May 05, 2008

ಬೆಳ್ಳೇಕೆರೆಯ ಹಳ್ಳಿ ಥೇಟರ್ -ಅಂಕ ೪

ಸಕಲೇಶಪುರದಿಂದ ಪ್ರಸಾದ್ ರಕ್ಷಿದಿ ಬರೆಯುತ್ತಾರೆ
ಇಂದಿರಾಗಾಂಧಿಯ ಸಮಾಜವಾದಿ ಘೋಷಣೆ ದೇಶಾದ್ಯಂತ ಮೊಳಗುತ್ತಿತ್ತು. ಗೋಪಾಲಕೃಷ್ಣ ಅಡಿಗರು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಪ್ರಿನ್ಸಿಪಾಲ್‌ಗಿರಿಗೆ ರಾಜೀನಾಮೆ ನೀಡಿ ಜನಸಂಘದ ಪರವಾಗಿ ಎಲೆಕ್ಷನ್‌ಗೆ ನಿಂತಿದ್ದರು. ಅವರು ಬೆಂಗಳೂರಿನಿಂದ ಲೋಕಸಭೆಗೆ ಸ್ಪರ್ಧಿಸಿದ್ದರು. ಸಾಹಿತಿಗಳನೇಕರು ಅವರನ್ನು ಬೆಂಬಲಿಸಿದ್ದರು. ನಮ್ಮ ಕಾಲೇಜಿನಿಂದಲೂ ಅನೇಕ ಹುಡುಗರು ಅವರ ಪರ ಪ್ರಚಾರಕ್ಕೆ ಬೆಂಗಳೂರಿಗೆ ಹೋಗಿದ್ದರು. ಅಡಿಗರು ಕೆಂಗಲ್ ಹನುಮಂತಯ್ಯನವರ ವಿರುದ್ಧ ಸೋತರು. ಇಂದಿರಾ ಬಣ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದಿದ್ದರೂ ಅಲಹಾಬಾದ್ ಹೈಕೋರ್ಟ್ ಇಂದಿರಾಗಾಂಧಿ ವಿರುದ್ಧ ತೀರ್ಪು ನೀಡಿತ್ತು. ಆ ತೀರ್ಪಿನಿಂದ ವ್ಯಗ್ರರಾದ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿ ದೇಶವನ್ನೇ ಸೆರೆಮನೆ ಮಾಡಿದ್ದರು. ಜೆ.ಪಿ. ಸಂಪೂರ್ಣ ಕ್ರಾಂತಿಗೆ ಕರೆ ಕೊಟ್ಟಿದ್ದರು.

ಆ ವೇಳೆಗೆ ಓದು ಮುಗಿಸಿ ನಾನು ಊರಿಗೆ ಬಂದೆ. ಮನೆಯ ಪರಿಸ್ಥಿತಿಯಿಂದಾಗಿ ನನ್ನ ದುಡಿಮೆಯು ಅನಿವಾರ್ಯವಾಗಿತ್ತು. ಅಪ್ಪ ಕೆಲಸ ಮಾಡುತ್ತಿದ್ದ ಹಾರ್ಲೆ ಗ್ರೂಪ್ ಆಫ್ ಎಸ್ಟೇಟ್‌ನಲ್ಲಿ ನಾನೂ ಕೆಲಸಕ್ಕೆ ಸೇರಿದೆ. ತೋಟದಲ್ಲಿದ್ದ ಡೈರಿ ಫಾರಂನ ಉಸ್ತುವಾರಿ ನನ್ನ ಉದ್ಯೋಗ. ಆ ಸಮಯದಲ್ಲಿ ನಾನು ಬರೆದ ಕತೆಯೊಂದು 'ಸುಧಾ"ದಲ್ಲಿ ಪ್ರಕಟವಾಗಿತ್ತು. ಹಾಗಾಗಿ ಊರಿನ ಸುತ್ತಮುತ್ತ ಕೆಲವರಲ್ಲಿ 'ರೈಟ್ರು ಮಗ ಕತೆ ಬರೀತಾನಂತೆ" ಎನ್ನುವ ಸುದ್ದಿ ಹಬ್ಬಿತ್ತು. ಆ ಕತೆಯಲ್ಲಿ ನಮ್ಮೂರಿನ ಕೆಲವರ ಚಿತ್ರಣವಿತ್ತು. ಅದನ್ನು ಓದಿದ ಕೆಲವರು, ಅಲ್ಲಲ್ಲಿ ಈ ಬಗ್ಗೆ ಪ್ರಚಾರ ಮಾಡಿದ್ದರಿಂದ ಊರವರಲ್ಲಿ ನನ್ನ ಬಗ್ಗೆ ಕುತೂಹಲ ಮೂಡಿತ್ತಾದರೂ, ಆ ಕಾಲದಲ್ಲಿ ನಮ್ಮೂರಿನಲ್ಲಿ ಕಥೆ ಬರೆಯುವವರೆಲ್ಲ ಕೆಲಸಕ್ಕೆ ಬಾರದ ನಾಲಾಯಕ ಜನರೆಂಬ ಧೃಡವಾದ ನಂಬಿಕೆಯೇ ಹೆಚ್ಚಿನವರಲ್ಲಿ ಇದ್ದುದರಿಂದ " ರೈಟ್ರು ಕಷ್ಟಪಟ್ಟು ಮಗನಿಗೆ ವಿದ್ಯೆ ಕಲಿಸಿದರೆ ಇವನು ಹೀಗಾದನಲ್ಲ' ಎಂದು ನಮ್ಮಪ್ಪನ ಬಗ್ಗೆ ಮರುಕ ತೋರಿದರು!

ಡೈರಿ ಕೆಲಸಗಾರರಾದ ಕೃಷ್ಣ, ಶಿವಪ್ಪ, ಸುಂದರ ಇತ್ಯಾದಿ ಎಲ್ಲರೂ ಹುಡುಗರೇ ಅಲ್ಲದೇ ತೋಟದ ಕೆಲಸಗಾರರಲ್ಲೂ ಅನೇಕ ಹುಡುಗರಿದ್ದರು. ವಿಶ್ವನಾಥ, ಶೇಷಪ್ಪ, ಚೆನ್ನವೀರ, ಮರಗೆಲಸ ಮಾಡುತ್ತಿದ್ದ ಉಗ್ಗಪ್ಪ. ಇವರು ಯಾರೂ ಶಾಲೆಗೇ ಹೋದವರಲ್ಲ. ಎಲ್ಲೋ ಕೆಲವರು ಕಾಟಾಚಾರಕ್ಕೆ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದರು. ಇಂಥವರಲ್ಲಿ ಕೃಷ್ಣಪ್ಪ-ವಿಜಯ ಮುಂತಾದ ಎಳೆಯರಿದ್ದರು. ತುರ್ತು ಪರಿಸ್ಥಿತಿಯ ವಿರುದ್ಧ ದೇಶದಾದ್ಯಂತ ವಿರೋಧ ವ್ಯಕ್ತವಾಗುತ್ತಿತ್ತು. ಎಡ-ಬಲ ಪಂಥೀಯರೆಲ್ಲ ಒಟ್ಟಾಗಿ ಇಂದಿರಾಗಾಂಧಿಯನ್ನು ವಿರೋಧಿಸುತ್ತಿದ್ದರು. ನಾವು ಕೆಲಸ ಮಾಡುತ್ತಿದ್ದ ಎಸ್ಟೇಟ್ ಮಾಲೀಕರಾದ ಎನ್.ಕೆ.ಗಣಪಯ್ಯ (ಇವರು ಸ್ವತಂತ್ರ ಪಾರ್ಟಿಯ ಉಪಾಧ್ಯಕ್ಷರಾಗಿದ್ದರು, ಮುಂದೆ ಚರಣ್‌ಸಿಂಗರ ನಿಕಟವರ್ತಿಯಾದರು.) ಇಂದಿರಾಗಾಂಧಿಯನ್ನು ವಿರೋಧಿಸಿ ಜೈಲಿಗೆ ಹೋದರು. ಸಕಲೇಶಪುರದಲ್ಲಿ ಪ್ರತಿವಾರವೂ ಪ್ರತಿಭಟನೆಗಳು ನಡೆಯುತ್ತಿದ್ದವು. ನನ್ನ ಬಾಲ್ಯದ ಹಾನುಬಾಳು ಶಾಲೆಯ ಸಹಪಾಠಿಗಳನೇಕರು ಜೈಲು ಸೇರಿದ್ದರು. ಯುವಕರ ಪೈಕಿ ಸತ್ಯನಾರಾಯಣ ಗುಪ್ತ ಮತ್ತು ಎಚ್. ಎಂ.ವಿಶ್ವನಾಥ್ ಜೈಲಿನಲ್ಲಿ ತೀವ್ರ ಹಿಂಸೆಗೊಳಗಾದರು. (ವಿಶ್ವನಾಥ್ ಈಗ ಸಕಲೇಶಪುರದ ಶಾಸಕರಾಗಿದ್ದಾರೆ.) ನಮ್ಮ ಉಗ್ಗಪ್ಪನೂ ಪ್ರತಿಭಟನೆ ಮಾಡಿ ಜೈಲು ಸೇರಿದ! ಉಗ್ಗಪ್ಪ ಎರಡು ತಿಂಗಳ ಕಾಲ ಜೈಲಿನಲ್ಲಿದ್ದ. ಅವನ ದುಡಿಮೆ ಇಲ್ಲದೆ ಅವನ ಮನೆಯವರಿಗೆ ತುಂಬಾ ತೊಂದರೆಯಾಯಿತು. ಉಗ್ಗಪ್ಪನಿಗಾಗ ಹದಿನೆಂಟು ವರ್ಷ ವಯಸ್ಸಾಗಿದ್ದಿರಬಹುದು. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದ. ಇವನ ತಾಯಿ ರಾಮಕ್ಕ, ಇವನ ಅಣ್ಣ ಪಾಪಣ್ಣ ಇವರೆಲ್ಲ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಇವರೊಂದಿಗೆ ಗಂಡನನ್ನು ಕಳೆದುಕೊಂಡಿದ್ದ ಇವನ ದೊಡ್ಡಮ್ಮ. ಅಲ್ಲದೆ ತೀರಿಕೊಂಡಿದ್ದ ಇವನ ಚಿಕ್ಕಮ್ಮನ ಒಂದಿಬ್ಬರು ಮಕ್ಕಳು. ಎಲ್ಲರೂ ಇವನೊಂದಿಗೇ ಇದ್ದರು. ಉಗ್ಗಪ್ಪ ಚಿಕ್ಕಂದಿನಲ್ಲಿ ದನ ಕಾಯುತ್ತಾ ಬೆಳೆದವನು. ನಂತರ ಮರಗೆಲಸ ಕಲಿತುಕೊಂಡಿದ್ದು ಸ್ವಂತ ಕೆಲಸ ಮಾಡುತ್ತಿದ್ದ. ಈತನ ತಮ್ಮ ಗುಡ್ಡಪ್ಪನೊಬ್ಬ ಮಾತ್ರ ದೂರದ ಕುಂಬರಡಿ ಶಾಲೆಗೆ ಹೋಗುತ್ತಿದ್ದ. ತೋಟದ ಜನರೆಲ್ಲಾ-ಉಗ್ಗಪ್ಪನಿಗೆ ಬೇಡದ ಕೆಲಸವೆಂದು ಬಯ್ಯತೊಡಗಿದರು. ಇದು ನಮ್ಮಂಥವರಿಗೆ ಹೇಳಿದ ಕೆಲಸವಲ್ಲ ಎಂದು ಹೇಳತೊಡಗಿದರು.ಕರ್ನಾಟಕದಲ್ಲಿ ದೇವರಾಜ ಅರಸರ ಆಡಳಿತ-ಹಿಂದುಳಿದವರಲ್ಲಿ-ಕೂಲಿಕಾರ್ಮಿಕರಲ್ಲಿ-ದಲಿತರಲ್ಲಿ ಹೊಸ ಆಸೆ ಭರವಸೆಗಳನ್ನು ಹುಟ್ಟ್ಟು ಹಾಕಿದ್ದರಿಂದ ಕೆಳವರ್ಗದ ಜನ ಸಾರಾಸಗಟಾಗಿ ಇಂದಿರಾಗಾಂಧಿ ಬೆಂಬಲಕ್ಕೆ ನಿಂತು ಬಿಟ್ಟಿದ್ದರು!

ತೋಟ ಕಾರ್ಮಿಕರ ವರ್ಗವಂತೂ ನೂರಕ್ಕೆ ನೂರು ಇಂದಿರಾಗಾಂಧಿ ಪರವೇ ಇತ್ತು. ನನಗೆ ಈಗಾಗಲೇ ಕೆಲವು ಸಂಘಟನೆಗಳ ಸಂಪರ್ಕ ಇದ್ದುದರಿಂದ ಕರಪತ್ರ ಹಂಚುವುದು, ಕೆಲವು ಭೂಗತ ಪತ್ರಿಕೆಗಳಿಗೆ ವರದಿ ಮಾಡುವುದು ಇತ್ಯಾದಿ ಮಾಡುತ್ತಿದ್ದೆ. ಪ್ರತಿದಿನ ಕೆಲಸ ಮುಗಿದ ನಂತರ ಸಂಜೆ ಸಾಮಾನ್ಯವಾಗಿ ಹುಡುಗರೆಲ್ಲ ಎಸ್ಟೇಟಿನ ಕಾಫಿ ಕಣದಲ್ಲಿ ಸೇರುತ್ತಿದ್ದೆವು. ಕಾಫಿ ಕಣವೂ ತುಂಬಾ ವಿಶಾಲವಾಗಿದ್ದು ಪಕ್ಕದಲ್ಲಿ ಸಾಕಷ್ಟು ಖಾಲಿ ಬಯಲು ಕೂಡಾ ಇತ್ತು. ಅಲ್ಲಿ ಯಾವುದಾದರೂ ಆಟ ಆಡುವುದು, ಬಾರದ ಕಲ್ಲೆಸೆಯುವುದು. ಕೆಲವೊಮ್ಮೆ ಫುಟ್‌ಬಾಲ್ ಆಡುವುದು ಅಥವಾ ಆವಾಗ ನಮ್ಮಲ್ಲಿ ಯಾರಾದರು ನೋಡಿದ ಸಿನಿಮಾದ ಕತೆಯನ್ನು ಉಳಿದವರಿಗೆ ರಸವತ್ತಾಗಿ ವರ್ಣಿಸುವುದು ಇತ್ಯಾದಿ ಮಾಡುತ್ತಿದ್ದೆವು. ಸಾಮಾನ್ಯವಾಗಿ ನಾನು ಯಾವಾಗಲೂ ರಾಜಕೀಯ ವಿಷಯಗಳನ್ನು ಮಾತಾಡುತ್ತಿದ್ದೆ. ಇದೇ ಸಮಯಕ್ಕೆ ಉಗ್ಗಪ್ಪನೂ ಜೈಲಿನಿಂದ ಬಿಡುಗಡೆಯಾಗಿ ಬಂದ. ನಾನಿದನ್ನು ಬರೆಯುತ್ತಿರುವ ಇಷ್ಟು ವರ್ಷಗಳ ನಂತರ ಈಗಲೂ ಇವನು ಮರಕೆಲಸವನ್ನು ಮಾಡುತ್ತಿದ್ದಾನೆ ಮತ್ತು ನಮ್ಮ ತಂಡದೊಂದಿಗೇ ಇದ್ದಾನೆ. ಉಗ್ಗಪ್ಪ ಶಾಲೆಯ ಮುಖವನ್ನೇ ನೋಡದಿದ್ದರೂ ಆರ್.ಎಸ್.ಎಸ್. ಶಾಖೆಗಳಿಗೆ ಹೋಗಿದ್ದುದರಿಂದ ಅನೇಕ ವಿಷಯಗಳನ್ನು ತಿಳಿದುಕೊಂಡಿದ್ದ. ಮತ್ತು ಸ್ವಂತವಾಗಿ ಓದಿ ಬರೆಯುವುದನ್ನು ಕಲಿತುಕೊಂಡಿದ್ದ. ಕೆಲವು ಸಾರಿ ನನಗೂ ಅವನಿಗೂ ಭಿನ್ನಾಭಿಪ್ರಾಯದಿಂದಾಗಿ ಜಗಳಗಳು ನಡೆಯುತ್ತಿದ್ದವು. ಆದರೆ ಇಂದಿರಾ ವಿರೋಧದಲ್ಲಿ ನಾವಿಬ್ಬರೂ ಜೊತೆಗಾರರಾಗಿದ್ದೆವು. ನಮ್ಮಿಬ್ಬರನ್ನು ಬಿಟ್ಟರೆ ತೋಟದ ಇಡೀ ಕಾರ್ಮಿಕವರ್ಗ ಇಂದಿರಾ ಬೆಂಬಲಿಗರಾಗಿದ್ದರು.ನಾನು ವಿದ್ಯಾಭ್ಯಾಸ ಮುಗಿಸಿ ಊರಿಗೆ ಬರುವ ವೇಳೆಗೆ ಲಕ್ಷ್ಮಯ್ಯನಿಗೆ ಮದುವೆಯಾಗಿ ಅವನು ಮೈಸೂರು ಜಿಲ್ಲೆಯ ತನ್ನ ಊರಿಗೆ ವಾಪಸ್ ಹೋಗಿದ್ದ. ಅವನ ಕುಟುಂಬದ ಕೆಲವು ಸದಸ್ಯರು ಕಾರಣಾಂತರದಿಂದ ತೋಟವನ್ನು ಬಿಟ್ಟು ಎರಡು ಕಿ.ಮೀ ದೂರದ ಬೆಳ್ಳೆಕೆರೆಗೆ ಹೋಗಿ ನೆಲೆಸಿದ್ದರು.೧೯೭೭ರ ಲೋಕಸಭಾ ಚುನಾವಣೆ ಬಂತು. ಜೈಲಿನಲ್ಲಿದ್ದವರೆಲ್ಲಾ ಬಿಡುಗಡೆಯಾಗಿ ಬಂದಿದ್ದರು. ಕಾಂಗ್ರೆಸ್ ವಿರೋಧಿಯಾಗಿದ್ದ ಉಗ್ಗಪ್ಪನಿಗೆ ಓಟೇ ಇರಲಿಲ್ಲ.(ಆಗ ಮತದಾನದ ವಯೋಮಿತಿ ೨೧ ವರ್ಷ ಇತ್ತು.) ಉತ್ತರ ಭಾರತದಲ್ಲಿ ಸೋತರೂ ಕರ್ನಾಟಕದಲ್ಲಿ ಕಾಂಗ್ರೆಸ್ ಕೋಟೆ ಭದ್ರವಾಗಿತ್ತು. ನಾನು ಮತ್ತು ಉಗ್ಗಪ್ಪ ನಮ್ಮ ಜೊತೆಯವರಲ್ಲಿ ಹಾಸ್ಯದ ವಸ್ತುವಾಗಿದ್ದೆವು. ಆದರೆ ಇಂದಿರಾಗಾಂಧಿ ಸೋತಿದ್ದರಿಂದ ಕೆಳವರ್ಗವೆಲ್ಲ ಆತಂಕಕ್ಕೊಳಗಾಗಿತ್ತು.ನಮ್ಮ ಕಾಫಿಕಣದ ಕೂಟದ ಕೂಟ ಹಾಗೇ ಮುಂದುವರಿದಿತ್ತು. ಪ್ರತಿದಿನವೂ ಬೇರೆಬೇರೆ ವಿಷಯಗಳ ಜೊತೆಯಲ್ಲಿ ರಾಜಕೀಯದ ಬಗ್ಗೆ ಚರ್ಚೆಯಂತೂ ಇದ್ದೇ ಇರುತ್ತಿತ್ತು.

ನಮ್ಮೊಂದಿಗೆ ತೋಟದಲ್ಲಿ ಕೆಲಸಮಾಡುತ್ತಿದ್ದವನೊಬ್ಬನಿಗೆ ಪ್ರತಿದಿನವೂ ಇವುಗಳನ್ನೆಲ್ಲ ಕೇಳಿ ಕೇಳಿ ಸುದ್ದಿ ತಿಳಿಯುವ ಹುಚ್ಚು ಹತ್ತಿ ಬಿಟ್ಟಿತ್ತು. ಯಾರಲ್ಲಿಯೋ ಸಾಲ ಮಾಡಿ ಒಂದು ಸೆಕೆಂಡ್‌ಹ್ಯಾಂಡ್ ರೇಡಿಯೋವನ್ನು ಕೊಂಡು ತಂದ! ಆ ಕಾಲದಲ್ಲಿ , ಊರಿನ ಶಾನುಭೋಗರಾಗಿದ್ದ ಬೆಳ್ಳೇಕೆರೆಯ ಅನಂತ ಸುಬ್ಬರಾಯರ ಮನೆಯೊಂದನ್ನು ಬಿಟ್ಟು, ಇಡೀ ಊರಿನಲ್ಲೇ ಯಾರ ಮನೆಯಲ್ಲೂ ರೇಡಿಯೋ ಇರಲಿಲ್ಲವಾದ್ದರಿಂದ, ತಾನು ಲೈಸೆನ್ಸ್ ಹಣಕಟ್ಟಿ ರೇಡಿಯೋ ತಂದದ್ದು ಅವನಿಗೆ ದೊಡ್ಡದೇನೋ ಸಾಧಿಸಿದಂತಹ ಹೆಮ್ಮೆಯ ವಿಷಯವಾಗಿತ್ತು। ಸಂತೆಗೆ ಹೋಗುವಾಗಲೂ ಅದನ್ನು ಹೆಗಲಿಗೇರಿಸಿಕೊಳ್ಳುತ್ತಿದ್ದ. ಪ್ರತಿ ದಿನ ಸಂಜೆ ನಮ್ಮ ಕಾಫಿಕಣದ ಕೂಟಕ್ಕೂ ಅದನ್ನು ತರುತ್ತಿದ್ದ. ಆದರೆ ಯಾರಿಗೂ ಅದನ್ನು ಮುಟ್ಟಲು ಬಿಡುತ್ತಿರಲಿಲ್ಲ. ಪ್ರತಿದಿನ ರೇಡಿಯೋದಲ್ಲಿ ಬರುತ್ತಿದ್ದ ವಾರ್ತೆಗಳನ್ನು ತಪ್ಪದೇ ಕೇಳಿಕೊಂಡು, ಅದಕ್ಕೆ ಕೈಕಾಲು- ತಲೆ-ಬಾಲ ಎಲ್ಲ ಸೇರಿಸಿ ವರ್ಣನೆ ಮಾಡಿ ಹೇಳುತ್ತಿದ್ದ. ಯಾರಾದರೂ ಅದು ಹಾಗಲ್ಲವೆಂದು ವಿವರಿಸಲು ಹೋದರೆ "ನೀವು ಏನಾರ ಹೇಳಿ, ನನ್ನ ರೇಡಿಯೋದಲ್ಲಿ ನಾನು ಕೇಳಿದ್ದೀನಿ. ರೇಡಿಯೋ ಯಾಕೆ ಸುಳ್ಳು ಹೇಳುತ್ತೆ?" ಎನ್ನುತ್ತಿದ್ದ!.ಹುಡುಗರೆಲ್ಲ ಅವನಿಗೆ ಹಾಡಿನಪೆಟ್ಟಿಗೆ ಎಂದು ಅಡ್ಡ ಹೆಸರಿಟ್ಟಿದ್ದರು. ಈಗಂತೂ ಕಣದಲ್ಲಿ ಕತ್ತಲಾಗುವವರೆಗೂ ಹುಡುಗರೆಲ್ಲ ಚಿತ್ರಗೀತೆ ಕೇಳಲು ಹಾಡಿನಪೆಟ್ಟಿಗೆ ಸುತ್ತ ಸೇರುತ್ತಿದ್ದರು.ಒಂದು ಸಂಜೆ ಕಣದಲ್ಲಿ ಕೂಟ ಸೇರಿದಾಗ ಚೆನ್ನವೀರ ಚಿತ್ರಗೀತೆ ಪುಸ್ತಕವೊಂದನ್ನು ಕೈಯಲ್ಲಿ ಹಿಡಿದಿದ್ದ. ಅವನಿಗೆ ಓದಲು ಬರುತ್ತಿರಲಿಲ್ಲ. ರೇಡಿಯೋದಲ್ಲಿ ಬರುತ್ತಿದ್ದ ಹಾಡನ್ನು ಕೇಳುತ್ತಾ ಪುಸ್ತಕ ತಿರುಗಿಸಿ ನೋಡುತ್ತಿದ್ದ. ಆಗ ಅವನಿಗೆ ೧೩-೧೪ ವರ್ಷ ವಯಸ್ಸಿರಬೇಕು. ಆಗಷ್ಟೇ ತೋಟದ ಕೆಲಸಕ್ಕೆ ಸೇರಿಕೊಂಡಿದ್ದ.' ಪುಸ್ತಕ ನೋಡಿ ಏನು ಮಾಡುತ್ತಿಯೋ ' ಎಂದೆ. ' ಸುಮ್ಮನೆ ನೋಡ್ತೀನಿ' ' ಓದೋದು ಕಲಿ ಸುಮ್ಮನೆ ನೋಡಿ ಏನ್ಮಾಡ್ತಿಯಾ' ಚೆನ್ನವೀರ ಒಂದೆರಡು ಕ್ಷಣ ನನ್ನನ್ನೇ ನೋಡಿ ಒಂದು ರೀತಿಯ ನಿರ್ಧಾರದ ಧ್ವನಿಯಲ್ಲಿ ಹೇಳಿದ "ನೀವು ಹೇಳಿ ಕೊಟ್ರೆ ಕಲಿತೀನಿ "

3 comments:

Anonymous,  May 6, 2008 at 9:33 PM  

A very good write-up.
Great to read this on a blog

Thanks. Sham

Anonymous,  May 16, 2008 at 3:02 AM  

I never asked u to be more sentimental sud. Edenu Ganesh cinemana? mungaru malena athava aramanena? ella Shakespeare na tragedy dramana? i asked u to b more expressive. dats it. thanks helidakke tumba tumba thanks

Anonymous,  May 16, 2008 at 10:27 PM  

ಪ್ರಸಾದ್ ಮತ್ತು ಸುಧನ್ವ,
ನಾನು ಹುಟ್ಟುವುದಕ್ಕು ಮುನ್ನ ನಡೆದ ಈ ಎಮರ್ಜೆನ್ಸಿ ಬಗ್ಗೆ ಸುಮಾರು ರಾಜಕಾರಣಿಗಳ ಅನುಭವಗಳನ್ನ ಓದಿದ್ದೆನೆ ಹೊರತು ಒಬ್ಬ ಸಾಮಾನ್ಯ ಪ್ರಜೆಯ ಸುತ್ತಮುತ್ತಲ ಜೀವನ ಇದರಿಂದ ಪ್ರಭಾವಿತವಾದದ್ದು, ಆ ಸಮಯದ ಅವರ ರಾಜಕೀಯ ಒಲವುಗಳು, ಭಿನ್ನಾಭಿಪ್ರಾಯಗಳು..ಇದಲ್ಲದರ ಬಗ್ಗೆ ಎಲ್ಲಿಯೂ ಓದೇ ಇಲ್ಲ. ಪ್ರಸಾದರ ಬರಹ ಯಾವುದೇ ಮಸಾಲೆ, ಕಲರುಗಳ ಸಹಾಯವಿಲ್ಲದೆ ಇದೆಲ್ಲವನ್ನ ಸ್ವಾರಸ್ಯಕರವಾಗಿ ತಿಳಿಸುತ್ತಿದೆ. ಮುಂಚೆಯೂ ಇದನ್ನ ಹೇಳಿದೆನೊ ಇಲ್ಲವೊ,ಈಗ ಹೇಳುತ್ತೇನೆ - ಯಾರದೊ ಮನೆಯ ಜಗಲಿಯ ಮೇಲೆ ಕೂತು ಹರಟೆ ಹೊಡೆಯುತ್ತಿರುವ ಅನುಭವ.
ಟೀನಾ.

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP