March 01, 2008

ಪೇಟೆಯ ಪಾಡ್ದನ

೧೧
ಹಳ್ಳಿಗರ ಹವಿಸ್ಸಲ್ಲಿ ಬೆಳೆವ
ನಗರ ದೇವತೆಗಳೆ
ಈ ಅಕ್ಷರಗಳಲಿ ದುಃಖ ತುಂಬಿದ್ದೇವೆ
ತುಳುಕದಂತೆ ನೋಡಿಕೊಳ್ಳಿ
ಕಣ್ಣೀರು.
***
ದಿನ ರಾತ್ರಿ ನಾಜೂಕು ನೇವರಿಸಿ
ತೆವಳುತ್ತಿದೆ ಈ ಪೇಟೆ ಹುಳ
ಕಾಲ್ಬೆರಳ ಹಿಡಿದು ನಿತಂಬ ಹೊಟ್ಟೆ ದಾಟಿ
ನಿನ್ನ ಹೊಕ್ಕಳು ಕಂಕಳೂ ಚೆಂದ ಅನ್ನುತ್ತಿದೆ
ಉದುರಿಸಿದ ರೆಕ್ಕೆಗಳ ನಮಗೆ ಅಂಟಿಸುತ್ತಿದೆ
ಅಂಗುಲ ಅಂಗುಲ ಮುಕ್ಕುತ್ತಿದೆ.
***
ತೆಂಕ ಕೋಣೆ, ಗೀಟು ಕೋಣೆ
ಮೂಡು ಜಗಲಿ, ತುಂಡು ಜಗಲಿ
ಗುಂಡಿ ಕೋಣೆ, ದೇವರ ಕೋಣೆ
ಈಗಷ್ಟೆ ಯಾರನ್ನೋ ಕಳುಹಿಸಿ ಅರೆ ತೆರೆದುಕೊಂಡಿವೆ.
***
ಹಳ್ಳಿಗರ ಹವಿಸ್ಸಲ್ಲಿ ಬೆಳೆವ
ನಗರ ದೇವತೆಗಳೆ
ಇದೋ ಸುರಿದ್ದಿದ್ದೇವೆ ತುಪ್ಪ
ನಿಮ್ಮ ಬೆಂಕಿಗೆ, ತೃಪ್ತರಾಗಿ.
ಇದು ಇನ್ನೊಂದು ಪುತ್ರಕಾಮೇಷ್ಠಿ
ನಮ್ಮ ಮಕ್ಕಳ ನಮಗೆ ದಯಪಾಲಿಸಿ.

7 comments:

Anonymous,  March 3, 2008 at 7:37 PM  

ಸುಧನ್ವ,
ಬಹಳ ತಟ್ಟಿದವು ನಿಮ್ಮ ಸಾಲುಗಳು. ಅಪ್ಪ ಅಮ್ಮನ ಮುಖಗಳು, ಪೋನುಮಾತುಗಳು ಅವುಗಳ ಮೂಲೆಯಲ್ಲಿ ಮರೆಮಾಚಲು ಯತ್ನಿಸಿದರೂ ಎದ್ದು ಕೂರುವ ಒಂಟಿತನಗಳು ಕಾಡಿ ಹಿಂಸೆಯಾಗುತ್ತಿದೆ. ನಿಮ್ಮ ಹೊಸಬಾಳೆಯ ಪ್ರಯಾಣಕ್ಕು ಇದಕ್ಕು ಸಂಬಂಧ ಕಲ್ಪಿಸಿಕೊಂಡೆ. ಅಂದಹಾಗೆ, ಪುತ್ರಕಾಮೇಷ್ಠಿ ಯಾಗ ಬರೆ ಗಂಡುಮಕ್ಕಳ ಪಡೆಯಲಿಕೋಸ್ಕರ ನಡೆಸುತ್ತಿದ್ದದ್ದಲ್ಲವೆ?
-ಟೀನಾ.

ನಾವಡ March 4, 2008 at 12:24 AM  

ಸುಧನ್ವ,
ಪೇಟೆಯ ಪಾಡ್ದನ ಪ್ರಬುದ್ಡವಾಗಿದೆ. ಹಳ್ಳಿಗರ ಮಕ್ಕಳನ್ನು ನುಂಗುತ್ತಿರುವ ನಗರಗಳ ಬಗ್ಗೆ ನಾವು ಅದನ್ನೇ ಕೇಳಿಕೊಳ್ಳಬೇಕಿದೆ.ಒಳ್ಳೆಯ ಪಾಡ್ದನ ಕೊಟ್ಟಿದ್ದಕ್ಕೆ ಧನ್ಯವಾದ.
ಪಾಡ್ದನ ಮುಂದುವರಿಯಲಿ.
ನಾವಡ

Anonymous,  March 4, 2008 at 6:40 AM  

ಹಳ್ಳಿಗರ ಹವಿಸ್ಸಲ್ಲಿ ಬೆಳೆವನಗರ ದೇವತೆಗಳೆ...
- ಬಹಳ ತಟ್ಟಿತು. ಇದೊಂದು ಸಂಬೋಧನೆಯಲ್ಲಿ ಅದೆಷ್ಟು ತಾಗುವಿಕೆ ಇದೆ!
ನಿಜಕ್ಕೂ ‘ಪೇಟೆಯ ಪಾಡ್ದನ’ ಒಂದು ಒಳ್ಳೆಯ ಪ್ರಯೋಗ.
- ಚೇತನಾ

ವಿಕ್ರಮ ಹತ್ವಾರ March 4, 2008 at 8:31 AM  

"ಇದು ಇನ್ನೊಂದು ಪುತ್ರಕಾಮೇಷ್ಠಿ
ನಮ್ಮ ಮಕ್ಕಳ ನಮಗೆ ದಯಪಾಲಿಸಿ"

putrakaameshti yaagadalli namma makkalannu namage dayapaalisi annuva keluvikeye ellavannu tilisibiduttade. nice one.

ಸಿಂಧು sindhu March 4, 2008 at 8:05 PM  

ಸುಧನ್ವಾ,

ಮನಕಲಕುವ ಸಾಲುಗಳು.

ತೆಂಕ ಕೋಣೆ, ಗೀಟು ಕೋಣೆ ಮೂಡು ಜಗಲಿ, ತುಂಡು ಜಗಲಿ ಗುಂಡಿ ಕೋಣೆ, ದೇವರ ಕೋಣೆಈಗಷ್ಟೆ ಯಾರನ್ನೋ ಕಳುಹಿಸಿ ಅರೆ ತೆರೆದುಕೊಂಡಿವೆ..
ಹಳ್ಳಿಗರ ಹವಿಸ್ಸಲ್ಲಿ ಬೆಳೆವ ನಗರದೇವತೆಗಳೆ..

ನಾಲ್ಕು ಸಾಲುಗಳಿಗೆ ಹೊಳೆವ ನೂರು ಅರ್ಥ ಮನಸ್ಸನ್ನು ಖಿನ್ನವಾಗಿಸುತ್ತದೆ.

ಯಾವುದು ನೋವಿನೆಳೆಯೋ ಅದನ್ನೇ ಮೀಟಿದ್ದೀರಿ.

ಸಿಂಧು

ತನ್ ಹಾಯಿ March 5, 2008 at 4:38 PM  

ಪ್ರೌಢ ಚಿಂತನೆಗಳು ಬಹಳ ಸರಳವಾದ ಭಾಷೆಯಲ್ಲಿ ಮೂಡಿಬಂದ ಪರಿ ಚೆನ್ನಾಗಿದೆ.
'ಹಳ್ಳಿಗರ ಹವಿಸ್ಸಲ್ಲಿ ಬೆಳೆವನಗರ ದೇವತೆಗಳೆ..' ಮನ ತಟ್ಟಿದ ಸಾಲು..

ಕವನ ಇಷ್ಟವಾಯಿತು.

ಅಮರ March 7, 2008 at 8:53 AM  

ಪ್ರಿಯ ಸುಧನ್ವ ದೇರಾಜೆಯವರೇ,

ನಮಸ್ಕಾರ. ಹೇಗಿದ್ದೀರಿ?

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

- ಅಮರ

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP