ಸನ್ ಆಫ್ . . . . . .
ಸುತ್ತ ನೆರೆದಿದ್ದ ಹಸ್ತಿನಾವತಿಯ ಸಮಸ್ತರ ಮಧ್ಯೆ, `ನೀನು ಯಾರ ಮಗ ?' ಎಂಬ ಕೃಪಾಚಾರ್ಯರ ಪ್ರಶ್ನೆಯು, ಕರ್ಣನ ಕಿವಿಗಳಿಗೆ ಕಠೋರವಾಗಿಯೇ ಕೇಳಿತು। ಅವನ ಪರವಾಗಿ ಉತ್ತರಿಸುವದಕ್ಕೆ ಅಲ್ಲಿ ಯಾರೂ ಇರಲಿಲ್ಲ। ತಲೆತಗ್ಗಿಸಿದ, ಹಿಂಜರಿದ, ಮುಜುಗರದ ಮುದ್ದೆಯಾದ. `ನೀವು ದೇವತೆಗಳಿಂದಲೇ ಹುಟ್ಟಿದ ಪಾಂಡವರೇ?' ಅಂತ ಯಾರೊಬ್ಬನೂ ಕೇಳಲಿಲ್ಲ. ಅವರ ಜತೆ ಋಷಿಗಳಿದ್ದರು, ಕುಂತಿಯಿದ್ದಳು. ಕಾಡಿನಿಂದ ಬಂದವರನ್ನು ಸೇರಿಸಿಕೊಂಡಿತು ಹಸ್ತಿನಾವತಿ . ದೊಡ್ಡವರ ಮಕ್ಕಳಾದರೆ ತಲೆಯೆತ್ತಿ ಎದೆಯುಬ್ಬಿಸಿ ನಡೆವ ಚೆಂದವೇ ಬೇರೆ. ಅಪ್ಪನಿಲ್ಲದ ಮಕ್ಕಳ ಸಂಕಟ ಅನುಭವಿಸಿದವರೇ ಬಲ್ಲರು.
ದ್ವಾಪರಯುಗದಲ್ಲಿ ಮೆರೆದ ಚಂದ್ರ ವಂಶಜರ ಪಟ್ಟಿ ಎಷ್ಟುದ್ದ ಇದೆಯೆಂದರೆ - ಚಂದ್ರನಿಂದ ಜನಮೇಜಯನವರೆಗೆ ಚಂದ್ರವಂಶದ ಸುಮಾರು ಇಪ್ಪತ್ತು ತಲೆಮಾರುಗಳ ಹೆಸರು ಹೇಳುತ್ತದೆ ಮಹಾಭಾರತ. ಮಹಾಭಾರತದಲ್ಲಿ ಒಂದು ಕುಟುಂಬದ ಕತೆಯು ಮಾನವ ಜನಾಂಗದ ಕತೆಯಾಗಿ ನಮ್ಮನ್ನು ರೋಮಾಂಚನಗೊಳಿಸಿದಂತೆ, ಅಮೆರಿಕದ ಅಲೆಕ್ಸ್ ಹೇಲಿಯು `ರೂಟ್ಸ್' ಕಾದಂಬರಿಯಲ್ಲಿ ಹೇಳಿದ ನಿಜದ ಕತೆಯೂ ಮತ್ತೊಂದು ಮಹಾಭಾರತದಂತಿದೆ. (ಅದನ್ನು `ತಲೆಮಾರು' ಹೆಸರಿನಲ್ಲಿ ಬಂಜಗೆರೆ ಜಯಪ್ರಕಾಶ್ ಕನ್ನಡಕ್ಕೆ ತಂದಿದ್ದಾರೆ.) ಹೇಲಿಯ ಅಜ್ಜನ-ಅಜ್ಜನ-ಅಜ್ಜನಾದ ಕುಂಟಾಕಿಂಟೆ ಎಂಬ ಆಫ್ರಿಕಾದ ಕರಿಯ, ೧೭೬೭ರಲ್ಲಿ ಅಮೆರಿಕಕ್ಕೆ ಗುಲಾಮನಾಗಿ ಸಾಗಿಸಲ್ಪಟ್ಟಿದ್ದ. ಆ ಕುಂಟಾಕಿಂಟೆಯಿಂದ ತನ್ನವರೆಗಿನ ವಂಶದ ನಿಜಕತೆಯನ್ನು ೧೯೬೫ರಿಂದ ಹನ್ನೆರಡು ವರ್ಷಗಳ ಕಾಲ ಹುಡುಕಿ ಅಧ್ಯಯನ ಮಾಡಿದ ಅಲೆಕ್ಸ್ ಹೇಲಿಯು ಅದಕ್ಕೆ ಕಾದಂಬರಿಯ ರೂಪ ನೀಡಿದ. ಕರಿಯರ ಮೇಲೆ ಬಿಳಿಯರು ಮಾಡಿದ ದೌರ್ಜನ್ಯಗಳಿಗೆ ಜೀವಂತ ಸಾಕ್ಷಿಯಂತಿರುವ ಈ ಕಾದಂಬರಿ ಜಗತ್ತಿನ ೩೭ ಭಾಷೆಗಳಿಗೆ ಅನುವಾದಗೊಂಡಿದೆ. ಅದೆಷ್ಟೊ ಜನ ಕರಿಯರು ಅದನ್ನು ಬೈಬಲ್ಲಿನಂತೆ ಮನೆಯಲ್ಲಿಟ್ಟುಕೊಂಡಿದ್ದಾರೆ.
ಮೂರ್‍ನಾಲ್ಕು ವರ್ಷಗಳ ಹಿಂದೆ ಓದಿದ್ದ ಆ ಪುಸ್ತಕ ಮೊನ್ನೆಮೊನ್ನೆ ಮತ್ತೆ ಕೈಗೆ ಬಂತು. ಆಗ ಮನೆಯಲ್ಲಿರುವ ಕಬ್ಬಿಣದ ಕರೀ ಪೆಟ್ಟಿಗೆಯೊಂದರಲ್ಲಿ ದಪ್ಪ ಬೈಂಡಿನ ಮೇಲೆ `ಸಂತಾನ ನಕ್ಷೆ' ಅಂತ ಬರೆದಿರುವ ಪುಸ್ತಕದ ನೆನಪಾಯಿತು. ಅಲೆಕ್ಸ್ ಹೇಲಿಯಿಂದ ಏಳು ತಲೆಮಾರುಗಳ ಹಿಂದೆ ಇದ್ದವನು ಕೈರಬಾ ಕುಂಟಾಕಿಂಟೆ. ಅದನ್ನು ಶೋಧಿಸಲು ಅವನಿಗೆ ೧೨ ವರ್ಷಗಳ ಅಧ್ಯಯನ-ತಿರುಗಾಟ ಬೇಕಾಯಿತು. ನನಗೆಷ್ಟು ಸಮಯ ಬೇಕಾದೀತು? ತಕ್ಷಣ ಜಾಲಾಡಿದೆ. ಅದರಲ್ಲಿ ಕ್ಷಣಮಾತ್ರದಲ್ಲಿ ಸಿಕ್ಕ ನಮ್ಮ ತಂದೆ ಮುಖಾಂತರದ ಹಿರಿ ತಲೆಯ ವಂಶಾವಳಿಯನ್ನು ಸುಮ್ಮನೆ ನಿಮ್ಮ ಮುಂದಿಡುತ್ತಿದ್ದೇನೆ. ಸುಧನ್ವಾ ದೇರಾಜೆ-ಸತ್ಯಮೂರ್ತಿ ದೇರಾಜೆ-ದೇರಾಜೆ ಎಂ.ಕೃಷ್ಣಯ್ಯ-ಎಂ.ಗಣಪಯ್ಯ-ಮಂಗಲ್ಪಾಡಿ ಕೃಷ್ಣಯ್ಯ-ಅಜ್ಜನಗದ್ದೆ ಸುಬ್ರಾಯ-ವೆಂಕಟೇಶ್ವರ-ನಾರಾಯಣ ಭಟ್ಟ-ಅಂಣಮರಿ ಗೋವಿಂದ ಹೆಗ್ಗಡೆ. ಹೀಗೆ ನನ್ನಿಂದ ಏಳು ತಲೆಮಾರುಗಳಾಚೆಗಿದ್ದ ಗೋವಿಂದ ಹೆಗ್ಗಡೆಯವರ ಕಾಲ ( ದಕ್ಷಿಣಕನ್ನಡದ ವಿಟ್ಲ ಬಳಿಯ ತಾಳಿಪಡ್ಪು ಎಂಬಲ್ಲಿ ವಾಸವಾಗಿದ್ದರಂತೆ. ನೂರಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯದಾದ, ಅವರು ವಾಸವಾಗಿದ್ದರೆನ್ನಲಾದ ಮನೆ ಇತ್ತೀಚಿನವರೆಗೂ ಇತ್ತು.) ಸುಮಾರು ೧೭೬೦ನೇ ಇಸವಿ ಆಗಿದ್ದಿರಬಹುದೆಂದು ಅಂದಾಜು ಲೆಕ್ಕ ಹಾಕಿದೆ . ಅಂದರೆ ಕುಂಟಾಕಿಂಟೆಯ ಕಾಲ ! ಆಹಾ, ಖುಶಿಯಾದೆ. ಅಷ್ಟೇ ಅಲ್ಲ, ಅಜ್ಜನ ಫೋಟೊ ಎಲ್ಲರ ಮನೆಗಳಲ್ಲೂ ಇದೆ. ಅಜ್ಜನ-ಅಜ್ಜನ ಫೋಟೊ ಇದೆಯೇ? ನಮ್ಮಲ್ಲಿದೆ ಅನ್ನುವುದು ನನಗೆ ಗರ್ವದ ಸಂಗತಿ. (ಅವಕಾಶವಾದಾಗ ತೋರಿಸುತ್ತೇನೆ)
ಈಗ ಪಿತಾಮಹ ಪ್ರಪಿತಾಮಹರ ನೆನೆದು ನೀವ್ಯಾರಾದರೂ ಎಂಟು ತಲೆಮಾರುಗಳಿಗಿಂತ ಹಿಂದೆ ಹೋಗಬಲ್ಲಿರೇ?
1 comments:
ಸುಧನ್ವ,
ಈಗೀಗ ಈ ವಂಶಾವಳಿಯೇ ಮರೆತು ಹೋಗುತ್ತದೆ, ಭೂತ ಯಾರಿಗೆ ಬೇಕು, just live today ಎನ್ನುವವರಿಗೆ ಕೊರತೆಯಿಲ್ಲ...ಏನೇ ಇರಲಿ, ನಿಮ್ಮ ಕುಟುಂಬದವರು ನಿಮ್ಮ ಅಜ್ಜ, ಅಜ್ಜಜ್ಜ, ಪಿಜ್ಜಂದಿರ ಫೋಟೋ ಇರಿಸಿಕೊಂಡಿದ್ದು ಕೇಳಿ ಖುಷಿಯಾಯ್ತು
Post a Comment