June 20, 2008

ಬೆಳ್ಳೇಕೆರೆಯ ಹಳ್ಳಿ ಥೇಟರ್ - ಅಂಕ 5

ಸಕಲೇಶಪುರದಿಂದ ಪ್ರಸಾದ್ ರಕ್ಷಿದಿ ಬರೆಯುತ್ತಾರೆ...
ತೋಟದ ಜನಗಳು ನಾಟಕ ಮಾಡಿದ್ದು
ರುದಿನ ಸಂಜೆ ಕಾಫಿಕಣದಲ್ಲಿ ಎಲ್ಲರೂ ಸೇರಿದಾಗ ಚೆನ್ನವೀರನ ಬೇಡಿಕೆ ಚರ್ಚೆಗೆ ಬಂತು. ಕೂಟದಲ್ಲಿ ಹುಡುಗರೆಲ್ಲ ಓದುಬರಹ ಕಲಿಯಲು ಸಿದ್ಧರಾದರು. ಕಾಫಿ ಕಣದ ಪಕ್ಕದ ಎತ್ತರವಾದ ಸಿಮೆಂಟಿನ ಗೋಡೆಯೇ ಬೋರ್ಡು. ಚದರ ಬಿಲ್ಲೆ ಹಾಸಿದ ನೆಲವೇ ಸ್ಲೇಟು. ಇವರಲ್ಲದೆ ಶಾಲೆಗೆ ಸೇರಿದ್ದ ಕೆಲವು ಮಕ್ಕಳೂ ಬಂದರು. ಒಟ್ಟು ಇಪ್ಪತ್ತೆರಡು ಜನರಾದರು. ಪ್ರತಿಯೊಬ್ಬರೂ ಸ್ಲೇಟು ತಂದುಕೊಳ್ಳುವವರೆಗೆ ನೆಲದಲ್ಲೇ ಬರೆಯುವುದೆಂದುಕೊಂಡೆವು. ಚೆನ್ನವೀರ, ವಿಶ್ವನಾಥ - ಮೋನಪ್ಪ, ಕೃಷ್ಣಪ್ಪ, ಶೇಷಪ್ಪ, ಸರಸ್ವತಿ, ಸುಂದರಿ ಹೀಗೇ ಎಲ್ಲರೂ ಇದ್ದರು. ಇವರೆಲ್ಲ ತೋಟದಲ್ಲಿ ಕೆಲಸಕ್ಕೆ ಸೇರಿದ್ದರು. ಶಾಲೆಗೆ ಹೋಗುತ್ತಿದ್ದ ಗುಡ್ಡಪ್ಪ, ಚಂದಪ್ಪ, ಕೃಷ್ಣಪ್ಪ, ಶಂಕರ ಇತ್ಯಾದಿ ಮಕ್ಕಳೂ ಬರುತ್ತಿದ್ದರು. ಅಕ್ಷರಾಭ್ಯಾಸದ ಜೊತೆಯಲ್ಲಿ ಸಿನಿಮಾ ಕತೆಗಳು, ತೋಟದಲ್ಲಿ ನಡೆದ ಜಗಳಗಳ ತೀರ್ಮಾನ - ಇನ್ನಿತರ ಊರ ಸುದ್ದಿಗಳು ಇಲ್ಲಿ ಚರ್ಚೆಗೆ ಬರುತ್ತಿದ್ದವು. ಪ್ರತಿದಿನ ಕತ್ತಲಾಗುವವರೆಗೆ ನಮ್ಮ ಶಾಲೆಯು ನಡೆಯುತ್ತಿತ್ತು. ಮಳೆಗಾಲ ಬರುವ ವೇಳೆಗೆ ತೋಟದಲ್ಲಿ ನಮ್ಮೆಲ್ಲರ ವಾಸದ ಮನೆಗಳ ಹತ್ತಿರದಲ್ಲೇ ಒಂದು ಕೋಣೆಯಲ್ಲಿ ಸಿಮೆಂಟಿನ ಬೋರ್ಡು ಮಾಡಿಕೊಂಡೆವು. ಮುಂದೆ ಅಲ್ಲೇ ಶಾಲೆ ನಡೆಯುತ್ತಿತ್ತು. ಆ ಸಮಯದಲ್ಲಿ ಮನೆಗಳಿಗೆಲ್ಲ ತೋಟದಿಂದ 'ಲೈಟು' ಹಾಕಿಸಿದ್ದರು. ಹಾಗಾಗಿ ಶಾಲೆಯಲ್ಲಿ ಬೆಳಕಿನ ಸಮಸ್ಯೆ ಇರಲಿಲ್ಲ. ಆದ್ದರಿಂದ ರಾತ್ರಿ ಊಟ ಮಾಡಿ ಬಂದು ಹುಡುಗರೆಲ್ಲ ಶಾಲೆಯಲ್ಲೇ ಮಲಗಲಾರಂಭಿಸಿದರು. ಕೆಲವೊಮ್ಮೆ ಪಾಠಕ್ಕಿಂತ ಇತರ ಚರ್ಚೆಗಳೇ ಹೆಚ್ಚಾಗುತ್ತಿದ್ದವು.
ವರ್ಷ ಪಕ್ಕದ ಕ್ಯಾಮನಹಳ್ಳಿ ಪ್ರೈಮರಿ ಶಾಲೆಯಲ್ಲಿ ಸ್ಕೂಲ್ಡೇ ಮಾಡಿದರು. ಅಲ್ಲಿ ಊರವರೆಲ್ಲಾ ಸೇರಿ ಒಂದು ನಾಟಕವನ್ನೂ ಆಡಿದರು. ನಾಟಕ ಬೇಲೂರು ಕೃಷ್ಣಮೂರ್ತಿಯವರ 'ಪಜೀತಿ'. ನಮ್ಮ ತಂಡವೆಲ್ಲ ಸ್ಕೂಲ್‌ಡೇಗೆ ಹೋಯಿತು. ನಮ್ಮಲ್ಲಿನ ಕೆಲವು ಮಕ್ಕಳೂ ಆ ಶಾಲೆಗೆ ಹೋಗುತ್ತಿದ್ದರು. ಸ್ಕೂಲ್‌ಡೇ ಮುಗಿಸಿ ರಾತ್ರಿ ವಾಪಸ್ ಬರುವಾಗ ಅಂದಿನ ನಾಟಕದ ಬಗ್ಗೆ ಹುಡುಗರಲ್ಲಿ ಚರ್ಚೆ ಪ್ರಾರಂಭವಾಯಿತು. ನಾಟಕದಲ್ಲಿ ನಮ್ಮಲ್ಲಿಂದ ಆ ಶಾಲೆಗೆ ಹೋಗುತ್ತಿದ್ದ ಇಬ್ಬರು ಮಕ್ಕಳು ಪಾತ್ರ ಮಾಡಿದ್ದರು. ಎಲ್ಲರೂ ನಾಟಕದ ಬಗ್ಗೆ ಉತ್ಸಾಹದಿಂದ ಮಾತಾಡುತ್ತಿದ್ದರು.
'ಈಗ ನಾವೊಂದು ನಾಟಕ ಮಾಡಿದರೆ ಹೇಗೆ' ಎಂದು ಕೆಲವರಿಗೆ ಅನ್ನಿಸಿತು.
'ದುಡ್ಡು ಬೇಕಲ್ಲ' ಎಂದ ಒಬ್ಬ.
'ನಾವೆಲ್ಲ ಚಂದಾ ಹಾಕೋಣ' ಇನ್ನೊಬ್ಬ'.
'ತೋಟದಿಂದ ಕೇಳೋಣ '- 'ನಾಟಕ ಮಾಡಲು ನಮಗೆ ಸಾಧ್ಯವೆ?' -'ಆಡಿದರೆ ಎಲ್ಲಿ ಆಡೋದು' ಹೀಗೆಲ್ಲ ಅಭಿಪ್ರಾಯಗಳು ಬಂದವ. ಮಾರನೇ ದಿನ ಶಾಲೆಯಲ್ಲಿ ನಾಟಕದ ಬಗ್ಗೆ ಚರ್ಚೆ ನಡೆಯಿತು. ನಾವೆಲ್ಲ ಸೇರಿ ಒಂದು ನಾಟಕ ಮಾಡುವುದೆಂದು ತೀರ್ಮಾನವಾಯ್ತು. ಖರ್ಚಿಗೆ ನಾವೇ ಚಂದಾ ಹಾಕುವುದೆಂದೂ, ತೋಟದಿಂದ ಕೇಳುವುದು ಬೇಡವೆಂದೂ ನಿರ್ಧರಿಸಿದೆವು. ಆದಷ್ಟು ಕಡಿಮೆ ಖರ್ಚಿನಲ್ಲಿ ಕಾರ್ಯಕ್ರಮ ಮಾಡುವುದೆಂದು ಯೋಚಿಸಿದೆವು. ನಾಟಕ ಮಾಡುವ ಉತ್ಸಾಹದಲ್ಲಿ ಆ ದಿನ ರಾತ್ರಿ ಬಹಳ ಹೊತ್ತಿನವರೆಗೆ ಚರ್ಚೆ ನಡೆಯಿತು. ನಮ್ಮ ಶಾಲೆ - ನಾವು ಆಡಲಿರುವ ನಾಟಕ ಇವುಗಳನ್ನೆಲ್ಲ ವ್ಯವಸ್ಥಿತವಾಗಿ ಮಾಡಲು ಒಂದು ಸಂಘವನ್ನು ಮಾಡಿಕೊಳ್ಳುವುದೆಂದೂ, ಸಂಗ್ರಹಿಸಿದ ಮತ್ತು ಖರ್ಚುಮಾಡಿದ ಹಣಕ್ಕೆ ಸರಿಯಾಗಿ ಲೆಕ್ಕ ಇಡಬೇಕೆಂದೂ ತೀರ್ಮಾನಿಸಿದೆವು. ತೋಟದಲ್ಲಿ ಕೆಲಸ ಮಾಡುವವರ ಪ್ರತಿ ಮನೆಯಿಂದಲೂ ಒಬ್ಬೊಬ್ಬನನ್ನು ಸದಸ್ಯನನ್ನಾಗಿ ಮಾಡಿಕೊಂಡು ಒಂದು ಸಂಘ ಸ್ಥಾಪನೆಯಾಯಿತು. ಆ ಸಂಘಕ್ಕೆ 'ಕಾರ್ಮಿಕ ಮಿತ್ರ ಸಂಘ- ರಕ್ಷಿದಿ' ಎಂದು ಹೆಸರಿಟ್ಟೆವು. ಶಾಲೆಗೆ ಬರುವ ಪ್ರತಿಯೊಬ್ಬರೂ ವಾರಕ್ಕೆ ನಾಲ್ಕಾಣೆ ವಂತಿಗೆ ನೀಡಬೇಕೆಂದೂ ನಾಟಕ ಮುಗಿದ ನಂತರ ಹಣವೇನಾದರೂ ಉಳಿದರೆ ಅದರಲ್ಲಿ ಮಕ್ಕಳಿಗೆ ಪುಸ್ತಕ ಸ್ಲೇಟು ಇತ್ಯಾದಿಗಳನ್ನು ತರುವುದೆಂದೂ ಯೋಚಿಸಿದೆವು.
ನಾಟಕವನ್ನು ಆಯ್ಕೆ ಮಾಡುವ - ತರಬೇತಿ ನೀಡುವ ಜವಾಬ್ದಾರಿ ನನ್ನ ಮೇಲೆ ಬಿತ್ತು. ಸರಳ ಮನೋರಂಜನೆಯ ನಾಟಕ 'ರಿಹರ್ಸಲ್ ಗಡಿಬಿಡಿ' ಆರಿಸಿದೆ. ನಾಟಕದ ರಿಹರ್ಸಲ್ ಪ್ರಾರಂಭವಾಯಿತು. ಎಲ್ಲರೂ ಕೆಲಸ ಮುಗಿಸಿದ ನಂತರ ಆದಷ್ಟು ಬೇಗ ಶಾಲೆಯಲ್ಲಿ ಸೇರಬೇಕೆಂದು ತಿಳಿಸಿದ್ದೆ. ಆದರೆ ಶಾಲೆಯನ್ನು ನಿಲ್ಲಿಸಲು ಮನಸ್ಸಿರಲಿಲ್ಲ. ಪ್ರತಿದಿನದ ಅಕ್ಷರಾಭ್ಯಾಸದ ನಂತರ ರಿಹರ್ಸಲ್ ಮಾಡುತ್ತಿದ್ದೆವು. ಉಗ್ಗಪ್ಪನೊಬ್ಬನನ್ನು ಬಿಟ್ಟು ಉಳಿದ ಪಾತ್ರಧಾರಿಗಳಾದ ವಿಶ್ವನಾಥ, ಸುಂದರ , ಚೆನ್ನವೀರ, ಮೋನಪ್ಪ, ಶೇಷಪ್ಪ ಇವರ್‍ಯಾರಿಗೂ ಓದಲು ಬರುತ್ತಿರಲಿಲ್ಲ. ಒಂದೊಂದು ಅಕ್ಷರಗಳನ್ನು ಗುರುತಿಸುತ್ತಿದ್ದರು. ಉಗ್ಗಪ್ಪನ ತಮ್ಮ ಗುಡ್ಡಪ್ಪನೊಬ್ಬ ಶಾಲೆಗೆ ಹೋಗುತ್ತಿದ್ದು ಸ್ವಲ್ಪಮಟ್ಟಿಗೆ ಓದಬಲ್ಲವನಾಗಿದ್ದ. ಹೀಗಾಗಿ ಪ್ರತೀಪಾತ್ರದ ಮಾತನ್ನೂ ನಾನು ಗಟ್ಟಿಯಾಗಿ ಹೇಳಿ, ನಂತರ ಅವರಿಂದ ಹೇಳಿಸಬೇಕಿತ್ತು; ಜೊತೆಯಲ್ಲಿ ನಟನೆಯನ್ನೂ ಹೇಳಿಕೊಡಬೇಕಿತ್ತು. ಹುಡುಗರ ಉತ್ಸಾಹ ಎಷ್ಟಿತ್ತೆಂದರೆ ನಾನು ಗಟ್ಟಿಯಾಗಿ ಎಲ್ಲಾ ಸಂಭಾಷಣೆಯನ್ನು ಹೇಳುತ್ತಿದ್ದುದರಿಂದ ಎಲ್ಲರ ಮಾತೂ ಎಲ್ಲರಿಗೂ ಬರುತ್ತಿತ್ತು. ಅವರು ಇಡೀ ದಿನ ತೋಟದಲ್ಲಿ ಕೆಲಸ ಮಾಡುವಾಗಲೆಲ್ಲಾ ನಾಟಕದ ಮಾತುಗಳನ್ನು ಹೇಳಿಕೊಂಡು ತಿರುಗಿ - ತೋಟದ ಅನೇಕರಿಗೂ ಈ ಮಾತುಗಳು ಬಾಯಿಪಾಠವಾಗಿಬಿಟ್ಟವು. ನಾಟಕಕ್ಕೆ ಒಂದಷ್ಟು ಕೈಬರಹದ ಪೋಸ್ಟರ್‌ಗಳನ್ನು ಮಾಡಿದೆ. ಅದನ್ನು ಊರಲ್ಲೆಲ್ಲಾ ಅಂಟಿಸಿದೆವು. ಎಸ್ಟೇಟ್ ಬಂಗಲೆಯ ಆವರಣದಲ್ಲಿ ಎತ್ತರವಾದ ಸ್ಥಳವೇ ಸ್ಟೇಜ್. ನಾವೆಲ್ಲ ಕೆಲಸ ಮಾಡುತ್ತಿದ್ದ 'ಪೂರ್ಣಿಮಾ ಎಸ್ಟೇಟ್' ಕೇಂದ್ರ ರೈಲ್ವೆ ಸಚಿವರಾಗಿದ್ದ ಕೊಡಗಿನ ಸಿ.ಎಂ.ಪೂಣಚ್ಚ ಅವರಿಗೆ ಸೇರಿತ್ತು. ಅವರು ಇಲ್ಲಿ ವಾಸವಿರುತ್ತಿರಲಿಲ್ಲವಾದ್ದರಿಂದ ಬಂಗಲೆ ಯಾವಾಗಲೂ ಖಾಲಿ ಇರುತ್ತಿತ್ತು. ಎಸ್ಟೇಟಿನ ಮ್ಯಾನೇಜ್‌ಮೆಂಟ್ ಎನ್.ಕೆ.ಗಣಪಯ್ಯನವರು ಮಾಡುತ್ತಿದ್ದರು. (ಹಾರ್ಲೆ ಗ್ರೂಪ್ ಆಫ್ ಎಸ್ಟೇಟ್ಸ್.) ಹಾಗಾಗಿ ಬಂಗಲೆಯ ಖಾಲಿ ಆವರಣ ನಮಗೆ ಅನುಕೂಲವಾದ ಸ್ಥಳವಾಗಿತ್ತು. ಅಲ್ಲಿ ವಿದ್ಯುತ್ ಸೌಲಭ್ಯವೂ ಇತ್ತು.
ಕಾಲದಲ್ಲಿ ಕಾಫಿ ತೋಟದ ಕೆಲಸಗಾರರಿಗೆ ಮಳೆಗಾಲದಲ್ಲಿ ತೋಟದಲ್ಲಿ ಕೆಲಸ ಮಾಡುವಾಗ ಮಳೆಯಿಂದ ರಕ್ಷಣೆ ಪಡೆಯಲು ಕುಪ್ಪೆ ಹಾಕಿಕೊಳ್ಳಲು ತೋಟದಿಂದ ಕಂಬಳಿ ಕೊಡುತ್ತಿದ್ದರು. ಇದು ಸಾಮಾನ್ಯವಾಗಿ ಕಂದು, ಕಪ್ಪು ಬಣ್ಣದಲ್ಲಿರುತ್ತಿತ್ತು. ನಾಟಕದ ಪಾತ್ರಧಾರಿಗಳೆಲ್ಲ ತಮ್ಮ ತಮ್ಮ ಮನೆಯಿಂದ ಒಂದೊಂದು ಕಂಬಳಿ ತಂದರು. ಈ ಕಂಬಳಿಗಳೇ ಸ್ಟೇಜಿನ ಹಿಂದಿನ ಪರದೆಗಳಾದವು. ವಿಂಗ್‌ಗಳಿಗೆ ಮನೆ ಮನೆಗಳಿಂದ ಸೀರೆಗಳನ್ನು ತಂದು ಕಟ್ಟಿದೆವು. ಸೀಮೆ ಎಣ್ಣೆ ಟಿನ್ ಕತ್ತರಿಸಿ ಅದರೊಳಗೆ ಬಲ್ಬ್ ಹಾಕಿ ಲೈಟುಗಳು ತಯಾರಾದವು. ಕೆಲವು ಸಣ್ಣ ಪುಟ್ಟ ರಂಗಸಜ್ಜಿಕೆ - ಪರಿಕರಗಳನ್ನು ತಯಾರಿಸಿಕೊಂಡೆವು. ಜೊತೆಗೆ ಹಾನುಬಾಳಿನ ಜೋಸೆಫ್‌ನ ಮೈಕ್ ಕೂಡಾ ಬಂತು.
ನಾಟಕಕ್ಕೆ ಊರವರನ್ನೆಲ್ಲಾ ಆಹ್ವಾನಿಸಿದೆವು. ತೋಟದ ಮಾಲೀಕರೂ ಬಂದರು. ನಾಟಕದ ದಿನ ನಮ್ಮ ನಟನೊಬ್ಬ 'ನಾನು ಮೀಸೆ ಬೋಳಿಸಲು ತಯಾರಿಲ್ಲ' ವೆಂದು ತರಲೆ ತೆಗೆದು ಹವ್ಯಾಸಿ ರಂಗಭೂಮಿಯ ಸಮಸ್ಯೆಗಳನ್ನು ನೆನಪುಮಾಡಿಕೊಟ್ಟು ಶುಭಾರಂಭ ಮಾಡಿದ! ಅವನನ್ನು ಹೇಗೋ ಸುಧಾರಿಸಿದೆವು. ನಾಟಕಕ್ಕೆ ಮೊದಲು ಮಕ್ಕಳಿಂದ ಒಂದು ರೂಪಕವನ್ನು ಮಾಡಿಸಿದ್ದೆವು. ಇದರಲ್ಲಿ ನಮ್ಮ 'ಹಾಡಿನ ಪೆಟ್ಟಿಗೆ' ಯ ಒಂದಿಬ್ಬರು ಮಕ್ಕಳೂ ಇದ್ದರು. ಇವನು ತನ್ನ ಮಕ್ಕಳು ನಾಟಕದಲ್ಲಿದ್ದಾರೆಂದು ಖುಷಿಯಿಂದ ರೇಡಿಯೋದೊಂದಿಗೆ ಹಾಜರಾಗಿ - ಮುಂದಿನ ಸಾಲಿನಲ್ಲಿ ಕೂತಿದ್ದ. ವಾರ್ತೆ ಬರುವ ಸಮಯಕ್ಕೆ ಇವನು ರೇಡಿಯೋ ಹಾಕಿದ್ದರಿಂದ ಯಾರೋ ಇವನನ್ನು ಬಯ್ದು ಹಿಂದಕ್ಕೆ ಅಟ್ಟಿದರು! ನಾಟಕ ಮಾಮೂಲು ಸ್ಕೂಲ್‌ಡೇ ನಾಟಕಗಳಿಗಿಂತ ಚೆನ್ನಾಗಿ ಬಂತು. ನಾಟಕಕ್ಕೆ ಸುಮಾರು ಮುನ್ನೂರು ಜನರು ಬಂದಿದ್ದರು. ನಾಟಕ ಒಂದೂವರೆ ಗಂಟೆಯ ಅವಧಿಯದಿತ್ತು. ನಾಟಕ ಮುಗಿದ ತಕ್ಷಣ ಮುಂದಕ್ಕೆ ಬಂದ 'ಹಾಡಿನ ಪೆಟ್ಟಿಗೆ' ನಾಟಕಕ್ಕೆ ತಾನು 'ಹತ್ತು ರೂಪಾಯಿ ಇನಾಮು' ನೀಡುವುದಾಗಿ ಘೋಷಣೆ ಮಾಡಿ ಭಾರೀ ಚಪ್ಪಾಳೆ ಗಿಟ್ಟಿಸಿದ!
'ಪರ್‍ವಾಗಿಲ್ಲ ತೋಟದ ಜನಗಳಾದ್ರೂ ಚೆನ್ನಾಗಿ ಮಾಡಿದ್ರು' ಎಂದರು ಊರ ಜನ. ಹುಡುಗರಿಗೆ ನಾಟಕದ ರುಚಿ ಹತ್ತಿತ್ತು. ತೋಟದ ಮಾಲೀಕರು ಈ ನಾಟಕದ ಖರ್ಚನ್ನು ತಾವೇ ನೀಡುವುದಾಗಿ ತಿಳಿಸಿ, ಬಹುಮಾನಗಳನ್ನೂ ಕೊಟ್ಟರು. ನಾಟಕಕ್ಕೆ ಒಟ್ಟು ನೂರಾ ನಲವತ್ತು ರೂಪಾಯಿ ಖರ್ಚಾಗಿತ್ತು. ಆಗ ತೋಟದಲ್ಲಿ ಕೆಲಸದವರಿಗೆ ದಿನಗೂಲಿ ಐದು ರೂಪಾಯಿ ಇತ್ತು.

Read more...

June 12, 2008

ನಮಗಾಗಿ ಬದುಕುವವರ ಮಧ್ಯೆ ಜೀವ ಕೈಲಿ ಹಿಡಿದು...!

ದುವೆ ಆಲ್ಬಮ್‌ನ ಒಂದೊಂದೇ ಪುಟ ತಿರುವಿ, ದೃಶ್ಯ-ವ್ಯಕ್ತಿಗಳನ್ನು ವರ್ಣಿಸುವಂತೆ ಆತ ಹೇಳುತ್ತಿದ್ದ. ಫಳಫಳ ಹೊಳೆವ ದಪ್ಪ ಕಾಗದದ ಪುಟಗಳಲ್ಲಿ....ಬಣ್ಣ ಬಣ್ಣದ ಮಾತ್ರೆಗಳ ಫೋಟೊ, ವಿವರಣೆ ! ಡಾಕ್ಟರು ಸುಮ್ಮನೆ ಆಲಿಸುತ್ತಿದ್ದರು. ಯಾವುದೋ ಸ್ಕೀಮುಗಳ ವಿವರಣೆ ಕೊಡುವವರು, ಮನೆ ಬಾಗಿಲಿಗೆ ಪಾತ್ರೆಪಗಡಿ ಮಾರಿಕೊಂಡು ಬರುವವರಷ್ಟೇ ಚಾಲಾಕಿತನದಿಂದ ನಾಲಗೆ ಹೊರಳಿಸುತ್ತಿದ್ದ. ಈ ಮಾತ್ರೆ ಇಷ್ಟು ತಗೊಂಡ್ರೆ ಅಷ್ಟು ಸಿರಪ್ ಬಾಟಲಿ ಫ್ರೀ ಅಂತೆಲ್ಲ ಹೇಳುತ್ತಿದ್ದಾನೆಂದೇ ಅನ್ನಿಸಿತು. ಇಂಥವರನ್ನು ನಾವು ನೋಡೇ ಇರಲಿಲ್ಲ ಅಂತಲ್ಲ. ಆದರೆ ಪಕ್ಕದ ಕೋಣೆಯಲ್ಲೇ ಮೈ ಕೈಗೆ ಪೈಪು, ಸೂಜಿ ಸಿಕ್ಕಿಸಿಕೊಂಡು ಮಲಗಿರುವ ಅಪ್ಪನನ್ನು ನೋಡಿ ಮನಸ್ಸು ಹಿಂಜಿಕೊಂಡು ಬಂತು. ಬಂದ 'ಔಷಧಲೋಲ' ಸ್ಯಾಂಪಲ್‌ಗೆ ಅಂತ ಒಂದೆರಡು ಮುಲಾಮುಗಳನ್ನೂ ಡಾಕ್ಟರ ಮೇಜಿನಲ್ಲಿ ಬಿಟ್ಟು ಹೊರಟುಹೋದ. ಡಾಕ್ಟರು ಟ್ಯೂಬನ್ನು ಕೊಂಚ ಹಿಚುಕಿ, ನೆಕ್ಕಿ ನೋಡುತ್ತಿರುವ ದೃಶ್ಯ ಕಣ್ಣೆದುರು ಬಂದಂತಾಯಿತು.

ನಮ್ಮ ವಿದ್ಯಾಭ್ಯಾಸ, ನಮ್ಮ ಆರೋಗ್ಯ, ಮನರಂಜನೆ, ಆಹಾರ ಪ್ರತಿಯೊಂದರ ಬಗ್ಗೆಯೂ ಈಗ ಹಲವರಿಗೆ ಕಾಳಜಿ. ಗರ್ಭಿಣಿಯರಿಗೆ `ಡೆಲಿವರಿ ಪ್ಯಾಕೇಜ್'ಗಳೂ ರೂ.೪೩ ಸಾವಿರದಿಂದ ಆರಂಭ. ಹುಟ್ಟಿನಿಂದ ಸಾಯುವವರೆಗೂ, ಪರರಿಗಾಗಿಯೇ ಬದುಕುವವರಿಗೆ ಕೊರತೆಯಿಲ್ಲ ! ನಮ್ಮ ಸೇವೆಗೆಂದು ಸದಾ ಸಿದ್ಧವಾಗಿರುವ ಸಂಗತಿಗಳ ಕೆಲವು ತಾಜಾ ಸ್ಯಾಂಪಲ್ ಓದಿ : ಮೈಸೂರು ರಸ್ತೆಯ ಬಣ್ಣಗೆಟ್ಟ ಕಾಂಪೌಂಡುಗಳ ಉದ್ದಕ್ಕೂ ನೀಲಿ ಯೂನಿಫಾರ್ಮ್ ತೊಟ್ಟ ಹುಡುಗ ಹುಡುಗಿಯರಿಬ್ಬರ ಪೋಸ್ಟರ್‌ಗಳು. ಟೆಂತ್ ಕ್ಲಾಸ್ ಸಿನಿಮಾ ಪೋಸ್ಟರ್ ಅಲ್ಲಾರೀ...ಯಾವುದೋ ಸ್ಕೂಲಿನ ಜಾಹೀರಾತು ಪೋಸ್ಟರ್ ಅದು ! ಆ ಹುಡುಗ-ಹುಡುಗಿಯರ ಪಕ್ಕದಲ್ಲಿ, ಶಾಲೆಯಲ್ಲಿರುವ ಸೌಲಭ್ಯಗಳ ದ್ಯೋತಕವಾಗಿ ವ್ಯಾನು, ಈಜುಕೊಳ, ಕಂಪ್ಯೂಟರ್ ಇತ್ಯಾದಿಯ ಸಣ್ಣ ಸಣ್ಣ ಫೋಟೊಗಳು. ಪೋಸ್ಟರ್‌ನ ಕೆಳಭಾಗದಲ್ಲಿ ಶಾಲಾ ಮ್ಯಾನೇಜ್‌ಮೆಂಟ್ ಅಧ್ಯಕ್ಷನ ಫೋಟೊ. ಮರದ ಮೇಲೆ, ಅಂಗಡಿ ಗೋಡೆಯ ಮೇಲೆ, ಶೂರ ಗಂಡಸರು ಉಚ್ಚೆ ಹೊಯ್ಯುವಲ್ಲಿ ಪೋಸ್ಟರ್‌ಗಳೇ ಪೋಸ್ಟರ್‌ಗಳು. ಮಲೆನಾಡಿನ ಪಟ್ಟಣವೊಂದರಲ್ಲಿನ ಪುಟ್ಟ ಗಣಪತಿ ದೇವಸ್ಥಾನ. ಗರ್ಭಗುಡಿಯ ಬಾಗಿಲ ಪಕ್ಕದಲ್ಲೇ ದಪ್ಪ ಅಕ್ಷರಗಳಲ್ಲಿ ಬೋರ್ಡು `ಪ್ರಧಾನ ಅರ್ಚಕರು- ಗಣಪತಿ ಭಟ್-ಮೊಬೈಲ್ ಸಂಖ್ಯೆ 'ಹೀಗೆ . ಛೆ, ದೇವರ ನಂಬರ್ ಕೊಟ್ಟಿದ್ದರೆ ಅಂತ ಅನ್ನಿಸದಿರಲಿಲ್ಲ. ಹೊರಗೆ ಬಂದು ಸುಮ್ಮನೆ ಆ ನಂಬರಿಗೆ ಕರೆ ಮಾಡಿದರೆ `ಪೂಜೇಲಿದ್ದೀನ್ರೀ...ಏನು ಸೇವೆ ಆಗಬೇಕಾ...ಎಷ್ಟು ರೂಪಾಯಿದು?...ಇಲ್ಲಿಯವರಾ ಹೊರಗಿನವ್ರಾ?...ಮಧ್ಯಾಹ್ನ ೩ರ ನಂತ್ರ ಮಾಡಿ' ಹೀಗೆ ನಾನಾ ಪ್ರಶ್ನೋತ್ತರಗಳು !

ಕಮರ್ಷಿಯಲ್ ಆಗಬೇಕಾದರೆ ಪ್ರೊಫೆಷನಲ್ ಆಗಿರಬೇಕೇನೋ. ಆದರೆ ಪ್ರೊಫೆಷನಲ್ ಆಗಲು ಕಮರ್ಷಿಯಲ್ ಆಗಲೇಬೇಕೆ? ಪೋಲಿಯೊ ಹನಿ, ಏಡ್ಸ್ ಎಚ್ಚರಿಕೆ ಅಭಿಯಾನ ಹೀಗೆ ದೊಡ್ಡ ಕಾಯಿಲೆ - ಪರಿಹಾರೋಪಾಯಗಳ ಸುತ್ತವೇ ಸುಳಿಯುತ್ತಿರುವ ವಿವಾದಗಳ ಬಗ್ಗೆ , ಔಷಧ ಕಂಪನಿಗಳ ಸೈಡ್ ಎಫೆಕ್ಟ್‌ಗಳ ಬಗ್ಗೆ ವಿವರಿಸುವವರಾರು? ಶಾಲೆಗಳು (ಶಿಕ್ಷಣ)- ಆಸ್ಪತ್ರೆಗಳು(ಆರೋಗ್ಯ)- ಕಟ್ಟಡಗಳು (ಆಶ್ರಯ), ಆಹಾರ - ಇಂತಹ ಮೂಲ ಅವಶ್ಯಕತೆಗಳ ಜವಾಬ್ದಾರಿಯನ್ನೂ ಯಾವಾಗ ಸರಕಾರ (ಅಂದರೆ ಜನ ಕೂಡಾ)ತನ್ನ ಭುಜದಿಂದ ಕೊಡವಿಕೊಂಡಿತೋ ,ಸಾಮಾನ್ಯ ಜನರ ಬದುಕು ಚಿತ್ರಾನ್ನವಾಯಿತು. ದುಡ್ಡಿದ್ದರೆ ಮಾತ್ರ ಗುಣಮಟ್ಟ ಅನ್ನೋ ಸಿದ್ಧ ಅಸ್ತ್ರ ಎಲ್ಲರ ಕೈಗೂ ಬಂತು. ಅದು ಗುಣಮಟ್ಟವಿಲ್ಲದಿದ್ದರೂ ದುಡ್ಡು ಅನ್ನುವವರೆಗೆ ಬಂದು ನಿಂತಿತು. ಈಗ ಎಲ್ಲ ಹಾಳಾಗಿದೆ ಅಂತಲ್ಲ. ಹಾ -'ದುಡ್ಡಿನ ಮುಖ ನೋಡೋದು ಅನಿವಾರ್ಯವಾಗಿದೆ ಸ್ವಾಮೀ ! ಎಲ್ಲ ಚೇಂಜ್ ಆಗಿದೆಯಲ್ಲ ' ಅಂತನ್ನೋದು ಸುಲಭವಾಗಿದೆ. ವಾಹನಗಳು ಬಂದು ಬೇಗ ತಲುಪುವುದಕ್ಕಾಗಿದೆಯೆ? ಫೋನ್‌ಗಳು ಮನೆಮನೆಗೆ ಬಂದು ಓಡಾಟ ಕಡಿಮೆಯಾಗಿದೆಯೆ? ಸಮಯ-ಶ್ರಮ-ಆರೋಗ್ಯಗಳೆಲ್ಲ ನಮ್ಮನ್ನ ಸಂತಸವಾಗಿಡುವಂತಿವೆಯಾ? ನಮ್ಮ ಆಸ್ಪತ್ರೆ, ಅಂಗಡಿ-ಹೋಟೆಲು, ಬಹುಮಹಡಿ ಶಾಲೆಗಳು ಏನು ಮಾಡುತ್ತಿವೆ ಎಂಬುದು ಪ್ರತಿಯೊಬ್ಬರ ಅನುಭವಕ್ಕೂ ಬಂದಿದೆ. ದುಡ್ಡಿಗೆ ದಾಸರಾಗದೆ ವೃತ್ತಿಪರರಾಗಿರುವುದು ಸಾಧ್ಯವೇ ಇಲ್ವಾ? ಆಧುನಿಕತೆ, ಜಾಗತೀಕರಣ, ಅಭಿವೃದ್ಧಿಯ ನೆಪದಲ್ಲಿ ಪ್ರಜಾಪ್ರಭುತ್ವದ ಬೇರುಗಳು ಸಡಿಲವಾಗಿವೆ . ರಾಜಕೀಯವಾಗಲಿ ಉದ್ಯಮವಾಗಲಿ ತನ್ನ ಮಗನಿಗೇ ಉತ್ತರಾಧಿಕಾರ ; ಉಳಿದವರಿಗೆಲ್ಲ ಉತ್ತರೋತ್ತರ ಅಭಿವೃದ್ಧಿ ಕಾಣಿರೆಂಬ ಆಶೀರ್ವಾದ.

ನಾವೇ ಬೆಳೆದು ತಿಂದು ಜೀರ್ಣಿಸಿಕೊಳ್ಳುವುದಾದರೂ ಅದಕ್ಕೆ ಮತ್ತೊಬ್ಬರ ಕೃಪೆ ಬೇಕೇಬೇಕು. ಹಳ್ಳಿಯಾಗಲಿ ದಿಲ್ಲಿಯಾಗಲಿ ನಮ್ಮ ಪಾಡಿಗೆ ನಾವಿರುವುದು ಸಾಧ್ಯವಿಲ್ಲ. ಗಾಂಧಿ ಯಾವತ್ತೋ ಅಂದ ಮಾತು `ಪ್ರತಿಯೊಂದು ಹಳ್ಳಿಯೂ ಪುಟ್ಟ ಭಾರತ '-ಜಾಗತೀಕರಣದ ನಂತರದ ಈ ಕಾಂಚಾಣದ ಮಹಲಿನಲ್ಲಿ ಅಮಲಿನಲ್ಲಿ ಹೇಗೇಗೋ ಕಾಣತೊಡಗಿದೆ. ಈಗ ಎಲ್ಲವನ್ನೂ ಜೀರ್ಣಗೊಳಿಸುವ ಶಕ್ತಿ ಹೊಂದಿರುವಂಥದ್ದು ದುಡ್ಡು ಮಾತ್ರ. ಹಾಗೆಂದು ಗುಣಮಟ್ಟಕ್ಕೆ ತಕ್ಕ ದುಡ್ಡು ಕೊಡುತ್ತೇವೆ ಅನ್ನಿ , ಇಲ್ಲ ಯಾರೂ ಒಪ್ಪುವುದಿಲ್ಲ. ದುಡ್ಡಿಗೆ ತಕ್ಕ ಗುಣಮಟ್ಟದ ಸೇವೆ -ಉತ್ಪನ್ನ ಕೊಡುತ್ತೇವೆ ಅನ್ನುತ್ತಾರೆ ! ಅರ್ಥಾತ್ ಇಷ್ಟು ದುಡ್ಡಿಗೆ ಇಷ್ಟು ಗುಣಮಟ್ಟ ಅಂತ ನಿರ್ಧರಿಸುವುದು ಅವರೇ . (ಹಳ್ಳಿಯೊಂದರಲ್ಲಿರುವ ಅವರು `ಮುಕ್ಕಾಲು ಪ್ಯಾಂಟು ಡಾಕ್ಟ್ರು' ಎಂದೇ ಖ್ಯಾತರು. ಯಾವತ್ತೂ ಪ್ಯಾಂಟನ್ನು ಮೂರು ಮಡಿಕೆ ಮಡಚಿಕೊಳ್ಳುತ್ತಿದ್ದುದರಿಂದ ಆ ಹೆಸರು. ಅಂತಹ ಡಾಕ್ಟ್ರು ಕ್ಲಿನಿಕ್‌ಗೆ ಯಾವಾಗ ಬರುತ್ತಾರೆ, ಹತ್ತಿರದಲ್ಲೇ ಇರುವ ಮನೆಗೆ ಯಾವಾಗ ಹೋಗುತ್ತಾರೆ ಅಂತ ಬಹುಜನರಿಗೆ ತಿಳಿಯದಿದ್ದರೂ, ಜನ ಮಾತ್ರ ಔಷಧಕ್ಕೆಂದು ಬರುತ್ತಲೇ ಇರುತ್ತಿದ್ದರು. ಇನ್ನೊಂದೂರಿನ ಡಾಕ್ಟ್ರ ಕ್ಲಿನಿಕ್‌ನಲ್ಲಿರುವ ಕಾಂಪೌಂಡರ್ ಒಬ್ಬರು, ಸಣ್ಣಪುಟ್ಟ ಕಾಯಿಲೆಗಳವರನ್ನೆಲ್ಲ ಡಾಕ್ಟರರ ಬಳಿಗೇ ಬಿಡದೆ, ಚಕ್ಕುಲಿ ಕಟ್ಟಿಕೊಟ್ಟಂತೆ ತಾವೇ ಔಷಧ ನೀಡಿ ಕಳುಹಿಸುವವರು. ಆದರೂ ಆ ಆಸ್ಪತ್ರೆಗೆ ಬರುವವರ ಸಂಖ್ಯೆಯಲ್ಲೇನೂ ಕಡಿಮೆಯಾಗಿಲ್ಲ, ಯಾರಿಗೂ ಅಪಾಯವಾದ ಉದಾಹರಣೆಯಿಲ್ಲ. ಇವೆಲ್ಲ ಅವ್ಯವಸ್ಥೆ , ವೃತ್ತಿಪರತೆಯ ಕೊರತೆ ಅಂತಲೂ ಯಾರಿಗೂ ಅನ್ನಿಸುವುದಿಲ್ಲ. ಇಂಥವರು ಪಟ್ಟಣಗಳಲ್ಲೂ ಇರಬಹುದಲ್ಲ.)

ಆ ದೊಡ್ಡ ಜಾಹೀರಾತು ಫಲಕವೊಂದು ಎಲ್ಲರ ಗಮನ ಸೆಳೆಯುವಂತಿದೆ. `ಡು ಯು ಹ್ಯಾವ್ ಡೈಜೆಸ್ಟಿವ್ ಪ್ರಾಬ್ಲೆಮ್? -ವಿಸಿಟ್ ಕೆಜಿಸ್ ಹಾಸ್ಪಿಟಲ್ '...ಇತ್ಯಾದಿ ಘೋಷವಾಕ್ಯಗಳು. 'ಅಪ್ಪನನ್ನು ಒಮ್ಮೆ ಅಲ್ಲಿಗೆ ಕರೆದೊಯ್ದರೇನು? ಎಷ್ಟು ಖರ್ಚಾದೀತು? ಛೆ ನಮಗೆ ಸಾಧ್ಯವಾಗ್ತಾ ಇಲ್ವಲ್ಲ, ನಾಲ್ಕು ಸೈಟಿನ ಮಾವ ದುಡ್ಡು ಕೊಟ್ಟಿದ್ದರೆ ...' ಹೀಗೆಲ್ಲ ಎಷ್ಟೊಂದು ಜನ ತಮ್ಮವರ ಬಗ್ಗೆ ಯೋಚಿಸಿರಬಹುದು? ಒಂದಷ್ಟು ಜನ ಎಲ್ಲ ಜೇಬುಗಳನ್ನೂ ದಪ್ಪ ಮಾಡಿಕೊಂಡು, ಇನ್ನು ಕೆಲವರು ಭಿಕ್ಷಾಪಾತ್ರೆ ತುಂಬಿಸಿಕೊಂಡು ಹೋಗಿರಲೂಬೇಕು. ಇಲ್ಲವಾದರೆ ಅಷ್ಟು ಖರ್ಚು ಮಾಡಿ ಆ ಹೋರ್ಡಿಂಗ್ ಹಾಕಿಸಿದವರಿಗೇನು ಲಾಭ ಬಂತು ಮಣ್ಣು ?!

Read more...

June 10, 2008

ಸಂಗ್ರಹ ಬುದ್ಧಿ

'ಅರ್ಥ'ವತ್ತಾಗಿರಲಿ
ನಂದನಾ ಸೇನ್ ಮುಖ್ಯ ಭೂಮಿಕೆಯಲ್ಲಿರುವ `ರಂಗ್ ರಸಿಯಾ' (
RANG RASIYA-Colours of Passion) ಸಿನಿಮಾ, ವಿಶ್ವ ಪ್ರಸಿದ್ಧ ಕ್ಯಾನ್ಸ್ ಚಿತ್ರೋತ್ಸವದಲ್ಲಿ ಮೊನ್ನೆ ಮೊನ್ನೆ ಪ್ರದರ್ಶನಗೊಂಡಿತು. ಕಲಾವಿದ ರಾಜಾ ರವಿವರ್ಮನ ಪ್ರೇರಣಾ ಶಕ್ತಿಯಾದ ಸುಗಂಧ ಎಂಬ ದೇವದಾಸಿಯ ಪಾತ್ರವನ್ನು ಅದರಲ್ಲಿ ನಂದನಾ ಸೇನ್ ನಿರ್ವಹಿಸಿದ್ದಾಳೆ. ಆಕೆಯೊಂದಿಗೆ ಮಾತಾಡಲು ಕೇತನ್ ಮೆಹ್ತಾ ಮೊದಲ ಬಾರಿ ಅವಳ ಫ್ಲ್ಯಾಟ್‌ಗೆ ಹೋದಾಗ, ರವಿವರ್ಮಾರ ಎರಡು ದೊಡ್ಡ ಚಿತ್ರಗಳನ್ನು ನೋಡಿ ಅಚ್ಚರಿಪಟ್ಟರಂತೆ. ಸಿಕ್ಕಾಪಟ್ಟೆ ಚಿತ್ರ ಬಿಡಿಸುವ ಹುಚ್ಚಿರುವ ನಂದನಾ ಅಪರೂಪಕ್ಕೆ ಪದ್ಯಗಳನ್ನೂ ಬರೆಯುತ್ತಾಳಂತೆ.
ಬಾಲಿವುಡ್ ಮುಖ್ಯವಾಹಿನಿಯಿಂದ ದೂರವಿರುವ ಆದರೆ ಮುಖ್ಯವಾಹಿನಿ, ಕಮರ್ಷಿಯಲ್, ಕಲಾತ್ಮಕ ಎನ್ನುವುದೆಲ್ಲಾ ಇಲ್ಲ ಎನ್ನುವ ಈಕೆ ಯಾರು ಗೊತ್ತೆ? ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯಸೇನ್ ಮಗಳು !` ಸಿನಿಮಾ ಎಂಬುದು ಜನರು ಬಯಸಿದ್ದನ್ನು ಕೊಡುವ ಮಾಧ್ಯಮ. ಪ್ರೇಕ್ಷಕರ ಪ್ರೀತಿಗೆ ಪಾತ್ರವಾಗುವುದಕ್ಕೆ,, ಅವರಲ್ಲಿ ಆಸೆ ಹುಟ್ಟಿಸುವುದಕ್ಕಿರುವ ಬಾಡಿಗೆ ವ್ಯಕ್ತಿಗಳೇ ನಟರು !' ಅಂತಾಳೆ ಈಕೆ .

ಬಚ್ಚನ್ ಬಚಾವ್

ಪೂಜೆಗಾಗಿ ದೇವಾಲಯಕ್ಕೆ ಹೋಗುವುದು ಸಾಂವಿಧಾನಿಕವಾಗಿಯೂ ವೈಯಕ್ತಿಕ ವಿಚಾರ. ಅದು ಸಾರ್ವಜನಿಕರಿಗೆ ತಿಳಿಯಬೇಕೆಂಬುದೂ ನನ್ನ ಉದ್ದೇಶವಾಗಿರಲಿಲ್ಲ. ಹಾಗಿದ್ದೂ ಆ ಬಗ್ಗೆ ಸಂದೇಹ ಪಡುವುದಕ್ಕೆ ಮಾಧ್ಯಮದವರಿಗೆ ಹಕ್ಕಿದೆ. ನಾನದನ್ನು ಒಪ್ಪ ಬಹುದು ಅಥವಾ ಒಪ್ಪದಿರಬಹುದು. ಆದರೆ ಎಲ್ಲವನ್ನೂ ತಿಳಿಸಬೇಕೆನ್ನುವ ಮಾಧ್ಯಮದವರ ಹಕ್ಕಿಗಾಗಿ ನಾನು ಬದುಕಿನ ಜತೆ ಹೋರಾಡಲೇಬೇಕಾಗಿದೆ !' ಹೀಗೆ ಮಾಧ್ಯಮಗಳಿಗೆ ಟಾಂಗ್ ಕೊಟ್ಟವರು ನಟ ಅಮಿತಾಬ್ ಬಚ್ಚನ್. ಅವರು ಇತ್ತೀಚೆಗೆ ಮಗ-ಸೊಸೆ ಜತೆಗೆ, ಮುಂಬಯಿಯ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಬೆಳಬೆಳಗ್ಗೆ ಪಾದಯಾತ್ರೆ ಮಾಡಿದ್ದರು . ಆ ಸಂದರ್ಭದಲ್ಲಿ ಸಾಮಾನ್ಯ ಜನರಿಗೆ ಪ್ರವೇಶ ನಿಷೇಧಿಸಿ, ಹಲವರು ಪರದಾಡಿದ್ದು ಮಾಧ್ಯಮಗಳಿಗೆ ಗ್ರಾಸವಾಯಿತು. `ಬಿಗ್‌ಅಡ್ಡಾ'ದಲ್ಲಿ ಬ್ಲಾಗಿಂಗ್ ಶುರು ಮಾಡಿರುವ ಅಮಿತಾಬ್ ಆ ಬಗ್ಗೆ ಸೊಗಸಾಗಿ ಉತ್ತರಿಸಿರುವುದು ನಟನ ಮೇಲಿನ ಪ್ರೀತಿ ಹೆಚ್ಚಿಸುವಂತಿದೆ.

Read more...

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP