August 15, 2009

'ಇಲ್ಲದ ತೀರದಲ್ಲಿ' - ಇನ್ನೊಂದು ಹೊಸ ಪುಸ್ತಕದ ಬಗ್ಗೆ


ಈ ಅಕ್ಷರಗಳಲ್ಲಿ ದುಃಖವನ್ನು ತುಂಬಿದ್ದೇನೆ
ತುಳುಕದಂತೆ ನೋಡಿಕೊಳ್ಳಿ ಕಣ್ಣೀರು.
ದುಃಖ ಹೀರಿಕೊಂಡೂ
ಒದ್ದೆಯಾಗವು ಅಕ್ಷರಗಳು .

ಯಾವತ್ತೋ ಬರೆದಿಟ್ಟಿದ್ದ ಈ ನಾಲ್ಕು ಸಾಲು ಈಗ ನೆನಪಾಯಿತು. ಅದಕ್ಕೆ ಕಾರಣ, ಅರವಿಂದ ಚೊಕ್ಕಾಡಿಯವರ 'ಇಲ್ಲದ ತೀರದಲ್ಲಿ-ಅಪ್ಪನ ಬದುಕಿನೊಂದಿಗೆ ಸಂವಾದ’ ಎಂಬ ಇತ್ತೀಚೆಗಿನ ಪುಸ್ತಕ. ನೂರಮೂವತ್ತು ಪುಟಗಳ, ರೂ.ಅರುವತ್ತು ಬೆಲೆಯ ಈ ಪುಸ್ತಕವನ್ನು ಬಳ್ಳಾರಿಯ 'ಲೋಹಿಯಾ ಪ್ರಕಾಶನ' ಪ್ರಕಟಿಸಿದೆ. ತುಂಬ ಪ್ರಖರವಾದ ಕಟು ಸತ್ಯಗಳ ಗುಚ್ಛ ಅದು. ಅದಕ್ಕೆ ಪ್ರಮೀಳಾ ಚೊಕ್ಕಾಡಿ ಬರೆದ ಮುನ್ನುಡಿಯ ಆಯ್ದ ಭಾಗ ಹಾಗೂ ಪುಸ್ತಕ ಓದಿ ಅರವಿಂದರಿಗೆ ನಾನು ಬರೆದ ಪತ್ರವನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ. ಒಂದ್ಹತ್ತು ನಿಮಿಷ ಇಲ್ಲಿ ಕಳೆದುಹೋಗಿ.

...ಮಾವ ನಮ್ಮನ್ನಗಲಿ ಮೂರು ತಿಂಗಳು ಕಳೆದ ಮೇಲೂ ಯಾವುದೋ ವಿಷಾದ ಭಾವ ನಮ್ಮನ್ನು ಕಾಡುತ್ತಿದೆ. ಅದು ಅವರ ಸಾವಿನದ್ದಾಗಿರದೆ ಅವರು ಕೊನೆಯ ದಿನಗಳಲ್ಲಿ ಬದುಕಿದ ರೀತಿಯಿಂದ ಬರುವ ವಿಷಾದವಾಗಿದೆ...ಮಾವ ತಮ್ಮ ಆಪ್ತ ವಿಚಾರಗಳನ್ನೆಲ್ಲ ನನ್ನಲ್ಲೇ ಹೇಳಿಕೊಳ್ಳುತ್ತಿದ್ದರು. ಅಪ್ಪ, ಅಮ್ಮ, ಅಣ್ಣ-ತಮ್ಮಂದಿರು, ಜೋಡುಪಾಲದ ಆಸ್ತಿ, ಕೆಲವೊಮ್ಮೆ ಪುರಾಣ, ಮಗದೊಮ್ಮೆ ರಾಜಕೀಯ, ಇನ್ನೊಮ್ಮೆ ಪ್ರಸ್ತುತ ಸಾಮಾಜಿಕ ಸ್ಥಿತಿಗತಿಗಳು, ವಣಾಶ್ರಮ ವ್ಯವಸ್ಥೆ ಹೀಗೆ ಉಮೇದು ಬಂದರೆ ಆ ದಿನವೆಲ್ಲ ತುಂಬಾ ಮಾತನಾಡುತ್ತಿದ್ದರು ಮಾವ. ನಾನು ಆಗಾಗ ಮಾವನನ್ನು ಕೆಣಕುವುದಿತ್ತು. ‘ಮಾವ, ಜೋಡುಪಾಲದ ಆಸ್ತಿಯಲ್ಲಿ ಪಾಲು ಸಿಕ್ಕಿದರೆ ನನಗೇನು ಕೊಡುತ್ತೀರಿ?’ ಎಂದು. ‘ನನಗೆ ನಾಲ್ಕು ಲಕ್ಷ ಸಿಕ್ಕಿದರೆ ನಿನಗೆ ಹತ್ತು ಸಾವಿರ ರೂಪಾಯಿ ಕೊಡುತ್ತೇನೆ’ ಅನ್ನುತ್ತಿದ್ದರು ಮಾವ. ಆಗ ನಾನು ಹೇಳುತ್ತಿದ್ದೆ- 'ಮಾವ ನೀವು ಕೊಡುವ ಹಣವನ್ನು ಸೇರಿಸಿ ನಾನೊಂದು ವಾಷಿಂಗ್ ಮೆಷಿನ್ ತೆಗೆಯುವವಳಿದ್ದೇನೆ.' ಆಗ ಮಾವ ಹೇಳುತ್ತಿದ್ದರು-‘ನೀನು ವಾಷಿಂಗ್ ಮೆಷಿನ್ ತೆಗೆಯುವುದಾದರೆ ನಾನು ಹಣವನ್ನೇ ಕೊಡಲಾರೆ. ಅದನ್ನು ಹಾಗೆಯೇ ತೆಗೆದುಕೊಂಡು ಹೋಗಿ ನಿನ್ನ ಅಕೌಂಟ್‌ಗೆ ಹಾಕುತ್ತೀಯಾದರೆ ಮಾತ್ರ ನಾನು ನಿನಗೆ ಹಣ ಕೊಡಬಹುದು.' 'ಅಂದ ಹಾಗೆ ಮಾವ, ನಿಮಗೆ ಆಸ್ತಿಯಲ್ಲಿ ಯಾವಾಗ ಪಾಲು ಸಿಗುತ್ತದೆ?’ 'ನೀನಿಲ್ಲಿಂದ ಹೋಗ್ತೀಯೋ ಇಲ್ವೋ? ನಿನಗೇನು ಕೆಲಸ ಇಲ್ವಾ?’ ಎಂದು ನಗುತ್ತಾ ತಾವೇ ಎದ್ದು ಚಾಪೆ ಸೇರುತ್ತಿದ್ದರು...

...ಬಿಸಾಡಬಹುದಾದ ಕೈಚೀಲಗಳನ್ನು ಬಿಚ್ಚಿ ಹೊಸ ರೀತಿಯಲ್ಲಿ ಹೊಲಿಯುವುದು ಅವರ ಬಹಳ ಇಷ್ಟದ ಕೆಲಸ. ದಿನಪತ್ರಿಕೆಗಳನ್ನು ಸ್ವಲ್ಪವೂ ಕರೆ ಮಡಚದ ಹಾಗೆ ಅಚ್ಚುಕಟ್ಟಾಗಿ ಜೋಡಿಸಿಡುವುದು, ಬೇಡದ ಹಾಲಿನ ಕವರ್, ಪ್ಲಾಸಿಕ್ ಕವರ್, ಖಾಲಿ ಮದ್ದಿನ ಬಾಟಲ್‌ಗಳು, ಬಾರ ಹೋದ ಚಪ್ಪಲಿಗಳು ಇವೆಲ್ಲವನ್ನೂ ಮಾವ ಪ್ರತ್ಯೇಕ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಟ್ಟು ಅನುಕೂಲವಾದಾಗ ಗುಜರಿ ಅಂಗಡಿಯಲ್ಲಿ ಮಾರಿ, ಸಿಕ್ಕಿದ ಹಣವನ್ನು ತಮ್ಮ ಅಕೌಂಟ್‌ನಲ್ಲಿಯೂ , ಮೊಮ್ಮಗಳ ಅಕೌಂಟ್‌ನಲ್ಲಿಯೂ ಜಮಾ ಮಾಡುತ್ತಿದ್ದರು. ಸಾಯುವ ಎರಡು ತಿಂಗಳ ಮೊದಲು ನನ್ನೆಲ್ಲಾ ನೋಟ್ಸ್ ಪುಸ್ತಕಗಳಿಗೆ ಮಾವ ನೀಟಾಗಿ ಬೈಂಡ್ ಹೊದೆಸಿಕೊಟ್ಟಿದ್ದರು....
...ಮೆಚ್ಚಿ ಮದುವೆಯಾದ ಅತ್ತೆ-ಮಾವ ಮೆಚ್ಚಿಕೊಂಡೇ ಬಾಳಬಹುದಾಗಿದ್ದ ಉನ್ನತ ಮಾನವೀಯ ಗುಣಗಳನ್ನು ಹೊಂದಿದ್ದೂ, ಒಂದೇ ಜೀವನ ದೋಣಿಯಲ್ಲಿ ಮುಖ ತಿರುಗಿಸಿಕೊಂಡು ಯಾನ ಮಾಡಿದರು. ಈಗ ಆ ಯಾನದಲ್ಲಿ ಮಾವನಿಲ್ಲ... -ಪ್ರಮೀಳಾ ಚೊಕ್ಕಾಡಿ

ಪ್ರಿಯ ಅರವಿಂದ ಚೊಕ್ಕಾಡಿಯವರಿಗೆ, ನಮಸ್ಕಾರ.
ಪುಸ್ತಕ ಕೈಗೆ ಬಂದಾಗ ಸಾಮಾನ್ಯವಾಗಿ ಎಲ್ಲರೂ ಮಾಡುವಂತೆ, ಮೊದಲು ಓದಿದ್ದು ಬೆನ್ನುಡಿ. ಅದನ್ನೋದಿದಾಗ ಮುನ್ನುಡಿಯನ್ನೂ ಪೂರ್ತಿ ಓದುವ ಮನಸ್ಸಾಯಿತು. ಮುನ್ನುಡಿ ಓದಿದ್ದೇ ಪುಸ್ತಕ ತೆರೆದು ಒಳಹೊಕ್ಕು ಕುಳಿತೆ. ಎರಡು ದಿನಗಳ ಎರಡೇ ಸಿಟ್ಟಿಂಗ್‌ಗಳಲ್ಲಿ ನೂರಮೂವತ್ತು ಪುಟಗಳ ಪುಸ್ತಕ ಓದಿ ಮುಗಿಸಿದಾಗ ತಲ್ಲಣಗೊಂಡಿದ್ದೆ. ನಾನು ಪುಸ್ತಕ ಓದುವುದು ನಿಧಾನ. ಅಲ್ಲದೆ ಎರಡುಮೂರು ಪುಸ್ತಕಗಳನ್ನಿಟ್ಟುಕೊಂಡು ಒಂದೊಂದನ್ನೇ ಚೂರುಚೂರು ಓದುತ್ತಿರುವುದು ಅಭ್ಯಾಸ. ಅಂತದ್ದರಲ್ಲಿ ನೀವು ಬರೆದ ಪುಸ್ತಕ, ಅದಕ್ಕೆ ಬೆನ್ನುಡಿ-ಮುನ್ನುಡಿಯಾಗಿ ನಿಮ್ಮ ಪತ್ನಿ ಪ್ರಮೀಳಾ ಚೊಕ್ಕಾಡಿ ಬರೆದ ಚೊಕ್ಕದಾದ ಬರಹ ನನ್ನ ಮನಸ್ಸಿನಲ್ಲಿ ಕೂತುಬಿಟ್ಟಿದೆ.

ನನ್ನಪ್ಪನ ಬಗೆಗಿನ ಲೇಖನಗಳ ಸಂಕಲನದಲ್ಲಿ ನಾನು ಹೀಗೆ ಬರೆದಿದ್ದೆ- 'ಈ ಪುಸ್ತಕವು ಅಪ್ಪ ಮತ್ತು ಮನೆಯ ಖಾಸಗಿ ವಿವರಗಳನ್ನು ಸಾರ್ವಜನಿಕಗೊಳಿಸುವ ಅಥವಾ ಸಾರ್ವಜನಿಕವಾಗಿ ಖಾಸಗೀಕರಣಗೊಳಿಸುವ (ಅಂದರೆ ಸಾರ್ವಜನಿಕವಾಗಿ ಇನ್ನಷ್ಟು ಆಪ್ತವಾಗಿಸುವ !) ಕೆಲಸ. ಇಲ್ಲಿ ಬಯಲಾಗುವ ಖಾಸಗಿ ವಿವರಗಳು ಅನಗತ್ಯ ಅನ್ನಿಸಬಹುದು. ಆದರೆ ಇನ್ನೊಂದು ಕಿಟಕಿಯಿಂದ ನೋಡಿದರೆ, ಸಾರ್ವಜನಿಕ ಜೀವನ ತುಂಬುವುದೇ ಇಂತಹ ಖಾಸಗಿ ವಿವರಗಳಿಂದಲೋ ಏನೋ? ಇವೆಲ್ಲವೂ ಕೊಂಚ ಝಗಮಗಿಸಿಯಾವು ಅಥವಾ ಸಪ್ಪೆಯಾಗಿ ಕಂಡಾವು. ಅದೇನಿದ್ದರೂ ಅಕ್ಷರಗಳ ಚಮತ್ಕೃತಿ ಅಷ್ಟೆ'. ಅತ್ತೆಯಂದಿರು, ಮಾವಂದಿರು, ದೊಡ್ಡಮ್ಮಂದಿರು ಎಲ್ಲರೂ ಬರೆದಿದ್ದರಿಂದ ಅದು ತೀರಾ ಖಾಸಗಿಯಾಗೇ ಇತ್ತು. ಆ ನೆನಪಿನಲ್ಲಿ ನಿಮ್ಮ ಪುಸ್ತಕ ತೆರೆದರೆ, ಇಲ್ಲೆಲ್ಲ ಹರಿದು ಹಂಚಿ ಹೋದ ಸಾಮ್ರಾಜ್ಯ. ಹಾಗಂತ ಅಪ್ಪನನ್ನು ಸಾರ್ವಜನಿಕವಾಗಿ ಮೆರೆಸುವ, ಆಪ್ತತೆಯ ನೆಪ ಹೇಳಿ ಭಾವನೆಗಳನ್ನು ಹೈಜಾಕ್ ಮಾಡುವ ಉದ್ದೇಶವೂ ಇಲ್ಲ. ಎಲ್ಲ ‘ನೇರ-ಸರಳ-ದಿಟ್ಟ-ನಿರಂತರ’. ಇದು ತಮಾಷೆ ಅಲ್ಲ. ಓದಿ ಕನಿಕರ-ಸಹಾನುಭೂತಿ ತೋರಿಸುವಂತಿಲ್ಲ. ಬೆಚ್ಚಿಬೀಳಿಸುವ ಭಯಾನಕತೆಯೊ, ಬರೀ ಶೋಕಗೀತೆಯೂ ಅಲ್ಲ. ನಮ್ಮಲ್ಲೆಲ್ಲ ಬಂಧುಗಳು ಸೇರಿದಾಗ 'ಸುಖದುಃಖ ಮಾತಾಡುವುದು' ಅಂತಿದೆಯಲ್ಲ, ಸುಮಾರಾಗಿ ಹಾಗೆಯೇ. ಹಾಗಾಗಿ ಕೆಲವೆಡೆ ಪದಗಳ ದುಂದುವೆಚ್ಚವೂ ಆಗಿದೆ. ಕವಿಯಲ್ಲದ ನೀವು, ಆ ಬಗ್ಗೆ ಚಿಂತಿಸಬೇಕಿಲ್ಲ ಬಿಡಿ. ಇಲ್ಲಿ ಅಪ್ಪ ಅಮ್ಮನ ವಿಮರ್ಶೆಯನ್ನೇ ಮಾಡಿದ್ದೀರಿ. ಹಾಗಾಗಿ ಈ ಪುಸ್ತಕದ ವಿಮರ್ಶೆ ಮಾಡುವುದು ಸುಲಭವೇನೂ ಅಲ್ಲ, ಆ ಉದ್ದೇಶವೂ ನನಗಿಲ್ಲ.

'ಸೃಜನಶೀಲ'ಅಂತ ಕರೆಯಲ್ಪಡುವ ಬರಹಗಳ ಯಾವುದೇ ತಂತ್ರಗಳನ್ನು ಬಳಸದೆ, ಏಕರೂಪವಾಗಿ, ನಿರುದ್ವಿಗ್ನವಾಗಿ, ಅಲಿಪ್ತರಾಗಿ ಬರೆದ ಶೈಲಿಯೇ ಇಷ್ಟವಾಯಿತು. ಇಲ್ಲಿ ಯಾರೂ ಹೀರೊ, ವಿಲನ್‌ಗಲ ವಿಜೃಂಭಣೆಯ ಕತೆ ಅಲ್ಲ. ಎಲ್ಲರೂ ಸಿಹಿ-ಉಪ್ಪು-ಹುಳಿ-ಖಾರದ ಮನುಷ್ಯರು. ಅನೇಕ ವ್ಯಕ್ತಿಗಳ ಯಶಸ್ಸಿನ ಕುರಿತ ಪುಸ್ತಕಗಳು ಇಂಗ್ಲಿಷ್‌ನಲ್ಲಿ ಬಹಳಷ್ಟಿವೆ. ನಿಮ್ಮದು ಯಶೋಗಾಥೆಯ ಪುಸ್ತಕ ಅಲ್ಲದಿದ್ದರೂ ಯಶಸ್ವಿ ಪುಸ್ತಕ. ತೀರಿಹೋದ ಅಪ್ಪನ ನೆನಪಿನಲ್ಲಿ ಬರೆದ ಇಂತಹ ಪುಸ್ತಕ, ಕನ್ನಡದಲ್ಲಿ ಇದೇ ಮೊದಲನೆಯದು ಅಂದುಕೊಂಡಿದ್ದೇನೆ. ನಾಲ್ಕು ಪುಟ ತಿರುವಿದಾಗಲೇ ರೇಜಿಗೆ ಹುಟ್ಟಿಸುವ ಅಭಿನಂದನ-ಸಂಸ್ಮರಣ ಗ್ರಂಥಗಳು ನೂರಾರು ಬರುತ್ತಿವೆ. ಆದರೆ ನಿಮ್ಮ ಪುಸ್ತಕ ನೆನಪಿನಲ್ಲುಳಿಯುತ್ತದೆ, ಬೆಳೆಯುತ್ತದೆ. ಯಾವ ಭಾಗ ಹೆಚ್ಚು ಇಷ್ಟವಾಯಿತು ಅಂತೇನಾದರೂ ನೀವು ಕೇಳುವುದಿದ್ದರೆ, ಬಹುಶಃ ‘ಅದೇಕೋ ಅಭಾಗ್ಯ ಈ ಭೀತಿ ಮೌನ’ ಅಧ್ಯಾಯ ನನಗೆ ಹೆಚ್ಚು ಇಷ್ಟವಾಯಿತು ಅಂದೇನು.

ಇದೊಂದು ಸಾತ್ವಿಕ ಬಂಡಾಯದ ಪುಸ್ತಕ. ಗಾಂಧಿಯ ಮಾದರಿ ಇದಕ್ಕಿದೆ. ತುಂಬಾ ವಿವರಗಳು (ಡಿಟೈಲ್ಸ್) ಇರುವುದರಿಂದ ಓದಿಸಿಕೊಂಡೂ ಹೋಗುತ್ತದೆ. ತುಂಬ ಪ್ರಖರವಾದ ಕಟು ಸತ್ಯಗಳನ್ನು ಜೋಡಿಸಿದ್ದೀರಿ. ನಿಮ್ಮ ಜೀವನ ದಾರಿಯ ಸ್ಪಷ್ಟತೆ ಬೆರಗು ಹುಟ್ಟಿಸುತ್ತದೆ. ಸುಮ್ಮನೆ ಹೊಗಳುತ್ತಿದ್ದೇನೆ ಅಂದುಕೊಳ್ಳಬೇಡಿ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬರೆಯಬಹುದಿತ್ತು, ಹೌದು. ಆದರೆ ಅನುಭವಕ್ಕೆ-ಸತ್ಯಕ್ಕೆ ನಿಷ್ಠನಾಗಿರುವುದೇ ಇಲ್ಲಿ ನಿಮಗೆ ಮುಖ್ಯ, ಪರಿಣಾಮದ ಬಗ್ಗೆ ಆಸಕ್ತಿಯಿಲ್ಲ ಅಂತ ನನಗೆ ಗೊತ್ತು. ಸಾವಿರಾರು ಪ್ರತಿ ಮಾರಾಟವೊ, ಪ್ರಶಸ್ತಿಗಳ ಆಕಾಂಕ್ಷೆಯೊ ಇದರ ಹಿಂದಿಲ್ಲ. ಒಬ್ಬ ಬರಹಗಾರ ಮಗನಾಗಿ ಇಷ್ಟು ಕರ್ತವ್ಯ ಅನ್ನುವ ದೃಷ್ಟಿ ನಿಮ್ಮಲ್ಲಿದ್ದಂತೆ ಅನಿಸುತ್ತದೆ. ಅಪ್ಪ ಹುಷಾರಿಲ್ಲದಿದ್ದಾಗ ಉಪಚರಿಸುವುದು ಹೇಗೆ ಮಗನ ಕರ್ತವ್ಯವೋ, ಅವರಿಲ್ಲದಾದಾಗ ಅವರ ಬಗ್ಗೆ ಒಂದಷ್ಟು ಬರೆಯುವುದು ಬರಹಗಾರ ಮಗನಾಗಿ, ನೀವು ಅಪ್ಪನಿಗೆ, ಈ ಅಕ್ಷರಗಳಿಗೆ ಮಾಡುವ ಋಣ ಸಂದಾಯದಂತೆ ಕಾಣುತ್ತಿದೆ, ಖುಶಿಯಾಗಿದೆ. ಪಾಕ ಸರಿಯಾಗಿದ್ದಾಗ ಆಹಾರವನ್ನು ಯಾವ ಆಕಾರದಲ್ಲಿಟ್ಟರೂ, ಯಾವ ಬಣ್ಣದಲ್ಲಿದ್ದರೂ ರುಚಿಯಾಗುವ ಹಾಗೆ, ಗಟ್ಟಿ ವಸ್ತುವಿನ ಈ ಪುಸ್ತಕ ಯಾವ ರೂಪದಲ್ಲಿದ್ದರೂ ರುಚಿಕರವೇ. ಈ ರೂಪದಲ್ಲೂ ಸ್ವಾದಿಷ್ಟವೇ.

ನೀವೇ ಬರೆದುಕೊಂಡ ಹಾಗೆ- ಅಪ್ಪ, ಅಮ್ಮನ ಸಾಮಾಜಿಕ ಋಣಗಳು ಹಾಗೆಯೇ ಇವೆ. ಈ ಕೃತಿಯಲ್ಲಿ ಉಪಕರಣಗಳಾಗಿ ಬರುವ ಮೂಲಕ ಓದುಗರಲ್ಲಿ ಒಂದು ಹೊಸ ಅರಿವನ್ನು ಹುಟ್ಟುಹಾಕಲು ಸಾಧ್ಯವಾದರೆ ಅವರು ಸಮಾಜಕ್ಕೆ ಸಲ್ಲಿಸಬೇಕಾದ ಋಣವನ್ನು ಸಲ್ಲಿಸಿದಂತಾಗುತ್ತದೆ ಎಂದು ನಾನು ಭಾವಿಸಿದ್ದೇನೆ.' ಎಂಬುದು ಅರ್ಥಪೂರ್ಣವಾಗಿದೆ. ‘ಅಪ್ಪ-ಅಮ್ಮನಿಗಿಂತ ಯಾವುದೂ ದೊಡ್ಡದಲ್ಲ. ಆದರೆ ಸತ್ಯ ಎಲ್ಲದಕ್ಕಿಂತ ದೊಡ್ಡದು' ಎಂದು ನೀವು ನಂಬುವ ಮಾತು ಈ ಕೃತಿಯುದ್ದಕ್ಕೂ ಉಳಿದುಕೊಂಡಿದೆ ಎಂದು ಅನ್ನಿಸಿದೆ.
- ಸ್ನೇಹದಿಂದ ಸುಧನ್ವಾ

4 comments:

Arun August 18, 2009 at 3:14 AM  

Just install Add-Kannada widget on your blog/ website, Then u can easily submit your pages to all top Kannada Social bookmarking and networking sites.

Kannada bookmarking and social networking sites give more visitors than if we submit our articles on reddit.com or digg ..etc because naturally of their content specific.

Click here for Install Add-Kannada widget

ತೇಜಸ್ವಿನಿ ಹೆಗಡೆ August 28, 2009 at 10:36 AM  

ನಿಮ್ಮ ಪತ್ರ ಹಾಗೂ ಪ್ರಮೀಳಾ ಅವರೆ ಮುನ್ನುಡಿಯ ತುಣುಕೊಂದನ್ನು ಓದಿದಮೇಲೆ ನನಗೂ ಈ ಪುಸ್ತಕವನ್ನು ಓದಲೇ ಬೇಕೆಂದೆನ್ನಿಸುತ್ತಿದೆ. ದಯವಿಟ್ಟು ಎಲ್ಲಿ ಸಿಗುವುದೆಂದು ತಿಳಿಸುವಿರಾ?

-ತೇಜಸ್ವಿನಿ.

Anonymous,  August 31, 2009 at 12:50 AM  

ಸುಧನ್ವಾ,

ಮಾತಿಗೆ ಮೀರಿದ ಮೌನವೂ ಅಲ್ಲದ ಭಾವವೊಂದು ನನ್ನನ್ನು ಆವರಿಸಿತು ಈ ಬರಹದ ಓದು. ಬಹಳ ಅದ್ಭುತವಾಗಿ ಬರೆದಿದ್ದೀ. ಆ ಪುಸ್ತಕ ಓದದೆ ಇರಲಾಗದು.. ನಮ್ಮಂಥವರನ್ನು ಓದಿಗೆ ಹಚ್ಚುವ ನಿನ್ನ ಕೆಲಸಕ್ಕೆ ನಮೋ ..

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP