ ಇಲ್ಲ. ಚಿತ್ರಗಳಲ್ಲೂ ಅವರು ಕಾಣೆಯಾಗಿದ್ದಾರಲ್ಲ ! ಹಾಗಾಗಿ ಜೇಬು ಗಟ್ಟಿಯಿದ್ದವರಿಗಷ್ಟೇ ಹಿರಿತೆರೆಯ ಭಾಗ್ಯ. (ಉಳಿದವರಿಗೆ ಕಿರುತೆರೆ ಇದೆಯಲ್ಲ!) ಇತ್ತೀಚೆಗಿನ ವರ್ಷಗಳಲ್ಲಿ ಪೈರಸಿ ಹಾವಳಿ ಬಾಲಿವುಡ್‌ನಲ್ಲಿ ಹೆಚ್ಚಾಗಿದೆಯಾ? ಹೆಚ್ಚಾಗಿದ್ದರೆ ಸಿನಿಮಾ ಟಿಕೆಟ್ ಬೆಲೆ ಹೆಚ್ಚಾಗಿರುವುದೂ ಅದಕ್ಕೆ ಮುಖ್ಯ ಕಾರಣವಾ ಎನ್ನುವುದು ಹುಡುಕಬೇಕಾದ ಅಂಶ.
ಸಿನಿಮಾದ ಲಾಭ ಹಂಚಿಕೆಯ ವಿಚಾರದಲ್ಲಿ ನಿರ್ಮಾಪಕರಿಗೂ ಈ ಮಲ್ಟಿಪ್ಲೆಕ್ಸ್ ಮಾಲೀಕರಿಗೂ ಭಿನ್ನಮತ ಶುರುವಾಗಿ, ಕಳೆದ ಏಪ್ರಿಲ್ ೪ರಿಂದ, ಮಲ್ಟಿಪ್ಲೆಕ್ಸ್‌ಗಳಲ್ಲಿ ಬಾಲಿವುಡ್ ಚಿತ್ರಗಳ ಬಿಡುಗಡೆಯನ್ನೇ ನಿಲ್ಲಿಸಲಾಗಿತ್ತು. ಒಂಭತ್ತು ಶುಕ್ರವಾರಗಳು ಬರಿದೇ ಕಳೆದುಹೋದವು. ಎರಡು ತಿಂಗಳ ಮುಷ್ಕರದ ಬಳಿಕ, ಕೊನೆಗೂ ರಾಜಿ ಸೂತ್ರವಾಗಿದೆ. ಆದರೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಒಂದು ಹಿಂದಿ ಸಿನಿಮಾ ಟಿಕೆಟಿಗೆ ಕನಿಷ್ಠ ೧೦೦ ರಿಂದ ರೂ. ೫೦೦ವರೆಗೂ ಇರುವ ಶುಲ್ಕದ ಬಗ್ಗೆ ಏನೂ ಚರ್ಚೆ ಇಲ್ಲ ! ತಮ್ಮತಮ್ಮ ಲಾಭ ಹಂಚಿಕೆಯ ವಿಷಯದಲ್ಲಿ ಜೂನ್೪ರಂದು ಸತತ ಹದಿನಾಲ್ಕು ಗಂಟೆ ಮಾತುಕತೆ ನಡೆಸಿದ ಮುಖಂಡರು, ಮುಷ್ಕರ ನಿಲ್ಲಿಸಿ , ಜೂ.೧೨ರಿಂದ ಚಿತ್ರ ಪ್ರದರ್ಶನ ಆರಂಭಿಸಿದ್ದಾರೆ. ಚಿತ್ರ ಬಿಡುಗಡೆಯಾದ ಮೊದಲ ನಾಲ್ಕು ವಾರಗಳಲ್ಲಿ ಥಿಯೇಟರ್ ಮಾಲೀಕರಿಂದ ನಿರ್ಮಾಪಕರು ಯಾ ವಿತರಕರಿಗೆ, ಕ್ರಮವಾಗಿ ಶೇ. ೫೦-೪೨-೩೫-೩೦ರಂತೆ ಒಟ್ಟು ಆದಾಯದ ಭಾಗ ಸಲ್ಲಲಿದೆ ಎಂಬುದು ಪಂಚಾಯಿತಿಕೆಯಿಂದ ಬಂದ ಸುದ್ದಿ. ಬ್ಲಾಕ್‌ಬಸ್ಟರ್ ಸಿನಿಮಾಗಳಿಗೆ ಅಂದರೆ ೧೭.೫ಕೋಟಿ ರೂಗಿಂತ ಹೆಚ್ಚು ಸಂಗ್ರಹಿಸುವ ಸಿನಿಮಾಗಳಿಗೆ, ಇದು ಕ್ರಮವಾಗಿ ಶೇ. ೫೨-೪೫-೩೮-೩೦ ಆಗಲಿದೆ. ಆದರೆ ಎರಡು ತಿಂಗಳುಗಳಲ್ಲಿ, ಸಿನಿಮಾ ಬಿಡುಗಡೆ ಮಾಡಿ ಅಂತ ಪ್ರೇಕ್ಷಕರು ಪ್ರತಿಭಟಿಸಿದ ಸುದ್ದಿ ಬಂದಿಲ್ಲ. ಯಾವ ಸಿನಿಮಾ ಮಂದಿಯೂ ಅವರನ್ನು ವಿಚಾರಿಸಿಕೊಂಡದ್ದಿಲ್ಲ.
ಈ ಮಧ್ಯೆ ನಮ್ಮ ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ ಸಿನಿಮಾ ಪ್ರದರ್ಶನದ ವೇಳೆಯನ್ನು ಎರಡೆರಡು ಬಾರಿ ಬದಲಿಸಿತು. ಕನ್ನಡ ಸಿನಿಮಾಗಳ ಟಿಕೆಟ್ ದರ ಕಡಿಮೆ ಮಾಡಿತು. ಅಂತಹಾ ಉಪಯೋಗವೇನೂ ಆದಂತಿಲ್ಲ. ಅಂದರೆ ಟಿಕೆಟ್ ದರಕ್ಕೂ ಜನ ಸಿನಿಮಾ ನೋಡೊದಕ್ಕೂ ಸಂಬಂಧವೇ ಇಲ್ಲ ; ಸಿನಿಮಾ ಚೆನ್ನಾಗಿದ್ರೆ ಜಾಸ್ತಿ ದುಡ್ಡು ಕೊಟ್ಟಾದ್ರೂ ಜನ ನೋಡ್ತಾರೆ ಅನ್ನೋದಲ್ಲ. ಮಲ್ಟಿಪ್ಲೆಕ್ಸ್‌ಗಳು ದುಡ್ಡು ಕೊಳ್ಳೆ ಹೊಡೆಯುವುದು, ಕನ್ನಡದ ಥಿಯೇಟರ್‌ಗಳು ಬಡವಾಗುವುದು ಒಳ್ಳೆಯ ಬೆಳವಣಿಗೆ ಅಲ್ಲ.
3 comments:
ಸಿನೇಮಾ ಚೆನ್ನಾಗಿದ್ದರೆ ಬ್ಲ್ಯಾಕ್ ನಲ್ಲಿ ತೆಗೆದುಕೊಂಡು ನೋಡುತ್ತಿರಲಿಲ್ಲವೆ...?
ಒಳ್ಳೆಯ ಗುಣಮಟ್ಟದ ಸಿನೇಮಾ ತಯಾರಾಗಬೇಕು..
ಪೈರಸಿ ನಿಲ್ಲಿಸ ಬೇಕು...
ಮಲ್ಟಿಫ್ಲೆಕ್ಸ್ ಗಳಿಗೆ ಹೋಗುವವರ ಸಂಖ್ಯೆ ಈಗ ಕಡಿಮೆ ಆಗಿದೆ...
recession kaala
prakash, roopa, thanks for ur comments. -champakavati
Post a Comment