March 22, 2008

ನಗರ ಸ್ವರ

ಹುಡುಕುತ್ತ ಬಂದು
ವರ್ಷವಾಯಿತು ಹದಿನಾಲ್ಕು .
ನಾಳೆಯೂ ಮರಳದಿದ್ದರೆ
ಜೀವ ತೊರೆವನಂತೆ ತಮ್ಮ .
***
ರಾಕ್ಷಸರ ಸದೆ ಬಡಿಯಲಿಲ್ಲ
ವಿಭೀಷಣ ಸಿಗಲಿಲ್ಲ ಸೀತೆ ಇರಲಿಲ್ಲ
ಕುಂಭಕರ್ಣನಿಗೆ ಎಚ್ಚರವಾಗಲೇ ಇಲ್ಲ
ಮಂಗಗಳ ಉಪದ್ರ ಸಹಿಸಲು ಸಾಧ್ಯವಿಲ್ಲ
ಹೇಗೆ ಬಂದೆನೆಂದೂ ನೆನಪಿಲ್ಲ .
ಪೂರೈಸಿದ್ದೇನೆ ಬಂದು ನಿನ್ನಮ್ಮನ ಆಸೆ
ನನ್ನ ಚಪ್ಪಲಿಯ ನೀನು ಹಾಕಬೇಡ !
***
ನೀನೆ ಆರಾಮ ರಾಜಾರಾಮ,
ನನಗಿಲ್ಲ ವಿರಾಮ ಲೋಕಾಭಿರಾಮ
ಕ್ಷಮಿಸು, ನಾನು ಹರಾಮ.

--------------------

'ಪೇಟೆಯ ಪಾಡ್ದನ ’ದ ಬಗ್ಗೆ ಬೆಟ್ಟದಡಿ ಕುಳಿತು ಯಾರೋ ಬರೆದಿದ್ದಾರೆ. ಬೆಟ್ಟದ ಕೆಳಗೆ ನುಸುಳುವುದಕ್ಕೆ ಬಹಳಷ್ಟು ಬಿಲಗಳೂ (ಮಾಟೆಗಳು) ಇವೆ ! ಓದುವ ಆಸಕ್ತಿ ಇದ್ದರೆ ಇಲ್ಲಿ ಒಳನುಗ್ಗಿ . ಸಮಸ್ತರಿಗೆ ಇನ್ನೊಂದು ಸೂಚನೆ: ಪೇಟೆಯ ಪಾಡ್ದನದಲ್ಲಿ ಬರುವ ಎಲ್ಲ ಪಾತ್ರ-ಸನ್ನಿವೇಶಗಳು ಕೇವಲ ಕಾಲ್ಪನಿಕವಾಗಿದ್ದು, ಅದಕ್ಕೂ ಸುಧನ್ವಾದೇರಾಜೆ ಆಗಿರುವ ನನ್ನ ವೈಯಕ್ತಿಕ ಬದುಕಿಗೂ ಯಾವುದೇ ಸಂಬಂಧವಿರುವುದಿಲ್ಲ !

6 comments:

Sree March 23, 2008 at 12:52 AM  

ಸುಧನ್ವಾ,
ನಿಮ್ಮ ಪಾಡ್ದನಗಳನ್ನ ರೆಗ್ಯುಲರಾಗಿ ಓದ್ತಾ ಬಂದಿದೀನಿ ಅಂತ ಹೇಳಬಹುದು... ಈಗ ಬೆಟ್ಟದಡಿಯ ಬರಹವನ್ನೂ, ಅಲ್ಲಿ ನಿಮ್ಮ ಪ್ರತಿಕ್ರಿಯೆಯನ್ನೂ ನೋಡಿದೆ. ನೀವಲ್ಲಿ ಹೇಳಿರೋ ಮಾತು -
"ಇನ್ನು, ಹಳ್ಳಿಯ ಬಗ್ಗೆ ಭಾವುಕವಾಗಿರುವುದು ಮತ್ತು ಪೇಟೆಯ ಬಗ್ಗೆ ಕಟುವಾಗಿರುವುದೂ ಪದ್ಯದಲ್ಲಿ ಆಗಬಾರದು ಅನ್ನುವವನು ನಾನು" - ತುಂಬಾ ಹಿಡಿಸ್ತು. ಪೇಟೆಯ ಝಗಮಗ - ಹಳ್ಳಿಯ ಕತ್ತಲು, ಇಲ್ಲಿಯ ಯುವತಿ - ಅಲ್ಲಿಯ ಅಮ್ಮ...ಹೀಗೆ ದ್ವಂದ್ವಗಳ ಚಿತ್ರಗಳ ನಡುವೆಯೂ ನಿಮ್ಮ ಈ ಪ್ರಜ್ಞೆ ಎಲ್ಲೋ ಮಿನುಗುತ್ತಿರುತ್ತೆ ಅನ್ನೋದೇ ನಗರದಲ್ಲೇ ಹುಟ್ಟಿ ಬೆಳೆದ ನನ್ನಂಥವರಿಗೂ ಪಾಡ್ದನವನ್ನ ಒಪ್ಪಿಕೊಳ್ಳಲು ಸಾಧ್ಯವಾಗಿಸೋದು! ಭಾವುಕತೆಯಲ್ಲಿ ಕಳೆದುಹೋಗುತ್ತಾ ಬೆಂಗಳೂರಲ್ಲೇನಿದೆ ಎನ್ನುತ್ತಲ್ಲೇ ಇಲ್ಲೇ ಉಳಿದು ಹಳಹಳಿಕೆಯಲ್ಲೇ ಕಳೆದುಹೋಗುವ ಸುಲಭ ಸಾಧ್ಯತೆಯನ್ನು ಮೀರುವ ನಿಮ್ಮ ಪ್ರಯತ್ನಕ್ಕೆ ಮೆಚ್ಚುಗೆ! ಅಂದಹಾಗೆ ಒಂದ್ವಿಷ್ಯ ಗೊತ್ತಾ, ಎರಡು ನೆಲೆಗಳ ನಡುವಿನ ನೆಗೋಸಿಯೇಶನ್ ಮಲ್ಲೇಶ್ವರದಿಂದ ಮೆಗಾಮಾಲ್‌ಗೆ ಕಾಲಿಟ್ಟಾಗ ನಗರದಲ್ಲೇ ಹುಟ್ಟಿ ಬೆಳೆದ ನಾವುಗಳೂ ಮಾಡ್ತಾ ಇರಬೇಕಾಗುತ್ತೆ!
ಕ್ಶಮಿಸಿ, ಈ ಪೋಸ್ಟ್‌ಗೆ ಸೀಮಿತವಾಗೋ ಕಾಮೆಂಟ್ ಹಾಕಲಿಲ್ಲ, ಚೆನ್ನಾಗಿದೆ ಅಂದ್ರೆ ನೀವು ಬಯ್ಕೋತೀರಾ ಅನ್ನೋ ಭಯಕ್ಕೆ ಅಂತ ನೆಪವಂತೂ ರೆಡಿಯಾಗಿದೆ!;)

Shanmukharaja M March 23, 2008 at 7:11 PM  

http://swarachitha.blogspot.com/2008/03/mykavanaciti.html

ವಿನಾಯಕ ಕೆ.ಎಸ್ March 24, 2008 at 4:37 AM  

ಈ ಪಾಡ್ದನಕ್ಕೆ ಒಂಚೂರು ಎದಿಟ್ಟು. ಪೇಸ್ಟು ಮಾಡಿದ್ರೆ ಇವತ್ತಿನ ಯಾವುದಾದರೂ ಯಕ್ಷಗಾನ ಪ್ರಸಂಗಕ್ಕೊಂದು ಪದ್ಯ ಆದ್ರೂ ಆಗಬಹುದು!

Anonymous,  March 25, 2008 at 1:42 PM  

ಸುಧನ್ವ,
ಕೊನೆಯ ಕೊಸರು ಕೊಂಚ ಕ್ಲೀಷೆಯೆನ್ನಿಸಿ ಕದಡಿತು.ನಾವು ಬರೆವುದಕ್ಕು ನಮ್ಮ ವೈಯುಕ್ತಿಕ ಬದುಕಿಗು ಯಾವ ಸಂಬಂಧ ಇಲ್ಲ ಎನ್ನುವ ಸ್ಟೇಟ್ಮೆಂಟಿನ ಬಗ್ಗೆ ನನಗೆ ಬಹಳ ಅನುಮಾನಗಳಿವೆ. ಓದುಗರು ಬರಹಗಳನ್ನೂ ಅದನ್ನ ಬರೆದವರನ್ನೂ ಒಂದೇ ತೂಕಕ್ಕೆ ಹಾಕಿ ನೋಡೋದು ಮಾಮೂಲು ವಿಷಯ. ಇಲ್ಲಿ ಪಾಡ್ದನದಲ್ಲಿ ನಿಮ್ಮ ಹಿನ್ನೆಲೆಯನ್ನ ಇಟ್ಕೊಂಡು ಹರೀಶ್ ಕೇರ ಬರೆದಿದ್ದಾರಲ್ಲ, ಅದೆ ಸಾಕಲ್ಲ? ಒಂದು ಕಥೇನ ಓದೋವಾಗ ಅದರ ಪ್ರೋಟಗಾನಿಸ್ಟ್ ಎಷ್ಟು ಇರ್ತಾನೋ ಅಷ್ಟೆ ಲೇಖಕಾನೂ ಇರ್ತಾನೆ - ಹೆಚ್ಚಿನ ಪರ್ಸೆಂಟೇಜು ಓದುಗರ ಓದು ಹೀಗೆಯೆ ಇರತ್ತೆ ಅನ್ನೋದು ಸುಮಾರು ಬರೆಯೋರಿಗೆ ಅರ್ಥವಾಗದೆ, ನಾನೆ ಬೇರೆ, ನನ್ನ ಬರಹಗಳೆ ಬೇರೆ ಅಂತ ಸಮಜಾಯಿಶಿ ಕೊಡಲು ಹೋಗ್ತೇವೆ. ನಾನೂ ಹೀಗೇನೆ ಅಂದುಕೊಂಡಿದ್ದೆ, ಲಿಟರೇಚರಿನ ಥಿಯರಿಗಳ ಮತ್ತು ಇಳಿವತನಕ! ಈ ಬಗ್ಗೆ ನನಗೂ ನನ್ನ ವಿಮರ್ಶಕ ಸ್ನೇಹಿತರಿಗೂ ಸುಮಾರು ಮಾತುಕತೆ (ಇದನ್ನ ಮಾರಾಮಾರಿ ಎಂದು ಅರ್ಥೈಸಿಕೊಳ್ಳತಕ್ಕದ್ದು.) ನಡೆದಿದೆ. ನನಗೆ ಹೀಗೆಲ್ಲ ಯೋಚನೆ ಮಾಡುವಾಗ ನೀವು ಹೇಳಿರುವದರ ಬಗ್ಗೆ ಯೋಚನೆ ಹುಟ್ಟತ್ತೆ.
ಮುಂದಿನ ಸಾರೆ ಸಿಕ್ಕಾಗ ಚರ್ಚೆಗೆ ಹೊಸ ಟಾಪಿಕ್ಕು ಸಿಕ್ಕಿತಲ್ಲ!!
’ಲೇಖಕರ ಡೈಲೆಮ್ಮಾ’!!

ಇನ್ನು ನಿಮ್ಮ ಈ ಪಾಡ್ದನದಲ್ಲಿರೋ ಲಿಂಕಿನ ಹರೀಶರ ಮಾತುಗಳ ಬಗ್ಗೆ.
ಹರೀಶರ ವಿಶ್ಲೇಷಣೆ ಚೆನ್ನಾಗಿದೆ. ಚೆನ್ನಾಗಿದೆ ಸೊಗಸಾಗಿದೆ ಅಂತ ಹೇಳೋದಕ್ಕೇನು ಸಂಕೋಚ? ಅದನ್ನ ಬ್ಯಾನ್ ಮಾಡೋದು ಯಾಕೆ? ಚೆನ್ನಾಗಿದ್ರೆ ಚೆನ್ನಾಗಿದೆ ಅಂದೇ ಅನ್ನೋಣ. ಚೆನ್ನಾಗಿದ್ರು ಹೇಳದೆ ಸುಮ್ನೆ ಇರೋದೇನು ಹೊಸ ಟ್ರೆಂಡಾ? ಅಥವ ತಮ್ಮ ಗಜಗಾಂಭೀರ್ಯವನ್ನ ಪ್ರದರ್ಶಿಸುವ ಹೊಸ ರೀತಿಯ? ಹರೀಶರು ಚೆನ್ನಾಗಿದೆ ಅಂತ ಹೇಳೋದರ ಜತೆ ಚೆನ್ನಾಗಿಲ್ಲದಿರೋದನ್ನ ಕೂಡ ನೇರವಾಗಿ ಸಹ್ಯ ರೀತಿಯಲ್ಲಿ ಹೇಳುವುದರ ಬಗ್ಗೆ ಬರೆದಿದ್ದರೆ ಚೆನ್ನಾಗಿತ್ತು ಅಂತ ಅನಿಸ್ತು. ಅವರು ಮಾಡಿರೋದೂ ಅದನ್ನೆ ಅಲ್ವೆ?

-ಟೀನಾ.

Anonymous,  March 26, 2008 at 12:06 AM  

ಟೀನಾ ಅಂದ್ರೆ ...ಅಲ್ಲ ಚಹಾ ಎಂದರು !

*‘ಬರೆಹಗಳಿಗೂ ನನ್ನ ವೈಯಕ್ತಿಕ ಬದುಕಿಗೂ ಸಂಬಂಧ ಇಲ್ಲ’ ಅಂತ ನಾನು ಹೇಳಿದ್ದು ಕೊಂಚ ತಮಾಷೆಯಾಗಿ, ಉಢಾಪೆಯಾಗಿ ! ಆದರೆ ಅದಕ್ಕೊಂದು ಒಳಗಿನ ಕಾರಣವೂ ಇದೆ. ‘ಪೇಟೆಯ ಪಾಡ್ದನ ’ ಆರಂಭವಾದಾಗ ಅದನ್ನು ತಮ್ಮ ಬ್ಲಾಗ್‌ನಲ್ಲಿ ಪ್ರಕಟಿಸಿದವರೊಬ್ಬರು - ಹಳ್ಳಿಯಿಂದ ಬಂದ ಸುಧನ್ವನಿಗೆ ಪೇಟೆಯಲ್ಲಿ ಬದುಕೋದು ಎಷ್ಟು ಕಷ್ಟ ಎಂಬುದು ಈಗ ಅರ್ಥವಾಗ್ತಿದೆ. ಚಕ್ರವ್ಯೂಹದೊಳಗೆ ಸಿಲುಕಿದ ಅಭಿಮನ್ಯುವಂತಾಗಿದ್ದಾನೆ -ಅಂತೆಲ್ಲ ಬರೆದರು. ಅವರು ಯಾವುದೇ ದುರುದ್ದೇಶವಿಲ್ಲದೆ, ಬರೆಹವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರೀತಿಯಿಟ್ಟುಕೊಂಡೇ ಬರೆದ ಆತ್ಮೀಯರಾದರೂ, ಬರೆಹದ ಶೈಲಿ ನನ್ನನ್ನು ಕೊಂಚ ನೋಯಿಸಿತು. ಹಾಗಾಗಿ ‘ನಾನು ಹರಾಮ’ ಎನ್ನುವ ಪದ್ಯದ ಜತೆಗೆ ಈ ಸ್ಟೇಟ್‌ಮೆಂಟ್ ಕೊಡೋಣ ಅನ್ನಿಸಿತು !

*ನಮ್ಮ ಬರೆಹಕ್ಕೂ ವೈಯಕ್ತಿಕ ಬದುಕಿಗೂ ಬರವಣಿಗೆಗೂ ಗಾಢ ಸಂಬಂಧ ಇರುವುದು ಖಂಡಿತಾ ಸತ್ಯ. ಅದು ಇರುವುದು ಇರಬೇಕಾದ್ದು ಬರೆವಣಿಗೆಯಲ್ಲಿ. ಆದರೆ ಓದಿನಲ್ಲಿ ಮತ್ತು ವಿಮರ್ಶೆಯಲ್ಲಿ ಅದೊಂದು ಮಿತಿಯಲ್ಲಿದ್ದರೇ ಚೆಂದ. ಬರೆಹವೊಂದು -ಲೇಖಕನ ವೈಯಕ್ತಿಕ ಬದುಕನ್ನು ಬಲ್ಲವನಿಗೆ ಒಂದು ಥರಾ, ಗೊತ್ತಿಲ್ಲದವನಿಗೆ ಇನ್ನೊಂದು ಥರಾ ತಾಕಬಹುದು. ಹಾಗಂತ, ಪ್ರತಿದಿನ ಸುಳ್ಳು ಹೇಳುವ ಲೇಖಕನೊಬ್ಬ ‘ಸತ್ಯ’ದ ಬಗ್ಗೆ ಚೆನ್ನಾಗಿ ಬರೆದಾಗ, ಆ ಲೇಖಕನನ್ನು ಗೊತ್ತಿದ್ದವನು, ಬರೆಹ ಕ್ಷುಲ್ಲಕವೆಂದರೆ ಹೇಗೆ ?! ನೈಪಾಲರು ಈಗ ಹೇಳಿದ ಜೀವನದ ಸತ್ಯ ಕತೆ ಕೇಳಿ, ಅವರ ಬರೆಹವನ್ನೆಲ್ಲ ತಿರಸ್ಕರಿಸುವುದಕ್ಕಾದೀತೇ? ಇಲ್ಲ. ಒಟ್ಟಿನಲ್ಲಿ ಬರೆಹವನ್ನೇ ಮುಖ್ಯವಾಗಿಟ್ಟುಕೊಂಡು, ಬೇಕಾದರೆ ಬರೆಹಗಾರನನ್ನು ರುಚಿ ಹೆಚ್ಚಿಸುವದಕ್ಕಷ್ಟೇ ಬಳಸಿಕೊಂಡರೆ ಒಳ್ಳೆಯದು.
ಇನ್ನು, ಲೇಖಕನನ್ನೇ ಎದುರಿಟ್ಟುಕೊಂಡು ಓದುವುದಕ್ಕೂ ಲೇಖಕನ ಪರಿಸರದ ಹಿನ್ನೆಲೆ ಇಟ್ಟುಕೊಂಡು ಓದುವುದಕ್ಕೂ ವ್ಯತ್ಯಾಸ ಇದೆ. ನಮಗೂ ಬಹಳ ಲೇಖಕರ ಕಾಲ, ಊರು , ವೃತ್ತಿ, ಅವರಿಗಾದ ಪ್ರಭಾವ ಗೊತ್ತಿರತ್ತೆ. ಆದರೆ ಹೆಂಡತಿ ಮಕ್ಕಳ ಬಗ್ಗೆ , ದೈಹಿಕ ಆರೋಗ್ಯ, ಆರ್ಥಿಕ ಸ್ಥಿತಿಗತಿಯ ಬಗ್ಗೆಲ್ಲಾ ಗೊತ್ತಿರುವುದಿಲ್ಲ. ಅವುಗಳನ್ನೂ ತಿಳಕೊಂಡು ಓದುವುದು ಅಥವಾ ವಿಮರ್ಶಿಸ ಹೊರಟರೆ ಇನ್ನೇನು ಉಳಿಯಿತು ಮಣ್ಣು?!

* ‘ಓದುಗರು ಬರೆಹಗಳನ್ನೂ, ಬರೆದವರನ್ನೂ ಒಂದೇ ತೂಕಕ್ಕೆ ಹಾಕಿ ನೋಡೋದು ಮಾಮೂಲಿ ವಿಷಯ....ಒಂದು ಕಥೇನ ಓದುವಾಗ ಅದರ ಪ್ರೊಟಗಾನಿಸ್ಟ್ ಎಷ್ಟು ಇರ್ತಾನೋ ಅಷ್ಟೇ ಲೇಖಕನೂ ಇರ್ತಾನೆ. ಹೆಚ್ಚಿನ ಪರ್ಸಂಟೇಜು ಓದುಗರ ಓದು ಹೀಗೆಯೇ ಇರತ್ತೆ ’ ಅಂತ ಸಾರಾಸಗಾಟಾಗಿ ಹೇಳುವುದೂ ಬಹಳ ಸರಳೀಕರಣ ಅನ್ನಿಸುತ್ತದೆ. ಸಾಯಿಸುತೆ, ತ್ರಿವೇಣಿಯವರ ಕಾದಂಬರಿಗಳನ್ನು ಓದುವಾಗ ಅವರು ಎಲ್ಲಿಯರು, ಬದುಕಿದ್ದಾರೋ ಇಲ್ಲವೋ ಎಂದೇ ನಮ್ಮಮ್ಮನಿಗೆ ಗೊತ್ತಿರಲಿಲ್ಲ. ಅಡಿಗ-ಬೇಂದ್ರೆಯವರ ಪದ್ಯಗಳನ್ನು ಓದುವಾಗ ನನಗೆ ಅವರ ಬದುಕಿನ ಬಗ್ಗೆ ಕನಿಷ್ಠ ಅರಿವಿತ್ತು.

*ಚೆನ್ನಾಗಿದೆ ಅನ್ನೋ ಪದ ಚೆನ್ನಾಗಿಲ್ಲ ಅಂತಲ್ಲ , ಸುಮ್ಮನಿರುವ ಗಾಂಭೀರ್ಯ ಚೆನ್ನಾಗಿರುತ್ತೆ ಅಂತಲೂ ಅಲ್ಲ, ವಿವರವಾದ ವಿಮರ್ಶೆ ನಡೆಯಬೇಕು ಅನ್ನೋ ಅರ್ಥದಲ್ಲಿ ಅಲ್ಲಿ ಹರೀಶ್ ಹೇಳಿದ್ದು .

ಕ್ಲಾಸ್ ತಗೊಳ್ತಾ ಇರಿ ಮೇಡಂ.
- ಪ್ರೀತಿಯಿಂದ ಸುಧನ್ವಾ
( ‘ನಾನು ಬೇರೆ ನನ್ನ ಬರೆಹಗಳೇ ಬೇರೆ ’ ಅಂತ ಸಮಜಾಯಿಶಿ ಕೊಡುವ ಸಂದರ್ಭ ಬಾರದಂತೆ ಓದುಗರು, ವಿಮರ್ಶಕರು ಸಹಕರಿಸಬೇಕಾಗಿ ವಿನಂತಿ !)

Anonymous,  March 26, 2008 at 3:10 AM  

ಸುಧನ್ವ,
ನಿಮಗೆ ಕ್ಲಾಸು ತಗೊಳಕ್ಕೆ ನಾನ್ಯಾವ ಸೀಮೆಯ ’ಟೀ’ಚರು? ನಾನು ಟೀನಾ? ಕಾಫೀನಾ? ಅನ್ನುವ ಗಲಿಬಿಲಿಯ ನಡುವೆ ಬದುಕೋಳು. ಇರ್ಲಿ, ಮಕ್ಕಳಿಗೆ ಹೇಳುವ ಹಾಗೆ ಸಮಜಾಯಿಶಿ ಕೊಟ್ಟಿದೀರ. ಅದಕ್ಕೇ ನಾನು ಚರ್ಚೆಗೆ ಇದು ಒಳ್ಳೇ ವಿಚಾರ ಅಂದಿದ್ದು. ನಿಮ್ಮ ಉಡಾಫೆ ಉಡಾಫೆ ಅಂತ ಗೊತ್ತಾಗದೆ ಇದೆಲ್ಲ ಶುರು ಆಯ್ತು ನೋಡಿ. ಅಲ್ಲಿ ನೋಡಿದ್ರೆ ಕೆಂಡಸಂಪಿಗೇಲು ನೈಪಾಲರ ವಿಚಾರಕ್ಕೆ ದೊಡ್ಡ ದೊಂಬಿ ಎದ್ದಿದೆ. ಅಲ್ಲು ಇದೇ ಪ್ರಾಬ್ಲಮು. ಲೇಖಕನ ಬರಹವನ್ನೂ ಅವರ ಜೀವನವನ್ನೂ ಕೂಡಿಸಿ ವಿಶ್ಲೇಷಿಸುವದು ಎಲ್ಲ ಸಂದರ್ಭಗಳಲ್ಲು ಸರಿಯಲ್ಲ. ಆದರೆ ಈಗಿನ ಮಾತು ಹೇಳುವದಾದರೆ, (ನಾನು ಥಿಯರಿಗಳ ನಂತರದ ಮಾತಾಡುತ್ತಿದೇನೆ) ಆ ಟ್ರೆಂಡು ಬಹಳ ನಡೀತಿರೋದು, ಅದರ ಮೇಲೆ ಸುಮಾರಷ್ಟು ಸೆಲೆಬ್ರಿಟಿ ಲೇಖಕರು ಇಮೇಜು, ಮಾರ್ಕೆಟು ಬೆಳೆಸಿಕೊಂಡಿರೊದು ಸತ್ಯವಾದ ಮಾತು ಸುಧನ್ವ. ಇಲ್ಲಿ ಯಾವುದೇ ಸಾರಾಸಗಟು ಸರಳೀಕರಣ ಇಲ್ಲ. ತ್ರಿವೇಣಿ, ಕುವೆಂಪು, ಕಾರಂತರ ಇಮೇಜುಗಳನ್ನ ನಮ್ಮ ಹಿಂದಿನ ಜನರೇಶನ್ನು ಅವರ ಬರಹದ ಮೂಲಕ ಕಟ್ಟಿಕೊಂಡಿದ್ದಿಲ್ಲವೆ? ಲಂಕೇಶ್ ಪತ್ರಿಕೆಯಲ್ಲಿ ಬರೆಯುತ್ತಿದ್ದ ನೀಲು, ನಿಮ್ಮಿಗಳು ಯಾರೆಂದೇ ಗೊತ್ತಿಲ್ಲದ ಪರಿಸ್ಥಿತಿಯಲ್ಲು ಓದುಗರಿಗೆ ಅದನ್ನ ಬರೆವವರ ಬಗ್ಗೆ ಒಂದು ಇಮೇಜು ಇದ್ದೇ ಇತ್ತು. ಪಾಯಿಂಟ್ ಹಿಯರ್ ಈಸ್, ಲೇಖಕ ಇಲ್ಲದಿದ್ದರು ಅಲ್ಲಿ ಅವನು ಅಥವ ಅವಳು ಇದ್ದೆ ಇರುತ್ತಾಳೆ. ಗೊತ್ತಿಲ್ಲದಿದ್ದ ಪಕ್ಷದಲ್ಲಿ ಓದುಗರ ಇಮ್ಯಾಜಿನೇಶನ್ನು ತನ್ನ ಕೆಲಸ ಮಾಡುತ್ತದೆ. ಆದರೆ ಎಲ್ಲ ಬರಹಗಳನ್ನೂ ಬರೆಯುವವರ ಬಟ್ಟೆಯ ಚುಂಗಿಗೆ ಕನೆಕ್ಟ್ ಮಾಡಿನೋಡುವುದು ಸುಮಾರು ಸಾರಿ ಅಸಂಬದ್ಡ. ಈ ವಿಷಯದಲ್ಲಿ ನಾನೂ ನಿಮಗೇ ಓಟು ಹಾಕುವದು!!

ವಿವರವಾದ ವಿಮರ್ಶೆ ಇರಬೇಕು ಅಂತ ನಾವು ಬರೆಯುವವರಿಗೆ ಖಾಯಿಶು ಇರುವುದು ನಿಜವೇ. ಆದರೆ ಕೆಲವು ಓದುಗರ ಲಿಮಿಟೇಶನ್ನುಗಳನ್ನ ಕೂಡ ನಾವು ಗಮನದಲ್ಲಿಟ್ಟುಕೊಳ್ಳಬೇಕಾದ್ದು ಅವಶ್ಯಕ ಅಲ್ಲವೆ? ಕೆಲವರಿಗೆ ’ಸವಿವರ ವಿಮರ್ಶೆ’ ಅನ್ನುವ ಕಾನ್ಸೆಪ್ಟೆ ತಮಾಷೆಯಾಗಿ ತೋರಬಹುದು. ಕೆಲವೊಮ್ಮೆ ಸಮಯ ಸಾಲದೆ ಅಷ್ಟನ್ನು ಮಾತ್ರ ಹೇಳುವ ಸಹೃದಯತೆಯ ಪರಿಸ್ಠಿತಿ ಬಂದಿರಬಹುದು.ಇಲ್ಲ ಕೆಲವರಿಗೆ ಅದು plain impossible ಅನಿಸಿರಬಹುದು.ಇಂಥದ್ದನ್ನ ನಾವು ಗಣನೆಗೆ ತಗೊಳ್ಳದೆ ಇರಲಿಕ್ಕಾದೀತೆ? ನಾವು ಅದೃಷ್ಟಶಾಲಿಗಳು - ನಾವು ಬರೆದದ್ದಕ್ಕೆ ನೇರ ಫೀಡ್ಬ್ಯಾಕ್ ಸಿಗುವ ಈ ಬ್ಲಾಗುಲೋಕದ ಬಗ್ಗೆ ಐದು ವರ್ಷಗಳ ಹಿಂದೆ ನಾನು ಊಹಿಸಿಕೊಂಡೂ ಇರ್ಲಿಲ್ಲ. ಮುಂದೆ ಆಗೋದು ಬಹಳ ಇದೆ. ನಾವು ಜತೆಗಿದ್ದು ಹೀಗೆಲ್ಲ ಕಿತ್ತಾಡುತ್ತಿರಬೇಕಷ್ಟೆ!!
ಪಾಯಿಂಟ್ ವೈಸ್ ಮಾತನಾಡಿ ಭಾಳ ದಿನ ಆಗಿತ್ತು ಸುಧನ್ವ.
ತ್ಯಾಂಕೂ!!
-ಟೀನಾ.

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP