October 17, 2007

ನಟನಾ ವಿಶಾರದರಿಗೆ ಪೊಡಮಟ್ಟು ಬಣ್ಣಿಪೆನೀ ಕತೆಯ...

ಈ ಬಾರಿಯ ನೀನಾಸಂ ತಿರುಗಾಟದ ತಂಡದಲ್ಲಿ ಆರು ಜನ ಹುಡುಗಿಯರು. ಇಷ್ಟೊಂದು ಹುಡುಗಿಯರು ತಂಡದಲ್ಲಿರುವುದು ಪ್ರಥಮವೇನೋ. ಅವರಲ್ಲಿ ಒಬ್ಬಳು ಮಾತ್ರ ಕಳೆದ ವರ್ಷವೂ ಇದ್ದವಳು. ಸುಮಾರು ಎಂಟು ಜನ ಹುಡುಗರಲ್ಲಿ ಬಹುಶಃ ಮೂವರು ಮಾತ್ರ ಹಳಬರು. ಆದರೆ ಕೆಲವರ್ಷಗಳ ಹಿಂದೆ ಬಹುತೇಕ ಕಲಾವಿದರು ಎರಡುಮೂರು ತಿರುಗಾಟ ಮಾಡುವುದು ಸಾಮಾನ್ಯವಾಗಿತ್ತು ಅಂತ ನೆನಪು.

ನನ್ನ ಒಲವಿನ ನಿರ್ದೇಶಕ ಚಿದಂಬರ ರಾವ್ ಜಂಬೆ ನಿರ್ದೇಶನದ ಆಲ್‌ಟೈಮ್ ಫೇವರಿಟ್ ನಾಟಕಗಳಾದ "ಕೆಂಪು ಕಣಗಿಲೆ’ ಮತ್ತು "ಚಿರೇಬಂದೀವಾಡೆ’ಗಳನ್ನು ನೆನಪಿಸಿಕೊಂಡರೆ ಈಗ ದುಃಖವಾಗುತ್ತದೆ ! ನಾನು ಆಗ ಸಣ್ಣವನಿದ್ದುದರಿಂದ ಇಷ್ಟವಾಯಿತೋ, ಈಗ "ನಾನು’ ಬೆಳೆದು ಬುದ್ಧಿ ಬೆಳೆಯದೆ ಇರುವುದರಿಂದ ಈಗಿನದ್ದು ಇಷ್ಟವಾಗುವುದಿಲ್ಲವೋ, ಸರಿಯಾಗಿ ಗೊತ್ತಿಲ್ಲ. ವರ್ಷದ ಹಿಂದೆ ಮರುತಿರುಗಾಟದಲ್ಲಿ ಪ್ರದರ್ಶಿಸಿದ 'ಕೇಶಪಾಶ ಪ್ರಪಂಚ’ (ನಿ:ಐತಾಳ) ಹೊರತುಪಡಿಸಿದರೆ ಮೂರ್‍ನಾಲ್ಕು ವರ್ಷಗಳ ನೀನಾಸಂ ನಾಟಕ --ಡ್ಯಾಶ್ ಡ್ಯಾಶ್--!

ಕಳೆದ ವರ್ಷದ ನಾಟಕಗಳ ಬಗ್ಗೆ ( ಮುಖ್ಯವಾಗಿ ಇಕ್ಬಾಲ್‌ರು ನಿರ್ದೇಶಿಸಿದ್ದರ ಬಗ್ಗೆ) ವಿ.ಕ.ದಲ್ಲಿ ಕಟುವಾಗಿ ಬರೆದು, ಕೆಲವರಿಂದ ಹೀಯಾಳಿಸಿಕೊಂಡೆ. ಹಾಗಾಗಿ ಈ ಸಾರಿಯೂ ಬೊಂಡ ಕೆತ್ತುವ ಆಸೆಯಿಲ್ಲ ! ಧರ್ಮೇಂದ್ರಕುಮಾರ್ ಅರಸ್, ಅಚ್ಯುತ, ಅರಸ್ ಪತ್ನಿ ಶೈಲಜಾ(ಈಗ ಎಲ್ಲರೂ ಸೀರಿಯಲ್ ನಟನಾ ವಿಶಾರದರು)ಮೊದಲಾದವರಿದ್ದ ೨೦೦೦-೦೧ರ ತಂಡಕ್ಕೇ ನೀನಾಸಂ ಕತೆ ----- ಅಂತ ಈಗ ಅನ್ನಿಸಲಾರಂಭಿಸಿದೆ !
ಈಗಿನ ತಿರುಗಾಟದ ಮೊದಲ ನಾಟಕ "ಇ ನರಕ ಇ ಪುಲಕ’ಕ್ಕೆ ಹೋಗದೆ (ಕೆಲವರ ಹಿತವಚನದ ಮೇರೆಗೆ ) ಚೆನ್ನಕೇಶವ ನಿರ್ದೇಶನದ "ಲೋಕೋತ್ತಮೆ’ ನೋಡಹೋದೆ. ಸಕತ್ ಮನರಂಜನೆ ಅಂತಂದರು ಕೆಲವರು. ಕೊನೆಯ ಸಾಲಿನಲ್ಲಿ ಕುಳಿತಿದ್ದ ಕಾಲೇಜು ಹುಡುಗಹುಡುಗೀರು ಚಪ್ಪಾಳೆ ತಟ್ಟಿ ಸಿಳ್ಳೆ ಹೊಡೆಯುತ್ತಿದ್ದರು. ಎರಡು ರಾಜ್ಯಗಳ ನಡುವೆ ನಡೆಯುವ ಯುದ್ಧ ತಪ್ಪಿಸಿ ಶಾಂತಿ ಏರ್ಪಡಿಸಲು, ಎರಡೂ ಕಡೆಯ ಹೆಂಗಸರು ಒಟ್ಟಾಗಿ ಗಂಡಸರನ್ನು ಬಹಿಷ್ಕರಿಸುವ ನಾಟಕವದು. ಹೆಂಗಸರೆಲ್ಲ ಮನೆ ಬಿಟ್ಟು ಕೋಟೆ ಸೇರಿ ಗಂಡಸರ ಕಾಮವಾಂಛೆಗೆ ಸಹಕರಿಸುವುದಿಲ್ಲವೆಂದೂ, ತಮ್ಮ ಆಸೆಗಳನ್ನೂ ತಡೆದುಕೊಳ್ಳುತ್ತೇವೆಂದು ಪ್ರತಿಜ್ಞೆ ಮಾಡುತ್ತಾರೆ. ರತಿಸುಖದ ಆಸೆ ಅದುಮಿಡಲಾಗದ ಗಂಡ-ಹೆಂಡಂದಿರ ವರ್ತನೆಗಳೇ ನಾಟಕದ ಘಟನಾವಳಿ. ಯುದ್ಧ-ಶಾಂತಿಗಿಂತ ಹೆಚ್ಚಾಗಿ , ಲೈಂಗಿಕತೆಯ ಬಲ-ದೌರ್ಬಲ್ಯಗಳನ್ನು ಹೇಳುತ್ತ, ಗಂಡು-ಹೆಣ್ಣು ಎಲ್ಲ ವಿಷಯಗಳಲ್ಲೂ ಸಮಾನರು ಅಂತ ನೀತಿ ಹೇಳಲಾಗುತ್ತದೆ. ನಾಟಕದ ಪೂರ್ತಿ ಎಲ್ಲರ ಬುದ್ಧಿಯೂ ಸೊಂಟದ ಕೆಳಗೇ ! ಮದಿರೆ-ಮಾನಿನಿ-ಮಾಂಸ ವರ್ಜಿಸಿದ, ಸಭ್ಯ ಮರ್ಯಾದಸ್ಥ ಮಡಿವಂತರು ಬಹುತೇಕರಲ್ಲ ! ಹಾಗಿದ್ದೂ , ೨೦೦೧ರಲ್ಲಿ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗದ, ಆನಗಳ್ಳಿ ನಿರ್ದೇಶನದ "ಜುಜುಬಿ ದೇವರ ಜುಗಾರಿಯಾಟ’ ಇದಕ್ಕಿಂತ ಎಷ್ಟೋ ಹೆಚ್ಚು ಪಾಲು ರಂಜನೆ ಕೊಡುವ ನಾಟಕ ಎನ್ನುತ್ತೇನೆ. ಅದರಲ್ಲಿನ ನೆರಳು-ಬೆಳಕು, ಅಭಿನಯ, ರಂಗಪರಿಕರ, ದೈಹಿಕ ಕಸರತ್ತು , ರಂಗತಂತ್ರ ಭೋ ಚೆನ್ನಾಗಿತ್ತು . (ನಾಟಕದ ವಸ್ತು ನಿರ್ವಹಣೆಯ ಸಮರ್ಪಕತೆ ಬಗ್ಗೆ ಬೇರೆ ಮಾತು.)

*****

ಬಹುಶಃ ೨೦೦೦ನೇ ಇಸವಿ ಇರಬೇಕು. ದ್ವಿತೀಯ ಪಿಯುಸಿಯಲ್ಲಿ ಲಾಗ (ಎಲ್ಲ ಅರ್ಥಗಳಲ್ಲಿ !) ಹೊಡೀತಿದ್ದ ಹುಡುಗ. ಕಾಲೇಜಿಗೆ ಒಂದು ವಾರ ಚಕ್ಕರ್ ಒಗೆದು ನೀನಾಸಂ ತಲುಪಿದಾಗ ರಾತ್ರಿ ಹತ್ತೂವರೆ. ಸಂಸ್ಕೃತಿ ಶಿಬಿರದ ಮೊದಲನೇ ದಿನದ "ಸಕ್ಕರೆ ಗೊಂಬೆ’(ನಿ:ಅಕ್ಷರ) ನಾಟಕ ಮುಗಿಸಿಕೊಂಡು ಎಲ್ಲರೂ ಊಟಕ್ಕೆ ಹೋಗ್ತಾ ಇದ್ರು. ಹುಡುಗ ಏಕಾಂಗಿ, ಅಪರಿಚಿತ ಸ್ಥಳ, ಸಂಕೋಚ ಸ್ವಭಾವ. ಹೊಸನಗರದಲ್ಲಿ ಒಂದೂವರೆ ಗಂಟೆ ಕಾದುಕಾದು ಆದ ಮಂಡೆಬಿಸಿ ಬೇರೆ. ಎದುರು ಕಂಡ ಕೋಣೆಯ ಒಳನುಗ್ಗಿದ. ವೀಳ್ಯದಸಂಚಿಯೊಳಗೆ ಕೈಯಿಟ್ಟುಕೊಂಡೇ ನಿದ್ದೆ ಹೋದಂತಿತ್ತು ಒಂದು ಮುದಿ ಜೀವ. ಫೋಟೊದಲ್ಲಷ್ಟೇ ಸುಬ್ಬಣ್ಣರನ್ನು ನೋಡಿದ್ದ ಅವನಿಗೆ ಅವರೇ ಆಗಿರಬಹುದೇ ಎಂಬ ಅನುಮಾನ. ಹೊರಗೆ ನಡೆಯುತ್ತಿರುವ ಅವಸರ-ಗಲಾಟೆ ನೋಡಿದರೆ, ಸಂಸ್ಥೆಯ ಮುಖ್ಯಸ್ಥನೊಬ್ಬ ಹೀಗೆ ಕುಳಿತಿರಲು ಸಾಧ್ಯವೆ ಎಂಬ ಪ್ರಶ್ನೆ.. ಕೊನೆಗೂ ಅಳುಕಿನಿಂದಲೇ ಮಾತಾಡಿದ. ಯಾರನ್ನೋ ಕರೆದು ವ್ಯವಸ್ಥೆ ಮಾಡಿದರು. ಆ ರಾತ್ರಿ ಸುಖ ನಿದ್ದೆ. ಅವರೇ ಕೆ.ವಿ. ಸುಬ್ಬಣ್ಣ ಅಂತ ಮರುದಿನ ಖಚಿತವಾಯಿತು !

*****

ಹೈಸ್ಕೂಲಿನಲ್ಲಿದ್ದ ೯೪-೯೫ರ ದಿನಗಳಲ್ಲಿ ನೋಡಿದ "ಹೂಹುಡುಗಿ’, ನಂತರದ ವರ್ಷದ "ಚಿರೇಬಂದಿವಾಡೆ’ ಹೀಗೆ ವರ್ಷದ ಮೂರು ನಾಟಕಗಳಲ್ಲಿ ಒಂದಾದರೂ ನೀನಾಸಂ ನಾಟಕ ನೋಡದೆ ಇರುತ್ತಿರಲಿಲ್ಲ. ಕಾರಂತರ ನಿರ್ದೇಶನದ "ಕಿಂದರಿಜೋಗಿ’ಯಿಂದ ಶುರುವಾಗಿ ಕಳೆದ ಹತ್ತು ವರ್ಷಗಳಲ್ಲಿ ರಂಗಾಯಣದ ಇಪ್ಪತ್ತೈದು ನಾಟಕಗಳನ್ನಾದರೂ ನೋಡಿರಬಹುದು. ಅಲ್ಲಿಯ ಸರಕಾರಿ ನಟರ ಕತೆಯೂ ಈಗ ಶೋಚನೀಯವೇ.


ಪ್ರತಿಷ್ಠಿತ ನೀನಾಸಂ-ರಂಗಾಯಣ ನಾಟಕಗಳಿಗಿಂತ ಹೊರತಾದ- ವಿನಾಯಕ ಜೋಶಿ ನಿರ್ದೇಶನದ ಶ್ರೀನಿವಾಸ ವೈದ್ಯರ ನಾಟಕ "ಶ್ರಾದ್ಧ’, ಪೂರ್ಣಚಂದ್ರ ತೇಜಸ್ವಿ (ಸೀರಿಯಲ್ ಆಕ್ಟರ್)ನಿರ್ದೇಶನದ "ಭ್ರಮೆ’, ಸುರೇಂದ್ರನಾಥ್ ನಿರ್ದೇಶನದ "ನಾನೀನಾದರೆನೀನಾನೇನಾ’, ಟಾಪ್‌ಕಾಸ್ಟ್ ತಂಡದ ಹೆಸರು ನೆನಪಾಗದ ಒಂದು ನಾಟಕ, ಅಂತರಂಗ ತಂಡದ "ಹುತ್ತದಲ್ಲಿ ಹುತ್ತ’ ಬಹಳ ಸತ್ವಯುತ ಪ್ರದರ್ಶನಗಳು. ಆದರೆ ೨೪ ಗಂಟೆ ನಾಟಕ ಕ್ಷೇತ್ರದೊಳಗಿರುವ ನಟರಿದ್ದೂ ಹವ್ಯಾಸಿ ಕಲಾವಿದರು , ಕಾಲೇಜು ಹುಡುಗರ ನಾಟಕಕ್ಕಿಂತ ಮೇಲೇರಲಾಗದಿದ್ದರೆ ಏನು ಫಲ? ಮುಂದಿನ ೨೦ನೇ ತಾರೀಖಿನಿಂದ ವಾರ ಪೂರ್ತಿ ರಂಗಶಂಕರದಲ್ಲಿ ಹೊಸ ನಾಟಕಗಳೇ ಇವೆ. ಪುರುಸೊತ್ತು ಮಾಡ್ಕೊಳ್ಳಿ.

-ಕಲಾಮಾತೆಯ ಪಾದದೂಳಿಯಲ್ಲಿ ಬಿದ್ದುಕೊಂಡಿರುವ

'ಪಾಪಿ ಮುಂಡೆ ಬಿಕನಾಸಿ ರಂಡೆ ಮಾಯಾವಿ ರಂಬೆ ಹಲ್ಕಾ ಪೋಲಿಗಳು’

5 comments:

ಪ್ರಶಾಂತ್ ಪಂಡಿತ್ October 19, 2007 at 4:39 AM  

ಸುಧನ್ವ, ಎಂದಿನಂತೆ ನಿಮ್ಮದೇ ವಿಶಿಷ್ಟವಾದ ಶೈಲಿಯಲ್ಲಿ ಸೊಗಸಾಗಿ ಬರೆದಿದ್ದೀರಿ. ಆದರೆ "ಬೊಂಡ ಕೆತ್ತುವ ಆಸೆಯಿಲ್ಲ" ಎನ್ನುವ ಮೂಲಕ ನಾಟಕದ ಈ ಪ್ರಯೋಗದ ಬಗ್ಗೆ ಹೆಚ್ಚಿನ ವಿವರಗಳ ಮೂಲಕ ವಿಮರ್ಶಿಸುವ ಅವಕಾಶವನ್ನು ಬಿಟ್ಟುಕೊಟ್ಟಿದ್ದೀರಿ ಎನ್ನಿಸುತ್ತಿದೆ. ಇದೇನೂ ಅತ್ಯುತ್ತಮ ಪ್ರಯೋಗವಲ್ಲ ನಿಜ. ಆದರೆ ಸುಮ್ಮನೆ ತಳ್ಳಿಹಾಕುವಂಥದ್ದೂ ಅಲ್ಲ ಎಂದು ನನ್ನ ಅನಿಸಿಕೆ. ನಿಮ್ಮ ಬರಹದಲ್ಲಿ ವಿವರಗಳಿದ್ದರೆ ಚೆನ್ನಿತ್ತು. ಚರ್ಚೆಗೆ ಈಗಲೂ ಅವಕಾಶವಿದೆಯೆಂದುಕೊಂಡಿದ್ದೇನೆ...

- ಪ್ರಶಾಂತ

Dr U B Pavanaja October 20, 2007 at 7:38 AM  

ಸುಧನ್ವ,

ನಿಮ್ಮ ಅಭಿಪ್ರಾಯಗಳಿಗೆ ನನ್ನ ಸಹಮತವಿದೆ. ಲೋಕೋತ್ತಮೆ ನಾಟಕವನ್ನು ಸುರಾನ ಕಾಲೇಜು ವಿದ್ಯಾರ್ಥಿಗಳು ಅಭಿನಯಿಸಿದಾಗ ಅದರ ಬಗ್ಗೆ ಉತ್ತಮ ವಿಮರ್ಶೆಗಳು ಬಂದಿದ್ದವು. ನಾನು ಆಗ ಅದನ್ನು ನೋಡಿರಲಿಲ್ಲ. ಕಾಲೇಜು ವಿದ್ಯಾರ್ಥಿಗಳ ನಾಟಕಕ್ಕೇ ಅಷ್ಟು ಹೊಗಳಿಕೆಗಳು ಬಂದಿರಬೇಕಾದರೆ ನೀನಾಸಂನವರು ನಟಿಸಿರಬೇಕಾದರೆ ಇನ್ನೆಷ್ಟು ಚೆನ್ನಾಗಿರಬಹುದು ಎಂದು ನೋಡಲು ಹೋಗಿ ತುಂಬ ಭ್ರಮನಿರಸನವಾಯಿತು. ಖಂಡಿತವಾಗಿಯೂ ಅದು ಸೊಂಟದ ಕೆಳಗಿನ ನಾಟಕವೇ. ಛೀ. ಛೀ. ನೀನಾಸಂಗೆ ಈ ಗತಿ ಬರಬಾರದಾಗಿತ್ತು.

-ಪವನಜ

ಕಳ್ಳ ಕುಳ್ಳ October 21, 2007 at 12:20 AM  

atmeeya deraje,
nanu 'lokothame' natakavannu nodilla. adre a nataka chennagide antha natakavannu serious agi noduva, vimarshisuva vyakthiyobbarindale kelpatte. polithanavannu kalatmakavagi balasikonda parinamakari kathe, natakagalu nammalli bhalastu bandive. 'akku' yemba ondu kathe, vaidehi baredaddu, antha ondu udaharane. polithanave adara akshepavo, athava polithanavannu adara tantravagi balasikondaru parinamakariyagi nodilla yennuvudu nimma akshepavo- vimarshe spastapadisilla.
vikas

ಪ್ರಶಾಂತ್ ಪಂಡಿತ್ October 21, 2007 at 11:18 PM  

ಪವನಜರೇ,

ಆ ದಿನ ನಾಟಕದ ನಂತರ ನಾವು ಕೆಲವರು ಗ್ರೀನ್ ರೂಮಿಗೆ ಹೋಗಿ ನಟರನ್ನು ಮಾತಾಡಿಸುತ್ತಿದ್ದೆವು. ಆಗ ಸುರಾನಾ ಕಾಲೇಜಿನ ವಿದ್ಯಾರ್ಥಿಗಳು (ಈ ಹಿಂದೆ ಇದೇ ನಾಟಕವನ್ನು ಅಭಿನಯಿಸಿ ಪ್ರಶಂಸೆಪಡೆದವರು) ಬಂದು ವೇದಿಕೆಯ ಮೇಲೆ ಸಾಲಾಗಿ ತಿರುಗಾಟದ ನಟರನ್ನು ಕೂರಿಸಿ ತಾವೂ ಕುಳಿತು ಅವರೊಂದಿಗೆ ತಮ್ಮ ಸಂತೋಷ ಹಂಚಿಕೊಂಡರು. ನಿಮ್ಮ ಈ ಪ್ರಯೋಗ ಅದ್ಭುತ, ನಮಗಿಂತ ಚೆನ್ನಾಗಿದೆ, ಈತ ಕೆನೆಸಿಸ್ ಪಾತ್ರ ಮಾಡಿದ್ದ, ಆಕೆ ಲೈಸಿಸ್ಟ್ರೆಟಾ ಆಗಿದ್ದಳು ಎಂದೆಲ್ಲಾ ಮಾತಾಡಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ನಾನು ಅವರ ಪ್ರಯೋಗ ನೋಡಿಲ್ಲವಾದ್ದರಿಂದ ಆ ಬಗ್ಗೆ ಏನೂ ಹೇಳಲಾರೆ. ಆದರೆ ಅವರಲ್ಲಿದ್ದ ಸಂತೋಷ, ಸಹೃದಯತೆ ಸ್ಪಷ್ಟವಾಗಿತ್ತು.

ನನ್ನ ಅನುಮಾನ - ಈ ವಿಷಯದ ಬಗ್ಗೆ ನಮ್ಮಲ್ಲಿರಬಹುದಾದ taboo ಇಂಥ ಹೇಳಿಕೆಗಳಿಗೆ ಕಾರಣವಾಗುತ್ತಿರಬಹುದು...

ಸುಧನ್ವ ತಮ್ಮ ಬರಹದಲ್ಲಿ ವಿವರವಾಗಿ ವಿಮರ್ಶಿಸಿದ್ದರೆ ನಾವು ಚರ್ಚಿಸಬಹುದಿತ್ತು...

- ಪ್ರಶಾಂತ

ಸುಧನ್ವಾ ದೇರಾಜೆ. October 22, 2007 at 7:59 AM  

* ಇದೊಂಥರಾ ತಮಾಷೆ ಅಥವಾ "ವಿಮರ್ಶೆಯ ವಿವೇಕ’ ಅಂತಲೂ ಅನ್ನಬಹುದು ! "ಇ ನರಕ ಇ ಪುಲಕ’ಕ್ಕೆ ಬಯ್ಯಲೇಬೇಕಾಗಿರುವುದರಿಂದ, "ಲೋಕೋತ್ತಮೆ’ ನಾಟಕ ಪರವಾಗಿಲ್ಲ , ಚೆನ್ನಾಗಿದೆ ಅಂತ ವಿಮರ್ಶಕರು ಹೇಳುತ್ತಿದ್ದಾರೆ ಅನ್ನಿಸುತ್ತದೆ. ಉದಾಹರಣೆಗೆ ಕಳೆದ ಶುಕ್ರವಾರ "ದ ಹಿಂದು’ ಪತ್ರಿಕೆಯಲ್ಲಿ ದೀಪಾ ಗಣೇಶ್ ಬರೆದಿರುವುದನ್ನು ಓದಿ !
* ನೀನಾಸಂ ನಾಟಕಗಳ ಬಗ್ಗೆ ಎಂಥಾ ನಿರಾಶೆಯಾಗಿದೆಯೆಂದರೆ ಅದರ ಬಗ್ಗೆ ವಿವರವಾಗಿ ಬರೆಯುವ ಆಸಕ್ತಿಯೂ ಬರುತ್ತಿಲ್ಲ. ಬೇಜಾರು ಬರಿಸಿದ ನಾಟಕದ ಬಗ್ಗೆ ಮತ್ತೆ ಬರೆದು ಗೆಳೆಯರೂ ಬೇಜಾರು ಮಾಡಿಕೊಳ್ಳುವಂತೆ ಯಾಕಾದರೂ ಮಾಡಬೇಕು?! ಆದರೆ ಈ ಬ್ಲಾಗ್ ಅರೆ ಖಾಸಗಿ-ಅರೆ ಸಾರ್ವಜನಿಕವಾಗಿರುವುದರಿಂದ ಆ ನಾಟಕದ ನೆಪದಲ್ಲಿ ಕೊಂಚ ಬರೆದುಕೊಂಡೆ ಅಷ್ಟೆ .
* ಪೋಲಿತನ, ಲೈಂಗಿಕ ವಿಷಯಗಳಿಂದಾಗಿ ನಾಟಕ ಇಷ್ಟವಾಗದಿದ್ದದ್ದು ಖಂಡಿತ ಅಲ್ಲ. ಅವನ್ನು ಬಳಸಬಾರದು ಎನ್ನುವವನೂ ಅಲ್ಲ. ಆ ಬಗ್ಗೆ ಮುಜುಗರ, ಹಿಂಜರಿಕೆ, ಪೂರ್ವಾಗ್ರಹಗಳೂ ಇಲ್ಲ. ನಾನೂ ಗಂಗಾಧರ ಚಿತ್ತಾಲರ "ಕಾಮಸೂತ್ರ’ ಪದ್ಯ ಓದಿ ಆನಂದಾತಿಶಯದಿಂದ ಪುಳಕಿತನಾದವನೇ. ಲೈಂಗಿಕತೆಯ ಪ್ರಸ್ತುತಿಯನ್ನು (ಪದ ಸರಿಯಾಗಿದಿಯಾ?) ವಿಸ್ತರಿಸುವಲ್ಲಿ ಎತ್ತರಿಸುವಲ್ಲಿ ಆ ಪದ್ಯವು ಕನ್ನಡಿಗರಿಗೆ ಶಾಶ್ವತ ಸಂಪನ್ಮೂಲ ಅಥವಾ ಶಕ್ತಿ. ನಾಟಕ ನೋಡಿದಾಗ ಆ ಪದ್ಯ ನೆನಪಾಗಿ ಇನ್ನಷ್ಟು ನಿರಾಶೆಯಾಯಿತು.ಸಂಗೀತ ವಿಭಾಗದಲ್ಲೊಂದಿಷ್ಟು ವಿಶೇಷ ಸ್ವರ-ತಾಳಗಳು, ಮೂರು ಜನ ಒಬ್ಬರಹಿಂದೊಬ್ಬರು ಅಂಟಿಕೊಂಡು ಕುಪ್ಪಳಿಸುತ್ತಾ ರಂಗ ಪ್ರವೇಶಿಸುವುದು ಕೊಂಚ ಉಲ್ಲಾಸಗೊಳಿಸುವುದು ಹೊರತುಪಡಿಸಿದರೆ ನಾಟಕದಲ್ಲಿ ಯಾವ ಹೊಸತನವೂ ಇಲ್ಲ. ಕಾಮಾತುರತೆಯ ಸನ್ನಿವೇಶದಲ್ಲಿ ಕ್ಯಾರೆಟ್ ಕಚ್ಚಿ ತಿನ್ನುವುದು (ಯಕ್ಷಗಾನದಲ್ಲಿ ಹೊಸತನ (?) ತರುವ ಹಾಸ್ಯಗಾರರು ಟೈ ತರಹ ಬಟ್ಟೆ ಕಟ್ಟಿಕೊಂಡು ಸಿಂಬಳ ಉಜ್ಜಿಕೊಂಡಂತೆ), ಕೋಟೆಯಲ್ಲಿದ್ದ ಹೆಂಡತಿಯನ್ನು ಹಾಸಿಗೆಗೆ ಕರೆವಾಗ ಆಡುವ ಮಾತುಗಳು (ನನ್ನದು ಎದ್ದು ನಿಂತಿದೆ ಇತ್ಯಾದಿ), ದಂಡವೊಂದನ್ನು ಕಾಲುಗಳ ಮಧ್ಯೆ ಹಾಕಿಕೊಂಡು ಇಬ್ಬರು ಅತ್ತಿತ್ತ ಎಳೆದಾಡುವುದು ಮುಂತಾದವು ಅಭಿನಯ-ಮಾತು ಎರಡರಲ್ಲೂ ತೀರಾ ವಾಚ್ಯ, ಅಪಕ್ವ ಮತ್ತು ನಾಟಕದ ವಸ್ತು-ಆಶಯವನ್ನು ಕಟ್ಟಿಕೊಡುತ್ತಿಲ್ಲ ಅನ್ನಿಸಿತು ನನಗೆ. ಹೆಸರು ಮಾತ್ರ ಗ್ರೀಕರದ್ದಾಗಿದ್ದು ವೇಷ, ಮಾತು, ರಂಗಪರಿಕರ ಎಲ್ಲದರಲ್ಲೂ ಪಾತ್ರಗಳು ನಮ್ಮ ನಡುವಿನ ಜನರಂತಿದ್ದರು. ಬೇರೆಲ್ಲವನ್ನೂ ಮಾಡಿರುವುದು ನೋಡಿದರೆ, ಹೆಸರನ್ನೂ ರೂಪಾಂತರ ಮಾಡಬಹುದಿತ್ತೇನೋ. ಆದರೆ "ಉಷಃ ಕಾಲದಲ್ಲಿ ಎದ್ದು ’ ಎಂಬಂತಹ ಶುದ್ಧ ಗ್ರಾಂಥಿಕ ಭಾಷೆ, ಪಾತ್ರಗಳ ಮ್ಯಾನರಿಸಂಗೆ ಹೊಂದುತ್ತಿತ್ತೆ ?
* ಯುದ್ಧ ಮತ್ತು ಕಾಮ ಎಂಬ ದೊಡ್ಡ ವಸ್ತುವಿನ ನಾಟಕ ಅದು. ಯುದ್ಧ ತಡೆಯಲು ಕಾಮದೊಂದಿಗೆ ಯುದ್ಧ ! ಆದರೆ ನಾಟಕದ ಪೂರ್ತಿ ಅಭಿವ್ಯಕ್ತಿಗೊಳ್ಳುವುದು "ಉದ್ರೇಕ’ಗೊಳ್ಳುವ ಮತ್ತು ಅದನ್ನು ತಡೆವ ವಿಷಯಗಳಷ್ಟೆ ಅನ್ನಿಸಿತು.
* ಚರ್ಚೆಯಾದಷ್ಟೂ ಸಂತೋಷ. ಅತಿಯಾಡಿದ್ದರೆ ಮನ್ನಿಸಿ. ಮೂವರಿಗೂ ಥ್ಯಾಂಕ್ಸ್.

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP