May 30, 2009

ನಾಗೇಶ ಹೆಗಡೆಯವರ ಕಾಲುದಾರಿ

ನಮ್ಮ ಮನೆಗೆ ದಿನಪತ್ರಿಕೆ ಬರುತ್ತಿದ್ದುದು ರಾತ್ರಿ ೮ಕ್ಕೆ. ಮರುದಿನ ಸಂಜೆಯ ಮೊದಲು ಅಪ್ಪ ಕೇಳಿಯೇ ಕೇಳುತ್ತಿದ್ದ ಪ್ರಶ್ನೆ- 'ನಾಗೇಶ ಹೆಗಡೆಯವರ ಕಾಲಂ ಓದಿದ್ಯಾ?' ಇಂಟರ್‌ನೆಟ್ ಗೊತ್ತಿಲ್ಲದ, ಟಿವಿ ಇಲ್ಲದ ನಮ್ಮಲ್ಲಿಗೆ ಹೆಗಡೆಯವರ ಅಂಕಣ, ವಿಜ್ಞಾನದ ಒಂದು ಪ್ರವಾಹವನ್ನೇ ಹರಿಸುತ್ತಿತ್ತು. (ಇಂಟರ್‌ನೆಟ್-ಟಿವಿ ಇಟ್ಟುಕೊಂಡವರಿಗೂ ಹೆಗಡೆಯವರು ಹೇಳುವುದು ಹೊಸ ವಿಷಯವೇ ಆಗಿರುತ್ತದೆಂಬುದು ನಂತರ ತಿಳಿಯಿತು!) ಅಂಕಣದಲ್ಲಿ ಅವರು ಹೊಸ ವಿಜ್ಞಾನ ವಿಷಯದ ಬಗೆಗಷ್ಟೇ ಹೇಳುತ್ತಿರಲಿಲ್ಲ, ಅದರ ಜತೆಗೆ ಒಂದು ವಿಚಾರ ಸರಣಿ ಹೊಸೆದುಕೊಂಡಿರುತ್ತಿತ್ತು. ಅತಿ ಗಂಭೀರವಾಗಿರದೆ ಕೊಂಚ ತಮಾಷೆಯೂ ಆಗುತ್ತಿತ್ತು. ಸ್ಪಷ್ಟವಾಗಿ ಸರಳವಾಗಿ ಇರುತ್ತಿತ್ತು. ಹೀಗಾಗಿ, ಏನನ್ನೂ ಓದದ ನನ್ನ ತಮ್ಮನೂ, ಸುಧಾ ವಾರಪತ್ರಿಕೆಯ ಕೊನೆಯ ಪುಟದ 'ಸುದ್ದಿಸ್ವಾರಸ್ಯ'ವನ್ನು ಓದಿದಷ್ಟೇ ಆಸಕ್ತಿಯಿಂದ ಹೆಗಡೆಯವರ ಕಾಲಂನ್ನೂ ಓದತೊಡಗಿದ.

ಇತ್ತೀಚೆಗೆ ಬಂದ ಒಂದು ಎಸ್ಸೆಮ್ಮೆಸ್ಸು ಇದು- 'ನೀನೀಗ ಬೈಕು ಕೊಳ್ಳಬೇಡ. ೨೦೨೫ರಲ್ಲಿ ನೀನು ೫ ಲೀಟರ್ ಪೆಟ್ರೋಲ್ ಕೊಂಡರೆ ಪಲ್ಸರ್ ಬೈಕ್ ಫ್ರೀಯಾಗಿ ಸಿಗತ್ತೆ !' ಶನಿವಾರ ಸಂಜೆ ಮೇ ಫ್ಲವರ್ ಮೀಡಿಯಾ ಹೌಸ್‌ನ 'ಫಿಶ್ ಮಾರ್ಕೆಟ್'ನಲ್ಲಿ ಕಾಣಿಸಿಕೊಂಡ ವಾಮನ ಮೂರ್ತಿ ನಾಗೇಶ ಹೆಗಡೆಯವರ ಮಾತಲ್ಲೂ ಅದೇ 'ಮೆಸೇಜು' ಬಂತು. ತುಟಿ ಕೆಂಪು ಮಾಡಿಕೊಂಡಿರುವ ಕುಳ್ಳಗಿನ ಬಡಕಲು ದೇಹ. ಫಕ್ಕನೆ ಹೆಗ್ಗೋಡು ಸುಬ್ಬಣ್ಣರ ನೆನಪು ತರುವಂಥ ಮುಖ. ವಿಜ್ಞಾನ ತಂತ್ರಜ್ಞಾನವು ಸಬಲರಿಂದ ಸಬಲರಿಗಾಗಿಯೇ ಬಳಕೆಯಾಗುತಿದೆ ಎಂಬುದು ಅವರ ಮಾತಿನ ಒಟ್ಟು ಆರೋಪ. ಸರಿಯಾಗಿ ಉರಿಯುವ ಒಲೆ ಕಂಡುಹಿಡಿಯದೆ ಚಂದ್ರಲೋಕಕ್ಕೆ ಹೊರಟಿದ್ದಾರೆ. ಮರ ಕತ್ತರಿಸುವ ಆಧುನಿಕ ಗರಗಸಗಳು ತಯಾರಾದಾಗ ಕಾಡುಗಳೇ ಇಲ್ಲವಾಗಿವೆ. ಕಡಿಮೆ ಬೆಲೆಯ-ವಾಯು ಮಾಲಿನ್ಯ ಇಲ್ಲದ ನ್ಯಾನೊದಂಥ ಕಾರಿನ ಬದಲು ಬಸ್ಸು ತಯಾರಿಸಿದ್ದರೆ ಅದು ಶ್ಲಾಘಿಸುವ ವಿಷಯ. ಇಂದು ಎಲ್ಲವೂ ಖಾಸಗೀಕರಣಕ್ಕೆ ಒಳಗಾಗಿ ಪ್ರಜಾಪ್ರಭುತ್ವ ನಲುಗಿದೆ. ಅಮೆರಿಕದಂಥ ಒಂದು ದೇಶ ತನ್ನ ಕಂಪನಿಗಳ ಮೂಲಕ ಇನ್ನೊಂದು ದೇಶದಲ್ಲಿ ಭಾರೀ ಪ್ರಮಾಣದ ಭೂಮಿಯನ್ನು ಕೊಂಡುಕೊಳ್ಳುವ ಕೆಲಸ ನಡೆಯುತ್ತಿದೆ. ಇದರಿಂದ ಅನನ್ಯತೆ-ಸ್ವಾವಲಂಬನೆಗಳ ನಾಶ ಆಗುತ್ತಿದೆ ಎಂಬುದು ಅವರ ನೋವು. ಬೆಂಗಳೂರಿನ ಸುತ್ತಲಿನ ಹಳ್ಳಿಗಳ ಸಂಪನ್ಮೂಲಗಳು ಮಹಾನಗರಕ್ಕೆ ಬರುತ್ತಿವೆ. ಬೆಂಗಳೂರಿನ ತ್ಯಾಜ್ಯಗಳು ಆ ಹಳ್ಳಿಗಳಿಗೆ ಹೋಗ್ತಿವೆ. ಬೆಂಗಳೂರಿನಿಂದ ಮೈಸೂರಿಗೆ ಚತುಷ್ಪಥ ರಸ್ತೆಯಲ್ಲಿ ಹೋಗಲು ಈಗ ಅರ್ಧ ಗಂಟೆ ಕಡಿಮೆ ಸಾಕು. ಆದರೆ ಆ ದಾರಿಯಲ್ಲಿರುವ ರೈತ ತನ್ನ ಉಳಿದ ಜಮೀನಿಗೆ ಹೋಗಲು, ಚತುಷ್ಪಥ ದಾಟಲು ಅರ್ಧ ಗಂಟೆ ಕಾಯಬೇಕಾಗಿದೆ ಎಂಬ ವೈರುಧ್ಯದ ಬಗ್ಗೆ ಅವರಿಗೆ ದುಃಖ.

ನಮ್ಮ ವಿದ್ಯುತ್ತಿನ ಶೇ.೪೦ ಭಾಗ ರೈತರ ಪಂಪ್‌ಸೆಟ್‌ಗಳಿಗೆ ವ್ಯಯವಾಗುತ್ತಿದೆ. ಆದರೆ ಅವರಿಗೆ ಸೋಲಾರ್ ಶಕ್ತಿಯನ್ನೋ ಗಾಳಿಯಂತ್ರವನ್ನೋ ಕೊಡದ ಸರಕಾರ ಟ್ರ್ಯಾಕ್ಟರ್‌ನ್ನು-ರಾಸಾಯನಿಕ ಗೊಬ್ಬರಗಳನ್ನು ಕೊಡುತ್ತಿದೆ. ಭಾರತದಲ್ಲಿ ದಿಢೀರನೆ ಬೆಳೆದ ತಂತ್ರಜ್ಞಾನ, ದುರ್ಬಳಕೆಯ ಎಲ್ಲ ಮಾರ್ಗಗಳಲ್ಲೂ ನಡೆದಿದೆ. ನಮಗೆ ಸರಿದಾರಿ ತೋರಬೇಕಾದ ಮಾಧ್ಯಮಗಳು ಹಾಗೂ ಸರಕಾರಗಳೇ ಕಾರ್ಪೊರೇಟ್ ಹಿಡಿತಕ್ಕೆ ಸಿಲುಕಿವೆ ಎಂಬ ಬೇಸರ. ಹೀಗೆಲ್ಲ ನಗುನಗುತ್ತಲೇ ಪನ್ ಮಾಡುತ್ತಲೇ ಮಾತಾಡಿದ ನಾಗೇಶ ಹೆಗಡೆ, ಎಲ್ಲರಿಂದ ಎತ್ತರದಲ್ಲಿ ನಿಂತು ಮುಂದಿನ ಪ್ರಪಾತವನ್ನು ವಿವರಿಸಿದವರಂತೆ ಕಂಡರು. ಪ್ರಪಾತದಲ್ಲಿ ನೇತಾಡುತ್ತಾ ಈ ಹಣ್ಣು ಅದೆಷ್ಟು ರುಚಿ ಎನ್ನುವ ಝೆನ್ ಒಡಪಿನ ಅರ್ಥವೂ ಅವರಿಗೆ ತಿಳಿದಂತಿತ್ತು. ಅಷ್ಟಕ್ಕೂ ಅವರು ತೀರ ಹೊಸದಾದ ಸಂಗತಿಯೇನೂ ಹೇಳಲಿಲ್ಲ. ಕ್ರಾಂತಿಗಿಂತ ಮುಖ್ಯವಾಗಿ ಸರ್ವಾಂಗೀಣ ಪ್ರಗತಿ ಆಗಬೇಕು ಎಂಬ ಹಲವರ ಆಸೆಯೇ ಅವರ ಆಸಕ್ತಿಯಾಗಿತ್ತು. ಬಹಳ ಕನ್ವಿನ್ಸಿಂಗ್ ಆಗಿ ಮಾತಾಡಲು ಅವರಿಗೆ ಸಾಧ್ಯವಾಗದಿದ್ದರೂ, ತನ್ನ ನಿಲುವಿನಲ್ಲಿ ಅವರಿಗಿರುವ ಬದ್ಧತೆ-ನಂಬಿಕೆ ಸ್ಪಷ್ಟವಾಗಿ ತಿಳಿಯುವಂತಿತ್ತು. ಬೆಂಗಳೂರಿನಿಂದ ೨೦ಕಿಮೀ ಆಚೆಗಿನ ಹಳ್ಳಿಯಲ್ಲಿ, ಫೋನು-ಕರೆಂಟು-ಟಿವಿ ಇತ್ಯಾದಿ ಸರಿಯಾದ ಸೌಲಭ್ಯಗಳಿಲ್ಲದಲ್ಲಿ ಅವರು ಬದುಕುತ್ತಿರುವುದು ಸಾಹಸದಂತೆ ಮಹಾ ಪಟ್ಟಣಿಗರಿಗೆ ಕಂಡರೆ, ಈ ಮಹಾನಗರಗಳಲ್ಲಿ ಬದುಕುವುದೇ ಸಾಹಸ ಅಂತ ಹೆಗಡೆ ಅಂದುಕೊಂಡಿದ್ದರು. ಯಾವುದು ಅತ್ಯಂತ ಸರಳವೋ ಅದನ್ನೇ ಭಾರೀ ಸಾಹಸವೆಂಬಂತೆ ಕಾಣಿಸಿರುವ ತಂತ್ರಜ್ಞಾನದ ಶಕ್ತಿಯ ಅನಾವರಣ ಅದರಿಂದಾಯಿತು.

ನಾಗೇಶ ಹೆಗಡೆಯವರು ಹೇಳಿದ ಥರಾ ಇನ್ನು ಐವತ್ತು ವರ್ಷಗಳಲ್ಲಿ ಏನೂ ಮುಳುಗಿ ಹೋಗೊಲ್ಲಾರೀ. ಒಂದು ಮೇರೆಮೀರಿದರೆ ಅದಕ್ಕೆ ಪ್ರತಿಯಾದ್ದನ್ನ ವಿಜ್ಞಾನ ಕಂಡುಹಿಡಿಯತ್ತೆ. ಪೆಟ್ರೋಲ್ ಮುಗಿದ್ರೆ, ನೀರಿನ ಕೊರತೆಯಾದ್ರೆ ಮತ್ತೊಂದು ದಾರಿ ತೆರೆದುಕೊಂಡಿರತ್ತೆ. ಈಗ ಹಳ್ಳಿಯೋರೆಲ್ಲ ಪೇಟೆಗೆ ಬಂದಿದ್ದಾರೆ. ಇಲ್ಲಿ ಅವಕಾಶಗಳೆಲ್ಲ ಕಡಿಮೆಯಾದಾಗ ಮತ್ತೆ ಜನ ಹಳ್ಳಿಗೆ ಹೋಗ್ತಾರೆ. ಪರಿಸರ ಮಾಲಿನ್ಯ ಸ್ವಲ್ಪ ಹೆಚ್ಚಾಗಿದೆ ಹೌದು. ಅದಕ್ಕೆಲ್ಲ ತಲೆ ಕೆಡಿಸ್ಕೋಬಾರ್ದು, ಎಡ್ಜೆಸ್ಟ್ ಮಾಡ್ಕೊಂಡು ಹೋಗ್‌ಬೇಕ್ರೀ. ಸ್ವಲ್ಪ ಕಡಿಮೆ ದಿನ ಬದುಕಿದ್ರೂ ಪರವಾಗಿಲ್ಲ, ಇಷ್ಟೆಲ್ಲಾ ಇರೋವಾಗ ಎಂಜಾಯ್ ಮಾಡಿ ಸಾಯ್ಬೇಕು !-ಎಂಬ ಮಾತುಗಳೂ ಹಲವರ ನಾಲಗೆಯ ಕೆಳಗೆ ಸುಳಿಯುತ್ತಿದ್ದವೇನೋ. ನಾಗೇಶ ಹೆಗಡೆ ಮಾತ್ರ ನಗುನಗುತ್ತಲೇ ಇದ್ದರು.

ನಾವು ಆನಂದವಾಗಿ ಬದುಕುವುದು ಎಂದರೆ ನಮ್ಮ ಸುತ್ತಲಿನ ಚೇತನ-ಅಚೇತನ ಪರಿಸರವನ್ನು ಆನಂದವಾಗಿ, ಸೌಖ್ಯವಾಗಿ ಇಡುವುದು ಎಂಬ ಸರಳ ಸತ್ಯವನ್ನು ನೆನಪಿಸಿಕೊಳ್ಳುವುದಕ್ಕೆ ಇಷ್ಟೆಲ್ಲ ಬರೆಯಬೇಕಾಯಿತು.

7 comments:

ಸಿಂಧು sindhu May 31, 2009 at 8:19 PM  

ಸುಧನ್ವ,

ನಾಗೇಶ್ ಹೆಗಡೆಯವರ ಮಾತಿನ ಸತ್ವವನ್ನ ತುಂಬ ಸಮರ್ಥವಾಗಿ ಕಟ್ಟಿಕೊಟ್ಟಿದ್ದಕ್ಕೆ ಧನ್ಯವಾದಗಳು.
" ನಾವು ಆನಂದವಾಗಿ ಬದುಕುವುದು ಎಂದರೆ ನಮ್ಮ ಸುತ್ತಲಿನ ಚೇತನ-ಅಚೇತನ ಪರಿಸರವನ್ನು ಆನಂದವಾಗಿ, ಸೌಖ್ಯವಾಗಿ ಇಡುವುದು ಎಂಬ ಸರಳ ಸತ್ಯವನ್ನು ನೆನಪಿಸಿಕೊಳ್ಳುವುದಕ್ಕೆ ಇಷ್ಟೆಲ್ಲ ಬರೆಯಬೇಕಾಯಿತು." ಎಂಥ ತೂಕದ ಮಾತು.. thank you..

ಪ್ರೀತಿಯಿಂದ
ಸಿಂಧು

ಜಿ.ಎಸ್.ಬಿ. ಅಗ್ನಿಹೋತ್ರಿ May 31, 2009 at 11:45 PM  

ಬರಹ ನಿಜಕ್ಕೂ ಸೊಗಸಾಗಿದೆ...

greeshma June 3, 2009 at 11:28 PM  

ನಾಗೇಶ್ ಹೆಗಡೆಯರ ಮಾತು ಕೇಳುವುದಕ್ಕೆ ಹೋಗಲಿಲ್ಲ, ಆದ್ರೆ ನಿಮ್ಮ ಬರಹ ಓದಿ ಅಲ್ಲಿ ಹೋಗಲಾಗದಿದ್ದರೂ ಎಷ್ಟೋ ವಿಚಾರಗಳನ್ನು ತಿಳಿದುಕೊಂಡಂತಾಯಿತು,ಥ್ಯಾಂಕ್ಸ್.

Anonymous,  June 4, 2009 at 12:02 AM  

sindhu, agnihothri, greeshma. thanks. -champakavathi

Sharath Akirekadu June 5, 2009 at 1:45 AM  

ಬರಹ ಓದಿದಾಗ ಛೇ!! ನಾವೂ ಬರಬಹುದಾಗಿತ್ತು ..ಮಿಸ್ ಮಾಡ್ಕೊಂದ್ವಿ ಅನ್ನಿಸ್ತ ಇದೆ . ಕೊನೆ ಚೆನ್ನಾಗಿತ್ತು.ಇನ್ನೂ ಇನ್ನೂ ಇಂಥಹ ಲೇಖನಗಳು ಬರಲಿ ..ಓದುವ ಜವಬ್ದಾರಿ ನಮ್ಮದು
ಶರತ್ .ಎ

ಪ್ರಮೋದ ನಾಯಕ June 5, 2009 at 7:02 AM  

ಒಳ್ಳೆಯ ಲೇಖನ..ಮುಂದೆರಡು ದಶಕಗಳಲ್ಲಿ ನಾವು ಎದುರಿಸಬಹುದಾದ ಪರಿಸ್ಥಿತಿ ಊಹಿಸಿಕೊಂಡರೂ ಭಯವಾಗುತ್ತದೆ.. ವಿಜ್ಞಾನ ಸಬಲರಿಂದ ಸಬಲರಿಗಾಗಿ ಎಂಬ ಮಾತನ್ನು ಕೆಲ ನಿದರ್ಶನಗಳು ಒಪ್ಪುವಂತೆ ಮಾಡುತ್ತವೆ....

ಮಲ್ಲಿಕಾರ್ಜುನ.ಡಿ.ಜಿ. June 6, 2009 at 7:21 PM  

"ನಾವು ಅಂದುಕೊಂಡಂತೆ ಇಲ್ಲಾರಿ ಈಗ ಹಳ್ಳಿಗಳು" ಅಂದಿದ್ದರು ನಾಗೇಶ್ ಹೆಗಡೆ . ಪಟ್ಟಣ ಬಿಟ್ಟು ಹಳ್ಳಿಗೆ ಹೋಗಬೇಕೆನ್ನುವವರಿಗೆ ನಾವು ಅನುಭವಿಸುತ್ತಿರುವ ಸಮಸ್ಯೆಗಳು ಅವರದಷ್ಟೇ ಇವೆ ಎಂದು ಹೇಗೆ ಹೇಳುವುದು?

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP