March 25, 2008

ಗಾಳಿಪಟ:ಕೆಲವು ಟಿಪ್ಪಣಿಗಳು

ಗಂಡನ ಮನೆಯಲ್ಲಿದ್ದೇ ಕಾಡಿನ ಮಕ್ಕಳಿಗೆ ಪಾಠ ಹೇಳುವ ವಿಧವೆ , ಬೆಂಗಳೂರಿನಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿ ಊರಿಗೆ ಬಂದು ಪಿಯುಸಿ ಮಾಡುತ್ತಾ ಮಗಂದಿರಿಲ್ಲದ ಅಪ್ಪನನ್ನು ನೋಡಿಕೊಳ್ಳುತ್ತಿರುವ ಮಗಳು, ಆಯುರ್ವೇದ (ಬಿ.ಎ.ಎಂ.ಎಸ್.)ಓದು ಮುಗಿದ ಬಳಿ ಹಳ್ಳಿಯಲ್ಲೇ ವೃತ್ತಿ ನಡೆಸಲು ಬಯಸಿರುವ ಇನ್ನೊಬ್ಬಳು ಮಗಳು, ಪ್ರಾಣಿ ಹತ್ಯೆ ಸಲ್ಲದು ಎಂಬ ಸಂದೇಶ, ವಿಧವಾ ವಿವಾಹಕ್ಕೆ ಪ್ರೋತ್ಸಾಹ, ಕೆಳ ಜಾತಿಯ ಕರಿಯ ಕೆಲಸಗಾರನನ್ನೂ ಮನೆಯೊಳಗೆ ಕರೆದುಕೊಳ್ಳುವ ಜಾತ್ಯತೀತತೆ, ಇಂಗ್ಲಿಷ್ ಮೀಡಿಯಮ್ಮಲ್ಲೇ ಓದಿ ಬೆಳೆದ ಹುಡುಗರಿಗೆ ಕನ್ನಡ ಕಲಿಯಲು ಉಪದೇಶ, ಕುವೆಂಪು, ಜಿಎಸ್‌ಎಸ್‌ರಂತಹ ಕವಿಗಳಿಗೆ ಹೊಗಳಿಕೆ, ಅಶ್ಲೀಲ ಭಂಗಿ-ರಕ್ತದೋಕುಳಿಗೆ ನಿಷೇಧ...ಇವೆಲ್ಲ ಒಳ್ಳೆಯ ಸಿನಿಮಾದ ಲಕ್ಷಣಗಳಲ್ವಾ?!

ಕತೆ ಅನ್ನೋದೇನೂ ಇಲ್ಲ, ಗಣೇಶನ ಮಾತು ಅತಿಯಾಯ್ತು...ಹೀಗಾಗಿ ಗಾಳಿಪಟಕ್ಕೆ ಅಂತಹ ಯಶಸ್ಸು ಸಿಕ್ಕಿಲ್ಲ ಅಂತ ತಳ್ಳಿ ಹಾಕುವುದು ಸುಲಭ . ಆದರೆ... ವಾಚಾಳಿಯಾಗಿರುವ ಗಣೇಶನ ಜತೆಗೆ ಮಾತೇ ಬಾರದ ‘ಡ್ರಾಕುಲಾ’ನ ಪಾತ್ರವೂ ಇದೆ. ಮೂವರು ಹುಡುಗರು ಮತ್ತು ಮೂವರು ಹುಡುಗಿಯರೂ ಭಿನ್ನ ಮನೋಭಾವದವರು. ತೀರಿಹೋದ ಪತಿಯೇ ಪರದೈವವಾಗಿರುವ ಗಂಭೀರೆ ಒಬ್ಬಳಾದರೆ, ಕೃಷಿ-ವ್ಯವಹಾರ ಮಾಡುತ್ತಾ ಗಂಡಸರಂತೆ ವರ್ತಿಸುವವಳು ಮತ್ತೊಬ್ಬಳು. ಕೊನೆಯವಳಂತೂ ಪ್ರಿಯಕರನ ಕೊರಳ ಪಟ್ಟಿ ಹಿಡಿದು ಸೆಳೆವ ಕಾಮಾತುರೆ . ವಾಚಾಳಿ ಗಣೇಶ ಕೊನೆಗೆ ವಿವಾಹವಾಗುವುದು ಅತ್ಯಂತ ಕಡಿಮೆ ಮಾತಾಡುವ ವಿಧವೆಯನ್ನು ಮತ್ತು ಅತ್ಯಂತ ಕಡಿಮೆ ಮಾತಾಡುವವನು ಚಟಪಟ ರಟ್ಟುತ್ತಿರುವ ಕೊನೆಯ ಹುಡುಗಿಯನ್ನು ! ಮಂಡ್ಯ-ಬೆಂಗಳೂರು-ಮಲೆನಾಡು-ತುಳುನಾಡು (ಮಂಗಳೂರು)ಗಳನ್ನು ಒಂದಾಗಿಸುವ ಎಳೆಯೂ ಕತೆಯಲ್ಲಿದೆ. ಜತೆಗೆ ಗಣೇಶನ ಹಸನ್ಮುಖ ಖುಶಿ ಕೊಡದೆ ಇದ್ದೀತೇ?

ಗೀತೆಗಳು ಮುಂಗಾರು ಮಳೆಯಷ್ಟು ಚೆನ್ನಾಗಿಲ್ಲದಿರುವುದು, ಲೊಕೇಶನ್‌ಗಳು ಅದೇ ಥರಾ ಇರುವುದು, ಹೊಸತು ಎಂಬಂತಿರುವ ಹಂದಿ ಬೇಟೆಯ ಪ್ರಸಂಗವೂ ಸೆನ್ಸೇಷನಲ್ ಆಗದೆ ಸಪ್ಪೆಯಾಗಿ ಖಾರ (ಫೈಟಿಂಗ್ ಇತ್ಯಾದಿ)ದ ಕೊರತೆಯನ್ನು ತುಂಬದಿರುವುದು, ಗಾಳಿಪಟದ ಹಾರಾಟ ನಿರೀಕ್ಷೆ ಮುಟ್ಟದಿರಲು ಮುಖ್ಯ ಕಾರಣಗಳಿರಬೇಕು. ತುಂಡು ಪಾತ್ರಗಳ ಮೂಲಕ ಚಿತ್ರಕಥೆ ಕಟ್ಟುವ ಹೊಸ ಯೋಚನೆಗೆ ಪೂರಕವಾಗಿ, ಪ್ರಸ್ತುತಿಯಲ್ಲಿ ಹೊಸತನ ಹುಟ್ಟಿದಂತಿಲ್ಲ. ಸಾಮಾನ್ಯ ಹುಡುಗನೊಬ್ಬ ಪಾತಕಿಗಳ ಲೋಕ ಪ್ರವೇಶಿಸುವ ಹಳೇ ಕತೆಯುಳ್ಳ ‘ದುನಿಯಾ’ವನ್ನು ಅಥವಾ ಮಾಮೂಲಿ ಕತೆಯ ’ಮುಂಗಾರು ಮಳೆ’ಯನ್ನು ಗೆಲ್ಲಿಸಿದ್ದು ಅವುಗಳ ಪ್ರಸ್ತುತಿಯಲ್ಲಿದ್ದ ಹೊಸತನದ ರೀತಿ, ನಮ್ಮ ನಿರೀಕ್ಷೆಯನ್ನು ಸುಳ್ಳಾಗಿಸುವ ಅಂತ್ಯಭಾಗ. ಆದರೆ ಇಲ್ಲಿ ಸಿನಿಮಾವನ್ನು ಮುಗಿಸುವುದಕ್ಕೆ ತಡಬಡಾಯಿಸಿರುವುದಂತೂ ಸ್ಪಷ್ಟವಾಗಿದೆ. ತೆಪ್ಪದಿಂದ ನದಿ ನೀರಿಗೆ ಮಗುಚಿಕೊಂಡ ಗಣೇಶ್ ಮತ್ತು ಡೈಸಿಬೋಪಣ್ಣ ಈಜಾಡಿ, ಹೋರಾಡಿ ಮೇಲೆ ಬರುತ್ತಿದ್ದಂತೆಯೇ ಜನರೂ ಎದ್ದು ನಿಂತು ಬ್ಯಾಗು ಹೆಗಲಿಗೇರಿಸುತ್ತಾರೆ, ಅವರು ಒಂದಾದರೆ ಖುಶಿಯೂ ಇಲ್ಲ , ಸತ್ತರೆ ಬೇಜಾರೂ ಇಲ್ಲ ಎಂಬಂತಿರುತ್ತದೆ ಪ್ರೇಕ್ಷಕರ ಪರಿಸ್ಥಿತಿ ! ಒಟ್ಟಾರೆ, ಯೋಚನೆಯಲ್ಲಿ ಹೊಸ ನೀತಿ, ಕೆಲಸದಲ್ಲಿ ಹಳೆ ರೀತಿ.

ನನ್ನ ಪಕ್ಕದಲ್ಲಿ ಕುಳಿತಿದ್ದ ಮೂವರು ಅನ್ಯ ಭಾಷೆಯ ಹುಡುಗರು (ಹಿಂದಿ ಮಿಶ್ರಿತ ಯಾವುದೋ ಭಾಷೆ ಆಡುತ್ತಿದ್ದರು) ಮುಂಗಾರು ಮಳೆಯಿಂದ ಪ್ರಭಾವಿತರಾಗಿ, ಗಣೇಶ್ ಫ್ಯಾನ್‌ಗಳಾಗಿ ಬಂದಿದ್ದವರು ಸಿನಿಮಾ ಪೂರ್ತಿ ಎಂಜಾಯ್ ಮಾಡಿದರು. ‘ಈ ಮಲ್ನಾಡು ಬಚ್ಚಲು ಮನೆ ಥರಾ ಇದೆಯಲ್ಲ’ ಅನ್ನೋದು ಅವರಿಗೆ ಅರ್ಥವಾಗದಿದ್ದರೂ ಕೆಲವು ವಾಕ್ಯಗಳು ಅರ್ಥವಾಗುತ್ತಿತ್ತು. ಅಂತಹ ಪ್ರೇಕ್ಷಕರನ್ನೂ ಕನ್ನಡ ಸಿನಿಮಾಗಳಿಗೆ ಸೆಳೆದಿರುವ ಯೋಗರಾಜ ಭಟ್ಟರಿಗೆ ಮತ್ತೊಂದು ರಾಜಯೋಗ ಬೇಗ ಬರಲಿ.

6 comments:

ವಿ.ರಾ.ಹೆ. March 26, 2008 at 5:51 AM  

ಚಿತ್ರ ಬಿಡುಗಡೆಯಾಗಿ 50 ದಿನಗಳ ನಂತರ ನೋಡಿದ್ರಿ ಅಂತ ಆಯ್ತು ;)

ಒಟ್ಟಾರೆ ಎಲ್ಲಾ ದೃಷ್ಟಿಯಿಂದಲೂ ’ಬಹಳ ಚೆನ್ನಾಗಿದೆ’ ಅನ್ನಿಸದಿದ್ದರೂ ಡೈಲಾಗ್ಸ್ ಇತ್ಯಾದಿ ಕಾರಣಗಳಿಂದ ’ಚೆನ್ನಾಗಿದೆ’ ಅನ್ನಿಸಿತು. ನಾನು ಬರೀ ಹಿಂದಿ ಚಿತ್ರಗಳನ್ನು ಹಾಕುವ ಕಾವೇರಿ ಟಾಕೀಸಿನಲ್ಲಿ ರಾತ್ರಿ ಶೋಗೆ ಹೋಗಿದ್ದೆ. ಕನ್ನಡ ಚಿತ್ರಕ್ಕೆ ಅಂತಹ ರಾತ್ರಿಯಲ್ಲೂ ಟಾಕೀಸಿನ ತುಂಬ ಕುಟುಂಬ ಸಮೇತ ಬಂದವರೇ ಹೆಚ್ಚಿದ್ದರು ಎಂಬ ಕಾರಣವೇ ಸಾಕು ಯೋಗರಾಜ ಭಟ್ಟರಿಗೆ ಥ್ಯಾಂಕ್ಸ್ ಹೇಳಲು.

Anonymous,  March 26, 2008 at 8:12 AM  

Hey Sudhanva,

I keep bumping onto you here and there and must have exchanged a few hellos. Till now didn't know that you have been on an exploration so much! Will get bck at ease and leisure into this again.

Thanks n love

VASTAREY

ಸಂತೋಷಕುಮಾರ March 26, 2008 at 10:02 PM  

"ಕೊನೆಯವಳಂತೂ ಪ್ರಿಯಕರನ ಕೊರಳ ಪಟ್ಟಿ ಹಿಡಿದು ಸೆಳೆವ ಕಾಮಾತುರೆ"
ಗುರುವೇ ಕಾಮಾತುರೆ ಅನ್ನಬಾರದಿತ್ತೇನೋ.ಚಿತ್ರದಲ್ಲಿ ನಂಗೆ ಇಷ್ಟವಾದ ಪಾತ್ರ ಅಂತಲೋ ಎನೋ ಆ ಪದ ಮುಜುಗರ ಉಂಟು ಮಾಡ್ತು.

ಚಿತ್ರ ನಂಗೂ ಬೇಜಾರು ಮೂಡಿಸಿತು.

Anonymous,  March 27, 2008 at 8:35 AM  

premature andidre sari hogtittu anta nanagoo anisitu. ottinalli ature antoo nija. chitrada muktayada bagge neenu observe maadiroodu sari agide...
~apara

Anonymous,  March 27, 2008 at 9:56 AM  

ಹೌದು ಮಾರಾಯ್ರೆ. ನನ್ನ ಬರವಣಿಗೆಯ ಆತುರದಲ್ಲಿ ಹಾಗಾಯ್ತು !
ವಸ್ತಾರೆಯವರು ಚಂಪಕಾವತಿವರೆಗೆ ಬಂದದ್ದಕ್ಕೆ ಥ್ಯಾಂಕ್ಸ್.
- ಸುಧನ್ವಾ

ಸುಶಾಂತ್ ಬನಾರಿ March 29, 2008 at 12:19 AM  

ವಿಶ್ಲೇಷಣೆ ಪರವಾಗಿಲ್ಲ, ಚೆನ್ನಾಗಿಯೇ ಮಾಡಿದ್ದೀರಿ..
ಆದರೆ ದೈಸಿ ಬೊಪಣ್ಣಳನ್ನು "ಡ್ರಾಕುಲ" ಅಂದದ್ದು ಅಕ್ಷಮ್ಯ...!

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP