‘ಕರ್ಣ’ ಕಠೋರ
ಕೌರವನಿಂದ ರಣದ ವೀಳ್ಯ ಪಡೆದು, ಹಸ್ತಿನಾವತಿಯ ರಾಜಸಭೆಯಿಂದ ಹೊರಬಂದಿದ್ದಾನೆ ಕೃಷ್ಣ . ಆಗ ಕರ್ಣನನ್ನು ಕರೆದು ರಥದಲ್ಲಿ ಕೂರಿಸಿಕೊಂಡು ಆತನ ಜನ್ಮ ರಹಸ್ಯವನ್ನು ಬಿಚ್ಚಿಡುತ್ತಾನೆ. ಮಹಾಭಾರತದಲ್ಲಿ ಅದೊಂದು ವಿಶೇಷ ಸಂದರ್ಭ; ಕರ್ಣ ಭೇದನ. ನೀನು ಸೂತ ಪುತ್ರನಲ್ಲ ಕುಂತಿಯ ಮಗ. ಇದನ್ನು ಈಗ ಲೋಕಕ್ಕೆ ಪ್ರಕಟಿಸಿದರೆ, ಪಾಂಡವರು-ಕೌರವರು ಒಂದಾಗಿ ನೀನು ಹಸ್ತಿನಾವತಿಯ ಮಹಾರಾಜನಾಗಬಹುದು, ಮುಂದೆ ನಡೆಯಲಿರುವ ಮಹಾಯುದ್ಧ ತಪ್ಪಿಸಬಹುದು ಎನ್ನುತ್ತಾನೆ ಕೃಷ್ಣ. ಆಗ ಕರ್ಣ ಮನಸ್ಸಿಗೆ ಬಂದದ್ದನ್ನು ಹೀಗೆ ಹೇಳಿರಬಹುದೆ?!-
‘ಕೃಷ್ಣಾ , ಸಾಕು ಸಾಕು. ನಿನ್ನ ಮಾತು ‘ಕರ್ಣ’ ಕಠೋರ. ಅಪ್ಪ ಅದಿರಥ, ಮಿತ್ರ ಕೌರವ ; ನನಗೆ ಸಾಕಿದವರು ಬೇಕು. ಸಾಗಹಾಕುವವರಲ್ಲ. ನೀನು ಸುಳ್ಳಾಡುವವನಲ್ಲವೆಂದು ಗೊತ್ತು. ವೈರಿ ಕಂಸನನ್ನೇ ಅಶರೀರವಾಣಿಯ ಮೂಲಕ ಎಚ್ಚರಿಸಿ ನಂತರ ಹುಟ್ಟಿದ ನೀನು ದೇವರೆಂದು ಬಲ್ಲೆ. ಆದರೆ ಹತಭಾಗ್ಯನಾದ ನನ್ನನ್ನು ಈಗ ದೇವರಾಗಿಸುವ ಪ್ರಯತ್ನಕ್ಕೆ ಕೈಹಾಕಬೇಡ !
ಶಾಪ ಕೊಡುವುದರಲ್ಲಿ ಸಿದ್ಧಹಸ್ತರಾದ ದೂರ್ವಾಸರು ಕೌಮಾರ್ಯದಲ್ಲಿದ್ದ ಕುಂತಿಯ ಸೇವೆಯನ್ನು ಮೆಚ್ಚಿ , ಮಕ್ಕಳನ್ನು ನೀಡಬಲ್ಲ ಮಂತ್ರಗಳನ್ನು ಬೋಧಿಸಿದರೇ? ಅದೂ ಒಂದಲ್ಲ ಐದು. ಆ ಮಂತ್ರಗಳಿಂದ ಹುಟ್ಟಿದ ಪಾಂಡವರು ಒಳ್ಳೆಯವರು ಅನ್ನಿಸಿಕೊಂಡರೆ, ಅದೇ ಮಂತ್ರದಿಂದ ಹುಟ್ಟಿದ ನಾನು ಕೆಟ್ಟವನಾದೇನೇ? ಇಲ್ಲ. ಆದರೆ ನನ್ನನ್ನು ಕೆಟ್ಟವನನ್ನಾಗಿಸಲು ಈಗ ನೀನು ಯತ್ನಿಸುತ್ತಿದ್ದೀಯ. ಕುಂತಿಯು ಸೂರ್ಯನ ಮೂಲಕ ನನ್ನನ್ನು ಪಡೆದಳಾದರೂ ನನಗೆ ಸಿಕ್ಕಿದ್ದು ಕತ್ತಲೆಯ ಬದುಕು. ಕುಮಾರಿಯಾಗಿದ್ದ ಆಕೆ ಅಂದು ಬರಬಹುದಾಗಿದ್ದ ಅಪವಾದಕ್ಕೆ ಹೆದರಿದ್ದಳು. ಈಗ ನನಗೆ ಅಪವಾದವನ್ನು ಕಟ್ಟುವ ಯತ್ನ ಮಾಡುತ್ತಿದ್ದೀಯಾ. ಶಂತನುವಿನ ಪತ್ನಿಯಾಗಿದ್ದ ಗಂಗೆ ತನ್ನ ಏಳೂ ಮಕ್ಕಳನ್ನು ನದಿಗೆಸೆದು ಮೋಕ್ಷ ಕರುಣಿಸಿದಳಂತೆ. ಆದರೆ ಕುಂತಿ ಅದೇ ಗಂಗೆಯಲ್ಲಿ ನನ್ನನ್ನು ತೇಲಿ ಬಿಟ್ಟಳು. ಗಂಗೆಯೂ ನನ್ನನ್ನು ಮುಳುಗಿಸಲಿಲ್ಲ. ಹಸ್ತಿನಾವತಿಯ ಕುಡಿಯೊಂದು ಉಳಿಯಲೆಂದು ಆಕೆಗೂ ಅನ್ನಿಸಿರಬೇಕು !
ನನ್ನ -ಪಾಂಡವರ ವೈರದ ಮಧ್ಯೆಯೂ ಎಲ್ಲವನ್ನೂ ಸಹಿಸಿ, ಹೆಣ್ಣೊಬ್ಬಳು ಈ ಜನ್ಮ ವೃತ್ತಾಂತ ಬಚ್ಚಿಟ್ಟಿದ್ದಾಳೆಂದರೆ, ಆಕೆ ನಿಜವಾಗಿ ಸಹನಾಮೂರ್ತಿ ಧರ್ಮರಾಯನ ತಾಯಿಯೇ ! ನೀನು ದೇವರಾಗಿ ಮಾತಾಡು, ರಾಜಕೀಯ ನಿಷ್ಣಾತನಂತೆ ಆಡಬೇಡ. ಈ ಸತ್ಯವನ್ನು ಒಪ್ಪಿದರೂ ನಾನು ಕೌರವನ ಪಕ್ಷ ಬಿಡಲಾರೆನೆಂದು ನಿನಗೆ ಗೊತ್ತು. ಹಾಗಾಗಿ ಈ ಹಿಂದೆಂದೂ ಹೇಳದೆ ಈಗ ಹೇಳುತ್ತಿದ್ದೀಯೆ. ಕೌರವನ ಸಾಮ್ರಾಜ್ಯ ಪತನಕ್ಕೆ ನೀನು ಮೊದಲ ಹೆಜ್ಜೆಯಿಟ್ಟಿರುವುದು ಈ ಕರ್ಣನ ಎದೆಯ ಮೇಲೆ. ‘ಪಾಂಡವರನ್ನು ನನ್ನ ಪ್ರಾಣಗಳಂತೆ ರಕ್ಷಿಸುತ್ತೇನೆ ’ಎಂದು ಕುಂತಿಗೆ ಮಾತು ಕೊಟ್ಟವನಂತೆ ನೀನು. ಆ ಪಾಂಡವರಲ್ಲಿ ನಾನೂ ಇದ್ದೇನೆಯೆ?!
6 comments:
ಸಧ್ಯದಲ್ಲೇ ಎಲ್ಲಾದ್ರೂ ತಾಳಮದ್ದಲೆ ಇದೆಯಾ? ;)
super.....keep rocking...
ಹತಭಾಗ್ಯನಾದ ನನ್ನನ್ನು ಈಗ ದೇವರಾಗಿಸುವ ಪ್ರಯತ್ನಕ್ಕೆ ಕೈಹಾಕಬೇಡ !
ದೇವರನ್ನಾಗಿಸುವುದು ಎಂದರೆ ಅಸಮಾನ್ಯವಾದ ತ್ಯಾಗವನ್ನು ನಿರೀಕ್ಷಿಸುವುದು.
ನಿಜ, ಯಾರನ್ನೇ ಆಗಲಿ ದೇವರನ್ನಾಗಿಸುವ ಪ್ರಯತ್ನದ ಹಿಂದೆ ಇರುವುದು ಅಸಮಾನ್ಯ ಕ್ರೌರ್ಯವಲ್ಲವೆ?
ಚೆನ್ನಾಗಿ ಬರೆದಿದ್ದೀರಿ.
dear
sushrutha, santhosh (?!),dinesh-
thanks a lot
-champakavathi
super :)
Post a Comment