June 12, 2011

ಹೇ ಜಯಸೂರ್ಯ ಜಯ ಜಯ ಹೇಹೇ ಜಯಸೂರ್ಯ,

ಕಳೆದ ೧೮ ತಿಂಗಳುಗಳಿಂದ ನೀನು ಒನ್‌ಡೇ ಮ್ಯಾಚು ಆಡಿಲ್ಲ. ಮೊನ್ನೆ ಮೊನ್ನೆ ನಡೆದ ವಿಶ್ವಕಪ್‌ಗೂ ಆಯ್ಕೆಯಾಗಲಿಲ್ಲ. ಕ್ರಿಕೆಟ್ ಲೋಕಕ್ಕೆ ಬರಲು ಹಪಹಪಿಸುತ್ತಿರುವ ಹೊಸ ಹುಡುಗನಂತೆ ನೀನು ಅವಕಾಶಕ್ಕಾಗಿ ಕಾಯುತ್ತಿದ್ದೆಯಾ? ನಾಡಿದ್ದು ಜೂನ್ ೩೦ ಬಂದರೆ ನಿನ್ನ ವಯಸ್ಸು ಎಷ್ಟು? ೪೨! ’ದೇಶಕ್ಕಾಗಿ ಕ್ರಿಕೆಟ್ ಆಡೋದು ನನಗೆ ಇಷ್ಟ. ಹಾಗಾಗಿ ಇಷ್ಟು ದಿನವಾದರೂ ನಾನು ಸಂಪೂರ್ಣ ನಿವೃತ್ತಿ ಘೋಷಿಸಿಲ್ಲ’ ಅಂತಿದ್ದವನು ಈಗ ಮತ್ತೆ ಶ್ರೀಲಂಕಾದ ಏಕದಿನ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿಬಿಟ್ಟೆಯಲ್ಲ. ಇಂಗ್ಲೆಂಡ್ ಟೂರಿಗೆ ಪ್ಯಾಡು ಕಟ್ಟಿದೆಯಲ್ಲ. ಎಡಗೈ ವೀರ, ಸಿಂಹಳೀಯ, ಸನತ್ ಜಯಸೂರ್ಯ ನೀನು ಶ್ರೀಲಂಕಾದ 'ಕಪ್ಪು’ ಸೂರ್ಯ!

೧೯೮೯ರಿಂದ ಶ್ರೀಲಂಕಾ ಕ್ರಿಕೆಟ್ ತಂಡದಲ್ಲಿ ಕಾಣಿಸಿಕೊಂಡ ನೀನು ಲಂಕಾದ ಸಚಿನ್ ಮಾರಾಯಾ. ರಾವಣನಂತೆ ಚತುರ್ದಶ ಭುವನದಲ್ಲಣ. ಆದರೆ ನನಗೆ ಗೊತ್ತು, ನಿನ್ನ ಆಟವೆಲ್ಲ ಶುರುವಾಗಿದ್ದು ೧೯೯೫-೯೬ರ ಆಸ್ಟ್ರೇಲಿಯಾ ಪ್ರವಾಸದಲ್ಲಿ. ಆರಂಭ ಆಟಗಾರನಾಗಿ ಬಂದು, ಮೊದಲ ಹದಿನೈದು ಓವರ್‌ಗಳಲ್ಲಿ ಬೌಲರ್‌ಗಳನ್ನು ಚೆಂಡಾಡಿ, ಫೀಲ್ಡರುಗಳನ್ನು ದಣಿಸಿದೆ. ಆಗಲೇ ನೀನು ಓಪನರ್ ಆಗಿ ಕಣ್ಣು ತೆರೆದೆ. ಬಳಿಕ ೯೬ರ ವಿಶ್ವಕಪ್ಪಿನಲ್ಲಿ ಎಲ್ಲರ ಕಣ್ಣನ್ನೂ ತೆರೆಸಿದೆ. ಒಂದೇಒಂದು ಸೋಲಿಲ್ಲದೆ ವಿಶ್ವಕಪ್ ಎತ್ತಿ ಹಿಡಿಯಿತು ಲಂಕಾ ತಂಡ. ಸರಣಿ ಸರ್ವೋತ್ತಮ ಜಯಸೂರ್ಯ. ಬಳಿಕ ಓಪನರ್ ಆಗಿ ನೀ ಬಂದರೆ ಸಾಕು, ಫಳ್ಳನೆ ಸಿಡಿಯುತ್ತಿತ್ತು ಚೆಂಡು. ಬೌಲರ್‌ಗಳಲ್ಲಿ ಹೆಚ್ಚುವ ಒತ್ತಡ.

ಆಗ ಎಲ್‌ಟಿಟಿಇ ಮತ್ತು ಸರಕಾರದ ಹೋರಾಟದಲ್ಲಿ ಶ್ರೀಲಂಕಾ ಬೇಯುತ್ತಿತ್ತು. ಆದರೆ ಸಣ್ಣ ಹಳ್ಳಿಯಿಂದ ಬಂದ ನೀನು, ಲಂಕಾ ಜನತೆಗೆ ಅದೆಷ್ಟು ಸಮಾಧಾನ ನೀಡಿದೆಯೋ. ೧೯೯೭ರಲ್ಲಿ ಟೆಸ್ಟ್‌ನಲ್ಲಿ ಭಾರತ ವಿರುದ್ಧವೇ ಬರೋಬ್ಬರಿ ೩೪೦ ರನ್ನು, ಒನ್‌ಡೇಯಲ್ಲೂ ಭಾರತದ ವಿರುದ್ಧವೇ ೧೮೯ ರನ್ನು ಚಚ್ಚಿ ಅದೆಷ್ಟು ಭಾರತೀಯರ ಕೋಪಕ್ಕೆ ತುತ್ತಾದೆಯೋ. ೧೯೯೬ರಲ್ಲಿ ಮಿಸ್ ವರ್ಲ್ಡ್ ಸ್ಪರ್ಧೆ ಬೆಂಗಳೂರಿನಲ್ಲಿ ನಡೆದಾಗ ನೀನೂ ಒಬ್ಬ ತೀರ್ಪುಗಾರ. ನಿನ್ನನ್ನು ಆ ಸ್ಥಾನದಲ್ಲಿ ಕೂರಿಸಿದವರು ಆಗಿನ ಮುಖ್ಯಮಂತ್ರಿ ಜೆ.ಎಚ್. ಪಟೇಲರಾ?! ಎಷ್ಟೆಂದರೂ ನೀನೂ ಒಬ್ಬ ಹೀರೋ ತಾನೆ!

ಕಳೆದ ವಿಶ್ವಕಪ್‌ಗೆ ಶ್ರೀಲಂಕಾ ತಂಡವನ್ನು ಆಯ್ಕೆ ಮಾಡುವ ಸಮಿತಿಯ ಮುಖ್ಯಸ್ಥನಾಗಿದ್ದರೂ ನಿನ್ನನ್ನು ಆಯ್ಕೆ ಮಾಡದೆ ಬಿಟ್ಟನಲ್ಲ ಆ ಅರವಿಂದ ಡಿಸಿಲ್ವ, ಅವನ ಜತೆಗೇ ಆಡಿದವನಲ್ವಾ ನೀನು. ೧೭ ಬಾಲ್‌ಗಳಲ್ಲಿ ೫೦ ರನ್ ಹೊಡೆದೆ. ೪೮ ಬಾಲ್‌ಗಳಲ್ಲಿ ೧೦೦, ೯೯ ಬಾಲ್‌ಗಳಲ್ಲಿ ೧೫೨. ಅಯ್ಯೋ ನಿನಗಿಲ್ಲ ವೇಗಮಿತಿ. ಏಕದಿನ ಪಂದ್ಯಗಳಲ್ಲಿ ನಾಲ್ಕು ಬಾರಿ ೧೫೦ ರನ್ ಬಾರಿಸಿದವರು ಜಗತ್ತಿನಲ್ಲಿ ಇಬ್ಬರೇ. ಸಚಿನ್ ಮತ್ತು ನೀನಂತೆ. ಟೆಸ್ಟ್ ಕ್ರಿಕೆಟ್‌ನಿಂದ ನೀನು ನಿವೃತ್ತಿಯಾಗಿದ್ದು ೨೦೦೭ರಲ್ಲಿ. ಆದರೆ ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದ ಒಂದೇ ಓವರ್‌ನಲ್ಲಿ ನೀನು ಆರು ಬೌಂಡರಿಗಳನ್ನು ಚಚ್ಚಿದ್ದು ಕಾಕತಾಳೀಯವಾ? ಅಥವಾ ಬಿಡುಗಡೆಯ ರೋಷವಾ?

ಅದು ೧೯೯೬ರ ಫೆಬ್ರವರಿ ಮಾರ್ಚ್ ತಿಂಗಳು. ನಾನಾಗ ಹೈಸ್ಕೂಲಿನಲ್ಲಿದ್ದೆ. ಅಡ್‌ತೀಸ್, ಬತ್ತಾಯೀಸ್, ಚೌಂತೀಸ್ ಎಂಬ ಹಿಂದಿ ಅಂಕಿಗಳನ್ನು ನಾನು ಸರಿಯಾಗಿ ಕಲಿತದ್ದೇ ನಿಮ್ಮ ಸ್ಕೋರ್ ಕೇಳಿದ್ದರಿಂದ ಪುಣ್ಯಾತ್ಮ. ಜಯಸೂರ್ಯ, ಕಲುವಿತರಣ, ಡಿಸಿಲ್ವ, ಮಹಾನಾಮ ಹೀಗೆ ನಿಮ್ಮ ಬ್ಯಾಟಿಂಗ್‌ನ ಮಹಾಪಡೆ ಮುನ್ನುಗ್ಗುತ್ತಿರಬೇಕಾದರೆ, ನಮ್ಮ ಮನೆಯ ರೇಡಿಯೊದ ಬ್ಯಾಟರಿ ಬೇಗ ಖಾಲಿ ಆಗಿಬಿಡುತ್ತಿತ್ತು! ಹೊಸ ಬ್ಯಾಟರಿ ಹಾಕುವಾಗೆಲ್ಲ, ಅಪ್ಪ ಅದರ ಮೇಲೆ ದಿನಾಂಕ ಬರೆಯುತಿದ್ದರು. ಆದರೆ ಶ್ರೀಲಂಕಾ ಪಡೆಯ ಬ್ಯಾಟಿಂಗ್ ಅಬ್ಬರಕ್ಕೆ ಅದು ಹೆಚ್ಚು ದಿನ ಉಳಿಯುತ್ತಲೇ ಇರಲಿಲ್ಲ!
ನಲುವತ್ತೆರಡಕ್ಕೆ ಕಾಲಿಡುತ್ತಿರುವ ನೀನಿನ್ನು ಇಂಗ್ಲೆಂಡ್‌ನಲ್ಲೂ ಚೆನ್ನಾಗಿ ಆಡುತ್ತೀಯ? ಗೊತ್ತಿಲ್ಲ. ಹೆಸರು ಹಾಳು ಮಾಡಿಕೊಳ್ಳಬೇಡ. ಬೆಂಗಳೂರಿಗೆ ಬಂದರೆ ಮನೆಗೆ ಬಾ. ಬೈ ಬೈ.

ಕೆಂಡಸಂಪಿಗೆಯಲ್ಲಿ ಪ್ರಕಟಿತ

Read more...

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP