June 27, 2009

ಹುಸಿ ಹೋಗದ ಕನ್ನಡ

ನ್ನಡದ ಮೇರು ಬರಹಗಾರರಾದ ಬೇಂದ್ರೆ, ಕುವೆಂಪು, ಅಡಿಗ, ಕಾರಂತ, ಅನಂತಮೂರ್ತಿ, ಶಿವರುದ್ರಪ್ಪ, ಕಣವಿ ...ಇಂತಹವರ ಮಕ್ಕಳೆಲ್ಲ ಏನು ಮಾಡುತ್ತಿದ್ದಾರೆ ಎಂಬ ಕುತೂಹಲ, ಕನ್ನಡದ ಅಳಿವು ಉಳಿವಿನ ಪ್ರಶ್ನೆ ಬಂದಾಗಲಂತೂ ನಮ್ಮಲ್ಲಿ ಮೂಡುತ್ತದೆ ! ವಾಮನ ಬೇಂದ್ರೆ, ಪೂರ್ಣಚಂದ್ರ ತೇಜಸ್ವಿ ಗೊತ್ತಿದೆ, ಇನ್ನು ಹಲವರ ಬಗ್ಗೆ ಗೊತ್ತಿಲ್ಲ. 'ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ' ಎಂದ ಚನ್ನವೀರ ಕಣವಿಯವರ ಮಗನ ಬಗ್ಗೆಯೂ ಹಲವರಿಗೆ ಗೊತ್ತಿಲ್ಲ. ದೇಶದ ಪ್ರತಿಷ್ಠಿತ ಐಐಟಿ ಕಾನ್ಪುರದಲ್ಲಿ ಹಾಗೂ ಅಮೆರಿಕದ ಬೋಸ್ಟನ್ ವಿವಿಯಲ್ಲಿ ಓದಿ ಭೌತಶಾಸ್ತ್ರಜ್ಞರಾಗಿ ಹೊರಬಂದ ಶಿವಾನಂದ ಕಣವಿ, ಮುಂಬೈಯ ಐಐಟಿಯಲ್ಲೂ ಸಂಶೋಧನೆ ನಡೆಸಿದವರು. ಸ್ವಲ್ಪ ಕಾಲ ಮೇಷ್ಟ್ರುಗಿರಿ ಮಾಡಿ, ಅರ್ಥಶಾಸ್ತ್ರ ತಜ್ಞನಾಗಿ, ಬಳಿಕ ಉದ್ಯಮ ಸಂಬಂ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡರು. ೨೦೦೪ರ ವರೆಗೆ 'ಬ್ಯುಸಿನೆಸ್ ಇಂಡಿಯಾ' ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿದ್ದರು.

೨೦೦೩ರಲ್ಲಿ ಪ್ರಕಟವಾದ Sand to Silicon: The amazing story of digital technology ಎಂಬುದು ಅವರ ಬಹು ಚರ್ಚಿತ ಪುಸ್ತಕ. ಜಾಗತಿಕ ತಂತ್ರಜ್ಞಾನದಲ್ಲಿ ಭಾರತೀಯರ 'ಪ್ರಥಮ' ಸಾಧನೆಗಳನ್ನು ಹೇಳುವ ಪುಸ್ತಕ ಅದು. ೧೮೯೭ರ ಜಗದೀಶ್ ಚಂದ್ರ ಬೋಸ್, ೧೯೮೨ರಲ್ಲೇ 'ಪರ್ಸನಲ್ ಕಂಪ್ಯೂಟರ್ ವರ್ಕ್ ಸ್ಟೇಷನ್' ಆರಂಭಿಸಿದ 'ಸನ್ ಮೈಕ್ರೊಸಿಸ್ಟಮ್ಸ್'ನ ಸಹ ಸ್ಥಾಪಕ ವಿನೋದ್ ಖೋಸಲಾ, ಯೋಜನಾ ವಿವರಣೆಗೆ ಕಂಪ್ಯೂಟರ್‌ನಲ್ಲಿ ಬಳಸುವ ಪವರ್ ಪಾಯಿಂಟ್‌ಗೆ ಮೈಕ್ರೋಸಾಫ್ಟ್‌ನಲ್ಲಿದ್ದು ಕಾರಣರಾದ ವಿಜಯ್ ವಾಶಿ, ವೆಬ್‌ಸೈಟ್ ಮೂಲಕ ಇಮೇಲ್ ಆರಂಭಿಸಿದ ಸಬೀರ್ ಭಾಟಿಯಾ, ಕಂಪ್ಯೂಟರ್‌ನಲ್ಲಿ ಧ್ವನಿ ಮುದ್ರಿಕೆಗೆ ಬಳಸುವ mpeg ರೀತಿಗೆ ಕೆಲಸ ಮಾಡಿದ ಎನ್. ಜಯಂತ್ , ಡಿಜಿಟಲ್ ಸ್ಯಾಟಲೈಟ್ ಟಿವಿ ಬಗ್ಗೆ ದುಡಿದ ಅರುಣ್ ನೇತ್ರಾವಳಿ, ಹೀಗೆ ಹಲವು ವ್ಯಕ್ತಿ-ಸಂಗತಿಗಳ ಬಗ್ಗೆ ಈ ಪುಸ್ತಕ ಗಮನ ಸೆಳೆಯುತ್ತದಂತೆ. ವಿಶ್ವವನ್ನು ಕಾಣಿಸಿದ ಭಾರತವನ್ನು ನಮ್ಮ ಕಣ್ಣಿಂದಲೇ ನೋಡುವ ಪ್ರಯತ್ನ ಇದು. ಐಟಿ ಮುಗ್ಗರಿಸಿರುವ ಈ ಕಾಲದಲ್ಲಂತೂ ಇದನ್ನು ನಾವೆಲ್ಲ ಆನಂದದಿಂದ ಓದಬಹುದು ! ಶಿವಾನಂದ ಕಣವಿ ಈಗ 'ಟಾಟಾ ಕನ್‌ಸಲ್ಟೆನ್ಸಿ ಸರ್ವಿಸಸ್’ ಕಂಪನಿಯ ವಿಶೇಷ ಯೋಜನಾ ವಿಭಾಗದ ಉಪಾಧ್ಯಕ್ಷರಾಗಿ ದುಡಿಯುತ್ತಿದ್ದಾರೆ. ಕತೆಗಾರ್ತಿ ಶಾಂತಾ ಕಣವಿಯನ್ನೂ ತಾಯಿಯಾಗಿ ಪಡೆದ ಶಿವಾನಂದರಿಗೆ, ಬರವಣಿಗೆ ವರ-ಬಲ.

ಅವರ ತಂದೆ, 'ಸರ್ವ ಹೃದಯ ಸಂಸ್ಕಾರಿ’ ಹಾಗೆ ಕಾಣುತ್ತಿರುವ ನವೋದಯದ ಕವಿ ಚನ್ನವೀರ ಕಣವಿಯವರಿಗೆ, ಧಾರವಾಡದ ಕವಿಭೂಮಿಯಲ್ಲಿ ಇಂದು (ಜೂನ್ ೨೮) ೮೨ನೇ ವರ್ಷದ ಬೆಳಗು. ‘ಒಂದು ಮುಂಜಾವಿನಲಿ’ ಎಂಬ ಅವರ ಭಾವಗೀತೆಗಳ ಸಿ.ಡಿಯನ್ನು ಲಹರಿ ಹೊರತಂದಿದೆ. ಅವಸರಕ್ಕೆ ಯು ಟ್ಯೂಬ್‌ಗೆ ಹೋದರೆ ಬಿ.ಆರ್. ಛಾಯಾ ಹಾಡಿರುವ ‘ಒಂದು ಮುಂಜಾವಿನಲಿ’ ಹಾಡನ್ನು ಕೇಳಬಹುದು, ನೋಡಬಹುದು. ನವೀಕರಣಗೊಳ್ಳುತ್ತಿರುವ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವೆಬ್‌ಸೈಟ್ (www.karnatakasahithyaacademy.org)ನ ‘ಸ್ವಂತ ಕವಿತೆಯ ಓದು’ ವಿಭಾಗದಲ್ಲೂ ಕಣವಿಯವರು ಸ್ವಪದ್ಯಗಳನ್ನು ಓದುವ ವಿಡಿಯೊವನ್ನು ಪ್ರಕಟಿಸಿದ್ದಾರೆ ಅಧ್ಯಕ್ಷ ಎಂ.ಎಚ್.ಕೃಷ್ಣಯ್ಯ. ‘ಹಸಿ ಗೋಡೆಯ ಹರಳಿನಂತೆ, ಹುಸಿ ಹೋಗದ ಕನ್ನಡ’ಎಂದ ಕವಿ, ಅಲ್ಲಿ ಐದು ಪದ್ಯಗಳನ್ನು ಓದುತ್ತಾ ಕುಳಿತಿದ್ದಾರೆ. ನೋಡಿ, ಕೇಳಿ, ಹ್ಯಾಪಿ ಬರ್ತ್‌ಡೇ ಹೇಳಿ
(ವಿ.ಕ.ದಲ್ಲಿ ಪ್ರಕಟ)

Read more...

June 24, 2009

ಥಿಯೇಟರ್ ಹಂಚಿಕೆ

ಮಾಲ್ ಸಂಸ್ಕೃತಿಯೊಂದಿಗೆ ಬಂದ ಮಲ್ಟಿಪ್ಲೆಕ್ಸ್ ಥಿಯೇಟರ್‌ಗಳು, ನಾಲ್ಕೈದು ವರ್ಷಗಳಲ್ಲೇ ಗಗನದೆತ್ತರ ಬೆಳೆದಿದೆ. ಬಾಲಿವುಡ್‌ನ ಸುಮಾರು ಶೇ.೭೦ರಷ್ಟು ಮಾರುಕಟ್ಟೆಯನ್ನು ಪಿವಿಆರ್, ಬಿಗ್ ಸಿನಿಮಾ, ಐನಾಕ್ಸ್, ಫೇಮ್, ಫನ್‌ನಂತಹ ಸಂಸ್ಥೆಗಳ ಮಲ್ಟಿಪ್ಲೆಕ್ಸ್ ಸರಪಳಿ ಆವಾಹಿಸಿಕೊಂಡಿವೆ. ವರ್ಷಕ್ಕೆ ೯೦೦ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾಗುವ ಇಂಡಿಯಾದಲ್ಲಿ, ಮಲ್ಟಿಪ್ಲೆಕ್ಸ್‌ಗೆ ಬರುವ ನೋಡುಗರನ್ನು ದೃಷ್ಟಿಯಲ್ಲಿಟ್ಟೇ ಸಿನಿಮಾ ನಿರ್ಮಾಣ ನಡೆಯುತ್ತಿದೆ. ಟೂರಿಂಗ್ ಟಾಕೀಸ್‌ಗಳ ಆಣೆ-ಪೈಸೆ ಲೆಕ್ಕಾಚಾರದ ದಿನಗಳನ್ನೀಗ ಕಲ್ಪಿಸಿಕೊಳ್ಳುವುದೂ ಕಷ್ಟ. ಐಟಿ ಬೂಮ್ ಜತೆಗೆ ಎದ್ದುಕೊಂಡ ಈ ಮಲ್ಟಿಪ್ಲೆಕ್ಸ್‌ಗಳಿಗೆ ಜನಸಾಮಾನ್ಯರ ಗೊಡವೆ ಇಲ್ಲ. ಚಿತ್ರಗಳಲ್ಲೂ ಅವರು ಕಾಣೆಯಾಗಿದ್ದಾರಲ್ಲ ! ಹಾಗಾಗಿ ಜೇಬು ಗಟ್ಟಿಯಿದ್ದವರಿಗಷ್ಟೇ ಹಿರಿತೆರೆಯ ಭಾಗ್ಯ. (ಉಳಿದವರಿಗೆ ಕಿರುತೆರೆ ಇದೆಯಲ್ಲ!) ಇತ್ತೀಚೆಗಿನ ವರ್ಷಗಳಲ್ಲಿ ಪೈರಸಿ ಹಾವಳಿ ಬಾಲಿವುಡ್‌ನಲ್ಲಿ ಹೆಚ್ಚಾಗಿದೆಯಾ? ಹೆಚ್ಚಾಗಿದ್ದರೆ ಸಿನಿಮಾ ಟಿಕೆಟ್ ಬೆಲೆ ಹೆಚ್ಚಾಗಿರುವುದೂ ಅದಕ್ಕೆ ಮುಖ್ಯ ಕಾರಣವಾ ಎನ್ನುವುದು ಹುಡುಕಬೇಕಾದ ಅಂಶ.

ಸಿನಿಮಾದ ಲಾಭ ಹಂಚಿಕೆಯ ವಿಚಾರದಲ್ಲಿ ನಿರ್ಮಾಪಕರಿಗೂ ಈ ಮಲ್ಟಿಪ್ಲೆಕ್ಸ್ ಮಾಲೀಕರಿಗೂ ಭಿನ್ನಮತ ಶುರುವಾಗಿ, ಕಳೆದ ಏಪ್ರಿಲ್ ೪ರಿಂದ, ಮಲ್ಟಿಪ್ಲೆಕ್ಸ್‌ಗಳಲ್ಲಿ ಬಾಲಿವುಡ್ ಚಿತ್ರಗಳ ಬಿಡುಗಡೆಯನ್ನೇ ನಿಲ್ಲಿಸಲಾಗಿತ್ತು. ಒಂಭತ್ತು ಶುಕ್ರವಾರಗಳು ಬರಿದೇ ಕಳೆದುಹೋದವು. ಎರಡು ತಿಂಗಳ ಮುಷ್ಕರದ ಬಳಿಕ, ಕೊನೆಗೂ ರಾಜಿ ಸೂತ್ರವಾಗಿದೆ. ಆದರೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಒಂದು ಹಿಂದಿ ಸಿನಿಮಾ ಟಿಕೆಟಿಗೆ ಕನಿಷ್ಠ ೧೦೦ ರಿಂದ ರೂ. ೫೦೦ವರೆಗೂ ಇರುವ ಶುಲ್ಕದ ಬಗ್ಗೆ ಏನೂ ಚರ್ಚೆ ಇಲ್ಲ ! ತಮ್ಮತಮ್ಮ ಲಾಭ ಹಂಚಿಕೆಯ ವಿಷಯದಲ್ಲಿ ಜೂನ್೪ರಂದು ಸತತ ಹದಿನಾಲ್ಕು ಗಂಟೆ ಮಾತುಕತೆ ನಡೆಸಿದ ಮುಖಂಡರು, ಮುಷ್ಕರ ನಿಲ್ಲಿಸಿ , ಜೂ.೧೨ರಿಂದ ಚಿತ್ರ ಪ್ರದರ್ಶನ ಆರಂಭಿಸಿದ್ದಾರೆ. ಚಿತ್ರ ಬಿಡುಗಡೆಯಾದ ಮೊದಲ ನಾಲ್ಕು ವಾರಗಳಲ್ಲಿ ಥಿಯೇಟರ್ ಮಾಲೀಕರಿಂದ ನಿರ್ಮಾಪಕರು ಯಾ ವಿತರಕರಿಗೆ, ಕ್ರಮವಾಗಿ ಶೇ. ೫೦-೪೨-೩೫-೩೦ರಂತೆ ಒಟ್ಟು ಆದಾಯದ ಭಾಗ ಸಲ್ಲಲಿದೆ ಎಂಬುದು ಪಂಚಾಯಿತಿಕೆಯಿಂದ ಬಂದ ಸುದ್ದಿ. ಬ್ಲಾಕ್‌ಬಸ್ಟರ್ ಸಿನಿಮಾಗಳಿಗೆ ಅಂದರೆ ೧೭.೫ಕೋಟಿ ರೂಗಿಂತ ಹೆಚ್ಚು ಸಂಗ್ರಹಿಸುವ ಸಿನಿಮಾಗಳಿಗೆ, ಇದು ಕ್ರಮವಾಗಿ ಶೇ. ೫೨-೪೫-೩೮-೩೦ ಆಗಲಿದೆ. ಆದರೆ ಎರಡು ತಿಂಗಳುಗಳಲ್ಲಿ, ಸಿನಿಮಾ ಬಿಡುಗಡೆ ಮಾಡಿ ಅಂತ ಪ್ರೇಕ್ಷಕರು ಪ್ರತಿಭಟಿಸಿದ ಸುದ್ದಿ ಬಂದಿಲ್ಲ. ಯಾವ ಸಿನಿಮಾ ಮಂದಿಯೂ ಅವರನ್ನು ವಿಚಾರಿಸಿಕೊಂಡದ್ದಿಲ್ಲ.

ಈ ಮಧ್ಯೆ ನಮ್ಮ ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ ಸಿನಿಮಾ ಪ್ರದರ್ಶನದ ವೇಳೆಯನ್ನು ಎರಡೆರಡು ಬಾರಿ ಬದಲಿಸಿತು. ಕನ್ನಡ ಸಿನಿಮಾಗಳ ಟಿಕೆಟ್ ದರ ಕಡಿಮೆ ಮಾಡಿತು. ಅಂತಹಾ ಉಪಯೋಗವೇನೂ ಆದಂತಿಲ್ಲ. ಅಂದರೆ ಟಿಕೆಟ್ ದರಕ್ಕೂ ಜನ ಸಿನಿಮಾ ನೋಡೊದಕ್ಕೂ ಸಂಬಂಧವೇ ಇಲ್ಲ ; ಸಿನಿಮಾ ಚೆನ್ನಾಗಿದ್ರೆ ಜಾಸ್ತಿ ದುಡ್ಡು ಕೊಟ್ಟಾದ್ರೂ ಜನ ನೋಡ್ತಾರೆ ಅನ್ನೋದಲ್ಲ. ಮಲ್ಟಿಪ್ಲೆಕ್ಸ್‌ಗಳು ದುಡ್ಡು ಕೊಳ್ಳೆ ಹೊಡೆಯುವುದು, ಕನ್ನಡದ ಥಿಯೇಟರ್‌ಗಳು ಬಡವಾಗುವುದು ಒಳ್ಳೆಯ ಬೆಳವಣಿಗೆ ಅಲ್ಲ.

(ವಿ.ಕ.ದಲ್ಲಿ ಪ್ರಕಟ)

Read more...

June 06, 2009

ಅದೂ ಇದೂ


ಏನೋ ನೆನಪಾದಂತೆ
ಆ ಮುಖದ ಮೇಲೆ ಬೆರಳಾಡಿಸಿದೆ

ಯಕ್ಷಗಾನದಲಿ ರಂಪವಾಡಿ ಗಂಡಾಂತರವಾದ್ದಕ್ಕೆ ಕ್ಷಮಿಸು
ಪಿಯುಸಿ ಫೇಲ್ ಆದ್ದಕ್ಕೆ, ಯಾವುದೋ ಸ್ಕೀಮಿಗೆ ಹಣ ಮುಗಿಸಿದ್ದಕ್ಕೆ
ಫೋರ್ಜರಿ ಸಹಿ ಹಾಕಿದ್ದಕ್ಕೆ, ಅವಾಗವಾಗ ರೌದ್ರಾವತಾರ ತೋರಿದ್ದಕ್ಕೆ
ಸಿಗರೇಟು ನಿಲ್ಲಿಸೆಂದು ನಿನಗೆ ಒತ್ತಾಯ ಮಾಡದ್ದಕ್ಕೆ
ಕ್ಷಮಿಸಿಬಿಡು ಎನ್ನ ಎಂದು ಫೋಟೊ ತಬ್ಬಿಕೊಂಡರೆ
ಅಂಗಿ ಮುಖಕ್ಕೆಲ್ಲ ದೂಳು, ಅಮ್ಮನಿಗೆ ಬೈಗಳು!

ಕೊನೆಗಾಲ ಅಂತ ಗೊತ್ತಿಲ್ಲದಿದ್ದರೂ ಜನಸೇವೆ ಹೆಚ್ಚಾಗಿ
ಮಧ್ಯಾಹ್ನ ಪೂಜೆ, ರಾತ್ರಿ ಜಪ, ಗಾಂಧಿ ಆತ್ಮಕತೆ, ಗೀತೆ ಓದಿ
ಮನೆಗೆ ಅಗತ್ಯವಾದ್ದು, ಮಕ್ಕಳಿಗೆ ಆಗಬೇಕಾದ್ದೂ ಆಯ್ತು
ಹೆಚ್ಚಾಗದ್ದು ನಿನಗೆ ವಯಸ್ಸೊಂದೆ, ಚೆಲುವ ದೇವನಿಗದೇ ಇಷ್ಟವಾಯ್ತು!

ಮೇಲೆ ಅಜ್ಜನ ಫೋಟೊ
ಅದರ ಮೇಲೆ ಮುತ್ತಜ್ಜನ ಫೋಟೊ
‘ಅಜ್ಜ ಸತ್ತು ಅಪ್ಪ ಸತ್ತು ಮಗ ಸತ್ತು, ಸಾಗಲಿ ಕುಟುಂಬ ಸ್ವಸ್ತಿ’
ಎಂಬ ಝೆನ್ ಗುರುಗಳ ಆಶೀರ್ವಾದ.
ಸಣ್ಣಗೆ ಬೆವರಿ, ಕಣ್ಣ ಒರತೆ ಹೆಚ್ಚಾಗಿ
ಕನ್ನಡಿಯಲಿ ಕೆಂಡದಂಥ ಕಣ್ಣು
ನಿನ್ನೆ ಕುಡಿದದ್ದು ನೆನಪಾಯಿತು !

ಬಣ್ಣಗೆಡುತ್ತಿತ್ತು ಆ ಫೋಟೊ
ತೆಗೆದವರ ಮುಖ ನೆನಪಾಗದೆ ಚಡಪಡಿಸಿದೆ
ನನ್ನದೂ ಹೊಸ ಫೋಟೊ ತೆಗೆಸಿ
ಡಾಕ್ಟ್ರ ಜತೆಗೂ ಮಾತಾಡಲು ಹೊರಟೆ.

ಹಳೇ ಚೇತನ ಸ್ಟುಡಿಯೋದ ಮುದಿ ಫೋಟೊಗ್ರಾಫರ್
ಸುಣ್ಣ ಮೆತ್ತಿದ ಮೇಜಿನ ಹಿಂದಿರುವ ಅನುಗಾಲದ ಡಾಕ್ಟರು
‘ನಿಮ್ಮ ತಂದೆಯವರದ್ದೇ ಇನ್ನೂ ಇಲ್ಲಿದೆ’ ಅಂದರು
ಎಕ್ಸ್‌ರೇ ಶೀಟೊ, ಫೋಟೊ ನೆಗೆಟಿವೊ, ಸಾಲದ ಚೀಟಿಯೊ?

‘ಹತ್ತು ಪ್ರಿಂಟು ಹಾಕಿ’ ಅಂತ ಗಹಗಹಿಸಿ
ಖುಶಿಯಾಗಿ ಮನೆಗೆ ಬಂದೆ !

(ಈ ಪದ್ಯ ಪ್ರಕಟಿಸಿದ ಕೆಂಡಸಂಪಿಗೆ ಬಳಗಕ್ಕೆ ಕೃತಜ್ಞತೆಗಳು. ಫೋಟೋ:ಸುಧನ್ವಾ)

Read more...

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP