January 08, 2009

ಒಂದು ಶುಭ ಸಮಾಚಾರ

ಹಾಸನ ಜಿಲ್ಲೆಯಲ್ಲಿರುವ ಸಕಲೇಶಪುರದಿಂದ, ತೇಜಸ್ವಿಯವರ ಊರು ಮೂಡಿಗೆರೆಗೆ ಹೋಗುವ ಹಾದಿಯಲ್ಲಿದೆ ರಕ್ಷಿದಿ. ಅಲ್ಲಿಂದ ಒಂದು ಕಿಮೀ ಮುಂದೆ ಬೆಳ್ಳೇಕರೆ. ಒಂದೆರಡು ಅಂಗಡಿಗಳಷ್ಟೇ ಇರುವ, ಈ ಎರಡು ಸ್ಥಳಗಳ ಮಧ್ಯೆ ಇದೆ ರಕ್ಷಿದಿ ಶಾಲೆ. ಈ ೮ರಿಂದ ೧೧ರವರೆಗೆ ಅಲ್ಲಿ ರಂಗ ಜಾತ್ರೆ. ೮ರಂದು 'ಜೈ ಕರ್ನಾಟಕ ಸಂಘ-ಬೆಳ್ಳೇಕೆರೆ' ಹಾಗೂ ಶಾಲಾ ಮಕ್ಕಳ ನಾಟಕಗಳ ಪ್ರದರ್ಶನ. ೯ ಮತ್ತು ೧೦ರಂದು ನೀನಾಸಂ ನಾಟಕಗಳು. ೧೧ರಂದು ಮೈಸೂರಿನ 'ನಟನ' ತಂಡದ ನಾಟಕ. ಇದುವರೆಗೆ ಚಂಪಕಾವತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ 'ಬೆಳ್ಳೇಕೆರೆಯ ಹಳ್ಳಿ ಥೇಟರ್' ಪುಸ್ತಕವಾಗಿ ಆ ರಂಗೋತ್ಸವದಲ್ಲಿ ಬಿಡುಗಡೆಯಾಗುತ್ತಿದೆ. ಬೆಂಗಳೂರಿನ
 'ಅಭಿನವ ಪ್ರಕಾಶನ' ಇದನ್ನು ಪ್ರಕಟಿಸಿದೆ.
ಹಿರಿಯ ಚಿಂತಕ ಜಿ.ರಾಜಶೇಖರ ಬೆನ್ನುಡಿಯಲ್ಲಿ ಹೀಗೆ ಹೇಳಿದ್ದಾರೆ:
ಗೆಳೆಯ ಪ್ರಸಾದ್ ರಕ್ಷಿದಿ ತನ್ನ ಈ ಬರೆಹವನ್ನು 'ಒಂದು ಗ್ರಾಮೀಣ ರಂಗಭೂಮಿಯ ಆತ್ಮಕಥನ'ವೆಂದು ಕರೆದುಕೊಂಡಿದ್ದಾರೆ. ರಂಗಭೂಮಿಯ ಮುಖಾಂತರ ಮಲೆನಾಡಿನ ಪುಟ್ಟ ಜನಸಮುದಾಯವೊಂದು ತನ್ನ ಮಿತಿ ಮತ್ತು ಸಾಧ್ಯತೆಗಳನ್ನು ಕಂಡುಕೊಳ್ಳುವುದರ ನಿರೂಪಣೆ ಎಂಬ ಅರ್ಥದಲ್ಲಿ ಇದು ಒಂದು ಆತ್ಮಕಥನವೇ ಹೌದು. ಆದರೆ ಬೆಳ್ಳೇಕೆರೆ ಹಳ್ಳಿ ಥೇಟರ್, ಮಲೆನಾಡಿನ ಹಳ್ಳಿಯೊಂದರ ರಂಗ ಚಳವಳಿಯ ಕಥನವನ್ನಷ್ಟೇ ಅಲ್ಲ, ಅದು ಆ ಪ್ರದೇಶದ ಜನರ, ಅಂದರೆ ಮನೆಗಳ, ಸಂಸಾರಗಳ ದುಃಖ ದುಮ್ಮಾನ ಹಾಗೂ ಸುಖ ಸಂತೋಷಗಳ ಕಥನವೂ ಆಗಿದೆ. ಈ ಕೃತಿ ರಂಗ ಅಧ್ಯಯನದ ದೃಷ್ಟಿಯಿಂದ ಉಪಯುಕ್ತ ಮಾಹಿತಿ ಒದಗಿಸುವುದರ ಜತೆಗೆ ಸೊಗಸಾದ ಕಾದಂಬರಿಯಂತೆಯೂ ಓದಿಸಿಕೊಳ್ಳುತ್ತದೆ. ರಂಗ ನಿಷ್ಠೆಯ ಜೊತೆ ಮನುಷ್ಯ ಸ್ವಭಾವದ ಓರೆಕೋರೆಗಳ ಬಗೆಗೂ ಲೇಖಕರು ತೋರುವ ಗಾಢ ಅನುರಕ್ತಿಯಿಂದಾಗಿ ಈ ಕೃತಿಯ ಗದ್ಯ ಹೃದಯಂಗಮವಾಗಿದೆ.ಅಕ್ಷರ ಜ್ಞಾನವಿಲ್ಲದ ಆದರೆ ಸ್ವಾಭಿಮಾನಿಯಾದ ದುಡಿಮೆಗಾರ ತರುಣನೊಬ್ಬ ಸ್ವಾಧ್ಯಾಯಿಯಾಗಿ ಅಕ್ಷರ ಕಲಿಯುವ ವೃತ್ತಾಂತದೊಂದಿಗೆ ಪ್ರಾರಂಭವಾಗುವ ಈ ಕೃತಿ, ಸಮುದಾಯವೊಂದು ಅಕ್ಷರ ಮತ್ತು ರಂಗಭೂಮಿಗಳ ಜೊತೆ ಅನುಸಂಧಾನದ ಮುಖಾಂತರ ಸ್ವಾತಂತ್ರ್ಯ, ಅಸ್ಮಿತೆಗಳತ್ತ ನಡೆಯುವುದರ ರೋಮಾಂಚಕ ಕಥನವಾಗಿದೆ.
***
 ಈವರೆಗೆ 'ಚಂಪಕಾವತಿ'ಯಲ್ಲಿ ಮಾತ್ರ ಲಭ್ಯವಿದ್ದ, ಪ್ರಸಾದ್ ರಕ್ಷಿದಿಯವರ ಆ ಗ್ರಾಮೀಣ ರಂಗಭೂಮಿಯ ಆತ್ಮಕಥನಕ್ಕೆ ನೀವು ತೋರಿದ ಪ್ರೀತಿ ದೊಡ್ಡದು. ನನ್ನ ಅನಿಯಮಿತ ಪ್ರಕಾಶನದ ಮಧ್ಯೆಯೂ, ಆ ಕಂತುಗಳನ್ನು ಓದಿ ಪ್ರತಿಕ್ರಿಯಿಸಿದ ಎಲ್ಲವನ್ನೂ ಲೇಖಕರ ಗಮನಕ್ಕೆ ತರಲಾಗಿದೆ. ಪ್ರತಿಕ್ರಿಯಿಸಿದವರಿಗೆ, ಇಲ್ಲಿ ಬಳಸಲು ಅವಕಾಶ ಕೊಟ್ಟ ಪ್ರಸಾದ್ ರಕ್ಷಿದಿಯವರಿಗೆ ಕೃತಜ್ಞತೆಗಳು. 'ಜೈ ಕರ್ನಾಟಕ ಸಂಘ ಬೆಳ್ಳೇಕೆರೆ'ಯ ಬಹ್ವಂಶ ಚಟುವಟಿಕೆಗಳ ನೆಲೆ ರಕ್ಷಿದಿ ಶಾಲೆ. (ಇತ್ತೀಚೆಗೆ ತನ್ನದೇ ಜಾಗದಲ್ಲಿ ಪ್ರತ್ಯೇಕ ಹೊಸ ರಂಗಮಂದಿರದ ನಿರ್ಮಾಣ ಕಾರ್ಯವೂ ಆರಂಭಿಸಿದೆ)ಆ ರಕ್ಷಿದಿ ಶಾಲೆ ಮಂಜೂರಾದದ್ದು ಹೇಗೆಂಬ ಬರೆಹದೊಂದಿಗೆ ಈ ಹಳ್ಳಿ ಥೇಟರ್ ಸರಣಿಗೆ ಮುಕ್ತಾಯ ಹಾಡುತ್ತಿದ್ದೇವೆ.   

ದೇವೇಗೌಡರು ಮತ್ತು ಶಾಲೆ
ನಮ್ಮಲ್ಲಿ ಅನೇಕರಿಗೆ ಮದುವೆಯಾಯಿತು. ನನಗಿಂತ ಹಿರಿಯರಿಬ್ಬರಿಗೆ ಮೊದಲೇ ಮದುವೆಯಾಗಿತ್ತು. ನಾನೂ ಸಂಸಾರಸ್ತನಾದೆ. ಅಪ್ಪ ಕೆಲಸದಿಂದ ನಿವೃತ್ತರಾಗಿದ್ದರು. ಈಗ ಡೈರಿ ಫಾರಂ ಮತ್ತು ತೋಟದ ಜವಾಬ್ದಾರಿ ಎರಡೂ ನನ್ನ ಮೇಲೇ ಬಿದ್ದಿತ್ತು. ನನಗೆ ಸಹಾಯಕನಾಗಿ ಕೃಷ್ಣಮೂರ್ತಿ ಎಂಬವರೊಬ್ಬರು ಹೊಸಬರು ಬಂದಿದ್ದರು. ನಮ್ಮ ರಾತ್ರಿ ಶಾಲೆ ಕುಂಟುತ್ತ ಸಾಗಿತ್ತು. ದೊಡ್ಡವರೆಲ್ಲ ಈವೇಳೆಗೆ ತಕ್ಕಮಟ್ಟಿಗೆ ಓದು ಬರಹ ಕಲಿತದ್ದರಿಂದ ಅವರೆಲ್ಲ ಶಾಲೆಗೆ ಬರುವುದನ್ನು ಕಡಿಮೆ ಮಾಡಿದ್ದರು.  ಹೊಸ ಹುಡುಗರನ್ನು ಮತ್ತು ಮಕ್ಕಳನ್ನು ಕ್ಯಾಮನಹಳ್ಳಿ ಅಥವಾ ಗಾಣದ ಹೊಳೆಯ ಸರ್ಕಾರಿ ಶಾಲೆಗೆ ಸೇರಿಸಿದ್ದೆವು.  ಆ ಕೆಲವು ಮಕ್ಕಳಷ್ಟೇ ರಾತ್ರಿ ಶಾಲೆಗೆ ಬಂದು ಹೋಂ ವರ್ಕ್ ಮಾಡುತ್ತಿದ್ದರು. ನಾವೆಲ್ಲ ಪುರುಸೊತ್ತಿದ್ದಾಗ ಹೋಗಿ ಹರಟೆ ಹೊಡೆಯುತ್ತಿದ್ದೆವು. ಕ್ಯಾಮನಹಳ್ಳಿ ಮತ್ತು ಗಾಣದಹೊಳೆ ಶಾಲೆಗಳು ನಮ್ಮಲ್ಲಿಂದ ಮಕ್ಕಳಿಗೆ ಹೋಗಿ ಬರಲು ಸ್ವಲ್ಪ ದೂರವಾಗುತ್ತಿದ್ದುದರಿಂದ ರಕ್ಷಿದಿಯಲ್ಲೇ ಒಂದು ಸರ್ಕಾರಿ ಶಾಲೆ ಮಾಡಿದರೆ ಒಳ್ಳೆಯದೆಂದು ಯೋಚಿಸಿದೆವು.
ಆ ವೇಳೆಗೆ ಶಿವಶಂಕರ ಡಿಗ್ರಿ ಮುಗಿಸಿ ಊರಿಗೆ ಬಂದರು. ಶಿವಶಂಕರ ಮದನಾಪುರದವರು. ಅವರಿಗೆ ರಕ್ಷಿದಿಯಲ್ಲಿ ಸಣ್ಣ ತೋಟವಿದೆ. ಶಿವಶಂಕರ ಅವರ ತಂದೆ ಮಲ್ಲೇಗೌಡರು ಮತ್ತು ನಮ್ಮ ಗುಂಪಿನ ಇನ್ನೊಬ್ಬ ಸದಸ್ಯ ಮುರಳೀಧರ ಅವರ ತಂದೆ ಮಸ್ತಾರೆ ಮಲ್ಲಪ್ಪಗೌಡರು ಇವರಿಬ್ಬರೂ ಆ ಕಾಲದ ಒಳ್ಳೆಯ ಶಿಕಾರಿ ಜೋಡಿ. ಈ ಸ್ನೇಹಿತರು ಶಿಕಾರಿ ಮಾಡದ ಕಾಡು ಸುತ್ತಮುತ್ತ  ಎಲ್ಲೂ ಇಲ್ಲವೆಂದು ಸುತ್ತಲಿನ ಹಲವು ಗ್ರಾಮಗಳ ಜನರು ಮಾತನಾಡಿಕೊಳ್ಳುತ್ತಿದ್ದರು. ಮಲ್ಲಪ್ಪ ಗೌಡರು ಆ ಕಾಲದ ಗಣ್ಯ ಪ್ಲಾಂಟರ್‌ಗಳಲ್ಲಿ ಒಬ್ಬರು. ನಾವೆಲ್ಲ ಚಿಕ್ಕಂದಿನಲ್ಲಿ ನೋಡಿದ್ದ ಮಲ್ಲಪ್ಪಗೌಡರು ಅವರ ನಡುವಯಸ್ಸಿನಲ್ಲಿಯೇ ತೀರಿಕೊಂಡಿದ್ದರು. ಈಗ ಮಲ್ಲೇಗೌಡರೂ  ಕೂಡಾ ಶಿಕಾರಿ ಮಾಡುತ್ತಿರಲಿಲ್ಲ.  ಒಳ್ಳೆಯ ನಾಟಿ ವೈದ್ಯರೂ ಆಗಿರುವ ಮಲ್ಲೇಗೌಡರು   ಕೆಲಕಾಲ ಶಾಲೆಯಲ್ಲಿ ಮೇಷ್ಟ್ರ ಕೆಲಸವನ್ನೂ ಮಾಡಿ  ಸರ್ಕಾರಿ ತಾಬೇದಾರಿ ಕೆಲಸ ಬೇಡವೆಂದು ಬಿಟ್ಟುಬಿಟ್ಟಿದ್ದರಂತೆ. ಇವರಿಗೆ ಮದನಾಪುರದಲ್ಲಿ ಮನೆಯಿದ್ದು ಅಲ್ಲೂ ಸ್ವಲ್ಪ ಜಮೀನಿದೆ. ಮದನಾಪುರಕ್ಕೆ ರಕ್ಷಿದಿಯಿಂದ ನಾಲ್ಕೈದು ಕಿ.ಮೀ ದೂರವಿದೆ. ರಕ್ಷಿದಿಯಲ್ಲಿನ ತೋಟದ ಉಸ್ತುವಾರಿಗೆಂದು ಶಿವಶಂಕರ ರಕ್ಷಿದಿಯಲ್ಲೇ ಬಂದು ಉಳಿಯತೊಡಗಿದರಲ್ಲದೆ  ನಮ್ಮ ಗುಂಪಿನ ಸದಸ್ಯರೂ ಆದರು. ನಾವೆಲ್ಲ ಸೇರಿ ಶಾಲೆಗಾಗಿ ಹಲವು ತಿಂಗಳುಗಳ ಪ್ರಯತ್ನ ನಡೆಸಿದ ನಂತರ ರಕ್ಷಿದಿಗೊಂದು ಪ್ರಾಥಮಿಕ ಶಾಲೆ ಮಂಜೂರಾಯ್ತು. ಆದರೆ ಶಾಲೆ ನಡೆಸಲು ಕಟ್ಟಡ ಇರಲಿಲ್ಲ. ಛೇರ್‍ಮನ್ ಸಿದ್ದಪ್ಪನವರು ಒಂದು ವರ್ಷದೊಳಗಾಗಿ ಬೇರೆ ವ್ಯವಸ್ಥೆ ಮಾಡಿಕೊಳ್ಳಬೇಕೆಂಬ ಷರತ್ತಿನೊಡನೆ ಪಂಚಾಯತ್ ಕಟ್ಟಡವನ್ನೇ ಬಿಟ್ಟುಕೊಟ್ಟರು. ಶಾಲೆಗೆ ಉಪಾಧ್ಯಾಯರು ಇರಲಿಲ್ಲ ಶಿವಶಂಕರ ಉಚಿತಸೇವೆಯ ಅಧ್ಯಾಪಕರಾಗಲು ಒಪ್ಪಿ ರಕ್ಷಿದಿ ಶಾಲೆಯ ಪ್ರಪ್ರಥಮ ಉಪಾಧ್ಯಾಯರಾದರು. ಹೀಗೆ " ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ-ರಕ್ಷಿದಿ" ಪ್ರಾರಂಭವಾಯಿತು. ನಾವು ಗ್ರಾಮಪಂಚಾಯತ್‌ಗೆ ನೀಡಿದ ವಾಗ್ದಾನದಂತೆ  ಒಂದು ವರ್ಷದೊಳಗೆ ಶಾಲೆಗಾಗಿ ಬೇರೆ ಕಟ್ಟಡ ಕಟ್ಟಿಕೊಳ್ಳಬೇಕಿತ್ತು. ಅಲ್ಲದೆ ಪಂಚಾಯತ್‌ನಲ್ಲಿ ಸಭೆ ಸಮಾರಂಭಗಳಿದ್ದಾಗ ಶಾಲೆಗೆ ರಜೆ ಕೊಡಬೇಕಾಗುತ್ತಿತ್ತು. ಇದರಿಂದಾಗಿ ಆಗಾಗ ಪಾಠಕ್ಕೆ ತೊಂದರೆಯಾಗುತ್ತಿತ್ತು.
ಆಗ ಪಂಚಾಯತ್‌ನ ಕಾರ್ಯದರ್ಶಿಯಾಗಿದ್ದ ಜಯಪ್ರಕಾಶ ಬೆಳ್ಳೇಕೆರೆಯಲ್ಲೇ ವಾಸವಿದ್ದರಲ್ಲದೆ ನಮ್ಮ ಎಲ್ಲಾ ಕಾರ್ಯಕ್ರಮಗಳಿಗೂ ಬರುತ್ತಿದ್ದರು. ನಮ್ಮೆಲ್ಲರಿಗೆ ಒಳ್ಳೆಯ ಸ್ನೇಹಿತರಾಗಿದ್ದ ಜಯಪ್ರಕಾಶ ಸ್ವತ : ಓಡಾಡಿ ಶಾಲೆಗೆ ಒಂದು ಕೊಠಡಿಯನ್ನು ಮಂಜೂರು ಮಾಡಿಸಿಕೊಟ್ಟರು. ಕಟ್ಟಡವೇನೋ ಮಂಜೂರಾಗಿತ್ತು. ಆದರೆ ಕಟ್ಟಲು ಸ್ಥಳವೇ ಇರಲಿಲ್ಲ. ಪಕ್ಕದಲೇ ಇದ್ದ ಸರ್ಕಾರಿ ಜಾಗವೂ ಸಾಮಾಜಿಕ ಅರಣ್ಯ ಯೋಜನೆಯಲ್ಲಿ ಅರಣ್ಯ ಇಲಾಖೆಯ ಪಾಲಾಗಿತ್ತಲ್ಲದೆ ರೈತಸಂಘದ ವಿರುದ್ದವಾಗಿ  ನಾವೇ ಅರಣ್ಯ ಇಲಾಖೆಯ ಬೆಂಬಲಕ್ಕೆ ನಿಂತು ಅಲ್ಲಿ ಗಿಡ- ಮರ, ಬಿದಿರು ಇತ್ಯಾದಿ ನೆಡಿಸಿದ್ದೆವು. ಅಲ್ಲೀಗ ಶಾಲೆಯ ಕಟ್ಟಡವನ್ನು ಕಟ್ಟಲು ಅರಣ್ಯ ಇಲಾಖೆ ತಕರಾರು ಮಾಡಿತು. ಗಿಡ ನೆಡುವಾಗ ನಮ್ಮ ಸಹಾಯ , ಬೆಂಬಲ ಪಡೆದವರೇ ಶಾಲೆಯ ಕಟ್ಟಡ ಕಟ್ಟಲು ಅಡ್ಡಿ ಮಾಡಿದರು.
ಅಂದಿನ ಶಾಸಕರಾಗಿದ್ದ ಬಿ.ಡಿ ಬಸವರಾಜ್‌ರಲ್ಲಿ ನಮ್ಮ ಸಮಸ್ಯೆಯನ್ನು ಹೇಳಿಕೊಂಡೆವು. ಅವರು ಅರಣ್ಯ ಇಲಾಖೆ ಜಮೀನನ್ನು ಶಾಲೆಗೆ ಮಂಜೂರು ಮಾಡಲು ಬರುವುದಿಲ್ಲವೆಂದೂ, ಆದರೆ ನೀವು ನಿಮ್ಮಷ್ಟಕ್ಕೆ  ಆ ಸ್ಥಳದಲ್ಲಿ ಶಾಲೆಯ ಕಟ್ಟಡ ಕಟ್ಟಿ; ಮುಂದೆ ನೋಡೋಣ ಎಂದರು. ನಮಗೆ ಅಷ್ಟೇ ಸಾಕಾಗಿತ್ತು. ನಾವು ಕೂಡಲೇ ರಕ್ಷಿದಿಯಲ್ಲಿಹಾನುಬಾಳು- ಸಕಲೇಶಪುರ ರಸ್ತೆಯಿಂದ ನೂರಡಿ ದೂರದಲ್ಲಿ ರಸ್ತೆಗೆ ಕಾಣದಂತೆ ಬಿದಿರು ಮೆಳೆಗಳ ನಡುವೆ ಒಂದಿಷ್ಟು ಜಾಗವನ್ನು ತಟ್ಟು ಮಾಡಿ ಒಬ್ಬ ಕಂಟ್ರಾಕ್ಟರನ್ನು ಹಿಡಿದು ಕಟ್ಟಡ ಕಟ್ಟಿ ಬಿಟ್ಟೆವು. ನಮ್ಮ ಪ್ರಭಾಕರ-ವೀರಸಿದ್ದೇಶ ಇವರೆಲ್ಲಾ ಗಾರೆ ಕೆಲಸ ಮಾಡಿದರು. ಗಾಣದ ಹೊಳೆಯ ಅಬ್ಬಾಸ್ ಅನ್ನುವ ಕಂಟ್ರಾಕ್ಟರನಿಗೆ ಬಿಲ್ ಆಗದಿದ್ದರೆ ನಾವು ಕೊಡುತ್ತೇವೆಂದು ಹೇಳಿ ಕೆಲಸಕ್ಕೆ ಕರೆದುಕೊಂಡು ಬಂದಿದ್ದೆವು. ಶಾಲೆಯ ಉದ್ಘಾಟನೆಯೂ ಆಯಿತು. ಆದರೆ ನಮ್ಮ ಭಯ ನಿಜವಾಯಿತು. ಕಟ್ಟಡಕ್ಕೆ ಹಣ ಕೊಡಬೇಕಾದ ಬಿ.ಡಿ ಒ ಸಾಹೇಬರು ಇದು ಅರಣ್ಯ ಇಲಾಖೆ ಜಾಗವಾದ್ದರಿಂದ ಬಿಲ್ ಕೊಡಲು ಬರುವುದಿಲ್ಲವೆಂದು ತಕರಾರು ತೆಗೆದರು. ಕಂಟ್ರಾಕ್ಟರ್ ನಮ್ಮನ್ನು ಪೀಡಿಸತೊಡಗಿದ. ನಾವು ದುಡ್ಡಿಲ್ಲದೆ ಕಂಟ್ರಾಕ್ಟರ್‌ನಿಂದ ಕದ್ದು ತಿರುಗುವ ಪರಿಸ್ಥಿತಿ ಬಂತು!.
ಆಗ ಲೋಕೋಪಯೋಗಿ ಮಂತ್ರಿಗಳಾಗಿದ್ದ ಹೆಚ್.ಡಿ ದೇವೇಗೌಡರು ಇದೇ ದಾರಿಯಾಗಿ ಬರುವ ಕಾರ್ಯಕ್ರಮವಿದೆ ಎಂದು ತಿಳಿಯಿತು. ಆ ದಿನ ನಾವೆಲ್ಲ ಸೇರಿ ಶಾಲೆಯ ಮಕ್ಕಳನ್ನೂ ಮತ್ತೊಂದಷ್ಟು ಗ್ರಾಮಸ್ಥರನ್ನೂ ಸೇರಿಸಿ ದಾರಿಯಲ್ಲಿ ಗುಂಪುಕಟ್ಟಿ ನಿಂತು ದೇವೇಗೌಡರನ್ನು ತಡೆದು ನಿಲ್ಲಿಸಿ ನಮ್ಮ ಅಹವಾಲನ್ನು ಸಲ್ಲಿಸಿದೆವು. ನಮ್ಮ ಸಮಸ್ಯೆಗಳನ್ನೆಲ್ಲಾ ಕೇಳಿದ ದೇವೇಗೌಡರು, ಜೊತೆಯಲ್ಲೇ ಇದ್ದ ಬಿ.ಡಿ.ಒ ಸಾಹೇಬರಿಗೆ 
" ಯಾವ ಸ್ಕೂಲ್ ರೀ ಇದು" 
" ಪ್ರೈಮರಿ ಸ್ಕೂಲ್ ಸಾರ್ "
" ಅಂದರೆ ಯಾರದ್ದು ಸ್ಕೂಲ್ "
" ಗೌರ್ಮೆಂಟ್ ಸ್ಕೂಲ್ ಸಾರ್" 
" ಸರೀರಿ, ಜಾಗ ಯಾರದ್ದು ?"
" ಸೋಷಿಯಲ್ ಫಾರೆಸ್ಟ್ ಸಾರ್" 
" ಅಂದ್ರೆ ಸರ್ಕಾರಿ ಜಾಗ ಅಲ್ವೇನ್ರಿ"
" ಹೌದು ಸಾರ್, ಆದ್ರೆ...........!"
" ಆದ್ರೆ ಗೀದ್ರೆ ಏನೂ ಇಲ್ಲ, ಸರ್ಕಾರಿ ಜಾಗದಲ್ಲಿ ಸರ್ಕಾರಿ ಶಾಲೆ ಕಟ್ಟಿದ್ದಾರೆ ಅಷ್ಟೆ ಅಲ್ವೇನ್ರಿ ? ಒಟ್ಟಿನಲ್ಲಿ ಮಕ್ಕಳಿಗೆ ಅನುಕೂಲ ಆಗ್ಬೇಕು. ಒಂದು ವಾರದೊಳಗೆ ಬಿಲ್ ಸೆಟ್ಲ್ ಮಾಡಿ ನನಗೆ ವರದಿ ಮಾಡಿ- ನೋಟ್ ಮಾಡ್ಕೊಳ್ಳಿ" ಎಂದರು. ಹಣ ಮಂಜೂರಾಯಿತು. 
ಕೂಡಲೇ ಸುತ್ತ ಕಾಡು ಕಡಿದು ಕಾಡೊಳಗಿದ್ದ ಶಾಲೆ ರಸ್ತೆಗೆ ಕಾಣುವಂತೆ ಮಾಡಿದೆವು. 

2 comments:

Anonymous,  January 8, 2009 at 11:31 PM  

beautiful.....

heege munduvariyali theatre naataka.. baarha....

Anonymous,  January 9, 2009 at 1:00 AM  

ahaa!
yentha olleya prayatna!
blog ee thara yavagalu 'sangrahya'vagutha hogali.
-vikas negiloni

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP