October 26, 2007

ಅಡಪರ ಸೆಟ್ಟಿಂಗ್‌ನಲ್ಲಿ ಒಂದು ಸಿಟ್ಟಿಂಗ್

ರೆಹಗಾರ, ಸಂಗೀತಗಾರ, ಚಿತ್ರ ಕಲಾವಿದ ಹೀಗೆ ಯಾರೇ ಆಗಿರಲಿ, ತಮ್ಮ ತಮ್ಮ ಕ್ಷೇತ್ರಗಳ ಬಗ್ಗೆ ವಿವರವಾಗಿ ಮತ್ತು ಸ್ಪಷ್ಟವಾಗಿ ಹೇಳುವವರು ಕಡಿಮೆ. ಒಂದೆರಡು ಮಾಮೂಲಿ ಉದಾಹರಣೆಗಳಲ್ಲೇ ಅವರು ತಡಬಡಾಯಿಸುತ್ತಾರೆ. ಆದರೆ....ಆರಡಿ ಮೀರಿದ ಆಜಾನುಬಾಹು, ಗಂಭೀರ ನಡೆನುಡಿಯ, ಕರ್ನಾಟಕದ ಅಪ್ರತಿಮ ಸೆಟ್ ಡಿಸೈನರ್ ಶಶಿಧರ ಅಡಪ ಮೊದಲ ಭೇಟಿಯಲ್ಲೇ ನನ್ನ "ಬಲಿ’ ತೆಗೆದುಕೊಂಡರು. (ಔಟ್ ಮಾಡಿದರು ಅನ್ನೋದಕ್ಕೆ ಕನ್ನಡ ಕ್ರಿಕೆಟ್ ಭಾಷೆ !) ’ಪ್ರತಿರೂಪಿ’ ಸಂಸ್ಥೆಯ ಮಾಲೀಕನಾಗಿ ಜಾಹೀರಾತು ದೃಶ್ಯಾವಳಿಗೆ ಸೆಟ್ ವಿನ್ಯಾಸ ಮಾಡುವುದು ಅವರ ಮುಖ್ಯ ವೃತ್ತಿ . ಜತೆಗೆ ನಾಟಕ, ಸಭಾಕಾರ್‍ಯಕ್ರಮಗಳಿಗೆ, ಮಧ್ಯೆಮಧ್ಯೆ ಸಿನಿಮಾ ಕಲಾ ನಿರ್ದೇಶನ. ಎಲ್ಲದರಲ್ಲೂ ಅಚ್ಚಳಿಯದ ಛಾಪು. ಅವರ ಸ್ಪಷ್ಟ ಮಾತುಗಳನ್ನು ಇಲ್ಲಿ ಹೊಡೆದುಕೊಂಡಿದ್ದೇನೆ (ಟೈಪ್ ಮಾಡಿದ್ದೇನೆ !).

ಭಾಗ-೧
ಪಾತಕಿಗಳ ಬದುಕಿನಲ್ಲಿ ಮಾತ್ರವಲ್ಲ, ಪ್ರತಿಯೊಬ್ಬರ ಜೀವನದಲ್ಲೂ ’ಆ ದಿನಗಳು’ ಇದ್ದೇಇವೆ ! ಆ ಬಗ್ಗೆ ಹೇಳಿ. ಸುಮಾರು ೧೯೭೮ರಲ್ಲಿ ನಾನು ದಕ್ಷಿಣಕನ್ನಡದಿಂದ ಬೆಂಗಳೂರಿಗೆ ಬಂದಾಗ ಹೇಳೋದಕ್ಕೆ ಏನೂ ಇರಲಿಲ್ಲ ! ವಿಶೇಷ ಅಕಾಡೆಮಿಕ್ ಶಿಕ್ಷಣ, ಹಣದ ಬೆಂಬಲ, ಏನಾಗಬೇಕೆಂಬ ನಿರ್ಧಾರ ಯಾವುವೂ ಇರಲಿಲ್ಲ. ಮಧ್ಯಮ ವರ್ಗದಿಂದ ಬಂದಿದ್ದರಿಂದ ಕೊಟ್ಟ ಕೆಲಸ ಮಾಡುವ, ಹೊಂದಾಣಿಕೆಯ ಮನೋಭಾವವೊಂದು ಇತ್ತು. ಹೀಗಾಗಿ ಎನ್‌ಜಿಒಗಳಿಗೆ ಸೇರಿಕೊಂಡು ಕೆಲ್ಸ ಮಾಡ್ತಾ ದೇಶ-ವಿದೇಶ ಸುತ್ತಿದ್ದರಿಂದಾಗಿ ನನಗೊಂದು ವರ್ಲ್ಡ್ ವಿಷನ್ ಸಿಕ್ಕಿತು. ಅಮೆರಿಕ ಅಧ್ಯಕ್ಷರ ಚಯರ್ ಹೇಗಿರತ್ತೆ, ವ್ಯಾನ್‌ಗೋನ ಪೇಂಟಿಂಗ್ ಹೇಗಿರತ್ತೆ ಎಂಬ ತರಹದ ವಿವರಗಳು ತಿಳಿದವು. ಸಿನಿಮಾ ಕಲಾ ನಿರ್ದೇಶಕನಿಗಂತೂ ಅದು ಅನಿವಾರ್ಯ. ನಾನಾ ಕಾಲಗಳಲ್ಲಿ ದೇಶಗಳಲ್ಲಿ ಆದ ಬದಲಾವಣೆಗಳ ಅರಿವು ಇದ್ದಾಗ ಸಿನಿಮಾದಲ್ಲೂ ಕಾಲ-ದೇಶ ದೋಷವಿಲ್ಲದೆ ಪ್ರತಿಕೃತಿ ನಿರ್ಮಿಸೋಕೆ ಸಾಧ್ಯ ಅಂತ ಈಗ ಅನ್ಸತ್ತೆ.
ನಾಗಾಭರಣ, ಸಿಜಿಕೆ ಮೊದಲಾದವರ ಜತೆಸೇರಿ ನಾಟಕಗಳ ಮೂಲಕವೇ ವೇದಿಕೆ ಹಿಂದೆ ಬಂದವರಲ್ವೆ ನೀವು? ಹೌದು. ನಾಗಾಭರಣರ "ಗೀತ ಮಾಧುರಿ’ ನೃತ್ಯ ರೂಪಕ, ಸಿಜಿಕೆ ನಿದೇಶನದ ಮಹಾಚೈತ್ರ ನಾಟಕ ಇವುಗಳಲ್ಲೆಲ್ಲ ಸಿಕ್ಕಿಸಿಕ್ಕಿದ ಕೆಲಸ ಮಾಡೋದು. ಆಗ ದೊರೆತ ಬರೆಹಗಾರ-ಕಲಾವಿದರ ಸಖ್ಯ ಸಿನಿಮಾಕ್ಕೂ ಎಳೆದು ತಂದಿತು. ನಾವೆಲ್ಲ ನಾನ್‌ಫಾರ್ಮಲ್ ಆಗಿ ಕಲಿತದ್ದೇ ಜಾಸ್ತಿ. ಕಲರ್,ಡಿಸ್ಟೆಂಪರ್, ಪಿಗ್ಮೆಂಟು, ಡ್ರೈ ಬ್ರೆಷ್ ಅನ್ನೋದನ್ನೆಲ್ಲಾ ಬಿಟ್ಟು ಮಣ್ಣನ್ನೇ ಜಾಳಿಸಿ, ಫೆವಿಕಾಲ್ ಸೇರಿಸಿ, ಗಟಾರ್ ಪಂಪ್ ತಂದು ಹುಣ್ಣಿಯಾಲದಲ್ಲಿ ಮನೆ ಗೋಡೆಗೆ ಬಳಿದದ್ದು, ನಾಗಮಂಡಲದಲ್ಲಿ ಬಹಳ ಮೆಚ್ಚುಗೆ ಪಡೆದ ಮದುವೆ ದೃಶ್ಯಕ್ಕೆ ಮಾಡಿದ ಬಾಳೆಮಂಟಪ ಕೂಡಾ ನಮ್ಮ ಕಾಮನ್‌ಸೆನ್ಸ್ ಹಾಗೂ ಹಳ್ಳಿಯವರಿಂದ ಎರವಲು ಪಡೆದ ಜ್ಞಾನದ್ದು. ಹಾಗಂತ ಆರ್ಟ್ ಫಿಲಂಗಳಿಗೇ ನಾನು ಕೆಲಸ ಮಾಡಿದರೂ, ಅವುಗಳಲ್ಲಿ ಮೂರು ಜನಪ್ರಿಯವೂ ಆದವು. ಮೈಸೂರು ಮಲ್ಲಿಗೆ, ಶಿಶುನಾಳ ಷರೀಫ ಮತ್ತು ನಾಗಮಂಡಲ. ಇದರಿಂದ ಜನ ಗುರುತಿಸೋದಕ್ಕೆ ಸಾಧ್ಯ ಆಯ್ತು. ನಾಗಮಂಡಲ, ಕಾನೂರು ಹೆಗ್ಗಡಿತಿ, ಸಿಂಗಾರೆವ್ವಗಳಿಗೆ ಪ್ರಶಸ್ತಿ ಬಂದಾಗ, ಅದು ಕೆಲಸದಲ್ಲೊಂದು ಪ್ರಮೋಶನ್ ಅಂತ ತಿಳ್ಕೊಂಡವನು ನಾನು. ಕೆಲವರು ಅವಾರ್ಡ್‌ನ್ನ ಸಾಮಾಜಿಕ ಗೌರವ ಅಂತ ತಿಳ್ಕೊಂಡು ಸುಮ್ಮನಾಗ್ತಾರೆ. ಆದರೆ ನಮ್ಮ ಫೀಲ್ಡಲ್ಲಿ ಅದನ್ನ ಕ್ಯಾಶ್ ಆಗಿ ಬದಲಾಯಿಸೋದು ಹೇಗೆ ಅಂತಲೇ ನಾನು ಯೋಚಿಸೋದು.
ಕಲಾಕ್ಷೇತ್ರದಲ್ಲಿ ರಾತ್ರಿ ಹನ್ನೊಂದೂವರೆ ತನಕ ನಾಟಕ ಪ್ರಾಕ್ಟೀಸ್ ಮಾಡಿ ಪ್ರಕಾಶ್ ರೈ, ನೀವೆಲ್ಲಾ ಚಿತ್ರಾನ್ನ ತಿಂದು, ಟಿವಿಎಸ್ ಹತ್ಕೊಂಡು ಹೋಗ್ತಾ ಇದ್ದಿರಿ. ಈ ಫೋರ್ಡ್ ಕಾರು-ಡ್ರೈವರು ಎಲ್ಲಿಂದ?! ನಾನೂ ಬೆಂಗಳೂರು ಬಿಟ್ಟು ಬಾಂಬೆಗೆ ಹೋಗಿದ್ರೆ ಇದಕ್ಕಿಂತ ನಾಲ್ಕು ಪಟ್ಟು ಸಂಪಾದನೆ ಮಾಡಬಹುದಿತ್ತು. ಅದು ಬೇಡ. ನನಗೆ ಕನ್ನಡ-ಕನ್ನಡಿಗರು-ಕರ್ನಾಟಕ ಬೇಕು ಅಂತ ಇಲ್ಲಿ ಉಳಿದುಕೊಂಡದ್ದು. "ಅಗ್ನಿವರ್ಷ್’ ಅಂತಹ ದೊಡ್ಡ ಹಿಂದಿ ಸಿನಿಮಾಕ್ಕೆ ಕೆಲಸ ಮಾಡಿದಾಗಲೂ ಕನ್ನಡದ ಕಾರ್ಪೆಂಟರ್, ಪೈಂಟರ್‌ಗಳನ್ನೇ ಕರ್‍ಕೊಂಡು ಹೋಗಿದೀನಿ. ಆದರೆ ೨೫-೩೦ ಜನಕ್ಕೆ ಪ್ರತಿದಿನ ಕೆಲಸ ಕೊಡೋವಷ್ಟಾಗ್ತೀನಿ ಅಂತ ಕನಸಿನಲ್ಲೂ ಆವತ್ತು ಅಂದುಕೊಂಡಿರಲಿಲ್ಲ. ಈಗ ಜಾಹೀರಾತು ಫಿಲ್ಮ್ ತಯಾರಿಯಲ್ಲಿ ನಮ್ಮ "ಪ್ರತಿರೂಪಿ’ ಸೌತ್‌ಇಂಡಿಯಾದಲ್ಲಿ ಲೀಡಿಂಗ್ ಕಂಪನಿ ! ಮೊನ್ನೆ ಮೊನ್ನೆ ವೊಡಾಫೋನ್ ಆದ ಹಚ್ ನಾಯಿಗೆ ಮಾಡಿದ ಮನೆಯ ಸೆಟಿಂಗ್ ನಮ್ಮದೇ. ಸ್ವಿಫ್ಟ್ ಕಾರು, ವಾಟಿಕಾ ಹೀಗೆ ದೊಡ್ಡ ದೊಡ್ಡ ಪ್ರಾಡಕ್ಟ್‌ಗಳ ಜಾಹೀರಾತು ನಿರ್ಮಾಣದಲ್ಲಿ ಕೆಲಸ ಮಾಡಿದ ಹೆಮ್ಮೆ ನಮ್ಮ ತಂಡಕ್ಕೆ.ಅತ್ಯಂತ ಸೊಫಿಸ್ಟಿಕೇಟೆಡ್ ವರ್ಕ್ ನಮ್ಮದು. ಆರ್ಟಿಸ್ಟ್, ಗ್ರಾಫಿಕ್ ಡಿಸೈನರ್, ಇಂಟರ್‌ನೆಟ್ ಎಲ್ಲಾ ಇವೆ. ಇವನ್ನೆಲ್ಲ ನಾನು ಬಾಂಬೆನಲ್ಲಿ ಅಂತಾರಾಷ್ಟ್ರೀಯ ನಿರ್ದೇಶಕರಿಂದ ಕಲಿತದ್ದು. ನನ್ನ ಬಳಿ ಒಳ್ಳೇ ಬುಕ್ ಕಲೆಕ್ಷನ್ ಇದೆ, ಬಿಟ್ರೆ ಅರುಣ್ ಸಾಗರ್ ಹತ್ರ ಇದೆ.
ನಾಟಕದ ರಂಗಸಜ್ಜಿಕೆಗೂ ಸಿನಿಮಾದ್ದಕ್ಕೂ ಏನು ಮುಖ್ಯ ವ್ಯತ್ಯಾಸ? ನಾಟಕದಲ್ಲಿ ಒಂದು ಡೈರೆಕ್ಷನ್‌ನಲ್ಲಿ ಕಾಣೋ ಸೆಟ್ಟಿಂಗ್ ಇದ್ರೆ ಸಾಕು. ಸಿನಿಮಾದಲ್ಲಿ ಕ್ಯಾಮರಾ ಎಲ್ಲ ಕಡೆಗೂ ತಿರುಗುತ್ತೆ. ನಾಟಕದಲ್ಲಿ ನೋಡೋದು ಮನಸ್ಸು. ಸಿನಿಮಾದಲ್ಲಿ ಕ್ಯಾಮರಾ. ಮನಸ್ಸು ಅಪೂರ್ಣವನ್ನ ಪೂರ್ಣ ಮಾಡಿಕೊಳ್ಳುತ್ತೆ ! ಕ್ಯಾಮರಾ ಯೋಚನೆ ಮಾಡಲ್ಲ, ಕಂಪ್ಲೀಟ್ ಮಾಡಲ್ಲ. ಎಸ್. ರಾಮಚಂದ್ರ ಹೇಳೋರು, "ಕ್ಯಾಮರಾ ಫ್ರೇಮ್‌ನ ಹೊರಗೆ ಅರಮನೆ ಇದ್ರೂ ಲೆಕ್ಕಕ್ಕಿಲ್ಲ’ ಅಂತ.
ಒಡನಾಟಕ್ಕೆ ಸಿಕ್ಕ ಹಿರಿಯರ ಕತೆ ಹೇಳ್ತೀರಾ? ಸಾಮಾನ್ಯದಿಂದ ಅದ್ಭುತ ಸೃಷ್ಟಿ ಮಾಡಬಲ್ಲ ಕನ್ನಡದ ಅತ್ಯುತ್ತಮ ಕ್ಯಾಮರಾಮ್ಯಾನ್ ಎಸ್. ರಾಮಚಂದ್ರ ಅವರು. ಕಾನೂರು ಹೆಗ್ಗಡತಿಯ ಎತ್ತಿನಗಾಡಿ ದೃಶ್ಯದಲ್ಲಿ ನಿಜವಾಗಿ ಗಾಡಿ ಓಡಿಯೇ ಇಲ್ಲ ! ಬರೀ ಚಕ್ರ ತಿರುಗುತ್ತೆ, ಮರಗಳು ಓಡುತ್ವೆ. ಎಲ್ಲೀವರೆಗೆ ಅಂದರೆ ಡಮ್ಮಿ ಕೊಂಬುಗಳನ್ನು ಶೂಟ್ ಮಾಡಿ ಗಾಡಿ ಓಡೋ ಥರದ ಎಫೆಕ್ಟ್ ಕೊಟ್ಟಿದ್ದಾರೆ ! ಎಲ್ಲೂ ದುಂದುವೆಚ್ಚ ಮಾಡದ ಕಾಸರವಳ್ಳಿಯವರ ಎಕನಾಮಿಕ್ಸ್ ಕೂಡಾ ಬಹಳ ಇಷ್ಟ. ಒಂದು ಡಲ್‌ಗ್ರೀನ್ ಡಬ್ಬ ಇಡಿ, ಅದರ ಎದುರು ಸಿಲ್ವರ್ ಚೆಂಬು ಇಡಿ ಅಂತ, ಬರೀ ಎರಡು ವಸ್ತುಗಳಿಂದ ಒಂದು ಫ್ರೇಮ್‌ಗೆ ಡೆಪ್ತ್ ಕ್ರಿಯೇಟ್ ಮಾಡ್ತಾರೆ.
ನನಗೆ ಅತ್ಯಂತ ಖುಶಿ ಕೊಟ್ಟ ಆರ್ಟ್ ಡೈರೆಕ್ಷನ್, "ದ್ವೀಪ’ ಸಿನಿಮಾದ್ದು. ಇನ್ನೊಂದು ಕವಿತಾ ಲಂಕೇಶ್‌ರ "ದೇವೀರಿ’. ಅಲ್ಲಿ ೩೫ ಪರ್ಸೆಂಟ್ ಸಿನಿಮಾ ಸ್ಲಮ್‌ನಲ್ಲಿ ನಡಿಯತ್ತೆ. ಆದರೆ ಅಷ್ಟೂ ಬರೀ ಸೆಟ್ಟಿಂಗ್ಸ್.
ಕೆಲವರು ಏನೇ ಕಮೆಂಟ್ ಮಾಡಿದ್ರೂ ಕಾರ್ನಾಡ್ ಅವರ ಮನುಷ್ಯತ್ವ ವಿಶೇಷವಾದ್ದು. ತೀರ್ಥಹಳ್ಳಿಯಲ್ಲಿ ಶೂಟಿಂಗ್ ಮಾಡ್ತಾ ಇದ್ದಾಗ ಉದ್ದ ಬಾಲದ ಹಕ್ಕಿಯೊಂದು ಕಾಣಿಸ್ತ್ತು. ಅದನ್ನ ನಮ್ಮೂರಲ್ಲಿ ಪಿಂಗಾರ ಹಕ್ಕಿ ಅಂತಾರೆ ಅಂತ ಜತೆಯಲ್ಲಿದ್ದವನಿಗೆ ಹೇಳಿದೆ. ಆಗ ಕಾರ್ನಾಡ್‌ರು, ಅದನ್ನ ಬರ್ಡ್ ಆಫ್ ಪ್ಯಾರಡೈಸ್ ಅಂತಾರೆ, ನಿಮಗೂ ಹಕ್ಕಿ ನೋಡೋ ಹುಚ್ಚು ಇದಿಯಾ ಅಂದ್ರು. ರಾತ್ರಿ ರೂಮಿಗೆ ಕರೆದು ಸಲೀಂ ಅಲಿ ಪುಸ್ತಕ ಕೈಗೆ ಕೊಟ್ಟು ಇದರಲ್ಲಿ ಯಾವುದಾದ್ರೂ ಹಕ್ಕಿ ಕಂಡರೆ ಗುರುತಿಸಿ, ಹೊಸತು ಕಂಡ್ರೆ ನನ್ನ ಕರೀರಿ ಅಂದ್ರು !
ಈಗ ಶಿರಸಿಯಲ್ಲಿರುವ ಹಿರಿಯರಾದ ನಜೀರ್ ಅವರನ್ನಂತೂ ಕನ್ನಡದ ಕಲಾ ನಿರ್ದೇಶಕರು ನೆನಪಿಸಿಕೊಳ್ಳಲೇಬೇಕು. ೭೦ರ ಆರಂಭದ ಹೊತ್ತಿಗೆ ಮೆಡ್ರಾಸ್‌ನಲ್ಲಿ ನಡೀತಿದ್ದ ಕೆಲಸಗಳೆಲ್ಲಾ ಬೆಂಗಳೂರಲ್ಲೇ ಆಗತೊಡಗಿದಾಗ ಕನ್ನಡದ ಕಾರ್ಪೆಂಟರ್, ಪೈಂಟರ್‌ಗಳನ್ನು ಬೆಳೆಸಿದವರೇ ಅವರು. ಕನ್ನಡದವರಿಗೆ ಕೆಲಸ ಸಿಗಬೇಕು ಅಂತ ಅವರಿಗೆ ಹೃದಯದಲ್ಲಿತ್ತು .
ನಿಮ್ಮ ಸೆಟ್ಟಿಂಗ್ಸ್ ಬಹಳ ಬಹಳ ಕಲಾತ್ಮಕ. ಎಲ್ರಿಗೂ ಒಪ್ಪಿಗೆಯಾಗೋದು ಕಷ್ಟ ಅನ್ನೋ ಅಭಿಪ್ರಾಯವೂ ಇದೆಯಲ್ಲ? ನನಗೂ ರೊಮ್ಯಾಂಟಿಕ್ ಇಮೇಜಸ್, ಕಮರ್ಷಿಯಲ್ ಇಮೋಷನ್ ಬಯಸೋದ್ರ ಬಗ್ಗೆ ಏನೇನೂ ತಕರಾರಿಲ್ಲ. ಪ್ರಾಡಕ್ಟ್ ಮಾರುವ ಗುರಿಯೇ ಮುಖ್ಯವಾಗಿರುವ ಜಾಹೀರಾತು ಸಿನಿಮಾಗೆ ನಾನು ಕೆಲಸ ಮಾಡೋನೇ. ಜಗಜಗ ಅನ್ನೋ ಸಾಂಗ್ ಸೆಟ್‌ಗಳ ಬಗ್ಗೆ ದ್ವೇಷ ಇಲ್ಲ. ಈಗಲೂ ನಾನು ಒಳ್ಳೆ ಕಮರ್ಷಿಯಲ್ ಸೆಟ್ ಹೊಡೀಬಲ್ಲೆ. ಆದರೆ ನನ್ನ ತಕರಾರಿರುವುದು ತೀರಾ ಬಾಲಿಶ ಹುಚ್ಚುಗಳ ಬಗ್ಗೆ ಮಾತ್ರ. ಇರೋಟಿಕ್ ಫೀಲಿಂಗ್ ಬಗ್ಗೆ ನಮ್ಮಲ್ಲಿ ಹಳೆ ಮನೋಭಾವವೇ ಇದೆ. ಹೊಕ್ಕಳಿಗೆ ಮುತ್ತು ಕೊಡೋದು, ತೊಡೆ ತೋರಿಸೋದು ಇಷ್ಟೇ ಅಂತ ತಿಳ್ಕೊಂಡಿದ್ದಾರೆ. ಆಧುನಿಕ ಮನುಷ್ಯನ ಫೀಲಿಂಗ್‌ಗಳು ಬೇರೆಬೇರೆ ಥರ ಇವೆ. ಸೂರಿಗೆ ಆ ಪ್ರಜ್ಞೆ ಇದೆ. ತನ್ನ ಸಿನಿಮಾಗಳಲ್ಲಿ ಕಲರ್, ಟೆಕ್ಸ್‌ಚರ್, ಸರ್ಫೇಸ್ ಎಲ್ಲ ಚೆನ್ನಾಗಿ ಬಳಸ್ತಾನೆ. ಅವನ ಹೊಸ ಚಿತ್ರ "ಇಂತಿ ನಿನ್ನ ಪ್ರೀತಿಯ’ ದಲ್ಲಿ ಬಾತ್‌ಟಬ್ ದೃಶ್ಯವನ್ನೂ ಅಗ್ಲಿ ಆಗದೆ ತೀರಾ ಡಿಫರೆಂಟ್ ಆಗಿ ತೋರಿಸೋದಕ್ಕೆ ಟ್ರೈ ಮಾಡಿದ್ದೇವೆ. ಸಿಕ್ಕಿದ್ದನ್ನು ಪಕ್ಕನೆ ಗ್ರಹಿಸುವ ಸೂರಿಯಂತಹ ಹೊಸ ಯುವಕರಿಗೆ, ನನಗೆ ಗೊತ್ತಿದ್ದನ್ನು ಹೇಳೋಕೂ ಬಹಳ ಖುಶಿ. "ನೀವು ಕೊಟ್ಟಿದ್ದನ್ನೆಲ್ಲಾ ರೇಪ್ ಮಾಡ್ಬಿಟ್ಟೆ ಸಾರ್’ ಅಂತಾನೆ !

2 comments:

ಕಳ್ಳ ಕುಳ್ಳ October 27, 2007 at 12:18 AM  

bahala bereyade tharada 'sum-darshana' (same) alla! bhashe, prasneya roopa, holahu, presentationgalalli hosathana ide. keep it up sudhanva!
it's trend 'set'ing!
-vikas

jomon varghese October 27, 2007 at 7:46 AM  

ಲೇಖನ ಅದ್ಭುತವಾಗಿದೆ.. ಅಡಪರ ತಲೆಯಲ್ಲಿ ಎಂಥ ಅದ್ಭುತ ಐಡಿಯಾಗಳಿವೆ. ನಿಜವಾಗಿಯೂ ಆ ಮನುಷ್ಯನ ಕ್ರಿಯೇಟಿವಿಟಿಗೆ ನಮ್ಮದೂ ಶುಭ ಹಾರೈಕೆಗಳಿರಲಿ..

ದೇವೇರಿ ನನಗೆ ತುಂಬಾ ಇಷ್ಟವಾದ ಚಿತ್ರ. ಇಡಿ ಸ್ಲಂ ಚಿತ್ರೀಕರಣ ಸೆಟ್ಟಿಂಗ್ ಅಂದ್ರೆ.. ನಂಬಿಕೆ ಆಗ್ತಾ ಇಲ್ಲ ಮಾರಾಯರೆ.. ಚಿತ್ರಕ್ಕಿಂತ ಚಿತ್ರದ ಚಿತ್ರೀಕರಣ,ಕ್ಯಾಮರಾ ಕೈಚಳಕದ ಕುರಿತು ನನಗೆ ತುಂಬಾ ಕುತೂಹಲವಿದೆ.. ಮುಂದೊಮ್ಮೆ ಅವಕಾಶ ಸಿಕ್ಕಿದರೆ ಅಡಪರನ್ನು ಭೇಟಿಯಾಗುವ ಪ್ರಯತ್ನ ಮಾಡುತ್ತೇನೆ..

ಅಡಪರನ್ನು ಪರಿಚಯಿಸಿದ ನಿಮಗೂ ನಿಮ್ಮ ಸೃಜನಶೀಲ ಬರವಣಿಗೆಗೂ ಧನ್ಯವಾದಗಳು..

jomon varghese.

http://www.jomon- malehani.blogspot.com

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP