October 30, 2007

ಇವರು ಹೀಗಂತಾರೆ.....

(ವಿವರಕ್ಕೆ 'ನಟನಾ ವಿಶಾರದರಿಗೆ ಪೊಡಮಟ್ಟು ಬಣ್ಣಿಪೆನೀ ಕತೆಯ...’ ಬರೆಹ-ಪ್ರತಿಕ್ರಿಯೆ ಗಮನಿಸಿ)
ನನಗೂ ಈ ಬಾರಿಯ ತಿರುಗಾಟದ ನಾಟಕಗಳ ಬಗ್ಗೆ ಅನೇಕ ಸಮಸ್ಯೆಗಳಿವೆ. ನನ್ನ ತಕರಾರನ್ನು ಚನ್ನಕೇಶವ, ರಘುನಂದನರೊಡನೆ ಎತ್ತಿದ್ದೇನೆ, ಚರ್ಚಿಸಿದ್ದೇನೆ. ಅವರ ಪ್ರಾಮಾಣಿಕ ಉತ್ತರಗಳನ್ನು (ಸಮಜಾಯಿಷಿಗಳಲ್ಲ) ಆಲಿಸಿದ್ದೇನೆ ಮತ್ತು ಹೆಗ್ಗೋಡಿನಲ್ಲಿ ನಡೆದ ಪ್ರಥಮ ಪ್ರದರ್ಶನಕ್ಕೂ ಎಚ್.ಎನ್. ಕಲಾಕ್ಷೇತ್ರದಲ್ಲಿ ನಡೆದ ಎರಡನೇ ಪ್ರದರ್ಶನಕ್ಕೂ ನಡುವೆ ಸಾಕಷ್ಟು ಬದಲಾವಣೆ ಕಂಡಿದ್ದೇನೆ. ಜನವರಿಯಲ್ಲಿ ರಂಗಶಂಕರದಲ್ಲಿ ನಡೆವ ಪ್ರದರ್ಶನಕ್ಕೂ ಹೋಗಲಿದ್ದೇನೆ. ಒಂದು ತಂಡದ ಬಗ್ಗೆ ಅವರ ಪ್ರಯೋಗಗಳ ಬಗ್ಗೆ ಸಮರ್ಥವಾಗಿ ಚರ್ಚಿಸಲು ಇವೆಲ್ಲ ಸಿದ್ಧತೆಗಳು ಹಾಗು ಗಂಭೀರವಾಗಿ ವಿಮರ್ಶಿಸಲು ಒಂದು ನಿರ್ದಿಷ್ಟ ಚೌಕಟ್ಟು ಅಗತ್ಯ ಎಂದು ಭಾವಿಸಿದ್ದೇನೆ. ಸಾಹಿತ್ಯ ವಿಮರ್ಶೆಯ ಮಾನದಂಡಗಳನ್ನು ಪ್ರದರ್ಶನಕಲೆಗಳ ವಿಮರ್ಶೆಗೆ ಬಳಸಲಾಗದು - ಇಲ್ಲಿಯ ಸಮಸ್ಯೆಗಳೇ ಬೇರೆ ರೀತಿಯದ್ದು, ಅಲ್ಲವೇ?

ನೀವು ಗಂಗಾಧರ ಚಿತ್ತಾಲರ ಉದಾಹರಣೆಯನ್ನು ಕೊಟ್ಟಿದ್ದೀರಿ. ನಾನು ಎಚ್.ಎಸ್. ಬಿಳಿಗಿರಿಯವರ ಪದ್ಯಗಳನ್ನು ಉದಾಹರಿಸುವೆ. ಬಹಳಷ್ಟು ಮಂದಿ ಅಶ್ಲೀಲವೆಂದು ಮೂಗು ಮುರಿಯುವಂಥ ಪದ್ಯಗಳನ್ನವರು ಬರೆದಿದ್ದಾರೆ. ಕಾಮವನ್ನೇ ಕೇಂದ್ರವಸ್ತುವನ್ನಾಗಿಟ್ಟುಕೊಂಡ ಕೃತಿಗಳೆಲ್ಲವೂ ಈ ಅಪಾಯವನ್ನು ಎದುರಿಸಬೇಕು. ಅದರಲ್ಲೂ ಪ್ರದರ್ಶನಕಲೆಯಾದ ನಾಟಕದಲ್ಲಿ ಅಶ್ಲೀಲವಾಗಬಹುದೆಂಬ ಕಾರಣಕ್ಕೆ ಆಂಗಿಕವನ್ನು ಬಿಟ್ಟು ಸಂಭಾಷಣೆಗಳ ಮೊರೆಹೋದರೆ ಅದು ನಾಟಕವಾಗದೆ ತಾಳಮದ್ದಳೆಯಾದೀತು / ಭಾಷಣವಾದೀತು. (ಒಂದೊಮ್ಮೆ ಚಿತ್ತಾಲರ ಕಾಮಸೂತ್ರವನ್ನೇ ಅಭಿನಯಿಸುವುದಾದರೆ ಆ ಪ್ರಯೋಗ ಹೇಗಾಗಬಹುದು ಎಂಬ ಕುತೂಹಲವಾಗುತ್ತಿದೆ. ಏಕೆಂದರೆ ಅದು ಕಾಮವನ್ನು ಕುರಿತ ಗಂಭೀರ ಕಾವ್ಯ. ಲೋಕೋತ್ತಮೆಯಂಥ ತಮಾಷೆ ಅಲ್ಲಿಲ್ಲ). ಈ ನೆಲೆಯಲ್ಲಿ ನೋಡಿದಾಗ ನನಗೆ ನಾಟಕದ ಪ್ರಾರಂಭದಲ್ಲಿ ನಟರು (ಅದರಲ್ಲೂ ಮಹಿಳಾ ಪಾತ್ರಗಳು) ಹೇಳುವ ಮಾತುಗಳು ಬಹಳ ಮುಖ್ಯ ಎನ್ನಿಸುತ್ತೆ – “ಇದೊಂದು ಭಂಡ ನಾಟಕ. ಇಷ್ಟು ಚಿಕ್ಕವರು ಏನೆಲ್ಲ ಮಾತಾಡುತ್ತಾರೆ ಎಂದು ಬೇಸರಿಸದಿರಿ. ಜೀವನಕ್ಕೆ ಹತ್ತಿರವಾದದ್ದು ಯಾವುದೂ ಅಶ್ಲೀಲವಲ್ಲ ಎಂದು ನಂಬಿದ್ದೇವೆ. ಆದರೂ ಇದು ಅತಿ ಎನ್ನಿಸಿದರೆ ಕ್ಷಮಿಸಿ' – ನಾನು ಇಡೀ ನಾಟಕವನ್ನು ನೋಡುವಾಗ ಆಗಾಗ ಈ ಮಾತನ್ನು ನೆನಪಿಸಿಕೊಳ್ಳುತ್ತಿದ್ದೆ.

ನೀವು ಮೂಲ ಗ್ರೀಕ್ ನಾಟಕ ಲೈಸಿಸ್ಟ್ರಾಟದ ಬಗ್ಗೆ ಓದಿಲ್ಲವೆಂಬ ಅನುಮಾನ ನನ್ನದು. ನಾಟಕದ ಇಂಗ್ಲೀಷ್ ಅನುವಾದ ಮತ್ತು ಅದನ್ನು ಇಂದಿಗೂ ಪ್ರದರ್ಶಿಸುವ ವಿದೇಶೀ ತಂಡಗಳ ಪ್ರಯೋಗಗಳನ್ನು ಗಮನಿಸಿದರೆ, ಅವರು ಬಳಸುವ ಭಾಷೆ, ಅವರ ಹಾವಭಾವ, ರಂಗದ ಮೇಲೆ ನಗ್ನರಾಗಿ ಬರುವುದು ಇತ್ಯಾದಿಗಳನ್ನು ನೋಡಿದರೆ ಲೋಕೋತ್ತಮೆ ನಿಜಕ್ಕೂ ನಮ್ಮ ನೆಲಕ್ಕೆ ಹತ್ತಿರವಾದ ತೀರಾ ಮುಜುಗರವುಂಟುಮಾಡದ ಪ್ರಯೋಗವಾಗಿದೆ ಎಂದೇ ನನ್ನ ಅನಿಸಿಕೆ. ಒಂದು ಮೂಲದ ಪ್ರಕಾರ 1976ರಲ್ಲಿ ಮೊಜಾರ್ಟನ ಒಪೇರಾ ಮಾದರಿಯಲ್ಲಿ ಈ ನಾಟಕವನ್ನು ಆಡಲಾಯ್ತು. ಹಾಡು ನೃತ್ಯಗಳಿಂದ ಕೂಡಿದ ಲೋಕೋತ್ತಮೆ ಬಹುಶಃ ಈ ಪ್ರಯೋಗಕ್ಕೆ ಹತ್ತಿರವಾದುದ್ದಾಗಿದೆ. ಚನ್ನಕೇಶವರೊಂದಿಗೆ ಚರ್ಚಿಸಬಹುದು.
ನಾಟಕವೊಂದನ್ನು ವಿಮರ್ಶಿಸುವಾಗ ಹಿಂದಿನ ಬೇರೆ ಯಾವುದೋ ಪ್ರಯೋಗದ ಜೊತೆಗಿನ ಹೋಲಿಕೆ / ಅಥವಾ ಅ ಕಾಲದ ನಟರ ಹೋಲಿಕೆ ಸರಿಯಲ್ಲ ಎಂಬುದು ನನ್ನ ಸ್ಪಷ್ಟ ನಿಲುವು. ನಿಮ್ಮ ಬರಹದಲ್ಲಿ ಇಂತಹ ಹೋಲಿಕೆಗಳ ಹೊರತು ಯಾವುದೇ ವಿಮರ್ಶೆಯ ಚೌಕಟ್ಟು ಅಥವಾ ಮಾನದಂಡ ಇರುವುದು ಕಾಣಲಿಲ್ಲ. ಕೇವಲ ಒಂದು ಪ್ಯಾರಾದಲ್ಲಿ ನಾಟಕದ ಮತ್ತು ತಂಡದ ಭವಿಷ್ಯದ ಬಗ್ಗೆ ಬರೆದದ್ದು ಓದಿ ಆಶ್ಚರ್ಯವಾಯ್ತು. ನಾನು ಅವರ ಪರ ವಕಾಲತ್ತು ಮಾಡುತ್ತಿಲ್ಲ. ಈ ನಾಟಕದ ಬಗೆಗಿನ ನನ್ನ ಸಮಸ್ಯೆಗಳು ಹೀಗಿವೆ:

  • ನಾಟಕದ ವೇಗ – ಘಟನೆಗಳು ಚಕಚಕನೆ ನಡೆಯುತ್ತ ಹೋಗುತ್ತವೆ. ದೃಶ್ಯದಿಂದ ದೃಶ್ಯಕ್ಕೆ, ಹಾಡಿನಿಂದ ಜಗಳಕ್ಕೆ, ಹೀಗೆ. ಎಲ್ಲಿಯೂ ಒಂದರೆಕ್ಷಣ ನಿಂತು ಯೋಚಿಸಲು ಅನುವುಮಾಡಿಕೊಡುವುದಿಲ್ಲ. ಇದರಿಂದ ಒಟ್ಟಾರೆ ಆಶಯದ ಗಾಂಭೀರ್ಯಕ್ಕೆ ಹೊಡೆತ ಬಿದ್ದಿದೆ.
  • ಯುದ್ಧದ ಪರಿಣಾಮಗಳನ್ನು ಕುರಿತು ನಡೆಯುವ ಸಂಭಾಷಣೆಗಳು ಅದಕ್ಕೂ ಮೊದಲು ನಡೆದ ಘಟನೆಗಳ ಭರದಲ್ಲಿ ಕೊಂಚ ಮಂಕಾಗಿ ಕಾಣುತ್ತವೆ.
ಆದರೆ ಇದೊಂದು ವೈನೋದಿಕ ನಾಟಕ (ಹಾಗು ಮೂಲಕ್ಕೆ ನಿಷ್ಠವಾಗಿದೆ) ಎಂಬುದನ್ನು ನೆನಪಿನಲ್ಲಿಟ್ಟು ನೋಡಿದಾಗ ಹೆಚ್ಚಿನ ಆಭಾಸವಾಗುವುದಿಲ್ಲ ಎಂದು ನನ್ನ ಅನಿಸಿಕೆ. ಚಾಪ್ಲಿನ್ ಮಾದರಿಯ ಸಿನೆಮಾದ ಬಗ್ಗೆ ಚರ್ಚಿಸುವಾಗ ಬರ್ಗಮನ್ನನ ಸಿನೆಮಾಕ್ಕೆ ಬಳಸುವ ಮಾನದಂಡಗಳನ್ನು ಯಥಾವತ್ತಾಗಿ ಬಳಸಲಾಗದು ಅಲ್ಲವೇ? ಚಾಪ್ಲಿನ್ ಮಾಡುವ ಅಂಗ ಚೇಷ್ಟೆಗಳು ಅಥವಾ ಜಾಕ್ವೆಸ್ ತಾತಿಯ ಅಸಂಬದ್ಧವೆನಿಸುವ ಕ್ರಿಯೆಗಳು ನಗೆಯುಕ್ಕಿಸುವುದಷ್ಟೇ ಅಲ್ಲ ನಂತರ ಗಂಭೀರ ಚಿಂತನೆಗೂ ದಾರಿಮಾಡಿಕೊಡುತ್ತವೆ. ಲೋಕೋತ್ತಮೆಯಲ್ಲಿರುವ ವಿಷಯವೇ ಸೊಂಟದ ಕೆಳಗಿನದು. ಈ ವಿಷಯದ ಪೋಲಿತನ ಮತ್ತು ಅದು ಎಲ್ಲರೂ ಅನುಭವಿಸಬಹುದಾದ ತೀವ್ರತೆಯನ್ನು ಕಟ್ಟಿಕೊಡಬಹುದಾದ ಸಾಧ್ಯತೆಯೇ ಅರಿಸ್ಟೋಫೆನಸ್ ಹೀಗೆ ಬರೆಯಲು ಕಾರಣವಾಗಿರಬಹುದು. ನಾಟಕದಲ್ಲಿ ಅದನ್ನು ಅಭಿನಯಿಸುವಾಗ ಆ ತೀವ್ರತೆಯೇ ಪ್ರೇಕ್ಷಕರಾದ ನಮಗೆ ದಾಟಬೇಕು. ದಾಟಿದೆ ಕೂಡ. ಆದರೆ ನಾಟಕ (ನಾನು ಈ ಮೇಲೆ ಹೇಳಿದ ಕಾರಣಗಳಿಗಾಗಿ) ಯುದ್ಧದ ಪರಿಣಾಮಗಳನ್ನು ಅದೇ ತೀವ್ರತೆಯಿಂದ ದಾಟಿಸುವಲ್ಲಿ ಸಂಪೂರ್ಣ ಯಶಸ್ಸು ಕಾಣುವುದಿಲ್ಲ. ಆ ಸಾಧ್ಯತೆ ಇನ್ನೂ ಜೀವಂತವಾಗಿರುವ ಪ್ರಯೋಗ ಇದಾದ್ದರಿಂದ ನಾನಿದನ್ನು ಸಂಪೂರ್ಣವಾಗಿ ತಳ್ಳಿಹಾಕುವುದಿಲ್ಲ.

ಉಂಡಾಡಿಗುಂಡ ಕೂಡ ಸಂಪೂರ್ಣ ಯಶಸ್ವೀ ಪ್ರಯೋಗವಲ್ಲದಿದ್ದರೂ ನಿರಾಸೆಗೊಳಿಸುವಂಥದ್ದೇನೂ ಅಲ್ಲ ಎಂಬುದು ನನ್ನ ಭಾವನೆ. ಬೆಂಗಳೂರಿನಲ್ಲಿ ಸಾಧ್ಯವಾದಾಗಲೆಲ್ಲ ನಾಟಕ ನೋಡುವ, ಗೆಳೆಯರೊಂದಿಗೆ ಚರ್ಚಿಸುವ ನನಗೆ ‘ತಿರುಗಾಟ' ಇಂದಿಗೂ ಒಂದು ಸಮರ್ಥ ರೆಪರ್ಟರಿ ಎಂಬುದರಲ್ಲಿ ಯಾವ ಸಂದೇಹವಿಲ್ಲ. ನಾನಾ ಬಗೆಯ ಒತ್ತಡಗಳಲ್ಲಿ ಕಾರ್ಯನಿರ್ವಹಿಸುವ ಇಂಥ ತಂಡಗಳು ಜೀವಂತವಾಗಿರುವುದೇ ಸಂತೋಷ ಹಾಗು ಹೆಮ್ಮೆಯ ವಿಷಯ ಎಂದುಕೊಂಡಿದ್ದೇನೆ. ಅದೂ ನಾನಾ ಬಗೆಯಲ್ಲಿ ಬೇರೆ ಬೇರೆ ತಂಡದ ನಾಟಕಗಳು ನಿರಾಸೆಗೊಳಿಸಿದ ಮೇಲೆ. ಉದಾಹರಣೆಗಳೊಂದಿಗೆ ವಿವರಿಸಬಲ್ಲೆ – ಸದ್ಯಕ್ಕೆ ಅದು ಈ ಚರ್ಚೆಯ ವ್ಯಾಪ್ತಿಯಲ್ಲಿಲ್ಲ!
- ಪ್ರಶಾಂತ್ ಪಂಡಿತ್
en.wikipedia.org/wiki/Lysistrata
en.wikisource.org/wiki/Lysistrata
-------------------------------------------------------------
ಚಂಪಕಾವತಿಯಿಂದ
1- 'ಪ್ರದರ್ಶನ ಕಲೆಯಾದ ನಾಟಕದಲ್ಲಿ ಆಂಗಿಕವನ್ನು ಬಿಟ್ಟು ಸಂಭಾಷಣೆಗಳ ಮೊರೆ ಹೋದರೆ ಅದು ನಾಟಕವಾಗದೆ ತಾಳಮದ್ದಳೆ/ಭಾಷಣವಾದೀತು’ ಎಂದಿದ್ದೀರಿ.
ಒಪ್ಪಿಗೆ. ಆದರೆ ಆಂಗಿಕಗಳು ಇನ್ನಷ್ಟು ಒಳ್ಳೆಯ ರೂಪಕಗಳಾಗಬೇಕಿತ್ತೆಂಬುದು ನನ್ನ ಅಭಿಪ್ರಾಯ. ಅದು ವೈನೋದಿಕ ನಾಟಕ ಹೌದು. ಆದರೆ ನಾಟಕದ ಒಳಗಿರುವ ಜೀವನ ಸತ್ಯವನ್ನು ಆಂಗಿಕಗಳು ಪ್ರತಿಬಿಂಬಿಸದೆ ಹಾಸ್ಯಕ್ಕಷ್ಟೆ ಸೀಮಿತವಾದವು ಎಂಬುದು ಮೊದಲ ದೂರು.
2- ನಾನು ಮೂಲವನ್ನು ಓದಿಲ್ಲ ಮತ್ತು ನಾಟಕಕ್ಕೆ ಬರುವಾಗ ಅದರ ಹೆಸರು "ತಿಲೋತ್ತಮೆ’ ಅಂತಲೇ ತಿಳಕೊಂಡಿದ್ದೆ. ಯಾವುದೋ ನಮ್ಮ ಪುರಾಣದ ನಾಟಕ ಇರಬೇಕು ಅಂದುಕೊಂಡಿದ್ದೆ! ಹಾಗೆಯೇ ನಾಟಕಕ್ಕೆ ಬರುವ ಮುಕ್ಕಾಲುಪಾಲು ಜನರೂ ನಾಟಕದ ಪಠ್ಯವನ್ನೇನೂ ಓದಿರುವುದಿಲ್ಲ. ನಾಟಕ ಇಷ್ಟವಾಗುವುದು-ಆಗದಿರುವುದು ಅಂದಿನ ಪ್ರದರ್ಶನದಿಂದ ಮಾತ್ರ. ಬಳಿಕ ಅದು ಯಾಕೆ ಇಷ್ಟವಾಯಿತು ಅಥವಾ ಆಗಲಿಲ್ಲ ಎಂಬುದಕ್ಕೆ ಕಾರಣಗಳನ್ನು ಹುಡುಕುತ್ತೇವೆ ಅಷ್ಟೆ. (ನಾಟಕ ನೋಡುತ್ತಿರುವಾಗಲೇ ವಿಮರ್ಶೆ ಆರಂಭಿಸಿದರೆ ಅದು ಶಿಕ್ಷಾರ್ಹ ಅಪರಾಧ! ಧಾರ್ಮಿಕ ಕ್ರಿಯೆಗಲ್ಲಿ ತಪ್ಪು ಕಂಡರೂ ನಡೆಯುತ್ತಿರುವಾಗ ಹೇಳಬಾರದೆಂದು ಹಿರಿಯರು ಹೇಳುತ್ತಾರೆ.) ನಮ್ಮಲ್ಲಿ ನಾಟಕ ಪಠ್ಯದ ವಿಮರ್ಶೆಯಾಗುತ್ತಿದೆಯೇ ಹೊರತು ಪ್ರದರ್ಶನದ ವಿಮರ್ಶೆಯಾಗುವುದು ಬಹಳ ಕಡಿಮೆ. ನನಗೆ ಪಠ್ಯಕ್ಕಿಂತ ಪ್ರದರ್ಶನ ಇಷ್ಟ. ಅದನ್ನು ವಿಮರ್ಶಿಸುವಾಗ ಹಳೆಯ ನಾಟಕ/ಕಲಾವಿದರ ನೆನಪು ಬೇಡ ಅಂದರೆ ಹೇಗೆ? ಸಾಹಿತ್ಯದಲ್ಲಾದರೂ ಹಳಬರನ್ನೆಲ್ಲ ಮರೆತು ಹೊಸಬರ ಬಗ್ಗೆ ವಿಮರ್ಶೆ ಮಾಡಲು ಸಾಧ್ಯವೆ?
3- 'ವಿದೇಶಿ ತಂಡಗಳು ಈ ನಾಟಕದಲ್ಲಿ ನಗ್ನರಾಗಿ ರಂಗಕ್ಕೆ ಬರುವುದು ಇತ್ಯಾದಿ ನೋಡಿದರೆ ಲೋಕೋತ್ತಮೆ ನಮ್ಮ ನೆಲಕ್ಕೆ ಹತ್ತಿರವಾದ ತೀರಾ ಮುಜುಗರ ಉಂಟುಮಾಡದ ಪ್ರಯೋಗ’ ಎಂದಿದ್ದೀರಿ. ಮುಜುಗರವಾಗುತ್ತದೆ, ಪೋಲಿತನ ಜಾಸ್ತಿ ಎಂಬುದೆಲ್ಲ ನನ್ನ ಆಕ್ಷೇಪವೇ ಇಲ್ಲ. ಮನರಂಜನೆಯಷ್ಟೇ ಸಾಕೆಂದಾದರೆ "ಲಾಫ್ಟರ್ ಚಾಲೆಂಜ್’ ಕಾರ್ಯಕ್ರಮ ನೋಡಿದಂತೆ ಇದನ್ನೂ ಧಾರಾಳ ನೋಡಬಹುದು. ಮೂಲಕ್ಕೆ ನಿಷ್ಠವಾಗಿದೆ ಎಂಬ ಮಾತ್ರಕ್ಕೆ ಏನಾದರೂ ಉಪಯೋಗವಾದೀತೆಂದು ಅನ್ನಿಸುವುದಿಲ್ಲ. ಅಲ್ಲಿಯ ಹೂವನ್ನೇ ಇಲ್ಲಿ ತಂದು ತೋರಿಸುವುದಕ್ಕಿಂತ ಅದರ ಚಿತ್ರವನ್ನು ಎಷ್ಟು ಚೆನ್ನಾಗಿ ಮಾಡಿದ್ದಾರೆ ಎಂಬುದೇ ಕಲೆಯ ಹೆಚ್ಚುಗಾರಿಕೆ. ಸಾಮಾನ್ಯ ಮಟ್ಟದಿಂದ ಅಸಾಮಾನ್ಯಕ್ಕೆ ಏರಿಸುವ ಎಲ್ಲ ಅವಕಾಶಗಳೂ ಈ ನಾಟಕದ ವಸ್ತುವಿನಲ್ಲಿ ಇದೆ ಅಂದುಕೊಂಡಿದ್ದೇನೆ. "ಜೀವನಕ್ಕೆ ಹತ್ತಿರವಾದದ್ದು ಯಾವುದೂ ಅಶ್ಲೀಲವಲ್ಲ’ ಎಂಬ ವಿಶಿಷ್ಟ ಮಾತನ್ನು ಅರ್ಥ ಮಾಡಿಸುವ, ಸ್ಪಷ್ಟಪಡಿಸುವ, ಪುಷ್ಟೀಕರಿಸುವ ಸಂಗತಿಗಳು ಪ್ರದರ್ಶನದಲ್ಲಿ ಇವೆಯೆ?
4- ಈ ಪ್ರದರ್ಶವನ್ನು ನೋಡಿದಾಗ ಹೃದಯಕ್ಕೆ ತಟ್ಟುವ, ಆಹ್ ಎನ್ನಿಸುವ ಕ್ಷಣಗಳು (ನಾನು ಈ ಹಿಂದೆ ಹೇಳಿರುವ ಎರಡು ಸಂದರ್ಭ ಬಿಟ್ಟರೆ) ಬೇರೆ ಬರಲೇ ಇಲ್ಲ. ಕಣ್ಣು-ಮೂಗು ಅರಳಿಸಿ, ಹುಬ್ಬೇರಿಸುವುದೇ ಒಳ್ಳೆಯ ಅಭಿನಯ ಅಂತ ನನಗನಿಸುವುದಿಲ್ಲ. ಇಷ್ಟವಾದರೆ ಅದಕ್ಕೆ ಕಾರಣಗಳನ್ನು ಹುಡುಕುವ ಸಂದರ್ಭ ಬಹಳ ಕಡಿಮೆ. ಇಷ್ಟವಾಗದಿದ್ದಾಗ (ಅದೂ ಪ್ರತಿಷ್ಠಿತ ತಂಡದ್ದು) ಬಗೆದು ನೋಡುವುದು ಅಗತ್ಯ-ಸಹಜ ಅಲ್ವೆ?
5- 'ಸುಟ್ಟಲ್ಲದೆ ಮುಟ್ಟೆನೆಂಬ ಉಡಾಫೆ’ ನನ್ನಲ್ಲಿ ಸ್ವಲ್ಪ ಇರುವುದು ಹೌದು. ಅದು ಬ್ಲಾಗ್ ನೀಡುವ ಸ್ವಾತಂತ್ರ್ಯ ಹಾಗೂ ಪ್ರಾಯ ದೋಷ ಮಾರಾಯ್ರೆ.
ನೀನಾಸಂನ ಕಲಾವಿದರು-ನೇತಾರರ ಬಗ್ಗೆ ಸಕಲ ಗೌರವ ಪ್ರೀತಿ ಇಟ್ಟುಕೊಂಡೇ ಈ ಎಲ್ಲ ಅಕ್ಷರಗಳ ದುಂದುವೆಚ್ಚ !0 comments:

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP