ದೇವರೂ ದೇವದೂತರೂ
ಲಾಹೋರ್‌ನಲ್ಲಿ ಒಂದು ಮುಸ್ಲಿಂ ಸಂಸಾರವಿದೆ. ಅದರ ಇಬ್ಬರು ಹುಡುಗರೂ ಒಳ್ಳೆಯ ಹಾಡುಗಾರರು. ಅವರಲ್ಲಿ ಎರಡನೆಯವನು ಇಸ್ಲಾಂ ಧರ್ಮಾಂಧರ ತೆಕ್ಕೆಗೆ ಬೀಳುತ್ತಿದ್ದಾನೆ. ಮುಸ್ಲಿಂ ಪತ್ನಿಯಿಂದ ವಿಚ್ಛೇದಿತನಾಗಿ, ಬ್ರಿಟಿಷ್ ಹೆಣ್ಣಿನೊಂದಿಗಿರುವ ಪಾಕಿಸ್ತಾನಿಯ ಸಂಸಾರವೊಂದು ಲಂಡನ್‌ನಲ್ಲಿದೆ. ಆ ವ್ಯಕ್ತಿಯ ಮಗಳು ಬ್ರಿಟಿಷ್ ಹುಡುಗನೊಬ್ಬನೊಂದಿಗೆ ಪ್ರೇಮದಲ್ಲಿ ಸಿಲುಕಿದ್ದಾಳೆ. ಅಪ್ಪ ಹೇಳುತ್ತಾನೆ -‘ಮಗಳೇ, ಇಸ್ಲಾಂನಲ್ಲಿ ಹುಡುಗ ಅನ್ಯ ಮತೀಯ ಹುಡುಗಿಯನ್ನು ಮದುವೆಯಾಗಬಹುದು. ಆದರೆ ಮುಸ್ಲಿಂ ಹುಡುಗಿ ಅನ್ಯಮತೀಯನನ್ನು ವರಿಸುವಂತಿಲ್ಲ. ಆದರೂ ನಿನ್ನ ಹಠದಿಂದಾಗಿ ಮದುವೆಗೆ ನಾನು ಒಪ್ಪಿದ್ದೇನೆ. ನಾವಿಬ್ಬರು ಒಮ್ಮೆ ಪಾಕಿಸ್ತಾನಕ್ಕೆ ಹೋಗಿ ಬರೋಣ,ಆಮೇಲೆ ಮದುವೆ ಆಗುವೆಯಂತೆ ’. ಆದರೆ ಆಮೇಲೆ ? ಧರ್ಮಾಂಧತೆಯು ಎಲ್ಲೆಲ್ಲೋ ಯಾರಲ್ಲೋ ಹೇಗೇಗೋ ಜಾಗೃತವಾಗುತ್ತಿದೆ.
ಇತ್ತ ಲಾಹೋರ್‌ನಲ್ಲಿದ್ದ ಹಿರಿಯ ಮಗ ಸಂಗೀತ ಕಲಿಕೆಗಾಗಿ ಅಮೆರಿಕಕ್ಕೆ ಹೋಗಿದ್ದಾನೆ. ಆಗ ಅಮೆರಿಕದ ಮೇಲೆ ‘೯/೧೧’ರ ದಿನ ಭಯೋತ್ಪಾದಕರ ಧಾಳಿಯಾಗಿದೆ. ಈ ತರುಣನ ಕುತ್ತಿಗೆಯ ತಾಯಿತದೊಳಗಿರುವ ಸಣ್ಣ ಪ್ಲಾಸ್ಟಿಕ್ ಹಾಳೆಯಲ್ಲಿ ಯಾವುದೋ ಸಂಕೇತಾಕ್ಷರಗಳಂತೆ ಕಾಣುವ ಅಂಕೆ ಅಕ್ಷರಗಳ ಮಂಡಲವಿದೆಯಲ್ಲ....ಅದರಲ್ಲಿನ ೯ ಮತ್ತು ೧೧ ನಂಬರ್‌ಗಳಿಗೆ ಅಮೆರಿಕದ ಪೊಲೀಸರು ಕೆಂಪು ಶಾಯಿಯಲ್ಲಿ ರೌಂಡ್ ಮಾರ್ಕ್ ಮಾಡುತ್ತಿದ್ದಾರೆ ! ನೀವು ನೋಡಿದ್ದೀರೋ ಇಲ್ಲವೋ ತಿಳಿಯದು. ‘ಖುದಾ ಕೇಲಿಯೆ’ ಎಂಬ ಪಾಕಿಸ್ತಾನಿ ಉರ್ದು ಭಾಷೆಯ ಆ ಸಿನಿಮಾ ದೇವರಿಗಾಗಿ ಮಾಡಿದ್ದಂತೂ ಅಲ್ಲ. ೨೦೦೭ರಲ್ಲಿ ಪಾಕಿಸ್ತಾನದಲ್ಲಿ ಬಿಡುಗಡೆಯಾಗಿ, ೨೦೦೮ ಏಪ್ರಿಲ್‌ನಲ್ಲಿ ಭಾರತದಲ್ಲೂ ಆ ಸಿನಿಮಾ ಬಂತು. ಸುಮಾರು ಎರಡೂಮುಕ್ಕಾಲು ಗಂಟೆ, ಲಾಹೋರ್-ಲಂಡನ್-ಚಿಕಾಗೊ ಹಾಗೂ ಪಾಕ್ ಅಫ್ಘನ್ ಗಡಿಯಲ್ಲಿ ನಡೆಯುವ ಚಿತ್ರ ಅದು. ಸಿನಿಮಾದ ಸುಮಾರು ೯ ಪುಟ್ಟ ಪುಟ್ಟ ಹಾಡುಗಳನ್ನು ಹಾಡಿದವರು ಹಲವರು. ಆದರೆ ಪ್ರತಿಯೊಂದು ಹಾಡು ಕೂಡಾ ಝರಿಝರಿಯಾಗಿ ಬಂದಿದೆ. ಸಿನಿಮಾದ ಸಂಗೀತ ನಿರ್ದೇಶಕ ರೊಹೈಲ್ ಹೇತ್ ಸೃಷ್ಟಿಸಿದ ಸುಕೋಮಲ ಧ್ವನಿ ಝೇಂಕಾರ ನಿಮ್ಮ ಎದೆಬಡಿತದೊಂದಿಗೆ ಸೇರಿಕೊಂಡೀತು ಹುಷಾರು !ನಿರ್ಮಾಪಕ- ಟಿವಿ ಕಾರ್‍ಯಕ್ರಮ ನಿರ್ದೇಶಕ -ಬರಹಗಾರ-ಸಂಗೀತ ನಿರ್ದೇಶಕ...ಹೀಗೆ ಎಲ್ಲ ಪದವಿಗಳನ್ನು ಹೊತ್ತಿರುವ ಶೋಯಿಬ್ ಮನ್ಸೂರ್‌ಗೆ ಸಿನಿಮಾ ನಿರ್ದೇಶಕನಾಗಿ ಇದು ಮೊದಲ ಚಿತ್ರ. ಟಿವಿಯಲ್ಲಿ ಗೆದ್ದವರು ಥಿಯೇಟರ್‌ನಲ್ಲಿಯೂ ಗೆಲ್ಲುವುದು ಸುಲಭ ಅಲ್ಲ ಅಂತ ನಮಗೆ ಗೊತ್ತಿದೆಯಲ್ಲ. ಆದರೆ ಈ ಚಿತ್ರ ವಿಮರ್ಶಕರ ಗಮನವನ್ನೂ ಸೆಳೆಯಿತು, ಪಾಕ್‌ನ ಬಾಕ್ಸಾಫೀಸಿನಲ್ಲೂ ಹಿಟ್ ಆಯಿತಂತೆ. ಅತಿಥಿ ಕಲಾವಿದರಾಗಿರುವ ನಾಸಿರುದ್ದೀನ್ ಶಾ ಹೊರತುಪಡಿಸಿದರೆ, ಇದರ ನಟರೆಲ್ಲ ನಮಗೆ ಅಪರಿಚಿತರೇ. ಈ ಸಿನಿಮಾದ ಜೀವ ಶಕ್ತಿ ಇರುವುದು ಚಿತ್ರಕತೆ ಮತ್ತು ಸಂಗೀತದಲ್ಲಿ. ಬರಿಯ ಒಣ ಚರ್ಚೆಯೂ ಆಗಬಲ್ಲ ಕತೆಯನ್ನು ಮಾತಿನಲ್ಲೂ ದೃಶ್ಯದಲ್ಲೂ ಕರಗಿಸಿ, ಒಂದು ಹದ ಪಾಕದಲ್ಲಿ ಕೊಟ್ಟಿದ್ದಾರೆ ಶೋಯಬ್. ಉತ್ತರಾರ್ಧದಲ್ಲಿ , ಅಮೆರಿಕ-ಪಾಕಿಸ್ತಾನದಲ್ಲಿ ನಡೆಯುವ ಘಟನೆಗಳನ್ನು ಬಹಳ ಮಜಬೂತಾಗಿ ಒಂದರನಂತರ ಒಂದು ತುಂಡುತುಂಡು ದೃಶ್ಯಗಳನ್ನಿಟ್ಟು ತೋರಿಸುತ್ತಾರೆ. ಅಲ್ಲಿನ ಹೊಡೆತದ ನೋವು ಇಲ್ಲಿ ಕಾಣಿಸುತ್ತದೆ. ಇಲ್ಲಿನ ಹೂವು ಅಫ್ಗನ್ ಗಡಿಯಲ್ಲಿ ಅರಳುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಪುಸ್ತಕ ಓದಿಸಿಕೊಂಡು ಹೋಗುವಂತೆ, ನೋಡಿಸಿಕೊಂಡು ಹೋಗುವ ಗುಣವೂ ಇದಕ್ಕಿದೆ.
ಪಾಕಿಸ್ತಾನದ ಕೋರ್ಟ್‌ನಲ್ಲಿ ನಾಸಿರುದ್ದೀನ್ ಶಾ ‘ನಿಜ ಧರ್ಮ’ದ ಬಗ್ಗೆ ಹೇಳುತ್ತಾ ಪ್ರಶ್ನಿಸುತ್ತಾರೆ- ‘ಜಗತ್ತಿನಲ್ಲಿ ಇಷ್ಟೆಲ್ಲಾ ವೈವಿಧ್ಯ ಸೃಷ್ಟಿಸಿದ ದೇವರು, ಮುಸ್ಲಿಂ ಮಹಿಳೆಯರಿಗೆ ಮಾತ್ರ ಯೂನಿಫಾರ್ಮ್ ಕಡ್ಡಾಯ ಮಾಡಿಯಾನೇ?’ ಇದು ನಾವೆಲ್ಲ ಮೈಮರೆತು ನೋಡಬೇಕಾದ ಸಿನಿಮಾ.