ಒಂದು ಲೀವ್ ನೋಟ್
ಏಪ್ರಿಲ್ ೧೦ರಂದು ಶಾಲೆಯ ನೋಟಿಸ್ ಬೋರ್ಡಿನಲ್ಲಿ ‘ಪಾಸಾ ಫೇಲಾ’ ನೋಡಿದರೆ ಮುಗಿಯಿತು. ಮಾರ್ಕುಗಳನ್ನೂ ಹೇಳುವ ಕ್ರಮ ಇಲ್ಲ ! ಫೇಲಾಗುವ ಭಯ ಇರುವವರ್‍ಯಾರೂ ಬೆಳಗ್ಗೆ ಬರುತ್ತಿರಲಿಲ್ಲ. ಅವರು ಮಧ್ಯಾಹ್ನ ನಂತರ ಬಂದು ಇಣುಕಿ ನೋಡಿಕೊಂಡು ಹೋಗುವುದು. ಅಮ್ಮ ಇವತ್ತು ಮಾತ್ರ, ಮಗನ ಒತ್ತಾಯದಂತೆ ತಣ್ಣೀರಿನಲ್ಲೇ ಮಾವಿನ ಹಣ್ಣಿನ ಜ್ಯೂಸ್ ಮಾಡಿಟ್ಟು ಕಾಯುತ್ತಿದ್ದಾಳೆ ! ಮಗ ಎಲ್ಲೇ ಹೋದರೂ, ಏನೇ ಮಾಡಿದರೂ ಕಣ್ಣಿಟ್ಟಿರುತ್ತಿದ್ದ ಅಪ್ಪನಿಗೆ ಇವತ್ತು ಕ್ಯಾರೇ ಇಲ್ಲ ! ಆ ಬಿಸಿಲೇರಿರುವ ಮಧ್ಯಾಹ್ನ, ಮಕ್ಕಳು ಶಾಲೆಯಿಂದ ಹೊರಟರೆ ಲಂಗುಲಗಾಮೇ ಇಲ್ಲ. ಅವರು ಹೋದದ್ದೇ ದಾರಿ. ಒಂದುವಾರ ಬಿಟ್ಟು ಅಜ್ಜನಮನೆಗೆ ಹೋಗುವುದಿದೆ. ಮೈಸೂರಿನಲ್ಲಿರುವ ದೊಡ್ಡಮ್ಮನ ಮನೆಗೆ ಈ ಸಲ ಹೋಗುವುದೇ ಅಂತ ಅಮ್ಮ ಹೇಳಿದ್ದಾಳೆ. ಮಗಳಿಗೆ ಚೆಸ್ ಕಲಿಸಿಕೊಡುತ್ತೇನೆಂದು ಅಪ್ಪನೂ, ಈಜು ಕಲಿಸುತ್ತೇನೆಂದು ಮೇಲಿನ ಮನೆಯ ಚಿಕ್ಕಪ್ಪನೂ, ಸೈಕಲ್ ಕಲಿಸುತ್ತೇನೆಂದು ಕ್ಲಾಸ್‌ಮೇಟ್ ಹನೀಫನೂ ಮಾತುಕೊಟ್ಟಿದ್ದಾರೆ. ಬಿರು ಬೇಸಿಗೆಯ ಈ ರಜೆಯಲ್ಲಿ ಮಕ್ಕಳೂ ಹಣ್ಣಾಗುತ್ತಾರೆ .
ಆದರೀಗ ಬಿಸಿಲುಮಳೆಚಳಿಗಳೊಂದಿಗೆ ಕಾಲವೂ ಬದಲಾಗಿದೆ. ಬೇಸಿಗೆ ರಜೆ ಅಂದರೆ ಸಮ್ಮರ್ ಹಾಲಿಡೇಸ್. ಕಂಪ್ಯೂಟರ್ ಕ್ಲಾಸು, ಡ್ಯಾನ್ಸ್ ಕ್ಲಾಸು, ಎಕ್ಸ್‌ಪರ್ಟ್ ಕೋಚಿಂಗು ಕಡ್ಡಾಯ. ರಜೆಯನ್ನು ಮಕ್ಕಳು ಸದುಪಯೋಗಪಡಿಸುವುದು ಹೇಗೆ ಎಂಬ ಬಗ್ಗೆ ಹಲವು ಅಪ್ಪಅಮ್ಮಂದಿರ ಮಧ್ಯೆ ಗಂಭೀರ ಚರ್ಚೆಗಳು ನಡೆಯುತ್ತವೆ. ಶಾಲೆಯ ದಿನಗಳಲ್ಲಿ ಖರ್ಚಾದಷ್ಟೇ ದುಡ್ಡು ರಜೆಯಲ್ಲೂ ಖರ್ಚಾಗುತ್ತದೆ. ಅಪ್ಪ-ಅಮ್ಮ ಇಬ್ಬರೂ ದುಡಿಯಲು ಹೊರಟಿರುವಾಗ ಮಕ್ಕಳನ್ನು ಏನು ಮಾಡುವುದು, ತಮಗೊಂದು ತುಂಡು ಭೂಮಿಯೂ ಇಲ್ಲದಿರುವಾಗ ಮಗ ಚೆನ್ನಾಗಿ ಕಲಿತು ಸಂಪಾದಿಸಿ ಒಂದೆರಡು ಸೈಟು ಮಾಡುವಂತಾಗಲಿ, ರಜೆ ಅಂತ ಬೇಕಾಬಿಟ್ಟಿ ಉಂಡಾಡಿ ವ್ಯರ್ಥ ಮಾಡುವುದರಲ್ಲಿ ಏನರ್ಥ?...ಹೀಗೆ ನಾನಾ ಯೋಚನೆಗಳು. ಜತೆಗೆ ಹೈಸ್ಕೂಲಿಗೆಲ್ಲಿಗೆ ಕಳುಹಿಸುವುದು, ಯಾವ ಕಾಲೇಜಿಗೆ ಸೇರಿಸುವುದೆಂಬುದಂತೂ ದೊಡ್ಡ ಕಗ್ಗಂಟು. ಆಟದ ಸಮಯ ಈಗಲೂ ಇದೆಯಾದರೂ ಅಜ್ಜನಮನೆಯ ಕಲಿಕೆಯಲ್ಲಿರುವಷ್ಟು ವಿರಾಮ ಇಲ್ಲ. ದುಡ್ಡು ಕೊಟ್ಟ ಮೇಲೆ ಕಲಿಯದೆಯೂ ಇರುವಂತಿಲ್ಲ! ಹೊತ್ತುಹೊತ್ತಿಗೆ ಮಜ್ಜಿಗೆ- ಶರಬತ್ತು ಕುಡಿಯುವ, ಮಾವಿನಕಾಯಿಗೆ ಕಲ್ಲು ಬೀಸುವ, ಅಜ್ಜಿ ಕತೆ ಕೇಳುವ, ತೋಟದಲ್ಲಿ ಓಡಾಡುವ ಗಮ್ಮತ್ತು ಇಲ್ಲ.
ಛೆ ಅಷ್ಟರಲ್ಲಿ ರಜವೇ ಮುಗೀತಲ್ಲ ! ಈ ಮಕ್ಕಳು ಬೆಳಿಯೋದೂ ರಜೆ ಮುಗಿಯೋದೂ ಗೊತ್ತೇ ಆಗಲ್ಲ . ನಮ್ಮ ಆಫೀಸಲ್ಲಂತೂ ಈಗ ಒಂದು ರಜೆ ಹಾಕೋದೂ ಭಾರೀ ಕಷ್ಟ . ಹತ್ತು ದಿನ ರಜಾ ಹಾಕಿ ಉತ್ತರ ಭಾರತ ಪುಣ್ಯ ಕ್ಷೇತ್ರ ದರ್ಶನ ಮಾಡಬೇಕೂಂತ ವರ್ಷಗಳಿಂದ ಆಸೆ. ಈ ಜನ್ಮದಲ್ಲಿ ಆಗಲ್ವೇನೋ. ಇ ಮೇಲ್ ಮಾಡಿ, ನೋಡೋಣ ಅಂತಾರೆ. ಏನ್ ನೋಡೋದು, ನನ್ ಸೆಕ್ಷನ್ ದೀಪಾಗೆ ಕೇಳಿದಾಗೆಲ್ಲ ರಜಾ ಸಿಗತ್ತೆ. ನನಗೆ ಒಂದು ದಿನ ರಜಾ ಸಿಕ್ಕಿದ್ರೆ ಹೆಂಡ್ತಿ ಜತೆ ಸಿಟ್ಟು ಮಾಡ್ಕೊಂಡು ಕೂತಿರ್‍ತೀನಿ !...ಹೂಂ.
2 comments:
:-) :-):-) nice article ... thuba kushui aatu... :-) :-)
you wrote it as 'vishaye' in V.K. alwaa? Liked the style of writing very much
:-)
malathi S
Post a Comment