June 12, 2008

ನಮಗಾಗಿ ಬದುಕುವವರ ಮಧ್ಯೆ ಜೀವ ಕೈಲಿ ಹಿಡಿದು...!

ದುವೆ ಆಲ್ಬಮ್‌ನ ಒಂದೊಂದೇ ಪುಟ ತಿರುವಿ, ದೃಶ್ಯ-ವ್ಯಕ್ತಿಗಳನ್ನು ವರ್ಣಿಸುವಂತೆ ಆತ ಹೇಳುತ್ತಿದ್ದ. ಫಳಫಳ ಹೊಳೆವ ದಪ್ಪ ಕಾಗದದ ಪುಟಗಳಲ್ಲಿ....ಬಣ್ಣ ಬಣ್ಣದ ಮಾತ್ರೆಗಳ ಫೋಟೊ, ವಿವರಣೆ ! ಡಾಕ್ಟರು ಸುಮ್ಮನೆ ಆಲಿಸುತ್ತಿದ್ದರು. ಯಾವುದೋ ಸ್ಕೀಮುಗಳ ವಿವರಣೆ ಕೊಡುವವರು, ಮನೆ ಬಾಗಿಲಿಗೆ ಪಾತ್ರೆಪಗಡಿ ಮಾರಿಕೊಂಡು ಬರುವವರಷ್ಟೇ ಚಾಲಾಕಿತನದಿಂದ ನಾಲಗೆ ಹೊರಳಿಸುತ್ತಿದ್ದ. ಈ ಮಾತ್ರೆ ಇಷ್ಟು ತಗೊಂಡ್ರೆ ಅಷ್ಟು ಸಿರಪ್ ಬಾಟಲಿ ಫ್ರೀ ಅಂತೆಲ್ಲ ಹೇಳುತ್ತಿದ್ದಾನೆಂದೇ ಅನ್ನಿಸಿತು. ಇಂಥವರನ್ನು ನಾವು ನೋಡೇ ಇರಲಿಲ್ಲ ಅಂತಲ್ಲ. ಆದರೆ ಪಕ್ಕದ ಕೋಣೆಯಲ್ಲೇ ಮೈ ಕೈಗೆ ಪೈಪು, ಸೂಜಿ ಸಿಕ್ಕಿಸಿಕೊಂಡು ಮಲಗಿರುವ ಅಪ್ಪನನ್ನು ನೋಡಿ ಮನಸ್ಸು ಹಿಂಜಿಕೊಂಡು ಬಂತು. ಬಂದ 'ಔಷಧಲೋಲ' ಸ್ಯಾಂಪಲ್‌ಗೆ ಅಂತ ಒಂದೆರಡು ಮುಲಾಮುಗಳನ್ನೂ ಡಾಕ್ಟರ ಮೇಜಿನಲ್ಲಿ ಬಿಟ್ಟು ಹೊರಟುಹೋದ. ಡಾಕ್ಟರು ಟ್ಯೂಬನ್ನು ಕೊಂಚ ಹಿಚುಕಿ, ನೆಕ್ಕಿ ನೋಡುತ್ತಿರುವ ದೃಶ್ಯ ಕಣ್ಣೆದುರು ಬಂದಂತಾಯಿತು.

ನಮ್ಮ ವಿದ್ಯಾಭ್ಯಾಸ, ನಮ್ಮ ಆರೋಗ್ಯ, ಮನರಂಜನೆ, ಆಹಾರ ಪ್ರತಿಯೊಂದರ ಬಗ್ಗೆಯೂ ಈಗ ಹಲವರಿಗೆ ಕಾಳಜಿ. ಗರ್ಭಿಣಿಯರಿಗೆ `ಡೆಲಿವರಿ ಪ್ಯಾಕೇಜ್'ಗಳೂ ರೂ.೪೩ ಸಾವಿರದಿಂದ ಆರಂಭ. ಹುಟ್ಟಿನಿಂದ ಸಾಯುವವರೆಗೂ, ಪರರಿಗಾಗಿಯೇ ಬದುಕುವವರಿಗೆ ಕೊರತೆಯಿಲ್ಲ ! ನಮ್ಮ ಸೇವೆಗೆಂದು ಸದಾ ಸಿದ್ಧವಾಗಿರುವ ಸಂಗತಿಗಳ ಕೆಲವು ತಾಜಾ ಸ್ಯಾಂಪಲ್ ಓದಿ : ಮೈಸೂರು ರಸ್ತೆಯ ಬಣ್ಣಗೆಟ್ಟ ಕಾಂಪೌಂಡುಗಳ ಉದ್ದಕ್ಕೂ ನೀಲಿ ಯೂನಿಫಾರ್ಮ್ ತೊಟ್ಟ ಹುಡುಗ ಹುಡುಗಿಯರಿಬ್ಬರ ಪೋಸ್ಟರ್‌ಗಳು. ಟೆಂತ್ ಕ್ಲಾಸ್ ಸಿನಿಮಾ ಪೋಸ್ಟರ್ ಅಲ್ಲಾರೀ...ಯಾವುದೋ ಸ್ಕೂಲಿನ ಜಾಹೀರಾತು ಪೋಸ್ಟರ್ ಅದು ! ಆ ಹುಡುಗ-ಹುಡುಗಿಯರ ಪಕ್ಕದಲ್ಲಿ, ಶಾಲೆಯಲ್ಲಿರುವ ಸೌಲಭ್ಯಗಳ ದ್ಯೋತಕವಾಗಿ ವ್ಯಾನು, ಈಜುಕೊಳ, ಕಂಪ್ಯೂಟರ್ ಇತ್ಯಾದಿಯ ಸಣ್ಣ ಸಣ್ಣ ಫೋಟೊಗಳು. ಪೋಸ್ಟರ್‌ನ ಕೆಳಭಾಗದಲ್ಲಿ ಶಾಲಾ ಮ್ಯಾನೇಜ್‌ಮೆಂಟ್ ಅಧ್ಯಕ್ಷನ ಫೋಟೊ. ಮರದ ಮೇಲೆ, ಅಂಗಡಿ ಗೋಡೆಯ ಮೇಲೆ, ಶೂರ ಗಂಡಸರು ಉಚ್ಚೆ ಹೊಯ್ಯುವಲ್ಲಿ ಪೋಸ್ಟರ್‌ಗಳೇ ಪೋಸ್ಟರ್‌ಗಳು. ಮಲೆನಾಡಿನ ಪಟ್ಟಣವೊಂದರಲ್ಲಿನ ಪುಟ್ಟ ಗಣಪತಿ ದೇವಸ್ಥಾನ. ಗರ್ಭಗುಡಿಯ ಬಾಗಿಲ ಪಕ್ಕದಲ್ಲೇ ದಪ್ಪ ಅಕ್ಷರಗಳಲ್ಲಿ ಬೋರ್ಡು `ಪ್ರಧಾನ ಅರ್ಚಕರು- ಗಣಪತಿ ಭಟ್-ಮೊಬೈಲ್ ಸಂಖ್ಯೆ 'ಹೀಗೆ . ಛೆ, ದೇವರ ನಂಬರ್ ಕೊಟ್ಟಿದ್ದರೆ ಅಂತ ಅನ್ನಿಸದಿರಲಿಲ್ಲ. ಹೊರಗೆ ಬಂದು ಸುಮ್ಮನೆ ಆ ನಂಬರಿಗೆ ಕರೆ ಮಾಡಿದರೆ `ಪೂಜೇಲಿದ್ದೀನ್ರೀ...ಏನು ಸೇವೆ ಆಗಬೇಕಾ...ಎಷ್ಟು ರೂಪಾಯಿದು?...ಇಲ್ಲಿಯವರಾ ಹೊರಗಿನವ್ರಾ?...ಮಧ್ಯಾಹ್ನ ೩ರ ನಂತ್ರ ಮಾಡಿ' ಹೀಗೆ ನಾನಾ ಪ್ರಶ್ನೋತ್ತರಗಳು !

ಕಮರ್ಷಿಯಲ್ ಆಗಬೇಕಾದರೆ ಪ್ರೊಫೆಷನಲ್ ಆಗಿರಬೇಕೇನೋ. ಆದರೆ ಪ್ರೊಫೆಷನಲ್ ಆಗಲು ಕಮರ್ಷಿಯಲ್ ಆಗಲೇಬೇಕೆ? ಪೋಲಿಯೊ ಹನಿ, ಏಡ್ಸ್ ಎಚ್ಚರಿಕೆ ಅಭಿಯಾನ ಹೀಗೆ ದೊಡ್ಡ ಕಾಯಿಲೆ - ಪರಿಹಾರೋಪಾಯಗಳ ಸುತ್ತವೇ ಸುಳಿಯುತ್ತಿರುವ ವಿವಾದಗಳ ಬಗ್ಗೆ , ಔಷಧ ಕಂಪನಿಗಳ ಸೈಡ್ ಎಫೆಕ್ಟ್‌ಗಳ ಬಗ್ಗೆ ವಿವರಿಸುವವರಾರು? ಶಾಲೆಗಳು (ಶಿಕ್ಷಣ)- ಆಸ್ಪತ್ರೆಗಳು(ಆರೋಗ್ಯ)- ಕಟ್ಟಡಗಳು (ಆಶ್ರಯ), ಆಹಾರ - ಇಂತಹ ಮೂಲ ಅವಶ್ಯಕತೆಗಳ ಜವಾಬ್ದಾರಿಯನ್ನೂ ಯಾವಾಗ ಸರಕಾರ (ಅಂದರೆ ಜನ ಕೂಡಾ)ತನ್ನ ಭುಜದಿಂದ ಕೊಡವಿಕೊಂಡಿತೋ ,ಸಾಮಾನ್ಯ ಜನರ ಬದುಕು ಚಿತ್ರಾನ್ನವಾಯಿತು. ದುಡ್ಡಿದ್ದರೆ ಮಾತ್ರ ಗುಣಮಟ್ಟ ಅನ್ನೋ ಸಿದ್ಧ ಅಸ್ತ್ರ ಎಲ್ಲರ ಕೈಗೂ ಬಂತು. ಅದು ಗುಣಮಟ್ಟವಿಲ್ಲದಿದ್ದರೂ ದುಡ್ಡು ಅನ್ನುವವರೆಗೆ ಬಂದು ನಿಂತಿತು. ಈಗ ಎಲ್ಲ ಹಾಳಾಗಿದೆ ಅಂತಲ್ಲ. ಹಾ -'ದುಡ್ಡಿನ ಮುಖ ನೋಡೋದು ಅನಿವಾರ್ಯವಾಗಿದೆ ಸ್ವಾಮೀ ! ಎಲ್ಲ ಚೇಂಜ್ ಆಗಿದೆಯಲ್ಲ ' ಅಂತನ್ನೋದು ಸುಲಭವಾಗಿದೆ. ವಾಹನಗಳು ಬಂದು ಬೇಗ ತಲುಪುವುದಕ್ಕಾಗಿದೆಯೆ? ಫೋನ್‌ಗಳು ಮನೆಮನೆಗೆ ಬಂದು ಓಡಾಟ ಕಡಿಮೆಯಾಗಿದೆಯೆ? ಸಮಯ-ಶ್ರಮ-ಆರೋಗ್ಯಗಳೆಲ್ಲ ನಮ್ಮನ್ನ ಸಂತಸವಾಗಿಡುವಂತಿವೆಯಾ? ನಮ್ಮ ಆಸ್ಪತ್ರೆ, ಅಂಗಡಿ-ಹೋಟೆಲು, ಬಹುಮಹಡಿ ಶಾಲೆಗಳು ಏನು ಮಾಡುತ್ತಿವೆ ಎಂಬುದು ಪ್ರತಿಯೊಬ್ಬರ ಅನುಭವಕ್ಕೂ ಬಂದಿದೆ. ದುಡ್ಡಿಗೆ ದಾಸರಾಗದೆ ವೃತ್ತಿಪರರಾಗಿರುವುದು ಸಾಧ್ಯವೇ ಇಲ್ವಾ? ಆಧುನಿಕತೆ, ಜಾಗತೀಕರಣ, ಅಭಿವೃದ್ಧಿಯ ನೆಪದಲ್ಲಿ ಪ್ರಜಾಪ್ರಭುತ್ವದ ಬೇರುಗಳು ಸಡಿಲವಾಗಿವೆ . ರಾಜಕೀಯವಾಗಲಿ ಉದ್ಯಮವಾಗಲಿ ತನ್ನ ಮಗನಿಗೇ ಉತ್ತರಾಧಿಕಾರ ; ಉಳಿದವರಿಗೆಲ್ಲ ಉತ್ತರೋತ್ತರ ಅಭಿವೃದ್ಧಿ ಕಾಣಿರೆಂಬ ಆಶೀರ್ವಾದ.

ನಾವೇ ಬೆಳೆದು ತಿಂದು ಜೀರ್ಣಿಸಿಕೊಳ್ಳುವುದಾದರೂ ಅದಕ್ಕೆ ಮತ್ತೊಬ್ಬರ ಕೃಪೆ ಬೇಕೇಬೇಕು. ಹಳ್ಳಿಯಾಗಲಿ ದಿಲ್ಲಿಯಾಗಲಿ ನಮ್ಮ ಪಾಡಿಗೆ ನಾವಿರುವುದು ಸಾಧ್ಯವಿಲ್ಲ. ಗಾಂಧಿ ಯಾವತ್ತೋ ಅಂದ ಮಾತು `ಪ್ರತಿಯೊಂದು ಹಳ್ಳಿಯೂ ಪುಟ್ಟ ಭಾರತ '-ಜಾಗತೀಕರಣದ ನಂತರದ ಈ ಕಾಂಚಾಣದ ಮಹಲಿನಲ್ಲಿ ಅಮಲಿನಲ್ಲಿ ಹೇಗೇಗೋ ಕಾಣತೊಡಗಿದೆ. ಈಗ ಎಲ್ಲವನ್ನೂ ಜೀರ್ಣಗೊಳಿಸುವ ಶಕ್ತಿ ಹೊಂದಿರುವಂಥದ್ದು ದುಡ್ಡು ಮಾತ್ರ. ಹಾಗೆಂದು ಗುಣಮಟ್ಟಕ್ಕೆ ತಕ್ಕ ದುಡ್ಡು ಕೊಡುತ್ತೇವೆ ಅನ್ನಿ , ಇಲ್ಲ ಯಾರೂ ಒಪ್ಪುವುದಿಲ್ಲ. ದುಡ್ಡಿಗೆ ತಕ್ಕ ಗುಣಮಟ್ಟದ ಸೇವೆ -ಉತ್ಪನ್ನ ಕೊಡುತ್ತೇವೆ ಅನ್ನುತ್ತಾರೆ ! ಅರ್ಥಾತ್ ಇಷ್ಟು ದುಡ್ಡಿಗೆ ಇಷ್ಟು ಗುಣಮಟ್ಟ ಅಂತ ನಿರ್ಧರಿಸುವುದು ಅವರೇ . (ಹಳ್ಳಿಯೊಂದರಲ್ಲಿರುವ ಅವರು `ಮುಕ್ಕಾಲು ಪ್ಯಾಂಟು ಡಾಕ್ಟ್ರು' ಎಂದೇ ಖ್ಯಾತರು. ಯಾವತ್ತೂ ಪ್ಯಾಂಟನ್ನು ಮೂರು ಮಡಿಕೆ ಮಡಚಿಕೊಳ್ಳುತ್ತಿದ್ದುದರಿಂದ ಆ ಹೆಸರು. ಅಂತಹ ಡಾಕ್ಟ್ರು ಕ್ಲಿನಿಕ್‌ಗೆ ಯಾವಾಗ ಬರುತ್ತಾರೆ, ಹತ್ತಿರದಲ್ಲೇ ಇರುವ ಮನೆಗೆ ಯಾವಾಗ ಹೋಗುತ್ತಾರೆ ಅಂತ ಬಹುಜನರಿಗೆ ತಿಳಿಯದಿದ್ದರೂ, ಜನ ಮಾತ್ರ ಔಷಧಕ್ಕೆಂದು ಬರುತ್ತಲೇ ಇರುತ್ತಿದ್ದರು. ಇನ್ನೊಂದೂರಿನ ಡಾಕ್ಟ್ರ ಕ್ಲಿನಿಕ್‌ನಲ್ಲಿರುವ ಕಾಂಪೌಂಡರ್ ಒಬ್ಬರು, ಸಣ್ಣಪುಟ್ಟ ಕಾಯಿಲೆಗಳವರನ್ನೆಲ್ಲ ಡಾಕ್ಟರರ ಬಳಿಗೇ ಬಿಡದೆ, ಚಕ್ಕುಲಿ ಕಟ್ಟಿಕೊಟ್ಟಂತೆ ತಾವೇ ಔಷಧ ನೀಡಿ ಕಳುಹಿಸುವವರು. ಆದರೂ ಆ ಆಸ್ಪತ್ರೆಗೆ ಬರುವವರ ಸಂಖ್ಯೆಯಲ್ಲೇನೂ ಕಡಿಮೆಯಾಗಿಲ್ಲ, ಯಾರಿಗೂ ಅಪಾಯವಾದ ಉದಾಹರಣೆಯಿಲ್ಲ. ಇವೆಲ್ಲ ಅವ್ಯವಸ್ಥೆ , ವೃತ್ತಿಪರತೆಯ ಕೊರತೆ ಅಂತಲೂ ಯಾರಿಗೂ ಅನ್ನಿಸುವುದಿಲ್ಲ. ಇಂಥವರು ಪಟ್ಟಣಗಳಲ್ಲೂ ಇರಬಹುದಲ್ಲ.)

ಆ ದೊಡ್ಡ ಜಾಹೀರಾತು ಫಲಕವೊಂದು ಎಲ್ಲರ ಗಮನ ಸೆಳೆಯುವಂತಿದೆ. `ಡು ಯು ಹ್ಯಾವ್ ಡೈಜೆಸ್ಟಿವ್ ಪ್ರಾಬ್ಲೆಮ್? -ವಿಸಿಟ್ ಕೆಜಿಸ್ ಹಾಸ್ಪಿಟಲ್ '...ಇತ್ಯಾದಿ ಘೋಷವಾಕ್ಯಗಳು. 'ಅಪ್ಪನನ್ನು ಒಮ್ಮೆ ಅಲ್ಲಿಗೆ ಕರೆದೊಯ್ದರೇನು? ಎಷ್ಟು ಖರ್ಚಾದೀತು? ಛೆ ನಮಗೆ ಸಾಧ್ಯವಾಗ್ತಾ ಇಲ್ವಲ್ಲ, ನಾಲ್ಕು ಸೈಟಿನ ಮಾವ ದುಡ್ಡು ಕೊಟ್ಟಿದ್ದರೆ ...' ಹೀಗೆಲ್ಲ ಎಷ್ಟೊಂದು ಜನ ತಮ್ಮವರ ಬಗ್ಗೆ ಯೋಚಿಸಿರಬಹುದು? ಒಂದಷ್ಟು ಜನ ಎಲ್ಲ ಜೇಬುಗಳನ್ನೂ ದಪ್ಪ ಮಾಡಿಕೊಂಡು, ಇನ್ನು ಕೆಲವರು ಭಿಕ್ಷಾಪಾತ್ರೆ ತುಂಬಿಸಿಕೊಂಡು ಹೋಗಿರಲೂಬೇಕು. ಇಲ್ಲವಾದರೆ ಅಷ್ಟು ಖರ್ಚು ಮಾಡಿ ಆ ಹೋರ್ಡಿಂಗ್ ಹಾಕಿಸಿದವರಿಗೇನು ಲಾಭ ಬಂತು ಮಣ್ಣು ?!

3 comments:

ಸಿಂಧು sindhu June 19, 2008 at 10:26 AM  

ಸುಧನ್ವ,

ತುಂಬ ಒಳ್ಳೆಯ ಬರಹ. ಯೋಚನೆಯ ತರಂಗಗಳನ್ನೆಬ್ಬಿಸುತ್ತಿದೆ.

ಪ್ರೀತಿಯಿಂದ
ಸಿಂಧು

Anonymous,  June 20, 2008 at 10:38 AM  

ಸ್ವಲ್ಪ ಅಡೆತಡೆಗಳು ಬಂದು ಬ್ಲಾಗಿಂಗ್ ನಿಧಾನವಾಗಿದೆ. ಅಕ್ಷರಗಳ ಅಂತರ ಹೆಚ್ಚಿದೆ. ಆದರೂ ಚಂಪಕಾವತಿಗೆ ಬಂದು ಹೆಜ್ಜೆಯೂರಿ ಹೋದದ್ದಕ್ಕೆ ಥ್ಯಾಂಕ್ಸ್ ಸಿಂಧು.
- ಚಂ

Sharath Akirekadu June 25, 2008 at 10:30 PM  

Ninna observation mecchha takkaddu...

Regards
Sharath

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP