June 09, 2010

ವಾಗ್ವಿಲಾಸ-ಮೂರು ತಾಳಮದ್ದಳೆಗಳುವೀಕೆಂಡ್ ತಾಳಮದ್ದಳೆ ! ಈ ವಾರದ ಕೊನೆಗೆ ಬೆಂಗಳೂರಿನಲ್ಲಿ ಯಕ್ಷಗಾನ ತಾಳಮದ್ದಳೆಗೆ ಪರ್ವ ಕಾಲ. ಕರಾವಳಿಯ ಪ್ರಸಿದ್ಧ ಕಲಾವಿದರ ತಂಡವೊಂದು ಬೆಂಗಳೂರಿನಲ್ಲಿ ಮೂರು ತಾಳಮದ್ದಳೆ ಕಾರ್ಯಕ್ರಮಗಳನ್ನು ನೀಡುತ್ತಿದೆ.
ರಾಜಧಾನಿಯಲ್ಲಿ ಯಕ್ಷಗಾನ ಪ್ರದರ್ಶನಗಳು ಬಹಳಷ್ಟು ನಡೆದರೂ, ತಾಳಮದ್ದಳೆಗಳು ತೀರ ಕಡಿಮೆ. ವೇಷಭೂಷಣ, ನಾಟ್ಯವಿಲ್ಲದೆ, ಬರಿಯ ಹಾಡು-ಮಾತಿನ ಮೂಲಕವೇ ಕೇಳುಗರನ್ನು ಲೋಕ ಸಂಚಾರಕ್ಕೆ ಕರೆದೊಯ್ಯುವಂಥದ್ದು ತಾಳಮದ್ದಳೆ. ಪುರಾಣದ ಯಾವುದಾದರೂ ಒಂದು ಭಾಗವನ್ನು, ಅಲ್ಲಿರುವ ಪಾತ್ರಗಳ ಮೂಲಕ ಮಾತಿನಲ್ಲೇ ಮರು ಸೃಜಿಸಲಾಗುತ್ತದೆ. ಕಂಠಪಾಠವಲ್ಲದ ಆಶು ಶೈಲಿ ಇದರ ವಿಶೇಷ ಆಕರ್ಷಣೆ. ಕರಾವಳಿ ಭಾಗದಲ್ಲಿ ಇದು ಮಳೆಗಾಲದ ಮುಖ್ಯ ಮನರಂಜನೆ. ಅದೀಗ "ಮಳೆಗಾಲದಲ್ಲಿ ಬೆಚ್ಚಗೆ ತಾಳಮದ್ದಳೆ ಕೇಳಿ ಹೆಚ್ಚಿಗೆ !’ ಎಂಬ ಘೋಷವಾಕ್ಯದೊಂದಿಗೆ ಬೆಂಗಳೂರಿಗೂ ಬಂದಿದೆ. ಇತ್ತೀಚೆಗೆ ತೀರಿಹೋದ ಹಿರಿಯ ಅರ್ಥಧಾರಿ-ವೇಷಧಾರಿ ಮಲ್ಪೆ ರಾಮದಾಸ ಸಾಮಗರ ನೆನಪಿಗೆಂದು ಈ ಕೂಟಗಳನ್ನು ಅರ್ಪಿಸಲಾಗಿದೆ.

ನಾನಾ ಯಕ್ಷಗಾನ ಮೇಳಗಳಲ್ಲಿ ಪ್ರಮುಖ ಭಾಗವತರಾಗಿ, ಸುಮಾರು ಮೂವತ್ತು ವರ್ಷಗಳ ಅನುಭವಿ ಪದ್ಯಾಣ ಗಣಪತಿ ಭಟ್ ತಂಡವನ್ನು ಮುನ್ನಡೆಸುತ್ತಾರೆ. ಚೆಂಡೆ- ಮದ್ದಳೆ ವಾದಕರಾಗಿ ಪದ್ಮನಾಭ ಉಪಾಧ್ಯಾಯ, ವೇಣುಗೋಪಾಲ ಮಾಂಬಾಡಿ ಭಾಗವಹಿಸುತ್ತಾರೆ. ವೇಷಧಾರಿಗಳಾಗಿಯೂ ಸುಮಾರು ಎರಡು ದಶಕಗಳ ಅನುಭವ ಇರುವ ಸುಣ್ಣಂಬಳ ವಿಶ್ವೇಶ್ವರ ಭಟ್, ಉಜಿರೆ ಅಶೋಕ ಭಟ್ ಜನಪ್ರಿಯ ಅರ್ಥಧಾರಿಗಳು ಕೂಡ. ಅವರು ಮುಖ್ಯ ಭೂಮಿಕೆಯಲ್ಲಿ ಮಾತಿನ ಮಂಟಪ ಕಟ್ಟುತ್ತಾರೆ. ಇತ್ತೀಚೆಗೆ ಪ್ರವರ್ಧಮಾನಕ್ಕೆ ಬಂದಿರುವ ವಾಸುದೇವರಂಗ ಭಟ್, ಹೊಸ ತಲೆಮಾರಿನ ಪ್ರತಿನಿಧಿಯಾಗಿಯೂ ಮಾತಿನ ಮಾಂತ್ರಿಕತೆ ತೋರುತ್ತಾರೆ. ತಾಳಮದ್ದಳೆಯಲ್ಲಿ ಹಾಸ್ಯಕ್ಕೆ ವಿಶಿಷ್ಟ ಸ್ಥಾನ ಕಲ್ಪಿಸಿರುವ ಮತ್ತು ಪೋಷಕ ಪಾತ್ರಗಳಲ್ಲಿ ಮನ ಸೆಳೆದಿರುವ ರಾಮಾ ಜೋಯಿಸ ಬೆಳ್ಳಾರೆ, ಕೂಟದ ರುಚಿ ಹೆಚ್ಚಿಸುತ್ತಾರೆ.
ಜೂನ್ ೧೨ ಶನಿವಾರ ಸಂಜೆ ೪ಕ್ಕೆ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಖ್ಯಾತ ಸಾಹಿತಿ-ಪತ್ರಕರ್ತ ಜೋಗಿ, ಈ ತಾಳಮದ್ದಳೆ ಸರಣಿ ಉದ್ಘಾಟಿಸುತ್ತಾರೆ. ಲೇಖಕ ನಾರಾಯಣ ಎ. ಮುಖ್ಯ ಅತಿಥಿ. ಬಳಿಕ ತಾಳಮದ್ದಳೆ "ತ್ರಿಶಂಕು ಸ್ವರ್ಗಾರೋಹಣ’. ಜೂನ್ ೧೩ ಬೆಳಗ್ಗೆ ೧೦ಕ್ಕೆ ಕುಂದಲಹಳ್ಳಿ ಗೇಟ್ ಲಕ್ಷ್ಮೀನಾರಾಯಣಪುರದ ಗೀತಾಂಜಲಿ ಮನೆಯಲ್ಲಿ "ಕೃಷ್ಣಾರ್ಜುನ’. ಸಂಜೆ ೫ಕ್ಕೆ ಹಾವನೂರು ಬಡಾವಣೆ ಟಿ.ದಾಸರಹಳ್ಳಿಯ ಶ್ರೀ ಗಣೇಶ ದೇವಸ್ಥಾನದ ಆವರಣದಲ್ಲಿ 'ಭೀಷ್ಮ ವಿಜಯ’.
'ಶ್ರೀ ದುರ್ಗಾಂಬಾ ಕಲಾ ಸಂಗಮ, ಗಿರಿನಗರ’, 'ಭಾರ್ಗವ ಮೈಂಡ್, ಲಕ್ಷ್ಮೀನಾರಾಯಣಪುರ’ ಹಾಗೂ "ತೆಂಕುತಿಟ್ಟು ಯಕ್ಷಗಾನ ಪ್ರತಿಷ್ಠಾನ, ಟಿ.ದಾಸರಹಳ್ಳಿ’ ಸಂಸ್ಥೆಗಳು ಈ ಕಾರ್ಯಕ್ರಮಗಳನ್ನು ಸಂಘಟಿಸಿವೆ.

ನಾನೇರುವೆತ್ತರಕೆ ನೀನೇರಬಲ್ಲೆಯಾ?
'ತ್ರಿಶಂಕು ಸ್ವರ್ಗಾರೋಹಣ’ ಪುರಾಣದ ಒಂದು ವಿಶೇಷ ಸನ್ನಿವೇಶ. ಅದು ಕ್ಷಾತ್ರ ತೇಜಸ್ಸು- ಬ್ರಾಹ್ಮಣ ಓಜಸ್ಸಿನ ತಿಕ್ಕಾಟದ ಕತೆ. ಚಾಂಡಾಲನಾದವನ ದೊಡ್ಡ ಕನಸಿನ ಕತೆ. ಕೌಶಿಕ ಎಂಬ ಹೆಸರಿನ ಕ್ಷತ್ರಿಯ ರಾಜ, ಬ್ರಹ್ಮರ್ಷಿ ವಿಶ್ವಾಮಿತ್ರನಾಗಿದ್ದಾನೆ. ಸತ್ಯವ್ರತ ಎಂಬ ಹೆಸರಿನ ರಾಜ ಮೂರು ಮಹಾಪಾಪಗಳಿಂದ ತ್ರಿಶಂಕು ಅನಿಸಿಕೊಳ್ಳುತ್ತಾನೆ, ಕೊನೆಗೆ ವಸಿಷ್ಠರ ಶಾಪದಿಂದ ಚಾಂಡಾಲನಾಗುತ್ತಾನೆ.
ತಾನು ಕೌಶಿಕ ರಾಜನಾಗಿದ್ದಾಗ ಬ್ರಹ್ಮರ್ಷಿ ವಸಿಷ್ಠರೊಂದಿಗೆ ದ್ವೇಷ ಕಟ್ಟಿಕೊಂಡಿದ್ದಾನೆ ವಿಶ್ವಾಮಿತ್ರ. ಈಗ ತ್ರಿಶಂಕುವನ್ನು ಸಶರೀರಿಯಾಗಿ ಸ್ವರ್ಗಕ್ಕೆ ಏರಿಸುವ ಮೂಲಕ ತಾನೇನು ಅಂತ ತೋರಿಸಲು ಹೊರಟಿದ್ದಾನೆ. ಅತೀವ ಮಹತ್ವಾಕಾಂಕ್ಷೆಯ ಕೌಶಿಕ-ತ್ರಿಶಂಕು ಎಂಬ ಇಬ್ಬರೂ ದುರಂತ ನಾಯಕರಂತೆ ಕಾಣುವ ವಿಚಿತ್ರ ಸಂದರ್ಭ ಅದು! ಅದನ್ನು ಮಾತುಕತೆಯಲ್ಲೇ ಮಥಿಸುವ ಶೋಧಿಸುವ ಅಪರೂಪದ ತಾಳಮದ್ದಳೆ ಪ್ರಸಂಗ "ತ್ರಿಶಂಕು ಸ್ವರ್ಗಾರೋಹಣ’.

2 comments:

Unknown June 9, 2010 at 9:11 PM  

ಮಾಹಿತಿಗಾಗಿ ಧನ್ಯವಾದಗಳು. ರಘು ಮುಳಿಯ

ಸಾಗರದಾಚೆಯ ಇಂಚರ June 10, 2010 at 8:12 AM  

ಮಾಹಿತಿಗಾಗಿ ಧನ್ಯವಾದಗಳು

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP