April 03, 2009

ಕಲಾಕ್ಷೇತ್ರದಲ್ಲಿ ಪುಕ್ಕಟೆ ಹಿಂಸೆ

ಡಾಕ್ಟರೇಟ್‌ಗಳು-ಪ್ರಶಸ್ತಿಗಳು ನಾಚಿಕೆಗೇಡಿನ ವಸ್ತುಗಳಾಗಿರುವುದು ಈಗ ಮಾಮೂಲಿ ಸಂಗತಿ. ಅವುಗಳ ಜತೆಗೆ ಸಭಾ ಕಾರ್ಯಕ್ರಮಗಳೂ ಸೇರಿಕೊಳ್ಳುತ್ತಿರುವುದು ಮತ್ತೊಂದು ಬೇಸರದ ವಿಷಯ. ಕೇವಲ ಕಾಟಾಚಾರಕ್ಕಾಗಿ (ಕ್ಲೀಷೆಯಾದರೂ ಎಷ್ಟೊಳ್ಳೆಯ ಪದ-ಆಚಾರದ ಕಾಟ !) ನಡೆಯುವ ಈ ಸಭಾ ಕಾರ್ಯಕ್ರಮಗಳು ಪ್ರಚಾರದ ಮಾಧ್ಯಮ ವರದಿಗಾಗಿ, ಪ್ರಾಯೋಜಕರ ಸಂತೃಪ್ತಿಗಾಗಿ, ಅತಿಥಿಗಳ ಸಂತೋಷಕ್ಕಾಗಿ ಅತ್ಯಗತ್ಯ ಎನಿಸಿವೆ. ಆದರೆ ಅಂತಹ ಕಾರ್ಯದಲ್ಲೂ ಕನಿಷ್ಠ ಪ್ರಾಮಾಣಿಕತೆ ಕಾಣಿಸಬೇಕಲ್ಲ.

ಕಾರ್ಯಕ್ರಮವನ್ನು ಸಂಘಟಿಸಿದ ಸಂಸ್ಥೆಯ ಅಧ್ಯಕ್ಷರು, ವೇದಿಕೆಯಲ್ಲಿರುವ ಗಣ್ಯರ ಜತೆ ಕೊನೆಯ ಕುರ್ಚಿಯಲ್ಲಿ ಕೂರುವುದನ್ನಷ್ಟೇ ನಮ್ಮೂರಿನಲ್ಲಿ ನೋಡಿದ್ದವನು ನಾನು. ಕಳೆದ ಶುಕ್ರವಾರ (ಏ.೩) ಕಲಾಕ್ಷೇತ್ರದಲ್ಲಿ, ಸಂಸ್ಥೆಯ ಅಧ್ಯಕ್ಷರು ಅತಿಥಿಗಳ ಮಧ್ಯೆ ಕುಳಿತಿದ್ದರು. ಕಾರಣ ಇಷ್ಟೆ, ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ, ಎದುರಿರುವ ನೂರಾರು ಜನರ ಕಣ್ಣು ತಪ್ಪಿಸಿದವರಂತೆ ಕಾರ್ಯದರ್ಶಿಗಳೂ, ಮತ್ತೊಬ್ಬ ಪದಾಧಿಕಾರಿಯೂ ಬಂದು ಕೊನೆಯ ಆಸನಗಳಲ್ಲಿ ವಿರಾಜಮಾನರಾದರು ! ಪ್ರಾಸ್ತಾವಿಕ ಭಾಷಣ ಆರಂಭ. ಅದ್ಭುತ, ಮಹತ್ವದ, ಅತ್ಯುತ್ತಮ, ಅಪ್ರತಿಮ ಎಂಬ ಪದಗಳೆಲ್ಲ ಟೊಳ್ಳು ಎನ್ನುವುದನ್ನು ಸಾಬೀತುಪಡಿಸುವಂತೆ, ಅವನ್ನೆಲ್ಲ ಲೀಲಾಜಾಲವಾಗಿ ಎತ್ತಿ ಒಗೆಯುತ್ತಿದ್ದ ಪರಿ ನೋಡಿದರೆ ಕನ್ನಡಿಗರು ದಂಗಾಗಬೇಕು. ಆಗ ರಂಗಭೂಮಿಯ ಹಿರಿಯ ಕಲಾವಿದೆ ಪ್ರಮೀಳಾ ಗುಡೂರರಿಗೆ ಸನ್ಮಾನ. (ಅವರೀಗ 'ಮುತ್ತಿನ ತೋರಣ’ ಟಿವಿ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ) 'ಈ ಅಪ್ರತಿಮ ಕಲಾವಿದೆಗೆ ನಾವು ಕೇವಲ ಬೊಕ್ಕೆ , ಹಣ್ಣು ಕೊಟ್ಟು ಕಳುಹಿಸುತ್ತಿಲ್ಲ. ನಮ್ಮ ಉದ್ಯಮಿಗಳೂ ಸಮಾಜಸೇವಕರೂ ಆದ ರೆಡ್ಡಿಯವರು ಹತ್ತು ಸಹಸ್ರ (ಸಹಸ್ರ- ಸಾವಿರಗಳ ಮಧ್ಯೆ ಕನ್‌ಫ್ಯೂಸಾಗಿ, ತಡವರಿಸಿ!), ಹತ್ತು ಸಾವಿರ ರೂ ಹಾಗೂ ರೇಷ್ಮೆ ಸೀರೆಯನ್ನು ಕಾಣಿಕೆಯಾಗಿ ನೀಡುತ್ತಿದ್ದಾರೆ’ ಅಂತ ಘೋಷಣೆಯಾಯಿತು. ಆ ಕಲಾವಿದೆಯ ಮೊಮ್ಮಗನಂತಿರುವ ಸಮಾಜಸೇವಕರೂ ವೇದಿಕೆಯಲ್ಲೇ ಕುಳಿತಿದ್ದರಲ್ಲ, ಅವರೆದ್ದು ಬಂದು ಆಕೆಯನ್ನು ಸನ್ಮಾನಿಸಿದ್ದೂ ಆಯಿತು.

ನಂತರ ಭಾಷಣಗಳು ಶುರುವಾದವು. ಮಧ್ಯೆ ಕುಳಿತ ಕರಿಬಸವಯ್ಯನವರಂತೂ ತೆರೆಯ ಹಿಂದಿದ್ದವರಿಗೆ-ದೂರದಲ್ಲಿ ಲೈಟಿಂಗ್ ಮಾಡುತ್ತಿದ್ದವರಿಗೆ-ಸಭೆಯ ಮಧ್ಯದಲ್ಲಿದ್ದ ಯಾರೋ ಪರಿಚಿತರಿಗೆ-ವೇದಿಕೆಯಲ್ಲಿ ನಿರೂಪಣೆ ಮಾಡುತ್ತಿದ್ದವರಿಗೆ, ಹೀಗೆ ಎಲ್ಲೆಂದರಲ್ಲಿ ಕೈಸನ್ನೆ ಮಾಡುವುದೂ, ಪಿಸುಗುಟ್ಟುವುದೂ ಕ್ಷಣಕ್ಷಣಕ್ಕೂ ಹೆಚ್ಚುತ್ತಿತ್ತು. ಜತೆಗೆ ಭಾಷಣ ಮಾಡುತ್ತಿರುವವರ ಕಡೆ ನೋಡಿ ಸಮಯಪ್ರಜ್ಞೆಯಿಂದ ಅಹುದಹುದೆಂದು ತಲೆಯಾಡಿಸುತ್ತಲೂ ಇದ್ದರು! ಇನ್ನು, ಭಾಷಣಕಾರರ ಒಂದು ವಾಕ್ಯ ಬಿಟ್ಟು ಇನ್ನೊಂದು ವಾಕ್ಯಕ್ಕೆ ಎಲ್ಲಿ, ಹೇಗೆ ಸಭಿಕರು ಚಪ್ಪಾಳೆ ಹೊಡೆಯಬೇಕೆಂದು, ತಾವೇ ಮುಂದಾಗಿ ಹೊಡೆದು ತೋರಿಸುತ್ತಿದ್ದವರು ಕರಿಬಸವಯ್ಯ ಮತ್ತು ಅತಿಥಿಯಾಗಿದ್ದ ನಟ ನಾಗರಾಜಮೂರ್ತಿಗಳು. (ಅಶ್ವತ್ಥರ ಗಾಯನ ಕಾರ್ಯಕ್ರಮದಲ್ಲಿ ತಾಳ ಹೊಂದಿಸಲು ಇಬ್ಬರು ಸಭಿಕರಿಗೆ ಬೆನ್ನು ಹಾಕಿ ಕೈಯಾಡಿಸುತ್ತಾ ನಿಂತಿರುವುದನ್ನು ನೋಡಿರುತ್ತೀರಲ್ಲ ಹಾಗೆ !) ತಾನು ಬೆಂಗಳೂರನ್ನು ಮೊದಲು ನೋಡಿದ್ದೇ ಬಹಳ ಇತ್ತೀಚೆಗೆ ಎಂಬ ಗುಡೂರರ ಮುಗ್ಧ ಮಾತಿಗೂ ಇವರು ಮೊದಲಾಗಿ ಕೈ ತಟ್ಟಿ, ಎಲ್ಲರೂ ಚಪ್ಪಾಳೆ ಹೊಡೆಯಲು ಸೂಚಿಸಿದರು! ಇನ್ನು ಅತಿಥಿಗಳಿಗೆ ಹಾರ ಹಾಕಿ ಸ್ಮರಣಿಕೆ ಕೊಟ್ಟಾಗಲಂತೂ ಕರಿಬಸವಯ್ಯರು ಕಣ್ಣಗಲಿಸಿಕೊಂಡು ಫೋಸು ನೀಡುತ್ತಿದ್ದರಾದರೂ, ಅಲ್ಲಿ ಯಾವ ಫೋಟೊಗ್ರಾಫರೂ ಇಲ್ಲದ್ದು ಒಂದೆರಡು ಕ್ಷಣಗಳಲ್ಲಿ ಅರಿವಾಗಿ ಸಹಜ ಸ್ಥಿತಿಗೆ ಮರಳುತ್ತಿದ್ದರು ! ಸಭಾ ಕಾರ್ಯಕ್ರಮದ ಕೊನೆಗೆ, ಹೆಸರು ಘೋಷಿಸಲು ಇಚ್ಛಿಸದ ವ್ಯಕ್ತಿಯೊಬ್ಬರು, ಕಲಾವಿದೆ ಗುಡೂರರಿಗೆ ಹತ್ತು ಸಾವಿರ ರೂ. ಕೊಡಲಿದ್ದಾರೆಂದು ಪ್ರಕಟಿಸಲಾಯಿತು. ವೇದಿಕೆಯಲ್ಲಿದ್ದ ಸಮಾಜಸೇವಕರಿಗೆ ಇದಕ್ಕಿಂತ ದೊಡ್ಡ ಮಂಗಳಾರತಿ ಬೇರೆ ಬೇಕಾ?!

ಅಂತೂ ಏಳೂ ಮುಕ್ಕಾಲರ ಹೊತ್ತಿಗೆ, ಶಿವರಾಮ ಕಾರಂತರ 'ಮೈಮನಗಳ ಸುಳಿಯಲ್ಲಿ’ ಕಾದಂಬರಿ ನಾಟಕವಾಗಿ ರಂಗಕ್ಕೆ ಬಂತು. ೨೦ನೇ ವರ್ಷಕ್ಕೆ ಕಾಲಿಟ್ಟಿರುವ ಸಂಸ್ಥೆಯ ನಾಟಕಕ್ಕೆ, ನಿರ್ದೇಶಕರಾದ ಕೆ.ಎಸ್.ಡಿ.ಎಲ್.ಚಂದ್ರುರವರು ರೆಕಾರ್ಡೆಡ್ ಸಂಗೀತ ಬಳಸಿದ್ದರು ಅಂದರೆ ನೀವು ನಂಬಬೇಕು. ಅದೂ ದೃಶ್ಯದ ಕೊನೆಗೆ ಒಂಚೂರು. ಎರಡು ಪಾತ್ರಗಳ ಸಂಭಾಷಣೆ. ಅದು ನಿಂತಾಗಲಂತೂ ಅಸಹನೀಯ ಮೌನ. ನಾನಂತೂ ಆ ಕಾದಂಬರಿ ಓದದವನು. ಅದನ್ನು ಓದಿ ನಾಟಕ ನೋಡಹೋದವರನ್ನಂತೂ ಆ ಕಾರಂತರೇ ಕಾಪಾಡಬೇಕು. ಮಧ್ಯೆ ಎಲ್ಲೋ ಕ್ಯಾಸೆಟ್ ಜಂಗ್‌ಜಂಗ್ ಎಂದು ಸದ್ದು ಮಾಡಿ ನಿಲ್ಲುವುದು, ಕತ್ತಲಾಗಿ ಬೆಳಕು ಚೆಲ್ಲಿದ ಮೇಲೂ ನಟರಿಗೆ ಗ್ರೀನ್‌ರೂಂ ದಾರಿ ತಿಳಿಯದಿರುವುದು, ದಡಬಡ ಸದ್ದಾಗುವುದು...ಹೀಗೆ ನಿರಂತರ ಆಭಾಸ. ಈ ಎಲ್ಲದರ ಮಧ್ಯೆ ಕಲಾಕ್ಷೇತ್ರದಲ್ಲಿ ತುಂಬಿದ್ದ ಜನರನ್ನು ಕೊಂಚವಾದರೂ ಮುದಗೊಳಿಸಿದ್ದು, ಕಾರಂತರ ಕಾದಂಬರಿಯ ಸಾಲುಗಳು ಮಾತ್ರ.

ಪುಕ್ಕಟೆ ನಾಟಕಕ್ಕೆ ಹೋಗಿ, ಈ ಪರಿ ರೂಪಾಂತರದ ಅವಾಂತರಗಳನ್ನು ನೋಡಿದ್ದು ಇದೇ ಮೊದಲು. ಹಿಂದಿನ ದಿನ ನಡೆದ 'ಬಡೇಸಾಬು ಪುರಾಣ’ ನಾಟಕ ಪರವಾಗಿಲ್ಲ, ಚೆನ್ನಾಗಿತ್ತು- ಎಂಬ ಸ್ನೇಹಿತರ ಮಾತು ಕೇಳಿ ನನ್ನಂಥವರು ಹೋದರೆ ಹೀಗೂ ಆಗೋದಾ? ಅಂತೂ ಸಭಾ ಕಾರ್ಯಕ್ರಮ-ನಾಟಕದ ಎಲ್ಲ ಅಪಸವ್ಯಗಳ ನಡುವೆ, ಕರಿಬಸವಯ್ಯರ ಹೃದಯದಿಂದ ಬಂದ ಒಂದೇಒಂದು ಸತ್ಯವಾದ ಮಾತು- 'ನೀವು ಬೇಗ ಬೇಗ ಚಪ್ಪಾಳೆ ತಟ್ಟಿದ್ರೆ ಸಭಾ ಕಾರ್ಯಕ್ರಮ ಬೇಗ ಮುಗೀತದೆ!’

4 comments:

ವಿ.ರಾ.ಹೆ. April 5, 2009 at 10:18 PM  

ಹ್ಹ ಹ್ಹ ಹ್ಹ.. ನೀವೂ ಇದ್ರಾ?!

ಅಲ್ಲಿ ಚಪ್ಪಾಳೆ ಹೊಡೆಯಲೆಂದೇ ಒಂದಿಷ್ಟು ಜನ ಬಂದಿದ್ದರೇನೋ ಅನ್ನಿಸಿತು. ಬೆಂಗಳೂರನ್ನು ಮೊದಲು ನೋಡಿದ್ದೇ ಬಹಳ ಇತ್ತೀಚೆಗೆ ಎಂದಾಗಲೂ ಚಪ್ಪಾಳೆ, ನಾಗರಾಜಮೂರ್ತಿಯವರು ಆವೇಶ ಭರಿತರಾಗಿ ಏನೋ ಅಂದಾಗಲೂ ಚಪ್ಪಾಳೆ... ಒಳ್ಳೇ ಮಜಾ.

ನಾಟಾಕ ಶುರುವಾದಮೇಲೆ ಹಿಂಸೆ ತಾಳಲಾರದೇ ಇಲ್ಲೇ ಕುಳಿತಿದ್ದರೆ ಕೊನೆಗೆ ಕಾದಂಬರಿ ಬರೆದ ಶಿವರಾಮಕಾರಂತರ ಮೇಲೆಯೇ ಬೇಜಾರಾಗಿ ಬಿಡುತ್ತದೆ ಎಂದು ಹೆದರಿ ನಾನು ಅರ್ಧಕ್ಕೆ ಎದ್ದು ಮನೆಗೆ ಹೋದೆ.!

Sushrutha Dodderi April 6, 2009 at 4:39 AM  

ಹಿಹಿ.. ನಾನೂ ಬಂದಿದಿದ್ದೆ.. ಪಾಪ, ನನ್ ಕಲೀಗ್ ಒಬ್ರು ಐದಾರು ವರ್ಷದಿಂದ ನಾಟಕಾನೇ ನೋಡಿರ್ಲಿಲ್ಲಂತೆ, ಅವ್ರನ್ನ ಬೇರೆ ಕರ್ಕೊಂಡ್ ಬಂದಿದ್ದೆ.. ನಂಗೆ ಶೇಪೌಟ್ ಆಗ್ಬಿಡ್ತು. :(

Anonymous,  April 10, 2009 at 4:42 AM  

ಸುಧನ್ವಾ, ಪ್ರಶಸ್ತಿ, ಹೆಸರುಗಳಿಗಾಗಿಯೇ ಬಾಯಿ ಬಿಡುವ ಜನಗಳ ಮಧ್ಯೆ ನಾವು ಯಾರಿಗಾದರೂ ನೈಜ ಕಾಳಜಿ ತೋರಿದರೂ ಸಂಶಯ ಪಡುವ ಕಾಲ.. ಚಂದದ ಬರಹ..

ಸ್ನೇಹಪೂರ್ವಕ,
ಶಮ, ನಂದಿಬೆಟ್ಟ.

ಜೀವನ್ಮುಖಿ April 11, 2009 at 12:02 AM  

ಪುಕ್ಕಟೆ ಹಿಂಸೆ ಸಿಕ್ಕಿದ್ದಲ್ಲದೆ ಬ್ಲಾಗ್ ಗೆ ಬರೆಯೊಕೆ ಒಂದು ವಸ್ತು ಬೇರೆ ಸಿಕ್ಕಿತ್ತಲ್ಲ...ಡಬಲ್ ಲಾಭ :)

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP