ಶಂಕರ ಬಟ್ಟರ ಸುಲಬ ಬಾಶೆಯ ಬಗ್ಗೆ
ತಿರುಮಲೇಶ್ವರ ಭಟ್ಟ, ಸೂರ್ಯನಾರಾಯಣ ಭಟ್ಟ ಎಂಬೆಲ್ಲ ಹೆಸರುಗಳನ್ನು ಓದಿದವರಿಗೆ `ಶಂಕರ ಬಟ್' ಎಂಬುದು ವಿಚಿತ್ರವಾಗಿ ಕಾಣಿಸಬಹುದು. (ಆದರೆ ಇದು ವಿಚಿತ್ರವಾದರೂ ಸತ್ಯ !) `ಎಂತ ಮಾರಾಯ ನಿನಿಗೆ ಭಾಷೆ ಇಲ್ವಾ?'ಅನ್ನುವುದು ದಕ್ಷಿಣಕನ್ನಡದ ಮಾಮೂಲಿ ಬೈಗುಳ. ಶಂಕರ ಬಟ್ರಿಗಾದರೆ ಅದು ಹೊಗಳಿಕೆ ! ಅವರದ್ದು ಭಾಷೆಯಲ್ಲ ಬಾಶೆ. ಭಟ್ಟರು ಪ್ರತಿಪಾದಿಸುತ್ತಿರುವ ಹೊಸ ಕನ್ನಡ ಬರಹವನ್ನು ಬೆಂಬಲಿಸುತ್ತಿರುವವರಲ್ಲಿ ಹಿರಿಯರಾದ ಕಿ.ರಂ.ನಾಗರಾಜ ಕೂಡಾ ಒಬ್ಬರು.
ಅಂತಹ ಬಟ್ಟರು ಬರೆದ ಪುಸ್ತಕಗಳ ಪಟ್ಟಿ ಮೊದಲು ಗಮನಿಸಿ -
೧. ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ- ೨೦೦೦,೨೦೦೧, ದೊಡ್ಡ ಮಾಡಿರುವ ಮೂರನೇ ಮುದ್ರಣ ೨೦೦೬
೨.ಕನ್ನಡ ಬರಹವನ್ನು ಸರಿಪಡಿಸೋಣ ! -2005
೩. ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹುದು ? -೨೦೦೫
४. ಕನ್ನಡ ಪದಗಳ ಒಳರಚನೆ -೧೯೯೯, ದೊಡ್ಡ ಮಾಡಿರುವ ಎರಡನೇ ಮುದ್ರಣ ೨೦೦२
೫. ಕನ್ನಡದ ಸರ್‍ವನಾಮಗಳು - ೨೦೦3
६. ಬಾಶೆಯ ಬಗ್ಗೆ ನೀವೇನು ಬಲ್ಲಿರಿ? -೧೯೭೦, ದೊಡ್ಡ ಮಾಡಿರುವ ಮೂರನೇ ಮುದ್ರಣ ೨೦೦2
7. ಕನ್ನಡ ವಾಕ್ಯಗಳ ಒಳರಚನೆ -೨೦೦೪, ಎರಡನೇ ಮುದ್ರಣ ೨೦೦೬
ಇವೆಲ್ಲವೂ ಹೆಗ್ಗೋಡಿನ `ಬಾಶಾ ಪ್ರಕಾಶನ'ವು ಪ್ರಕಟಿಸಿದ ಸುಮಾರು ಇನ್ನೂರು ಪುಟಗಳ ಪುಸ್ತಕಗಳು. ಅದು ೨೦೦೭ರಲ್ಲಿ ಪ್ರಕಟಿಸಿರುವ `ಕನ್ನಡ ನುಡಿ ನಡೆದು ಬಂದ ದಾರಿ' ಇತ್ತೀಚೆಗಿನ ಪುಸ್ತಕ. ಅದರ ಬೆನ್ನುಡಿಯಲ್ಲಿ ಹೀಗಿದೆ :
"ಸಂಸ್ಕ್ರುತದಲ್ಲಿ ಎಂ.ಎ. ಮತ್ತು ಬಾಶಾ ವಿಜ್ನಾನದಲ್ಲಿ ಪಿಹೆಚ್.ಡಿ ಮಾಡಿ ಪುಣೆ, ತಿರುವನಂತಪುರ, ಇಂಪಾಲ್ ಮತ್ತು ಮಯ್ಸೂರುಗಳಲ್ಲಿ ಸಂಶೋದನೆ ಮತ್ತು ಕಲಿಸುವಿಕೆಗಳನ್ನು ಮಾಡಿ ಬಿಡುವು ಪಡೆದಿದ್ದಾರೆ. ಇಂಗ್ಲೆಂಡ್, ಅಮೆರಿಕ, ಬೆಲ್ಜಿಯಂ, ಜರ್‍ಮನಿ, ಆಸ್ಟ್ರೇಲಿಯಾಗಳಲ್ಲಿ ತಿಂಗಳು- ವರ್‍ಶ, ಅಂತ ಸಂಶೋದನೆ ಮಾಡಿದ್ದಾರೆ. ಇಂಗ್ಲಿಶ್‌ನಲ್ಲಿ ಅವರು ಬರೆದ ಪುಸ್ತಕಗಳು ಮತ್ತು ಇತರ ಬರಹಗಳು ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಪ್ರಕಟಿತವಾಗಿ ವಿಮರ್‍ಶಕರ ಮನ್ನಣೆ ಪಡೆದಿವೆ. ಇತ್ತೀಚೆಗೆ ಸರ್‍ವನಾಮಗಳ ಮೇಲೆ ಇವರು ಬರೆದ ಪುಸ್ತಕವನ್ನು ಆಕ್ಸ್‌ಪರ್‍ಡ್ ವಿಶ್ವವಿದ್ಯಾಲಯ ಪ್ರಕಟಿಸಿದೆ. ಕನ್ನಡ ನುಡಿಯ ಚರಿತ್ರೆಯ ಕುರಿತು ಇದಕ್ಕೂ ಮೊದಲೇ ಇವರು ಬರೆದಿದ್ದ (ಕನ್ನಡ ಬಾಶೆಯ ಕಲ್ಪಿತ ಚರಿತ್ರೆ) ಹಂಪಿಯ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿತ್ತು. ಆ ಪುಸ್ತಕವನ್ನು ಬಳಸಿ ಮತ್ತು ಹಲವಾರು ಹೊಸ ವಿಶಯಗಳನ್ನೂ ಸೇರಿಸಿ ಈ ಪುಸ್ತಕವನ್ನು ತಯಾರಿಸಲಾಗಿದೆ. ಕನ್ನಡ ನುಡಿ ಮತ್ತು ಮೂಲ ದ್ರಾವಿಡ ನುಡಿಗಳ ಕುರಿತಾಗಿ ಇತ್ತೀಚಿನವರೆಗೂ ನಡೆದಿರುವ ಸಂಶೋದನೆಗಳನ್ನು ಇದು ಒಳಗೊಂಡಿದೆ."
ಶಂಕರ ಬಟ್ಟರ ಮುಖ್ಯ ವಾದಗಳನ್ನು ಅವರದೇ ಬಾಶೆಯಲ್ಲಿ ಇಲ್ಲಿ ಓದಿ -
* ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಕನ್ನಡದಲ್ಲಿ ಬರೆಯುವಾಗ ಅವು ಸಂಸ್ಕ್ರುತದಲ್ಲಿ ಹೇಗಿವೆಯೋ ಹಾಗೆಯೇ ಬರೆಯುವ ಅವಶ್ಯಕತೆಯಿಲ್ಲ ; ಅವು ನಮ್ಮ ಉಚ್ಚಾರಣೆಯಲ್ಲಿ ಹೇಗಿವೆಯೋ ಹಾಗೆ ಬರೆದರೆ ಸಾಕು ಎಂಬ ನಿರ್‍ಣಯದ ಮೇಲೆ ಈ `ಹೊಸ ಬರಹ'ವನ್ನು ಯೋಜಿಸಲಾಗಿದೆ. ಬೇರೆ ಬಾಶೆಗಳಿಂದ ಎರವಲಾಗಿ ಬಂದ ಪದಗಳನ್ನು ನಾವು ನಮ್ಮ ಉಚ್ಚಾರಣೆಗನುಸಾರವಾಗಿ ಬರೆಯುತ್ತೇವಲ್ಲದೆ ಆ ಬಾಶೆಗಳಲ್ಲಿರುವ ಹಾಗೆ ಬರೆಯುವುದಿಲ್ಲ. ಇಂಗ್ಲಿಶ್‌ನಲ್ಲಿ ಎರಡು ವಕಾರಗಳಿವೆ, ಎರಡು ಶಕಾರಗಳಿವೆ, ಎರಡು ಸಕಾರಗಳಿವ. ಆದರೆ ಇವನ್ನೆಲ್ಲ ನಾವು ಒಂದೇ ರೀತಿ ಬರೆಯುತ್ತೇವೆ .ಹಳೆಗನ್ನಡದಲ್ಲೇನೇ ಳ ಮತ್ತು `ಇನ್ನೊಂದು ಳ ' (ಅದನ್ನಿಲ್ಲಿ ಮೂಡಿಸಲು ನನಗೆ ತಿಳಿಯುತ್ತಿಲ್ಲ!-ಚಂ)ಹಾಗೂ ರ ಮತ್ತು 'ಇನ್ನೊಂದು ರ 'ಗಳ ನಡುವೆ ವ್ಯತ್ಯಾಸವಿತ್ತು. ಆದರೆ ನಾವು ಅದನ್ನೂ ಹೊಸಗನ್ನಡದಲ್ಲಿ ಬಿಟ್ಟುಕೊಟ್ಟಿದ್ದೇವೆ. ಹೀಗಿರುವಾಗ ಹಳೆಗನ್ನಡದ ಸಮಯಕ್ಕಿಂತಲೂ ಹಿಂದೆ ಸಂಸ್ಕ್ರುತದಲ್ಲಿ ಇದ್ದಿರಬಹುದಾದ ವ್ಯತ್ಯಾಸಗಳನ್ನು ಸಂಸ್ಕ್ರುತಕ್ಕಿಂತ ತೀರ ಬೇರೆಯಾಗಿರುವ ಕನ್ನಡ ಬಾಶೆಯ ಬರಹಗಳಲ್ಲಿ ಇವತ್ತಿಗೂ ಉಳಿಸಿಕೊಳ್ಳಬೇಕೆಂದು ಹೇಳುವುದು ಯಾವ ರೀತಿಯಲ್ಲೂ ಸಮರ್ತನೀಯವಲ್ಲ. ಕನ್ನಡಿಗರ ಮಾತಿನಲ್ಲಿ ಸಂಸ್ಕ್ರುತ ಪದಗಳಲ್ಲಿ ಬರುವ ಮಹಾಪ್ರಾಣಾಕ್ಶರಗಳು ಅಲ್ಪಪ್ರಾಣಾಕ್ಶರಗಳಾಗಿ ಉಚ್ಚಾರವಾಗುತ್ತವೆ ; ಷಕಾರ ಶಕಾರವಾಗಿ, ಋಕಾರ ರು ಎಂಬುದಾಗಿ, ವಿಸರ್‍ಗ ಸ್ವರದ ಮೊದಲು ಹಕಾರವಾಗಿ ಮತ್ತು ವ್ಯಂಜನದ ಮೊದಲು ಆ ವ್ಯಂಜನದ ಒತ್ತಕ್ಶರವಾಗಿ , ಐ ಮತ್ತು ಔಗಳು ಅಯ್ ಮತ್ತು ಅವ್‌ಗಳಾಗಿ ಉಚ್ಚಾರವಾಗುತ್ತವೆ. ಹಾಗಾಗಿ ಸಂಸ್ಕ್ರುತ ಪದಗಳಲ್ಲಿ ಮಾತ್ರವೇ ಬರುವ ಈ ಎಲ್ಲಾ ಅಕ್ಷರಗಳನ್ನು (ಮತ್ತು ಕನ್ನಡ ಪದಗಳಲ್ಲೂ ಬರುವ ಐ, ಔಗಳನ್ನು) `ಹೊಸ ಬರಹ'ದಲ್ಲಿ ಅವುಗಳ ಉಚ್ಚಾರಣೆಗನುಸಾರವಾಗಿ ಬರೆಯಲಾಗುತ್ತದೆ.ಅಲ್ಲದೆ ಅವಶ್ಯವಿಲ್ಲವಾದ ಅರ್ಕ ಒತ್ತು () ಮತ್ತು ಕನ್ನಡ ಲಿಪಿಯಲ್ಲಿ ಸೊನ್ನೆ (ಅನುಸ್ವಾರ)ಯನ್ನು ಕೆಲವು ವಿಶಿಶ್ಟವಾದ ಸಂದರ್ಬಗಳಲ್ಲಿ ಮೂಗುಲಿ(ಅನುನಾಸಿಕ)ಗಳ ಬದಲು ಬಳಸುವ ಕಾರಣ, ಞ ಮತ್ತು ಙಗಳ ಅವಶ್ಯಕತೆಯಿಲ್ಲ.
*ಮೀಸಲಾತಿಯಿಂದಾಗಿ ಹೇಗೆ ಹೆಚ್ಚು ಹೆಚ್ಚು ಮಂದಿ ಕೆಳವರ್‍ಗದ ಜನರು ಸಮಾಜದಲ್ಲಿ ಮೇಲೆ ಬರುತ್ತಿದ್ದಾರೋ ಹಾಗೆಯೇ ಈ ಹೊಸ ಬರಹದ ಬಳಕೆಯಿಂದಾಗಿ ಹೆಚ್ಚು ಹೆಚ್ಚು ಮಂದಿ ಕೆಳವರ್‍ಗದ ಜನರು ಕನ್ನಡ ಬರಹವನ್ನು ಕೀಳರಿಮೆಯಿಲ್ಲದೆ ಬಳಸುವಂತಾಗಬಲ್ಲರೆಂಬುದರಲ್ಲಿ ಸಂಶಯವಿಲ್ಲ. *ಈ ಪುಸ್ತಕದಲ್ಲಿ ಹೆಚ್ಚಚ್ಚು ಕನ್ನಡದ್ದೇ ಆದ ಪದಗಳನ್ನು ಉಂಟುಮಾಡಿ ಬಳಸಿದ್ದೇನೆ . ತಡೆಯುಲಿ, ಮಡಚಿದ ತಡೆಯುಲಿ, ಉಜ್ಜುಲಿ, ಮುಂದಿನ ಸ್ವರ, ಮೇಲಿನ ಸ್ವರ, ಉದ್ದ ಸ್ವರ ಮೊದಲಾದ ಈ ಪದಗಳನ್ನು ಕಲಿಯುವುದು ಮತ್ತು ನೆನಪಿನಲ್ಲಿಟ್ಟುಕೊಳ್ಳುವುದು ಕನ್ನಡಿಗರಿಗೆ ಹೆಚ್ಚು ಸುಲಬವೆಂದು ತೋರುತ್ತದೆ. *ಕನ್ನಡ ಬರಹ ಒಳನಾಡಿನ ಒಳನುಡಿಯೊಂದರಿಂದ ಬೆಳೆದು ಬಂದಿದೆ. *ಕನ್ನಡವನ್ನು ಅದರೊಂದಿಗೆ `ನಂಟಸ್ತನ 'ವನ್ನು ತೋರಿಸುವ ತಮಿಳು,ಮಲಯಾಳ,ತೆಲುಗು,ತುಳು,ಗೋಂಡಿ,ಕೂಯಿ,ಕುಡುಕ್ ಮೊದಲಾದ ಬೇರೆ ಇಪ್ಪತ್ತು-ಇಪ್ಪತ್ತಯ್ದು ದ್ರಾವಿಡ ನುಡಿಗಳೊಂದಿಗೆ ಹೋಲಿಸಿ ನೋಡಲಾಗಿದೆ. ಈ ಎಲ್ಲಾ ನುಡಿಗಳೂ `ಮೂಲ ದ್ರಾವಿಡ' ಎಂಬ ಒಂದು ಮೂಲ ನುಡಿಯಿಂದ ಬೆಳೆದು ಬಂದಿರಬೇಕೆಂಬ ಕಲ್ಪನೆಯೇ ಈ ಪ್ರಯತ್ನಕ್ಕೆ ಅಡಿಗಲ್ಲಾಗಿದೆ. ಆದರೆ ಸಂಸ್ಕ್ರುತದೊಂದಿಗೆ ಕನ್ನಡಕ್ಕೆ ಯಾವ ರೀತಿಯ ನಂಟಸ್ತಿಕೆಯೂ ಇದೆಯೆಂದು ಹೇಳಲು ಸಾದ್ಯವಾಗುವುದಿಲ್ಲ. ಹಾಗೆ ಹೇಳಲು ಯಾವ ರೀತಿಯ ಆದಾರವೂ ದೊರಕದಿರುವುದೇ ಇದಕ್ಕೆ ಕಾರಣ.' (ಈ ಬಗ್ಗೆ ಆರ್. ಗಣೇಶರನ್ನು ಕೇಳೋಣವೇ?! - ಚಂ)
ವಿಸ್ತಾರವಾದ ಓದು - ಅಧ್ಯಯನವನ್ನು ಬೆನ್ನಿಗಿಟ್ಟುಕೊಂಡಿರುವ ಇವರ ವಾದ, ಒಂದೇ ಏಟಿಗೆ ತಳ್ಳಿಹಾಕುವಂಥದ್ದಲ್ಲ. ಹಾಗೆಂದು ಆ ಬಗ್ಗೆ ಎಲ್ಲೂ ವಿಶೇಷ ಆಸ್ಥೆಯೇ ಕಂಡುಬಾರದಿರುವುದು ಆಶ್ಚರ್ಯಕರ. ನಿಮಗೇನನಿಸ್ತಿದೆ ಹೇಳ್ತೀರಲ್ಲ?
4 comments:
ಮೊದಲು ನಿಮಗೆ ಏನನಿಸ್ತಿದೆ ಹೇಳಿರಲ್ಲ;)
ಬಗವಂತ... ಇದು ಬಾಳ ಕಶ್ಟ. ಈ ಸುಲಬ ಬಾಶೆ ಈಗ ಬೇಕಾದರೂ ಯಾಕೆ? ಶುದ್ದ ಕನ್ನಡವನ್ನ ಜರಡಿ ಹಿಡಿದು ತೆಗೆಯೋದದರೂ ಹೇಗೆ?
ಕಶ್ಟ, ಬಗವಂತ, ಶುದ್ದ.... ಇವಕ್ಕೆಲ್ಲ ಕನ್ನಡ ಪದಗಳು ಹೊಳೀತಲೇ ಇಲ್ಲ.
ನನಗಂತೂ ಈ ಸುಲಭ ಭಾಷೆಯ ಸಹವಾಸವೇ ಬೇಡ ಅನಿಸ್ತಿದೆ.
-ಚೇತನಾ.
ಶಂಕರ ಭಟ್ಟರ 'ಸುಲಬ ಕನ್ನಡ'ದ ಬಗೆಗೆ http://sallaap.blogspot.comದಲ್ಲಿ ಹೊಡೆದಾಟ ನಡೆದಿದೆ. ನೋಡಿ,ಮನರಂಜನೆಯಾದರೂ ಆಗಬಹುದು.
hai sudhanva,
shankara battara basheya bagegina pustaka mattu battara parichaya madikottadakke thanx.
sudhakara hampi
Post a Comment