February 20, 2009

ದೇವರೂ ದೇವದೂತರೂ

ಲಾಹೋರ್‌ನಲ್ಲಿ ಒಂದು ಮುಸ್ಲಿಂ ಸಂಸಾರವಿದೆ. ಅದರ ಇಬ್ಬರು ಹುಡುಗರೂ ಒಳ್ಳೆಯ ಹಾಡುಗಾರರು. ಅವರಲ್ಲಿ ಎರಡನೆಯವನು ಇಸ್ಲಾಂ ಧರ್ಮಾಂಧರ ತೆಕ್ಕೆಗೆ ಬೀಳುತ್ತಿದ್ದಾನೆ. ಮುಸ್ಲಿಂ ಪತ್ನಿಯಿಂದ ವಿಚ್ಛೇದಿತನಾಗಿ, ಬ್ರಿಟಿಷ್ ಹೆಣ್ಣಿನೊಂದಿಗಿರುವ ಪಾಕಿಸ್ತಾನಿಯ ಸಂಸಾರವೊಂದು ಲಂಡನ್‌ನಲ್ಲಿದೆ. ಆ ವ್ಯಕ್ತಿಯ ಮಗಳು ಬ್ರಿಟಿಷ್ ಹುಡುಗನೊಬ್ಬನೊಂದಿಗೆ ಪ್ರೇಮದಲ್ಲಿ ಸಿಲುಕಿದ್ದಾಳೆ. ಅಪ್ಪ ಹೇಳುತ್ತಾನೆ -‘ಮಗಳೇ, ಇಸ್ಲಾಂನಲ್ಲಿ ಹುಡುಗ ಅನ್ಯ ಮತೀಯ ಹುಡುಗಿಯನ್ನು ಮದುವೆಯಾಗಬಹುದು. ಆದರೆ ಮುಸ್ಲಿಂ ಹುಡುಗಿ ಅನ್ಯಮತೀಯನನ್ನು ವರಿಸುವಂತಿಲ್ಲ. ಆದರೂ ನಿನ್ನ ಹಠದಿಂದಾಗಿ ಮದುವೆಗೆ ನಾನು ಒಪ್ಪಿದ್ದೇನೆ. ನಾವಿಬ್ಬರು ಒಮ್ಮೆ ಪಾಕಿಸ್ತಾನಕ್ಕೆ ಹೋಗಿ ಬರೋಣ,ಆಮೇಲೆ ಮದುವೆ ಆಗುವೆಯಂತೆ ’. ಆದರೆ ಆಮೇಲೆ ? ಧರ್ಮಾಂಧತೆಯು ಎಲ್ಲೆಲ್ಲೋ ಯಾರಲ್ಲೋ ಹೇಗೇಗೋ ಜಾಗೃತವಾಗುತ್ತಿದೆ.

ಇತ್ತ ಲಾಹೋರ್‌ನಲ್ಲಿದ್ದ ಹಿರಿಯ ಮಗ ಸಂಗೀತ ಕಲಿಕೆಗಾಗಿ ಅಮೆರಿಕಕ್ಕೆ ಹೋಗಿದ್ದಾನೆ. ಆಗ ಅಮೆರಿಕದ ಮೇಲೆ ‘೯/೧೧’ರ ದಿನ ಭಯೋತ್ಪಾದಕರ ಧಾಳಿಯಾಗಿದೆ. ಈ ತರುಣನ ಕುತ್ತಿಗೆಯ ತಾಯಿತದೊಳಗಿರುವ ಸಣ್ಣ ಪ್ಲಾಸ್ಟಿಕ್ ಹಾಳೆಯಲ್ಲಿ ಯಾವುದೋ ಸಂಕೇತಾಕ್ಷರಗಳಂತೆ ಕಾಣುವ ಅಂಕೆ ಅಕ್ಷರಗಳ ಮಂಡಲವಿದೆಯಲ್ಲ....ಅದರಲ್ಲಿನ ೯ ಮತ್ತು ೧೧ ನಂಬರ್‌ಗಳಿಗೆ ಅಮೆರಿಕದ ಪೊಲೀಸರು ಕೆಂಪು ಶಾಯಿಯಲ್ಲಿ ರೌಂಡ್ ಮಾರ್ಕ್ ಮಾಡುತ್ತಿದ್ದಾರೆ ! ನೀವು ನೋಡಿದ್ದೀರೋ ಇಲ್ಲವೋ ತಿಳಿಯದು. ‘ಖುದಾ ಕೇಲಿಯೆ’ ಎಂಬ ಪಾಕಿಸ್ತಾನಿ ಉರ್ದು ಭಾಷೆಯ ಆ ಸಿನಿಮಾ ದೇವರಿಗಾಗಿ ಮಾಡಿದ್ದಂತೂ ಅಲ್ಲ. ೨೦೦೭ರಲ್ಲಿ ಪಾಕಿಸ್ತಾನದಲ್ಲಿ ಬಿಡುಗಡೆಯಾಗಿ, ೨೦೦೮ ಏಪ್ರಿಲ್‌ನಲ್ಲಿ ಭಾರತದಲ್ಲೂ ಆ ಸಿನಿಮಾ ಬಂತು. ಸುಮಾರು ಎರಡೂಮುಕ್ಕಾಲು ಗಂಟೆ, ಲಾಹೋರ್-ಲಂಡನ್-ಚಿಕಾಗೊ ಹಾಗೂ ಪಾಕ್ ಅಫ್ಘನ್ ಗಡಿಯಲ್ಲಿ ನಡೆಯುವ ಚಿತ್ರ ಅದು. ಸಿನಿಮಾದ ಸುಮಾರು ೯ ಪುಟ್ಟ ಪುಟ್ಟ ಹಾಡುಗಳನ್ನು ಹಾಡಿದವರು ಹಲವರು. ಆದರೆ ಪ್ರತಿಯೊಂದು ಹಾಡು ಕೂಡಾ ಝರಿಝರಿಯಾಗಿ ಬಂದಿದೆ. ಸಿನಿಮಾದ ಸಂಗೀತ ನಿರ್ದೇಶಕ ರೊಹೈಲ್ ಹೇತ್ ಸೃಷ್ಟಿಸಿದ ಸುಕೋಮಲ ಧ್ವನಿ ಝೇಂಕಾರ ನಿಮ್ಮ ಎದೆಬಡಿತದೊಂದಿಗೆ ಸೇರಿಕೊಂಡೀತು ಹುಷಾರು !
ನಿರ್ಮಾಪಕ- ಟಿವಿ ಕಾರ್‍ಯಕ್ರಮ ನಿರ್ದೇಶಕ -ಬರಹಗಾರ-ಸಂಗೀತ ನಿರ್ದೇಶಕ...ಹೀಗೆ ಎಲ್ಲ ಪದವಿಗಳನ್ನು ಹೊತ್ತಿರುವ ಶೋಯಿಬ್ ಮನ್ಸೂರ್‌ಗೆ ಸಿನಿಮಾ ನಿರ್ದೇಶಕನಾಗಿ ಇದು ಮೊದಲ ಚಿತ್ರ. ಟಿವಿಯಲ್ಲಿ ಗೆದ್ದವರು ಥಿಯೇಟರ್‌ನಲ್ಲಿಯೂ ಗೆಲ್ಲುವುದು ಸುಲಭ ಅಲ್ಲ ಅಂತ ನಮಗೆ ಗೊತ್ತಿದೆಯಲ್ಲ. ಆದರೆ ಈ ಚಿತ್ರ ವಿಮರ್ಶಕರ ಗಮನವನ್ನೂ ಸೆಳೆಯಿತು, ಪಾಕ್‌ನ ಬಾಕ್ಸಾಫೀಸಿನಲ್ಲೂ ಹಿಟ್ ಆಯಿತಂತೆ. ಅತಿಥಿ ಕಲಾವಿದರಾಗಿರುವ ನಾಸಿರುದ್ದೀನ್ ಶಾ ಹೊರತುಪಡಿಸಿದರೆ, ಇದರ ನಟರೆಲ್ಲ ನಮಗೆ ಅಪರಿಚಿತರೇ. ಈ ಸಿನಿಮಾದ ಜೀವ ಶಕ್ತಿ ಇರುವುದು ಚಿತ್ರಕತೆ ಮತ್ತು ಸಂಗೀತದಲ್ಲಿ. ಬರಿಯ ಒಣ ಚರ್ಚೆಯೂ ಆಗಬಲ್ಲ ಕತೆಯನ್ನು ಮಾತಿನಲ್ಲೂ ದೃಶ್ಯದಲ್ಲೂ ಕರಗಿಸಿ, ಒಂದು ಹದ ಪಾಕದಲ್ಲಿ ಕೊಟ್ಟಿದ್ದಾರೆ ಶೋಯಬ್. ಉತ್ತರಾರ್ಧದಲ್ಲಿ , ಅಮೆರಿಕ-ಪಾಕಿಸ್ತಾನದಲ್ಲಿ ನಡೆಯುವ ಘಟನೆಗಳನ್ನು ಬಹಳ ಮಜಬೂತಾಗಿ ಒಂದರನಂತರ ಒಂದು ತುಂಡುತುಂಡು ದೃಶ್ಯಗಳನ್ನಿಟ್ಟು ತೋರಿಸುತ್ತಾರೆ. ಅಲ್ಲಿನ ಹೊಡೆತದ ನೋವು ಇಲ್ಲಿ ಕಾಣಿಸುತ್ತದೆ. ಇಲ್ಲಿನ ಹೂವು ಅಫ್ಗನ್ ಗಡಿಯಲ್ಲಿ ಅರಳುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಪುಸ್ತಕ ಓದಿಸಿಕೊಂಡು ಹೋಗುವಂತೆ, ನೋಡಿಸಿಕೊಂಡು ಹೋಗುವ ಗುಣವೂ ಇದಕ್ಕಿದೆ.

ಪಾಕಿಸ್ತಾನದ ಕೋರ್ಟ್‌ನಲ್ಲಿ ನಾಸಿರುದ್ದೀನ್ ಶಾ ‘ನಿಜ ಧರ್ಮ’ದ ಬಗ್ಗೆ ಹೇಳುತ್ತಾ ಪ್ರಶ್ನಿಸುತ್ತಾರೆ- ‘ಜಗತ್ತಿನಲ್ಲಿ ಇಷ್ಟೆಲ್ಲಾ ವೈವಿಧ್ಯ ಸೃಷ್ಟಿಸಿದ ದೇವರು, ಮುಸ್ಲಿಂ ಮಹಿಳೆಯರಿಗೆ ಮಾತ್ರ ಯೂನಿಫಾರ್ಮ್ ಕಡ್ಡಾಯ ಮಾಡಿಯಾನೇ?’ ಇದು ನಾವೆಲ್ಲ ಮೈಮರೆತು ನೋಡಬೇಕಾದ ಸಿನಿಮಾ.

Read more...

February 13, 2009

ಮನೆ ಬದಲಾಗಿದೆ ಮನಸ್ಸಲ್ಲ !


ಚಂಪಕಾವತಿಗೆ ಭೇಟಿ ಕೊಡುವವರೇ, ಪ್ರತಿಕ್ರಿಯಿಸುವವರೇ ಮತ್ತು ಓದುಗರೇ !
ನಿಮ್ಮ ಕಣ್ಣಿಗೆ, ಮನಸ್ಸಿಗೆ ಮತ್ತಷ್ಟು ಹಿತವಾಗಿ, ಏಕತಾನತೆ ಮುರಿಯಲೋಸುಗ ಈ ಬ್ಲಾಗ್ ಮನೆಯ ವಿನ್ಯಾಸ ಬದಲಿಸಲಾಗಿದೆ. ಎಂದಿನಂತೆ ಬನ್ನಿ, ಸುತ್ತಾಡಿ. ಹ್ಯಾಪಿ ವ್ಯಾಲಂಟೈನ್ಸ್ ಡೇ.

Read more...

February 03, 2009

ಗುಣಯುತನಿಗೆ ಮಂಗಲ ಪದ್ಯ

ಯಾವುದೇ ಕ್ಷೇತ್ರವನ್ನು ಜೀವನ್ಮರಣದ ಪ್ರಶ್ನೆಯಾಗಿ ಆರಿಸಿಕೊಂಡಿರುವವರಿಗೆ ಇದೊಂದು ತರಹದ ಇಚ್ಛಾಮರಣ. ಆದರೆ ಇಷ್ಟದೇವತೆಗಳು ಹೀಗೆ ಅಚಾನಕ್ಕಾಗಿ ಎದ್ದು ನಡೆದರೆ ಅದನ್ನು ಸಹಿಸಿಕೊಳ್ಳುವುದು ಪ್ರಿಯರಾದವರಿಗೆ ತೀರ ಕಷ್ಟ. ಹಿರಿಯ ಗಾಯಕಿ ಆಶಾ ಭೋಂಸ್ಲೆ ಮೊನ್ನೆಮೊನ್ನೆ ಹೇಳಿದ್ದರು- 'ಹಾಡು ಹಾಡುತ್ತಲೇ ಜೀವ ತೊರೆಯುವುದು ನನ್ನ ಆಸೆ'. ಫೆ.೩ರ ಮುಂಜಾನೆ ಹೀಗೆ ರಂಗದಿಂದಲೇ ನಿರ್ಗಮಿಸಿರುವ ಶಂಭು ಹೆಗಡೆ, ಯಕ್ಷಗಾನದ ದಿಗ್ದರ್ಶಕರಲ್ಲಿ ಒಬ್ಬರು. ಯಕ್ಷಗಾನ ತಾಳಮದ್ದಲೆಗೆ ಎಲ್ಲೆಡೆ ವಿಶೇಷ ಸ್ಥಾನಮಾನ ಕಲ್ಪಿಸಿಕೊಟ್ಟವರು ಶೇಣಿ ಗೋಪಾಲಕೃಷ್ಣ ಭಟ್ಟರಾದರೆ, ಯಕ್ಷಗಾನ ಬಯಲಾಟಗಳಿಗೆ ಶಾಸ್ತ್ರೀಯ ಸ್ಥಾನಮಾನ ತಂದುಕೊಟ್ಟವರು ಶಂಭು ಹೆಗಡೆ.
(೧೯೭೦ರ ದಶಕದಲ್ಲಿ ಬಭ್ರುವಾಹನನಾಗಿ ಶಂಭು ಹೆಗಡೆ )
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗುಣವಂತೆ ಗ್ರಾಮದ ಕೆರೆಮನೆ, ಯಕ್ಷಗಾನದ ಒಂದು 'ಘರಾನಾ'. ತಂದೆ ಶಿವರಾಮ ಹೆಗಡೆ, ಅಣ್ಣ ಮಹಾಬಲ ಹೆಗಡೆ ಶ್ರೇಷ್ಠ ಕಲಾವಿದರಾಗಿದ್ದರೂ, ಶಂಭು ಹೆಗಡೆಯವರೂ ಸೇರಿದಂತೆ ಮೂವರೂ ತಮ್ಮ ತಮ್ಮ ಅನನ್ಯತೆಯನ್ನು ಸಾಧಿಸಿಕೊಂಡವರೇ. ಹಿರಿಯ ನೃತ್ಯ ಕಲಾವಿದೆ ಮಾಯಾ ರಾವ್ ಶಿಷ್ಯರಾಗಿ, ಭರತನಾಟ್ಯ-ಕಥಕ್ ನೃತ್ಯ ಶೈಲಿಗಳನ್ನೂ ಅರಿತುಕೊಂಡು, ಯಕ್ಷಗಾನದ ರುಚಿ ಕೆಡದಂತೆ ಅದನ್ನು ಬಳಸಿಕೊಂಡವರು. ತಮ್ಮ ಮೇಳವನ್ನು ಅಮೆರಿಕ, ಸಿಂಗಾಪುರ, ಮಲೇಷಿಯಾ, ಮಯನ್ಮಾರ್, ಪಿಲಿಪೈನ್ಸ್ ಇತ್ಯಾದಿ ದೇಶಗಳಿಗೆ ಒಯ್ದವರು. 'ಕೆರೆಮನೆ ಶಿವರಾಮ ಹೆಗಡೆ ರಂಗಮಂದಿರ' ಕಟ್ಟಿದವರು. ೧೯೮೬ರಲ್ಲಿ ಯಕ್ಷಗಾನ ತರಬೇತಿ ಕೇಂದ್ರವನ್ನೂ ಆರಂಭಿಸಿದರು. ಶಿವರಾಮ ಹೆಗಡೆ-ಶಂಭು ಹೆಗಡೆ, ಈಗ ಮಗ ಶಿವಾನಂದ ಹೆಗಡೆ ಹೀಗೆ ಮೂರು ತಲೆಮಾರುಗಳನ್ನು ದಾಟಿ ಹರಿಯುತ್ತಿರುವ ಕಲಾ ಪ್ರವಾಹ ಇದು.

ಅಣ್ಣ ಮಹಾಬಲ ಹೆಗಡೆಯವರ ಮೂಲಕ ರಂಗಕ್ಕೆ ಬಂದವರು ಶಂಭು ಹೆಗಡೆ. ೧೯೩೪ರಲ್ಲಿ ತಂದೆ ಶಿವರಾಮ ಹೆಗಡೆಯವರು ಆರಂಭಿಸಿದ 'ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯನ್ನು ೧೯೭೩ರಲ್ಲಿ ಶಂಭು ಹೆಗಡೆ ಪುನರ್ ರಚಿಸಿದರು. ಸುಮಾರು ೧೯೮೫ರಿಂದ ಸೀಮಿತ ಕಾಲಾವಧಿಯ (ಮೂರ್‍ನಾಲ್ಕು ಗಂಟೆ) ಯಕ್ಷಗಾನ ಪ್ರದರ್ಶನಗಳನ್ನು ಮೊತ್ತಮೊದಲು ಪ್ರಯೋಗ ಮಾಡಿದವರೂ ಇವರೇ. ಯಕ್ಷಗಾನಕ್ಕೆ ಅರ್ಧ ಚಂದ್ರಾಕೃತಿಯ ವೇದಿಕೆಯೂ ಇವರ ಕೊಡುಗೆಯೇ. ದಕ್ಷಿಣಕನ್ನಡಕ್ಕೂ ಬಡಗುತಿಟ್ಟಿನ ಆಟದ ಹುಚ್ಚು ಹಿಡಿದದ್ದು ಇವರ ಕಾಲದಲ್ಲೇ. ೧೯೭೦ರ ದಶಕದಲ್ಲಿ ದಕ್ಷಿಣ ಕನ್ನಡದ ಯಾವುದೇ ಸ್ಥಳಕ್ಕೆ ಇಡಗುಂಜಿ ಮೇಳ ಬರಲಿ, ಜನ ಹುಚ್ಚುಗಟ್ಟಿ ಹೋಗುತ್ತಿದ್ದರು. ಶಂಭು ಹೆಗಡೆಯವರು ಮೊದಲು ಬಣ್ಣ ಹಚ್ಚಿದ್ದು ಶಾಲೆಯ ವಾರ್ಷಿಕೋತ್ಸವದಲ್ಲಿ 'ಸ್ಮಶಾನ ಕುರುಕ್ಷೇತ್ರ'ವೆಂಬ ನಾಟಕದಲ್ಲಂತೆ. ಗುರುಗಳಾದ ಕರ್ಕಿ ವರದ ಹಾಸ್ಯಗಾರರು ಅದನ್ನು ನಿರ್ದೇಶಿಸಿದ್ದರು. ಅದರಲ್ಲಿ ಅವರ ದುರ್ಯೋಧನನ ಪಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತಂತೆ. ಆದರೆ ನಾಯಕ-ಖಳನಾಯಕ ಎರಡು ಪಾತ್ರಗಳಲ್ಲೂ ಅವರು ಜನಾನುರಾಗಿಯಾದರು.

'ಶಂಭು ಹೆಗಡೆ ಪ್ರತ್ಯೇಕ ಪ್ರಭೆ ಇರುವ ವ್ಯಕ್ತಿ. ಅವರು ಬೇರೆ ಯಾರಂತೆಯೂ ಅಲ್ಲ. ಯೋಗ-ಯೋಗ್ಯತೆ ಎರಡೂ ಇತ್ತು. ಪರಂಪರೆಯನ್ನು ಮೈಗೂಡಿಸಿಕೊಂಡು, ಈ ಕಾಲವನ್ನು ಅರ್ಥವಿಸಿಕೊಂಡು ಮಾದರಿಯಾಗಬಲ್ಲ ಸಾಮರ್ಥ್ಯವಿತ್ತು. ಸಂಘಟಕ-ಚಿಂತಕ-ಕೊರಿಯೋಗ್ರಾಫರ್-ವೇಷಧಾರಿ ಹೀಗೆ ಎಲ್ಲವೂ ಆಗಿದ್ದುದರಿಂದ ಅವರು ಕೇವಲ ಯಕ್ಷಗಾನ ಕಲಾವಿದರಲ್ಲ. ಭಾರತದ ಶ್ರೇಷ್ಠ ಕಲಾವಿದರಲ್ಲಿ ಒಬ್ಬರು. ರಂಗಭೂಮಿಯ ನಾನಾ ನರ್ತನ ಪ್ರಕಾರಗಳನ್ನು ತಾತ್ವಿಕವಾಗಿ ಅರ್ಥಮಾಡಿಕೊಂಡು, ಭಾರತದ ರಂಗಭೂಮಿಯ ಮೂಲಕ ಯಕ್ಷಗಾನವನ್ನು ನೋಡಬಲ್ಲವರಾಗಿದ್ದರು. ಚಿಂತನೆ ಮತ್ತು ರಂಗಸಾಧನೆ ಎರಡಲ್ಲೂ ಎತ್ತರಕ್ಕೆ ಏರಿದವರು. ಅವರು ಯಕ್ಷಗಾನದ ಎಚ್ಚರ ಮತ್ತು ಸೃಜನಶೀಲತೆಯ ಸಂಕೇತ. ಊರಿನ ಪಂಚಾತಿಕೆದಾರನಾಗಿ, ಮೇಷ್ಟ್ರಾಗಿ, ಸಾಮಾನ್ಯರ ಜತೆ ಬೆರೆಯಬಲ್ಲವರಾಗಿದ್ದರು. ಬಹಳ ಚೆನ್ನಾಗಿ ಡ್ರಾಯಿಂಗ್ ಮಾಡುತ್ತಿದ್ದರು. ಯಕ್ಷಗಾನ ಡೋಲಾಯಮಾನ ಸ್ಥಿತಿಯಲ್ಲಿರುವ ಈ ಸಂದರ್ಭದಲ್ಲಿ, ಸಾಧನೆಯ ಉತ್ತುಂಗಕ್ಕೇರಿ ಗೈಡೆನ್ಸ್ ಕೊಡುವ ಸ್ಥಾನದಲ್ಲಿದ್ದ ಅವರನ್ನು ಕಳೆದುಕೊಂಡದ್ದು ಬಹಳ ಬೇಸರದ ಸಂಗತಿ.' ಎನ್ನುತ್ತಾರೆ ಮೂವತ್ತು ವರ್ಷಗಳ ಒಡನಾಟವಿರುವ ಹಿರಿಯ ಅರ್ಥಧಾರಿ- ಲೇಖಕ ಡಾ.ಎಂ. ಪ್ರಭಾಕರ ಜೋಶಿ.
***
ಎಳವೆಯಲ್ಲೇ ತೀರಿಹೋದ ಇನ್ನೊಬ್ಬ ಸಹೋದರ ಗಜಾನನ ಹೆಗಡೆಯವರ ಸೈರಂಧ್ರಿ, ಶಂಭು ಹೆಗಡೆಯವರ ಕೀಚಕ - ಎಷ್ಟೇ ವರ್ಷಗಳುರುಳಿದರೂ ಮರೆತುಹೋಗದ್ದು. ಬಲರಾಮ, ಜರಾಸಂಧ, ದುರ್ಯೋಧನ, ಕೃಷ್ಣ , ಹರಿಶ್ಚಂದ್ರ, ಚಂದ್ರಹಾಸ, ಕಾರ್ತವೀರ್ಯ ಹೀಗೆ ಬಹಳಷ್ಟು ಪಾತ್ರಗಳಲ್ಲಿ ಶಂಭು ಹೆಗಡೆ ಇತಿಹಾಸ ನಿರ್ಮಿಸಿದವರು. ೭೦-೭೫ರ ವಯಸ್ಸೆಂದು ಅಭಿನಂದನ ಲೇಖನಗಳು ಬರಬೇಕಾದ ಸಮಯದಲ್ಲಿ ಸಂಸ್ಮರಣ ಲೇಖನಗಳನ್ನು ಬರೆಯಬೇಕಾದ ಪಾಡು ಈಗ ಪ್ರಿಯರದ್ದು. 'ಶೋಕರಸ'ವನ್ನೂ ನೃತ್ಯದ ಮೂಲಕ ಅಭಿವ್ಯಕ್ತಿಸಲು ಸಾಧ್ಯವೆಂದು ತೋರಿಸಿಕೊಟ್ಟವರು ಶಂಭು ಹೆಗಡೆ. ಆ ಶೋಕವೀಗ ಈ ಅಕ್ಷರಗಳಲ್ಲಿ ಮಡುಗಟ್ಟಿದೆ.
***
(ಕಳೆದ ಡಿಸೆಂಬರ್ ೨೬ರ ಸಂಜೆ. ಬೆಂಗಳೂರಿನ 'ಸುಮುಖ ಪ್ರಕಾಶನ'ದ ಪುಟ್ಟ ಗೂಡಿನಲ್ಲಿ `ಶ್ರೀರಾಮ ನಿರ್ಯಾಣ' ತಾಳಮದ್ದಳೆ. ಹಿರಿಯರಾದ ನೆಬ್ಬೂರು ನಾರಾಯಣರ ಭಾಗವತಿಕೆ. ಶಂಭು ಹೆಗಡೆಯವರ ಶ್ರೀರಾಮ. `ನಿನ್ನ ಅವತಾರದ ಕಾಲ ಮುಗಿಯಿತು, ಮತ್ತೆ ವೈಕುಂಠ ಸೇರಿಕೊ' ಅಂತ ರಾಮನನ್ನು ಎಚ್ಚರಿಸುವ `ಕಾಲಪುರುಷ'ನ ಪಾತ್ರ ಸಿಕ್ಕಿದ್ದು ನನಗೆ. ಆ ಬಗ್ಗೆ ಇನ್ನೊಮ್ಮೆ ಬರೆಯುವೆ.)

Read more...

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP