September 10, 2007

ಗಂಡ ಹೆಂಡಿರ ಜಗಳದಿಂದ ಜನಿಸಿದವನಿಗೆ...!


ಮೆರವಣಿಗೆಯೊಂದು ನ್ಯಾಚುರೋಪತಿ ಕಾಲೇಜು ದಾಟಿ, ಹುಡುಗಿಯರ ಮೈತ್ರೇಯಿ ಹಾಸ್ಟೆಲಿಗೆ ಹೋಗುವ ತಿರುವಿನ ಬಳಿ ಸಾಗಿ, (ಅಲ್ಲಿ ಸ್ವಲ್ಪ ನಿಧಾನವಾಗಿ ! ) ತಮ್ಮದೇ ಕಾಲೇಜಿನ ಎದುರಾಗಿ ಪೇಟೆ ಪ್ರವೇಶಿಸಿ, ಸರ್ಕಲ್‌ಗೆ ಸುತ್ತು ಹಾಕಿ ವಾಪಸ್ ಬರುತ್ತದೆಂದರೆ....
ಅದು ಸಿದ್ದವನ ಗುರುಕುಲದ ಚೌತಿ ಮೆರವಣಿಗೆಯಲ್ಲದೆ ಬೇರೆ ಯಾವುದಾಗಿರಲು ಸಾಧ್ಯ ?!

ಡಂಗ್‌ರ ಟಕ್‌ರ..ಡಂಗ್‌ರ ಟಕ್‌ರ...ಅಂತ ಬ್ಯಾಂಡು ಬಜಾಯಿಸುತ್ತಿದ್ದ ಹಾಗೆ, ಬೆಂಕಿ ಚೆಂಡುಗಳನ್ನು ಕಟ್ಟಿರುವ ನಾಲ್ಕಡಿ ವ್ಯಾಸದ ರಿಂಗೊಂದನ್ನು ಆತ ಗರಗರನೆ ತಿರುಗಿಸುತ್ತಿದ್ದಾನೆ. ಎರಡು ತುದಿಗೆ ಬೆಂಕಿ ಹಚ್ಚಿದ್ದ ದೊಣ್ಣೆಗಳೊಂದಿಗೆ ಇನ್ನಿಬ್ಬರ ಕರಾಮತ್ತು . ಭೂತದ ವೇಷಗಳು, ಯಕ್ಷಗಾನದ ಬಣ್ಣದ ವೇಷಧಾರಿಗಳು ಕುಣಿಕುಣಿಯುತ್ತಿದ್ದಾರೆ. ಇನ್ನೊಂದೆಡೆ ಭಕ್ತಿಗೀತೆ ಹಾಡುವ ತಂಡ. ಉಜಿರೆ ಕಾಲೇಜಿನ ಹುಡುಗರ "ಸಿದ್ಧವನ ಗುರುಕುಲ'ದಲ್ಲಿ ಅತ್ಯಂತ ಅದ್ಧೂರಿಯಾಗಿ ಆಚರಿಸಲ್ಪಡುವ ಹಬ್ಬಗಳಲ್ಲಿ ಈ ವಿನಾಯಕ ಚೌತಿಯೂ ಒಂದು.

ಒಂದೂವರೆ ಕಿಮೀ ದೂರವಿರುವ ಉಜಿರೆ ಪೇಟೆಯ ಕೇಂದ್ರದವರೆಗೆ ಮೆರವಣಿಗೆ ಹೋಗಿ ಬಂದು, ಗುರುಕುಲದಲ್ಲಿರುವ ದೊಡ್ಡ ಕೆರೆಯಲ್ಲಿ ಗಣಪತಿ ವಿಸರ್ಜನೆ. ಇದನ್ನೆಲ್ಲ ನೋಡಲು ಮೈತ್ರೇಯಿ ಹಾಸ್ಟೆಲ್‌ನ ಹುಡುಗಿಯರಿಗೆ ಅನುಮತಿ ಕೊಟ್ಟಿಲ್ಲ ಅಂತಾದರೆ ಮಾತ್ರ , ವಾಪಸ್ ಬರುವ ಮೆರವಣಿಗೆ ಸ್ವಲ್ಪ ಸಣ್ಣದಾಗಿ ವೈಭವ ಕಳೆಗುಂದಿರುತ್ತದೆ ! ಆ ದಿನ ನಾನಾ ಕೆಲಸಗಳಿಗೆ ಹಲವಾರು ತಂಡಗಳು. ಸ್ವಚ್ಛತೆಗೊಂದು, ಸಾಂಸ್ಕೃತಿಕ ಕಾರ್‍ಯಕ್ರಮಕ್ಕೆ ಇನ್ನೊಂದು ಹೀಗೆಲ್ಲ. (ದೊಡ್ಡ ದೊಡ್ಡ ಲೈಟುಗಳನ್ನು ಉದ್ದನೆಯ ಕಂಬಕ್ಕೆ ಕಟ್ಟಿ ಹಿಡಿದುಕೊಳ್ಳುವ ಮತ್ತು ಬೆಂಕಿನೃತ್ಯದವರಿಗೆ ಸೀಮೆಎಣ್ಣೆ ಹೊತ್ತೊಯ್ಯುವ ಕೆಲಸ ಯಾರಿಗೂ ಸಿಗದಿರಲಿ ಶಿವನೆ !) ಪೂಜಾ ಸಮಿತಿಯಲ್ಲಿರುವ ಬ್ರಾಹ್ಮಣ ಹುಡುಗರಿಗಂತೂ, ಭಕ್ತರಿಗೆ ಪಂಚಾಮೃತ ಕೊಡಲು ಮರೆತುಹೋಗುವುದೇ ಹೆಚ್ಚು ! (ಹಾಗಂತ ಪ್ರಸಾದ ಹಾಳು ಮಾಡುವುದು ಸರಿಯೆ? ಛೆ, ಛೆ, ಪರದೆ ಹಿಂದೆಯಾದರೂ ತಿನ್ನದೆ ವಿಧಿಯುಂಟೆ?!)

ಗಣೇಶನ ಮೂರ್ತಿಯನ್ನು ಗುರುಕುಲದ ವಿದ್ಯಾರ್ಥಿಗಳಲ್ಲೇ ಯಾರಾದರಿಬ್ಬರು ತಯಾರಿಸುವುದು ಇಲ್ಲಿನ ವೈಶಿಷ್ಟ್ಯ . ತಿಂಗಳ ಮೊದಲೇ ಆ ಕಾರ್‍ಯ ಶುರುವಾಗುತ್ತದೆ. ಮಣ್ಣನ್ನು ಹಚ್ಚುವುದರಲ್ಲಿ ಪಾರ್ವತಿ ಅಷ್ಟೊಂದು ಶ್ರದ್ಧೆ ತೋರಿದ್ದಳೋ ಇಲ್ಲವೋ, ಆದರೆ ಆ ಹುಡುಗರಂತೂ ಬೆಣ್ಣೆ ಹಚ್ಚಿದಂತೆ ಮಣ್ಣು ಹಚ್ಚುತ್ತಾರೆ. ಸಾಯಂಕಾಲ ಕಾಲೇಜಿನಿಂದ ಬಂದು- ಗಣೇಶನ ಮೂರ್ತಿಗೆ ಸೊಂಡಿಲು ಬಂತೆ, ಕವಿ ಎಷ್ಟು ಅಗಲ ಆಯಿತು? ಹೊಟ್ಟೆ ಯಾಕೆ ಕೊಂಚ ಉದ್ದ ಆಗಿದೆ? ಈ ಕೈಯ ಬೆರಳಲ್ಲಿ ಅಂಕುಶ ನಿಂತೀತೆ?-ಅಂತೆಲ್ಲ ನೋಡಿ ಮಾತಾಡಿಕೊಳ್ಳದೆ ಯಾರೂ ರೂಮಿಗೆ ಹೋಗುವುದಿಲ್ಲ.

'ಈ ಸಲದ ಚೌತಿ ಗೌಜಿ' ಅಂತಾಗಬೇಕಾದರೆ- ಚೌತಿ ದಿನ ಸಾಯಂಕಾಲ, ಏಳು ಕಿಮೀ ದೂರದ ಧರ್ಮಸ್ಥಳದಿಂದ ಓಪನ್ ಟಾಪ್‌ನ ಕಪ್ಪು ಕಾರಿನಲ್ಲಿ ಖಾವಂದರು ಬರಬೇಕು ಅಥವಾ ಮರುದಿನ ಹತ್ತು ಜನರಿಗಾದರೂ ಹಟ್ಟಿಯ ಸೆಗಣಿ ತೆಗೆಯುವ ಶಿಕ್ಷೆಯನ್ನು ವಾರ್ಡನ್ ವಿಧಿಸಬೇಕು ! ಹಾಗಾದರೆ 'ಚೌತಿ ಬಾರೀ ರೈಸ್‌ತ್ಂಡ್' (ರೈಸಿಂಗ್ ಚೌತಿ !)ಅಂತ ಹಿರಿಯ ವಿದ್ಯಾರ್ಥಿಗಳಿಗೆ ಸಮಾಧಾನ. ಮೆರವಣಿಗೆಯಲ್ಲಿ ಹೆಚ್ಚು ಕುಣಿದವರ ಬಗ್ಗೆ ವಾರ್ಡನ್‌ಗೆ ಅನುಮಾನ !

ಈ ಅಮೋಘ ಮೆರವಣಿಗೆಗೆ ಆಗಾಗ ತಣ್ಣೀರೆರಚುವ ವಿಘ್ನಕಾರಕನೆಂದರೆ ಮಳೆರಾಯ ಒಬ್ಬನೇ. ಆದರೆ ಹುಟ್ಟುವಾಗಲೇ ದೇವಾನುದೇವತೆಗಳ ಯುದ್ಧದ ಮಹಾವಿಘ್ನವನ್ನು ದಾಟಿ ಬಂದ ವಿನಾಯಕನಿಗೆ ಇದ್ಯಾವ ಲೆಕ್ಕ? ಮುಳುಗುವವರೆಗಂತೂ ಆತ ಕರಗುವುದಿಲ್ಲ. "ನೆನೆದವರ' ಮನದಲ್ಲಿ ಅವನು ಚಿರಸ್ಥಾಯಿ. ಎಲ್ಲಕ್ಕಿಂತ ರೋಚಕವಾದ ಭಯ ಭಕ್ತಿ ಭಾವ ತೀವ್ರತೆಯ ಕ್ಷಣಗಳೆಂದರೆ ಮೂರ್ತಿ ನೀರಿಗೆ ಬಿಡುವ ಸಂದರ್ಭದ್ದು. ಟ್ರ್ಯಾಕ್ಟರ್ ಮೇಲಿಂದ ಗಣಪನನ್ನು ಇಳಿಸುವಾಗ ಎಷ್ಟು ಹುಶಾರಾಗಿದ್ದರೂ ಸಾಲದು. ಕೈಯ ಒಂದು ಬೆರಳು ಮುರಿದರೂ ತಿಂಗಳ ಶ್ರಮವೆಲ್ಲ ವ್ಯರ್ಥವಲ್ಲವೆ? ಕೆರೆಯೊಳಗೆ ಇಳಿಸುವಾಗಲಂತೂ ಕಿರೀಟದ ತುದಿ ಮುಳುಗುವವರೆಗೆ ಎಲ್ಲರೂ ನೆಟ್ಟ ನೋಟಕರು. ಬಳಿಕ- ರಜೆ ಮುಗಿಸಿ ಅಪ್ಪ ಅಮ್ಮನನ್ನು ಬಿಟ್ಟು ಆಗಷ್ಟೆ ಹಾಸ್ಟೆಲಿಗೆ ಮರಳಿದ ಹಾಗೆ ಏನೋ ಬೇಜಾರು.

ಈ ಬಾರಿಯ ಚೌತಿಗೆ ಊರಿಗೆ ಹೋಗುತ್ತಿದ್ದೇನೆ. ಅಲ್ಲಿ ಮಳೆ ಇನ್ನೂ ಧಾರಾಕಾರ ಸುರಿಯುತ್ತಿದೆ. ಕೊಳೆ ರೋಗ ಹಬ್ಬಿ ಅಡಕೆ ಮರಗಳೆಲ್ಲಾ ಖಾಲಿಯಾಗಿ ನಿಂತಿವೆ. ಹಳೆ ಸಂಭ್ರಮ ಈ ಬಾರಿ ಕಾಣಿಸೀತೇ ಎಂಬ ಅನುಮಾನವಿದೆ. ಬಂದ ಬಳಿಕ ಬರೆಯುತ್ತೇನೆ.

0 comments:

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP