August 22, 2011

ಮಾತಿನ ಮಲ್ಲರ ಜತೆ ಒಂದು ಕಲಾರಾತ್ರಿ

ಕಳೆದ ಶನಿವಾರದ ರಾತ್ರಿ. ಸುಳ್ಯ ತಾಲೂಕಿನ ಚೊಕ್ಕಾಡಿಯ ‘ದೇಸೀ ಭವನ’ದ ಹೊರಗೆ ಆಕಾಶ ತುಂಬಿ ಮಳೆಯಾಗುತ್ತಿದ್ದರೆ, ಒಳಗೆ ಮನಸ್ಸು ತುಂಬಿ ಮಾತಿನ ಮಳೆಯಾಗುತ್ತಿತ್ತು. ಅದು ಯಕ್ಷಗಾನದಲ್ಲಿ ’ಕೊಡಕ್ಕಲ್ಲು ಹಾಸ್ಯಗಾರರು’ ಅಂತಲೇ ಪ್ರಸಿದ್ಧರಾದ ಕೆ.ಗೋಪಾಲಕೃಷ್ಣ ಭಟ್ಟರಿಗೆ ಅಲ್ಲಿ ’ಶೇಣಿ ಪ್ರಶಸ್ತಿ’ ಪ್ರದಾನ. ಆ ಸಂಭ್ರಮಕ್ಕೆ ಸೂರಿಕುಮೇರಿ, ಜಗದಾಭಿ, ಶೆಟ್ಟಿಗಾರ್, ದೀಪಕ್ ಮೊದಲಾದ ನುರಿತ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಬಯಲಾಟ. ಆ ಬಳಿಕ ರಾತ್ರಿಯಿಂದ ಬೆಳಗಿನವರೆಗೆ ತಾಳಮದ್ದಳೆ ! ಭಾಗವತರಾಗಿ ಬಲಿಪ, ಪದ್ಯಾಣ, ಪುತ್ತಿಗೆ. ಅರ್ಥಧಾರಿಗಳಾಗಿ ಕುಂಬ್ಳೆ, ಮೂಡಂಬೈಲು, ಮೇಲುಕೋಟೆ, ಸುಣ್ಣಂಬಳ, ಬರೆ, ಸೂರಿಕುಮೇರಿ, ಹಿರಣ್ಯ, ಶಂಭು, ಉಜಿರೆ..ಹೀಗೆ ಮಾತಿನ ಮಲ್ಲರು ಅಲ್ಲಿ ಸೇರಿದ್ದರು. ಪಾತ್ರಗಳ ಬೆಳಕಿನಲ್ಲೇ ಆ ಕಲಾರಾತ್ರಿಯಲ್ಲಿ ಬೆಳಗಾಯಿತು. ತಾಳಮದ್ದಳೆ ಮುಗಿದಾಗ ಬೆಳಗ್ಗೆ ಏಳೂವರೆ. ತಾಳಮದ್ದಳೆಯಲ್ಲಿ ಮಾತೇ ಸರ್ವಸ್ವ. ಹಾಗಾಗಿ ಇದಕ್ಕಿಂತ ಹೆಚ್ಚು 'ಬರಹದಲ್ಲಿ ಹೇಳಲಾರೆನೂ..'! ಇಂತಹ ಕಾರ್ಯಕ್ರಮಕ್ಕೆ ಸಾದಂರ್ಭಿಕವಾಗಿ ಉದಯವಾಣಿಯಲ್ಲಿ ಪ್ರಕಟವಾದ ನನ್ನ ಲೇಖನವೊಂದು ಇಲ್ಲಿದೆ. ಆ ಕಾರ್ಯಕ್ರಮವನ್ನು ಕಲ್ಪಿಸಿಕೊಂಡು ಆನಂದಿಸಿ !

ಹಾಸ್ಯ ಶ್ರೇಣಿಗೆ ಶೇಣಿ ಪ್ರಶಸ್ತಿ

ಮರಣವನ್ನೇ ತನ್ನಿಚ್ಚೆಗೆ ಒಳಪಡಿಸಿಕೊಂಡ ಭೀಷ್ಮನ ಹಾಗೆ, ಪುರಾಣ ಪಾತ್ರಗಳನ್ನು ತನ್ನಿಚ್ಚೆಗೆ ಒಳಪಡಿಸಿಕೊಂಡವರು ಶೇಣಿ ಗೋಪಾಲಕೃಷ್ಣ ಭಟ್. ವೇದಿಕೆಗೆ ಬಂದರೆಂದರೆ ಅವರದೇ ಆದ ರೀತಿ ನೀತಿ. ಆದರೆ ಶೇಣಿಯವರಿಗೆ ತೀರಾ ವ್ಯತಿರಿಕ್ತವಾಗಿ, ಇನ್ನೊಬ್ಬರ ಇಚ್ಚೆಗಳಿಗೆಲ್ಲ ತನ್ನನ್ನು ಒಪ್ಪಿಸಿಕೊಂಡ ಭಾರತದ ಭೀಷ್ಮನ ಹಾಗೆ ವೇದಿಕೆಯಲ್ಲಿ ಕಾಣುತ್ತಿದ್ದವರು ದೇರಾಜೆ ಸೀತಾರಾಮಯ್ಯ ! ದೇರಾಜೆ ರಸವಾದರೆ, ಶೇಣಿ ತಿರುಳು. ದೇರಾಜೆ ಭಾವವಾದರೆ, ಶೇಣಿ ಬುದ್ಧಿ. ಇಬ್ಬರೂ ಸೇರಿದರೆ ಪಾತ್ರಗಳ ಅಂತರಂಗ ಶುದ್ಧಿ. ಸೀತಾರಾಮಯ್ಯ ಕಡಿಮೆ ಮಾತಾಡಿದರು, ಹೆಚ್ಚು ಬರೆದರು. ಶೇಣಿ ಹೆಚ್ಚೆಚ್ಚು ಮಾತನಾಡಿದರು. ಬಹುಶಃ ಇವರಿಬ್ಬರನ್ನು ಒಂದುಗೂಡಿಸಿದ್ದು ಸೀತಾರಾಮಯ್ಯರ ಹಾಸ್ಯಪ್ರವೃತ್ತಿಯೇ. ಶೇಣಿಯವರ ಘನಗಾಂಭೀರ್ಯವನ್ನು ಸೂಜಿಮೊನೆಯಲ್ಲಿ ಮುರಿಯಬಲ್ಲ ಸಾಮರ್ಥ್ಯ ಇದ್ದದ್ದು ಸೀತಾರಾಮಯ್ಯರಿಗೆ. ಶೇಣಿಯವರು ಕೌರವನಾಗಿ, ಶಲ್ಯಭೂಪತಿ ದೇರಾಜೆಯವರ ಬಳಿ ಹೋದಾಗ ನಡೆಯುವ ಮಾತುಕತೆಯಲ್ಲಿ ಈ ವಿರುದ್ಧ ಆಕರ್ಷಣೆಯನ್ನು ಪ್ರೇಕ್ಷಕರು ಆನಂದಿಸುತ್ತಿದ್ದರು.

ದೇರಾಜೆ ಸೀತಾರಾಮಯ್ಯರ ಕರ್ಮಭೂಮಿ ಸುಳ್ಯ ತಾಲೂಕಿನ ಚೊಕ್ಕಾಡಿ. ಅವರ ಮುಂದಾಳತ್ವದಲ್ಲಿ ಅಲ್ಲಿ ನಿರ್ಮಾಣವಾದದ್ದು ಶ್ರೀರಾಮ ದೇವಾಲಯ. ಅವರ ಯಕ್ಷಗಾನ, ನಾಟಕದ ಹುಚ್ಚಿಗೆ ಆ ಪರಿಸರ ಸಾಕ್ಷಿಯಾಗಿತ್ತು. ಈಗ ಶೇಣಿ ಅಜ್ಜನೂ ಅಲ್ಲಿಗೆ ಮತ್ತೆ ಬರುತ್ತಿದ್ದಾರೆ. ’ಶೇಣಿ ಗೋಪಾಲಕೃಷ್ಣ ಭಟ್ ವಿಶ್ವಸ್ತ ಮಂಡಳಿ’ ಯ ನೇತೃತ್ವದಲ್ಲಿ ’ಶೇಣಿ ಪ್ರಶಸ್ತಿ’ ಪ್ರದಾನವೆಂಬ ಅದ್ದೂರಿ ಕಾರ್ಯಕ್ರಮ ಚೊಕ್ಕಾಡಿಯಲ್ಲಿ ನಡೆಯುತ್ತಿದೆ. ಅಲ್ಲಿ ’ಶೇಣಿ ಪ್ರಶಸ್ತಿ’ಗೆ ಭಾಜನರಾಗುತ್ತಿರುವುದು ಒಬ್ಬರು ಹಾಸ್ಯಗಾರರು ಅನ್ನುವುದು ಶೇಣಿ-ದೇರಾಜೆ ಇಬ್ಬರಿಗೂ ಅದೆಷ್ಟು ಖುಶಿ ತರುತ್ತದೋ !

ಅವರಿಗೀಗ ವಯಸ್ಸು ೮೩. ಶೇಣಿ, ದೇರಾಜೆ, ಪೊಳಲಿ ಶಾಸ್ತ್ರಿಗಳು ಅವರ ನೆಚ್ಚಿನ ಅರ್ಥಧಾರಿಗಳಂತೆ. ಕುರಿಯ ವಿಠಲ ಶಾಸ್ತ್ರಿ, ನಾರಾಯಣ ಹೆಗಡೆ, ಪಾತಾಳ ವೆಂಕಟ್ರಮಣ ಭಟ್, ಕೋಳ್ಯೂರು ರಾಮಚಂದ್ರ ರಾವ್ ಮೆಚ್ಚಿನ ವೇಷಧಾರಿಗಳಂತೆ. ಆದರೆ ಇವರು ಬೆಳೆದದ್ದು ಮಾತ್ರ ಯಕ್ಷಗಾನದ ಪಾರಂಪರಿಕ ಹಾಸ್ಯದ ವಾರಸುದಾರರಾಗಿ. ಇವರು ಬಂಟ್ವಾಳ ತಾಲೂಕು ಕೊಡಕ್ಕಲ್ಲಿನ ಕೆ. ಗೋಪಾಲಕೃಷ್ಣ ಭಟ್. ೧೬ನೇ ವಯಸ್ಸಿನಲ್ಲಿ ಮೃದಂಗ ಅಭ್ಯಾಸದ ಮೂಲಕ ಕಲಾ ಜೀವನಕ್ಕೆ ಪದಾರ್ಪಣೆ. ತಂದೆ ಶಾಂಭಟ್ಟರು ಹಾಗೂ ಮಾವ ನೆಡ್ಲೆ ನರಸಿಂಹ ಭಟ್ಟರೇ ಮೊದಲ ಗುರುಗಳು. ಕೂಡ್ಲು ಮೇಳ ಸೇರಿದ್ದು ಭಾಗವತನಾಗಿ ! ಆದರೆ ೨೪ರ ವಯಸ್ಸಿನ ಹೊತ್ತಿಗೆ, ಕಟೀಲು ಮೇಳದಲ್ಲಿ ಹೊಗಳಿಕೆ ಹಾಸ್ಯಗಾರನಾಗಿ ಭಾಗವಹಿಸಿದ ಬಳಿಕ ನಗಿಸುವುದೇ ಅವರ ಪರಮಧರ್ಮ. ಧರ್ಮಸ್ಥಳ, ಕಟೀಲು, ಕುಂಡಾವು, ಕರ್ನಾಟಕ, ಪೊಳಲಿ, ಸುಂಕದಕಟ್ಟೆ ಮೇಳಗಳಲ್ಲಿ ಹಾಗೂ ಹವ್ಯಾಸಿ ತಂಡಗಳಲ್ಲೂ ಹಾಸ್ಯಗಾರನಾಗಿದ್ದ ಅವರಿಗೆ ನಕ್ಕರದೇ ಸ್ವರ್ಗ. ಕೃಷ್ಣನ ಜತೆಗಾರರಾಗಿರುವ ವಿಜಯ ಹಾಗೂ ದಾರುಕ - ಈ ಎರಡೂ ಪಾತ್ರಗಳಲ್ಲಿ ಕೊಡಕ್ಕಲ್ಲು ಗೋಪಾಲಕೃಷ್ಣ ಭಟ್ ಪ್ರದರ್ಶನ ಲೀಲಾಜಾಲ. ಯಕ್ಷಗಾನದ ಹಾಸ್ಯಕ್ಕೆ ಒಂದು ಶಿಷ್ಟ ಸ್ವರೂಪ ಕೊಟ್ಟ ವಿಟ್ಲ ಜೋಶಿಯವರು ಮತ್ತು ಕೊಡಕ್ಕಲ್ಲು, ಧರ್ಮಸ್ಥಳ ಮೇಳದಲ್ಲಿ ಶಂಖ ಲಿಖಿತರಾಗಿ ಬಂದರೆ ಪ್ರೇಕ್ಷಕರಿಗೆ ನಗೆಗಡಲು. ವಿರಾಟ ನಗರಕ್ಕೆ ಪಾಂಡವರು ಹೊರಟಾಗ ತಾನೂ ಬರುತ್ತೇನೆನ್ನುವ ಪಾತ್ರದಲ್ಲೂ ಕೊಡಕ್ಕಲ್ಲು ಕಾಣಿಸಿಕೊಳ್ಳುತ್ತಿದ್ದರು. ಅದರಲ್ಲಿ, ತಾನು ಹೇಗೆ ವಿರಾಟ ನಗರಿಯಲ್ಲಿ ಗುರುತು ಮರೆಸಿ ಇರಬಲ್ಲೆ ಅನ್ನುವುದಕ್ಕೆ ವೇದಿಕೆ ಮಧ್ಯದಲ್ಲೇ ಮೂರ‍್ನಾಲ್ಕು ವೇಷಗಳನ್ನು ಕ್ಷಣಮಾತ್ರದಲ್ಲೇ ಮಾಡಿ ತೋರಿಸುತ್ತಿದ್ದರಂತೆ ! ಸಿದ್ಧ ಹಾಸ್ಯಕ್ಕಿಂತ ಹೆಚ್ಚಾಗಿ ಇದಿರು ಅರ್ಥಧಾರಿಯ ಮಾತುಗಳನ್ನೇ ಹೆಕ್ಕಿಕೊಂಡು ವಿನೋದ ಸೃಷ್ಟಿಸುವುದು ಇವರ ಹೆಚ್ಚುಗಾರಿಕೆ.

ಕೊಡಕ್ಕಲ್ಲು ಭಟ್ಟರದ್ದು ’ಯಕ್ಷಗಾನದ ಹಾಸ್ಯ’. ಸುಮಾರು ೫೦ ವರ್ಷಗಳ ಕಾಲ ಇವರ ವಿನೋದಾವಳಿ ! ನೆನಪಿಸಿಕೊಂಡರೆ, ಇವರು ಮೊದಲು ಸನ್ಮಾನಕ್ಕೆ ಪಾತ್ರರಾಗಿದ್ದು ೧೯೯೧ರಲ್ಲಂತೆ, ಅಂದರೆ ೬೩ನೇ ವಯಸ್ಸಿನಲ್ಲಿ ! ಆ ಬಳಿಕ ಬಹಳಷ್ಟು ಸಂಘಸಂಸ್ಥೆಗಳು ಇವರನ್ನು ಗುರುತಿಸಿ ಗೌರವಿಸಿವೆ. ಕಳೆದ ಫೆಬ್ರವರಿಯಲ್ಲಿ ’ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ಯನ್ನೂ ಪಡೆದಿದ್ದಾರೆ. ಇವರು ಓದಿದ್ದು ೩ನೇ ತರಗತಿ. ಏಳು ಜನ ಮಕ್ಕಳ ತಂದೆ. ಈಗ ಅವರ ಮಗಳು ಕೆ.ಟಿ. ಶೈಲಜಾ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿದ್ದು ಬದುಕಿನ ತಿರುವು ಜೀವಂತಿಕೆಗೊಂದು ಸಾಕ್ಷಿಯಾಗಿದೆ. ಅವರ ಇನ್ನೊಬ್ಬರು ಮಗಳು ಸುಕನ್ಯಾ ಅವರ ಮನೆಯೂ ಚೊಕ್ಕಾಡಿಗೆ ಕೂಗಳತೆ ದೂರದ ನೇಣಾರಿನಲ್ಲಿದೆ. ಹೀಗೆ ’ಶೇಣಿ ಪ್ರಶಸ್ತಿ’ಯನ್ನು ಚೊಕ್ಕಾಡಿಯಲ್ಲಿ ಪಡೆಯುವಲ್ಲಿ ಅವರ ನಗುವಿಗೆ ಕಾರಣ ಹೆಚ್ಚಾಗಿದೆ !

ಎಂಟು ವರ್ಷಗಳ ಹಿಂದೆ. ಯಕ್ಷಗಾನದ ಮಹಾಪುರುಷ ಶೇಣಿ ಗೋಪಾಲಕೃಷ್ಣ ಭಟ್ಟರಿಗೆ ’ಸಹಸ್ರಚಂದ್ರ ದರ್ಶನ’ದ ಸಂಭ್ರಮ. ಆ ಶುಭಾವಸರದಲ್ಲಿ ಅಭಿಮಾನಿಗಳು ಅವರಿಗೆ ನೀಡಿದ ನಿಧಿಯನ್ನು ಒಂದು ದತ್ತಿನಿಧಿ ಸ್ಥಾಪಿಸಲೆಂದು ನೀಡಿದ್ದರು ಶೇಣಿ ಅಜ್ಜ. ಅವರ ಸಂಕಲ್ಪದ ಈಡೇರಿಕೆಗಾಗಿ ಜನ್ಮ ತಳೆದದ್ದು ’ಶೇಣಿ ಗೋಪಾಲಕೃಷ್ಣ ಭಟ್ ವಿಶ್ವಸ್ತ ಮಂಡಳಿ’. ತಡಂಬೈಲು ರಮಾನಾಥ ರಾವ್ ಅವರ ಸಾರಥ್ಯದಲ್ಲಿ ಮುನ್ನಡೆಯುತ್ತಿದ್ದ ಆ ಸಂಸ್ಥೆ, ಅವರ ನಿಧನಾನಂತರವೂ ಕ್ರಿಯಾಶೀಲವಾಗಿದೆ. ಯಕ್ಷರಂಗಕ್ಕಾಗಿ ಸೇವೆ ಸಲ್ಲಿಸಿ ಬಾಳ ಮುಸ್ಸಂಜೆಯಲ್ಲಿರುವ ಹಿರಿಯರಿಗೆ ’ಶೇಣಿ ಪ್ರಶಸ್ತಿ’ಯನ್ನು ಗೌರವದ ಸಂಮಾನ-ನಿಧಿಯೊಂದಿಗೆ ನೀಡುವ ಕಾರ್ಯವನ್ನು ನಡೆಸಿಕೊಂಡು ಬಂದಿದೆ. ಜತೆಗೆ ಶೇಣಿಯವರ ಸುವರ್ಣಯುಗದ ಧ್ವನಿಸುರುಳಿಗಳನ್ನು ಅವರ ಅಭಿಮಾನಿಗಳಿಂದ ಅರಸಿ ಸಂಗ್ರಹಿಸಿ ಸಂಸ್ಕರಿಸಿ ಶೇಖರಿಸುವ ಕೆಲಸವನ್ನೂ ಮಾಡುತ್ತಿದೆ. ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್ ಗೌರವಾಧ್ಯಕ್ಷರಾಗಿರುವ, ಹರಿಕೃಷ್ಣ ಪುನರೂರು ಅಧ್ಯಕ್ಷತೆಯ ವಿಶ್ವಸ್ತ ಮಂಡಳಿಯು, ಈ ಬಾರಿ ಚೊಕ್ಕಾಡಿಯ ಶ್ರೀರಾಮ ಸೇವಾ ಸಮಿತಿ ಸಹಯೋಗದಲ್ಲಿ ’ಶೇಣಿ ಪ್ರಶಸ್ತಿ’ ಪ್ರದಾನದ ಅದ್ದೂರಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಶೇಣಿ ’ಗೋಪಾಲಕೃಷ್ಣ ಭಟ್’ ಹೆಸರಿನ ಪ್ರಶಸ್ತಿಯು ಹಾಸ್ಯಗಾರ ಕೊಡಕ್ಕಲ್ಲು ’ಗೋಪಾಲಕೃಷ್ಣ ಭಟ್ಟ’ರಿಗೆ ಸಲ್ಲುತ್ತಿದೆ.

Read more...

August 10, 2011

ಹೆಂಡತಿಗಾಗಿ ಬರೆದ ಗದ್ಯಹೇ,
ಮದುವೆಯಾಗಿ ಇಷ್ಟು ಬೇಗ ನಿನ್ನ ಬರ್ತ್‌ಡೇ ಬರುತ್ತದೆ ಅಂದುಕೊಂಡಿರಲಿಲ್ಲ ! ಆವತ್ತು ನಿಮ್ಮ ಮನೆಯಿಂದ ಜಾತಕ ಬಂದಾಗ ಅದರಲ್ಲಿದ್ದ ಜನ್ಮ ದಿನಕ್ಕೂ, ಬೇರೆ ಕಡೆ ನನಗೆ ಸಿಕ್ಕಿದ ನಿನ್ನ ಜನ್ಮ ದಿನಕ್ಕೂ ತಾಳೆಯಾಗಿರಲಿಲ್ಲ ಅಂತ ನನ್ನ ನೆನಪು. ಆದರೆ ನನ್ನ ಅನುಮಾನವನ್ನು ನೀನು ನಿರಾಕರಿಸುತ್ತಲೇ ಬಂದಿದ್ದೀಯ ! ಬೇಜಾರಿಲ್ಲ, ’ಆಗಸ್ಟ್ ಹನ್ನೊಂದರಂದೇ ನಾನು ಹುಟ್ಟಿದ್ದು’ ಅಂತ ನೀನು ಗಟ್ಟಿಯಾಗಿ ಹೇಳಿರೋದ್ರಿಂದ, ಈ ವಿಚಾರವನ್ನ ನಾನು ಅತ್ತೆಮಾವನಲ್ಲಿಯೂ ಪ್ರಸ್ತಾಪಿಸಿಲ್ಲ ! ಅಷ್ಟಕ್ಕೂ, ನೀನು ಹುಟ್ಟಿದ್ದು ಬೇಗ ಅಂತ ಪ್ರೂವ್ ಆದರೆ, ನೀನು ಮತ್ತಷ್ಟು ದೊಡ್ಡವಳಾಗಿ ನಮಗಿರುವ ಒಂದು ವರ್ಷದ ಅಂತರವೂ ಕಡಿಮೆಯಾಗತ್ತೆ, ಅದು ನನಗೆ ಇಷ್ಟವಿಲ್ಲ ! ಹುಟ್ಟಿದ್ದು ತಡ ಅಂತಾದರೆ, ಮತ್ತಷ್ಟು ಸಣ್ಣವಳಾಗುತ್ತೀಯ ಮತ್ತು ನೀನು ಇನ್ನೂ ಮಕ್ಕಳಾಟಿಕೆ ಮಾಡಲು ಬಯಸುವುದಕ್ಕೆ ಸಣ್ಣ ವಯಸ್ಸೇ ಕಾರಣ ಅಂತೀಯ- ಅದೂ ನನಗೆ ಬೇಕಾಗಿಲ್ಲ. ಹಾಗಾಗಿ ಆಗಸ್ಟ್ ೧೧ ನನಗೆ ಓಕೆ.

ಆದರೂ ನಮ್ಮ ಮದುವೆ ಆನಿವರ್ಸರಿ ಬರೋ ಮೊದಲೇ ನಿನ್ನ ಬರ್ತ್‌ಡೇ ಬಂದಿದ್ದು ನನಗೆ ಕೊಂಚ ಕಸಿವಿಸಿಯೇ ಉಂಟು ಮಾಡಿದೆ. ಹಾಗಂತ, ನನ್ನ ಬರ್ತ್‌ಡೇ ಮಾತ್ರ, ನಮ್ಮ ಮದುವೆ ಆನಿವರ್ಸರಿಯಂದೇ ಆಗಿರೋದು ನನಗೆ ಹೆಮ್ಮೆ ಸಮಾಧಾನವನ್ನೂ ಕೊಟ್ಟಿದೆ. ಪರವಾಗಿಲ್ಲ ಬಿಡು, ನಮ್ಮಿಬ್ಬರ ಸಂಬಂಧ ಶುರುವಾದ ಬಳಿಕ, ನನಗಿಂತ ಮೊದಲು ನಿನ್ನ ವಯಸ್ಸೇ ಹೆಚ್ಚಾಗಿದ್ದರೂ ಅದು ಹೆಚ್ಚೆಂದು ನನಗೇನೂ ಅನ್ನಿಸುತ್ತಿಲ್ಲ ! ಅಷ್ಟಕ್ಕೂ ಮೂವತ್ತು ಹತ್ತಿರ ಬರುತ್ತಿದ್ದಂತೆ ನಾವ್ಯಾಕೆ ಈ ವಯಸ್ಸಿನ ಬಗ್ಗೆ ಮಾತಾಡಬೇಕು? ಬರ್ತ್‌ಡೇ ಅಂದಕೂಡಲೇ ಮೊದಲು ಮನಸ್ಸಿಗೆ ಬರೋದು ’ನಮ್ಮ ನೆಚ್ಚಿನ ಯುವ ನಾಯಕರಿಗೆ ೪೨ನೇ ಜನ್ಮದಿನದ ಹಾರ್ದಿಕ ಶುಭಾಶಯಗಳು’ ಅನ್ನೋ ಬೋರ್ಡುಗಳೇ. ಅಂದಹಾಗೆ, ನಮ್ಮ ಶೋಭಾ ಕರಂದ್ಲಾಜೆಯ ಇಂತಹ ಬೋರ್ಡು ಎಲ್ಲಾದರೂ ನೋಡಿದ್ದೀಯಾ?! ಅಷ್ಟಕ್ಕೂ- ವಯಸ್ಸಿಗೂ ಆಯುಸ್ಸಿಗೂ ಈ ಕಾಲದಲ್ಲಿ ಏನಾದರೂ ಸಂಬಂಧ ಇದೆ ಅಂತ ನಿನಗನ್ನಿಸತ್ತಾ? ಹಾರ ಬದಲಾಯಿಸಿಕೊಂಡಿದ್ದೇವೆ, ಬದುಕನ್ನೂ ಬದಲಾಯಿಸಿಕೊಳ್ಳುತ್ತಿರೋಣ ಆಗದಾ?

ನಿನಗೆ ನಾಳೆ ಎಸ್ಸೆಮ್ಮೆಸ್ಸುಗಳ ಮಹಾಪೂರ ಬರತ್ತೆ, ಹಲವರ ಮೊಬೈಲ್‌ನಲ್ಲಿ ರಿಮೈಂಡರ್‌ಗಳು ಹೊಡೆದುಕೊಳ್ಳುತ್ತವೆ ಅಂತ ನನಗೆ ಗೊತ್ತು. ಆದರೆ ಫೇಸ್‌ಬುಕ್‌ನಲ್ಲಿ ಮಾತ್ರ ಬರ್ತ್‌ಡೇಯನ್ನೇ ಅಡಗಿಸಿದ್ದೀಯಲ್ಲ. ಹಾಗಿದ್ದರೂ ಆಫೀಸಿನಲ್ಲಿ ಪಾರ್ಟಿ ಕೇಳಿಯಾರು ಅಂತ ನಿನಗೆ ಭಯ. ನಾಡಿದ್ದು ರಜಾ ತಗೊಳ್ಳಲಾ ಅಂತ ಕೂಡಾ ನೀನು ನಿನ್ನೆ ರಾತ್ರಿ ಕೇಳಿದೆ. ಕ್ಲೋಸ್ ಫ್ರೆಂಡ್ ಒಬ್ಬಳು ಮಧ್ಯರಾತ್ರಿ ಕಾಲ್ ಮಾಡೋದು ಖಂಡಿತ ಅಂತ ವಿಚಿತ್ರ ಖುಶಿಯಲ್ಲಿ ಹೇಳಿದೆ. ಬರ್ತ್‌ಡೇ ಅಂದರೆ ನಿನಗೆ ಸಣ್ಣ ಭಯ ಇರೋದು ನನಗೆ ಗೊತ್ತಾಗದೆ ಇರತ್ತಾ? ವಯಸ್ಸಾದೋರು ಅಮ್ಮನ ಥರ ಕಾಣ್ತಾರೆ ಅಂತಾರೆ, ನನಗೇನೂ ಗೊತ್ತಿಲ್ಲಪ್ಪ. ಸಣ್ಣ ವಯಸ್ಸಿಗೆ ಅಮ್ಮ ಆದರೆ ಮಜಾ ಇರಲ್ಲ. ವಯಸ್ಸಾದಾಗ ಅಮ್ಮ ಆಗದಿದ್ದರೂ ಚೆನ್ನಾಗಿರಲ್ಲ. ನನ್ನ ಅಮ್ಮನಿಗೆ, ನಿನ್ನ ಅಮ್ಮನಿಗೆ ವಯಸ್ಸೆಷ್ಟು ಅಂತ ನಿಖರವಾಗಿ ನನಗಂತೂ ಗೊತ್ತಿಲ್ಲ. ಆಫೀಸಿನಲ್ಲಿ ಯಾವುದಾದರೂ ಫಾರ್ಮು ತುಂಬಲು ಬೇಕಾದಾಗೆಲ್ಲ ಪ್ರತಿ ಬಾರಿಯೂ ನಾನು ಅಮ್ಮನಿಗೆ ಫೋನಾಯಿಸುತ್ತೇನೆ. 'ನನ್ನ ವೋಟರ್ ಐಡಿಯಲ್ಲಿರೋದು ಈ ಇಸವಿ’ ಅಂತ ಅಮ್ಮ ಒಂದು ಜನ್ಮ ದಿನಾಂಕ ಹೇಳ್ತಾಳೆ. ಆದರೆ ಅಮ್ಮನ ವಯಸ್ಸು ಅದಕ್ಕಿಂತಲೂ ಕಮ್ಮಿ ಅಂತ ನನಗೆ ಗುಮಾನಿ. ಏನಾದರೇನು, ಆವತ್ತಿನಿಂದ ಈವತ್ತಿನವರೆಗೆ ಅಮ್ಮ ಹಾಗೇ ಇದ್ದಾಳೆ ಅಂತ ಅನ್ನಿಸತ್ತೆ. ಅಮ್ಮನಿಗೆ ಅಷ್ಟೇ ವಯಸ್ಸು. ಅಮ್ಮ ಯಾಕೆ ವಯಸ್ಸು ಜಾಸ್ತಿ ಹೇಳ್ತಾಳೆ? ಅಪ್ಪ ಇಲ್ಲ ಅಂತಲಾ? ಅವಳು ನಿಜವಾಗಲೂ ದೊಡ್ಡವಳು ಕಣೇ.

ನೀನು ನನ್ನ ಅಮ್ಮನ ಥರ ಆಗಬೇಕು ಅಂತ ಕೆಲವು ಬಾರಿ ನನಗನ್ನಿಸತ್ತೆ. ನಿನಗೆ, ನೀನು ನಿನ್ನಮ್ಮನ ಥರ ಆಗಬೇಕು ಅಂತಿರಬಹುದು. ಆದೀತು, ಒಂದು ದಿನ ನೀನು ಅತ್ತೆ ಥರ ಆಗಬೇಕು ಅಂತ ನನಗೂ ಆಸೆಯಿದೆ, ಡೋಂಟ್ ವರಿ ! ಅಂದಹಾಗೆ, ನಿನ್ನ ಬರ್ತ್‌ಡೇಗೆ ಒಂದಷ್ಟು ಸರ್‌ಪ್ರೈಸ್ ಕೊಡಬೇಕು ಅಂತ ನಾನಂದುಕೊಂಡದ್ದು ಹೌದು. ಆದರೆ ಎಲ್ಲವನ್ನೂ ತುಂಬಾ ಪ್ಲ್ಯಾನ್ ಮಾಡಿ ಮಾಡುವ ನನ್ನಂತಹ ಸಿಸ್ಟಮ್ಯಾಟಿಕ್ ಜಂಟಲ್‌ಮ್ಯಾನ್‌ಗೆ ಸರ್‌ಪ್ರೈಸ್‌ನ್ನೂ ಪ್ಲ್ಯಾನ್ ಮಾಡೋಕೆ ಟೈಮೇ ಸಿಗಲಿಲ್ಲ, ಸಾರಿ ಕಣೇ. ಆದರೂ ಒಂದು ಸರ್‌ಪ್ರೈಸು ! ನೀನು ಹುಟ್ಟಿಬಂದ ಈ ದಿನದಿಂದಲಾದರೂ ನಾನಿನ್ನು ಮತ್ತೆ ಕೊಂಚ ಬರೆಯಲು ಆರಂಭಿಸಬೇಕು ಅಂದುಕೊಂಡಿದ್ದೇನೆ. ಅದು ನಿನಗೆ ಇಷ್ಟ ಅಂತ ನನಗೆ ಗೊತ್ತು. ನನ್ನ ಬದುಕಿನಲ್ಲಿ ಚಕ್ಕನೆ ಬಂದು ಚಕಿತಗೊಳಿಸಿದ ನಿನಗೆ ಬರ್ತ್‌ಡೇ ದಿನ ಇಷ್ಟಾದರೂ ಮಾಡದಿದ್ದರೆ ಹೇಗೆ?

ನಿನಗಿಷ್ಟದ ಬೇಯಿಸಿದ ಜೋಳ ಪೇರಳೆ ಗೋಬಿಮಂಚೂರಿ ಬೀನ್ಸ್‌ಪಲ್ಯ ಪಲಾವ್ ಕೋರಮಂಗಲದ ಬಜ್ಜಿ,ಕಲರ್ಸ್-ಸ್ಟಾರ್‌ಪ್ಲಸ್ ಸೀರಿಯಲ್‌ಗಳು, ದಿನಕ್ಕೆ ಮೂರು ಬಾರಿ ಅಮ್ಮನಿಗೆ ಫೋನು, ತಿಂಗಳಿಗೊಮ್ಮೆ ದೇವಸ್ಥಾನ ಭೇಟಿ, ಡಾರ್ಕ್ ಕಲರ್ ಟಾಪ್‌ಗಳು ಸದಾ ಸಿಗುತ್ತಿರಲಿ. ನಿನ್ನಿಂದ ನನಗೆ ಒಳ್ಳೆಯದಾಗಲಿ! ಹ್ಯಾಪಿ ಬರ್ತ್‌ಡೇ .

(* ನನ್ನ ಹೆಂಡತಿಗಾಗಿಯೇ ಬರೆದ ಬರೆಹ. ಈವರೆಗೆ ಎಲ್ಲೂ ಪ್ರಕಟವಾಗಿಲ್ಲ.)

Read more...

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP