August 18, 2007

ಕುಮಾರ ಪರ್ವತದ ಕೌಮಾರ್ಯ ಹಾಗೆಯೇ ಇರಲಿ!
ಕೆಂಪು ಸೂರ್ಯ, ಹಸಿರು ಕಾಡು,ಬಿಳಿ ಮೋಡ ಎಲ್ಲವೂ ಕತ್ತಲಲ್ಲಿ ಮುಳುಗಿವೆ. ಕುಮಾರಪರ್ವತವೇ ಭಯದಿಂದ ಕುಳಿತಂತಿದೆ. ಬೆಂಕಿ ಹದವಾಗಿ ಉರಿಯುತ್ತಿದೆ. ಆಕಾಶ ಮೆಲ್ಲನೆ ಚಲಿಸುತ್ತಿದೆ. ಎಲೆಎಲೆಗಳ ನಡುವೆ ಗಾಳಿ ಸುಳಿದಾಡುತ್ತಿದೆ. ಆಗೊಮ್ಮೆ ಈಗೊಮ್ಮೆ ಎಂಬಂತೆ ಹರಿಯುತ್ತಿರುವ ನೀರು ವಿಚಿತ್ರ ಸದ್ದುಗಳನ್ನು ಹೊರಡಿಸುತ್ತಿದೆ. ಸದ್ಯಕ್ಕೆ ಕುಳಿತ ಜಾಗವಷ್ಟೇ ಭದ್ರಪೀಠ.

ಗರಿಬಿಚ್ಚಿದ್ದ ಹಗಲು. ಕುಕ್ಕೆ ಸುಬ್ರಹ್ಮಣ್ಯದ ಪೇಟೆ ತುಂಬ ಸುವಾಸನೆ ಬೀರುವ ಊದುಕಡ್ಡಿ, ಭಕ್ತಿಗೀತೆ. ಅಲ್ಲಿಂದ ಮಣ್ಣುಮಾರ್ಗದಲ್ಲಿ ಒಂಚೂರು ಸಾಗಿದರೆ ಕಾಡುಹಾದಿ ಆರಂಭ. ಆರಂಭದಲ್ಲೇ ಏರುಹಾದಿ. ಬಲಬದಿಗೆ 'ಭೀಮನ ಹೊಳೆ'. ಅರ್ಧ ಗಂಟೆಯ ದಾರಿ ಹತ್ತಿದ್ದೇ ತಡ ಒಬ್ಬ ಬೆವರೊರೆಸಿಕೊಂಡು ಉದ್ಗರಿಸಿದ 'ಆಹಾ, ಇಲ್ಲಿ ಇಳಿಯುತ್ತ ಸಾಗುವುದು ಎಷ್ಟು ಸುಲಭ!' ಎಲ್ಲರ ಕೈಯಲ್ಲೂ ಒಂದೊಂದು ಊರುಗೋಲು. ಕೋಲನ್ನೂರುತ್ತ ಹತ್ತಿದಂತೆಲ್ಲ, ಪರ್ವತ ಕೆಳಕ್ಕೆ ನಾವು ಮೇಲಕ್ಕೆ.ತನ್ನೆಲ್ಲ ಬೆಡಗು ಬಿನ್ನಾಣ ತೆರೆದಿಟ್ಟ ಹಳದಿ ಹೂವು, ಕೆಂಪಗೆ ಚಿಗುರಿ ನಿಂತ ಮರ, ಅಡ್ಡಾಡುವ ಗಾಳಿ, ಪರ್ವತವೇರುತ್ತ ಹೋದಂತೆ ಸುಬ್ರಹ್ಮಣ್ಯ ಪೇಟೆ, ಮನೆ, ನಾವು ಎಲ್ಲವೂ ಸಣ್ಣದಾಗುತ್ತಾ ಕುಮಾರ ಪರ್ವತವೊಂದೇ ಬೃಹದಾಕಾರವಾಗಿ ಬೆಳೆಯುತ್ತಿತ್ತು. ಬಿಸಿಲು ತಾಳಲಾರದೆ ಪ್ರತಿಯೊಬ್ಬರೂ ತಲೆಗೆ ಕಟ್ಟಿಕೊಂಡ ಬಿಳಿ ಟವೆಲು. ಒಬ್ಬೊಬ್ಬನದ್ದು ಒಂದೊಂದು ವೇಷ. ನಿಂತಾಗ ನಗು,ಕೇಕೆ,ಜೋಕು. ನಡೆವಾಗ ಗಂಭೀರ ಮೌನ. ಜಿರಿಜಿರಿ ಇಳಿವ ಬೆವರು. ಪರ್ವತ ಮಾತ್ರ ಸುಮ್ಮನೆ ಧ್ಯಾನಸ್ಥ. ತಲೆ ಮೇಲೆಯೇ ಉರಿವ ಸೂರ್ಯ, ರಾತ್ರಿ ಉಳಿದಾನೆಯೇ ನಮ್ಮ ಜೊತೆ ಬೆಟ್ಟದಲ್ಲಿ?!

ಸುಮಾರು ಐದು ಕಿಲೋಮೀಟರ್ ನಡೆದ ಬಳಿಕ ಗಿರಿಗದ್ದೆ ಜೋಯಿಸರ ಆತಿಥ್ಯ. ತಣ್ಣನೆ ನೀರು, ಬಿಸಿಬಿಸಿ ಉಪ್ಪಿಟ್ಟು. ನಂತರ ಅರಣ್ಯ ಇಲಾಖೆಯ ಚೆಕ್‌ಪೋಸ್ಟ್. ಮುಂದೆ ಬಿರುಬಿಸಿಲ ಹಾದಿ. ಜನವಾಸ ಇಲ್ಲ. ತುತ್ತತುದಿಗೆ ಸುಮಾರು ಐದು ಗಂಟೆಗಳ ಆರೋಹಣ. ತಾನೇ ಆಯಾಸಗೊಂಡಂತೆ ತೆಪ್ಪಗೆ ಬಿದ್ದಿರುವ ಸವಕಲು ದಾರಿ. ಬ್ರಿಟಿಷರ ಕಾಲದಲ್ಲಿ ಕಟ್ಟಲ್ಪಟ್ಟದ್ದೆಂದು ಹೇಳುವ "ಕಲ್ಲ ಮಂಟಪ'ವೇ ಮೊದಲ ನಿಲ್ದಾಣ. ಚಾರಣಿಗರ ಮೋಜಿಗೆ ಮೊದಲ ಸಾಕ್ಷ್ಯ. ಇರುವ ಒಂಚೂರು ನೀರಿನಲ್ಲೇ ಪ್ಲಾಸ್ಟಿಕ್ಕು, ಅನ್ನದಗುಳು, ಸಿಗರೇಟು ಇನ್ನೂ ಏನೇನೋ. ಮತ್ತೆ ಏದುಸಿರ ಹಾದಿ ಶುರು. ಸುತ್ತಿಬಳಸಿ ಹತ್ತಿ ಇಳಿದು ಬೆಟ್ಟದಿಂದ ಬೆಟ್ಟಕ್ಕೆ ಸಾಗಿದಂತೆಲ್ಲ ಎಂದೆಂದೂ ಮುಗಿಯದಂತಿರುವ ಹಾದಿ. ಕೊನೆಗೊಂಡಂತೆ ಕಂಡಲ್ಲೇ ಆರಂಭ. ನಡೆದಷ್ಟೂ ದಾರಿ. ನಿಂತರೆ ಬಯಲು!

ನಾವೈದು ಜನರನ್ನು ಹೊರತುಪಡಿಸಿ ಬೇರೆ ಚಾರಣಿಗರು ಇರಲಿಲ್ಲ. ಪರ್ವತ ಏರುತ್ತಿದ್ದಂತೆ ಅಪ್ಪ,ಅಮ್ಮ,ಮನೆ,ಗೆಳೆಯರು ಎಲ್ಲ ಮರೆತು, ನಾವೇ ಐದು ಜನ ಈ ಜಗದಲ್ಲಿ! ಲಾಲ್‌ಬಾಗ್‌ನಲ್ಲಿ ಕತ್ತರಿಸಿ ಜೋಡಿಸಿ ಇಟ್ಟದ್ದಕ್ಕಿಂತ ಹೆಚ್ಚು ಚೆಂದವಾಗಿ ದಟ್ಟವಾಗಿ ಪುಷ್ಟವಾಗಿ ಬೆಳೆದ ಕಾಡು. ಅದರಲ್ಲಿ ನಾಚಿದ ಹೂಗಿಡ. ಇನ್ನೊಂದು ಬದಿ ಬೆತ್ತಲೆ ಬೆಟ್ಟ. ಭತ್ತದ ರಾಶಿಯೆಂದೇ ಹೆಸರಾದ ಚೂಪು ಬೆಟ್ಟ ದಾಟಿ, ಶೇಷ ಪರ್ವತದ ತುದಿಯೇರಿ ಮೇಲೆ ನೋಡಿದರೆ, ತಲೆಗೆ ತಗಲುವಂತೆ ಆಕಾಶ, ಕೆಳಗೆ ನೋಡಿದರೆ ಅಬ್ಬಬ್ಬಾ ಮಾರಿಗುಂಡಿ. ಕಣ್ಣೆಟುಕದಷ್ಟು ಆಳ. ಸುಬ್ರಹ್ಮಣ್ಯದಲ್ಲಿದ್ದಾಗ "ಹೋ, ಕುಮಾರಪರ್ವತ ಎಷ್ಟೊಂದು ಎತ್ತರ' ಅಂತನ್ನಿಸಿದ್ದರೆ, ತುದಿ ತಲುಪುತ್ತಿದ್ದಂತೆ "ಹೋ, ಸುಬ್ರಹ್ಮಣ್ಯ ಎಷ್ಟೊಂದು ಆಳ!' ಆಳವೂ ಎತ್ತರವೂ ಒಂದೇ ಆದಾಗ ನಿರಾಳ. ಅಂಗೈಯಲ್ಲಿ ಆಕಾಶ.
ಕುಮಾರಪರ್ವತದ ತುತ್ತತುದಿಗಿಂತ ಕೊಂಚ ಕೆಳಗೆ ಕುಮಾರಾಧಾರಾ ನದಿಯ ಉಗಮಸ್ಥಾನ. ಅಲ್ಲಿಂದ ಸ್ವಲ್ಪ ಮೇಲೇರಿದರೆ ಅಗಲವಾದ ಇಳಿಜಾರಾದ ಬಂಡೆ. ಇದಿರು ಸಿದ್ಧಪರ್ವತದ ದಟ್ಟ ಕಾನನ. ಬಲಬದಿ ದೂರದಲ್ಲಿ ದಾಟಿ ಬಂದಿರುವ ಭತ್ತದರಾಶಿ,ಶೇಷ ಪರ್ವತ. ಎತ್ತರದಿಂದ ಬಂದು ಮೈಮೇಲೆಯೇ ಹಾದು, ತಗ್ಗು ಕಣಿವೆಗಳಲ್ಲಿ ತುಂಬಿಕೊಳ್ಳುವ ಮೋಡಗಳು. "ಪರ್ವತ ಏರುವುದೇ ನಿಜವಾದ ಸುಖ ಹೊರತು ಶೀಖರದಲ್ಲಿ ಕುಳಿತುಕೊಳ್ಳುವುದಲ್ಲ' ಎಂಬ ಮಾತು ಎಷ್ಟೊಂದು ಅಪ್ರಬುದ್ಧವಾದದ್ದು ! ಪರ್ವತವೇರುವುದರಲ್ಲಿ ಔದಾಸೀನ್ಯ ತೋರುವವನಿಗೆ ಶಿಖರದ ಸುಖ ದೊರಕುವುದಿಲ್ಲ. ಶಿಖರದಲ್ಲಿ ತನ್ಮಯಗೊಳ್ಳುವ ಮನಸ್ಸಿಲ್ಲದವನಿಗೆ ಏರುವ ಸುಖದ ಅರಿವಾಗುವುದಿಲ್ಲ. ಏರುವ ಸುಖ ಶಿಖರದಲ್ಲಿದೆ. ಶಿಖರದ ಸುಖ ಏರುವಿಕೆಯಲ್ಲಿ ಅಡಗಿದೆ. ಆದುದರಿಂದಲೇ ಬಿಡಿಬಿಡಿಯಾಗಿ ನೋಡದೆ ನಿಜವಾದ ಸಮಗ್ರ ನೋಟ ಸಿಕ್ಕುವುದಿಲ್ಲ. ಸಮಗ್ರವಾಗಿ ನೋಡದೆ ಬಿಡಿಬಿಡಿಯಾಗಿರುವುದು ತಿಳಿಯುವುದಿಲ್ಲ!

ಸಂಜೆಯ ಸಮಯ. ಪುಷ್ಪಗಿರಿಯೆಂದೂ ಹೆಸರಾದ ಕುಮಾರಪರ್ವತದ ತುತ್ತತುದಿಯಲ್ಲಿ ಬೀಸುವ ಗಾಳಿಗೆ ಎಂಥವನಿಗೂ ಥ್ರಿಲ್ಲಾಗಲೇಬೇಕು. ಅರೆ, ಇಲ್ಲೇ ತಂಗುವೆನೆಂದಿದ್ದ ಸೂರ್ಯ, ದೂರದ ಇನ್ನ್ಯಾವುದೋ ಬೆಟ್ಟದಲ್ಲಿ ಇಳಿಯುತ್ತಿದ್ದ. ತುತ್ತತುದಿಯಲ್ಲಿ ಭೂತಕಾಲದ ನೆನಪಿಲ್ಲ, ಭವಿಷ್ಯತ್ತಿನ ಕನಸುಗಳಿಲ್ಲ, ವರ್ತಮಾನದ ಇರುವಿಕೆ ಮಾತ್ರ ಇದೆ. ಆ ಕ್ಷಣಗಳಲ್ಲಿ ಅದೂ ಮರೆತುಹೋಗಿದೆ. ಆಗ ಇರುವುದೇ "ಮಿಥ್ಯ', ಇಲ್ಲದ್ದು 'ಸತ್ಯ' ! ಊರು,ಪೇಟೆ ಮಾತ್ರವಲ್ಲದೆ ಸುತ್ತಲಿನ ಪರಿಸರ, ನಾವೈದು ಜನ ಎಲ್ಲ ಮಾಯವಾಗಿ ಕೆಲವು ಕ್ಷಣ ಖಾಲಿಯಾಗಿದೆ. ಅಷ್ಟರಲ್ಲಿ ಕರ್ಮದೋಷ(!), ಫಕ್ಕನೆ ಅಡಿಗರು ಬರೆದದ್ದು ನೆನಪಾಗಿದೆ ! "ಬತ್ತಲಾಗದೆ ಬಯಲು ಸಿಕ್ಕದಿಲ್ಲಿ'.

ಆತಂಕ ಕವಿದಂತಿರುವ ಕತ್ತಲು. ಬೆಂಕಿ ಹದವಾಗಿ ಉರಿಯುತ್ತಿದೆ. ಎಲ್ಲರ ಮುಖಗಳೂ ಕಪ್ಪಿಟ್ಟಿವೆ. ನಿಗೂಢ ಸದ್ದುಗಳು ಕೇಳುತ್ತಿವೆ. "ಗಿರಿಗದ್ದೆ ಜೋಯಿಸರ ಒಂದು ದನವನ್ನು ಇತ್ತೀಚೆಗೆ ಹುಲಿ ಹಿಡಿದಿತ್ತು' ಎಂದು ಫಾರೆಸ್ಟ್ ಡಿಪಾರ್ಟ್‌ಮೆಂಟಿನವರು ಹೇಳಿದ್ದು ನೆನಪಾಗಿದೆ. "ಸಂಪಾಜೆಯಿಂದ ಶಿರಾಡಿಯವರೆಗೆ ಹರಡಿಕೊಂಡಿರುವ ಈ ಕಾಡಿನಲ್ಲಿ ಎಪ್ಪತ್ತು ಆನೆಗಳಿವೆ. ಅವುಗಳಲ್ಲಿ ಆರೇಳು ಒಂಟಿ ಆನೆಗಳು. ಅವುಗಳಲ್ಲೂ ಒಂದು ಕಲ್ಲಾನೆಯಂತೂ (ಮರಿ ಆನೆ) ಬಹಳ ಜೋರು'-ಗಿರಿಗದ್ದೆ ಜೋಯಿಸರು ಹೇಳಿದ್ದು ನೆನಪಾಗಿದೆ. ಒಳಹೋದ ಉಸಿರು ಹೊರಬರುವುದಕ್ಕೂ ಅಂಜಿದಂತಾಗಿ ನಾಲ್ಕಾರು ಬಾರಿ ಕೆಮ್ಮಿದೆ. ರಾತ್ರಿ ಹನ್ನೊಂದು ಗಂಟೆ. ನಾಲ್ಕೂ ಜನ ಮಲಗಿದ್ದಾರೆ. ನಿದ್ದೆ ಬಂದಂತಿಲ್ಲ. ಆರಿಹೋಗುತ್ತಿದ್ದ ಬೆಂಕಿಯನ್ನು ಹೆಚ್ಚಿಸಿದೆ, ಸುತ್ತಲೂ ದಟ್ಟವಾದ ಅರಣ್ಯ. ಮರಗಪ್ಪೆಗಳು ವಿಚಿತ್ರವಾಗಿ ವಟಗುಟ್ಟುತ್ತಿವೆ. ಟಾರ್ಚು ಬೆಳಕನ್ನು ಸುತ್ತಲೂ ಹಾಯಿಸಿದೆ. ಹಗಲು ಪರ್ವತ ಏರುತ್ತಿದ್ದಾಗ ನಾವೈದೇ ಜನರೆಂದು ಖುಶಿಯಾಗಿತ್ತು. ಆದರೀಗ ಅದೇ ಸಂಗತಿ ವಿಪರೀತ ಭಯ ಹುಟ್ಟಿಸಿದೆ. ಈ ಹಬ್ಬಿದಾ ಮಲೆ ಮಧ್ಯದೊಳಗೆ ನಾವೈದೇ ಜನ. ಅತ್ತರೂ ಬೊಬ್ಬಿಟ್ಟರೂ ಯಾರಿಗೂ ಕೇಳುವುದಿಲ್ಲವಲ್ಲ.

ಅಯ್ಯೋ, ಈಗ ಅಮೆರಿಕದಲ್ಲೆಲ್ಲೋ ಸೂರ್ಯ ಉದಯಿಸಿರಬಹುದಲ್ಲ. ಹೌದು, ನಮ್ಮಲ್ಲಿ ಕತ್ತಲಿದೆ. ಸೂರ್ಯನಲ್ಲಿ ಬೆಳಕು ಮಾತ್ರ ಇದೆ. ಆದರೆ ಸೂರ್ಯ ನಮ್ಮವನೇ ಎಂದು ತಿಳಿಯುವುದರಲ್ಲೇ ಶ್ರೇಯಸ್ಸಿದೆ. ಸುಮ್ಮನೆ ಉರಿಯುತ್ತಿರುವ ಬೆಂಕಿ ನಂದಿಹೋಗುವ ಹಾಗೆ ಹನಿಹನಿ ಮಳೆ. ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ್ದು ನೆನಪಾಗಿದೆ. "ನಾನೇ ಸೂರ್ಯನ ರೂಪದಿಂದ ಬೆಳಗುತ್ತಿದ್ದೇನೆ, ಮಳೆಯನ್ನು ಆಕರ್ಷಿಸಿ ಸುರಿಸುತ್ತೇನೆ'. ಹಗಲು ನಮ್ಮ ಬೆವರಿಳಿಸಿದ್ದ ಅದೇ ಸೂರ್ಯ, ಈಗ ಮಳೆ ಸುರಿಸುತ್ತಿದ್ದಾನೆ. ಹೀಗೆ ಕತ್ತಲು-ಬೆಳಕು, ಆಳ-ಎತ್ತರ, ಅಮೃತ-ಮೃತ್ಯು, ಬಿಸಿಲು-ಮಳೆ ಎಲ್ಲವೂ ಒಂದೇ ಆದಾಗ? ಸಾಕಾರದಿಂದ ನಿರಾಕಾರಕ್ಕೆ. ನಿರಾಕಾರದಿಂದ ನಿರ್ವಿಕಾರಕ್ಕೆ. ದೇವರೇ, ಮಗುವಿನಂತಿರುವ ಕುಮಾರಪರ್ವತಕ್ಕೆ ಎಚ್ಚರಾಗಲಿ, ನಮ್ಮ ವಿಕಾರಗಳು ನಾಶವಾಗಲಿ.
"ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು, ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ, ಬೆಲ್ಲಸಕ್ಕರೆಯಾಗು ದೀನ ದುರ್ಬಲರಿಂಗೆ, ಎಲ್ಲರೊಳಗೊಂದಾಗು ಮಂಕುತಿಮ್ಮ' ಎಂದು ಒಬ್ಬ ಗುನುಗುತ್ತಿದ್ದಾನೆ. ಸೂರ್ಯ ಚೆಲ್ಲಿದ ಬಣ್ಣಗಳು ಕರಗತೊಡಗಿವೆ. ಗಿಡಮರಗಳು ಲಕಲಕಿಸಿವೆ. ಛೇ, ಈ ಪರ್ವತ ಒಂಚೂರು ಎತ್ತರವಿದ್ದರೆ, ಆ ಸೂರ್ಯನನ್ನು ಮುಟ್ಟಿ ರೋಮಾಂಚನಗೊಳ್ಳಬಹುದಿತ್ತು! ದೇವರೇ, ನಮ್ಮ ಊರು, ಮನೆ, ಕಲಿತ ನಾಲ್ಕು ಮಹಡಿಯ ಕಾಲೇಜು, ಊರ ದೇವಸ್ಥಾನದ ಗೋಪುರ, ಮನೆಯಂಗಳದಲ್ಲಿ ಬಾನೆತ್ತರ ಬೆಳೆದ ಗುಲಗಮೊಹರ್ ಎಲ್ಲವೂ ಸಣ್ಣದಾದರೂ ಚಿಂತಿಲ್ಲ. ಈ ಕುಮಾರಪರ್ವತ ಮಾತ್ರ ಬೆಳೆಯುತ್ತಿರಲಿ. ಇದರ ಕೌಮಾರ್ಯ ಮಾತ್ರ ಹೀಗೆಯೇ ಇರಲಿ !

ಮಧ್ಯಾಹ್ನದ ಮೊದಲೇ ನಮ್ಮ ಅವರೋಹಣ ಆರಂಭವಾಗಿತ್ತು. ಊರು ತಲುಪಿದಾಗ, ನಾವೇ ಸ್ಥಾವರದಂತಾಗಿ ಕುಮಾರಪರ್ವತ ಜಂಗಮನಂತೆ ಕಾಣತೊಡಗಿತ್ತು. ಮನ್ಸು ಮತ್ತೆಮತ್ತೆ ಬೆಟ್ಟ ಏರುತ್ತಲೇ ಇತ್ತು.


(೨೦೦೩ರ ಉದಯವಾಣಿ "ಸಾಪ್ತಾಹಿಕ ಸಂಪದ'ದಲ್ಲಿ ಪ್ರಕಟಿತ)

1 comments:

Anonymous,  August 18, 2007 at 8:28 AM  
This comment has been removed by a blog administrator.

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP