ಬೆಳ್ಳೇಕೆರೆಯ ಹಳ್ಳಿ ಥೇಟರ್
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಒಂದು ಹಳ್ಳಿ ಬೆಳ್ಳೇಕೆರೆ. ಸಕಲೇಶಪುರ-ಮೂಡಿಗೆರೆ ರಸ್ತೆಯಲ್ಲಿರುವ ಬೆಳ್ಳೇಕೆರೆಯಲ್ಲಿ ನಾಲ್ಕೈದು ಅಂಗಡಿ-ಹೋಟೆಲ್‌ಗಳಿವೆ. ಅದಕ್ಕಿಂತ ಒಂದು ಕಿಮೀ ಹಿಂದೆ ಸಿಗುವುದು ರಕ್ಷಿದಿ. ಅಲ್ಲಿ ಎರಡು ಅಂಗಡಿ, ಸಣ್ಣದೊಂದು ಹೋಟೆಲು, ಪ್ರೈಮರಿ ಸ್ಕೂಲು. ‘ಜೈ ಕರ್ನಾಟಕ ಸಂಘ, ಬೆಳ್ಳೇಕೆರೆ’ ಎಂಬ ಸಂಘದ ಬಹುತೇಕ ಚಟುವಟಿಕೆಗಳ ಕೇಂದ್ರ ಈ ಶಾಲೆ, ಇಲ್ಲಿಯೇ ಅದರ ‘ಪ್ರಕೃತಿ ರಂಗಮಂಚ .’ ರಕ್ಷಿದಿ ಬಸ್‌ಸ್ಟಾಪ್‌ನಿಂದ ಅರ್ಧ ಕಿಮೀ ಮಣ್ಣು ರಸ್ತೆಯಲ್ಲಿ ಸಾಗಿದರೆ ಪ್ರಸಾದ್ ರಕ್ಷಿದಿಯವರ ಹೆಂಚಿನ ಮನೆ . ಕಾಫಿ ಎಸ್ಟೇಟ್ ಒಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಈ ವ್ಯಕ್ತಿ, ಸುತ್ತಲಿನ ಊರುಗಳ ಮ್ಯಾನೇಜರ್ ಕೂಡಾ ಹೌದು ! ಹಳ್ಳಿಯ ಎಲ್ಲ ತರಹದ ಜನರೊಂದಿಗೆ ನಿಕಟ ಒಡನಾಟ ಇಟ್ಟುಕೊಂಡವರು. ಇವರ ಎರಡು ಮುಖ್ಯ ಆಸಕ್ತಿಗಳು ರಾಜಕೀಯ ಮತ್ತು ನಾಟಕ ! ಹ್ಮ್....ಅರ್ಥ ಆಯ್ತು ಅಂತೀರಾ?
ಇಂಥವರಿಗೆ ೨೦೦೬ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯೂ ಬಂತು ! ಎಲ್ಲವನ್ನೂ ನಾನೇ ಹೇಳಿದರೆ ಮಜಾ ಇಲ್ಲ. ಹಳ್ಳಿಯಿಂದ ನಗರಕ್ಕೆ ಸಾಂಸ್ಕೃತಿಕ ವಲಸೆಯೂ ಆರಂಭವಾಗಿರುವ ಈ ದಿನಗಳಲ್ಲಿ , ಹಳ್ಳಿಯನ್ನು ರಕ್ಷಿಸುವಲ್ಲಿ ಬೆಳೆಸುವಲ್ಲಿ ,ಇವರು ಕಳೆದ ೪೦ ವರ್ಷಗಳಲ್ಲಿ ಮಾಡಿದ್ದೇನು? ಉಳಿದದ್ದೇನು? ‘ಬೆಳ್ಳೇಕೆರೆಯ ಹಳ್ಳಿ ಥೇಟರ್’ನಲ್ಲಿ ಅವೆಲ್ಲವನ್ನೂ ಪ್ರಸಾದ್ ರಕ್ಷಿದಿ ತೋರಿಸುತ್ತಿದ್ದ್ದಾರೆ . ಇದು ಕನ್ನಡಕ್ಕೊಂದು ಭಿನ್ನ ಬಗೆಯ, ‘ಗ್ರಾಮೀಣ ರಂಗಭೂಮಿಯ ಆತ್ಮ ಕಥನ .’ ಪ್ರತಿಯೊಂದು ಹಳ್ಳಿಯನ್ನೂ ಪುಟ್ಟ ಭಾರತವಾಗಿಸಬಲ್ಲ ಇಂಥವರ ಕತೆ ಇಂದಿನಿಂದ ‘ಚಂಪಕಾವತಿ’ಯಲ್ಲಿ . ಮೂರನೇ ಬೆಲ್ ಹೊಡೆದಿದೆ, ಹೊರಗಿನ ಬೆಳಕು ಆರಿಸಿದ್ದೇನೆ , ಹಳ್ಳಿ ಥೇಟರ್‌ನಲ್ಲಿ ಕೂರಿಸುತ್ತಿದ್ದೇನೆ , ಪ್ರತಿ ವಾರ ಓದುತ್ತಿರಿ. ನಿಮ್ಮ ಪ್ರತಿಕ್ರಿಯೆಗಾಗಿ ಎರಡು ಊರುಗಳೇ ಕಾಯುತ್ತಿದೆ , ನೆನಪಿರಲಿ.
*****
- ಪ್ರಸಾದ್ ರಕ್ಷಿದಿ
ಅಪ್ಪ ಕೆಲಸದಾಳುಗಳಿಗೆ ವಾರದ ಬಟವಾಡೆ ಮಾಡುತ್ತಿದ್ದರು. ಸಕಲೇಶಪುರದಲ್ಲಿ ಗುರುವಾರ ವಾರದ ಸಂತೆ. ಆದ್ದರಿಂದ ಅಂದು ಸುತ್ತಮುತ್ತಲಿನ ಕಾಫಿ ತೋಟಗಳಿಗೆಲ್ಲ ರಜಾದಿನ. ಪ್ರತಿವಾರವೂ ಬುಧವಾರ ಸಂಜೆ ಆಳುಗಳಿಗೆ ವಾರದ ಬಟವಾಡೆ. ಅಪ್ಪ ಒಬ್ಬೊಬ್ಬರನ್ನೇ ಕರೆದು ಹೆಬ್ಬೆಟ್ಟು ಒತ್ತಿಸಿಕೊಂಡು ವಾರದ ಸಂಬಳ ಬಟವಾಡೆ ಮಾಡುತ್ತಿದ್ದರು. ಇಡೀ ವಾರದ ಜಗಳಗಳ ತೀರ್ಮಾನ, ತಪ್ಪು ದಂಡಗಳು, ಸಾಲ ವಸೂಲಿ ಇನ್ನಿತರ ಎಲ್ಲಾ ವ್ಯವಹಾರಗಳಿಗೂ ಆಗಲೇ ಸಮಯ. ಹಾಗಾಗಿ ಅಪ್ಪನೂ ತಲೆಬಿಸಿಯಲ್ಲಿದ್ದರು. ಈಗಿನಂತೆ ಕ್ಯಾಲುಕುಲೇಟರ್, ಕಂಪ್ಯೂಟರ್‌ಗಳು ಇರಲಿಲ್ಲ. ಎಲ್ಲಾ ಲೆಕ್ಕಗಳೂ ಗುಣಾಕಾರ ಭಾಗಹಾರ ಕೈಬರಹಗಳಲ್ಲೇ ಆಗಬೇಕಿತ್ತು. ಕತ್ತಲಾದರೆ ಬೆಳಕಿಗೆ ಚಿಮಣಿ ದೀಪ. ಕೆಲಸದವರಿಗೂ ಅಷ್ಟೇ, ಕೈಗೆ ದುಡ್ಡು ಸಿಕ್ಕಿದೊಡನೆ- ಅಂಗಡಿ ಸಾಲದವನಿಗೆ, ಕಾಸಿನ ಬಡ್ಡಿಯವನಿಗೆ, ಹೆಂಡದಂಗಡಿಗೆ ಬಾಕಿ ಸಲ್ಲಿಸಿ- ತನಗೆಷ್ಟು ಉಳಿದೀತು ಎಂಬ ಚಿಂತೆ. ವಾರದ ಲೆಕ್ಕವನ್ನೆಲ್ಲ ಬರೆದು ಮಾರನೆ ಬೆಳಗ್ಗೆಯೇ ಲೆಕ್ಕದ ವರದಿಯನ್ನು ತೋಟದ ಮಾಲೀಕರಿಗೆ ಕಳುಹಿಸಬೇಕಿತ್ತಾದ್ದರಿಂದ ಪ್ರತಿ ಬುಧವಾರವೂ ಅಪ್ಪನಿಗೆ ಪಿತ್ತ ನೆತ್ತಿಯಲ್ಲೇ ಇರುತ್ತಿತ್ತು.
ಮನೆ ಎದುರಿನ ಕೋಣೆಯೇ ಎಸ್ಟೇಟಿನ ಆಫೀಸ್. ಒಂದು ದೊಡ್ಡ ಮೇಜಿನ ಹಿಂದೊಂದು ಒಂಟಿ ಕಾಲಿನ ಸ್ಟೂಲು. ಲೆಕ್ಕದ ಪುಸ್ತಕಗಳನ್ನು ಇಡಲು ಪಕ್ಕದ ಗೋಡೆಯಲ್ಲೊಂದು ಮೊಳೆ ಹೊಡೆದು ತಂತಿಯಿಂದ ತೂಗಾಡಿಸಿದ ಹಲಗೆ. ಸ್ವಲ್ಪ ದೂರದಲ್ಲೊಂದು ಸಣ್ಣ ಬೆಂಚು. ಆಫೀಸೆಂದರೆ ಇಷ್ಟೇ. ಅಪ್ಪ ಒಂಟಿ ಕಾಲಿನ ಸ್ಟೂಲಿನಲ್ಲಿ ಕುಳಿತು ಒಬ್ಬೊಬ್ಬರನ್ನಾಗಿ ಹೆಸರು ಕರೆಯುತ್ತಿದ್ದರು. ಹೆಸರು ಕರೆಯುತ್ತಿದ್ದಂತೆ ಆಳುಗಳೆಲ್ಲ ಬಂದು ಸಂಬಳದ ಪಟ್ಟಿಯಲ್ಲಿ ಹೆಬ್ಬೆಟ್ಟು ಒತ್ತಿ ವಾರದ ಸಂಬಳ ಪಡೆಯಬೇಕಿತ್ತು. ಅಪ್ಪ ಅವರ ವಾರದ ಹಾಜರಿಯನ್ನೂ- ಒಟ್ಟು ಸಂಬಳವನ್ನೂ ಗಟ್ಟಿಯಾಗಿ ಓದಿ ಹೇಳುತ್ತಿದ್ದರು. ಕೆಲವೊಮ್ಮೆ ಕೆಲಸಗಾರರಿಗೆ ಕೊಟ್ಟ ಸಾಲದ ಬಾಕಿ ವಸೂಲಿಗಾಗಿ ತಕರಾರು- ಇನ್ನಿತರ ಯಾವುದೇ ವಿಷಯಗಳ ಬಗ್ಗೆ, ವಿಚಾರಣೆ-ಜಗಳ-ಅಪ್ಪನಿಂದ ಬೈಗಳು-ಎಲ್ಲವೂ ಇರುತ್ತಿತ್ತು. ಸಾಮಾನ್ಯವಾಗಿ ಬಟವಾಡೆ ದಿನ ಅಮ್ಮನೂ ಅಲ್ಲೇ ಬಂದು ಸಣ್ಣ ಬೆಂಚಿನ ಮೇಲೆ ಕೂರುತ್ತಿದ್ದಳು. ಸಾಲದ ಬಾಕಿ ವಸೂಲಿಯನ್ನು, ಇನ್ನಿತರ ಕೆಲಸಗಳನ್ನು ಅಮ್ಮ ಅಪ್ಪನಿಗೆ ಕೆಲವೊಮ್ಮೆ ನೆನಪಿಸುತ್ತಿದ್ದಳು. ಹೆಚ್ಚಿನ ಆಳುಗಳೆಲ್ಲ ಹೆಬ್ಬೆಟ್ಟು ಒತ್ತಿ, ಶಾಯಿ ಮೆತ್ತಿದ ಬೆರಳನ್ನು ಮೇಜಿಗೆ ಒರೆಸುತ್ತಿದ್ದರು. ಅಮ್ಮ ಅದನ್ನು ನೋಡಿ ಸಿಡಿಮಿಡಿಗೊಂಡು ಅವರಿಗೆ ಬಯ್ಯುತ್ತಿದ್ದಳು. ಹಾಗಾಗಿ ಆಳುಗಳೆಲ್ಲ ಅಮ್ಮ ಎದುರಿಗೆ ಇದ್ದಾಗಲೆಲ್ಲಾ ರುಜು ಮಾಡಿದ ನಂತರ ಶಾಯಿ ಮೆತ್ತಿದ ಹೆಬ್ಬೆಟ್ಟನ್ನು ತಮ್ಮ ತಲೆಗೇ ಉಜ್ಜಿಕೊಳ್ಳುತ್ತಿದ್ದರು! ಅಂದಿನ ಬಟವಾಡೆ ಮುಗಿಯುತ್ತಾ ಬಂದಿತ್ತು. ಅಪ್ಪ ಕರೆದರು,
'ಲಕ್ಷ್ಮಯ್ಯ......' ಲಕ್ಷ್ಮಯ್ಯ ಸುಮಾರು ಹದಿನೆಂಟು ವರ್ಷದ ಕಟ್ಟುಮಸ್ತಾದ ಆಳು. ಅಲ್ಲದೆ ಒಳ್ಳೇ ಕೆಲಸಗಾರನೂ ಆಗಿದ್ದು ಹೇಳಿದ ಕೆಲಸವನ್ನು ಮುತುವರ್ಜಿಯಿಂದ ಮಾಡುತ್ತಿದ್ದ. ಹಾಗಾಗಿ ಹೆಚ್ಚಿನ ಜವಾಬ್ದಾರಿಯ ಕೆಲಸಗಳನ್ನು ಅಪ್ಪ ಅವನಿಗೇ ವಹಿಸುತ್ತಿದ್ದರು. ಇತರ ಆಳುಗಳು ಕೂಡಾ 'ರೈಟರಿಗೆ ಬೇಕಾದವ' ನೆಂದು ಅವನಿಗೆ ಸ್ವಲ್ಪ ಹೆದರುತ್ತಿದ್ದರು.
ಲಕ್ಷ್ಮಯ್ಯ ಬಂದು ಹೆಬ್ಬೆಟ್ಟು ಪ್ಯಾಡಿಗೆ ಒತ್ತಿ ರುಜು ಮಾಡಬೇಕೆನ್ನುವಷ್ಟರಲ್ಲಿ- ಅವನ ಹೆಸರಿನ ಪಟ್ಟಿ ಅಪ್ಪನಿಗೆ ಕಾಣಿಸಲಿಲ್ಲ. ಹೆಬ್ಬೆಟ್ಟು ಒತ್ತಲು ಹುಡುಕುತ್ತಿದ್ದ ಲಕ್ಷ್ಮಯ್ಯನಿಗೆ 'ನಿಲ್ಲು ನಿಲ್ಲು' ಎಂದರು. ಲಕ್ಷ್ಮಯ್ಯ ಸುಮ್ಮನೆ ನಿಂತ. ಒಂದೆರಡು ಕ್ಷಣದಲ್ಲಿ ಅಭ್ಯಾಸ ಬಲದಿಂದ ಹೆಬ್ಬೆಟ್ಟಿಗೆ ಮೆತ್ತಿದ ಶಾಯಿಯನ್ನು ಮೇಜಿಗೇ ಒರೆಸಿದ. ಅಮ್ಮ ಕಿಡಿಕಿಡಿಯಾದಳು. 'ನಿಂಗೂ ಬುದ್ಧಿ ಇಲ್ವ ಲಕ್ಷ್ಮಯ್ಯ, ಮೆತ್ತಿದಿಯಲ್ಲ ಮೇಜಿಗೆ' ಎಂದಳು. ಲಕ್ಷ್ಮಯ್ಯ ಗಾಬರಿಯಾಗಿ ಅಲ್ಲಿದ್ದ ಯಾವುದೋ ಕಾಗದವನ್ನು ತೆಗೆದು ಮೇಜಿಗೆ ಮೆತ್ತಿದ ಶಾಯಿಯನ್ನು ಒರೆಸಿಬಿಟ್ಟ. ಅವನ ದುರಾದೃಷ್ಟಕ್ಕೆ ಅದು ಅಪ್ಪ ಏನೋ ಲೆಕ್ಕ ಬರೆದಿಟ್ಟ ಹಾಳೆಯಾಗಿತ್ತು. 'ಹಾಳು ಮಾಡಿದಿಯಲ್ಲ ಎಲ್ಲ. ನಾನಿನ್ನು ಒಂದು ಗಂಟೆ ಕೂತುಕೊಂಡು ಬರೀಬೇಕು. ನಿಮಗೆಲ್ಲಾ ಒಂದು ಸೈನ್ ಮಾಡೋದು ಕಲಿಯಕ್ಕೇನು ರೋಗ- ಒಳ್ಳೇ ಕೋಣನ ಹಾಗೆ ಬೆಳೆದಿದ್ದೀಯ' ಅಪ್ಪ ಜೋರಾಗಿಯೇ ಹೇಳಿದರು. ಉಳಿದ ಕೆಲಸದವರಲ್ಲಿ ಹೆಚ್ಚಿನವರಿಗೆ ಲಕ್ಷ್ಮಯ್ಯನ ಬಗ್ಗೆ ಸಣ್ಣ ಅಸೂಯೆಯೂ- ಸ್ವಲ್ಪ ಹೆದರಿಕೆಯೂ ಇದ್ದುದರಿಂದ ಈಗ ಅವನಿಗೇ 'ಮರ್ಯಾದಿ' ಆಗುತ್ತಿರುವುದನ್ನು ನೋಡಿ ಖುಷಿಪಡಲು ಸುತ್ತ ಸೇರಿದರು.
ಲಕ್ಷ್ಮಯ್ಯನಿಗೂ ಅವಮಾನವಾದಂತಾಗಿ 'ಏನೋ ಒಂದು ಸಣ್ಣ ತಪ್ಪಾದ್ರೆ ಅದಕ್ಯಾಕೆ ಹಂಗೆ ಕೂಗಾಡ್ತೀರಿ ಅಯ್ಯ" ಎಂದ. 'ಇನ್ನೇನು ನಿಂಗೆ ಹಾರ ಹಾಕಿ ಕೈ ಮುಗೀತೀನಿ. ನಾನು ಅಷ್ಟು ಕಷ್ಟಪಟ್ಟು ಬರೆದದ್ನೆಲ್ಲ ಹಾಳು ಮಾಡಿದೆ. ಎರಡಕ್ಷರ ಕಲಿಯಕ್ಕೇನು ರೋಗ ನಿಮಗೆಲ್ಲಾ' ಎಂದು ಇನ್ನಷ್ಟು ಬೈದರು. ಲಕ್ಷ್ಮಯ್ಯನಿಗೆ ಭಾರೀ ಅವಮಾನವಾಯ್ತು. 'ನಂಗೆ ಸಂಬ್ಳನೇ ಬೇಡ ನೀವೇ ಮಡಿಕ್ಕಳಿ' ಎಂದು ಸಿಟ್ಟಿನಿಂದ ದುಡುದುಡು ಹೋಗಿಬಿಟ್ಟ. ಅಪ್ಪನೂ ಸ್ವಲ್ಪ ಹೊತ್ತು ಕೂಗಾಡುತ್ತಾ ಇದ್ದರು. ನಾನಾಗ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದೆ. ಬೇಸಗೆ ರಜೆ ಬಂದಿತ್ತು. ಲಕ್ಷ್ಮಯ್ಯ ಅಪ್ಪನಿಗೆ ಹೇಗೆ ಹತ್ತಿರದವನೋ- ನನಗೂ ಹಾಗೇ. ರಜಾದಿನಗಳಲ್ಲಿ ಕಾಡು ಕಾಡು ಸುತ್ತಲು-ಅವನೇ ಬೇಕು. ನಾನು ಸಣ್ಣವನಾದರೂ ರೈಟರ ಮಗನಾದುದರಿಂದ ನನ್ನನ್ನು ಉಳಿದ ಆಳುಗಳೆಲ್ಲ ಬಹುವಚನದಿಂದ 'ಹೋಗಿ ಬನ್ನಿ' ಎನ್ನುತ್ತಿದ್ದರು. ಲಕ್ಷ್ಮಯ್ಯ ಮಾತ್ರ ಸಲುಗೆಯಿಂದ 'ಹೋಗು-ಬಾ' ಎನ್ನುತ್ತಿದ್ದ. ಮರದಿಂದ ಹಲಸಿನ ಹಣ್ಣು ಕಿತ್ತುಕೊಡಲು, ಬೇರೆ ಕಾಡು ಹಣ್ಣುಗಳನ್ನು ಕೊಯ್ದುಕೊಡಲು-ಎತ್ತಿನಹಳ್ಳದಲ್ಲಿ ಈಜಾಡಲು ಹೋಗಲು-ಸಕಲೇಶಪುರದ ಜಾತ್ರೆಗೆ ಹೋಗಿ ಸಿನಿಮಾ ನೋಡಿ-ರಾತ್ರಿಯೆಲ್ಲ ನಿದ್ದೆಗೆಟ್ಟು ಜಾತ್ರೆ ಸುತ್ತಿ ಬರಲು, ನನಗೆ ಲಕ್ಷ್ಮಯ್ಯನೇ ಜೊತೆ. ಕಳೆದ ವರ್ಷ ಜಾತ್ರೆಯಲ್ಲಿ ನನಗೆ ಲಕ್ಷ್ಮಯ್ಯ 'ಆಯಿರತ್ತಿಲ್ ಒರುವನ್’ ಸಿನಿಮಾ ತೋರಿಸಿದ್ದ. ಹಾಗಾಗಿ ಅಪ್ಪ ಮತ್ತು ಲಕ್ಷ್ಮಯ್ಯನ ಜಗಳದಿಂದ ಅತ್ಯಂತ ಆತಂಕಕ್ಕೊಳಗಾದವನು ನಾನೇ. ಇವರ ಜಗಳದಿಂದ ಲಕ್ಷ್ಮಯ್ಯನ ಒಡನಾಟ ತಪ್ಪಿದರೆ ಎಂಬ ಚಿಂತೆಯ ಜೊತೆಗೆ, ಯಾರದ್ದು ಸರಿ ಎಂದು ತಿಳಿಯದ ಗೊಂದಲವೂ ಸೇರಿತು. ಇದೇ ಚಿಂತೆಯಲ್ಲಿ ರಾತ್ರಿ ಮಲಗಿದವನಿಗೆ ತುಂಬ ಹೊತ್ತು ನಿದ್ದೆಯೇ ಬರಲಿಲ್ಲ.
ರಜಾ ದಿನಗಳಾದ್ದರಿಂದ ಬೆಳಿಗ್ಗೆ ಅಮ್ಮನೂ ಬೇಗ ನನ್ನನ್ನು ಕರೆಯುತ್ತಿರಲಿಲ್ಲ. ನಾನು ತಡವಾಗಿ ಎದ್ದು ಕಣ್ಣುಜ್ಜಿಕೊಂಡು ಹೊರಗೆ ಬರುವಾಗ ನನಗೊಂದು ಆಶ್ಚರ್ಯ ಕಾದಿತ್ತು. ಅಪ್ಪನೂ ಲಕ್ಷ್ಮಯ್ಯನೂ ಹಿಂದಿನ ದಿನ ಏನೂ ಆಗಿಲ್ಲವೆಂಬಂತೆ ಮಾತಾಡುತ್ತಿದ್ದರು! ಅಪ್ಪ ಲಕ್ಷ್ಮಯ್ಯನಲ್ಲಿ ಸಕಲೇಶಪುರದಿಂದ ಏನೋ ಸಾಮಾನು ತರಲು ಹೇಳುತ್ತಿದ್ದರು. ಅವನೂ ಇನ್ನೇನೋ ಹೇಳಿ ಅದಕ್ಕೆಂದು ದುಡ್ಡು ತೆಗೆದುಕೊಳ್ಳುತ್ತಿದ್ದ. ಇವರು ಯಾವಾಗ ರಾಜಿಯಾದರು? ಲಕ್ಷ್ಮಯ್ಯ ಯಾವಾಗ ತನ್ನ ಸಂಬಳ ತೆಗೆದುಕೊಂಡ?-ತಿಳಿಯಲಿಲ್ಲ. ನನಗಂತೂ ಖುಷಿಯಾಗಿತ್ತು. ಲಕ್ಷ್ಮಯ್ಯ ಅಪ್ಪನೊಂದಿಗೆ ಮಾತುಕತೆ ಮುಗಿಸಿ ಹೊರಟಾಗ ನಾನು ಅವನ ಹಿಂದೆಯೇ ಹೋದೆ. ಅವನು ನನ್ನನ್ನು ಚಕ್ಕೋತದ ಹಣ್ಣಿಗಾಗಿ ಎಲ್ಲಿಗೋ ಕರೆದೊಯ್ಯುವ ಆಶ್ವಾಸನೆ ನೀಡಿದ್ದ. 'ಲಕ್ಷ್ಮಯ್ಯ ಚಕ್ಕೋತ್ನಣ್ಣು' ಎಂದೆ. 'ಮಧ್ಯಾಹ್ನ ಬೇಗ ಬರ್‍ತೀನಿ ಹೋಗಾಣ' ಯಾಕೋ ಲಕ್ಷ್ಮಯ್ಯ ಹೆಚ್ಚು ಮಾತಾಡಲಿಲ್ಲ- 'ನೀನು ಹೋಗು ಮನೆಗೆ ' ಅಂದುಬಿಟ್ಟ. (ಇನ್ನೂ ಇದೆ)
4 comments:
ಸುಧನ್ವ,
ಯಾಕೋ ಗೊತ್ತಿಲ್ಲ ನಿಮ್ಮ ಬರಹಗಳು ನಾನು ಚಿಕ್ಕವಳಿದ್ದಾಗ ನೋಡಿದ ಯಕ್ಷಗಾನ ಮತ್ತು ಹೆಗ್ಗೋಡಿನ ನಾಟಕಗಳ ಮಿಶ್ರಣದ ಆಪ್ತತೆ ತಂದುಕೊಡುತ್ತವೆ. ಚಂಪಕಾವತಿ ಅಂತ ನೋಡಿದ ಕೂಡಲೆ ನೀಲಧ್ವಜ,ಸುಧನ್ವ, ಪ್ರಭಾವತಿ ಮತ್ತು ಅರ್ಜುನ ನೆನಪಾಗುತ್ತಾರೆ. ನಿಮ್ಮ ಬರಹಗಳ ಚಿತ್ರಕ ಶಕ್ತಿ ಹೆಗ್ಗೋಡಿನ ರಂಗಸ್ಥಳದ ಕತ್ತಲಲ್ಲಿ ಸ್ಫುಟವಾಗಿ ಮೂಡಿಬರುತ್ತಿದ್ದ ಬೆಳಕಿನ ಚಿತ್ರಗಳಂತೆ ಅನಿಸುತ್ತದೆ. ಅದಕ್ಕೆ ಸರಿಯಾಗಿ ನೀವು ನಾಟಕದ ಸೆಟ್ ಅಪ್ ಇಟ್ಟು ಈ ಕತೆ/ಬದುಕನ್ನು ಬಿಚ್ಚಿಡುತ್ತಿದ್ದೀರಿ. ಪ್ರತಿವಾರವೂ ಮೂರನೆ ಬೆಲ್ ಹೊಡೆಯುವುದರೊಳಗೆ ಮುಂದಿನಿಂದ ಎರಡನೇ ಸಾಲಿನ, ಮೊದಲ ಕುರ್ಚಿಯಲ್ಲಿ ಕೂತು ಕಾಯುತ್ತೇನೆ - ಹಳ್ಳೀ ಥೇಟರ್ ಸರಣಿಗೆ.
ಪ್ರೀತಿಯಿಂದ
ಸಿಂಧು
ಸುಧನ್ವ,
ಈ ಸರಣಿಯ ಮೊದಲ ಭಾಗವೇ ಆಪ್ತವಾಗಿದೆ. ಬರವಣಿಗೆಯ ಬಗ್ಗೆ ಸಿಂಧು ಅವರೇ ಉತ್ತಮ ಮಾತುಗಳನ್ನು ಹೇಳಿರುವಾಗ ನಾನಿನ್ನು ಅದರ ಬಗ್ಗೆ ಕೊರೆಯುವುದು ಗೌಣವೆನಿಸುತ್ತದೆ. ಪಾಡ್ದನಗಳ ಕೊಡುಗೆಯ ನಂತರ ಈಗ ಹಳ್ಳಿ ಥೇಟರ್ - ನಾವೆಲ್ಲಾ ಅದೃಷ್ಟವಂತರು!
ಗಮನಿಸಿ:
ನನ್ನ ಪ್ರಸ್ತಾವನೆಯಲ್ಲಿರುವ ದೋಷವೋ ಅರಿಯೆ. ‘ಹಳ್ಳಿ ಥಿಯೇಟರ್’ ನಾನು ನಿರೂಪಿಸುತ್ತಿರುವ ಆತ್ಮಕಥನ ಅಲ್ಲ. ಅದು ಪ್ರಸಾದ್ ರಕ್ಷಿದಿಯವರೇ ಬರೆದ ಆತ್ಮಕಥನ.
-ಸುಧನ್ವಾ
ಸುಧನ್ವ,
ನಾನು ಗಮನಿಸಿದ್ದೇನೆ ಇದು ಪ್ರಸಾದ್ ರಕ್ಷಿದಿಯವರ ಕತೆ ಅಂತ. ನನ್ನ ಕಾಮೆಂಟಿನಲ್ಲಿ ನಾನು ಹೇಳಿರುವುದು ಕತೆಯೊಂದನ್ನು ನಾಟಕದ ರೂಪಕವಾಗಿಸಿ ಬ್ಲಾಗ್ ರಂಗಸ್ಥಳಕ್ಕೆ ತಂದ ನಿಮ್ಮ ಪ್ರತಿಭೆಯ ಬಗ್ಗೆ. ರಕ್ಷಿದಿಯವರ ಕತೆಯ ಬಗ್ಗೆ ಇನ್ನೂ ಓದಿ ಬರೆಯಬೇಕು. ಕಾಯ್ತಾ ಇದೀನಿ ಮುಂದಿನ ಪ್ರದರ್ಶನಕ್ಕೆ.
ಪ್ರೀತಿಯಿಂದ
ಸಿಂಧು
Post a Comment