August 30, 2007

ಲೆಕ್ಕದ ಮಾಷ್ಟ್ರು ನಮಗ್ಯಾವ ಲೆಕ್ಕ ?!

ಣಿತ ಅಂದರೆ ಅಮ್ಮನಿಗೆ ಬೈಗುಳ, ಅಪ್ಪನಿಗೂ ಅರ್ಥವಾಗದ್ದಕ್ಕೆ ಅಸಹನೆ, ಎದುರುರಿನ ಬೆಂಚಲ್ಲಿ ಕೂತಿದ್ದವನ ಪುಸಲಾಯಿಸಲು ಬೆಣ್ಣೆ , ಹುಬ್ಬು ಗಂಟಿಕ್ಕಿಕೊಂಡು ಬೆತ್ತ ಬೀಸುತ್ತಿರುವ ಅಧ್ಯಾಪಕರು, ಪ್ರೊಗ್ರೆಸ್ ರಿಪೋರ್ಟ್‌ನಲ್ಲಿ ಆಗಾಗ ಕೆಂಪು ಗೆರೆ -ಇವಿಷ್ಟು ವಂಶ ಪಾರಂಪರ್ಯವಾಗಿ ಬಂದಂತಹ ಸಂಗತಿಗಳು ! ಗಣಿತ ಅಧ್ಯಾಪಕರೆಂದರೆ ಮಕ್ಕಳು ಮುಖ ಹುಳ್ಳಗೆ ಮಾಡಿಕೊಳ್ಳುವುದು ಸಾಮಾನ್ಯ . ಆದರೆ ನಿಮ್ಮ ಲೆಕ್ಕಾಚಾರವನ್ನೇ ತಿರುಗಾಮುರಗಾ ಮಾಡುವಂತೆ, 'ಲೆಕ್ಕದ ಮಾಷ್ಟ್ರು ನಮಗ್ಯಾವ ಲೆಕ್ಕ ?' ಅಂತ ಕೆಲವು ಗಣಿತ ಗುರುಗಳ ಬಗ್ಗೆ ಶಿಷ್ಯಗಡಣ ಹೇಳುವ ಈ ಕತೆಯನ್ನು ತಾವು ಲಾಲಿಸಬೇಕು. ಪೆಟ್ಟುಗಳನ್ನೂ ಶಹಭಾಸ್‌ಗಿರಿಯಂತೆ ಪಡೆದ ಈ ಕತೆ ಕಳೆದು ಕೂಡಿಸಿ ಬರೆದದ್ದಲ್ಲ ಎಂಬುದನ್ನು ನಂಬಬೇಕು !

ನಮ್ಮ ಮನೆಯಲ್ಲೇ ಸುರುಸುರು ಹೀರಿ ಮಧ್ಯಾಹ್ನದೂಟ ಮಾಡಿ, ಅದು ಕರಗುವ ಮೊದಲೇ ನನ್ನ ಬೆನ್ನಿಗೇ ಡುಬುಡುಬು ಗುದ್ದು ಹಾಕಲು ಬರುವ ಈಶ್ವರ ಮಾಷ್ಟ್ರು ಇನ್ನೇನು...ಈ ಮೂರನೇ ತರಗತಿಗೆ ಕಾಲಿಡುತ್ತಾರೆ. ಗಣಿತ ಪಾಠ ಶುರುವಾಗುವ ಮೊದಲು ಅವರನ್ನು ಕೊಂಚ ನಿಮಗೆ ವರ್ಣಿಸುತ್ತೇನೆ...

ಬಾರೀ ಶಬ್ದ ಹೊರಡಿಸುವ, ಆದರೆ ಅಷ್ಟೇನೂ ನೋಯದ ಅವರ ಕೈಯಿಂದ ಬೆನ್ನಿನ ಮೇಲೊಂದು ಪೆಟ್ಟು ತಿನ್ನೋದೆಂದರೆ ಎಲ್ಲ ಹುಡುಗರಿಗೂ ವಿಚಿತ್ರ ಖುಶಿ ! (ಹುಡುಗಿಯರಿಗೆ ಈ ಭಾಗ್ಯವಿಲ್ಲ ! ) 'ಇವತ್ತು ಎಷ್ಟು ಡೋಲು ಬಾರಿಸಿದರು' ಅಂತ ನಾವು ಮಾತಾಡಿಕೊಳ್ಳದ ದಿನವಿಲ್ಲ. ಬಿಳಿ ಪಂಚೆ ಉಟ್ಟುಕೊಂಡು, ಮೂರು ಕಿಲೋಮೀಟರ್ ನಡಕೊಂಡು ಬರುತ್ತಿದ್ದ ಈ ಮಾಷ್ಟ್ರ ಹಣೆಯಲ್ಲಿ ಯಾವತ್ತೂ ತೆಳು ಗಂಧ ನಾಮ, ಕಿವಿಯಲ್ಲಿ ದೇವರ ಪ್ರಸಾದವಾಗಿ ದಾಸವಾಳದೆಸಳು. ಶಾಲೆಗಿಂತ ಕೊಂಚ ಹಿಂದಿರುವ ಅಶ್ವತ್ಥಕಟ್ಟೆಗೆ ಮೂರು ಸುತ್ತು ಹಾಕಿ, ಹತ್ತು ಪೈಸೆ ನಾಣ್ಯ ಕಾಣಿಕೆ ಇಡದೆ, ಅವರು ಶಾಲೆಯ ಮೆಟ್ಟಿಲು ತುಳಿಯುವವರೇ ಅಲ್ಲ. ಪ್ರತಿ ಶನಿವಾರ ಅವರಿದ್ದರೇ ಭಜನಾ ಕಾರ್‍ಯಕ್ರಮ ಗೌಜಿ. 'ಗುರುವಾರ ಬಂತಮ್ಮ ಗುರುವಾರ ಬಂತಮ್ಮ...'ಹಾಡನ್ನು ಅವರು ಹೇಳಿದರೇ ಕಾರ್‍ಯಕ್ರಮ ಸಂಪನ್ನವಾಗುವುದು. ಸ್ವಾತಂತ್ರ್ಯೋತ್ಸವದ ದಿನವಂತೂ ಹುಚ್ಚು ಆವೇಶ. ಈಶ್ವರ ಮಾಷ್ಟ್ರು 'ಝಂಡಾ ಊಂಚಾ ರಹೇ ಹಮಾರಾ...' ಹಾಡಿದರೆ ಮಕ್ಕಳು ಮತ್ತೊಂದು ಸ್ವಾತಂತ್ರ್ಯ ಹೋರಾಟಕ್ಕೆ ಕತ್ತಿ ದೊಣ್ಣೆ ಹಿಡಿದರೂ ಆಶ್ಚರ್‍ಯವಿಲ್ಲ. ಅಂತಹ ಗಡುಸು ಏರು ಧ್ವನಿಯಲ್ಲಿ ಅವರು ವೀರಾವೇಶದಿಂದ "ಭಾರತ್ ಮಾತಾ ಕೀ ಜೈ' ಅಂತ ಕೂಗಿದಾಗ ಮಕ್ಕಳೆಲ್ಲ ಸೆಟೆದುಕೊಳ್ಳುತ್ತಾರೆ.

ಇವೆಲ್ಲವುಗಳಿಂದಾಗಿ ಅವರ ಬಗ್ಗೆ ಭಯಕ್ಕಿಂತ ಭಕ್ತಿಯೇ ಹೆಚ್ಚು . ಹಾಜರಿ ಕರೆವಾಗ 'ಪ್ರಸೆಂಟ್ ಸಾರ್', 'ಯಸ್ ಸಾರ್' ಅನ್ನೋದನ್ನೆಲ್ಲಾ ತೆಗೆದು ಹಾಕಿ 'ಇದ್ದೇನೆ ಸಾರ್' ಅನ್ನೋದನ್ನೇ ರೂಢಿಸಿದ ವ್ಯಕ್ತಿ ಅವರು. ಅವರ ಗಣಿತ ಪಾಠಕ್ಕೆ ಅಡಿಕೆ, ತೆಂಗುಗಳೇ ನಿತ್ಯ ಉದಾಹರಣೆಗಳು. ಶಾಲೆ ಬಳಿಯ ನಮ್ಮ ಮನೆಗೇ ಅವರು ಮಧ್ಯಾಹ್ನದೂಟಕ್ಕೆ ಬರುತ್ತಿದ್ದುದರಿಂದ, ನಮ್ಮಲ್ಲಿಂದ ಅವರಿಗೆ ಬಸಳೆ ಸೊಪ್ಪು , ಹೂವಿನ ಗಿಡ, ಮಾವಿನಹಣ್ಣು , ಹಿತ್ತಲಲ್ಲಿ ಎಳೆದ ತರಕಾರಿ ಹೀಗೆ ಏನಾದರೊಂದು ಸಂದಾಯವಾಗುತ್ತಲೂ ಇದ್ದುದರಿಂದ, ಅವರಿಗೂ ಅಪ್ಪ ಅತಿಪ್ರಿಯರಾಗಿದ್ದುದರಿಂದ ಮಾಷ್ಟ್ರು ಕೊಡುವ ಪೆಟ್ಟುಗಳು, ಅಪ್ಪ ಕೊಡುವ ಪೆಟ್ಟುಗಳಷ್ಟೇ ನನಗೆ ಸಹನಾಯೋಗ್ಯ ! 'ಅವರು ಲೆಕ್ಕಕ್ಕೆ ಮಾಷ್ಟ್ರು, ನೆಂಟ್ರ ಹಾಗೇ' ಅಂತ ಅಜ್ಜಿ ಕೂಡಾ ಹೇಳುತ್ತಿದ್ದುದುಂಟು.

ಇನ್ನು ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡಿನೊಳಗೆ ನಾವೆಲ್ಲ ಕಾಣಿಸಿಕೊಂಡಾಗ ಸಿಕ್ಕ ಗಣಿತದ ಅಧ್ಯಾಪಕರಲ್ಲಿ ಒಬ್ಬರು-ಶಿವಮ್ಮ ಟೀಚರ್. ಅವರ ಗಂಡ ಅದೇ ಶಾಲೆಯಲ್ಲಿ ಮುಖ್ಯೋಪಾಧ್ಯಾಯರು. ನನ್ನಪ್ಪನಿಗೂ ಮಾಷ್ಟ್ರರಾಗಿದ್ದವರು. ಇಂತಹ ಮುಖ್ಯೋಪಾಧ್ಯಾಯರು ಒಂದು ಕಾಲದಲ್ಲಿ ತಮ್ಮ ವಿದ್ಯಾರ್ಥಿನಿಯೂ ಆಗಿದ್ದ ಶಿವಮ್ಮರನ್ನೇ ಪ್ರೀತಿಸಿ ಮದುವೆಯಾಗಿದ್ದರು. ಇಂತಹ ಶಿವಮ್ಮ ಟೀಚರ್ ಬಲಗೈ ಬೆನ್ನ ಹಿಂದಕ್ಕೆ ಕಟ್ಟಿ ಎಡಗೈಯಲ್ಲಿ ಪಾಠ ಪುಸ್ತಕ ಹಿಡಿದು ಮಾತು ಶುರು ಮಾಡಿದರೆಂದರೆ ಮಕ್ಕಳ ಹತ್ತೂ ಬೆರಳುಗಳು ಕೆಲಸ ಮಾಡುತ್ತಿದ್ದವು ! ಅವರು ಹೊಡೆಯುವುದು, ಬಯ್ಯುವುದು, ಸಿಕ್ಕಾಪಟ್ಟೆ ಹೋಮ್‌ವರ್ಕ್ ಕೊಡುವುದು ಎಲ್ಲದರಿಂದಲೂ ಬಹಳ ದೂರ. ಗಣಿತದ ಅಗಣಿತ ಸಮಸ್ಯೆಗಳಿಗೆಲ್ಲ ಅವರದ್ದು ಯಾವತ್ತೂ ತಾಯಿ ಗುಣ. 'ಈ ಲೆಕ್ಕ ಬಿಡಿಸಲು ಸುಲಭ ಮಾರ್ಗಗಳಿರುವ ಒಂದು ಹಳೆಯ ಪುಸ್ತಕ ಕೊಡ್ತೇನೆ, ಅಮ್ಮ ಈ ಸಲ ಬೆಂಡೇಕಾಯಿ ಬೆಳೆಸಿದ್ದಾರಾ?, ನಿನ್ನ ಷರ್ಟ್ ತುಂಬಾ ಚೆನ್ನಾಗಿದೆ, ಬಹಳ ಕಷ್ಟ ಎನಿಸಿದರೆ ಲೆಕ್ಕ ಬಿಡಿಸುವ ಆ ಉದ್ದದ ಮಾದರಿಯನ್ನೇ ಬಿಟ್ಟುಬಿಡಿ-ಅದು ಬಹಳ ಹಳೆಯ ಕ್ರಮ-ಪರೀಕ್ಷೆಯಲ್ಲೂ ನಾನದನ್ನು ಕೇಳುವುದಿಲ್ಲ ...' ಅವರ ಮಾತಿನ ಸ್ಯಾಂಪಲ್‌ಗಳಷ್ಟೆ ಇವು.

ಉಜಿರೆ ಕಾಲೇಜಿನಲ್ಲಿ ಮ್ಯಾತ್‌ಮೆಟಿಕ್ಸ್ ಲೆಕ್ಚರ್ ಹೊಡೆದು ಹೊಡೆದು ನಿವೃತ್ತರಾಗಿರುವ ಜಯಲಕ್ಷ್ಮಿ ಮೇಡಂ ಅಂದರೆ ಲೋಕಪ್ರಸಿದ್ಧಿ. ವರ್ಷದ ಮುನ್ನೂರೈವತ್ತೈದು ದಿನ ಮುನ್ನೂರೈವತ್ತೈದು ಸೀರೆ ಉಡುವ ದಪ್ಪ ದೇಹದ ಜಯಲಕ್ಷ್ಮಿ ಮೇಡಂ, ಇತರೆಲ್ಲ ಮ್ಯಾತ್ಸ್ ಲೆಕ್ಚರರ್‌ಗಳನ್ನು 'ಲೆಕ್ಕಕ್ಕಷ್ಟೆ ' ಅಂತ ಮಾಡಿಬಿಟ್ಟಿದ್ದರು. ಪಿಯುಸಿಯ ಹಲವು ಪರೀಕ್ಷೆಗಳ ಉತ್ತರಪತ್ರಿಕೆಗಳನ್ನು ತಿದ್ದಿ ಕೊಡದೆ ಮೂಲೆಗೆ ಸೇರಿಸಿ- "ಎಲ್ಲರೂ ಇನ್ನಷ್ಟು ಚೆನ್ನಾಗಿ ಅಭ್ಯಾಸ ಮಾಡಬೇಕು' ಎಂದಷ್ಟೇ ಹೇಳುತ್ತ ನಮ್ಮಂತಹ ಹಲವರ ಮಾನವುಳಿಸಿದವರೇ ಅವರು. ಉಜಿರೆ ಕಾಲೇಜಿನಲ್ಲಿ ಓದಿದ ಸಾವಿರಾರು ವಿದ್ಯಾರ್ಥಿಗಳಿಗೆ ಜಯಲಕ್ಷ್ಮಿ ಮೇಡಂ ಅಂದ್ರೆ ಗಣಿತಕ್ಕಿಂತ ಅಚ್ಚುಮೆಚ್ಚು ಎನ್ನುವುದು ವ್ಯಂಗ್ಯವಲ್ಲ ! ಅವರು ಹೆಸರಾದದ್ದು ಸ್ಪಷ್ಟ ಸರಳ ಪಾಠದ ಶೈಲಿಗೆ, ವಿದ್ಯಾರ್ಥಿ-ವಿದ್ಯಾರ್ಥಿನಿಯರ ಜತೆಗಿನ ಬಾಂಧವ್ಯಕ್ಕೆ . ಪ್ರೈಮರಿ ಮಕ್ಕಳಿಗೆ ಪಾಠ ಹೇಳಿದಂತೆಯೇ ಕಾಲೇಜಿನವರಿಗೂ ಹೇಳುವ ಶೈಲಿ ಅವರದ್ದು . ಗಣಿತದ ಒಂದು ಸಮಸ್ಯೆ ಬಿಡಿಸಿ 'ಕೆಳಗೆರಡು ಗೆರೆ ಎಳೆಯಿರಿ' ಅಂತ ಹೇಳಲೂ ಅವರು ಮರೆಯಲಾರರು.

ಹೈಸ್ಕೂಲಿನ ಗಣಿತ ಮಾಷ್ಟ್ರು ಸಶರೀರವಾಗಿ ನಮ್ಮೂರಿನ ಮನೆ ಸುತ್ತಮುತ್ತಲಲ್ಲೇ ಅಡ್ಡಾಡುತ್ತಿರುವುದರಿಂದ ಅವರನ್ನು ಬಯ್ಯುವಂತೆಯೂ ಇಲ್ಲ, ಹೊಗಳದಿರುವುದೂ ಸಾಧ್ಯವಿಲ್ಲ ! ಆದರೆ ಅವರೂ 'ಲೆಕ್ಕಕ್ಕೆ ಸಿಗುವ ಮಾಷ್ಟ್ರು 'ಎಂಬುದು ವಿದ್ಯಾರ್ಥಿಗಳಿಗೆ ಹೆಮ್ಮೆ . ತರಗತಿಯ ಒಬ್ಬರು ತಪ್ಪು ಮಾಡಿದರೆ ಎಲ್ಲರಿಗೂ ಮರದ ಸ್ಕೇಲಿನಲ್ಲಿ ಒಂದೊಂದು ಪೆಟ್ಟು ಈ ಚಂದ್ರಶೇಖರ ಮಾಷ್ಟ್ರಿಂದ ಗ್ಯಾರಂಟಿ ! ಏನೋ ಸ್ವೀಟ್ ಪ್ಯಾಕೆಟ್ ಪಡಕೊಳ್ಳುವವರಂತೆ ಮಕ್ಕಳೆಲ್ಲ ಎದ್ದು ನಿಂತಿದ್ದರೆ ಅವರು ಪ್ರತಿಯೊಬ್ಬರ ಅಂಗೈಗೂ ಚಿಟಿಲ್ ಚಿಟಿಲ್ ಎಂದು ಬಾರಿಸುತ್ತಾ ಬರುತ್ತಾರೆ. ಎದ್ದು ನಿಂತು ಆ ಮಹಾಪ್ರಸಾದವನ್ನು ಸ್ವೀಕರಿಸುವ ಗಳಿಗೆಗೆ ನಾವೆಲ್ಲ ಕಾಯುತ್ತಿರುತ್ತಿದ್ದೆವು. ತರಗತಿಗೆ ಬಂದರೆ ಒಂಚೂರೂ ಔದಾಸೀನ್ಯ ತೋರದೆ ಪಾಠ ಮಾಡುವ ಅವರಿಗೆ ಗಣಿತದ ಸಮಸ್ಯೆ-ಉತ್ತರಗಳೆಲ್ಲಾ ಮನೋಗತ. ಗಣಿತದ ಕಷ್ಟಗಳು ಗಣನೆಗೇ ಬಾರದ ಹಾಗೆ 'ತಪ್ಪುಕಷ್ಟಗಳನೆಲ್ಲ ನೂಕಾಚೆ ದೂರ' ಅನ್ನುತ್ತಲೇ ಪಾಠ ಮಾಡುತ್ತಿದ್ದವರು ಅವರು. 'ನಾಳೆ ನಾನು ಶಾಲೆಗೆ ಬರುವುದಿಲ್ಲ. ನನ್ನ ಪೀರಿಯಡ್‌ನಲ್ಲಿ ಆಟಕ್ಕೆ ಹೋಗಿ' ಅಂತನ್ನುವ ಕರುಣಾಮಯಿ ಲೆಕ್ಕದ ಮಾಷ್ಟ್ರು ಇನ್ನೆಲ್ಲಿ ಸಿಗಬೇಕು ?!

ಇವರೆಲ್ಲ 'ಕ್ಯಾಲ್ಯುಕುಲೇಟರ್ ಕಂಪ್ಯೂಟರುಗಳ ಪಿಡಿಯದೊಂದಗ್ಗಳಿಕೆ...'ಗೆ ಪಾತ್ರರಾದವರು. ರಾಮಾಯಣದಲ್ಲಿ ಸಮುದ್ರಕ್ಕೆ ಸೇತುವನ್ನು ಬಲಿಯುವಾಗ ಕಪಿಗಳಿಟ್ಟ ಕಲ್ಲುಗಳೆಲ್ಲ ಮುಳುಗಿ ಹೋಗುತ್ತಿದ್ದವಂತೆ. ಆದರೆ ರಾಮ ನಾಮವನ್ನು ಹೇಳಿ ಬಂಡೆಗಳನ್ನು ಇಳಿಸಿದಾಗ ಅವೆಲ್ಲ ತೇಲಲಾರಂಭಿಸಿ ಹಾದಿ ಸುಗಮವಾಯಿತಂತೆ. ಹಾಗೆ ಈ ಗುರುಗಳ ಹೆಸರು ಹೇಳಿ ಯಾವುದನ್ನು ಲೆಕ್ಕ ಹಾಕಿದರೂ ಕಡಿಮೆ ಬಿದ್ದದ್ದೆಲ್ಲಾ ಸರಿಯಾಗಿ , ಹೆಚ್ಚೆಂದು ಕಂಡದ್ದೆಲ್ಲಾ ನಿಶ್ಯೇಷವಾಗಿ ತೇಲುತ್ತಲೇ ಇರಬಹುದೆಂಬಷ್ಟು ವಿಶ್ವಾಸ ನಮ್ಮದು !

ಮ್ಯಾತ್ಸ್ ತುಝೆ ಸಲಾಮ್.

1 comments:

Lanabhat September 6, 2007 at 6:49 AM  

ಈಶ್ವರ ಮಾಷ್ಟ್ರು 'ಝಂಡಾ ಊಂಚಾ ರಹೇ ಹಮಾರಾ...' ಹಾಡಿದರೆ ಮಕ್ಕಳು ಮತ್ತೊಂದು ಸ್ವಾತಂತ್ರ್ಯ ಹೋರಾಟಕ್ಕೆ ಕತ್ತಿ ದೊಣ್ಣೆ ಹಿಡಿದರೂ ಆಶ್ಚರ್‍ಯವಿಲ್ಲ ಚೆನ್ನಾಗಿದೆ ಈ ಗೆರೆ..

ನನ್ನ ಗಣಿತ ಮೇಷ್ಟುಗಳು ಕಣ್ಮುಂದೆ ಸುಳಿದರು ಈಗಲೂ ನಮಗೆ ಮಾತ್ಸ್ ಇದ್ದರೂ ಶೈಲಿ ಪಠ್ಯ ತುಸು ಭಿನ್ನವಾಗಿದೆ..

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP