September 21, 2007

ನಮ್ಮಯ ಸವಾರಿ ಊರಿಗೆ ಹೋದದ್ದು...

(ಇದೊಂಥರಾ ಬರವಣಿಗೆಯ ತಾಲೀಮು. ಈ ದಿನಚರಿಯನ್ನು ಹೀಗೆ ಎಷ್ಟೂ ಬರೆಯುತ್ತಾ ಹೋಗಬಹುದು. ಒಂದುವೇಳೆ, ನಿಮ್ಮ ಈವತ್ತಿನ ದಿನಚರಿಯೂ ಓದುವುದೇ ಆಗಿದ್ದರೆ...ಮತ್ತೇನು ? ಓದಿಕೊಳ್ಳಿ ! )

ಒಂದು ಅಸಡ್ಡಾಳ ಓರೆ ನಗೆ. ಮೆಜೆಸ್ಟಿಕ್‌ನಲ್ಲಿ ಕಂಡ ಮುಖಕ್ಕೆ ನನ್ನ ಪರಿಚಯ ಹತ್ತಿದಂತಿದೆ. ಮಹಾನಗರವನ್ನು ನಿರ್ಲಕ್ಷಿಸಬಲ್ಲ ನಿಲುವು. ನನ್ನೆಡೆಗೆ ಎರಡ್ಹೆಜ್ಜೆ ಹಾಕಿ ಗಕ್ಕನೆ ನಿಂತಿದ್ದಾನೆ. ಇನ್ನು ಅವನಿಗೆ ದಿವ್ಯ ನಿರ್ಲಕ್ಷ್ಯವೊಡ್ಡಿ ಕೈ ಬೀಸಿಕೊಂಡು ಸಾಗುವುದು ಕಷ್ಟ. ಒಂದು ವೇಳೆ ಹಾಗೆ ಹೊರಟರೂ, ಕೈಹಿಡಿದೆಳೆದು ನಿಲ್ಲಿಸಿದರೆ...? ಎತ್ತಿದ್ದ ಸೂಟ್‌ಕೇಸ್, ಬ್ಯಾಗುಗಳನ್ನು ಕುಕ್ಕಿ, ಬೆಂಚಿನ ಮೇಲೆ ಕುಂಡೆಯೂರಿದರೆ...ಆ ಪಾಪಾತ್ಮ ಎತ್ತಲೋ ನೋಡುತ್ತ ಗಮನವನ್ನೆಲ್ಲ ಇತ್ತಲೇ ಇಟ್ಟಂತಿದೆ. ಅವನ ಭಂಗಿಗಳಲ್ಲೂ ಬಲವಿದೆ. ಎಲ್ಲೋ ನೋಡಿದ, ಮಾತನಾಡಿದ ನೆನಪು ತೀರ ಅಸ್ಪಷ್ಟ .

ಎದ್ದು ನಡೆವ ಎಂದರೆ...ಮತ್ತೆ ತಿರುಗಿ ಮಕಮಕ ನೋಡುತ್ತಾನೆ, ಸೂಳೇ ಮಗ. ಕಳ್ಳನೋ,ಸುಳ್ಳನೋ, ಗೆಳೆಯನೋ,ಬಂಧುವೋ ಅಂತ ನಿರ್ಧರಿಸುವುದು ಕಷ್ಟ. ಎದ್ದು ನಡೆದರಾಯಿತು, ಈ ಜನ ಸಾಗರದ ಮಧ್ಯೆ ಭಯವೇನು ? ಎದ್ದು ನಡೆವ ಎಂದರೆ ಕಾಲು ಕಟ್ಟಿದಂತಾಗಿದೆ. ಥತ್, ಬುದ್ಧಿಗೆ ಮಂಕು ಬಡಿದಂತಿದೆ.

ಬೆಂಗಳೂರಿನ ಮುಖ್ಯ ಬಸ್ ನಿಲ್ದಾಣ ಮೆಜೆಸ್ಟಿಕ್‌ನ ರಾತ್ರಿ ಹತ್ತರ ಆ ಜನ ಜಂಗುಳಿಯಲ್ಲಿ ಸಿಕ್ಕಿದ ಮನುಷ್ಯ ನಮ್ಮ ಸುಳ್ಯ ತಾಲೂಕಿನವರೇ ! "ಕೃಷಿ ಮೇಳ ನೋಡುವ ಅಂತ ನಾನು-ಫ್ರೆಂಡ್ ಬೈಕ್ನಲ್ಲಿ ಬೆಳಗ್ಗೆ ೪ ಗಂಟೆಗೆ ಊರಿಂದ ಹೊರಟು ಮಧ್ಯಾಹ್ನ ತಲುಪಿದೆವು. ಮೇಳ ಅಷ್ಟೇನೂ ಚೆನ್ನಾಗಿರಲಿಲ್ಲ. ಅವನು ಏನೋ "ಕೆಲಸ’ ಇದೆ ಅಂತ ಇಲ್ಲಿ ಉಳಿದುಕೊಂಡಿದ್ದಾನೆ. ಹಾಗಾಗಿ ನಾನೀಗ ಬಸ್ಸಿಗೆ ಹೊರಟದ್ದು’ ಎಂದರು. ಅಷ್ಟೇ ಆಗಿದ್ದರೆ ಅಂತಹ ಆಶ್ಚರ್‍ಯವೇನೂ ಇರಲಿಲ್ಲ. ಆದರೆ..."ನಾನೊಂದು ಯಕ್ಷಗಾನ ತಂಡ ಮಾಡಬೇಕು ಅಂತಿದ್ದೇನೆ. ಬೆಂಗಳೂರಿನಲ್ಲಿ ಒಳ್ಳೆಯ ಪ್ರೋತ್ಸಾಹ, ಕಾರ್‍ಯಕ್ರಮ ಸಿಗಬಹುದು ಅಂತ ನನ್ನ ಲೆಕ್ಕಾಚಾರ. ಪ್ರಾಯೋಜಕರು ಯಾರಾದ್ರೂ ನಿಮಗೆ ಗೊತ್ತಾ?’ ಅನ್ನಬೇಕೇ ! ಯಕ್ಷಗಾನವೂ ಉಳಿದು ಬೆಳೆಯಲು ಬೆಂಗಳೂರೇ ಆಗಬೇಕೇ?

ಸಾಂಸ್ಕೃತಿಕ ವಲಸೆ ?
ಸಕಲೇಶಪುರದ ರಂಗಕರ್ಮಿ ಪ್ರಸಾದ್ ರಕ್ಷಿದಿಯವರು ಹೇಳಿದ್ದು ಬಸ್‌ನಲ್ಲಿ ಕುಳಿತಾಗ ನೆನಪಾಯಿತು- "ಇಲ್ಲಿ ನಾವೊಂದು ರಂಗತಂಡವನ್ನು ಕಟ್ಟುವುದೇ ಕಷ್ಟವಾಗಿದೆ. ಪ್ರತಿವರ್ಷ ಮೂರ್‍ನಾಲ್ಕು ಕಲಾವಿದರು ಬೆಂಗಳೂರು ಪಾಲಾಗುತ್ತಿದ್ದಾರೆ. ಪತ್ರಿಕೆ, ಟಿವಿ ಮಾಧ್ಯಮಗಳಿಗೆ ಬಹಳಷ್ಟು ಜನ ಸೇರಿಕೊಳ್ಳುತ್ತಿದ್ದಾರೆ. ಒಬ್ಬಿಬ್ಬರು ಬಹಳ ಹಳೆಯ ಕಲಾವಿದರನ್ನು ಬಿಟ್ಟರೆ ಪ್ರತಿವರ್ಷದ ನಮ್ಮ ನಾಟಕಕ್ಕೆ ಹೊಸಬರನ್ನೇ ಹುಡುಕಬೇಕು’.

ಓದಿ ಕಲಿತು ಉದ್ಯೋಗ ಅರಸುತ್ತಾ ಈ ಮಹಾನಗರ ಪಾಲಾಗುವ ತರುಣರ ಜತೆಗೆ ಒಂದು "ಸಾಂಸ್ಕೃತಿಕ ವಲಸೆ’ಯೂ ನಡೆಯುತ್ತಿದೆಯೇ? ಎಲ್ಲ ಅಕಾಡೆಮಿಗಳ ಹೆಡ್ಡಾಫೀಸು, ಸಂಸ್ಕೃತಿ ಇಲಾಖೆಯ ಭಂಡಾರ ಬೆಂಗಳೂರಲ್ಲಿದೆ. ಬೇಕಾಬಿಟ್ಟಿ ಪತ್ರಿಕೆ, ಟಿವಿ ಮಾಧ್ಯಮಗಳಿವೆ. ಸುವರ್ಣ ಮಂತ್ರಾಕ್ಷತೆ ನೀಡಬಲ್ಲ ಕಂಪನಿಗಳು-ದೊಡ್ಡ ಕುಳಗಳು ಇದ್ದಾವೆ. ಹೀಗಾಗಿ ಹಳ್ಳಿಯ ಕಲಾವಿದರು-ಬರೆಹಗಾರರು ಕೂಡಾ ಬೆಂಗಳೂರು ಸೇರುತ್ತಿದ್ದಾರೆಯೇ?

ಊರಿನ ಶಾಲೆಗಳ ವಾರ್ಷಿಕೋತ್ಸವಗಳು ಎಸ್‌ಡಿಎಂಸಿ ರಾಜಕೀಯದಲ್ಲಿ ನರಳಿ ನಿಂತುಹೋಗಿವೆ. ದೇವಸ್ಥಾನದ ಜಾತ್ರೋತ್ಸವಗಳು ಕೇಸರೀಕರಣಗೊಂಡು ಜಡವಾಗಿವೆ. ಮನೆ ಮನೆ ಗೋಷ್ಠಿ ಮಾಡೋಣ ಅಂದರೆ ಹಲವರು ನಾನಾ ಕಾರಣಕ್ಕೆ ಮಾತು ಬಿಟ್ಟಾಗಿದೆ. ಸಾಹಿತ್ಯ ಪರಿಷತ್ ಅಂತೂ ಅಬ್ಬೇಪಾರಿಗಳ ವಶವಾಗಿ ತಾಲೂಕು ಸಾಹಿತ್ಯ ಸಮ್ಮೇಳನವೆಂಬುದು ಅಜ್ಜನ ತಿಥಿಗಿಂತಲೂ ಖರಾಬ್ ಆಗಿದೆ. ಉದ್ಯೋಗ ಹಿಡಿಯಲಷ್ಟೇ ಕೆಚ್ಚೆದೆಯಿಂದ ಓದುವ ಹಾಗೂ ಪೋಲಿ ತಿರುಗುವ ಎರಡು ಗುಂಪುಗಳ ಚಟುವಟಿಕೆಗೆ ಕಾಲೇಜುಗಳು ಸೀಮಿತವಾಗಿವೆ. ಇನ್ನೊಂದೆಡೆ ಬೆಳೆದದ್ದೆಲ್ಲ ಕೈಕೊಡುತ್ತಿದೆ. ಕೂಲಿಗೆ ಜನ ಸಿಗದೆ, ಅಗತ್ಯ ವಸ್ತುಗಳ ಬೆಲೆ ಏರಿ ಬೆಳೆಗಾರರು ಕಂಗಾಲಾಗಿದ್ದಾರೆ. ಇನ್ನು ಸಾಂಸ್ಕೃತಿಕ ಪ್ರಜ್ಞೆಯಾದರೂ ಎಲ್ಲಿಂದ ಬರಬೇಕು ಪ್ರಭೂ?

ಹೀಗಾಗಿ, ಬದುಕಿ ಉಳಿದರೆ ಬೇಡಿ ತಿಂದೇನು ಅಂತ ಜನ ಮಹಾನಗರಗಳತ್ತ ಮುಖ ಮಾಡಿದ್ದಾರೆ. "ಒಂಚೂರು ಬರೆಯಲು, ನಟಿಸಲು, ಚಿತ್ರ ಬಿಡಿಸಲು, ಡ್ಯಾನ್ಸ್ ಮಾಡಲು, ಹಾಡು ಹೇಳಲು...ಹೀಗೇ ಏನಾದರೂ ಗೊತ್ತಿದ್ದರೆ ಸಾಕು. (ಅಥವಾ ಚೂರುಪಾರು ಇಂಗ್ಲಿಷ್ ಬರುತ್ತದೆಂದರೆ ಅದರ ಮಜಾ, ಗತ್ತೇ ಬೇರೆ)ಸ್ವಲ್ಪ ಕಾಂಟಾಕ್ಟ್ ಬೆಳೆಯುವವರೆಗಷ್ಟೆ . ಆಮೇಲೆ ದುಡ್ಡೇ ದುಡ್ಡು’ ಅನ್ನುವುದು ಹಲವು ಯುವ ಪ್ರತಿಭಾವಂತರ ಅಂಬೋಣ ! ಹಾಗಂತ ಹಳ್ಳಿಯಲ್ಲಿ ಏನೂ ನಡೆಯುತ್ತಿಲ್ಲ ಅಂತಲ್ಲ. ಆದರೆ ಮೊದಲಿನ ಗುಣಮಟ್ಟ ಯಾವ ಕಾರ್‍ಯಕ್ರಮಗಳಲ್ಲೂ ಕಾಣುವುದಿಲ್ಲ. ಭಾಷಣಕಾರರು, ಕಾರ್‍ಯಕ್ರಮ ನಿರ್ವಾಹಕರು, ನಾಟಕದ ನಟ-ನಿರ್ದೇಶಕರು, ಯಕ್ಷಗಾನ ಕಲಾವಿದರು, ಬರೆಹಗಾರರು-ಊಹೂಂ ಫಸ್ಟ್‌ಕ್ಲಾಸ್ ಎನ್ನಬಹುದಾದಂಥವರನ್ನು ಹುಡುಕಿಹುಡುಕಿ ಸುಸ್ತಾಗುವುದು ಮಾತ್ರ. ಕೆಲವು ಹಳಬರು ಮಣಮಣ ಅನ್ನುತ್ತಿದ್ದಾರೆ. ಏನಾಗಿದೆ ಊರಿಗೆ ? (ದೊಡ್ಡವನಂತೆ ಬರೆದಿದ್ದರೆ ಕ್ಷಮಿಸಿ, ನಿಮ್ಮ ಅಭಿಪ್ರಾಯ ತಿಳಿಸಿ)

ಹುಟ್ಟಿಸಿದವನು ಈ ಸಲ ಹುಲ್ಲು ಮೇಯಿಸುವುದು ಗ್ಯಾರಂಟಿ
ಮಡಿಕೇರಿಯ ಘಾಟಿ ಇಳಿಯುತ್ತಿರುವಾಗ ಚುಮುಚುಮು ಬೆಳಕು. ಸಂಪಾಜೆ ಬಂತೆಂದರೆ, ಬೆಂಗಳೂರಿನ ಗಾಳಿ ಎಷ್ಟೊಂದು ಮಂದ-ದಪ್ಪ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ ! ಒಂದೆಡೆ ೪೦ಕಿಮೀ ದೂರದ ಮಡಿಕೇರಿ, ಇನ್ನೊಂದೆಡೆ ಸುಮಾರು ೯೦ ಕಿಮೀ ದೂರದಲ್ಲಿ ಜಿಲ್ಲಾ ಕೇಂದ್ರ ಮಂಗಳೂರು-ಇವುಗಳ ಮಧ್ಯೆ ಇರುವುದು ನಮ್ಮ ಸುಳ್ಯ ತಾಲೂಕು. ಕೊಂಚ ಓಲಾಡಿದರೆ ಅತ್ತ ಕೇರಳ ರಾಜ್ಯ . ಜಿರಿಜಿರಿ ಮಳೆ ಹೊಯ್ಯುತ್ತಲೇ ಇದೆ. ಕಾಲಿಟ್ಟಲ್ಲೆಲ್ಲ ಕೆಸರು, ಹಸಿರು. ಜನರಿಗೆ ಮಳೆ ಎಂದರೆ ಅಲರ್ಜಿ ಆಗುವಷ್ಟು , ಭೂಮಿ ಕುಡಿಕುಡಿದು ಮಿಕ್ಕುವಷ್ಟು ಈ ಬಾರಿ ಜಲಧಾರೆ ಆಗಿದೆ. "ಇಂಥಾ ಮಳೆ ನಾನು ಇದುವರೆಗೆ ನೋಡಿಲ್ಲ ’ ಅಂತ ಅಜ್ಜಿಯೇ ಹೇಳುತ್ತಿದ್ದಾರೆ. ಎಲ್ಲ ವಾಹನಗಳೂ ಕೆಸರು ಮೆತ್ತಿಕೊಂಡು ಅಸಹ್ಯವಾಗಿವೆ. ಪ್ರತಿಯೊಬ್ಬರ ಪ್ಯಾಂಟೂ ಮೊಳಕಾಲವರೆಗೆ. ಎಲ್ಲೆಲ್ಲೂ ಕೊಡೆಗಳದ್ದೇ ರಾಜ್ಯ . ತೋಡು, ಹೊಳೆಗಳು ಕೆಂಪು ನೀರು ತುಂಬಿಕೊಂಡು ಮುನ್ನುಗ್ಗುತ್ತಿವೆ. ನೀರು-ಹುಲ್ಲು ಬಿಟ್ಟರೆ ತೋಟದಲ್ಲಿ ಇನ್ನೇನೂ ಇಲ್ಲ. ಹುಟ್ಟಿಸಿದವನು ಈ ಸಲ ಹುಲ್ಲು ಮೇಯಿಸುವುದು ಗ್ಯಾರಂಟಿ . ನಮ್ಮ ಮನೆಯಂತೂ, ಆಗಷ್ಟೆ ಪತ್ತೆಯಾದ ಕ್ರಿಸ್ತಪೂರ್ವ ಕಾಲದ ಕಟ್ಟಡದಂತೆ ಕಾಣುತ್ತಿದೆ ! ಅಷ್ಟದಿಕ್ಕುಗಳಲ್ಲೂ ಹುಲ್ಲು ಬೆಳೆದು ನಿಂತಿದೆ. ಹುಲ್ಲು ಬೆಳೆಯಬಾರದೆಂದು ಅಂಗಳಕ್ಕೆ ಹಾಕಿದ್ದ ತೆಂಗಿನಮರದ ಮಡಲು (ಗರಿ) ಗೊಬ್ಬರವಾಗುತ್ತಿದೆ. ಕಾಲಿಟ್ಟಲ್ಲೆಲ್ಲ ಜಾರುತ್ತದೆ. ಕಿಟಕಿ ಬಾಗಿಲೂ ವ್ಯವಸ್ಥಿತವಾಗಿಲ್ಲದ ನಮ್ಮ ಮನೆಯಲ್ಲಿ ಮಳೆಗಾಲವನ್ನು ಅನುಭವಿಸುವುದಕ್ಕೆ ವಿಶೇಷ ಅಭ್ಯಾಸ ಬೇಕು ಮಾರಾಯ್ರೆ !

ತೋಳ್ಪಾಡಿ ಪುಸ್ತಕ
ಕನ್ನಡ-ಇಂಗ್ಲಿಷ್-ಸಂಸ್ಕೃತಗಳಿಂದ ಸತ್ತ್ವವನ್ನು ಹೀರಿಕೊಳ್ಳುತ್ತಿರುವ, ಸಾಹಿತ್ಯ-ಯಕ್ಷಗಾನ-ಅಧ್ಯಾತ್ಮ - ಕೃಷಿಯಲ್ಲಿ ತೊಡಗಿಕೊಂಡಿರುವ ಲಕ್ಷ್ಮೀಶ ತೋಳ್ಪಾಡಿಯವರು ಇರುವುದು ಪುತ್ತೂರು ತಾಲೂಕಿನ ಶಾಂತಿಗೋಡು ಎಂಬ ಹಳ್ಳಿಯಲ್ಲಿ . ಬರೆಹದ ಬಿಗಿಯನ್ನು ಮಾತಿನಲ್ಲಿ , ಮಾತಿನ ಓಘವನ್ನು ಬರೆಹದಲ್ಲಿ ಸಾಧಿಸಬಲ್ಲ ತೋಳ್ಪಾಡಿ ನಿಶ್ಚಿಂತ ಚಿಂತಕರು ! "ನಿಮ್ಮ ಬರೆಹಗಳನ್ನೆಲ್ಲ ಸೇರಿಸಿ ಒಂದು ಪುಸ್ತಕ ಮಾಡುತ್ತೇನೆ ’ ಅಂತಂದು, ಅವರ ಶಾಂತಿಯನ್ನು ನಾನು ಹಾಳು ಮಾಡಿ ವರ್ಷವೇ ಕಳೆಯಿತು ! "ನಿಮ್ಮ ಬರೆಹಗಳ ಪುಸ್ತಕ ತರುತ್ತೇವೆ’ ಅಂತ ಸಂಪಾದಕ, ಪ್ರಕಾಶಕರೇ ದುಂಬಾಲು ಬಿದ್ದರೂ ಕ್ಯಾರೇ ಮಾಡದ ವಿಭೂತಿಪುರುಷ ಈ ತೋಳ್ಪಾಡಿ. ಸಿಕ್ಕ ಸಿಕ್ಕ ಸಾರ್ವಜನಿಕ ಕಾರ್‍ಯಕ್ರಮಗಳಲ್ಲಿ ಭಾಷಣ ಮಾಡುತ್ತಲೇ, ಫಕ್ಕನೆ ಒಂದು ದಿನ ಒಂದಿಬ್ಬರು ಗೆಳೆಯರೊಂದಿಗೆ ಆಗುಂಬೆಯ ಕಾಡಿಗೆ ಹೋಗಿ ಎರಡು ರಾತ್ರಿ ಕಳೆದು ಬರುವಂಥವರು.

ಭಗವದ್ಗೀತೆಯ ಸರ್ವೋಪನಿಷಧೋ ದೋಗ್ಧಾ ಗೋಪಾಲ ನಂದನಃ’ ಶ್ಲೋಕವನ್ನು ನೆನಪಿಸಿಕೊಳ್ಳುತ್ತ , ಹೆಬ್ಬೆರಳು-ತೋರುಬೆರಳನ್ನು ಜೋಡಿಸಿ ಉಳಿದ ಬೆರಳುಗಳನ್ನು ನೇರವಾಗಿಸಿ ತೋರುವ ಜ್ಞಾನಮುದ್ರೆಯನ್ನೇ ಅಡ್ಡಲಾಗಿ ಹಿಡಿದರೆ.... ಅದು ಹಾಲು ಕರೆಯುವ ಕೈಯಾಗುತ್ತದೆ !-ಎಂದು ಹೊಳೆಯುವುದು ಇವರ ಚಿಂತನಾಕ್ರಮಕ್ಕೊಂದು ಸಣ್ಣ ಉದಾಹರಣೆ.ಈ ಬಾರಿಯೂ ನನ್ನ ದೂರವಾಣಿ ಕರೆ ಪೂರ್ತಿ ಫಲಪ್ರದವಾಗದಿದ್ದರೂ ಸಂಗ್ರಹವಾಗಿರುವ ಲೇಖನಗಳನ್ನು ಕೊಂಚ ತಿದ್ದಿ ಕೊಡುತ್ತೇನೆಂಬ ಅವರ ಮಾತನ್ನು ಊರ್ಜಿತದಲ್ಲಿರಿಸಿದೆ ! (ಅಪಾಯ...ಇಲ್ಲಿ ಕ್ಲಿಕ್ ಮಾಡಬೇಡಿ...ಮುಂದುವರಿಯಲೂಬಹುದು !)

0 comments:

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP