
ಪಾಂಡವ-ಕೌರವರ ಮಹಾಯುದ್ಧ ಮುಗಿದಿದೆ. ಬಂಧು ಹತ್ಯಾ ದೋಷದ ಪರಿಹಾರಕ್ಕಾಗಿ ಧರ್ಮರಾಯ ಅಶ್ವಮೇಧ ಯಾಗವನ್ನು ಕೈಗೊಂಡಿದ್ದಾನೆ. ಅರ್ಜುನ ಬೆಂಗಾವಲಿಗಿರುವ ಅಶ್ವಮೇಧದ ಕುದುರೆಯು ಚಂಪಕಾವತಿಯನ್ನು ಪ್ರವೇಶಿಸಿದೆ. ಚಂಪಕಾವತಿಯ ದೊರೆ ಹಂಸಧ್ವಜ, ಕುದುರೆಯನ್ನು ಕಟ್ಟಿ ಹಾಕಿದ್ದಾನೆ. ಅರ್ಜುನನೊಡನೆ ಹೋರಾಡಿ ಸೋಲಿಸಿ, ತಮ್ಮ ಆರಾಧ್ಯ ದೇವ ಕೃಷ್ಣ ಬರುವಂತೆ ಮಾಡಬೇಕೆಂಬುದು ಅವನ ಕನಸು. ಹಾಗಾಗಿ ಯುದ್ಧಕ್ಕೆ ಹೊರಡಲು ತಡ ಮಾಡುವ ಯಾರನ್ನೇ ಆದರೂ ಎಣ್ಣೆ ಕುದಿಯುತ್ತಿರುವ ಕೊಪ್ಪರಿಗೆಗೆ ಹಾಕಲಾಗುವುದು ಎಂದು ಡಂಗುರ ಸಾರಿದ್ದಾನೆ. ಯುದ್ಧಕ್ಕೆ ಹೊರಟಿರುವ ಮಗ ಸುಧನ್ವ, ಪತ್ನಿ ಪ್ರಭಾವತಿಗೆ ಹೇಳಿಹೋಗಲು ಬರುತ್ತಿದ್ದಾನೆ. ಆ ಸತಿಗೆ ಅಂದೇ ಷೋಡಶದ ಋತು ಸಮಯ. ಪತಿ ಯುದ್ಧಕ್ಕೆ ಹೋದರೆ ಮತ್ತೆ ಬರುವುದು ಖಚಿತವಿಲ್ಲ. ಹಾಗಾಗಿ ಈ ರಾತ್ರಿ ನನ್ನೊಂದಿಗೆ ಕಳೆದು, ಸಂತಾನ ಭಾಗ್ಯವನ್ನು ಕರುಣಿಸಿ ಹೋಗಿ ಅಂತ ಕೇಳಿಕೊಳ್ಳುತ್ತಾಳೆ. ಪತಿ ಸುಧನ್ವ ಮೊದಲು ನಿರಾಕರಿಸಿದರೂ ನಂತರ ಅವಳನ್ನು ಕೂಡುತ್ತಾನೆ. 'ಸುಧನ್ವ ಮೋಕ್ಷ' ಎನ್ನುವ ಈ ಪ್ರಸಂಗದಲ್ಲಿ ಬರುವ ಸುಧನ್ವ-ಪ್ರಭಾವತಿಯರ ಸಂಭಾಷಣೆ 'ಯಕ್ಷಗಾನ ತಾಳಮದ್ದಳೆ'ಯಲ್ಲಿ ಒಂದು ಮುಖ್ಯವಾದ ಸನ್ನಿವೇಶ. ಮಾತಿನಲ್ಲೇ ಎಲ್ಲವನ್ನೂ ಅಭಿವ್ಯಕ್ತಿಸಬೇಕಾದ್ದರಿಂದ ಕ್ಲಿಷ್ಟವಾದದ್ದು ಕೂಡಾ. ಮೊನ್ನೆಮೊನ್ನೆ ಅಪರೂಪಕ್ಕೆ ಪ್ರಭಾವತಿ ಪಾತ್ರವನ್ನು ನಿರ್ವಹಿಸಿದಾಗ ಆಡಿದ ಮಾತುಗಳಲ್ಲಿ ಒಂದಷ್ಟನ್ನು, ಮಾತಿನ ಶೈಲಿಯಲ್ಲೇ, ಇಲ್ಲಿ ಸ್ವಗತದ ರೂಪದಲ್ಲಿ ಒಟ್ಟಾಗಿ ದಾಖಲಿಸಿದ್ದೇನೆ. ಹೇಗಿದ್ದಾಳೆ ಈ ಸುಧನ್ವನಿಗೆ ಕಂಡ ಆ ಸುಧನ್ವನ ಪ್ರಭಾವತಿ?! ಓದಿ ಹೇಳಿ.
ಕಾಯುವುದು ಯಾವತ್ತೂ ಕಷ್ಟ. ದೇವರಿಗೆ ಭಕ್ತರನ್ನು 'ಕಾಯುವುದು' ಕಷ್ಟ. ದೊಡ್ಡವರಿಗೆ ಚಿಕ್ಕವರನ್ನು ಕಾಯುವುದು ಕಷ್ಟ. ಇನ್ನೊಬ್ಬರಿಗಾಗಿ ಕಾಯುವುದಂತೂ ಕಡು ಕಷ್ಟ ! ಆದರೆ ಗಂಡನಿಗಾಗಿ ಹೆಂಡತಿ ಕಾಯುವುದರಲ್ಲಿ ಒಂದು ಬಗೆಯ ಸುಖವಿಲ್ಲವಾ? ಹಾಗಂತ ಕಾಂತನಿಲ್ಲದ ಏಕಾಂತಕ್ಕೆ ಅರ್ಥ ಇದೆಯಾ? ಅವರು ದಿನ ಲೆಕ್ಕ ಹಾಕುತ್ತಿದ್ದಾರಾ ಇಲ್ಲವಾ ಗೊತ್ತಿಲ್ಲ. ಆದರೆ ನಾನಂತೂ ಸರಿಯಾಗಿ ದಿನ ಲೆಕ್ಕ ಇಟ್ಟಿದ್ದೇನೆ. ಹಾಗಾಗಿಯೇ ನನಗಿಂದು ವಿಶೇಷವಾದ ದಿನ, ಸುದಿನ. ಚಂಪಕಾವತಿಯ ಜನ ನನ್ನನ್ನು 'ಸತಿ ಶಿರೋಮಣಿ ಪ್ರಭಾವತಿ' ಅಂತ ಬಣ್ಣಿಸುತ್ತಾರೆ. ಪತ್ನಿಯಾದ ಲಕ್ಷ್ಮಿಯನ್ನು ಎದೆಯಲ್ಲಿಟ್ಟುಕೊಂಡವನು ವಿಷ್ಣು. ಬ್ರಹ್ಮನಂತೂ ಪತ್ನಿ ಶಾರದೆಯನ್ನು ನಾಲಗೆಯಲ್ಲೇ ಇಟ್ಟುಕೊಂಡವನಂತೆ. ನನ್ನನ್ನು ಸತಿ ಶಿರೋಮಣಿ ಅನ್ನುವುದಕ್ಕೆ- ನಮ್ಮವರೇನು ನನ್ನನ್ನು ತಲೆ ಮೇಲಿಟ್ಟುಕೊಂಡಿದ್ದಾರಾ?! ಏನೂ ಇಲ್ಲ. ಅವರ ತಲೆ ಮೇಲೆ ಕುಳಿತುಕೊಳ್ಳುವವಳೂ ಈ ಪ್ರಭಾವತಿಯಲ್ಲ. ಅವರ ಮೇಲೆ ನನ್ನ 'ಪ್ರಭಾವ ಅತಿ'ಯಾದದ್ದೂ ಇಲ್ಲ ! ಪತಿಯ ಭುಜದ ಹಿಂದೆ ನಾನಿದ್ದಾಗ, ಅವರ ಮುಖದ ಪ್ರಭೆ ಹೆಚ್ಚುತ್ತದೆ ಅಷ್ಟೆ ! ಅವರು ಕಾಂತ ಹೌದು; ಹಾಗಂತ ನಾನೇನು ಕಬ್ಬಿಣವಾ?! ಹ್ಮ್...ಅಬ್ಬಾ ಈ ಗಂಡಂದಿರ ಸೊಕ್ಕೇ...ನನಗೊಂದು ಮಾತೂ ಹೇಳದೆ ಯುದ್ಧಕ್ಕೆ ಹೊರಟುಹೋದರೆ? ಅದೂ 'ಮೂರು ಲೋಕದ ಗಂಡ' ಅಂತ ಹೆಸರಾದ ಪಾರ್ಥನೊಡನೆ ಹೋರಾಡಲು?
ಅಯ್ಯೋ, ಸೂರ್ಯ ಮುಳುಗಿಯೂ ಆಯಿತು. ಇನ್ನು ಚಂದ್ರ ವಂಶದವರ ಪರಾಕ್ರಮವೆ. ನನ್ನವರು ಯಾಕಿನ್ನೂ ಬಂದಿಲ್ಲ? ಅಥವಾ ನಾನು ಸೀರೆ ತೊಡುವಾಗಲೇ ತಡವಾಗಿಯಿತೋ ! ನಮ್ಮ ಮಾವ ಹಂಸಧ್ವಜ ಮಹಾರಾಜರು, ನಮ್ಮ ವಿವಾಹ ಮಹೋತ್ಸವದ ಕಾಲದಲ್ಲಿ ಕೊಟ್ಟ ಸೀರೆ ಇದು. ಸೆರಗಿನಲ್ಲಿ ಸಾವಿರ ಕಣ್ಣಿನ ನವಿಲಿನ ಚಿತ್ತಾರವಿರುವ ಸೀರೆ. ಅದಕ್ಕೆ ಅಂಟಿಸಿದ ಪುಟ್ಟ ಪುಟ್ಟ ಕನ್ನಡಿಗಳಲ್ಲಿ ನನ್ನವರ ನೂರಾರು ಮುಖ ಕಾಣಬೇಕು. ಅಬ್ಬಾ ಕುಪ್ಪಸ ತೊಡುವಾಗ ಮಾತ್ರ ಕೊಂಚ ಬಿಗಿಯಾದದ್ದು ಹೌದು ! ಆವತ್ತಿನ ಕುಪ್ಪಸ ಅಲ್ವೆ? ಹಾಗಂತ ನಾನು ಅಷ್ಟೇನೂ ದಪ್ಪ ಆಗಿಲ್ಲ. ಹಾಗೆಲ್ಲ ದಪ್ಪ ಆಗುವುದಕ್ಕೆ ನಾನೇನು ಹೆತ್ತಿದ್ದೇನಾ?! ಅರ್ಧ ಚಂದ್ರಾಕೃತಿಯ ತಿಲಕ ಇಟ್ಟುಕೊಂಡೆ. ಏನು? ಅವರಿಗೆ ಅರ್ಧಚಂದ್ರ ಪ್ರಯೋಗ ಅಂತಲಾ?! ಛೆ ಛೆ ಹಾಗಲ್ಲಪ್ಪ...ಇವತ್ತು ರಾತ್ರಿಯಾದರೂ, ಉಳಿದದ್ದು ನನ್ನವರಿಂದ ಪೂರ್ತಿಯಾಗಲಿ ಅಂತ. ಕೃಷ್ಣನನ್ನು ನೋಡುವ, ಚಂಪಕಾವತಿಯ ಜನರಿಗೆಲ್ಲ ಆ ದೇವನನ್ನು ತೋರಿಸುವ ಆಸೆಯಂತೆ ಅವರದ್ದು. ನನಗೆ ಆ ಕೃಷ್ಣನ ಮಗನನ್ನು, ಆ ಮಹಾವಿಷ್ಣುವಿನ ಮಗನನ್ನು, ಆ ಮನುಮಥನನ್ನು ಸುಧನ್ವನಾಗಿ ನೋಡುವ ಆಸೆ ! ಹಾಗಾಗಿಯೇ ಇಷ್ಟು ಅಲಂಕಾರ. ಹೊನ್ನ ಹರಿವಾಣದಲ್ಲಿ ಕರ್ಪೂರ ವೀಳ್ಯವನ್ನಿಟ್ಟು, ಸಂಪಿಗೆಯ ಹೂವುಗಳನ್ನಿಟ್ಟು ಅವರನ್ನು ಎದುರುಗೊಳ್ಳುವುದಕ್ಕೆ ಸಿದ್ಧಳಾದದ್ದು. ಕೆಂಡಸಂಪಿಗೆಯೂ ಇದೆ, ಮೊಟ್ಟೆ ಸಂಪಿಗೆಯೂ ಇದೆ !
ಸತಿಯನ್ನು ಕೂಡಿದರೆ ಸಾವು ನಿಶ್ಚಿತ ಎಂದು ತಿಳಿದಿದ್ದ ಪಾಂಡು ಮಹಾರಾಜರೂ ಪತ್ನಿ ಮಾದ್ರಿಯನ್ನು ಕೂಡಿ ಪ್ರಾಣ ಕಳೆದುಕೊಂಡರಂತೆ. ಅವರ ಪ್ರಾಣವನ್ನು ಸೆಳೆದೊಯ್ದ ಆ ಯಮನಾದರೂ ಯಾರು? ಅವರಿಗೆ ಮೊದಲನೆಯ ಮಗ ಧರ್ಮರಾಯನನ್ನು ಕರುಣಿಸಿದವನು ! ಗಾಂಧಾರಿಗೆ ನೂರೊಂದು ಜನ ಮಕ್ಕಳಂತೆ. ಆದರು ಉಳಿದವಳು ಒಬ್ಬಳೇ ಅಲ್ಲವೇ ದುಶ್ಯಲೆ. ಅಶ್ವತ್ಥಾಮಾಚಾರ್ಯರು ದರ್ಭೆಯನ್ನೇ ಬ್ರಹ್ಮಾಸ್ತ್ರವಾಗಿಸಿ ಉತ್ತರೆಯ ಗರ್ಭಕ್ಕೆ ಪ್ರಯೋಗಿಸಿದಾಗ, ಅದನ್ನು ತಡೆದವನು ಕೃಷ್ಣನೇ ಅಂತೆ. ಕಾಮ ಎಷ್ಟೊಂದು ಪ್ರಚೋದಕ, ಸಂತಾನ ಎಷ್ಟೊಂದು ಆವಶ್ಯಕ ಎನ್ನುವುದಕ್ಕೆ ಇದಕ್ಕಿಂತ ಬೇರೆ ನಿದರ್ಶನಗಳು ಬೇಕೆ? ಹದಿನಾರು ಸಾವಿರದೆಂಟು ಪತ್ನಿಯರಿಗೆ ಬೇಕಾದ್ದನ್ನೆಲ್ಲಾ ಕೊಟ್ಟ ಕೃಷ್ಣನನ್ನು ಮೆಚ್ಚಿಸಲು ಹೊರಟ ಇವರು, ಇರುವ ಒಬ್ಬಳೇ ಪತ್ನಿಯನ್ನು ಮೆಚ್ಚಿಸದೆ ಹೋಗುವುದುಂಟೆ ?! ಸೀಸದ ಕವಚ ಕಟ್ಟಿಕೊಂಡು ಹೋಗಿ ಅರ್ಜುನನ್ನು ಸೋಲಿಸುತ್ತೇನೆ ಅನ್ನುವ ಇವರು, ಆ ಅರ್ಜುನನಿಗೆ ಹರಿಯ ಕರುಣದ ಕವಚವಿದೆ ಅಂತ ಯಾಕೆ ಯೋಚಿಸುವುದಿಲ್ಲ? ಕೃಷ್ಣಾರ್ಜುನರೊಡನೆ ಹೋರಾಡಿ ಗೆಲ್ಲುತ್ತೇನೆ ಅನ್ನುವುದು, ಬಾಯಾರಿಕೆಯಾದವನು ಉಪ್ಪು ನೀರು ಕುಡಿದ ಹಾಗಾಗುವುದಿಲ್ಲವೆ? ಅರ್ಜುನನ್ನು ಯುದ್ಧದಲ್ಲಿ ಸೋಲಿಸಿ, ಕೃಷ್ಣ ಬರುವಂತೆ ಮಾಡಿ, ಆ ಮೇಲೆ ಮುಕ್ತಿಯನ್ನಾದರೂ ಪಡೆಯುತ್ತೇನೆ ಅನ್ನುವವರು, ನನ್ನ ಬಗ್ಗೆ ಯಾಕೆ ಯೋಚಿಸುವುದಿಲ್ಲ? ಪಿತೃಋಣದಿಂದ ಮುಕ್ತನಾಗುವುದು ಬೇಡವಾ? ಅಂತಃಪುರಕ್ಕೆ ಬರಲಿ, ನನ್ನ ಪ್ರಾಣಕಾಂತನೆಂಬ ಕೃಷ್ಣನಿಗೆ ನಾನೇ ಕೊಳಲಾಗಬೇಕು. ಅವರ ಧನುಸ್ಸಿಗೆ ನಾನೇ ಹೆದೆಯೇರಿಸಬೇಕು. ಅವರ ಬತ್ತಳಿಕೆಯಲ್ಲಿರುವ ಬಾಣಗಳಿಗೆ ನನ್ನ ತುರುಬಿನಲ್ಲಿರುವ ಹೂಮಾಲೆಯನ್ನೇ ಸುತ್ತಿ, ಅವುಗಳನ್ನು ಮನ್ಮಥನ ಪುಷ್ಪಶರಗಳನ್ನಾಗಿ ಮಾಡುತ್ತೇನೆ. ಹಣೆಗೊಂದು ಹೂ ಮುತ್ತನ್ನಿಟ್ಟು ಪರವಶಗೊಳಿಸುತ್ತೇನೆ. ಅವರ ಕೈಗಳನ್ನು ನನ್ನ ಸೀರೆಯ ಸೆರಗಿನಲ್ಲೇ ಕಟ್ಟುತ್ತೇನೆ ! ಆಮೇಲೆ ಏನು ಬೇಕೋ ಮಾಡಲಿ !
Read more...