August 15, 2009

'ಇಲ್ಲದ ತೀರದಲ್ಲಿ' - ಇನ್ನೊಂದು ಹೊಸ ಪುಸ್ತಕದ ಬಗ್ಗೆ


ಈ ಅಕ್ಷರಗಳಲ್ಲಿ ದುಃಖವನ್ನು ತುಂಬಿದ್ದೇನೆ
ತುಳುಕದಂತೆ ನೋಡಿಕೊಳ್ಳಿ ಕಣ್ಣೀರು.
ದುಃಖ ಹೀರಿಕೊಂಡೂ
ಒದ್ದೆಯಾಗವು ಅಕ್ಷರಗಳು .

ಯಾವತ್ತೋ ಬರೆದಿಟ್ಟಿದ್ದ ಈ ನಾಲ್ಕು ಸಾಲು ಈಗ ನೆನಪಾಯಿತು. ಅದಕ್ಕೆ ಕಾರಣ, ಅರವಿಂದ ಚೊಕ್ಕಾಡಿಯವರ 'ಇಲ್ಲದ ತೀರದಲ್ಲಿ-ಅಪ್ಪನ ಬದುಕಿನೊಂದಿಗೆ ಸಂವಾದ’ ಎಂಬ ಇತ್ತೀಚೆಗಿನ ಪುಸ್ತಕ. ನೂರಮೂವತ್ತು ಪುಟಗಳ, ರೂ.ಅರುವತ್ತು ಬೆಲೆಯ ಈ ಪುಸ್ತಕವನ್ನು ಬಳ್ಳಾರಿಯ 'ಲೋಹಿಯಾ ಪ್ರಕಾಶನ' ಪ್ರಕಟಿಸಿದೆ. ತುಂಬ ಪ್ರಖರವಾದ ಕಟು ಸತ್ಯಗಳ ಗುಚ್ಛ ಅದು. ಅದಕ್ಕೆ ಪ್ರಮೀಳಾ ಚೊಕ್ಕಾಡಿ ಬರೆದ ಮುನ್ನುಡಿಯ ಆಯ್ದ ಭಾಗ ಹಾಗೂ ಪುಸ್ತಕ ಓದಿ ಅರವಿಂದರಿಗೆ ನಾನು ಬರೆದ ಪತ್ರವನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ. ಒಂದ್ಹತ್ತು ನಿಮಿಷ ಇಲ್ಲಿ ಕಳೆದುಹೋಗಿ.

...ಮಾವ ನಮ್ಮನ್ನಗಲಿ ಮೂರು ತಿಂಗಳು ಕಳೆದ ಮೇಲೂ ಯಾವುದೋ ವಿಷಾದ ಭಾವ ನಮ್ಮನ್ನು ಕಾಡುತ್ತಿದೆ. ಅದು ಅವರ ಸಾವಿನದ್ದಾಗಿರದೆ ಅವರು ಕೊನೆಯ ದಿನಗಳಲ್ಲಿ ಬದುಕಿದ ರೀತಿಯಿಂದ ಬರುವ ವಿಷಾದವಾಗಿದೆ...ಮಾವ ತಮ್ಮ ಆಪ್ತ ವಿಚಾರಗಳನ್ನೆಲ್ಲ ನನ್ನಲ್ಲೇ ಹೇಳಿಕೊಳ್ಳುತ್ತಿದ್ದರು. ಅಪ್ಪ, ಅಮ್ಮ, ಅಣ್ಣ-ತಮ್ಮಂದಿರು, ಜೋಡುಪಾಲದ ಆಸ್ತಿ, ಕೆಲವೊಮ್ಮೆ ಪುರಾಣ, ಮಗದೊಮ್ಮೆ ರಾಜಕೀಯ, ಇನ್ನೊಮ್ಮೆ ಪ್ರಸ್ತುತ ಸಾಮಾಜಿಕ ಸ್ಥಿತಿಗತಿಗಳು, ವಣಾಶ್ರಮ ವ್ಯವಸ್ಥೆ ಹೀಗೆ ಉಮೇದು ಬಂದರೆ ಆ ದಿನವೆಲ್ಲ ತುಂಬಾ ಮಾತನಾಡುತ್ತಿದ್ದರು ಮಾವ. ನಾನು ಆಗಾಗ ಮಾವನನ್ನು ಕೆಣಕುವುದಿತ್ತು. ‘ಮಾವ, ಜೋಡುಪಾಲದ ಆಸ್ತಿಯಲ್ಲಿ ಪಾಲು ಸಿಕ್ಕಿದರೆ ನನಗೇನು ಕೊಡುತ್ತೀರಿ?’ ಎಂದು. ‘ನನಗೆ ನಾಲ್ಕು ಲಕ್ಷ ಸಿಕ್ಕಿದರೆ ನಿನಗೆ ಹತ್ತು ಸಾವಿರ ರೂಪಾಯಿ ಕೊಡುತ್ತೇನೆ’ ಅನ್ನುತ್ತಿದ್ದರು ಮಾವ. ಆಗ ನಾನು ಹೇಳುತ್ತಿದ್ದೆ- 'ಮಾವ ನೀವು ಕೊಡುವ ಹಣವನ್ನು ಸೇರಿಸಿ ನಾನೊಂದು ವಾಷಿಂಗ್ ಮೆಷಿನ್ ತೆಗೆಯುವವಳಿದ್ದೇನೆ.' ಆಗ ಮಾವ ಹೇಳುತ್ತಿದ್ದರು-‘ನೀನು ವಾಷಿಂಗ್ ಮೆಷಿನ್ ತೆಗೆಯುವುದಾದರೆ ನಾನು ಹಣವನ್ನೇ ಕೊಡಲಾರೆ. ಅದನ್ನು ಹಾಗೆಯೇ ತೆಗೆದುಕೊಂಡು ಹೋಗಿ ನಿನ್ನ ಅಕೌಂಟ್‌ಗೆ ಹಾಕುತ್ತೀಯಾದರೆ ಮಾತ್ರ ನಾನು ನಿನಗೆ ಹಣ ಕೊಡಬಹುದು.' 'ಅಂದ ಹಾಗೆ ಮಾವ, ನಿಮಗೆ ಆಸ್ತಿಯಲ್ಲಿ ಯಾವಾಗ ಪಾಲು ಸಿಗುತ್ತದೆ?’ 'ನೀನಿಲ್ಲಿಂದ ಹೋಗ್ತೀಯೋ ಇಲ್ವೋ? ನಿನಗೇನು ಕೆಲಸ ಇಲ್ವಾ?’ ಎಂದು ನಗುತ್ತಾ ತಾವೇ ಎದ್ದು ಚಾಪೆ ಸೇರುತ್ತಿದ್ದರು...

...ಬಿಸಾಡಬಹುದಾದ ಕೈಚೀಲಗಳನ್ನು ಬಿಚ್ಚಿ ಹೊಸ ರೀತಿಯಲ್ಲಿ ಹೊಲಿಯುವುದು ಅವರ ಬಹಳ ಇಷ್ಟದ ಕೆಲಸ. ದಿನಪತ್ರಿಕೆಗಳನ್ನು ಸ್ವಲ್ಪವೂ ಕರೆ ಮಡಚದ ಹಾಗೆ ಅಚ್ಚುಕಟ್ಟಾಗಿ ಜೋಡಿಸಿಡುವುದು, ಬೇಡದ ಹಾಲಿನ ಕವರ್, ಪ್ಲಾಸಿಕ್ ಕವರ್, ಖಾಲಿ ಮದ್ದಿನ ಬಾಟಲ್‌ಗಳು, ಬಾರ ಹೋದ ಚಪ್ಪಲಿಗಳು ಇವೆಲ್ಲವನ್ನೂ ಮಾವ ಪ್ರತ್ಯೇಕ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಟ್ಟು ಅನುಕೂಲವಾದಾಗ ಗುಜರಿ ಅಂಗಡಿಯಲ್ಲಿ ಮಾರಿ, ಸಿಕ್ಕಿದ ಹಣವನ್ನು ತಮ್ಮ ಅಕೌಂಟ್‌ನಲ್ಲಿಯೂ , ಮೊಮ್ಮಗಳ ಅಕೌಂಟ್‌ನಲ್ಲಿಯೂ ಜಮಾ ಮಾಡುತ್ತಿದ್ದರು. ಸಾಯುವ ಎರಡು ತಿಂಗಳ ಮೊದಲು ನನ್ನೆಲ್ಲಾ ನೋಟ್ಸ್ ಪುಸ್ತಕಗಳಿಗೆ ಮಾವ ನೀಟಾಗಿ ಬೈಂಡ್ ಹೊದೆಸಿಕೊಟ್ಟಿದ್ದರು....
...ಮೆಚ್ಚಿ ಮದುವೆಯಾದ ಅತ್ತೆ-ಮಾವ ಮೆಚ್ಚಿಕೊಂಡೇ ಬಾಳಬಹುದಾಗಿದ್ದ ಉನ್ನತ ಮಾನವೀಯ ಗುಣಗಳನ್ನು ಹೊಂದಿದ್ದೂ, ಒಂದೇ ಜೀವನ ದೋಣಿಯಲ್ಲಿ ಮುಖ ತಿರುಗಿಸಿಕೊಂಡು ಯಾನ ಮಾಡಿದರು. ಈಗ ಆ ಯಾನದಲ್ಲಿ ಮಾವನಿಲ್ಲ... -ಪ್ರಮೀಳಾ ಚೊಕ್ಕಾಡಿ

ಪ್ರಿಯ ಅರವಿಂದ ಚೊಕ್ಕಾಡಿಯವರಿಗೆ, ನಮಸ್ಕಾರ.
ಪುಸ್ತಕ ಕೈಗೆ ಬಂದಾಗ ಸಾಮಾನ್ಯವಾಗಿ ಎಲ್ಲರೂ ಮಾಡುವಂತೆ, ಮೊದಲು ಓದಿದ್ದು ಬೆನ್ನುಡಿ. ಅದನ್ನೋದಿದಾಗ ಮುನ್ನುಡಿಯನ್ನೂ ಪೂರ್ತಿ ಓದುವ ಮನಸ್ಸಾಯಿತು. ಮುನ್ನುಡಿ ಓದಿದ್ದೇ ಪುಸ್ತಕ ತೆರೆದು ಒಳಹೊಕ್ಕು ಕುಳಿತೆ. ಎರಡು ದಿನಗಳ ಎರಡೇ ಸಿಟ್ಟಿಂಗ್‌ಗಳಲ್ಲಿ ನೂರಮೂವತ್ತು ಪುಟಗಳ ಪುಸ್ತಕ ಓದಿ ಮುಗಿಸಿದಾಗ ತಲ್ಲಣಗೊಂಡಿದ್ದೆ. ನಾನು ಪುಸ್ತಕ ಓದುವುದು ನಿಧಾನ. ಅಲ್ಲದೆ ಎರಡುಮೂರು ಪುಸ್ತಕಗಳನ್ನಿಟ್ಟುಕೊಂಡು ಒಂದೊಂದನ್ನೇ ಚೂರುಚೂರು ಓದುತ್ತಿರುವುದು ಅಭ್ಯಾಸ. ಅಂತದ್ದರಲ್ಲಿ ನೀವು ಬರೆದ ಪುಸ್ತಕ, ಅದಕ್ಕೆ ಬೆನ್ನುಡಿ-ಮುನ್ನುಡಿಯಾಗಿ ನಿಮ್ಮ ಪತ್ನಿ ಪ್ರಮೀಳಾ ಚೊಕ್ಕಾಡಿ ಬರೆದ ಚೊಕ್ಕದಾದ ಬರಹ ನನ್ನ ಮನಸ್ಸಿನಲ್ಲಿ ಕೂತುಬಿಟ್ಟಿದೆ.

ನನ್ನಪ್ಪನ ಬಗೆಗಿನ ಲೇಖನಗಳ ಸಂಕಲನದಲ್ಲಿ ನಾನು ಹೀಗೆ ಬರೆದಿದ್ದೆ- 'ಈ ಪುಸ್ತಕವು ಅಪ್ಪ ಮತ್ತು ಮನೆಯ ಖಾಸಗಿ ವಿವರಗಳನ್ನು ಸಾರ್ವಜನಿಕಗೊಳಿಸುವ ಅಥವಾ ಸಾರ್ವಜನಿಕವಾಗಿ ಖಾಸಗೀಕರಣಗೊಳಿಸುವ (ಅಂದರೆ ಸಾರ್ವಜನಿಕವಾಗಿ ಇನ್ನಷ್ಟು ಆಪ್ತವಾಗಿಸುವ !) ಕೆಲಸ. ಇಲ್ಲಿ ಬಯಲಾಗುವ ಖಾಸಗಿ ವಿವರಗಳು ಅನಗತ್ಯ ಅನ್ನಿಸಬಹುದು. ಆದರೆ ಇನ್ನೊಂದು ಕಿಟಕಿಯಿಂದ ನೋಡಿದರೆ, ಸಾರ್ವಜನಿಕ ಜೀವನ ತುಂಬುವುದೇ ಇಂತಹ ಖಾಸಗಿ ವಿವರಗಳಿಂದಲೋ ಏನೋ? ಇವೆಲ್ಲವೂ ಕೊಂಚ ಝಗಮಗಿಸಿಯಾವು ಅಥವಾ ಸಪ್ಪೆಯಾಗಿ ಕಂಡಾವು. ಅದೇನಿದ್ದರೂ ಅಕ್ಷರಗಳ ಚಮತ್ಕೃತಿ ಅಷ್ಟೆ'. ಅತ್ತೆಯಂದಿರು, ಮಾವಂದಿರು, ದೊಡ್ಡಮ್ಮಂದಿರು ಎಲ್ಲರೂ ಬರೆದಿದ್ದರಿಂದ ಅದು ತೀರಾ ಖಾಸಗಿಯಾಗೇ ಇತ್ತು. ಆ ನೆನಪಿನಲ್ಲಿ ನಿಮ್ಮ ಪುಸ್ತಕ ತೆರೆದರೆ, ಇಲ್ಲೆಲ್ಲ ಹರಿದು ಹಂಚಿ ಹೋದ ಸಾಮ್ರಾಜ್ಯ. ಹಾಗಂತ ಅಪ್ಪನನ್ನು ಸಾರ್ವಜನಿಕವಾಗಿ ಮೆರೆಸುವ, ಆಪ್ತತೆಯ ನೆಪ ಹೇಳಿ ಭಾವನೆಗಳನ್ನು ಹೈಜಾಕ್ ಮಾಡುವ ಉದ್ದೇಶವೂ ಇಲ್ಲ. ಎಲ್ಲ ‘ನೇರ-ಸರಳ-ದಿಟ್ಟ-ನಿರಂತರ’. ಇದು ತಮಾಷೆ ಅಲ್ಲ. ಓದಿ ಕನಿಕರ-ಸಹಾನುಭೂತಿ ತೋರಿಸುವಂತಿಲ್ಲ. ಬೆಚ್ಚಿಬೀಳಿಸುವ ಭಯಾನಕತೆಯೊ, ಬರೀ ಶೋಕಗೀತೆಯೂ ಅಲ್ಲ. ನಮ್ಮಲ್ಲೆಲ್ಲ ಬಂಧುಗಳು ಸೇರಿದಾಗ 'ಸುಖದುಃಖ ಮಾತಾಡುವುದು' ಅಂತಿದೆಯಲ್ಲ, ಸುಮಾರಾಗಿ ಹಾಗೆಯೇ. ಹಾಗಾಗಿ ಕೆಲವೆಡೆ ಪದಗಳ ದುಂದುವೆಚ್ಚವೂ ಆಗಿದೆ. ಕವಿಯಲ್ಲದ ನೀವು, ಆ ಬಗ್ಗೆ ಚಿಂತಿಸಬೇಕಿಲ್ಲ ಬಿಡಿ. ಇಲ್ಲಿ ಅಪ್ಪ ಅಮ್ಮನ ವಿಮರ್ಶೆಯನ್ನೇ ಮಾಡಿದ್ದೀರಿ. ಹಾಗಾಗಿ ಈ ಪುಸ್ತಕದ ವಿಮರ್ಶೆ ಮಾಡುವುದು ಸುಲಭವೇನೂ ಅಲ್ಲ, ಆ ಉದ್ದೇಶವೂ ನನಗಿಲ್ಲ.

'ಸೃಜನಶೀಲ'ಅಂತ ಕರೆಯಲ್ಪಡುವ ಬರಹಗಳ ಯಾವುದೇ ತಂತ್ರಗಳನ್ನು ಬಳಸದೆ, ಏಕರೂಪವಾಗಿ, ನಿರುದ್ವಿಗ್ನವಾಗಿ, ಅಲಿಪ್ತರಾಗಿ ಬರೆದ ಶೈಲಿಯೇ ಇಷ್ಟವಾಯಿತು. ಇಲ್ಲಿ ಯಾರೂ ಹೀರೊ, ವಿಲನ್‌ಗಲ ವಿಜೃಂಭಣೆಯ ಕತೆ ಅಲ್ಲ. ಎಲ್ಲರೂ ಸಿಹಿ-ಉಪ್ಪು-ಹುಳಿ-ಖಾರದ ಮನುಷ್ಯರು. ಅನೇಕ ವ್ಯಕ್ತಿಗಳ ಯಶಸ್ಸಿನ ಕುರಿತ ಪುಸ್ತಕಗಳು ಇಂಗ್ಲಿಷ್‌ನಲ್ಲಿ ಬಹಳಷ್ಟಿವೆ. ನಿಮ್ಮದು ಯಶೋಗಾಥೆಯ ಪುಸ್ತಕ ಅಲ್ಲದಿದ್ದರೂ ಯಶಸ್ವಿ ಪುಸ್ತಕ. ತೀರಿಹೋದ ಅಪ್ಪನ ನೆನಪಿನಲ್ಲಿ ಬರೆದ ಇಂತಹ ಪುಸ್ತಕ, ಕನ್ನಡದಲ್ಲಿ ಇದೇ ಮೊದಲನೆಯದು ಅಂದುಕೊಂಡಿದ್ದೇನೆ. ನಾಲ್ಕು ಪುಟ ತಿರುವಿದಾಗಲೇ ರೇಜಿಗೆ ಹುಟ್ಟಿಸುವ ಅಭಿನಂದನ-ಸಂಸ್ಮರಣ ಗ್ರಂಥಗಳು ನೂರಾರು ಬರುತ್ತಿವೆ. ಆದರೆ ನಿಮ್ಮ ಪುಸ್ತಕ ನೆನಪಿನಲ್ಲುಳಿಯುತ್ತದೆ, ಬೆಳೆಯುತ್ತದೆ. ಯಾವ ಭಾಗ ಹೆಚ್ಚು ಇಷ್ಟವಾಯಿತು ಅಂತೇನಾದರೂ ನೀವು ಕೇಳುವುದಿದ್ದರೆ, ಬಹುಶಃ ‘ಅದೇಕೋ ಅಭಾಗ್ಯ ಈ ಭೀತಿ ಮೌನ’ ಅಧ್ಯಾಯ ನನಗೆ ಹೆಚ್ಚು ಇಷ್ಟವಾಯಿತು ಅಂದೇನು.

ಇದೊಂದು ಸಾತ್ವಿಕ ಬಂಡಾಯದ ಪುಸ್ತಕ. ಗಾಂಧಿಯ ಮಾದರಿ ಇದಕ್ಕಿದೆ. ತುಂಬಾ ವಿವರಗಳು (ಡಿಟೈಲ್ಸ್) ಇರುವುದರಿಂದ ಓದಿಸಿಕೊಂಡೂ ಹೋಗುತ್ತದೆ. ತುಂಬ ಪ್ರಖರವಾದ ಕಟು ಸತ್ಯಗಳನ್ನು ಜೋಡಿಸಿದ್ದೀರಿ. ನಿಮ್ಮ ಜೀವನ ದಾರಿಯ ಸ್ಪಷ್ಟತೆ ಬೆರಗು ಹುಟ್ಟಿಸುತ್ತದೆ. ಸುಮ್ಮನೆ ಹೊಗಳುತ್ತಿದ್ದೇನೆ ಅಂದುಕೊಳ್ಳಬೇಡಿ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬರೆಯಬಹುದಿತ್ತು, ಹೌದು. ಆದರೆ ಅನುಭವಕ್ಕೆ-ಸತ್ಯಕ್ಕೆ ನಿಷ್ಠನಾಗಿರುವುದೇ ಇಲ್ಲಿ ನಿಮಗೆ ಮುಖ್ಯ, ಪರಿಣಾಮದ ಬಗ್ಗೆ ಆಸಕ್ತಿಯಿಲ್ಲ ಅಂತ ನನಗೆ ಗೊತ್ತು. ಸಾವಿರಾರು ಪ್ರತಿ ಮಾರಾಟವೊ, ಪ್ರಶಸ್ತಿಗಳ ಆಕಾಂಕ್ಷೆಯೊ ಇದರ ಹಿಂದಿಲ್ಲ. ಒಬ್ಬ ಬರಹಗಾರ ಮಗನಾಗಿ ಇಷ್ಟು ಕರ್ತವ್ಯ ಅನ್ನುವ ದೃಷ್ಟಿ ನಿಮ್ಮಲ್ಲಿದ್ದಂತೆ ಅನಿಸುತ್ತದೆ. ಅಪ್ಪ ಹುಷಾರಿಲ್ಲದಿದ್ದಾಗ ಉಪಚರಿಸುವುದು ಹೇಗೆ ಮಗನ ಕರ್ತವ್ಯವೋ, ಅವರಿಲ್ಲದಾದಾಗ ಅವರ ಬಗ್ಗೆ ಒಂದಷ್ಟು ಬರೆಯುವುದು ಬರಹಗಾರ ಮಗನಾಗಿ, ನೀವು ಅಪ್ಪನಿಗೆ, ಈ ಅಕ್ಷರಗಳಿಗೆ ಮಾಡುವ ಋಣ ಸಂದಾಯದಂತೆ ಕಾಣುತ್ತಿದೆ, ಖುಶಿಯಾಗಿದೆ. ಪಾಕ ಸರಿಯಾಗಿದ್ದಾಗ ಆಹಾರವನ್ನು ಯಾವ ಆಕಾರದಲ್ಲಿಟ್ಟರೂ, ಯಾವ ಬಣ್ಣದಲ್ಲಿದ್ದರೂ ರುಚಿಯಾಗುವ ಹಾಗೆ, ಗಟ್ಟಿ ವಸ್ತುವಿನ ಈ ಪುಸ್ತಕ ಯಾವ ರೂಪದಲ್ಲಿದ್ದರೂ ರುಚಿಕರವೇ. ಈ ರೂಪದಲ್ಲೂ ಸ್ವಾದಿಷ್ಟವೇ.

ನೀವೇ ಬರೆದುಕೊಂಡ ಹಾಗೆ- ಅಪ್ಪ, ಅಮ್ಮನ ಸಾಮಾಜಿಕ ಋಣಗಳು ಹಾಗೆಯೇ ಇವೆ. ಈ ಕೃತಿಯಲ್ಲಿ ಉಪಕರಣಗಳಾಗಿ ಬರುವ ಮೂಲಕ ಓದುಗರಲ್ಲಿ ಒಂದು ಹೊಸ ಅರಿವನ್ನು ಹುಟ್ಟುಹಾಕಲು ಸಾಧ್ಯವಾದರೆ ಅವರು ಸಮಾಜಕ್ಕೆ ಸಲ್ಲಿಸಬೇಕಾದ ಋಣವನ್ನು ಸಲ್ಲಿಸಿದಂತಾಗುತ್ತದೆ ಎಂದು ನಾನು ಭಾವಿಸಿದ್ದೇನೆ.' ಎಂಬುದು ಅರ್ಥಪೂರ್ಣವಾಗಿದೆ. ‘ಅಪ್ಪ-ಅಮ್ಮನಿಗಿಂತ ಯಾವುದೂ ದೊಡ್ಡದಲ್ಲ. ಆದರೆ ಸತ್ಯ ಎಲ್ಲದಕ್ಕಿಂತ ದೊಡ್ಡದು' ಎಂದು ನೀವು ನಂಬುವ ಮಾತು ಈ ಕೃತಿಯುದ್ದಕ್ಕೂ ಉಳಿದುಕೊಂಡಿದೆ ಎಂದು ಅನ್ನಿಸಿದೆ.
- ಸ್ನೇಹದಿಂದ ಸುಧನ್ವಾ

Read more...

August 11, 2009

ಪ್ರಸನ್ನ ವದನಂ ಧ್ಯಾಯೇತ್...

'ಕಾಯಕ ಸಂಸ್ಕೃತಿಯ ಉಳಿವು ಈ ಪುಸ್ತಕದ ಪ್ರಧಾನ ಆಶಯವಾಗಿದೆ. ಆದರೆ ದುಡಿಯುವ ವರ್ಗಗಳಿಗೆ ಅನುಮಾನಗಳಿವೆ; ಜಾತಿ ಪದ್ಧತಿ, ಪಾಳೆಯಗಾರಿ ಪದ್ಧತಿ ಹಾಗೂ ಒಟ್ಟಾರೆಯಾಗಿ ಗ್ರಾಮ ಜೀವನದ ಬಗ್ಗೆಯೇ ಬಡವರಿಗೆ ಅನುಮಾನಗಳಿವೆ. ಯಂತ್ರ ನಾಗರಿಕತೆ ಹಾಗೂ ನಗರ ಸಂಸ್ಕೃತಿಯು ನಮ್ಮೆಲ್ಲ ಪರಂಪರೆಗಳಿಗಿಂತಲೂ ಹೆಚ್ಚು ಪ್ರಜಾಸತ್ತಾತ್ಮಕವಾದುದೆಂದು ಬಡವರು ನಂಬುತ್ತಾರೆ. ಈ ಪುಸ್ತಕವು ಬಡವರ ಆತಂಕವನ್ನು ಒಪ್ಪುತ್ತದೆ. ಯಂತ್ರ ನಾಗರಿಕತೆಯು ಒಳತಂದ ವೈಚಾರಿಕ ಕ್ರಾಂತಿಯನ್ನು ತಿರಸ್ಕರಿಸದೆ, ತಂತ್ರಜ್ಞಾನದ ಕಸ ಹಾಗೂ ಅನೈತಿಕತೆಗಳನ್ನು ತಿರಸ್ಕರಿಸಬಯಸುತ್ತದೆ...ಯಂತ್ರ ನಾಗರಿಕತೆಯನ್ನು ಸರಕು ಸಂಸ್ಕೃತಿ, ಕೊಳ್ಳುಬಾಕ ಸಂಸ್ಕೃತಿ, ಆಧುನಿಕ ಸಂಸ್ಕೃತಿ, ಪಾಶ್ಚಿಮಾತ್ಯ ಸಂಸ್ಕೃತಿ ಇತ್ಯಾದಿ ಹೆಸರುಗಳಿಂದಲೂ ಕರೆಯುತ್ತೇವೆ. ನಾನು ಈ ಪುಸ್ತಕದಲ್ಲಿ ಯಂತ್ರ ನಾಗರಿಕತೆ ಎಂಬ ಹೆಸರನ್ನೇ ಪ್ರಧಾನವಾಗಿ ಬಳಸಲು ಇಷ್ಟಪಡುತ್ತೇನೆ. ಕಾರಣವಿಷ್ಟೆ: ಮೇಲೆ ಪಟ್ಟಿ ಮಾಡಿದ ಇತರ ಹೆಸರುಗಳು, ಯಂತ್ರ ನಾಗರಿಕತೆಯ ಯಾವುದೋ ಒಂದು ಆಯಾಮದತ್ತ ಬೊಟ್ಟು ಮಾಡಿ ತೋರಿಸುತ್ತವೆ. ಉದಾಹರಣೆಗೆ ಪಾಶ್ಚಿಮಾತ್ಯ ಸಂಸ್ಕೃತಿ ಎಂಬುದು ಯಂತ್ರ ನಾಗರಿಕತೆ ಪಶ್ಚಿಮದ ದೇಶಗಳಲ್ಲಿ ಹುಟ್ಟಿತು ಎಂಬ ಸಂಗತಿಯತ್ತ ಮಾತ್ರ ಬೊಟ್ಟು ಮಾಡುತ್ತದೆ. ಆದರೆ ಯಂತ್ರ ನಾಗರಿಕತೆ ಎಂಬ ಹೆಸರು ಸಮಗ್ರವಾದ ಪರಿಕಲ್ಪನೆಯನ್ನು ನೀಡುತ್ತದೆ ಎಂದು ನನ್ನ ನಂಬಿಕೆ.'

'ದೇಸಿ ಜೀವನ ಪದ್ಧತಿ' ಪುಸ್ತಕದ ಮೂಲಕ ಬರವಣಿಗೆಯ ಜಾಡಿಗೆ ಬಂದ ರಂಗಕರ್ಮಿ ಪ್ರಸನ್ನ, 'ನಟನೆಯ ಪಾಠಗಳು' ಮೂಲಕವೂ ಗಮನ ಸೆಳೆದರು. ಆದರೆ ನಂತರದ ಕಾದಂಬರಿ 'ಬಾಲಗೋಪಾಲ' ಯಾಕೋ ಓದುಗರನ್ನು ಆಕರ್ಷಿಸಲೇ ಇಲ್ಲ. 'ಚರಕ-ದೇಸಿ'ಗಳ ರೂವಾರಿಯಾದ ಇವರ ಹೊಸ ಪುಸ್ತಕ 'ಯಂತ್ರಗಳನ್ನು ಕಳಚೋಣ ಬನ್ನಿ'. ಕಳೆದೆರಡು ದಶಕಗಳ ಯಂತ್ರ ನಾಗರಿಕತೆಯ ಸಾಂಸ್ಕೃತಿಕ ಆಯಾಮವನ್ನು ವಿಶ್ಲೇಷಿಸುವುದು ಇದರಲ್ಲಿನ ಮುಖ್ಯ ಉದ್ದೇಶವಂತೆ. ಯಂತ್ರ-ಗ್ರಾಮ ಸ್ವರಾಜ್ಯ-ಧರ್ಮ ಸಂಕಟ ಎಂಬ ಮೂರು ಭಾಗಗಳಲ್ಲಿರುವ ೨೩೫ ಪುಟಗಳ ಪುಸ್ತಕವಿದು. ಬೆಲೆ ರೂ.೧೪೦. ತಮ್ಮ ಪುಸ್ತಕಗಳ ಮುಖಪುಟವನ್ನು ತಾವೇ ವಿನ್ಯಾಸ ಮಾಡಬಲ್ಲ ಕೆ.ವಿ.ಅಕ್ಷರ, ನಾಗರಾಜ ವಸ್ತಾರೆಯವರಂತೆ, ಪ್ರಸನ್ನ ಕೂಡಾ ಆ ಕೆಲಸ ಮಾಡುತ್ತಿದ್ದಾರೆ. ಎಲ್ಲೆಲ್ಲೂ ಯಂತ್ರಗಳ ಬಳಕೆಯಿರುವ ಈ ದಿನಗಳಲ್ಲಿ ಅವುಗಳನ್ನು ಕಳಚುವುದೊ, ಅವುಗಳಿಂದ ಕಳಚಿಕೊಳ್ಳುವುದೋ ಸುಲಭವಲ್ಲ. ಆದರೆ 'ಹೊಡಿಬಡಿ'ಗಿಂತ ಭಿನ್ನವಾಗಿ, ಸರಳ-ಉದ್ವೇಗರಹಿತ ಶೈಲಿಯಲ್ಲಿ ವಿಚಾರಗಳನ್ನು ಮಂಡಿಸುವ ಇವರ ದಾರಿಗೆ, ಯಂತ್ರಗಳನ್ನು ಕಳಚುವ ಶಕ್ತಿ ಬಂದರೆ ಆಚ್ಚರಿಯಿಲ್ಲ. 'ಈಗ ವಿಜ್ಞಾನವನ್ನು ಯಂತ್ರಗಳ ಕಪಿಮುಷ್ಠಿಯಿಂದ ಬಿಡಿಸಬೇಕಾಗಿದೆ', 'ಊನವಿಲ್ಲದಿರುವುದೇ ಯಂತ್ರಗಳ ಊನ' ಎನ್ನುವ ಲೇಖಕರ ಈ ಪುಸ್ತಕ, ಕನ್ನಡದ ಎಲ್ಲ ಗದ್ಯ ರೂಪಕ್ಕಿಂತ ಅನನ್ಯವಾಗಿದೆ. `ಹಣ ಮಾಡುವುದು ಹೇಗೆ?, ಉದ್ಯಮ ಕಟ್ಟುವುದು ಹೇಗೆ?' ಇತ್ಯಾದಿ ಪುಸ್ತಕಗಳೇ ಬರುತ್ತಿರುವ ಕಾಲ ಇದು. ಮಾನವನನ್ನೇ ಯಂತ್ರ ಮುಖೇನ ಸೃಷ್ಟಿಸಲು ಹೊರಟಿರುವ ಆಧುನಿಕೋತ್ತರ ಸಮಯ ಇದು. ಇಂತಹ ಇಕ್ಕಟ್ಟಿನಲ್ಲಿ, ಕತೆ-ಕಾವ್ಯ-ಕಾದಂಬರಿ-ವಿಮರ್ಶೆ-ವೈಚಾರಿಕ ಲೇಖನ ಮೊದಲಾದ ಪ್ರಕಾರಗಳ ಶೈಲಿ ತೊರೆದು ರೂಪಿತವಾಗಿರುವ ಈ ಪುಸ್ತಕ, ಕನ್ನಡಿಗರೆಲ್ಲ ಓದಬಹುದಾದಂಥದ್ದು. ಸಂಪರ್ಕಕ್ಕೆ desiprasanna@gmail.com. ಪುಸ್ತಕ ಓದಿ, ಚಾರ್ಲಿ ಚಾಪ್ಲಿನ್‌ನ 'ಮಾಡರ್ನ್ ಟೈಮ್ಸ್' ಸಿನಿಮಾ ಇನ್ನೊಮ್ಮೆ ನೋಡಿ !

Read more...

August 07, 2009

ಚಂಪಕಾವತಿ ಎಕ್ಸ್‌ಕ್ಲೂಸಿವ್ !

ನೇಹಿಗರೆ,
೨೦೦೯ರ ಆಗಸ್ಟ್ ೮ಕ್ಕೆ 'ಚಂಪಕಾವತಿ’ ಎರಡು ವರ್ಷ ತುಂಬಿ ಮೂರನೇ ವರ್ಷಕ್ಕೆ ಕಾಲಿಟ್ಟಿದೆ. ಮೊದಲ ವರ್ಷದ ಹುಮ್ಮಸ್ಸು ಎರಡನೇ ವರ್ಷದಲ್ಲಿ ಕುಂದಿದ್ದು ಹೌದು. ಆದರೆ ಪೂರ್ತಿ ಉಡುಗದ ಉತ್ಸಾಹ ಈ ತಾಣವನ್ನು ಜೀವಂತವಾಗಿರಿಸಿದೆ. 'ಎಂಥ ದಿನಗಳು ಕಳೆದವೋ, ಇನ್ನಂಥ ದಿನಗಳು ಬಾರವೋ’ ಎಂಬ ಕವಿ ಸುಬ್ರಾಯ ಚೊಕ್ಕಾಡಿಯವರ ಹಾಡನ್ನು ಬದುಕಿನ ಕೊನೆಯವರೆಗೂ ನಾವು ಹಾಡಿಕೊಳ್ಳೋಣ ! ಹೀಗೆ ಸುಮ್ಮನೆ ನನ್ನದೇ ಬ್ಲಾಗ್ ಮಂಡಲದ ತಲೆ ಸವರುತ್ತಾ ಕುಳಿತಿದ್ದೆ . ಆಗ 'ಚಂಪಕಾವತಿ'ಯಲ್ಲಿ ಸಿಕ್ಕ ಟಾಪ್ 'ಹತ್ತು ಮತ್ತು ಒಂದು' - ಹನ್ನೊಂದು ಇಷ್ಟದ ಪೋಸ್ಟ್‌ಗಳನ್ನು ಇಲ್ಲಿ ನೀಡುತ್ತಿದ್ದೇನೆ. ಈ ಪಟ್ಟಿ ಮಾಡುವಾಗ, ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಬರಹಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಹಾಗಾಗಿ ಇವು ಚಂಪಕಾವತಿಯ ಎಕ್ಸ್‌ಕ್ಲೂಸಿವ್ ಪೋಸ್ಟ್‌ಗಳು ! ಪ್ರಕಟಿಸಿದ ದಿನಾಂಕಕ್ಕೆ ಅನುಗುಣವಾಗಿ ಜೋಡಿಸಿದ್ದೇನೆ. ಸಂಗ್ರಹಿತ ಬರೆಹಗಳೂ ಇದರಲ್ಲಿ ಸ್ಥಾನ ಪಡೆದಿವೆ. ಈ ಮರುಶೋಧದಲ್ಲಿ ಹಳೆಯ ರುಚಿ-ಪರಿಮಳ ನಿಮ್ಮನ್ನು ತಾಕಲಿ. ಮೂರನೇ ವರ್ಷದ ಸಂಭ್ರಮಕ್ಕೆ, ಮೂರನೇ ಸ್ಥಾನ ಪಡೆದವರನ್ನೇ ವಿನ್ನರ್‍ಸ್ ಪೋಡಿಯಂನಲ್ಲಿ ಮೇಲೆ ಕೂರಿಸಿದ್ದೇನೆ ! ನಮಗೆ ಒಳ್ಳೆಯದಾಗಲಿ, ನಮ್ಮಿಂದ ಒಳ್ಳೆಯದಾಗಲಿ. - ಚಂ

1.ರಾಮನೇ ತುಂಡರಿಸಿದ ಸೇತು ನಮಗೆ ಬೇಕೆ ?
ಧನುಷ್ಕೋಟಿಯಲ್ಲಿ ಕಪಿಯೊಂದು ರಾಮಧ್ಯಾನ ನಿರತವಾಗಿದೆ. ತೀರ್ಥಯಾತ್ರೆ ಮಾಡುತ್ತ ಬಂದ ಅರ್ಜುನ ಅದನ್ನು ಮಾತಾಡಿಸುತ್ತಾನೆ. ಬಡ ಜುಣುಗಿನಂತಿದ್ದ ಆ ಮಂಗ, ತಾನು ಹನುಮಂತನೆಂದು ಹೇಳಿಕೊಳ್ಳುತ್ತದೆ ! ಆದರೆ ಅರ್ಜುನ ನಂಬಿಯಾನೆ? ಅವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು, ಆ ಕಪಿಯು ಹನುಮಂತ ಹೌದೋ ಅಲ್ಲವೋ ಎಂಬುದಕ್ಕಿಂತ ಹೆಚ್ಚಾಗಿ, ಸಮುದ್ರಕ್ಕೆ ಸೇತುವೆ ಕಟ್ಟುವುದು ದೊಡ್ಡ ವಿಷಯವಲ್ಲವೆಂದೂ, ತಾನೀಗ ಬಾಣದಲ್ಲೇ ಸಮುದ್ರಕ್ಕೆ ಸೇತುವೆ ಕಟ್ಟಬಲ್ಲೆನೆಂದೂ ಅರ್ಜುನ ಹೇಳುತ್ತಾನೆ. ಇದು ಅವರಿಬ್ಬರ ಮಧ್ಯೆ ಪಂಥಕ್ಕೆ ಕಾರಣವಾಗುತ್ತದೆ...

2.'ಅದಾಗಿ’ ನೀವು ಕ್ಷೇಮವೇ?
ಒಂದೇ ಬೆರಳಿನಲ್ಲಿ ಆಸ್ಟ್ರೇಲಿಯಾವನ್ನೇ ಎತ್ತಿ ಹಿಡಿದ 'ಕಾಂಗರೋದ್ಧಾರಿ’ ನೀಲಮೇಘಶ್ಯಾಮ ಬಕ್ನರನಿಗೆ ಪ್ರಣಾಮಗಳು. ಅಣ್ಣ ಬಲರಾಮನಂತಿರುವ 'ಬೆಣ್ಣೆಮುದ್ದೆ’ ಬನ್ಸನನಿಗೆ ವಂದನೆಗಳು. ಹುಬ್ಬಳ್ಳಿಯವರ ಬಾಯಲ್ಲಿ 'ಪಾಂಟಿಂಗ’ , ದ.ಕ.ದವರ ಬಾಯಲ್ಲಿ ಪಟಿಂಗನಾಗಿರುವ ನಾಯಕನ ಕುಶಲ ವಿಚಾರಿಸಿರುವೆವು.ಅದಾಗಿ ನಾವು ಕ್ಷೇಮ. 'ಅದಾಗಿ’ ನೀವು ಕ್ಷೇಮವೇ?!....

3.ಪೇಟೆಯ ಪಾಡ್ದನ
ಲಕಲಕಿಸುವ ಈ ನಗರಕ್ಕೊಂದು
ಬೆದರಿದ ಬೆದರುಗೊಂಬೆ ಬೇಕು.
ಇಲ್ಲಾ ದೃಷ್ಟಿಯಾದೀತು ಅಥವಾ ನಿಮ್ಮ ದೃಷ್ಟಿ ಹೋದೀತು....

4.ಬೆಳ್ಳೇಕೆರೆಯ ಹಳ್ಳಿ ಥೇಟರ್
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಒಂದು ಹಳ್ಳಿ ಬೆಳ್ಳೇಕೆರೆ. ಸಕಲೇಶಪುರ-ಮೂಡಿಗೆರೆ ರಸ್ತೆಯಲ್ಲಿರುವ ಬೆಳ್ಳೇಕೆರೆಯಲ್ಲಿ ನಾಲ್ಕೈದು ಅಂಗಡಿ-ಹೋಟೆಲ್‌ಗಳಿವೆ. ಅದಕ್ಕಿಂತ ಒಂದು ಕಿಮೀ ಹಿಂದೆ ಸಿಗುವುದು ರಕ್ಷಿದಿ. ಅಲ್ಲಿ ಎರಡು ಅಂಗಡಿ, ಸಣ್ಣದೊಂದು ಹೋಟೆಲು, ಪ್ರೈಮರಿ ಸ್ಕೂಲು...

5.ಗೋ.....ವಾ!
ಅಲ್ಲಿ ಇಲ್ಲದ್ದು ಇರಲಿಲ್ಲ. ಕೊಂಚ ಅತ್ತಿತ್ತ ಸರಿದರೂ ಆ ದಪ್ಪನೆಯ ಹಾಸಿಗೆ ಏರಿಳಿಯುತ್ತಿತ್ತು. ಸಮುದ್ರದಲ್ಲೇ ಇದ್ದೇನೋ ಅಂತ ಮಂಚದ ಕೆಳಗೆ ಕೈಯಾಡಿಸಿ ನೋಡಿಕೊಂಡೆ ! ಎದ್ದು ಟಿವಿ ಹಾಕಿದೆ, ಸರಿ ಹೋಗಲಿಲ್ಲ. ಬಾತ್‌ಟಬ್‌ನಲ್ಲಿ ಬಿದ್ದುಕೊಂಡು ಸ್ನಾನ ಮಾಡಿದ್ದು ಸರಿ ಅನಿಸಿರಲಿಲ್ಲ. ನಿಧಾನವಾಗಿ ದೊಡ್ಡ ಗಾಜಿನ ಬಾಗಿಲು ತೆರೆದು, ತೆಳ್ಳಗೆ ಬೆಳಕು ಹರಡಿದ್ದ ಬಾಲ್ಕನಿಗೆ ಹೋಗಿ ಸುಖಾಸೀನನಾದೆ....

6.ನೇರಳೆ ನಾಲಗೆಯ ರುಚಿ
ಆ ಬೈಗುಳ ಬರುವವರೆಗೆ ಅವರಿಬ್ಬರ ಜಗಳ ಬಹಳ ಜೋರಾಗೇನೂ ಇರಲಿಲ್ಲ. ಆಗ ಬಂತು ಆ ಮಾತು- `ನಿನ್ನ ಅಪ್ಪ ಮೂರ್ತಿ, ಕಲ್ಲಿನ ಮೂರ್ತಿ. ಜೀವ ಇಲ್ಲದವ '. ಆ ಕ್ಷಣ ನರನರಗಳೆಲ್ಲ ಸೆಟೆಸೆಟೆದು, ಕಣ್ಣುಗಳು ಅಷ್ಟಗಲ ತೆರೆಯಲ್ಪಟ್ಟು, ಮುಖ ಕೆಂಪಾಗಿ, ಕೈಗಳು ಬಿಗಿದು, ರೋಷಾವೇಶ ಮೇರೆ ಮೀರಿ, ಮಾರಾಮಾರಿ...

7.ಕಲಾಕ್ಷೇತ್ರದಲ್ಲಿ ಬೆಳಗೆರೆ ವಿಶ್ವರೂಪ
ಸಂಜೆ ೫ರ ಸುಮಾರಿಗೆ ರವಿ ಬೆಳಗೆರೆ ಎಂಬ ಅಯಸ್ಕಾಂತ ಎಲ್ಲೇ ಕಾಣಿಸಿಕೊಳ್ಳಲಿ, ಜನ ಸೇರಿ ಅಪ್ಪಚ್ಚಿ ಮಾಡುತ್ತಿದ್ದರು. ಅವರು ಹತ್ತು ತಲೆ, ಇಪ್ಪತ್ತು ಕೈಗಳ ರಾವಣನಾದರೂ, ಮಾತಾಡುವುದಕ್ಕೆ, ಕೈ ಕುಲುಕುವುದಕ್ಕೆ ಸಾಧ್ಯವೇ ಆಗುತ್ತಿರಲಿಲ್ಲ! ಬಾಗಿಲುಗಳಲ್ಲಿ ನಿಂತಿದ್ದ ದ್ವಾರಪಾಲಕರ ಜತೆ ಅಭಿಮಾನಿಗಳು ರೇಗಿದರು, ಬಾಗಿಲೊಂದರ ಗಾಜು ಒಡೆದರು, ಕ್ಷಣದಿಂದ ಕ್ಷಣಕ್ಕೆ ಜನಸಾಗರದ ಮಟ್ಟ ಏರುತ್ತಿತ್ತು....

8.ದಿಸ್ ಈಸ್ ನಾಟ್ ಎ ಹಿಡನ್ ಕ್ಯಾಮೆರಾ !
ಯಾವುದು ಪಟಾಕಿ ಸದ್ದು, ಯಾವುದು ಬಾಂಬಿನ ಸದ್ದು ಅಂತ ಗುರುತಿಸಲು ಈ ಬಾರಿ ನಮಗೆ ಸಾಧ್ಯವಾದೀತೆ?! ಪಟಾಕಿ ಸದ್ದನ್ನು ನಾವೆಲ್ಲ ಕೇಳಿದ್ದೇವೆ. ಆದರೆ ಬಾಂಬಿನ ನಿಜವಾದ ಸದ್ದನ್ನು ನಾವು ಬಹುತೇಕರು ಕೇಳಿಯೇ ಇಲ್ಲ. ನಮಗೆ ಗೊತ್ತಿರುವುದು, ಸಿನಿಮಾದಲ್ಲಿ ಕೇಳುವ ಅದರ ಸದ್ದು ಅಥವಾ ಅದು ಸಿಡಿದ ಮೇಲೆ ಛಿದ್ರ ಛಿದ್ರವಾದ ದೇಹಗಳ ದೃಶ್ಯ. ಕ್ಷಣ ಮಾತ್ರದಲ್ಲಿ ಗುಜರಿ ಅಂಗಡಿಯಂತಾಗುವ ಅತ್ಯಾಧುನಿಕ ಶಾಪ್‌ಗಳು. ಟಿವಿ ವಾಹಿನಿಗಳು ಪದೇಪದೆ ಬಿತ್ತರಿಸುವ ಆರ್ತನಾದ- ಕೆದರಿದ ಕೂದಲು- ಅಂದಗೆಟ್ಟ ಮುಖಗಳ ದೃಶ್ಯ...ಇಷ್ಟೇ....

9.ಅಶ್ವತ್ಥಾಮನ ಅಪ್ಪ ದ್ರೋಣ ಭಟ್ರು ಹೇಗಿದ್ದಾರೆ?
ಪ್ರೀತಿಯ ಪ್ರೇಮ,
ಮೇಜಿನ ಮೇಲೆ ೪-೫ ಕಾಗದಗಳು. ಎಲ್ಲವೂ ನನಗೇ! ಬಾಚಿ ಬಾಚಿ ತಕೊಂಡೆ. ಖುಶಿ ಆಯ್ತು. ಉಮಾ, ಸಾವಿತ್ರಿ, ಸತ್ಯ, ಕುಮಾರ-ಅರೇ ಪುಟ್ಟಕ್ಕಯ್ಯ, ಆಕೆಯೂ ಉತ್ತರ ಕೊಟ್ಟುಬಿಟ್ಟಳು ! ವರ್ಷಗಳ ನಂತರ ಬಂದ ಅವಳ ಕಾಗದ. ಹನುಮಂತ, ರಾಮ, ಶಬರಿ ಅಬ್ಬಬ್ಬಾ ಒಳ್ಳೊಳ್ಳೆಯ ಹೆಸರೇ ಸಿಕ್ಕಿದೆ ನಿಮಗೆ. ನಮ್ಮಮ್ಮ ಬಂದ ಕಾಗದ ಎಲ್ಲ ಓದಿಕೊಂಡು, ರಾಮ, ಕೃಷ್ಣ ಅಂತ ಇಡ್ಳಿ ತಿಂತಿತ್ತು. ಅಂತೂ ಅವನ ಅಮ್ಮನ ಹೊಟ್ಟೆಯಲ್ಲಿ ಆರಾಮವಾಗಿ ಬೆಚ್ಚಗೆ ಕೂತು, ಎಲ್ಲರನ್ನೂ ಬಹಳ ಕಾಯುವಂತೆ ಮಾಡಿದ. ಮಹಾತುಂಟನಾಗ್ತಾನೋ ಏನೋ ಪೋರ. ಎಲ್ಲ ಕಾಗದಗಳೂ ಇವತ್ತು ಬೆಳಗ್ಗೆ ತಲುಪಿದ್ದು ಇಲ್ಲಿಗೆ. ರಾಧೆ-ಉಮಾ ಶುಕ್ರವಾರ ಬಂದ ಮೇಲೆ ಮುಂದಿನ-ಹಿಂದಿನ ಸುದ್ದಿಗಳು ನನಗೆ ಸಿಕ್ಕಬೇಕು....

10.ಹೆಂಗಿದ್ದ ಹೆಂಗಾದ ಗೊತ್ತಾ....?
ಕೋಟಿತೀರ್ಥಗಳಲ್ಲಿ ಮಿಂದೆದ್ದು ಬಂದಿರುವ ಈ ಕತೆಗಾರ ಕವಿ, ನೀಲಿಮಳೆಯಲ್ಲೂ ನೆನೆಯಬಲ್ಲ. ಶ್ರಾವಣದ ಮಧ್ಯಾಹ್ನದಲ್ಲೂ ಗೆಳೆಯರೊಡನೆ ಪೋಲಿ ಜೋಕುಗಳನ್ನು ಸಿಡಿಸಬಲ್ಲ......

11.ಕತ್ತಲಲ್ಲಿ ಸಿಕ್ಕಿದಂತೆ
ಮೊನ್ನೆಮೊನ್ನೆ ಒಂದು ರಾತ್ರಿ. ಬಹಳ ಅಪರೂಪಕ್ಕೆ ಕೈಗೊಂದು ಕ್ಯಾಮೆರಾ ಬಂತು. ಆಗ ಸಿಕ್ಕವು ಇಲ್ಲಿವೆ. ಹಾಗೆ ಸುಮ್ಮನೆ ಛಕ್‌ಛಕಾಛಕ್ ನೋಡಿ, ಹೋಗಿಬಿಡಿ !

Read more...

August 01, 2009

ಈ ಸರ್ತಿ ಕಡಲ್ ಮುರ್‌ಕುಂಡು

ಮಳೆಯ ರಾಗ ಇನ್ನೂ ಕಿವಿ ತಮಟೆಯಿಂದ ದೂರವಾಗಿಲ್ಲ. ‘ಈ ಸರ್ತಿ ಕಡಲ್ ಮುರ್‍ಕುಂಡು ತೋಜುಂಡು’ ( ಈ ಸಲ ಕಡಲು ಮುಳುಗುತ್ತದೆ ಅಂತ ಕಾಣ್ಸತ್ತೆ) ಅಂತ ಕೆಲಸದ ಮಲ್ಲ ಪ್ರತೀ ದಿನ ಹೇಳುತ್ತಿದ್ದಾನೆ. ಅಡಿಗರು ಅಂದಂತೆ -ಕಡಲ ಪಡಖಾನೆಯಲ್ಲಂತೂ ನೊರೆಗರೆವ ವಿಸ್ಕಿ ಸೋಡಾ ಕುಡಿದ ಗಾಳಿ ಮತ್ತಿನಲ್ಲಿ ಗಮ್ಮತ್ತಿನಲಿ ತೂರಾಡುತ್ತಿದೆ. ಪಂಜೆಯವರ ತೆಂಕಣ ಗಾಳಿಯಾಟ ಹೆಗಲ ಮೇಲಿನ ಶಾಲನ್ನು ರುಂಮ್ಮನೆ ಎತ್ತಿ ಹಾರಿಸುತ್ತಿದೆ. ಶವರ್ ಬಾತ್‌ನಲ್ಲಿ ಒಮ್ಮೆಗೆ ಪೂರ್ತಿ ನೀರು ಬಿಟ್ಟರೆ ಬರುತ್ತದಲ್ಲ, ಹಾಗೆ ಪಕ್ಕನೆ ದಿರಿದಿರಿ ಸುರಿವ ಮಳೆಗೆ ಪೂರ್ತಿ ರಭಸ. ಮಣ್ಣೆಲ್ಲ ತಚಪಚ ಹಾರಿ ನೀರು ಮಂದವಾಗಬೇಕು, ಹಾಗೆ. ಸಾಯಂಕಾಲವಂತೂ, ಕತ್ತಲನ್ನೂ ಮಳೆಯನ್ನೂ ದೂರದಿಂದ ಸೆಳೆದು ತರುವ ಗಾಳಿಯ ಸದ್ದನ್ನು ಆಲಿಸುವುದೇ ಒಂದು ದಿವ್ಯ ಅನುಭವ. ಗ್ರಾ.....ಎಂಬ ಸದ್ದು ಕೆಲವೊಮ್ಮೆ ಐದು ನಿಮಿಷಗಳವರೆಗೂ ಕೇಳಿ, ಬಳಿಕವಷ್ಟೇ ಮಳೆಯು ಮನೆ ಅಂಗಳ ತಲುಪುವುದುಂಟು. ಒಮ್ಮೆ ಬೆಂಗಳೂರಿನಿಂದ ಬಂದಿದ್ದ ದೊಡ್ಡಪ್ಪ, ತಮ್ಮ ಪುಟ್ಟದಾದ, ಆದರೆ ಬಹಳ ಬೆಲೆ ಬಾಳುವ ಪ್ಯಾನಸೊನಿಕ್ ರೆಕಾರ್ಡರ್‌ನಲ್ಲಿ ಆ ಧ್ವನಿಯನ್ನು ಹಿಡಿದಿಟ್ಟುಕೊಂಡಿದ್ದರು. ಮಳೆ ನಿಂತ ಮೇಲೆ ಅದನ್ನು ಕೇಳಿದಾಗ ಮಾತ್ರ, ಸರಿಯಾಗಿ ಸಿಗ್ನಲ್ ಸಿಗದ ಹಳೆ ರೇಡಿಯೊದ ಸದ್ದಿನಂತೆ, ಕರ್ಕಶವಾಗಿ ಕೇಳುತ್ತಿತ್ತು ! ಕರಾವಳಿಯ ಈ ಮಳೆಯ ಸದ್ದು, ರುಚಿ, ಪರಿಮಳಗಳನ್ನೆಲ್ಲ ಹಿಡಿದಿಡುವುದು ಸಾಧ್ಯವೆ ?

ಬಹಳ ಆಶ್ಚರ್ಯದ ಸಂಗತಿಯೆಂದರೆ, ಅಡಿಕೆಗೆ ಕೊಳೆ ರೋಗ ಬಾರದ ಹಾಗೆ ಔಷಧ ಸಿಂಪಡಿಸಿ ಆಯ್ತಾ, ಸೌದೆ ಬೇಕಾದಷ್ಟು ಕೊಟ್ಟಿಗೆಗೆ ಬಂತಾ, ಮರದಿಂದ ತೆಂಗಿನಕಾಯಿ ತೆಗೆದಾಯ್ತಾ, ಇತ್ಯಾದಿ ಪ್ರಶ್ನೆಗಳನ್ನು ಕೇಳುವವರೇ ಬಹಳ ಕಡಿಮೆ. ತುಂಬ ಜನ ಜಾಗ ಮಾರಿ ಪೇಟೆಗೆ ಹೊರಟಿರೋದ್ರಿಂದ, ಮಕ್ಕಳೆಲ್ಲ ಸಿಟಿ ಸೇರಿದ್ದರಿಂದ, ತೋಟದ ಬಗ್ಗೆ ಹೆಚ್ಚಿನ ನಿಗಾ ಇಲ್ಲವೇನೋ. ಸಾಮೂಹಿಕ ಪೂಜೆ-ಆಚರಣೆಗಳಂತೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆ, ಹೊಸ ರೂಪಗಳಲ್ಲಿ ಬರುತ್ತಿವೆ. ಆದರೆ ಸಾಂಸ್ಕೃತಿಕ, ರಾಜಕೀಯ, ಧಾರ್ಮಿಕ ವಿಚಾರಗಳಲ್ಲೆಲ್ಲ ಹಿಂದಿದ್ದ ಘನತೆ ಮಾಯವಾಗುತ್ತಿದೆಯಾ? ಪಡಪೋಸಿಗಳೆಲ್ಲ ಹೀರೊಗಳಂತೆ ಬಿಂಬಿಸಲ್ಪಡುತ್ತಿದ್ದಾರಾ? ಇದು ಸಂಪರ್ಕ ಕ್ರಾಂತಿಯ ಫಲಶ್ರುತಿಯಾ? ಅಂತೆಲ್ಲ ಪ್ರಶ್ನೆಗಳು. ಉತ್ತರವೇನೇ ಇರಲಿ, ಊರಿನ ಪ್ರಜ್ಞೆಯ ಮಟ್ಟ ಮಾತ್ರ ದಿನೇದಿನೆ ಕೆಳಗಿಳಿಯುತ್ತಿರುವಂತೆ ಭಾಸವಾಗುತ್ತಿದೆ.

ಟೆಲಿಫೋನ್, ಮೊಬೈಲು, ಇಂಟರ್‌ನೆಟ್, ಟಿವಿ, ಪತ್ರಿಕೆಗಳು ಮನೆಮನೆಗಳಿಗೆ ಹೊಕ್ಕಿರುವುದರಿಂದ ಪ್ರಚಾರವೀಗ ಸುಲಭದ ಬಾಬತ್ತು. ಮುನ್ನುಗ್ಗಿದವನಿಗೆ ಮಣೆ. ಅವನಿಗಿಲ್ಲ ಎಣೆ. ದೇವಸ್ಥಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿಬೇಕಾದರೆ, ‘ ಏನು ಮಾಡಬಹುದು ಅಂತ ಓ ಅವರಲ್ಲಿ ಕೇಳೋಣ. ಅವರಿಗೆ ನೋಡಿ- ಕೇಳಿ ಅನುಭವವಿದೆ.’ ಅಂತೇನೂ ಈಗ ಇಲ್ಲ. ಎಲ್ಲವೂ ಒಬ್ಬರಿಗೇ ಗೊತ್ತಿದೆ ! ಸಭಾ ಕಾರ್ಯಕ್ರಮಗಳಿಗೆ ಚೆನ್ನಾಗಿ ಮಾತನಾಡುವವರು ಬೇಕಾಗಿಲ್ಲ. ಅವರಿಂದ ತಮ್ಮ ಸಂಸ್ಥೆಗೆ ಏನು ಲಾಭವಾದೀತು ಅನ್ನೋದಷ್ಟೇ ಲೆಕ್ಕಾಚಾರ. ಮಂಗಳೂರು ಆಕಾಶವಾಣಿಯಲ್ಲಿ ಬುಧವಾರ ರಾತ್ರಿ ಒಂಬತ್ತೂವರೆಗೆ ಬರುವ ಯಕ್ಷಗಾನ ತಾಳಮದ್ದಳೆಯನ್ನು ಈಗಲೂ ಕೇಳುವನು ಕ್ಷೌರಿಕ ದಾಮೋದರ ಒಬ್ಬನೇ ಇರಬೇಕು. ಅದರ ಬಗ್ಗೆ ಮಾತಾಡುವುದಕ್ಕಂತೂ ಅವನಿಗೆ ಜನವೇ ಇಲ್ಲ. ಸಾಹಿತ್ಯ ಸಮ್ಮೇಳನ ನಡೆಯುತ್ತಲೇ ಇದೆಯಾದರೂ, ಒಂದು ಒಳ್ಳೆಯ ಹೊಸ ಪುಸ್ತಕ ಬಂದ ಉದಾಹರಣೆ ಇಲ್ಲ. ಧಾರ್ಮಿಕತೆ ಅನ್ನುವುದಂತೂ ಜನರ ರೊಚ್ಚಿಗೆಬ್ಬಿಸುವುದಕ್ಕಷ್ಟೇ ಸೀಮಿತ. ಸರಕಾರಿ ಶಾಲೆಗಳೆಲ್ಲ ಜೀವ ಕಳಕೊಂಡಿರುವುದರಿಂದ ಅಲ್ಲೂ ಊರಿನ ಜನ ಒಟ್ಟಾಗುವ ಪರಿಪಾಠವಿಲ್ಲ. ಊರಿನ ಮುಖ್ಯ ಆಚರಣೆಯಾಗಿದ್ದ , ‘ಶ್ರಮದಾನ’ವೆಂಬ ಪರಿಕಲ್ಪನೆ ಗೊತ್ತೇ ಇಲ್ಲವೇನೋ ಅನ್ನುವಷ್ಟು ಕಡಿಮೆ. ಎಲ್ಲೆಡೆ ರಾಜಕೀಯ-ದುಡ್ಡು ವಿಷ ಬಳ್ಳಿಯಾಗಿ ಹಬ್ಬಿಕೊಳ್ಳುತ್ತಿದೆ. ಊರಿಗೆ ಯಾವ ಶಾಪ ತಟ್ಟಿದೆ? ಬೆಳ್ಳಂಬೆಳಗ್ಗೆ ‘ಜಾಲಹಳ್ಳಿ ಜಾಲಹಳ್ಳಿ ಕ್ರಾಸ್’ ಅಂತ ಕಂಡಕ್ಟರ್ ಕೂಗಿದಾಗ ಅರೆ ಎಚ್ಚರವಾಗಿ, ನರಕದ ಬಾಗಿಲಲ್ಲಿ ಯಮದೂತ ಕೂಗಿದ ಹಾಗಾಗುತ್ತದೆ !’ ಅಂದಿದ್ದರು ಜಯಂತ ಕಾಯ್ಕಿಣಿ. ಆದರೆ ಊರಿನ ಮುಖ್ಯ ಭಾವವಾದ ಆಪ್ತತೆಯೇ ಅಲ್ಲಿ ಕಳೆದುಹೋಗುತ್ತಿದೆಯಾ? ಕೂಡಿ ಬಾಳುವ ಸುಖ ಮುಖ್ಯವಲ್ಲ ಅನ್ನಿಸಿದೆಯಾ? ಮೊನ್ನೆ ಮೊನ್ನೆ ಊರಿಗೆ ಹೋಗಿ ಬಂದ ಮೇಲೆ ಹೀಗೆಲ್ಲ ಅನ್ನಿಸತೊಡಗಿದೆ. ನಿಮಗೆ?

ಜಿರೀ......ಅಂತ ಮಳೆ ಒಂದೇ ಸಮನೆ ಸುರಿಯುತ್ತಿದೆ. ಹೊಸ ಕಾಲದ ಬದುಕಿಗೆ ಕಡಲನ್ನೇ ಮುಳುಗಿಸುವ ಸಾಮರ್ಥ್ಯವಿದೆ. ಹೌದು, ಇನ್ನೇನು ಕಡಲು ಮುಳುಗಿದರೂ ಮುಳುಗೀತು. ನಿಮ್ಮ ನಿಮ್ಮ ನೌಕೆ ಏರಿ ಭದ್ರಪಡಿಸಿಕೊಳ್ಳಿ ಆಯಿತಾ?!

Read more...

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP