August 08, 2007

ಒಂದು ಅ'ಮರ' ಲೋಕ

ರಾತ್ರಿಯ ಸೊಲ್ಲಿಗೆ ಕೆಲಕ್ಷಣ ಹೊಸ ಆವೇಶ. ಏನು ಏನು ಏನದು ಸದ್ದು ಅನ್ನುವಷ್ಟರಲ್ಲಿ ಕತ್ತಲನ್ನು ಕದಡುತ್ತಾ ಆ ಮರ ಧರಾಶಾಹಿಯಾಗಿದೆ. ಚಂದ್ರ ಕೊಂಚ ಮುಂದಕ್ಕೋಡಿ ಮುಗಿಲೆತ್ತರದ ಕೊಂಬೆಗಳಿಂದ ತಪ್ಪಿಸಿಕೊಂಡಿದ್ದಾನೆ ! ಎಲೆಗಳ ಮಧ್ಯೆ ನಕ್ಷತ್ರಗಳು ತೊಪತೊಪ ಉದುರಿದವೆ? ಮತ್ತೆ ಎಲ್ಲೆಲ್ಲೂ ಗಾಢ ಮೌನ. ಎಲ್ಲ ಒಂದರೊಳಗೊಂದು ಬೆರೆತಂತೆ ಸುತ್ತಲೂ ವ್ಯಾಪಿಸುತ್ತಿದೆ ಹೊಸ ಗಂಧ. ಬೆಳದಿಂಗಳು ಕೊಂಚ ಕಲಕಿ ಹೋಗಿದೆ. ಗಾಳಿಯೀಗ ಪಶ್ಚಾತ್ತಾಪದಿಂದ, ಸುಸ್ತಾದವರಂತೆ ಹದವಾಗಿ ನಯವಾಗಿ ಬೀಸುತ್ತಿದೆ. ಮಳೆಯು ಕಣ್ಣೀರಿಡುತ್ತಿದೆ.

ಹಗಲು ಅದೆಷ್ಟೋ ಜೀವಿಗಳನ್ನು ಸೆಳೆದುಕೊಂಡಿದ್ದ ಮರವೀಗ ಒಬ್ಬಂಟಿ. ಕಡು ಹಸಿರು ಬಣ್ಣ ಸುರಿಸುತ್ತಿದೆ. ಕುರುಕ್ಷೇತ್ರ ಯುದ್ಧದಲ್ಲಿ , ಘಟೋತ್ಕಚ ಆಗಸದಿಂದ ಕೆಡೆದು ಬಿದ್ದಂತಿದೆ. ಕತ್ತಲಲ್ಲಿ ಏದುಸಿರು ಬಿಡುತ್ತಾ ಏನನ್ನೋ ತಡಕಾಡುವಂತಿದೆ ಅದರ ರೀತಿ. ಕರಿ ಕತ್ತಲೆಯಲ್ಲಿ ಕರಗಿಹೋಗುತ್ತಿದೆ. ಮರದ ಕೆಲವು ಎಲೆಗಳಷ್ಟೇ ಅಲ್ಲಾಡುತ್ತಿವೆ-ಹಸುಗಳ ಕಿವಿಯಂತೆ. ಒದ್ದೆಯಾದ ಆ ಎಲೆಗಳ ಅಂಚುಗಳು ಮಾತ್ರ ಬೆಳದಿಂಗಳಲ್ಲಿ ಹೊಳೆಯುತ್ತಾ ಜೀವ ಹಿಡಿದಿಟ್ಟುಕೊಂಡಿವೆ. ಏನೋ ಅನಾಹುತವಾಯಿತೆಂದು ಆಗಿಂದ ಬೊಗಳುತ್ತಲೇ ಇದೆ ನಾಯಿ. ಉದ್ದುದ್ದ ವಕ್ರವಕ್ರ ಬೇರುಗಳು ಅತ್ಯಂತ ವಿಕಾರವಾಗಿ ಕಾಣುತ್ತಿವೆ. ಮಳೆಯ ಸದ್ದಿಗೆ ಈಗ ಹೊಸ ನಾದ-ಲಯ ಪ್ರಾಪ್ತವಾಗಿದೆ.

ಛೆ, ಬೆಳಗಾದರೆ ಪಾಪ ಹಕ್ಕಿಗಳೇನು ಮಾಡಬೇಕು ? ಇಬ್ಬನಿ ಎಷ್ಟು ಬೇಗ ಜೀವ ಕಳೆದುಕೊಂಡು ಮಣ್ಣು ಸೇರಬೇಕು? ಬೆಳಕು ಬರೀ ಅಂಗಳಕ್ಕೆ ಜಗಮಗ ಸುರಿದು ವ್ಯರ್ಥವಾಗಬೇಕು ! ದುಂಬಿ, ಜೇನ್ನೊಣ, ಅಳಿಲು, ಮಂಗ, ಇರುವೆಗಳಿಗೆ ಈಗ ಏನನ್ನಿಸೀತು? ನಮ್ಮ ಹಟ್ಟಿಯ ಮಾಡಿನಂಚಿನಿಂದ ಮೂಡುವ ಸೂರ್‍ಯ ನಾಳೆ ಕೊಂಚ ಅನುಮಾನಿಸಿಯಾನು. ಅಮ್ಮ ಮಾಡಿಟ್ಟಿರುವ ಮಾವಿನ ಹಣ್ಣಿನ ಮಾಂಬಳ ಎಷ್ಟು ಸಮಯ ತಿನ್ನಲುಳಿದೀತು ? ಬೇಲಿ ಹಾರಿ ತೋಟ ಸೇರಿ ಈ ಮರದ ಕೆಳಗೇ ಪಟಪಟ ಹನಿಗಳಿಗೆ ನಡುಗುತ್ತ ರಾತ್ರಿ ಕಳೆಯುವ ತುಡುಗು ದನಗಳಿಗೆ ಇನ್ನೆಲ್ಲಿ ಜಾಗ? ಮರಕ್ಕೆ ಕೊಂಚ ಹಬ್ಬಿದ್ದ ಕಾಳುಮೆಣಸಿನ ಬಳ್ಳಿ ಏನಾಯಿತೋ. ಅಬ್ಬಾ..ದಕ್ಷಿಣಕ್ಕಿದ್ದ ಜೇನುಪೆಟ್ಟಿಗೆ ಮಾತ್ರ ಉಳಿದುಕೊಂಡಿದೆ. ಇಲ್ಲಿ ನೆರಳಿದೆಯೆಂದು ಗೂಟ ಹಾಕಿ ಅಮ್ಮ ಜತನದಿಂದ ಬೆಳೆಸಿದ್ದ ನಾಲ್ಕೇನಾಲ್ಕು ವೆನಿಲ್ಲಾ ಬಳ್ಳಿಗಳೂ ಖಲಾಸ್. ಒಂಚೂರೂ ಹುಳ ಹಿಡಿಯದ ಮಾವಿನ ಸೊಪ್ಪು , ನಾಡಿದ್ದು ಪೂಜೆಯ ದಿನ ಒಂದು ಬಾಗಿಲಿಗಾದರೂ ತೋರಣ ಕಟ್ಟುವುದಕ್ಕೆ ಉಳಿದೀತೇ? ತಮ್ಮನ ಜೋಕಾಲಿ ಎಲ್ಲಿದೆಯೋ...

ಬೆಳ್ಳಂ ಬೆಳಗ್ಗೆ ಹೂ ಕೊಯ್ಯಲು ಅಂಗಳಕ್ಕಿಳಿಯುವ ಅಜ್ಜಿ , ಒಮ್ಮೆ ಗಲಿಬಿಲಿಗೊಂಡಾರು. ಅಂಗಳ ಪೂರ್ತಿ ಹಾಳಾಯ್ತು ಅಂದಾರು. ಸ್ವಲ್ಪ ಹೊತ್ತು ಛೆ ಛೆ ಎನ್ನುವ ಅಪ್ಪ ಮರುಕ್ಷಣ, ಮರದಿಂದ ಬರುವ ಲಾಭಗಳ ಬಗ್ಗೆ ಯೋಚಿಸಿಯಾರು. ಅಮ್ಮ ಬೆಳಗ್ಗೆದ್ದು "ಹಿಂದಿನವರಿಗೆ ಬುದ್ಧಿ ಇಲ್ಲ. ಮನೆ ಮೇಲೆ ಬಿದ್ದಿದ್ರೆ ಏನು ಗತಿ ಆಗ್ತಾ ಇತ್ತು? ಇಷ್ಟು ಹತ್ರ ಯಾರಾದ್ರೂ ಮಾವಿನ ಗಿಡ ನೆಡ್ತಾರಾ? ಮಾವಿನ ಹಣ್ಣು ಆಗೋದಕ್ಕೆ ಶುರು ಆಯ್ತು ಅಂದ್ರೆ ನುಸಿಯೋ ನುಸಿ. ತೋಟದ ಆ ತೆಂಕ ಊಲೆಯಲ್ಲಿ ನಾನು ಹೊಸ ಗಿಡ ನೆಡ್ತೇನೆ' ಅಂತ ಹೇಳಿಯೇ ಹೇಳುತ್ತಾಳೆ. ತಮ್ಮನಂತೂ ಮರದ ಮೇಲೆಲ್ಲಾ ಹತ್ತಿ. "ನೋಡಿ ನೋಡಿ ನಾನು ಇಷ್ಟು ಸಣ್ಣವನು ಮರದ ತುದಿಗೇ ಹತ್ತುತ್ತೇನೆ' ಅಂತ ಪರಾಕ್ರಮ ಕೊಚ್ಚಿ ನಗುವುದು ಖಂಡಿತ. ಬೆಳಗ್ಗೆ ಒಂಭತ್ತಕ್ಕೆ ಬರುವ ಕೆಲಸದ ಚನಿಯ, ಮರ ಯಾವ್ಯಾವ ದಿಕ್ಕಿಗೆ ಬಿದ್ದಿದ್ದರೆ ಎಷ್ಟೆಷ್ಟು ಹಾನಿಯಾಗುತ್ತಿತ್ತು, ಈಗ ಮರ ಕೊಯ್ಯಲು ಎಷ್ಟು ಜನ ಬೇಕಾಗಬಹುದು, ನಾನೆಷ್ಟು ಬಾರಿ ಈ ಮರ ಹತ್ತಿ ಮಾವಿನಹಣ್ಣು ಕೊಯ್ದಿದ್ದೆ , ಉಪ್ಪಿನಕಾಯಿ ಹಾಕಲು ಬಹಳ ಸೊಗಸಾಗಿರುವ ಇದರ ಮಾವಿನ ಮಿಡಿ ಹಾಗೂ ಉಳಿದ ಮರಗಳ ಮಿಡಿಗಳಿಗೂ ಇರುವ ವ್ಯತ್ಯಾಸವೇನು, ತನ್ನ ಅಪ್ಪನೂ ಹಿರಿಯ ಧನಿಗಳೂ ಇದನ್ನು ತಂದು ನೆಟ್ಟದ್ದು ಯಾವಾಗ ಅಂತೆಲ್ಲಾ ಹೇಳಬಹುದು. ಕೊನೆಗೆ, "ಮನೆ ಬಾಗಿಲಿಗೆ ಬಂದ ಕೊಂಬೆ ಸವರೋದಕ್ಕೇ ಮೂರು ಜನ ಬೇಕು. ನಾನಿವತ್ತು ರಜೆ ಅಂತ ಹೇಳಿ ಹೋಗಲು ಬಂದೆ' ಅಂತನ್ನಲೂಬಹುದು ! ಮುಂದಿನ ವಾರ ಬರುವ ಮಾವ, "ಛೆ ಈ ಮರಕ್ಕೊಂದು ಕಸಿ ಕಟ್ಟಿ ಗಿಡವನ್ನಾದರೂ ಮಾಡಿಕೊಳ್ಳಬೇಕಾಗಿತ್ತು' ಎನ್ನುವುದು ಗ್ಯಾರಂಟಿ.ಪ್ರತಿ ವರ್ಷ ಮಾವಿನಮಿಡಿ ಕೊಂಡೊಯ್ಯುತ್ತಿದ್ದ ಆಚೀಚೆಯ ಮನೆಯವರು , "ಛೇ, ಒಂದು ಒಳ್ಳೇ ಮರ ಹೋಯ್ತು, ಯಾರ ದೃಷ್ಟಿ ಆಯ್ತೋ, ಈ ಮಳೆ ಗಾಳಿಗೆಲ್ಲಾ ಬೀಳೋವಷ್ಟು ವಯಸ್ಸಾಗಿರಲಿಲ್ಲ ಮರಕ್ಕೆ' ಅನ್ನದೇ ಇದ್ದಾರೆಯೇ? ವರುಷಕ್ಕೊಮ್ಮೆ ಬರುವ ಬೆಂಗಳೂರು ದೊಡ್ಡಮ್ಮ ,"ಹೇ, ಏನೋ ಒಂದು ವ್ಯತ್ಯಾಸ ಕಾಣುತ್ತಲ್ಲಾ ಇಲ್ಲಿ, ಏನೀ ವಿಚಿತ್ರ ಅನ್ಸುತ್ತೆ ' ಅಂತ ಹೇಳಬಹುದು.ಈ ಮರದ ಕೆಳಗೇ ನಾಲ್ಕು ಕಂಬ ಹಾಕು ಗೋಣಿ ಹೊದಿಸಿ ಮನೆಯಾಟ ಆಡಿದ್ದ, ನಾಟಕವಾಡಿ ಕುದುರೆಗಳನ್ನು ಈ ಮರಕ್ಕೇ ಕಟ್ಟಿದ್ದ, ಕಾಂಡಕ್ಕೆ ವಿಕೆಟ್ ಗುರುತು ಹಾಕಿ ಕ್ರಿಕೆಟ್ ಆಡಿದ್ದ ಮಾವಂದಿರ ಮಕ್ಕಳೆಲ್ಲ ಇನ್ನೊಮ್ಮೆ ಬಂದಾಗ ಅವರಿಗೂ ಬಾಲ್ಯದ ನೆನಪು ಬಂದೀತು.

ಒಂದುವೇಳೆ ಈ ಮರ ಬೀಳದೇ ಇದ್ದಿದ್ದರೆ ?!

-ಸುಧನ್ವಾ ದೇರಾಜೆ

0 comments:

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP