April 28, 2010

ಪೇಟೆ ಪಾಡ್ದನ

'ದೇಶಕಾಲ' ವಿಶೇಷ ಸಂಚಿಕೆಯು ಮುಗಿಲು ಮುಟ್ಟುವ ಉತ್ಸಾಹ ಸಂಭ್ರಮದೊಂದಿಗೆ ಬಿಡುಗಡೆಯಾಗಿದೆ. 'ಛೆ, ಬೆಂಗಳೂರಿನಲ್ಲಿ ಎಷ್ಟೆಲ್ಲಾ ಒಳ್ಳೆ ಕಾರ್ಯಕ್ರಮಗಳು ನಡೆಯುತ್ತವಲ್ಲಾ' ಅಂತ ಪರ ಊರಿನವರು ಮತ್ತಷ್ಟು ಕರುಬುವಂತಾಗಿದೆ ! ವರ್ಷದ ಹಿಂದೆ ಈ 'ಚಂಪಕಾವತಿ'ಯಲ್ಲಿ ಸರಣಿಯಾಗಿ ಪ್ರಕಟವಾದ 'ಪೇಟೆ ಪಾಡ್ದನ'ದ ಆಯ್ದ ಪದ್ಯಗಳು, ದೇಶಕಾಲದ ವಿಶೇಷ ಸಂಚಿಕೆಯಲ್ಲಿ ಜಾಗ ಪಡೆದುಕೊಂಡಿವೆ. ಜತೆಗೆ ಎರಡು ಹೊಸ ಪದ್ಯಗಳು. ಆ ಎರಡು ಹೊಸ ಪದ್ಯಗಳು, ಈಗ ಇಲ್ಲೂ ಇವೆ. ಓದಿಕೊಳ್ಳಿ.


ಎಡ ತೋರು ಹೆಬ್ಬೆರಳುಗಳಲಿ
ಕಂಟ್ರೋಲು ಆಲ್ಟು, ಬಲ ತೋರು ಬೆರಳಲಿ
ಮತ್ತೆ ಮತ್ತೆ ತಬಲಾದಂತೆ ಬಾರಿಸು
ಟಕಟಕ ಟಂಟಂ- ಡಿಲೀಟು
ಹ್ಯಾಂಗಾಗಿದೆ ಕಂಪ್ಯೂಟರು?

ಅಬ್ಬಾ ಇಳಿಯಿತು ಪರದೆ ಈಗ
ಬಾಯಲಿಟ್ಟು ನೋಡಿಕೊ ಜ್ವರದ ಕಡ್ಡಿ
ರಟ್ಟೆಗೆ ಪಟ್ಟಿ ಕಟ್ಟಿ ನೋಡು ಒತ್ತಡ
ತುದಿ ಬೆರಳಿಗೆ ಚುಚ್ಚಿ ಪರೀಕ್ಷಿಸು
ನಿನ್ನ ಸಕ್ಕರೆಯ ಕಹಿ ಪ್ರಮಾಣ !

ಚುಚ್ಚಿಸಿಕೋ ನವ ದ್ವಾರಗಳಿಗೆ ಪ್ಲಗ್ಗು
ಕಂಪ್ಯೂ ಪರದೆಗಳಲಿ ನಿನ್ನ ಏರಿಳಿತ
ಶಟ್‌ಡೌನೂ ಆಗದೆ ಶಿಟ್‌ಡೌನೂ ಆಗದೆ
ಅಯ್ಯೋ ಫಜೀತಿ ತಿನ್ನು ತಿರುಪತಿ ಪ್ರಸಾದ !

ಅಪ್ಪ ಹೇಗಿದ್ದಾರಮ್ಮಾ ಅಂದರೆ
ಮೈಲ್ ಚೆಕ್ ಮಾಡಿ ಹೇಳುವಳಂತೆ ಮಗಳು
ಕಂಪ್ಯೂಟರಿಂದ ಈಚೆ ಬಂದು ಹೇಳು
ಸೊನ್ನೆ-ಒಂದರ ಅರ್ಥ ಒಂದೆ ಏನು?


ಮೆಕ್‌ಡೊನಾಲ್ಡ್, ಅಂಕಿತ ಪುಸ್ತಕ
ಸಾಯಿ ಗೋಲ್ಡ್ ಪ್ಯಾಲೇಸು, ರೋಟಿ ಘರ್
ಪೀಟರ್ ಇಂಗ್ಲೆಂಡು, ಗಾಂಧಿ ಬಜಾರು ಮಾಸಿಕ
ಎಚ್‌ಡಿಎಫ್‌ಸಿ ಐಎನ್‌ಜಿ ಸ್ಟೇಟ್‌ಬ್ಯಾಂಕು
ಎಟಿಎಮ್ಮುಗಳ ನಡುವೆ ಅಕೋ ನೋಡಿ
ಅಂಟು ತಿಂಡಿಯ ಕೊಕ್ಕಿಗಂಟಿಸಿಕೊಂಡು
ಒದ್ದಾಡುತ್ತಿದೆ ಗರಿ ಮುರಿದ ಗುಬ್ಬಿ ಹಕ್ಕಿ
ಕ್ಲಿಕ್ಕಿಸಿ ಫೋಟೊ ಮೊಬೈಲ್‌ನಲ್ಲಾದರೂ !

ಹಾಂ, ಇವತ್ತು ರಾತ್ರಿ ಊಟಕ್ಕೆ ಬರಲ್ಲ
ಹೆಂಡತಿ ಕಳಿಸಿದ್ದಾಳೆ ಎಸ್ಸೆಮ್ಮೆಸ್ಸು !
ಟು ವೀಲರ್‌ನ್ನು ಅನಾಮತ್ತೆತ್ತಿದೆ ಟೈಗರ್
ಕತ್ತಿನ ಒಂದೆಳೆ ಸರ ಎಳೆದ ಅನಾಮಿಕ ಕಿಲ್ಲರ್
ಒಂದೇ ಒಂದು ಪದ ನಿಮ್ಮಿಂದ ಹೆಚ್ಚಾಗಿ
ಹೊಡೆಯ ಬಂದಿದ್ದಾನೆ ಫುಟ್‌ಪಾತ್ ಸೆಲ್ಲರ್

ಅಂತೂ ಒಳ್ಳೆಯ ಫೋಟೊ ಸಿಕ್ಕಿತಾ?
ನಿಮ್ಮ ತಾತನ ಫೋಟೊದ ಹಿಂದೆ
ಗೂಡು ಕಟ್ಟಿದ್ದ ಗುಬ್ಬಿಯ
ನಾಲ್ಕನೇ ಸಂತಾನದ ಫೋಟೊ-
ನಿಮ್ಮ ಖುಶಿಗೆ ಕಾರಣವೇನು?

Read more...

April 20, 2010

ಆ ಸುಧನ್ವನ ಪ್ರಭಾವತಿ !


ಪಾಂಡವ-ಕೌರವರ ಮಹಾಯುದ್ಧ ಮುಗಿದಿದೆ. ಬಂಧು ಹತ್ಯಾ ದೋಷದ ಪರಿಹಾರಕ್ಕಾಗಿ ಧರ್ಮರಾಯ ಅಶ್ವಮೇಧ ಯಾಗವನ್ನು ಕೈಗೊಂಡಿದ್ದಾನೆ. ಅರ್ಜುನ ಬೆಂಗಾವಲಿಗಿರುವ ಅಶ್ವಮೇಧದ ಕುದುರೆಯು ಚಂಪಕಾವತಿಯನ್ನು ಪ್ರವೇಶಿಸಿದೆ. ಚಂಪಕಾವತಿಯ ದೊರೆ ಹಂಸಧ್ವಜ, ಕುದುರೆಯನ್ನು ಕಟ್ಟಿ ಹಾಕಿದ್ದಾನೆ. ಅರ್ಜುನನೊಡನೆ ಹೋರಾಡಿ ಸೋಲಿಸಿ, ತಮ್ಮ ಆರಾಧ್ಯ ದೇವ ಕೃಷ್ಣ ಬರುವಂತೆ ಮಾಡಬೇಕೆಂಬುದು ಅವನ ಕನಸು. ಹಾಗಾಗಿ ಯುದ್ಧಕ್ಕೆ ಹೊರಡಲು ತಡ ಮಾಡುವ ಯಾರನ್ನೇ ಆದರೂ ಎಣ್ಣೆ ಕುದಿಯುತ್ತಿರುವ ಕೊಪ್ಪರಿಗೆಗೆ ಹಾಕಲಾಗುವುದು ಎಂದು ಡಂಗುರ ಸಾರಿದ್ದಾನೆ. ಯುದ್ಧಕ್ಕೆ ಹೊರಟಿರುವ ಮಗ ಸುಧನ್ವ, ಪತ್ನಿ ಪ್ರಭಾವತಿಗೆ ಹೇಳಿಹೋಗಲು ಬರುತ್ತಿದ್ದಾನೆ. ಆ ಸತಿಗೆ ಅಂದೇ ಷೋಡಶದ ಋತು ಸಮಯ. ಪತಿ ಯುದ್ಧಕ್ಕೆ ಹೋದರೆ ಮತ್ತೆ ಬರುವುದು ಖಚಿತವಿಲ್ಲ. ಹಾಗಾಗಿ ಈ ರಾತ್ರಿ ನನ್ನೊಂದಿಗೆ ಕಳೆದು, ಸಂತಾನ ಭಾಗ್ಯವನ್ನು ಕರುಣಿಸಿ ಹೋಗಿ ಅಂತ ಕೇಳಿಕೊಳ್ಳುತ್ತಾಳೆ. ಪತಿ ಸುಧನ್ವ ಮೊದಲು ನಿರಾಕರಿಸಿದರೂ ನಂತರ ಅವಳನ್ನು ಕೂಡುತ್ತಾನೆ. 'ಸುಧನ್ವ ಮೋಕ್ಷ' ಎನ್ನುವ ಈ ಪ್ರಸಂಗದಲ್ಲಿ ಬರುವ ಸುಧನ್ವ-ಪ್ರಭಾವತಿಯರ ಸಂಭಾಷಣೆ 'ಯಕ್ಷಗಾನ ತಾಳಮದ್ದಳೆ'ಯಲ್ಲಿ ಒಂದು ಮುಖ್ಯವಾದ ಸನ್ನಿವೇಶ. ಮಾತಿನಲ್ಲೇ ಎಲ್ಲವನ್ನೂ ಅಭಿವ್ಯಕ್ತಿಸಬೇಕಾದ್ದರಿಂದ ಕ್ಲಿಷ್ಟವಾದದ್ದು ಕೂಡಾ. ಮೊನ್ನೆಮೊನ್ನೆ ಅಪರೂಪಕ್ಕೆ ಪ್ರಭಾವತಿ ಪಾತ್ರವನ್ನು ನಿರ್ವಹಿಸಿದಾಗ ಆಡಿದ ಮಾತುಗಳಲ್ಲಿ ಒಂದಷ್ಟನ್ನು, ಮಾತಿನ ಶೈಲಿಯಲ್ಲೇ, ಇಲ್ಲಿ ಸ್ವಗತದ ರೂಪದಲ್ಲಿ ಒಟ್ಟಾಗಿ ದಾಖಲಿಸಿದ್ದೇನೆ. ಹೇಗಿದ್ದಾಳೆ ಈ ಸುಧನ್ವನಿಗೆ ಕಂಡ ಆ ಸುಧನ್ವನ ಪ್ರಭಾವತಿ?! ಓದಿ ಹೇಳಿ.

ಕಾಯುವುದು ಯಾವತ್ತೂ ಕಷ್ಟ. ದೇವರಿಗೆ ಭಕ್ತರನ್ನು 'ಕಾಯುವುದು' ಕಷ್ಟ. ದೊಡ್ಡವರಿಗೆ ಚಿಕ್ಕವರನ್ನು ಕಾಯುವುದು ಕಷ್ಟ. ಇನ್ನೊಬ್ಬರಿಗಾಗಿ ಕಾಯುವುದಂತೂ ಕಡು ಕಷ್ಟ ! ಆದರೆ ಗಂಡನಿಗಾಗಿ ಹೆಂಡತಿ ಕಾಯುವುದರಲ್ಲಿ ಒಂದು ಬಗೆಯ ಸುಖವಿಲ್ಲವಾ? ಹಾಗಂತ ಕಾಂತನಿಲ್ಲದ ಏಕಾಂತಕ್ಕೆ ಅರ್ಥ ಇದೆಯಾ? ಅವರು ದಿನ ಲೆಕ್ಕ ಹಾಕುತ್ತಿದ್ದಾರಾ ಇಲ್ಲವಾ ಗೊತ್ತಿಲ್ಲ. ಆದರೆ ನಾನಂತೂ ಸರಿಯಾಗಿ ದಿನ ಲೆಕ್ಕ ಇಟ್ಟಿದ್ದೇನೆ. ಹಾಗಾಗಿಯೇ ನನಗಿಂದು ವಿಶೇಷವಾದ ದಿನ, ಸುದಿನ. ಚಂಪಕಾವತಿಯ ಜನ ನನ್ನನ್ನು 'ಸತಿ ಶಿರೋಮಣಿ ಪ್ರಭಾವತಿ' ಅಂತ ಬಣ್ಣಿಸುತ್ತಾರೆ. ಪತ್ನಿಯಾದ ಲಕ್ಷ್ಮಿಯನ್ನು ಎದೆಯಲ್ಲಿಟ್ಟುಕೊಂಡವನು ವಿಷ್ಣು. ಬ್ರಹ್ಮನಂತೂ ಪತ್ನಿ ಶಾರದೆಯನ್ನು ನಾಲಗೆಯಲ್ಲೇ ಇಟ್ಟುಕೊಂಡವನಂತೆ. ನನ್ನನ್ನು ಸತಿ ಶಿರೋಮಣಿ ಅನ್ನುವುದಕ್ಕೆ- ನಮ್ಮವರೇನು ನನ್ನನ್ನು ತಲೆ ಮೇಲಿಟ್ಟುಕೊಂಡಿದ್ದಾರಾ?! ಏನೂ ಇಲ್ಲ. ಅವರ ತಲೆ ಮೇಲೆ ಕುಳಿತುಕೊಳ್ಳುವವಳೂ ಈ ಪ್ರಭಾವತಿಯಲ್ಲ. ಅವರ ಮೇಲೆ ನನ್ನ 'ಪ್ರಭಾವ ಅತಿ'ಯಾದದ್ದೂ ಇಲ್ಲ ! ಪತಿಯ ಭುಜದ ಹಿಂದೆ ನಾನಿದ್ದಾಗ, ಅವರ ಮುಖದ ಪ್ರಭೆ ಹೆಚ್ಚುತ್ತದೆ ಅಷ್ಟೆ ! ಅವರು ಕಾಂತ ಹೌದು; ಹಾಗಂತ ನಾನೇನು ಕಬ್ಬಿಣವಾ?! ಹ್ಮ್...ಅಬ್ಬಾ ಈ ಗಂಡಂದಿರ ಸೊಕ್ಕೇ...ನನಗೊಂದು ಮಾತೂ ಹೇಳದೆ ಯುದ್ಧಕ್ಕೆ ಹೊರಟುಹೋದರೆ? ಅದೂ 'ಮೂರು ಲೋಕದ ಗಂಡ' ಅಂತ ಹೆಸರಾದ ಪಾರ್ಥನೊಡನೆ ಹೋರಾಡಲು?

ಅಯ್ಯೋ, ಸೂರ್ಯ ಮುಳುಗಿಯೂ ಆಯಿತು. ಇನ್ನು ಚಂದ್ರ ವಂಶದವರ ಪರಾಕ್ರಮವೆ. ನನ್ನವರು ಯಾಕಿನ್ನೂ ಬಂದಿಲ್ಲ? ಅಥವಾ ನಾನು ಸೀರೆ ತೊಡುವಾಗಲೇ ತಡವಾಗಿಯಿತೋ ! ನಮ್ಮ ಮಾವ ಹಂಸಧ್ವಜ ಮಹಾರಾಜರು, ನಮ್ಮ ವಿವಾಹ ಮಹೋತ್ಸವದ ಕಾಲದಲ್ಲಿ ಕೊಟ್ಟ ಸೀರೆ ಇದು. ಸೆರಗಿನಲ್ಲಿ ಸಾವಿರ ಕಣ್ಣಿನ ನವಿಲಿನ ಚಿತ್ತಾರವಿರುವ ಸೀರೆ. ಅದಕ್ಕೆ ಅಂಟಿಸಿದ ಪುಟ್ಟ ಪುಟ್ಟ ಕನ್ನಡಿಗಳಲ್ಲಿ ನನ್ನವರ ನೂರಾರು ಮುಖ ಕಾಣಬೇಕು. ಅಬ್ಬಾ ಕುಪ್ಪಸ ತೊಡುವಾಗ ಮಾತ್ರ ಕೊಂಚ ಬಿಗಿಯಾದದ್ದು ಹೌದು ! ಆವತ್ತಿನ ಕುಪ್ಪಸ ಅಲ್ವೆ? ಹಾಗಂತ ನಾನು ಅಷ್ಟೇನೂ ದಪ್ಪ ಆಗಿಲ್ಲ. ಹಾಗೆಲ್ಲ ದಪ್ಪ ಆಗುವುದಕ್ಕೆ ನಾನೇನು ಹೆತ್ತಿದ್ದೇನಾ?! ಅರ್ಧ ಚಂದ್ರಾಕೃತಿಯ ತಿಲಕ ಇಟ್ಟುಕೊಂಡೆ. ಏನು? ಅವರಿಗೆ ಅರ್ಧಚಂದ್ರ ಪ್ರಯೋಗ ಅಂತಲಾ?! ಛೆ ಛೆ ಹಾಗಲ್ಲಪ್ಪ...ಇವತ್ತು ರಾತ್ರಿಯಾದರೂ, ಉಳಿದದ್ದು ನನ್ನವರಿಂದ ಪೂರ್ತಿಯಾಗಲಿ ಅಂತ. ಕೃಷ್ಣನನ್ನು ನೋಡುವ, ಚಂಪಕಾವತಿಯ ಜನರಿಗೆಲ್ಲ ಆ ದೇವನನ್ನು ತೋರಿಸುವ ಆಸೆಯಂತೆ ಅವರದ್ದು. ನನಗೆ ಆ ಕೃಷ್ಣನ ಮಗನನ್ನು, ಆ ಮಹಾವಿಷ್ಣುವಿನ ಮಗನನ್ನು, ಆ ಮನುಮಥನನ್ನು ಸುಧನ್ವನಾಗಿ ನೋಡುವ ಆಸೆ ! ಹಾಗಾಗಿಯೇ ಇಷ್ಟು ಅಲಂಕಾರ. ಹೊನ್ನ ಹರಿವಾಣದಲ್ಲಿ ಕರ್ಪೂರ ವೀಳ್ಯವನ್ನಿಟ್ಟು, ಸಂಪಿಗೆಯ ಹೂವುಗಳನ್ನಿಟ್ಟು ಅವರನ್ನು ಎದುರುಗೊಳ್ಳುವುದಕ್ಕೆ ಸಿದ್ಧಳಾದದ್ದು. ಕೆಂಡಸಂಪಿಗೆಯೂ ಇದೆ, ಮೊಟ್ಟೆ ಸಂಪಿಗೆಯೂ ಇದೆ !

ಸತಿಯನ್ನು ಕೂಡಿದರೆ ಸಾವು ನಿಶ್ಚಿತ ಎಂದು ತಿಳಿದಿದ್ದ ಪಾಂಡು ಮಹಾರಾಜರೂ ಪತ್ನಿ ಮಾದ್ರಿಯನ್ನು ಕೂಡಿ ಪ್ರಾಣ ಕಳೆದುಕೊಂಡರಂತೆ. ಅವರ ಪ್ರಾಣವನ್ನು ಸೆಳೆದೊಯ್ದ ಆ ಯಮನಾದರೂ ಯಾರು? ಅವರಿಗೆ ಮೊದಲನೆಯ ಮಗ ಧರ್ಮರಾಯನನ್ನು ಕರುಣಿಸಿದವನು ! ಗಾಂಧಾರಿಗೆ ನೂರೊಂದು ಜನ ಮಕ್ಕಳಂತೆ. ಆದರು ಉಳಿದವಳು ಒಬ್ಬಳೇ ಅಲ್ಲವೇ ದುಶ್ಯಲೆ. ಅಶ್ವತ್ಥಾಮಾಚಾರ್ಯರು ದರ್ಭೆಯನ್ನೇ ಬ್ರಹ್ಮಾಸ್ತ್ರವಾಗಿಸಿ ಉತ್ತರೆಯ ಗರ್ಭಕ್ಕೆ ಪ್ರಯೋಗಿಸಿದಾಗ, ಅದನ್ನು ತಡೆದವನು ಕೃಷ್ಣನೇ ಅಂತೆ. ಕಾಮ ಎಷ್ಟೊಂದು ಪ್ರಚೋದಕ, ಸಂತಾನ ಎಷ್ಟೊಂದು ಆವಶ್ಯಕ ಎನ್ನುವುದಕ್ಕೆ ಇದಕ್ಕಿಂತ ಬೇರೆ ನಿದರ್ಶನಗಳು ಬೇಕೆ? ಹದಿನಾರು ಸಾವಿರದೆಂಟು ಪತ್ನಿಯರಿಗೆ ಬೇಕಾದ್ದನ್ನೆಲ್ಲಾ ಕೊಟ್ಟ ಕೃಷ್ಣನನ್ನು ಮೆಚ್ಚಿಸಲು ಹೊರಟ ಇವರು, ಇರುವ ಒಬ್ಬಳೇ ಪತ್ನಿಯನ್ನು ಮೆಚ್ಚಿಸದೆ ಹೋಗುವುದುಂಟೆ ?! ಸೀಸದ ಕವಚ ಕಟ್ಟಿಕೊಂಡು ಹೋಗಿ ಅರ್ಜುನನ್ನು ಸೋಲಿಸುತ್ತೇನೆ ಅನ್ನುವ ಇವರು, ಆ ಅರ್ಜುನನಿಗೆ ಹರಿಯ ಕರುಣದ ಕವಚವಿದೆ ಅಂತ ಯಾಕೆ ಯೋಚಿಸುವುದಿಲ್ಲ? ಕೃಷ್ಣಾರ್ಜುನರೊಡನೆ ಹೋರಾಡಿ ಗೆಲ್ಲುತ್ತೇನೆ ಅನ್ನುವುದು, ಬಾಯಾರಿಕೆಯಾದವನು ಉಪ್ಪು ನೀರು ಕುಡಿದ ಹಾಗಾಗುವುದಿಲ್ಲವೆ? ಅರ್ಜುನನ್ನು ಯುದ್ಧದಲ್ಲಿ ಸೋಲಿಸಿ, ಕೃಷ್ಣ ಬರುವಂತೆ ಮಾಡಿ, ಆ ಮೇಲೆ ಮುಕ್ತಿಯನ್ನಾದರೂ ಪಡೆಯುತ್ತೇನೆ ಅನ್ನುವವರು, ನನ್ನ ಬಗ್ಗೆ ಯಾಕೆ ಯೋಚಿಸುವುದಿಲ್ಲ? ಪಿತೃಋಣದಿಂದ ಮುಕ್ತನಾಗುವುದು ಬೇಡವಾ? ಅಂತಃಪುರಕ್ಕೆ ಬರಲಿ, ನನ್ನ ಪ್ರಾಣಕಾಂತನೆಂಬ ಕೃಷ್ಣನಿಗೆ ನಾನೇ ಕೊಳಲಾಗಬೇಕು. ಅವರ ಧನುಸ್ಸಿಗೆ ನಾನೇ ಹೆದೆಯೇರಿಸಬೇಕು. ಅವರ ಬತ್ತಳಿಕೆಯಲ್ಲಿರುವ ಬಾಣಗಳಿಗೆ ನನ್ನ ತುರುಬಿನಲ್ಲಿರುವ ಹೂಮಾಲೆಯನ್ನೇ ಸುತ್ತಿ, ಅವುಗಳನ್ನು ಮನ್ಮಥನ ಪುಷ್ಪಶರಗಳನ್ನಾಗಿ ಮಾಡುತ್ತೇನೆ. ಹಣೆಗೊಂದು ಹೂ ಮುತ್ತನ್ನಿಟ್ಟು ಪರವಶಗೊಳಿಸುತ್ತೇನೆ. ಅವರ ಕೈಗಳನ್ನು ನನ್ನ ಸೀರೆಯ ಸೆರಗಿನಲ್ಲೇ ಕಟ್ಟುತ್ತೇನೆ ! ಆಮೇಲೆ ಏನು ಬೇಕೋ ಮಾಡಲಿ !

Read more...

April 11, 2010

ಅವಳ ಸ್ವ-ಗತ


ಒಂದಿಡೀ ದಿನ ನೆನಪಿಗೇ ಮೀಸಲಿಟ್ಟೆ
ಸುರಿದೆ ಪೋಣಿಸಿದೆ ನೂಲಿಲ್ಲದೆ !
ಒಂದೆಸಳ ತುದಿಯೂ ಕಪ್ಪಾಗಿಲ್ಲ
ಸೂಜಿ ಕತ್ತರಿ ತೋರಿಸಿಯೇ ಇಲ್ಲ
ಆದರೂ ಸಂಜೆ ನೀರಲ್ಲಿಡುವ ಮೊದಲು
ತೊಟ್ಟು ನೋಡಿಕೊಂಡೆ !

ಇರುಳ ಮಧ್ಯೆ ಆಗಾಗ ಬಂದ
ನನ್ನ ಅಕ್ಷಿಪಟಲದೆದುರು ನಿಂದ
ಕರುಳ ಬಳ್ಳಿಯ ಹಿಡಿದು ಮಿಡಿದ
ಅಕ್ಷತೆ ವೃಷ್ಠಿಗೆ ರೋಮಾಂಚಿತನಾಗಿ
ಬಿಗಿದ ಕೊರಳ ಬಳಸಿ
ಪುಷ್ಪಮಾಲೆಯೆ ಸುತ್ತಿದ

ಕೈ ಸೆಳೆದು ಹೊಟ್ಟೆಗೆ ಅಂಟಿಸಿಕೊಂಡ
ಹಾವಿನಂತೆ ನಾನು ಸುತ್ತಿದೆ
ಗಲ್ಲ ಹೆಗಲ ಮೇಲಿಟ್ಟು ಮುಖ ಅರಳಿಸಿ
ಚುಚ್ಚಿದೆ ತುಟಿ ಚೂಪು ಮಾಡಿ
ಎಕ್ಸಿಲೇಟರು ತಿರುಗಿಸಿ ಬೈಕು ಗಾಳಿಗೊಡ್ಡಿದ.

ವಲಸೆ ಹಕ್ಕಿಗೆ ಹತ್ತೇ ದಿನ
ತೊಂಬತ್ತೆಂಟು ಪಾಯಿಂಟ್
ತೊಂಬತ್ತೊಂಬತ್ತರಲ್ಲಿ ಮಾತಾಡಿದ
ಸರ್ಕಲಲಿ ಸಿಕ್ಕು ತಪ್ಪಿಸಲು ಹೆಣಗಿದ
ಹೊಸ ನಂಬರಿನ ಮೊಬೈಲ್ ಕೈಯಲ್ಲಿ
ಫಳಫಳ ಉಂಗುರ; ಕ್ಷಣ ಭಂಗುರ.
ವಾಹನಗಳ ಮಧ್ಯೆಯೇ ಅವಸರಿಸಿ ನಿಲ್ಲಿಸಿ
ಹೂ ಮಾಲೆ ನಾಲ್ಕು ಮೊಳ ಕೊಂಡುಕೊಂಡ
ಎಲ್ಲಿಗೆಂದು ಕೇಳುವುದು ಇನ್ನು ಸರಿಯಾ?

Read more...

April 07, 2010

ಹೊಸ ಪರಿಮಳದ ಜಾಡು ಹಿಡಿದು

ಪ್ರಿಯ ಓದುಗರೇ, ಬೆಂಗಳೂರಿನಲ್ಲಿ ನಾನು ಮಾಡಿಕೊಂಡ ಏಕೈಕ ಸೈಟು ಇದು ! ಚಂಪಕಾವತಿ. ಬದುಕಿನ ಹೊಸ ಕಕ್ಷೆಯಲ್ಲಿ ಸುತ್ತುತ್ತಿದ್ದುದರಿಂದ ಇಲ್ಲೂ ಕೊಂಚ ಮಂಕು ಬಡಿದಿತ್ತು. ಐಪಿಎಲ್ ಮ್ಯಾಚುಗಳು, ಕಂಪ್ಯೂಟರ್ ಎದುರು ಕುಳಿತರೆ ಕೈ ಕೊಡುವ ಕರೆಂಟು, ಬದಲಾದ ದೈನಿಕದ ಸಮಯ...ಇವೂ ಸೇರಿಕೊಂಡು ಕೈಗೆ ಅಂಟಿಕೊಂಡಿದ್ದ ಅಕ್ಷರಗಳು ಹಾಗೆಯೇ ಉಳಿದಿದ್ದವು. ಸುದ್ದಿ ಮಾಧ್ಯಮಗಳು ಮನರಂಜನೆ ಕೊಡಲು, ಮನರಂಜನೆಯ ಮಾಧ್ಯಮಗಳು ಸುದ್ದಿಯಾಗಲೂ ಹಪಹಪಿಸುವ ದಿನಗಳಿವು ! ಅಂತಹ ಮಾಧ್ಯಮ ಲೋಕದಲ್ಲಿ ಜೀಕುತ್ತಿರುವಾಗ ಹೊಸ ರುಚಿ-ಪರಿಮಳ ನಾಲಗೆಗೆ ದಕ್ಕಿದೆ. ಇನ್ನು ಚಂಪಕಾವತಿ ಅಪ್‌ಡೇಟ್ ಆಗುತ್ತದೆ.
ಅಂದಹಾಗೆ, ಮುಂದಿನ ಶನಿವಾರ (ಏಪ್ರಿಲ್೧೦) ಸಂಜೆ.೫.೩೦ಕ್ಕೆ "ಅನನ್ಯ'ದಲ್ಲಿ (೧೯/೨, ೪ನೇ ಮುಖ್ಯರಸ್ತೆ, ಮಲ್ಲೇಶ್ವರಂ, ಬೆಂಗಳೂರು) ಒಂದು ಯಕ್ಷಗಾನ ತಾಳಮದ್ದಳೆ ಇದೆ. ಭಾಗವತರಾಗಿ ನೆಬ್ಬೂರು, ಗಣಪತಿ ಭಟ್- ಅರ್ಥಧಾರಿಗಳಾಗಿ-ಸರ್ಪಂಗಳ ಈಶ್ವರ ಭಟ್, ಮೋಹನ ಹೆಗಡೆ, ಮೊದಲಾದವರಿರುತ್ತಾರೆ. ಪ್ರಸಂಗ 'ಸುಧನ್ವಾರ್ಜುನ'.'ಹಂಸಧ್ವಜ'ನ ಪುಟ್ಟ ಪಾತ್ರದಲ್ಲಿ ನಾನೂ ಇರುತ್ತೇನೆ. ಸ್ತ್ರೀ ವೇಷಧಾರಿ ಶ್ರೀಧರ ಷಡಕ್ಷರಿಯವರ ಸಹಾಯಾರ್ಥ ನಡೆಯುವ ಆ ತಾಳಮದ್ದಳೆಗೆ ಬಿಡುವಿದ್ದರೆ ಬನ್ನಿ. ಈ ಕೆಳಗಿರುವ ದೃಶ್ಯವೊಂದನ್ನು ತಮಾಷೆಗೆ ಓದಿಕೊಳ್ಳಿ !

ರಾತ್ರಿ ಒಂಭತ್ತು ಗಂಟೆ
(ಸುಮಾರು ಅರುವತ್ತು ವರ್ಷಗಳಷ್ಟು ಹಳೆಯ ಮನೆ. ಎದುರಿರುವ ಉದ್ದನೆಯ ಜಗಲಿಯಲ್ಲಿ ಸುಮಾರು ಎಂಬತ್ತರ ವಯಸ್ಸಿನ ಮುದುಕಿ ಅತ್ತೆ. ಮುಖ್ಯ ಬಾಗಿಲ ಬಳಿ ನೆಲದಲ್ಲಿ ಕುಳಿತು ಪತ್ರಿಕೆ ಓದುತ್ತಿದ್ದಾಳೆ. ಅವಳಿಗೆ ಕಾಣುತ್ತಿರುವ ಅಕ್ಷರಗಳು ಮಸುಕಾಗುತ್ತಿವೆ)
ಅತ್ತೆ : ಕರ್ಮ, ಈಗ ಅವ್ನು ಏನಾದ್ರೂ ಬರದ್ರೂ ಓದ್ಲಿಕ್ಕಾಗುದಿಲ್ಲ.
(ತಾನು ಕಸೂತಿ ಮಾಡಿ ಟಿವಿಗೆ ಹೊದಿಸಿದ್ದ ಬಟ್ಟೆಯನ್ನು ನಿಧಾನವಾಗಿ ಎತ್ತಿ ಮಡಚಿದ್ದಾಳೆ ಸೊಸೆ. ಕೊಂಚ ದೂಳು ಕುಳಿತಿರುವುದನ್ನು ನೋಡಿ ಫಕ್ಕನೆ ಬಾಯಲ್ಲಿ ಫೂಫೂ ಊದಿದ್ದಾಳೆ.)
ಅತ್ತೆ : ಎಂತ? ಅಂವ ಈಗ ಟೀವೀಲಿ ಬರ್‍ತಾನಾ?
ಸೊಸೆ: ಟೀವೀಲಿ ಬರೂದಿಲ್ಲ.
ಅತ್ತೆ: ಅಷ್ಟೆಯಾ...(ನಿರಾಶೆಯಿಂದ)
ಸೊಸೆ : (ಸಣ್ಣ ಸಿಟ್ಟಿನಲ್ಲಿ) ಮತ್ತೆಂತ ಪೇಪರಿಲಿ ಅಂವ ಬರ್‍ತಿದ್ನಾ?
ಅತ್ತೆ: ಅಲ್ಲ ಮಾರಾಯ್ತಿ, ಹೆಸರಾದ್ರೂ ಬರ್‍ತಿತ್ತಲ್ಲ.
ಸೊಸೆ: (ಗಂಡನ ಫೋಟೊ ನೋಡಿ) ಇವ್ರಿಗೆಲ್ಲಾ ಹೆಸ್ರು ಬಂದು ಎಂಥ ಉಪಕಾರ ಆಗ್ಯದೆ?
ಅತ್ತೆ : (ಪೆಚ್ಚು ನಗೆ ನಕ್ಕು ಕಣ್ಣು ತೇವ ಮಾಡಿಕೊಂಡು)ಆಯ್ತು ಮಾರಾಯ್ತಿ. ನಾನು ತಮಾಷೆ ಮಾಡಿದ್ದಷ್ಟೆ.
ಸೊಸೆ : (ಟಿವಿ ತೋರಿಸಿ) ನೋಡು, ಅದರ ಹೆಸರು ಹಳೇಬೀಡು ಸೀತಮ್ಮ. ಎಷ್ಟು ಒಳ್ಳೆ ಅತ್ತೆ ನೋಡು. ಹ್ಹಿಹ್ಹಿ
ಅತ್ತೆ: ಹೋ ಅಕೋ, ಆ ಹೆಂಗ್ಸು ನಿನ್ನ ಹಾಗೆ ಕಾಣ್ತೆ. ನಿನಿಗೆ ಆ ನೀಲಿ ಸೀರೆ ಪ್ರೀತಿ ಅಲ್ವಾ?
(ಬಾಗಿಲ ಬಳಿಯಿದ್ದ ಪತ್ರಿಕೆಯ ಪುಟಗಳೆಲ್ಲ ಗಾಳಿಗೆ ಚೆಲ್ಲಾಪಿಲ್ಲಿಯಾಗುತ್ತಿವೆ. ಅದರೆಡೆಗೆ ಗಮನವಿಲ್ಲದೆ ಇಬ್ಬರೂ ಟಿವಿ ಮುಂದೆ ಕುಳಿತಿದ್ದಾರೆ. ಫೋನ್ ರಿಂಗಾಗುತ್ತದೆ)
ಸೊಸೆ: (ಟಿವಿಯಿಂದ ಕಣ್ಣು ಕದಲಿಸದೆ)ಅತ್ತೆಮ್ಮ, ಒಂದ್ಸಲ ಫೋನ್ ತೆಗೀತೀಯಾ?
ಅತ್ತೆ : ನನಗೆ ಮಾತಾಡುದು ಕೇಳೂದೇ ಇಲ್ಲ, ನೀನೇ ತೆಗಿ.
(ಸೊಸೆ ಫೋನ್‌ನಲ್ಲಿ ಉದ್ವೇಗದಿಂದ ಎಲ್ಲಿ ಏನು ಯಾರು ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತ ಮಾತಾಡುತ್ತಿದ್ದಾಳೆ. ಫಕ್ಕನೆ ಕರೆಂಟು ಹೋಗಿದೆ.)
ಅತ್ತೆ: ಅಕಾ, ಕರೆಂಟು ಹೋದ್ರೂ ಟಿವೀಲಿ ಮಾತಾಡುದು ಕೇಳ್ತೆ !
ಸೊಸೆ: ಥೋ, ನಾನಲ್ವಾ ಇಲ್ಲಿ ಫೋನಿಲಿ ಮಾತಾಡ್ತಿರೋದು ! ಹರಟೆ ಮಾಡಬೇಡ ನೀನು.
(ಮತ್ತೆ ಸೊಸೆ ಉದ್ವೇಗದಿಂದ ಕೇಳಿಸಿಕೊಳ್ಳುತ್ತಿದ್ದಾಳೆ. ಕರೆಂಟು ಛಕ್ಕನೆ ಬಂದು ಹೋದಾಗ- ಟಿವಿಯಲ್ಲಿ ಮುದುಕಿಯೊಬ್ಬಳು ಅಳುವ ಸದ್ದಷ್ಟೇ ಕೇಳಿ ಮೌನವಾಗಿದೆ)
ಸೊಸೆ : ಎಂತಾಯ್ತು ನಿನಿಗೆ?!
ಅತ್ತೆ: ನನಿಗೆ ಎಂತಾಗಿದೆ? (ಮುಸುಮುಸಿ ನಗುತ್ತಾ) ಅದು ಟೀವೀಲಿ ಅಲ್ವಾ?! ಅಂವ ಎಂತ ಹೇಳಿದ?
(ಈಗ ಸೊಸೆಯ ಮಾತಿನಲ್ಲಿ ಸಂತೋಷ ತುಂಬಿದೆ. ಸೀಮೆಎಣ್ಣೆ ದೀಪ ಹೊತ್ತಿಸಿದ ಅತ್ತೆ, ದೀಪವನ್ನು ಸೊಸೆಯ ಮುಖದ ಬಳಿ ಹಿಡಿದಿದ್ದಾಳೆ.)
ಅತ್ತೆ: ಎಂತ ಯಡಿಯೂರಪ್ಪನತ್ರ ಮಾತಾಡ್ತಿದ್ಯಾ?!
ಸೊಸೆ : (ಆನಂದಾಶ್ರು ಸುರಿಸುತ್ತಾ) ಇರು, ಅಂವನಿಗೆ ನಿನ್ನ ಹತ್ರವೂ ಮಾತಾಡ್ಬೇಕಂತೆ- ಅಂತ ಅತ್ತೆಯ ಕಿವಿಗೆ ರಿಸೀವರನ್ನು ಒತ್ತಿ ಹಿಡಿದಿದ್ದಾಳೆ. ದೀಪದ ಬೆಳಕಿನಲ್ಲಿ ಇಬ್ಬರ ಕಣ್ಣುಗಳೂ ಅರಳಿ, ಕಣ್ಣ ಹನಿಗಳು ಬೆಳಕಿಗೆ ಪ್ರತಿಫಲಿಸಿದಂತಿವೆ. ಮುಖ ಸಂತೋಷದಿಂದ ಬೀಗುತ್ತಿದೆ. ದೂರದಿಂದ ಬೆಳಕು ಕಂಡು, ಜೀಪೊಂದು ಮನೆಯಂಗಳಕ್ಕೆ ಇಳಿಯುತ್ತಿದೆ. ಯಾರೋ ಅಪರಿಚಿತ ಇಬ್ಬರು ಎದುರಿನ ಸೀಟಿನಲ್ಲಿದ್ದಾರೆ. ಜೀಪಿನ ಹೆಡ್‌ಲೈಟ್ ಬೆಳಕು ಮನೆಯನ್ನು ಕುಕ್ಕುತ್ತಿದೆ. ಅತ್ತೆ-ಸೊಸೆ ಇಬ್ಬರೂ ರಿಸೀವರ್ ಹಿಡಿದುಕೊಂಡು ಮಾತಿನಲ್ಲಿ ಮೈಮರೆತಿದ್ದಾರೆ.)
(ಮುಂದುವರಿಯುವುದು!!)

Read more...

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP