September 26, 2008

ನಮ್ ಆಫೀಸಲ್ಲಿ ಹಂಗೇನಿಲ್ಲ ..!

ತಾವು ಕೆಲಸ ಮಾಡುವ ಕಚೇರಿಗಳ ಬಗ್ಗೆ ಮುಕ್ತ ಕಂಠದಿಂದ ಪ್ರಶಂಸೆ ಮಾಡುವವರು ಬಹಳ ಕಡಿಮೆ. ಪ್ರತಿಯೊಬ್ಬರಿಗೂ ಏನಾದರೊಂದು ತಕರಾರು ಇದ್ದೇ ಇರುತ್ತದೆ. ಕ್ಯಾಂಟೀನ್, ಬಾಸ್‌ಗಳು, ಕೆಲಸದ ರೀತಿ, ಸಮಯ...ಹೀಗೆ ಯಾವುದಾದರೊಂದು ವಿಷಯದ ಬಗ್ಗೆ ದೂರುಗಳು ಇಲ್ಲದಿಲ್ಲ. ಹೀಗಾಗಿ ಪತ್ರಿಕಾಲಯದಲ್ಲೂ ಅವು ಇರಲೇಬೇಕಲ್ಲ!

ಕೆಲವರಿಗೆ ಕ್ಯಾಂಟೀನ್ನಲ್ಲಿ ತಿನ್ನೋದೆಂದರೆ ಬೋರು. ಹಾಗಂತ ತಿನ್ನುವಾಗಲೂ ತಮ್ಮದೇ ಸೀಟಿನಲ್ಲಿ ಕುಳಿತುಕೊಳ್ಳುವುದೆಂದರೆ ಅಲರ್ಜಿ. ತಿನ್ನುವುದಕ್ಕಾದರೂ ಒಂದು ಹೊಸ ಜಾಗ ಬೇಕಲ್ಲ ಅಂತ, ಯಾರು ಕೆಲಸ ಮುಗಿಸಿ ಹೋಗಿರುತ್ತಾರೋ ಅವರ ಆಸನದಲ್ಲಿ ವಿರಾಜಮಾನರಾಗುತ್ತಾರೆ. ಅಲ್ಲಿಗೆ ಎಲ್ಲರನ್ನೂ ಕಾ ಕಾ ಕಾ ಅಂತ ಕರೆದು ಹಂಚಿ ತಿಂದರೆ ಅವರಿಗೆ ಸ್ವರ್ಗ ಸುಖ. ಮರುದಿನ ಆ ಸೀಟಿನ ವ್ಯಕ್ತಿ ಬಂದರೆ, ತಿಂದವರು ಕೈ ಒರೆಸಿಕೊಂಡ ಗುರುತಂತೂ ಅಲ್ಲಿ ಇದ್ದೇ ಇರುತ್ತದೆ !
 
ಇದರಿಂದ ಬೇಸತ್ತ ಮಿಸ್ಟರ್ ಕ್ಲೀನ್ ಒಬ್ಬರು, ತಾವೆದ್ದು ಹೋಗುವ ಮೊದಲು, ತಮ್ಮ ಕಂಪ್ಯೂಟರ್ ಮಾನಿಟರ್‌ನ್ನೇ ನೋಟೀಸು ಫಲಕವನ್ನಾಗಿ ಮಾಡಿ ಹೋದ ಚೆಂದ ಇದು. 'ತಿಂಡಿಪೋತರಿಗೆ ಮನವಿ' ಎಂಬ ಶೀರ್ಷಿಕೆಯಲ್ಲಿ ನಾಲ್ಕು ಎಚ್ಚರಿಕೆಯ ಮಾತುಗಳನ್ನೂ ಬರೆದು ಹೋಗಿದ್ದಾರೆ. ತಿಂದು ಚಿತ್ರಾನ್ನ ಮಾಡುವವರನ್ನು ಅಲ್ಲಿ ಕಟು ಶಬ್ದಗಳಿಂದ ಎಚ್ಚರಿಸಲಾಗಿದೆ. 

ಎಲ್ಲರೂ ಟಿಫಿನ್ ಬಾಕ್ಸ್, ಪ್ಲೇಟ್ ಸಮೇತ ಅದರೆದುರು ಬಂದು ಓದುತ್ತಿದ್ದ ಚೆಂದವನ್ನು, ಛೆ ನೀವೆಲ್ಲರೂ ನೋಡಬೇಕಿತ್ತು !

Read more...

September 22, 2008

ಹಳ್ಳಿ ಥೇಟರ್‌ನಲ್ಲಿ ಸಿಹಿ ಸುದ್ದಿ

ಸಕಲೇಶಪುರದಿಂದ ಪ್ರಸಾದ್ ರಕ್ಷಿದಿಯವರು ಬರೆಯುತ್ತಿರುವ 'ಬೆಳ್ಳೇಕೆರೆಯ ಹಳ್ಳಿ ಥೇಟರ್' ಸರಣಿಯ ೬ನೇ ಭಾಗವಿದು. ಸದ್ಯದಲ್ಲೇ ಇದು ಮುಂದಿನ ಭಾಗಗಳೊಂದಿಗೆ ಪುಸ್ತಕ ರೂಪದಲ್ಲಿ 'ಅಭಿನವ ಪ್ರಕಾಶನ'ದಿಂದ ಹೊರಬರಲಿದೆ. ಅಲ್ಲಿಯವರೆಗೆ ಚಂಪಕಾವತಿಯಲ್ಲಿ ಇದು ಮುಂದುವರಿಯುತ್ತದೆ.

ಕಿತ್ತಲೆ ಕಂಟ್ರ್ಯಾಕ್ಟ್ ಮತ್ತು ರಂಗಸಜ್ಜಿಕೆ
ರಾತ್ರಿ ಶಾಲೆಯಲ್ಲಿ ಓದಿನ ಜೊತೆಗೆ ಸರಳ ಲೆಕ್ಕಗಳನ್ನು ಹೇಳಿ ಕೊಡುತ್ತಿದ್ದೆ. ಅವರ ಸಂಬಳದ ಲೆಕ್ಕ - ಬೋನಸ್ ಲೆಕ್ಕ, ಒಂದು ಕಿಲೋಗ್ರಾಂ ಕಾಫಿ ಹಣ್ಣು ಕೊಯ್ದದ್ದಕ್ಕೆ ೧೫ ಪೈಸೆಯಾದರೆ ೧೨೦ ಕೆ.ಜಿ.ಗೆ ಎಷ್ಟು? ಹೀಗೆ ವಿಷಯಗಳು ನೇರವಾಗಿ ಅವರ ಸಮಸ್ಯೆಗಳಿಗೇ ಸಂಬಂಧಿಸಿದ್ದು ಬೇಗ ಬೇಗ ಕಲಿಯುತ್ತಿದ್ದರು. ಪಠ್ಯಪುಸ್ತಕಗಳಿಗೆ ಬದಲಾಗಿ ಹಳೇ ದಿನ ಪತ್ರಿಕೆಗಳು (ನಮ್ಮೂರಿಗೆ ಆಗ ದಿನ ಪತ್ರಿಕೆಗಳು ಬರುತ್ತಿರಲಿಲ್ಲ) ಚಿತ್ರಗೀತೆ ಪುಸ್ತಕಗಳು, ಸಿನಿಮಾ ಮ್ಯಾಗಜೀನ್‌ಗಳು ಹೀಗೆ ಅವರ ಆಸಕ್ತಿಯ ಪುಸ್ತಕಗಳನ್ನು ಕೊಡುತ್ತಿದ್ದೆ. ಸಂತೆಯಿಂದ ತರಬೇಕಾದ ಸಾಮಾನುಗಳ ಪಟ್ಟಿ ಮಾಡಲು ಹೇಳುತ್ತಿದ್ದೆ. ರೇಡಿಯೋದಲ್ಲಿ ಕೇಳಿದ ಸಿನಿಮಾ ಹಾಡುಗಳನ್ನಂತೂ ಅವರು ಉತ್ಸಾಹದಿಂದ ಬರೆದುಕೊಳ್ಳುತ್ತಿದ್ದರು. ಹೀಗೆ ಮಳೆಗಾಲವಿಡೀ ಬೇರೆ ಯಾವುದೇ ಚಟುವಟಿಕೆಗಳಿಲ್ಲದೆ ಶಾಲೆ ನಿರಾತಂಕವಾಗಿ ನಡೆಯುತ್ತಿತ್ತು. ದೇಶದ ರಾಜಕೀಯದಲ್ಲಿ ಮತ್ತೆ ಬದಲಾವಣೆಯಾಗಿತ್ತು. ನಮ್ಮಂತಹವರ ಕನಸಿನ ಜನತಾಪಕ್ಷ ಭ್ರಮೆಯಾಗಿ ಕುಸಿದು ಹೋಗಿ ಮತ್ತೆ ಇಂದಿರಾ ಆಡಳಿತ ಬಂದಿತ್ತು.

ಈ ಸಂದರ್ಭದಲ್ಲಿ ಇನ್ನೊಂದು ಘಟನೆ ನಡೆಯಿತು. ನಾನು ಡೈರಿ ಕೆಲಸದಲ್ಲಿದ್ದರೂ, ಈ ಊರಲ್ಲೇ ಬೆಳೆದವನಾದ್ದರಿಂದ ನನಗೆ ಎಸ್ಟೇಟಿನ ಹೊರಗೂ ಸಾಕಷ್ಟು ಗೆಳೆಯರಿದ್ದರು. ಅಪ್ಪ ಇನ್ನೂ ತೋಟದ ಕೆಲಸದಲ್ಲಿದ್ದರು. ತೋಟದ ಹೊರಗೂ ನಮಗೆ ಸೌಹಾರ್ದ ಸಂಬಂಧಗಳಿದ್ದುದರಿಂದ ತೋಟದ ಒಳಗಾಗಲೀ ಹೊರಗಿನಿಂದಾಗಲೀ ಕಳ್ಳತನದಂತಹ ಸಮಸ್ಯೆಗಳು ಅಷ್ಟಾಗಿ ಇರಲಿಲ್ಲ.
ಪ್ರತಿವರ್ಷವೂ ತೋಟದ ಕಿತ್ತಲೆ ಫಸಲನ್ನು ಯಾರಿಗಾದರೂ ಹೊರಗಿನವರಿಗೆ ಗುತ್ತಿಗೆಗೆ ಕೊಡುವುದು ವಾಡಿಕೆ. ಗುತ್ತಿಗೆ ವಹಿಸಿಕೊಂಡವರು ಎಷ್ಟೇ ಪಾರ ಮಾಡಿದರೂ ಕೂಡಾ ಜನರು ತಿನ್ನುವ ಆಸೆಯಿಂದ ಕಿತ್ತಲೆ ಹಣ್ಣನ್ನು ಕದಿಯುವುದು ಬಿಡುತ್ತಿರಲಿಲ್ಲ. ಇಂದೂ ಬಿಟ್ಟಿಲ್ಲ. ಆ ವರ್ಷ ಗುತ್ತಿಗೆ ಮಾಡಿಕೊಂಡವನಿಗೂ - ನಮ್ಮ ಕೆಲವು ಹುಡುಗರಿಗೂ ಯಾವುದೋ ಸಣ್ಣ ವಿಷಯಕ್ಕೆ ಜಗಳ ಬಂತು. ಅದರಿಂದಾಗಿ ಹುಡುಗರು ಸ್ವಲ್ಪ ಹೆಚ್ಚೇ ಕಿತ್ತಲೆ ಹಣ್ಣು ಕದ್ದರು. ಗುತ್ತಿಗೆದಾರ ಇದಕ್ಕೆಲ್ಲ ನಾನೇ ಕಾರಣವೆಂದು 'ನಿಮ್ಮ ಮಗನೇ ಹುಡುಗರನ್ನೆಲ್ಲಾ ಅಟ್ಟಕ್ಕೇರಿಸಿ ಹಾಳು ಮಾಡಿಟ್ಟಿದ್ದಾರೆ!' ಎಂದು ಅಪ್ಪನಲ್ಲಿ ದೂರಿದ. ಅಪ್ಪನಿಗೆ ಇಕ್ಕಟ್ಟಾಯಿತು. ನನ್ನನ್ನು ಕರೆದು 'ನಿನ್ನ ಪಡೆಯಿಂದಾಗಿ ನನ್ನ ಮರ್ಯಾದೆ ಹೋಗುತ್ತಿದೆ.'ಎಂದು ಬಯ್ದರು. ನಾವೆಲ್ಲ ಸೇರಿ ಕಿತ್ತಲೆ ಹಣ್ಣು ಕದಿಯುವುದನ್ನು ನಿಲ್ಲಿಸುವ ಬದಲಿಗೆ ಗುತ್ತಿಗೆದಾರನಿಗೆ ಬುದ್ಧಿ ಕಲಿಸಬೇಕೆಂದು ತೀರ್ಮಾನಿಸಿದೆವು!
ನಮ್ಮ ಡೈರಿ ಫಾರಂನಲ್ಲಿ ಒಂದು ಬೀಜದ ಹೋರಿಯಿತ್ತು. ಅದು ದೈತ್ಯ ಗಾತ್ರದ ಹೆಚ್.ಎಫ್. ತಳಿಯ ಹೋರಿ. ಅದಕ್ಕೆ ಡೈರಿ ಕೆಲಸಗಾರರಲ್ಲದೆ ಬೇರೆಯವರನ್ನು ಕಂಡರೆ ಹಾಯುವ ಅಭ್ಯಾಸವೂ ಇತ್ತು. ಅದು ಬಂತೆಂದರೆ ಡೈರಿ ಕೆಲಸಗಾರರು ಬಿಟ್ಟು ಬೇರೆ ಯಾರೂ ಹತ್ತಿರ ಬರುತ್ತಿರಲಿಲ್ಲ. ಅದನ್ನು ಪ್ರತಿದಿನ ಸ್ವಲ್ಪ ಹೊತ್ತು ಹೊರಗೆ ತಿರುಗಾಡಲು ಬಿಡುತ್ತಿದ್ದೆವು. ಪ್ರತಿದಿನ ಅದು ತಪ್ಪಿಸಿಕೊಂಡಿತೆಂದು ಹೇಳಿ ಅದನ್ನು ಬೇಕೆಂದೇ ತೋಟಕ್ಕೆ ಬಿಡುವುದು; ಅದು ಹೋದಂತೆ ಅದರ ಹಿಂದೆಯೇ ಡೈರಿ ಹುಡುಗರೆಲ್ಲ ಹೋಗಿ ಕಿತ್ತಲೆ ಮರಗಳನ್ನು ಬೋಳಿಸುವುದು ಪ್ರಾರಂಭವಾಯ್ತು. ಒಟ್ಟಿನಲ್ಲಿ ಕಿತ್ತಳೆ ಮರಗಳೆಲ್ಲ ಖಾಲಿಯಾಗತೊಡಗಿದವು.
ಗುತ್ತಿಗೆದಾರ ಬ್ಯಾರಿ ಸೋತು ಹೋದ. ಊರೆಲ್ಲ ನಮ್ಮನ್ನು ದೂರಿಕೊಂಡು ಬಂದ. ಅವನು ಬೇರೆ ಊರವನಾದ್ದರಿಂದ ಅವನಿಗೆ ಯಾರೂ ಬೆಂಬಲ ಕೊಡಲಿಲ್ಲ. ಅವನೀಗ ನಮ್ಮ ಬಗ್ಗೆ ಹೆದರಿಕೊಂಡಿದ್ದನೋ ಏನೋ, ತೋಟದ ಮಾಲೀಕರಲ್ಲೂ ಸಹ ಈ ಬಗ್ಗೆ ದೂರು ಕೊಡಲು ಹೋಗಲಿಲ್ಲ. ಕೊನೆಗೆ ನಮ್ಮ ಸುದ್ದಿಯೇ ಬೇಡವೆಂದು ಮುಂದಿನ ವರ್ಷ ತೋಟ ಗುತ್ತಿಗೆ ಕೇಳಲು ಬರಲೇ ಇಲ್ಲ.
ನಮ್ಮಯತ್ನವೇನೋ ಫಲಿಸಿತ್ತು. ಆದರೆ ನನಗೆ ಇನ್ನೊಂದು ಭಯ ಪ್ರಾರಂಭವಾಯಿತು. ಹುಡುಗರೀಗ ಕಳ್ಳತನದ ರುಚಿ ಕಲಿತಿದ್ದಾರೆ. ನಾಟಕದಂತೆ ಇದೂ ಖಾಯಂ ಆಗಿ ಬಿಟ್ಟರೇನು ಗತಿ? ಶಾಲೆಯಲ್ಲಿ ಎಲ್ಲರೂ ಸೇರಿದ್ದಾಗ ಹೇಳಿದೆ- "ಈಗ ನಾವೇ ಕಳ್ಳರೆಂದು ಲೋಕಕ್ಕೇ ಗೊತ್ತಾಗಿದೆ. ನಾವು ಯಾಕೆ ಕಳ್ಳರೆಂದು ಕರೆಸಿಕೊಳ್ಳಬೇಕು. ಹೇಗೂ ನಾವೇ ಕಷ್ಟಪಟ್ಟು ಬೆಳೆಸಿದ ತೋಟ, ಈ ಬಾರಿ ನಾವೇ ಯಾಕೆ ಫಸಲನ್ನು ಗುತ್ತಿಗೆ ಮಾಡಬಾರದು?'
'ನಮಗೆ ಬಂಡವಾಳ ಎಲ್ಲಿದೆ" ಎಂದ ಒಬ್ಬ.
'ಪಾರ ಮಾಡುವವರಿಗೆ ಸಂಬಳ ಯಾರು ಕೊಡ್ತಾರೆ' - ಇನ್ನೊಬ್ಬ.

ಹೀಗೆ ಚರ್ಚೆ ಪ್ರಾರಂಭವಾಯಿತು. ನಾವೇ ವಹಿಸಿಕೊಂಡರೆ ತೋಟ ಪಾರದ ಅಗತ್ಯವೇ ಇಲ್ಲವೆಂದೂ, ಹಣ್ಣು ಕೊಯ್ದಾಗ ಎಲ್ಲ ಮನೆಗಳಿಗೂ ನಾವೇ ಸಾಕಷ್ಟು ಹಣ್ಣನ್ನು ಹಂಚುವುದರಿಂದ ಯಾರೂ ಕದಿಯುವ ಅಗತ್ಯವೇ ಬೀಳುವುದಿಲ್ಲವೆಂದೂ ಹೇಳಿದೆ. ಮುಂಗಡ ಹಣ ಸ್ವಲ್ಪ ಮಾತ್ರ ನೀಡಿ ಉಳಿದ ಹಣವನ್ನು ಕಿತ್ತಲೆ ಕೊಯಿಲು ಮಾಡಿದ ನಂತರ ಕೊಡುತ್ತೇವೆಂದು ಮಾಲೀಕರನ್ನು ಒಪ್ಪಿಸೋಣ, ನಾವೆಲ್ಲ ಸೇರಿ ಕೇಳಿದರೆ ಖಂಡಿತಾ ಒಪ್ಪುತ್ತಾರೆ, ಲಾಭ ಬಂದರೆ ಏನು ಮಾಡುವುದೆಂದು ನಾವೆಲ್ಲ ಸೇರಿ ತೀರ್ಮಾನಿಸೋಣ ಎಂದೆ. ಕಿತ್ತಲೆ, ಏಲಕ್ಕಿ, ಮೆಣಸು, ಇತ್ಯಾದಿಗಳ ಗುತ್ತಿಗೆ ವ್ಯವಹಾರವೂ ಒಂದು ಜೂಜೇ. ಮಳೆ-ಬೆಳೆ-ಮಾರುಕಟ್ಟೆ ಎಲ್ಲವೂ ನೆಟ್ಟಗಿದ್ದರೆ ಗುತ್ತಿಗೆ ಮಾಡಿಕೊಂಡವನಿಗೆ ಒಳ್ಳೆಯ ಲಾಭವಾಗುತ್ತದೆ. ಇಲ್ಲದಿದ್ದರೆ ಅಸಲು ಸಿಕ್ಕುವುದೇ ಕಷ್ಟವಾಗಿಬಿಡುತ್ತದೆ. ಎಷ್ಟೋ ಸಾರಿ ಗುತ್ತಿಗೆದಾರರು ತೋಟದ ಮಾಲೀಕರಿಗೆ ಅರ್ಧಂಬರ್ದ ಹಣಕೊಟ್ಟು , ಫಸಲನ್ನೂ ಕೊಯ್ಯದೆ ಕದ್ದು ಓಡುವುದೂ ಇದೆ. ನನಗಂತೂ ಕಿತ್ತಲೆ ಫಸಲಿನ ಲಾಭ-ನಷ್ಟಕ್ಕಿಂತಲೂ ಹೇಗಾದರೂ ಮಾಡಿ ಕಿತ್ತಲೆ ಕಳ್ಳತನವನ್ನು ನಿಲ್ಲಿಸುವುದು ಮುಖ್ಯವಾಗಿತ್ತು. ಇಲ್ಲದಿದ್ದರೆ ನಾವೆಲ್ಲ ತೋಟದಲ್ಲಿ  ಮಾತ್ರವಲ್ಲ ,ಊರಲ್ಲಿ ಕೂಡಾ ಕೆಟ್ಟ ಹೆಸರು ಗಳಿಸುವುದು ಖಂಡಿತವಾಗಿತ್ತು. ನಮ್ಮ ಯೋಜನೆಗೆ ಮಾಲೀಕರು ಕೂಡಾ ಒಪ್ಪಿದರು.

ನಾಟಕ ಮುಗಿದ ನಂತರವೂ ನಮ್ಮ ನಾಲ್ಕಾಣೆ ಫಂಡನ್ನು ಮುಂದುವರಿಸಿಕೊಂಡು ಬಂದಿದ್ದೆವಾದ್ದರಿಂದ ಆ ಫಂಡಿನಲ್ಲಿ ಸ್ವಲ್ಪ ಹಣವಿತ್ತು. ಒಟ್ಟು ಏಳುನೂರಾ ಐವತ್ತು ರೂಪಾಯಿಗಳಿಗೆ ಮಾತಾಗಿ ನೂರೈವತ್ತು ರೂಪಾಯಿ ಮುಂಗಡ ಕೊಟ್ಟೆವು. ಆ ವರ್ಷದ ತೋಟದ ಕಿತ್ತಲೆ ಫಸಲು ನಮ್ಮದಾಯಿತು. ಅಗತ್ಯ ಇಲ್ಲದಿದ್ದರೂ ಕಾಯಿ ಬಲಿಯುವ ಮೊದಲೇ ತೋಟದಲ್ಲಿ ಸುತ್ತಾಡತೊಡಗಿದೆವು. ತೋಟ ಪಾರ ಮಾಡುವ ಅಗತ್ಯವಿಲ್ಲವೆಂದು ತೀರ್ಮಾನಿಸಿದ್ದೆವಲ್ಲ. ಆದರೆ ಕಾಯಿ ಬಲಿಯುತ್ತ ಬಂದಂತೆ ನಮ್ಮ ತೀರ್ಮಾನವನ್ನು ಬದಲಿಸಬೇಕಾಯ್ತು. ನಮ್ಮ ತೀರ್ಮಾನಕ್ಕೆ ಮಂಗಗಳು ಒಪ್ಪಿಗೆ ನೀಡಿರಲಿಲ್ಲ! ಹಾಗಾಗಿ ತೋಟ ಪಾರ ಅನಿವಾರ್ಯವಾಯ್ತು. ನಾವು ಎಷ್ಟೇ ಹೇಳಿದರೂ ತೋಟದಲ್ಲಿ ಕೆಲವರು ಹಳೆಯ ಚಾಳಿ ಬಿಡುತ್ತಿರಲಿಲ್ಲ. ಆಗಾಗ ಒಮ್ಮೊಮ್ಮೆ ಕಿತ್ತಲೆ ಹಣ್ಣು ಕದಿಯುತ್ತಿದ್ದರು.
ಕೊಯ್ಲಿನ ಸಮಯ ಬಂದಾಗ ಹುಡುಗರ ದಂಡೇ ತಯಾರಾಯಿತು. ನಾವೇ ಎಲ್ಲರೂ ಸೇರಿ ಕಿತ್ತಲೆ ಹಣ್ಣನ್ನು ಕೊಯ್ದು ಮಾರಾಟ ಮಾಡಿದೆವು. ಎಲ್ಲಾ ಮನೆಗಳಿಗೂ ಸಾಕಷ್ಟು ಕಿತ್ತಲೆ ಹಣ್ಣು ಹಂಚಿದೆವು. ಕೊಯ್ದವರಿಗೆ ಸಂಬಳವನ್ನೂ ಕೊಟ್ಟೆವು. ತೋಟದ ಹಣವನ್ನೂ ಸಂದಾಯ ಮಾಡಿದೆವು.  ನಮ್ಮ ಅದೃಷ್ಟ ಚೆನ್ನಾಗಿತ್ತು. ಎಲ್ಲಾ ಖರ್ಚು ಕಳೆದು ಎರಡು ಸಾವಿರ ರೂಪಾಯಿ ಲಾಭ ಉಳಿದಿತ್ತು! ನಮಗೆಲ್ಲಾ ಲಾಟರಿ ಹೊಡೆದಂತಾಗಿತ್ತು. ಅದು ಸಾಕಷ್ಟು ದೊಡ್ಡ ಮೊತ್ತವೇ ಎರಡು ಸಾವಿರ ರೂಪಾಯಿ ಆ ಕಾಲದಲ್ಲಿ ಸುಮಾರಾಗಿ ಇಬ್ಬರು ಕೆಲಸಗಾರರ ಒಂದು ವರ್ಷದ ಕೂಲಿಯಷ್ಟಾಗುತ್ತಿತ್ತು.

'ಇದನ್ನೇನು ಮಾಡುವುದು?' ಶಾಲೆಯಲ್ಲಿ ತೋಟದ ಜನರೆಲ್ಲಾ ಕಿಕ್ಕಿರಿದು ಸಭೆ ಸೇರಿದರು. ಇಷ್ಟೊಂದು ಹಣ ಬಂದಿದ್ದರಿಂದ ಅವರಲ್ಲೂ ಹಲವಾರು ಆಲೋಚನೆಗಳಿದ್ದವು.
'ಚೌಡಿ ಪೂಜೆ ಮಾಡೋಣ, ಕುರಿ ಕಡ್ದು ಊಟ ಹಾಕೋಣ' - ಬಂತು ಸಲಹೆ.
'ಎಲ್ಲರಿಗೂ ಹಂಚೋಣ' ಎಂದ ಮೈಯೆಲ್ಲ ಸಾಲ ಮಾಡಿಕೊಂಡಿದ್ದವನೊಬ್ಬ.
'ಫಂಡು ಮಾಡಿ ಬಡ್ಡಿಗೆ ಕೊಡೋಣ" ಇವನು ಬಡ್ಡಿ ಸಾಲದ ಗಿರಾಕಿ.
'ಮಕ್ಕಳಿಗೆಲ್ಲಾ ಬಟ್ಟೆ ತನ್ನಿ'.
'ಚೌಡಿ ಕಲ್ಲಿಗೆ ಗುಡಿ ಕಟ್ಟಿಸಿ' ಹೀಗೇ ಹತ್ತಾರು ಸಲಹೆಗಳು ಬಂದವು. ತುಂಬ ಹೊತ್ತು ಚರ್ಚೆ ನಡೆಸಿದರೂ ಯಾವುದೂ ತೀರ್ಮಾನವಾಗದೆ ಕೊನೆಗೆ,
'ನೀವೇ ಹೇಳಿ' ಎಂದರು ನನಗೆ.
'ನಾವು, ನಮ್ಮ ಶಾಲೆ ಮತ್ತು ನಾಟಕವನ್ನು ಮುಂದುವರಿಸಬೇಕೇ ಬೇಡವೇ?" ಎಂದೆ.
'ಶಾಲೆ ಬೇಕೇ ಬೇಕು' ಎಲ್ಲರೂ ಎಂದರು.
'ಮತ್ತೆ ನಾಟಕ?"
'ಅದೂ ಬೇಕು'
'ಹಾಗಾದರೆ ನಾವು ಕಳೆದ ವರ್ಷದಂತೆ ಯಾವಾಗಲೂ ಕಂಬಳಿ ಬೆಡ್‌ಶೀಟ್ ಕಟ್ಟಿ ನಾಟಕ ಮಾಡಲಾಗುವುದಿಲ್ಲ. ಕಳೆದ ಸಾರಿ ಜನ ಇವರೇನು ಮಾಡುತ್ತಾರೆ ನೋಡೋಣ" ಎಂಬ ಕುತೂಹಲದಿಂದ ಬಂದಿದ್ದಾರೆ. ಇನ್ನು ಮುಂದೆ ನಾವು ಇನ್ನೂ ಚೆನ್ನಾಗಿ ಮಾಡಬೇಕಾದರೆ ನಮಗೆ ಒಂದಷ್ಟು ಸಾಮಗ್ರಿ ಬೇಕು. ಅದನ್ನು ಕೊಳ್ಳೋಣ, ಉಳಿದ ಹಣವನ್ನು ಶಾಲೆಯ ಲೆಕ್ಕದಲ್ಲಿಡೋಣ" ಎಂದೆ.
ಆದರೆ ಚೌಡಿಪೂಜೆ ಮಾಡಲೇಬೇಕೆಂದೂ, ಚೌಡಿಯಿಂದಾಗಿ ಕಳ್ಳತನವಾಗದೆ ಉಳಿದಿದೆಯೆಂದೂ, ಕಳೆದ ಸಾರಿ ಬ್ಯಾರಿ ಚೌಡಿಪೂಜೆ ಮಾಡದಿದ್ದುರಿಂದ ಅವನಿಗೆ ಈ ರೀತಿ ತೊಂದರೆ ಕಾಣಿಸಿಕೊಂಡಿತೆಂದೂ ನಮ್ಮಲ್ಲೇ ಕೆಲವರು ಹೇಳತೊಡಗಿದರು! ಅವರ ಒತ್ತಾಯದಿಂದ ಪೂಜೆಗಾಗಿ ಸ್ವಲ್ಪ ಹಣ ಮೀಸಲಿಟ್ಟೆವು. ಆದರೆ ಈ ಹಣದಿಂದ ಕುರಿಕೋಳಿ ಇತ್ಯಾದಿ ಏನನ್ನೂ ತರಲು ಸಾಧ್ಯವಿಲ್ಲವೆಂದೂ, ಅದನ್ನು ಅವರವರೇ ತಂದುಕೊಳ್ಳಬೇಕೆಂದೂ ತೀರ್ಮಾನವಾಯ್ತು. ಸುಮಾರು ಒಂದೂವರೆ ಸಾವಿರ ರೂಪಾಯಿಗಳಿಗೆ ಮೂರು ಪರದೆಗಳು - ಒಂದೆರಡು ವಿಂಗ್‌ಗಳು - ಒಂದೆರಡು ಫ್ಲಡ್‌ಲೈಟ್‌ಗಳು, ಒಂದಷ್ಟು ಮೇಕಪ್ ಸಾಮಗ್ರಿ- ಇತ್ಯಾದಿಗಳನ್ನೆಲ್ಲ ತಂದೆವು. ಮರದ ಪೆಟ್ಟಿಗೆಗೆ ಲೆನ್ಸ್ ಕೂರಿಸಿ ಬೇಬಿಸ್ಪಾಟ್‌ಲೈಟಿನಂತೆ ಮಾಡಿಕೊಂಡೆವು. ಈ ಕೆಲಸಗಳನ್ನೆಲ್ಲ ಉಗ್ಗಪ್ಪ - ಗುಡ್ಡಪ್ಪ ಮಾಡಿದರು. ಪರದೆಗಳನ್ನು ತೋಟದಲ್ಲಿ ಮೇಸ್ತ್ರಿಯಾಗಿದ್ದ ಟೈಲರ್ ನಟರಾಜ ಮತ್ತು ಅವನಲ್ಲಿ ಹೊಲಿಗೆ ಕಲಿಯುತ್ತಿದ್ದ ನಮ್ಮ ತಂಡದ ವಿಶ್ವನಾಥ ಹೊಲಿದರು. ನಮ್ಮ ನಾಟಕಕ್ಕೆ ಒಂದಷ್ಟು ರಂಗಸಜ್ಜಿಕೆ ಸಿದ್ಧವಾದವು.

ಮಳೆಗಾಲ ಕಳೆದು ಚಳಿಗಾಲ ಬಂದಿತ್ತು. ಈ ಬಾರಿ ಹುಡುಗರು ತಾವಾಗಿಯೇ ಮತ್ತೆ ನಾಟಕವಾಡುವ ಉಮೇದಿನಲ್ಲಿದ್ದರು. ಈ ಬಾರಿ ನಾನೇ ನಾಟಕ ಬರೆಯುತ್ತೇನೆಂದು ಹುಡುಗರಿಗೆ ಹೇಳಿದೆ. ಬರಿಯ ಮನರಂಜನೆಯ ನಾಟಕ ಮಾಡಿಸಲು ನನಗೆ ಮನಸ್ಸಿರಲಿಲ್ಲ. ಹಾಗೆಂದು ಬೇರೆ ನಾಟಕಗಳನ್ನು  - ಅಂದರೆ ಸ್ವಲ್ಪ ಪ್ರಬುದ್ಧವಾದ ನಾಟಕಗಳನ್ನು ಆಡಿಸಲು ನಮ್ಮ ತಂಡ ಸಮರ್ಥವಿರಲಿಲ್ಲ. ಅಂದಿನ ರಾಜಕೀಯ ಘಟನೆಗಳನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಂಡು ನಮ್ಮ ತಂಡದವರಿಗೂ ಆ ವಿಚಾರಗಳು ಅರ್ಥವಾಗುವಂತೆ ನಾಟಕ ಮಾಡುವುದು ನನ್ನ ಉದ್ದೇಶವಾಗಿತ್ತು. ಆದ್ದರಿಂದ ನಮ್ಮ ತಂಡಕ್ಕಾಗಿಯೇ ಅಂದರೆ ಪ್ರತಿಯೊಬ್ಬನಿಗೂ ಹೊಂದುವಂತಹ ಪಾತ್ರವನ್ನು ಸೃಷ್ಟಿಮಾಡಿಕೊಳ್ಳುತ್ತಾ ನಾಟಕದ ಕಲ್ಪನೆ ಮಾಡಿಕೊಂಡೆ. ಅಂದಿನ ರಾಜಕೀಯ ಘಟನೆಗಳಿಂದ ನೇರವಾಗಿ ಎತ್ತಿಕೊಂಡ ವಿಷಯಗಳನ್ನಿಟ್ಟುಕೊಂಡು ಹಾಡು ಕುಣಿತಗಳೆಲ್ಲ ಇದ್ದ ನಾಟಕವೊಂದು ಸಿದ್ಧವಾಯಿತು. ಹುಡುಗರಿಗೆ ಕಥೆ ಹೇಳಿ ಅವರಿಂದಲೇ  ನಾಟಕ ಮಾಡಿಸಲು ಪ್ರಾರಂಭಿಸಿದೆ. ಒಂದು ತಿಂಗಳಲ್ಲಿ ನಾಟಕ ಒಂದು ರೂಪಕ್ಕೆ ಬಂತು. ನಂತರ ಸಂಭಾಷಣೆ ಬರೆದುಕೊಂಡು ಸ್ವಲ್ಪ ತಿದ್ದಿಕೊಂಡೆ.

ಹೀಗೆ ಹುಟ್ಟಿದ ನಾಟಕ 'ನಮ್ಮ ಎಲುಬುಗಳ ಮೇಲೆ' ಅಂದಿನ ರಾಜಕೀಯ ಘಟನೆಗಳೇ ಇದರ ವಸ್ತು. ಆ ವೇಳೆಗೆ ದಲಿತ ಸಂಘರ್ಷ ಸಮಿತಿ - ರಾಜ್ಯದಾದ್ಯಂತ ಸಂಘಟನೆಯಲ್ಲಿ ತೊಡಗಿತ್ತು. ಸಮುದಾಯದಂತಹ ಸಂಘಟನೆಗಳು ಚುರುಕಾಗಿದ್ದವು. ನಾವೂ ಈ ನಾಟಕದಲ್ಲಿ ಕವಿ ಸಿದ್ಧಲಿಂಗಯ್ಯನವರ ಒಂದೆರಡು ಹಾಡುಗಳನ್ನು ಬಳಸಿದೆವು.  ಈ ಸಂದರ್ಭದಲ್ಲಿ ಅಪ್ಪನ ಗೆಳೆಯರಾದ ಮಡಿಕೇರಿಯ  ಹೊಸೂರು ಗೋಪಾಲರಾಯರು ನಮ್ಮಲ್ಲಿಗೆ ಬಂದರು. ಅವರಾಗ ಬೆಳಗಾವಿಯಲ್ಲಿ ನೆಲೆಸಿದ್ದರು. ಅನೇಕ ವರ್ಷಗಳ ಬಳಿಕ ಗೆಳೆಯರಿಬ್ಬರೂ ಜೊತೆ ಸೇರಿದ್ದರು. ಗೋಪಾಲರಾಯರಿಗೆ ಸಂಗೀತದಲ್ಲಿ ಸಾಕಷ್ಟು ಪರಿಶ್ರಮವಿತ್ತು. ಅಪ್ಪನಿಗೂ ಕೊಳಲು ನುಡಿಸಲು ಬರುತ್ತಿತ್ತು. ಹೀಗಾಗಿ ಹಳೆಯ ನೆನಪುಗಳ ಜೊತೆ ಇವರ 'ಜುಗಲ್ ಬಂದಿ' ನಡೆಯಿತು. ನಮ್ಮಲ್ಲಿದ್ದ ಒಂದೆರಡು ದಿನಗಳಲ್ಲಿ ಗೋಪಾಲರಾಯರು ನಮ್ಮ ನಾಟಕದ ಹಾಡುಗಳಿಗೆ ಸಂಗೀತ ರಚನೆ ಮಾಡಿಕೊಟ್ಟರು. ಈ ಗೋಪಾಲರಾಯರು, ಇಂದು ಬೆಂಗಳೂರಿನಲ್ಲಿ ಸುಗಮ ಸಂಗೀತ ಕ್ಯಾಸೆಟ್ ವಲಯದಲ್ಲಿ ಹೆಸರಾಗುತ್ತಿರುವ ಗಿರಿಧರ ದಿವಾನ್ ಅವರ ಅಜ್ಜ. ಆ ವೇಳೆಗೆ ಸುಳ್ಯದ ಎನ್. ನಾರಾಯಣ ಭಟ್ ಕೂಡಾ ನಮ್ಮಲ್ಲಿಗೆ ಬರತೊಡಗಿದರು. ಅವರು ಕಾರ್ಮಿಕ ಸಂಘಟನೆಯಲ್ಲಿ ತುಂಬ ಅನುಭವವಿದ್ದವರು. ಸಿದ್ದಲಿಂಗಯ್ಯನವರ ಕವನಗಳನ್ನು ತುಳು ಭಾಷೆಗೆ ಅನುವಾದಿಸಿದ್ದರು. ಅವರು ಸಿ.ಪಿ.ಎಂ ಪಕ್ಷದ ಕಾರ್ಯಕರ್ತರಾಗಿಯೂ ಕೆಲಸ ಮಾಡಿದ್ದರು. ನಾನು ಅವರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮುದಾಯ ಜಾಥಾವೊಂದರಲ್ಲಿ ಭಾಗವಹಿಸಿದ್ದೆನಲ್ಲದೆ ಅವರಲ್ಲಿ ಆಗಾಗ ಹೋಗಿ ಬರುತ್ತಿದ್ದೆ. ಅವರು ನಮಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದರಲ್ಲದೆ ನಮ್ಮ ಗುಂಪಿನೊಡನೆ ಆತ್ಮೀಯ ಸಂಬಂಧವನ್ನೂ ಬೆಳೆಸಿಕೊಂಡರು. ಆಗಾಗ್ಗೆ ನಮ್ಮ ಕಾರ್ಯಕ್ರಮಗಳಿಗೆ ಬರತೊಡಗಿದರು. ಅವರಿಂದ ಅನೇಕ ರಾಜಕೀಯ ವಿಚಾರಗಳು ನಮ್ಮವರಿಗೆ ಮನದಟ್ಟಾಗತೊಡಗಿದವು. ಅವರು ನಮ್ಮ ಈ "ನಮ್ಮ ಎಲುಬುಗಳ ಮೇಲೆ " ನಾಟಕವನ್ನು ಸುಳ್ಯದ ತಂಡವೊಂದಕ್ಕೆ ಮಾಡಿಸಿದರು. ಅಲ್ಲಿಯೂ ಈ ನಾಟಕದ ಒಂದೆರಡು ಪ್ರದರ್ಶನಗಳಾದವು.    ಮುಂದೆ ನಮ್ಮಲ್ಲಿ ರೈತಸಂಘಟನೆ ಹುಟ್ಟಿ, ಸಾಕಷ್ಟು ಪ್ರಬಲವಾಗಿ ಬೆಳೆದು ನಿಧಾನವಾಗಿ ದುರ್ಬಲವಾಗುತ್ತ, ನಾಮಾವಶೇಷ ಎನ್ನುವ ಸ್ಥಿತಿ ತಲುಪುವವರೆಗೂ ನಾಲ್ಕೈದು ವರ್ಷಗಳ ಕಾಲ, ನಾಟಕವನ್ನು ಅಲ್ಲಲ್ಲಿ ಆಡುತ್ತಿದ್ದೆವು.

ನಮ್ಮ ಹುಡುಗರೆಲ್ಲ ತುಳು ಭಾಷೆಯನ್ನೂ ಬಲ್ಲವರಾಗಿದ್ದರು. ಕಾಫಿ ಎಸ್ಟೇಟಿನಲ್ಲಿ ಕನ್ನಡ , ತುಳು, ತಮಿಳು, ಮಲಯಾಳಿ ಹೀಗೇ ಸಾಮಾನ್ಯ ಎಲ್ಲಾ ಭಾಷೆ ಮಾತಾಡುವ ಕೆಲಸಗಾರರಿರುವುದರಿಂದ ಮತ್ತು  ಎಲ್ಲರೂ 'ಲೈನು' ಗಳೆಂದು ಕರೆಯುವ ಸಾಲು ಮನೆಗಳಲ್ಲಿ ಅಕ್ಕ ಪಕ್ಕದಲ್ಲೇ ವಾಸ ಮಾಡುವುದರಿಂದ ಕಾಫಿ ತೋಟಗಳಲ್ಲಿ, ಕೆಲಸಗಾರರಿಂದ ಹಿಡಿದು ಮೇಸ್ತ್ರಿ-ರೈಟರ್-ಮೇನೇಜರ್-ಮಾಲೀಕರವರೆಗೆ ಎಲ್ಲರೂ ಎರಡು -ಮೂರು ಭಾಷೆ ಮಾತಾಡಬಲ್ಲವರಾಗಿರುತ್ತಾರೆ. ಈ ಅನುಕೂಲವಿದ್ದುದರಿಂದ ನಾವು ನಮ್ಮ ಈ ನಾಟಕವನ್ನು ಸಂದರ್ಭಕ್ಕೆ ತಕ್ಕಂತೆ - ಕನ್ನಡ - ತುಳು ಎರಡೂ ಭಾಷೆಗಳಲ್ಲಿ ಆಡುತ್ತಿದ್ದೆವು. ಈ ನಾಟಕಕ್ಕೆ ಹಾರ್ಲೆ ರಾಜಣ್ಣ ಎನ್ನುವವರೊಬ್ಬರು ಸಂಗೀತ ನೀಡಿದರು. ಇವರು ತಬಲಾ-ಹಾರ್ಮೋನಿಯಂ ಎರಡನ್ನೂ ನುಡಿಸುತ್ತಿದ್ದುದಲ್ಲದೆ ಕೆಲವೊಮ್ಮೆ ಬೇರೆ ಕಡೆ ಹರಿಕಥೆಗಳಿಗೂ ಪಕ್ಕ ವಾದ್ಯಕ್ಕೆ ಹೋಗುತ್ತಿದ್ದರು. ಇವರು ನಂತರವೂ ನಮ್ಮ ಕೆಲವು ನಾಟಕಗಳಿಗೆ ಸಂಗೀತ ನೀಡಿದರು. ಇವೆಲ್ಲ ಆದದ್ದು ೧೯೭೯-೮೦ ರಲ್ಲಿ. ಆ ನಂತರವೂ ನಾವು ಒಂದೆರಡು ಸಾರಿ ಕಿತ್ತಲೆ ಫಸಲನ್ನು ಗುತ್ತಿಗೆಗೆ ಮಾಡಿಕೊಂಡಿದ್ದೆವಾದರೂ ಹವಾಮಾನ ವೈಪರೀತ್ಯ, ಬೆಲೆ ಏರಿಳಿತ ಮುಂತಾದ ಕಾರಣಗಳಿಂದ ನಮಗೆ ಹೆಚ್ಚಿನ ಲಾಭವಾಗಲಿಲ್ಲ. ಮುಂದೆ ಕಿತ್ತಲೆಗೆ ಬಂದ ರೋಗಗಳಿಂದಾಗಿ ಕಾಫೀ ತೋಟಗಳಲ್ಲಿ ಕಿತ್ತಲೆ ಬೆಳೆ ನಾಶವಾಗುತ್ತಹೋಯಿತು. ಆದರೆ ಅಂದು ನಾವು ಸಿದ್ದಪಡಿಸಿಕೊಂಡ ರಂಗಪರಿಕರಗಳಲ್ಲಿ ಕೆಲವು ನಮ್ಮಲ್ಲಿ ಈಗಲೂ ಇವೆ.

Read more...

September 13, 2008

ನಗುವ ಕಡಲೊಳು ತೇಲಿ ಬರುತಲಿದೆ ಒಡೆದ ಹಾಯಿ ದೋಣಿ

ಇದು ಕಾಸರವಳ್ಳಿ ಟಾಕೀಸ್. ಈ ಬಾರಿ ಇಲ್ಲಿ ಅರಳಿರುವ ಗುಲಾಬಿಗೆ ಅತ್ತರಿನ ವಾಸನೆಯೂ ಇದೆ, ನೆತ್ತರಿನ ವಾಸನೆಯೂ ಇದೆ. ಅವುಗಳ ಮಧ್ಯೆ ಅಂಬಿಗರು 'ಹುಟ್ಟು ಹಾಕುವ' ಪ್ರಶ್ನೆಗಳಲ್ಲಿ ಮತ್ಸ್ಯಗಂಧಿಯರೂ ಇದ್ದಾರೆ. ಹಳೆಯ ಚಿತ್ರಗಳಿಗಿಂತ ವೇಗವಾದ ಗತಿಯಿದೆ. ಪಾತ್ರಧಾರಿಗಳು-ಜನರ ನಡುವಿನ ಭೇದವೇ ಪ್ರೇಕ್ಷಕರಿಗೆ ತಿಳಿಯದಷ್ಟು ಹೊರಾಂಗಣದಲ್ಲಿ ದೃಶ್ಯಗಳು ತನ್ಮಯವಾಗಿವೆ.
***
ಒಂದೊಂದೂ ಬಣ್ಣದ ನೀರಿನಲ್ಲಿ ಅದ್ದಿ ತೆಗೆದು ಹೀಗೆ ತೋರಿಸುವುದು ಸುಲಭವಾಗಿದ್ದರೆ ಕನ್ನಡದ ಮತ್ತೊಬ್ಬ ನಿರ್ದೇಶಕನಾದರೂ ಅದನ್ನು ಮಾಡಬಹುದಾಗಿತ್ತು. ದರ್ಶನ್, ಗಣೇಶ್, ಉಪೇಂದ್ರ ಮತ್ತಿತರರ ಇಮೇಜ್‌ಗೆ ಸರಿಯಾಗಿ ಸಿನಿಮಾ ಮಾಡುವುದು ಹಲವು ನಿರ್ದೇಶಕರಿಗೆ ಗೊತ್ತು. ಆದರೆ ಕತೆಯ ಇಮೇಜ್‌ಗೆ ಸರಿಯಾಗಿ ಸಿನಿಮಾ ಮಾಡುವುದು ಗಿರೀಶ್ ಕಾಸರವಳ್ಳಿಯವರಿಗೆ ಗೊತ್ತು . 'ನೀವು ನೋಡಲಿ ಎಂದು ಸಿನಿಮಾ ಮಾಡುವುದಿಲ್ಲ, ಮಾಡುವುದು ಅನಿವಾರ್ಯ ಕರ್ಮ ಎನಗೆ '-ಎಂಬಂತಿರುತ್ತದೆ ಕಾಸರವಳ್ಳಿ ಧಾಟಿ ! ಆದರೆ ಅವರು ಹೋಗುತ್ತಾರೆ ಅದನ್ನು ದಾಟಿ.
*****
ವೈದೇಹಿಯವರ ಕತೆ ಆಧಾರಿತ 'ಗುಲಾಬಿ ಟಾಕೀಸ್' ಚಿತ್ರದಲ್ಲಿ ,ಅವರು ಸಿನಿಮಾ ಕಟ್ಟುವ ಒಳ ರಚನೆಯಲ್ಲೇನೂ ಹೆಚ್ಚು ಬದಲಾವಣೆಯಿಲ್ಲ. ಆದರೆ ಹೊರರೂಪ ಬಹಳ ಬದಲಾಗಿದೆ. ಮೊದಲನೆಯದ್ದು - ಲಗುಬಗೆಯ ನಡೆ. `ತಾಯಿಸಾಹೇಬ', `ನಾಯಿನೆರಳು' ಗಳಂತೆ ಇಲ್ಲಿ ನಿಧಾನ ಲಯ ಅಲ್ಲ. ಎರಡನೆಯದ್ದು -ಈ ಸಿನಿಮಾದ ಹೆಚ್ಚು ಭಾಗ ಹೊರಾಂಗಣದಲ್ಲಿ, ಜನಸಾಮಾನ್ಯರ ನಡುವೆ ನಡೆಯುತ್ತದೆ. ಯಾರು ಪಾತ್ರಧಾರಿಗಳು, ಯಾರು ಜನರು ಅಂತ ಪ್ರೇಕ್ಷಕರಿಗೇ ತಿಳಿಯದಷ್ಟು ಹೊರ ಜಗತ್ತಿನಲ್ಲಿ ಸಿನಿಮಾ ತನ್ಮಯವಾಗಿದೆ. ಹೇಳಬೇಕೆಂಬ ಹಟ ಇಲ್ಲಿಲ್ಲ. ಸುಮ್ಮನೆ ಆಗುವುದನ್ನು ತೋರಿಸುವುದೇ ಮುಖ್ಯ. ಅವರ ಯಾವ ಸಿನಿಮಾಗಳೂ ಅತಿರಮ್ಯವಾದುವಲ್ಲ. ಮಹಿಳಾ ಪ್ರಧಾನ ಚಿತ್ರಗಳೆಂದುಕೊಂಡರೂ ನಾನಾ ಕಾಲ- ಪ್ರದೇಶಗಳು ತೆರೆಗೆ ಬಂದಿವೆ. ನಾವು ನೋಡದ್ದೇನೂ ಅಲ್ಲಿಲ್ಲ. ಅವೆಲ್ಲ ಜನಸಾಮಾನ್ಯರ ಬಿಂಬ-ಪ್ರತಿಬಿಂಬಗಳು. ಆದರೆ ನಾವು ನೋಡಿದ್ದರೂ ಕಾಣದ್ದನ್ನು ರುಚಿಕಟ್ಟಾಗಿ ತೆರೆಗೆ ತರುವ ಸವಾಲನ್ನೇ ನಿರ್ದೇಶಕರು ಸ್ವೀಕರಿಸಿದ್ದಾರೆ . `ಟಿವಿಯು ಮನುಷ್ಯರನ್ನು ಚಿಕ್ಕದಾಗಿ, ಸಿನಿಮಾ ದೊಡ್ಡದಾಗಿ ತೋರಿಸುತ್ತದೆ. ಮನುಷ್ಯರನ್ನು ಮನುಷ್ಯರಾಗಿ ತೋರಿಸುವುದು ರಂಗಭೂಮಿ ಮಾತ್ರ' ಎಂಬ ಬಿ.ವಿ.ಕಾರಂತರ ಪ್ರಸಿದ್ಧ ಮಾತಿಗೆ ಸಡ್ಡು ಹೊಡೆಯಬಲ್ಲವು ಕಾಸರವಳ್ಳಿ ಸಿನಿಮಾಗಳು.
ಕಡಲ ಮೀನುಗಳಂತೆ ದ್ವೀಪದಲ್ಲೂ ಎಲ್ಲರೊಂದಾಗಿ ಬದುಕುತ್ತಿದ್ದ ಮೀನುಗಾರರಲ್ಲಿ ಕ್ರಮೇಣ ಕೋಮು ವೈಷಮ್ಯ ಮೂಡುವ ಕತೆಯಿದು. ಯಾವ ಜಾತಿಯೊ, ಯಾವ ಬಣ್ಣವೊ, ಹೆರಿಗೆ ಮಾಡಿಸುವುದಷ್ಟೇ ಸೂಲಗಿತ್ತಿ ಮುಸ್ಲಿಂ ಮಹಿಳೆ ಗುಲಾಬಿಯ ಕಾಯಕ. (ಆಕೆ ಮುಸ್ಲಿಂ ಗುಲ್ನಾಬಿಯೂ ಹಿಂದು ಗುಲಾಬಿಯೂ !) ಆಕೆಯ ಗಂಡ ಇನ್ನೊಬ್ಬಳು ಪತ್ನಿಯೊಂದಿಗಿರುವುದರಿಂದ ಈಕೆ ಒಂಟಿ. ಸಿನಿಮಾ ಹುಚ್ಚಿನ ಈಕೆ ಸಾಯಂಕಾಲವಾದರೆ ಥಿಯೇಟರ್ ಸೇರಲೇಬೇಕು. ಒಮ್ಮೆ ಹೆರಿಗೆ ಮಾಡಿಸಿದ್ದಕ್ಕೆ ಪ್ರತಿಫಲವಾಗಿ ಆಕೆಗೊಂದು ಬಣ್ಣದ ಟಿವಿ ಮತ್ತು ದೊಡ್ಡ ಡಿಶ್ ಉಡುಗೊರೆಯಾಗಿ ಸಿಗುತ್ತದೆ. ಆ ಕಡಲ ದ್ವೀಪಕ್ಕೆ ಮೊತ್ತಮೊದಲ ಬಾರಿ ಬಂದ ಬಣ್ಣದ ಟಿವಿಗೆ ನೆರೆಯವರು ಸ್ಪಂದಿಸುವುದು ಸಿನಿಮಾದ ಒಂದು ಮುಖ್ಯ ಭಾಗ . ಅದೆಷ್ಟು ದೃಶ್ಯಗಳಲ್ಲಿ ಕಾಣಿಸುತ್ತದೆಯೆಂದರೆ, ಧಾರಾವಾಹಿ ವ್ಯಸನದಿಂದ ಶುರುವಾಗಿ, ಅದರಿಂದ ಮನೆಯಲ್ಲಿ ಅತ್ತ-ಸೊಸೆ ಜಗಳ, ಮುಸ್ಲಿಂಳ ಮನೆಯಲ್ಲಿ ಹಿಂದು-ಮುಸ್ಲಿಂ ಮಹಿಳೆಯರು ಬೆರೆಯುವುದು, ಕೊನೆಗೆ ಅದೇ ಟಿವಿ ಕಾರ್ಗಿಲ್ ವಾರ್ತೆಯನ್ನು ದಿನಾ ಬಿತ್ತರಿಸಿ ಕೋಮು ವೈಷಮ್ಯಕ್ಕೂ ಪುಷ್ಟಿ ನೀಡಿತೋ ಎಂಬವರೆಗೆ !
*****
ಗಲ್ಫ್ ದುಡ್ಡಿನಿಂದ ದೂರದ ಮುಸ್ಲಿಂ ಕುಬೇರರು ಆರಂಭಿಸುವ ಸುಧಾರಿತ ಮೀನುಗಾರಿಕೆಯು ಸ್ಥಳೀಯರನ್ನು ಪೇಚಿಗೆ ಸಿಲುಕಿಸುವುದು ಎರಡನೇ ಮುಖ್ಯಧಾರೆ. ಸಣ್ಣದಾಗಿ, ತಕರಾರಿನ ರೂಪದಲ್ಲಿ ಆರಂಭವಾಗುವ ಈ ತಿಕ್ಕಾಟ, ನಿಧಾನವಾಗಿ ಕಿಚ್ಚು ಹತ್ತಿಸಿಕೊಳ್ಳುತ್ತದೆ. ಆದರೆ ಇವೆಲ್ಲ ಬಾಹ್ಯ ಸಂಗತಿಗಳಷ್ಟೆ, ನಿಜವಾಗಿ ಸಂಘರ್ಷ ಶುರುವಾಗುವುದು, ಅನಿವಾರ್ಯವಾಗುವುದು, ಸಮಸ್ಯೆ ಮನೆಯೊಳಗೆ ಬಂದಾಗ. ಹಾಗಾಗುವುದು ನೇತ್ರು ಹಾಗೂ ಗುಲಾಬಿಯ ಗಂಡನ ಸಂಪರ್ಕದಿಂದ. ಅದು ಆಯಿತೇ, ಆಗಿದ್ದರೆ ಹೇಗಾಯಿತು, ಗೊತ್ತಿಲ್ಲ. ಆದರೆ ಅಂತಹುದೊಂದು ಮಿಲನದ ಬಗ್ಗೆ ಮೊದಲು ಕನಸು ಕಂಡವಳು ಗುಲಾಬಿ ! ನಂತರ ಅದನ್ನು ನೇತ್ರುವಿಗೂ ಕಾಣಿಸಿದವಳು. ಆದರೆ ನೇತ್ರು ಮುಸ್ಲಿಂ ವ್ಯಕ್ತಿಯೊಂದಿಗೆ ಹೋದಳು ಎಂಬುದರಿಂದ ಆ ಕಡಲ ಬದುಕಿನ ಸಮರಸವೇ ವಿರಸಕ್ಕೆ ತಿರುಗಿ, ಪರಾರಿಯಾಗುತ್ತಿರುವ ನೇತ್ರುವನ್ನು ಹಿಡಿದು, ಹಿಂದು ಜನ ಮನೆಗೆ ಕರೆತರುತ್ತಾರೆ, ಗುಲಾಬಿಯನ್ನು ಊರಿನಿಂದ ಅಟ್ಟುತ್ತಾರೆ ! ಅದನ್ನು ಅತ್ಯಂತ ಸಂಯಮದಿಂದ ತೋರಿಸಿದ್ದಾರೆ ನಿರ್ದೇಶಕರು.ಗರ್ಭಿಣಿಯೊಬ್ಬಳಿಗೆ ಹೊಟ್ಟೆನೋವು ಆರಂಭವಾದಾಗ ಪ್ರಸವ ಮಾಡಿಸಲು ಗುಲಾಬಿಯೇ ಬೇಕೆಂದಾಗುತ್ತದೆ. ಅವಳೋ, ಥಿಯೇಟರ್‌ನಲ್ಲಿ ಪ್ರಿಯವಾದ ಸಿನಿಮಾ ನೋಡುತ್ತಿದ್ದಾಳೆ, ಬರಲೊಲ್ಲಳು. ಆಗ ಬಂದವರು ಅವಳನ್ನೆತ್ತಿಕೊಂಡೇ ಹೊರಹೋಗಿ ದೋಣಿಯಲ್ಲಿ ಕುಳ್ಳಿರಿಸಿ ಕರೆದೊಯ್ಯುತ್ತಾರೆ. ಆ ಹಿಂದು ಮಹಿಳೆಯ ಪ್ರಸವ ಸುಸೂತ್ರವಾಗುತ್ತದೆ. ಸಿನಿಮಾದ ಕೊನೆಗೆ ಕೋಮು ವೈಷಮ್ಯಕ್ಕೆ ಗುಲಾಬಿಯೂ ಕಾರಣಳೆಂದು, 'ಹಿಂದು ಧರ್ಮ ಸಂರಕ್ಷಕರು' ಆಕೆಯ ಮನೆಯ ವಸ್ತುಗಳನ್ನೆಲ್ಲ ಹೊರಗೆಸೆಯುತ್ತಿದ್ದಾರೆ, ಊರು ಬಿಟ್ಟು ತೊಲಗು ಎನ್ನುತ್ತಿದ್ದಾರೆ, ಆದರೆ ಆಕೆ ಒಲ್ಲೆ ಅನ್ನುತ್ತಿದ್ದಾಳೆ. ಆಗ ಗಣಪತಿಯನ್ನೆತ್ತಿದಂತೆ ಆಕೆಯನ್ನು ಎತ್ತಿ ದೋಣಿಯಲ್ಲಿ ಕುಳ್ಳಿರಿಸುತ್ತಾರೆ. ಮತ್ತದೇ ಹಳೆಯ ರೀತಿ. ಉದ್ದೇಶ ಮಾತ್ರ ಬೇರೆ ! ಗುಲಾಬಿ ಹೋಗುತ್ತದೆ, ಮುಳ್ಳು ಉಳಿಯುತ್ತದೆ.
*****
ಬಹುತೇಕ ಜನಪ್ರಿಯ ಸಿನಿಮಾಗಳಲ್ಲಿ ಮನುಷ್ಯರು ಮಾತ್ರ ಪಾತ್ರಗಳು. ಆದರೆ `ಗುಲಾಬಿ ಟಾಕೀಸ್'ನಂತಹ ಚಿತ್ರಗಳಲ್ಲಿ ಟಿವಿಯ ದೊಡ್ಡ ಡಿಶ್, ಕಡಲ ಅಲೆಗಳು, ಚಕ್ಲಿ ಮೀನುಗಳೂ ಪಾತ್ರಗಳಂತೆ ಕೆಲಸ ಮಾಡುತ್ತವೆ. ಪರಕೀಯ ಬಂಡವಾಳಶಾಹಿಗಳೂ ಮೀನುಗಾರಿಕೆ ಆರಂಭಿಸಿದ್ದು ಸ್ಥಳೀಯ ಸಾಮರಸ್ಯ ಕೆಡುವುದಕ್ಕೆ ಒಂದು ಕಾರಣ ಅಂತ ಕೊನೆಯಲ್ಲಿ ಹೇಳುವ ನಿರ್ದೇಶಕರು, ಎಲ್ಲ ಕೆಟ್ಟುಹೋಯಿತು ಅಂದಿಲ್ಲ. ಮೀನುಗಾರ ವಾಸಣ್ಣನ ಹರೆಯದ ಮಗನೊಬ್ಬ , ಗುಲಾಬಿಯ ಸ್ಥಳಾಂತರಕ್ಕೆ ತನ್ನ ಮಿತಿಯಲ್ಲಾದರೂ ಪ್ರತಿಭಟಿಸುವ ಮೂಲಕ ಆಶಾದೀಪ ನಂದದೆ ಉಳಿದಿದೆ. ಈ ಕತಾ ಹಂದರದ ಪ್ರತಿಯೊಂದು ಘಟನೆಗೂ ಕಾರಣವಾಗುವವಳು ಗುಲಾಬಿ. ಅಂತಹ ಗುಲಾಬಿಗೆ ಕಾರಣರಾದವರು ಉಮಾಶ್ರೀ. ಹೊಸದಾಗಿ ಬಂದ ಟಿವಿಯ ರಿಮೋಟ್‌ನ್ನು ಮೊದಲ ಬಾರಿಗೆ ಒತ್ತುವಾಗ, ನೇತ್ರು ಬಳಿ ತನ್ನ ಕನಸಿನ ಗಂಡಿನ ಬಗ್ಗೆ ಹೇಳುವಾಗ, ಹೀಗೆ ಹಲವೆಡೆ ಗುಲಾಬಿ ಅರಳುವ ಬಗೆ ಅನ್ಯಾದೃಶ. ಪೂರ್ತಿ ಸಿನಿಮಾವನ್ನೇ ಅವರು ತನ್ನ ಪಾತ್ರದಲ್ಲಿ ಹೊತ್ತುಕೊಂಡು ನಟಿಸಿದ್ದಾರೆ. ನೇತ್ರಳ ಪಾತ್ರದಲ್ಲಿ ಗಾಯಕಿ ಎಂ.ಡಿ.ಪಲ್ಲವಿ ಒಂದು ಅಚ್ಚರಿಯ ಎಂಟ್ರಿ. ಮೀನಿನ ಬುಟ್ಟಿ ಹೊತ್ತು, ನೈಟಿ ತೊಟ್ಟು ,ಕರಾವಳಿಯ ರಸ್ತೆಗಳಲ್ಲಿ ಅವರು ಓಡಾಡುವುದು ಹಾಡುವುದಕ್ಕಿಂತಲೂ ಕಷ್ಟ , ಆದರೂ ಆಗಿದೆ ಚೆಂದ. ನಿರ್ದೇಶಕರ ಯಶಸ್ಸಿರುವುದು ಅವರು ಮಾಡುವ ಆಯ್ಕೆಗಳಲ್ಲಿ. ನೀನಾಸಂ ಪದವೀಧರನಾಗಿ, ನಾಟಕ ಮಾಡುತ್ತ, ಬಳಿಕ ಎಲ್ಲೋ ಕಾಣೆಯಾಗಿದ್ದ ಬಾಸುಮ ಕೊಡಗುರನ್ನು ಕಲಾ ನಿರ್ದೇಶನಕ್ಕೆ ಎಳೆದು ಪಾತ್ರವನ್ನೂ ಮಾಡಿಸುವುದು, ಅದ್ದುವಿನ ಪಾತ್ರದಲ್ಲಿ ಮುದ್ದಾಗಿ ನಟಿಸಿದ ಹುಡುಗ, ಗುಲಾಬಿಯ ಗಂಡನಾದ ಕೆ.ಜಿ.ಕೃಷ್ಣಮೂರ್ತಿ ಇವರೆಲ್ಲ ಆ ಪಾತ್ರಕ್ಕೇ ಲಾಯಕ್ಕು ಅನ್ನುವಷ್ಟು ಚೆನ್ನಾಗಿ ಕಾಣಿಸಿಕೊಳ್ಳುತ್ತಾರೆ. ಹಿರಿಯರಾದ ರಾಮಚಂದ್ರ ಐತಾಳರ ಛಾಯಾಗ್ರಹಣ ಹೇಳಿ ಮಾಡಿಸಿದಂತಿದೆ . ಸಂಭಾಷಣೆ, ವಸ್ತ್ರವಿನ್ಯಾಸ, ಪರಿಕರಗಳ ವಿಷಯದಲ್ಲಂತೂ ಹುಳುಕು ಹುಡುಕುವುದು ಬಹಳ ಕಷ್ಟ. ವಿಶೇಷ ಎಡಿಟಿಂಗ್-ಬೆಳಕಿನ ವ್ಯವಸ್ಥೆ ಮಾಡದೆ, ಇದ್ದದ್ದನ್ನು ಇದ್ದ ಹಾಗೆ ಬಳಸಿಕೊಂಡ 'ಇಂಪರ್ಫೆಕ್ಟ್ ಸಿನಿಮಾ' ಇದು ಅಂದಿರುವ ನಿರ್ದೇಶಕರು, ಚಲಿಸುವ ಬಿಂಬಗಳನ್ನೆಲ್ಲ ದಿಕ್ಕೆಡದೆ ಹಿಡಿದುಕೊಂಡಿದ್ದಾರೆ.
*****
ಗಿರೀಶ್ ಕಾಸರವಳ್ಳಿಯವರು ಮಾಡಿದ ಯಾವುದೇ ಚಿತ್ರವನ್ನೂ ಇನ್ನೊಂದು ರೀತಿ ಮಾಡಬಹುದು ಅಂತನ್ನಬಹುದೇ ಹೊರತು, ಅವರು ಮಾಡಿದ್ದು ತಪ್ಪಾಗಿದೆ, ಕೆಟ್ಟದಾಗಿದೆ ಅನ್ನುವುದು ಸಾಧ್ಯವಿಲ್ಲ. ಇಷ್ಟೆಲ್ಲ ಆಗಿಯೂ 'ಛೆ, ಕಾಸರವಳ್ಳಿಯವರು ಒಂದು ಜನಪ್ರಿಯ ಸಿನಿಮಾ ಮಾಡಿದ್ದರೆ...' ಅಂತ ಸಿನಿಮಾಸಕ್ತರಿಗೆ ಯೋಚನೆಯಾದರೆ, ಅದು ಜನಪ್ರಿಯ ಸಿನಿಮಾದ ದಾರಿದ್ರ್ಯವನ್ನಷ್ಟೇ ಸ್ಪಷ್ಟವಾಗಿ ತೋರಿಸುತ್ತದೆ !

Read more...

September 09, 2008

ನೇರಳೆ ನಾಲಗೆ-ಟಿಪ್ಪಣಿ

(ಈ ಟಿಪ್ಪಣಿಯ ಕೆಳಗಿನ ಬರೆಹ ಓದಿ ಮೇಲೆ ಬನ್ನಿ !)

ಸುಂದರ ಎಲ್ಲಿದ್ದಾನೋ ಗೊತ್ತಿಲ್ಲ. ಆತನ ಸಹಚರರು ಕೆಲವರು ಕೂಲಿ ಕೆಲಸಕ್ಕೆ ಹೋಗುತ್ತಾರೆ. ನಾಗೇಶನ ಕುಟುಂಬ ಊರು ಬಿಟ್ಟಿದೆ. ಜಗಳವಾಡಿದ ಹನೀಫ್ ಆಟೊರಿಕ್ಷಾದಲ್ಲಿ ಮೀನು ವ್ಯಾಪಾರ ಮಾಡುತ್ತಾನೆ . ಊರಿಗೆ ಹೋದಾಗಲೆಲ್ಲ ಎಲ್ಲೇ ಸಿಕ್ಕಿದರೂ ಕರೆದು, ನಿಂತು ಮಾತಾಡುತ್ತಾನೆ. ನಾವು ಸಿಹಿ ನೀರು ಸೇದಿ ಸೇದಿ ಗಿಡಗಳಿಗೆ ಸುರಿಯುತ್ತಿದ್ದ ಶಾಲೆಯ ಎದುರಿದ್ದ ಬಾವಿ ಈಗ ಪಾಳುಬಿದ್ದಿದೆ. ಊರಿನ ಜನರೆಲ್ಲರ ಶ್ರಮದಾನದಿಂದ ದೊಡ್ಡದಾಗಿದ್ದ ಆಟದ ಬಯಲು ಎಲ್ಲೆಡೆ ಒತ್ತುವರಿಯಾಗಿ ಸಣ್ಣದಾಗಿದೆ. ಹೂವಿನ ತೋಟ ಎಂಬುದು ಕಣ್ಣಿಗೇ ಕಾಣುತ್ತಿಲ್ಲ. ಸ್ವಾತಂತ್ರ್ಯೋತ್ಸವದಂದು ಹತ್ತು ಜನ ಊರವರೂ ಬರುವುದಿಲ್ಲ. ಆ ಹೆಡ್‌ಮಾಷ್ಟ್ರು ಉದ್ದನೆಯ ಏಣಿ ಹತ್ತಿ ಗೋಡೆಯ ಮೇಲ್ಭಾಗದಲ್ಲಿ ದುಂಡು ಅಕ್ಷರಗಳಲ್ಲಿ ದೊಡ್ಡದಾಗಿ 'ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ದೇರಾಜೆ ' ಅಂತ ಬರೆದರು. ಏನೇನೋ ಮಾಡಿ ಶಾಲೆಗೆ ಕಾಂಪೌಂಡ್, ಕರೆಂಟು, ಟ್ಯಾಂಕಿ, ಗೇಟು ಮಾಡಿಸಿದರು. `ಈಗ ಮಕ್ಕಳೂ ಇಲ್ಲ, ಈಗಿನ ಹೆಡ್‌ಮಾಷ್ಟ್ರೂ ಟೈಮಿಗೆ ಸರಿಯಾಗಿ ಬರುವುದಿಲ್ಲ ' ಅಂತಾರೆ ಹತ್ತಿರದ ಮನೆಯವರು.

ಮೊನ್ನೆ ಮೊನ್ನೆ ಆ ಶಾಲೆಗೆ ಹೋದಾಗ , ಬಣ್ಣಬಣ್ಣದ ಚಿತ್ರಗಳಿದ್ದ ಆ ದೊಡ್ಡ ಮರದ ಮಂಟಪ ಕಾಣಲಿಲ್ಲ. ಅದು ಅಜ್ಜ ಶಾಲೆಗೆ ಮಾಡಿಸಿ ಕೊಟ್ಟದ್ದು ಅನ್ನುವ ಹೆಮ್ಮೆಯೂ ಒಳಗಿತ್ತು , ಪ್ರಶ್ನಿಸಿದೆ. 'ಅದು ಗೆದ್ದಲು ತಿಂದು ಹೋಗಿ ಕೆಲವು ವರ್ಷಗಳೇ ಆಯ್ತು ' ಎಂದರು ಮುಖ್ಯೋಪಾಧ್ಯಾಯರು. 'ಈಗ ಶನಿವಾರದ ಭಜನೆಯೂ ಇಲ್ಲ .ಕೋಮು ಸಾಮರಸ್ಯ-ಸಮಾನ ಅವಕಾಶ-ಜಾತ್ಯತೀತತೆ-ಪ್ರಜಾಪ್ರಭುತ್ವ ಅಲ್ವಾ?! ಇನ್ನು ಬಿಜೆಪಿ ಗವರ್‍ನ್‌ಮೆಂಟಿನವರು ಭಜನೆ ಶುರು ಮಾಡ್ಬೇಕು ಅಂತ ಹೇಳ್ತಾರೋ ಗೊತ್ತಿಲ್ಲ' ಅಂದು ನಕ್ಕರು . 'ಬರೀ ಹೊಲೆಯರ ಮಕ್ಕಳೇ ಈಗ ಇಲ್ಲಿಗೆ ಬರೋದು. ಮಧ್ಯಾಹ್ನ ಊಟ ಫ್ರೀ ಅಲ್ವಾ? ಎಷ್ಟು ಹೇಳ್ಕೊಟ್ರೂ ಅವ್ರಿಗೆ ಬರೋದಿಲ್ಲ. ಬೇರೆಯವರೆಲ್ಲಾ ಮಕ್ಕಳನ್ನು ಸುಳ್ಯ, ಪುತ್ತೂರು ಇಂಗ್ಲಿಷ್ ಮೀಡಿಯಮ್ ಶಾಲೆಗಳಿಗೆ ಕಳಿಸ್ತಾರೆ. ಬೆಂಗ್ಳೂರಲ್ಲೆಲ್ಲ ಈಗ ಬರೀ ಇಂಗ್ಲಿಷ್ ಅಲ್ವಾ? ಆದರೆ ಬೆಂಗಳೂರಿನ ಮಕ್ಕಳ ಥರಾ ನಮ್ಮವ್ರಿಲ್ಲ ಬಿಡಿ. ಇವರು ಬಹಳ ಪಾಪ. ಅಲ್ಲಿಯವ್ರು ನಾಲ್ಕನೇ ಕ್ಲಾಸಿಗೇ ಭಯಂಕರ ತಿಳ್ಕೊಂಡಿರ್‍ತಾರೆ ' ಎಂದರು ! 'ನಾವಿನ್ನು ಬೆಂಗಳೂರಿಗೆ ಬಂದ್ರೂ ಏನೂ ಮಾಡ್ಲಿಕ್ಕೆ ಸಾಧ್ಯ ಇಲ್ಲ 'ಅಂತಂದು ತಮ್ಮ ಆಸೆ- ಪಾಡನ್ನೂ ಸೂಚಿಸಿದವರಂತೆ ವರ್ತಿಸಿದರು.

ಇದು ಯಾಕೆ, ಹೇಗೆ , ಏನು ಅಂತೆಲ್ಲ ಕೇಳೋಣ ಎಂದರೆ ನನ್ನನ್ನು ಶಾಲೆಗೆ ಸೇರಿಸಿದ ಅಪ್ಪನೂ ಈಗ ಇಲ್ಲ. ನನ್ನ ಮಗರಾಯನೂ ಆ ಶಾಲೆಗೆ ಹೋಗುವುದಿಲ್ಲ. ಆದರೆ ಆತ ನೇರಳೆ ಹಣ್ಣು ತಿಂದು ಕಡು ನೀಲಿ ನಾಲಗೆ ಮಾಡಿಕೊಂಡರೆ ಮಾತ್ರ ಒಂದೊಂದು ದೃಶ್ಯವೂ ಕಣ್ಣೆದುರು ಬರುತ್ತದೆ.

Read more...

September 05, 2008

ನೇರಳೆ ನಾಲಗೆಯ ರುಚಿ

ಬೈಗುಳ ಬರುವವರೆಗೆ ಅವರಿಬ್ಬರ ಜಗಳ ಬಹಳ ಜೋರಾಗೇನೂ ಇರಲಿಲ್ಲ. ಆಗ ಬಂತು ಆ ಮಾತು- `ನಿನ್ನ ಅಪ್ಪ ಮೂರ್ತಿ, ಕಲ್ಲಿನ ಮೂರ್ತಿ. ಜೀವ ಇಲ್ಲದವ '. ಆ ಕ್ಷಣ ನರನರಗಳೆಲ್ಲ ಸೆಟೆಸೆಟೆದು, ಕಣ್ಣುಗಳು ಅಷ್ಟಗಲ ತೆರೆಯಲ್ಪಟ್ಟು, ಮುಖ ಕೆಂಪಾಗಿ, ಕೈಗಳು ಬಿಗಿದು, ರೋಷಾವೇಶ ಮೇರೆ ಮೀರಿ, ಮಾರಾಮಾರಿ. ಅವನ ಕುರುಚಲು ಕೂದಲು ಇವನ ಕೈಗೆ ಸಿಗುತ್ತಿರಲಿಲ್ಲ. ಆದರೂ ತಲೆ ಒತ್ತಿ ಹಿಡಿದು ಬೆನ್ನು ಬಗ್ಗಿಸಿ ತರಿಕಿಟ ತರಿಕಿಟ ಥಳಾಂಗು ಥೈ ಥೈ ! ಒಬ್ಬ ಮುಸ್ಲಿಂ, ಇನ್ನೊಬ್ಬ ಬ್ರಾಹ್ಮಣ ಎಂಬ ವಿವರಕ್ಕೆ ಆಗ ಏನೇನೂ ಮಹತ್ವ ಇದ್ದದ್ದಿಲ್ಲ. ನಾಲ್ಕನೇ ಕ್ಲಾಸಿನ ಮರದ ಬೆಂಚಿನಲ್ಲಿ ಅಕ್ಕಪಕ್ಕ ಕುಳಿತ ಇಬ್ಬರ ಕಾಳಗಕ್ಕೆ ತರಗತಿ ಪೂರ್ತಿ ಬಿಡುಗಣ್ಣಾಗಿತ್ತು. ಹಿಂದುಮುಂದಿನ ಬೆಂಚಿನ ಹುಡುಗರು ಸುತ್ತ ನೆರೆದು, ಏನೋ ಸ್ಪರ್ಧೆಯನ್ನು ಹುರಿದುಂಬಿಸುವವರಂತೆ ಶಬ್ದಗಳ ಅಲೆ ಹೆಚ್ಚಿಸುತ್ತಿದ್ದರು.

ಮೂಸೆ ಬ್ಯಾರಿಯ ಅಂಗಡಿಯಲ್ಲಿ ಚಾ ಕುಡಿಯಲು ಹೋಗಿದ್ದ ಏಕಮೇವ ಮೇಷ್ಟ್ರು ಅದೆಲ್ಲಿದ್ದರೋ ಏನೋ...ಬಿರುಗಾಳಿಯಂತೆ ಒಳನುಗ್ಗಿ , ಕಾಳಗವನ್ನು ಆಸ್ವಾದಿಸುತ್ತಿದ್ದ ಒಬ್ಬನ ಬೆನ್ನ ಮೇಲೆ ಮನಸೋಇಚ್ಚೆ ತಮ್ಮ ಕೈ ಹರಿಯಬಿಟ್ಟರು. ಡಬ್ ಡಬ್ ಡಬ್ ಡಬ್. ಅದು ಎದೆಬಡಿತವೋ ಮೇಷ್ಟ್ರ ಪೆಟ್ಟಿನ ಸದ್ದೋ ಅಂತ ತಿಳಿದುಕೊಳ್ಳಲು ಪೂರ್ತಿ ತರಗತಿಗೆ, ಸುದೀರ್ಘ ಹತ್ತು ನಿಮಿಷಗಳು ಬೇಕಾದವು !

ಅವನ ಹೆಸರು ಸರಿಯಾಗಿ ನೆನಪಿದೆ-ಸುಂದರ. ಕಪ್ಪಗೆ ಸೊಟ್ಟಗೆ ಇದ್ದ ಹುಡುಗ. ನಾಲ್ಕನೇ ಕ್ಲಾಸಿಗೆ ಬರುವಾಗ ಪ್ರತಿದಿನ ಮೂವತ್ತು ಐವತ್ತು ರೂಪಾಯಿ ತರುತ್ತಿದ್ದ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ- ಕೂಲಿಕಾರನ ಮಗ, ಒಂದು ಫರ್ಲಾಂಗು ದೂರದ ಮನೆಯಿಂದ ತೋಟಗದ್ದೆಯಲ್ಲಿ ನಡೆದು ಬರುವವನು, ಅಷ್ಟೊಂದು ದುಡ್ಡು ತರುತ್ತಾನೆಂದರೆ ಅದು ಖಳನಾಯಕನ ಲಕ್ಷಣ ಅಲ್ವಾ? ನಾಲ್ಕನೇ ಕ್ಲಾಸಲ್ಲಿ ಅವನದ್ದು ಎರಡನೇ ವರ್ಷ. ಅವನ ಜತೆಗಾರ ಇನ್ನೊಬ್ಬ ರಾಘವ , ಉಬ್ಬು ಹಲ್ಲಿನವ. ಆಹಾ, ಎಷ್ಟು ಚೆಂದದ ದೇವರ ಹೆಸರು.

ಜಗಳವಾಡಿದ ಇಬ್ಬರಿಗೆ ಹೊಡೆಯದೆ, ಜಗಳ ನೋಡುತ್ತಿದ್ದ ತನಗೆ ಬಾರಿಸಿದ ಮೇಷ್ಟ್ರ ಬಗ್ಗೆ ನಾಗೇಶನಿಗೆ ಸಹಿಸಲಾರದ ಧಗೆ. ಒಟ್ಟಾರೆ ಶಾಲೆಗೆ ಏನಾದರೂ ಕಂಟಕ ತಂದಿಡಬೇಕು ಎಂಬ ಯೋಚನೆ. ಗೆಳೆಯರಾದ ಸುಂದರ, ರಾಘವ, ಮತ್ತಿಬ್ಬರು ನಾಗೇಶನ ಜತೆ ಸೇರಿ ಭಾರೀ ಸ್ಕೆಚ್ ಸಿದ್ಧವಾಗತೊಡಗಿತು. ಇವರಲ್ಲಿ ಒಬ್ಬೊಬ್ಬರೂ ಅತಿರಥ ಮಹಾರಥರೇ. ತನ್ನ ಕ್ಲಾಸ್‌ನಲ್ಲಿರುವ, ಮಾಷ್ಟ್ರ ಮಗಳ ಮೇಲೆ ನಾಗೇಶನಿಗೆ ಕಣ್ಣು . ತರಗತಿಯ ಹುಡುಗರಲ್ಲಿ ಅವನು ದ್ವಿತೀಯ ಸ್ಥಾನ ಪಡೆದರೆ, ಹುಡುಗಿಯರಲ್ಲಿ ಆಕೆಗೆ ದ್ವಿತೀಯ ಸ್ಥಾನ . ಮಧ್ಯಾಹ್ನ ಮಾಷ್ಟ್ರು ಮತ್ತು ಮಗಳು ಬೈಕ್‌ನಲ್ಲಿ ಊಟಕ್ಕೆ ಹೋದಾಗ, ಆಫೀಸ್ ರೂಂಗೆ ನುಗ್ಗಿ ,ಆಕೆಯ ಸ್ಕೂಲ್ ಬ್ಯಾಗ್‌ನ ಮೇಲೆ ಮಲಗಿ ತೀಟೆ ತೀರಿಸಿಕೊಂಡು ಬರುತ್ತಿದ್ದ ಈ ನಾಲ್ಕನೇ ಕ್ಲಾಸಿನ ಹುಡುಗ . ಮಂತ್ರಾಲೋಚನೆ ಆರಂಭವಾಯಿತು. ಮಾಷ್ಟ್ರು ಊಟಕ್ಕೆ ಹೋಗಿದ್ದಾಗ ಬೀರು ಮುರಿದು ದರೋಡ ಮಾಡೋಣವೇ? ರಾತ್ರಿ ಕಿಟಕಿ ಮುರಿದು (ಕಬ್ಬಿಣ ಕೊಯ್ಯುವ ಗರಗಸ ಒಬ್ಬನ ಮನೆಯಲ್ಲಿದೆ ಅಂತಾಯಿತು) ಒಳ ನುಗ್ಗಿ ಧ್ವಂಸ ಮಾಡೋಣವೇ? ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಓಡೋಣವೇ? ಕೊನೆಗೆ ಎಲ್ಲದರ ಸಾಧಕಬಾಧಕ, ಪರಿಣಾಮದ ತೀವ್ರತೆ ಅಳೆದು ನೋಡಿದಾಗ ಶಾಲೆ ಬಿಡುವ ಹೊತ್ತಾಯಿತು.

ಸುಮಾರು ಹನ್ನೆರಡು ವರ್ಷದ ಆ ಮಕ್ಕಳ ಮನೆಯಲ್ಲಿ ಟಿವಿ ಇರಲಿಲ್ಲ. ದಿನಪತ್ರಿಕೆ ಓದುತ್ತಿರಲಿಲ್ಲ. ದೊಡ್ಡ ಪಟ್ಟಣಗಳ ಗಂಧಗಾಳಿಗೆ ಸಿಕ್ಕಿರಲಿಲ್ಲ. ಸಿನಿಮಾ ನೋಡುವವರೂ ಅಲ್ಲ. ಆದರೆ ದ್ವೇಷಾಗ್ನಿಯ ಇಂಧನ ಎಲ್ಲೆಡೆ ಯಾವಾಗಲೂ ಲಭ್ಯವಿದೆಯೇನೋ. ಷಡ್ಯಂತ್ರದಲ್ಲಿ ಯಶಸ್ಸು ಸಾಧಿಸುವುದು ಬೇರೆ, ಆದರೆ ಸಂಚು ರೂಪಿಸುವುದಕ್ಕೆ ಮನಸ್ಸಿಗೆ ಅಭ್ಯಾಸ ಬೇಕೇನು ? ಗುಡ್ಡದಲ್ಲಿ ನೇರಳೆ ಹಣ್ಣುಗಳನ್ನು ತಿಂದು, ಹಲ್ಲು ನಾಲಗೆಯೆಲ್ಲ ಕಡು ನೀಲಿ ಮಾಡಿಕೊಂಡ ಹುಡುಗರ ಗುಂಪು, ನಸುಬೆಳಕಿರುವ ಅದೇ ಸಾಯಂಕಾಲ ನಿರ್ಜನ ಶಾಲೆಗೆ ಲಗ್ಗೆ ಇಟ್ಟಿತು. ಛಾವಣಿಯ ಮೂವತ್ತು ನಲವತ್ತು ಹೆಂಚುಗಳು ಪುಡಿಯಾದವು. ಆವರಣದ ಹೂವಿನ ಗಿಡಗಳನ್ನೆಲ್ಲ ಕಿತ್ತೆಸೆಯಲಾಯಿತು. ಗೇಟಿನಲ್ಲಿ ಕಮಾನು ಮಾಡುವುದಕ್ಕೆಂದು ಇಟ್ಟಿದ್ದ ಕಬ್ಬಿಣದ ಉದ್ದನೆಯ ಸರಳೊಂದನ್ನು ಎಳಕೊಂಡು ಹೋಗಿ ಶಾಲೆಯ ಬಾವಿಗೆ ಒಗೆಯಲಾಯಿತು. ಸದ್ಯಕ್ಕೆ ಇಷ್ಟು ಸಾಕು. ಫಿನಿಷ್.

ಮರುದಿನ ಬೆಳಗ್ಗೆ ....ಮಾಷ್ಟ್ರು ಗರಂ ಆಗಿದ್ದರು. ಅವರ ಕಣ್ಣುಗಳ ಬಿಸಿ ಎಂಥವನನ್ನಾದರೂ ತಾಕುವಂತಿತ್ತು. ಆದರೆ ಯಾರು, ಯಾವಾಗ, ಯಾಕಾಯಿತು ಎನ್ನುವುದಕ್ಕೆ ಅವರಲ್ಲಿ ಉತ್ತರವಿರಲಿಲ್ಲ. ಉದ್ದನೆಯ ಜಗಲಿಯಲ್ಲಿ ಶತಪಥ ಹಾಕುತ್ತಿದ್ದರು. ಆಗಾಗ ತರಗತಿಗಳ ಕಡೆಗೆ ಚೂಪು ನೋಟ ಬೀರುತ್ತಿದ್ದರು. ತಮ್ಮ ಕನ್ನಡಕವನ್ನು ನಿಮಿಷಕ್ಕೆ ನಾಲ್ಕು ಬಾರಿ ಕರ್ಚೀಫಿನಲ್ಲಿ ಒರೆಸಿಕೊಳ್ಳುತ್ತಿದ್ದರು. ಚಹಾ ಕುಡಿಯಲೂ ಹೋಗಲಿಲ್ಲ.ಯಾವ ತರಗತಿಗೂ ಪಾಠ ಮಾಡಲಿಲ್ಲ !

ಮಧ್ಯಾಹ್ನ ೧೨ರ ಸುಮಾರಿಗೆ ಮೂಸೆ ಬ್ಯಾರಿಯ ಅಂಗಡಿಯಿಂದ ಬರುತ್ತಿರುವ ಮೇಷ್ಟ್ರು ,ಬೆತ್ತವೊಂದರ ಸಿಪ್ಪೆ ತೆಗೆದು ಹದ ಮಾಡಿಕೊಳ್ಳುತ್ತಿರುವುದನ್ನು ನೋಡಿದ ಸುಂದರನ ಗುಂಪಿಗೆ ಒಳಗೊಳಗೆ ಅಳುಕು. ಹೆಡ್‌ಮಾಸ್ಟ್ರ ಕೋಣೆಯ ಬೆಲ್ ಟಿರಿಂಗುಟ್ಟಿತು. `ಸುಂದರ, ರಾಘವ ಹೆಡ್‌ಮಾಸ್ಟ್ರ ಕೋಣೆಗೆ ಹೋಗಬೇಕಂತೆ 'ಎಂಬ ಆದೇಶವನ್ನು ಕ್ಲಾಸ್ ಲೀಡರ್ ತಂದಿತ್ತ. ಸಿಂಹದ ಗವಿಯ ಬಾಗಿಲಿಗೆ ಮಿಕಗಳು ಬಂದದ್ದೇ ತಡ, ಅವರ ಕಾಲು ಕೈ ಸೊಂಟ ಬೆನ್ನುಗಳ ಮೇಲೆಲ್ಲ ಮೇಷ್ಟ್ರ ಬೆತ್ತದ ಡಿಸ್ಕೊ ಶುರುವಾಯಿತು. ಛಟ್ ಛಟ್ ಛಟೀರ್ ಎಂಬ ಸದ್ದಿಗೆ, ಬೆತ್ತ ಬೀಸುವಾಗ ಕೇಳುವ ಸುಂಯ್ ಸುಂಯ್ ಸದ್ದಿಗೆ, ಸುಂದರ-ರಾಘವರ ಆರ್ತನಾದಕ್ಕೆ, ಬಡಬಡಿಸುವ ಮಾಷ್ಟ್ರ ಸ್ವರಕ್ಕೆ , ಶಾಲೆಯ ನಾಲ್ಕೂ ತರಗತಿಗಳು ಭಯಾನಕ ಮೌನದಲ್ಲಿ ಕರಗಿಹೋದವು. `ಇನ್ನೂ ಯಾರೆಲ್ಲಾ ನಿಮ್ ಜತೆ ಇದ್ರು? ಹೇಳಿ ಹೇಳಿ. ಗ್ಯಾಂಗನ್ನೆಲ್ಲಾ ಕರ್‍ಕೊಳ್ಳಿ. ಹೋಗಿ ಆ ಕಬ್ಬಿಣದ ಸರಳನ್ನು ಹುಡುಕಿ ತನ್ನಿ . ಅದು ತರುವವರೆಗೆ ಶಾಲೆಗೆ ಬರಬಾರದು. ಹೋಗಿ ನಡೀರಿ'.

ಅಂಗಳಕ್ಕೆ ಬಂದ `ಛೋಟಾ ರಾಜನ್ ' ಗುಂಪು ಮತ್ತೆ ಆರ್ದ್ರ ದೃಷ್ಟಿಯಿಂದ ಗುರುಗಳತ್ತ ನೋಡಿತು. ಹುಡುಗರ ಕಣ್ರೆಪ್ಪೆಗಳು ಬಾಡಿ ಹೋಗಿದ್ದವು. ಕೊರಳು-ಕಂಠ ಬಲ ಕಳಕೊಂಡಿದ್ದವು. ಶಾಲೆಯ ಎದುರಿನ ಬಯಲಿನಲ್ಲೇ ಇರುವ ಆಳದ ಬಾವಿಯಿಂದ ಸರಳನ್ನು ಮೇಲಕ್ಕೆತ್ತುವುದಾದರೂ ಹೇಗೆ ? ಹುಡುಗರ ಗುಂಪು ಮಣ್ಣು ರಸ್ತೆಯಲ್ಲಿ ಒಂದೆರಡು ಕಿಮೀ ಹೋಗಿ ಗುಡ್ಡೆ ಹತ್ತಿ ನೇರಳೆ ಹಣ್ಣುಗಳನ್ನು ತಿಂದಾಯಿತು. ಇನ್ನೇನು ಮಾಡುವುದು? ನಾಳೆಯೂ ಮೇಷ್ಟ್ರು ಶಾಲೆಯೊಳಗೆ ಬಿಡದಿದ್ದರೆ ಮನೆಯಲ್ಲಿ ಏನೆಂದು ಹೇಳುವುದು? ಗಂಟೆ ಎರಡಾಯಿತು, ಮೂರಾಯಿತು, ಶಾಲೆ ಬಿಡುವ ಹೊತ್ತು ಹತ್ತಿರವಾಗತೊಡಗಿತು. ಅರ್ಧ ಗಂಟೆಯಲ್ಲಿ ಮಕ್ಕಳು ಬಂದು `ತಪ್ಪಾಯಿತು ಸಾರ್' ಅಂತ ಕಾಲಿಗೆ ಬೀಳುತ್ತಾರೆ ಎಂದೇನೋ ಅಂದುಕೊಂಡಿದ್ದ ಮೇಷ್ಟ್ರಿಗೆ ಈಗ ಮಾತ್ರ ಉದ್ವೇಗ ಹೆಚ್ಚಾಯಿತು. ಹೋದ ಮಕ್ಕಳ ಪತ್ತೆಯೇ ಇಲ್ಲ. ನಾಳೆ ಏನಾದರೂ ಹೆಚ್ಚುಕಡಿಮೆಯಾಗಿ ಅಪ್ಪಅಮ್ಮಂದಿರು ಬಂದು ಕೇಳಿದರೆ ಏನು ಹೇಳುವುದು? ಮತ್ತಿಬ್ಬರು ಹುಡುಗರನ್ನು ಕರೆದು - ಸುಂದರ, ರಾಘವ, ನಾಗೇಶ, ರಮೇಶರ ಮನೆಗೆ ಹೋಗಿ, ಅವರನ್ನು ಕರಕೊಂಡು ಬನ್ನಿ ಎಂದರು. ಯಾವುದೋ ಕಾಡುಮೇಡಿನಲ್ಲಿದ್ದ ಅವರ ಮನೆಗಳಿಗೆ ಹೋದರೆ, `ಸುಂದರ ಇವತ್ತು ಮಧ್ಯಾಹ್ನ ಊಟಕ್ಕೆ ಬರಲೇ ಇಲ್ಲ, ರಮೇಶ ಈಗ ಬಂದು ಊಟ ಮಾಡಿಕೊಂಡು ಹೋದ ' ಹೀಗೆಲ್ಲ ದಿಕ್ಕು ತಪ್ಪಿಸುವ ಉತ್ತರಗಳೇ. ಹೀಗೆ ಎಲ್ಲೂ ಕಾಣಸಿಗದ ಆ ಹುಡುಗರ ಗುಂಪನ್ನು ಹುಡುಕಿ ಹುಡುಕಿ ಸುಸ್ತಾದ ಸಹಪಾಠಿಗಳಿಬ್ಬರು ಪರಮೇಶ್ವರ ಭಟ್ಟರ ತೋಟದೊಳಗಿನ ಕಾಲು ಹಾದಿಯಲ್ಲಿ ಶಾಲೆಗೆ ವಾಪಸಾಗುತ್ತಿದ್ದಾಗ ...
'ಅಕೋ, ಅಲ್ಲಿ ಓಡ್ತಿದಾರೆ . ಬಾ ಬಾ ಹಿಡಿಯುವ ,ಹಿಡಿಯುವ '. ಒಂದೇ ಒಟ. ಭಟ್ಟರ ದೊಡ್ಡ ಕೆರೆ ದಾಟಿ, ನೀರಿನ ಕಣಿಗಳನ್ನು ಹಾರಿ, ಬೇಲಿಯ ಬಳಿ ಹೋದರೆ, ನಿಂತಿದ್ದಾರೆ ಸೈಂಧವರು. ಗಿಡ್ಡ ನೀಲಿ ಚಡ್ಡಿ , ಮಣ್ಣಿನಲ್ಲಿ ಮುಳುಗಿ ಕೆಂಪಾದ ಬಿಳಿ ಅಂಗಿಯ ಆ ಪುಟಾಣಿಗಳು ಸಿನಿಮಾದ ಖಳನಾಯಕರ ಪಡೆಯಂತೆ. ಊದಿದ ಕಪೋಲಗಳಲ್ಲಿ ಬಿಸಿ ಬೆವರು, ತುಯ್ಯುತ್ತಿರುವ ಎದೆ ಹೊಟ್ಟೆ , ಕಂಪಿಸುತ್ತಿರುವ ಕಾಲುಗಳು, ಕೆದರಿದ ಕೂದಲು, ನೇ ...ರಳೆ ನಾಲಗೆ . `ಮೇಷ್ಟ್ರು ಕರೀತಿದ್ದಾರೆ, ಶಾಲೆಗೆ ಬರಬೇಕಂತೆ '. `ನಾವು ಬರುದಿಲ್ಲ'. `ಇಲ್ಲ ಬರಲೇಬೇಕಂತೆ '. `ಮೇಷ್ಟ್ರು ಹೊಡಿಯೋದಿಲ್ಲ ಅಂತ ಹೇಳಿದರೆ ಮಾತ್ರ ಬರ್‍ತೇವೆ '. `ಇಲ್ಲದಿದ್ದರೆ?'`ಇಲ್ಲದಿದ್ದರೆ... ಇದೇ ಕೆರೆಗೆ ಹಾರಿ ಸಾಯ್ತೇವೆ '. ಅಬ್ಬಾ ಎಂಥಾ ಘೋಷಣೆ !

ಅಂಗಡಿ ಬಳಿ ಮೂಸಾನನ್ನೇ ಕೆಕ್ಕರಿಸಿ ನೋಡುತ್ತಾ ನಿಂತಿರುವ ಹುಡುಗರನ್ನು , ಕ್ಲಾಸ್ ಲೀಡರ್ ಮತ್ತು ಇಬ್ಬರು ಹುಡುಗರು ಬಂದು ಕರೆದರು. ` ಮಾಷ್ಟ್ರು ಹೊಡಿಯುದಿಲ್ವಂತೆ. ಒಳಗೆ ಬರಬೇಕಂತೆ '. ಶಾಲೆಯ ದೊಡ್ಡ ಕೋಣೆಯ ಬದಿಯಲ್ಲಿರುವ ಭಜನಾ ಮಂಟಪದ ಬಾಗಿಲು ತೆಗೆದಿತ್ತು. ಎದುರು ಮುಖ್ಯೋಪಾಧ್ಯಾಯರು. ಅದರೊಳಗೆ ದೇವಾನುದೇವತೆಗಳ ಫೋಟೊಗಳು. ಪ್ರತಿ ಶನಿವಾರದ ಭಜನೆಯಂದು ಮಾತ್ರ ಅದರ ಬಾಗಿಲು ತೆಗೆಯಲಾಗುತ್ತಿತ್ತು. ಆದರೆ ಈಗ ವಿಶೇಷವಾಗಿ ಮಂಗಳವಾರವೂ ಬಾಗಿಲು ತೆರೆಯಲಾಗಿದೆ. `ಹೂಂ ಇಲ್ಲಿ ಬನ್ನಿ. ಅಡ್ಡ ಬೀಳಿ. ಮಾಡಿದ್ದು ತಪ್ಪಾಯಿತು, ಇನ್ನು ಯಾವತ್ತೂ ಇಂಥ ಕೆಲಸ ಮಾಡೋದಿಲ್ಲ ಅಂತ ಹೇಳಿ.' ಎಲ್ಲರೂ ಒಂಚೂರು ತುಟಿ ಕದಲಿಸಿ ನೀಟಂಪ ಅಡ್ಡಬಿದ್ದರು.

ಏಳುವಾಗ ಮಾತ್ರ ನಾಗೇಶ ಹರಿಸಿದ ದೃಷ್ಟಿಗೆ ದೇವಾನುದೇವತೆಗಳೂ ಬೂದಿಯಾದರು.

(ಈ ಬರಹದ ಟಿಪ್ಪಣಿ ಮುಂದಿನ ಪೋಸ್ಟ್‌ನಲ್ಲಿ.)

Read more...

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP